Home Blog Page 3041

ಎಚ್ಕೆ ವಿರುದ್ಧ ಏಕ ವಚನದಲ್ಲಿ ಮಾತನಾಡಬಾರದಿತ್ತು; ಸಿ ಸಿ ಪಾಟೀಲ್

ವಿಜಯಸಾಕ್ಷಿ ಸುದ್ದಿ, ಗದಗ

ಮಾಜಿ ಸಚಿವ ಹಾಗೂ ಕಾಂಗ್ರೆಸ್ ನ ಹಿರಿಯ ನಾಯಕ ಎಚ್.ಕೆ. ಪಾಟೀಲ್ ಅವರ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ್ ಅವರು ಏಕವಚನದಲ್ಲಿಯೇ ಮಾತನಾಡಿದ್ದರು. ಸದ್ಯಕ್ಕೆ ಈ ಮಾತಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಸುಟ್ಟ ಮನೆಯಲ್ಲಿ ಗಳ ಎಣಿಸುವ ವ್ಯಕ್ತಿ. ಟೂಲ್ ಕಿಟ್’ನ ಪ್ರಮುಖ ರೂವಾರಿ ಎಚ್.ಕೆ. ಪಾಟೀಲ್ ಎಂದು ಆರೋಪಿಸಿದ್ದರು.

ಪಾಟೀಲರು ಹೇಳುವುದೆಲ್ಲ ವೇದವಾಕ್ಯವೇ? ಎಂದು ಪ್ರಶ್ನಿಸಿದ್ದ ಅವರು, ಒಂದು ವೇಳೆ ಎಚ್.ಕೆ. ಪಾಟೀಲ್ ಸಚಿವರಾಗಿದ್ದ ಸಂದರ್ಭದಲ್ಲಿ ಕೋವಿಡ್ ಬಂದಿದ್ದರೆ, ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿ ಹೆಣಗಳ ರಾಶಿ ಬೀಳುತ್ತಿದ್ದವು. ಅವರು ಕೆವಿಕೆಯಲ್ಲಿ ಕದ ಹಾಕಿಕೊಂಡು ಕುಳಿತುಕೊಳ್ಳುತ್ತಿದ್ದರು. ಇತ್ತ ಜನರು ಹೆಣವಾಗುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಎಲ್ಲಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ನನ್ನ ಮೇಲೆ ವಿಶ್ವಾಸ ಇಲ್ಲವೆಂದರೇ ಅವನನ್ನೇ ಮಂತ್ರಿಮಾಡಬೇಕಿತ್ತು ಎಂದು ಎಚ್.ಕೆ. ಪಾಟೀಲ ಅವರ ವಿರುದ್ಧ ಏಕ ವಚನದಲ್ಲಿಯೇ ಸಂಬೋಧಿಸಿದ್ದರು. ಸದ್ಯ ಈ ಮಾತಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಅಂದು ನಾನು ಮಾತಿನ ಭರದಲ್ಲಿ ತಾಳ್ಮೆ ಕಳೆದುಕೊಂಡು ಮಾತನಾಡಿದ್ದೆ. ಆ ಸಂದರ್ಭದಲ್ಲಿ ನಾನು ಹಿರಿಯ ನಾಯಕರ ಬಗ್ಗೆ ಏಕವಚನದಲ್ಲಿಯೇ ಮಾತನಾಡಿದ್ದೆ. ಆ ರೀತಿ ಮಾತನಾಡ ಬಾರದಿತ್ತು. ಹೀಗಾಗಿ ಆ ಮಾತನ್ನು ಹಿಂಪಡೆಯುತ್ತಿದ್ದೇನೆ. ಅಲ್ಲದೇ, ಆ ಮಾತಿಗೆ ವಿಷಾದಿಸುತ್ತೇನೆ ಎಂದು ಹೇಳಿದ್ದಾರೆ.

ಗಂಡು ಮಗುವಿಗೆ ಜನ್ಮ ನೀಡಿದ ಖ್ಯಾತ ಗಾಯಕಿ!

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಹಾಗೂ ಶಿಲಾದಿತ್ಯ ದಂಪತಿಗೆ ಇಂದು ಗಂಡು ಮಗು ಜನಿಸಿದೆ. ಈ ಕುರಿತು ಗಾಯಕಿ ತಮ್ಮ ಇನ್ ಸ್ಟಾಗ್ರಾಂನಲ್ಲ ಹಂಚಿಕೊಂಡಿದ್ದಾರೆ. ದೇವರು ಇಂದು ನಮಗೆ ಗಂಡು ಮಗುವಿನ ಆಶೀರ್ವಾದ ಮಾಡಿದ್ದಾನೆ. ಇಂತಹ ಭಾವನೆಯನ್ನು ಹಿಂದೆಂದೂ ಅನುಭವಿಸಿರಲಿಲ್ಲ. ನಮ್ಮ ಕುಟುಂಬಸ್ಥರೂ ಸೇರಿದಂತೆ ಶೀಲಾದಿತ್ಯ ಹಾಗೂ ನಾನು ತುಂಬಾ ಸಂತೋಷಗೊಂಡಿದ್ದೇವೆ. ಬೆಲೆ ಕಟ್ಟಲಾಗದ ನಿಮ್ಮ ಆಶೀರ್ವಾದಕ್ಕೆ ಧನ್ಯವಾದಗಳು ಎಂದು ಶ್ರೇಯಾ ಹಂಚಿಕೊಂಡಿದ್ದಾರೆ.

ಬಾಲಿವುಡ್‍ ನ ಜನಪ್ರಿಯ ಗಾಯಕಿ ಶ್ರೇಯಾ ಘೋಷಾಲ್ ಅವರು ಮಾ. 4ರಂದು ತಾವು ಗರ್ಭಿಣಿಯಾಗಿರುವ ವಿಚಾರವನ್ನು ಅಭಿಮಾನಿಗಳಿಗೆ ಹೇಳಿದ್ದರು. ಬೇಬಿ ಶ್ರೇಯಾದಿತ್ಯ ನಿರೀಕ್ಷೆಯಲ್ಲಿದ್ದೇವೆ. ಶಿಲಾದಿತ್ಯ ಮತ್ತು ನಾನು ಈ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾನು ರೋಮಾಂಚನಗೊಂಡಿದ್ದೇವೆ ಎಂದು ಹೇಳಿದ್ದರು.

2015ರ ಫೆಬ್ರವರಿ ತಿಂಗಳಲ್ಲಿ ಸಾಂಪ್ರದಾಯಿಕ ಬಂಗಾಳಿ ಶೈಲಿಯಲ್ಲಿ ಶ್ರೇಯಾ ಮತ್ತು ಶಿಲಾದಿತ್ಯ ವಿವಾಹ ಮಹೋತ್ಸವ ನಡೆದಿತ್ತು. ಇವರಿಬ್ಬರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಆಗಿದೆ. ಮದುವೆಗೂ ಮುನ್ನ ಹತ್ತು ವರ್ಷಗಳ ಕಾಲ ಶ್ರೇಯಾ ಮತ್ತು ಶಿಲಾದಿತ್ಯ ಪ್ರೀತಿಸಿದ್ದರು. ಸದ್ಯ ಇವರ ಪ್ರೀತಿಗೆ ಗಂಡು ಮಗು ಜನಿಸಿದೆ.

ಎರಡೆಕರೆ ಹೊಲ ಹೋದ್ರೂ ಚಿಂತಿಲ್ಲ, ನಿನ್ನ ಮುಗಿಸಿ ಬಿಡ್ತೀನಿ!

ವಿಜಯಸಾಕ್ಷಿ ಸುದ್ದಿ, ಗದಗ

ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ಹಾಗೂ ಪ್ರಿಯಕರನಿಗೆ ಬುದ್ಧಿಮಾತು ಹೇಳಿದ ವ್ಯಕ್ತಿಗೆ ಬಡಿಗೆಯಿಂದ ತಲೆಗೆ ಹೊಡೆದು ಕೊಲೆ ಬೆದರಿಕೆ ಹಾಕಿದ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಕೋಡಿಕೊಪ್ಪ ಗ್ರಾಮದಲ್ಲಿ ನಡೆದಿದೆ.

ಮೂಲತಃ ನವಲಗುಂದ ತಾಲೂಕಿನ ತುಪ್ಪದ ಕುರಹಟ್ಟಿ ಗ್ರಾಮದ, ಸದ್ಯ ಕೋಡಿಕೊಪ್ಪದಲ್ಲಿ ವಾಸವಾಗಿರುವ ಕುಮಾರಸ್ವಾಮಿ ಗಂಗಯ್ಯ ಮ್ಯಾಗೇರಿಮಠ ಎಂಬಾತನೇ ಹಲ್ಲೆ ಮಾಡಿದ ಆರೋಪಿ.

ಬುಧವಾರ ಮೇ ೧೯ರಂದು ರಾತ್ರಿ ಈ ಕೃತ್ಯ ನಡೆದಿದ್ದು, ಕೋಡಿಕೊಪ್ಪ ಗ್ರಾಮದ ಮಹಿಳೆಯೊಂದಿಗೆ ಅನೇಕ ದಿನಗಳಿಂದ ಆರೋಪಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಮಹಿಳೆಯ ಪತಿ, ಅತ್ತಿಗೆಗೆ ವಿಷಯ ಗೊತ್ತಾಗಿ ಇಬ್ಬರಿಗೂ ಬುದ್ಧಿಮಾತು ಹೇಳಿದ್ದರು.

ಆರು ತಿಂಗಳ ಹಿಂದೆ ಹೇಳಿದ್ದ ಬುದ್ಧಿಮಾತಿಗೆ ಆರೋಪಿ ಕುಮಾರಸ್ವಾಮಿ ಸಿಟ್ಟಾಗಿ ಹಲ್ಲು ಮಸೆಯುತ್ತಿದ್ದ. ಕಂಡ ಕಂಡಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಇಷ್ಟಕ್ಕೇ ಸುಮ್ಮನಾಗದ ಆರೋಪಿ ಕುಮಾರಸ್ವಾಮಿ, ಬುಧವಾರ ರಾತ್ರಿ ಫಿರ್ಯಾದಿಯ ಮನೆ ಹೊಕ್ಕು ಬಡಿಗೆಯಿಂದ ಹಲ್ಲೆ ಮಾಡಿ, ‘ಎರಡು ಎಕರೆ ಹೊಲ ಹೋದ್ರೂ ಚಿಂತೆಯಿಲ್ಲ, ನಿನ್ನ ಜೀವ ಸಹಿತ ಬಿಡಲ್ಲ’ ಅಂತ ಬೆದರಿಕೆ ಹಾಕಿದ್ದಾನೆ. ಈ ಕುರಿತು ನರೇಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೋಂಕಿತರಿಗೆ ಹೋಂ ಐಸೋಲೇಷನ್ ಇಲ್ಲ, ಕೋವಿಡ್ ಕೇಂದ್ರಕ್ಕೆ ದಾಖಲಾಗುವುದು ಕಡ್ಡಾಯ!

ವಿಜಯಸಾಕ್ಷಿ ಸುದ್ದಿ, ದಾವಣಗೆರೆ

ರಾಜ್ಯದಲ್ಲಿ ಕೊರೊನಾ ಹೆಚ್ಚಳವಾಗಲು ಹೋಂ ಐಸೋಲೇಷನ್ ನಲ್ಲಿರುವ ಸೋಂಕಿತರು ಕಾರಣ. ಹೀಗಾಗಿ ಇನ್ನು ಮುಂದೆ ಕೊರೊನಾ ಸೋಂಕಿತರಿಗೆ ಹೋಂ ಐಸೋಲೇಷನ್‌ ಗೆ ಅವಕಾಶ ನೀಡುವುದಿಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಮುಂದೆ ಸೋಂಕಿತರನ್ನು ಹೋಂ ಐಸೋಲೇಷನ್ ಮಾಡುವುದಿಲ್ಲ. ಅವರು ಕಡ್ಡಾಯವಾಗಿ ಕೋವಿಡ್‌ ಕೇರ್‌ ಸೆಂಟರ್‌ ನಲ್ಲಿಯೇ ದಾಖಲಾಗಬೇಕು ಎಂದು ಸಚಿವ ಡಾ. ಕೆ. ಸುಧಾಕರ್ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ.

ಕೋವಿಡ್‌ ಸೋಂಕಿತರಿಗೆ ಇನ್ನು ಮುಂದೆ ಹೋಂ ಐಸೋಲೇಷನ್‌ ಇರುವುದಿಲ್ಲ. ಅವರು ನೇರವಾಗಿ ಕೋವಿಡ್‌ ಕೇರ್‌ ಸೆಂಟರ್‌ ನಲ್ಲಿ ದಾಖಲಾಗಬೇಕು. ಹೀಗಾಗುವುದರಿಂದ ಸೋಂಕು ಹರಡುವುದನ್ನು ತಡೆಯಬಹುದು. ಉತ್ತಮ ಸೌಲಭ್ಯವಿರುವ ಹಾಸ್ಟೆಲ್‌, ಸರ್ಕಾರಿ-ಖಾಸಗಿ ಸಮುದಾಯ ಭವನಗಳನ್ನು ಗುರುತಿಸಿ, ಕೋವಿಡ್‌ ಕೇರ್‌ ಸೆಂಟರ್‌ ಆಗಿ ಪರಿವರ್ತಿಸಬೇಕು ಎಂದು ಸೂಚಿಸಿದ್ದಾರೆ.

ರಾಜ್ಯದಲ್ಲಿ ಬ್ಲ್ಯಾಕ್‌ ಫಂಗಸ್‌ ಸೋಂಕು ಕಂಡು ಬಂದಿದ್ದು ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುವಂತೆ ಮಾಡಲಾಗಿದೆ. ಅಗತ್ಯವಿರುವ ಔಷಧಿ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಬ್ಲ್ಯಾಕ್ ಫಂಗಸ್ ಗೆ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸಿ – ಸೋನಿಯಾ ಗಾಂಧಿ ಮನವಿ

ವಿಜಯಸಾಕ್ಷಿ ಸುದ್ದಿ, ನವದೆಹಲಿ

ದೇಶದಲ್ಲಿ ಕೊರೊನಾದೊಂದಿಗೆ ಬ್ಲ್ಯಾಕ್ ಫಂಗಸ್ ನ ಹಾವಳಿ ಕೂಡ ಶುರುವಾಗಿದೆ. ಹೀಗಾಗಿ ಬ್ಲ್ಯಾಕ್ ಫಂಗಸ್ ನ ರೋಗಿಗಳಿಗೆ ಉಚಿತ ವೈದ್ಯಕೀಯ ಸೇವೆ ಒದಗಿಸಬೇಕು ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.

ಆಯುಷ್ಮಾನ್ ಭಾರತ್ ಯೋಜನೆಯಡಿ ಬ್ಲ್ಯಾಕ್ ಫಂಗಸ್ ನ್ನು ಸೇರಿಸಿಲ್ಲ. ಅದೇ ರೀತಿ ಹಲವು ಅನೇಕ ಆರೋಗ್ಯ ವಿಮಾ ಯೋಜನೆಗಳಲ್ಲಿಯೂ ಸೇರಿಸಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಕೂಡಲೇ ಬ್ಲ್ಯಾಕ್ ಫಂಗಸ್ ನ್ನು ಸಾಂಕ್ರಾಮಿಕ ರೋಗ ಕಾಯ್ದೆಯಡಿ ಘೋಷಿಸಬೇಕೆಂದು ರಾಜ್ಯ ಸರ್ಕಾರಗಳನ್ನು ಸಹ ಸೋನಿಯಾ ಗಾಂಧಿ ಒತ್ತಾಯಿಸಿದ್ದಾರೆ.

ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಲಿಪೊಸೊಮಲ್ ಆಂಪೊಟೆರಿಸಿನ್-ಬಿ ಅತ್ಯಗತ್ಯವಾಗಿದ್ದು, ಮಾರುಕಟ್ಟೆಯಲ್ಲಿ ಅದರ ಕೊರತೆ ಎದುರಾಗಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಪತ್ತೆಯಾಯಿತು ವೈಟ್ ಫಂಗಸ್! ಈ ಜಿಲ್ಲೆಯಲ್ಲಿ 6 ವೈಟ್ ಫಂಗಸ್ ಪ್ರಕರಣ ಪತ್ತೆ!

ವಿಜಯಸಾಕ್ಷಿ ಸುದ್ದಿ, ರಾಯಚೂರು

ಕೊರೊನಾದೊಂದಿಗೆ ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಜನರ ಆತಂಕಕ್ಕೆ ಕಾರಣವಾಗಿತ್ತು. ಸದ್ಯ ಇದರೊಂದಿಗೆ ವೈಟ್ ಫಂಗಸ್ ನ ಹಾವಳಿ ಕೂಡ ಶುರುವಾಗಿದೆ. ಜಿಲ್ಲೆಯಲ್ಲಿ ವೈಟ್ ಫಂಗಸ್ ಕಾಣಿಸಿಕೊಂಡಿದೆ.
ಕಳೆದ 15 ದಿನಗಳಲ್ಲಿ ಜಿಲ್ಲೆಯಲ್ಲಿ 6 ಜನರಲ್ಲಿ ಕಾಣಿಸಿಕೊಂಡಿದೆ. ಇಲ್ಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿಯೇ 6 ಜನರಲ್ಲಿ ಇದರ ಲಕ್ಷಣ ಪತ್ತೆಯಾಗಿದೆ. ಕೊರೊನಾದಿಂದ ಗುಣಮುಕರಾದವರಲ್ಲಿಯೇ ವೈಟ್ ಫಂಗಸ್ ಕಾಣಿಸಿಕೊಂಡಿದೆ.

ಗ್ಯಾಸ್ಟ್ರೋ, ಲಿವರ್ ಹಾಗೂ ಎಂಡೋಸ್ಕೋಪಿ ತಜ್ಞ ಡಾ. ಮಂಜುನಾಥ್ ಅವರು ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಸೋಂಕಿತರು ಮನೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಡಾ.ಮಂಜುನಾಥ್, ವೈಟ್ ಫಂಗಸ್ ಕುರಿತು ಯಾರೂ ಹೆದರಬಾರದು. ಈ ಫಂಗಸ್ ಗೆ 14 ದಿನಗಳ ಔಷಧಿ ಕೊಡಲಾಗುತ್ತದೆ. 7 ದಿನಗಳಲ್ಲಿ ಸೋಂಕಿತರು ಗುಣಮುಖರಾಗುತ್ತಾರೆ. ಅನ್ನನಾಳದಲ್ಲಿ ತೊಂದರೆ ಕೊಡುವ ಸೋಂಕು ಜೀವಮಾರಕವಲ್ಲ ಎಂದು ಹೇಳಿದ್ದಾರೆ.

ವೈಟ್ ಫಂಗಸ್ ರಕ್ತಕ್ಕೆ ಸೇರಿದರೆ ಮಾತ್ರ ಅದು ಮಾರಣಾಂತಿಕ ಸಮಸ್ಯೆಯಾಗುವ ಸಾಧ್ಯತೆ ಇದೆ. 100 ಜನರಿಗೆ ಸ್ಟಿರೈಡ್ ಕೊಟ್ಟರೆ ಒಬ್ಬರಲ್ಲಿ ಈ ವೈಟ್ ಫಂಗಸ್ ಕಾಣಿಸಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಕ್ಯಾಂಡಿಡಾ ಫಂಗಸ್, ಆಸ್ಪರ್ ಜಿಲೋಸಿಸ್ ಫಂಗಸ್ ನ್ನು ವೈಟ್ ಫಂಗಸ್ ಎಂದು ಕರೆಯುತ್ತಾರೆ.

ಸದ್ಯ ಇದು ಕಾಣಿಸಿಕೊಂಡ 6 ಜನ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ, ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಜನರು ಭಯ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಚಿರತೆಗಳ ಕಳೇಬರ ಪತ್ತೆ; ವಿಷ ಹಾಕಿ ಕೊಂದಿರುವ ಶಂಕೆ

ವಿಜಯಸಾಕ್ಷಿ ಸುದ್ದಿ, ಮೈಸೂರು

ಜಿಲ್ಲೆಯ ಬಳವಾಡಿಯ ಬಯಲು ಪ್ರದೇಶದಲ್ಲಿ ಮೂರು ಚಿರತೆಗಳ ಕಳೇಬರಗಳು ಪತ್ತೆಯಾಗಿವೆ.
ಈ ಚಿರತೆಗಳಿಗೆ ಯಾರೋ ವಿಷ ಪ್ರಾಶನ ಮಾಡಿರಬಹುದು ಎಂದು ಶಂಕಿಸಲಾಗಿದೆ.

ತಾಯಿ ಚಿರತೆ ಹಾಗೂ ಎರಡು ಚಿರತೆ ಮರಿಗಳು ಸಾವನ್ನಪ್ಪಿವೆ. ಎರಡು ದಿನಗಳ ಹಿಂದೆಯಷ್ಟೇ ಬೆಮೆಲ್ ಕಾರ್ಖಾನೆಯ ಕಾಂಪೌಂಡ್ ಬಳಿಯ ಸಿಸಿಟಿವಿಯಲ್ಲಿ ಈ ಚಿರತೆಗಳು ಸೆರೆಯಾಗಿದ್ದವು.
ಆ ನಂತರ ಅವರು ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಯಾರೋ ದುಷ್ಕರ್ಮಿಗಳು ಚಿರತೆಗಳಿಗೆ ತಿನ್ನುವ ತಿನ್ನುವ ಆಹಾರದಲ್ಲಿ ವಿಷ ಹಾಕಿರಬೇಕು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ. ತಾಯಿ ಚಿರತೆ ಹಾಗೂ ಚಿರತೆ ಮರಿಗಳು ಒಟ್ಟೊಟ್ಟಿಗೆ ಓಡಾಡುತ್ತಿದ್ದರಿಂದಾಗಿ ಬೆಮೆಲ್ ಫ್ಯಾಕ್ಟರಿ ಹಾಗೂ ಬೆಳವಾಡಿ ಸುತ್ತಮುತ್ತಲಿನ ಜನ ಭಯದ ವಾತಾವರಣದಲ್ಲಿದ್ದರು. ಭಯದ ಕಾರಣಕ್ಕೆ ವಿಷ ಹಾಕಿ ಕೊಂದಿದ್ದಾರೆಂದು ಅರಣ್ಯ ಇಲಾಖೆಯ ಸಿಬ್ಬಂದಿ ಅನುಮಾನ ವ್ಯಕ್ತಪಡಿಸಿದ್ದಾರೆ.

ಸದ್ಯ ಶವಗಳ ಮರಣೋತ್ತರ ಪರೀಕ್ಷೆಗೆ ಅರಣ್ಯ ಸಿಬ್ಬಂದಿ ತಯಾರಿ ನಡೆಸುತ್ತಿದ್ದಾರೆ.

ಮಕ್ಕಳಿಗೆ ಸೋಂಕು ಹರಡುವ ಭೀತಿ; ಆತ್ಮಹತ್ಯೆ ಮಾಡಿಕೊಂಡ ತಂದೆ -ತಾಯಿ!

ವಿಜಯಸಾಕ್ಷಿ ಸುದ್ದಿ, ವಿಜಯವಾಡ

ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ದಂಪತಿ, ತಮ್ಮ ಮಕ್ಕಳಿಗೆ ಸೋಂಕು ತಗಲಬಹುದು ಎಂಬ ಭಯದಿಂದ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಪೆಡಾನಾದಲ್ಲಿ ನಡೆದಿದೆ.

ಪೆಡಾನಾ ಪೊಲೀಸರು ಹೇಳುವಂತೆ, ಜಕ್ಕುಲಾ ಲೀಲಾ ಪ್ರಸಾದ್ (40) ಮತ್ತು ಭಾರತಿ (37) ದಂಪತಿ ಕಳೆದ 10 ದಿನಗಳಿಂದ ಕೊರೊನಾ ಲಕ್ಷಣದಿಂದ ಬಳಲುತ್ತಿದ್ದರು. ಅವರಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಅವರು ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದರು.

ಈ ದಂಪತಿಗೆ ಒಂಭತ್ತು ಹಾಗೂ ಐದು ವರ್ಷ ವರ್ಷದ ಹೆಣ್ಣುಮಕ್ಕಳಿದ್ದು, ಅವರಿಗೆ ಸೋಂಕು ಹರಡಬಹುದೆಂಬ ಭಯದಿಂದ, ದಂಪತಿಗಳು ಖಿನ್ನತೆಗೆ ಜಾರಿದ್ದರು. ಕಾರಣ, ಕುಟುಂಬದ ಯಾವುದೇ ಸದಸ್ಯರು ಅವರ ರಕ್ಷಣೆಗೆ ಬಂದಿರಲಿಲ್ಲ. ಹೀಗಾಗಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಈ ಕುರಿತು ಸಿಆರ್ ಪಿಸಿ ಸೆಕ್ಷನ್ 174 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪೊಲೀಸರ ಥಳಿತಕ್ಕೆ ಬಾಲಕ ಬಲಿ!

ವಿಜಯಸಾಕ್ಷಿ ಸುದ್ದಿ, ಲಖನೌ

ಕೊರೊನಾ ಕರ್ಫ್ಯೂ ನಿಯಮ ಉಲ್ಲಂಘನೆ ಮಾಡಿದ್ದಾನೆ ಎಂಬ ಕಾರಣಕ್ಕೆ ಪೊಲೀಸರು ಬಾಲಕನನ್ನು ಥಳಿಸಿದ ನಂತರ ಆತ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಭಟ್ಪುರಿ ಜಿಲ್ಲೆಯಲ್ಲಿ ನಡೆದಿದೆ.
ಬಾಲಕನ ಕುಟುಂಬ ಸದಸ್ಯರು ಪೊಲೀಸರ ಥಳಿತದಿಂದಲೇ ಬಾಲಕ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸದ್ಯ ಓರ್ವ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿದ್ದು, ಹೋಮ್ ಗಾರ್ಡ್ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ.

ಬಾಲಕ ಮನೆಯ ಹೊರಭಾಗದಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದಾಗ ಆತನನ್ನು ಪೊಲೀಸರು ಥಳಿಸಿದ್ದಾರೆ ಎನ್ನಲಾಗಿದೆ.
ಪೊಲೀಸರು ಈ ಕುರಿತು ಹೇಳಿಕೆಯನ್ನು ಪಡೆದಿದ್ದು, ಆರೋಪ ಎದುರಿಸುತ್ತಿರುವ ಸಿಬ್ಬಂದಿಗಳ ವಿರುದ್ಧ ಎಫ್ ಐಆರ್ ನ್ನು ದಾಖಲಿಸಲಾಗುತ್ತದೆ ಹಾಗೂ ತನಿಖೆ ನಡೆಸಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ನೀಡಿದ್ದಾರೆ.

ಕೊರೋನಾ ಕರ್ಫ್ಯೂ ಉಲ್ಲಂಘನೆ ಮಾಡಿದ್ದಾನೆಂದು ಪೊಲೀಸ್ ಸಿಬ್ಬಂದಿಗಳು 17 ವರ್ಷದ ಬಾಲಕನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ದೊಣ್ಣೆಯಿಂದ ಹೊಡೆದಿದ್ದಾರೆ ಎಂದು ಕುಟುಬಸ್ಥರು ಕುಟುಂಬ ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ.
ಥಳಿತದಿಂದ ತೀವ್ರವಾಗಿ ಅಸ್ವಸ್ಥಗೊಂಡ ಬಾಲಕನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಷ್ಟರಲ್ಲಿಯೇ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯಕೀಯ ಸಿಬ್ಬಂದಿ ಹೇಳಿದ್ದರು ಎಂದು ಕುಟುಂಬಸ್ಥರು ಹೇಲಿದ್ದಾರೆ.

ಆಕ್ರೋಶಗೊಂಡ ಸ್ಥಳೀಯರು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದು ಪೊಲೀಸ್ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಮೃತ ಬಾಲಕನ ಕುಟುಂಬ ಸದಸ್ಯರಿಗೆ ಪರಿಹಾರ ಹಾಗೂ ಸರ್ಕಾರಿ ಉದ್ಯೋಗ ನೀಡಬೇಕೆಂದು ಆಗ್ರಹಿಸಿದ್ದಾರೆ.

ಮುಂದಿನ ಎರಡು ದಿನಗಳ ಕಾಲ ರಾಜ್ಯದಲ್ಲಿ ಇರಲಿದೆ ಮಳೆರಾಯನ ಆರ್ಭಟ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಮುಂದಿನ ಎರಡು ದಿನಗಳ ಕಾಲ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೇ, ಹಲವು ಜಿಲ್ಲೆಗಳಲ್ಲಿ ಈಗಾಗಲೇ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮೇ. 22 ರಂದು ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಕೋಲಾರ, ಮೈಸೂರು ಹಾಗೂ ರಾಮನಗರ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದ್ದು, ಅಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮುಂದಿನ ಎರಡು ದಿನಗಳವರೆಗೆ ಮಳೆ ಅಥವಾ ಗುಡುಗು ಸಹಿತ ಬಲವಾದ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 24 ಗಂಟೆಗಳ ಅವಧಿಯಲ್ಲಿ ಮಳೆ 64.5 ಮಿಮೀ ಮತ್ತು 115.5 ಮಿಮೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

error: Content is protected !!