ರಾಜ್ಯ ಸೇರಿದಂತೆ ದೇಶದಲ್ಲಿ ಕೊರೊನಾ ಮಹಾಮಾರಿಯ ಹಾವಳಿ ಜೋರಾಗಿದೆ. ಹೀಗಾಗಿ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಇದನ್ನು ತೊಲಗಿಸುವ ನಿಟ್ಟಿನಲ್ಲಿ ಜಿಲ್ಲೆಯ ಒಂದು ಗ್ರಾಮದಲ್ಲಿನ ಜನರು ಕೊರೊನಮ್ಮಗೆ ವಿಶೇಷ ಪೂಜೆ ಸಲ್ಲಿಸಿರುವ ಘಟನೆ ನಡೆದಿದೆ. ಜಿಲ್ಲೆಯ ಚಳ್ಳಕೆರೆ ತಾಲೂಕಿನ ದುರ್ಗಾವರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸರ್ಕಾರ ಏನೇ ಹೇಳಿದರೂ ಜನರ ಮೂಢನಂಬಿಕೆ ಮಾತ್ರ ನಿಲ್ಲುತ್ತಿಲ್ಲ. ಇಲ್ಲಿಯೂ ಇದೇ ರೀತಿ ಜನರು ಮೂಢ ನಂಬಿಕೆಯ ಮೊರೆ ಹೋಗಿದ್ದಾರೆ. ಹೀಗಾಗಿ ಕೊರೊನಮ್ಮಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಈ ಗ್ರಾಮದ ಜನರು ಕೊರೊನಮ್ಮ ದೇವಿಯ ಮಣ್ಣಿನ ಮೂರ್ತಿ ರಚಿಸಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಮೂರ್ತಿಗೆ ಬೇವು ಉಡಿಸಿ, ಕುರಿ, ಕೋಳಿ, ಮೊಸರನ್ನವನ್ನು ನೈವೇದ್ಯ ಮಾಡಿ ಅರ್ಪಿಸಿದ್ದಾರೆ. ಪೂಜೆ ಮುಗಿದ ನಂತರ ಗ್ರಾಮಸ್ಥರು ಕೊರೊನಮ್ಮನನ್ನು ಊರ ಸೀಮೆ ದಾಟಿಸಿದ್ದಾರೆ.
ಈ ಕಾರ್ಯಕ್ರಮ ಮಾಡುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಮಾಸ್ಕ್ ಧರಿಸದೆ ದೈಹಿಕ ಅಂತರ ಮರೆತಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮದ ನೂರಾರು ಜನ ಭಾಗವಹಿಸಿದ್ದರು. ಜನರು ಕೊರೊನಾ ಭೀತಿ ಮರೆತು, ಮೌಢ್ಯಾಚರಣೆ ಮಾಡುತ್ತಿರುವುದಕ್ಕೆ ಪ್ರಜ್ಞಾವಂತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯದಲ್ಲಿ ಮುಂಗಾರು ಬಿತ್ತನೆ ಆರಂಭವಾಗಿರುವುದರಿಂದಾಗಿ ರೈತರ ಕೃಷಿ ಚಟುವಟಿಕೆಗಳು ಗರಿಗೆದರಿವೆ. ರಸಗೊಬ್ಬರ, ಬಿತ್ತನೆ ಬೀಜ ಖರೀದಿಗೆ ಈಗ ಸಕಾಲವಾಗಿದ್ದರಿಂದಾಗಿ ಸರ್ಕಾರ, ಖರೀದಿ ಸಮಯ ವಿಸ್ತರಿಸಿ ಆದೇಶಿಸಿದೆ.
ರಾಜ್ಯದಲ್ಲಿ ಕೊರೊನಾ ಲಾಕ್ ಡೌನ್ ಜೂ. 7ರ ವರೆಗೆ ಜಾರಿಯಲ್ಲಿದೆ. ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6 ರಿಂದ 10ರ ವರೆಗೆ ಸಮಯ ನಿಗದಿಪಡಿಸಲಾಗಿದೆ. ಕೃಷಿ ಚಟುವಟಿಕೆಗಳಿಗೆ ಸಮಯದ ನಿರ್ಬಂಧ ವಿಧಿಸಿಲ್ಲ. ಆದರೂ ಹಲವೆಡೆ ರೈತರು ಮುಗಿಬಿದ್ದು ಬೀಜ ಖರೀದಿ ಮಾಡುತ್ತಿದ್ದಾರೆ. ಇದನ್ನು ಗಮನಿಸಿದ ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಸರ್ಕಾರದೊಂದಿಗೆ ಚರ್ಚಿಸಿ ರೈತರಿಗೆ ಅಗತ್ಯ ರಸಗೊಬ್ಬರ, ಬಿತ್ತನೆ ಬೀಜ ಪೂರೈಕೆ ಖರೀದಿ ಸಮಯವನ್ನು ವಿಸ್ತರಿಸಿದ್ದಾರೆ. ಹೀಗಾಗಿ ಖರೀದಿ ಸಮಯ ಬೆಳಿಗ್ಗೆ 6 ರಿಂದ ಸಂಜೆ 6ರ ವರೆಗೆ ವಿಸ್ತರಿಸಲಾಗಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ.
ಲಾಕ್ ಡೌನ್ ಸಮಯದಲ್ಲಿಯೂ ಕೃಷಿಗಾಗಲಿ, ರೈತಾಪಿ ಚಟುವಟಿಕೆಗಳಿಗಾಗಲಿ ಅಥವಾ ಕೃಷಿ ಯಂತ್ರೋಪಕರಣಗಳ ಖರೀದಿಗಾಗಲಿ ಸರ್ಕಾರ ಯಾವುದೇ ನಿರ್ಬಂಧ ಹೇರಿಲ್ಲ. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಅಂದಾಜು 6 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಗಳಿಗೆ ಬೇಡಿಕೆಯಿದ್ದು, ಕಳೆದ ಮೇ. 28 ರ ವರೆಗೆ ರೈತ ಸಂಪರ್ಕ ಕೇಂದ್ರಗಳಲ್ಲಿ ಇದುವರೆಗೂ 19,675 ಕ್ವಿಂಟಾಲ್ ಗಳಷ್ಟು ಬಿತ್ತನೆ ಬೀಜ ವಿತರಿಸಲಾಗಿದೆ. ಅಲ್ಲದೇ, 1,74,653 ಕ್ವಿಂಟಾಲ್ ಗಳಷ್ಟು ಬೀಜ ಇನ್ನೂ ದಾಸ್ತಾನ ಇದೆ. ಅಗತ್ಯಕ್ಕೆ ತಕ್ಕಂತೆ ಬಿತ್ತನೆ ಬೀಜ ಪೂರೈಸಲಾಗುತ್ತಿದ್ದು, ಬಿತ್ತನೆ ಬೀಜ ಪೂರೈಕೆಗೆ ಯಾವುದೇ ಕೊರತೆ ಇರುವುದಿಲ್ಲ ಎಂದು ಸರ್ಕಾರ ಹೇಳಿದೆ.
ಅದರಂತೆ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಟ್ಟು 26.47 ಲಕ್ಷ ಮೆಟ್ರಿಕ್ ಟನ್ ವಿವಿಧ ರಾಸಾಯನಿಕ ಗೊಬ್ಬರಗಳಿಗೆ ಬೇಡಿಕೆಯಿದೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ 7,97,662 ಮೆಟ್ರಿಕ್ ಟನ್ ರಸಗೊಬ್ಬರಗಳಿಗೆ ಬೇಡಿಕೆಯಿದ್ದು, ಮೇ. 28 ರ ವರೆಗೆ ಒಟ್ಟು 5,67,239 ಮೆಟ್ರಿಕ್ ಟನ್ ಪ್ರಮಾಣದಲ್ಲಿ ರಸಗೊಬ್ಬರ ಸರಬರಾಜಾಗಿದೆ. ಇನ್ನೂ ಒಟ್ಟು 12,38,600 ಮೆಟ್ರಿಕ್ ಟನ್ ಗಳಷ್ಟು ರಸಗೊಬ್ಬರ ದಾಸ್ತಾನು ಇದ್ದು, ಯಾವುದೇ ರಸಗೊಬ್ಬರದ ಕೊರತೆ ಇಲ್ಲ ಎಂದು ಸರ್ಕಾರ ತಿಳಿಸಿದೆ.
ಬಿಜೆಪಿಗೆ ಅಧಿಕಾರ ಬಂದರೆ ಐದು ವರ್ಷ ಸಂಪೂರ್ಣಗೊಳಿಸಲು ರೋಗ ಬಂದಿರುತ್ತದೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಸಚಿವ ಈಶ್ವರಪ್ಪ ಟಾಂಗ್ ನೀಡಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಖಾಲಿ ರೋಗವಿದ್ದರೆ. ಕಾಂಗ್ರೆಸ್ ನಲ್ಲಿ ಹೆಮ್ಮಾರಿ ಕ್ಯಾನ್ಸರ್ ರೋಗವಿದೆ. ಕಾಂಗ್ರೆಸ್ ಪಕ್ಷವು ಹುಳುಕುಗಳಿಂದಲೇ ಕೂಡಿದೆ. ಕಾಂಗ್ರೆಸ್ ಸರ್ಕಾರದ ಇತಿಹಾಸ ನೋಡಿದರೆ ಮೂರು ಮೂರು ಜನ ಸಿಎಂ ಆಗಿರುವ ಉದಾಹರಣೆಗಳಿವೆ.
ವೀರೇಂದ್ರ ಪಾಟೀಲ್ ಅವರಂತಹ ಪ್ರಾಮಾಣಿಕ ವ್ಯಕ್ತಿ ಸಿಎಂ ಆಗಿದ್ದ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿಯೇ ಅವರಿಂದ ರಾಜೀನಾಮೆ ಪಡೆದ ಕೆಟ್ಟ ಪಕ್ಷ ಅದು ಎಂದು ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಸಿದ್ದರಾಮಯ್ಯ ಅವರ ಸಮಯದಲ್ಲಿಯೇ ಹೆಚ್ಚಾಗಿತ್ತು. ಅದರ ಫಲಿತಾಂಶವೇ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸುವಂತಾಯಿತು.
2019ರ ಲೋಕಸಭೆ ಸಂದರ್ಭದಲ್ಲಿಯೂ ಕಾಂಗ್ರೆಸ್ ಹೀನಾ ಸ್ಥಿತಿ ಅನುಭವಿಸಿದೆ. 28 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಕೇವಲ ಒಂದು ಸ್ಥಾನದಲ್ಲಿ ಮಾತ್ರ ಗೆಲುವು ಸಾಧಿಸಿತು ಎಂದು ಆರೋಪಿಸಿದ್ದಾರೆ. ಸದ್ಯ ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಿದ್ದಾರೆ. ಈ ಸಂದರ್ಭದಲ್ಲಿ ಅಲ್ಲೊಬ್ಬ ಸಚಿವ ಮಾತನಾಡಿದರೆ, ಅದನ್ನು ರೋಗ ಎನ್ನುವುದಾದರೆ, ಕಾಂಗ್ರೆಸ್ ಗೆ ಕ್ಯಾನ್ಸರ್ ರೋಗವೇ ಇದ್ದಂತಾಗಿದೆ. ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆನೇ ಇಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳು ಅಧಿಕಾರದಿಂದ ಕೆಳಗೆ ಇಳಿಯಲು ಕಾಂಗ್ರೆಸ್ ಪಕ್ಷವೇ ಕಾರಣ ಎಂದು ವಾಗ್ದಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಅವರ ಅಧಿಕಾರವಧಿಯ ಸಂದರ್ಭದಲ್ಲಿ ಸೆಕ್ಸ್ ಸ್ಕ್ಯಾಂಡಲ್ ಪ್ರಕರಣ ಬೆಳಕಿಗೆ ಬಂದಾಗ ಅವರು ಏನು ಮಾಡಿದರು? ಸೆಕ್ಸ್ ಸ್ಕ್ಯಾಂಡಲ್ ನಲ್ಲಿ ಸಿಲುಕಿದ್ದಾಗ ಬಚಾವ್ ಮಾಡುವ ಕೆಲಸ ಮಾಡಿದರು. ಇದನ್ನು ಅವರು ಬಹಿರಂಗವಾಗಿ ಹೇಳಲಿ ಎಂದು ಸವಾಲು ಹಾಕಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಸಚಿವರು ಹಾಗೂ ಶಾಸಕರು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಜನರು ಮೆಚ್ಚುವಂತಹ ಕೆಲಸ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ನ ಡಿಕೆಶಿ ಮತ್ತು ಸಿದ್ದರಾಮಯ್ಯ ವಿನಾಕಾರಣ ತಪ್ಪು ಹುಡುಕುವ ಕೆಲಸ ಮಾಡುತ್ತಿದ್ದಾರೆ. ವ್ಯಾಕ್ಸಿನ್ ಆರಂಭಿಸಿದ ಸಂದರ್ಭದಲ್ಲಿ ವ್ಯಾಕ್ಸಿನ್ ಹಾಕಿಕೊಳ್ಳಬೇಡಿ ಎಂದು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದರು. ಹಾಗೆ ಮಾಡಿಲ್ಲ ಎಂದು ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಮೇಲೆ ಆಣೆ ಮಾಡಿ ಹೇಳಲಿ ಎಂದು ಗುಡುಗಿದ್ದಾರೆ.
ಜಯರಾಂ ರಮೇಶ್, ಕರ್ನಾಟಕದ ಉಸ್ತುವರಿ ಆಗಿದ್ದ ವೇಣುಗೋಪಾಲ್ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರು ವ್ಯಾಕ್ಸಿನ್ ಕುರಿತು ಟೀಕೆ ಮಾಡಿದ್ದರು. ಹೀಗಾಗಿ ದೇಶದಲ್ಲಿ ಕೋವಿಡ್ ಹೆಚ್ಚಾಗಲು ಕಾಂಗ್ರೆಸ್ ನಾಯಕರೇ ಕಾರಣ. ಆದರೆ, ಸದ್ಯ ಇದೇ ಕಾಂಗ್ರೆಸ್, ಆ ರೋಗ ಈ ರೋಗವೆಂದು ನಿಧಾನವಾಗಿ ಹುಡುಕುವ ಕೆಲಸದಲ್ಲಿ ತೊಡಗಿದೆ. ಇಂದಲ್ಲ, ನಾಳೆ ಈ ಕಾಂಗ್ರೆಸ್ ನಿಧಾನವಾಗಿ ಸಾಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೊನ ಸೋಂಕಿತರಿಗಾಗಿ ಶಾಸಕ ಡಾ. ಕೆ. ಅನ್ನದಾನಿ ಅವರು ಸಂಗೀತ ಸುಧೆ ಹರಿಸಿ, ಅವರಲ್ಲಿ ಚೈತನ್ಯ ತುಂಬುವ ಕಾರ್ಯ ಮಾಡಿದ್ದಾರೆ. ತಾಲೂಕಿನ ಬಾಚನಹಳ್ಳಿ ವಸತಿ ಶಾಲೆಯ ಕೋವಿಡ್ -19 ಕ್ವಾರೆಂಟೈನ್ ಚಿಕಿತ್ಸಾ ಕೇಂದ್ರದಲ್ಲಿರುವ ಸೋಂಕಿತರನ್ನು ರಂಜಿಸಿ, ಅವರಲ್ಲಿ ಆತ್ಮಸ್ಥೈರ್ಯ ಮೂಡಿಸುವ ನಿಟ್ಟಿನಲ್ಲಿ ಶಾಸಕರು ಈ ಕಾರ್ಯ ಮಾಡಿದ್ದಾರೆ. ಯರಳ್ಳಿ ಪುಟ್ಟಸ್ವಾಮಿ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದರು.
ಈ ಸಂದರ್ಭದಲ್ಲಿ ಶಾಸಕ ಡಾ. ಕೆ. ಅನ್ನದಾನಿ ಅವರು ತಾವೇ ಸ್ವತಃ ಹಾಡು ಹೇಳಿ, ರೋಗಿಗಳು ಆತ್ಮವಿಶ್ವಾಸದಿಂದ ಕುಣಿದು ಕುಪ್ಪಳಿಸುವಂತೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸೋಂಕಿತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರೊನ ಸಾಂಕ್ರಾಮಿಕ ಕಾಯಿಲೆ. ಸೋಂಕಿನಿಂದಾಗಿ ಚಿಕಿತ್ಸೆ ಗಾಗಿ ಕ್ವಾರೆಂಟೈನ್ ಗೆ ಒಳಗಾಗಿರುವ ಸೋಂಕಿತರು ಮಾನಸಿಕ ಖಿನ್ನತೆಗೆ, ಆತಂಕಕ್ಕೆ ಒಳಗಾಗಬಾರದು. ಆತ್ಮಸ್ಟೈರ್ಯದಿಂದ ಇಲ್ಲಿ ಇರುವವರೆಗೂ ಉಲ್ಲಾಸ ದಿಂದ, ಖುಷಿಯಾಗಿರಬೇಕು ಎಂದು ಧೈರ್ಯ ತುಂಬಿದ್ದಾರೆ.
ಸಂಗೀತಕ್ಕೆ ಮಾರು ಹೋದವರು ಈ ಜಗತ್ತಿನಲ್ಲಿ ಯಾರೂ ಇಲ್ಲ. ಅಂತಹ ಆತ್ಮಸ್ಟೈರ್ಯ ತುಂಬುವ ಶಕ್ತಿ ಸಂಗೀತಕ್ಕೆ ಮಾತ್ರ ಇದೆ. ಹೀಗಾಗಿಯೇ ಈ ವಿನೂತನ ಮನರಂಜನಾಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾನು ಕೂಡ ನಿಮ್ಮ ಜೊತೆ ಯಾವಾಗಲು ಇರುತ್ತೇನೆ. ಸೋಂಕಿತರು ದೃತಿಗೆಡದೆ ಸಂತೋಷದಿಂದ ಇದ್ದು, ಕೊರೋನಾ ಗೆದ್ದು ಹೊರಬನ್ನಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ನಿದೇರ್ಶಕ ರಾಜೇಶ್, ಜಯರಾಜು ಒಕ್ಕರಹಳ್ಳಿ, ಕುಮಾರ್ ಸೇರಿದಂತೆ ಹಲವರು ಇದ್ದರು.
ಜಿಲ್ಲೆಯ ಹೊಸಪೇಟೆಯಲ್ಲಿ ಮಹಾಮಾರಿಯಿಂದಾಗಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಒಂದೇ ದಿನದ ಅಂತರದಲ್ಲಿ ಅಕ್ಕ ಹಾಗೂ ತಮ್ಮನನ್ನು ಈ ಹೆಮ್ಮಾರಿ ಬಲಿ ಪಡೆದಿದೆ. ಕೋವಿಡ್ ನಿಂದ ಬಳಲುತ್ತಿದ್ದ ಅಕ್ಕ – ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಒಂದೇ ದಿನದ ಅಂತರದಲ್ಲಿ ಸಾವನ್ನಪ್ಪಿದ್ದಾರೆ.
ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಕ್ಯಾರೋಲಿನ್ ಲೂಸಿಯಾ ಸ್ಮಿತ್(45) ಹಾಗೂ ಅವರ ತಮ್ಮ ಸಾವಿಯೋ ಸ್ಮಿತ್(42) ಇಬ್ಬರು ಮಹಾಮಾರಿಗೆ ಬಲಿಯಾದ ದುರ್ದೈವಿಗಳು. ಇಬ್ಬರಲ್ಲಿಯೂ ಇತ್ತೀಚೆಗೆ ಸೋಂಕು ಇರುವುದು ದೃಢವಾಗಿತ್ತು. ಹೀಗಾಗಿ ಇಬ್ಬರೂ ಕಳೆದ 8 ದಿನಗಳಿಂದ ಬಳ್ಳಾರಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ತಮ್ಮ ಸಾವಿಯೋ ಸ್ಮಿತ್ ನಿನ್ನೆ ನಿಧನರಾಗಿದ್ದರು. ತಮ್ಮನ ಹಿಂದೆಯೇ ಅಕ್ಕ ಹಾಗೂ ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಕ್ಯಾರೋಲಿನ್ ಲೂಸಿಯಾ ಸ್ಮಿತ್ ಅವರು ಕೂಡ ಇಂದು ಸಾವನ್ನಪ್ಪಿದ್ದಾರೆ. ಕ್ಯಾರೋಲಿನ್ ಲೂಸಿಯಾ ಸ್ಮಿತ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದರೊಂದಿಗೆ ಹೊಸಪೇಟೆಯ ಜನನಿ ಮಹಿಳಾ ಸಬಲೀಕರಣ ಸಂಘಟನೆಯಲ್ಲಿಯೂ ಸೇವೆ ಸಲ್ಲಿಸುತ್ತಿದ್ದರು. ಹೊಸಪೇಟೆ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಕೋವಿಡ್ ಸಮೀಕ್ಷೆ ಕಾರ್ಯದಲ್ಲಿ ಸ್ವಯಂ ಸೇವಕಿಯಾಗಿ ಕಾರ್ಯ ನಿರ್ವಹಿಸಿದ್ದರು.
ಅನಗತ್ಯವಾಗಿ ಸಂಚರಿಸುವ ವಾಹನಗಳ ಮೇಲೆ ನಿಗಾವಹಿಸಿ ಮಾರ್ಗಸೂಚಿ ಉಲ್ಲಂಘನೆ ಕಂಡು ಬಂದಲ್ಲಿ ಅಂತಹವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಹೇಳಿದ್ದಾರೆ.
ಅವರು, ಪಟ್ಟಣದ ವಿವಿಧೆಡೆ ಸಂಚರಿಸಿ ಪೊಲೀಸರಿಗೆ ಈ ಖಡಕ್ ಸೂಚನೆ ನೀಡಿದರು. ಸಿಬ್ಬಂದಿಗಳು ಕೂಡ ಸಾರ್ವಜನಿಕರೊಂದಿಗೆ ಸಂಯಮದಿಂದ ವರ್ತಿಸಿ ಎಂದರು.
ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಹಾಗೂ ಸರಕಾರ ವಿಧಿಸಿರುವಂತಹ ಮಾರ್ಗಸೂಚಿಗಳನ್ನು ಜಿಲ್ಲೆಯ ಪ್ರತಿಯೊಬ್ಬ ನಾಗರಿಕರು ಸಹ ಪಾಲಿಸಬೇಕು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹಗಲಿರುಳು ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ಮಾಡುತ್ತಿದ್ದಾರೆ. ಇದನ್ನು ಅರಿತುಕೊಂಡು ಜನತೆಯು ಸಹ ಅನಾವಶ್ಯಕವಾಗಿ ಹೊರಗಡೆ ಸಂಚರಿಸದೆ ಮನೆಯಲ್ಲಿಯೇ ಇದ್ದು ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಕೋವಿಡ್ ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕೆಂದು ಹೇಳಿದರು.
ಕೋವಿಡ್ -19 ಎರಡನೇ ಅಲೆ ನಿಯಂತ್ರಣಕ್ಕಾಗಿ ಜಿಲ್ಲಾಧಿಕಾರಿಗಳು ಎಲ್ಲ ಚಟುವಟಿಕೆಗಳನ್ನು ನಿರ್ಬಂಧಿಸಿ ಹೊರಡಿಸಿದ ಆದೇಶ ಜೂನ್ 1 ರಂದು ಬೆಳಿಗ್ಗೆ 6:00 ಗಂಟೆಗೆ ಮುಗಿಯಲಿದ್ದು, ನಂತರ ಜೂನ್ 7ರವರೆಗೆ ಬೆಳಿಗ್ಗೆ 6ರಿಂದ 10ರವರೆಗೆ ಅಗತ್ಯವಸ್ತುಗಳನ್ನು ಕೊಂಡುಕೊಳ್ಳುವುದಕ್ಕೆ ಸರಕಾರ ಅವಕಾಶವನ್ನು ಕಲ್ಪಿಸಿದೆ. ಆಗ ಮಾರುಕಟ್ಟೆಗಳಲ್ಲಿ ಹೆಚ್ಚು ಜನಸಂದಣಿ ಯಾಗದಂತೆ ಅಗತ್ಯ ಪೊಲೀಸ್ ಬಂದೋಬಸ್ತ್ ಒದಗಿಸುವುದಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳಿ ಎಂದರು.
ಇದೇ ಸಂದರ್ಭದಲ್ಲಿ ಕೋವಿಡ್ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ವೃದ್ಧೆಗೆ ದಿನಸಿ ವಸ್ತು ನೀಡಿದರು.
ವಿಶೇಷವಾಗಿ ದೇವಸ್ಥಾನಗಳಲ್ಲಿ ಉಡಿತುಂಬುವ ಕಾರ್ಯಕ್ರಮಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇರಿದಂತೆ ಕ್ರಮವಹಿಸಬೇಕು ಎಂದರು.
ಸಂಕಷ್ಟದಲ್ಲಿರೋರಿಗೆ ನೆರವಾಗಿ
ಕಠಿಣ ಕರ್ಫ್ಯೂ ನಿಂದ ಸಂಕಷ್ಟದಲ್ಲಿರುವಂತಹ ಜನರನ್ನು ಗುರುತಿಸಿ ದಾನಿಗಳಿಂದ ಅಗತ್ಯವಸ್ತುಗಳನ್ನು ಪಡೆದುಕೊಂಡು ಸಂಕಷ್ಟದಲ್ಲಿರುವಂತಹ ಜನತೆಗೆ ನೆರವು ಆಗುವಂತಹ ಕೆಲಸವನ್ನು ಮಾಡಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ ಆರೈಕೆ ಕೇಂದ್ರಕ್ಕೂ ಭೇಟಿ
ಶಿರಹಟ್ಟಿ ಹೊರವಲಯದಲ್ಲಿ ಇರುವ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಆರಂಭಗೊಂಡಿರುವ ಆರೈಕೆ ಕೇಂದ್ರಕ್ಕೂ ಸಹ ಎಸ್ಪಿ ಭೇಟಿ ನೀಡಿ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಶಿರಹಟ್ಟಿ ಸಿಪಿಐ ವಿಕಾಸ್ ಲಮಾಣಿ ಪಿಎಸ್ಐ ನವೀನ್ ಜಕ್ಕಲಿ ಉಪಸ್ಥಿತರಿದ್ದರು.
ಮನುಷ್ಯರ ಜೀವಕ್ಕೆ ತೊಂದರೆಯಾದರೂ ಹೊರಗೆ ಬಾರದ ಸ್ಥಿತಿಯಲ್ಲಿ ಇಂದು ಜನರಿದ್ದಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಕೋಳಿಗೆ ಬೇಧಿ ಹತ್ತಿದೆ ಎಂಬ ಕಾರಣಕ್ಕೆ ಮನೆಯಿಂದ ಹೊರಗೆ ಬಂದಿರುವ ಹಾಸ್ಯಾಸ್ಪದ ಘಟನೆ ನಗರದಲ್ಲಿ ನಡೆದಿದೆ.
ನಗರದ ಟಾಂಗಾಕೂಟ ವೃತ್ತದಲ್ಲಿ ಈ ಘಟನೆ ನಡೆದಿದೆ. ನಗರದ ಸರಾಫ್ ಬಜಾರ್ ನ ವ್ಯಕ್ತಿಯೇ ಈ ರೀತಿ ಕಾರಣ ಹೇಳಿರುವ ವ್ಯಕ್ತಿ. ಲಾಕ್ ಡೌನ್ ಸಂದರ್ಭದಲ್ಲಿ ಮನೆಯಿಂದ ಕೋಳಿ ಹಿಡಿದು ಬಂದ ಈ ವ್ಯಕ್ತಿ, ತನ್ನನ್ನು ತಡೆದ ಪೊಲೀಸರಿಗೆ ಕೋಳಿಯ ಬಗ್ಗೆ ಹೇಳಿದ್ದಾನೆ. ಬೆಳಿಗ್ಗೆಯಿಂದ ಎರಡು ಬಾರಿ ಬೇಧಿ ಆಗಿದೆ. ಹೀಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇನೆ ಎಂದು ಹೇಳಿದ್ದಾನೆ. ಈ ವ್ಯಕ್ತಿಯ ಕಾರಣ ಕೇಳಿ ಒಂದು ಕ್ಷಣ ಪೊಲೀಸರು ಕಕ್ಕಾಬಿಕ್ಕಿಯಾಗಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಗದಗ ನಗರದಲ್ಲಿ ಐದು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಹೇರಲಾಗಿದೆ. ಹೀಗಿದ್ದರೂ ಈ ವ್ಯಕ್ತಿ, ಕೋಳಿಯ ನೆಪ ಹೇಳಿಕೊಂಡು ಹೊರಗೆ ಬಂದಿದ್ದಾನೆ. ಕೋಳಿಯ ಬೇಧಿಯ ಕಾರಣ ಕೇಳಿ ಪೊಲೀಸರಿಗೆ ತಡೆಯಲಾರದಷ್ಟು ನಗು ಬಂದಿದೆ. ಈ ವ್ಯಕ್ತಿಯಿಂದಾಗಿ ಲಾಕ್ ಡೌನ್ ನ ಟೆನ್ಶನ್ ನಲ್ಲಿದ್ದ ಪೊಲೀಸರಿಗೆ ಮನರಂಜನೆ ಸಿಕ್ಕಂತಾಗಿದೆ.
ಈ ಕೋಳಿ ಸದಾಕಾಲ ನನ್ನೊಂದಿಗೆ ಇರುತ್ತಿತ್ತು. ಕುಂತರೆ, ನಿಂತರೂ ಇದು ನನ್ನ ಬಿಟ್ಟು ಅಗಲುತ್ತಿರಲಿಲ್ಲ. ಬೆಳಿಗ್ಗೆ ಎದ್ದ ಕೂಡಲೇ ಇದಕ್ಕೆ ಎರಡು ಬಾರಿ ಬೇಧಿ ಆಗಿದೆ. ಹೀಗಾಗಿ ಟೆನ್ಶನ್ ಆಗಿ, ಪಶು ಆಸ್ಪತ್ರೆಗೆ ಚಿಕಿತ್ಸೆಗೆ ಹೊರಟಿದ್ದೇನೆ ಎಂದು ಕೋಳಿಯ ಮಾಲೀಕ ಹೇಳಿದ್ದಾನೆ.
ಕೊರೊನಾ ಸೋಂಕಿತ ದಂಪತಿಯ ವಿರುದ್ಧ ಕೋವಿಡ್ ಉಲ್ಲಂಘನೆಯ ಪ್ರಕರಣ ದಾಖಲಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ದೇವದುರ್ಗ ತಾಲೂಕಿನ ವಿರಗೋಟ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಕುರುಬರದೊಡ್ಡಿ ನಿವಾಸಿಯಾಗಿರುವ ದಂಪತಿಗಳ ಮೇಲೆಯೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಐಪಿಸಿ 269, 270 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಅಲ್ಲದೇ, ಈ ದಂಪತಿಯ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಇದರೊಂದಿಗೆ ಇವರ ಪಡಿತರ ಚೀಟಿಯನ್ನು ಕೂಡ ರದ್ದುಗೊಳಿಸಲಾಗಿದೆ.
ಇತ್ತೀಚೆಗಷ್ಟೇ ಈ ದಂಪತಿಗಳಿಗೆ ಕೊರೊನಾ ಸೋಂಕು ತಗುಲಿದ್ದು ದೃಢವಾಗಿತ್ತು. ಹೀಗಾಗಿ ದಂಪತಿಗಳನ್ನು ಹೋಂ ಕ್ವಾರಂಟೈನ್ ಮಾಡಲು ಆರೋಗ್ಯ ಸಿಬ್ಬಂದಿ ದೊಡ್ಡಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸ್ಪಂದಿಸದ ದಂಪತಿ, ಅವರನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅಲ್ಲದೇ, ಅಧಿಕಾರಿಗಳ ಕೈಗೆ ಸಿಗದೆ ಮನೆ, ಗುಡ್ಡದಲ್ಲಿ ಅಡಗಿ ಕುಳಿತಿದ್ದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಎಷ್ಟೇ ಮನವೊಲಿಸಿದರೂ ಈ ದಂಪತಿ ಮಾತ್ರ ಅವರ ಮಾತಿಗೆ ಸ್ಪಂದನೆ ನೀಡಿರಲಿಲ್ಲ. ಬದಲಾಗಿ ಅಧಿಕಾರಿಗಳನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಹೀಗಾಗಿಯೇ ಅವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಲಾಕ್ ಡೌನ್ ಇದ್ದರೂ ಜಿಲ್ಲೆಯ ಜನ ಬೇಕಾಬಿಟ್ಟಿಯಾಗಿ ತಿರುಗಾಡುವುದು ತಪ್ಪುತ್ತಿಲ್ಲ. ಪೊಲೀಸರು ಎಷ್ಟೇ ಕಠಿಣ ಕ್ರಮ ಜರುಗಿಸಿದರೂ ಜನರ ತಿರುಗಾಟ ಮಾತ್ರ ಇನ್ನೂ ನಡೆದಿದೆ. ಹೀಗಾಗಿ ಜಿಲ್ಲಾ ವರಿಷ್ಠಾಧಿಕಾರಿ ಯತೀಶ್ ಎನ್. ಅವರು ಜಿಲ್ಲೆಯಲ್ಲಿ ರೌಂಡ್ ಹಾಕಿ, ಕಠಿಣ ನಿಯಮ ಜಾರಿಗೊಳಿಸುತ್ತಿದ್ದಾರೆ.
ಇಂದು ಬೆಳಂಬೆಳಿಗ್ಗೆ ಎಸ್ಪಿ ಯತೀಶ್ ಎನ್ ಅವರು ಫೀಲ್ಡ್ ಗೆ ಇಳಿದು, ಗದಗ- ಬೆಟಗೇರಿ ಅವಳಿ ನಗರ ರೌಂಡ್ ಹಾಕುತ್ತಿದ್ದಾರೆ. ಅಲ್ಲದೇ, ಬೇಕಾಬಿಟ್ಟಿಯಾಗಿ ತಿರುಗಾಡುತ್ತಿದ್ದವರ ವಾಹನಗಳನ್ನು ಪರಿಶೀಲನೆ ನಡೆಸಿದ್ದಾರೆ.
ವಿನಾಕಾರಣ ರಸ್ತೆಗೆ ಇಳಿದ ವಾಹನ ಮಾಲೀಕರಿಗೆ ಇಂದು ಬೆಳಿಗ್ಗೆಯಿಂದ ಕೂಡ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ಮೇ. 27 ರಿಂದ ಜೂ. 7ರ ವರೆಗೂ ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿ ಲಾಕ್ ಡೌನ್ ಘೋಷಿಸಿದ್ದರೂ ಜನ ಮಾತ್ರ ತಮ್ಮ ತಿರುಗಾಟ ಬಿಡುತ್ತಿಲ್ಲ. ಹೀಗಾಗಿ ಬೈಕ್ ಗಳನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಎಸ್ಪಿ ಸ್ವತಃ ರೋಡ್ ಗೆ ಇಳಿದು ಜನರಿಗೆ ಹಾಗೂ ವಾಹನ ಸವಾರರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.
ಜಿಲ್ಲೆಯವರೇ ಆಗಿರುವ ಹಾಗೂ ತೆಲಂಗಾಣ ರಾಜ್ಯದ ಸೈಬರಾಬಾದ್ ಪೊಲೀಸ್ ಆಯುಕ್ತರಾಗಿರುವ ವಿಶ್ವನಾಥ್ ಸಜ್ಜನರ್ ಅವರು ಕೋವಿಡ್ ಸೋಂಕು ನಿಯಂತ್ರಣಕ್ಕೆ ಅಗತ್ಯವಾಗಿರುವ ಸುಮಾರು ರೂ. 40 ಲಕ್ಷ ಮೌಲ್ಯದ ವೈದ್ಯಕೀಯ ಔಷಧಿ ಸಾಮಾಗ್ರಿಗಳನ್ನು ಗದಗ ಜಿಲ್ಲಾಡಳಿತಕ್ಕೆ ಕಳುಹಿಸುವ ಮೂಲಕ ವೈದ್ಯಕೀಯ ನೆರವು ನೀಡಿ ಜಿಲ್ಲೆಯ ಜನರ ಮೆಚ್ಚುಗೆ ಗಳಿಸಿದ್ದಾರೆ.
ಸಜ್ಜನರ್ ಅವರು, 22 ಆಕ್ಸಿಜನ್ ಕಾನ್ಸನ್ ಟ್ರೇಟರ್, 84 ಆಕ್ಸಿಜನ್ ಸಿಲಿಂಡರ್, 2 ಸಾವಿರ ಕೋವಿಡ್ ಕಿಟ್, 20 ಸಾವಿರ ಮಾಸ್ಕ್, 200 ಲೀಟರ್ ಸ್ಯಾನಿಟೈಸರ್, 1 ಸಾವಿರ ಫೇಸ್ ಶೀಲ್ಡ್, 24 ಯುನಿಟ್ ರೆಮ್ ಡಿಸಿವಿರ್ ಸೇರಿದಂತೆ ಇನ್ನಿತರ ವೈದ್ಯಕೀಯ ಸಾಮಾಗ್ರಿಗಳನ್ನು ಕಳುಹಿಸಿದ್ದಾರೆ.
ವಿಶ್ವನಾಥ್ ಸಜ್ಜನರ್ ಅವರನ್ನು ಎನ್ ಕೌಂಟರ್ ಸ್ಪೇಷಲಿಸ್ಟ್ ಎಂದೇ ಕರೆಯುತ್ತಾರೆ. ಇವರು ಎಲ್ಲ ಐಪಿಎಸ್ ಅಧಿಕಾರಿಗಳಂತೆ ಕೇವಲ ತಾವು ಕರ್ತವ್ಯ ನಿರ್ವಹಿಸಿದ ಕ್ಷೇತ್ರಗಳಲ್ಲಿ ಮಾತ್ರ ಚಿರಪರಿಚತರಾಗಿದ್ದವರು ಅಲ್ಲ. ಇವರು ಭ್ರಷ್ಟರಿಗೆ, ಅನ್ಯಾಕೋರರಿಗೆ ಹಾಗೂ ಅತ್ಯಾಚಾರಿಗಳಿಗೆ ಸಿಂಹ ಸ್ವಪ್ನ, ಖಡಕ್ ಐಪಿಎಸ್ ಆಫೀಸರ್. ಹೀಗಾಗಿಯೇ ಇವರು ಇಡೀ ಭಾರತದ ಜನರಿಗೆ ಚಿರಪರಿಚಿತ.
ಸೇವೆಯಷ್ಟೇ ಮಾನವೀಯ ಮೌಲ್ಯ ಹೊಂದಿರುವ ಇವರು, ಸದ್ಯ ತಮ್ಮ ತಾಯ್ನಾಡಿನ ಜನರು ಕೊರೊನಾದಿಂದ ಸಂಕಷ್ಟ ಅನುಭವಿಸುತ್ತಿರುವುದಕ್ಕೆ ಮಮ್ಮಲ ಮರುಗಿ ಸಹಾಯ ಮಾಡಿದ್ದಾರೆ. ವಿಶ್ವನಾಥ್ ಸಜ್ಜನರ್ ಅವರು, ಇಡೀ ದೇಶವೇ ಆಕ್ರೋಶ ವ್ಯಕ್ತಪಡಿಸಿದ್ದ ತೆಲಂಗಾಣ ಪಶುವೈದ್ಯೆ ದಿಶಾ ಅತ್ಯಾಚಾರ ಪ್ರಕರಣವನ್ನು ಕೇವಲ 24 ಗಂಟೆಗಳಲ್ಲಿಯೇ ಬೇಧಿಸಿ, ಆರೋಪಿಗಳನ್ನು ಎನ್ ಕೌಂಟರ್ ಮಾಡಿ ಇಡೀ ದೇಶದ ಜನರ ಮನಸ್ಸಿನಲ್ಲಿ ಇಂದಿಗೂ ಹೀರೋ ಆಗಿಯೇ ಉಳಿದುಕೊಂಡವರು.
ಆರೋಪಿಗಳು ಪಶು ವೈದ್ಯೆ ಮೇಲೆ ಪೈಶಾಚಿಕವಾಗಿ ಅತ್ಯಾಚಾರ ಎಸಗಿದ್ದಲ್ಲದೆ, ಆ ಯುವತಿಯನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು. ಇದಕ್ಕೆ ಇಡೀ ರಾಷ್ಟ್ರವೇ ಆಕ್ರೋಶ ವ್ಯಕ್ತಪಡಿಸಿತ್ತು. ಆಗ ಈ ಪ್ರಕರಣದ ತನಿಖೆಯ ಹೊಣೆಯನ್ನು ನಮ್ಮ ಹೆಮ್ಮೆಯ ಕನ್ನಡಿಗ ಹಾಗೂ ಗದಗ ಜಿಲ್ಲೆಯ ಮಣ್ಣಿನಲ್ಲಿ ಹುಟ್ಟಿದ ವಿಶ್ವನಾಥ್ ಸಜ್ಜನರ್ ಅವರಿಗೆ ವಹಿಸಲಾಗಿತ್ತು.
ಕೇವಲ 24 ಗಂಟೆಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ, ಚೆರ್ಲಪಲ್ಲಿ ಜೈಲಿಗೆ ಕಳುಹಿಸಿದ್ದರು. ಆ ನಂತರ ಆರೋಪಿಗಳನ್ನು ದುಷ್ಕೃತ್ಯ ನಡೆಸಿದ್ದ ಸ್ಥಳಕ್ಕೆ ಮಹಜರು ಮಾಡಲು ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಆರೋಪಿಗಳು ಕಲ್ಲುಗಳನ್ನು ಪೊಲೀಸರತ್ತ ಎಸೆಯಲು ಪ್ರಾರಂಭಿಸಿದ್ದಲ್ಲದೆ, ಗಂಡು ಹಾರಿಸಲು ಪ್ರಾರಂಭಿಸಿದ್ದರು. ಆರೋಪಿಗಳಿಗೆ ಧೈರ್ಯದಿಂದ ಗುಂಡು ಹಾರಿಸಿ ಅತ್ಯಾಚಾರಿಗಳ ಸಂಹಾರ ಮಾಡಿದ್ದು, ಇವರೆ. ಈ ಪ್ರಕರಣದಿಂದಾಗಿ ಸಜ್ಜನರ್ ಅವರನ್ನು ಇಡೀ ರಾಷ್ಟ್ರದ ಮಹಿಳೆಯರು ಅಭಿನಂದಿಸಿ, ಆನಂದ ಭಾಷ್ಪ ಸುರಿಸಿದ್ದರು. ಸದ್ಯ ಈ ಖಡಕ್ ಆಫೀಸರ್, ತಾವು ಹುಟ್ಟಿ- ಬೆಳೆದ, ತಮ್ಮ ಜಿಲ್ಲೆಯ ಜನರ ಕಷ್ಟಕ್ಕೆ ಸ್ಪಂದಿಸುವ ಮಾನವೀಯ ಕಾರ್ಯ ಮಾಡಿದ್ದಾರೆ.
ಈ ವೈದ್ಯಕೀಯ ಸಾಮಾಗ್ರಿಗಳನ್ನು ಐಪಿಎಸ್ ಅಧಿಕಾರಿ ವಿಶ್ವನಾಥ್ ಸಜ್ಜನರ್ ಅವರ ಸಹೋದರ, ಹುಬ್ಬಳ್ಳಿಯ ಸಾಯಿ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ನ ಡಾ. ಎಂ.ಸಿ. ಸಜ್ಜನರ ಅವರು ಜಿಲ್ಲಾಡಳಿತದ ಭವನದ ಆವರಣದಲ್ಲಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಜಿಪಂ ಸಿ.ಇ.ಓ ಭರತ್, ಡಿ.ಎಚ್.ಓ ಸತೀಶ್ ಬಸರಿಗಿಡದ್ ಸೇರಿದಂತೆ ಹಲವರು ಇದ್ದರು.