ಜಿಲ್ಲೆಯ ಗಜೇಂದ್ರಗಡ ಪಟ್ಟಣದ ದುರ್ಗಾ ಸರ್ಕಲ್ ಬಳಿ ಸಾರ್ವಜನಿಕ ರಸ್ತೆಯ ಮೇಲೆ ಸಾರ್ವಜನಿಕರಿಂದ ಓ ಸಿ ನಂಬರ್ ಆಧಾರದಲ್ಲಿ ಜೂಜಾಟದಲ್ಲಿ ತೊಡಗಿದ್ದ ಡ್ಯಾನ್ಸ್ ಮಾಸ್ಟರ್ ನೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಗಜೇಂದ್ರಗಡ ಪಟ್ಟಣದ ನದಾಫ್ ಪ್ಲಾಟ್, ಪಾಗಿಯವರ ಬಿಲ್ಡಿಂಗ್ ನಿವಾಸಿ ಡ್ಯಾನ್ಸ್ ಮಾಸ್ಟರ್ ರಾಘವೇಂದ್ರ ಮಹಾದೇವಪ್ಪ ಪಾಪ್ತಿ ಎಂಬಾತನೇ ಪೊಲೀಸರ ಬಲೆಗೆ ಸಿಕ್ಕಿಬಿದ್ದಾತ. ಈತ ಸಾರ್ವಜನಿಕರಿಂದ ಓ ಸಿ ನಂಬರ್ ಬರೆದುಕೊಂಡು ಪಟ್ಟಿಯನ್ನು ತಾನೇ ಇಟ್ಟುಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಲ್ಲೆಡೆ ಕೊರೋನಾ ಸೋಂಕು ಹೆಚ್ಚಳವಾಗುತ್ತಿದ್ದು ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಸರಕಾರ ಹಾಗೂ ಜಿಲ್ಲಾಡಳಿತ ಎಷ್ಟೇ ಕಟ್ಟು ನಿಟ್ಟಿನ ಕ್ರಮ ಕೈಗೊಂಡರು ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಮಾಸ್ಕ್, ಸ್ಯಾನಿಟೇಸರ್ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಾನೂನು ರೂಪಿಸಿದರೂ ಅದನ್ನು ಜನರು ಉಲ್ಲಂಘನೆ ಮಾಡೋದು ಸಾಮಾನ್ಯವಾಗಿದೆ.
ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಭವಾನಿ ಹೋಟೆಲ್ ಮಾಲೀಕ ಮಂಜುನಾಥ್ ಬಸಪ್ಪ ಬಗಾಡೆ ಎಂಬುವವರು ತಮ್ಮ ಹೋಟೆಲ್ ನಲ್ಲಿ ಗ್ರಾಹಕರಿಗೆ ಕೋವಿಡ್ ಕಾನೂನು ಉಲ್ಲಂಘಿಸಿ ಊಟ ಸೇರಿದಂತೆ ಮತ್ತೀತರ ವ್ಯವಸ್ಥೆ ಮಾಡಿದ್ದರು.
ಭವಾನಿ ಹೋಟೆಲ್ ಮಾಲೀಕ ಮಂಜುನಾಥ್ ಬಸಪ್ಪ ಬಗಾಡೆ ಎಂಬುವವರು ಮೇಲೆ ಕೋವಿಡ್ ಹರಡಲು ಕಾರಣವಾಗಿದ್ದಕ್ಕೆ ಐಪಿಸಿ 1860 (U/s-269, 270) ಪ್ರಕರಣ ದಾಖಲಿಸಲಾಗಿದೆ.
ಲಕ್ಷ್ಮೇಶ್ವರ ಪಿಎಸ್ಐ ಎಸ್ ವೈ ಲೋಹಾರ ಪ್ರಕರಣ ದಾಖಲಿಸಕೊಂಡು ತನಿಖೆ ನಡೆಸಿದ್ದಾರೆ.
ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು ಕೋವಿಡ್ ಸೋಂಕು ನಿಯಂತ್ರಣ ಕಾರ್ಯಕ್ಕೆ ಜಿಲ್ಲೆಯ ಅಧಿಕಾರಿಗಳು ಪ್ರಥಮಾದ್ಯತೆ ನೀಡುವ ಮೂಲಕ ಸೋಂಕು ನಿಯಂತ್ರಣಕ್ಕೆ ಮುಂದಾಗಬೇಕು. ಸೋಂಕು ನಿಯಂತ್ರಣ ನಿಯಮಗಳನ್ನು ಉಲ್ಲಂಘಿಸುವ ಸಂಸ್ಥೆ , ವ್ಯಾಪಾರಸ್ಥರು, ಸಾರ್ವಜನಿಕರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋಸಭಾಂಗಣದಲ್ಲಿ ಮಂಗಳವಾರ ಕೋವಿಡ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ತಹಶೀಲ್ದಾರರು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಪೊಲೀಸ್ ಅಧಿಕಾರಿಗಳ , ಕಾರ್ಯನಿರ್ವಹಣಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿಗಳು ಮಾತನಾಡಿದರು.
ತಾಲೂಕಾವಾರು ತಂಡಗಳನ್ನು ರಚಿಸಿಕೊಂಡು ಸೋಂಕು ನಿಯಂತ್ರಣದ ಬಗ್ಗೆ ನಿಗಾ ವಹಿಸಬೇಕು. ಜನ ಸಾಂದ್ರತೆ ಇರುವ ಸ್ಥಳಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಮಾರುಕಟ್ಟೆಗಳಲ್ಲಿ ಕೋವಿಡ್ ನಿಯಮ ಉಲ್ಲಂಘಿಸುವವರ ಮೇಲೆ ಪ್ರಕರಣ ದಾಖಲಿಸಿ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.
ತಾಲೂಕಾ ಮಟ್ಟದಲ್ಲಿ ರಚಿಸುವ ತಂಡದಲ್ಲಿ ತಹಶೀಲ್ದಾರರು, ಇ.ಓ, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಹಾಗೂ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ತಂಡ ರಚಿಸಿ ಕಾರ್ಯಾಚರಣೆ ಕೈಗೊಳ್ಳಬೇಕು. ಈ ಕಾರ್ಯದಲ್ಲಿ ನಿಧಾನ ಗತಿಯನ್ನು ಸಹಿಸಲಾಗುವುದಿಲ್ಲವೆಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಕೋವಿಡ್ ಕಾರ್ಯನಿರ್ವಹಣೆಯಲ್ಲಿ ನಿಷ್ಕಾಳಜಿ ತೋರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಕಳೆದ ಸಾಲಿನಲ್ಲಿ ಜಿಲ್ಲಾದ್ಯಂತ ಕೋವಿಡ್ ಸೋಂಕು ನಿಯಂತ್ರಣಕ್ಕೆ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿರುತ್ತೀರಿ. ಅದೇ ರೀತಿ ಕೋವಿಡ್ ಸೋಂಕಿನ 2 ನೇ ಅಲೆಯ ನಿಯಂತ್ರಣದಲ್ಲಿಯೂ ಅಧಿಕಾರಿಗಳು ಬದ್ಧತೆಯಿಂದ ಕರ್ತವ್ಯ ನಿಷ್ಟೆ ತೋರುವಂತೆ ಸೂಚಿಸಿದರು. ಜಿಲ್ಲಾದ್ಯಂತ ಜಾತ್ರೆ ಉತ್ಸವಗಳನ್ನು ನಿಷೇಧಿಸಲಾಗಿದೆ. ಒಂದು ವೇಳೆ ಜಾತ್ರೆ ಉತ್ಸವಗಳು ನಡೆದಲ್ಲಿ ಆಯೋಜಕರ ಮೇಲೆ ಪ್ರಕರಣ ದಾಖಲಿಸಿ ದಂಡ ವಿಧಿಸುವಂತೆ ತಿಳಿಸಿದರು.
ಮದುವೆ ಸಮಾರಂಭ, ಜನ್ಮದಿನಾಚರಣೆ, ಅಂತ್ಯಕ್ರಿಯೆ ನಡೆಸಲು ನಿಯಮಾನುಸಾರ ಜನಸಂಖ್ಯೆ ಮಿತಿಗೊಳಿಸಿ ಅವಕಾಶ ಒದಗಿಸಲಾಗಿದೆ. ಸರ್ಕಾರ ನಿಗದಿಗೊಳಿಸಿದ ಜನ ಮಿತಿಗಿಂತ ಅಧಿಕ ಜನ ಸೇರಿದಲ್ಲಿ ಪ್ರಕರಣ ದಾಖಲಿಸಿ ದಂಡ ವಿಧಿಸುವುದು ಅನಿವಾರ್ಯ ಎಂದರು.
ವ್ಯಾಪಾರಸ್ಥರು ವ್ಯವಹರಿಸುವಾಗ ತಪ್ಪದೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಬೇಕು. ಅಲ್ಲದೇ ಅಂಗಡಿಯ ಮುಂಬಾಗಿಲಿಗೆ ಮಾಸ್ಕ್ ಧರಿಸುವುದು ಕಡ್ಡಾಯವೆಂಬ ಸೂಚನಾಫಲಕ ಅಳವಡಿಸಿ ವ್ಯವಹರಿಸಬೇಕು. ಸಂಕೀರ್ಣ, ಮಾರ್ಟ್ ಹಾಗೂ ಮಾರುಕಟ್ಟೆ ವ್ಯಾಪಾರಸ್ಥರು ನಿಯಮ ಉಲ್ಲಂಘನೆ ಕಂಡು ಬಂದಲ್ಲಿ ಶಿಕ್ಷೆಗೆ ಒಳಪಡಿಸಬೇಕು. ಈ ಎಲ್ಲ ಕ್ರಮಗಳನ್ನು ನಿಯೋಜಿತ ಅಧಿಕಾರಿಗಳು ಕಡ್ಡಾಯವಾಗಿ ಪಾಲನೆ ಮಾಡುವುದರೊಂದಿಗೆ ಸೋಂಕು ನಿಯಂತ್ರಣಕ್ಕೆ ಶ್ರಮಿಸಬೇಕೆಂದು ಸೂಚಿಸಿದರು.
ಜಿಲ್ಲಾ ಪೊಲೀಸವರಿಷ್ಟಾಧಿಕಾರಿ ಯತೀಶ್ ಎನ್ ಮಾತನಾಡಿ, ತಾಲೂಕಾವಾರ ತಹಶೀಲ್ದಾರರು ಮದುವೆ ಸಮಾರಂಭಗಳಿಗೆ ಪರವಾನಿಗೆ ನೀಡಿದಲ್ಲಿ ಮಾಹಿತಿಯನ್ನು ಸಂಬಂಧಿಸಿದ ವ್ಯಾಪ್ತಿಯ ಪೊಲೀಸ್ ಠಾಣೆಗೆ ನೀಡಬೇಕು. ಮದುವೆ ಸಮಾರಂಭಗಳು ನಡೆಯುವ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಕೋವಿಡ್ ನಿಯಮಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಅಲ್ಲದೇ ಸರ್ಕಾರಿ ನೌಕರರು ಹಾಗೂ ಪೊಲೀಸ್ ಅಧಿಕಾರಿಗಳು ಕಡ್ಡಾಯವಾಗಿ ನಿಯಮಾನುಸಾರ ಮಾಸ್ಕ್ ಧರಿಸಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು.
ಅಪರಜಿಲ್ಲಾಧಿಕಾರಿ ಸತೀಶಕುಮಾರ್ ಎಂ ಮಾತನಾಡಿ, ಪ್ರತಿ ತಾಲೂಕಿಗೆ ಕೋವಿಡ್ ಸೋಂಕು ನಿಯಮ ಮಾರ್ಗಸೂಚಿಗಳ ಪಾಲನೆಗಾಗಿ ತಲಾ 5 ಕಾರ್ಯಪಡೆ ತಂಡಗಳನ್ನು ರಚಿಸಿ ಕಾರ್ಯಾಚರಣೆ ಮಾಡಬೇಕು. ಪ್ರತಿದಿನ ಸಾಯಂಕಾಲ ಜಿಲ್ಲಾಡಳಿತಕ್ಕೆ ವಹಿಸಿದ ಕ್ರಮದ ವರದಿ ನೀಡಬೇಕು ಎಂದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ನಗರಸಭೆ ಪೌರಾಯುಕ್ತ ರಮೇಶ ಜಾಧವ, ತಹಶೀಲ್ದಾರರು, ತಾ.ಪಂ.ಕಾರ್ಯನಿರ್ವಹಣಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಪೊಲೀಸ್ ಇಲಾಖೆಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಕಚೇರಿಯ ಶಿರಸ್ತೇದಾರ ರೇವಣಕರ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ಎಪ್ರಿಲ್ 19 ಸೋಮವಾರ ಜಿಲ್ಲೆಯಲ್ಲಿ ಬರೋಬ್ಬರಿ 70 ಜನರಿಗೆ ಸೋಂಕು ತಗುಲಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ಗದಗ ನಗರದಲ್ಲಿಯೇ ಸೋಂಕಿತರ ಸಂಖ್ಯೆಯಲ್ಲಿ ಹಾಫ್ ಸೆಂಚುರಿ ಬಾರಿಸಿದ್ದು, 51 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮುಂಡರಗಿಯ 08, ನರಗುಂದದ 02, ರೋಣ ತಾಲೂಕಿನಲ್ಲಿ-05, ಹಾಗೂ ಶಿರಹಟ್ಟಿ ತಾಲೂಕಿನ-04 ಜನರಿಗೆ ಸೋಂಕು ತಗುಲಿದೆ.
ಸೋಮವಾರ 70 ಜನರಿಗೆ ಸೋಂಕು ತಗುಲುವ ಮೂಲಕ ಗದಗ ಜಿಲ್ಲೆಯಲ್ಲಿ ಇದುವರೆಗೂ 11659 ಪಾಸಿಟಿವ್ ಪ್ರಕರಣಗಳು ದೃಢಪಟ್ಟಂತಾಗಿದೆ.
ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ ನಿಂದ 141 ಜನರು ಮೃತಪಟ್ಟಿದ್ದಾರೆ. ಇಂದು 19 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದು, ಒಟ್ಟು ಇದುವರೆಗೂ 11245 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ 273 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ 162 ಜನರ ವರದಿ ಬರಲು ಬಾಕಿ ಇದ್ದು, ಇದುವರೆಗೂ ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ 321129 ಮಾದರಿಗಳಲ್ಲಿ 309308 ಮಾದರಿಗಳು ನಕಾರಾತ್ಮಕವಾಗಿವೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮದುವೆ ಸಮಾರಂಭಗಳಿಗೆ ಸರ್ಕಾರ ನಿಗದಿಪಡಿಸಿದ ಸಂಖ್ಯೆಗಿಂತ ಅಧಿಕ ಜನ ಸೇರಿದರೆ ವಧು-ವರ, ಪಾಲಕರು ಮತ್ತು ಕಲ್ಯಾಣ ಮಂಟಪಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಹಸೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ಹೇಳಿದರು.
ಗದಗ ನಗರದ ತಹಶೀಲ್ದಾರ್ ಕಚೇರಿಯಲ್ಲಿ ಜರುಗಿದ ತಾಲೂಕಿನ ಕಲ್ಯಾಣ ಮಂಟಪ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮದುವೆ ಸಮಾರಂಭಗಳಿಗೆ ಪೂರ್ವಾನುಮತಿ ಪಡೆದು ನಿಯಮಾನುಸಾರ ಅವಕಾಶವಿರುವಂತೆ ತೆರೆದ ಪ್ರದೇಶಗಳಲ್ಲಿ 200 ಜನ ಹಾಗೂ ಸಭಾಂಗಣ ಅಥವಾ ಒಳಾಂಗಣಗಳಲ್ಲಿ 100 ಜನರಿಗೆ ಮೀರದಂತೆ ಮಾತ್ರ ಜನರು ಭಾಗವಹಿಸಬಹುದು. ಕೋವಿಡ್ 2ನೇ ಅಲೆಯ ನಿಯಂತ್ರಣಕ್ಕೆ ಸರ್ಕಾರ ಜಾರಿಗೊಳಿಸಿರುವ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಎಲ್ಲರೂ ಪಾಲಿಸಬೇಕು. ಜಾತ್ರೆ, ಧಾರ್ಮಿಕ ಆಚರಣೆಗಳಿಗೆ ಅವಕಾಶವಿಲ್ಲ ಎಂದರು.
ಸರ್ಕಾರದ ಮಾರ್ಗಸೂಚಿಗಳನ್ನು ಪ್ರಚುರಪಡಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ. ನಿಯಮ ಪಾಲಿಸದವರಿಗೆ ದಂಡ ವಿಧಿಸುವ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಇದೆಲ್ಲಕ್ಕಿಂತ ಮುಖ್ಯ ಸಾರ್ವಜನಿಕರು ಕೋವಿಡ್ ಸಾಂಕ್ರಾಮಿಕ ರೋಗದ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಸರ್ಕಾರ ನೀಡಿರುವ ಆರೋಗ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸಿ ಸೋಂಕು ನಿಯಂತ್ರಣ ಮಾಡುವಲ್ಲಿ ಸಹಕಾರ ನೀಡಬೇಕು.
ಕೋವಿಡ್ ಸೋಂಕಿನ 2ನೇ ಅಲೆಯು ಹೆಚ್ಚು ಬೇಗವಾಗಿ ಒಬ್ಬರಿಂದ ಇನ್ನೊಬ್ಬರಿಗೆ ತಗಲುತ್ತಿದೆ. ಸಾರ್ವಜನಿಕರು ಉದಾಸೀನತೆ ಹಾಗೂ ನಿರ್ಲಕ್ಷ್ಯ ತೋರದೇ ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು ಮತ್ತು ಕನಿಷ್ಠ ಸಾಮಾಜಿಕ ಅಂತರ ಕಾಪಾಡಬೇಕು. ಆಗಾಗ ಸೋಪು, ಸ್ಯಾನಿಟೈಸರ್‍ನಿಂದ ಕೈಗಳನ್ನು ತೊಳೆಯಬೇಕು. ಇವುಗಳ ಪಾಲನೆಯಿಂದ ಮಾತ್ರ ತಮ್ಮ ಹಾಗೂ ಕುಟುಂಬದ ಆರೋಗ್ಯವನ್ನು ಕಾಪಾಡಬಹುದಾಗಿದೆ. ಅಲ್ಲದೇ ಕೋವಿಡ್ ವೈರಸ್‍ನಿಂದ ಸುರಕ್ಷಿತವಾಗಿ ಇದ್ದು, ಜೀವಹಾನಿ ತಡೆಯಬಹುದಾಗಿದೆ ಎಂದು ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ತಿಳಿಸಿದರು.
ಶಹರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ (ಸಿ.ಪಿ.ಐ) ಪಿ.ವಿ. ಸಾಲಿಮಠ ಮಾತನಾಡಿ, ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದಂತೆ ರಾಜ್ಯ ಸರ್ಕಾರವು ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಹೊರಡಿಸಿರುವ ಆದೇಶಕ್ಕನುಗುಣವಾಗಿ ಮಾತ್ರ ಸಾಮಾಜಿಕ ಆಚರಣೆಗಳು, ಸಮಾರಂಭಗಳು, ಮದುವೆ, ಇತರೆ ಸಮಾರಂಭ ಏರ್ಪಡಿಸಲು ಷರತ್ತು ಬದ್ಧ ಅವಕಾಶವಿದೆ. ನಿಯಮಗಳನ್ನು ಉಲ್ಲಂಘಿಸಿದರೆ ಪ್ರಕರಣ ದಾಖಲಿಸಿಕೊಂಡು, ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 51 ರಿಂದ 60 ಹಾಗೂ ಭಾರತೀಯ ದಂಡ ಸಂಹಿತೆ ಮತ್ತು ಅನ್ವಯವಾಗಬಹುದಾದ ಇತರ ಕಾನೂನು ಪ್ರಕಾರ ಕ್ರಮ ವಹಿಸಲಾಗುವುದು. ಜನತೆ ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದರು.
ಸಭೆಯಲ್ಲಿ ತಾಲೂಕಿನ ಇಲಾಖೆ ಅಧಿಕಾರಿಗಳು, ಪೊಲೀಸ ಇಲಾಖೆಯ ಗ್ರಾಮೀಣ ಠಾಣೆ ಹಾಗೂ ಬೆಟಗೇರಿ ಠಾಣೆಯ ವೃತ್ತ ನಿರೀಕ್ಷಕರು, ಕಲ್ಯಾಣ ಮಂಟಪದ ಮಾಲೀಕರು, ವ್ಯವಸ್ಥಾಪಕರು ಹಾಜರಿದ್ದರು.
ಎಪ್ರಿಲ್ 18 ಭಾನುವಾರ ಜಿಲ್ಲೆಯಲ್ಲಿ 48 ಜನರಲ್ಲಿ ಸೋಂಕು ಪತ್ತೆಯಾಗಿದೆ. ಗದಗ ನಗರದಲ್ಲಿಯೇ ಅತಿ ಹೆಚ್ಚು ಅಂದರೆ 34 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ನಗರ ಪ್ರದೇಶದಲ್ಲಿ ಸೋಂಕು ತನ್ನ ಅಟಾಟೋಪ ಮುಂದುವರೆಸಿದೆ. ಮುಂಡರಗಿಯ 00, ನರಗುಂದದ 03, ರೋಣ ತಾಲೂಕಿನಲ್ಲಿ-06, ಹಾಗೂ ಶಿರಹಟ್ಟಿ ತಾಲೂಕಿನ-05 ಜನರಿಗೆ ಸೋಂಕು ತಗುಲಿದೆ.
ಭಾನುವಾರ 48 ಜನರಿಗೆ ಸೋಂಕು ತಗುಲುವ ಮೂಲಕ ಗದಗ ಜಿಲ್ಲೆಯಲ್ಲಿ ಇದುವರೆಗೂ 11589 ಪಾಸಿಟಿವ್ ಪ್ರಕರಣಗಳು ದೃಢಪಟ್ಟಂತಾಗಿದೆ.
ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ ನಿಂದ 141 ಜನರು ಮೃತಪಟ್ಟಿದ್ದಾರೆ. ಇಂದು 19 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದು, ಒಟ್ಟು ಇದುವರೆಗೂ 11226 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ 222 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ 321 ಜನರ ವರದಿ ಬರಲು ಬಾಕಿ ಇದ್ದು, ಇದುವರೆಗೂ ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ 320116 ಮಾದರಿಗಳಲ್ಲಿ 308206 ಮಾದರಿಗಳು ನಕಾರಾತ್ಮಕವಾಗಿವೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಐಪಿಎಲ್ ಸುರುವಾಗಿದ್ದೇ ತಡ ಐಪಿಎಲ್ ತಂಡಗಳ ಸೋಲು ಗೆಲುವಿನ ಕುರಿತು ಜಿಲ್ಲೆಯಲ್ಲಿ ಬೆಟ್ಟಿಂಗ್ ಜೋರಾಗಿದೆ. ಅದರಲ್ಲೂ ಗದಗ ನಗರದಲ್ಲಿ ಹೇಳೂರು ಕೇಳೋರು ಇಲ್ಲದಂತೆ ಆಗಿದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ.
ನಿನ್ನೆ ನಗರದ ಖಾನತೋಟದ ಅಂಗಡಿಯೊಂದರ ಮುಂದೆ ಎಸ್ ಆರ್ ಎಚ್ ಹಾಗೂ ಮುಂಬೈ ಇಂಡಿಯನ್ಸ್ ಮದ್ಯ ನಡೆದ ಕ್ರಿಕೆಟ್ ಪಂದ್ಯದ ಮೊದಲೇ ಅದರ ಸ್ಕೋರು ಹಾಗೂ ಫಲಿತಾಂಶದ ಮೇಲೆ ಬೆಟ್ಟಿಂಗ್ ನಲ್ಲಿ ತೊಡಗಿದ್ದವರ ಮೇಲೆ ನಗರ ಠಾಣೆಯ ಪಿಎಸ್ಐ ಪ್ರಕಾಶ್ ಡಿ ಹಾಗೂ ಸಿಬ್ಬಂದಿ ದಾಳಿ ಬಂಧಿಸಿದ್ದಾರೆ. ಬಂಧಿತರನ್ನು ವ್ಯಾಪಾರಸ್ಥರಾದ ಸುದರ್ಶನ ಶಂಕರ ಗಾಂಜಿ, ವಿನಾಯಕ ಬಾಸ್ಕರಸಾ ಹಬೀಬ, ಕಿರಣ ರವಿ ಬದಿ, ಮನೋಜ್ ಮಂಜುನಾಥ್ ಕಬಾಡಿ, ಪುನೀತ್ ಚಂದುಲಾಲ್ ಭಾಂಡಗೆ ಎನ್ನಲಾಗಿದೆ.
ಬಂಧಿತರಿಂದ ಕೇವಲ 520 ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಸಾಕ್ಷಿ ವಿಶೇಷ ಕೊಪ್ಪಳ: ಏಪ್ರಿಲ್ 11ರಂದು ನಡೆಯಬೇಕಿದ್ದ ಕೆ-ಸೆಟ್ ಪರೀಕ್ಷೆಯನ್ನು ಅನಿವಾರ್ಯ ಎನ್ನುವ ಕಾರಣ ನೀಡಿ ಮುಂದೂಡಲಾಗಿತ್ತು. ಬಹುಶಃ ಪರೀಕ್ಷೆ ಇನ್ನೊಂದೆರಡು ತಿಂಗಳು ಮುಂದಕ್ಕೆ ಎಂದು ಊಹಿಸಿದ್ದ ಪರೀಕ್ಷಾರ್ಥಿಗಳ ಲೆಕ್ಕಾಚಾರ ತಲೆ ಕೆಳಗಾಗಿತ್ತು. ಏಪ್ರಿಲ್ 25ರಂದು ಕೆ-ಸೆಟ್ ಪರೀಕ್ಷೆ ಮರುನಿಗದಿಯಾಗಿದ್ದು, ಇದೀಗ ಆತಂಕ ತಂದೊಡ್ಡಿದೆ.
ಕೆ-ಸೆಟ್ ಪರೀಕ್ಷೆ ಬಗ್ಗೆ ಇರುವ ಆತಂಕ ಅಧ್ಯಯನಕ್ಕೆ ಸಂಬಂಧಿಸಿದ್ದಲ್ಲ. ಬದಲಾಗಿ ಜೀವಕ್ಕೆ ಸಂಬಂಧಿಸಿದ್ದು. ಈಗಾಗಲೇ ದಿನೇ ದಿನೇ ಕೊರೋನಾ ಪ್ರಕರಣಗಳ ಸಂಖ್ಯೆ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಹೆಚ್ಚುತ್ತಲೇ ಇವೆ. ಆಸ್ಪತ್ರೆ, ಆಕ್ಸಿಜನ್ ಕೊರತೆ ಕುರಿತು ಅಲ್ಲಲ್ಲಿ ವರದಿಯಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇಂಥ ಸಂದರ್ಭದಲ್ಲಿ ಮತ್ತೇ ಪರೀಕ್ಷೆ ನಿಗದಿ ಮಾಡಿರುವುದು ತುಘಲಕ್ ದರ್ಬಾರ್ ನೆನಪಿಸುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಪರೀಕ್ಷಾರ್ಥಿಗಳು ಆಕ್ಷೇಪಿಸಿದ್ದಾರೆ.
ಇಡೀ ರಾಜ್ಯದಲ್ಲಿ 11 ಕೇಂದ್ರಗಳಲ್ಲಿ ಮಾತ್ರ ಕೆ-ಸೆಟ್ ಪರೀಕ್ಷೆಗಳು ನಡೆಯುವುದರಿಂದ ಪರೀಕ್ಷಾರ್ಥಿಗಳಿಗೆ ತೊಂದರೆ ಕಟ್ಟಿಟ್ಟ ಬುತ್ತಿ. ಒಂದು ಕಡೆ ಕೊರೋನಾ ಕಾಟವಾದರೆ ಮತ್ತೊಂದೆಡೆ ಬಸ್ಗಳ ತೊಂದರೆ. ಹಾಗೊಂದು ವೇಳೆ ಪರೀಕ್ಷೆ ನಿಗದಿಯಾದರೆ ಸಹಸ್ರಾರು ರೂಪಾಯಿ ವ್ಯಯಿಸಿ ಖಾಸಗಿ ವಾಹನಗಳ ಮೂಲಕ ಪರೀಕ್ಷಾ ಕೇಂದ್ರಕ್ಕೆ ಬರಬೇಕು.
ಈ ಬಾರಿ ಸುಮಾರು 79 ಸಾವಿರ ಅಭ್ಯರ್ಥಿಗಳು ವಿವಿಧ ವಿಷಯಗಳಲ್ಲಿ ಕೆ-ಸೆಟ್ ಬರೆಯಲಿದ್ದು ಗ್ರಾಮೀಣ ಭಾಗದ ಸುಮಾರು 40 ಸಾವಿರ ಪರೀಕ್ಷಾರ್ಥಿಗಳು ಬಸ್ಗಳಿಲ್ಲದೇ ಖಾಸಗಿ ವಾಹನಗಳಲ್ಲಿ ಪರೀಕ್ಷಾ ಕೇಂದ್ರಕ್ಕೆ ಬರುವ ಅನಿವಾರ್ಯತೆ ಬಂದೊದಗಿದೆ. ಜೊತೆಗೆ ಪರೀಕ್ಷಾ ಕೇಂದ್ರಗಳು ಕೆಲ ಗ್ರಾಮೀಣ ಭಾಗಗಳಿಗೆ ದೂರ ಇರುವುದರಿಂದ ಒಂದು ದಿನ ಮುಂಚಿತವಾಗಿ ಪರೀಕ್ಷಾ ಕೇಂದ್ರ ಇರುವ ಊರುಗಳಿಗೆ ತಲುಪಬೇಕಿದೆ. ಊರು ತಲುಪಿದ ಮೇಲೆ ಉಳಿದುಕೊಳ್ಳಲು ವ್ಯವಸ್ಥೆಯ ಖಚಿತತೆ ಇಲ್ಲ. ಏಕೆಂದರೆ ಬೆಂಗಳೂರು ಸೇರಿದಂತೆ ಹಲವೆಡೆ ಹೊಟೇಲ್ಗಳಲ್ಲೂ ಸಹ ಕೊರೋನಾ ರೋಗಿಗಳಿಗಾಗಿ ಬೆಡ್ ಹಾಕಲಾಗಿದೆ. ವಸತಿ ಗೃಹಗಳು ಬುಕ್ ಆಗಿವೆ. ಹೀಗಾದರೆ ಪರೀಕ್ಷಾರ್ಥಿಗಳು ಎಲ್ಲಿ ಉಳಿದುಕೊಳ್ಳಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಕೊರೋನಾ ಬಂದರೆ ಏನು ಗತಿ?
ಕೆ-ಸೆಟ್ ಬರೆಯಲಿರುವ ಪರೀಕ್ಷಾರ್ಥಿಗಳಿಗೆ ಭವಿಷ್ಯ ಮುಖ್ಯ ನಿಜ, ಆದರೆ ಜೀವಕ್ಕಿಂತ ದೊಡ್ಡದೇನಿಲ್ಲ. ಬದುಕಿದ್ದರೆ ತಾನೇ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಪರೀಕ್ಷೆಯ ಕಾರಣಕ್ಕಾಗಿ ಬಂದು ಕೊರೋನಾ ಅಂಟಿಕೊಂಡರೆ ಮುಂದೇನು ಗತಿ? ಎಂಬ ಆತಂಕ ಪರೀಕ್ಷಾರ್ಥಿಗಳನ್ನು ಕಾಡತೊಡಗಿದೆ.
ತಡವಾದರೂ ಅಚ್ಚುಕಟ್ಟಾಗಿ ನಡೆಯಲಿ: ಕಳೆದ ಸಲವೂ ಕೆ-ಸೆಟ್ ಪರೀಕ್ಷೆ ಹೀಗೇ ಆಗಿತ್ತು. ಏಪ್ರಿಲ್ನಲ್ಲಿ ನಡೆಯಬೇಕಿದ್ದ ಪರೀಕ್ಷೆ ಕೊರೋನಾ ಹಾವಳಿ ಒಂದು ಹಂತಕ್ಕೆ ತಹಬದಿಗೆ ಬಂದ ಮೇಲೆ ನಡೆದಿತ್ತು. ಈ ಸಲವೂ ಕಳೆದ ವರ್ಷದಂತೆ ಆಗಲಿ. ಕೆ-ಸೆಟ್ ಕೇಂದ್ರವು ಪರೀಕ್ಷಾರ್ಥಿಗಳ ಬದುಕಿನ ಜೊತೆ ಚೆಲ್ಲಾಟವಾಡದಿರಲಿ. ಏಪ್ರಿಲ್ 25ರ ಬದಲು ಡಿಸೆಂಬರ್ನಲ್ಲೇ ಪರೀಕ್ಷೆ ನಡೆಸುವುದು ಸೂಕ್ತ
ಎಪ್ರಿಲ್ 17 ಶನಿವಾರ ಜಿಲ್ಲೆಯಲ್ಲಿ 37 ಜನರಲ್ಲಿ ಸೋಂಕು ಪತ್ತೆಯಾಗಿದೆ. ಗದಗ ನಗರದಲ್ಲಿಯೇ ಅತಿ ಹೆಚ್ಚು ಅಂದರೆ 23 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ನಗರ ಪ್ರದೇಶದಲ್ಲಿ ಸೋಂಕು ತನ್ನ ತೀವ್ರತೆ ಹೆಚ್ಚು ಮಾಡಿದೆ. ಮುಂಡರಗಿಯ 02, ನರಗುಂದದ 03, ರೋಣ ತಾಲೂಕಿನಲ್ಲಿ-04, ಹಾಗೂ ಶಿರಹಟ್ಟಿ ತಾಲೂಕಿನ-05 ಜನರಿಗೆ ಸೋಂಕು ತಗುಲಿದೆ.
ಶನಿವಾರ 37 ಜನರಿಗೆ ಸೋಂಕು ತಗುಲುವ ಮೂಲಕ ಗದಗ ಜಿಲ್ಲೆಯಲ್ಲಿ ಇದುವರೆಗೂ 11541 ಪಾಸಿಟಿವ್ ಪ್ರಕರಣಗಳು ದೃಢಪಟ್ಟಂತಾಗಿದೆ.
ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ ನಿಂದ 141 ಜನರು ಮೃತಪಟ್ಟಿದ್ದಾರೆ. ಇಂದು 19 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದು, ಒಟ್ಟು ಇದುವರೆಗೂ 11207 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ 193 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ 180 ಜನರ ವರದಿ ಬರಲು ಬಾಕಿ ಇದ್ದು, ಇದುವರೆಗೂ ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ 318286 ಮಾದರಿಗಳಲ್ಲಿ 306565 ಮಾದರಿಗಳು ನಕಾರಾತ್ಮಕವಾಗಿವೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜಿಲ್ಲಾಮಟ್ಟದ ಅಧಿಕಾರಿಗಳು ವಾರದಲ್ಲಿ ಎರಡು ದಿನಗಳು ಮಾತ್ರ ಕಚೇರಿಯಲ್ಲಿ ಇರುತ್ತಾರೆ. ಇನ್ನುಳಿದ ದಿನ ಊರಿಗೆ ಹೋಗಿ ಬಡ್ಡಿ ವ್ಯವಹಾರ ಮಾಡ್ತಾರೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಗರಂ ಆದರು.
ಕೊಪ್ಪಳದ ಕಿಮ್ಸ್‌ನಲ್ಲಿ ಶನಿವಾರ ನಡೆದ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಿದ ಅವರು, ಜಿಲ್ಲಾಮಟ್ಟದ ಅಧಿಕಾರಿಗಳ ಬೇಜವಾಬ್ದಾರಿತನದ ಉತ್ತರದಿಂದ ಕೆಂಡಾಮಂಡಲರಾಗಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಮಟ್ಟದ ಅಧಿಕಾರಿಗಳು ಕಚೇರಿಯಲ್ಲಿ ಇರುವುದೇ ಇಲ್ಲ. ಇನ್ನು ಮುಂದೆ ಅವರಿಗೂ ಬಯೋಮೆಟ್ರಿಕ್ ವ್ಯವಸ್ಥೆ ಮಾಡಬೇಕು. ಅಂದಾಗ ಮಾತ್ರ ಜಿಲ್ಲಾಮಟ್ಟದ ಅಧಿಕಾರಿಗಳು ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಾದರೂ ಕಚೇರಿಯಲ್ಲಿ ಇರುತ್ತಾರೆ ಎಂದು ಸಚಿವರು ಸಲಹೆ ನೀಡಿದರು.
ಅಂಬೇಡ್ಕರ್ ನಿಗಮದ ಅಧಿಕಾರಿ ಕಳೆದ ಕೆಡಿಪಿ ಸಭೆಯಲ್ಲಿ ಕಾಮಗಾರಿಯೊಂದರ ಕುರಿತು ಇಂದಿನ ಸಭೆಯಲ್ಲೂ ಮಾಹಿತಿ ನೀಡುವಲ್ಲಿ ತಡಬಡಾಯಿಸಿದ್ದರಿಂದ ಸಚಿವರು ಜಿಪಂ ಸಿಇಓ ಅವರನ್ನು ತರಾಟೆಗೆ ತೆಗೆದುಕೊಂಡರು. ಜಿಪಂ ಸಿಇಓ ಅವರು ಅಂಬೇಡ್ಕರ್ ನಿಗಮದ ಅಧಿಕಾರಿಗೆ ಡೆಡ್‌ಲೈನ್ ನೀಡಿದರೂ ಉದಾಸೀನ ಮಾಡಿರುವುದಾಗಿ ದೂರಿದರು. ಹಾಗಾಗಿ ಅಂಬೇಡ್ಕರ್ ನಿಗಮದ ಅಧಿಕಾರಿಯನ್ನು ಅಮಾನತುಗೊಳಿಸುವ, ಅಧಿಕಾರಿಯ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಯೋಚಿಸಿ ಎಂದು ಸಚಿವ ಬಿ.ಸಿ.ಪಾಟೀಲರು ತಿಳಿಸಿದರು.
ಭೂ ಸೇನಾ ನಿಗಮದಡಿ ಯಲಬುರ್ಗಾ ಭಾಗದಲ್ಲಿ ಸುಮಾರು 63 ಕೋಟಿ ರೂಪಾಯಿ ಅವ್ಯವಹಾರದ ದೂರುಗಳಿವೆ. ಜೊತೆಗೆ ಭೂಸೇನೆಯ ಅಧಿಕಾರಿಗಳೇ ಅವ್ಯವಹಾರದ ತನಿಖೆ ನಡೆಸಿದಾಗ ಸುಮಾರು 7-8 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂದು ವರದಿ ನೀಡಿದ್ದಾರೆ ಎಂದು ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ದೂರಿದರು.
ಇದಕ್ಕೆ ಉತ್ತರಿಸಿದ ಭೂಸೇನಾ ನಿಗಮದ ಕಾರ್ಯನಿರ್ವಾಹಕ ಅಭಿಯಂತರ ಚಿಂಚೋಳಿಕರ್, ಅದು ಈ ಹಿಂದೆ ಇದ್ದ ಅಧಿಕಾರಿಗಳಿಂದ ಆಗಿದ್ದು, ಅದನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ ಎಂದರು.
ಭೂ ಸೇನಾ ನಿಗಮದವರು ಅನುದಾನ ಬಂದಾಗ ಮಾತ್ರ ಕಾಮಗಾರಿ ನಡೆಸುತ್ತಾರೆ. ಅನುದಾನ ಮುಗಿದ ಬಳಿಕ ಕಾಮಗಾರಿಯನ್ನು ಸ್ಥಗಿತಗೊಳಿಸುತ್ತಾರೆ. ಮತ್ತೇ ಅನುದಾನ ಬಂದ ಮೇಲೆ ಕಾಮಗಾರಿ ಶುರು ಮಾಡೊ ಪರಿಪಾಠ ರೂಢಿಸಿಕೊಂಡಿದ್ದಾರೆ. ಮೊದಲು ಇದನ್ನು ಕೈಬಿಡಿ. ಕಾಮಗಾರಿ ಪೂರ್ಣಗೊಳಿಸಿ ಆನಂತರ ಸರಕಾರದ ಅನುದಾನವನ್ನು ಕ್ಲೇಮ್ ಮಾಡಿ ಎಂದು ಸಚಿವ ಬಿ.ಸಿ.ಪಾಟೀಲ ಹೇಳಿದರು.
ಸಭೆಯಲ್ಲಿ ಶಾಸಕರಾದ ಬಸವರಾಜ ದಢೇಸೂಗೂರು, ಪರಣ್ಣ ಮುನವಳ್ಳಿ, ರಾಘವೇಂದ್ರ ಹಿಟ್ನಾಳ, ಅಮರೇಗೌಡ ಬಯ್ಯಾಪುರ, ಸಂಸದ ಕರಡಿ ಸಂಗಣ್ಣ, ಜಿಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಜಿಪಂ ಉಪಾಧ್ಯಕ್ಷ ಬೀನಾ ಬೇಗಂ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಪಂ ಸಿಇಓ ರಘುನಂದನ್ ಮೂರ್ತಿ, ಎಸ್‌ಪಿ ಟಿ.ಶ್ರೀಧರ್, ಎಸಿ ನಾರಾಯಣರಡ್ಡಿ ಕನಕರಡ್ಡಿ, ಎಡಿಸಿ ಎಂ.ಪಿ. ಮಾರುತಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.