Home Blog Page 3023

ಮನೆಗಳಿಗೆ ನುಗ್ಗಿದ ಚರಂಡಿ ನೀರು; ಲಕ್ಷ್ಮೇಶ್ವರ ತಾಲೂಕಿನ ಆದರಳ್ಳಿಯಲ್ಲಿ ಘಟನೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಅತಿಯಾದ ಮಳೆಯಿಂದಾಗಿ ಚರಂಡಿ ನೀರೂ ಸಹ ಮನೆಗಳಿಗೆ ನುಗ್ಗಿರುವ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಆದರಳ್ಳಿಯಲ್ಲಿ ನಡೆದಿದೆ.

ಗ್ರಾಮದ ತಗ್ಗಿನ ಪ್ರದೇಶದಲ್ಲಿರುವ ವಡ್ಡರ ಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ರಾತ್ರಿ ಸುರಿದ ಮಳೆಯಿಂದಾಗಿ ಮಳೆ ನೀರಿನ‌ ಜೊತೆ ಚರಂಡಿ ನೀರೂ ಸಹ ಮನೆಗಳಿಗೆ ನುಗ್ಗಿ ಜನರು ಪರದಾಡುವಂತೆ ಮಾಡಿದೆ.

ವಡ್ಡರ‌ ಪಾಳ್ಯದಲ್ಲಿರುವ ಬಹುತೇಕ ಮನೆಗಳಿಗೆ ಚರಂಡಿ ನೀರು ನುಗ್ಗಿದ್ದು, ರಾತ್ರಿಯಿಡಿ ಮನೆಯಿಂದ ನೀರು ಹೊರಹಾಕಲು ಜನ್ರು ಹರಸಾಹಸ ಪಡುವಂತಾಗಿತ್ತು.

ಮನೆಯಲ್ಲಿನ ಧವಸಧಾನ್ಯಗಳು ನೀರುಪಾಲಾಗಿದ್ದು, ಸರಿಯಾದ ಚರಂಡಿ ವ್ಯವಸ್ಥೆ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಮೊದಲೇ ಇಲ್ಲಿ ಚರಂಡಿ ನಿರ್ಮಿಸಲು, ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಯಾವೊಬ್ಬ ಅಧಿಕಾರಿಗಳೂ ತಲೆ ಕೆಡೆಸಿಕೊಂಡಿಲ್ಲ. ಇನ್ನು ಶಾಸಕ ರಾಮಣ್ಣ ಲಮಾಣಿ ಸಹ ಸ್ಪಂದನೆ ನೀಡುತ್ತಿಲ್ಲ ಅಂತ ನಿವಾಸಿಗಳ ಅಳಲು ತೋಡಿಕೊಂಡಿದ್ದಾರೆ.

ಬದಲಾವಣೆಗಾಗಿ ಕುಬೇರಪ್ಪಗೆ ಮತ ನೀಡಿ: ಕಲ್ಮನಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಬದಲಾವಣೆಗಾಗಿ ಪದವೀಧರರೆಲ್ಲರ ಮತ್ತು ಶಿಕ್ಷಕರ ಚಿತ್ತ ಕುಬೇರಪ್ಪನವರತ್ತ ಬಂದಿದೆ ಎಂದು ಡಾ.ಆರ್.ಎಂ. ಕುಬೇರಪ್ಪನವರ ಅಭಿಮಾನಿ ಬಳಗದ ಯುವ ಮುಖಂಡ ಪ್ರೊ.ಹನುಮಂತಗೌಡ ಆರ್.ಕಲ್ಮನಿ ಅಭಿಪ್ರಾಯಪಟ್ಟರು.
ಅವರು ಗದಗ ಬೆಟಗೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಭೇಟಿ ನೀಡಿ, ಡಾ. ಕುಬೇರಪ್ಪನವರಿಗೆ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಿ, ಗೆಲ್ಲಿಸಬೇಕೆಂದು ಮಹಾವಿದ್ಯಾಲಯದ ಪ್ರಾಚಾರ್ಯರಲ್ಲಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರಲ್ಲಿ ಮನವಿ ಮಾಡಿದ ನಂತರ ಮಾತನಾಡಿದರು.
ಕಂಪ್ಯೂಟರ್ ಯುಗದಲ್ಲಿರುವ ಭಾರತದ ಶೈಕ್ಷಣಿಕ ವ್ಯವಸ್ಥೆ ಸಮೃದ್ಧವಾದ ಮಾನವ ಸಂಪನ್ಮೂಲ ಹೊಂದಿದೆ. ಆದರೆ ದಿನ ಕಳೆದಂತೆ ಉನ್ನತ ಶಿಕ್ಷಣ ಪಡೆಯುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ, ಪದವಿ ಪಡೆದವರ ಅರ್ಹತೆಗೆ ತಕ್ಕ ಉದ್ಯೋಗ ಸಿಗುತ್ತಿಲ್ಲಯೆಂಬ ಅವರ ಬದುಕಿನ ಗೋಳು ನಿತ್ಯ ನಿರಂತರವಾಗಿ ಕೇಳಿ ಬರುತ್ತಿದೆ.
ರಾಜ್ಯದ ಪದವೀಧರರ ಮತ್ತು ಶಿಕ್ಷಕರ ಮತ ಕ್ಷೇತ್ರದಿಂದ ಸ್ಪರ್ಧಿಸಿ ಕೇಲವು ಜನಪ್ರತಿನಿಧಿಗಳಾಗಿರುವವರು ಇದನ್ನು ಕೇಳಿ ಕೇಳದಂತೆ ಜಾಣ ಕುರುಡುತನದಂತೆ ವರ್ತಿಸುತ್ತಿದ್ದಾರೆ. ಪದವೀಧರರ ಸಮಸ್ಯೆಗಳ ಪರಿಹಾರಕ್ಕಾಗಿ ಕುಬೇರಪ್ಪ ಅವರಿಗೆ ಮತ ನೀಡಿ ಎಂದು ಕಲ್ಮನಿ ಮನವಿ ಮಾಡಿದರು.
ಈ ವೇಳೆ ಸಿದ್ದಪ್ಪ ಈರಗಾರ, ಕೆ.ಜಿ. ಬೆಂತೂರ, ಸಿ.ಎಂ. ಕಾಳನ್ನವರ, ವೈ.ಬಿ. ಹಿರೇಮಠ, ಡಿ.ಎಂ. ಪಾಟೀಲ, ಎಂ.ಎಫ್. ಹೊಂಬಳ, ಶಿವು ಬಾಗಳಿ, ಶಿವಾನಂದ ಕುರಿ, ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.
 

`ಕುಡಿಯುವ ನೀರಿಗಾಗಿ…’ ಶೀರ್ಷಿಕೆಯ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಕಲ್ಕತ್ತಾದ ಶ್ಯಾಡೋ ಲೈನ್ಸ್ ಸಂಸ್ಥೆ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಕೊಪ್ಪಳದ ಛಾಯಾಗ್ರಾಹಕ ಪ್ರಕಾಶ ಕಂದಕೂರರ ಚಿತ್ರ ಪ್ರಶಸ್ತಿ ಗಳಿಸಿದೆ.
ಸ್ಪರ್ಧೆಯ ಛಾಯಾಪತ್ರಿಕೋದ್ಯಮ ವಿಭಾಗದಲ್ಲಿ ಕಂದಕೂರರ `ಕುಡಿಯುವ ನೀರಿಗಾಗಿ…'(ಫಾರ್ ಡ್ರಿಂಕಿಂಗ್ ವಾಟರ್) ಶೀರ್ಷಿಕೆಯ ಚಿತ್ರ ಅರ್ಹತೆಯ ಪ್ರಮಾಣ ಪತ್ರ ಪಡೆದುಕೊಂಡಿದೆ. ಬೇಸಿಗೆ ಸಂದರ್ಭದಲ್ಲಿ ಸಮೀಪದ ಹಳ್ಳದಲ್ಲಿ ಗುಂಡಿ (ವರ್ತಿ) ತೋಡಿ, ಅದರಲ್ಲಿ ನೀರು ಸಂಗ್ರಹಿಸುವ ಬಗೆಯನ್ನು ಕಟ್ಟಿಕೊಡುವ ಈ ಬಹುಮಾನಿತ ಚಿತ್ರವನ್ನು ಜಿಲ್ಲೆಯ ಕವಲೂರಿನಲ್ಲಿ ಸೆರೆಹಿಡಿಯಲಾಗಿತ್ತು. ನಮ್ಮ ಭಾಗದ ಜನ ಕುಡಿಯುವ ನೀರಿಗಾಗಿ ಎದುರಿಸುವ ಸಮಸ್ಯೆಯನ್ನು ಸಮರ್ಥವಾಗಿ ಬಿಂಬಿಸುವಂತಿದೆ ಈ ಚಿತ್ರ.

ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಕೆಂದುಘುಟು ಎಂಬ ಕುಗ್ರಾಮದ ಮಧುಕರಿ ಶಿಕ್ಷಾ ಪ್ರಾಂಗಣದಲ್ಲಿ ಶಿಕ್ಷಣ ಕಲಿಯುವ ಆದಿವಾಸಿ ಸಮುದಾಯದ ಬಾಲಕಿಯರಿಗೆ ಮೂಲ ಸೌಕರ್ಯ ಕಲ್ಪಿಸಲು ಸಹಾಯಧನ ಕ್ರೋಢಿಕಡಿರಿಸುವ ಉದ್ದೇಶದಿಂದ ಶ್ಯಾಡೋ ಲೈನ್ಸ್ ಸಂಸ್ಥೆ ಈ ಸ್ಪರ್ಧೆ ಆಯೋಜಿಸಿತ್ತು ಎಂಬುದು ವಿಶೇಷ.
ದೇಶದ ವಿವಿಧ ರಾಜ್ಯಗಳ 299 ಜನ ಛಾಯಾಗ್ರಾಹಕರ ಸುಮಾರು 6,463 ಛಾಯಾಚಿತ್ರಗಳು ಸ್ಪರ್ಧೆಗೆ ಆಗಮಿಸಿದ್ದವು. ಅಂತರಾಷ್ಟ್ರೀಯ ಛಾಯಾಗ್ರಾಹಕರಾದ ಶ್ಯಾಮಲ್ ಕುಮಾರ್ ರಾಯ್, ತಪಸ್ ಬಸು, ಅಪರೇಶ್ ಸರ್ಕಾರ್, ಪ್ರಭಿರ್ ದಾಸ್, ಸುದೀಪ್ ದಾಸ್, ಸುಜಯ್ ಸಾಹಾ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಮೂಲಭೂತ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಕಿನ್ನಾಳ ರಸ್ತೆಯ ರೈಲ್ವೆ ಕೆಳಸೇತುವೆ ಕಾಮಗಾರಿ ಕಳಪೆಯಾಗಿದ್ದು, ಸೇತುವೆ ಕಟ್ಟಡದಲ್ಲಿ ಬಸಿದ ಚರಂಡಿ ನೀರು ರಸ್ತೆಗೆ ಹರಿಯುತ್ತಿದೆ. ಅಶೋಕ ಸರ್ಕಲ್-ಭಾಗ್ಯನಗರ ಕ್ರಾಸ್ ರಸ್ತೆ ಯಮದರ್ಶನ ಮಾಡಿಸುವಷ್ಟು ಭಯಾನಕವಾಗಿದೆ. ಇವುಗಳನ್ನು ಸೇರಿದಂತೆ ವಿವಿಧ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಕಿನ್ನಾಳ ರಸ್ತೆಯ ನಾಗರಿಕ ಸಮಿತಿ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು, ಕಿನ್ನಾಳ ರಸ್ತೆಯ ರೈಲ್ವೆ ಕೆಳಸೇತುವೆಯಲ್ಲಿ ಸಂಚರಿಸುವುದೆಂದರೆ ಪ್ರಾಣ ಕೈಯಲ್ಲಿಕೊಂಡು ಓಡಾಡಿದ ಅನುಭವವಾಗುತ್ತಿದೆ. ಸೇತುವೆಯುದ್ದದ ರಸ್ತೆ ಸಂಜೆಯಾದರೆ ಸಾಕು, ಕಗ್ಗತ್ತಲಿನ ಗೂಡಾಗುತ್ತದೆ. ಅಲ್ಲಿರುವ ತಗ್ಗುಗುಂಡಿಗಳು ಹಳ್ಳ-ಕೊಳ್ಳಗಳನ್ನು‌ ನಾಚಿಸುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಕೂಡಲೇ ರೈಲ್ವೆ‌ ಕೆಳಸೇತುವೆಯಲ್ಲಿ ಹರಿಯುತ್ತಿರುವ ಚರಂಡಿ ನೀರನ್ನು ಬಂದ್ ಮಾಡಿಸಬೇಕು, ಉತ್ತಮ ರಸ್ತೆ‌ ನಿರ್ಮಿಸಬೇಕು, ಸೇತುವೆಯ ಎರಡೂ ಬದಿಗೆ ಹೈಮಾಸ್ಕ್ ದೀಪ ಅಳವಡಿಸಬೇಕು ಎಂದು ಆಗ್ರಹಿಸಿದರು.

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರಗತಿನಗರ, ಕಲ್ಯಾಣನಗರ ಮಾರ್ಗದ ಮೂಲಕ ಅಶೋಕ ಸರ್ಕಲ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಅಶೋಕ ಸರ್ಕಲ್‌ನಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಭಾಗ್ಯನಗರ ಪಟ್ಟಣ ಪಂಚಾಯಿತಿ ಸದಸ್ಯ ಮಂಜುನಾಥ ಸಾಲಿಮಠ, ನಗರಸಭೆ ಸದಸ್ಯ ಮಹಾಲಕ್ಷ್ಮಿ ಕಂದಾರಿ, ಡಾ.ವಿ.ಬಿ.ರಡ್ಡೇರ್, ಯೇಸು, ಶ್ರೀಶೈಲ ಬಡಿಗೇರ, ಯಮನೂರಸಾಬ ಭೈರಾಪುರ, ಯಶವಂತಕುಮಾರ ಮೇತ್ರಿ, ಶಂಕರಗೌಡ ಮಾಲೀಪಾಟೀಲ್, ವೆಂಕಪ್ಪ ಬಾರಕೇರ, ಅರವಿಂದಗೌಡ ಪೊಲೀಸ್, ಜಿ.ಬಿ.ಪಾಟೀಲ್, ರಂಗಪ್ಪ ಹುಲ್ಲೂರು, ರವಿ ಕರಡಿ, ಮೌನೇಶ್, ರಾಘವೇಂದ್ರ ದೇಶಪಾಂಡೆ ಮತ್ತಿತರರು ಇದ್ದರು.

ಕೊಪ್ಪಳ ಜಿಲ್ಲೆಯಲ್ಲಿ ಪವರ್; ಕೊರೋನಾ ತಿಳಿವಳಿಕೆ ನೀಡಿ, ಅಂಜನಾದ್ರಿ ಬೆಟ್ಟ ಏರಿದ ಪುನೀತ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಜಿಲ್ಲೆಯ ಗಂಗಾವತಿ, ಮಲ್ಲಾಪುರ ಸುತ್ತಮುತ್ತ ಹಾಗೂ ಹೊಸಪೇಟೆ ಅಕ್ಕ ಪಕ್ಕದ ಸ್ಥಳಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ.

ಗುರುವಾರ ಬೆಳಗ್ಗೆ ಚಿತ್ರೀಕರಣದಲ್ಲಿ ಪಾಲ್ಗೊಂಡ ಬಳಿಕ ಪೊಲೀಸ್ ಇಲಾಖೆಯ ಮನವಿ ಮೇರೆಗೆ ಪವರ್ ಸ್ಟಾರ್ ಪುನೀತ್ ಅವರು, ಕೊರೋನಾ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಪಾಲಿಸಬೇಕಾದ ನಿಯಮಗಳ ಕುರಿತು ತಿಳಿವಳಿಕೆ ನೀಡಿದರು. ನಂತರ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಅಂಜನಾದ್ರಿ ಬೆಟ್ಟ ಏರಿ ಆಂಜನೇಯನ ದರ್ಶನ ಪಡೆದರು.

ತಮ್ಮ‌ ಮೆಚ್ಚಿನ ನಟ ಅಪ್ಪು ಅವರನ್ನು ಕಣ್ತುಂಬಿಕೊಳ್ಳಲು ಮಲ್ಲಾಪುರ ಹಾಗೂ ಅಂಜನಾದ್ರಿ ಬೆಟ್ಟದ ಬಳಿ ಜನಸಾಗರವೇ ಸೇರಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ಯೋಜನಾ ನಿರ್ದೇಶಕರ ಮನೆ ಮೇಲೆ ಎಸಿಬಿ ರೈಡ್; 400 ಗ್ರಾಂ ಚಿನ್ನ, ನಗದು ವಶಕ್ಕೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ್ ಅವರ ಮನೆ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ನಗರದ ಮುಳಗುಂದ ರಸ್ತೆಯಲ್ಲಿರುವ ರುದ್ರೇಶ್ ಅವರು ವಾಸವಾಗಿರುವ ಸರ್ಕಾರಿ ಕ್ವಾಟರ್ಸ್, ಜಿಲ್ಲಾಡಳಿತ ಭವನದಲ್ಲಿರುವ ಕಚೇರಿ ಹಾಗೂ ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರು ಗ್ರಾಮದ ಮನೆ ಮೇಲೆಯೂ ಸಹ ದಾಳಿ ನಡೆಸಲಾಗಿದೆ.

ದಾಳಿ ವೇಳೆ 400 ಗ್ರಾಂ ಚಿನ್ನಾಭರಣ, ಒಂದೂವರೆ ಲಕ್ಷ ನಗದು ದೊರಕಿದ್ದು, ದಾಖಲೆಗಳ ಪರಿಶೀಲನೆ ಮುಂದುವರೆಸಲಾಗಿದೆ.

ಎಸಿಬಿ ಡಿವೈಎಸ್ಪಿ ವಾಸುದೇವರಾಮ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಸರಣಿ ಅಪಘಾತ, ನಾಲ್ವರಿಗೆ ಗಾಯ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಟ್ರಾಕ್ಟರ್ ಓವರ್‌ಟೆಕ್ ಮಾಡುವ ವೇಳೆ ಸಾರಿಗೆ ಬಸ್, ಕಾರ್ ಹಾಗೂ ಟ್ರಾಕ್ಟರ್ ನಡುವೆ ಸರಣಿ ಅಪಘಾತ ಆಗಿರುವ ಘಟನೆ ದಂಡಿನ ದುರ್ಗಮ್ಮ ದೇವಸ್ಥಾನದ ಬಳಿ ನಡೆದಿದೆ.
ರೋಣದಿಂದ ಗದಗದ ಕಡೆಗೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಚಾಲಕ, ನೀರಲಗಿಯಿಂದ ನಾಗಸಮುದ್ರ ಕಡೆಗೆ ಹೊರಟ್ಟಿದ್ದ ಟ್ರಾಕ್ಟರ್‌ನ್ನು ಓವರ್‌ಟೆಕ್ ಮಾಡುವ ವೇಳೆ ಈ ಘಟನೆ ನಡೆದಿದೆ.
ಈ ಸಮಯದಲ್ಲಿ ಗದಗದಿಂದ ರೋಣಕ್ಕೆ ಹೊರಟಿದ್ದ ಡಸ್ಟರ್ ಕಾರ್ ಹಾಗೂ ಟ್ರಾಕ್ಟರ್‌ಗೆ ಸಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಾರ್‌ನಲ್ಲಿದ್ದ 4 ಜನರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಟ್ರಾಫಿಕ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾರಟಗಿಯಲ್ಲಿ ವಿವಾಹಿತೆ ಹತ್ಯೆ: ಇಬ್ಬರು ಆರೋಪಿಗಳ ಸೆರೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಕಾರಟಗಿಯ ಚನ್ನಬಸವೇಶ್ವರ ನಗರದಲ್ಲಿ ಬೈಕ್ ಮೇಲೆ ತೆರಳುತ್ತಿದ್ದ ದಂಪತಿಯ ಮೇಲೆ ಹಲ್ಲೆ ಮಾಡಿ, ಮಹಿಳೆಯ ಹತ್ಯೆ ಹಾಗೂ ಆಕೆಯ ಪತಿ ಗಂಭೀರವಾಗಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿರುವ ಪೊಲೀಸರು ತಲೆ ಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅ. 17ರಂದು ಸಂಜೆ ಖಾಸಗಿ ಬ್ಯಾಂಕ್ ಗಳಲ್ಲಿ ಉದ್ಯೋಗಿಗಳಾಗಿರುವ ತ್ರಿವೇಣಿ (34) ಹಾಗೂ ಆಕೆಯ ಪತಿ ವಿನೋದ್ (31) ಬೈಕ್ ಮೇಲೆ ತೆರಳುತ್ತಿದ್ದಾಗ ಅಪರಿಚಿತರು ರಾಡ್‌ನಿಂದ ಹಲ್ಲೆ ಮಾಡಿದ್ದರು. ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದ ತ್ರಿವೇಣಿ ಸ್ಥಳದಲ್ಲೇ ಮೃತಪಟ್ಟರೆ, ವಿನೋದ್ ಗಂಭೀರ ಸ್ಥಿತಿಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬಳಿಕ ಗಂಗಾವತಿ ಡಿವೈಎಸ್ಪಿ ಆರ್.ಎಸ್. ಉಜ್ಜನಕೊಪ್ಪ ನೇತೃತ್ವದಲ್ಲಿ ತನಿಖೆ ನಡೆಸಿರುವ ಗಂಗಾವತಿ ಗ್ರಾಮೀಣ ವೃತ್ತದ ಸಿಪಿಐ ಉದಯರವಿ, ಕಾರಟಗಿ ಪಿಎಸ್‌ಐ ಅವಿನಾಶ್, ಕನಕಗಿರಿ ಪಿಎಸ್‌ಐ ಪ್ರಶಾಂತ್ ಹಾಗೂ ಸಿಬ್ಬಂದಿಯ ಎರಡು ತಂಡಗಳು ಆರೋಪಿಗಳಾದ ಮಧೋಳದ ಅವಿನಾಶ ಶಿವಾಜಿರಾವ್ ಚಂದನಶಿವ ಹಾಗೂ ಯುವರಾಜ ಸದಾಶಿವ ನಿಂಬಾಳ್ಕರ್ ಎಂಬವರನ್ನು ಬಂಧಿಸಿದ್ದಾರೆ.
ವಯಸ್ಸಿನಲ್ಲಿ ಕಿರಿಯರಾದ, ಅನ್ಯಜಾತಿಯ ಯುವಕ ವಿನೋದ್ ಅವರನ್ನು ತ್ರಿವೇಣಿ ಪ್ರೀತಿಸಿ ಮದುವೆಯಾಗಿದ್ದು, ಇದಕ್ಕೆ ಮನೆಯಲ್ಲಿ ವಿರೋಧವಿತ್ತು. ಆಕೆಯ ಸಹೋದರನೇ ಇತರರೊಂದಿಗೆ ಸೇರಿ ಕೊಲೆಗೆ ಸಂಚು ರೂಪಿಸಿದ್ದ, ಒಂದೆರಡು ಪ್ರಯತ್ನಗಳು ವಿಫಲವಾದ ಬಳಿಕ ಅ. 17ರಂದು ಮತ್ತೊಮ್ಮೆ ದಾಳಿ ಮಾಡಿದ ತಂಡ ತ್ರಿವೇಣಿ ಅವರನ್ನು ಹತ್ಯೆ ಮಾಡಿದ್ದು, ವಿನೋದ್ ಅವರನ್ನು ಗಂಭೀರವಾಗಿ ಗಾಯಗೊಳಿಸಿ, ಪರಾರಿಯಾಗಿತ್ತು. ಈ ಪ್ರಕರಣ ಮರ್ಯಾದಾ ಹತ್ಯೆ ಎಂಬ ಶಂಕೆ ಪೊಲೀಸರಿಂದಲೂ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿಯೂ ತನಿಖೆ ನಡೆಯುತ್ತಿದೆ.
ತನಿಖಾ ತಂಡದಲ್ಲಿ ಕಾರಟಗಿ ಠಾಣೆಯ ಸಿಬ್ಬಂದಿ ಭೀಮಣ್ಣ, ಮಾರುತಿ, ಅಮರಪ್ಪ, ಮಂಜು ಸಿಂಗ್, ಶರಣಪ್ಪ, ಶಿವರಾಜ, ಪ್ರಸನ್ನಕುಮಾರ, ಬಸವರಾಜ, ನಾಗರಾಜ, ಕನಕಗಿರಿ ಠಾಣೆ ಸಿಬ್ಬಂದಿ ಶೇಖರ್, ಕೊಟ್ರೇಶ್, ಬೈಲಪ್ಪ, ಅರ್ಜುನ್ ಅವರಿದ್ದು, ಕೊಪ್ಪಳ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ, ಪ್ರಶಂಸಾ ಪತ್ರ ನೀಡಿದ್ದಾರೆ.

ಮೈಕ್ರೋ ವೀಕ್ಷಕರ ಪ್ರಾತ್ಯಕ್ಷಿಕೆ ತರಬೇತಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಪಶ್ಚಿಮ ಪದವೀಧರ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯ ಪ್ರಜ್ಞೆ ಮರೆಯದೆ, ಚುನಾವಣಾ ಆಯೋಗದ ಪ್ರತಿನಿಧಿಯಾಗಿ ಕೆಲಸ ಮಾಡಬೇಕು. ಚುನಾವಣಾ ಕಾರ್ಯಗಳಲ್ಲಿ ಅನನುಕೂಲ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆಯ ವೀಕ್ಷಕಿ ಡಾ. ಶಾಲಿನಿ ರಜನೀಶ್ ಸೂಚಿಸಿದರು.
ಜಿಲ್ಲಾಡಳಿತ ಭವನದ ಜಿ.ಪಂ. ಸಭಾಂಗಣದಲ್ಲಿ ನಡೆದ ಮೈಕ್ರೋ ವೀಕ್ಷಕರ ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪಶ್ಚಿಮ ಪದವೀಧರ ಚುನಾವಣೆಯ ಅಂತ್ಯದವರೆಗೆ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘನೆ ಆಗದಂತೆ ನಿಗಾವಹಿಸಬೇಕು. ಎಂಸಿಸಿ ಉಲ್ಲಂಘನೆಯಾದಲ್ಲಿ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಲಾಗುವುದು. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದರು.
ಚುನಾವಣೆ ಕಾರ್ಯದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಎದುರಾದಲ್ಲಿ ತಕ್ಷಣ ಸಂಬಂಧಿಸಿದ ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿಗಳನ್ನು ಸಂಪರ್ಕಿಸಿ ತ್ವರಿತವಾಗಿ ಪರಿಹಾರ ಕಂಡುಕೊಳ್ಳಬೇಕು. ಚುನಾವಣಾ ಕಾರ್ಯದ ಪ್ರತಿ ಹಂತದ ಪ್ರಚಲಿತ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ವಾಟ್ಸಾಪ್ ಗ್ರೂಪ್ ಮಾಡುವ ಮೂಲಕ ವಿನಿಮಯ ಮಾಡಿಕೊಳ್ಳಬೇಕು. ಚುನಾವಣಾ ಆಯೋಗ ಕಾಲಕಾಲಕ್ಕೆ ನೀಡುವ ನಿರ್ದೇಶನಗಳಂತೆ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಮುಂಜಾಗ್ರತೆ ಇರಲಿ: ಕೊರೊನಾ ಸಂದರ್ಭದಲ್ಲಿ ನಡೆಯುತ್ತಿರುವ ಪ್ರಥಮ ಚುನಾವಣೆ ಇದಾಗಿದ್ದು, ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಕೋವಿಡ್ ಬಗ್ಗೆ ಭಯಪಡದೆ ಜಾಗೃತವಾಗಿರಬೇಕು. ಮತದಾನದ ಸಂದರ್ಭದಲ್ಲಿ ಮತಗಟ್ಟೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಚುನಾವಣಾ ಸಿಬ್ಬಂದಿ, ಮತದಾರರು ಸಹಿತ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮತದಾನಕ್ಕೂ ಮುನ್ನ ಮತಗಟ್ಟೆಗಳನ್ನು ಸ್ಯಾನಿಟೈಜೇಶನ್ ಮಾಡಬೇಕು., ಮತದಾನದ ಕೊನೆಯ ಘಳಿಗೆಯಲ್ಲಿ ಮುಂಜಾಗ್ರತಾ ಕ್ರಮಗಳೊಂದಿಗೆ ಕೋವಿಡ್ ಸೋಂಕಿತ ಮತ್ತು ಶಂಕಿತ ಪದವೀಧರರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಿ ಕೊಡಬೇಕು. ಮತಗಟ್ಟೆಗಳಲ್ಲಿ ಪ್ರತಿಯೊಬ್ಬರೂ ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ನಿರ್ದೇಶಿಸಿದರು.
ಮತಗಟ್ಟೆಯಲ್ಲಿ ಶಾಂತಿಯುತ ಹಾಗೂ ನಿಷ್ಪಕ್ಷಪಾತ ಮತದಾನ ನಡೆಯುವಂತೆ ನೋಡಿಕೊಳ್ಳಬೇಕು. ಮತಗಟ್ಟೆಗಳಲ್ಲಿ ಜನಸಂದಣಿ ಆಗದಂತೆ ಕ್ರಮ ಕೈಗೊಳ್ಳಬೇಕು. ಮತದಾನ ಕೇಂದ್ರಗಳಲ್ಲಿ ವ್ಯಕ್ತಿಗತ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೊರೊನಾ ನಿಯಂತ್ರಿಸುವುದರ ಜೊತೆಗೆ ಚುನಾವಣೆಯನ್ನು ಯಶಸ್ವಿಗೊಳಿಸಬೇಕು ಎಂದು ಡಾ. ಶಾಲಿನಿ ರಜನೀಶ್ ಸೂಚಿಸಿದರು.
ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು, ಜಿ.ಪಂ. ಸಿಇಒ ಡಾ. ಆನಂದ ಕೆ., ಎಸ್ಪಿ ಯತೀಶ್ ಎನ್., ಅಪರ ಜಿಲ್ಲಾಧಿಕಾರಿ ಸತೀಶ್‌ಕುಮಾರ ಎಂ., ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಚುನಾವಣಾಧಿಕಾರಿಗಳು ಹಾಗೂ ಸಿಬ್ಬಂದಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮೀಸಲಾತಿ ಪಡೆಯುವವರೆಗೆ ವಿರಮಿಸೆವು

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಶೇ. 3 ಜನರಿಗೆ ಕೇಳದೆ ಶೇ. 10 ನಿಗದಿ ಮಾಡಿರುವ ಮನುವಾದಿಗಳು ಶೇ. 8.5 ರಷ್ಟಿರುವ ಪರಿಶಿಷ್ಟ ಪಂಗಡಕ್ಕೆ ಮೀಸಲು ನೀಡಲು ಮೀನಾಮೇಷ ಎಣಿಸುತ್ತಿವೆ, ಮೀಸಲಾತಿ ಪಡೆಯುವವರೆಗೆ ವಿರಮಿಸುವದಿಲ್ಲ ಎಂದು ಸಮಾಜದ ಜಿಲ್ಲಾಧ್ಯಕ್ಷ ಟಿ. ರತ್ನಾಕರ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಮುಂದುಗಡೆ ಕೊಪ್ಪಳ ಜಿಲ್ಲಾ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಹಮ್ಮಿಕೊಂಡಿರುವ ಹತ್ತು ದಿನಗಳ ಪ್ರತಿಭಟನಾ ಧರಣಿ ಉದ್ದೇಶಿಸಿ ಮಾತನಾಡಿದರು.
ಮಾತು ಉಳಿಸಿಕೊಳ್ಳಿ: ಸಮಾಜಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೆ. 7.5 ಮೀಸಲು ನಿಗದಿಗೆ ಕೊಟ್ಟ ಗಡುವು, ಅವಧಿ ಮುಗಿದಿದ್ದು ಸರಕಾರ ಶೀಘ್ರ ಕ್ಯಾಬಿನೆಟ್ ಅನುಮೋದನೆ ಪಡೆಯಬೇಕು. ಇಲ್ಲವಾದಲ್ಲಿ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಇನ್ನಷ್ಟು ತೀವ್ರ ಸ್ವರೂಪದ ಹೋರಾಟ ಮಾಡಲು ನಿರ್ಧರಿಸಲಾಯಿತು. ಫೆಬ್ರವರಿಯಲ್ಲಿ ನಡೆದ ವಾಲ್ಮೀಕಿ ಜಾತ್ರೆಯಲ್ಲಿ ವರದಿ ಬಂದ ತಕ್ಷಣ ಮೀಸಲಾತಿ ನೀಡುವ ಭರವಸೆ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಮಾತು ಉಳಿಸಿಕೊಳ್ಳಬೇಕು ಎಂದು ಹೇಳಿದರು.
ಅ. 30ರ ವರೆಗೆ ಧರಣಿ: ರಾಜ್ಯ ಕಾರ್ಯದರ್ಶಿ ಸುರೇಶ ಡೊಣ್ಣಿ ಮಾತನಾಡಿ, ಸಮಾಜದ ನಾಲ್ಕು ದಶಕದ ಹೋರಾಟಕ್ಕೆ ಬೆಲೆ ಕೊಡಬೇಕು. ಇಲ್ಲವಾದಲ್ಲಿ ಬೇಡರು ಬಯಲಿಗೆ ಬರುತ್ತಾರೆ. ತಮ್ಮನ್ನು ಹಗುರವಾಗಿ ಪರಿಗಣಿಸಬಾರದು ಎಂದರು. ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ. ಅ. 30 ರವರೆಗೆ ಧರಣಿ ನಡೆಸಲಾಗುವುದು ಎಂದರು.
ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಕರ್ನಾಟಕ ಸರಕಾರ ಪರಿಶಿಷ್ಟ ಪಂಗಡಕ್ಕೆ ಕೊಡಬೇಕಿರುವ ಶೇ. 7.5 ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿಯನ್ನು ಈ ಕೂಡಲೇ ಜಾರಿಗೆ ತರಬೇಕು. ತಮ್ಮ ಸರಕಾರ ಹಲವು ಬಾರಿ ಭರವಸೆ ನೀಡಿದ್ದು, ಜ. ನಾಗಮೋಹನ್ ದಾಸ್ ವರದಿ ಬಂದು ನಾಲ್ಕು ತಿಂಗಳು ಕಳೆದಿವೆ. ಅನುಷ್ಠಾನಕ್ಕೆ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಈ ನಾಲ್ಕು ದಶಕಗಳಲ್ಲಿ ಹಲವು ಜಾತಿಯ ಜನರು ಪರಿಶಿಷ್ಟ ಪಂಗಡದ ಪರಿಮಿತಿಯಲ್ಲಿ ಬಂದು ಸೇರಿದ್ದಾರೆ. ವಾಸ್ತವ ಅಂಕಿ ಅಂಶಗಳ ಪ್ರಕಾರ ಪರಿಶಿಷ್ಟ ಪಂಗಡದ ಜನಸಂಖ್ಯೆ ಶೇ. 8.5 ಆಗುತ್ತದೆ. ಹೀಗಿರುವಾಗ ಸಂವಿಧಾನಬದ್ಧ ಮೀಸಲು ನೀಡಲು ಮೀನಾಮೇಷ ಎಣಿಸುತ್ತಿರುವದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಕೊಪ್ಪಳ ಜಿಲ್ಲಾ ಧರ್ಮದರ್ಶಿ ರಾಮಣ್ಣ ಕಲ್ಲನವರ, ಜಿಲ್ಲಾ ಕಾರ್ಯದರ್ಶಿ ಶಿವಮೂರ್ತಿ ಗುತ್ತೂರ್, ಮಾರ್ಕಂಡಪ್ಪ ಕಲ್ಲನವರ, ಹನುಮಂತಪ್ಪ ಗುದಗಿ, ಬಸವರಾಜ ಶಹಪೂರ, ಮುದಿಯಪ್ಪ ತಿಗರಿ, ನಾಗರಾಜ ಕಿಡದಾಳ, ಗವಿಸಿದ್ದಪ್ಪ ಶಹಪೂರ, ರಮೇಶ ಪಾಟೀಲ್, ವಿರುಪಾಕ್ಷಗೌಡ್ರು, ರಾಮಣ್ಣ, ಸಿದ್ದಪ್ಪ, ಶೇಖರ ಇಂದರಗಿ ಇದ್ದರು.

error: Content is protected !!