ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಕೋವಿಡ್-19 ಹರಡುವಿಕೆ ತಡೆಗಟ್ಟುವುದಕ್ಕಾಗಿ ಜಾಗೃತಿ ಮೂಡಿಸಲು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಅ. 17ರಂದು ಹಮ್ಮಿಕೊಳ್ಳಲಾದ ‘ಕೋವಿಡ್-19 ಪ್ರಚಾರಾಂದೋಲನ’ ‘ಸುರಕ್ಷಿತರಾಗಿರಿ ಮತ್ತು ಇತರರನ್ನು ಸುರಕ್ಷಿತವಾಗಿರಿಸಿ’ ಜನಾಂದೋಲನ ಜಾಥಾಕ್ಕೆ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಭಾರಿ ಅಧ್ಯಕ್ಷೆ ಬಿ.ಎಸ್. ರೇಖಾ ಚಾಲನೆ ನೀಡಿದರು.
ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಗರಸಭೆ ಹಾಗೂ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಸಹಯೋಗದಲ್ಲಿ ಕಾರ್ಯಕ್ರಮ ನಡೆಸಲಾಯಿತು.
ಆರೋಗ್ಯ ರಕ್ಷಣೆ ಮಾಡಿಕೊಳ್ಳಿ: ಜಾಥಾಕ್ಕೆ ಚಾಲನೆ ನೀಡಿ, ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ನ್ಯಾ.ಬಿ.ಎಸ್. ರೇಖಾ, ಕೋವಿಡ್-೧೯ ಹರಡುವಿಕೆ ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ನ್ಯಾಯಾಲಯ, ಸರ್ಕಾರಿ ಕಚೇರಿಗಳು, ಸಾರ್ವಜನಿಕ ಸ್ಥಳಗಳಲ್ಲಿ ಜನರು ಮುಖಗವಸು (ಮಾಸ್ಕ್) ಹಾಕಿಕೊಳ್ಳದಿದ್ದರೆ ತಿಳಿಹೇಳಿ, ಜಾಗೃತಿ ಮೂಡಿಸುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ‘ಕೋವಿಡ್-19 ಪ್ರಚಾರಾಂದೋಲನ’ ‘ಸುರಕ್ಷಿತರಾಗಿರಿ ಮತ್ತು ಇತರರನ್ನು ಸುರಕ್ಷಿತವಾಗಿರಿಸಿ’ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕೊರೊನಾ ಸಾಂಕ್ರಾಮಿಕ ರೋಗವು ಶ್ರೀಮಂತ, ಬಡವ ಎಂಬ ಭೇದವಿಲ್ಲದೆ ಎಲ್ಲರನ್ನೂ ಕಾಡುತ್ತಿದೆ. ಔ?ಧ ಲಭ್ಯವಾಗುವ ತನಕ ಜಾಗ್ರತೆಯಿಂದ ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಆಗಾಗ ಕೈಗಳನ್ನು ತೊಳೆದುಕೊಳ್ಳುವುದು, ಸಾಮಾಜಿಕ ಅಂತರ ಕಾಪಾಡಿ, ರೋಗದ ವಿರುದ್ಧ ಹೋರಾಡಬೇಕು ಎಂದರು.
ತ್ವರಿತಗತಿ ವಿಶೇ? ನ್ಯಾಯಾಲಯ-೧ (ಪೋಕ್ಸೋ ನ್ಯಾಯಾಲಯ)ದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಎಸ್.ಎಂ. ಜಾಲವಾದಿ, ಹಿರಿಯ ಸಿವಿಲ್ ನ್ಯಾಯಾಧೀಶರು (ಸಿಜೆಎಂ) ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಭಾರಿ ಸದಸ್ಯ ಕಾರ್ಯದರ್ಶಿ ಕುಮಾರ ಎಸ್., ಹೆಚ್ಚುವರಿ ಸಿವಿಲ್ ನ್ಯಾಯಾಧೀಶ (ಜೆ.ಎಂ.ಎಫ್.ಸಿ. ನ್ಯಾಯಾಲಯ) ಮನು ಶರ್ಮಾ, ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ನ ಉದಯ ಕುಲಕರ್ಣಿ, ವಕೀಲರು ಮತ್ತು ವಿವಿಧ ಇಲಾಖೆಗಳ ಹಾಗೂ ಜಿಲ್ಲಾ ನ್ಯಾಯಾಲಯದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ವತಿಯಿಂದ ಮಾಸ್ಕ್ ವಿತರಿಸಲಾಯಿತು.
ಕೋವಿಡ್ ಜಾಗೃತಿ ಜನಾಂದೋಲನ ಜಾಥಾಕ್ಕೆ ನ್ಯಾ. ರೇಖಾ ಚಾಲನೆ
ಹೆಬ್ಬಾಳ ಗ್ರಾಮದ ಜನತೆಗೆ ಮೂಲಸೌಕರ‍್ಯ ಒದಗಿಸಲು ಕರವೇ ಆಗ್ರಹ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಶಿರಹಟ್ಟಿ
ಶನಿವಾರ ತಾಲೂಕಾ ಕರವೇ ಘಟಕದ ವತಿಯಿಂದ ಹೆಬ್ಬಾಳ ಗ್ರಾಮದ ಸಾರ್ವಜನಿಕರಿಗೆ ಮೂಲಸೌಕರ‍್ಯಗಳನ್ನು ಪೂರೈಸಬೇಕೆಂದು ಗ್ರಾಪಂ ಪಿಡಿಓಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ತಾಲೂಕಾಧ್ಯಕ್ಷ ಬಸವರಾಜ ವಡವಿ, ಹೆಬ್ಬಾಳ ಗ್ರಾಮದಲ್ಲಿ ಅನೇಕ ರಸ್ತೆಗಳು ಹದಗೆಟ್ಟಿದ್ದು, ಇರುವ ಚರಂಡಿಗಳನ್ನು ಸ್ವಚ್ಛಗೊಳಿಸದೇ ಹಾಗೇ ಬಿಟ್ಟಿದ್ದಾರೆ. ಈಗಾಗಲೇ ನೀಡಿರುವ ಆಶ್ರಯ ಮನೆಗಳು ಹಕ್ಕಪತ್ತದಲ್ಲಿರುವ ಅಳತೆಗಳಂತೆ ಫಲಾನುಭವಿಗಳಿಗೆ ನೀಡಬೇಕು. ಆಶ್ರಯ ಪ್ಲಾಟ್‌ನಿಂದ ಹೋಗುವ ಚರಂಡಿಯ ನೀರು ಪಕ್ಕದಲ್ಲಿರುವ ಕೃಷಿ ಭೂಮಿಗೆ ಹೋಗುವುದರಿಂದ ಬೆಳೆ ಹಾಳಾಗಿ ರೈತರಿಗೆ ತೊಂದರೆಯಾಗುತ್ತಿದೆ.
ಎಲ್ಲಾ ವಾರ್ಡುಗಳಲ್ಲಿ ಕುಡಿಯುವ ನೀರಿನ ಪೈಪಲೈನ್ ದುರಸ್ತಿಯಾಗಬೇಕು. ಗ್ರಾಪಂ ಪಿಡಿಓ ವಾರದಲ್ಲಿ 3 ದಿನ ಮಾತ್ರ ಕರ್ತವ್ಯಕ್ಕೆ ಬರುತ್ತಿದ್ದು ಖಾಯಂ ಪಿಡಿಓ ನೇಮಕವಾಗಬೇಕು. ಈ ಎಲ್ಲ ಬೇಡಿಕೆಗಳು 7 ದಿನಗಳಲ್ಲಿ ಈಡೇರಬೇಕು ಇಲ್ಲದೇ ಇದ್ದಲ್ಲಿ ಕರವೇ ತಾಲೂಕಾ ಘಟಕದ ವತಿಯಿಂದ ತಾಲೂಕಾ ಪಂಚಾಯತ ಕಚೇರಿ ಮುಂದೆ ಹೋರಾಟ ಮಾಡಲಾಗುವುದೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಪದವೀಧರರ ಸಮಸ್ಯೆಗೆ ಪ್ರಾಮಾಣಿಕ ಸ್ಪಂದನೆ: ಸಂಕನೂರ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರೇಗಲ್ಲ
ಪದವೀಧರರು, ಶಿಕ್ಷಕರು ಹಾಗೂ ಉಪನ್ಯಾಸಕರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಗುರಿಯೊಂದಿಗೆ ಪಶ್ಚಿಮ ಪದವೀಧರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಕ್ಷೇತ್ರ ವ್ಯಾಪ್ತಿಯ ಎಲ್ಲ ಜಿಲ್ಲೆಗಳಲ್ಲಿ ಉದ್ಯೋಗ ಮೇಳ ಆಯೋಜಿಸುವ ಮೂಲಕ ನಿರುದ್ಯೋಗ ಸಮಸ್ಯೆಗೆ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿರುವೆ ಎಂದು ಪಶ್ಚಿಮ ಪದವೀಧರರ ಕ್ಷೇತ್ರ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಹೇಳಿದರು.
ಪಟ್ಟಣದ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಹಾಗೂ ಪದವಿ ಕಾಲೇಜು ಮತ್ತು ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಮತಯಾಚನೆ ಮಾಡಿ ಅವರು ಮಾತನಾಡಿದರು.
ಕಳೆದ ಅವಧಿಯಲ್ಲಿ ಧಾರವಾಡದಲ್ಲಿ ಎರಡು, ಗದಗ, ಹಾವೇರಿ ಹಾಗೂ ಕಾರವಾರದಲ್ಲಿ ಒಟ್ಟು ೫ ಬಾರಿ ಉದ್ಯೋಗ ಮೇಳ ನಡೆಸಿದ್ದು,1,955 ಅಭ್ಯರ್ಥಿಗಳಿಗೆ ಉದ್ಯೋಗ ಒದಗಿಸಲಾಗಿದೆ. ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ಕಾಲ್ಪನಿಕ ವೇತನ ಸೌಲಭ್ಯ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿರುವೆ. 40 ವರ್ಷಗಳಿಂದ ಜನರ ಸಂಪರ್ಕದಲ್ಲಿದ್ದೇನೆ. ಈ ಕ್ಷೇತ್ರಕ್ಕೆ ನಾನು ಹೊಸಬನಲ್ಲ. ಶಿಕ್ಷಕರ, ಪದವೀಧರರ ಸಮಸ್ಯೆಗಳ ಕುರಿತು ಸದನದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಮತ್ತು ನಮ್ಮ ಬಿಜೆಪಿ ಸರ್ಕಾರ ಇದ್ದಾಗಲೂ ಸಾಕಷ್ಟು ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಿದ್ದೇನೆ.
ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಪ್ಯಾಕೇಜ್ ನೀಡುವಂತೆ ಆಗ್ರಹಿಸಿದ್ದೇನೆ. ಪಶ್ಚಿಮ ಪದವೀಧರರ ಮತಕ್ಷೇತ್ರ ಬಹಳ ದೊಡ್ಡದಾಗಿದ್ದು, ಪ್ರತಿಯೊಂದು ಗ್ರಾಮಗಳಿಗೆ ತೆರಳಿ ಪ್ರಚಾರ ಮಾಡಲು ಕಾಲಾವಕಾಶ ಸಾಲುತ್ತಿಲ್ಲ. ಈ ಚುನಾವಣೆಯ ಅಭ್ಯರ್ಥಿ ನಾನಲ್ಲ ನೀವು ಎಂದು ಭಾವಿಸುವ ಮೂಲಕ ಮತ್ತೊಮ್ಮೆ ತಮ್ಮ ಸೇವೆ ಮಾಡಲು ಆಶೀರ್ವಾದ ಮಾಡಬೇಕಿದೆ ಎಂದರು.
ರೋಣ ಬಿಜೆಪಿ ಮಂಡಲ ಅಧ್ಯಕ್ಷ ಮುತ್ತಣ್ಣ ಕಡಗದ, ಉಮೇಶ ಸಂಗನಾಳಮಠ, ಶಶಿಧರ ಸಂಕನಗೌಡ್ರ, ಆನಂದ ಕುಲಕರ್ಣಿ, ಬಸವರಾಜ ವಂಕಲಕುಂಟಿ, ನಿಂಗಪ್ಪ ಕಣವಿ, ಯಲ್ಲಪ್ಪ ಮಣ್ಣೊಡ್ಡರ, ಪ್ರಾಚಾರ್ಯ ಎಸ್.ಜಿ. ಕೇಶಣ್ಣವರ, ಡಾ| ಜಿ.ಬಿ. ಹುಲ್ಲೂರ, ವೈ.ಸಿ. ಪಾಟೀಲ, ಎನ್.ಎಂ. ಪವಾಡಿಗೌಡ್ರ, ಜಿ.ಜಿ. ಕೋಟಿ, ಜಿ.ಎಸ್. ಮಠಪತಿ, ಪ.ಪಂ ಸದಸ್ಯರಾದ ಶ್ರೀಶೈಲಪ್ಪ ಬಂಡಿಹಾಳ, ಫಕೀರಪ್ಪ ಮಳ್ಳಿ, ಈರಪ್ಪ ಜೋಗಿ, ಕುಮಾರಸ್ವಾಮಿ ಕೋರಧ್ಯಾನಮಠ, ಮೌನೇಶ ಹೊಸಮನಿ, ಜ್ಯೋತಿ ಪಾಯಪ್ಪಗೌಡ್ರ, ಮಂಜುಳಾ ಹುರಳಿ ಸೇರಿದಂತೆ ಸಿಬ್ಬಂದಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.
ಹೊಲದಲ್ಲಿ ಬೆಳೆದಿದ್ದ ಹತ್ತಿ ಗಿಡ ಕೊಯ್ದು ಹಾನಿ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ
ನರಗುಂದ ತಾಲೂಕಿನ ಕುರುಗೋವಿನಕೊಪ್ಪದ ಬಸಪ್ಪ ಚಂದ್ರ ಅವರ ಜಮೀನಿನಲ್ಲಿ ಬೆಳೆದ ಹತ್ತಿಯಲ್ಲಿ ಒಂದು ಎಕರೆದಷ್ಟನ್ನು ದುಷ್ಕರ್ಮಿಗಳು ಕೊಯ್ದು ಹಾಕಿದ ಘಟನೆ ಅ. 16 ರ ಮಧ್ಯರಾತ್ರಿ ನಡೆದಿದೆ.
ಸಾಲ-ಸೋಲ ಮಾಡಿ ತಮ್ಮ ಹೊಲದಲ್ಲಿ ಹತ್ತಿ ಬೆಳೆದಿರುವ ಬಡ ರೈತ ಬಸಪ್ಪ ಚಂದ್ರ ಅವರು ಈ ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದಾರೆ, ಈ ಬಾರಿ ಅವರ ಸಹೋದರ ಭಗವಂತ ಚಂದ್ರ ಅವರ ಒಂದು ಎಕರೆ ಜಮೀನು ಲಾವಣಿ ಪಡೆದು ಅದನ್ನು ಉಳುಮೆ ಮಾಡಿ ಹತ್ತಿ ಬಿತ್ತಿದ್ದರು. ಒಟ್ಟು 2.10 ಎಕರೆಯಲ್ಲಿ ಸುಮಾರು ಒಂದು ಎಕರೆಯಷ್ಟು ಹತ್ತಿ ಬೆಳೆಯನ್ನು ಗಿಡಗಳ ಸಮೇತ ದುಷ್ಕರ್ಮಿಗಳು ಕೊಯ್ದು ಹಾಕಿದ್ದಾರೆ.
ಹಿರೇಕೊಪ್ಪ ಕ್ಷೇತ್ರದ ತಾಪಂ. ಸದಸ್ಯ ಗಿರೀಶ ನೀಲರಡ್ಡಿ, ಕನ್ನಡ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ವಿಜಯ ಕೋತಿನ ಹಾಗೂ ಗ್ರಾಮಸ್ಥರಾದ ರಾಮಣ್ಣ ಕಮಕೇರಿ, ಕೃಷ್ಟಪ್ಪ ಸತರಡ್ಡಿ, ಗೋಪಾಲ ಸತರಡ್ಡಿ, ನಾರಾಯಣ ಬಾಲರಡ್ಡಿ ಜಮೀನಿಗೆ ತೆರಳಿ, ಹಾಳಾದ ಹತ್ತಿ ಬೆಳೆ ಪರಿಶೀಲಿಸಿದರು. ಸ್ಥಳೀಯ ಪೊಲೀಸ್ ಠಾಣೆಗೆ ಬಸಪ್ಪ ಚಂದ್ರ ದೂರು ದಾಖಲಿಸಿದ್ದಾರೆ. ಸಿಪಿಐ ಡಿ.ಬಿ. ಪಾಟೀಲ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಹೊಲದಲ್ಲೇ ಕೊಳೆಯುತ್ತಿದೆ ಶೇಂಗಾ ಬೆಳೆ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಮಳೆಯಾದರೆ ಕೇಡಲ್ಲ, ಮನೆ ಮಗ ಉಂಡರೆ ಕೇಡಲ್ಲ ಎನ್ನುವ ಗಾದೆ ಮಾತು ಈ ಬಾರಿ ರೈತರ ಪಾಲಿಗೆ ಸುಳ್ಳಾಗುವಂತೆ ಕಾಣುತ್ತಿದೆ. ಏಕೆಂದರೆ, ಅತಿಯಾದ ಮಳೆಯಿಂದ ಮುದ್ರಣ ಕಾಶಿ ಗದಗ ಜಿಲ್ಲೆಯ ಅನ್ನದಾತರು ಸಂಕ?ಕ್ಕೆ ಈಡಾಗಿದ್ದಾರೆ. ಫಸಲು ಕೈ ಸೇರುವ ಸಮಯದಲ್ಲಿ ಅತಿಯಾದ ಮಳೆಯಿಂದ ಬೆಳೆ ಜಮೀನಿನಲ್ಲಿ ಕೊಳೆಯುವಂತಾಗಿದೆ.
ಮುದ್ರಣ ಕಾಶಿಯಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ಉಂಟಾಗಿದೆ. ಫಸಲು ಪಡೆಯುವ ವೇಳೆಯಲ್ಲಿ ಅತಿಯಾದ ಮಳೆ ಸುರಿದಿದ್ದರಿಂದ ಬೆಳೆದು ನಿಂತಿರುವ ಹಾಗೂ ಕಿತ್ತು ಹಾಕಿರುವ ಶೇಂಗಾ ಜಮೀನಿನಲ್ಲಿ ಕೊಳೆಯುತ್ತಿದೆ. ತಮಗೆ ಸೂಕ್ತ ಪರಿಹಾರ ನೀಡುವಂತೆ ಅನ್ನದಾತರು ಒತ್ತಾಯ ಮಾಡುತ್ತಿದ್ದಾರೆ.
ಹೌದು. ಗದಗ ಜಿಲ್ಲೆಯ ಅನ್ನದಾತರು ತತ್ತರಿಸಿ ಹೋಗಿದ್ದಾರೆ. ಅತಿಯಾದ ಮಳೆಯಿಂದ ಬೆಳೆದ ಬೆಳೆ ಜಮೀನಿನಲ್ಲಿ ಕೊಳೆಯುವಂತಾಗಿದೆ.
ಸರ್ಕಾರ ನೆರವಿಗೆ ಬರಲಿ
ಈ ಬಾರಿ ಸಕಾಲಕ್ಕೆ ಉತ್ತಮ ಮಳೆಯಾಗಿದ್ದು, ಬೆಳೆಗಳು ಸಮೃದ್ಧವಾಗಿ ಬೆಳೆದಿದ್ದವು. ಇನ್ನೇನು ಫಸಲು ಕೈ ಸೇರುವ ಸಮಯದಲ್ಲಿ ವರುಣನ ಆರ್ಭಟಕ್ಕೆ ಬೆಳೆದ ಬೆಳೆ ಜಮೀನಿನಲ್ಲಿ ಕೊಳೆಯುವಂತಾಗಿದೆ. ಬೆಳೆ ನಾಶವಾಗಿದ್ದು, ಸರ್ಕಾರ ನಮ್ಮ ನೆರವಿಗೆ ಬರಲಿ ಎಂದು ಬೆಳೆ ಹಾನಿ ಅನುಭವಿಸಿದ ರೈತ ರುದ್ರಗೌಡ ಪಾಟೀಲ ಆಗ್ರಹಿಸಿದ್ದಾರೆ.
ಅಂದ ಹಾಗೆ ಗದಗ ಜಿಲ್ಲೆಯ ಮುಳಗುಂದ, ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಮುಂತಾದ ಭಾಗಗಳ ರೈತರು ಬೆಳೆದ ಶೇಂಗಾ ನಾಶವಾಗಿದೆ. ಫಸಲು ಕೊಡುವ ಸಮಯವಾದ್ದರಿಂದ ರೈತರು ಶೇಂಗಾ ಕಟಾವು ಮಾಡಿ ರಾಶಿ ಮಾಡಿ, ಮಾರಾಟ ಮಾಡುವ ಸಿದ್ಧತೆಯಲ್ಲಿದ್ದರು. ಆದರೆ, ಕಳೆದ ಎರಡು ವಾರಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ರೈತರು, ರೈತ ಕಾರ್ಮಿಕರು ಜಮೀನುಗಳಿಗೆ ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಶೇಂಗಾ ಬೆಳೆ ಜಮೀನಿನಲ್ಲಿ ಕೊಳೆಯುತ್ತಿದೆ. ಅತಿಯಾದ ಮಳೆಯಿಂದ ಇನ್ನುಳಿದ ಶೇಂಗಾ ಕಟಾವು ಮಾಡದ ಸ್ಥಿತಿ ನಿರ್ಮಾಣವಾಗಿದೆ. ಒಂದು ಎಕರೆ ಶೇಂಗಾಕ್ಕೆ 15ರಿಂದ 20 ಸಾವಿರ ರೂಪಾಯಿ ಖರ್ಚು ಮಾಡಿದರೂ ಬೆಳೆದ ಬೆಳೆ ರೈತರ ಕೈಗೆ ಬರುತ್ತಿಲ್ಲ. ಹೀಗಾಗಿ ಅತಿವೃಷ್ಟಿ ಪರಿಹಾರ ನೀಡಬೇಕೆಂದು ರೈತರು ಒತ್ತಾಯ ಮಾಡುತ್ತಿದ್ದಾರೆ.

ಬೆಂಬಲ ಬೆಲೆ, ವಿಮೆ ಕೊಡಿಸಲಿ: ಈ ಭಾಗದ ಹೆಸರು ಬೆಳೆ ಭಾಗಶಃ ಭೂತಾಯಿಯ ಮಡಿಲು ಸೇರಿ, ರೈತರು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದರು. ಶೇಂಗಾ ಬೆಳೆ ಸಮೃದ್ಧವಾಗಿ ಬೆಳದಿದ್ದು, ಆರ್ಥಿಕವಾಗಿ ಲಾಭ ಆಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿರುವಾಗ ಸತತ ಮಳೆಯಾಗಿದ್ದರಿಂದ ಶೇಂಗಾ ಬೆಳೆ ಜಮೀನಿನಲ್ಲಿ ಕೊಳೆಯುತ್ತಿದೆ. ಇನ್ನು ಹತ್ತಿ, ಮೆಣಸಿನಕಾಯಿ, ಗೋವಿನ ಜೋಳ, ಈರುಳ್ಳಿ ಬೆಳೆ ಸಹ ಅತಿಯಾದ ಮಳೆಯಿಂದ ಹಳದಿ ರೋಗಕ್ಕೆ ತುತ್ತಾಗಿವೆ. ಈಗ ಶೇಂಗಾ ಕಟಾವು ಮಾಡುವ ಸಮಯ. ಆದರೆ, ನಿರಂತರ ಮಳೆಯಿಂದ ಶೇಂಗಾ ನಾಶವಾಗಿದೆ. ಅಳಿದುಳಿದ ಶೇಂಗಾವನ್ನು ರಾಶಿ ಮಾಡಬೇಕು ಅಂದರೆ ಶೇಂಗಾ ಜೊತೆಗೆ ಮಣ್ಣು ಬರುತ್ತಿದೆ. ಹೀಗಾಗಿ ರೈತರು ಶೇಂಗಾ ಬೆಳೆಯ ರಾಶಿಯನ್ನು ಮಾಡಲು ಪರದಾಡುತ್ತಿದ್ದಾರೆ. ಸಾಲ ಸೋಲ ಮಾಡಿ ಬೆಳೆದ ಬೆಳೆ ಮಣ್ಣಲ್ಲಿ ಮಣ್ಣಾಗುತ್ತಿದೆ. ಶೇಂಗಾ ಬೆಳೆ ವಿಮೆ ಮಾಡಿಸಲಾಗಿದ್ದು, ಸರ್ಕಾರ ನಮಗೆ ವಿಮೆ ಹಾಗೂ ಶೇಂಗಾ ಬೆಳೆಗೆ ಬೆಂಬಲ ಬೆಲೆ ನೀಡಿ ಖರೀದಿ ಮಾಡಬೇಕು ಎಂದು ಬೆಳೆ ಹಾನಿಯಾದ ರೈತ ಚಂದ್ರಶೇಖರಗೌಡ ಆಗ್ರಹಿಸಿದ್ದಾರೆ.
ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ: ಸಲಗರೆ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಹಯೋಗದಲ್ಲಿ ಜಿಲ್ಲಾ ಸಮೀಕ್ಷಾ ಘಟಕದ ಕಚೇರಿ ಆವರಣದಲ್ಲಿ ನಡೆದ ಸಾರ್ವಜನಿಕರ ಮೇಲೆ ತಂಬಾಕು ಪದಾರ್ಥಗಳ ದು?ರಿಣಾಮಗಳ ಕುರಿತ ಬೀದಿ ನಾಟಕ ಜನಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜೆ. ಸಲಗರೆ ಉದ್ಘಾಟಿಸಿ, ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಿದರು..
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಬಸರೀಗಿಡದ ಮಾತನಾಡಿ, ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣದ ಕುರಿತು ಬೀದಿ ನಾಟಕಗಳ ಮೂಲಕ ಜನ ಜಾಗೃತಿ ಮೂಡಿಸಲಾಗುತ್ತಿದೆ. ಅಂಗಡಿಗಳ ಮೇಲೆ ದಾಳಿ ಮಾಡಿ ದಂಡ ವಸೂಲಿ ಮಾಡಲಾಗುತ್ತಿದೆ ಎಂದರು.
ಅಡವಿಸೋಮಾಪುರದ ಸಿದ್ಧಲಿಂಗೇಶ್ವರ ಜಾನಪದ ಕಲಾ ತಂಡದವರು ಬೀದಿ ನಾಟಕ ಪ್ರಸ್ತುತ ಪಡಿಸಿದರು.
ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ಜಗದೀಶ ನುಚ್ಚಿನ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಚವ್ಹಾಣ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು. ಎಸ್.ಎಸ್. ಪೀರಾ ಕಾರ್ಯಕ್ರಮ ನಿರೂಪಿಸಿದರು. ಬಸಮ್ಮ ಚಿತ್ತರಗಿ ವಂದಿಸಿದರು.
ರಸ್ತೆ ದುರಸ್ತಿ, ಬೆಳೆ ಸಮೀಕ್ಷೆ ಶೀಘ್ರ ಪೂರ್ಣಗೊಳಿಸಿ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ರಸ್ತೆಗಳು ಹಾನಿಗೀಡಾಗಿದ್ದು, ತಕ್ಷಣವೇ ಸಂಬಂಧಿಸಿದ ಇಲಾಖಾಧಿಕಾರಿಗಳು ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳ ರಸ್ತೆ ಸುಧಾರಣೆಗೆ ಸೂಕ್ತ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಸೂಚಿಸಿದರು.
ಜಿಲ್ಲಾಡಳಿತ ಭವನದ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಅ. 16 ಜರುಗಿದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ರಸ್ತೆಗಳು ಹಾನಿಯಾಗಿ ನಿತ್ಯ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಆದಷ್ಟು ಶೀಘ್ರವಾಗಿ ರಸ್ತೆ ಸುಧಾರಣೆಗೆ ಮುಂದಾಗುವ ಮೂಲಕ ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದರು.
ವಾರದೊಳಗೆ ವರದಿ ಸಲ್ಲಿಸಿ:ಅತಿವೃಷ್ಟಿಯಿಂದಾಗಿ ಹಾನಿಗೊಳಗಾದ ಜಿಲ್ಲೆಯ ಬೆಳೆಹಾನಿ ಕುರಿತು ಕೃಷಿ, ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ ನಡೆಸುತ್ತಿರುವ ಸಮೀಕ್ಷೆ ಕಾರ್ಯ ಶೀಘ್ರ ಪೂರ್ಣಗೊಳಿಸಿ ಪರಿಹಾರ ಪೋರ್ಟಲ್‌ನಲ್ಲಿ ಮಾಹಿತಿ ಒದಗಿಸಬೇಕು. ಅಧಿಕ ಮಳೆಯಿಂದಾಗಿ ಜಿಲ್ಲೆಯ ಗ್ರಾಮೀಣ, ನಗರ, ಪಟ್ಟಣ ಪ್ರದೇಶಗಳಲ್ಲಿ ಹಾನಿಗೊಳಗಾದ ಮನೆಗಳ ಸಮೀಕ್ಷಾ ಕಾರ್ಯವನ್ನು ಪೂರ್ಣಗೊಳಿಸಿ, ಕೂಡಲೇ ಪರಿಹಾರ ಒದಗಿಸಿ, ಒಂದು ವಾರದೊಳಗೆ ವರದಿ ಸಲ್ಲಿಸಬೇಕು. ಜಿಲ್ಲೆಯಲ್ಲಿ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಮಳೆ ಪ್ರಮಾಣ ಕಡಿಮೆಯಾದ ಬಳಿಕ ಎಲ್ಲ ಅಧಿಕಾರಿಗಳು ಕ್ಷೇತ್ರ ಭೇಟಿ ಮಾಡಿ, ಹಾನಿಗೊಳಗಾದ ಬೆಳೆ, ಮನೆ ಹಾನಿಗಳ ಸಮೀಕ್ಷೆ ಮಾಡಿ ಪರಿಹಾರಕ್ಕೆ ಸೂಕ್ತ ಕ್ರಮ ಜರುಗಿಸಬೇಕು ಎಂದರು.
ಅರಿವು ಮೂಡಿಸಿ
ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಜನರಲ್ಲಿ ಜನಾಂದೋಲನ ರೀತಿಯ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಏರ್ಪಡಿಸಿ, ಅರಿವು ಮೂಡಿಸಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಾಸ್ಕ್ ಬಳಸದೆ ನಿಯಮಗಳ ಉಲ್ಲಂಘಿಸಿದಲ್ಲಿ ದಂಡ ವಿಧಿಸಬೇಕು. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಎಲ್ಲ ಸರಕಾರಿ ಕಚೇರಿಗಳ ಅಧಿಕಾರಿ, ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕಚೇರಿಗೆ ಬರುವ ಸಾರ್ವಜನಿಕರಿಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಿಳಿಸಬೇಕು.
– ಎಂ. ಸುಂದರೇಶ್ ಬಾಬು, ಜಿಲ್ಲಾಧಿಕಾರಿ, ಗದಗ
ಅಗತ್ಯವಿದ್ದಲ್ಲಿ ಖಾಸಗಿ ವೈದ್ಯರ ಬಳಕೆ: ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಾಲೂಕುವಾರು ನಿಗದಿತ ಗುರಿಯನುಸಾರ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಬೇಕು. ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡಿ ಪರೀಕ್ಷಿಸುವ ಕಾರ್ಯ ಚುರುಕುಗೊಳಿಸಬೇಕು. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಗೃಹ ನಿಗಾದಲ್ಲಿರುವವರ ಮನೆಗಳಿಗೆ ಅಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಿ, ಪರಿಶೀಲಿಸಬೇಕು. ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಂಪರ್ಕದ ಹೆಚ್ಚುವರಿ 50 ಹಾಸಿಗೆಗಳ ವ್ಯವಸ್ಥೆ ಮಾಡಿಕೊಂಡಿದ್ದು, ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಸೋಂಕಿನಿಂದ ದಾಖಲಾದ ರೋಗಿಗೆ ತುರ್ತು ಚಿಕಿತ್ಸೆಯ ಅಗತ್ಯವಿದ್ದಲ್ಲಿ ಅವರನ್ನು ತಕ್ಷಣ ಜಿಲ್ಲೆಯ ನಿಗದಿತ ಕೋವಿಡ್ ಆಸ್ಪತ್ರೆಗೆ ವರ್ಗಾಯಿಸಬೇಕು. ಸೋಂಕಿತರ ಚಿಕಿತ್ಸೆಗಾಗಿ ಅಗತ್ಯವಿದ್ದಲ್ಲಿ ಖಾಸಗಿ ವೈದ್ಯರನ್ನು ಬಳಸಿಕೊಳ್ಳಬೇಕು. ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು, ಸಿಬ್ಬಂದಿಗೆ ಅಗತ್ಯ ಸುರಕ್ಷಾ ಪರಿಕರಗಳನ್ನು ಒದಗಿಸಬೇಕೆಂದು ಸೂಚಿಸಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಆನಂದ ಕೆ., ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ ಎಂ., ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ ಎಸ್.ಎನ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಸತೀಶ ಬಸರಿಗಿಡದ, ಜಂಟಿ ಕೃಷಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ, ಇತರ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಕೊರೊನಾ ಸೋಂಕು ಮನುಕುಲಕ್ಕೆ ಮಾರಕ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಕೊರೊನಾ ಸೋಂಕು ಜಾಗತಿಕವಾಗಿ ಮಾನವ ಕುಲಕ್ಕೆ ಮಾರಕವಾಗಿದ್ದು, ನಮ್ಮ ಜೀವ ರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ವ್ಯಕ್ತಿಗತ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೊರೊನಾ ಸೋಂಕು ನಿಯಂತ್ರಿಸಲು ಸಾರ್ವಜನಿಕರು ಕೈಜೋಡಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜಶೇಖರ ಪಾಟೀಲ ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಗದಗ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಲಯನ್ಸ್ ಕ್ಲಬ್ ಸಹಯೋಗದಲ್ಲಿ ನಡೆದ ಕೋವಿಡ್-೧೯ ಜನಾಂದೋಲನ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೋವಿಡ್-19 ಸೋಂಕಿಗೆ ಸದ್ಯ ಔ?ಧ ಇಲ್ಲದಿರುವ ಕಾರಣ ಪ್ರತಿಯೊಬ್ಬರೂ ಜಾಗೃತರಾಗಿರಬೇಕು. ಸುರಕ್ಷಿತವಾಗಿರಲು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೊರೊನಾ ನಿಯಂತ್ರಿಸಬೇಕು. ಆಗಾಗ ಸೋಪು ಹಾಗೂ ನೀರಿನಿಂದ ಕೈ ತೊಳೆದುಕೊಳ್ಳುವ ಮೂಲಕ ಕೋವಿಡ್‌ನಿಂದ ದೂರವಿರಬೇಕು. ನಾವು ಸುರಕ್ಷಿತವಾಗಿದ್ದು, ಇತರರನ್ನೂ ಸುರಕ್ಷಿತವಾಗಿರಿಸಬೇಕು ಎಂದರು.
ಜನಸಂದಣಿ ಇರುವ ಪ್ರದೇಶಗಳಲ್ಲಿ ಜಾಗೃತರಾಗಿದ್ದು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೋವಿಡ್‌ಗೆ ಸಂಬಂಧಿಸಿದ ಯುಕ್ತವಾದ ವರ್ತನೆಯನ್ನು ಅನುಸರಿಸುವುದರ ಜತೆಗೆ ಬೇರೆಯವರು ಅದನ್ನು ಅನುಸರಿಸುವಂತೆ ಉತ್ತೇಜನ ನೀಡಬೇಕು. ಈ ಮೂಲಕ ಮಾರಣಾಂತಿಕ ವೈರಾಣು ಹರಡುವುದನ್ನು ತಡೆಗಟ್ಟಬೇಕು ಎಂದು ನ್ಯಾ| ಪಾಟೀಲ ಹೇಳಿದರು.
ಕೋವಿಡ್-19 ತಡೆಗಟ್ಟವ ಕುರಿತು ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಜಿಲ್ಲಾ ಪೊಲೀಸ್ ವರಿ?ಧಿಕಾರಿ ಯತೀಶ್ ಎನ್., ಅಪರ ಜಿಲ್ಲಾ ಸತ್ರ ನ್ಯಾಯಾಧೀಶರಾದ ಎಂ.ವಿ. ನರಸಿಂಹಸಾ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ. ಸಲಗರೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸತೀಶ್ ಬಸರೀಗಿಡದ, ಜಿಲ್ಲಾ ನ್ಯಾಯವಾದಿಗಳ ಸಂಘ, ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳು ಇದ್ದರು.
ಪುನೀತ್ ರಾಜಕುಮಾರ್ ಅಭಿನಯದ ’ಜೇಮ್ಸ್’ ಚಿತ್ರೀಕರಣ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ’ಜೇಮ್ಸ್’ ಸಿನಿಮಾ ಚಿತ್ರೀಕರಣ ಗಂಗಾವತಿ ತಾಲೂಕಿನ ಮಲ್ಲಾಪುರ ಗ್ರಾಮದ ಹೊರ ವಲಯದಲ್ಲಿ ನಡೆಯಿತು. ಚಿತ್ರದ ಸಾಹಸ ದೃಶ್ಯವೊಂದರ ಚಿತ್ರೀಕರಣಕ್ಕಾಗಿ ಸೆಟ್ ಹಾಕಲಾಗಿದ್ದು, ಒಂದು ವಾರದಿಂದ ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಈಗಾಗಲೇ ಹೊಸಪೇಟೆ ಸುತ್ತಲಿನ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಗಂಗಾವತಿ ತಾಲೂಕಿನ ಮಲ್ಲಾಪುರ ಗ್ರಾಮದ ಹೊರ ವಲಯದಲ್ಲಿರುವ ಬಯಲು ಹಾಗೂ ಬೆಟ್ಟದ ಸುಂದರ ಪ್ರಾಕೃತಿಕ ಸ್ಥಳದಲ್ಲಿ ಸೆಟ್ ಹಾಕಲಾಗಿತ್ತು.
ಗಂಗಾವತಿಯಲ್ಲಿ ಜೇಮ್ಸ್ ಚಿತ್ರೀಕರಣ: ಈ ಮೊದಲು ಅ. 21ಕ್ಕೆ ಶೂಟಿಂಗ್ ನಿಗದಿ ಮಾಡಲಾಗಿತ್ತು. ಆದರೆ, ಅದಕ್ಕೂ ಮುನ್ನವೇ ಶೂಟಿಂಗ್ ಮಾಡಲಾಗಿದೆ. ಬೆಳಗ್ಗೆ 11 ಗಂಟೆಗೆ ಆಗಮಿಸಿದ ಪುನೀತ್, ಕೆಲವು ತಾಂತ್ರಿಕ ಸಮಸ್ಯೆಯಿಂದಾಗಿ ವಾಪಸ್ ಹೋದರು. ಸಂಜೆ ಮತ್ತೆ ಶೂಟಿಂಗ್ ನಡೆಯಿತು. ಚಿತ್ರೀಕರಣ ವೀಕ್ಷಿಸಲು ನಗರ ಹಾಗೂ ಮಲ್ಲಾಪುರ ಗ್ರಾಮದ ಸುತ್ತಲಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಆದರೆ, ಪೊಲೀಸರು ಮತ್ತು ಚಿತ್ರ ತಂಡದ ಬೌನ್ಸರ್‌ಗಳ ಭದ್ರತೆಯಿದ್ದ ಕಾರಣ ಬೆಟ್ಟ ಹತ್ತಿ, ದೂರದಿಂದಲೇ ಶೂಟಿಂಗ್ ವೀಕ್ಷಿಸಿದರು.
ರಸಗೊಬ್ಬರ ಪರವಾನಿಗೆ ಅಮಾನತು
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಮುಂಡರಗಿಯ ಅನಧಿಕೃತ ಕೃಷಿ ಪರಿಕರ ದಾಸ್ತಾನು ಮಳಿಗೆ ಜೆ.ಎಚ್.ಎಚ್. ಅಗ್ರೋ ಕೇಂದ್ರಕ್ಕೆ ಬೆಳಗಾವಿಯ ಜಂಟಿ ಕೃಷಿ ನಿರ್ದೇಶಕರ ನೇತೃತ್ವದಲ್ಲಿ ಅ. 10ರಂದು ಭೇಟಿ ನೀಡಿ ಪರಿಶೀಲಿಸಲಾಯಿತು.
ಈ ವೇಳೆ ರಸಗೊಬ್ಬರ ಪರವಾನಿಗೆಯಲ್ಲಿ ಅನುಮತಿಸದ ರಸಗೊಬ್ಬರವಲ್ಲದ ದಾಸ್ತಾನು ಕಂಡು ಬಂದಿದ್ದು, ಪರವಾನಗಿದಾರರು ರಸಗೊಬ್ಬರ ನಿಯಂತ್ರಣಾಜ್ಞೆ ಉಲ್ಲಂಘಿಸಿದ್ದಾರೆ. ಹೀಗಾಗಿ ರಸಗೊಬ್ಬರ ಪರಿವೀಕ್ಷಕರು ಕೃಷಿ ಮಳಿಗೆಯ ರಸಗೊಬ್ಬರವಲ್ಲದ ದಾಸ್ತಾನನ್ನು ಜಪ್ತಿ ಮಾಡಿದ್ದಾರೆ.
ರಸಗೊಬ್ಬರ ನಿಯಂತ್ರಣಾಜ್ಞೆ ನಿಯಮ ಉಲ್ಲಂಘಿಸಿರುವುದರಿಂದ ಅ. 13ರಿಂದ ಮುಂದಿನ 15 ದಿನಗಳವರೆಗೆ ರಸಗೊಬ್ಬರ ಪರವಾನಿಗೆ ಅಮಾನತುಗೊಳಿಸಿ ಮುಂಡರಗಿಯ ಸಹಾಯಕ ಕೃಷಿ ನಿರ್ದೇಶಕರು ಆದೇಶಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

