ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಜಿಲ್ಲೆಯ ಹೊಸ ಪ್ರವಾಹ ಪೀಡಿತ ತಾಲೂಕುಗಳಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ನೆರೆ ಮತ್ತು ಮಳೆಗೆ ಹಾನಿಯುಂಟಾಗಿರುವ ಕುರಿತು ಜಂಟಿ ಬೆಳೆ ಸಮೀಕ್ಷೆ ಕೈಗೊಂಡು ಶೀಘ್ರವೇ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು. ಸರ್ಕಾರದಿಂದ ಸಿಗುವ ಪರಿಹಾರವನ್ನು ರೈತರಿಗೆ ಸಕಾಲಕ್ಕೆ ಸಿಗುವಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ನಿರ್ದೇಶನ ನೀಡಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಂಟಿ ಬೆಳೆ ಸಮೀಕ್ಷೆ ಮತ್ತು ಬೆಳೆ ಸಮೀಕ್ಷೆ ಮತ್ತು ಬೆಳೆ ವಿಮೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂಗಾರು ಹಂಗಾಮಿನಲ್ಲಿ ಆಗಷ್ಟ್ ಹಾಗೂ ಸೆಪ್ಟಂಬರ್ ತಿಂಗಳಲ್ಲಿ ಸುರಿದ ಹೆಚ್ಚಿನ ಮಳೆಯಿಂದಾಗಿ ಜಿಲ್ಲೆಯ ಏಳು ತಾಲೂಕುಗಳನ್ನು ಅತಿವೃಷ್ಠಿ ಹಾಗೂ ಪ್ರವಾಹ ಪೀಡಿತ ಪ್ರದೇಶಗಳೆಂದು ಸರ್ಕಾರ ಘೋಷಿಸಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹಾನಿ ಆಗಿರುವ ಪ್ರದೇಶಗಳಿಗೆ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ಅಲ್ಲದೇ, ಜಂಟಿ ಬೆಳೆ ಸಮೀಕ್ಷಾ ಕಾರ್ಯವನ್ನು ತ್ವರಿತವಾಗಿ ಮುಕ್ತಾಯಗೊಳಿಸಿ ಬೆಳೆ ಹಾನಿಯ ಬಗ್ಗೆ ಪರಿಹಾರ ಪೋರ್ಟಲ್‌ನಲ್ಲಿ ನಮೂದಿಸಬೇಕು ಎಂದರು.
ತೋಟಗಾರಿಕೆ ಬೆಳೆಗಳಾದ ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆಗಳು ಹೆಚ್ಚು ಹಾನಿಗೊಳಗಾಗಿವೆ. ಹೀಗಾಗಿ ಜಂಟಿ ಸಮೀಕ್ಷೆ ಕಾರ್ಯದಲ್ಲಿ ಯಾವ ರೈತರು ಬಿಟ್ಟು ಹೋಗದಂತೆ ಸಮೀಕ್ಷೆ ಕಾರ್ಯ ಕೈಗೊಳ್ಳಬೇಕು. ಈಗಾಗಲೇ ಬೆಳೆ ವಿಮೆ ತುಂಬಿರುವ ರೈತರ ಬೆಳೆ ಮಳೆಗೆ ಹಾಳಾಗಿದ್ದರೆ ಅರ್ಜಿ ಸಲ್ಲಿಸಬೇಕು. ಈ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಮಾತನಾಡಿ, ಜಿಲ್ಲೆಯಲ್ಲಿ ಶೇ. 99.2 ರಷ್ಟು ಬೆಳೆ ಸಮೀಕ್ಷಾ ಕಾರ್ಯ ಪೂರ್ಣಗೊಂಡಿದೆ. ರೈತರು ಮಾಡಿರುವ ಸಮೀಕ್ಷೆಯಲ್ಲಿ 13,350 ಮರಳಿ ಸರ್ವೇ ಮಾಡಿದೆ. ಬೆಳೆ ಸಮೀಕ್ಷೆ ಕುರಿತು ಸಲ್ಲಿಕೆ ಆಗಿದ್ದ ಸುಮಾರು 396 ಆಕ್ಷೇಪಣಾ ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದೆ. ಜಿಲ್ಲೆಯಾದ್ಯಂತ ಒಟ್ಟು 74 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಆಗಿದ್ದು, ಪ್ರತಿ ಎಕರೆಗೆ 15 ರಿಂದ 20 ಕ್ವಿಂಟಾಲ್ ಇಳುವರಿ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಕಂದಾಯ ಇಲಾಖೆಯ ಅಧಿಕಾರಿಗಳು, ಲೀಡ್ ಬ್ಯಾಂಕ್ ಮುಖ್ಯಸ್ಥರು, ವಿಮಾ ಕಂಪನಿಯ ಪ್ರತಿನಿಧಿಗಳು ಸೇರಿದಂತೆ ಇತರರು ಸಭೆಯಲ್ಲಿ ಇದ್ದರು.
ಬೆಳೆ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಿ
ಕಾರ್, ಬೈಕ್ ಮುಖಾಮುಖಿ ಡಿಕ್ಕಿ; ವ್ಯಕ್ತಿ ಸಾವು
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಕಾರ್ ಹಾಗೂ ದ್ವಿಚಕ್ರ ವಾಹನದ ಮಧ್ಯ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಮೃತಪಟ್ಟಿದ್ದು, ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಬಳಿ ನಡೆದಿದೆ.
ಡೋಣಿ ಗ್ರಾಮದ ನೀಲಪ್ಪ ತೋಟಗಂಟಿ (55) ಮೃತ ದುರ್ಧೈವಿಯಾಗಿದ್ದು, ಪತ್ನಿ ಯಲ್ಲವ್ವ ತೋಟಗಂಟಿ ಗಂಭೀರ ಗಾಯಗೊಂಡಿದ್ದು, ಜಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಮುಂಡರಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಖಾಸಗಿ ಶಾಲೆಗಳ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಕೊರೋನಾದಿಂದ ರಾಜ್ಯದ ಖಾಸಗಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಹಾಗೂ ಸಿಬ್ಬಂದಿಗಳು ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಅವರ ಸಂಕಷ್ಟಗಳಿಗೆ ಸರಕಾರ ತಕ್ಷಣ ಸ್ಪಂದಿಸಿ ಪರಿಹಾರ ಘೋಷಣೆ ಮಾಡಬೇಕೆಂದು ಮುಖಂಡ ಸಿ.ವಿ.ಚಂದ್ರಶೇಖರ ಸರಕಾರಕ್ಕೆ ಒತ್ತಾಯಿಸಿದರು.
ಅವರು ಕೊಪ್ಪಳ ತಾಲೂಕು ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಹಾಗೂ ಸಿ.ವಿ.ಚಂದ್ರಶೇಖರವರ ಸಹಯೋಗದಲ್ಲಿ ಶಿಕ್ಷಕರಿಗೆ ಫುಡ್‌ಕಿಟ್ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ನ್ಯಾಯವಾದಿ ರಾಘವೇಂದ್ರ ಆರ್. ಪಾನಘಂಟಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಸರಕಾರ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಪರಿಹಾರ ನೀಡಿದೆ. ಆದರೆ ಖಾಸಗಿ ಶಾಲೆಗಳ ಶಿಕ್ಷಕರಿಗೆ ಯಾವ ಪರಿಹಾರ ನೀಡದಿರುವುದು ಖೇದಕರ. ಕೂಡಲೇ ಶಾಸಕರು ಹಾಗೂ ಸಂಸದರು ಸರಕಾರಕ್ಕೆ ಒತ್ತಾಯ ಮಾಡಿ ಶಿಕ್ಷಕರಿಗೆ ಪರಿಹಾರ ಕೊಡಿಸುವಲ್ಲಿ ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ಶಾಹಿದ್ ತಹಸೀಲ್ದಾರ ವಹಿಸಿದ್ದರು. ಅತಿಥಿಗಳಾಗಿ ಜಿಲ್ಲಾ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಜಗನ್ನಾಥ ಅಲ್ಲಂಪಲ್ಲಿ ಹಾಗೂ ಕಾರ್ಯದರ್ಶಿ ಪ್ರಹ್ಲಾದ ಅಗಳಿ, ದಾನಪ್ಪ ಕವಲೂರ, ಮಹಮ್ಮದ್ ಅಲಿಮುದ್ದೀನ್, ಮಲ್ಲಿಕಾರ್ಜುನ ಚೌಕಿಮಠ, ಶಿವನಗೌಡ ಪಾಟೀಲ, ವೀರಣ್ಣ ಕಂಬಳಿ ಹಾಗೂ ಜಿಲ್ಲೆಯ ಮತ್ತು ತಾಲೂಕಿನ ಪದಾಧಿಕಾರಿಗಳು ಭಾಗವಹಿಸಿದ್ದರು.
ಎ.ಕೆ.ಮುಲ್ಲನವರ್ ಸ್ವಾಗತಿಸಿ ನಿರೂಪಣೆ ಮಾಡಿದರು. ಕಾರ್ಯದರ್ಶಿ ನಾಗರಾಜ ಗುಡಿ ವಂದನಾರ್ಪಣೆ ಮಾಡಿದರು.
ಕುಸಿದ ಮನೆಗಳ ನಷ್ಟ ವೀಕ್ಷಿಸಿದ ಇಂಜಿನಿಯರ್
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದು ಅವುಗಳ ನಷ್ಟ ಪ್ರಮಾಣವನ್ನು ಗದಗನ ಪಂಚಾಯಿತ್ ರಾಜ್ ಇಂಜಿನಿಯರ ವಿಭಾಗದ ಇಂಜಿನಿಯರ ಮಂಜುನಾಥ ಕಲಬುರ್ಗಿ ವೀಕ್ಷಿಸಿದರು.
ಮಂಗಳವರ ಗ್ರಾಮಕ್ಕೆ ಭೇಟಿ ನೀಡಿ ಸುಮಾರು ೧೫ ಮನೆ ಗೋಡೆ ಕುಸಿದು ಬಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ ನಂತರ ಮಾತನಾಡಿದ ಅವರು, ಶೇಕಡಾ ೫೦ ಹಾನಿ ಸಂಭವಿಸಿದ್ದು, ಈ ವರದಿಯನ್ನು ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಲಾಗುವುದು. ಗ್ರಾಮ ಲೆಕ್ಕಾಧಿಕಾರಿ, ಪಿಡಿಒ ಮತ್ತು ಕಂದಾಯ ನಿರೀಕ್ಷಕರು ತಹಸೀಲ್ದಾರ್ ಸಮ್ಮುಖದಲ್ಲಿ ನಷ್ಟ ಪರಿಹಾರವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮ ಮಾಡುತ್ತಾರೆ ಎಂದರು.
ಗ್ರಾ.ಪಂ ಮಾಜಿ ಉಪಾಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ, ಮಾತನಾಡಿ ತಿಮ್ಮಾಪುರ ಗ್ರಾಮಕ್ಕೆ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು, ಗ್ರಾಮೀಣ ಭಾಗದಲ್ಲಿ ಹಳೆಯ ಮಣ್ಣಿನ ಮನೆಗಳು ಹೆಚ್ಚಿ ಪ್ರಮಾಣದಲ್ಲಿ ಇದ್ದು, ಭಾರಿ ಮಳೆಗೆ ಅವುಗಳ ಗೋಡೆ ಕುಸಿದು ಬಿದ್ದು ಭಾಗಶಃ ಹಾನಿಯಾಗಿದ್ದು ಕಂದಾಯ ಇಲಾಖೆ ಬೇಗನೆ ಸಂತ್ರಸ್ತರಿಗೆ ಪರಿಹಾರ ಧನವನ್ನು ನೀಡಬೇಕು ಎಂದು ಆಗ್ರಹಿಸಿದರು.
ಮುಂಡರಗಿ ಪೊಲೀಸರ ಕಾರ್ಯಚರಣೆ: ಭಾರೀ ಪ್ರಮಾಣದ ಸ್ಫೋಟಕ ವಶ, ಇಬ್ಬರ ಬಂಧನ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಅಕ್ರಮವಾಗಿ ಭಾರೀ ಪ್ರಮಾಣದ ಸ್ಫೋಟಕ ಸಾಮಗ್ರಿ ಪೂರೈಕೆ ಮಾಡುತ್ತಿದ್ದ ಲಾರಿಯೊಂದನ್ನು ಮುಂಡರಗಿ ಪೊಲೀಸರು ವಶಕ್ಕೆ ಪಡೆದಿದ್ದು, ಇಬ್ಬರನ್ನು ಬಂಧಿಸಿದ್ದಾರೆ.
ಒಟ್ಟು 50 ಕೆಜಿ ತೂಕದ 135 ಚೀಲಗಳಂತೆ ಒಟ್ಟು 6750 ಕೆಜಿ ಅಮೋನಿಯಂ ನೈಟ್ರೇಟ್ ರಾಸಾಯನಿಕವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಲಾರಿ ಚಾಲಕ ಹಾಗೂ ಸ್ಫೋಟಕ ಸಂಗ್ರಹಿಸಿಟ್ಟ ಗೋದಾಮು ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.
ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದ ಬಸವರಾಜ ಅಂಗಡಿ ಅವರಿಗೆ ಸೇರಿದ ಗೋದಾಮಿನಿಂದ ಡಂಬಳ ಗ್ರಾಮದ ಚಾಲಕ ಅಶೋಕ ಕೊಂಪಿಕಲ್, ಸೋಮವಾರ ರಾತ್ರಿ 8.45ರ ಸುಮಾರಿಗೆ ಕಲಕೇರಿ ಮಾರ್ಗವಾಗಿ ಬೀಡನಾಳ ಹೊರಟಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ.
ಪೊಲೀಸ್ ಇನ್ಸ್ಪೆಕ್ಟರ್ ಸುಧೀರಕುಮಾರ್ ಬೆಂಕಿ ನೇತೃತ್ವದಲ್ಲಿ ಈ ಕಾರ್ಯಚರಣೆ ನಡೆದಿದೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ವನ್ಯಜೀವಿ ಧಾಮಕ್ಕೆ ಕುತ್ತು!
ಕಪ್ಪತಗುಡ್ಡ ಸುತ್ತಮುತ್ತಲಿನಲ್ಲಿ ನೂರಾರು ಜಲ್ಲಿ ಕ್ರಶರ್ ಗಳಿದ್ದು, ಭಾರೀ ಸ್ಫೋಟಕ ಬಳಸಿ ಕಲ್ಲು ಗಣಿಗಾರಿಕೆ ನಡಸಲಾಗುತ್ತದೆ ಎನ್ನುವ ಆರೋಪ ಕೇಳಿಬರುತ್ತಿತ್ತು. ಸೋಮವಾರ ಮುಂಡರಗಿ ಪೊಲೀಸರು ನಡೆಸಿದ ದಾಳಿಯಿಂದ ಅದು ಮತ್ತಷ್ಟು ಖಚಿತವಾಗಿದೆ. ಆ ಮೂಲಕ ಕಪ್ಪತಗುಡ್ಡ ವನ್ಯಜೀವಿ ಧಾಮ ವಲಯ ಅಪಾಯಕ್ಕೆ ಸಿಲುಕಿದಂತಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು.
ಅಕ್ರಮವಾಗಿ ಸ್ಫೋಟಕ ರಾಸಾಯನಿಕ ಸರಬರಾಜು ಮಾಡುತ್ತಿದ್ದ ವ್ಯಕ್ತಿ, ಯಾರಿಗೆ ಸರಬರಾಜು ಆಗುತ್ತಿತ್ತು ಎನ್ನುವ ಮಾಹಿತಿ ಪತ್ತೆ ಮಾಡಿ ಕ್ರಮ ಜರುಗಿಸಬೇಕು ಎಂದು ಪರಿಸರ ಪ್ರಿಯರು ಒತ್ತಾಯಿಸಿದ್ದಾರೆ.
ಕೊಪ್ಪಳ ನೂತನ ಎಸ್ಪಿಯಾಗಿ ಟಿ.ಶ್ರೀಧರ್ ಅಧಿಕಾರ ಸ್ವೀಕಾರ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಕೊಪ್ಪಳ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಿ.ಶ್ರೀಧರ್ ಮಂಗಳವಾರ ಅಧಿಕಾರ ವಹಿಸಿಕೊಂಡರು.
ಮೊನ್ನೆಯಷ್ಟೆ ಕೊಪ್ಪಳ ಎಸ್ಪಿ ಜಿ.ಸಂಗೀತಾರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದ ಸರಕಾರ ಕೊಪ್ಪಳಕ್ಕೆ ರಾಜ್ಯ ಗುಪ್ತಚರ ಇಲಾಖೆಯಲ್ಲಿದ್ದ ಟಿ.ಶ್ರೀಧರರನ್ನು ಎಸ್ಪಿಯಾಗಿ ವರ್ಗಾವಣೆ ಮಾಡಿತ್ತು.
ಮೂಲತಃ ಬಳ್ಳಾರಿ ಜಿಲ್ಲೆಯ ಟಿ.ಶ್ರೀಧರ, ಅಧಿಕಾರ ಸ್ವೀಕರಿಸಿದ ನಂತರ ಕೊಪ್ಪಳ ಜಿಲ್ಲೆಯ ವಿವಿಧ ಪೋಲಿಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಹನಿ/ತುಂತುರು ನೀರಾವರಿ ವಿತರಕರ ಬದುಕು ಬೀದಿಗೆ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ರಾಜ್ಯದ ಸೂಕ್ಷ್ಮ ನೀರಾವರಿ ಯೋಜನೆಯ ಅನುಷ್ಠಾನದಲ್ಲಿ ಏಕಾಏಕಿ ವಿತರಕರ ಬಿಲ್‌ಗಳನ್ನು ರದ್ದುಪಡಿಸಿದ್ದರಿಂದ ವಿತರಕರ ಬದುಕು ಬೀದಿಗೆ ಬಿದ್ದಂತಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ವೆಂಕನಗೌಡ ಮೇಟಿ ಅಳಲು ತೋಡಿಕೊಂಡರು.
ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 1991ರಿಂದ ರೈತರಿಗಾಗಿ ರಾಜ್ಯದಲ್ಲಿ ಸೂಕ್ಷ್ಮ ನೀರಾವರಿ ಕಾರ್ಯಕ್ರಮ ಜಾರಿಗೆ ಬಂದಾಗಿನಿಂದ ವಿತರಕರಾಗಿರುವ ನಾವು, ಕಾರ್ಯಕ್ರಮವನ್ನು ರೈತರಿಗೆ ಯಶಸ್ವಿಯಾಗಿ ತಲುಪಿಸುವಲ್ಲಿ ಹಗಲಿರುಳು ಎನ್ನದೆ ಇಲಾಖೆಯ ಜೊತೆ ಕೈ ಜೋಡಿಸಿ ಶ್ರಮಿಸಿದ್ದೇವೆ. ಜೊತೆಗೆ ಇದರಲ್ಲೇ ಭವಿಷ್ಯ ಕಂಡುಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದೇವೆ. ಈಗ ಏಕಾಏಕಿ ನಮ್ಮ ಬಿಲ್‌ಗಳು ಬೇಕಿಲ್ಲ ಎಂದು ಸರಕಾರ ಹೇಳಿರುವುದರಿಂದ ಮುಂದೇನು ಎನ್ನುವ ಪ್ರಶ್ನೆ ಕಣ್ಮುಂದೆ ಬಂದು ತೀವ್ರ ಆತಂಕಕ್ಕೊಳಗಾಗಿದ್ದೇವೆ ಎಂದು ತಿಳಿಸಿದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸುಮಾರು 4 ಸಾವಿರ ವಿತರಕರಿದ್ದು, ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಕಂಪನಿಗಳ 50 ಜನ ವಿತರಕರಿದ್ದೇವೆ. ಇದುವರೆಗೂ ಸರಕಾರದಿಂದ ಬರಬೇಕಾದ 14-15 ಕೋಟಿ ರೂಪಾಯಿ ಬಾಕಿ ಇದೆ. ಈಗ ನಮ್ಮ ಬಿಲ್‌ಗಳನ್ನೇ ರದ್ದುಗೊಳಿಸಿರುವುದರಿಂದ ಚಿಂತಿತರಾಗಿದ್ದೇವೆ ಎಂದು ದುಃಖ ತೋಡಿಕೊಂಡರು.
ಈ ವೇಳೆ ಸಂಘದ ಬಸವರಾಜ ಅಳವಂಡಿ, ಮಂಜುನಾಥ ಮಾಳೆಕೊಪ್ಪ ಇತರರು ಇದ್ದರು.
ಭಾರೀ ಮಳೆಗೆ ಕೊಚ್ಚಿ ಹೋದ ಬಂಡರಗಲ್-ಹೂಲಗೇರಿ ಸೇತುವೆ!
ಸುಮಾರು 50 ಗ್ರಾಮಗಳ ಸಂಪರ್ಕ ಕಡಿತ; ನೀರಿನಲ್ಲಿ ತೇಲಿ ಹೋಗುತ್ತಿದ್ದ ಬೈಕ್ ಸವಾರರನ್ನು ರಕ್ಷಿಸಿದ ಸ್ಥಳೀಯರು
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಕಳೆದ ಮೂರು ದಿನಗಳಿಂದ ಮಳೆ ಅವಾಂತರ ಅಷ್ಟಿಷ್ಟಲ್ಲ. ಕೆಲವು ಕಡೆ ಅಪಾರ ಪ್ರಮಾಣದ ವಿವಿಧ ಬೆಳೆ ಹಾನಿಯಾದರೆ, ಹಲವು ಕಡೆ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಜೊತೆಗೆ ಜಿಲ್ಲೆಯ ವಿವಿಧೆಡೆ ಸೇತುವೆ, ಬ್ರಿಡ್ಜ್ ಕಮ್ ಬ್ಯಾರೇಜ್ ಕಾಲ ಕೊಚ್ಚಿ ಹೋಗಿವೆ.
ಕೊಪ್ಪಳ ತಾಲೂಕಿನ ಕೊಳೂರು ಬ್ರಿಡ್ಜ್ ಕಮ್ ಬ್ಯಾರೇಜ್‌ನ ತಡೆಗೋಡೆ ಕುಸಿದು ಅಕ್ಕ ಪಕ್ಕದ ಸುಮಾರು 9 ಎಕರೆ ಜಮೀನು ಕುಸಿದು ರೈತರು ಕಣ್ಣೀರು ಹಾಕಿರುವ ಘಟನೆ ಮಾಸುವ ಮುನ್ನವೇ ಕುಷ್ಟಗಿ ತಾಲೂಕಿನ ಬಂಡರಗಲ್ ಮತ್ತು ಹೂಲಗೇರಿ ನಡುವಿನ ಸೇತುವೆ ಭಾರೀ ಮಳೆಗೆ ಕೊಚ್ಚಿ ಹೋಗಿದ್ದು ಕೊಪ್ಪಳ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ಸುಮಾರು 50 ಹಳ್ಳಿಗಳ ಜನಸಂಚಾರ ಕಡಿತಗೊಂಡಂತಾಗಿದೆ.
ಇದೇ ಸೇತುವೆ ಮೇಲೆ ಮಂಗಳವಾರ ನಸುಕಿನ ವೇಳೆ ವಿಜಯಪುರದಿಂದ ಬರುತ್ತಿದ್ದ ಬೈಕ್ ಸವಾರರು ಬೈಕ್ ಸಮೇತ ತೇಲಿಕೊಂಡು ಹೋದ ಘಟನೆ ನಡೆದಿದೆ. ಇದನ್ನು ನೋಡಿದ ಸ್ಥಳೀಯರು ಪ್ರಾಣದ ಹಂಗು ತೊರೆದು ಹಗ್ಗದ ಸಹಾಯದಿಂದ ಬೈಕ್ ಸವಾರರನ್ನು ರಕ್ಷಿಸಿದ್ದಾರೆ. ಆದರೆ ಬೈಕ್, ಮೊಬೈಲ್ ನೀರಿನಲ್ಲಿ ತೇಲಿ ಹೋಗಿವೆ.
ದೋಟಿಹಾಳ ಸಮೀಪದ ಬನ್ನಟ್ಟಿ ಗ್ರಾಮದ ಬಳಿ ಹಳ್ಳಕ್ಕೆ ತಾತ್ಕಾಲಿಕವಾಗಿ ನಿರ್ಮಿಸಿದ್ದ ಸೇತುವೆ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮರಂ ಕೊಚ್ಚಿ ಹೋಗಿದ್ದು , 50 ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ .
ಕ್ಯಾದಿಗುಂಪಾ ರಾಷ್ಟ್ರೀಯ ಹೆದ್ದಾರಿಯಿಂದ ಗ್ರಾಮದ ಮಾರ್ಗವಾಗಿ ತಾವರಗೇರಾ ಮೂಲಕ ಗಂಗಾವತಿ , ಸಿಂಧನೂರು , ರಾಯಚೂರು , ಲಿಂಗಸಗೂರು ಸೇರಿ ಇನ್ನಿತರ ನಗರಗಳಿಗೆ ಸಂಪರ್ಕ ಕಲ್ಪಿಸುವ ಜಿಲ್ಲಾ ಮುಖ್ಯ ರಸ್ತೆ ಇದಾಗಿದೆ . ಹಳ್ಳದ ಸೇತುವೆ ಕೊಚ್ಚಿ ಹೋಗುವುದರಿಂದ ಈ ಭಾಗದ ಜನರಿಗೆ ಕಿರಿಕಿರಿಯಾಗಿದೆ. ಕಳೆದ ನಾಲ್ಕು ದಿನಗಳಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಪ್ರಯಾಣಿಕರ ಪರದಾಟ:
ಬಂಡರಗಲ್ ಮತ್ತು ಹೂಲಗೇರಿ ನಡುವಿನ ಸೇತುವೆ ಕುಸಿತದಿಂದ ಸಿಂಧನೂರು , ಗಂಗಾವತಿ , ಅಂಗಸಗೂರು , ರಾಯಚೂರು , ಕಂದಗಲ್ , ಹುನಗುಂದ , ಹನುಮಸಾಗರ , ಉಮಲಾಪೂರ , ರಾಮತ್ನಾಳ , ವಂದಾಲ , ಮುದ್ದಲಗುಂದಿ , ಕುದ್ದೂರು , ತೆಲ್ಲಿಹಾಳ , ಬಳೂಟಗಿ , ಶಿರಗುಂಪಿ , ಬನ್ನಣ , ಮೇಗೂರು ರಾವಣಕಿ , ಮಾಲೂರು , ಇಲಕಲ್ , ಕುಷ್ಟಗಿ ಸೇರಿದಂತೆ 50 ಕ್ಕೂ ಹೆಚ್ಚು ಗ್ರಾಮಗಳ ಜನರು 20 ಕಿ.ಮೀ, ಸುತ್ತು ಹೊಡೆದು ಸ್ವ ಗ್ರಾಮಗಳನ್ನು ಸೇರಬೇಕಿದೆ.
ಸೇತುವೆ ಕಿತ್ತಿದ್ದರಿಂದ ಕಳೆದ 2-3 ದಿನಗಳಿಂದ ಸರಕಾರಿ ಬಸ್ ಸಂಚಾರ ಇಲ್ಲವಾಗಿದೆ. ಆಸ್ಪತ್ರೆಗೆ ತೆರಳಲು ರಸ್ತೆ ಇಲ್ಲವಾಗಿದ್ದರಿಂದ ವಯೋವೃದ್ಧರು , ಅಂಗವಿಕಲರು ಗರ್ಭಿಣಿ , ಬಾಣಂತಿಯರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ . ಕ್ರಮಕ್ಕೆ ಮುಂದಾಗಬೇಕಾದ ಶಾಸಕರು , ಜಿ.ಪಂ.ಸದಸ್ಯರು , ಅಧಿಕಾರಿಗಳ ಈ ನಿರ್ಲಕ್ಷ್ಯ ಧೋರಣೆಗೆ ಜನರು , ಪ್ರಯಾಣಿಕರು ಛೀಮಾರಿ ಹಾಕುತ್ತಿದ್ದಾರೆ .
ಬೈಕ್ ಸವಾರರಿಗೆ ಮತ್ತು ಕೃಷಿ ಚಟುವಟಿಕೆಗೆ ತೆರಳುವ ರೈತರಿಗೆ ಬೇರೆ ರಸ್ತೆ ಇಲ್ಲದೆ ತೀವ್ರ ತೊಂದರೆಯಾಗುತ್ತಿದೆ. 2016-17ನೇ ಸಾಲಿನ ಆರ್‌ಕೆಡಿಬಿ ಯೋಜನೆಯ ಅಂದಾಜು ಮೊತ್ತ 6 ಕೋಟಿ ) ರೂ . ವೆಚ್ಚದಲ್ಲಿ ಹೊಸ ವಿನ್ಯಾಸದೊಂದಿಗೆ ಸೇತುವೆ ಕಟ್ಟಡ ನಿರ್ಮಿಸಲು ಸುಮಾರು 3 ವರ್ಷದ ಹಿಂದೆಯೇ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.
ಕೆಸರುಗದ್ದೆಯಾದ ಹೊಳೆ ಆಲೂರು ರಸ್ತೆ; ಗ್ರಾಮದ ತುಂಬೆಲ್ಲಾ ಕೆಸರ ಮಜ್ಜನ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಹೊಳೆ ಆಲೂರು: ಮಳೆ ಬಂದರೆ ಸಾಕು ಹೊಳೆ ಆಲೂರು ಗ್ರಾಮದ ಒಳಗಿನ ರಸ್ತೆಗಳೆಲ್ಲಾ ಕೆಸರುಗದ್ದೆಯಾಗುತ್ತವೆ.
ಗ್ರಾಮದ ಪ್ರಮುಖ ರಸ್ತೆಗಳಾದ ಬದಾಮಿ ಕ್ರಾಸ್, ರೈಲ್ವೇ ಅಂಡರ್ ಪಾಸ್, ಆಲೂರು ವೆಂಕಟರಾಯರ ವೃತ್ತವೆಲ್ಲವೂ ಕೆಸರುಮಯವಾಗುತ್ತವೆ.
ಒಂದೆಡೆ ಮಳೆನೀರಿನಿಂದ ಈ ಪರಿಸ್ಥಿತಿಯಾದರೆ, ಮತ್ತೊಂದೆಡೆ ರೈಲ್ವೇ ಸ್ಟೇಷನ್ ನಿಂದ ರಸ್ತೆಗೆ ಹರಿದುಬರುವ ನೀರಿನಿಂದ ಅಂಡರ್ ಪಾಸ್ ಸೇರಿದಂತೆ ಸುತ್ತಮುತ್ತಲ ಪ್ರದೇಶ ಕೆರೆಯಾಗಿ ಮಾರ್ಪಡುತ್ತದೆ.
ಸಣ್ಣ ಮಳೆಗೆ ಈ ಪರಿಸ್ಥಿತಿಯಾದರೆ, ಇನ್ನು ಪ್ರವಾಹ ಬಂದಾಗಲೆಲ್ಲಾ ಗ್ರಾಮಕ್ಕೆ ನೀರ ನುಗ್ಗಿ ಅವಾಂತರ ಸೃಷ್ಟಿಯಾಗುತ್ತದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಸಹ ಸ್ಥಳೀಯ ಆಡಳಿತವಾಗಲಿ, ಜಿಲ್ಲಾಡಳಿತವಾಗಲಿ ಏನೂ ಕ್ರಮ ಕೈಗೊಳ್ಳದೇ ಇರುವುದು ವಿಪರ್ಯಾಸವೇ ಸರಿ.
ಅಂತರಾಜ್ಯ ಡಕಾಯಿತರ ಬಂಧನ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಶಿರಹಟ್ಟಿ
ಸೋಮವಾರ ಶಿರಹಟ್ಟಿ ಪೋಲೀಸರಿಂದ ಶಿರಹಟ್ಟಿ ತಾಲೂಕು ಸೇರಿದಂತೆ ಅಂತರಾಜ್ಯದ ಕಳ್ಳತನದಲ್ಲಿ ಭಾಗಿಯಾಗಿದ್ದಂತಹ ಆರು ಜನ ಆರೋಪಿತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಅಮರೇಶ ಮೋಡಕೇರ, ಉಪೇಂದ್ರ ಮೋಡಕೇರ, ಪರಶುರಾಮ ಮೋಡಕೇರ, ಲಕ್ಷ್ಮಣ ಮೋಡಕೇರ, ಮಾರುತಿ ಮೋಡಕೇರ, ರಾಜಾಭಕ್ಷಿ ಮಕಾನದಾರ ಈ ಆರು ಜನ ಬಂಧಿತ ಆರೋಪಿತರಾಗಿದ್ದಾರೆ.
ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಕುರಿ ಕಳ್ಳತನ, ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ, ವೆಂಕಟಾಪೂರದಲ್ಲಿ ದರೋಡೆ, ಸಿಂಧನೂರಿನಲ್ಲಿ ದರೋಡೆ, ರಾತ್ರಿ ವೇಳೆ ರಸ್ತೆಯಲ್ಲಿ ಸಾರ್ವಜನಿಕರ ಮೇಲೆ ಹಲ್ಲೆ ನಡೆಸುವುದು, ಆಂಧ್ರಪ್ರದೇಶದ ಕರ್ನೂಲ ಜಿಲ್ಲಾ ಕವತಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡುತ್ತಿರುವಂತಹ ಸಂದರ್ಭದಲ್ಲಿ ಬೋಲೆರೋ ವಾಹನ ಬಿಟ್ಟು ಪರಾರಿಯಾಗಿದ್ದ ಖಚಿತ ಸುಳಿವಿನ ಮೇರೆಗೆ ಇವರನ್ನು ಬಂಧಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್.ಎನ್. ಅವರ ನಿರ್ದೇಶನದ ಮೇರೆಗೆ ಡಿಎಸ್‌ಪಿ ಪ್ರಹ್ಲಾದ ಎಸ್.ಕೆ ನೇತೃತ್ವದಲ್ಲಿ ಶಿರಹಟ್ಟಿ ಸಿಪಿಐ ವಿಕಾಸ ಲಮಾಣಿ, ಗದಗ ಗ್ರಾಮೀಣ ಸಿಪಿಐ ರವಿ ಕಪ್ಪತ್ತನವರ, ಶಿರಹಟ್ಟಿ ಪಿಎಸ್‌ಐ ಸುನೀಲಕುಮಾರ ನಾಯ್ಕ, ಲಕ್ಷ್ಮೇಶ್ವರ ಪಿಎಸ್‌ಐ ಶಿವಕುಮಾರ ಲೋಹಾರ ಮತ್ತು ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಲಾಗಿದೆ.
ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಪ್ರಸನ್ನ ರಂಗ್ರೇಜ, ದಾದಾಖಲಂದರ ನದಾಫ್, ಗಣೇಶ ಗ್ರಾಮಪುರೋಹಿತ, ಎಂ.ಬಿ.ವಡ್ಡಟ್ಟಿ, ಯರಗಟ್ಟಿ, ಥೋರಾತ, ಯಕಾಸಿ, ಇನಾಮತಿ, ಬೂದಿಹಾಳ, ದೊಡ್ಡಮನಿ, ಹೊಸಮನಿ, ಯಳವತ್ತಿ, ಮಹದೇವ ಮುಂತಾದವರು ಭಾಗಿಯಾಗಿದ್ದರು.

