Home Blog Page 3020

ಗೋವಾದಲ್ಲಿ ಮತ್ತೆ ಲಾಕ್ ಡೌನ್ ವಿಸ್ತರಣೆ!

ವಿಜಯಸಾಕ್ಷಿ ಸುದ್ದಿ, ಪಣಜಿ

ಕೊರೊನಾ ಎರಡನೇ ಅಲೆ ಇಡೀ ರಾಷ್ಟ್ರವನ್ನೇ ಕಂಗೆಡಿಸಿದೆ. ಹೀಗಾಗಿ ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಆದರೂ ಸಂಪೂರ್ಣವಾಗಿ ಸೋಂಕು ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ಹಲವೆಡೆ ಲಾಕ್ ಡೌನ್ ವಿಸ್ತರಿಸಲಾಗುತ್ತಿದೆ. ಸದ್ಯ ಗೋವಾದಲ್ಲಿ ಮೇ. 31ರ ವರೆಗೆ ಲಾಕ್ ಡೌನ್ ಘೋಷಿಸಲಾಗಿದೆ.

ಈ ಕುರಿತು ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ಹೇಳಿದ್ದಾರೆ. ನಾವು ರಾಜ್ಯದಲ್ಲಿ ಕರ್ಫ್ಯೂವನ್ನು ಮೇ. 31ರವರೆಗೂ ವಿಸ್ತರಿಸುತ್ತಿದ್ದೇವೆ. ಈ ಮುನ್ನ ಇದ್ದ ನಿಯಮಗಳು ಇದ್ದಂತೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಅಗತ್ಯ ವಸ್ತುಗಳು, ದಿನಸಿ ಅಂಗಡಿ, ಮದ್ಯದಂಗಡಿಗಳನ್ನು ಬೆಳಿಗ್ಗೆ 7 ರಿಂದ ಮಧ್ಯಾಹ್ನ 1ರ ವರೆಗೆ ಮಾತ್ರ ತೆರೆಯಲಾಗಿರುತ್ತದೆ. ಮೆಡಿಕಲ್ ಶಾಪ್ ಮತ್ತು ರೆಸ್ಟೋರೆಂಟ್‍ ಗಳು ಬೆಳಿಗ್ಗೆ 7 ರಿಂದ ಸಂಜೆ 7ರ ವರೆಗೂ ಕಾರ್ಯ ನಿರ್ವಹಿಸಲಿವೆ.

ಚಿಪ್ಕೋ ಚಳುವಳಿಯ ನಾಯಕನನ್ನೂ ಬಿಡಲಿಲ್ಲ ಮಹಾಮಾರಿ!

ವಿಜಯಸಾಕ್ಷಿ ಸುದ್ದಿ, ಡೆಹ್ರಾಡೂನ್

ಚಿಪ್ಕೋ ಚಳುವಳಿಯ ನಾಯಕ ಸುಂದರ್ ಲಾಲ್(94) ಬಹುಗುಣ ಅವರನ್ನು ಮಹಾಮಾರಿ ಬಲಿ ಪಡೆದಿದೆ.
ಸುಂದರ್ ಲಾಲ್ ಅವರು ಇಂದು ಉತ್ತರಾಖಂಡದ ರಿಷಿಕೇಶ್ ನಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಅವರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ರಿಷಿಕೇಶ್‍ ನ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ತಮ್ಮ ಜೀವಮಾನವಿಡಿ ಪರಿಸರವಾದಿಯಾಗಿ ಗುರಿತಿಸಿಕೊಂಡಿದ್ದ ಸುಂದರ್ ಲಾಲ್ ಅವರು ಚಿಪ್ಕೋ ಚಳುವಳಿ ಮೂಲಕ ಮರಗಳನ್ನು ಕಡಿಯದಂತೆ ಆಂದೋಲನ ಪ್ರಾರಂಭಿಸಿದ್ದರು. 1990ರಲ್ಲಿ ತೇರಿ ಡ್ಯಾಮ್ ಆಂದೋಲನ ಪ್ರಾರಂಭಿಸಿದ್ದರು. ಇದರ ಭಾಗವಾಗಿ ಅವರು 1995ರಲ್ಲಿ ಜೈಲುವಾಸ ಅನುಭವಿಸಿದ್ದರು. ಅವರ ಪರಿಸರ ಆಂದೋಲನ ಗುರುತಿಸಿದ್ದ ಸರ್ಕಾರ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

ಕೇರಳ ಸಂಪುಟದಲ್ಲಿ ಪತ್ರಕರ್ತೆಗೆ ಒಲಿದ ಅದೃಷ್ಟ!

ವಿಜಯಸಾಕ್ಷಿ ಸುದ್ದಿ, ತಿರುವನಂತಪುರ

ಎಲ್ ಡಿಎಫ್ ಸಚಿವ ಸಂಪುಟದಲ್ಲಿ ಆರೋಗ್ಯ ಖಾತೆಗೆ ಸಚಿವರನ್ನು ನೇಮಿಸುವ ಬಗ್ಗೆ ಸಾಕಷ್ಟು ಗೊಂದಲಗಳಿದ್ದವು. ಆದರೆ ಇದೀಗ ಪತ್ರಕರ್ತೆ ವೀಣಾ ಜಾರ್ಜ್ ಅವರನ್ನು ಕೇರಳದ ಆರೋಗ್ಯ ಸಚಿವೆಯಾಗಿ ಆಯ್ಕೆ ಮಾಡಲಾಗಿದೆ.

ಕಳೆದ ಬಾರಿ ಕೇರಳದ ಆರೋಗ್ಯ ಸಚಿವೆಯಾಗಿದ್ದ 64 ವರ್ಷದ ಕೆಕೆ ಶೈಲಜಾ ಅವರು ಕೋವಿಡ್-19 ನಿರ್ವಹಣೆಯಲ್ಲಿ ಇಡೀ ವಿಶ್ವಕ್ಕೆ ಮಾದರಿಯಾಗಿದ್ದರು. ಅದಕ್ಕೂ ಮುಂಚಿತವಾಗಿ ಅಂದರೆ 2018 ರಲ್ಲಿ ನಿಫಾ ವೈರಸ್ ಹರಡುವಿಕೆಯ (2018) ಸವಾಲುಗಳನ್ನು ಎದುರಿಸುವಲ್ಲಿ ಆರೋಗ್ಯ ಸಚಿವೆಯಾಗಿ ಕೆಕೆ ಶೈಲಜಾ ಅವರು ಉತ್ತಮ ಸಾಧನೆ ಮಾಡಿದ್ದರು. ಆದರೆ ಈ ಬಾರಿಯ ಸಚಿವ ಸಂಪುಟದಿಂದ ಅವರನ್ನ ಕೈಬಿಡಲಾಗಿದೆ.

ಕೇರಳ ರಾಜ್ಯವು ಕಳೆದ ಬಾರಿ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಮಾದರಿ ರಾಜ್ಯ ಎನಿಸಿಕೊಳ್ಳಲು ಶೈಲಜಾ ಅವರು ಪ್ರಮುಖ ಪಾತ್ರ ವಹಿಸಿದ್ದರು. ಆದರೂ ಈ ಬಾರಿ ಶೈಲಜಾ ಅವರ ಆಯ್ಕೆಯಾಗದಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಶೈಲಜಾ ಅವರ ಜನಪ್ರಿಯತೆ ಹೆಚ್ಚುತ್ತಿರುವುದೇ ಕಾರಣ ಎಂದು ಹೇಳಲಾಗುತ್ತಿದೆ.

ಇದೀಗ ಕೇರಳದ ಸಚಿವೆಯಾಗಲಿರುವ ವೀಣಾ ಜಾರ್ಜ್ ಅವರು ಎರಡು ಬಾರಿ ಶಾಸಕಿಯಾಗಿದ್ದು, ಕೇರಳ ವಿಧಾನಸಭೆಯಲ್ಲಿ ಅರನ್ಮುಲಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಇವರಿಗೆ ನಾಯಕತ್ವದ ಗುಣಗಳು, ಪ್ರಬುದ್ಧ ಸಂವಹನ ಮತ್ತು ಉತ್ತಮ ಅಭಿವ್ಯಕ್ತಿ ಭಾಷಣ ಕಲೆ ಇದೆ.

ವೀಣಾ ಜಾರ್ಜ್ ಅವರು 2016 ರಲ್ಲಿ ಚುನಾವಣಾ ಕಣದಲ್ಲಿ ಅಚ್ಚರಿಯ ಪ್ರವೇಶ ಪಡೆದಿದ್ದರೂ, ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಶಿವಡಾಸನ್ ನಾಯರ್ ಅವರನ್ನು 7,646 ಮತಗಳ ಅಂತರದಲ್ಲಿ ಸೋಲಿಸಿದ್ದರು.

ಸೋಂಕಿತನ ಶವ ಸಂಸ್ಕಾರಕ್ಕೆ ವಿರೋಧಿಸಿದ ಗ್ರಾಮಸ್ಥರು!

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲಿ ಕೊರೊನಾ ಸೋಂಕಿತನ ಶವ ಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದ ಅಮಾನವೀಯ ಘಟನೆ ಕಂಡು ಬಂದಿದೆ. ಜಿಲ್ಲೆಯ ರೋಣ ತಾಲೂಕಿನ ಅಮರಗೋಳದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಮೂಲತಃ ಅಮರಗೋಳ ಗ್ರಾಮದ 72 ವರ್ಷದ ವ್ಯಕ್ತಿಯೊಬ್ಬರು ಮಹಾಮಾರಿಗೆ ಬಲಿಯಾಗಿದ್ದರು. ಆದರೆ, ಈ ವ್ಯಕ್ತಿ ಬಾಗಲಕೋಟೆ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರು.

ಕೊರೊನಾದಿಂದಾಗಿ ಬಾಗಲಕೋಟೆ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದರು. ಆದರೆ, ಅಂತ್ಯ ಸಂಸ್ಕಾರ ಮಾಡಲು ಕುಟುಂಬಸ್ಥರು ಮಾತ್ರ ಹುಟ್ಟೂರಿಗೆ ಶವ ತಂದಿದ್ದರು.

ಈ ನಿರ್ಧಾರಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ನಂತರ ಜೆಸಿಬಿಯ ಮೂಲಕ ತಮ್ಮ ಸ್ವಂತ ಜಮೀನಿನಲ್ಲಿಯೇ ಸಂಬಂಧಿಕರು ಅಂತ್ಯ ಸಂಸ್ಕಾರ ಮಾಡಿದ್ದಾರೆ. ಹೆಚ್ಚು ಮಳೆ ಸುರಿದಿದ್ದರಿಂದಾಗಿ ಆಂಬುಲೆನ್ಸ್ ವಾಹನ ಹೊಲಕ್ಕೆ ತೆರಳಲು ಪರದಾಟ ನಡೆಸಿತು. ಕೊನೆಗೆ ಜೆಸಿಬಿಯಲ್ಲಿಯೇ ಶವ ಹಾಕಿಕೊಂಡು ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.

ಕುಂಭ ಮೇಳಕ್ಕೆ ಅವಕಾಶ ನೀಡಿದ್ದಕ್ಕೆ ಸರ್ಕಾರಕ್ಕೆ ಛೀಮಾರಿ ಹಾಕಿದ ಕೋರ್ಟ್!

ವಿಜಯಸಾಕ್ಷಿ ಸುದ್ದಿ, ಡೆಹ್ರಾಡೂನ್

ದೇಶದಲ್ಲಿ ಕೊರೊನಾ ಹೆಚ್ಚಳವಾಗಲು ಧಾರ್ಮಿಕ ಕಾರ್ಯಕ್ರಮಗಳೇ ಕಾರಣ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಅದರಲ್ಲೂ ಈ ಕುಂಭಮೇಳವನ್ನು ಕೋವಿಡ್ ಪ್ರೋಟೋಕಾಲ್ ಉಲ್ಲಂಘಿಸಿ ನಡೆಸಿತ್ತು. ಈಗ ಇದರ ವಿರುದ್ಧ ಉತ್ತರಾಖಂಡ ಹೈಕೋರ್ಟ್ ಆಕ್ರೋಶ ಹೊರಹಾಕಿದ್ದು, ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ.

ಕೋವಿಡ್ ಹರಡಲು ಮೂಲ ಕಾರಣವಾದ ಕುಂಭಮೇಳದ ವಿಚಾರದಲ್ಲಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಆರ್.ಎಸ್. ಚೌಹಾಣ್ ಮತ್ತು ನ್ಯಾಯಮೂರ್ತಿ ಅಲೋಕ್ ವರ್ಮಾ ಅವರು, “ರಾಜ್ಯದಲ್ಲಿ ಈ ಕುಂಭಮೇಳ ಮತ್ತು ಚಾರ್ ಧಾಮ್ ಯಾತ್ರೆಯಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವಾಗ ಕೋವಿಡ್ ನಿಯಮಗಳನ್ನು ಅನುಸರಿಸಲಾಗಿದೆಯೇ..? ನಾವು ಮೊದಲು ಕುಂಭಮೇಳ ನಡೆಸಿ ತಪ್ಪುಮಾಡಿದ್ದೇವೆ, ಬಳಿಕ ಚಾರ್ ಧಾಮ್ ಯಾತ್ರೆ.. ಯಾಕೆ ನಾವು ಪದೇ ಪದೇ ಮುಜುಗರಕ್ಕೆ ಒಳಗಾಗುವ ಕೆಲಸ ಮಾಡುತ್ತೇವೆ..?” ಎಂದು ಉತ್ತರಾಖಂಡ ಸರ್ಕಾರವನ್ನು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ.

ಕೇದಾರನಾಥ ಮತ್ತು ಬದ್ರಿನಾಥ್ ದೇವಾಲಯಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹಾರಿದಾಡುತ್ತಿವೆ ಅವುಗಳನ್ನು ನೋಡಿ. ಅಲ್ಲಿ ಪುರೋಹಿತರೇ ದೈಹಿಕ ಅಂತರ ಕಾಪಾಡಿಕೊಂಡಿಲ್ಲ. ಇವುಗಳನ್ನೆಲ್ಲಾ ಬಗ್ಗೆ ನಿರ್ಧರಿಸುವುದು ನಮ್ಮ ಕೆಲಸವಲ್ಲ, ಸರ್ಕಾರದ ಕೆಲಸ. ನೀವು ನ್ಯಾಯಾಲಯವನ್ನು ಮೂರ್ಖರಾಗಿಸಬಹುದು, ಆದರೆ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ. ಸರ್ಕಾರ ಲಕ್ಷಾಂತರ ಜನರ ಜೀವದೊಂದಿಗೆ ಆಟವಾಡುತ್ತಿದೆ. ಇದೊಂದು ನಿರ್ಲಕ್ಷ್ಯ ಸರ್ಕಾರ” ಎಂದು ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ್ ಇನ್ನಿಲ್ಲ!

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಕೇಂದ್ರದ ಮಾಜಿ ಸಚಿವ ಹಾಗೂ ರೈತ ನಾಯಕ ಬಾಬಾಗೌಡ ಪಾಟೀಲ(78) ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಇತ್ತೀಚೆಗಷ್ಟೇ ನಗರದಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರು ಎಳೆದಿದ್ದಾರೆ.

ಬಾಬಾಗೌಡ ಅವರು ರೈತ ಹೋರಾಟದ ಮೂಲಕ ರಾಜಕೀಯ ರಂಗ ಪ್ರವೇಶಿಸಿದ್ದರು. 80-90 ದಶಕದಲ್ಲಿ ಸರ್ಕಾರದ ವಿರುದ್ಧ ಸಿಡಿದೆದ್ದು, ರೈತ ಸಂಘ ಕಟ್ಟಿದ ಪ್ರಮುಖರಲ್ಲಿ ಇವರೊಬ್ಬರು. ಆ ನಂತರ ರಾಜ್ಯದಾದ್ಯಂತ ರೈತ ಸಂಘದ ಮೂಲಕ ರೈತರಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ತೊಡೆತಟ್ಟಿ ನಿಂತಿದ್ದರು. ಉತ್ತರ ಕರ್ನಾಟಕವಷ್ಟೆ ಅಲ್ಲದೇ, ದಕ್ಷಿಣ ಕರ್ನಾಟಕದಲ್ಲಿಯೂ ಇವರು ರೈತರಿಗೆ ನಾಯಕರಾಗಿದ್ದರು.

1989ರಲ್ಲಿ ರೈತ ಸಂಘದ ಮೂಲಕ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ ಹಾಗೂ ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಏಕಕಾಲದಲ್ಲಿ ಸ್ಪರ್ಧಿಸಿ, ಎರಡೂ ಕ್ಷೇತ್ರದಲ್ಲಿ ಗೆದ್ದು ಬೀಗಿದ್ದರು. ಆ ಸಮಯದಲ್ಲಿ ರಾಜ್ಯದ ಇನ್ನಿತರ ಕ್ಷೇತ್ರಗಳಲ್ಲಿ ರೈತ ಸಂಘದ ಸದಸ್ಯರು ತೀವ್ರ ಹೋರಾಟ ನಡೆಸಿ, ಸೋಲು ಕಂಡಿದ್ದರು. ರೈತ ಸಂಘಧ ಇನ್ನೊಬ್ಬ ನಾಯಕ ನಂಜುಂಡಸ್ವಾಮಿ ಕೂಡ ಸೋಲು ಕಂಡಿದ್ದರು. ಆಗ ಬಾಬಾಗೌಡ ಪಾಟೀಲ್ ಮಾತ್ರ ರೈತ ಸಂಘದಿಂದ ಗೆದ್ದ ಏಕೈಕ ವ್ಯಕ್ತಿಯಾಗಿದ್ದರು. ಆ ನಂತರ ಬಾಬಾಗೌಡ ಅವರು ಕಿತ್ತೂರ ಕ್ಷೇತ್ರವನ್ನು ಉಳಿಸಿಕೊಂಡು, ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ರಾಜೀನಾಮೆ ನೀಡಿದರು. ನಂಜುಂಡಸ್ವಾಮಿ ಅವರನ್ನು ಧಾರವಾಡ ಗ್ರಾಮೀಣ ಅಖಾಡಕ್ಕೆ ಇಳಿಸಿ, ತಾವೇ ಸ್ವಂತ ಪ್ರಚಾರದ ಹೊಣೆ ಹೊತ್ತು ಅವರನ್ನೂ ಕೂಡ ಗೆಲ್ಲಿಸಿಕೊಂಡು ವಿಧಾನಸಭೆ ಪ್ರವೇಶಿದ್ದರು. ಅಂದು ಬಾಬಾಗೌಡ ಹಾಗೂ ನಂಜುಂಡಸ್ವಾಮಿ ಅವರು ವಿಧಾನಸಭೆಯಲ್ಲಿ ಚರ್ಚೆ ಮಾಡುತ್ತಿದ್ದರೆಂದರೆ, ಇಡೀ ಸದನವೇ ಮೌನ ವಹಿಸುತ್ತಿತ್ತು. ಅಷ್ಟೊಂದು ಆಳ ಅಧ್ಯಯನದ ಮೂಲಕ ಇವರು ಮಾತನಾಡುತ್ತಿದ್ದರು. ರೈತರಿಗೆ ಎಲ್ಲಿಯೇ ಅನ್ಯಾಯವಾದರೂ ಸರ್ಕಾರವನ್ನೇ ತರಾಟೆಗೆ ತೆಗೆದುಕೊಂಡು ಬಗೆ ಹರಿಸುತ್ತಿದ್ದರು.
ಆನಂತರ ರೈತ ಸಂಘದಲ್ಲಿ ಭಿನ್ನಾಭಿಪ್ರಾಯ ತಲೆದೋರಿ, ಬಾಬಾಗೌಡ ಅವರು ಬಿಜೆಪಿ ಸೇರಿದರು.

1998ರಲ್ಲಿ ಬೆಳಗಾವಿ ಲೋಕಸಭೆಯಿಂದ ಸ್ಪರ್ಧಿಸಿ ಜಯಗಳಿಸಿ, ಸಂಸತ್ ಕೂಡ ಪ್ರವೇಶಿಸಿದರು. ಆಗ ಅಟಲ್ ಬಿಹಾರಿ ವಾಜಪೇಯಿ ಅವರ ಸಚಿವ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಸಾಕಷ್ಟು ಜನಸೇವೆ ಮಾಡಿದ್ದಾರೆ. ಗ್ರಾಮ ಸಡಕ್ ಯೋಜನೆ ಸೇರಿದಂತೆ ಹತ್ತಾರು ಯೋಜನೆಗಳ್ನು ಜಾರಿಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಕೊನೆಗೆ ಬಿಜೆಪಿಯಲ್ಲಿನ ಕೆಲವು ಗುಂಪುಗಾರಿಕೆಯಿಂದ ಬೇಸತ್ತ ಅವರು, ಬಿಜೆಪಿ ತೊರೆದರು.
ಆ ನಂತರ ರೈತ ಸೇವೆ ಮಾಡುತ್ತ, ರೈತರ ಅನ್ಯಾಯದ ವಿರುದ್ಧ ಧ್ವನಿ ಹಾಕುತ್ತ ರೈತ ಸೇವೆಯಲ್ಲಿಯೇ ತೊಡಗಿದ್ದರು.

ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತಂದಿರುವುದು ರೈತರಿಗೆ ಮರಣಶಾಸನವಾಗಿದೆ ಎಂದು ಮೋದಿ ವಿರುದ್ಧ ಇತ್ತೀಚೆಗಷ್ಟೇ ಗುಡುಗಿದ್ದರು.

ಸದ್ಯ ಅವರ ನಿಧನಕ್ಕೆ ರಾಜ್ಯದ ರೈತರು ಕಂಬನಿ ಮಿಡಿಯುತ್ತಿದ್ದಾರೆ. ವೀರಶೈವ ಮಹಾಸಭೆಯ ಧಾರವಾಡ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ, ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ, ಕಾಂಗ್ರೆಸ್ ನಾಯಕ ಮಲ್ಲನಗೌಡ ಸೋ.ಪಾಟೀಲ, ಬಿಜೆಪಿ ನಾಯಕ ಹಾಗೂ ನ್ಯಾಯವಾದಿ ಮಂಜುನಾಥ ಮುಗ್ಗನವರ, ವೀರಶೈವ ಮಹಾಸಭೆಯ ಕಾರ್ಯದರ್ಶಿ ಸಿದ್ದಣ್ಣ ಕಂಬಾರ, ನ್ಯಾಯವಾದಿ ಸೋಮಶೇಖರ ಹೂಗಾರ ಸೇರಿದಂತೆ ಹಲವು ಗಣ್ಯರು ಬಾಬಾಗೌಡ ಅವರ ನಿಧನಕ್ಕೆ ಕಣ್ಣೀರು ಸುರಿಸಿದ್ದಾರೆ.

ಕಾರ್ಯಕರ್ತನ ಬೈಕ್ ತಡೆದ ಮಹಿಳಾ ಎಎಸ್ಐ ಸಸ್ಪೆಂಡ್; ಶಾಸಕರೇ ಇದು ಸರೀನಾ?

ವಿಜಯಸಾಕ್ಷಿ ಸುದ್ದಿ, ಗದಗ

ಲಾಕ್ ಡೌನ್ ವೇಳೆಯಲ್ಲಿ ಬಿಜೆಪಿ ಕಾರ್ಯಕರ್ತನ ಬೈಕ್ ಬಿಡದೇ ಇದ್ದ ಕಾರಣಕ್ಕಾಗಿ ಮಹಿಳಾ ಎಎಸ್ಐ ಒಬ್ಬರು ಸಸ್ಪೆಂಡ್ ಆದ ಘಟನೆ ಗದಗನಲ್ಲಿ ನಡೆದಿದೆ.

ಬೆಟಗೇರಿ ಠಾಣೆಯ ಮಹಿಳಾ ಎಎಸ್ಐ ಎನ್ ಸಿ ಮೂಲಿಮನಿ ಎಂಬುವವರೇ ಅಮಾನತು ಆದವರು. ಕೋವಿಡ್ ತಡೆಗಟ್ಟಲು ಸರಕಾರ, ಜಿಲ್ಲಾಡಳಿತದ ಆದೇಶ ಪಾಲಿಸಿದ ಮಹಿಳಾ ಎಎಸ್ಐ ಈಗ ಅಮಾನತು ಶಿಕ್ಷೆಗೆ ಒಳಗಾದವರು.

ಕೋವಿಡ್ ‌ನಿಯಂತ್ರಣ ಮಾಡಲು ಸರಕಾರ ಲಾಕ್ ಡೌನ್ ಜಾರಿ ಮಾಡಿದೆ. ಅನಗತ್ಯ ಸಂಚಾರ, ಓಡಾಟ ಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಎಸ್ಪಿ ಸಾಹೇಬರು ಅನಗತ್ಯ ವಾಹನ ಓಡಾಟ ಕಂಡು ಬಂದಲ್ಲಿ ದಂಡ, ಸೀಜ್ ಮಾಡಲು ತಮ್ಮ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕೋವಿಡ್ ವೇಳೆಯಲ್ಲಿ ಜೀವ ಕೈಯಲ್ಲಿ ಹಿಡಿದು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಂದಿಷ್ಟು ಅಧಿಕಾರಿಗಳು, ಪೊಲೀಸರು, ಯಾರ ಮುಲಾಜಿಗೂ ಬಗ್ಗದೇ ಮೇಲಾಧಿಕಾರಿಗಳ, ಸರಕಾರದ ಆದೇಶ ಪಾಲನೆ ಮಾಡುತ್ತಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಹೀಗೆ ಮೊನ್ನೆ ಮೇ 17 ರಂದು ಮಧ್ಯಾಹ್ನ ಬೆಟಗೇರಿಯ ಟಿಂಗಿನಕಾಯಿ ಬಜಾರನಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ‌ ಎಎಸ್ಐ ಎನ್ ಸಿ ಮೂಲಿಮನಿ‌ ಅವರು, ಬೈಕ್ ತಡೆದಿದ್ದಾರೆ. ನಾನು ಬಿಜೆಪಿ ಕಾರ್ಯಕರ್ತ ಅಂತ ಹೇಳಿದ ಆತ, ಸೀದಾ‌ ಶಾಸಕ ಕಳಕಪ್ಪ ಬಂಡಿ ಅವರಿಗೆ ಕಾಲ್ ಮಾಡಿ ಕೊಟ್ಟಿದ್ದಾನೆ‌. ಆ ಕಡೆಯಿಂದ ಮಾತನಾಡುವವರು ಯಾರು ಅಂತ ಗೊತ್ತಾಗದೇ ಸಹಜವಾಗಿ ಪೊಲೀಸ್ ಭಾಷೆಯಲ್ಲಿ ಮಾತನಾಡಿದ್ದಾರೆ. ಇದರಿಂದ ಕೆರಳಿ ಕೆಂಡಮಂಡಲವಾದ ಶಾಸಕರು ಮಹಿಳಾ ಎಎಸ್ಐ ಮೇಲೆ ಎಗರಾಡಿದ್ದಾರೆ. ಮೊದಲೇ ಒರಟು ಸ್ವಭಾವದ ಶಾಸಕರು ಹಿರಿಯ ಅಧಿಕಾರಿಗಳಿಗೆ ಫೋನ್ ಮಾಡಿ‌ ಯಾರ ನೋಡ್ರೀ ಆ ಎಎಸ್ಐ ಅಂತ ಹೇಳಿದ್ದಾರೆ.

ಅಷ್ಟಕ್ಕೆ ಈಗ ಈ ಮಹಿಳಾ ಎಎಸ್ಐ ‌ಅವರು ಸಸ್ಪೆಂಡ್ ಆಗಿದ್ದಾರೆ. ಇದೀಗ ಈ ವಿಷಯ ಪೊಲೀಸ್ ವಲಯ, ಸಾರ್ವಜನಿಕ ಚರ್ಚೆಯ ವಿಷಯವಾಗಿದೆ.

ಮತ್ತೊಮ್ಮೆ ಮಾನವೀಯತೆಗೆ ಹೆಸರಾದ ಕಿಂಗ್ ಕೊಹ್ಲಿ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಕೊರೊನಾ ತಾಂಡವಾಡುತ್ತಿರುವ ದಿನದಿಂದಲೂ ಮಾನವೀಯತೆ ಪ್ರದರ್ಶಿಸುತ್ತಿದ್ದಾರೆ. ಸದ್ಯ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿಗೆ ಸಹಾಯ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ ಶ್ರಾವಂತಿ ನಾಯ್ಡು ಅವರ ತಾಯಿಯ ಚಿಕಿತ್ಸೆಗೆ ರೂ. 6.77 ಲಕ್ಷ ನೆರವು ನೀಡಿದ್ದಾರೆ. ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದ ಅವರು ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದರು. ಈ ವಿಷಯ ಕೇಲುತ್ತಿದ್ದಂತೆ ವಿರಾಟ್ ಕೊಹ್ಲಿ ಸಹಾಯ ಮಾಡಿದ್ದಾರೆ.

ಮಾಜಿ ಸ್ಪಿನ್ ಬೌಲರ್ ಶಿವಲಾಲ್ ಯಾದವ್ ಅವರ ಸಹೋದರಿ ಹಾಗೂ ಬಿಸಿಸಿಐ ದಕ್ಷಿಣ ವಲಯ ಸಂಯೋಜಕಿ ಎನ್. ವಿದ್ಯಾ ಯಾದವ್ ಅವರು ಶ್ರಾವಂತಿ ನಾಯ್ಡು ಅವರ ತಾಯಿ ಅನುಭವಿಸುತ್ತಿದ್ದ ಆರ್ಥಿಕ ತೊಂದರೆಯ ಬಗ್ಗೆ ಟ್ವೀಟ್ ಮಾಡಿ ಗಮನ ಸೆಳೆದಿದ್ದರು. ಅಲ್ಲದೇ, ಈ ಟ್ವೀಟ್ ನ್ನು ವಿರಾಟ್ ಕೊಹ್ಲಿಗೆ ಟ್ಯಾಗ್ ಮಾಡಿದ್ದರು. ಆಟ ಟ್ವೀಟ್ ಅನ್ನು ವಿರಾಟ್ ಕೊಹ್ಲಿಗೆ ಟ್ಯಾಗ್ ಮಾಡಿದ್ದರು.

ಸುಮನ್ ಅವರ ಕೋವಿಡ್ ಚಿಕಿತ್ಸೆಗೆಂದು ಅದಾಗಲೇ ರೂ. 16 ಲಕ್ಷ ರೂಪಾಯಿ ಖರ್ಚು ಮಡಲಾಗಿದೆ ಎಂದು ಟ್ವೀಟ್ನಲ್ಲಿ ಉಲ್ಲೇಖಿಸಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಕೊಹ್ಲಿ ಅವರು ಹಣದ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಹಾಡಹಗಲೇ ಗುಂಡು, ತುಂಡಿನ ಪಾರ್ಟಿ ನಡೆಸಿದ ಕಾಂಗ್ರೆಸ್ ನಾಯಕರ ಪುತ್ರರು!

ವಿಜಯಸಾಕ್ಷಿ ಸುದ್ದಿ, ದಾವಣಗೆರೆ

ಮಹಾಮಾರಿಯ ಅಟ್ಟಹಾಸ ರಾಜ್ಯದಲ್ಲಿ ಹೆಚ್ಚಾಗುತ್ತಿದ್ದಂತೆ ಸರ್ಕಾರ ಲಾಕ್ ಡೌನ್ ಘೋಷಿಸಿದೆ. ಆದರೆ, ಈ ಸಂದರ್ಭದಲ್ಲಿಯೇ ದಾವಣಗೆರೆ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಪಾರ್ಟಿ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.

ಕೊಂಡಜ್ಜಿ ಗ್ರಾಮದಲ್ಲಿರುವ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಭವನದಲ್ಲಿ ಹಾಡುಹಗಲೇ ಇವರು ಮದ್ಯದ ಪಾರ್ಟಿ ನಡೆಸಿದ್ದಾರೆ. ಜಿಲ್ಲಾ ಯೂತ್ ಕಾಂಗ್ರೆಸ್ಅಧ್ಯಕ್ಷ ನಿಖಿಲ್ ಕೊಂಡಜ್ಜಿ ಅವರು ವಿಧಾನಪರಿಷತ್ ಸದಸ್ಯ ಮೋಹನ ಕೊಂಡಜ್ಜಿಅವರ ಸಹೋದರನ ಪುತ್ರ. ಇವರು ಎರಡು ದಿನಗಳ ಹಿಂದೆಯೇ ಈ ಪಾರ್ಟಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ಈ ಪಾರ್ಟಿಯ ವಿಡಿಯೋ ಬಿಡುಗಡೆಯಾಗಿದೆ. ಈ ಪಾರ್ಟಿ ಕಂಡು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಪೊಲೀಸರು ಮಾತ್ರ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕೊರೊನಾ; ಗುರುವಾರವೂ 469 ಜನರಿಗೆ ಸೋಂಕು, ಸೋಂಕಿಗೆ ಐವರ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲಿ ಇವತ್ತು 469 ಜನರಿಗೆ ಸೋಂಕು ತಗುಲಿದೆ.

ಇವತ್ತಿನ ಜಿಲ್ಲಾಡಳಿತದ ವರದಿಯಂತೆ ಐದು ಜನ ಸೋಂಕಿಗೆ ಬಲಿಯಾಗಿದ್ದಾರೆ.

ಇಂದಿನ 469 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 19785 ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -209, ಮುಂಡರಗಿ-68, ನರಗುಂದ-89 ರೋಣ-89, ಶಿರಹಟ್ಟಿ-11, ಹೊರಜಿಲ್ಲೆಯ-03 ಸೇರಿದಂತೆ 469 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ಐವರು ಮೃತಪಟ್ಟಿದ್ದು, ಮೃತರ ಸಂಖ್ಯೆ 202 ಕ್ಕೇರಿದೆ.

ಲಕ್ಷ್ಮೇಶ್ವರ ನಿವಾಸಿ 66 ವರ್ಷದ ಮಹಿಳೆ ಮೇ -08 ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಮೇ 15 ರಂದು ಮೃತಪಟ್ಟಿದ್ದಾರೆ.

ಗದಗ ಶಹರದ ಆಶ್ರಯ ಕಾಲೋನಿ ನಿವಾಸಿ 80 ವರ್ಷದ ಮಹಿಳೆ ಮೇ -14 ರಂದು ಜಿಮ್ಸ್ ಗೆ ದಾಖಲಾಗಿದ್ದು, ಕೋವಿಡ್ ದೃಢಪಟ್ಟಿತ್ತು, ಮೇ 16 ರಂದು ಜಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ.

ಶಿರಹಟ್ಟಿ ತಾಲೂಕಿನ ಮಾಡೊಳ್ಳಿ ನಿವಾಸಿ ಯಾವಗಲ್ ನಿವಾಸಿ 75 ವರ್ಷದ ಮಹಿಳೆ ಮೇ 14 ರಂದು ಜಿಮ್ಸ್ ಗೆ ದಾಖಲಾಗಿದ್ದರು. ಮೇ 17 ರಂದು ಮೃತಪಟ್ಟಿದ್ದಾರೆ.

ಗದಗ ತಾಲೂಕಿನ ನರಸಾಪೂರ ನಿವಾಸಿ 65 ವರ್ಷದ ಮಹಿಳೆ ಮೇ 09 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 18 ರಂದು ಮೃತಪಟ್ಟಿದ್ದಾರೆ.

ಲಕ್ಷ್ಮೇಶ್ವರ ನಿವಾಸಿ 40 ವರ್ಷದ ಮಹಿಳೆ ಜಿಮ್ಸ್ ಆಸ್ಪತ್ರೆಗೆ ಮೇ-13 ರಂದು ದಾಖಲಾಗಿದ್ದರು. ಇವರು ಮೇ -18 ರಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 327 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 16281 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 3302 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 192 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

error: Content is protected !!