Home Blog Page 3022

ಕೊರೊನಾ ತಾಂಡವ; ಮೈಮರೆತು ಓಕುಳಿ ಆಡಿದ ಜನ, ಮೌನ ವಹಿಸಿದ ಆಡಳಿತ!

ವಿಜಯಸಾಕ್ಷಿ ಸುದ್ದಿ, ಗದಗ

ಇಡೀ ದೇಶವೇ ಮಹಾಮಾರಿಗೆ ನಲುಗುತ್ತಿದೆ. ಸಾವಿನ ಸುದ್ದಿಗಳು ದೇಶಾದ್ಯಂತ ಆತಂಕ ಸೃಷ್ಟಿಸುತ್ತಿವೆ. ಹೀಗಾಗಿ ಎಲ್ಲೆಡೆ ಲಾಕ್ ಡೌನ್ ಜಾರಿಯಾಗಿದೆ. ಹೊರಗೆ ಬಂದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿ, ಜೀವ ಉಳಿಸಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಆದರೆ, ಈ ಗ್ರಾಮಸ್ಥರ ಉಡಾಫೆಗೆ ಏನನ್ನಬೇಕು? ಎನ್ನುವುದೇ ತಿಳಿಯುತ್ತಿಲ್ಲ.

ಕೊರೊನಾ ತೊಲಗಿಸಲು ಸರ್ಕಾರ, ಅಧಿಕಾರಿಗಳು, ವಾರಿಯರ್ಸ್ ಸಾಕಷ್ಟು ಶ್ರಮಿಸುತ್ತಿದ್ದಾರೆ.

ಜಿಲ್ಲೆಯ ನರಗುಂದ ತಾಲೂಕಿನ ಬನಹಟ್ಟಿ ಗ್ರಾಮದ ಜನರು ಜವಬ್ದಾರಿ ಮರೆತು ಓಕಳಿಯಾಟ ಆಡಿದ್ದಾರೆ.

ಗ್ರಾಮದಲ್ಲಿನ ಹನುಮಂತ ದೇವರ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣದ ಹಿನ್ನೆಲೆಯಲ್ಲಿ ಗ್ರಾಮದ ತುಂಬೆಲ್ಲ ಜನರು ಹನುಮಂತ ದೇವರ ಓಕುಳಿ ಆಡಿದ್ದಾರೆ. ಓರ್ವ ಮಹಿಳೆ ಕೈಯಲ್ಲಿ ದೊಣ್ಣೆ ಹಿಡಿದಿರುತ್ತಾಳೆ. ನೀರು ಎರಚುವವರಿಗೆ ಅವಳು ದೊಣ್ಣೆಯಿಂದ ಹೊಡೆಯುತ್ತಾಳೆ. ಹೀಗೆ ಜನ ತಮ್ಮ ಜೀವದ ಹಂಗು ತೊರೆದು, ಕೊರೊನಾ ಭಯವಿಲ್ಲದೆ ಓಕಳಿ ಆಡಿದ್ದಾರೆ. ಈ ಓಕಳಿ ನೋಡಲು ಜನ ಸಾಗರವೇ ಇತ್ತು.

ಮಾಸ್ಕ್ ಧರಿಸಿ, 6 ಅಡಿ ಅಂತರ ಕಾಯ್ದುಕೊಳ್ಳಬೇಕು ಎಂದು ಸರ್ಕಾರ, ತಜ್ಞರು ಹಾಗೂ ವೈದ್ಯರು ಜನರಿಗೆ ಕೈ ಮುಗಿದು ಇನ್ನೂ ಬೇಡಿಕೊಳ್ಳುತ್ತಿದ್ದಾರೆ. ಆದರೆ, ಇಲ್ಲಿಯ ಜನ ಅವುಗಳಿಗೆ ಡೋಂಟ್ ಕೇರ್ ಎಂದಿದ್ದಾರೆ. ಯಾವುದೇ ಮಾಸ್ಕ್, ದೈಹಿಕ ಅಂತರ ಕಾಯ್ದುಕೊಳ್ಳದೆ ಮೈಮರೆತು ಓಕುಳಿಯಲ್ಲಿ ಮಿಂದೆದಿದ್ದಾರೆ.

ದೇಶದ ತುಂಬೆಲ್ಲ ಮಹಾಮಾರಿ ಸಿಕ್ಕ ಸಿಕ್ಕವರನ್ನೆಲ್ಲ ಬಲಿ ಪಡೆಯುತ್ತಿದೆ. ಜನರು ಭಯದಿಂದಾಗಿ ಮನೆಯಿಂದಲೇ ಹೊರಗೆ ಬರುತ್ತಿಲ್ಲ. ಆದರೆ, ಇಲ್ಲಿಯ ಜನ ಮಾತ್ರ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಆದರೆ, ಜನ ಇಷ್ಟೊಂದು ಮೈಮರೆತು ಓಕುಳಿ ಆಡಿದರೂ ಗ್ರಾಪಂ ಸದಸ್ಯರು, ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಮಾತ್ರ ನಿರ್ಲಕ್ಷ್ಯ ವಹಿಸಿ,ಮೌನದಿಂದ ಕುಳಿತಿದೆ.

ಈ ಘಟನೆ ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಧಿಕಾರಿಗಳ ಈ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಓಕುಳಿ ನೋಡಿದರೆ ಬಹುಶಃ ಕೊರೊನಾವೇ ಹೆದರಿ ಓಡಿ ಹೋಗಿರಬಹುದೇನೊ ಅನ್ನುವಷ್ಟರ ಮಟ್ಟಿಗೆ ಈ ಜನ ವರ್ತಿಸಿದ್ದಾರೆ.

ಮಹಿಳೆಯನ್ನು ಮಂಚಕ್ಕೆ ಕರೆದ ಬಿಜೆಪಿ ಮುಖಂಡನಿಗೆ ಪೊಲೀಸರ ರಾಜಾತಿಥ್ಯ!

ವಿಜಯಸಾಕ್ಷಿ ಸುದ್ದಿ, ಗದಗ

ಆತ ಗ್ರಾಮ ಪಂಚಾಯತಿ ಸದಸ್ಯೆಯ ಪತಿ, ಬಿಜೆಪಿ ಮುಖಂಡ. ಹತ್ತಾರು ಹಳ್ಳಿಗಳ ಸಂಘಟಕ ಬೇರೆ. ಸಚಿವರ ಕ್ಷೇತ್ರದ ಪ್ರಭಾವಿ ಅಂದರೆ ಕೇಳಬೇಕೇ? ಗದಗ ತಾಲೂಕಿನ ಹುಯಿಲಗೋಳ ಗ್ರಾಮದ ಗ್ರಾಮ ಪಂಚಾಯತಿಯ ಪಂಪ್ ಮೆಕ್ಯಾನಿಕ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಆಡಳಿತ ಮಂಡಳಿ ಆತನನ್ನು ಸಸ್ಪೆಂಡ್ ಮಾಡಿತ್ತು.

ಮೊದಲೇ ಬಡತನ. ಕೆಲಸವಿಲ್ಲದೆ, ಸಂಬಳ ಬಾರದೆ ಸಂಸಾರ ನೌಕೆ ಸಾಗಿಸಲು ಕಷ್ಟ ಆಗಿದೆ. ಸಸ್ಪೆಂಡ್ ರದ್ದು ಮಾಡಿಸಿ ಕೆಲಸಕ್ಕೆ ತಗೊಳ್ಳಿ ಅಂತ ಕಂಡ ಕಂಡ ಸದಸ್ಯರನ್ನು ಕೇಳಿದರೂ ಒಂದಿಷ್ಟು ದಿನ ಎಲ್ಲರೂ ಸತಾಯಿಸಿದ್ದಾರೆ.

ಗ್ರಾ.ಪಂ. ಅಂಗಳದಲ್ಲೇ ಠಳಾಯಿಸುತ್ತಿದ್ದ ಈ ಮುಖಂಡ ಕಂಡಿದ್ದಾನೆ. ಪಂಪ್ ಮೆಕ್ಯಾನಿಕ್ ಹಾಗೂ ಆತನ ಪತ್ನಿ, ಪಿಡಿಒ ಅವರಿಗೆ ಹೇಳಿ ವಾಪಸ್ ಕೆಲಸಕ್ಕೆ ತಗೋರಿ' ಅಂದಾರ. ಆಗ ಬಿಜೆಪಿ ಲೀಡರ್,ಆಯಿತು, ನೋಡೋಣ’ ಎಂದು ಹೇಳಿದ್ದಾರೆ. ಅದ್ಯಾಕೋ ಸರಕಾರವೇ ಇವನ ಕೈಯಲ್ಲಿದೆ ಅಂದುಕೊಂಡ ದಂಪತಿ ಈತನ ಹಿಂದೆ ಬಿದ್ದಿದ್ದಾರೆ.

ನಾಳೆ ಹೇಳ್ತೀನಿ… ನಾಡಿದ್ದು ಹೇಳಿ ಮಾಡಿಸ್ತೀನಿ ಅಂತ ಹೇಳುತ್ತಿದ್ದ ಬಿಜೆಪಿ ಮುಖಂಡ ಈ ದಂಪತಿಯ ಅಸಹಾಯಕತೆ ಬಳಸಿಕೊಳ್ಳುವ ಆಲೋಚನೆ ಮಾಡಿದ್ದಾನೆ.

ಆಮೇಲಾ?

ಮಹಿಳೆ ಪೋನ್ ಮಾಡಿ ಕೇಳೋದು…ಇಂವ ಹೇಳ್ತೀನಿ… ಮಾಡ್ತೀನಿ… ಮಾಡಿಸ್ತೀನಿ ಅಂತ ಹೇಳೋದು… ಹೀಗೆ ಒಂದಿಷ್ಟು ದಿನಗಳು ಕಳೆದಿವೆ. ಈ ಮುಖಂಡ ಮನಸ್ಸಿನಲ್ಲಿ ಮಂಡಿಗೆ ಮೆಲ್ಲಲು ಆರಂಭಿಸಿದ್ದ. ಮತ್ತೊಮ್ಮೆ ಕರೆ ಮಾಡಿದ ಮಹಿಳೆಗೆ ನೇರವಾಗಿ ಮಂಚ ಏರಲು ಆಫರ್ ನೀಡಿದ್ದಾನೆ. ಏನ್ರೀ… ಅಂತ ಗಾಬರಿಬಿದ್ದ ಮಹಿಳೆ ಕೊಂಚ ಸುಧಾರಿಸಿಕೊಂಡು, ಕೆಲಸ ಮಾಡಿಸಿಕೊಡಿ, ಆಮೇಲೆ ನೋಡೋಣ' ಅಂದಿದ್ದಾಳೆ. ಆಮೇಲಾ?’ ಅಂತ ಉದ್ಘಾರ ತಗೆದಿದ್ದಾನೆ ಮಹಾಶಯ.

ಬಿಜೆಪಿ ಭೂಪನ ಬೇಡಿಕೆಯಿಂದ ಮಹಿಳೆಗೆ ಕಸಿವಿಸಿಯಾಗಿದೆ. ಗಂಡನಿಗೆ ಹೇಳಿದಾಗ ಆತನೂ ದಿಗಿಲುಗೊಂಡ. ನಾಲ್ಕು ಮಂದಿ ಮುಂದ ಹೇಳಬೇಕು, ಆತನೊಂದಿಗೆ ಜಗಳ ಮಾಡಬೇಕು ಎಂದರೆ, ಆ ವ್ಯಕ್ತಿ ಪ್ರಭಾವಿ. ಸರಕಾರ, ಪೊಲೀಸರು ಆತನ ತಾಳಕ್ಕೆ ಕುಣಿದರೆ ಏನು ಗತಿ ಎಂದು ಚಿಂತಿಸಿದ ದಂಪತಿಗೆ ದಿಕ್ಕೇ ತೋಚಲಿಲ್ಲ. ಆದರೆ, ಬಿಜೆಪಿ ಮುಖಂಡ ಅಷ್ಟಕ್ಕೆ ಸುಮ್ಮನಾಗದೆ, ಪಂಪ್ ಮೆಕ್ಯಾನಿಕ್‌ಗೂ ಇದನ್ನೇ ಹೇಳಿದ್ದಾನೆ.

ಮುಖಂಡನ ಆಫರ್ ಕುರಿತು ಸಮಾಜದ ಮುಖಂಡರ ಮುಂದೆ ಈ ಪಂಪ್ ಮೆಕ್ಯಾನಿಕ್ ಅಳುಕುತ್ತಲೇ ವಿವರಿಸಿದ್ದಾನೆ. ಮುಂದಾಗಬಹುದಾದ ಅನಾಹುತದ ಕುರಿತು ವಿಚಾರಿಸಿದ ಆತನ ಹಿತೈಷಿಗಳು ಮಂಗಳವಾರ ಗ್ರಾಮೀಣ ಠಾಣೆಗೆ ಆ ಮುಖಂಡನ ವಿರುದ್ಧ ದೂರು ನೀಡಲು ಬಂದಿದ್ದಾರೆ.

ಕೆಲಸ ಮೇಲೆ ಹೊರ ಹೋಗಿದ್ದ ಪಿಎಸ್ಐ:
ಮುಂಜಾನೆ 11 ಗಂಟೆಗೆ ದೂರು ನೀಡಲು ಬಂದವರು ಮಧ್ಯಾಹ್ನ ಎರಡು ಗಂಟೆಯ ವರೆಗೆ ಕಾದ ಮೇಲೆ ಪಿಎಸ್ಐ ಸಾಹೇಬರು ಬಂದಿದ್ದಾರೆ. ಬಿಜೆಪಿ ಮುಖಂಡನ ಪೋನ್ ಸಂಭಾಷಣೆ ಸಮೇತ ಸಾಹೇಬರ ಗಮನಕ್ಕೆ ತಂದು, `ಕಂಪ್ಲೇಂಟ್ ತಗೋರಿ’ ಅಂತ ದಂಪತಿ ಮನವಿ ಮಾಡಿದ್ದಾರೆ.

ದಂಪತಿಯ ಮಾತು ಕೇಳಿ‌ದ ಪಿಎಸ್ಐ, ತಮ್ಮ ಮೇಲಧಿಕಾರಿಗೆ ಮಾಹಿತಿ ನೀಡಿದ್ದಾರೆ. ಮೇಲಧಿಕಾರಿ ಮಾಹಿತಿ ಪಡೆದು ಠಾಣೆಗೆ ಬಂದವರೇ ಸಾಕಷ್ಟು ವಿಚಾರಣೆ ನಡೆಸಿದ್ದಾರೆ. ನೀವು ಕಂಪ್ಲೇಂಟ್ ಕೊಟ್ರ ನಿಮಗ ಮುಂದ ತೊಂದರೆ ಆಗುತ್ತ ನೋಡ್ರೀ ಅಂದಾರ. ಆದರೆ, ದಂಪತಿ ಬಗ್ಗಿಲ್ಲ. ಮೊದಲೇ ಸಚಿವರ ಕ್ಷೇತ್ರದ ಮುಖಂಡ. ಈ ರೀತಿ ಪ್ರಕರಣ ದಾಖಲಾದರೆ ನೌಕರಿ ಮಾಡೋದು ಕಷ್ಟ ಎಂದುಕೊಂಡ ಪೊಲೀಸ್ ಅಧಿಕಾರಿ ರಾಜೀ ಪಂಚಾಯತಿ ಮಾಡ್ಕೊರೀ ಅಂತ ದುಂಬಾಲು ಬಿದ್ದಾರೆ. ಸಾಕಷ್ಟು ಹೆದರಿಸಿದ್ದಾರೆ. ಆದರೂ ದಂಪತಿ ಜಗ್ಗಿಲ್ಲ.

ಆರೋಪಿಗೆ ಆತಿಥ್ಯ

ಆಮೇಲೆ ಆರೋಪಿಯಾಗಿರುವ ಬಿಜೆಪಿ ಮುಖಂಡನನ್ನು ಕರೆಸಿ, ಕುರ್ಚಿ ಮೇಲೆ ಕೂರಿಸಿ, ರಾಜಾತಿಥ್ಯ ನೀಡಿದ್ದಾರೆ. ಹೇಗಾದರೂ ಮಾಡಿ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ದೂರು ಪಡೆಯಬಾರದು ಅಂತ ನಿರ್ಧರಿಸಿದ ಪೊಲೀಸರೇ ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಆರೋಪದ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಬರೋಬ್ಬರಿ 11 ಗಂಟೆಗಳು

ಈ ದಂಪತಿ ದೂರು ನೀಡಲು ಠಾಣೆಗೆ ಬಂದಿದ್ದು ಮುಂಜಾನೆ 11 ಗಂಟೆಗೆ. ದೂರು ದಾಖಲಾಗಿದ್ದು ರಾತ್ರಿ 10 ಗಂಟೆಗೆ. ಸತತ 11 ಗಂಟೆ ಕಾಲ ಈ ದಂಪತಿ ಠಾಣೆಯಲ್ಲಿ ಕಾದು ಸುಸ್ತಾಗಿದ್ದಾರೆ, ಮುಜುಗರ ಅನುಭವಿಸಿದ್ದಾರೆ. ಆದರೆ, ಸಾಮಾನ್ಯ ದೂರೊಂದನ್ನು ದಾಖಲಿಸಿ, ಪ್ರಪಂಚ ಗೆದ್ದವರಂತೆ ಪೊಲೀಸರು ಬೀಗಿದ್ದಾರೆ, ಬಿಜೆಪಿ ಮುಖಂಡನೂ ಮೀಸೆ ಮೇಲೆ ಕೈಯಾಡಿಸಿದ್ದಾನೆ.

ಕೊರೊನಾ; ಬುಧವಾರ ಸೋಂಕಿಗೆ ಐವರು ಸಾವು, 486 ಜನರಿಗೆ ಸೋಂಕು

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಅದ್ಯಾಕೋ ಸೋಂಕು ಕಡಿಮೆಯಾಗುವಂತೆ ಕಾಣುತ್ತಿಲ್ಲ. ನಿನ್ನೆ ಐದನೂರರ ಗಡಿ ದಾಟಿದ್ದ ಸೋಂಕು ಇವತ್ತು ಕಡಿಮೆ ಇದ್ರೂ ಸಾವಿನ ಸರಣಿ ಮುಂದುವರೆದಿದೆ.

ಇವತ್ತಿನ ಜಿಲ್ಲಾಡಳಿತದ ವರದಿಯಂತೆ ಐದು ಜನ ಸೋಂಕಿಗೆ ಬಲಿಯಾಗಿದ್ದಾರೆ.

ಇಂದಿನ 486 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 19316 ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -234, ಮುಂಡರಗಿ-38, ನರಗುಂದ-18 ರೋಣ-66, ಶಿರಹಟ್ಟಿ-121, ಹೊರಜಿಲ್ಲೆಯ-09 ಸೇರಿದಂತೆ 486 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ಐವರು ಮೃತಪಟ್ಟಿದ್ದು, ಮೃತರ ಸಂಖ್ಯೆ 197 ಕ್ಕೇರಿದೆ.

ರೋಣ ತಾಲೂಕಿನ ನಿವಾಸಿ 64 ವರ್ಷದ ವ್ಯಕ್ತಿ ಮೇ -13 ರೋಣ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಮೇ 13 ರಂದು ಮೃತಪಟ್ಟಿದ್ದಾರೆ.

ಧಾರವಾಡ ಜಿಲ್ಲೆಯ ಅಣ್ಣಿಗೇರಿ ನಿವಾಸಿ 76 ವರ್ಷದ ವ್ಯಕ್ತಿ ಮೇ -15 ರಂದು ಜಿಮ್ಸ್ ಗೆ ದಾಖಲಾಗಿದ್ದು, ಕೋವಿಡ್ ದೃಢಪಟ್ಟಿತ್ತು, ಮೇ 16 ರಂದು ಜಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ.

ರೋಣ ತಾಲೂಕಿನ ಯಾವಗಲ್ ನಿವಾಸಿ 87 ವರ್ಷದ ವ್ಯಕ್ತಿ ಮೇ 16 ರಂದು ಜಿಮ್ಸ್ ಗೆ ದಾಖಲಾಗಿದ್ದರು. ಮೇ 17 ರಂದು ಮೃತಪಟ್ಟಿದ್ದಾರೆ.

ಕೊಪ್ಪಳ ಜಿಲ್ಲೆಯ ಹಳೇ ಕಂಕಾಪೂರ ನಿವಾಸಿ 62 ವರ್ಷದ ವ್ಯಕ್ತಿ ಮೇ 10ರಂದು ಮುಂಡರಗಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಮೇ 14 ರಂದು ಮೃತಪಟ್ಟಿದ್ದಾರೆ.

ರೋಣ ತಾಲೂಕಿನ ಬೆನಳ್ಳಿ ನಿವಾಸಿ 42 ವರ್ಷದ ಮಹಿಳೆ, ಮುಂಡರಗಿ ತಾಲೂಕು ಆಸ್ಪತ್ರೆಗೆ ಮೇ-13 ರಂದು ದಾಖಲಾಗಿದ್ದರು. ಇವರು ಮೇ -15 ರಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 323 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 15954 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 3165 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 187 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಜಿಂದಾಲ್ ಗೆ ಭೂಮಿ – ಸಿಎಂಗೆ ಲೀಗಲ್ ನೊಟೀಸ್!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಜಿಂದಾಲ್ ಸಂಸ್ಥೆಗೆ ರಾಜ್ಯ ಸರ್ಕಾರ ಸುಮಾರು 3,667 ಎಕರೆ ಭೂಮಿ ಹಸ್ತಾಂತರ ಮಾಡಿರುವ ಕುರಿತು ವಕೀಲ ದೊರೆರಾಜು ಅವರು ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಲೀಗಲ್ ನೊಟೀಸ್ ಜಾರಿ ಮಾಡಿದ್ದಾರೆ.

ಸರ್ಕಾರಿ ಜಮೀನನ್ನು ಖಾಸಗಿ ಸಂಸ್ಥೆಗೆ ನೀಡುವ ವಿಚಾರದ ಕುರಿತು ತರಾತುರಿಯಾಗಿ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡು ಭೂಮಿ ಹಸ್ತಾಂತರ ಮಾಡಿರುವುದು ಕಾನೂನು ಬಾಹಿರವಾಗಿದೆ. ಜಿಂದಾಲ್ ಸಂಸ್ಥೆ ಕಾನೂನುಬಾಹಿರ ಚಟುವಟಿಕೆ ನಡೆಸಿದೆ ಎಂದು ಲೋಕಾಯುಕ್ತ, ನೀಡಿರುವ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಜಿಂದಾಲ್ ಸಂಸ್ಥೆಯು ಈ ಹಿಂದೆ ಸೌತ್ ವೆಸ್ಟ್ ಕಂಪನಿ ಮೂಲಕ ನಡೆಸಿದ ಗಣಿಗಾರಿಕೆಯಿಂದ ರಾಜ್ಯ ಸರ್ಕಾರಕ್ಕೆ ರೂ. 1078 ಕೋಟಿ ನಷ್ಟವಾಗಿದ್ದರ ಬಗ್ಗೆ ಲೋಕಾಯುಕ್ತ ವರದಿ ನೀಡಿದೆ ಎಂದು ಉಲ್ಲೇಖಿಸಿದ್ದಾರೆ.

ಈ ಕುರಿತು ಹೈಕೋರ್ಟ್, ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಜಿಂದಾಲ್ ಸಂಸ್ಥೆಗೆ ಸರ್ಕಾರಿ ಭೂಮಿಯನ್ನು ನೀಡುವುದರಿಂದ ಪರಿಸರಕ್ಕೆ ಹಾನಿಯಾಗಲಿದೆ. ಹೆಚ್ಚು ಖನಿಜಾಂಶವುಳ್ಳ ಜಾಗದಲ್ಲಿ ಪ್ರತಿ ಎಕರೆಗೆ ಕೇವಲ ರೂ. 1,22,195 ನಿಗದಿಪಡಿಸಿದ್ದು, ಸರ್ಕಾರಕ್ಕೆ ದೊಡ್ಡ ನಷ್ಟವಾಗಿದೆ. ಆದ್ದರಿಂದ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.

ಸರ್ಕಾರದ ಈ ನಿರ್ಧಾರದ ವಿರೋಧಿಸಿ ಶಾಸಕ ಉದಯ್ ಗರುಡಾಚಾರ್, ಪೂರ್ಣಿಮ ಕೃಷ್ಣಪ್ಪ, ಅರವಿಂದ ಬೆಲ್ಲದ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಇದಕ್ಕ ಸಿಎಂ ಅವರು ಗರಂ ಆಗಿದ್ದು, ಈ ಕುರಿತು ಸ್ಪಷ್ಟನೆ ನೀಡುವಂತೆ ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಅವರಿಗೆ ಸೂಚನೆ ನೀಡಿದ್ದಾರೆ. ಇದಕ್ಕೆ ಗರುಡಾಚಾರ್ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ.

ತಮ್ಮ ಬಂಗಲೆಯನ್ನೇ ಕೋವಿಡ್ ಕೇರ್ ಸೆಂಟರ್ ಮಾಡಿದ ನಾಯಕ!

ವಿಜಯಸಾಕ್ಷಿ ಸುದ್ದಿ, ಪಾಟ್ನಾ

ಸದ್ಯ ಇಡೀ ರಾಷ್ಟ್ರದಲ್ಲಿಯೇ ಮಹಾಮಾರಿಯ ಅಟ್ಟಹಾಸ ವಿಪರೀತವಾಗಿದೆ. ಈ ಸಂದರ್ಭದಲ್ಲಿ ಪ್ರತಿಯೊಂದು ರಾಜ್ಯ ಸರ್ಕಾರಗಳು ಸ್ಥಳೀಯ ಮಟ್ಟದಲ್ಲಿ ಲಾಕ್ ಡೌನ್ ಘೋಷಿಸಿ ಕೊರೊನಾ ಹಿಮ್ಮೆಟ್ಟಿಸುವ ಕಾರ್ಯ ಮಾಡುತ್ತಿವೆ. ಇದರೊಂದಿಗೆ ಹಲವರು ಹಲವಾರು ರೀತಿಯಲ್ಲಿ ಜನರ ಸೇವೆ ಮಾಡುತ್ತಿದ್ದಾರೆ. ಆದರೆ, ಇಲ್ಲೊಬ್ಬ ವಿಪಕ್ಷ ನಾಯಕ ಮಾತ್ರ ಸೇವೆಯಲ್ಲಿ ಜನರ ಮನ ಗೆದ್ದು ಮಾದರಿಯಾಗಿದ್ದಾರೆ.

ಪಾಟ್ನಾದ 1-ಪೊಲೊ ರಸ್ತೆಯಲ್ಲಿರುವ ತಮ್ಮ ಅಧಿಕೃತ ಸರ್ಕಾರಿ ನಿವಾಸವನ್ನು ಶಾಸಕರ ನಿಧಿಯಿಂದ ಪೂರ್ಣ ಪ್ರಮಾಣದ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿ, ಬಿಹಾರ ವಿರೋಧ ಪಕ್ಷದ ನಾಯಕ ತೇಜಶ್ವಿ ಯಾದವ್ ಜನರ ಸೇವೆಗೆ ಮುಂದಾಗಿದ್ದಾರೆ.

ಬಿಹಾರ ರಾಜ್ಯದಲ್ಲಿ ಕೂಡ ಆಕ್ಸಿಜನ್ ಕೊರತೆ ತಾಂಡವವಾಡುತ್ತಿದೆ. ಇದರೊಂದಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಕೂಡ ಎದ್ದು ಕಾಣುತ್ತಿದೆ. ಹೀಗಾಗಿ ವಿರೋಧ ಪಕ್ಷದ ನಾಯಕ ಈ ರೀತಿಯ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಸರ್ಕಾರಿ ನಿವಾಸದಲ್ಲಿರುವ ಬೆಡ್ ಗಳಿಗೆ ಆಕ್ಸಿಜನ್ ಅಳವಡಿಸಲಾಗಿದ್ದು, ಔಷಧಿಗಳ ಸಂಗ್ರಹ ಮಾಡಲಾಗಿದೆ. ಈ ಕೇಂದ್ರಕ್ಕೆ ತಮ್ಮ ಶಾಸಕರ ನಿಧಿಯಿಂದ ಬೆಡ್ ಮತ್ತು ಇತರ ಎಲ್ಲ ಸೌಲಭ್ಯಗಳನ್ನು ಹೊಂದಿಸಲಾಗಿದೆ. ಇದನ್ನು ಪ್ರತ್ಯೇಕ ವಾರ್ಡ್ ಅಥವಾ ಕ್ವಾರಂಟೈನ್ ಕೇಂದ್ರವಾಗಿ ಬಳಸಿಕೊಳ್ಳಲು ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.

ಅಷ್ಟೇ ಅಲ್ಲದೇ, ಜವಾಬ್ದಾರಿಯುತ ಪ್ರತಿಪಕ್ಷವಾಗಿ, ರೋಗಿಗಳ ಚಿಕಿತ್ಸೆಗೆ ಅಗತ್ಯವಾದ ಯಾವುದೇ ವ್ಯವಸ್ಥೆಗಳನ್ನು ಬೆಂಬಲಿಸಲು ನಾವು ಸಿದ್ಧರಿದ್ದೇವೆ ಎಂದು ಅವರು ಹೇಳಿದ್ದಾರೆ. ಸದ್ಯ ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

3ನೇ ಅಲೆಯ ಭಯ – ಈಗಲೇ ಮಕ್ಕಳ ಕೋವಿಡ್ ಕೇರ್ ಸ್ಥಾಪನೆಗೆ ನಿರ್ಧಾರ!

ವಿಜಯಸಾಕ್ಷಿ ಸುದ್ದಿ, ಚಿಕ್ಕೋಡಿ

ಸದ್ಯ ಎಲ್ಲೆಡೆ ಕೊರೊನಾ ಹಾವಳಿ ಶುರುವಾಗಿದೆ. ಇನ್ನೂ ಮೂರನೇ ಅಲೆಗೆ ದೇಶ ಸಿದ್ಧವಾಗಬೇಕಿದೆ. ಆ ಸಂದರ್ಭದಲ್ಲಿ ಚಿಕ್ಕ ಮಕ್ಕಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಆವರಿಸಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದರಿಂದಾಗಿ ರಾಜ್ಯದ 30 ಜಿಲ್ಲೆಗಳಲ್ಲಿಯೂ ಮಕ್ಕಳಿಗೆ ಕೋವಿಡ್ ಕೇರ್ ಸೆಂಟರ್ ತೆರೆಯಲು ಸರ್ಕಾರ ನಿರ್ಧರಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳ ಕೊವಿಡ್ ಕೇರ್ ಸೆಂಟರ್ ನಿರ್ಮಾಣಕ್ಕಾಗಿ ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ಚೆನ್ನಮ್ಮ ಶಾಲೆಗಳನ್ನು ಗುರುತಿಸಲಾಗಿದೆ. ವಿಶೇಷ ಮಕ್ಕಳ ಶಾಲೆಯಲ್ಲಿ ಕೂಡ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಮಂಡ್ಯ ಮತ್ತು ಚಾಮರಾಜನಗರದಲ್ಲಿ ತಂದೆ ಹಾಗೂ ತಾಯಿಯನ್ನು ಕಳೆದುಕೊಂಡು ಮಕ್ಕಳು ಅನಾಥರಾಗಿದ್ದಾರೆ. ಈ ಇಬ್ಬರೂ ಮಕ್ಕಳ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ಏನು ಮಾಡಬೇಕು ಎಂದು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ಆ ಮಕ್ಕಳ ಪಾಲನೆ ಪೋಷಣೆ ಮಾಡುವ ನಿಟ್ಟಿನಲ್ಲಿ ಸರ್ಕಾರದಿಂದ ಎಲ್ಲ ಸೌಕರ್ಯ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇಂದು ಶಿವರಾಜ್ ಕುಮಾರ್ ವಿವಾಹ ವಾರ್ಷಿಕೋತ್ಸವ – ಅರ್ಥಪೂರ್ಣವಾಗಿ ಆಚರಿಸಿದ ಅಭಿಮಾನಿಗಳು

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಇಂದು ನಟ ಶಿವರಾಜ್ ಕುಮಾರ್ ದಂಪತಿಗೆ ವಿವಾಹ ವಾರ್ಷಿಕೋತ್ಸವದ ದಿನ. ಹೀಗಿಗ ನಾಡಿನ ಜನತೆ ಈ ದಂಪತಿಯನ್ನು ಹಾರೈಸುತ್ತಿದ್ದಾರೆ. ಶಿವರಾಜ್ ಕುಮಾರ್ ಅವರು 1986ರ ಮೇ. 19ರಂದು ಮಾಜಿ ಸಿಎಂ ಎಸ್. ಬಂಗಾರಪ್ಪ ಅವರ ಮಗಳು ಗೀತಾ ಅವರನ್ನು ಕೈ ಹಿಡಿದ ದಿನ. ಸದ್ಯ ಇವರ ವಿವಾಹವಾಗಿ 35 ವರ್ಷಗಳು ಕಳೆದಿವೆ. ಹೀಗಾಗಿ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳ ಹಾರೈಕೆಯ ಮಹಾಪೂರವೇ ಹರಿದು ಬರುತ್ತಿದೆ.

ಪ್ರತಿ ವರ್ಷವೂ ಶಿವಣ್ಣ ಅವರು ಮದುವೆ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದರು. ಆದರೆ, ಕಳೆದ ವರ್ಷದಿಂದ ದೇಶದಲ್ಲಿ ಮಹಾಮಾರಿಯ ಅಟ್ಟಹಾಸ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆಚರಮೆ ಮಾಡಿಕೊಳ್ಳುತ್ತಿಲ್ಲ. ಆದರೆ, ಅರ್ಥಪೂರ್ಣವಾಗಿ ಆಚರಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ.

ಶಿವಣ್ಣ ಅವರ ವಿವಾಹ ವಾರ್ಷಿಕೋತ್ಸವ ಇರುವ ಹಿನ್ನೆಲೆಯಲ್ಲಿ ಕೆ.ಜಿ. ರಸ್ತೆಯಲ್ಲಿರುವ ಚಿತ್ರಮಂದಿರದ ಕಾರ್ಮಿಕರಿಗೆ ರೇಷನ್ ಕಿಟ್ ವಿತರಣೆ ಮಾಡಲಾಗುತ್ತಿದೆ. ಶಿವು ಅಡ್ಡ ಮತ್ತು ಶಿವ ಸೈನ್ಯ ಅಭಿಮಾನಿ ಬಳಗ ಒಟ್ಟಾಗಿ ಈ ಕೆಲಸ ಮಾಡುತ್ತಿದ್ದಾರೆ.

ಹಾಸಿಗೆ ಹೊಲೆಯುವ ಕೂಲಿ ಕಾರ್ಮಿಕರನ್ನು ಕಡೆಗಣಿಸಿದ ಸರಕಾರ; ಮಹಾಮಂಡಳ ರಾಜ್ಯಾಧ್ಯಕ್ಷ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು 1,250 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಇದರಲ್ಲಿ ಅಲೆಮಾರಿ ಹಾಗೂ ಕಡು ಬಡತನದಿಂದ ಕುಡಿದ ಹಾಸಿಗೆ ಹೊಲೆಯುವ ಕೂಲಿ ಕಾರ್ಮಿಕರಿಗೆ ಯಾವುದೇ ಪ್ಯಾಕೇಜ್ ಘೋಷಣೆ ಮಾಡದೇ ಅನ್ಯಾಯ ಮಾಡಿದೆ ಎಂದು ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷ ಡಾ. ಅಬ್ದುಲ್ ರಜಾಕ್ ನದಾಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಘೋಷಿಸಿದ ಪ್ಯಾಕೇಜ್ ನಿಂದಲೂ ಹಾಸಿಗೆ ಹೊಲೆಯುವ ಕೂಲಿ ಕಾರ್ಮಿಕರಿಗೆ ಯಾವುದೇ ಪ್ಯಾಕೇಜ್ ಘೋಷಿಸಿದ ಸರಕಾರ ಈ ಭಾರಿಯು ಅದೇ ಸಂಪ್ರದಾಯ ಮುಂದುವರಿಸಿ ಕೊಂಡು ಬಂದಿದೆ.

ಪ್ರತಿಪಕ್ಷಗಳ ಹಾಗೂ ಸಾರ್ವಜನಿಕ ಒತ್ತಡದ ಮೇರೆಗೆ ಸರ್ಕಾರವು ಒಲ್ಲದ ಮನಸ್ಸಿನಿಂದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಹಾಸಿಗೆ ಹೊಲೆಯುವ ಕೂಲಿ ಕಾರ್ಮಿಕರು ಹಾಗೂ ಬಿ.ಪಿ.ಎಲ್.ಕುಟುಂಬಗಳನ್ನು ಗುರುತಿಸಿ ಅವರ ಬ್ಯಾಂಕ್ ಖಾತೆಗೆ ಸರ್ಕಾರದಿಂದ ನೇರವಾಗಿ ಆರ್ಥಿಕ ಸಹಾಯ ಮಾಡುವುದರಿಂದ ರಾಜ್ಯದ ಕೋಟ್ಯಾಂತರ ಬಡ ಜನರಿಗೆ ಉಪಯೋಗವಾಗಬಹುದು, ಆದರೆ ಸರ್ಕಾರವು ಇದರ ಬಗ್ಗೆ ಗಮನ ಹರಿಸಿಲ್ಲ.

ರಾಜ್ಯದಾದ್ಯಂತ ಸಾವಿರಾರು ಹಾಸಿಗೆ ಹೊಲೆಯುವ ಕೂಲಿ ಕಾರ್ಮಿಕರು ಅದೇ ವೃತ್ತಿಯನ್ನು ನಂಬಿ ದುಡಿಯುತ್ತಿದ್ದಾರೆ.ಆದರೆ, ಅವರಿಗೆ ಹಾಸಿಗೆ ಹೊಲೆಯುವ ಕೂಲಿ ಬಿಟ್ಟು ಯಾವುದೇ ಕೆಲಸ ಗೊತ್ತಿಲ್ಲ ಎಂದರು

ಇದರಿಂದಾಗಿ ಅವರು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಕೋವಿಡ್–19 ಲಾಕ್‌ಡೌನ್‌ ಪರಿಸ್ಥಿತಿಯಿಂದಾಗಿ ಕೆಲಸವಿಲ್ಲದೆ ಮತ್ತು ಬದುಕು ಸಾಗಿಸಲು ಕಷ್ಟಸಾಧ್ಯವಾಗಿ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿ ಇದ್ದಾರೆ. ಹೀಗಾಗಿ ಅವರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಸರ್ಕಾರದಿಂದ ದೊರೆಯುವ ಶಾಸನಬದ್ಧ ಸೌಲಭ್ಯಗಳನ್ನು ಕಲ್ಪಿಸಬೇಕೆಂದರು.

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಮಾದರಿಯಲ್ಲಿ ಹಾಸಿಗೆ ಹೊಲೆಯುವ ಕೂಲಿ ಕಾರ್ಮಿಕರಿಗೂ ಕಾರ್ಮಿಕರೆಂದು ಗುರುತಿನ ಚೀಟಿ ನೀಡಬೇಕು ಎಂದು ಮಹಾಮಂಡಳ ರಾಜ್ಯಾಧ್ಯಕ್ಷ ಡಾ. ಅಬ್ದುಲ್ ರಜಾಕ್ ಆಗ್ರಹಿಸಿದರು.

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸುಟ್ಟು ಕರಕಲಾದ ಜನರಲ್ ಸ್ಟೋರ್!

ವಿಜಯಸಾಕ್ಷಿ ಸುದ್ದಿ, ಗದಗ

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಜನರಲ್ ಸ್ಟೋರ್ ಹೊತ್ತಿ ಉರಿದ ಘಟನೆ ನಗರದಲ್ಲಿ ನಡೆದಿದೆ. ಇಲ್ಲಿನ ಕೆಸಿ ರಾಣಿ ರಸ್ತೆಯಲ್ಲಿರುವ ಚೇತನ ಕ್ಯಾಂಟಿನ್ ಸರ್ಕಲ್ ಬಳಿ ಈ ಘಟನೆ ನಡೆದಿದೆ. ಬಸವರಾಜ್ ನಾಡಗೌಡ್ರ ಎಂಬುವವರಿಗೆ ಸೇರಿದ್ದ ಜನರಲ್ ಸ್ಟೋರ್ ಬೆಂಕಿಗೆ ಆಹುತಿಯಾಗಿದೆ.

ಈ ಘಟನೆಯಲ್ಲಿ ಜನರಲ್ ಸ್ಟೋರ್ ನಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಯಾಗಿವೆ. ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಆಗ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು.

ಸ್ಥಳಕ್ಕೆ ಬೆಟಗೇರಿ ಬಡಾವಣೆ ಪೋಲಿಸ್ ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗದಗ- ಬೆಟಗೇರಿ ಬಡಾವಣೆ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಹಣ ಲೂಟಿ ಮಾಡಲು ಈ ಪ್ಯಾಕೇಜ್ ಘೋಷಿಸಲಾಗಿದೆ – ಕುಮಾರಸ್ವಾಮಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಸರ್ಕಾರ ಅರೆಕಾಸಿನ ಮಜ್ಜಿಗೆ ಕೊಟ್ಟಂತೆ ಪ್ಯಾಕೇಜ್ ಘೋಷಿಸಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಇಂದು ರೂ. 1,250 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು, ಅದು ಯಾವುದಕ್ಕೂ ಪ್ರಯೋಜನವಿಲ್ಲ. ಜನರ ದುಡ್ಡನ್ನು ಲೂಟಿ ಹೊಡೆಯಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ನಿರಾಶಾದಾಯಕ ಪ್ಯಾಕೇಜ್. ಹೂವಿನ ಬೆಳೆಗಾರರಿಗೆ ಘೋಷಣೆ ಮಾಡಿರುವ ಪ್ಯಾಕೇಜ್ ಕಳೆದ ವರ್ಷಕ್ಕಿಂತ ಕಡಿಮೆ ಇದೆ. ಇದು ಯಾವುದಕ್ಕೂ ಸಾಲುವುದಿಲ್ಲ. ಕೂಲಿ, ಬೀಜದ ಬೆಲೆ ಏರಿಕೆ ಆಗಿರುವಾಗ ಈ ಸಹಾಯ ಅವರಿಗೆ ಯಾವುದಕ್ಕೆ ಪ್ರಯೋಜನವಾಗಲಿದೆ. ಆಟೋ, ಕ್ಯಾಬ್ ಡ್ರೈವರ್ ಗಳಿಗೆ ಈ ಹಣ ಸಾಕಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಮಿಕರು, ಚಮ್ಮಾರರು, ಕಮ್ಮಾರಿಗೆ ಕೊಟ್ಟ ಹಣ ಯಾವುದಕ್ಕೂ ಸಾಕಾಗುವುದಿಲ್ಲ. 10 ಕೆಜಿ ಅಕ್ಕಿ ಕೂಡಾ ಸಾಕಾಗೊಲ್ಲ. ಇದು ರಾಜ್ಯ ಸರ್ಕಾರದ ನಾಟಕ. ಈ ಪ್ಯಾಕೇಜ್ ಯಾವುದಕ್ಕೂ ಪ್ರಯೋಜನ ಇಲ್ಲ ಎಂದು ಹೆಚ್ಡಿಕೆ ಜರಿದಿದ್ದಾರೆ.

error: Content is protected !!