Home Blog Page 3031

ರಾಜ್ಯದಲ್ಲಿ ಇಂದು ಕೂಡ ಎಂದಿನಂತೆ ಮುಂದುವರೆದ ಸೋಂಕಿತರ ಸಂಖ್ಯೆ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಇಂದು ರಾಜ್ಯದಲ್ಲಿ 22,823 ಜನರಲ್ಲಿ ಸೋಂಕು ಕಾಣಿಸಿಕೊಡಿದೆ. ಅಲ್ಲದೇ, ಇಂದು 401 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.
ಅಲ್ಲದೇ, ಇಂದು ರಾಜ್ಯದಲ್ಲಿ 52,253 ಜನ ವಿವಿಧ ಆಸ್ಪತ್ರೆಗಳಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಂದು ಕೊರೊನಾಗೆ 401 ಜನ ಸಾವನ್ನಪ್ಪಿದ್ದು, ಈ ಮೂಲಕ ರಾಜ್ಯದಲ್ಲಿ ಇಲ್ಲಿಯವರೆಗೆ 27,806 ಜನ ಸಾವನ್ನಪ್ಪಿದಂತಾಗಿದೆ.

ಇಂದು ಬೆಂಗಳೂರಿನಲ್ಲಿ 5,763 ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೇ, ಇನ್ನೂ 2,80,697 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದಲ್ಲಿ ಇಂದು ಮಹಾಮಾರಿಗೆ 192 ಜನ ಬಲಿಯಾಗಿದ್ದಾರೆ.
ಇಂದು ಬೆಂಗಳೂರು 5,736, ಬೆಳಗಾವಿ 1.147, ಹಾಸನ 1,505, ಮೈಸೂರು 2,240, ತುಮಕೂರಿನಲ್ಲಿ 1,219 ಪ್ರಕರಣಗಳು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ.

ಮೋದಿ, ಯಡಿಯೂರಪ್ಪ ಕೊರೊನಾ ನಿಯಂತ್ರಿಸುವಲ್ಲಿ ವಿಫಲ; ಸಿದ್ದರಾಮಯ್ಯ

ವಿಜಯಸಾಕ್ಷಿ ಸುದ್ದಿ, ಬಾಗಲಕೋಟ

ಮಹಾಮಾರಿ ಎರಡನೇ ಅಲೆ ತಡೆಯುವಲ್ಲಿ ಪ್ರಧಾನಿ ಮೋದಿ ಹಾಗೂ ಯಡಿಯೂರಪ್ಪ ಸರ್ಕಾರ ಸಂಪೂರ್ಣ ವಿಫಲವಾಗಿವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಜಿಲ್ಲೆಯ ಬಾದಾಮಿ ಪಟ್ಟಣಕ್ಕೆ ಆಗಮಿಸಿ ಕೊರೊನಾ ನಿಯಂತ್ರಣ ಕುರಿತಾದ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2ನೇ ಅಲೆಯ ಬಗ್ಗೆ ಮಾಹಿತಿ ಇದ್ದರೂ ಸರ್ಕಾರ ಜಾಗೃತಿ ವಹಿಸಲಿಲ್ಲ. ಆಕ್ಸಿಜನ್, ರೆಮ್ ಡಿಸಿವರ್, ವೆಂಟಿಲೇಟರ್ ಬೆಡ್ಗಾಳ ಸಿದ್ದತೆ ನಡೆಸಲಿಲ್ಲ. ರೋಗಿಗಳಿಗೆ ಆಕ್ಸಿಜನ್, ರೆಮ್‍ ಡಿಸಿವರ್ ಇಂಜೆಕ್ಷನ್ ಪೂರೈಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಂ ಬದಲಾವಣೆ ಆಗಬಹುದು ಎಂಬ ಮಾಹಿತಿ ನನಗಿದೆ. ಆದರೆ, ಕೊರೊನಾದಿಂದಾಗಿ ಈ ವಿಷಯ ಮುಂದಕ್ಕೆ ಹೋಗಿರಬಹುದು. ನಾನೊಬ್ಬ ವಿರೋಧ ಪಕ್ಷದ ನಾಯಕ. ಶ್ಯಾಡೋ ಆಫ್ ಚೀಫ್ ಮಿನಿಸ್ಟರ್ ಇದ್ದಾಂಗೆ ನಾನು ಮಾಹಿತಿ ತಿಳಿದುಕೊಳ್ಳುವಂತಿಲ್ಲ ಎಂದರೆ ಇದು ಪ್ರಜಾಪ್ರಭುತ್ವದ ವ್ಯವಸ್ಥೆ ನಾ? ಎಂದು ಪ್ರಶ್ನಿಸಿ ಬೇಸರ ವ್ಯಕ್ತಪಡಿಸಿದ್ದಾರೆ.

ಕೊರೊನಾ; ಶುಕ್ರವಾರ ಜಿಲ್ಲೆಯಲ್ಲಿ 302 ಜನರಿಗೆ ಸೋಂಕು, ಮತ್ತೆ ಐವರ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಸಾವಿನ ಸರಣಿ ಮುಂದುವರೆದಿದೆ. ಇವತ್ತು ಜಿಲ್ಲಾಡಳಿತ ನೀಡಿದ ಮಾಹಿತಿ ಪ್ರಕಾರ ಐವರು ಮೃತಪಟ್ಟಿದ್ದಾರೆ. ಇವತ್ತು 302 ಜನರಿಗೆ ಸೋಂಕು ತಗುಲಿದೆ.

ಇಂದಿನ 302 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 22730 ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -133, ಮುಂಡರಗಿ-40, ನರಗುಂದ-22, ರೋಣ-52, ಶಿರಹಟ್ಟಿ-49, ಹೊರಜಿಲ್ಲೆಯ-06 ಸೇರಿದಂತೆ 302 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ಐವರು ಮೃತಪಟ್ಟಿದ್ದು, ಮೃತರ ಸಂಖ್ಯೆ 236 ಕ್ಕೇರಿದೆ.

ಗದಗ ತಾಲೂಕಿನ ಬೆಟಗೇರಿಯ ನಿವಾಸಿ 40 ವರ್ಷದ ಮಹಿಳೆ ಮೇ-14 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಮೇ 23 ರಂದು ಮೃತಪಟ್ಟಿದ್ದಾರೆ.

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಿವಾಸಿ 48 ವರ್ಷದ ಮಹಿಳೆ, ಮೆ,11 ರಂದು ಜಿಮ್ಸ್ ‌ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ದೃಢಪಟ್ಟಿತ್ತು, ಮೇ 23 ರಂದು ಮೃತಪಟ್ಟಿದ್ದಾರೆ.

ಶಿರಹಟ್ಟಿ ತಾಲೂಕಿನ ನಿವಾಸಿ 35 ವರ್ಷದ ವ್ಯಕ್ತಿ ಮೇ 20 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 23 ರಂದು ಮೃತಪಟ್ಟಿದ್ದಾರೆ.

ರೋಣ ತಾಲೂಕಿನ ಹುಲ್ಲೂರ ನಿವಾಸಿ 72 ವರ್ಷದ ವ್ಯಕ್ತಿ ಮೇ 20 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಮೇ 26 ರಂದು ಮೃತಪಟ್ಟಿದ್ದಾರೆ.

ಗದಗ ತಾಲೂಕಿನ ಕಳಸಾಪೂರ ‌ ನಿವಾಸಿ 37 ವರ್ಷದ ವ್ಯಕ್ತಿ ಮೇ 21 ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 24 ರಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 405 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 19598 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 2896 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 188 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಶಾಸಕ ಎಚ್. ವಿಶ್ವನಾಥ್ ಪುತ್ರನ ವಿರುದ್ದ ಎಫ್ ಐಆರ್ ದಾಖಲು!

ವಿಜಯಸಾಕ್ಷಿ ಸುದ್ದಿ, ಮೈಸೂರು

ನಕಲಿ ದಾಖಲೆ ಸೃಷ್ಟಿಸಿ ಅತಿಕ್ರಮವಾಗಿ ಪ್ರವೇಶಕ್ಕೆ ಪ್ರಯತ್ನ ಮಾಡಿದ್ದಲ್ಲದೆ, ಕೊಲೆ ಬೆದರಿಕೆ ಹಾಕಿ ಲಾಕ್ ಡೌನ್ ನಿಯಮ ಉಲ್ಲಂಘಿಸಿದ್ದಕ್ಕೆ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರ ಪುತ್ರನ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಜಿಪಂ ಸದಸ್ಯ ಅಮಿತ್ ದೇವರಹಟ್ಟಿ ವಿರುದ್ದ ಎಫ್‌ ಐಆರ್ ದಾಖಲಾಗಿದೆ. ನಗರದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಹಿನಕಲ್ ಬಳಿಯ ಖಾಲಿ‌ ನಿವೇಶನಕ್ಕೆ ಅವರು ಅತಿಕ್ರಮವಾಗಿ ಪ್ರವೇಶ ಮಾಡಿದ್ದರು. ಅಲ್ಲದೇ, ಕಂಪೌಂಡ್ ನಿರ್ಮಾಣ ಮಾಡಲು ಮುಂದಾಗಿದ್ದರು.

ಇದನ್ನು ತಡೆಯಲು ಬಂದ ಮೂಲ ವಾರಸುದಾರ ಯೋಗೀಶ್ ಎಂಬುವವರ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ್ದರು.
ಹೀಗಾಗಿ ನಿವೇಶನದ ಮೂಲ ಮಾಲೀಕ ಯೋಗೀಶ್ ನೀಡಿದ ದೂರಿನನಂತೆ ಪೊಲೀಸರು ಐಪಿಸಿ ಸೆಕ್ಷನ್ 504 , 506 ರ ಅಡಿ ಎಫ್‌ ಐಆರ್ ದಾಖಲಿಸಲಾಗಿದೆ. ಪಟೇಲ್ , ಅನೂಪ್, ವೈಕುಂಠಾಚಾರ್ ಸೇರಿದಂತೆ ಎಂಟು ಜನರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ವಿಶ್ವನಾಥ್ ಅವರ ಪುತ್ರ ಅಮಿತ್ ದೇವರಹಟ್ಟಿ ಮೂರನೇ ಆರೋಪಿಯಾಗಿದ್ದಾರೆ.

ಕೊರೊನಾ ತೊಲಗಲಿ; ದತ್ತನಿಗೆ ಮೂರು ದಿನಗಳ ವಿಶೇಷ ಪೂಜೆ!

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಸದ್ಯ ದೇಶವನ್ನು ಕೊರೊನಾ ಕಾಡುತ್ತಿದೆ. ಹೀಗಾಗಿ ಎಲ್ಲೆಡೆ ವಾರಿಯರ್ಸ್ ಹಗಲಿರುಳು ಶ್ರಮಿಸುತ್ತಿದ್ದಾರೆ. ಇದರ ನಡುವೆ ಹಲವರು ದೇವರ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಸುಕ್ಷೇತ್ರ ಗಾಣಗಾಪೂರದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಗಿದೆ.

ಜಿಲ್ಲೆ ಅಫಜಲಪುರ ತಾಲೂಕಿನ ಗಾಣಗಾಪುರದಲ್ಲಿ ವಿಶೇಷ ಪೂಜೆ ಕೈಗೊಳ್ಳಲಾಗಿದೆ. ಮೂರು ದಿನಗಳ ಕಾಲ ರುದ್ರಾಭಿಷೇಕ ಕೈಗೊಳ್ಳಲಾಗಿತ್ತು. ಅದು ಇಂದು ಮುಕ್ತಾಯವಾಗಿದೆ.ಕೊರೊನಾ ತೊಲಗಲಿ ಎಂಬ ಕಾರಣಕ್ಕೆ ಗಾಣಗಾಪುರ ದತ್ತನ ಸನ್ನಿಧಿಯಲ್ಲಿ ಮೂರು ದಿನಗಳ ಕಾಲ ನಿರಂತರವಾಗಿ ಧಾರ ರುದ್ರಾಭೀಷೇಕ ನಡೆದಿದೆ. ಅಲ್ಲದೇ, ಮೂರು ದಿನಗಳ ಕಾಲ ನಿರಂತರವಾಗಿ ವಿಶೇಷ ಪೂಜಾ ಕೈಂಕರ್ಯಗಳು ನಡೆದಿವೆ.

ಜಗತ್ತಿಗೆ ಎದುರಾದ ದೊಡ್ಡ ಕಂಟಕ ಕೊರೊನಾ ನಿರ್ಮೂಲನೆಗೆ ಪ್ರಾರ್ಥಿಸಿ ಪೂಜೆ, ಹೋಮ ಹವನ, ರುದ್ರಾಭೀಷೇಕ, ಪಾರಾಯಣ ಮಾಡಲಾಗಿದೆ. ದೇವಸ್ಥಾನದಲ್ಲಿನ 10ಕ್ಕೂ ಹೆಚ್ಚು ಅರ್ಚಕರಿಂದ ಪೂಜಾ ಕೈಂಕರ್ಯಗಳು ನಡೆದಿವೆ.

ಪೇಪರ್ ಸಿಂಹ ಆಗಬೇಡ ಎಂದು ಸಂಸದನಿಗೆ ಏಕ ವಚನದಲ್ಲಿಯೇ ಮಾತನಡಾದಿ ಜಿಟಿಡಿ!

ವಿಜಯಸಾಕ್ಷಿ ಸುದ್ದಿ, ಮೈಸೂರು

ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಶಾಸಕ ಜಿ.ಟಿ. ದೇವೇಗೌಡ ಅವರು ಏಕ ವಚನದಲ್ಲಿಯೇ ಗುಡುಗಿದ್ದಾರೆ.
ನಿನಗೆ ತಾಕತ್ತಿದ್ದರೆ ಡಿಸಿಯನ್ನು ವರ್ಗಾವಣೆ ಮಾಡಿಸು. ರೋಹಿಣಿ ಸಿಂಧೂರಿ ವಿರುದ್ದ ಪ್ರತಾಪ್‌ ಸಿಂಹ ಹೇಳಿಕೆ ಬೇಕಿತ್ತಾ? ಸುಖಾ ಸುಮ್ಮನೆ ಹಾದಿ ಬೀದಿಲಿ ನಿಂತು ಮಾತನಾಡಬೇಡ. ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಪೇಪರ್ ಟೈಗರ್ ಆಗುವುದು ಬೇಡ ಎಂದು ವಾಗ್ದಾಳಿ ನಡೆಸಿದ್ದಾರೆ.

ಅಧಿಕಾರಿಗಳ ನಡುವೆ ಒಡಕು ಮೂಡಿಸುವ ಕೆಲಸ ಮಾಡಬೇಡಿ. ಜಿಲ್ಲೆಯ ಶಾಸಕರು ನಿನಗಿಂತಲೂ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಸ್ವಂತ ಹಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಸಂಸದನಾಗಿ ನೀನೆಷ್ಟು ಸ್ವಂತ ಹಣ ಖರ್ಚು ಮಾಡಿರುವ ಲೆಕ್ಕ ಕೊಡು. ವೈಫಲ್ಯತೆ ಬಗ್ಗೆ ವಿರೋಧ ಪಕ್ಷದವರು ಮಾತನಾಡಬೇಕು. ಆಡಳಿತ ಪಕ್ಷದವರಲ್ಲ ಎಂದು ಗುಡುಗಿದ್ದಾರೆ.

ನೀನು ಪವರ್‌ ಫುಲ್ ಎಂಪಿ, ಪಿಎಂ, ಸಿಎಂ ನೀನು ಹೇಳಿದಂತೆ ಕೇಳುತ್ತಾರೆ. ತಾಕತ್ತಿದ್ದರೆ ಡಿಸಿಯನ್ನು ವರ್ಗಾವಣೆ ಮಾಡಿ ತೋರಿಸು. ಅದನ್ನು ಬಿಟ್ಟು ಪೇಪರ್‌ ಸ್ಟೇಟ್‌ ಮೆಂಟ್ ಕೊಟ್ಟು ಗೊಂದಲ ಏಕೆ ಮಾಡಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ನಿಮ್ಮ ಹೇಳಿಕೆ, ಆರೋಪಗಳ ಹಿಂದೆ ವೈಯುಕ್ತಿಕ ಸಮಸ್ಯೆ ಇದೆ ಎನಿಸುತ್ತಿದೆ. ನಿಮ್ಮ ಹೇಳಿಕೆಗಳು ಜನರಲ್ಲಿ ಅನುಮಾನ ಸೃಷ್ಟಿಸಿವೆ ಎಂದು ಹೇಳಿದ್ದಾರೆ.

ಸತ್ರ ನಾ ಸಾಯಿತೀನಿ,ನಿಮಗೇನು ಕಷ್ಟ!

ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು

ಕೊರೊನಾ ಸೋಂಕಿತ ವ್ಯಕ್ತಿ ದರ್ಪ ಮೆರೆದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ನಾನು ಸತ್ತರೆ ಸಾಯುತ್ತೇನೆ. ನಿಮಗೇನು ಕಷ್ಟ? ನನ್ನ ತೋಟಕ್ಕೆ ನೀವು ಗೊಬ್ಬರ ಹಾಕಲು ನೀವು ಬರುತ್ತೀರಾ? ಎಂದು ಸೋಂಕಿತ ವ್ಯಕ್ತಿ ದರ್ಪ ಮೆರೆದು ಅಧಿಕಾರಿಗಳನ್ನೇ ತರಾಟೆಗೆ ತೆಗೆದುಕೊಂಡಿದ್ದಾನೆ.

ಈ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೋಂ ಐಸೋಲೇಷನ್ ನಲ್ಲಿ ಇದ್ದರು. ಆದರೂ ಹೊರಗಡೆ ತಿರುಗಾಟ ನಡೆಸಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ಆತನನ್ನು ಪ್ರಶ್ನಿಸಿದ್ದಾರೆ. ಆದರೆ, ಆ ವ್ಯಕ್ತಿ ಅಧಿಕಾರಿಗಳನ್ನೇ ತರಾಟೆಗೆ ತೆಗೆದುಕೊಂಡಿದ್ದಾನೆ. ಅಲ್ಲದೇ, ಪ್ರಶ್ನೆ ಮಾಡಿದ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಘಟನೆ ತಾಲೂಕಿನ ನೆರಡಿ ಗ್ರಾಮದಲ್ಲಿ ನಡೆದಿದೆ.

ಮನೆಯಲ್ಲಿರುವುದು ಬಿಟ್ಟು ಹೊರಗೆ ಏಕೆ ಹೋಗಿದ್ದೀರಾ? ಎಂದು ಅಧಿಕಾರಗಳು ಪ್ರಶ್ನಿಸಿದ್ದರು. ಆಗ ನನ್ನಿಂದ ಯಾರಿಗೆ ತೊಂದರೆಯಾಗಿದೆ ಹೇಳಿ? ನಾನು ಹೊರಗಡೆ ಓಡಾಡುತ್ತೇನೆ ಅದನ್ನು ನೀವು ಕೇಳಬಾರದು ಎಂದು ಅಧಿಕಾರಿಗಳನ್ನೇ ಪ್ರಶ್ನಿಸಿದ್ದಾನೆ. ಸದ್ಯ ಸೋಂಕಿತ ವ್ಯಕ್ತಿಯ ವಿರುದ್ಧ ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋವಿಡ್ ನಿಯಮ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಾಗಿದೆ.

ನಕಲಿ ಪತ್ರಕರ್ತನ ಬೈಕ್ ಸೀಜ್ ಮಾಡಿದ‌ ಪೊಲೀಸರು

ವಿಜಯಸಾಕ್ಷಿ ಸುದ್ದಿ, ಗದಗ

ಪ್ರೆಸ್ ಎಂದು ಹೇಳಿಕೊಂಡು ಊರೆಲ್ಲ ಸುತ್ತುತ್ತಿದ್ದ ನಕಲಿ ಪತ್ರಕರ್ತನ ಬೈಕ್ ನ್ನು ಪೊಲೀಸರು ಸೀಜ್ ಮಾಡಿರುವ ಘಟನೆ ನಡೆದಿದೆ. ಕೊರೊನಾದಿಂದಾಗಿ ರಾಜ್ಯದಲ್ಲಿ ಕಠಿಣ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಹೀಗಾಗಿ ಅನಾವಶ್ಯಕವಾಗಿ ಓಡಾಡುತ್ತಿರುವವರ ಬೈಕ್ ಸೀಜ್ ಮಾಡುವಂತೆ ಸರ್ಕಾರ ಸೂಚಿಸಿದೆ. ಆದರೂ ಹಲವರು ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತ ಉದ್ಧಟತನ ಮೆರೆಯುತ್ತಿದ್ದಾರೆ.

ಇದೇ ರೀತಿ ತಿರುಗಾಡುತ್ತಿದ್ದ ನಕಲಿ ಪತ್ರಕರ್ತನಿಗೆ ಪೊಲೀಸರು ಬುದ್ಧಿ ಕಲಿಸಿದ್ದಾರೆ.

ಇಂದು ಕೂಡ ಪೊಲೀಸರು ನಗರದ ವಿವಿಧ ಬಡಾವಣೆಗಳಲ್ಲಿ ಅನಾವಶ್ಯಕವಾಗಿ ಓಡಾಡುತ್ತಿರುವವರ ಬೈಕ್ ಸೀಜ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ರೋಡಿಗೆ ಬಂದಿದ್ದ ವ್ಯಕ್ತಿಯೊಬ್ಬ ಪ್ರೆಸ್ ಎಂದು ಸುಳ್ಳು ಹೇಳಿ ಸಿಕ್ಕಿ ಹಾಕಿಕೊಂಡಿದ್ದಾನೆ.

ಪಂಚಾಕ್ಷರಿ ನಗರದ ರಸ್ತೆಯ ಹತ್ತಿರ ಪ್ರೆಸ್ ಎಂದು ಹೇಳಿಕೊಂಡಿದ್ದ ವ್ಯಕ್ತಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆಗ ಡಿವೈಎಸ್ ಪಿ ವಿಜಯ್ ಬಿರಾದಾರ ಐಡಿ ಕಾರ್ಡ್ ಕೇಳಿದ್ದಾರೆ. ಆಗ ವಾಕ್ ಹೋಗಿದ್ದೆ…ಪ್ರೆಸ್ ಎಂದು ಏನೇನೊ ಹೇಳಿ ಯುವಕ ಸಿಕ್ಕಿ ಬಿದ್ದಿದ್ದಾನೆ. ಪೊಲೀಸರು ಮುಲಾಜಿಲ್ಲದೆ, ಬೈಕ್ ಸೀಜ್ ಮಾಡಿದ್ದಾರೆ.

ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

ವಿಜಯಸಾಕ್ಷಿ ಸುದ್ದಿ, ಗದಗ

ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ಜೀವವಾಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ 2017 ಜುಲೈ 29ರಂದು ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಶುರಾಮ ಗೋಣೆಪ್ಪ ಗುಡದರ ಈತನಿಗೆ ಜೀವಾವಧಿ ಶಿಕ್ಷೆ ಹಾಗೂ 5ಸಾವಿರ ರೂ. ದಂಡ ವಿಧಿಸಿ ನ್ಯಾ. ರಾಜಶೇಖರ ಪಾಟೀಲ ತೀರ್ಪು ಹೊರಡಿಸಿದ್ದಾರೆ.

ಕಟ್ಟಡ ಕಾರ್ಮಿಕನಾಗಿದ್ದ ಪರಶುರಾಮ ಗುಡದರ, ಅಣ್ಣಪ್ಪ ಗಜಕೋಶ ಮತ್ತು ಆತನ ಚಿಕ್ಕಪ್ಪ ಸೋಮನಾಥ ಒಟ್ಟಿಗೆ ಕೆಲಸಕ್ಕೆ ಹೋಗುತ್ತಿದ್ದರು. ಸೋಮನಾಥ ಮದ್ಯ ಸೇವನೆ ಮಾಡಿದಾಗಲೆಲ್ಲಾ ಪರಶುರಾಮ ಗುಡದರ ವಿನಾಕಾರಣ ಜಗಳ ತೆಗೆಯುತ್ತಿದ್ದ. ಅಲ್ಲದೇ ಆತನ ಬಳಿಯಿದ್ದ ಹಣವನ್ನು ಕಿತ್ತುಕೊಳ್ಳುತ್ತಿದ್ದ.

2017 ಜುಲೈ 29ರಂದು ಪರಶುರಾಮ, ಸೋಮನಾಥ ಕಿಸೆಯಿಂದ 120ರೂ. ಕಿತ್ತುಕೊಂಡಿದ್ದ. ಈ ವಿಷಯವನ್ನು ಸೋಮನಾಥ ಮತ್ತು ಅಣ್ಣಪ್ಪ ಸೇರಿಕೊಂಡು ಓಣಿಯ ಹಿರಿಯರಿಗೆ ತಿಳಿಸಿದ್ದರು. ಇದರಿಂದ ಸಿಟ್ಟಾದ ಪರಶುರಾಮ, ಓಣಿಯ ಹಿರಿಯರು ಕರೆಯುತ್ತಿದ್ದಾರೆ ಬನ್ನಿ ಎಂದು ಸೋಮನಾಥ ಮತ್ತು ಅಣ್ಣಪ್ಪನನ್ನು ಪುಸಲಾಯಿಸಿಕೊಂಡು, ಅಗಸ್ತ್ಯ ತೀರ್ಥದ ಬಳಿ ಕರೆದೊಯ್ದಿದ್ದಾನೆ. ಅಲ್ಲಿ ಇಬ್ಬರಿಗೂ ಅವಾಚ್ಯ ಶಬ್ಧಗಳಿಂದ ಬೈದಾಡಿ, ಕಲ್ಲಿನಿಂದ ಸೋಮನಾಥನ ತಲೆ, ಮುಖಕ್ಕೆ ಹೊಡೆದು ಕೊಲೆ ಮಾಡಿದ್ದಾನೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನೂ ಕೊಲೆ ಮಾಡುತ್ತೇನೆ ಎಂದು ಅಣ್ಣಪ್ಪನಿಗೆ ಬೆದರಿಕೆಯೊಡ್ಡಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಬೆದರಿಕೆ ಮಧ್ಯೆಯೂ ಅಣ್ಣಪ್ಪ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣದ ತನಿಖೆ ನಡೆದು ಪರಶುರಾಮ ಕೊಲೆ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಸರಕಾರದ ಪರವಾಗಿ ಸವಿತಾ ಶಿಗ್ಲಿ ವಾದ ಮಂಡಿಸಿದ್ದಾರೆ.

ಚಂದನ್ ಶೆಟ್ಟಿಯ ಸಲಿಗೆ ಬಿಡುಗಡೆಗೆ ಸಿದ್ಧ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕನ್ನಡದ ರಯಾಗ ಪರ್‌ ಚಂದನ್ ಶೆಟ್ಟಿ ಅವರ ಮುಂದಿನ ‘ಸಲಿಗೆ’ ಮೇ. 28ರಂದು ಬಿಡುಗಡೆಯಾಗಲಿದೆ. ಸಲಿಗೆಗಾಗಿ ಕೆನಡಾದಲ್ಲಿ ದೊಡ್ಡ ಮಟ್ಟದ ಶೂಟಿಂಗ್ ಮಾಡಲಾಗಿದೆ. ಸಲಿಗೆಯನ್ನು 2019ರಲ್ಲಿಯೇ ಕಾಂಪೋಸ್ ಮಾಡಲಾಗಿತ್ತು. ಕನ್ನಡದಲ್ಲಿ ಈ ರೀತಿ ಹಿಂದೆ ಯಾವ ಪ್ರಯೋಗ ಕೂಡ ನಡೆದಿರಲಿಲ್ಲ.

2019ರಲ್ಲಿ ಕೆನಡಾಗೆ ಟೂರ್‌ ಮಾಡಿದ ಸಂದರ್ಭದಲ್ಲಿ ಹಾಡನ್ನು ಟೊರಾಂಟೋ, ಮಾಂಟ್ರಿಯಲ್ ಹಾಗೂ ನಯಾಗರಾ ಜಲಪಾತದ ಬಳಿ ಶೂಟಿಂಗ್ ಮಾಡಲಾಗಿದೆ ಎಂದು ಚಂದನ್ ಹೇಳಿದ್ದಾರೆ.

3 ಪೆಗ್, ಚಾಕೊಲೇಟ್ ಗರ್ಲ್, ಟಕಿಲಾ, ಫೈರ್ ಮತ್ತು ಪಾರ್ಟಿ ಫ್ರೀಕ್, ನನಗೆ ಸಾಕಷ್ಟು ಹೆಸರು ತಂದು ಕೊಟ್ಟಿವೆ. ಸದ್ಯ ಚಲನಚಿತ್ರಗಳಿಗೆ ಸಂಗೀತ ಸಂಯೋಜಿಸುತ್ತಿದ್ದೇನೆ ಎಂದು ಚಂದನ್ ಹೇಳಿದ್ದಾರೆ.

ಜನರ ಅಭಿರುಚಿ ಆಗಾಗ ಬದಲಾಗುತ್ತಿರುತ್ತದೆ. ಮೊದಲು ಮೈಕಲ್ ಜಾಕ್ಸನ್ ನಂತರ, ರೆಟ್ರೋ ಈಗ ಮತ್ತೆ ಫಂಕ್ ಹಾಡುಗಳನ್ನು ಕೇಳಲು ಬಯಸುತ್ತಾರೆ ಎಂದು ಚಂದನ್ ಶೆಟ್ಟಿ ತಿಳಿಸಿದ್ದಾರೆ.
ಪೊಗರು ಚಿತ್ರದಲ್ಲಿ ಹಿಟ್ ಸಾಂಗ್ ನೀಡಿದ ಚಂದನ್, ಸದ್ಯ ನಿರ್ದೇಶಕ ನಂದ ಕಿಶೋರ್ ಮತ್ತು ನಟ ಧೃವ ಸರ್ಜಾ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ.

error: Content is protected !!