ರಾಜ್ಯದಲ್ಲಿ ಇಂದು ಕೂಡ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದು, ಸಾವಿನಲ್ಲಿ ಆತಂಕ ಮನೆ ಮಾಡಿದೆ. ಇಂದು ರಾಜ್ಯದಲ್ಲಿ 24,214 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 31,459 ಜನರು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಅಲ್ಲದೇ, ಇಂದು 476 ಜನ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸತ್ತವರ ಸಂಖ್ಯೆ 27,405ಕ್ಕೆ ತಲುಪಿದೆ.
ಇಂದು ರಾಜಧಾನಿಯಲ್ಲಿ 5,949 ಪ್ರಕರಣಗಳು ವರದಿಯಾಗಿದ್ದು, ಅಲ್ಲದೇ, 273 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. 6,643 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ರಾಜ್ಯದ ಬಾಗಲಕೋಟೆ 214, ಬಳ್ಳಾರಿಯ 725, ಬೆಳಗಾವಿ 1,147, ಬೆಂಗಳೂರು ಗ್ರಾಮಾಂತರ 623, ಬೆಂಗಳೂರು ನಗರ 5,949, ಬೀದರ್ 60, ಚಾಮರಾಜನಗರ 380, ಚಿಕ್ಕಬಳ್ಳಾಪುರ 238, ಚಿಕ್ಕಮಗಳೂರು 715, ಚಿತ್ರದುರ್ಗ 710, ದಕ್ಷಿಣ ಕನ್ನಡ 555, ದಾವಣಗೆರೆ 806, ಧಾರವಾಡ 678, ಗದಗ 370, ಹಾಸನ 1,505, ಹಾವೇರಿ 159, ಕಲಬುರಗಿ 153, ಕೊಡಗು 337, ಕೋಲಾರ 591, ಕೊಪ್ಪಳ 495, ಮಂಡ್ಯ 755, ಮೈಸೂರು 2,240, ರಾಯಚೂರು 445, ರಾಮನಗರ 263, ಶಿವಮೊಗ್ಗ 822, ತುಮಕೂರು 1,219, ಉಡುಪಿ 905, ಉತ್ತರ ಕನ್ನಡ 659, ವಿಜಯಪುರ 306 ಹಾಗೂ ಯಾದಗಿರಿಯಲ್ಲಿ 190 ಹೊಸ ಪ್ರಕರಣಗಳು ಪತ್ತೆಯಾಗಿವೆ.
ದೇಶದಲ್ಲಿ ಕೊರೊನಾ ಎರಡು ಅಲೆ ಬೀಸಿದೆ. ಮೊದಲ ಅಲೆಯಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಹೆಚ್ಚಿನ ಹಾನಿ ಮಾಡಿರಲಿಲ್ಲ. ಆದರೆ, ಎರಡನೇ ಅಲೆ ಕೊರೊನಾ ಹೊಕ್ಕ ನಂತರ ಲಾಕ್ ಡೌನ್ ಘೋಷಣೆ ಮಾಡಿದ್ದರಿಂದಾಗಿ ಸಾವು – ನೋವು ಸಂಭವಿಸುವಂತಾಗಿತ್ತು. ಆದರೆ, ಎರಡೂ ಅಲೆಗಳಲ್ಲಿಯೂ ಈ ಗ್ರಾಮದವರು ಕೊರೊನಾಗೆ ನೋ ಎಂಟ್ರಿ ಎಂದು ಹೇಳಿದೆ.
ಜಿಲ್ಲಾ ಕೇಂದ್ರದಿಂದ ಸ್ವಲ್ಪ ದೂರದಲ್ಲಿರುವ ಹುಣಶಿಕುಮರಿ ಹಾಗೂ ಶಿವನಗರ ಗ್ರಾಮಗಳಲ್ಲಿ ಎರಡೂ ಅಲೆಯಿಂದ ಒಂದೇ ಒಂದು ಕೊರೊನಾ ಕೇಸ್ ದಾಖಲಾಗಿಲ್ಲ. ಈ ಎರಡೂ ಗ್ರಾಮಗಳಲ್ಲಿ 100 ರಿಂದ 150 ಮನೆಗಳಿವೆ. ಅಲ್ಲದೇ, ಸುಮಾರು ಸಾವಿರದಷ್ಟು ಜನಸಂಖ್ಯೆ ಇವೆ. ಈ ಗ್ರಾಮಗಳಲ್ಲಿನ ಜನರು ಕೊರೊನಾ ಪ್ರಾರಂಭವಾಗುತ್ತಿದ್ದಂತೆ ನಗರಕ್ಕೆ ಬರುವುದನ್ನೇ ಬಿಟ್ಟು ಬಿಡುತ್ತಾರೆ. ಏನಾದರೂ ಬೇಕಾದರೆ ಅಕ್ಕಪಕ್ಕದ ಗ್ರಾಮಗಳಿಗೆ ಹೋಗಿ ದಿನಸಿ ಹಾಗೂ ತರಕಾರಿ ತರುತ್ತಿದ್ದಾರೆ. ಹೀಗಾಗಿ ಈ ಗ್ರಾಮಗಳಲ್ಲಿ ಕೊರೊನಾ ಹೊಕ್ಕಿಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ನಗರಕ್ಕೆ ಯಾರೂ ಹೋಗದಂತೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೇ, ನಗರದಿಂದ ಇಲ್ಲಿಗೆ ಯಾರಿಗೂ ಪ್ರವೇಶ ನೀಡಿಲ್ಲ. ಜಾನುವಾರು ಸಾಕಿ ಜೀವನ ನಡೆಸುವ ಇವರು, ಸದ್ಯ ಹೊಲ ಗದ್ದೆ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ. ಅಲ್ಲದೇ, ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮ ಆಯೋಜಿಸುತ್ತಿಲ್ಲ. ಹೊರ ಗ್ರಾಮಗಳ ಕಾರ್ಯಕ್ರಮಗಳಿಗೆ ಯಾರೂ ಹೋಗುತ್ತಿಲ್ಲ. ಹಾಲು ಸರಬರಾಜು ಮಾಡುವುದಕ್ಕಾಗಿ ಬೇರೆ ಗ್ರಾಮಕ್ಕೆ ತೆರಳಲು ಗ್ರಾಮದ ಇಬ್ಬರನ್ನು ನೇಮಕ ಮಾಡಲಾಗಿದೆ. ಅವರಿಬ್ಬರೇ ದಿನಸಿ ಕೂಡ ತಂದು ಕೊಡಬೇಕು. ಈ ರೀತಿ ಶಿಸ್ತು ಬದ್ಧ ಜೀವನ ನಡೆಸುತ್ತಿರುವ ಇವರು ಕೊರೊನಾ ಬರದಂತೆ ಎಚ್ಚರಿಕೆ ವಹಿಸಿದ್ದಾರೆ.
ರಾಜ್ಯ ಸರ್ಕಾರವು ಕೊರೊನಾ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ವಿವಿಧ ಶ್ರಮಿಕ ವರ್ಗದವರಿಗೆ ಹಾಗೂ ಕೊರೊನಾ ವಾರಿಯರ್ಸ್‌ಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ, ಜನರಿಗೆ ಹಗಲಿರುಳು ದುಡಿದು ಸುದ್ದಿ ಮುಟ್ಟಿಸುತ್ತಿರುವ ಮಾಧ್ಯಮದವರಿಗೆ ಪ್ಯಾಕೇಜ್‌ನಲ್ಲಿ ಏನೂ ಘೋಷಿಸಿಲ್ಲ. ಹೀಗಾಗಿ ಅವರಿಗೆ ಪ್ಯಾಕೇಜ್ ಘೋಷಿಸಬೇಕು ಎಂದು ಸಿದ್ದನಕೊಳ್ಳ ನಿರತಂರ ದಾಸೋಹ ಮಠದ ಡಾ| ಶಿವಕುಮಾರ ಸ್ವಾಮೀಜಿ ಆಗ್ರಹಿಸಿದ್ದಾರೆ.
ಮಾಧ್ಯಮ ಸಿಬ್ಬಂದಿ ತಮ್ಮ ಕುಟುಂಬವನ್ನು ಲೆಕ್ಕಿಸದೆ ಈ ಕೋವಿಡ್ ಕಾರ್ಯದಲ್ಲಿ ಜಾಗೃತಿ ಮೂಡಿಸುತ್ತ ಹಗಲಿರುಳು ಮುಂಚೂಣಿ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ಇಂತಹ ಮಾಧ್ಯಮದ ಪತ್ರಕರ್ತರ ಬಗ್ಗೆ ಸರ್ಕಾರ ನಿಷ್ಕಾಳಜಿ ವಹಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವದ ಒಂದು ಅಂಗವಾಗಿರುವ ಮಾಧ್ಯಮದ ಸಿಬ್ಬಂದಿಯನ್ನು ಪ್ಯಾಕೇಜ್ ಘೋಷಿಸುವಲ್ಲಿ ಸರ್ಕಾರ ಮರೆತಿದ್ದು, ಕೂಡಲೇ ರಾಜ್ಯದ ಮುಖ್ಯಮಂತ್ರಿ, ಅವರಿಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ನೆರವು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಕೊರೊನಾ ಹಾವಳಿಯಿಂದಾಗಿ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಮುಹೂರ್ತ ಕೂಡಿ ಬರುತ್ತಿಲ್ಲ. ಸದ್ಯ ಸಿಬಿಎಸ್ ಇ 12ನೇ ತರಗತಿಯ ಪರೀಕ್ಷೆಯನ್ನು ಎರಡೂವರೆ ಗಂಟೆ ಬದಲಾಗಿ ಕೇವಲ 20 ನಿಮಿಷಕ್ಕೆ ನಿಗದಿಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೊರೊನಾದಿಂದಾಗಿ ವಿದ್ಯಾರ್ಥಿಗಳಿಗೆ ಕೇವಲ 30 ನಿಮಿಷಗಳ ಪರೀಕ್ಷೆ ನಡೆಸುವ ನಿರ್ಧಾರ ಕೈಗೊಳ್ಳಲಾಗುತ್ತಿದ್ದು, ಜೂ. 1ರಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೊಖ್ರಿಯಾಲಾ ಪರೀಕ್ಷೆಯ ದಿನಾಂಕ ಹಾಗೂ ಸಮಯ ಘೋಷಿಸುವ ಸಾಧ್ಯತೆ ದಟ್ಟವಾಗಿದೆ. ಪಿಯುಸಿ ವಿದ್ಯಾರ್ಥಿಗಳು ಈ ಹಿಂದೆ ಎರಡೂವರೆ ಗಂಟೆಗಳ ಕಾಲ ಪರೀಕ್ಷೆ ಬರೆಯುತ್ತಿದ್ದರು. ಆದರೆ, ಶಿಕ್ಷಣ ತಜ್ಞರ ಸಲಹೆ ಮೇರೆಗೆ ಪರೀಕ್ಷಾ ಅವಧಿಯನ್ನು 30 ನಿಮಿಷಕ್ಕೆ ಇಳಿಸಲು ಮುಂದಾಗಿದ್ದು, ಎಲ್ಲವೂ ವಸ್ತುನಿಷ್ಠ (ಬಹುಆಯ್ಕೆ) ಪ್ರಶ್ನೆಗಳಿರಲಿವೆ ಎಂದು ಹೇಳಲಾಗುತ್ತಿದೆ.
ಕೇಂದ್ರ ಶಿಕ್ಷಣ ಸಚಿವಾಲಯ ಇತ್ತೀಚೆಗೆ ಪರೀಕ್ಷೆಯ ಕುರಿತು ಅಭಿಪ್ರಾಯಗಳನ್ನು ಲಿಖಿತ ರೂಪದಲ್ಲಿ ನೀಡುವಂತೆ ಸೂಚಿಸಿತ್ತು. ಬಹುತೇಕ ರಾಜ್ಯಗಳು ಸಿಬಿಎಸ್ಇ್ 12ನೇ ತರಗತಿ ಪರೀಕ್ಷೆ ನಡೆಸುವ ಸಲಹೆ ನೀಡಿದ್ದವು. ದೆಹಲಿ, ಮಹಾರಾಷ್ಟ್ರ, ಗೋವಾ, ಅಂಡಮಾನ್ ಮತ್ತು ನಿಕೋಬಾರ್ ಮಾತ್ರ ಪರೀಕ್ಷೆ ಇಲ್ಲದೇ ಮಕ್ಕಳನ್ನು ಪಾಸ್ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಟ್ಟಿದ್ದವು. ಆದರೆ, 32 ರಾಜ್ಯಗಳ ಪೈಕಿ 29 ರಾಜ್ಯಗಳು ಕಡಿಮೆ ಅವಧಿಯ ಪರೀಕ್ಷೆ ನಡೆಸುವಂತೆ ಸಲಹೆ ನೀಡಿದ್ದವು. ಹೀಗಾಗಿ ಸರ್ಕಾರ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ರಾಜಸ್ಥಾನ, ತ್ರಿಪುರ ಮತ್ತು ತೆಲಂಗಾಣ ಮಾತ್ರ ಮೊದಲಿನ ಪದ್ಧತಿಯಂತೆ ಪರೀಕ್ಷೆ ನಡೆಸಲು ಸಲಹೆ ನೀಡಿದ್ದವು.
ಸದ್ಯ ದೇಶದಲ್ಲಿ ಕೊರೊನಾ ಎರಡನೇ ಅಲೆ ತಾಂಡವಾಡುತ್ತಿದೆ. ಇನ್ನೂ ಮೂರನೇ ಅಲೆಯ ಆತಂಕ ಇದ್ದು, ಅದು ಮಕ್ಕಳ ಮೇಲೆಯೇ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ಮಕ್ಕಳಿಗೆ ಲಸಿಕೆ ನೀಡಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಜಗತ್ತಿನ ಯಾವುದೇ ರಾಷ್ಟ್ರಗಳು ಮಕ್ಕಳಿಗೆ ಲಸಿಕೆ ನೀಡುತ್ತಿಲ್ಲ. ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಕೂಡ ಯಾವುದೇ ಶಿಫಾರಸು ಮಾಡಿಲ್ಲ. ಮಕ್ಕಳಲ್ಲಿ ಲಸಿಕೆಗಳ ಸುರಕ್ಷತೆಯ ಬಗ್ಗೆ ಅಧ್ಯಯನಗಳು ನಡೆದಿವೆ ಎಂದು ತಿಳಿಸಿದೆ.
ದೇಶದಲ್ಲಿ ಮಕ್ಕಳ ಮೇಲೆ ಶೀಘ್ರವೇ ಕ್ಲಿನಿಕಲ್ ಟ್ರಯಲ್ ಆರಂಭವಾಗಲಿದೆ. ಈ ಪ್ರಯೋಗಗಳ ಆಧಾರದ ಮೇಲೆ ವಿಜ್ಞಾನಿಗಳು ಮುಂದಿನ ನಿರ್ಧಾರ ಕೈಗೊಳ್ಳಬೇಕೆ ಹೊರತು, ಭಯ ಹಾಗೂ ರಾಜಕಾರಣಿಗಳ ರಾಜಕೀಯ ಆಧರಿಸಿ ನಿರ್ಧಾರ ಕೈಗೊಳ್ಳಲಾಗುವುದಿಲ್ಲ ಎಂದು ತಿಳಿಸಿದೆ.
ಇತ್ತೀಚೆಗಷ್ಟೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನೀತಿ ಆಯೋಗದ ಸದಸ್ಯ (ಆರೋಗ್ಯ ವಿಭಾಗ) ಡಾ.ವಿ.ಕೆ.ಪೌಲ್, ಮಕ್ಕಳ ಮೇಲೆ ಕೊವಾಕ್ಸಿನ್ ಲಸಿಕೆಯ ವೈದ್ಯಕೀಯ ಪ್ರಯೋಗ ಇನ್ನೂ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಕೊವಾಕ್ಸಿನ್ ಲಸಿಕೆಯನ್ನು 2 ರಿಂದ 18 ವರ್ಷದವರ ಮೇಲೆ ಎರಡು ಮತ್ತು ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಅನುಮತಿ ನೀಡಿದೆ ಎಂದು ಹೇಳಿದ್ದಾರೆ.
`ವೈದ್ಯೋ ನಾರಾಯಣೋ ಹರಿಃ’ ಎಂದು ಕರೆಯುತ್ತಾರೆ. ವೈದ್ಯರು ನಾರಾಯಣನಾದರೆ, ಆಸ್ಪತ್ರೆ ದೇವಾಲಯವಾಗುತ್ತದೆ. ಆದರೆ, ಇದರ ತದ್ವಿರುದ್ಧವಾಗಿ ವರ್ತಿಸಿದರೆ? ಹೌದು! ಇಲ್ಲೊಂದು ಇಂತಹ ಘಟನೆ ನಡೆದಿದೆ. ಈ ಆರೋಪದಿಂದಾಗಿ ಜನರು ಅವಳಿ ನಗರದಲ್ಲಿ ವೈದ್ಯರ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಂತಾಗಿದೆ.
ನಗರದ ಖ್ಯಾತ ನರರೋಗ ತಜ್ಞ ಡಾ| ಕ್ರಾಂತಿಕಿರಣ ಅವರ ಒಡೆತನದ ಬಾಲಾಜಿ ನರರೋಗ ಆಸ್ಪತ್ರೆಯಲ್ಲಿ ಇತ್ತೀಚೆಗಷ್ಟೇ 52 ವರ್ಷದ ಮಹಿಳೆಯೊಬ್ಬರು ಮಿದುಳಿನ ಪಾರ್ಶ್ವವಾಯು ಚಿಕಿತ್ಸೆಗೆ ಸಂಬಂಧಿಸಿದಂತೆ ದಾಖಲಾಗಿದ್ದರು. ಕೂಡಲೇ ವೈದ್ಯರ ಸಲಹೆಯಂತೆ ಮಹಿಳೆಗೆ ಸಿಟಿ ಸ್ಕ್ಯಾನ್ ಮಾಡಲಾಗಿತ್ತು.
ಘಟನೆ ನಡೆದಿಲ್ಲ ಎಂದರು!
ಇತ್ತ ಮಹಿಳೆ ತನ್ನ ಮಗನಿಗೆ ದೂರವಾಣಿ ಕರೆ ಮಾಡಿ, ತನ್ನೊಂದಿಗೆ ನಡೆದ ವಿಚಿತ್ರ ಘಟನೆಯನ್ನು ವಿವರಿಸಿದ್ದಳು. ಗಾಬರಿಗೊಂಡ ಮಗ ಕೂಡಲೇ, ಬೆಂಗಳೂರಿನಿಂದ ಹುಬ್ಬಳ್ಳಿಯ ಅಸ್ಪತ್ರೆಗೆ ಭೇಟಿ ನೀಡಿ. ತನ್ನ ತಾಯಿಯೊಂದಿಗೆ ಮಾತನಾಡಿ ಘಟನೆಯ ವಿವರ ಪಡೆದಿದ್ದಾರೆ. ಅನಂತರ ಆಕೆಯ ಮಗ ಆಸ್ಪತ್ರೆಯ ಆಡಳಿತ ವಿಭಾಗದ ಗಮನಕ್ಕೂ ತಂದಿದ್ದಾರೆ. ಆದರೆ, ಆಸ್ಪತ್ರೆಯವರು ಆ ರೀತಿ ಯಾವ ಘಟನೆಯೂ ಇಲ್ಲಿ ನಡೆದಿಲ್ಲ ಎಂದು ಹೇಳಿದ್ದಾರೆ.
ಇಷ್ಟಕ್ಕೇ ಸುಮ್ಮನಾಗಿ ತನ್ನ ತಾಯಿಯ ಆರೈಕೆ, ಚಿಕಿತ್ಸೆಯತ್ತ ಗಮನ ಹರಿಸಲು ತಿಳಿಸಿದ್ದಾರೆ. ಆದರೆ, ಅಮ್ಮನ ಮಾತು ಸತ್ಯವಾಗಿದೆ. ದಯವಿಟ್ಟು ಮತ್ತೊಮ್ಮೆ ನಿಮ್ಮ ಸಿಬ್ಬಂದಿಯನ್ನು ವಿಚಾರಿಸಿ ಎಂದು ಬೇಡಿಕೊಂಡಿದ್ದಾರೆ. ಆದರೆ, ಇದಕ್ಕೆ ಆಸ್ಪತ್ರೆಯ ಆಡಳಿತ ವಿಭಾಗ ತಲೆ ಕೆಡಿಸಿಕೊಳ್ಳದೆ, ಚಿಕಿತ್ಸೆ ಮುಂದುವರೆಸಿದ್ದಾರೆ.
ಪೊಲೀಸರಿಗೆ ಮಾಹಿತಿ, ದೂರು
ಆದರೆ, ಮಗ ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿದ್ಯಾನಗರದ ಪೊಲಿಸ್ ಇನ್‌ಸ್ಪೆಕ್ಟರ್ ಮಹಾಂತೇಶ ಹೂಲಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಮಹೀಳಾ ರೋಗಿಯ ಮಗ ವಿದ್ಯಾನಗರದ ಪೊಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅಷ್ಟಕ್ಕೂ ಬಾಲಾಜಿ ಆಸ್ಪತ್ರೆಯಲ್ಲಿ ಆ ರೀತಿ ನಡೆದುಕೊಂಡ ವ್ಯಕ್ತಿ ಯಾರು? ನಿಜಕ್ಕೂ ಆ ದಿನ ನಡೆದ ಸತ್ಯ ಸಂಗತಿ ಏನು? ಎಂಬುವುದು ಪೊಲೀಸರ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ. ಅಲ್ಲದೆ, ಆರೋಪಿಯ ವಿರುದ್ಧ ಡಾ| ಕ್ರಾಂತಿ ಕಿರಣ್ ಕ್ರಮ ಕೈಗೊಳ್ಳುವರೇ ಎಂದು ಕಾದು ನೋಡಬೇಕಿದೆ.
ಆಸ್ಪತ್ರೆಯವರು ತಲೆ ಕೆಡಿಸಿಕೊಂಡಿಲ್ಲ
ನನ್ನ ತಾಯಿಗೆ ಕೊರೊನಾ ಸೋಂಕು ತಗುಲಿತ್ತು. ಆನಂತರ ಅವರು ಹೋಂ ಐಸೋಲೇಷನ್‌ನಲ್ಲಿದ್ದು, ಚಿಕಿತ್ಸೆ ಪಡೆದಿದ್ದಾರೆ. ನಾನು ಬೆಂಗಳೂರಿಗೆ ಕರೆದುಕೊಂಡು ಹೋಗಬೇಕು ಎಂದು ಊರಿಗೆ ಬಂದಿದ್ದೆ. ಅಷ್ಟರಲ್ಲಿ ಅವರಿಗೆ ಬ್ರೇನ್ ಸ್ಟ್ರೋಕ್ ಆಯಿತು. ಕೂಡಲೇ ಅವರನ್ನು ಇಲ್ಲಿಯ ಬಾಲಾಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಮೂಗಿನಲ್ಲಿ ನಳಿಕೆ ಹಾಕಲಾಗಿತ್ತು. ಅದನ್ನು ಅವರು ಕಿತ್ತುಕೊಳ್ಳುತ್ತಿದ್ದರು. ಹೀಗಾಗಿ ಅವರಿಗೆ ತಿಳಿಹೇಳುವಂತೆ ನನ್ನನ್ನು ಅವರಿದ್ದ ಕೋಣೆಗೆ ಕಳುಹಿಸಿದರು. ಆದ ನನ್ನ ತಾಯಿ, ನನ್ನ ಕೈ ಹಿಡಿದುಕೊಂಡು ಇಲ್ಲಿ ನನಗೆ ದೈಹಿಕ ಕಿರುಕುಳ ನೀಡಲಾಗಿದೆ ಎಂದು ಹೇಳಿದರು. ಈ ಕುರಿತು ನಾನು ಆಡಳಿತ ಮಂಡಳಿಯ ಗಮನಕ್ಕೆ ತಂದೆ. ಆದರೆ, ಅವರು ತಲೆ ಕೆಡಿಸಿಕೊಳ್ಳಲಿಲ್ಲ.
ಕೊರೊನಾ ಸೋಂಕು ತಡೆಗಟ್ಟಲು ಸರಕಾರ ಲಾಕ್‌ಡೌನ್ ಜಾರಿ ಮಾಡಿದೆ. ಅದರಲ್ಲೂ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಪರಿಸ್ಥಿತಿ ನಿಭಾಯಿಸಲು ಆಯಾ ಜಿಲ್ಲಾಧಿಕಾರಿಗಳಿಗೆ ಹೊಣೆ ಹೊರಿಸಲಾಗಿದೆ.
ಗದಗ ಜಿಲ್ಲೆಯಲ್ಲೂ ಇಂದಿನಿಂದ (ಮೇ 27) ಜೂನ್ 1ರವರೆಗೆ ಕಠಿಣ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯಲ್ಲೂ ಸೋಮವಾರದಿಂದಲೇ ಕಠಿಣ ಲಾಕ್ ಡೌನ್ ಜಾರಿ ಮಾಡಲಾಗಿದ್ದು, ಮೆಡಿಕಲ್ ಹಾಗೂ ಬೆಳಗ್ಗೆ 6ರಿಂದ 8ರ ವರೆಗೆ ಹಾಲಿನ ಅಂಗಡಿಗಳನ್ನು ತೆರೆಯಲು ಮಾತ್ರ ಅವಕಾಶ ನೀಡಲಾಗಿದೆ. ಅಗತ್ಯ ವಸ್ತುಗಳು, ತರಕಾರಿ, ಮಾಂಸ, ಮದ್ಯ ಮಾರಾಟಕ್ಕೂ ಅವಕಾಶ ಇಲ್ಲ. ಹೀಗಾಗಿ ಇಲ್ಲೊಂದಿಷ್ಟು ಜನ ಈ ಕಠಿಣ ಲಾಕ್ ಡೌನ್ ಅನ್ನು ಬಂಡವಾಳ ಮಾಡಿಕೊಳ್ಳಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದು, ಸ್ಟೇಷನ್ ಬೇಲ್ ಮೇಲೆ ಹೊರ ಬಂದಿದ್ದಾರೆ.
ಹೌದು, ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕೆಲವು ಅಕ್ರಮ ಮದ್ಯ ದಂಧೆಕೋರರು, ಕಠಿಣ ಲಾಕ್‌ಡೌನ್‌ದಲ್ಲಿ ದುಡ್ಡು ಮಾಡುವ ಹಪಾಹಪಿಗೆ ಹೋಗಿ ಪೊಲೀಸರ ಅತಿಥಿಗಳಾಗಿದ್ದಾರೆ. ನಿತ್ಯವೂ ಗಜೇಂದ್ರಗಡ ಪಟ್ಟಣದಿಂದ ಕದ್ದು ಮುಚ್ಚಿ ಮದ್ಯ ಖರೀದಿ ಮಾಡಿ ತಮ್ಮೂರಲ್ಲಿ ಹೆಚ್ಚಿನ ಬೆಲೆಗೆ ಮಾರಿ ದುಡ್ಡು ಮಾಡಿಕೊಳ್ಳುತ್ತಿದ್ದ ಈ ದಂಧೆಕೋರರಿಗೆ ಗದಗ ಜಿಲ್ಲೆಯಲ್ಲೂ ಗುರುವಾರದಿಂದ ಸಂಪೂರ್ಣ ಲಾಕ್‌ಡೌನ್ ಅಂತ ಸುದ್ದಿ ಕೇಳಿ ಬುಧವಾರವೇ ಮದ್ಯ ಖರೀದಿಗೆ ಬಂದಿದ್ದರು. ಇವರು ಖರೀದಿ ಮಾಡುತ್ತಿರುವುದು ಅದ್ಯಾರ ಕಣ್ಣಿಗೆ ಬಿತ್ತೊ ಗೊತ್ತಿಲ್ಲ. ಪೊಲೀಸರು ಇಂತಹವರನ್ನು ಹಿಡಿದು ಲಕ್ಷಾಂತರ ರೂ, ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಯಲಬುರ್ಗಾ ತಾಲೂಕಿನ ಚಿಕ್ಕ ಮ್ಯಾಗೇರಿಯ ಜಂಬಣ್ಣ ಶಿವಪ್ಪ ರಾಠೋಡ, ವೀರೇಶ್ ಈರಪ್ಪ ಕುರಿ, ವೀರೇಶ್ ವೀರನಗೌಡ್ ಈಳಿಗೇರ, ಮುದಕಪ್ಪ ಶಿದ್ದಪ್ಪ ಆಡಿನ, ಗದಗೇರಿ ತಾಂಡಾದ ಪಾಂಡಪ್ಪ ಜಾಂಪಲೆಪ್ಪ ಚವ್ಹಾಣ, ತುಮ್ಮರಗುದ್ದಿಯ ಮಂಜುನಾಥ್ ಉಮೇಶಪ್ಪ ಕಾರಭಾರಿ ಎಂದು ಗುರುತಿಸಲಾಗಿದೆ. ಇವರಿಂದ ವಾಹನ ಸಮೇತ 81 ಸಾವಿರ ರೂ. ಮೌಲ್ಯದ ಮದ್ಯ ಜಪ್ತಿ ಮಾಡಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಕುಷ್ಟಗಿ ತಾಲೂಕಿನ ಮಡಿಕೇರಿ ಗ್ರಾಮದ ಜಗನ್ನಾಥ ಕಳಕಪ್ಪ ಮುದಗಲ್, ನರಸಾಪುರದ ಬಸಪ್ಪ ಶರಣಪ್ಪ ಯರಕನಾಳ ಎಂಬುವವರಿಂದ ಬೈಕ್ ಸಮೇತ 30 ಸಾವಿರ ರೂ. ಮೌಲ್ಯದ ಮದ್ಯವನ್ನು ಜಪ್ತಿ ಮಾಡಲಾಗಿದೆ. ಮೂರನೇ ಪ್ರಕರಣದಲ್ಲಿ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದ ವಿಟ್ಠಲ ಮುನಿಯಪ್ಪ ಡೊಳ್ಳಿನ ಎಂಬಾತನನ್ನು ಬಂಧಿಸಿ ಆತನಿಂದ 20 ಸಾವಿರ ರೂ. ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ. ಬಂದಿತರೆಲ್ಲರೂ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸ್ಟೇಷನ್ ಬೇಲ್ ಮೇಲೆ ಹೊರಗೆ ಬಂದಿದ್ದಾರೆ.
ಅಕ್ರಮದ ಹಾಟ್ ಸ್ಪಾಟ್!
ಗಜೇಂದ್ರಗಡ ಪಟ್ಟಣ ವ್ಯಾಪಾರ, ವಹಿವಾಟಿಗೆ ಹೆಚ್ಚು ಫೇಮಸ್. ಅಷ್ಟೇ ಪ್ರಮಾಣದಲ್ಲಿ ಅಕ್ರಮ ಚಟುವಟಿಕೆಗಳ ಹಾಟ್‌ಸ್ಪಾಟ್ ಕೂಡ ಆಗಿದೆ. ಇಲ್ಲಿ ಕಳ್ಳಭಟ್ಟಿ ಸಾರಾಯಿ, ಬಡ್ಡಿ ವ್ಯವಹಾರ, ಖೋಟಾ ನೋಟು ಚಲಾವಣೆ, ಮಟಕಾ ಹಾವಳಿ, ಇಸ್ಪೀಟು, ಅನ್ನ ಭಾಗ್ಯ ಅಕ್ಕಿ ಅಕ್ರಮ ಸಾಗಾಟ – ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಕಳ್ಳಭಟ್ಟಿ ಸಾರಾಯಿ ಇಲ್ಲಿಂದಲೇ ಪಕ್ಕದ ಜಿಲ್ಲೆಗಳಿಗೆ ಸರಬರಾಜು ಆಗುತ್ತದೆ.
ಕೊಪ್ಪಳ ಜಿಲ್ಲೆಯ ಬಹುತೇಕ ಹಳ್ಳಿಯ ಕೆಲವೊಂದಿಷ್ಟು ಜನ ಗಜೇಂದ್ರಗಡ ಪಟ್ಟಣದ ಕೆಲವರ ಜೊತೆಗೆ ಇಂತಹ ವ್ಯವಹಾರಗಳಿಗಾಗಿಯೇ ನಂಟು ಹೊಂದಿದ್ದಾರೆ.
ಕುಷ್ಟಗಿ, ಯಲಬುರ್ಗಾ ತಾಲೂಕಿನ ಕೆಲವು ಮಟಕಾ ಬುಕ್ಕಿಗಳು ಗಜೇಂದ್ರಗಡ ಪಟ್ಟಣಕ್ಕೆ ಬಂದು ತಮ್ಮ ದಂಧೆ ನಡೆಸುತ್ತಾರೆ. ಆಗಾಗ ಒಂದೊಂದು ಕೇಸ್ ಆಗಿ ಬೆಳಕಿಗೆ ಬರುತ್ತವೆ. ಆದರೆ ಎಷ್ಟೋ ಪ್ರಕರಣಗಳು ದಾಖಲಾಗುವುದಿಲ್ಲ. ಅದಕ್ಕೆ ಕಾರಣ ಒಂದೆರೆಡಲ್ಲ.
ಇಂತಹ ಲಾಕ್‌ಡೌನ್ ಸಂದರ್ಭದಲ್ಲಿಯೂ ಅನ್ನಭಾಗ್ಯದ ಅಕ್ಕಿ ಅಕ್ರಮ ಸಾಗಾಟವಾಗುತ್ತಿದೆ. ಇದೇನೂ ಪೊಲೀಸರಿಗೆ ಗೊತ್ತಿಲ್ಲ ಅಂತ ಏನೂ ಇಲ್ಲ. ಎಲ್ಲವೂ ಗೊತ್ತಿದೆ. ಆದರೂ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ ಅಂತ ಕೆಲವು ಮೂಲಗಳಿಂದ ತಿಳಿದು ಬಂದಿದೆ. ಇನ್ನಾದರೂ ಪೊಲೀಸರು ಖಡಕ್ಕಾಗಿ ವರ್ತಿಸಿ, ಇಂಥವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು, ಅಕ್ರಮಗಳಿಗೆ ಕಡಿವಾಣ ಹಾಕಬೇಕೆಂದು ಗದಗ-ಕೊಪ್ಪಳ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.
ದೇಶದಲ್ಲಿ 18 ರಿಂದ 44 ವರ್ಷದೊಳಗಿನ ವ್ಯಕ್ತಿಗಳಿಗೆ ಲಸಿಕೆ ಹಾಕುವಲ್ಲಿ ಬಿಹಾರ್ ರಾಜ್ಯ ಮೊದಲ ಸ್ಥಾನದಲ್ಲಿದೆ. ಈ ವಯಸ್ಸಿನವರ 15,27,000 ಜನರಿಗೆ ಬಿಹಾರ ಈಗಾಗಲೇ ಲಸಿಕೆ ಹಾಕಿದೆ. ಇನ್ನುಳಿದಂತೆ ಉತ್ತರ ಪ್ರದೇಶದಲ್ಲಿ 15,14,761 ಮತ್ತು ರಾಜಸ್ಥಾನದಲ್ಲಿ 14,91,581 ಜನರಿಗೆ ಲಸಿಕೆ ಹಾಕಲಾಗಿದೆ.
ಬರೋಬ್ಬರಿ ಒಂದು ಮಿಲಿಯನ್ ಜನರಿಗೆ ಲಸಿಕೆ ಹಾಕುವ ಮೂಲಕ ಗುಜರಾತ್ ನಾಲ್ಕನೇ ಸ್ಥಾನದಲ್ಲಿದೆ. ಲಸಿಕೆ ನೀಡಲು ಆರಂಭಿಸಿದ ಕೇವಲ 16 ದಿನಗಳಲ್ಲಿಯೇ ಬಿಹಾರ ರಾಜ್ಯ ಇಷ್ಟೊಂದು ಜನರಿಗೆ ಲಸಿಕೆ ನೀಡಿ, ಮೊದಲ ಸ್ಥಾನಕ್ಕೆ ಏರಿದೆ. ಕೇಂದ್ರ ಸರ್ಕಾರದಿಂದ 3.50 ಲಕ್ಷ ಡೋಸ್ ಲಸಿಕೆ ಬರುತ್ತಿದ್ದಂತೆ, ಮೇ. 9 ರಂದು ಲಸಿಕೆ ನೀಡಲು ಆರಂಭಿಸಲಾಗಿತ್ತು. ಬಿಹಾರದಲ್ಲಿ 18 ರಿಂದ 44 ವರ್ಷದೊಳಗಿನವರಿಗೆ ಮೊದಲ ಆದ್ಯತೆ ನೀಡಲಾಗಿತ್ತು.
ರಾಜ್ಯದಾದ್ಯಂತ ಸುಮಾರು 624 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿತ್ತು. ಲಸಿಕೆ ಹಾಕುವ ಬಗ್ಗೆ ಅರೆವೈದ್ಯಕೀಯ ಮತ್ತಿತರ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲಾಗಿತ್ತು ಎಂದು ಬಿಹಾರ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರತ್ಯಯ್ ಅಮೃತ್ ಹೇಳಿದ್ದಾರೆ.
ರಾಜ್ಯಾದಾದ್ಯಂತ ಜಾಗೃತಿ ಮೂಡಿಸುವ ಮೂಲಕ ಲಸಿಕೆ ಪಡೆಯುವಂತೆ ಯುಜ ಜನತೆಯನ್ನು ಪ್ರೇರಿಪಿಸಲಾಗಿತ್ತು. 28 ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಜುಲೈ 10ರೊಳಗೆ ಈ ಗುಂಪಿನ ಎಲ್ಲರಿಗೂ ಲಸಿಕೆ ಹಾಕಲಾಗುವುದು. ಎಲ್ಲ ವಯಸ್ಸಿನ ಜನರಿಂದ ಲಸಿಕೆ ಪಡೆಯಲು ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದು ಪ್ರತ್ಯಯ್ ಅಮೃತ್ ತಿಳಿಸಿದ್ದಾರೆ.
ರಾಜ್ಯದ ಬಿಜೆಪಿ ನಾಯಕರು ದೆಹಲಿಯಲ್ಲಿ ಬೀಡು ಬಿಟ್ಟು ಸಿಎಂ ಬದಲಾವಣೆಗೆ ತೆರೆಮರೆ ಕಸರತ್ತು ನಡೆಸಿದ್ದಾರೆ ಎಂದು ಹೇಳಲಾಗುತ್ತಿತ್ತು. ಅದರಲ್ಲಿ ಸಿ.ಪಿ. ಯೋಗೇಶ್ವರ್ ಹೆಸರು ಮುಂಚೂಣಿಯಲ್ಲಿ ಕೇಳಿಬಂದಿತ್ತು. ಹಾಗಾಗಿ ಈ ವಿಚಾರದ ಬಗ್ಗೆ ಸ್ವತಃ ಸಿ.ಪಿ ಯೋಗೇಶ್ವರ್ ಅವರು ಸ್ಪಷ್ಟನೆ ನೀಡಿದ್ದಾರೆ.
ಇಂದು ವಿಧಾನಸೌಧದಲ್ಲಿ ಮಾತನಾಡಿದ ಸಿ.ಪಿ.ಯೋಗೇಶ್ವರ್, ‘ನಾನು ದೆಹಲಿಗೆ ಹೋಗಿಬರೋದು ಸಾಮಾನ್ಯವಾದ ವಿಚಾರ. ಆದರೆ ನಾಯಕತ್ವ ಬದಲಾವಣೆ ವಿಚಾರ ಯಾಕೆ ಚರ್ಚೆಗೆ ಬಂತು ಎನ್ನುವುದು ನನಗೆ ಗೊತ್ತಿಲ್ಲ. ನನಗೆ ನನ್ನದೇ ಆದ ಸಮಸ್ಯೆಗಳಿವೆ. ಮುಂದಿನ ಬಾರಿ ನಾನು ಚುನಾವಣೆಯಲ್ಲಿ ಸ್ಪರ್ಧಿಸಬೇಕಿದೆ. ನನ್ನ ವೈಯಕ್ತಿಕ ಕೆಲಸಕ್ಕೆ ದೆಹಲಿಗೆ ಹೋಗಿದ್ದೆ. ಯಾವ ವಿಚಾರಕ್ಕೆ ಹೋಗಿದ್ದೆ? ಏನು? ಎಂಬುದಕ್ಕೆ ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ನನಗೆ ವಹಿಸಿರುವ ಇಲಾಖೆಯಲ್ಲಿ ಬೇರೊಬ್ಬರು ಬಂದು ಹಸ್ತಕ್ಷೇಪ ಮಾಡುವುದನ್ನು ನಾನು ಸಹಿಸುವುದಿಲ್ಲ. ಇದನ್ನು ಎಲ್ಲರೂ ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬೇಕು. ಪಕ್ಷದ ಚೌಕಟ್ಟಿನಲ್ಲಿಯೇ ಕೆಲ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾಗಿದೆ. ಮುಂದಿನ ಅವಧಿಯಲ್ಲೂ ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು ಹಾಗಾಗಿ ನಾನು ಕೆಲ ಪ್ರಯತ್ನಗಳನ್ನು ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.