ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ನರೇಗಲ್ಲ
ಸಮೀಪದ ಹೊಸಳ್ಳಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಪರ ಪ್ರಚಾರ ನಡೆಸಲಾಯಿತು.
ಈ ವೇಳೆ ರೋಣ ಮಂಡಲ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಮಲ್ಲು ಮಾದರ ಮಾತನಾಡಿ, ಪದವೀಧರ ಹಾಗೂ ಶಿಕ್ಷಕರ ಪರವಾಗಿ ಸದನದಲ್ಲಿ ಸಾಕಷ್ಟು ಯೋಜನೆಗಳ ಬಗ್ಗೆ ನಿರಂತರ ಹೋರಾಟ ಮಾಡುತ್ತಿರುವ ಏಕೈಕ ಜನಪ್ರತಿನಿಧಿಯಾಗಿ ಎಸ್.ವಿ. ಸಂಕನೂರ ಉತ್ತಮ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ. ಆದ್ದರಿಂದ ಪ್ರಸಕ್ತ ಚುನಾವಣೆಯಲ್ಲಿ ಪದವೀಧರರು ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಿ, ಸೇವೆಗೆ ಮತ್ತೊಮ್ಮೆ ಅವಕಾಶ ಕಲ್ಪಿಸಬೇಕು ಎಂದರು.
ಅಮರೇಶ ಜಾಲಿಹಾಳ, ಅಬ್ದುಲ್‌ಸಾಹೇಬ ಹೊಸಳ್ಳಿ, ಪರಶುರಾಮ ಮಾದರ, ಶರಣಪ್ಪ ಕುಂದಗೋಳ, ಮಂಜುನಾಥ ದಳವಾಯಿ, ಬಸವರಾಜ ಹುಡೇದ, ಫಕೀರಪ್ಪ ಮಾದರ, ಯಮನಪ್ಪ ಮಾದರ, ಪ್ರಸನ ಸ್ಥಾವರಮಠ, ನೀಲಪ್ಪ ಮಾದರ, ರಾಮಣ್ಣ ಮಾದರ, ಶಿವಾನಂದ ಮರಗಣ್ಣವರ, ಬಸವರಾಜ ಮಾರನಬಸರಿ ಸೇರಿದಂತೆ ಬಿಜೆಪಿ ಕಾರ್ಯಕರ್ತರಿದ್ದರು.
ಪ್ರಥಮ ಪ್ರಾಶಸ್ತ್ಯದ ಮತ ನೀಡಲು ಮನವಿ
ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ, ಪರಿಸರ ಜಾಗೃತಿ ಪತ್ರ ಬಿಡುಗಡೆ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಹುಬ್ಬಳ್ಳಿ
ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿದ ಪ್ರಥಮ ಮಹಿಳೆ ವೀರರಾಣಿ ಕಿತ್ತೂರ ಚೆನ್ನಮ್ಮ ಅವರ ೧೯೭ನೇ ವಿಜಯೋತ್ಸವದ ಶುಭ ಸಂದರ್ಭದಲ್ಲಿ ನಗರದ ರಾಣಿ ಚೆನ್ನಮ್ಮಾಜಿ ಪ್ರತಿಮೆಗೆ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಮಾಲಾರ್ಪಣೆ ಮಾಡಿ ಗೌರವ ಸೂಚಿಸಲಾಯಿತು ಹಾಗೂ ಪರಿಸರ ಜಾಗೃತಿ ಕರಪತ್ರ ಬಿಡುಗಡೆಗೊಳಿಸಲಾಯಿತು.
ವಾಕರಸಾ ನಿಗಮದ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ರೈತ ಮುಖಂಡ ವಿಕಾಸ ಸೊಪ್ಪಿನ, ವೀರಣ್ಣ ಕಲ್ಲೂರ, ಪಾಲಿಕೆ ಮಾಜಿ ಸದಸ್ಯ ರಾಜಣ್ಣ ಕೊರವಿ, ಮಾತನಾಡಿದರು. ಸಾಹಿತಿ ಪ್ರೊ ಎಸ್.ವಿ. ಪಟ್ಟಣಶೆಟ್ಟಿ, ಅಧ್ಯಕ್ಷತೆ ವಹಿಸಿದ್ದರು. ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‍್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಗ್ರಂಥಪಾಲಕ ಸುರೇಶ ಡಿ. ಹೊರಕೇರಿ ಸ್ವಾಗತಿಸಿ, ನಿರೂಪಿಸಿದರು. ಗೀತಾ ಮುಳ್ಳೊಳ್ಳಿ ವಂದಿಸಿದರು.
ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಎಸ್.ಐ. ನೇಕಾರ, ಆನಂದ ಘಟಪನದಿ, ಮೃತ್ಯುಂಜಯ ಮಟ್ಟಿ, ಡಾ. ಬಸವಕುಮಾರ ತಲವಾಯಿ, ಸದಾಶಿವಚೌಶೆಟ್ಟಿ, ರತ್ನಾಚೌಶೆಟ್ಟಿ, ಸಿ.ಜಿ.ಧಾರವಾಡ ಶೆಟ್ಟರ ಮುಂತಾದವರು ಇದ್ದರು.
ಕುಬೇರಪ್ಪ ಪರ ಕುಸುಮಾವತಿ ಶಿವಳ್ಳಿ ಪ್ರಚಾರ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಕುಂದಗೋಳ
ತಾಲೂಕಿನ ಕಳಸ ಗ್ರಾಮದಲ್ಲಿ ಪಶ್ಚಿಮ ಪದವೀಧರರ ಕ್ಷೇತ್ರದ ಅಭ್ಯರ್ಥಿ ಡಾ.ಆರ್.ಎಂ. ಕುಬೇರಪ್ಪ ಅವರ ಪರವಾಗಿ ಕುಂದಗೋಳ ಮತಕ್ಷೇತ್ರದ ಶಾಸಕಿ ಕುಸುಮಾವತಿ ಸಿ ಶಿವಳ್ಳಿ ಮತಯಾಚನೆಯನ್ನು ಕೈಗೊಂಡರು.
ನಂತರ ಮಾತನಾಡಿದ ಅವರು ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿ ಇವರಾಗಿದ್ದು ಇವರಿಗೆ ಪ್ರಥಮ ಪ್ರಾಶಸ್ತದ ಮತ ನೀಡಿ ಗೆಲ್ಲಿಸಿರಿ ಎಂದು ವಿನಂತಿಸಿದರು.
ಈ ವೇಳೆ ಗ್ರಾಮದ ಮುಖಂಡರಾದ ರಾಮನಗೌಡ ಪಾಟೀಲ, ವಿಜಯಕುಮಾರ ಹಾಲಿ, ಇರ್ಷಾದ್ ಹುಲಗುರ, ಬಾಬಾಜಾನ ಖಾತಾಲಸಾಬನವರ, ಹಜರೆಸಾಬ ಬಾವಿಕಟ್ಟಿ, ಯಲ್ಲಪ್ಪ ಹೊಸಮನಿ, ಮೌಲಾಲಿ ಲಾಠಿ, ಮೌಲಾಸಾಬ ಗುಡಾರದ, ಇಸ್ಮಾಯಿಲ್ ಮೊಮಿನ್, ಅಖಂಡಪ್ಪ ಕೆಂಡದ, ಸದ್ದಾಮ ರಾಯಚೂರ ಸೇರಿದಂತೆ ಅನೇಕ ಹಿರಿಯರು ಹಾಗೂ ಪದವೀಧರರು ಉಪಸ್ಥಿತರಿದ್ದರು.
ಮಳೆಯಿಂದ ಕುಸಿದ ಮನೆ, ಪರಿಹಾರಕ್ಕೆ ಆಗ್ರಹ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಮುಂಡರಗಿ
ಪಟ್ಟನದಲ್ಲಿ ಅತಿಯಾಗಿ ಮಳೆ ಆಗಿರುವುದರಿಂದ ಮಣ್ಣಿನ ಮನೆಗಳು ನೀರಿಗೆ ನೆನೆದು ಕುಸಿದು ಬಿದ್ದು ಅಪಾರ ಹಾನಿ ಉಂಟಾಗಿದೆ.
ಇಲ್ಲಿಯ ಭಜಂತ್ರಿ ಓಣಿಯ ರಾಜಾಭಕ್ಷಿ ಅಚ್ಚಳ್ಳಿ ಅವರ ಮನೆ ಮಾಳಿಗೆ ನೆನೆದು ಕುಸಿದು ಬಿದ್ದಿದೆ. ಸ್ವಲ್ಪದರಲ್ಲಿಯೇ ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮುಂಡರಗಿ ಪಟ್ಟಣದ ವಿವಿಧ ವಾರ್ಡುಗಳಲ್ಲಿ ಸಾಕಷ್ಟು ಮನೆಗಳು ಕುಸಿದು ಬಿದ್ದಿವೆ. ಕುಟುಂಬಗಳು ಬೀದಿ ಪಾಲಾಗಿವೆ. ಮನೆಗಳು ಬಿದ್ದು, ಅಪಾರ ಪ್ರಮಾಣದಲ್ಲಿ ದವಸ ಧಾನ್ಯ ಬಟ್ಟೆಗಳು ಹಾಳಾಗಿದೆ. ಊಟಕ್ಕೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.
ತಾಲೂಕು ಆಡಳಿತ ಹಾಗೂ ಪುರಸಭೆಯವರು ಬಿದ್ದ ಮನೆ ಹಾಗೂ ಹಾನಿ ಆದ ಮನೆಗಳ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕೆಂದು ಪುರಸಭೆ ಸದಸ್ಯ ಶಿವಪ್ಪ ಚಿಕ್ಕಣವರ, ರಾಜಾಭಕ್ಷಿ ಬೆಟಗೇರಿ, ಸಂತೋಷ ಹಿರೇಮನಿ, ಶಿರಾಜ ಬೆಟಗೇರಿ, ನಾಗರಾಜ ಹೊಂಬಳಗಟ್ಟಿ, ಪರಶುರಾಮ ಸುಣಗಾರ ಮೊದಲಾದವರು ಆಗ್ರಹಿಸಿದ್ದಾರೆ.
ಮಕ್ಕಳನ್ನು ತಿದ್ದಬೇಕಾದ ಪ್ರಿನ್ಸಿಪಾಲ್ ಬಣ್ಣ ಬಯಲು!
ಬಿಯಸ್ಕೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಮಕ್ಕಳು ತಪ್ಪು ಮಾಡಿದರೆ ತಿದ್ದಿ-ಬುದ್ಧಿ ಹೇಳಬೇಕಾದ ಪ್ರಾಧ್ಯಾಪಕರೇ ದಾರಿ ತಪ್ಪಿದರೆ..? ಈ ಪ್ರಶ್ನೆಯೊಂದೇ ಸಾಕು ಪಾಲಕರ ಭಯಕ್ಕೆ.. ಇಂಥ ವಾತಾವರಣ ಕೊಪ್ಪಳದ ಮಹಿಳಾ ಪದವಿ ಕಾಲೇಜಿನಲ್ಲಿ ತಲೆದೋರಿದೆ. ಬುಧವಾರ ಕಾಲೇಜಿನ ಪ್ರಿನ್ಸಿಪಾಲ್ ಡಾ.ಗಣಪತಿ ಲಮಾಣಿಯವರನ್ನು ಸ್ಥಳೀಯರು ಹಿಗ್ಗಾ ಮುಗ್ಗಾ ತರಾಟೆಗೊಳಪಡಿಸಿದ ಘಟನೆ ಬಹಿರಂಗಗೊಂಡಿದೆ. ಆದರೆ ತಮ್ಮ ಮೇಲಿರುವ ಎಲ್ಲ ಆರೋಪಗಳು ಶುದ್ಧ ಸುಳ್ಳು, ನಿರಾಧಾರ ಎಂದು ಲಮಾಣಿಯವರು ಪ್ರತಿಕ್ರಿಯೆ ನೀಡಿದ್ದಾರೆ.
ಏನಿದು ಗಲಾಟೆ?: ಕೊಪ್ಪಳದ ಮಹಿಳಾ ಪದವಿ ಕಾಲೇಜು ಅಭಿವೃದ್ಧಿಗಾಗಿ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಸರಕಾರ ಅನುದಾನ ಬಿಡುಗಡೆಗೊಳಿಸಿದೆ. ಅನುದಾನದ ವಿಷಯವಾಗಿ ಆಗದ ಹೊಂದಾಣಿಕೆ ಪ್ರಿನ್ಸಿಪಾಲ್ ಡಾ.ಗಣಪತಿ ಕೆ. ಲಮಾಣಿ ಮಾನ ಹರಾಜು ಆಗುವಂತೆ ಮಾಡಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಗಂಭೀರ ಆರೋಪ?
ಪ್ರಿನ್ಸಿಪಾಲ್ ಡಾ.ಗಣಪತಿ ಕೆ.ಲಮಾಣಿ ಹೊಂದಿದ್ದರು ಎನ್ನಲಾಗುತ್ತಿರುವ ಅನೈತಿಕ ಸಂಬಂಧ ಕಾಲೇಜಿನಲ್ಲೆಲ್ಲ ಪುಕಾರಾಗಿ ಜಿಲ್ಲಾಡಳಿತದ ಕಿವಿಗೂ ಬಿದ್ದಿದೆ ಎನ್ನಲಾಗಿದೆ. ಗ್ರೂಪ್-ಡಿ ನೌಕರರೊಬ್ಬಳ ಜೊತೆ ಪ್ರಿನ್ಸಿಪಾಲ್ ಕದ್ದು ಮುಚ್ಚಿ ಆಟ ಆಡುತ್ತಿದ್ದರು ಎಂಬ ಬಲವಾದ ಆರೋಪ ಕೇಳಿ ಬಂದಿದೆ.

ಡಾ.ಗಣಪತಿ ಲಮಾಣಿ ಅವರಿಗಿಂತ ಮುಂಚೆ ಈ ಕಾಲೇಜಿನ ಪ್ರಾಚಾರ್ಯನಾಗಿದ್ದೆ. ಲೆಕ್ಕ ಪರಿಶೋಧನೆ ಆಹ್ವಾನ ಇದ್ದುದರಿಂದ ಬಂದಿದ್ದೆ. ಬಂದ ಮೇಲೆ ಗೊತ್ತಾಯ್ತು, ಇಲ್ಲಿನ ಆಡಳಿತ ಸರಿ ಇಲ್ಲ. ಯಾರು ಏನೇ ಮಾಹಿತಿ ಕೇಳಿದರೂ ಕೊಡಲ್ಲ. ಸಾಕಷ್ಟು ಗೋಲ್‌ಮಾಲ್ ಮಾಡಲಾಗಿದೆ ಎಂಬುದು. ಜಂಟೀ ನಿರ್ದೇಶಕರು ಈ ಪ್ರಕರಣದ ತನಿಖೆ ನಡೆಸಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ.
-ಡಾ.ಗವಿಸಿದ್ದಪ್ಪ ಮುತ್ತಾಳ, ಪ್ರಾಚಾರ್ಯರು, ಸರಕಾರಿ ಪ್ರಥಮ ದರ್ಜೆ ಕಾಲೇಜು ಅಳವಂಡಿ.
ಜೊತೆಗೆ ಮಹಿಳಾ ಪ್ರಯಾಣಿಕರೊಬ್ಬರು ಬಸ್ ಇಳಿದ ತಕ್ಷಣ ನಿಸರ್ಗದ ಕರೆಗೆ ಸೂಕ್ತ ಸ್ಥಳ ಸಿಗದ ಕಾರಣ ಕಾಲೇಜಿನ ಆವರಣದ ಮೂಲೆಯಲ್ಲಿ ಮೂತ್ರ ವಿಸರ್ಜಿಸುತ್ತಿರುವ ಫೋಟೋವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು, ಅವರನ್ನು ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂಬ ಗಂಭೀರ ಆರೋಪವೂ ಪ್ರಿನ್ಸಿಪಾಲ್ ಡಾ.ಗಣಪತಿ ಲಮಾಣಿ ಅವರ ಮೇಲಿದೆ.
ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ. ನಾನು ಯಾವ ತಪ್ಪನ್ನು ಮಾಡಿಲ್ಲ. ಪ್ರಾಮಾಣಿಕವಾಗಿ, ದಕ್ಷತೆಯಿಂದ ಕಾಲೇಜಿನಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಇಲಾಖೆಯ ಉನ್ನತಾಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಲಿ. ಕ್ರಮ ಎದುರಿಸಲು ಸಿದ್ಧ.
-ಡಾ.ಗಣಪತಿ.ಕೆ.ಲಮಾಣಿ, ಪ್ರಾಚಾರ್ಯರು, ಮಹಿಳಾ ಪದವಿ ಕಾಲೇಜು, ಕೊಪ್ಪಳ.
ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಅತಿಥಿ ಉಪನ್ಯಾಸಕರ ಸಂಬಳವನ್ನು ನಾನಾ ಸುಳ್ಳು ಕಾರಣ ಹೇಳಿ, ಬೆದರಿಸಿ ಲಪಟಾಯಿಸಿದ್ದಾರೆ. ಸರಕಾರದ ಅನುದಾನವನ್ನು ದುರ್ಬಳಕೆ ಮಾಡಿದ್ದಾರೆ ಎನ್ನಲಾಗಿದೆ.
ಈ ಎಲ್ಲ ಪ್ರಶ್ನೆಗಳನ್ನು ಮುಂದಿಟ್ಟು ಉತ್ತರ ಕೇಳಿದಾಗ ತಡಬಡಾಯಿಸಿದ ಡಾ.ಗಣಪತಿ ಲಮಾಣಿ ಎಲ್ಲದಕ್ಕೂ ನಂದೇನು ತಪ್ಪಿಲ್ಲ ಎಂದಷ್ಟೇ ಉತ್ತರಿಸಿದರು. ಅವರ ವಿರುದ್ಧ ಏಕವಚನ, ಕೆಲ ಅಸಂವಿಧಾನಿಕ ಪದಗಳ ಬಳಕೆಯಾದರೂ ಸುಮ್ಮನೇ ಕೂತಿದ್ದರು. ಸುಮಾರು ಹೊತ್ತಿನ ಬಂತರ ವಾಗ್ವಾದ ಮಾಡಿದವರಿಗೆ ಕ್ಷಮೆಯಾಚಿಸಿದ ವಿಡಿಯೋ ಗಮನಿಸಿದರೆ ಹಲವು ಅನುಮಾನಗಳು ಹುಟ್ಟಿಕೊಳ್ಳುವುದಂತು ಸತ್ಯ.
ಮಾಂಸಾಹಾರಿ ಹೋಟೆಲ್ ಗಳಲ್ಲಿ ಮದ್ಯದ ಅಮಲು
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗದಗ: ಗದಗ ಬೆಟಗೇರಿ ಅವಳಿ ನಗರದ ಮಾಂಸಾಹಾರಿ ಹೋಟೆಲ್ ಗಳಲ್ಲಿ ಮದ್ಯದ ಅಮಲು ಮತ್ತೆ ಶುರುವಾಗಿದೆ. ಕೆಲ ತಿಂಗಳ ಹಿಂದಷ್ಟೆ ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ ನಂತರ ಸ್ಥಗಿತಗೊಂಡಿದ್ದ ಮದ್ಯ ಮಾರಾಟ ಈಗ ಮತ್ತೆ ಆರಂಭವಾಗಿದೆ.
ಅವಳಿ ನಗರದ ಬಹುತೇಕ ಮಾಂಸಾಹಾರಿ ಹೋಟೆಲ್ ಗಳಲ್ಲಿ ಮದ್ಯ ಮಾರಾಟವಾಗುತ್ತಿದೆ. ಬಾರ್ ಮತ್ತು ರೆಸ್ಟೋರೆಂಟ್ ಗಳನ್ನು ಮೀರಿಸುವ ರೀತಿಯಲ್ಲಿ ಮಾಂಸಾಹಾರಿ ಹೋಟೆಲ್ ಗಳಲ್ಲ ಮದ್ಯದ ವಹಿವಾಟು ನಡೆಯುತ್ತಿದೆ. ಸಣ್ಣ ಸಣ್ಣ ಹೋಟೆಲ್ ಗಳಲ್ಲೂ ದೊಡ್ಡ ದೊಡ್ಡ ಬ್ರ್ಯಾಂಡ್ ನ ಮದ್ಯ ನಿರಾಂತಕವಾಗಿ ದೊರೆಯುತ್ತಿದೆ.
ಅಬಕಾರಿ ಇಲಾಖೆ ಮೌನ
ಆಗಸ್ಟ್ ತಿಂಗಳಲ್ಲಿ ಕೆಲ ಅಂಗಡಿಗಳ ಮೇಲೆ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು, ಈಗ ಮೌನಕ್ಕೆ ಶರಣಾಗಿದ್ದಾರೆ. ಆಗಸ್ಟ್ ನಂತರ ಒಂದೇ ಒಂದು ಅಂಗಡಿ ಮೇಲೆ ಅಧಿಕಾರಿಗಳು ದಾಳಿ ನಡೆಸಿದ ಉದಾಹರಣೆಗಳಿಲ್ಲ. ಗದಗ ಬೆಟಗೇರಿ ಅವಳಿ ನಗರ ಮಾತ್ರವಲ್ಲ ಜಿಲ್ಲೆಯ ಗ್ರಾಮೀಣ ಭಾಗದಲ್ಲೂ ಇದೇ ಪರಿಸ್ಥಿತಿ ಇದೆ. ಆದರೂ ಅಬಕಾರಿ ಇಲಾಖೆ ಅಧಿಕಾರಿಗಳು ಮೌನ ವಹಿಸಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ ಎನ್ನುತ್ತಾರೆ ಪ್ರಜ್ಞಾವಂತರು.
ಮಾಂಸಹಾರಿ ಹೋಟೆಲ್ ಗಳಲ್ಲಿ ಮದ್ಯ ಮಾರಾಟದ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಅಬಕಾರಿ ಇಲಾಖೆ ಅಧಿಕಾರಿಗಳು, ಆಗಸ್ಟ್ ತಿಂಗಳಲ್ಲಿ ಅನೇಕ ಕಡೆ ದಾಳಿ ನಡೆಸಿ ಮದ್ಯ ವಶಪಡಿಸಿಕೊಂಡರು. ಹೋಟೆಲ್ ಮಾಲೀಕರಿಗೆ ದಂಡ ವಿಧಿಸಿದರು. ಅವರ ಮೇಲೆ ದೂರು ದಾಖಲಿಸಿದರು.
ಇದರಿಂದ ಎಚ್ಚೆತ್ತ ಹೋಟೆಲ್ ಮಾಲೀಕರು ಕೆಲ ದಿನಗಳ ಮಟ್ಟಿಗೆ ಮದ್ಯ ಮಾರಾಟ ನಿಲ್ಲಿಸಿದರು. ಪರಿಣಾಮ ಹೋಟೆಲ್ ಗಳಿಗೆ ಗ್ರಾಹಕರ ಕೊರತೆ ಎದುರಾಯಿತು. ಅಧಿಕಾರಿಗಳ ಭಯದಿಂದ ಕೆಲ ದಿನಗಳ ಮಟ್ಟಿಗೆ ಹೇಗೊ ದಿನ ದೂಡಿದ ಹೋಟೆಲ್ ಮಾಲೀಕರು, ನಿಧಾನಕ್ಕೆ ಮದ್ಯ ಸೇವನೆಗೆ ಅವಕಾಶ ಕೊಟ್ಟರು. ಆ ಮೂಲಕ ಮೊದಲಿನ ಹಳಿಗೆ ಹೋಟೆಲ್ ಮಾಲೀಕರು ತಲುಪಿದರು.

ಅವಳಿ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮಾಂಸಾಹಾರಿ ಹೋಟೆಲ್ ಗಳಲ್ಲಿ ಮದ್ಯ ಸೇವನೆ ಮ್ತತು ಮಾರಾಟಕ್ಕೆ ಅವಕಾಶ ಇಲ್ಲ. ಇಲಾಖೆ ವತಿಯಿಂದ ನಿರಂತವಾಗಿ ದಾಳಿ ನಡೆಸಿ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುತ್ತಿದೆ.
– ಮೋತಿಲಾಲ್, ಅಬಕಾರಿ ಇಲಾಖೆ ಡಿಸಿ, ಗದಗ
ಇದೇ ಇವರ ಕಸುಬು
ಅವಳಿ ನಗರದ ಮಾಂಸಾಹಾರಿ ಹೋಟೆಲ್ ಗಳಿಗೆ ಮದ್ಯ ಮಾರಾಟ ಮಾಡುವುದನ್ನೆ ಕೆಲವರು ಕಸುಬು ಮಾಡಿಕೊಂಡಿದ್ದಾರೆ. ಮಾಂಸಾಹಾರಿ ಹೋಟೆಲ್ ಪಕ್ಕದ ಮದ್ಯದಂಗಡಿಯಿಂದ ಗ್ರಾಹಕರು ಬಯಸಿದ ಮದ್ಯ ತಂದು ಕೊಡುವುದು ನಿತ್ಯದ ಕಾಯಕವಾಗಿದೆ. ಹೀಗೆ ತಂದುಕೊಟ್ಟ ಮದ್ಯವನ್ನು ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದಾರೆ ಹೋಟೆಲ್ ಮಾಲೀಕರು.
ತಿಮ್ಮಾಪೂರ ಗ್ರಾಮಕ್ಕೆ ಭೇಟಿ ನೀಡಿದ ತಹಸೀಲ್ದಾರ್
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗದಗ
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ರೈತರು ಹಗೆವುಗಳಲ್ಲಿ ಸಂಗ್ರಹಿಸಿದ್ದ ಧವಸ ಧಾನ್ಯಗಳಾದ ಜೋಳ ಕಡ್ಲಿ ಗೋಧಿ ನೀರು ಪಾಲಾಗಿರುವುದನ್ನು ಪರಿಶೀಲನೆ ನಡೆಸಿದರು.
ನಂತರ ಮನೆ ಮೇಲೆ ಛಾವಣಿ ಕುಸಿದುಬಿದ್ದ ಗಾಯಗೊಂಡ ಯುವಕನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಶಿಥಿಲಾವಸ್ಥೆಯಲ್ಲಿರುವ ಮನೆಗಳಿಗೆ ಭೇಟಿ ನೀಡಿ ಅವರಿಗೆ ತಾತ್ಕಾಲಿಕವಾಗಿ ಸರ್ಕಾರಿ ಶಾಲೆಗಳಲ್ಲಿ ಇರುವಂತೆ ಹೇಳಿದರು. ಇದೇ ವೇಳೆ ರೈತರ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಈಗಾಗಲೇ ತಿಮ್ಮಾಪೂರ ಗ್ರಾಮದಲ್ಲಿ ೨೫೦ ಹಗೆವುಗಳಲ್ಲಿ ಸಂಪೂರ್ಣ ಹಾಳಾಗಿದ್ದು ಪ್ರಾಥಮಿಕ ವರದಿ ಬಂದಿದೆ.
ನಷ್ಟ ಪರಿಹಾರ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ. ರೈತರಿಗೆ ಬಿತ್ತನೆ ಬೀಜ ರಸಗೊಬ್ಬರಗಳ ಕುರಿತು ಕೃಷಿ ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಮನವಿ ನೀಡಿ ಮಾತನಾಡಿದ ರೈತ ಯುವ ಮುಖಂಡ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ, ಪ್ರಸ್ತುತ ವರ್ಷ ತಿಮ್ಮಾಪುರ ಗ್ರಾಮಕ್ಕೆ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಭಾರಿ ಮಳೆಯಾಗಿ ರೈತರು ಸಂಗ್ರಹಿಸಿದ್ದ ದವಸ ದಾನ್ಯಗಳಾದ ಜೋಳ ಕಡ್ಲಿ ಗೋಧಿ ನೀರು ಪಾಲಾಗಿವೆ. ಬಿತ್ತನೆ ಮಾಡಲು ಸಹ ರೈತರ ಹತ್ತಿರ ಬೀಜಗಳಿಲ್ಲ ಕೃಷಿ ಇಲಾಖೆಯಿಂದ ರೈತರಿಗೆ ಬಿತ್ತನೆ ಬೀಜಗಳನ್ನು ಕೂಡಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶರಣಪ್ಪ ಜೋಗಿನ, ಯಲ್ಲಪ್ಪ ಲಕ್ಕುಂಡಿ, ಶೇಖಪ್ಪ ಘಂಟೆ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಸಂಕನೂರ ಪರ ಪದವೀಧರರ ಒಲವು
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗಜೇಂದ್ರಗಡ
ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಪರವಾಗಿ ಪದವೀಧರರ ಒಲವಿದೆ. ಹೀಗಾಗಿ ಸಂಕನೂರ ಅವರ ಗೆಲುವು ಖಚಿತ ಎಂದು ಬಿಜೆಪಿ ಮುಖಂಡ ಅಂದಪ್ಪ ಸಂಕನೂರ ಹೇಳಿದರು.
ಪಶ್ಚಿಮ ಪದವೀಧರರ ಚುನಾವಣೆ ಹಿನ್ನಲೆಯಲ್ಲಿ ಸ್ಥಳೀಯ ಪದವೀಧರರ ಮನೆ,ಮನೆಗೆ ಹಾಗೂ ವಿವಿಧ ಕಾಲೇಜುಗಳಿಗೆ ಗುರುವಾರ ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ ಪರವಾಗಿ ಮತಯಾಚಿಸಿ ಮಾತನಾಡಿದರು.
ಕಳೆದ ಬಾರಿ ಪಶ್ಚಿಮ ಪದವೀಧರರು ನೀಡಿದ ಅವಕಾಶ ಸದ್ಬಳಿಕೆ ಮಾಡಿಕೊಂಡು ಖಾಸಗಿ ಶಿಕ್ಷಣ ಸಂಸ್ಥೆಗಳ ನೌಕರರ ಸಮಸ್ಯೆಗಳಿಗೆ ಹಾಗೂ ಪದವೀಧರರ ನೋವಿಗೆ ಸ್ಪಂದಿಸುವುದರ ಜೊತೆಗೆ ಬಹು ವರ್ಷಗಳ ಬೇಡಿಕೆಯಾಗಿದ್ದ ಅತಿಥಿ ಉಪನ್ಯಾಸಕರ ವೇತನವನ್ನು ಹೆಚ್ಚಿಸಲು ಎಸ್.ವಿ.ಸಂಕನೂರು ಅವರು ಶ್ರಮಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಸಂಕನೂರ ಅವರ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದರು.
ಕರ್ನಾಟಕ ಜನಪರ ಸೇವಾ ಸಮಿತಿ ಅಧ್ಯಕ್ಷ ಗಣೇಶ ಗುಗಲೋತ್ತರ ಮಾತನಾಡಿ, ಸ್ಕಿಲ್ ಇಂಡಿಯಾ ಅಡಿಯಲ್ಲಿ 1300 ತರಬೇತಿ ಕೇಂದ್ರಗಳನ್ನು ಆರಂಭಿಸುವುದರ ಜೊತೆಗೆ ಸದನದಲ್ಲಿ ಪದವೀಧರರ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಪದವೀಧರರ ನೋವಿಗೆ ಎಸ್.ವಿ.ಸಂಕನೂರ ಸ್ಪಂದಿಸಿದ್ದಾರೆ. ಅಲ್ಲದೆ ಜ್ಯೋತಿ ಸಂಜೀವಿನಿ ಯೋಜನೆಗನ್ನು ಖಾಸಗಿ ಶಿಕ್ಷಕರಿಗೆ ನೀಡಲು ಒತ್ತಾಯಿಸುವುದರ ಜೊತೆಗೆ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯನ್ನು ಜಾರಿಗೆ ತರಲು ಹಾಗೂ ಭೋದಕೇತರ ವರ್ಗಗಳ ಸಮಸ್ಯೆಗಳಿಗೆ ಪರಿಹಾರದ ಜೊತೆಗೆ ಎಲ್ಲ ಇಲಾಖೆಯ ಪದವೀಧರರಿಗೆ ಮೂಲಕ ಸೌಲಭ್ಯ ಒದಗಿಸಲು ಸಂಕನೂರು ಅವರು ಪ್ರಾಮಾಣಿಕ ಪ್ರಯತ್ನ ಮಾಡಲಿದ್ದಾರೆ. ಹೀಗಾಗಿ ಮತ್ತೊಮ್ಮೆ ಪದವೀಧರರು ತಮ್ಮ ಮೊದಲ ಪ್ರಾಶಸ್ತ್ಯದ ಮತವನ್ನು ಸಂಕನೂರ ಅವರಿಗೆ ನೀಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಶರಣಪ್ಪ ರೇವಡಿ, ಅಮರೇಶ ಗಾಣಗೇರ, ಬಸಯ್ಯ ಹಿರೇಮಠ, ವಸಂತರಾವ್ ಗಾರಗಿ, ಅಮರೇಶ ಅಂಗಡಿ, ಅನೀಲ ಮಹೇಂದ್ರಕರ, ವಿನಾಯಕ ಜಾಧವ ಇತರರು ಇದ್ದರು.
ಸಚಿವ ಸಿ.ಸಿ. ಪಾಟೀಲ ಜನ್ಮ ದಿನಾಚರಣೆ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಗಣಿ, ಭೂವಿಜ್ಞಾನ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರ ಜನ್ಮದಿನವನ್ನು ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಿದರು.
ಸಿ.ಸಿ. ಪಾಟೀಲ ಅವರ 62ನೇ ಜನ್ಮದಿನಾಚರಣೆಯನ್ನು ಅವಳಿ ನಗರದ ೩೫ ವಾರ್ಡಗಳಲ್ಲಿನ ಒಟ್ಟು 62 ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಸಿಹಿ ವಿತರಣೆ ಮಾಡುವ ಮೂಲಕ ಆಚರಿಸಲಾಯಿತು.
ನಗರದ ವೀರೇಶ್ವರ ಪುಣ್ಯಾಶ್ರಮ, ಮಾಬುಸುಬಾನಿ ದರ್ಗಾದಲ್ಲಿಯೂ ವಿಶೇಷ ಪೂಜೆ, ದುವಾ ಮಾಡಲಾಯಿತು. ಅನೇಕ ಗಣ್ಯರು ಭಾಗಿಯಾಗಿ ಸಿ.ಸಿ. ಪಾಟೀಲ ಅವರಿಗೆ ಶುಭ ಹಾರೈಸಿ ಪ್ರಾರ್ಥನೆ ಸಲ್ಲಿಸಿದರು. ಅಲ್ಲದೇ ವೀರೇಶ್ವರ ಪುಣ್ಯಾಶ್ರಮದ ಅಂಧ, ಅನಾಥ ಮಕ್ಕಳಿಗೆ ಸಿಹಿ ವಿತರಣೆ ಕಾರ್ಯಕ್ರಮವೂ ನಡೆಯಿತು.

ಪುಣ್ಯಾಶ್ರಮದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಬಿಜೆಪಿ ಯುವ ಮುಖಂಡ ಅನಿಲ ಮೆಣಸಿನಕಾಯಿ, ಅಭಿವೃದ್ಧಿಯ ದೂರದೃಷ್ಟಿ ಹೊಂದಿರುವ ನಾಯಕ ಸಿ.ಸಿ. ಪಾಟೀಲ, ಜಿಲ್ಲೆಯ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಉಂಟಾದ ನೆರೆ, ಬರ ಮತ್ತು ಕೊರೊನಾ ಸಂಕಷ್ಟದಲ್ಲೂ ಅವಿರತವಾಗಿ ಶ್ರಮಿಸಿ ಜನಮೆಚ್ಚುಗೆಗೆ ಕಾರಣರಾಗಿದ್ದಾರೆ. ದೇವರು ಸಿ.ಸಿ.ಪಾಟೀಲ ಅವರಿಗೆ ಉತ್ತಮ ಆರೋಗ್ಯ, ಸುಖ-ಶಾಂತಿ, ನೆಮ್ಮದಿ ಜೊತೆಗೆ ಇನ್ನಷ್ಟು ಜನಸೇವೆ ಮಾಡುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ, ಪ್ರಮುಖರಾದ ಲಿಂಗರಾಜ ಪಾಟೀಲ, ಎಂ.ಎಸ್.ಕರೀಗೌಡ್ರ, ಮಾಂತೇಶ ನಾಲ್ವಾಡ, ರವಿ ದಂಡಿನ, ಪ್ರಶಾಂತ ನಾಯ್ಕರ, ಅನಿಲ ಅಬ್ಬಿಗೇರಿ, ಸಿರಾಜ ಬಳ್ಳಾರಿ, ಶಿವಲಿಂಗ ಶಾಸ್ತ್ರಿ, ಬಸವಣ್ಣೆಯ್ಯ ಹಿರೇಮಠ, ರಾಘವೇಂದ್ರ ಯಳವತ್ತಿ, ಇರ್ಷಾದ ಮಾನ್ವಿ, ಕಿಷನ್ ಮೆರವಾಡೆ, ರೇಖಾ ಅಳವಂಡಿ, ಅಶ್ವಿನಿ ಜಗತಾಪ, ಶಾರದಾ ಹಿರೇಮಠ, ನಿಂಗಪ್ಪ ಮಣ್ಣೂರ, ಗಂಗಾಧರ ಹಬೀಬ, ರಾಚಯ್ಯ ಹೊಸಮಠ, ಮಂಜು ಪಾಟೀಲ, ಶಿವು ಹಿರೇಮನಿಪಾಟೀಲ, ಪುಟ್ಟು ಹಿರೇಮಠ, ರಾಹುಲ ಅರಳಿ, ಬುಡ್ಡಾಸಾಬ ಆಲೂರ, ಬಾಬು ಯಲಿಗಾರ, ಶರಣಪ್ಪ ಕಮಡೊಳ್ಳಿ, ಅರವಿಂದ ಕೇಲೂರ, ಮೋಹನ ಮಾಳಗಿಮನಿ, ಅಮರನಾಥ ಗಡಗಿ, ಪ್ರಕಾಶ ಅಂಗಡಿ, ಸಾಕ ಮನಿಯಾರ, ನಾಸಿರ ನೆರೆಗಲ್, ಶ್ಯಾಮಿದ್ ನರಗುಂದ ಹಾಗೂ ೩೫ ವಾರ್ಡಿನ ಎಲ್ಲ ಪ್ರಮುಖರುಗಳು ಉಪಸ್ಥಿತರಿದ್ದರು.
ರಾಜ್ಯದಲ್ಲಿರೋದು ಜೆಸಿಬಿ ಸರಕಾರ: ಹೊರಟ್ಟಿ
ಜೆಡಿಎಸ್ ಸಹ ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಿದೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ರಾಜ್ಯದಲ್ಲಿರೋದು ಬಿಜೆಪಿ ಸರಕಾರ ಅಲ್ಲ, ಜೆಸಿಬಿ ಸರಕಾರ, ಅಂದ್ರೆ ಜನತಾ ದಳ, ಕಾಂಗ್ರೆಸ್ ಮತ್ತು ಬಿಜೆಪಿಯ ಸಮ್ಮಿಶ್ರ ಸರಕಾರ. ಈಗಿನ ಸರಕಾರದಲ್ಲಿ ಜೆಡಿಎಸ್, ಕಾಂಗ್ರೆಸ್‌ನವರೇ ಜಾಸ್ತಿ ಇದ್ದಾರೆ. ಅಧಿಕಾರ ಹೋದರೆ ಅವರೆಲ್ಲ ಮತ್ತೇ ಅವರವರ ಪಕ್ಷಗಳಿಗೆ ಮರಳುತ್ತಾರೆ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಹೇಳಿದರು.
ಕೊಪ್ಪಳದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸಿರುವ ಎಲ್ಲ ಪಕ್ಷಗಳು ಉತ್ತರ ಕರ್ನಾಟಕವನ್ನು ಉದಾಸೀನ ಮಾಡಿವೆ. ಹಾಗಾಗಿಯೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಆಗಾಗ ಕೇಳುತ್ತಲೇ ಇರುತ್ತದೆ. ಶಾಸಕ ಬಸನಗೌಡ ಯತ್ನಾಳ ಹೇಳಿಕೆಯನ್ನು ಸ್ವಾಗತಿಸುವುದಾಗಿ ಅವರು ತಿಳಿಸಿದರು.
ಯಡಿಯೂರಪ್ಪ ಅವರ ಬಗ್ಗೆ ಮೃದುಧೋರಣೆ ಇರುವುದು ನಿಜ. ಹೋರಾಟದ ಹಾದಿಯಿಂದ ಬಂದವರು. ಅವರಿಗೆ ಸಾಕಷ್ಟು ವಯಸ್ಸಾಗಿದೆ. ಮುಂದೆ ಸಿಎಂ ಆಗ್ತಾರೊ? ಇಲ್ವೊ? ಈಗ ಅವಕಾಶ ಇದೆ ಅವರು ಸಿಎಂ ಆಗಲಿ ಎಂದು ಹೇಳಿದ್ದು ನಿಜ. ಆದರೆ ಎಂಥ ಸಂದರ್ಭದಲ್ಲೂ ಬಿಜೆಪಿಗೆ ಸೇರಲ್ಲ. ಯಾವುದೇ ಪಕ್ಷದ ಉತ್ತರ ಕರ್ನಾಟಕದ ಶಾಸಕರು ಸಿಎಂ ಆದರೆ ಸಹಮತ ಇದೆ ಎಂದು ಹೇಳಿದರು.
ಜೆಡಿಎಸ್‌ನಲ್ಲಿ ಮೀರ್ ಸಾದಿಕ್‌ರು ಇದ್ದಾರೆ ಎಂದಿರುವ ಸಚಿವ ಸಿ.ಟಿ.ರವಿ ಬಗ್ಗೆ ಹೆಚ್ಚೇನೂ ಹೇಳಲಾರೆ. ಅವರ ಪಕ್ಷದಲ್ಲೇ ಆಂತರಿಕ ಕಲಹ ಜೋರಾಗಿದೆ. ಮೊದಲು ಅದನ್ನು ಸರಿಪಡಿಸಿಕೊಳ್ಳಲಿ ಎಂದರು.
ಶಿಕ್ಷಕರ, ಪದವಿಧರರ ಕ್ಷೇತ್ರದಲ್ಲಿ ಜನತಾ ದಳದ ಸಾಧನೆ ಅನನ್ಯ. ಅವರ ಹಿತ. ಬಯಸುವ ಏಕೈಕ ಪಕ್ಷ ಜೆಡಿಎಸ್. ಈಶಾನ್ಯ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ತಿಮ್ಮಯ್ಯ ಪುರ್ಲೆ ಶಿಕ್ಷಕರ ಪ್ರತಿನಿಧಿಯಾಗಲು ಸಮರ್ಥರಿದ್ದಾರೆ. ಪ್ರಜ್ಞಾವಂತ ಮತದಾರರು ತಮ್ಮ ಪ್ರಥಮ ಪ್ರಾಶಸ್ತ್ಯದ ಮತವನ್ನು ತಿಮ್ಮಯ್ಯ ಪುರ್ಲೆಯವರಿಗೆ ನೀಡಬೇಕು ಎಂದು ಕೋರಿದರು.
ಈ ವೇಳೆ ಜೆಡಿಎಸ್ ಮುಖಂಡರಾದ ಶ್ರೀಕಂಠೆಗೌಡ್ರು, ವೀರೇಶ್ ಮಹಾಂತಯ್ಯನಮಠ, ಪ್ರದೀಪಗೌಡ ಮಾಲೀಪಾಟೀಲ್, ಮೌನೇಶ್ ಮತ್ತಿತರರು ಇದ್ದರು.

