ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗದಗ
ಅ. 28 ರಂದು ಜಿಲ್ಲೆಯಲ್ಲಿ ಜರುಗುವ ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರ ಚುನಾವಣೆಯಲ್ಲಿ ಆರೋಗ್ಯ ಇಲಾಖೆ ಹೊರಡಿಸಿರುವ ಕೊವಿಡ್-19 ನಿಯಂತ್ರಣ ಕ್ರಮಗಳ ಪಾಲನೆ ಮಾಡುವುದರೊಂದಿಗೆ ಚುನಾವಣೆಯನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಹೇಳಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ತಹಸೀಲ್ದಾರರಿಗೆ ಹಾಗೂ ಚುನಾವಣಾ ದಿನಗಳಂದು ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಜಿಲ್ಲಾಧಿಕಾರಿಗಳು ಮಾತನಾಡಿದರು.
ಪ್ರತಿ ಮತಗಟ್ಟೆಗೆ ಅಗತ್ಯವಿರುವಷ್ಟು ಸ್ಯಾನಿಟೈಸರ್, ಸಿಬ್ಬಂದಿಗಳಿಗೆ ಮಾಸ್ಕ್, ಹ್ಯಾಂಡ್‌ಗ್ಲೌಸ್, ಪಲ್ಸ್ ಆಕ್ಷಿಮಿಟರ್, ಥರ್ಮಲ್ ಸ್ಕ್ಯಾನರ್, ಪಿಪಿಇ ಕಿಟ್ ಮತ್ತು ಹ್ಯಾಂಡ್ ವಾಶಗಳನ್ನು ನೀಡಲಾಗುತ್ತಿದ್ದು, ಮತದಾನಕ್ಕೆ ಬರುವ ಮತದಾರರಿಗೆ ಪಲ್ಸ್ ಆಕ್ಷಿಮೀಟರ್ ಹಾಗೂ ಐ.ಆರ್.ಥರ್ಮಲ್ ಸ್ಕ್ಯಾನರ್ ಮೂಲಕ ಆರೋಗ್ಯ ತಪಾಸಣೆಯನ್ನು ನಿಯೋಜಿಸಲಾದ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮಾಡಬೇಕು ಎಂದರು.
ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಸುಸಜ್ಜಿತ ಕೋಣೆ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಸೌಕರ್ಯಗಳು ಸುಸ್ಥಿತಿಯಲ್ಲಿ ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಪ್ರತಿ ಮತಗಟ್ಟೆ ಹತ್ತಿರ ಕೊವಿಡ್ ಲಕ್ಷಣ ಇರುವವರ ವಿಶ್ರಾಂತಿ, ತಕ್ಷಣ ಆರೈಕೆಗಾಗಿ ಪ್ರತ್ಯೇಕ ಐಸೋಲೇಶನ್ ರೂಮ್ ವ್ಯವಸ್ಥೆ ಮಾಡಬೇಕು.
ಬಿಎಲ್‌ಓಗಳ ಮೂಲಕ ಓಟರ್ ಸ್ಲಿಪ್‌ಗಳನ್ನು ಮತದಾರನ ಮನೆಗೆ ತಲುಪಿಸುವ ಕಾರ್ಯ ನಡೆಯಬೇಕು. ಕೊವಿಡ್-19 ಸೋಂಕಿಗೆ ಒಳಗಾದ ಮತದಾರ ಮತದಾನ ಮಾಡಲು ಬರುವುದನ್ನು ಮುಂಚಿತವಾಗಿ ಖಚಿತಪಡಿಸಿದರೆ, ಅವರಿಗೆ ಅಂಬುಲೆನ್ಸ್ ಮೂಲಕ ಅವರಿದ್ದ ಸ್ಥಳದಿಂದ ನೇರವಾಗಿ ಮತಗಟ್ಟೆಗೆ ಕರೆ ತಂದು, ಮತದಾನದ ನಂತರ ಅವರ ಸ್ಥಳಕ್ಕೆ ಬಿಡಲಾಗುತ್ತದೆ. ಮತದಾನದ ದಿನದಂದು ಸಂಜೆ 4 ಗಂಟೆ ನಂತರದ ಅವಧಿಯನ್ನು ಕೊವಿಡ್ ಸೋಂಕಿತರಿಗೆ ಮತ್ತು ಶಂಕಿತರಿಗೆ, ಕೊವಿಡ್ ಲಕ್ಷಣ ಇರುವವರಿಗೆ ಮತದಾನ ಮಾಡಲು ಅವಕಾಶ ಒದಗಿಸಲಾಗಿದ್ದು, ಎಲ್ಲ ರೀತಿಯ ಆರೋಗ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ ಕೆ, ಮಾತನಾಡಿ ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾದ ಸಿಬ್ಬಂದಿಗಳ ಹಾಗೂ ಮೊಬೈಲ್ ಫೋನ್‌ನಂಬರ್‌ಗಳ ವಿನಿಮಯ ಮಾಡುವುದು ಹಾಗೂ ತಂಡದ ಪ್ರತಿಯೊಬ್ಬರ ಕಾರ್ಯವಿಧಾನದ ಬಗ್ಗೆ ತಿಳುವಳಿಕೆ ನೀಡುವುದು ಪ್ರಿಸೈಡಿಂಗ್ ಅಧಿಕಾರಿಗಳ ಕರ್ತವ್ಯವಾಗಿದ್ದು ಚುನಾವಣಾಧಿಕಾರಿಗೆ ಸಂಬಂಧಿಸಿದ ಎಲ್ಲಾ ಆದೇಶಗಳ ಪ್ರತಿಗಳನ್ನು ಇವರು ಹೊಂದಿರಬೇಕು. ಪೂರ್ವಭಾವಿ ಅಭ್ಯಾಸ ಮತ್ತು ತರಬೇತಿಗಳಿಗೆ ಕಡ್ಡಾಯವಾಗಿ ಹಾಜರಾಗಿ ಸಂಘಟಿತರಾಗಿ ಕಾರ್ಯನಿರ್ವಹಿಸಬೇಕು ಎಮದು ಸೂಚಿಸಿದರು.
ಇದೇ ಸಂದರ್ಭದಲ್ಲಿ ಕೊವಿಡ್-19 ಮುಂಜಾಗೃತಿ ವಿಷಯ ಕುರಿತ ಪೋಸ್ಟರ್‌ಗಳನ್ನು ಜಿಲ್ಲಾಧಿಕಾರಿ ಸುಂದರೇಶ್ ಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ ಕೆ, ಸೇರಿದಂತೆ ಮತ್ತಿತರರು ಬಿಡುಗಡೆಗೊಳಿಸಿದರು.
ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ ಎಂ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಸತೀಶ ಬಸರೀಗಿಡದ ಅವರು ಕೊವಿಡ್-19 ಮಾರ್ಗಸೂಚಿಗಳ ಪಾಲನೆ ಕುರಿತು ಮಾತನಾಡಿದರು. ತರಬೇತಿ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಡಿಡಿಎಲ್‌ಆರ್ ಅಧಿಕಾರಿ ರವಿಕುಮಾರ ಸೇರಿದಂತೆ ಆಯಾ ತಾಲೂಕುಗಳ ತಹಸೀಲ್ದಾರರು, ಪಿಆರ್‌ಓಗಳು ಹಾಜರಿದ್ದರು.
ಕೊರೋನಾ ನಿಯಂತ್ರಣ ಕ್ರಮಗಳ ಪಾಲಿಸಿ
ಹದಗೆಟ್ಟ ರಸ್ತೆ, ಗ್ರಾಮಸ್ಥರಿಂದ ಪ್ರತಿಭಟನೆ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಕಂಪ್ಲಿ
ತಾಲೂಕಿನ ನಂ. 10 ಮುದ್ದಾಪುರ ಗ್ರಾ.ಪಂ ವ್ಯಾಪ್ತಿಯ ಕಣ್ವಿ ತಿಮ್ಮಲಾಪುರದಿಂದ ಕಂಪ್ಲಿಗೆ ಬರುವ ಮಾರ್ಗ ಸಂಪೂರ್ಣವಾಗಿ ಹದಗೆಟ್ಟಿದ್ದು, ರಸ್ತೆ ತುಂಬಾ ಮಳೆ ನೀರು ಸಂಗ್ರಹವಾಗಿ ರಸ್ತೆಯೇ ಮಾಯವಾಗಿದೆ. ಇದರಿಂದ ವಾಹನ ಸವಾರರು, ಸಾರ್ವಜನಿಕರು ಸಂಚರಿಸುವುದು ಹೇಗೆಂದು ಗ್ರಾಮದ ಯುವಕರು ದಿಢೀರ್ ಪ್ರತಿಭಟನೆ ನಡೆಸಿ, ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೇ ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ, ಉಗ್ರ ಹೋರಾಟದ ಎಚ್ಚರಿಸಿಕೆ ನೀಡಿದ್ದಾರೆ.
ಕಣ್ವಿ ತಿಮ್ಮಲಾಪುರದಿಂದ ಕಂಪ್ಲಿಗೆ ಎರಡು ಮಾರ್ಗಗಳಿದ್ದು, ಒಂದು ಗ್ರಾಮದಿಂದ ರಾಮಸಾಗರ ಮುಖಾಂತರ ಮತ್ತೊಂದು ಗ್ರಾಮದಿಂದ ಸಿದ್ದೇಶ್ವರ ಕ್ರಾಸ್ ಮೂಲಕ ಕಂಪ್ಲಿಗೆ ಸಂಪರ್ಕಿಸುತ್ತದೆ. ಆದರೆ ಗ್ರಾಮದಿಂದ ಈ ಎರಡು ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಗ್ರಾಮದ ಮುಖ್ಯ ರಸ್ತೆಯೇ ಸಂಪೂರ್ಣವಾಗಿ ಹಾಳಾಗಿದ್ದು, ಸಂಚಾರ ಹೇಗೆಂಬ ಚಿಂತೆ ಗ್ರಾಮಸ್ಥರನ್ನು ಕಾಡುತ್ತಿದೆ. ರಸ್ತೆಯನ್ನು ನೋಡಿದರೆ, ರಸ್ತೆಯಲ್ಲಿ ಗುಂಡಿಯೋ, ಗುಂಡಿಯಲ್ಲಿ ರಸ್ತೆಯೋ ಎನ್ನುವಂತಾಗಿದ್ದು, ಇದೀಗ ನಿರಂತರ ಮಳೆಯಿಂದಾಗಿ ರಸ್ತೆಯಲ್ಲಿ ಎರಡು ಅಡಿಗಳಷ್ಟು ನೀರು ಸಂಗ್ರಹವಾಗಿದ್ದು, ರಸ್ತೆಯೇ ಮಾಯವಾಗಿದೆ.
ಹದಗೆಟ್ಟ ರಸ್ತೆಯಲ್ಲಿ ವಾಹನ ಸವಾರರು ಹರಸಾಹಸ ಪಟ್ಟು ಸಂಚರಿಸುತ್ತಿದ್ದು, ಪ್ರತಿದಿನ ಅಪಘಾತಗಳು ಸಂಭವಿಸುತ್ತಿವೆ ಎಂದು ಅಸಮಧಾನ ವ್ಯಕ್ತ ಪಡಿಸಿದ ಗ್ರಾಮಸ್ಥರು ಕೂಡಲೇ ತಾಲ್ಲೂಕಿನ ಅಧಿಕಾರಿಗಳು, ಜನಪ್ರತಿನಿಧಿಗಳು ಹದಗೆಟ್ಟ ರಸ್ತೆಯ ದುರಸ್ತಿಗೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು. ತಮ್ಮ ಗ್ರಾಮದ ಹದಗೆಟ್ಟ ರಸ್ತೆಯ ಚಿತ್ರಗಳನ್ನು, ರಸ್ತೆಯ ದುಸ್ಥಿತಿಯನ್ನು ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪರಶುರಾಮ, ಜಗದೀಶ್, ಸಂತೋಷ್, ಯು.ನಾಗಪ್ಪ, ಟಿ.ರಮೇಶ್ ಸೇರಿದಂತೆ 30 ರಿಂದ 40 ಜನ ಭಾಗವಹಿಸಿದ್ದರು.
ಸರಳವಾಗಿ ರಾಜ್ಯೋತ್ಸವ ಆಚರಣೆ: ಗೌಸಿಯಾಬೇಗಂ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕಂಪ್ಲಿ
ಕೊರೊನಾ ವೈರಸ್ ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ನ.೧ರಂದು ಆಚರಣೆ ಮಾಡಲಿರುವ ಕರ್ನಾಟಕ ರಾಜ್ಯೋತ್ಸವವನ್ನು ತಾಲೂಕು ಆಡಳಿತದಿಂದ ಅತ್ಯಂತ ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರು ಹಾಗೂ ತಹಸೀಲ್ದಾರ್ ಗೌಸಿಯಾಬೇಗಂ ತಿಳಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಜ್ಯೋತ್ಸವ ಮತ್ತು ಹಬ್ಬಗಳ ಆಚರಣೆಗೆ ಸರ್ಕಾರದಿಂದ ನಿಯಮಗಳನ್ನು ಜಾರಿಗೊಳಿಸಿದ್ದು, ಸರ್ಕಾರದ ಆದೇಶದಂತೆ ಅತ್ಯಂತ ಸರಳವಾಗಿ ಆಚರಿಸಲಾಗುವುದು ತಿಳಿಸಿದರು.
ಕರ್ನಾಟಕ ರಾಜ್ಯೋತ್ಸವವನ್ನು ಕಚೇರಿ ಆವರಣದಲ್ಲಿ ರಾಷ್ಟ್ರಧ್ವಜಾರೋಹಣದೊಂದಿಗೆ ಆಚರಣೆ ಮಾಡಲಾಗುವುದು. ಅಂದು ತಾಲೂಕಿನ ರಾಮಸಾಗರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಪ್ರಥಮ ಬಾರಿಗೆ ನೂರಕ್ಕೆ ನೂರು ಫಲಿತಾಂಶ ಪಡೆದ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯಗುರುಗಳನ್ನು ಹಾಗೂ ಅಧಿಕ ಅಂಕ ಪಡೆದ ಶಾಲೆಯ ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು.
ಅಧಿಕಾರಿಗಳ ಗೈರು: ತಾಲೂಕು ಆಡಳಿತ ಹಬ್ಬಗಳ ಆಚರಣೆ, ಜಯಂತಿಗಳಿಗೆ ಕರೆಯುವ ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಗೈರು ಹಾಜರಿ ಹಾಗೂ ತಮ್ಮ ಪ್ರತಿನಿಧಿಗಳನ್ನು ಕಳುಹಿಸುತ್ತಿರುವ ಬಗ್ಗೆ ಗರಂ ಆದ ತಹಸೀಲ್ದಾರ್ ಗೌಸಿಯಾಬೇಗಂ, ಕಳೆದ ಹಲವಾರು ಸಭೆಗಳಲ್ಲಿ ಈ ಬಗ್ಗೆ ಚರ್ಚೆ ನಡೆಸಿದರೂ ಸಹಿತ ಬಹುತೇಕ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಿಯಾಗುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಕನ್ನಡ ಜಾಗೃತಿ ಸಮತಿ ಸದಸ್ಯರಾದ ಜಿ. ಚಂದ್ರಶೇಖರಗೌಡ, ಎಸಿ. ದಾನಪ್ಪ, ಸಿಆರ್. ಹನುಮಂತಪ್ಪ, ಶಿರಸ್ತೇದಾರ ಎಸ್. ರೇಖಾಮಠ, ಮಾಲತೇಶ ದೇಶಪಾಂಡೆ, ಪಟ್ಟಣದ ಮುಖಂಡರು ಭಾಗವಹಿಸಿದ್ದರು.
ಸರ್ಕಾರಿ ನೌಕರಿ ತೊರೆದು ಸಂಘಟನೆ ಕಟ್ಟಿದ ನಾಯಕ ಮಾನ್ವಡೆ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ
ಮಾರುತಿ ಮಾನ್ವಡೆಯವರು ಸಿಐಟಿಯು ಪ್ರ. ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದರು. ಅವರು ಅಕ್ಷರ ದಾಸೋಹ ಮತ್ತು ಅಂಗನವಾಡಿ ಕಾರ್ಯಕರ್ತರು ರೈತ ಕಾರ್ಮಿಕರ ಬೇಡಿಕೆಗಳ ಕುರಿತು ಚಳುವಳಿಯ ಮೂಲಕ ಗುರುತಿಸಿಕೊಂಡು ಕಾರ್ಮಿಕರ ಸೌಲಭ್ಯಕ್ಕಾಗಿ ಶ್ರಮವಹಿಸಿದ್ದರು ಎಂದು ಸಿಐಟಿಯುನ ಪ್ರಧಾನ ಕಾರ್ಯದರ್ಶಿ ಮಾರುತಿ ಚಿಟಗಿ ಹೇಳಿದರು.
ಮಾರುತಿ ಮಾನ್ವಡೆಯವರ ನಿಧನ ನಿಮಿತ್ತ ಅಂಗನವಾಡಿ ಮತ್ತು ಅಕ್ಷರ ದಾಸೋಹ ಗ್ರಾಮ ಪಂಚಾಯತಿ ಸಿಬ್ಬಂದಿ, ಸದಸ್ಯರು ಪಟ್ಟಣದ ವಿಠೋಭ ಮಂದಿರದಲ್ಲಿ ಕಾರ್ಯಕ್ರಮ ಏರ್ಪಡಿಸಿ ಮೇಣಬತ್ತಿ ಬೆಳಗಿಸುವ ಮೂಲಕ ಶ್ರದ್ದಾಂಜಲಿ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, 1981 ರಲ್ಲಿ ಸರ್ಕಾರಿ ನೌಕರಿ ತೊರೆದು ರೈತ ಕಾರ್ಮಿಕರ ಸಂಘಟನೆ ಕಟ್ಟುವ ಮೂಲಕ ಸಾರ್ವಜನಿಕ ಜೀವನದಲ್ಲಿ ಮಾನ್ವಡೆ ಸೇವೆ ಸಲ್ಲಿಸಿದ್ದರು.
ಕೇಂದ್ರ ಸರ್ಕಾರ 2015 ರಲ್ಲಿ ಭೂ ಸ್ವಾಧೀನ ಕಾಯ್ದೆ ಸುಗ್ರಿವಾಜ್ಞೆ ಮೂಲಕ ಜಾರಿಗೊಳಿಸಲು ಹೊರಟ ಸಂದರ್ಭದಲ್ಲಿ ನರಗುಂದದಿಂದ ಬೆಂಗಳೂರವರೆಗೆ ಪಾದಯಾತ್ರೆಯಲ್ಲಿ ಹೊರಟು ದೊಡ್ಡ ಚಳುವಳಿ ಮಾಡಿದ್ದರು. ಇಂತಹ ಮುಖಂಡರ ಆದರ್ಶಗಳನ್ನು ನಾವೆಲ್ಲ ಬೆಳೆಸಿಕೊಂಡು ನಮ್ಮ್ಮ ಬೇಡಿಕೆಗಳ ಕುರಿತು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಎಲ್ಲರೂ ಮುಂದಾಗುವಂತೆ ಚಿಟಕಿ ಕರೆ ನೀಡಿದರು.
ಗ್ರಾಮ ಪಂಚಾಯತ್ ನೌಕರ ಸಂಘಟಣೆಯ ಜಿಲ್ಲಾ ಮುಖಂಡ ಯಲ್ಲಪ್ಪ ಪೂಜಾರ, ತಾಲೂಕಾ ಪ್ರ. ಕಾರ್ಯದರ್ಶಿ ರಮೇಶ ವಾಸನ, ಅಂಗನವಾಡಿ ನೌಕರ ಸಂಘಟನೆಯ ತಾಲೂಕಾ ಪ್ರ. ಕಾರ್ಯದರ್ಶಿ ಶಾರದಾ ರೋಣದ, ತಾಲುಕಾ ಅಂಗನವಾಡಿ ಉಪಾಧ್ಯಕ್ಷೆ ನೀಲಗಂಗಾ ಮಾದರ, ಲಕ್ಷ್ಮೀ ಗಾಯಕವಾಡ, ಸಹಕಾರ್ಯದರ್ಶಿ ಬಸಮ್ಮಗುರಿಕಾರ, ಅಕ್ಷರದಾಸೋಹ ಸಂಘಟಣೆಯ ಅಧ್ಯಕ್ಷೆ ಮಂಜುಳಾ ಮುಳ್ಳೂರಮಾತನಾಡಿದರು.
ಎಸ್.ವಿ. ಮಣ್ಣೂರಮಠ ನೌಕರ ಸಂಘಟನೆಯ ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ ಭೂವ್ಮಣ್ಣವರ, ಬೀಬೀಜಾನ ಮುಲ್ಲಾನವರ, ಅಂಗನವಾಡಿ ನೌಕರ ಸಂಘಟಣೆಯ ಅಧ್ಯಕ್ಷೆ ಗಿರಿಜಾ ಮಾಚಕನೂರ ಹಾಗೂ ಅಂಗನವಾಡಿ ಸಿಬ್ಬಂದಿ, ಅಕ್ಷರ ದಾಸೋಹ ಸಿಬ್ಬಂದಿ, ಕಾರ್ಮಿಕರ ಸಂಘಟಣೆ ಸದಸ್ಯರು, ರೈತ ಕಾರ್ಮಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮಲ್ಲಿಕಾರ್ಜುನಯ್ಯ ಹುಂಡೇಕಾರಮಠ, ರಮೇಶ ವಾಸನ, ಲಕ್ಷ್ಮೀ ಗಾಯಕವಾಡ ನಿರ್ವಹಿಸಿದರು.
ಎಸ್.ಟಿ. ಮೀಸಲಾತಿ ಹೋರಾಟಕ್ಕೆ ತಾತ್ಕಾಲಿಕ ವಿರಾಮ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಪರಿಶಿಷ್ಟ ಪಂಗಡಕ್ಕೆ ಶೇ. 7.5 ಮೀಸಲು ನೀಡಲು ಮೀನಾಮೇಶ ಎಣಿಸುತ್ತಿರುವ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಶೀಘ್ರ ಮೀಸಲು ಘೋಷಣೆಗೆ ಒತ್ತಾಯಿಸಿ ರಾಜ್ಯದಾದ್ಯಂತ ನಡೆಯುತ್ತಿರುವ ಧರಣಿ ಸರಕಾರದ ಭರವಸೆ ಮೇರೆಗೆ ಮೂರನೇ ದಿನಕ್ಕೆ ಮೊಟಕುಗೊಳಿಸಲಾಗಿದೆ.
ನಗರದ ಜಿಲ್ಲಾಡಳಿತ ಭವನದ ಎದುರು ಹಾಗೂ ವಿವಿಧ ತಾಲೂಕ ಕೇಂದ್ರಗಳಲ್ಲಿ ಕೊಪ್ಪಳ ಜಿಲ್ಲಾ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಹತ್ತು ದಿನಗಳ ಪ್ರತಿಭಟನಾ ಧರಣಿಯ ಮೂರನೆ ದಿನ ಜಿಲ್ಲಾ ಮುಖಂಡರ ಜೊತೆ ತಿಗರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಖಂಡರು ಭಾಗವಹಿಸಿದ್ದರು.
ಸಮಾಜಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ. 7.5 ಮೀಸಲು ಕೊಡುವುದು ಸಂವಿಧಾನ ಬದ್ಧವಾಗಿದೆ. ಆದರೆ ಮಾತು ತಪ್ಪಿದ ಯಡಿಯೂರಪ್ಪ ಸರಕಾರಕ್ಕೆ ಆಸಕ್ತಿ ಇಲ್ಲದ ಕಾರಣ ಹೋರಾಟ ತೀವ್ರವಾಗಿತ್ತು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಉಪವಾಸ ಕುಳಿತಿದ್ದ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿಯವರ ಜೊತೆಗೆ ಸರಕಾರದ ವಿವಿಧ ಸಚಿವರು ಸಿಎಂ ಅವರ ಪರವಾಗಿ ಮಾತನಾಡಿದ ಕಾರಣ, ಧರಣಿ ಕೈಬಿಡಲಾಗಿದೆ. ಸರಕಾರ 40 ದಿನಗಳ ಕೊನೆಯ ಅವಕಾಶವನ್ನು ತೆಗೆದುಕೊಂಡಿದ್ದು ಅದನ್ನು ತಪ್ಪಿದಲ್ಲಿ ಮುಂದಿನ ಉಗ್ರ ಹೋರಾಟದ ರೂಪ ಕೊಡಲಾಗುವುದು ಎಂದು ಮಠದ ಹೇಳಿಕೆಯನ್ನು ಆಧರಿಸಿ ಹೋರಾಟ ಕೈಬಿಡಲಾಗಿದೆ.
ಹೋರಾಟದಲ್ಲಿ ರಾಜ್ಯ ಕಾರ್ಯದರ್ಶಿ ಸುರೇಶ ಡೊಣ್ಣಿ, ಕೊಪ್ಪಳ ಜಿಲ್ಲಾ ಧರ್ಮದರ್ಶಿ ರಾಮಣ್ಣ ಕಲ್ಲನವರ, ತಾಲೂಕ ಅಧ್ಯಕ್ಷ ಶರಣಪ್ಪ ನಾಯಕ್, ಮಂಜುನಾಥ ಜಿ. ಗೊಂಡಬಾಳ, ಜಿಲ್ಲಾ ಕಾರ್ಯದರ್ಶಿ ಶಿವಮೂರ್ತಿ ಗುತ್ತೂರ್, ಮಾರ್ಕಂಡಪ್ಪ ಕಲ್ಲನವರ, ಗೋವಿಂದಪ್ಪ ಬಂಡಿ, ಪಟ್ಟಣ ಪಂಚಾಯತಿ ಸದಸ್ಯ ರುಕ್ಮಣ್ಣ ಶಾವಿ, ಹನುಮಂತಪ್ಪ ಗುದಗಿ, ಮುದಿಯಪ್ಪ ಅಡವಳ್ಳಿ ತಿಗರಿ, ವೀರಪ್ಪ ವಾಸ್ತೆನೂರ ಕವಲೂರ, ಬಸವರಾಜ ಶಹಪೂರ, ವಿರುಪಾಕ್ಷಗೌಡ್ರು ಗಂಗನಾಳ, ಬೀಮನಗೌಡ ಪೋ.ಪಾ., ವಿ. ಬಿ. ಬದೂರ, ವೆಂಕಟೇಶ ಹಲವಾಗಲಿ, ಪ್ರಶಾಂತ ಕರಡಿ, ಉಮೇಶಗೌಡ ಪಾಟೀಲ್, ಭರಮಜ್ಜ ಬ್ಯಾನಿ ಹನುಕುಂಟಿ, ಮಲ್ಲಿಕಾರ್ಜುನ ಕಲ್ಲನವರ, ಹನುಮಂತಪ್ಪ, ಯಲ್ಲಪ್ಪ ಕರಡಿ ಇತರರು ಇದ್ದರು.
ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯೋತ್ಸವ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗಂಗಾವತಿ
ತಾಲೂಕಿನ ಶ್ರೀರಾಮನಗರದ ಶ್ರೀ ವಿದ್ಯಾನಿಕೇತನ ಪಬ್ಲಿಕ್‌ಶಾಲೆಯಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಜಯಂತಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯ ಅಧ್ಯಕ್ಷ ಸೂರಿಬಾಬು ನೆಕ್ಕಂಟಿಯವರು ಕಿತ್ತೂರು ರಾಣಿ ಚೆನ್ನಮ್ಮನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಕನ್ನಡ ಭಾಷಾ ಶಿಕ್ಷಕರಾದ ಮಂಜುನಾಥ, ಕಿತ್ತೂರು ರಾಣಿ ಚೆನ್ನಮ್ಮನವರ ಬಾಲ್ಯದ ಜೀವನ, ಬ್ರಿಟೀಷರ ವಿರುದ್ಧ ಹೋರಾಡಿದ ಸಂದರ್ಭ, ಹಾಗೂ ತಮ್ಮ ಆಡಳಿತದ ಅವಧಿಯಲ್ಲಿ ಅವರು ಎದುರಿಸಿದ ಸವಾಲುಗಳನ್ನು ಕುರಿತು ವಿವರಿಸಿದರು.
ಸಂಸ್ಥೆಯ ಅಧ್ಯಕ್ಷ ಸೂರಿಬಾಬು ನೆಕ್ಕಂಟಿ ಮಾತನಾಡಿ, ಕಿತ್ತೂರು ಚೆನ್ನಮ್ಮನವರು ಒಬ್ಬ ಮಹಿಳೆಯಾದರೂ ನಾಡಿನ ರಕ್ಷಣೆಗಾಗಿ ಹಾಗೂ ಕಿತ್ತೂರಿನ ಸ್ವಾತಂತ್ರಕ್ಕಾಗಿ ತಮ್ಮ ಪ್ರಾಣದ ಹಂಗನ್ನು ತೊರೆದು ಇಡೀ ಜಗತ್ತಿಗೆ ಸ್ತ್ರೀಶಕ್ತಿ ತೋರಿದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ. ಅವರ ಧೈರ್ಯ, ಸಾಹಸ ಹಾಗೂ ಸಾಧನೆ ಮತ್ತು ನಾಡು ನುಡಿಯ ರಕ್ಷಣೆಗಾಗಿ ಅವರು ಅನುಸರಿಸಿದ ಆದರ್ಶ ಗುಣಗಳನ್ನು ನಾವೆಲ್ಲರೂ ಅನುಸರಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಕೃಷ್ಣವೇಣಿ, ಶಾಲೆಯ ಶಿಕ್ಷಕ ಮತ್ತು ಸಿಬ್ಬಂದಿ ವರ್ಗ ಹಾಗೂ ಪಾಲಕರು ಭಾಗವಹಿಸಿದ್ದರು.
ಪಕ್ಷದ ಸೂಚನೆಯಂತೆ ಗುರಿಕಾರ ಗೆಲುವಿಗೆ ಶ್ರಮ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗಜೇಂದ್ರಗಡ
ಪಶ್ಚಿಮ ಪದವೀಧರರ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರಗೆ ಜೆಡಿಎಸ್ ಬೆಂಬಲ ಸೂಚಿಸಿದೆ. ಹೀಗಾಗಿ ಗುರಿಕಾರ ಅವರ ಗೆಲುವಿಗೆ ಶ್ರಮಿಸಲಾಗುವುದು ಎಂದು ಜೆಡಿಎಸ್ ಪಕ್ಷದ ತಾಲೂಕಾಧ್ಯಕ್ಷ ಎಂ.ವೈ.ಮುಧೋಳ ಹೇಳಿದರು.
ಈ ಕುರಿತು ಶನಿವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಳೆದ 6 ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳಿಂದಾಗಿ ಸಾವಿರಾರು ಉದ್ಯೋಗ ಸೃಷ್ಠಿಸುತ್ತಿದ್ದ ಸಣ್ಣ ಕೈಗಾರಿಕೆಗಳು ಬಾಗಿಲು ಹಾಕಿ ರೈತರು ಹಾಗೂ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತ ದೇಶ ಕಟ್ಟುವ ಯುವಸಮೂಹ ಅದರಲ್ಲೂ ಪದವೀಧರರಿಗೆ ಉದ್ಯೋಗ ಸೃಷ್ಠಿಸುವಲ್ಲಿ ಮೋದಿ ನೇತೃತ್ವದ ಸರ್ಕಾರ ವಿಫಲವಾಗಿದೆ. ಪರಿಣಾಮ ನಿರುದ್ಯೋಗ ಪ್ರಮಾಣ ಹೆಚ್ಚಾಗಿ ಪದವೀಧರರು ಉದ್ಯೋಗವಿಲ್ಲದೆ ಪರದಾಡುತ್ತಿದ್ದರೆ, ಇತ್ತ ಸರ್ಕಾರಿ ಸಂಸ್ಥೆಗಳ ಖಾಸಗೀಕರಣ ಹಾಗೂ ಜಿಡಿಪಿ ಕುಸಿತದಿಂದಾಗಿ ಉದ್ಯೋಗ ಕಳೆದುಕೊಂಡು ಜನತೆ ಪರದಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಪಶ್ಚಿಮ ಪದವೀಧರರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಅವರಿಗೆ ಜೆಡಿಎಸ್ ಪಕ್ಷದ ವರಿಷ್ಠರು ಹಾಗೂ ಅಭ್ಯರ್ಥಿ ಶಿವಶಂಕರ ಕಲ್ಲೂರ ತಟಸ್ಥವಾಗಿ ಉಳಿಯುವ ಮೂಲಕ ಬೆಂಬಲ ನೀಡಿದ್ದಾರೆ. ಅಲ್ಲದೆ ಈ ಹಿಂದಿನ ಚುನಾವಣೆಯಲ್ಲಿ ನಮ್ಮ ಜಿಲ್ಲೆಯವರು ಎಂದು ಎಸ್.ವಿ. ಸಂಕನೂರು ಅವರಿಗೆ ಜಿಲ್ಲೆಯ ಪದವೀಧರರು ಬೆಂಬಲಿಸಿ ಗೆಲ್ಲಿಸಿದ್ದರು. ಆದರೆ ಸಂಕನೂರ ಅವರು ಪದವೀಧರರ ಸಮಸ್ಯೆಗಳ ಪರಿಹಾರ ಕಂಡುಕೊಳ್ಳುವಲ್ಲಿ ಸದನದ ಒಳಗೆ ಹಾಗೂ ಹೊರಗೆ ವಿಫಲವಾಗಿದ್ದಾರೆ.
ಪರಿಣಾಮ ಈ ಬಾರಿ ಪಶ್ಚಿಮ ಪದವೀಧರರ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಅವರಿಗೆ ಈಗಾಗಲೇ ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಜನರ ನಂಬಿಕೆ ಹಾಗೂ ವಿಶ್ವಾಸಕ್ಕೆ ಘಾಸಿ ಮಾಡುತ್ತಿರುವ ಬಿಜೆಪಿಗೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲು ಹಾಗೂ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಅವರನ್ನು ಗೆಲ್ಲಿಸಲು ತಾಲೂಕಿನ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಶ್ರಮಿಸಬೇಕೆಂದು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ತನಿಖೆ ಹೆಸರಲ್ಲಿ ಅಮಾಯಕರನ್ನು ಥಳಿಸಿದ ಪಿಎಸ್ಐ
ಕಾರಟಗಿ ಮರ್ಡರ್ ಕೇಸ್‌ನಲ್ಲಿ ಅಮಾನವೀಯ ವರ್ತನೆ; ಪಿಎಸ್ಐ ವಿರುದ್ದ ಮಾನವ ಹಕ್ಕು ಆಯೋಗಕ್ಕೆ ದೂರು
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಜಿಲ್ಲೆಯ ಕಾರಟಗಿ ಪಿಎಸ್ಐ ಅವಿನಾಶ ಕಾಂಬ್ಲೆ ಕಾರಟಗಿ ಮರ್ಡರ್ ಕೇಸ್ ಆರೋಪಿಗಳ ಪತ್ತೆ ಮಾಡುವ ಭರದಲ್ಲಿ ಅಮಾಯಕರನ್ನು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪಿಎಸ್ಐಯಿಂದ ಥಳಿಸಿಕೊಂಡಿರೋ ಧಾರವಾಡ ಜಿಲ್ಲೆ ಮದಾರಮಡ್ಡಿ ಮೂಲದ ಇಬ್ಬರು ಗ್ಲಾಸ್ ಸ್ಟೀಮ್ ಜೋಡಿಸುವ ಕಾರ್ಮಿಕರು ಹಕ್ಕು ಆಯೋಗಕ್ಕೆ ದೂರು ನೀಡಿದ್ದಾರೆ.
ಅ.17 ರಂದು ಕೊಪ್ಪಳ ಜಿಲ್ಲೆ ಕಾರಟಗಿ ಪಟ್ಟಣದಲ್ಲಿ ದಂಪತಿ ಮೇಲೆ ರಾಡ್‌ನಿಂದ ಹಲ್ಲೆ ಮಾಡಿ, ಮಹಿಳೆ ಕೊಲೆ ಮಾಡಲಾಗಿತ್ತು. ಕೊಲೆ ಆರೋಪಿಗಳ ಪತ್ತೆಗೆ ಹೊರಟ ಕಾರಟಗಿ ಪಿಎಸ್ಐ ಅವರೇ ದಾರಿ ತಪ್ಪಿದ್ದಾರೆ. ಗಂಗಾವತಿ ಲಾಡ್ಜ್‌ನಲ್ಲಿ ವಾಸ್ತವ್ಯ ಮಾಡಿದ್ದ ಇಬ್ಬರು ಕಾರ್ಮಿಕರನ್ನು ಕೊಲೆ ಆರೋಪಿಗಳು ಎಂದು ಶಂಕಿಸಿದ್ದಾರೆ. ಮಧ್ಯರಾತ್ರಿ 1.30ರ ಸುಮಾರಿಗೆ ಕಾರಟಗಿ ಪೊಲೀಸ್ ಠಾಣೆಗೆ ಕರೆ ತಂದು ಕೊಲೆ ಮಾಡಿದ್ದಾಗಿ ಒಪ್ಪಿಕೊಳ್ಳುವಂತೆ ಹಿಗ್ಗಾ- ಮುಗ್ಗ ಥಳಿಸಿದ್ದಾರೆ ಎಂದು ದೂರಲಾಗಿದೆ.
ಅಷ್ಟೊತ್ತಿಗೆ ಕನಕಗಿರಿ ಪಿಎಸ್ಐ ಪ್ರಶಾಂತ ನೇತೃತ್ವದ ಮತ್ತೊಂದು ತಂಡ, ನಿಜವಾದ ಆರೋಪಿಗಳನ್ನು ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ಪತ್ತೆ ಮಾಡಿದೆ. ವಾಸ್ತವ ತಿಳಿದು, ಅಮಾಯಕರ ಕ್ಷಮೆ ಕೇಳಬೇಕಿದ್ದ ಪಿಎಸ್ಐ ಅವಿನಾಶ ಕಾಂಬ್ಲೆ ಓವರ್ ಸ್ಮಾರ್ಟ್ ಪೊಲೀಸಿಂಗ್ ಮಾಡಿದ್ದಾರೆ. ಅಮಾಯಕರ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ 96(ಸಿ) ಅಡಿ ಪ್ರಕರಣ ದಾಖಲಿಸಿಕೊಂಡು, ನೋಟಿಸ್ ನೀಡಿದ್ದಾರೆ. ಅಕ್ಟೋಬರ್ 23ರಂದು ಗಂಗಾವತಿ ಕೋರ್ಟ್‌ಗೆ ಹಾಜರಾಗಿ ದಂಡ ಪಾವತಿಸುವಂತೆ ಸೂಚಿಸಿದ್ದಾರಂತೆ.

ಸಿಡಿಆರ್ ಯಡವಟ್ಟು?: ಅ.17ರ ಸಂಜೆ 7.30ರ ಸುಮಾರಿಗೆ ಕಾರಟಗಿ ಪಟ್ಟಣ ಕ್ರೌರ್ಯದ ಘಟನೆಯೊಂದಕ್ಕೆ ಸಾಕ್ಷಿ ಆಗಿತ್ತು. ಕಾರಟಗಿಯ ಬಸವೇಶ್ವರ ನಗರದಲ್ಲಿ ಬಾಗಲಕೋಟೆ ಜಿಲ್ಲೆ ಮುಧೋಳ ಮೂಲದ ನವ ದಂಪತಿ ಮೇಲೆ ಅಪರಿಚಿತರು ರಾಡ್‌ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದರು. ಘಟನೆಯಲ್ಲಿ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಪತಿ ಸ್ಥಿತಿ ತೀರಾ ಚಿಂತಾಜನಕವಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಅಧಿಕಾರಿಗಳು, ಎರಡು ತಂಡ ರಚಿಸಿ ತನಿಖೆಗೆ ಸೂಚಿಸಿದ್ದಾರೆ.
ಕನಕಗಿರಿ ಪೊಲೀಸ್ ಪಿಎಸ್ಐ ಪ್ರಶಾಂತ ಅವರ ತಂಡ ಮುಧೋಳ ಕಡೆ ಮುಖ ಮಾಡಿದೆ. ಕಾರಟಗಿ ಪಿಎಸ್ಐ ಅವಿನಾಶ ಅವರ ತಂಡ, ಗಂಗಾವತಿ ಕಡೆ ಮುಖ ಮಾಡಿದೆ. ತನಿಖೆಗೆ ತಾಂತ್ರಿಕ ಸಹಾಯ ಪಡೆದುಕೊಂಡ ಕಾರಟಗಿ ಪಿಎಸ್ಐ ಯಡವಟ್ಟು ಮಾಡಿಕೊಂಡಿದ್ದಾರೆ. ಬೇರೆ ಜಿಲ್ಲೆಯಿಂದ ಕಾರಟಗಿ ಸುತ್ತಮುತ್ತ ಓಡಾಡಿರುವ ಮತ್ತು ಕೆಲ ದಿನ ಕಾರಟಗಿ ಲಾಡ್ಜ್‌ನಲ್ಲಿ ವಾಸ್ತವ್ಯ ಮಾಡಿರುವ ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ಮಾಡುವ ನೆಪದಲ್ಲಿ ಧಾರವಾಡ ಮೂಲದ ಅಮಾಯಕ ಕಾರ್ಮಿಕರ ಮೇಲೆ ಕೈ ಮಾಡಿದ್ದಾರೆ.
ಧಾರವಾಡ ಜಿಲ್ಲೆ ಮದಾರಮಡ್ಡಿ ಗ್ರಾಮದ ಸುಹೇಬ ಕರಡಿಗುಡ್ಡ ಮತ್ತು ಮೋಹಮ್ಮದ ಜಮೀಲ ಎಂಬ ಇಬ್ಬರು ಕಾರ್ಮಿಕರು ದಿನಾಂಕ: 14-10-2020 ರಂದು ಕಾರಟಗಿ ಪಟ್ಟಣಕ್ಕೆ ಆಗಮಿಸಿ, ಲಕ್ಷ್ಮೀ ವೆಂಕಟೇಶ್ವರ ಟೂರಿಸ್ಟ್ ಹೋಮ್‌ನಲ್ಲಿ ತಂಗಿದ್ದಾರೆ. ಕೊಲೆ ನಡೆದ ಅ.17ರ ಸಂಜೆ 6ಕ್ಕೆ ಲಾಡ್ಜ್ ಖಾಲಿ ಮಾಡಿ, ಕಾರಟಗಿ ಸಮೀಪದ ಸಮೀಪದ ಸಾಲುಂಚಿಮರ ಗ್ರಾಮಕ್ಕೆ ಆಗಮಿಸಿ ಹೊಸ ಮನೆಯ ಬಾತ್ ರೂಮ್‌ನಲ್ಲಿ ಗ್ಲಾಸ್ ಸ್ಟೀಮ್ ಅಳವಡಿಸಿ ಗಂಗಾವತಿಗೆ ಹೋಗಿದ್ದಾರೆ.
ಗಂಗಾವತಿಯಲ್ಲಿಯೂ ಒಬ್ಬರ ಮನೆಯಲ್ಲಿ ಕೆಲಸ ಇದ್ದರಿಂದ ಗಂಗಾವತಿಯ ಲಾಡ್ಜ್‌ವೊಂದರಲ್ಲಿ ತಂಗಿದ್ದಾರೆ. ವಾಸ್ತವದಲ್ಲಿ ದಂಪತಿ ಕೊಲೆ ಮಾಡಿದ ಆರೋಪಿಗಳ ‘ಮೋಡ್ ಆಫ್ ಆಪರೇಷನ್ ‘ ಪೊಲೀಸರು ಗೆಸ್ ಮಾಡಿದಂತೆಯೇ ಈ ಇಬ್ಬರು ಕಾರ್ಮಿಕರ ಪ್ರವಾಸ ಚಟುವಟಿಕೆ ಇದೆ. ಮಧ್ಯರಾತ್ರಿ 1ಕ್ಕೆ ಗಂಗಾವತಿ ಲಾಡ್ಜ್‌ಗೆ ನುಗ್ಗಿ ಇಬ್ಬರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ರಾತ್ರಿ ಪೂರ್ತಿ ಟ್ರೀಟ್‌ಮೆಂಟ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪಿಎಸ್ಐ ಮಾಡಿದ ಯಡವಟ್ಟಿನ ಬಗ್ಗೆ ನೊಂದವರು ಕೊಪ್ಪಳ ಎಸ್ಪಿ ಅವರಿಗೂ ದೂರು ನೀಡಿದ್ದಾರೆ.
ಉಚಿತ ಲಸಿಕೆ ಕೊಡಲು ಸರಕಾರಕ್ಕೆ ತಾಕತ್ ಇಲ್ವಾ? ಎಚ್.ಕೆ. ಪಾಟೀಲ
ಕೇಂದ್ರ, ರಾಜ್ಯ ಸರಕಾರ ವಿವೇಚನೆಯಿಂದ ಕೆಲಸ ಮಾಡಲಿ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಗೆದ್ದರೆ ಕೋವಿಡ್-19ಗೆ ಉಚಿತ ಲಸಿಕೆ ನೀಡುವುದಾಗಿ ಹೇಳಿರುವ ಬಿಜೆಪಿ ಮುಖಂಡರಿಗೆ ಇಡೀ ದೇಶದ ಜನರಿಗೆ ಉಚಿತ ಲಸಿಕೆ ಕೊಡಲು ತಾಕತ್ ಇಲ್ವಾ? ಎಂದು ಶಾಸಕ ಎಚ್.ಕೆ.ಪಾಟೀಲ ಪ್ರಶ್ನಿಸಿದರು.
ಕೊಪ್ಪಳದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬರಿಗೂ ಕೋವಿಡ್-19ಗೆ ಉಚಿತ ಲಸಿಕೆ ಕೊಡಬೇಕಾದದ್ದು ಆಡಳಿತದಲ್ಲಿರುವ ಸರಕಾರದ ಪ್ರಮುಖ ಜವಾಬ್ದಾರಿ ಎಂದರು.
ಮತ್ತೇ ಮುಖ್ಯಮಂತ್ರಿಯಾದರೆ ಉಚಿತ ಅಕ್ಕಿ ನೀಡುತ್ತೇನೆ ಎಂದಿರುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಂದ್ರೆ ನಾನು ಅಂತಾ ತಿಳಿದುಕೊಂಡಿರಬಹುದು ಎಂದು ಉತ್ತರಿಸಿದರು.
ನವೆಂಬರ್‌ನಲ್ಲಿ ಶಾಲೆ, ಕಾಲೇಜು ಆರಂಭಿಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ಈ ನಿರ್ಧಾರವನ್ನು ಮರು ಪರಿಶೀಲನೆ ಮಾಡುವುದಕ್ಕಿಂತ ವಿರೋಧ ಪಕ್ಷಗಳನ್ನು, ಆರೋಗ್ಯ ಮತ್ತು ಶಿಕ್ಷಣ ತಜ್ಞರನ್ನು ಒಳಗೊಂಡು ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದರು.
ತರಾತುರಿಯಲ್ಲೇ ಶಾಲೆ- ಕಾಲೇಜು ಆರಂಭ ಮಾಡುವುದು ಸಮಂಜಸವಲ್ಲ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವೇಚನೆಯಿಂದ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಚುನಾವಣೆ ನಂತರ ಕಾಂಗ್ರೆಸ್‌ನಲ್ಲಿ ಸಿಎಂ ಯಾರು ಅಂತಾ ನಿರ್ಣಯ ಆಗುತ್ತೆ. ಈಗಲೇ ಉತ್ತರ ಕರ್ನಾಟಕಕ್ಕೆ ಸಿಎಂ ಸ್ಥಾನದ ವಿಚಾರಕ್ಕೆ ಸೂಕ್ತ ಕಾಲ ಇದಲ್ಲ. ಇಂಥ ವಿಷಯ ಹರಟೆಯ ಮಾತಾಗಬಾರದು. ಅದೆಲ್ಲ ಬಿಜೆಪಿಯವರ ಆಂತರಿಕ ಕಚ್ಚಾಟ. ಅದರ ಬಗ್ಗೆ ಹೆಚ್ಚೇನೂ ಹೇಳಲಾರೆ ಎಂದರು.
ಈ ಸಂದರ್ಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ಜಿಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಕೆ.ಬಸವರಾಜ ಹಿಟ್ನಾಳ, ಶಾಂತಣ್ಣ ಮುದಗಲ್, ಮುತ್ತುರಾಜ ಕುಷ್ಟಗಿ, ರವಿ ಕುರಗೋಡ ಮತ್ತಿತರರು ಇದ್ದರು.
ಚನ್ನಮ್ಮ ವಿಜಯೋತ್ಸವ ಆಚರಿಸದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಶಿರಹಟ್ಟಿ
ವೀರರಾಣಿ ಕಿತ್ತೂರು ಚೆನ್ನಮ್ಮ 197ನೇ ವಿಜಯೋತ್ಸವ ಹಾಗೂ 242ನೇ ಜಯಂತ್ಯುತ್ಸವ ಆಚರಣೆ ಮಾಡದ ವಿವಿಧ ಇಲಾಖೆಗಳ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಶುಕ್ರವಾರ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ವೀರಶೈವ ಪಂಚಮಸಾಲಿ ಸಮಾಜ ಹಾಗೂ ಕರವೇ ವತಿಯಿಂದ ಮನವಿ ಸಲ್ಲಿಸಲಾಯಿತು.
ತಾಲೂಕು ವೀರಶೈವ ಪಂಚಮಸಾಲಿ ಯುವ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಕಬಾಡಿ, ಮುಖಂಡ ರವಿ ಹಳ್ಳಿ, ಕರವೇ ಅಧ್ಯಕ್ಷ ಬಸವರಾಜ ವಡವಿ ಮಾತನಾಡಿ, ಸ್ವಾತಂತ್ರ್ಯ ಸಂಗ್ರಮದ ಬೆಳ್ಳಿಚುಕ್ಕಿ, ಬ್ರಿಟಿಷರ ವಿರುದ್ಧ ದಂಗೆ ಎದ್ದ ದೇಶದ ಮೊದಲ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮನ ಜಯಂತ್ಯುತ್ಸವ ಹಾಗೂ ವಿಜಯೋತ್ಸವವನ್ನು ಸರಳವಾಗಿ ಆಚರಿಸಲು ಸರಕಾರದ ಸೂಚನೆ ಇದ್ದರೂ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ಲಕ್ಷ್ಯ ಮಾಡಿದ್ದಾರೆ.
ಕ್ಷೇತ್ರ ಸಮನ್ವಯ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಲೋಕೋಪಯೋಗಿ ಇಲಾಖೆ, ಪಿಆರ್‌ಇಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆಗಳು ಚನ್ನಮ್ಮ ಜಯಂತಿ ಆಚರಿಸಿಲ್ಲ. ಈ ಇಲಾಖೆಗಳ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮೂಲಕ ಆಗ್ರಹಿಸಿದ್ದಾರೆ.
ಶರಣಪ್ಪ ಹೊಸೂರ, ಮಂಜುನಾಥ ಬಳಿಗಾರ, ಶಿವಶಂಕರ ಕಲ್ಲಪ್ಪನವರ, ನಿಂಗರಾಜ ತುಳಿ, ಈಶ್ವರ ಕಲ್ಯಾಣಿ, ಮಲ್ಲೇಶ ವರವಿ, ಫಕ್ಕೀರಪ್ಪ ತುಳಿ, ಜಗದೀಶ ಬಳಿಗಾರ, ರಮೇಶ ಕಬಾಡರ, ಬಸವರಾಜ ಮೇಟಿ, ಬಸವರಾಜ ಬಳಿಗಾರ, ದೇವಪ್ಪ ಬಳಿಗಾರ, ಉಮೇಶ ಬಕ್ಕಸದ, ಬಸವರಾಜ ತುಳಿ, ಬಸವರಾಜ ಕಲ್ಯಾಣಿ ಉಪಸ್ಥಿತರಿದ್ದರು.

