Home Blog Page 3026

ರಾಯಣ್ಣ ಮೂರ್ತಿ ತೆರವು, ಎಸಿ, ಡಿವೈಎಸ್ಪಿ ವಾಹನಗಳ ಮೇಲೆ ಕಲ್ಲು ತೂರಾಟ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ತೆರವುಗೊಳಿಸಿದ ವಿಚಾರವಾಗಿ ನಡೆದ ವಾಗ್ವಾದದಲ್ಲಿ ಎಸಿ ಹಾಗೂ ಡಿವೈಎಸ್ಪಿ ವರ ವಾಹನಗಳ ಮೇಲೆ ಕಲ್ಲಿ ತೂರಾಟ ನಡೆಸಿರುವ ಘಟನೆ ತಾಲೂಕಿನ ಬಳಗಾನೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಬಸ್ ನಿಲ್ದಾಣದ ಬಳಿ ನಿನ್ನೆ ರಾತ್ರಿ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಸ್ಥಾಪಿಸಲಾಗಿತ್ತು. ಇದಕ್ಕಾಗಿ ಈ ಹಿಂದೆ ಅಲ್ಲಿದ್ದ ರಾಣಿ ಚೆನ್ನಮ್ಮ ನಾಮಫಲಕವನ್ನು , ಸಂಗೊಳ್ಳಿ ರಾಯಣ್ಣ ನಾಮಫಲಕ ಎರಡು ತೆರವುಗೊಳಿಸಲಾಗಿತ್ತು. ಇದೇ ವಿಚಾರವಾಗಿ ಎರಡು ಸಮಾಜದವರ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು.

ನಿನ್ನೆ ರಾತ್ರೋರಾತ್ರಿ ನಿರ್ಮಾಣವಾಗಿದ್ದ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಅಧಿಕಾರಿಗಳು ತೆರವುಗೊಳಿಸಲಾಗಿದೆ. ಇದರಿಂದ ಕುಪಿತಗೊಂಡ ರಾಯಣ್ಣ ಬ್ರಿಗೇಡ್ ಸದಸ್ಯರು ವಿರೋಧ ವ್ಯಕ್ತಪಡಿಸಿದಾಗ ಸ್ಥಳದಲ್ಲಿದ್ದ ಪೊಲೀಸರು ಹಾಗೂ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತೆರಳಿ ಲಘು ಲಾಠಿ ಪ್ರಹಾರ ಕೂಡಾ ನಡೆದಿದೆ.

ಈ ವೇಳೆ ಕೆಲ ದುಷ್ಕರ್ಮಿಗಳು ಎಸಿ ರಾಯಪ್ಪ ಹುಣಸಗಿ ಹಾಗೂ ಡಿವೈಎಸ್ಪಿ ಅವರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಎರಡೂ ಸಮಾಜದವರ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗದಗ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಶಿರಹಟ್ಟಿ ತಾಲೂಕಾ ಆಸ್ಪತ್ರೆಯಲ್ಲಿ ನಿಲ್ಲಲಾರದ 108 ಅಂಬ್ಯುಲೆನ್ಸ್…!

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಶಿರಹಟ್ಟಿ
ಸರಕಾರ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವುದಕ್ಕೆ ಕೊವಿಡ್-19ನಂತಹ ಸಂಕಷ್ಟದಲ್ಲಿಯೂ ಸಹ ಜನತೆಯ ಮನೆ ಬಾಗಿಲಿಗೆ ತೆರಳಿ ಅವರ ಯೋಗಕ್ಷೇಮವನ್ನು ವಿಚಾರಿಸುತ್ತಿದೆ. ಆದರೆ ಶಿರಹಟ್ಟಿ ತಾಲೂಕು ಆಸ್ಪತ್ರೆಯಲ್ಲಿ ಕಳೆದ ಆರು ತಿಂಗಳುಗಳಿಂದ 108 ಅಂಬ್ಯುಲೆನ್ಸ್ ಸರಿಯಾದ ಸಮಯಕ್ಕೆ ಸಿಗದೇ ಜನತೆಯ ಜೀವದ ಜೊತೆ ಚೆಲ್ಲಾಟ ಹಾಗೂ ವೈದ್ಯರ ಅಸಹಾಯಕತೆ ಇಲ್ಲಿ ಕೇಳೋರು ಯಾರು ಇಲ್ಲದಂತಾಗಿದೆ.
6 ತಿಂಗಳುಗಳಿಂದ ಸಮಸ್ಯೆ : ತುರ್ತು ಸಂದರ್ಭದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಗಾಗಲೀ ಅಥವಾ ಬೇರೆ ಸ್ಥಳಗಳಿಗೆ ತೆರಳಲು ವರವಾಗಬೇಕಿದ್ದಂತಹ 108 ಅಂಬ್ಯುಲೆನ್ಸ್ ಕಳೆದ ಆರು ತಿಂಗಳುಗಳಿಂದ ಸಮರ್ಪಕವಾಗಿ ಕಾರ‍್ಯನಿರ್ವಹಿಸದೇ ಇರುವುದಕ್ಕೆ ಆಸ್ಪತ್ರೆಯಲ್ಲಿ ಇರುವಂತಹ ವೈದ್ಯರು ಅಂಬ್ಯುಲೆನ್ಸ್‌ಗಾಗಿ ನಿತ್ಯವೂ ಪರದಾಡುತಿದ್ದಾರೆ. ವೈದ್ಯರು ಅಂಬ್ಯುಲೆನ್ಸ್‌ಗಾಗಿ ಸಂಪರ್ಕಿಸಿದಂತಹ ಸಂದರ್ಭದಲ್ಲಿ ಬೇರೆ ಸ್ಥಳಗಳಲ್ಲಿ ಇರುವುದಾಗಿ ಹೇಳುತ್ತಿದ್ದಾರೆ. ಅನಿವಾರ್ಯವಾದಾಗ ಹೆರಿಗೆಯಾದ ತಾಯಂದಿರನ್ನು ಮನೆಗೆ ಕಳುಹಿಸಿಕೊಡುವುದಕ್ಕೆ ಇರುವ ನಗು-ಮಗು ವಾಹನ, ಹಾಗೂ ಜೆಎಸ್‌ವೈ ಅಂಬ್ಯುಲೆನ್ಸ್‌ಗಳನ್ನು ಉಪಯೋಗಿಸಲಾಗುತ್ತಿದೆ.

ಕಳೆದ ಆರು ತಿಂಗಳುಗಳಿಂದ 108 ಅಂಬ್ಯುಲೆನ್ಸ್ ತಾಲೂಕಾ ಆಸ್ಪತ್ರೆಯಲ್ಲಿ ಸಮರ್ಪಕವಾಗಿ ಸಿಗುತ್ತಿಲ್ಲ, ಇಲ್ಲಿಯೇ ಖಾಯಂ ಇರಬೇಕೆಂದು ಹೇಳಿದರೂ ಬೇರೆ ಕಡೆಗಳಲ್ಲಿ ಇರುವುದಾಗಿ ಸಿಬ್ಬಂದಿಗಳು ಹೇಳುತ್ತಿದ್ದಾರೆ. ಇದರಿಂದ ನಮಗೂ ಹಾಗೂ ರೋಗಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಈ ಬಗ್ಗೆ ಜಿವಿಕೆ ಏಜೆನ್ಸಿಯವರ ಗಮನಕ್ಕೂ ತಂದರೂ ಸಹ ಕೇವಲ ಹಾರಿಕೆ ಉತ್ತರ ನೀಡುತ್ತಿದ್ದಾರೆ.
ಚಂದ್ರು ಲಮಾಣಿ, ವೈದ್ಯಾಧಿಕಾರಿ.

 

ಗುರುವಾರ ಮಧ್ಯರಾತ್ರಿ ಪರದಾಡಿದ ಜನತೆ 
ತಾಲೂಕಾ ಆಸ್ಪತ್ರೆಯಲ್ಲಿ ಗುರುವಾರ ಮಧ್ಯರಾತ್ರಿ ಒಂದು ಪಾಯಿಜನ್ ಕೇಸ್, ಒಂದು ಡಿಲೆವರಿ ಕೇಸ್ ಮತ್ತೊಂದು ತೀವ್ರ ಜ್ವರದಿಂದ ಬಳಲುತ್ತಿದ್ದಂತಹ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಅಂಬ್ಯುಲೆನ್ಸ್ ಸಿಗದೇ ಇರುವುದಕ್ಕೆ ಪರದಾಡಿದ ಘಟನೆಯು ಜರುಗಿದ್ದು, ಮಧ್ಯರಾತ್ರಿಯೇ ವೈದ್ಯ ಚಂದ್ರು ಲಮಾಣಿ ಮತ್ತು ಸಿಬ್ಬಂದಿ ಎಷ್ಟೇ ಪ್ರಯತ್ನ ಮಾಡಿದರೂ ಅಂಬ್ಯುಲೆನ್ಸ್ ಲಭ್ಯವಾಗಲಿಲ್ಲ. ಅನಿವಾರ್ಯವಾಗಿ ಲಭ್ಯವಿರುವ ಬೇರೆ ಅಂಬ್ಯುಲೆನ್ಸ್‌ನಲ್ಲಿ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗೆ ಬೇರೆ ಕಡೆಗೆ ಸ್ಥಳಾಂತರಿಸಿದ್ದಾರೆ.

ಜೀವಕ್ಕೆ ಕುತ್ತು ಬಂದರೆ ಯಾರು ಹೊಣೆ ?
ಜನತೆಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆಯನ್ನು ಒದಗಿಸಲು ಅನುಕೂಲ ಕಲ್ಪಿಸುವುದಕ್ಕಾಗಿಯೇ ಇರುವಂತಹ 108 ಅಂಬ್ಯುಲೆನ್ಸ್ ಇದ್ದು, ಆದರೆ ತಾಲೂಕಾ ಆಸ್ಪತ್ರೆಯಲ್ಲಿ ಸರಿಯಾಗಿ ಲಭ್ಯವಿಲ್ಲದೇ ಇರುವುದರಿಂದ ಸದ್ಯ ಕೊವಿಡ್-19 ನಿಂದ ತತ್ತರಿಸಿರುವಂತಹ ಜನತೆ ಹಾಗೂ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವಂತಹ ವಯೋವೃದ್ಧರಿಗೆ, ಮಹಿಳೆಯರಿಗೆ ಮತ್ತು ಮಕ್ಕಳ ಜೀವಕ್ಕೆ ಕುತ್ತು ಬಂದರೆ ಯಾರು ಹೊಣೆ ? ಎಂಬುದಕ್ಕೆ ಇಲಾಖೆಯ ಅಧಿಕಾರಿಗಳೇ ಉತ್ತರಿಸಬೇಕಿದೆ.

ಗದಗ ನಗರಸಭೆ ವ್ಯಾಪ್ತಿಯ ರಸ್ತೆ ದುರಸ್ತಿಗೆ ಕ್ರಮ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗದಗ
ಸತತ ಮಳೆಯಿಂದಾಗಿ ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ರಸ್ತೆಗಳು ಹಾಳಾಗಿದ್ದು, ಮಳೆ ಪ್ರಮಾಣ ಕಡಿಮೆಯಾದ ತಕ್ಷಣವೇ ಸಂಬಂಧಿಸಿದ ಇಲಾಖೆಗಳು ರಸ್ತೆ ಸುಧಾರಣೆಗೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದಲ್ಲಿ ಜರುಗಿದ ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿ ಕರ್ನಾಟಕ ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ಹಾಗೂ 24*7ಕುಡಿಯುವ ನೀರಿನ ಯೋಜನೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿವಾರ ವಿವಿಧ ಯೋಜನೆಗಳ ಅನುಷ್ಠಾನಗೊಳಿಸುತ್ತಿರುವ ಅನುಷ್ಠಾನ ಸಂಸ್ಥೆಗಳ ಸಭೆಯನ್ನು ಕರೆದು ಈ ಕುರಿತು ನಿರ್ದೇಶನ ನೀಡುತ್ತಿದ್ದು, ನಗರಸಭೆ, ಲೋಕೋಪಯೋಗಿ ಇಲಾಖೆ, ರಾಜ್ಯ ಹೆದ್ದಾರಿ ಪ್ರಾಧಿಕಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳು ರಸ್ತೆ ಸುಧಾರಣೆಗೆ ಕ್ರಮವಹಿಸಲು ತಿಳಿಸಲಾಗಿದೆ. ಮಳೆ ಪ್ರಮಾಣ ಕಡಿಮೆ ಆದೊಡನೆ ರಸ್ತೆಗಳ ದುರಸ್ತಿ ಹಾಗೂ ಗುಂಡಿಗಳನ್ನು ಮುಚ್ಚಲು ಕ್ರಮವಹಿಸಬೇಕು ಎಂದು ಸೂಚಿಸಿದರು.

ನಗರಸಭೆ ವ್ಯಾಪ್ತಿ 14 ವಲಯಗಳಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಬಾಕಿ ಉಳಿದ ಕಾಮಗಾರಿಗಳನ್ನು 11 ವಲಯಗಳಲ್ಲಿ ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಿ, ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕರಿಗೆ ಮುಕ್ತಗೊಳಿಸುವಂತೆ ತಿಳಿಸಿದರು. ಈ ಕುರಿತು ಕೆ.ಯು.ಐ.ಡಿ.ಎಫ್.ಸಿ. ಸಂಬಂಧಿಸಿದ ತಾಂತ್ರಿಕ ಸಿಬ್ಬಂದಿ ಹಾಗೂ ಗುತ್ತಿಗೆದಾರರು ಜಂಟಿಯಾಗಿ ಸ್ಥಳ ಪರಿಶೀಲಿಸಿ ಟೆಂಡರ್‌ನಲ್ಲಿ ನಿಗದಿಪಡಿಸಿದಂತೆ ಕಾಮಗಾರಿಯ ಉಳಿಕೆ ಹಾಗೂ ಲೋಪಗಳನ್ನು ಪರಿಶೀಲಿಸಿ.
ಎಂ. ಸುಂದರೇಶ್ ಬಾಬು, ಜಿಲ್ಲಾಧಿಕಾರಿ, ಗದಗ

ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿ ಕರ್ನಾಟಕ ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ವತಿಯಿಂದ ಅಮೃತ ಯೋಜನೆ ಅಡಿ ಅನುಷ್ಠಾನಗೊಳಿಸುತ್ತಿರುವ ಕಾಮಗಾರಿ ಹಾಗೂ ಕೆ.ಯು.ಐ.ಡಿ.ಎಫ್.ಸಿ. ವತಿಯಿಂದ24*7ಕುಡಿಯುವ ನೀರಿನ ಯೋಜನೆಯಡಿ ಚಾಲ್ತಿ ಇರುವ ಕಾಮಗಾರಿಗಳನ್ನು ಕಾಲಮಿತಿಯೊಳಗಡೆ ಪೂರ್ಣಗೊಳಿಸಲು ಪ್ರತಿ ವಾರ ನಿಗದಿಪಡಿಸಿದಂತೆ ಸಭೆಗಳನ್ನು ನಡೆಸಿ, ಗಡುವು ನೀಡಲಾಗಿದ್ದು, ಅನು?ನ ಸಂಸ್ಥೆಗಳು ಕಾಮಗಾರಿಯನ್ನು ಪೂರ್ಣಗೊಳಿಸಲು ವಿಳಂಬ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ನೀಡಲು ತಿಳಿಸಿದರು.
ಸಹಾಯವಾಣಿ ಆರಂಭಿಸಲು ನಿರ್ದೇಶನ: ನಗರಸಭೆ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸುತ್ತಿರುವ ಒಳಚರಂಡಿ ಹಾಗೂ ಕುಡಿಯುವ ನೀರಿನ ಯೋಜನೆಯ ಕುರಿತು ಮಾಹಿತಿ ಪಡೆದ ಜಿಲ್ಲಾಧಿಕಾರಿ, ಒಳಚರಂಡಿ ಯೋಜನೆಯಡಿ ಅನುಷ್ಠಾನಗೊಳಿಸುತ್ತಿರುವಕಾಮಗಾರಿಗಳ ಸ್ಥಳಗಳಲ್ಲಿ ಹಲವಾರು ದೂರುಗಳು ಸ್ವೀಕೃತವಾಗುತ್ತಿವೆ. ಒಳಚರಂಡಿ ಯೋಜನೆಯ ಮೊದಲ ಹಂತದ ಕಾಮಗಾರಿಯಲ್ಲಿ ನಿಗದಿತ ಸಮಯದಲ್ಲಿ ಬಳಕೆಯಾಗದೆ ಈ ಹಂತದಲ್ಲಿ ಹೊಸ ಯೋಜನೆಗಳಿಗೆ ಹೊಂದಾಣಿಕೆ ಮಾಡಲು ಕೂಡಲೇ ಸ್ಥಳಗಳನ್ನು ಪರಿಶೀಲಿಸಿ, ತಮ್ಮ ಅಧೀನ ಸಿಬ್ಬಂದಿಗೆ ಸೂಕ್ತ ಯೋಜನೆ ರೂಪಿಸಲು ಹಾಗೂ ಸಾರ್ವಜನಿಕರಿಗೆ ಉಪಯೋಗಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸಲು ಸೂಚಿಸಿದರು.
ಒಳಚರಂಡಿ ಕಾಮಗಾರಿಯ ಅನುಷ್ಠಾನದಲ್ಲಿ ಹಾಳಾದ ರಸ್ತೆಗಳನ್ನು ಪುನರ್ ನಿರ್ಮಿಸಲು ಒಂದು ತಿಂಗಳು ಗಡುವು ನೀಡಿ, ಎಲ್ಲಾ ಕಾಮಗಾರಿಗಳ ಪೂರ್ಣಗೊಳಿಸಲು ತಿಳಿಸಿದರು. ಝೋನ್ 2 ಮತ್ತು 3ರ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸಲು, ಬಾಕಿ ಉಳಿದ ಕಾಮಗಾರಿಗಳನ್ನು ಡಿಸೆಂಬರ್ ಅಂತ್ಯದೊಳಗಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು. ಸದರಿ ವಲಯಗಳಲ್ಲಿ ಒಳಚರಂಡಿ ಕಾಮಗಾರಿ ಸಾರ್ವಜನಿಕರಿಗೆ ಬಳಕೆ ಪ್ರಾರಂಭವಾದ ಕೂಡಲೇ ಸಹಾಯವಾಣಿ ಕೇಂದ್ರ ಸ್ಥಾಪಿಸುವಂತೆ ನಿರ್ದೇಶನ ನೀಡಿದರು.
ಕೆ.ಯು.ಐ.ಡಿ.ಎಫ್.ಸಿ. ಮುಖ್ಯ ಅಭಿಯಂತರ ಎಂ.ಬಿ. ಜಗತೇರಿ, ಕೆ.ಯು.ಡಬ್ಲ್ಯು.ಎಸ್. ಮುಖ್ಯ ಅಭಿಯಂತರ ಚಾಮರಾಜಗೌಡ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ ಎಸ್.ಎನ್., ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ರಮೇಶ ಜಾಧವ ಹಾಗೂ ಕೆ.ಯು.ಐ.ಡಿ.ಎಫ್.ಸಿ. ಮತ್ತು ಕೆ.ಯು.ಡಬ್ಲ್ಯು.ಎಸ್. ಅಭಿಯಂತರರು ಹಾಗೂ ಕಾಮಗಾರಿಗಳ ಗುತ್ತಿಗೆದಾರರು ಸಭೆಯಲ್ಲಿ ಉಪಸ್ಥಿತರಿದ್ದರು.

ರಸ್ತೆ ದುರಸ್ತಿಗೆ ಆಗ್ರಹಿಸಿ ರೈತನಿಂದ ಆತ್ಮಹತ್ಯೆ ಯತ್ನ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಹರಪನಹಳ್ಳಿ
ಅರಸೀಕೆರೆ- ಕಂಚಿಕೇರಿ ರಸ್ತೆ ದುರಸ್ತಿಗಾಗಿ ಅರಸೀಕೆರೆ-ಉಚ್ಚಂಗಿದುರ್ಗ-ಕಂಚಿಕೆರೆ ಮಾರ್ಗದ ವೃತ್ತದಲ್ಲಿ ಶುಕ್ರವಾರ ವಿವಿಧ ಸಂಘಟನೆಗಳು ಸಂಚಾರ ಬಂದ್ ಮಾಡಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಕಂಚಿಕೇರಿ ರಸ್ತೆ ದುರಸ್ತಿಗಾಗಿ ಹೋರಾಟ ಮಾಡುತ್ತಿರುವವರನ್ನು ಉದ್ದೇಶಿಸಿ ಮಾತನಾಡಿದ ಎಂಜಿನಿಯರ್ ಮಹೇಶ್ವರ್ ನಾಯ್ಕ್, ಮಳೆ ಕಡಿಮೆಯಾದ ಅನಂತರ ಕೆಲಸ ಪ್ರಾರಂಭಿಸುತ್ತವೆ ಎಂದು ಭರವಸೆ ನೀಡಿದರು. ಇದರಿಂದ ಕುಪಿತಗೊಂಡ ರೈತ ಸಂಘಟನೆಯ ಮಹದೇವಪ, ತಾಲೂಕು ಮಟ್ಟದ ಅಧಿಕಾರಿಗಳ ಮುಂದೆ ರಸ್ತೆಯ ತಗ್ಗುಗಳಲ್ಲಿ ನಿಂತ ನೀರಿನಲ್ಲಿ ಉರುಳಾಡಿ, ತನ್ನ ಚಪ್ಪಲಿಯಿಂದ ತಾನೇ ಹೊಡೆದುಕೊಂಡು ಹಸಿರು ಶಾಲನ್ನು ಕೊರಳಿಗೆ ಬಿಗಿದುಕೊಂಡು ಆತ್ಮಹತ್ಯೆಗೆ ಮುಂದಾದ. ಇತರೆ ಕಾರ್ಯಕರ್ತರು ರೈತನ ಆತ್ಮಹತ್ಯೆ ಯತ್ನವನ್ನು ತಡೆದರು.

ಕಾರಾಗೃಹ ಸೇರಲೂ ಸಿದ್ಧ
ನಾಳೆಯಿಂದಲೇ ಕೆಲಸಗಳನ್ನು ಪ್ರಾರಂಭಿಸಬೇಕು. ಇಲ್ಲವೇ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಬೇಕಿದ್ದರೆ ನಮ್ಮನ್ನು ಬಂಧಿಸಿ ಕಾರಾಗೃಹಕ್ಕೆ ಹಾಕಿ, ನಾವು ಸಿದ್ಧವಿದ್ದೇವೆ. ಕೆಲವು ದಿನಗಳ ಹಿಂದೆ ಈ ರಸ್ತೆಯಲ್ಲಿ ಆಂಬುಲೆನ್ಸ್ ಅಪಘಾತವಾಗಿ ಗರ್ಭಿಣಿಯರು, ಮಕ್ಕಳು ಅಸುನೀಗಿದ ಉದಾಹರಣೆಗಳಿವೆ. ಈ ರಸ್ತೆ ದುರಸ್ತಿ ಆಗದೇ ಇರುವುದಕ್ಕೆ ಕಾರಣ ಇಬ್ಬರು ಶಾಸಕರ ನಡುವಿನ ಪಸೆಂಟೇಜ್ ಆಸೆಗಾಗಿ ಕಾದು ಕುಳಿತಿರುವುದೇ ಮೂಲ ಕಾರಣ ಎಂದು ಸಿ.ಪಿ.ಐ. ರಾಜ್ಯ ಉಪಾಧ್ಯಕ್ಷ ಹೊಸಹಳ್ಳಿ ಮಲ್ಲೇಶ್ ಆರೋಪಿಸಿದರು.

ಈ ರಸ್ತೆ ಸಂಪೂರ್ಣ ಹಾಳಾಗಿದ್ದು, ರಸ್ತೆಯ ತುಂಬೆಲ್ಲ ತಗ್ಗು ಗುಂಡಿಗಳು ಬಿದ್ದಿವೆ. ರಸ್ತೆ ದುರಸ್ತಿಗಾಗಿ ಹಲವು ಬಾರಿ ವಿವಿಧ ಸಂಘಟನೆಯವರು ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸ್ಥಳೀಯ ನಾಯಕರಿಗೆ ಮನವಿ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಕೇವಲ ಭರವಸೆಯಾಗಿ ಉಳಿದಿದ್ದರಿಂದ ಶುಕ್ರವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ನಿರಂತರ ಹೋರಾಟ
ನಿತ್ಯ ವಾಹನ ಸವಾರರು, ವಿದ್ಯಾರ್ಥಿಗಳು, ಜಿಲ್ಲಾ ಆಸ್ಪತ್ರೆಗೆ ತೆರಳುವ ರೋಗಿಗಳು ನರಳಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ನಿರ್ಮಾಣವಾಗುವವರೆಗೂ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದು ಡಿ.ಎಸ್.ಎಸ್. ಜಿಲ್ಲಾ ಸಂಚಾಲಕ ಕಬ್ಬಳ್ಳಿ ಮೈಲಾರಪ್ಪ ತಿಳಿಸಿದರು.

ಭಾರತ ಕಮ್ಯುನಿಸ್ಟ್ ಪಕ್ಷ, ಕರ್ನಾಟಕ ರಾಜ್ಯ ರೈತಸಂಘ, ದಲಿತ ಸಂಘ ಸಮಿತಿ, ಎ ಐ ವೈ ಫ್ ಸಂಘಟನೆ, ಆಟೋ ಚಾಲಕರ ಮತ್ತು ಮಾಲೀಕರ ಸಂಘ ಇತರೆ ಸಂಘಟನೆಯ ಪದಾಧಿಕಾರಿಗಳು ಹೋರಾಟದಲ್ಲಿ ಪಾಲ್ಗೊಂಡಿದ್ದರು.
ಉಪತಹಶೀಲ್ದಾರ್ ಭರವಸೆ: ಉಪತಹಶೀಲ್ದಾರ್ ಫಾತಿಮಾ ಬಿ. ಮನವಿ ಸ್ವೀಕರಿಸಿ, ಶುಕ್ರವಾರ ಮಧ್ಯಾಹ್ನದಿಂದಲೇ ಕೆಲಸಗಳನ್ನು ಪ್ರಾರಂಭಿಸುವುವಾಗಿ ತಿಳಿಸಿದರು. ಬಳಿಕ ಸಂಘಟನೆಗಳು ಪ್ರತಿಭಟನೆಯನ್ನು ವಾಪಸ್ ಪಡೆದವು. ಪೊಲೀಸ್ ಸಿಬ್ಬಂದಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಪ್ರತಿಭಟನೆಯಲ್ಲಿ ಸಿ.ಪಿ.ಐ. ರಾಜ್ಯ ಉಪಾಧ್ಯಕ್ಷ ಹೊಸಳ್ಳಿ ಮಲ್ಲೇಶ್, ತಾಲ್ಲೂಕು ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್, ಡಿ.ಎಸ್.ಎಸ್. ಜಿಲ್ಲಾ ಸಂಚಾಲಕ ಕಬ್ಬಳ್ಳಿ ಮೈಲಾರಪ್ಪ, ಕರಡಿದುರ್ಗದ ಚೌಡಪ್ಪ, ಮುಗಪ್ಪ, ಕೊಟ್ರೇಶ್ ಸಿದ್ದೇಶಪ್ಪ. ಮಂಜು, ಬಸವರಾಜ, ತಿಪ್ಪೇಶ್, ಕೊಟ್ರಯ್ಯ, ಇದ್ದರು. ಉಪ ತಹಶೀಲ್ದಾರ್ ಫಾತಿಮಾ ಬಿ, ಪಿಎಸ್‌ಐ ಕಿರಣ್ ಕುಮಾರ್ ಎ. ಉಪಸ್ಥಿತರಿದ್ದರು.
 
 

ಉದ್ಯೋಗ ಖಾತ್ರಿ ಕೂಲಿ ಪಾವತಿಗೆ ಒತ್ತಾಯಿಸಿ ಕರವೇ ಧರಣಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗದಗ
ನೀರಲಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗಸಮುದ್ರ ಗ್ರಾಮದ ಉದ್ಯೋಗ ಖಾತ್ರಿ ಯೋಜನೆ ಫಲಾನುಭವಿಗಳು ಗ್ರಾ.ಪಂ. ಅಧಿಕಾರಿಗಳ ಮಾರ್ಗದರ್ಶನದಂತೆ ಮೇ ಹಾಗೂ ಜೂನ್ ತಿಂಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಿರ್ವಹಿಸಿದ್ದು, ಅವರ ಕೂಲಿ ಹಣ ಪಾವತಿಗೆ ಒತ್ತಾಯಿಸಿ, ಶುಕ್ರವಾರ ನೀರಲಗಿ ಗ್ರಾ.ಪಂ. ಎದುರು ಧರಣಿ ನಡೆಸಿದರು.
ಕರ್ನಾಟಕ ರಕ್ಷಣಾ ವೇದಿಕೆ (ಎಚ್. ಶಿವರಾಮೇಗೌಡ್ರ ಬಣ) ಗದಗ ಜಿ ಘಟಕದ ನೇತೃತ್ವದಲ್ಲಿ ನಾಗಸಮುದ್ರ ಗ್ರಾಮದ ಉದ್ಯೋಗ ಖಾತ್ರಿ ಫಲಾನುಭವಿಗಳು ಮತ್ತು ಗ್ರಾಮಸ್ಥರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ಕೂಲಿ ಮಂಜೂರಾತಿ ಹಾಗೂ ಪಾವತಿಗೆ ಒತ್ತಾಯಿಸಿ, ಸೆ. 25ರಂದು ಗದಗ ತಾ.ಪಂ. ಇಓ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಧರಣಿ ನಡೆಸಲಾಯಿತು.
ಕರವೇ ಗದಗ ಜಿಧ್ಯP ಮಂಜುನಾಥ ಪಿ. ಪರ್ವತಗೌಡ್ರ ಮಾತನಾಡಿ, ನಾಗಸಮುದ್ರ ಗ್ರಾಮದ ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಗಳು ಕಾನೂನುಬದ್ಧವಾಗಿ ಕೆಲಸ ಮಾಡಿದ್ದರೂ ಈವರೆಗೂ ಬ್ಯಾಂಕ್ ಖಾತೆಗಳಿಗೆ ಕೂಲಿ ಹಣವನ್ನು ಜಮೆ ಮಾಡದಿರುವದು ಸಂಶಯಕ್ಕೆ ಕಾರಣವಾಗಿದೆ. ಗ್ರಾ.ಪಂ. ಅಧಿಕಾರಿಗಳು ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿದು ಕೂಲಿ ಹಣ ಮಂಜೂರು ಮಾಡುತ್ತಿಲ್ಲವೆ ಎನ್ನುವುದು ಪ್ರಶ್ನೆಯಾಗಿದೆ. ಕೂಲಿ ಹಣ ಪಾವತಿ ವಿಳಂಬ ಆಧಿಕಾರಿಗಳ ಧೋರಣೆಗೆ ಕನ್ನಡಿ ಹಿಡಿದಿದೆ. ಅಧಿಕಾರಿಗಳು ಕೂಡಲೇ ಉದ್ಯೋಗ ಖಾತ್ರಿ ಫಲಾನುಭವಿಗಳಿಗೆ ಕೂಲಿ ಹಣ ಪಾವತಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಕರವೇ ನೇತೃತ್ವದಲ್ಲಿ ಗ್ರಾಮಸ್ಥರು ಉಗ್ರ ಹೋರಾಟ ಕೈಗೊಳ್ಳುವರೆಂದು ಎಚ್ಚರಿಸಿದರು.
ಅನಂತರ ಗದಗ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಶೀಘ್ರದಲ್ಲೇ ಕೂಲಿ ಹಣ ಮಂಜೂರು ಮಾಡುವ ಭರವಸೆಯೊಂದಿಗೆ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.
ದೇವಪ್ಪ ಕವಲೂರು, ಸುರೇಶ ಮುಳಗುಂದ, ಮಹೇಶ ಇಟಗಿ, ನಿಂಗರಾಜ ಭರಮಗೌಡ್ರ, ಗೌಸು ನದಾಫ, ಕಿರಣ ಪೂಜಾರ, ಶರಣಪ್ಪ ಮದ್ನೂರ, ಆಕಾಶ ಮಣ್ಣೂರ, ವೀರನಗೌಡ ಹನಮಂತಗೌಡ್ರ, ವಿಜಯ ಕೊಳ್ಳಿ, ಕಿರಣ ಹನಮಂತಗೌಡ್ರ, ಅಮರೇಶ ಗೋಣಿ, ವಿರೂಪಾP ಗೌಡ ಮರಿಗೌಡ್ರ, ಮುತ್ತು ಬಿಳೆಯಲಿ, ಮಹಾಂತೇಶ ಉಪಸ್ಥಿತರಿದ್ದರು.
 
 

ವಾಹನ ನಿಲುಗಡೆ ಪಟ್ಟಿ ಅಳವಡಿಕೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗಜೇಂದ್ರಗಡ
ಪಟ್ಟಣದಲ್ಲಿ ಸುಗಮ ಸಂಚಾರ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸಂಚಾರಿ ನಿಯಮಗಳನ್ನು ಸಾರ್ವಜನಿಕರು ಪಾಲಿಸುವ ಮೂಲಕ ಇಲಾಖೆಯ ಜತೆಗೆ ಸಹಕರಿಸಬೇಕು ಎಂದು ಪಿಎಸ್‌ಐ ಗುರುಶಾಂತ ದಾಶ್ಯಾಳ ಹೇಳಿದರು.
ಸ್ಥಳೀಯ ಕಾಲಕಾಲೇಶ್ವರ ವೃತ್ತ, ಜೋಡು ರಸ್ತೆ, ಅಂಬೇಡ್ಕರ್ ವೃತ್ತ, ದುರ್ಗಾ ವೃತ್ತ ಸೇರಿ ಪ್ರಮುಖ ರಸ್ತೆಗಳಲ್ಲಿ ಸುಗಮ ಸಂಚಾರ ಹಿನ್ನೆಲೆಯಲ್ಲಿ ವಾಹನ ನಿಲುಗಡೆ ಪಟ್ಟಿ ಹಾಗೂ ಪಟ್ಟಣದ 14ಕ್ಕೂ ಅಧಿಕ ಪ್ರಮುಖ ಸ್ಥಳಗಳಲ್ಲಿ ಅಳವಡಿಸುತ್ತಿರುವ ಸಿಸಿಟಿವಿ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು.
ಪಟ್ಟಣದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಅಪಘಾತ ಪ್ರಕರಣಗಳಿಗೆ ಕಡಿವಾಣ ಹಾಕುವುದರ ಜತೆಗೆ ವಾಹನಗಳ ಸುಗಮ ಸಂಚಾರ, ಪಾದಚಾರಿಗಳಿಗೆ ಮತ್ತು ಬೀದಿ ಬದಿ ವ್ಯಾಪಾರಸ್ಥರಿಗೆ ಸಹಾಯಕವಾಗುವ ನಿಟ್ಟಿನಲ್ಲಿ ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಪುರಸಭೆಯ ಸಹಕಾರದಲ್ಲಿ ಪ್ರಮುಖ ರಸ್ತೆ, ವೃತ್ತ ಹಾಗೂ ಜನದಟ್ಟಣೆ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಸಲಾಗುತ್ತಿದೆ. ವಾಹನಗಳ ಅವ್ಯವಸ್ಥಿತ ನಿಲುಗಡೆ ಕುರಿತು ಇಲಾಖೆಯ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಸಂಚಾರಿ ನಿಯಮಗಳ ಕುರಿತು ಜಾಗೃತಿ ಮೂಡಿಸುವ ಮತ್ತು ವಾಹನ ನಿಲುಗಡೆಯ ಪಟ್ಟಿಗಳನ್ನು ಹಾಕಲಾಗುತ್ತಿದೆ. ಮುಂದೆ ಸಂಚಾರಿ ನಿಯಮಗಳನ್ನು ಪಾಲಿಸದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಜಿಲ್ಲೆಯಲ್ಲಿ ಗಜೇಂದ್ರಗಡ ದೊಡ್ಡ ಪಟ್ಟಣವಾಗಿ ಬೆಳೆಯುತ್ತಿದೆ. ಪ್ರತಿನಿತ್ಯ ಪಟ್ಟಣಕ್ಕೆ ವ್ಯಾಪಾರ- ವಹಿವಾಟಿಗಾಗಿ ಆಗಮಿಸುವ ನೆರೆಯ ತಾಲೂಕಿನ ಗ್ರಾಮಸ್ಥರು ಹಾಗೂ ಪಟ್ಟಣದ ನಿವಾಸಿಗಳು ಕೆಲವು ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ವಾಹನ ದಟ್ಟಣೆ ಹಾಗೂ ರಸ್ತೆ ಮಧ್ಯದಲ್ಲಿ ವ್ಯಾಪಾರ ವಹಿವಾಟು ನಡೆಸುವುದರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಕುರಿತು ಸಾಕಷ್ಟು ದೂರುಗಳು ಬಂದಿದ್ದವು. ಹೀಗಾಗಿ ಇಲ್ಲಿನ ಪೊಲೀಸ್ ಠಾಣೆಯ ಸಹಯೋಗದೊಂದಿಗೆ ಸಂಚಾರಿ ನಿಯಮಗಳ ಪಟ್ಟಿಯನ್ನು ಹಾಗೂ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ವಿವಿಧೆಡೆ 90ಕ್ಕೂ ಅಧಿಕ ಸಿಸಿ ಟಿವಿಗಳನ್ನು ಅಳವಡಿಸಲಾಗುತ್ತಿದೆ ಎಂದರು.
ಪುರಸಭೆ ಆರೋಗ್ಯ ಸಹಾಯಕ ರಾಘವೇಂದ್ರ ಮಂತಾ, ಕಿರಿಯ ಆರೋಗ್ಯ ನೀರಿಕ್ಷಕ ಶಿವು ಇಲಾಳ, ಶರಣಪ್ಪ ಭಜಂತ್ರಿ, ಹನಮಂತ ಚಲವಾದಿ, ಮಾರುತಿ ನಂದಾಪುರ ಇದ್ದರು.
 

ಸಕಾಲದಲ್ಲಿ ’ಸಕಾಲ ಸೇವೆ’ ಒದಗಿಸಿ: ಜಿಲ್ಲಾಧಿಕಾರಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗದಗ
ಸಕಾಲ ಸೇವೆಯಲ್ಲಿ ಸ್ವೀಕೃತವಾಗಿರುವ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ಮಾಡದೇ ಸಾರ್ವಜನಿಕರಿಗೆ ಕಾಲಮಿತಿಯೊಳಗೆ ಸೇವೆ ಒದಗಿಸಬೇಕು. ಜಿಲ್ಲೆಯಲ್ಲಿ ಅವಧಿ ಮೀರಿ ಬಾಕಿ ಉಳಿದಿರುವ ಪ್ರಕರಣಗಳನ್ನು ವಿಚಾರಣೆ ನಡೆಸಿ, ತ್ವರಿತವಾಗಿ ಇತ್ಯರ್ಥಗೊಳಿಸಬೇಕು’ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಸೂಚಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಸಕಾಲ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿನಾಕಾರಣ ತಿರಸ್ಕರಿಸಬೇಡಿ
ಸಕಾಲ ಸೇವೆಯನ್ನು ನಾಗರಿಕರಿಗೆ ಸಮಯಬದ್ಧವಾಗಿ ನೀಡಿ, ಸಮರ್ಪಕವಾಗಿ ಅನು?ನಗೊಳಿಸಬೇಕು. ಸಕಾಲದಲ್ಲಿ ಸ್ವೀಕೃತವಾಗಿರುವ ಅರ್ಜಿಗಳನ್ನು ವಿನಾಕಾರಣ ಅಥವಾ ಉದ್ದೇಶಪೂರಿತವಾಗಿ ತಿರಸ್ಕೃತಗೊಳಿಸಬಾರದು. ನಿಗದಿತ ಅವಧಿಯೊಳಗೆ ಅರ್ಜಿಗಳ ವಿಲೇವಾರಿ ಆಗುವಂತೆ ಕ್ರಮ ವಹಿಸಬೇಕು ಎಂದರು.

ಸಕಾಲ ಸೇವೆಯಲ್ಲಿ ತಾಂತ್ರಿಕ ದೋ?ಗಳು ಉದ್ಭವಿಸಿದಲ್ಲಿ ಸಕಾಲಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ, ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಸಕಾಲ ಸೇವೆ ಒದಗಿಸುತ್ತಿರುವ ಇಲಾಖೆಯಲ್ಲಿ ಸಾರ್ವಜನಿಕರಿಗೆ ಕಾಣಿಸುವಂತೆ ಕಡ್ಡಾಯವಾಗಿ ನಾಮಫಲಕ ಅಳವಡಿಸಬೇಕು. ಪ್ರತಿನಿತ್ಯ ಅಧಿಕಾರಿಗಳು ಕಚೇರಿಗೆ ಹಾಜರಾದ ತಕ್ಷಣ ಸಕಾಲ ಸೇವೆಯಲ್ಲಿ ಸ್ವೀಕೃತವಾಗಿರುವ ಅರ್ಜಿಗಳ ಬಗ್ಗೆ ಪರಿಶೀಲನೆ ನಡೆಸಬೇಕು. ಸಕಾಲ ಸೇವೆ ನೀಡುತ್ತಿರುವ ಜಿಲ್ಲೆಯ ಎಲ್ಲ ಇಲಾಖೆಗಳು ತ್ವರಿತ ಅರ್ಜಿ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಚುರುಕಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಸಕಾಲ ಯೋಜನೆ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ವರದಿ ನೀಡಲು ಸೂಚನೆ: ಜಿಲ್ಲೆಯಲ್ಲಿ ೪೫ ಇಲಾಖೆಗಳಲ್ಲಿ ೫೨೪ ಸಕಾಲ ಸೇವೆಗಳನ್ನು ಒದಗಿಸಲಾಗುತ್ತಿದ್ದು, ಸಕಾಲ ಅರ್ಜಿಗಳ ಸ್ವೀಕೃತಿಯಲ್ಲಿ ಇಳಿಕೆಯಾಗುತ್ತಿದೆ. ಅಲ್ಲದೆ, ಕೆಲವು ಇಲಾಖೆಗಳಲ್ಲಿ ಶೂನ್ಯ ಅರ್ಜಿಗಳ ಸ್ವೀಕೃತಿ ಆಗಿರುವ ಬಗ್ಗೆ ಗಮನಿಸಲಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕಚೇರಿಗಳಿಗೆ ಭೇಟಿ ನೀಡಿ, ಸಕಾಲದಡಿ ಶೂನ್ಯ ಸ್ವೀಕೃತಿಗೆ ಕಾರಣಗಳ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಿದರು.
ಬೆಳೆ ಸಮೀಕ್ಷೆ ಪೂರ್ಣಗೊಳಿಸಿ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹಾನಿಯಾಗಿರುವ ಬೆಳೆಗಳ ಬಗ್ಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಕೈಗೊಂಡಿರುವ ಜಂಟಿ ಬೆಳೆ ಸಮೀಕ್ಷೆ ಕಾರ್ಯ ಶೀಘ್ರವೇ ಪೂರ್ಣಗೊಳಿಸಬೇಕು. ಬೆಳೆ ಮತ್ತು ಮನೆ ಹಾನಿ ಆಗಿರುವ ಕುರಿತು ವರದಿ ಸಲ್ಲಿಸಬೇಕು. ಶಿಥಿಲಾವಸ್ಥೆಯಲ್ಲಿರುವ ಮಣ್ಣಿನ ಮನೆಗಳಲ್ಲಿ ವಾಸ ಮಾಡುತ್ತಿರುವ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಬೇಕು. ಮಳೆ ಪ್ರಮಾಣ ಕಡಿಮೆ ಆದನಂತರ ಜಿಲ್ಲೆಯಲ್ಲಿ ಹಾನಿಗೊಳಗಾಗಿರುವ ರಸ್ತೆಗಳನ್ನು ದುರಸ್ಥಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ನಿರ್ದೇಶಿಸಿದರು.
ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ ಎಂ., ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಸ್.ಎನ್. ರುದ್ರೇಶ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಿ. ಕಲ್ಲೇಶ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ., ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿ.ಎಲ್. ಬಾರಾಟಕ್ಕೆ, ವಯಸ್ಕರ ಶಿಕ್ಷಣಾಧಿಕಾರಿ ಮಂಗಳಾ ತಾಪಸ್ಕರ್ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಇದ್ದರು.
 
 

ಅಂಡರ್ ಪಾಸ್ ಸ್ವಚ್ಛಗೊಳಿಸಿ ಆಪ್ ಕಾರ್ಯಕರ್ತರಿಂದ ವಿಭಿನ್ನ ಪ್ರತಿಭಟನೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಹುಬ್ಬಳ್ಳಿ
ಸನಾ ಕಾಲೇಜು ಪಕ್ಕದ ಬಿ.ಆರ್.ಟಿ.ಎಸ್. ಬಸ್ ನಿಲ್ದಾಣದಲ್ಲಿ ಅವೈಜ್ಞಾನಿಕ ಅಂಡರ್ ಪಾಸ್ ನಿರ್ಮಾಣ ಮಾಡಿರುವುದನ್ನು ಖಂಡಿಸಿ ಆಮ್ ಆದ್ಮಿ ಪಕ್ಷ ಶುಕ್ರವಾರ ಅಂಡರ್ ಪಾಸ್ ಸ್ವಚ್ಛಗೊಳಿಸಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿತು.
ಇಲ್ಲಿನ ಬೈರಿದೇವರಕೊಪ್ಪದ ಸನಾ ಕಾಲೇಜು ಪಕ್ಕದ ಬಿ.ಆರ್.ಟಿ.ಎಸ್. ಅಂಡರ್ ಪಾಸ್ ಸಂಪೂರ್ಣ ಹದಗೆಟ್ಟಿದ್ದು, ಜನರು ಪ್ರಾಣ ಅಂಗೈಯಲ್ಲಿ ಹಿಡಿದು ರಸ್ತೆ ದಾಟುವಂತಾಗಿದೆ.
ಯೋಜನೆಯಲ್ಲಿ ಏಕೈಕ ಅಂಡರ್ ಪಾಸ್ ಇದ್ದರೂ ಅದರ ನಿರ್ವಹಣೆಯಲ್ಲಿ ಬಿ.ಆರ್.ಟಿ.ಎಸ್. ಎಡವಿದೆ. ಒಂದು ವರ್ಷದಿಂದ ಅಂಡರ್ ಪಾಸ್ ನಲ್ಲಿ ನೀರು ನಿಂತು ಕೆರೆಯಂತಾಗಿದೆ. ಬಿ.ಆರ್.ಟಿ.ಎಸ್. ಬಸ್ ನಿಲ್ದಾಣದಿಂದ ಬಸ್ಸಿಳಿದು ರಸ್ತೆ ದಾಟಲು ಕಷ್ಟವಾಗುತ್ತಿದ್ದು, ಇದನ್ನು ಖಂಡಿಸಿ ಆಮ್ ಆದ್ಮಿ ಪಕ್ಷದ ಮುಖಂಡರು, ಕಾರ್ಯಕರ್ತರು ಅಂಡರ್ ಪಾಸ್ ಸ್ವಚ್ಛಗೊಳಿಸಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದೇವೆ. ಸ್ವಚ್ಛ ಭಾರತ ಜಪ ಮಾಡುವ ನಾಯಕರಿಗೆ ಬಿ.ಆರ್.ಟಿ.ಎಸ್. ಅಂಡರ್ ಪಾಸ್ ಕಣ್ಣಿಗೆ ಬಿದ್ದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು, ಕೇಂದ್ರ ಸಚಿವರು ಹಾಗೂ ಶಾಸಕರು ಕಾಡಿಡಾರ್ ಗೆ ಭೇಟಿ ನೀಡಿ, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಮುಂದಾಗಬೇಕೆದು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಆಗ್ರಹಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ ನರಗುಂದ, ಕಾರ್ಯಕಾರಿ ಸಮಿತಿಯ ಸದಸ್ಯ ಅನಂತಕುಮಾರ ಭಾರತೀಯ, ಪಶ್ಚಿಮ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಶಶಿಕುಮಾರ್ ಸುಳ್ಳದ, ಲಕ್ಷ್ಮಣ ರಾಥೋಡ, ವಿ.ವಿ. ಮಾಗನೂರ, ಶಿವಲಿಂಗಪ್ಪ ಜಡೇನವರ, ಭೀಮಸಿ ಪೂಜಾರ, ಯುವ ಘಟಕದ ಉಸ್ತುವಾರಿ ಡೇನಿಯಲ್ ಐಕೋಸ್, ವೀರೇಂದ್ರ ಸಾಂಬ್ರಾಣಿ, ಲತಾ, ಶಿವಕಿರಣ ಇದ್ದರು.

ಹಿಂಗಾರು ಬಿತ್ತನೆಗೆ ಅಧಿಕ ಮಳೆ ಅಡ್ಡಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ನರಗುಂದ
ಹಿಂಗಾರು ಹಂಗಾಮು ಅಕ್ಟೋಬರ್ ಮೊದಲ ವಾರದಿಂದ ಆರಂಭ ಕಂಡಿದ್ದರೂ ನರಗುಂದ ತಾಲೂಕಿನ ಹೆಚ್ಚಿನ ಸಂಖ್ಯೆ ರೈತರು ಇನ್ನೂ ಭೂಮಿ ಹದಗೊಳಿಸಲು ತೊಂದರೆ ಅನುಭವಿಸುವಂತಾಗಿದೆ.
ಕಳೆದ ವರ್ಷದ ಹಿಂಗಾರು ಇದೇ ಅವಧಿಯಲ್ಲಿ ಶೇ. 20ರಷ್ಟು ಬಿತ್ತನೆಗೊಂಡಿತ್ತು. ಈ ವರ್ಷದ ಆಗಸ್ಟ್ ಮತ್ತು ಅಕ್ಟೋಬರ್ ಅವಧಿಯಲ್ಲಿ ಹೆಚ್ಚಿನ ಮಳೆ ಕಂಡಿದ್ದರಿಂದ ಹಿಂಗಾರು ಹಂಗಾಮಿನ ತಿಥಿ ಮುಗಿಯುವುದರೊಳಗಾಗಿ ರೈತರು ಬಿತ್ತನೆ ಪೂರ್ಣಗೊಳಿಸಬೇಕಿದೆ. ಆದರೆ, ಹೆಚ್ಚಿನ ಮಳೆಯಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಈ ನಡುವೆ ಮುಂಗಾರು ಹಂಗಾಮಿನಲ್ಲಿ ಬೆಳೆದ ಅನೇಕ ಬೆಳೆಗಳನ್ನು ತಾಲೂಕಿನ ಕೊಣ್ಣೂರ ಬೂದಿಹಾಳ ಮತ್ತು ಕಪ್ಪಲಿ, ಕಲ್ಪಾಪೂರ, ಶಿರೋಳ, ವಾಸನ, ಬೆಳ್ಳೇರಿ, ಸುರಕೋಡ, ಮುಗನೂರ ಗ್ರಾಮದ ರೈತರು ಮಲಪ್ರಭೆ ಹಾಗೂ ಬೆಣ್ಣೆಹಳ್ಳದ ಪ್ರವಾಹದಿಂದ ಕಳೆದುಕೊಂಡು ತೊಂದರೆ ಅನುಭವಿಸುವಂತಾಗಿದೆ. ಕೊಣ್ಣೂರ, ವಾಸನ, ಬೆಳ್ಳೇರಿ ಮತ್ತು ಬೂದಿಹಾಳದ ರೈತರು ಬೆಳೆದ ತರಕಾರಿ, ಪೇರಲ ಮತ್ತು ಇತರ ಬೆಳೆಗಳು ಹಾನಿಗೊಂಡು ಆತಂಕ ಎದುರಿಸುತ್ತಿದ್ದಾರೆ.
ಬಿತ್ತನೆ ಬೀಜ ಲಭ್ಯ:
ಕೆಲವೇ ಕೆಲವು ಗ್ರಾಮೀಣ ಭಾಗಗಳ ರೈತರು ಹಿಂಗಾರು ಹಂಗಾಮಿಗೆ ಸೂರ್ಯಪಾನ ಬಿತ್ತನೆ ಮಾಡಿದ್ದಾರೆ. ಮಳೆಯ ಪರಿಣಾಮದಿಂದ ಅವರಿಗೂ ತೊಂದರೆ ತಪ್ಪಿಲ್ಲ. ಈ ನಡುವೆ ಅ. 9ರಿಂದ ಹಿಂಗಾರು ಹಂಗಾಮಿಗಾಗಿ ನರಗುಂದ ಹಾಗೂ ಕೊಣ್ಣೂರಿನ ಮತ್ತು ಟಿಎಪಿಸಿಎಂಎಸ್ ಹಾಗೂ ಸುರಕೋಡ ಗ್ರಾಮದ ರೈತ ಸೇವಾ ಕೇಂದ್ರದಲ್ಲಿ ಹಿಂಗಾರು ಬಿತ್ತನೆ ಬೀಜ ಒದಗಿಸಲಾಗುತ್ತಿದೆ.
ಸದ್ಯದ ಸ್ಥಿತಿಯಲ್ಲಿ ಕಡಲೆ ಮತ್ತು ಜೋಳದ ಬೀಜಗಳನ್ನು ರೈತ ಸಂಪರ್ಕ ಕೇಂದ್ರದಿಂದ ನೀಡಲಾಗುತ್ತಿದೆ. ಸಾಮಾನ್ಯವರ್ಗದವರಿಗೆ ಕಡಲೆ 20 ಕೆಜಿ ಪ್ಯಾಕೇಟಿಗೆ 900 ರೂ., ಎಸ್‌ಟಿ/ಎಸ್‌ಟಿ ವರ್ಗದವರಿಗೆ 650 ರೂ., 3 ಕೆಜಿ ಜೊಳದ ಪ್ಯಾಕೇಟಿಗೆ ಸಾಮಾನ್ಯ ವರ್ಗಕ್ಕೆ 110 ರೂ., ಎಸ್‌ಸಿ/ಎಸ್‌ಟಿ ಜನಾಂಗಕ್ಕೆ 81 ರೂ. ದರದಲ್ಲಿ ರೈತ ಸಂಪರ್ಕ ಕೇಂದ್ರಗಳಿಂದ ಒದಗಿಸಲಾಗುತ್ತಿದೆ. ಗೋದಿ ಮತ್ತು ಸೂರ್ಯಪಾನ ಬೀಜಗಳು ಇನ್ನೂ ರೈತ ಸಂಪರ್ಕ ಕೇಂದ್ರದಲ್ಲಿ ದೊರೆಯುತ್ತಿಲ್ಲ. ಆ ಬೀಜಗಳನ್ನು ಆದಷ್ಟು ಶೀಘ್ರ ತರಿಸಿ ರೈತರಿಗೆ ಒದಗಿಸಲಾಗುವುದು ಎಂಧು ಕೃಷಿ ಇಲಾಖೆ ಮಾಹಿತಿ ನೀಡಿದೆ.

ನರಗುಂದ: ಕೃಷಿ ಪರಿಕರ ಮಾರಾಟಗಾರರ ಸಭೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ನರಗುಂದ
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಕೃಷಿ ಇಲಾಖೆ ವತಿಯಿಂದ ಕೃಷಿ ಪರಿಕರ ಮಾರಾಟಗಾರರ ಸಭೆಯನ್ನು ಅ. ೧೫ರಂದು ಆಯೋಜಿಸಲಾಗಿತ್ತು. ಗದುಗಿನ ಸಹಾಯಕ ಕೃಷಿ ನಿರ್ದೇಶಕ ಜಾರಿದಳದ ಸಂತೊಷ ಪಟ್ಟದಕಲ್ ಕೃಷಿ ಪರಿಕರ ಮಾರಾಟಗಾರರಿಗೆ ಕೆಲವು ನಿರ್ದೇಶನಗಳನ್ನು ನೀಡಿದರು.
ಪಟ್ಟದಕಲ್ ಸಭೆಯಲ್ಲಿ ಮಾತನಾಡಿ, ಕಂಪನಿಗಳಿಂದ ಕೀಟನಾಶಕ ಕೊಳ್ಳುವಾಗ ಕೀಟನಾಶಕಗಳೊಂದಿಗೆ ಮಾಹಿತಿ ಚೀಟಿ ಇರುವುದನ್ನು ಪರೀಕ್ಷಿಸಿ ಖಾತರಿಪಡಿಸಿಕೊಳ್ಳಬೇಕು. ಪರವಾನಗಿಯಲ್ಲಿ ನಮೂದಿಸಿದ ಕೀಟನಾಶಕಗಳನ್ನು ಮಾತ್ರ ಮಾರಾಟ ಮಾಡಬೇಕು. ನೋಂದಾಯಿತ ಜೈವಿಕ ಕೀಟನಾಶಕಗಳನ್ನು ಮಾತ್ರ ಮಾರಾಟ ಮಾಡಬೇಕು.
ನೋಂದಾಯಿತವಲ್ಲದ ಲಘು ಪೋಷಕಾಂಶಗಳನ್ನು ಮಾರುವಂತಿಲ್ಲ. ಅವಧಿ ಮುಗಿದ ಕೀಟನಾಶಕಗಳನ್ನು ಮಾರಾಟ ಮಾಡಕೂಡದು. ಈ ತರಹದ ಕೀಟನಾಶಕಗಳ ಮೇಲೆ ನಮೂದಿಸಿದ ಅವಧಿ ಮುಗಿಯುವ ದಿನಾಂಕವನ್ನು ಯಾವುದೇ ಕಾರಣಕ್ಕೂ ತಿರುವಂತಿಲ್ಲ. ಗಂಧಕ ಮೂಲದ ಕೀಟನಾಶಕಗಳನ್ನು ಮಾರಾಟ ಮಾಡುವಾಗ ಈ ಕೀಟನಾಶಕಗಳ ಸ್ಟಾಕ್‌ನ್ನು ಪ್ರತ್ಯೇಕ ಸ್ಟಾಕ್ ಬುಕ್‌ನಲ್ಲಿ ನಮೂದಿಸುವುದು.

ಕಾಯ್ದೆ ಉಲ್ಲಂಘಿಸಬೇಡಿ:
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ ಅಂಗಡಿ ಸಭೆಯಲ್ಲಿ ಮಾತನಾಡಿ, ಕೃಷಿ ಪರಿಕರ ಮಾರಾಟಗಾರರು ಯಾವುದೇ ಸಂದರ್ಭದಲ್ಲಿ ಕಾಯ್ದೆಗಳನ್ನು ಉಲ್ಲಂಘಿಸದೆ ಕಾಯ್ದೆಗನುಸಾರವಾಗಿ ತಮ್ಮ ವ್ಯಾಪಾರ ನಡೆಸಿಕೊಂಡು ಹೋಗಬೇಕೆಂದು ಸೂಚಿಸಿದರು.

ರಸಗೊಬ್ಬರ ಚೀಲದ ಮೇಲೆ ನಮೂದಿಸಿದ ಮೂಲ ಬೆಲೆಗಿಂತ ಹೆಚ್ಚಿನ ದರದಲ್ಲಿ ಗೊಬ್ಬರ ಮಾರಾಟ ಮಾಡುವಂತಿಲ್ಲ. ಬೀಜ ಮಾರಾಟ ಮಾಡುವಾಗ ಬಿಲ್ ಬುಕ್‌ನ್ನು ಕಡ್ಡಾಯವಾಗಿ ನಿರ್ವಹಿಸಬೇಕು. ಬೀಜ ಮಾರಾಟ ಮಾಡುವವರು ಕಡ್ಡಾಯವಾಗಿ ಮೂಲ ಪ್ರಮಾಣಪತ್ರ ಪಡೆಯಬೇಕು, ರಸಗೊಬ್ಬರ ಮಾರಾಟ ಮಾಡುವಾಗ ಕಡ್ಡಾಯವಾಗಿ ಪಿಓಎಸ್ ಮಶಿನ್ ಬಿಲ್ಲಿನೊಂದಿಗೆ ಕೈ ಬರಹದ ಬಿಲ್ಲನ್ನು ನೀಡಬೇಕೆಂದರು. ರೈತರಿಗೆ ಉತ್ತಮ ಗುಣಮಟ್ಟದ ಕೃಷಿ ಪರಿಕರಗಳನ್ನು ಮಾರಾಟ ಮಾಡಬೇಕೆಂದು ಕೃಷಿ ಪರಿಕರ ಮಾರಾಟಗಾರರಿಗೆ ಪಟ್ಟದಕಲ್ ಸೂಚಿಸಿದರು.
ಕೃಷಿ ಇಲಾಖೆ ತಾಂತ್ರಿಕ ವರ್ಗದ ಅಧಿಕಾರಿ ಶ್ರೀಶೈಲ ಅಂಗಡಿ, ಎಸ್.ಆರ್. ಭಜಂತ್ರಿ ಹಾಗೂ ಕೃಷಿ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು. ವೆಂಕಟೇಶ ಗುಡಿಸಾಗರ ಸ್ವಾಗತಿಸಿದರು ಕೃಷಿ ಇಲಾಖೆ ಸಿಬ್ಬಂದಿ ಸಾಠೆ ಶಿವಾಜಿ ನಿರ್ವಹಿಸಿದರು.
 

error: Content is protected !!