Home Blog Page 3021

ಸ್ಯಾನಿಟೈಸರ್ ಉಪಯೋಗಿ ಮದ್ಯ ತಯಾರಿಸುತ್ತಿದ್ದ ಪಾಪಿಗಳ ಬಂಧನ

ವಿಜಯಸಾಕ್ಷಿ ಸುದ್ದಿ, ಚೆನ್ನೈ

ಸ್ಯಾನಿಟೈಸರ್‌ ಬಳಸಿ ಮದ್ಯ ತಯಾರಿಸುತ್ತಿದ್ದ ಗ್ಯಾಂಗ್‍ ನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಯಾನಿಟೈಸರ್ ಬಳಸಿ ಮದ್ಯ ತಯಾರಿಸುತ್ತಿದ್ದ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಕಡಲೂರು ಜಿಲ್ಲೆಯ ರಾಮನಾಥನ್ ಕುಪ್ಪಮ್‍ ನಲ್ಲಿ ಈ ಘಟನೆ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ವೇಳೆ ಸ್ಯಾನಿಟೈಸರ್ ನಿಂದ ಮದ್ಯ ತಯಾರಿಸುತ್ತಿದ್ದ 6 ಜನರನ್ನು ಬಂಧಿಸಿದ್ದಾರೆ.

ತಮಿಳುನಾಡಿನಲ್ಲಿ ಲಾಕ್ ಡೌನ್ ಘೋಷಣೆಯಾಗಿರುವುದರಿಂದ ಸರ್ಕಾರದ ಮದ್ಯದ ಅಂಗಡಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಸದ್ಯ ಮೇ. 24ರ ವರಗೆ ತಮಿಳುನಾಡಿನಲ್ಲಿ ಸರ್ಕಾರ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಿದೆ. ಹೀಗಾಗಿಯೇ ಮದ್ಯ ಪ್ರಿಯರು ಪರದಾಡುವಂತಾಗಿದೆ.

ಬನಹಟ್ಟಿ ಗ್ರಾಮ ಸಂಪೂರ್ಣ ಲಾಕ್‌ಡೌನ್; ಕೊರೊನಾ ನಿಯಮ ಗಾಳಿಗೆ ತೂರಿ ಓಕಳಿ ಆಡಿದ ಗ್ರಾಮಸ್ಥರು

ವಿಜಯಸಾಕ್ಷಿ ಸುದ್ದಿ, ಗದಗ

ಕೊರೊನಾ ಮಧ್ಯೆಯೂ ಓಕುಳಿ ಆಡಿರುವ ಕುರಿತು ವಿಜಯಸಾಕ್ಷಿ ವೆಬ್ ಸುದ್ದಿ ಕಂಡು ಎಚ್ಚೆತ್ತ ತಹಸೀಲ್ದಾರ್ ಹಾಗೂ ಅಧಿಕಾರಿಗಳು ನರಗುಂದ ತಾಲೂಕನ ಬನಹಟ್ಟಿ ಗ್ರಾಮಕ್ಕೆ ದೌಡಾಯಿಸಿ, ಸಭೆ ನಡೆಸಿದ್ದು, ಗ್ರಾಮವನ್ನು ಸಂಪೂರ್ಣ ಲಾಕ್‌ಡೌನ್ ಮಾಡಿದ್ದಾರೆ.

ನರಗುಂದ ತಾಲೂಕಿನ ಬನಹಟ್ಟಿ ಗ್ರಾಮಸ್ಥರು ಕೋವಿಡ್ ನಿಯಮ ಉಲ್ಲಂಘಿಸಿ ಓಕಳಿ ಆಡಿದ್ದರು. ದೇವರ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಈ ಗ್ರಾಮಸ್ಥರು ಸಾಮಾಜಿಕ ಅಂತರ ಕಾಪಾಡದೆ, ಮಾಸ್ಕ್ ಧರಿಸದೆ ಓಕಳಿ ಆಡಿದ್ದರು.

ಪ್ರತಿಯೊಬ್ಬರಿಗೂ ಕೋವಿಡ್ ಟೆಸ್ಟ್

ಈ ಕುರಿತು ವಿಜಯಸಾಕ್ಷಿ ವೆಬ್‌ನಲ್ಲಿ ಸುದ್ದಿ ಪ್ರಸಾರವಾಗಿತ್ತು. ವರದಿ ಕಂಡು ಎಚ್ಚೆತ್ತುಕೊಂಡ ನರಗುಂದ ತಹಸೀಲ್ದಾರ್ ಅಮರವಾಡಗಿ ಅವರು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಆನಂತರ ತಹಸೀಲ್ದಾರ ನೇತೃತ್ವದಲ್ಲಿ ಗ್ರಾ.ಪಂ. ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು. ಗ್ರಾಮದ ಪ್ರತಿಯೊಬ್ಬರನ್ನೂ ಕೋವಿಡ್ ಟೆಸ್ಟ್ ಗೆ ಒಳಪಡಿಸುವಂತೆ ತಹಸೀಲ್ದಾರ್ ಸೂಚಿಸಿದ್ದಾರೆ. ಹೀಗಾಗಿ ತಾಲೂಕು ಆಡಳಿತ ಗ್ರಾಮದಲ್ಲಿ ಬೀಡು ಬಿಟ್ಟಿದೆ. ಇಡೀ ಗ್ರಾಮವನ್ನು ನಾಲ್ಕು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದ್ದು, ಓಕುಳಿ ಆಡಿದ ಎಲ್ಲರ ಮೇಲೂ ಕಾನೂನು ಕ್ರಮ ಜರುಗಿಸಲಾಗಿದೆ. ಗ್ರಾಮದ ಎಲ್ಲ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಹಾಲು, ತರಕಾರಿ ಹಾಗೂ ವೈದ್ಯಕೀಯ ಸೇವೆ ಹೊರತುಪಡಿಸಿ ಊರಲ್ಲಿ ಯಾವುದೇ ಚಟುವಟಿಕೆ ಇರುವುದಿಲ್ಲ ಎಂದು ತಹಸೀಲ್ದಾರ್ ತಿಳಿಸಿದ್ದಾರೆ.

ಕಣ್ಣು ತಪ್ಪಿಸಿ ಮೂರ್ತಿ ಪ್ರತಿಷ್ಠಾಪನೆ
ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿಯೇ ಈ ಗ್ರಾಮದ ಜನರು ಅಧಿಕಾರಿಗಳ ಕಣ್ಣು ತಪ್ಪಿಸಿ ಹನುಮಂತ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರೆಲ್ಲ ಸೇರಿ ಓಕುಳಿ ಆಡಿದ್ದಾರೆ. ಸುದ್ದಿ ತಿಳಿದ ಕೂಡಲೇ ಗ್ರಾಮಕ್ಕೆ ಬಂದು ಟಾಸ್ಕ್ ಫೋರ್ಸ್ ಸಮಿತಿಯ ಸಭೆ ನಡೆಸಲಾಗಿದೆ. ನಾಲ್ಕು ದಿನಗಳ ಕಾಲ ಗ್ರಾಮವನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ

  • ಅಮರವಾಡಗಿ, ತಹಸೀಲ್ದಾರ್, ನರಗುಂದ

ನಾಲ್ಕು ದಿನ ಲಾಕ್‌ಡೌನ್
ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡದಂತೆ ಅಧಿಕಾರಿಗಳು ಸಾಕಷ್ಟು ತಿಳುವಳಿಕೆ ಮೂಡಿಸಿದ್ದರು ಬನಹಟ್ಟಿ ಗ್ರಾಮಸ್ಥರು ಆ ಕಾರ್ಯ ಮಾಡಿದ್ದಾರೆ. ಹೀಗಾಗಿ ಇಂದು ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಸದ್ಯ ಇಡೀ ಗ್ರಾಮದಲ್ಲಿ ನಾಲ್ಕು ದಿನ, ಅಂದರೆ ಭಾನುವಾರ ರಾತ್ರಿ 12ರ ವರೆಗೆ ಲಾಕ್ ಡೌನ್ ಹೇರಲಾಗಿದೆ.

  • ಚಂದ್ರಶೇಖರ ಕುರ್ತಕೋಟಿ, ತಾ.ಪಂ. ಇಓ, ನರಗುಂದ

ಡಾ. ರಾಜ್ ಅವರ ಯೋಗಗುರು, ನಿವೃತ್ತ ಡಿಐಜಿ ನಿಧನ

ವಿಜಯಸಾಕ್ಷಿ ಸುದ್ದಿ, ಕುಂದಗೋಳ

ಕನ್ನಡದ ವರನಟ ಡಾ| ರಾಜ್‌ಕುಮಾರ ಅವರ ಮೆಚ್ಚಿನ ಯೋಗಗುರು, ಕೆಎಸ್‌ಆರ್‌ಪಿ ನಿವೃತ್ತ ಡಿ.ಐ.ಜಿ. ಡಾ| ಹೊನ್ನಪ್ಪ ಎಫ್. ನಾಯ್ಕರ (85) ಮೇ 20ರಂದು ಬೆಂಗಳೂರಿನ ಶೇಷಾದ್ರಿಪುರಂನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಮೂಲತಃ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದ ಡಾ| ಹೊನ್ನಪ್ಪ ಅವರು, ಐದು ದಶಕಗಳಿಂದ ಬೆಂಗಳೂರಿನ ಜೆ.ಪಿ. ನಗರದಲ್ಲಿ ನೆಲೆಸಿದ್ದರು. ಕನಕಪುರ ರಸ್ತೆಯ ಬಿ.ಎಂ. ಕಾವಲ್‌ನಲ್ಲಿ ಮಹಾಯೋಗಕ್ಷೇತ್ರ ಸ್ಥಾಪಿಸಿ, ವರನಟ ಡಾ| ರಾಜ್‌ಕುಮಾರ ಸೇರಿದಂತೆ ಅನೇಕ ರಾಜಕಾರಣಿಗಳು, ನಟರು, ನ್ಯಾಯಾಧೀಶರು, ಹಿರಿಯ ಅಧಿಕಾರಿಗಳು ಹಾಗೂ ಸಹಸ್ರಾರು ಜನರಿಗೆ “ಮುತ್ತಿನ ನಡುಮನೆ” ಮಾರ್ಗದ ಮೂಲಕ ಹಠಯೋಗದ ಸಾಧನೆ ಮಾಡಿಸಿದ್ದರು.

ಆಸ್ಪತ್ರೆ ಸೇರುವ ವರೆಗೂ ಪ್ರತಿ ಭಾನುವಾರ ವಾರಾಂತ್ಯದ ಯೋಗ ತರಬೇತಿ ನೀಡುತ್ತಿದ್ದರು. ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಹಠಯೋಗ ಪರಂಪರೆಯವರಾಗಿದ್ದ ಹೊನ್ನಪ್ಪ, ಅರ್ಥಪೂರ್ಣವಾದ ಯೋಗ, ತತ್ವಪದಗಳನ್ನು ರಚಿಸಿ, ಸ್ವತಃ ಹಾಡಬಲ್ಲವರಾಗಿದ್ದರು. ಅವರ ವಿದ್ಯಾಗುರುವಾಗಿದ್ದ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ| ವಿ.ಕೃ. ಗೋಕಾಕರು ಮೆಚ್ಚುಗೆ ನುಡಿಗಳನ್ನಾಡಿದ್ದರು.

ಕರ್ನಾಟಕ ಸರ್ಕಾರವು 1996ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು 2012ರಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದ್ದವು.

ಅಪ್ರಾಪ್ತೆ ಜೊತೆ ಚಕ್ಕಂದ: ಎಎಸ್ಐ ಸಸ್ಪೆಂಡ್

ಸಿಕ್ಕಿಬಿದ್ದು, ತಾಂಡಾ ಮುಖ್ಯಸ್ಥರ ತೀರ್ಮಾನದಂತೆ 2 ಲಕ್ಷ ರೂ. ದಂಡ ಪಾವತಿಸಿದ್ದ

ವಿಜಯಸಾಕ್ಷಿ ಸುದ್ದಿ, ಗದಗ

ಅಪ್ರಾಪ್ತೆ ಜೊತೆಗೆ ಚಕ್ಕಂದ ಆಡಲು ಹೋಗಿ ಸಿಕ್ಕಿಬಿದ್ದ, ಆ ತಪ್ಪಿಗೆ ದಂಡ ಕಟ್ಟಿದ ಎಎಸ್ಐ ಸಾಹೇಬರು ಈಗ ಸಸ್ಪೆಂಡ್ ಆಗಿದ್ದಾರೆ.
ಈ ಪ್ರಕರಣದ ರೂವಾರಿ ಯಾರು ಎಂಬುದಕ್ಕೆ ಈಗ ಪುಷ್ಟಿ ಸಿಕ್ಕಿದ್ದು, ಎಎಸ್ಐ ಸಾಹೇಬರ ಮೇಲಿನ ವಿಚಾರಣೆ ಬಾಕಿ ಇರಿಸಿ ಸಸ್ಪೆಂಡ್ ಮಾಡಿ ಆದೇಶ ಮಾಡಲಾಗಿದೆ.

ಇದನ್ನೂ ಓದಿ ಅಪ್ರಾಪ್ತೆ ಜೊತೆ ಚಕ್ಕಂದ ಆಡಲು ಹೋಗಿ ಸಿಕ್ಕಿಬಿದ್ದ ಎಎಸ್ಐ; ಎರಡು ಲಕ್ಷ ದಂಡ! 

ಮೇ 9ರಂದು ಗದಗ ಸಮೀಪದ ತಾಂಡಾವೊಂದರಲ್ಲಿ ಅಪ್ರಾಪ್ತೆ ಜೊತೆಗೆ ಚಕ್ಕಂದ ಆಡಲು ಹೋಗಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಪೋಷಕರು ತರಾಟೆಗೆ ತೆಗೆದುಕೊಂಡಿದ್ದರು. ತಾಂಡಾದ ಹಿರಿಯರು ಸಭೆ ಮಾಡಿ, ಎರಡು ಲಕ್ಷ ರೂ. ದಂಡ ವಿಧಿಸಿದ್ದರು.

ಮೇ 14ರಂದು ಸಮೀಪದ ಹೋಟೆಲ್ ಒಂದರಲ್ಲಿ ತಾಂಡಾದ ಹಿರಿಯರ ಕೈಗೆ ದಂಡದ ಮೊತ್ತವಾದ ಎರಡು ಲಕ್ಷ ರೂ. ಕೊಟ್ಟು ಕೈಮುಗಿದು ಬಂದಿದ್ದರು. ಈ ಇಡೀ ಪ್ರಕರಣದ ಕುರಿತು ತಾಂಡಾದ ಬಲ್ಲ ಮೂಲಗಳಿಂದ ಮಾಹಿತಿ ಪಡೆದು ವಿಜಯಸಾಕ್ಷಿ ವೆಬ್ ಪೋರ್ಟಲ್ ಹಾಗೂ ಪತ್ರಿಕೆಯಲ್ಲಿ ವಿಸ್ತೃತ ವರದಿ ಪ್ರಕಟಿಸಿತ್ತು.

ಇದನ್ನೂ ಓದಿ ದಂಡ ಕೊಟ್ಟು ಕೈ ಮುಗಿದ ಎಎಸ್‌ಐ! ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಸಿಕ್ಕಿಬಿದ್ದ ಪೊಲೀಸಪ್ಪನ ಮತ್ತೊಂದು ಮುಖ ಬಯಲು!

ಮೇ 16ರ ವೆಬ್ ಪೋರ್ಟಲ್ ಹಾಗೂ ಮೇ 17 ಪತ್ರಿಕೆಯಲ್ಲಿ ಬಂದ ವರದಿ ಆಧರಿಸಿ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟರ್ ಅವರ ಶಿಫಾರಸು ಹಿನ್ನೆಲೆಯಲ್ಲಿ ಎಸ್ಪಿ ಯತೀಶ್ ಎನ್. ಅವರು, ಶಹರ ಠಾಣೆಯ ಎಎಸ್ಐ ಎಸ್.ಡಿ. ಚವ್ಹಾಣ ಎಂಬುವವರನ್ನು ಅಮಾನತು ಮಾಡಿ ಆದೇಶ ಮಾಡಿದ್ದಾರೆ. ಆ ಮೂಲಕ ತಾಂಡಾದ ಹೋರಿಗೆ ಮೂಗುದಾರ ಬಿದ್ದಿದೆ.

ಶಿರಹಟ್ಟಿಯಲ್ಲಿ 100 ಹಾಸಿಗೆಯ ಕೋವಿಡ್ ಆರೈಕೆ ಕೇಂದ್ರ ಪ್ರಾರಂಭಿಸಿದ ತಹಸೀಲ್ದಾರ್ ಮಜ್ಜಿಗಿ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಪಟ್ಟಣದ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 100 ಹಾಸಿಗೆಯ ಕೋವಿಡ್ ಆರೈಕೆ ಕೇಂದ್ರವನ್ನು ತಹಶೀಲ್ದಾರ್ ಜೆ. ಬಿ. ಮಜ್ಜಿಗಿ ಪ್ರಾರಂಭಿಸಿದರು. ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಕೋವಿಡ್ -19 ರ ನೆರವಿಗೆ ಬರುವ ದೃಷ್ಟಿಯಿಂದ ಪಟ್ಟಣದ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 100 ಹಾಸಿಗೆ ಉಳ್ಳ ಬೆಡ್ ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಸೋಂಕಿತರಿಗೆ ಇಲ್ಲಿ ಎಲ್ಲಾ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಕೊಳ್ಳಲಾಗಿದೆ. ಊಟ ಉಪಹಾರದ ವ್ಯವಸ್ಥೆಗೂ ಸಹ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ತಹಸೀಲ್ದಾರ ಮಜ್ಜಿಗಿ ಹೇಳಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಪರಮೇಶ್ವರ ಮಾತನಾಡಿ, ಕೋವಿಡ್ ಸೋಂಕಿತರ ನೆರವಿಗೆ ಜಿಲ್ಲಾಡಳಿತ ಶಿರಹಟ್ಟಿ ಪಟ್ಟಣದಲ್ಲಿ 100 ಬೆಡ್ ಗಳ ವ್ಯವಸ್ಥೆಯನ್ನು ಕಲ್ಪಿಸಿರುವುದು ಸ್ವಾಗತಾರ್ಹ ಎಂದರು.
ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಾಧಿಕಾರಿ ಉಪಸ್ಥಿತರಿದ್ದರು.

ದೇಶದಲ್ಲಿ ಕೊರೊನಾ ಸ್ಥಿತಿ ಹೇಗಿದೆ? ಒಂದೇ ದಿನದಲ್ಲಿ ಎಷ್ಟು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ?

ವಿಜಯಸಾಕ್ಷಿ ಸುದ್ದಿ, ನವದೆಹಲಿ

ದೇಶದ ಬಹುತೇಕ ರಾಜ್ಯಗಳಲ್ಲಿ ಈಗಾಗಲೇ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಆದರೂ ಕೊರೊನಾ ಅಲೆ ತಗ್ಗುತ್ತಿಲ್ಲ. ಇದು ಆತಂಕಕ್ಕೆ ಕಾರಣವಾಗಿದೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಬರೋಬ್ಬರಿ 2,76,070 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಇದೀಗ ದೇಶದಲ್ಲಿ ಸೋಂಕಿತರ ಸಂಖ್ಯೆ 2,57,72,400ಕ್ಕೆ ಏರಿಕೆಯಾಗಿದೆ.

24 ಗಂಟೆಗಳಲ್ಲಿ ದೇಶದಲ್ಲಿ 3,874 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಇಲ್ಲಿಯವರೆಗೆ 2,87,122 ಜನ ಸಾವನ್ನಪ್ಪಿದ್ದಾರೆ. ಸದ್ಯ ದೇಶದಲ್ಲಿ 31,29,878 ಸಕ್ರಿಯ ಪ್ರಕರಣಗಳಿವೆ. 2,23,55,440 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 18,70,09,792 ಮಂದಿ ಮುಂಜಾಗ್ರತಾ ಕ್ರಮವಾಗಿ ವಾಕ್ಸಿನ್ ಪಡೆದುಕೊಂಡಿದ್ದಾರೆ.

ಸಿಎಂ ಪುತ್ರನ ಮೇಲೆ ಎಫ್ಐಆರ್ ದಾಖಲಿಸುವಂತೆ ಕಾಂಗ್ರೆಸ್ ನಿಂದ ಮನವಿ!

ವಿಜಯಸಾಕ್ಷಿ ಸುದ್ದಿ, ಮೈಸೂರು

ಜಿಲ್ಲೆಯ ನಂಜನಗೂಡು ದೇವಸ್ಥಾನದಲ್ಲಿ ಕೊರೊನಾ ಸಂದರ್ಭದಲ್ಲಿಯೇ ಸಿಎಂ ಅವರ ಪುತ್ರ ಬಿ.ವೈ. ವಿಜಯೇಂದ್ರ ಪೂಜೆ ಸಲ್ಲಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ.

ಬಿ.ವೈ. ವಿಜಯೇಂದ್ರ ಅವರು ಕುಟುಂಬ ಸಮೇತ ನಂಜನಗೂಡು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಎಫ್.ಐ.ಆರ್ ದಾಖಲಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ. ವಿಜಯೇಂದ್ರ ಹಾಗೂ ಕುಟುಂಬಸ್ಥರು ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ವಿಜಯೇಂದ್ರ ಅವರ ವಿರುದ್ಧ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಆಕ್ಟ್ -2005, ಸೆಕ್ಷನ್ 51ರ ಸ್ಪಷ್ಟ ಉಲ್ಲಂಘನೆಯಾಗಿದೆ. ಕರ್ನಾಟಕ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ 2020ರ ಸ್ಪಷ್ಟ ಉಲ್ಲಂಘನೆಯಾಗಿದೆ. ಸರ್ಕಾರದ ಅಧಿಕಾರಿಗಳು ಹೊರಡಿಸಿರುವ ಆದೇಶ ಐಪಿಸಿ 188ರ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.
ಇದರೊಂದಿಗೆ ದೇವಸ್ಥಾನದ ಆಡಳಿತ ಮಂಡಳಿ, ಸರ್ಕಾರಿ ಸಿಬ್ಬಂದಿ ಹಾಗೂ ಪುರೋಹಿತ ವರ್ಗವನ್ನು ಕೂಡಲೇ ಅಮಾನತು ಮಾಡಬೇಕು. ಅವರ ವಿರುದ್ಧ ಕೂಡ ಎಫ್ಐಆರ್ ದಾಖಲಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್, ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಕಾಲುವೆಯ ನೀರಿನಲ್ಲಿಯೇ ತೇಲಾಡುತ್ತಿವೆ ಪಿಪಿಇ ಕಿಟ್!

ವಿಜಯಸಾಕ್ಷಿ ಸುದ್ದಿ, ಮೈಸೂರು

ಸ್ಮಶಾನದಲ್ಲಿ ಸೋಂಕಿತರ ಶವ ಸಂಸ್ಕಾರದ ನಂತರ ಸಂಸ್ಕರಣೆಗೊಳಿಸದೆ ಪಿಪಿಇ ಕಿಟ್ ಗಳನ್ನು ಕಾಲುವೆಯಲ್ಲಿ ಎಸೆಯುತ್ತಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಇದು ಆಸ್ಪತ್ರೆ ಸಿಬ್ಬಂದಿಯ ಪಿಪಿಇ ಕಿಟ್ ಅವಾಂತರ. ಸ್ಮಶಾನದಲ್ಲಿ ಸೋಂಕಿತರ ಶವ ಸಂಸ್ಕಾರದ ನಂತರ ಈ ಪಿಪಿಇ ಕಿಟ್ ಗಳನ್ನು ಸಂಸ್ಕರಿಸಬೇಕು. ಆದರೆ, ಕಾರ್ಯ ಇಲ್ಲಿ ನಡೆಯುತ್ತಿಲ್ಲ. ಹೀಗಾಗಿ ಇವು ಸಾರ್ವಜನಿಕರು ಬಳಸುವ ನೀರಿನ ನಾಲೆಯಲ್ಲಿ ತೇಲಾಡುತ್ತಿವೆ.

ಇಲ್ಲಿಯ ಕೆ.ಆರ್. ಮಿಲ್ ಹತ್ತಿರದ ಕಾಲುವೆ ಬಳಿ 20ಕ್ಕೂ ಹೆಚ್ಚು ಪಿಪಿಇ ಕಿಟ್ ಪತ್ತೆಯಾಗಿವೆ. ಆಸ್ಪತ್ರೆ ಸಿಬ್ಬಂದಿಯ ಈ ಬೇಜವಾಬ್ದಾರಿಯಿಂದಾಗಿ ಸಾರ್ವಜನಿಕರು ಆತಂಕದೊಂದಿಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸರ್ಕಾರ ಕೊವಿಡ್ ನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ಕೆಲವು ಸ್ಮಶಾನಗಳನ್ನ ಆಯ್ಕೆ ಮಾಡಿದೆ. ಈ ಕಾಲುವೆ ಹತ್ತಿರ ಕ್ರೈಸ್ತ ಧರ್ಮದ ಶವ ಸಂಸ್ಕಾರಕ್ಕೆ ಅವಕಾಶ ಮಾಡಿ ಕೊಡಲಾಗಿದೆ. ಈ ಜಾಗ ಪುಟ್ಟದಾಗಿದೆ. ಜಿಲ್ಲೆಯಲ್ಲಿ ಎಲ್ಲಿಯೇ ಕ್ರೈಸ್ತರು ಸಾವನ್ನಪ್ಪಿದರೆ ಅವರನ್ನು ಇಲ್ಲಿಯೇ ತಂದು ಸಂಸ್ಕಾರ ಮಾಡಲಾಗುತ್ತದೆ.

ಬೆಲವತ್ತ ಗ್ರಾಮದಲ್ಲಿಯೇ ಸಾಕಷ್ಟು ಜನ ಕ್ರೈಸ್ತರಿದ್ದಾರೆ. ಈ ಸ್ಮಶಾನವನ್ನು ನಮ್ಮ ಗ್ರಾಮದ ಸ್ಮಶಾನಕ್ಕೆ ಮೀಸಲಿಡಬೇಕು. ಕೂಡಲೇ ಸರ್ಕಾರ ನಿರ್ಧಾರ ಕೈ ಬಿಡಬೇಕು. ಕೊವಿಡ್ ನಿಂದ ಮೃತಪಟ್ಟವರನ್ನು ಇಲ್ಲಿಗೆ ತಂದು ಶವಸಂಸ್ಕಾರ ಮಾಡಿದರೆ ಹೋರಾಟ ಮಾಡಬೇಕಾಗುತ್ತದೆ. ಇಲ್ಲಿ ಸೂಕ್ತ ರೀತಿಯ ಕ್ರಮಗಳನ್ನು ಸರ್ಕಾರ ಕೈಗೊಂಡಿಲ್ಲ. ಮಕ್ಕಳು, ಜಾನುವಾರುಗಳು ಈ ನೀರಿನಲ್ಲಿ ಆಟ ಆಡುತ್ತಿದ್ದಾರೆ. ಅಂತಹ ನೀರಿಗೆ ಪಿಪಿಇ ಕಿಟ್ ಗಳನ್ನು ಬಿಸಾಡಲಾಗುತ್ತಿದೆ. ಹೀಗಾಗಿ ಮಕ್ಕಳಿಗೆ ರೋಗ ಹರಡುವ ಭೀತಿ ಹೆಚ್ಚಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸ್ಥಳಕ್ಕೆ ಮೇಟಗಳ್ಳಿ ಪೊಲೀಸರು, ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನೀರಿನಲ್ಲಿ ತೇಲುತ್ತಿದ್ದ ಪಿಪಿಇ ಕಿಟ್ ತೆರವುಗೊಳಿಸಿದ್ದಾರೆ.

ಮನೆ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಕಲ್ಲು ಎಸೆದ ಕಿಡಿಗೇಡಿಗಳು!

ವಿಜಯಸಾಕ್ಷಿ ಸುದ್ದಿ, ಶಿವಮೊಗ್ಗ

ಕೊರೊನಾ ಸಂದರ್ಭದಲ್ಲಿ ಖಾಲಿ ಕುಳಿತುಕೊಳ್ಳಲಾರದ ಕಿಡಿಗೇಡಿಗಳು ಮಧ್ಯರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಗ್ಲಾಸ್ ಗಳನ್ನು ಪುಡಿ ಪುಡಿ ಮಾಡಿ ವಿಕೃತಿ ಮೆರೆದಿದ್ದಾರೆ. ನಗರದ ಸಿದ್ದಯ್ಯ ರಸ್ತೆ ಹಾಗೂ ಎಂಕೆಕೆ ರಸ್ತೆಯಲ್ಲಿನ ಮನೆಗಳ ಮುಂದೆ ನಿಲ್ಲಿಸಿದ್ದ ಕಾರು ಹಾಗೂ ಆಟೋಗಳ ಗ್ಲಾಸ್ ಗಳನ್ನು ಒಡೆದು ಕಿಡಿಗೇಡಿಗಳು ಪುಡಿ ಪುಡಿ ಮಾಡಿದ್ದಾರೆ.

ಲಾಕ್ ಡೌನ್ ಸಂದರ್ಭದಲ್ಲಿ ಕಿಡಿಗೇಡಿಗಳು ಇಂತಹ ಕೃತ್ಯ ಎಸಗಿದ್ದಕ್ಕೆ ಪೊಲೀಸರಿಗೆ ತಲೆನೋವು ಉಂಟಾಗಿದೆ. ಸ್ಥಳಕ್ಕೆ ಸಚಿವ ಈಶ್ವರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಕಿಡಿಗೇಡಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.
ಈ ಘಟನೆಯಲ್ಲಿ 11 ಕಾರು ಹಾಗೂ 1 ಆಟೋ ದ್ವಿಚಕ್ರ ವಾಹನ ಜಖಂ ಆಗಿವೆ. ಅಲ್ಲದೇ, ಕಾಡಾ ಅಧ್ಯಕ್ಷರ ಕಾರು ಕೂಡ ಜಖಂ ಆಗಿದೆ. ಸ್ಥಳಕ್ಕೆ ದೊಡ್ಡಪೇಟೆ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಅನುಮಾನ ವ್ಯಕ್ತಪಡಿಸಿ ಈಗಾಗಲೇ ಇಬ್ಬರು ಯುವಕರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇಂತಹ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ರಾಜಸ್ಥಾನದ ಮಾಜಿ ಸಿಎಂ ಮಹಾಮಾರಿಗೆ ಬಲಿ!

ವಿಜಯಸಾಕ್ಷಿ ಸುದ್ದಿ, ಜೈಪುರ

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ರಾಜಸ್ಥಾನದ ಮಾಜಿ ಸಿಎಂ ಜಗನ್ನಾಥ್ ಪಹಾಡಿಯಾ(89) ಇಂದು ಮಹಾಮಾರಿಗೆ ಬಲಿಯಾಗಿದ್ದಾರೆ. 1980-81 ರಲ್ಲಿ ಇವರು ರಾಜಸ್ಥಾನದ ಸಿಎಂ ಆಗಿದ್ದರು. ಆನಂತರ ಹರಿಯಾಣ ಹಾಗೂ ಬಿಹಾರದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದರು.
ಮಾಜಿ ಸಿಎಂ ಅವರ ಸಾವಿನ ಕುರಿತು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‍ ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ. ಅಲ್ಲದೇ, ಸಂತಾಪ ಸೂಚಿಸಿದ್ದಾರೆ.

ರಾಜ್ಯ ಸರ್ಕಾರ ಗುರುವಾರ ಒಂದು ದಿನ ಶೋಕಾಚರಣೆಯನ್ನು ಕೂಡ ಘೋಷಿಸಿದೆ. ಅಲ್ಲದೇ ಎಲ್ಲಾ ಸರ್ಕಾರಿ ಕಚೇರಿಗಳನ್ನು ಮುಚ್ಚಲಾಗಿದ್ದು, ರಾಷ್ಟ್ರಧ್ವಜವನ್ನು ಅರ್ಧದಷ್ಟು ಹಾರಿಸಲಾಗುತ್ತಿದೆ.
ಪಹಾಡಿಯಾ ಅವರಿಗೆ ಸಂತಾಪ ಸೂಚಿಸಲು ಇಂದು ಮಧ್ಯಾಹ್ನ 12ಕ್ಕೆ ಕ್ಯಾಬಿನೆಟ್ ಸಭೆ ನಡೆಯಲಿದ್ದು, ಅಂದೇ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುತ್ತದೆ ಎನ್ನಲಾಗಿದೆ.

error: Content is protected !!