Home Blog Page 3027

ಮನೆಯ ಛಾವಣಿ ಕುಸಿದು ವೃದ್ಧೆ ಸಾವು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಕಳೆದ ಮೂರು ದಿನಗಳಿಂದ ಸುರಿದ ಮಳೆಗೆ ಹಸಿಯಾಗಿದ್ದ ಮನೆಯ ಛಾವಣಿ ಕುಸಿದು ವೃದ್ಧೆಯೊಬ್ಬರು ಮೃತಪಟ್ಟಿದ್ದು ಮೊಮ್ಮಗ ತೀವ್ರವಾಗಿ ಗಾಯಗೊಂಡ ಘಟನೆ ಕೊಪ್ಪಳ ತಾಲೂಕಿನ ಟನಕನಕಲ್ ಗ್ರಾಮದಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.

ಈರಮ್ಮ ಮೆಳ್ಳಿಕೇರಿ (86) ಮೃತ ವೃದ್ಧೆ. ಮೊಮ್ಮಗ ಪರಪ್ಪನಿಗೂ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.


ಸ್ಥಳಕ್ಕೆ ತಹಸೀಲ್ದಾರ ಜಿ.ಬಿ.ಮಜ್ಜಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾಲಮಿತಿಯೊಳಗೆ ತೆರಿಗೆ ವಸೂಲಿ ಮಾಡಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ನಗರ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಆರ್ಥಿಕವಾಗಿ ಸದೃಢವಾಗಲು ಸಾರ್ವಜನಿಕರಿಂದ ಸಕಾಲಕ್ಕೆ ತೆರಿಗೆ ವಸೂಲಿ ಮಾಡಬೇಕು. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರ, ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ತಹಸೀಲ್ದಾರರೊಡನೆ ಹಾನಿಗೊಳಗಾದ ಮನೆಗಳ ಜಂಟಿ ಸಮೀಕ್ಷೆ ಜರುಗಿಸಿ ಸಂತ್ರಸ್ತರಿಗೆ ನೆರವು ನೀಡಲು ಅಗತ್ಯದ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿದ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈಗಾಗಲೇ ಬಾಕಿ ಉಳಿಸಿಕೊಂಡಿರುವ ತೆರಿಗೆಗಳನ್ನು ಗುರಿ ನಿಗದಿಪಡಿಸಿಕೊಂಡು ಕಾಲಮಿತಿಯೊಳಗೆ ವಸೂಲಿ ಮಾಡಲು ಕಾರ್ಯೋನ್ಮುಖರಾಗಬೇಕು. ಸ್ಥಳೀಯ ಸಂಸ್ಥೆಗಳ ಆದಾಯ ಹೆಚ್ಚಿಸಲು ಈಗಾಗಲೇ ಸಾರ್ವಜನಿಕರು ತೆರಿಗೆಗಳನ್ನು ಭರಿಸುತ್ತಿದ್ದು, ನ್ಯಾಯಯುತವಾಗಿ ತೆರಿಗೆಗೊಳಪಡುವ ವಿವಿಧ ರೀತಿಯ ಕಟ್ಟಡಗಳ ಅನುಗುಣವಾಗಿ ವ್ಯತ್ಯಾಸವಾಗಿ ಭರಿಸುತ್ತಿರುವ ತೆರಿಗೆಯನ್ನು ಗುರುತಿಸಲು ಸ್ಥಳೀಯ ಸಂಸ್ಥೆಗಳವಾರು, ವಾರ್ಡ್‌ವಾರು ಸಮೀಕ್ಷೆ ಕೈಗೊಳ್ಳಬೇಕು. ತೆರಿಗೆ ವಂಚನೆಯಾಗದಂತೆ ನಿಗಾವಹಿಸಬೇಕು ಎಂದು ಸ್ಥಳೀಯ ಸಂಸ್ಥೆ ಮುಖ್ಯಸ್ಥರಿಗೆ ತಿಳಿಸಿದರು.
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಈಗಾಗಲೇ ನಗರ ಸ್ಥಳೀಯ ಸಂಸ್ಥೆಗಳು ನಗರದ ಸ್ವಚ್ಛತೆಗೆ ಶ್ರಮಿಸುತ್ತಿದ್ದು, ಹಸಿ ಕಸ ಒಣ ಕಸ ವಿಂಗಡಣೆಯಲ್ಲಿ ಶೇ.100% ರಷ್ಟು ಗುರಿ ಸಾಧಿಸಬೇಕು. ದಿನನಿತ್ಯ ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಮೂಲಭೂತ ಸೌಲಭ್ಯಗಳಾದ ಒಳಚರಂಡಿ, ಸ್ವಚ್ಚತೆ, ಬಿದಿ ದೀಪ ನಿರ್ವಹಣೆ, ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತಲುಪಿಸಿ ತಮ್ಮ ಕರ್ತವ್ಯ ಪ್ರಜ್ಞೆಯನ್ನು ನಿರ್ವಹಿಸಲು ಸೂಚಿಸಿದರು.
ಪೌರಕಾರ್ಮಿಕರ ಆರೋಗ್ಯದ ಬಗ್ಗೆ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಚರ್ಚಿಸಿದ ಅವರು ಕೊವಿಡ್-19 ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಪ್ರತಿವಾರ ಮಾಸ್ಕ, ಸುರಕ್ಷಾ ಪರಿಕರಗಳನ್ನು ಪೂರೈಸಲು ಹಾಗೂ ಕೊವಿಡ್ ಪ್ರದೇಶಗಳಲ್ಲಿ ತಾಜ್ಯ ನಿರ್ವಹಣೆಯಲ್ಲಿರುವ ಸಿಬ್ಬಂದಿಗಳು ಸುರಕ್ಷಾ ಪರಿಕರಗಳನ್ನು ಬಳಸಿ ನಿರ್ವಹಿಸಬೇಕು. ಆತ್ಮ ನಿರ್ಭರ ಭಾರತ ಯೋಜನೆಯಡಿ ಸರ್ಕಾರದಿಂದ ನೀಡಿದ ನಿರ್ದೇಶನಗಳನ್ವಯ ಎಲ್ಲ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್‌ಬಾಬು ಸೂಚಿಸಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ರುದ್ರೇಶ ಎಸ್.ಎನ್. ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ರಮೇಶ ಜಾದವ, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಅಭಿಯಂತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಲಕ್ಕುಂಡಿ ಸ್ಮಶಾನದಲ್ಲಿ ವನಮಹೋತ್ಸವ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಲಕ್ಕುಂಡಿ
ಇಲ್ಲಿಯ ಕದಾಂಪೂರ ರಸ್ತೆಯಲ್ಲಿರುವ ಮುಸಲ್ಮಾನ ಸಮಾಜದ ಸ್ಮಶಾನದಲ್ಲಿ ಅಂಜುಮನ್ ಇಸ್ಲಾಂ ಕಮಿಟಿ ಆಶ್ರಯದಲ್ಲಿ (ಕಬರಸ್ತಾನ) ವನ ಮಹೋತ್ಸವ ಆಚರಿಸಲಾಯಿತು.
ಸಸಿ ನೆಡುವುದರ ಮೂಲಕ ವನ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಪೀರಸಾಬ ನದಾಫ ಅವರು ಸ್ಮಶಾನದಲ್ಲಿ ಅಂತ್ಯಕ್ರಿಯೆಗೆ ತೊಂದರೆಯಾಗಿ ಬೆಳೆದು ನಿಂತಿದ್ದ ಜಾಲಿ ಕಂಟಿಗಳು ಸೇರಿದಂತೆ ಇತರೆ ವ್ಯಾಜ್ಯ ಗಿಡಗಳನ್ನು ಕಳೆದ ವಾರ ಸ್ವಚ್ಛಗೊಳಿಸಲಾಯಿತು.
ಈಗ ಕಮಿಟಿ ಹಾಗೂ ಗ್ರಾಮಸ್ಥರ ನೆರವಿನೊಂದಿಗೆ 350 ಸಸಿಗಳನ್ನು ನೆಡಲಾಗಿದೆ. ಇದರಲ್ಲಿ 300 ಹುಣಸೆ ಸಸಿ ಸೇರಿದಂತೆ ಇತರೆ ಸಸಿಗಳನ್ನು ನೆಡಲಾಗುತ್ತಿದೆ. ಇದರಿಂದ ಸ್ಮಶಾನದಲ್ಲಿ ಅಂತ್ಯಕ್ರಿಯೆಗೆ ಬರುವ ಜನರಿಗೆ ನೆರಳಿನೊಂದಿಗೆ ಉತ್ತಮ ಪರಿಸರ ನಿರ್ಮಾಣವಾಗುತ್ತದೆ. ಎಂದರು.
ಕಮಿಟಿ ಉಪಾಧ್ಯಕ್ಷ ನಜೀರಅಹ್ಮದ ಕಿರಟಗೇರಿ, ಎಂ.ಎನ್.ಉಮಚಗಿ, ಜಂದೀಸಾಬ ನದಾಫ, ರುದ್ರಪ್ಪ ಮುಸ್ಕಿನಬಾವಿ,ಮೈಲಾರಪ್ಪ ಗುಂಜಳ, ಈರಣ್ಣ ಕಂಚಗಾರ, ಅಬ್ಬಾಸಲಿ ಹಂದ್ರಾಳ, ಇಬ್ರಾಹೀಂಸಾಬ ನದಾಫ, ಅಶೋಕ ಮುಸ್ಕಿನಬಾವಿ, ಹಸನಸಾಬ ನದಾಫ, ಕಾಶಿಂಸಾಬ ತಹಶಿಲ್ದಾರ, ಜಂದೀಸಾಬ ಹಮ್ಮಸಾಗರ, ಇಮ್ರಾನ ಕೊರ್ಲಹಳ್ಳಿ, ನಾಮದೇವ ದಾಸ್ಮನಿ, ಜಾಕೀರಸಾಬ ಯರಗುಡಿ ಪೀರಸಾಬ ನದಾಫ ಹಾಜರಿದ್ದರು.
 

ಮಹದಾಯಿ ಅನುಷ್ಠಾನದಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡಿದೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ
ರೈತರಿಗೆ ನೀರಿನ ಲಭ್ಯತೆ ಅಗತ್ಯವಿದೆ. ಕುಡಿಯುವ ನೀರಿನ ಯೋಜನೆಯಾದ ಕಳಸಾ ಬಂಡೂರಿ ಜೋಡನೆಗೂ ಸರ್ಕಾರ ಸಿದ್ದವಿಲ್ಲ. ಮಹದಾಯಿ ಅನುಷ್ಟಾನ ಕೈಗೊಳ್ಳಲು ಸರ್ಕಾರ ನಿರ್ಲಕ್ಷ್ಯ ಮಾಡಿದೆ ಎಂದು ರೈತ ಸೇನಾ ಕರ್ನಾಟಕ ಸಮಿತಿ ಮುಖಂಡ ಹನುಮಂತ ಸರನಾಯ್ಕರ್ ಸರ್ಕಾರದ ನೀತಿ ಕುರಿತು ಟೀಕೆ ಮಾಡಿದರು.
ಮಹದಾಯಿ ಮಲಪ್ರಭೆ ನದಿ ಜೋಡಣೆಗಾಗಿ ಆಗ್ರಹಿಸಿ ನರಗುಂದದಲ್ಲಿ ರೈತ ಸೇನಾ ಕರ್ನಾಟಕ ಸಮಿತಿಯಿಂದ ನಡೆದ ಧರಣಿ ಗುರುವಾರಕ್ಕೆ 1917 ನೇ ದಿನದಲ್ಲಿ ಮುಂದುವರೆದಿದ್ದು ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗೋವಾ ಸರ್ಕಾರದ ಮೊಂಡು ಧೋರಣೆಯಿಂದ ಮಹದಾಯಿ ಅನುಷ್ಟಾನಕ್ಕೆ ಹಿನ್ನಡೆಯಾಗಿದೆ.
ನ್ಯಾಯಮಂಡಳಿ ನೀಡಿರುವ ತೀರ್ಪು ಕರ್ನಾಟಕದ ಪರವಾಗಿದೆ. ಗೆಜೆಟ್ ನೋಟಿಫೀಕೇಶನ್ ಕೇಂದ್ರ ಸರ್ಕಾರ ಹೊರಡಿಸಿದ ನಂತರ ಮತ್ತು ಕರ್ನಾಟಕಕ್ಕೆ ದೊರೆತ 13.42 ಸರ್ಕಾರ ಪುನರ್ ಪರಶೀಲನೆ ಅರ್ಜಿ ಸುಪ್ರೀಂ ಕೋರ್ಟಿಗೆ ಹಾಕಿದ್ದರಿಂದ ಮಹದಾಯಿ ನದಿ ವಿವಾದ ಪುನಹ ವಿಚಾರಣೆ ಹಂತದಲ್ಲಿದೆ. ಕಳೆದ ಆಗಷ್ಟ್‌ನಲ್ಲಿ ಸುಪ್ರೀಂ ಕೋರ್ಟ ಕೊನೆ ಹಂತದ ವಿಚಾರಣೆ ನಡೆಸಬೇಕಾಗಿತ್ತು. ಆದರೆ ಇದನ್ನು ಮುಂದಿನ ವರ್ಷ ಆಗಷ್ಟ್‌ಗೆ ನಡೆಸುವುದಾಗಿ ನ್ಯಾಯಾಲಯ ತಿಳಿಸಿದ್ದರಿಂದ ಉತ್ತರ ಕರ್ನಾಟಕ ಭಾಗದ ರೈತರು ತೊಂದರೆ ಅನುಭವಿಸಿದ್ದಾರೆ.
ಇದನ್ನು ನೋಡಿಯೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಹದಾಯಿ ಅನುಷ್ಟಾನದ ಅವಧಿ ಹಾಗೂ ನ್ಯಾಯ ಮಂಡಳಿ ನೀಡಿದ ಅವಧಿಯಲ್ಲಿ ಕಾಮಗಾರಿ ನಡೆಸದೇ ರೈತರನ್ನು ವಂಚಿಸಿದಂತಾಗಿದೆ ಎಂದು ಸರನಾಯ್ಕರ್ ಟೀಕಿಸಿದರು.
ಧರಣಿಯಲ್ಲಿ ರಾಮಪ್ಪ ಸಾಬಳೆ, ಎಸ್.ಬಿ. ಜೋಗಣ್ಣವರ, ಪರಮೇಶಪ್ಪ ಅಣ್ಣಿಗೇರಿ, ಶಿವಪ್ಪ ಸಾತನ್ನವರ, ವೆಂಕಪ್ಪ ಹುಜರತ್ತಿ, ರುದ್ರಗೌಡ ಮುದಿಗೌಡ್ರ, ಅನಸಮ್ಮ ಶಿಂಧೆ, ನಾಗವ್ವ ಹಾಲೊಳ್ಳಿ, ಚನ್ನಪ್ಪಗೌಡ ಪಾಟೀಲ, ಪಾರವ್ವ ದಾನರಡ್ಡಿ ಅನೇಕರು ಭಾಗವಹಿಸಿದ್ದರು.

ಶಾಲಾ ಶುಲ್ಕ ಭರಿಸುವ ಅವಧಿ ವಿಸ್ತರಿಸಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗದಗ
ಕೊರೊನಾ ಭೀತಿ ಹಿನ್ನೆಲೆಯಲ್ಲಿ ಶಾಲೆಗಳು ತೆರೆಯುವುದಿಲ್ಲ ಎನ್ನುವ ನೆಪ ಮಾಡಿಕೊಂಡು ಪಾಲಕರು ಶುಲ್ಕ ಭರಿಸುತ್ತಿಲ್ಲ. ಹೀಗಾಗಿ ಮೊದಲ ಕಂತಿನ ಶುಲ್ಕ ಭರಿಸಲು ನೀಡಿರುವ ಅಂತಿಮ ದಿನಾಂಕವನ್ನು ಅ. 16ರ ಬದಲಾಗಿ ಅ. 31ಕ್ಕೆ ವಿಸ್ತರಿಸಬೇಕು ಎಂದು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಂಘದ ಅಧ್ಯಕ್ಷ ಆನಂದ ಪೋತ್ನೀಸ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ವರ್ಷ ಶಾಲೆ ತೆರೆಯುವುದು ಅನುಮಾನ ಎನ್ನುವ ಕಾರಣಕ್ಕೆ ಪಾಲಕರು ತಮ್ಮ ಮಕ್ಕಳ ಶುಲ್ಕ ಭರಿಸುತ್ತಿಲ್ಲ. ಕೆಲವರು ತಮ್ಮ ಮಕ್ಕಳ ವರ್ಗಾವಣೆ ಪ್ರಮಾಣಪತ್ರ ಪಡೆದು ಸರಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಇದರಿಂದ ಖಾಸಗಿ ಶಾಲೆಗಳು ಸಂಕಷ್ಟ ಎದುರಿಸುವಂತಾಗಿದೆ. ಸರಕಾರ ಕೂಡಲೇ ಖಾಸಗಿ ಶಾಲೆಗಳತ್ತ ಗಮನ ಹರಿಸಿ ಪರಿಹಾರ ಸೂಚಿಸಬೇಕು ಎಂದು ಒತ್ತಾಯಿಸಿದರು.
ಖಾಸಗಿ ಶಾಲೆಗಳಿಗೆ ಸರಕಾರಿ ನೌಕರರು ಮತ್ತು ಸಿರಿವಂತರ ಮಕ್ಕಳು ಮಾತ್ರ ಪ್ರವೇಶ ಪಡೆದಿರುತ್ತಾರೆ. ಅಂಥವರಿಗೆ ಶಾಲಾ ಶುಲ್ಕ ಭರಿಸುವುದು ದೊಡ್ಡ ಮಾತಲ್ಲ. ಆದರೂ ಉಳ್ಳವರು ತಮ್ಮ ಮಕ್ಕಳ ಶಾಲಾ ಶುಲ್ಕ ಭರಿಸಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ಸ್ಥಿತಿವಂತರ ಈ ನಿರ್ಧಾರದಿಂದ ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರ ಬದುಕು ಅಂತಂತ್ರವಾಗಿದೆ ಎಂದು ಆರೋಪಿಸಿದರು.
ಇಂದಿನ ಆಧುನಿಕತೆ ಹಾಗೂ ಪೋಷಕರ ಅಪೇಕ್ಷೆಯಂತೆ ಖಾಸಗಿ ಶಾಲೆಗಳಲ್ಲಿ ಮಕ್ಕಳ ಆಟ- ಪಾಠಕ್ಕೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಆದರೆ, ಸರಕಾರಿ ಶಾಲೆಗಳಲ್ಲಿ ಸರಿಯಾದ ಪೀಠೋಪಕರಣ, ಗಣಕಯಂತ್ರ, ವಿಜ್ಞಾನ ಮತ್ತಿತರೆ ಉಪಕರಣಗಳು, ಆಟಿಕೆ ಸಮಾನುಗಳು, ಮೈದಾನಗಳು, ವಿ ಶಾಲ ಕಟ್ಟಡಗಳೂ ಇರುವುದಿಲ್ಲ. ಹೀಗಾಗಿ ಬಹತೇಕ ಸ್ಥಿತಿವಂತರ ಮಕ್ಕಳೇ ಇರುತ್ತಾರೆ. ಈ ಹಿನ್ನೆಲೆಯಲ್ಲಿ ಪೋಷಕರು ತಕ್ಷಣವೇ ಸರಕಾರ ನಿಗದಿತಪಡಿಸಿರುವಂತೆ ಮೊದಲ ಕಂತಿನ ಶುಲ್ಕ ಭರಿಸಬೇಕು ಎಂದು ಕೋರಿದರು.
ಸಂಘದ ಕಾರ್ಯದರ್ಶಿ ಎಸ್.ವೈ.ಚಿಕ್ಕಟ್ಟಿ, ಎಸ್.ರವಿ, ಸಿದ್ದಣ್ಣ ಬಂಗಾರಶೆಟ್ಟರ್, ಡಾ.ಪಿ.ಎಸ್. ಖೋನಾ, ಅಶೋಕ ಜೈನ್, ಶ್ರೀನಿವಾಸ ಬಾಕಳೆ, ವೆಂಕಟೇಶ ಇಮರಾಪುರ ಇತರರು ಉಪಸ್ಥಿತರಿದ್ದರು.

ಕೃಷಿ ಮಸೂದೆ ಬಗ್ಗೆ ಬಿಜೆಪಿಯಿಂದ ಜನಜಾಗೃತಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಕೇಂದ್ರ ಮತ್ತು ರಾಜ್ಯ ಸರಕಾರ ಜಾರಿಗೆ ತಂದಿರುವ ಕೃಷಿ ಮಸೂದೆಗಳ ಬಗ್ಗೆ ಬಿಜೆಪಿ ರೈತ ಮೋರ್ಚಾ ವತಿಯಿಂದ ರಾಜ್ಯಾದ್ಯಂತ ಜನಜಾಗೃತಿ ಅಭಿಯಾನ ಆರಂಭಿಸಲಾಗಿದೆ. ಬರುವ ದಿನಗಳಲ್ಲಿ ಜಿಲ್ಲಾ ಮಟ್ಟದಿಂದ ಗ್ರಾಮ ಮಟ್ಟದ ವರೆಗೂ ಜನಜಾಗೃತಿ ಕೈಗೊಳ್ಳಲಾಗುತ್ತದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಷಣ್ಮುಖ ಗುರಿಕಾರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರೈತ ಮೋರ್ಚಾದಿಂದ ಅ. ೧೦ರಿಂದ ೩೧ರ ವರೆಗೆ ಮೂರು ಹಂತದಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅ. ೧೮ರಿಂದ ೨೪ರ ವರೆಗೆ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳಿಂದ ಮಂಡಲಗಳ ಪದಾಧಿಕಾರಿಗಳ ಮೂಲಕ ಗ್ರಾಮಸಭೆ ನಡೆಸಿ ಕೃಷಿ ಮಸೂದೆಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಈ ಅಭಿಯಾನದಲ್ಲಿ ಟ್ರ್ಯಾಕ್ಟರ್, ಭೂಮಿಪೂಜೆ, ದಾನ್ಯಪೂಜೆ ಹಾಗೂ ಗೋಮಾತೆ ಪೂಜೆಗಳ ಮೂಲಕ ರೈತರ ಸ್ವಾಭಿಮಾನವನ್ನು ಪ್ರೇರೆಪಿಸಲಾಗುವುದು. ಗ್ರಾಮೀಣ ಜನರಿಗೆ ಕೇಂದ್ರ ಸರಕಾರದ ಕೃಷಿ ಮಸೂಧೆಗಳ ಮಹತ್ವವನ್ನು ಮನದಟ್ಟು ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ, ಎಂ.ಎಸ್.ಕರಿಗೌಡ್ರ, ಕಾಂತೀಲಾಲ ಬನ್ಸಾಲಿ ಇತರರು ಉಪಸ್ಥಿತರಿದ್ದರು.

ಹೆಣ್ಣು ಮಕ್ಕಳಿಗೂ ಹೆಚ್ಚು ಪ್ರಾಶಸ್ತ್ಯ ನೀಡಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಹೆಣ್ಣು ಅಬಲೆಯಲ್ಲ ಅವಳು ಸಬಲೆ ಆಗಿದ್ದು, ಗಂಡು ಮಗುವಿನಂತೆ ಹೆಣ್ಣು ಮಗುವಿಗೂ ಹೆಚ್ಚು ಪ್ರಾಶಸ್ತ್ಯ ನೀಡಬೇಕು. ಹೆಣ್ಣು ಗಂಡೆಂಬ ತಾರತಮ್ಯ ಮಾಡದೇ ಇಬ್ಬರನ್ನೂ ಸಮನಾಗಿ ಕಾಣಬೇಕು ಎಂದು ಜಿಲ್ಲಾ ಪಂಚಾಯತ ಸಿಇಒ ಡಾ.ಆನಂದ ಕೆ. ಹೇಳಿದರು.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಗದಗ ಇವರ ಸಹಯೋಗದಲ್ಲಿ ನಡೆದ ಮಗಳನ್ನು ಉಳಿಸಿ ಮಗಳನ್ನು ಓದಿಸಿ (ಬೇಟಿ ಬಚಾವೋ ಬೇಟಿ ಪಡಾವೋ) ಯೋಜನೆಯಡಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಹೆಣ್ಣು ಮಕ್ಕಳು ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿರುವುದು ಶ್ಲಾಘನೀಯವಾಗಿದ್ದು, ಪ್ರತಿ ಹೆಣ್ಣು ಮಗುವಿಗೂ ಉತ್ತಮ ಶಿಕ್ಷಣ ನೀಡುವ ಮೂಲಕ ಸಮಾನ ಅವಕಾಶ ಕಲ್ಪಿಸಿ ಉತ್ತೇಜನ ನೀಡಬೇಕು. ಮನೆಯೇ ಮೊದಲ ಪಾಠ ಶಾಲೆಯಾಗಿದ್ದು, ಉತ್ತಮ ಸಂಸ್ಕಾರಯುತ ಮಕ್ಕಳನ್ನಾಗಿ ಬೆಳೆಸಬೇಕು ಎಂದರು.
ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಮಾತನಾಡಿ, ಹಿಂದೆ ಇದ್ದ ಪುರುಷ ಪ್ರಧಾನ ಸಮಾಜದಿಂದ ಮುಕ್ತಿ ಹೊಂದಿ, ಪ್ರಸ್ತುತ ಕಾಲಘಟ್ಟದಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಬಹುಮಖ್ಯವಾಗಿದ್ದು, ಹೆಣ್ಣು ಮಗುವೆಂಬ ಕೀಳರಿಮೆಯಿಂದ ಹೊರಬರಬೇಕು. ಹೆಣ್ಣು ಮಗು ಉಳಿಸಿ ಪ್ರೋತ್ಸಾಹಿಸಲು ಸಾರ್ವಜನಿಕರು ಕೈ ಜೋಡೊಸಬೇಕು ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ.ಸಲಗರೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಉಸ್ಮಾನ್ ಎ. ಮಾತನಾಡಿ, ಜಗತ್ತಿನಾದ್ಯಂತ ಗಂಡು ಮತ್ತು ಹೆಣ್ಣಿನ ನಡುವಿನ ಜನನ ಪ್ರಮಾಣದ ಅಂತರ ಕಾಪಾಡುವುದೇ ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನದ ಉದ್ದೇಶವಾಗಿದೆ. ಈ ಬಾರಿಯ ಘೋಷವಾಕ್ಯ ‘ಹೆಣ್ಣು ಮಕ್ಕಳು ನನ್ನ ಧ್ವನಿ, ನನ್ನ ಸಮಾನ’ ಆಗಿದೆ. ಹೆಣ್ಣು ಮಕ್ಕಳನ್ನು ಪೋಷಿಸುವ ಮೂಲಕ ಹೆಣ್ಣು ಜೀವ ಉಳಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಎಂದರು.
ಹೆಣ್ಣು ಮಗುವಿನ ಪೋಷಣೆ, ಶಿಕ್ಷಣ, ವೈದ್ಯಕೀಯ ಆರೈಕೆ, ಬಾಲ್ಯ ವಿವಾಹಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕು. ಅಲ್ಲದೇ, ಹೆಣ್ಣು ಬ್ರೂಣ ಹತ್ಯೆ ತಡೆಗಟ್ಟಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ಣುಡಿಯಂತೆ ಪ್ರತಿ ಹೆಣ್ಣು ಮಗುವಿಗೂ ಶಿಕ್ಷಣ ನೀಡಬೇಕು ಎಂದು ವಿದ್ಯಾರ್ಥಿನಿಯರಾದ ದೀಪಾ ಹಿರೇಮಠ ಹಾಗೂ ಪೂರ್ಣಿಮಾ ಸವದತ್ತಿಮಠ ಅಭಿಪ್ರಾಯ ಹಂಚಿಕೊಂಡರು.
ಸಾಧನೆಗೈದ ತಾಯಂದಿರು ಸೇರಿದಂತೆ ಹೆಣ್ಣು ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಬಿ.ಎಂ.ಗೊಜನೂರ, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಹೆಚ್.ಹೆಚ್.ಕುಕನೂರ, ವಯಸ್ಕರ ಶಿಕ್ಷಣಾಧಿಕಾರಿ ಮಂಗಳಾ ತಾಪಸ್ಕರ್, ಅಂಗನವಾಡಿಯ ಮೇಲ್ವಿಚಾರಕರು, ಕಾರ್ಯಕರ್ತೆಯರು ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
 

ಸಂಸದರ ಆದರ್ಶ ಗ್ರಾಮಕ್ಕೆ ರಸ್ತೆಯೆ ಇಲ್ಲ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಜಿಲ್ಲೆಯ ರೈತರು ನಿರಂತರ ಮಳೆಯಿಂದ ಒಂದು ಕಡೆ ಹೈರಾಣಾಗಿದ್ದಾರೆ. ಇನ್ನೊಂದು ಕಡೆ ಸಮರ್ಪಕವಾದ ರಸ್ತೆ ಇಲ್ಲದ ಕಾರಣ ಕಷ್ಟಪಟ್ಟು ಬೆಳೆದ ಬೆಳೆಯನ್ನು ಮನೆಗೆ ತರಲು ಆಗದಂಥ ಪರಿಸ್ಥಿತಿಗೆ ಸಿಲುಕಿದ್ದಾರೆ.
ಇದು ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಗ್ರಾಮದ ಕಥೆ. ಹೇಳಿಕೊಳ್ಳಲು ಇದು ಸಂಸದರ ಆದರ್ಶ ಗ್ರಾಮ. ಹಾವೇರಿ ಲೋಕಸಭೆ ಕ್ಷೇತ್ರದ ಸಂಸದ ಶಿವಕುಮಾರ ಉದಾಸಿ ಅವರ ಆದರ್ಶ ಗ್ರಾಮ. ಆದರೆ ಯಾವ ನಿಟ್ಟಿನಲ್ಲಿಯೂ ಈ ಗ್ರಾಮ ಆದರ್ಶವಾಗಿಲ್ಲ.
ಯಳವತ್ತಿ ಗ್ರಾಮದ ಅಭಿವೃದ್ಧಿಗೆ ಸಂಸದ ಶಿವಕುಮಾರ ಉದಾಸಿ ಅವರು ಸಾಕಷ್ಟು ಶ್ರಮಿಸಿದ್ದಾರೆ. ಕೋಟಿ ರೂ. ಲೆಕ್ಕದಲ್ಲಿ ಅನುದಾನ ಒದಗಿಸಿದ್ದಾರೆ ಎನ್ನುವುದು ಶುದ್ಧ ಸುಳ್ಳು. ಸಂಸದರು ಆಸ್ಥೆ ವಹಿಸಿದ್ದರೆ ಯಳವತ್ತಿ ನಿಜವಾಗಿಯೂ ಆದರ್ಶವಾಗುತ್ತಿತ್ತು. ಗ್ರಾಮದ ರಸ್ತೆಗಳನ್ನು ನೋಡಿದರೆ ಯಳವತ್ತಿ ಯಾವ ರೀತಿಯಿಂದಲೂ ಆದರ್ಶ ಗ್ರಾಮ ಆಗುವುದಿಲ್ಲ.

ಒಂದು ಎಕರೆ ಶೇಂಗಾ ಬೆಳೆಯಲು 15 ರಿಂದ 20 ಸಾವಿರ ರೂಪಾಯಿ ಖರ್ಚು ಮಾಡಲಾಗಿದೆ. ಮಳೆಯಿಂದ ಶೇಂಗಾ ಬೆಳೆ ಜಮೀನಿನಲ್ಲಿಯೇ ಉಳಿದಿದೆ. ಎತ್ತಿನ ಚಕ್ಕಡಿ, ಟ್ರಾಕ್ಟರ್ ಮೂಲಕ ತರಬೇಕು ಎಂದರೆ ರಸ್ತೆ ಇಲ್ಲದೇ ಕೆಸರಿನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿವೆ. ಜಮೀನುಗಳಿಗೆ ನಡೆದು ಹೋಗಲು ಸಹ ಆಗದ ಸ್ಥಿತಿ ನಿರ್ಮಾಣವಾಗಿದೆ.
-ಯಳವತ್ತಿ ಗ್ರಾಮಸ್ಥರು.


ಯಳವತ್ತಿ ಗ್ರಾಮದ ಜಮೀನುಗಳಿಗೆ ಹೋಗುವ ರಸ್ತೆ ಸರಿಯಾಗಿಲ್ಲದ ಕಾರಣ ಮುಂಗಾರು ಹಂಗಾಮಿನ ಬೆಳೆಗಳಾದ ಹೆಸರು, ಶೇಂಗಾ ಕಟಾವು ಮಾಡಿಕೊಂಡು ಮಾರುಕಟ್ಟೆಗೆ ಒಯ್ಯುವುದು ಕಷ್ಟವಾಗಿದೆ. ನಿರಂತರ ಮಳೆಯಿಂದ ಕಟಾವು ಮಾಡಲು ಸಾಧ್ಯವಾಗದ ಸ್ಥಿತಿ ಒಂದೆಡೆಯಾದರೆ, ಮಳೆ ವಿರಾಮ ನೀಡಿದಾಗ ಕಟಾವು ಮಾಡಿಕೊಂಡು ಹೋಗಬೇಕೆಂದರೆ ರಸ್ತೆ ಇಲ್ಲದ ವಾಹನಗಳು ಸಂಚರಿಸದ ಸ್ಥಿತಿ ಮತ್ತೊಂದೆಡೆ. ಹೀಗಾಗಿ ಜಮೀನುಗಳಿಗೆ ಹೋಗುವ ರಸ್ತೆ ದುರಸ್ತಿ ಮಾಡಿಕೊಡಿ ಎಂದು ಯಳವತ್ತಿ ಗ್ರಾಮಸ್ಥರು ಮನವಿ ಮಾಡಿಕೊಳ್ಳುವಂತಾಗಿದೆ.

ಸಂಸದರು ನೋಡಲಿ
ಹಾವೇರಿ ಸಂಸದ ಶಿವಕುಮಾರ ಉದಾಸಿ ಅವರು ತಮ್ಮ ಆದರ್ಶ ಗ್ರಾಮದ ಸ್ಥಿತಿಯನ್ನು ಒಮ್ಮೆ ನೋಡಲಿ. ಜಮೀನುಗಳಿಗೆ ಹೋಗಲು ರಸ್ತೆ ಇಲ್ಲದ ಸ್ಥಿತಿಯನ್ನು ಕಣ್ಣಾರೆ ಕಂಡ ನಂತರವಾದರೂ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲಿ ಎನ್ನುತ್ತಾರೆ ಯಳವತ್ತಿ ಗ್ರಾಮದ ರೈತ ಚನ್ನಬಸವನಗೌಡ.

ಯಳವತ್ತಿ ಗ್ರಾಮದ ವ್ಯಾಪ್ತಿಯ ಜಮೀನುಗಳು ಫಲವತ್ತಾಗಿವೆ. ಈರುಳ್ಳಿ, ಹತ್ತಿ, ಶೇಂಗಾ, ಗೋವಿನ ಜೋಳ ಬೆಳೆಯಲು ಸೂಕ್ತವಾಗಿದೆ. ಆದರೆ ಈ ಬಾರಿ ಸುರಿದ ಅಪಾರ ಮಳೆಯಿಂದ ಶೇಂಗಾ ಬೆಳೆ ಜಮೀನಿನಲ್ಲಿಯೇ ಕೊಳೆಯುವಂತಾಗಿದೆ. ಅಳಿದುಳಿದ ಫಸಲನ್ನು ತರಬೇಕು ಎಂದರೆ ರಸ್ತೆಗಳು ಸರಿಯಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮದ ರಸ್ತೆ ದುರಸ್ತಿಗಾಗಿ ಗ್ರಾಮ ಪಂಚಾಯಿತಿ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸುತ್ತಾರೆ ಯಳವತ್ತಿ ಗ್ರಾಮಸ್ಥರು.

ಇನ್ನಾದರೂ ಎಚ್ಚೆತ್ತುಕೊಳ್ಳಲಿ
ಅತಿಯಾದ ಮಳೆಯಿಂದ ಬೆಳೆನಾಶ ಒಂದು ಕಡೆಯಾದರೆ, ರಸ್ತೆ ಸರಿ ಇಲ್ಲದ ಕಾರಣ ಅಳಿದುಳಿದ ಬೆಳೆಯನ್ನು ಜಮೀನಿನಿಂದ ತರದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರೈತರ ಕಷ್ಟ ಪರಿಹರಿಸಲು ಮುಂದಾಗುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

 

ಸಾರ್ವಜನಿಕರಲ್ಲಿ ಅರಿವು ಮೂಡಿಸಿದ ಎಸ್ಪಿ ಯತೀಶ್ ಎನ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಕೊರೋನಾ ವೈರಸ್ ತಡೆಗಟ್ಟಲು ಜಿಲ್ಲಾ ಎಸ್ಪಿ ಯತೀಶ್ ಎನ್ ಖುದ್ದು ಬೀದಿಗಿಳಿದು ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ನಗರದ ಟಾಂಗಾ ಕೂಟ್ ಸರ್ಕಲ್ ನಲ್ಲಿ ಎಸ್ಪಿ ಯತೀಶ್ ಎನ್, ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಸಾರ್ವಜನಿಕರಿಗೆ ಮಾಸ್ಕ್ ಧಾರಣೆ, ಸ್ಯಾನಿಟೈಸರ್ ಬಳಕೆ ಹಾಗೂ ಸಾಮಾಜಿಕ ಅಂತರದ ಅವಶ್ಯಕತೆಯನ್ನು ವಿವರಿಸಿ ಹೇಳುವ ಮೂಲಕ ಕೊರೋನಾ ತಡೆಯ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ.

ರೋಟರಿ ಸಂಸ್ಥೆಯ ಸಹಕಾರದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸ್ಥಳದಲ್ಲಿಯೇ ಸಾರ್ವಜನಿಕರಿಗೆ ಮಾಸ್ಕ್ ಹಾಗೂ ಸೋಪ್ ವಿತರಣೆ ಮಾಡಿ, ಇವುಗಳನ್ನು ಖಡ್ಡಾಯವಾಗಿ ಬಳಕೆ ಮಾಡವೇಕೆಂದು ಮನವಿ ಮಾಡಿದರು.

ಈ ವೇಳೆ ಡಿವೈಎಸ್ಪಿ S K ಪ್ರಹ್ಲಾದ್, ನಗರ ಠಾಣೆ ಸಿಪಿಐ ಪಿ ವಿ ಸಾಲಿಮಠ್, ಗ್ರಾಮೀಣ ಠಾಣೆ ಸಿಪಿಐ ರವಿಕುಮಾರ್ ಕಪ್ಪತ್ತನವರ, ಬೆಟಗೇರಿ ಸಿಪಿಐ ಬಿರಾದಾರ್, ಪಿಎಸ್ಐಗಳಾದ ಪ್ರಕಾಶ್ D, G T ಜಕ್ಕಲಿ ಕಮಲಮ್ಮ ದೊಡ್ಡಮನಿ, ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ್ ಗೌಡ ಧರ್ಮಾಯತ, ಕಾರ್ಯದರ್ಶಿ ಚಂದ್ರಮೌಳಿ ಜಾಲಿ, ಡಾ. ರಾಜಶೇಖರ್ ಬಳ್ಳಾರಿ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಹಿನ್ನೀರಿನಲ್ಲಿ ಕೊಚ್ಟಿ ಹೋಗುತ್ತಿದ್ದ 15 ದಿನದ ಹಸುಗೂಸು ರಕ್ಷಣೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಯಾದಗಿರಿ: ಭೀಮಾ ನದಿಯ ಹಿನ್ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ 15 ದಿನಗಳ ಹಸುಗೂಸನ್ನು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಶಹಾಪುರ ತಾಲೂಕಿನ ರೋಜಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕುಟುಂಬಸ್ಥರನ್ನು ಸ್ಥಳಾಂತರಿಸುವಾಗ ತೆಪ್ಪ ಅಲುಗಾಡಿ ಕೂಸು ನದಿಗೆ ಬಿದ್ದಿತ್ತು.

ಗ್ರಾಮದ ತವಕಲ್ ಹಾಗೂ ರಜಿಯಾ ದಂಪತಿಯ ಗಂಡು ಮಗು ಇದಾಗಿದ್ದು, ಹಿನ್ನೀರಿನಿಂದಾಗಿ ಗ್ರಾಮ ಜಲಾವೃತವಾದ್ದರಿಂದ ಮಗು ಸಮೇತ ದಂಪತಿಯನ್ನು ತೆಪ್ಪದಲ್ಲಿ ಸ್ಥಳಾಂತರ ಮಾಡಲಾಗುತ್ತಿತ್ತು.

ಈ ವೇಳೆ ಅವಘಡ ನಡೆದಿದ್ದು, ಸ್ಥಳೀಯರು ಹಾಗೂ ಮೀನುಗಾರರು ಸೇರಿ ಮಗುವನ್ನು ರಕ್ಷಣೆ ಮಾಡಿದ್ದಾರೆ.

error: Content is protected !!