Home Blog Page 3050

ಸಿಡಿಲು ಬಡಿದು ಮೂವರು ದುರ್ಮರಣ; ನಾಲ್ವರು ಗಂಭೀರ ಗಾಯ

ವಿಜಯಸಾಕ್ಷಿ ಸುದ್ದಿ, ಗದಗ

ಸಿಡಿಲು ಬಡಿದು ಮೂವರು ಸಾವನ್ನಪ್ಪಿ, ನಾಲ್ವರು ಗಾಯಗೊಂಡ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ನಡೆದಿದೆ.

ಹೊಲದಲ್ಲಿ ಕೆಲಸ ಮಾಡುವ ವೇಳೆ ಈ ದುರ್ಘಟನೆ ನಡೆದಿದ್ದು, ಕುಮಾರ ಮಾದರ(25), ಶರಣಪ್ಪ ಅಡವಿ(35) ಹಾಗೂ ಮಾರುತಿ ಗೋಶೆಲ್ಲನವರ (48)ಮೃತಪಟ್ಟ ದುರ್ಧೈವಿಗಳು.

ಮಳೆ ಬರುವ ವೇಳೆ ಹುಣಸಿ‌ಮರದ ಕೆಳಗೆ ಕುಳಿತಾಗ ಸಿಡಿಲು ಹೊಡೆದಿದೆ.
ಗಾಯಗೊಂಡ ನಾಲ್ವರಲ್ಲಿ ಇಬ್ಬರು ಗದಗ ಜಿಲ್ಲಾಸ್ಪತ್ರೆ, ಇನ್ನಿಬ್ಬರು ಶಿರಹಟ್ಟಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.

ಕುಮಾರ್, ಮತ್ತು ಶರಣಪ್ಪ ಕಡಕೋಳ ಗ್ರಾಮದವರಾಗಿದ್ದು, ಮಾರುತಿ ಗೋಶೆಲ್ಲನವರ ಶಿರಹಟ್ಟಿ ಪಟ್ಟಣದ ನಿವಾಸಿ.

ಶಿರಹಟ್ಟಿ ಸಿಪಿಐ ವಿಕಾಸ್ ಲಮಾಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಶವಗಳನ್ನು ಶಿರಹಟ್ಟಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಗುಡುಗು ಸಹಿತ ಮಳೆ, ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಾದ್ಯಂತ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಗುಡುಗು ಮಿಂಚು ಬಿರುಗಾಳಿ ಸಹಿತ ವರುಣ ಆರ್ಭಟಿಸಿದ್ದಾನೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ತೆಂಗಿನ ಮರ ಹೊತ್ತಿ ಉರಿದಿದೆ.

ಡೋಣಿ ಗ್ರಾಮದ ಹೊರವಯದಲ್ಲಿರುವ ಡಿ ಇ ಪಿ ಶಾಲೆ ಹತಿರ ಮಲ್ಲಪ ಕಡಕೋಳ ಅವರಿಗೆ ಸೇರಿದ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣಹಾನಿ ಸಂಭವಿಸಿಲ್ಲ.

ಆದರೆ ಮರಕ್ಕೆ ಸಿಡಿಲು ಬಡಿಯುತ್ತಿದ್ದಂತೆ ಗ್ರಾಮದಲ್ಲಿ ದೊಡ್ಡದಾದ ಶಬ್ಧ ಕೇಳಿದ ತಕ್ಷಣ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ತೆಂಗಿನ ಮರಕ್ಕೆ ಹೊತ್ತಿದ ಬೆಂಕಿಯನ್ನು ನಂದಿಸಲು ಸ್ಥಳೀಯರು ಹರಸಾಹಸ ಪಟ್ಟರು.

ಮಾಸ್ಕ್ ಹಾಕು‌ ಅಂದಿದ್ದಕ್ಕೆ ಅಧಿಕಾರಿಗಳಿಗೆ ಅವಾಜ್ ಹಾಕಿದ್ನಾ ಯುವಕ..!

ವಿಜಯಸಾಕ್ಷಿ ಸುದ್ದಿ, ಗದಗ

ಮಾಸ್ಕ್ ಹಾಕದೇ ರಸ್ತೆಗಿಳಿದಿದ್ದ ಬೈಕ್ ಸವಾರನೋರ್ವನಿಗೆ ಅಧಿಕಾರಿಗಳು ಮಾಸ್ಕ್ ಹಾಕಿಕೋ ಎಂದಿದ್ದಕ್ಕೆ ಯುವಕ ಅವಾಜ್ ಹಾಕಿದ ಘಟನೆ ನಗರದಲ್ಲಿ ನಡೆದಿದೆ.

ಇಲ್ಲಿನ ಮಹಾತ್ಮ ಗಾಂಧಿ ಸರ್ಕಲ್ ನಲ್ಲಿ ನಗರ ಸಭೆ ಅಧಿಕಾರಿಗಳು ಮಾಸ್ಕ್ ಹಾಕದವರಿಗೆ ದಂಡ ವಿಧಿಸಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಬಂದ ಯುವಕನಿಗೆ ಅಧಿಕಾರಿಗಳು ಮಾಸ್ಕ್ ಹಾಕದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲ ದಂಡ ಕಟ್ಟುವಂತೆ ಹೇಳಿದ್ದಾರೆ. ಆದರೆ ಅಧಿಕಾರಿಗಳು ಯುವಕನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಅಧಿಕಾರಿಗಳ ಮೇಲೆ ಪುಲ್ ಗರಂ ಆಗಿದ್ದಾನೆ. ಅಧಿಕಾರಿಗಳು ಹಾಗೂ ಯುವಕನ ಮಧ್ಯ ವಾಗ್ವಾದ ನಡೆಯುತ್ತಿದ್ದಾಗ ಟ್ರಾಫಿಕ್ ಪೊಲೀಸರು ಮಧ್ಯ ಪ್ರವೇಶಿಸಿ ಯುವಕನಿಗೆ ಬುದ್ದಿ ಹೇಳಿ ಕಳಿಸಿ ಘಟನೆಗೆ ಸುಖಾಂತ್ಯ ಹಾಡಿದರು.

ಅನಗತ್ಯ ಓಡಾಡಿದ್ರೆ ಬೈಕ್ ಸೀಜ್ ಮಾಡ್ತಾರೆ ಪೊಲೀಸರು

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಬೆಟಗೇರಿ ಅವಳಿ ನಗರದಲ್ಲಿ ಇವತ್ತು ಮತ್ತು ನಾಳೆ ಅನಗತ್ಯವಾಗಿ ಓಡಾಡಬೇಡಿ. ಅನಗತ್ಯ ಮನೆಯಿಂದ ಹೊರಗೆ ಬಂದ ನಿಮ್ಮ ವಾಹನ ಸೀಜ್ ಮಾಡ್ತಾರೆ ಪೊಲೀಸರು. ಇದೇ ರೀತಿ ಅನಗತ್ಯ ಓಡಾಡುತ್ತಿರುವವರಿಗೆ ಇವತ್ತು ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಇದನ್ನೂ ಓದಿ ಮಾಸ್ಕ್ ಹಾಕು‌ ಅಂದಿದ್ದಕ್ಕೆ ಅಧಿಕಾರಿಗಳಿಗೆ ಅವಾಜ್ ಹಾಕಿದ್ನಾ ಯುವಕ..!

ನಗರದ ಭೀಷ್ಮಕೆರೆ ಬಳಿಯ ಬನ್ನಿಕಟ್ಟಿ ಕ್ರಾಸ್, ಹಳೇ ಡಿಸಿ ಆಫೀಸ್ ಸರ್ಕಲ್ ಸೇರಿದಂತೆ ಹಲವು ಕಡೆ ವಾಹನ ಸವಾರರನ್ನು ಹಿಡಿದು ಗಾಡಿಗಳನ್ನ ಸೀಜ್ ಮಾಡುತ್ತಿದ್ದಾರೆ. ಈಗಾಗಲೇ ಸುಮಾರು 15ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನ ಸೀಜ್ ಮಾಡಿ ಠಾಣೆಗೆ ಹೊತ್ತೊಯ್ದಿದ್ದಾರೆ.

ಹಳೆಯದೊಂದು ಔಷಧ ಚೀಟಿ ಇಟಗೊಂಡು ಔಷಧ ತರಬೇಕು ಪೊಲೀಸರನ್ನು ಯಾಮಾರಿಸೋಕೆ ಬಂದ್ರೆ ಪೊಲೀಸರು ಸುಮ್ಮನೆ ಬಿಡಲ್ಲ. ಸೀಜ್ ಮಾಡ್ತಾರೆ. ಸರಕಾರದ ನಿಯಮಗಳನ್ನ ಸರಿಯಾಗಿ ಪಾಲಿಸಿ ಅಂತ ಅವರು ಮನವಿ ಮಾಡ್ತಿದ್ದಾರೆ.

ಅನಗತ್ಯ ಓಡಾಡುವ ಕೆಲವು ಜನರಿಂದ ನಿಜಕ್ಕೂ ಔಷಧ ತರಲು ಬರುವ ರೋಗಿಗಳ ಸಂಬಂಧಿಗಳು ಕಷ್ಟ ಅನುಭವಿಸುವಂತಾಗಿದೆ. ಆದರೆ ಔಷಧ ತರಲು ಮಾರ್ಕೆಟ್ ಗೆ ಬಂದ ವ್ಯಕ್ತಿ ಒಬ್ಬ ಪರಿ ಪರಿಯಾಗಿ ಕೇಳಿಕೊಂಡರು ಪೊಲೀಸರು ಆತನ ಬೈಕ್ ನ್ನು ಬಿಡಲಿಲ್ಲ ಎನ್ನಲಾಗಿದೆ.

ವೀಕೆಂಡ್ ಕರ್ಫ್ಯೂ ಬಿಸಿ; ವಾಹನವಿಲ್ಲದೇ ಯುವತಿ ಪರದಾಟ

0

ವಿಜಯಸಾಕ್ಷಿ ಸುದ್ದಿ, ಗದಗ

ಗದಗನಲ್ಲಿ ವೀಕೆಂಡ್ ಲಾಕ್ ಡೌನ್ ಗೆ ವಿಕಲಚೇತನ ಯುವತಿಯೊಬ್ಬಳು ಊರಿಗೆ ತೆರಳಲು ಪರದಾಡಿದ ಘಟನೆ ನಡೆದಿದೆ. ಗದಗನ ಪಂಡಿತ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣದಲ್ಲಿ ಮುಂಜಾನೆಯಿಂದ ತಮ್ಮೂರಿಗೆ ಹೋಗಲು ಪರದಾಟ ನಡೆಸಿದಳು.

ರೈಲು ಮೂಲಕ ಬೆಂಗಳೂರಿನಿಂದ ಗದಗ ನಗರಕ್ಕೆ ಆಗಮಿಸಿದ ಯುವತಿ, ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಶೆಲವಡಿ ಗ್ರಾಮಕ್ಕೆ ತೆರಳಬೇಕಿತ್ತು. ವೀಕೆಂಡ್ ಕರ್ಫ್ಯೂ ಜಾರಿ ಇರುವದಿಂದ ಗದಗ ಬಸ್ ನಿಲ್ದಾಣ ಖಾಲಿ ಖಾಲಿ ಇದೆ. ಕೆಲವು ಮಾರ್ಗಕ್ಕೆ ಹೋಗುವ ಬಸ್ ಗಳ ಮಾತ್ರ ಆರಂಭವಾಗಿವೆ.

ಪ್ರಯಾಣಿಕರ ಕೊರತೆಯಿಂದ ಬೀಕೋ ಎನ್ನುತ್ತಿರುವ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರವೂ ಸ್ಥಗಿತವಾಗಿದೆ. ಹೀಗಾಗಿ ಯುವತಿಗಾಗಿ ಬಸ್ ಓಡಿಸಿದರೆ ನಷ್ಟ ಅನುಭವಿಸಬೇಕಾಗುತ್ತೆ ಅಂತ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದರು.

ಗದಗನ ಗ್ರೇನ್ ಮಾರುಕಟ್ಟೆ ಸಂಪೂರ್ಣ ಸ್ತಬ್ಧ; ಆಹಾರಕ್ಕಾಗಿ ಮೂಕ ಪ್ರಾಣಿಗಳ ಪರದಾಟ

0

ವಿಜಯಸಾಕ್ಷಿ ಸುದ್ದಿ, ಗದಗ

ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಗ್ರೇನ್ ಮಾರುಕಟ್ಟೆ ಇಂದು ವೀಕೆಂಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಪೂರ್ಣ ಸ್ತಬ್ಧವಾಗಿದೆ. ಇದರ ಪರಿಣಾಮ ಮೂಕ ಪ್ರಾಣಿಗಳು ಆಹಾರಕ್ಕಾಗಿ ಪರದಾಡುವಂತಾಗಿದೆ.

ಪ್ರತಿ ದಿನ ಕಿರಾಣಿ ಶಾಪ್ ಹಾಗೂ ತರಕಾರಿ ಮಾರುಕಟ್ಟೆಗೆ ತೆರಳಿ ವೇಸ್ಟಾಗಿ ಬಿದ್ದಿದ್ದ ತರಕಾರಿ, ಸೊಪ್ಪು ಸೇವಿಸುತ್ತಿದ್ದ ಮೂಕ ಪ್ರಾಣಿಗಳು ಇಂದು ಆಹಾರ ಸಿಗದೆ ಅಲೆದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಬಾಳೆ ತೋಟದಲ್ಲಿ ಕರಡಿ ಪ್ರತ್ಯಕ್ಷ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಕೊಪ್ಪಳ ತಾಲೂಕಿನ ಚಿಕ್ಕಬಗನಾಳ ಗ್ರಾಮದಲ್ಲಿ ಕರಡಿ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.‌

ಶೇಷಪ್ಪ ಹಾಗೂ ರಾಮಪ್ಪ ಅವರ ಜಮೀನಿನಲ್ಲಿ ಕರಡಿ ಪ್ರತ್ಯಕ್ಷವಾಗಿದ್ದು, ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇನ್ನು ಯಾವ ಸಮಯದಲ್ಲಿ ಕರಡಿ ಗ್ರಾಮಕ್ಕೆ ನುಗ್ಗುತ್ತೋ ಎನ್ನುವ ಆತಂಕದಲ್ಲಿ ಗ್ರಾಮಸ್ಥರು ಇದ್ದಾರೆ.

ಹನುಮಾನ್ ಯುವಕ ಮಂಡಳದಿಂದ ರಾಮನವಮಿ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಇಲ್ಲಿನ ವಿದ್ಯಾನಗರದ
ಶ್ರೀಹನುಮಾನ್ ಯುವಕ ಮಂಡಳದ ವತಿಯಿಂದ ಶ್ರೀರಾಮನವಮಿ ಆಚರಿಸಲಾಯಿತು. ಮರ್ಯಾದ ಪುರುಷೋತ್ತಮ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೇಶದಲ್ಲಿ ಉಂಟಾಗಿರುವ ಕೊರೋನಾ ಮಹಾಮಾರಿ ತೊಲಗಲಿ, ಜನತೆ ಈ ಸಂಕೋಲೆಯಿಂದ ಪಾರಾಗಲಿ ಎಂದು ಶ್ರೀರಾಮನಲ್ಲಿ ಪ್ರಾರ್ಥಿಸಿದರು.

ಕೊರೋನಾ ಎರಡನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ವಿಧಿಸಿರುವ ಕೋವಿಡ್ ನಿಯಮಾವಳಿಗಳ ಅನ್ವಯ ಸೇರಿದ್ದ ಕೆಲವು ಭಕ್ತಾದಿಗಳಿಗೆ ಶ್ರೀರಾಮನಿಗೆ ಪ್ರಿಯವಾದ ಕೊಸಂಬರಿ, ಪಾನಕ ಪ್ರಸಾದವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಹನುಮಾನ್ ಯುವಕ ಮಂಡಳದ ಸರ್ವ ಸದಸ್ಯರು, ರಾಮನ ಭಕ್ತರು ಉಪಸ್ಥಿತರಿದ್ದರು.

ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟಕ್ಕಿಲ್ಲ ಬ್ರೇಕ್; ಸರಕಾರದ ಯೋಜನೆಗೆ ಮತ್ತೆ ಮತ್ತೆ ಕನ್ನ!

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲಿ ಅಲ್ಲಲ್ಲಿ ಅನ್ನ ಭಾಗ್ಯ ಅಕ್ಕಿ ಕಳ್ಳ ಸಾಗಾಟ ಎಗ್ಗಿಲ್ಲದೇ ನಡೆದಿದೆ. ಗದಗ ನಗರದಲ್ಲಂತೂ ಕಳೆದ ಹಲವು ದಿನಗಳಿಂದ ಅಕ್ಕಿ ದಂಧೆ ನಿರಂತರವಾಗಿ ನಡೆಯುತ್ತಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಮೊನ್ನೆ ಟಿಪ್ಪು ಸುಲ್ತಾನ್ ಸರ್ಕಲ್ ಬಳಿ ಅಶೋಕ ಲೈಲಾಂಡ್ ಮಿನಿ ಗೂಡ್ಸ್ ಲಾರಿಯಲ್ಲಿ ಅನ್ನ ಭಾಗ್ಯ ಅಕ್ಕಿ ಸಾಗಾಟ ಮಾಡುವಾಗ ನಗರ ಠಾಣೆಯ ಪೊಲೀಸರ ದಾಳಿ ನಡೆಸಿ ಅಕ್ಕಿ ವಶಪಡಿಸಿಕೊಂಡಿದ್ದರು.

ಹಾವೇರಿ ಪಾಸಿಂಗ್ ಹೊಂದಿದ್ದ ಕೆಎ-27-ಬಿ 9937 ವಾಹನದಲ್ಲಿ ಸುಮಾರು 94 ಸಾವಿರ ರೂ,. ಮೌಲ್ಯದ 41 ಕ್ವಿಂಟಲ್ ಅಕ್ಕಿ, ಹಾಗೂ ಅಶೋಕ ಲೈಲಾಂಡ್ ಮಿನಿ ಗೂಡ್ಸ್ ಲಾರಿಯನ್ನು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಗೂಡ್ಸ್ ವಾಹನದ ಮಾಲೀಕ ಹಾಗೂ ಚಾಲಕನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸರಕಾರದ ವಿವಿಧ ಯೋಜನೆಗಳಲ್ಲಿ ಬಡವರಿಗೆ ಕೊಟ್ಟ ಅನ್ನ ಭಾಗ್ಯ ಅಕ್ಕಿ ಸಾಗಾಟ ಮಾಡೋದು ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ದಂಧೆ ವ್ಯಾಪಕವಾಗಿ ನಡೆದಿತ್ತು.

ಬಹಿರಂಗವಾಗಿ ನಡೆಯುತ್ತಿದ್ದ ದಂದೆ ಈಗ ಕದ್ದು ಮುಚ್ಚಿ ನಡೆಯುತ್ತಿದೆ. ಬೊಲೆರೋ ಗೂಡ್ಸ್, ಟಂಟಂ, ಟಾಟಾಏಸ್ ವಾಹನಗಳ ಮೂಲಕ ಅಣ್ಣಿಗೇರಿಗೆ ಅಸುಂಡಿ, ಕುರ್ತಕೋಟಿ, ಸೈದಾಪೂರ ಮಾರ್ಗವಾಗಿ, ಮುಳಗುಂದದಿಂದ ಹುಬ್ಬಳ್ಳಿಗೆ, ಹಾವೇರಿ ಜಿಲ್ಲೆಯ ಅಕ್ಕಿ ಆಲೂರಿಗೆ, ಹೀಗೆ ವಿವಿಧ ದಾರಿಗಳಲ್ಲಿ ಅಕ್ಕಿ ಸಾಗಾಟ ನಡೆಯುತ್ತಿದೆ ಎನ್ನಲಾಗಿದೆ.

ಈ ಕದ್ದು ಮುಚ್ಚಿ ನಡೆಯುತ್ತಿರುವ ದಂದೆಯನ್ನೇ ಕೆಲವು ಪುಡಾರಿಗಳು, ರೌಡಿ ಶೀಟರ್ಸ್ ಹಣ ಗಳಿಸುವ ಮಾರ್ಗವನ್ನಾಗಿ ರೂಪಿಸಿಕೊಂಡಿದ್ದಾರೆ. ರಾತ್ರೋರಾತ್ರಿ ಕದ್ದು ಮುಚ್ಚಿ ನಡೆಯುವ ಈ ದಂಧೆಯ ಹಿಂದೆ ಬಿದ್ದಿರುವ ಈ ಪುಡಾರಿಗಳು ಅಕ್ಕಿ ಸಾಗಾಟದ ವಾಹನ ಹಿಡಿದು ಹಣಕ್ಕೆ ಬೇಡಿಕೆ ಇಡ್ತಾರೆ. ಅವರು ಕೇಳಿದಷ್ಟು ಹಣ ಕೊಡದಿದ್ದರೆ ತಮ್ಮ ಪರಾಮಾಪ್ತ ಪೊಲೀಸರಿಗೆ ಮಾಹಿತಿ ನೀಡ್ತಾರೆ. ಅದನ್ನೇ ಪರಮಾಪ್ತ ಪೊಲೀಸರು ಇಂತಹ ಲಾರಿ ಹಿಡಿದು ಹಿರಿಯ ಅಧಿಕಾರಿಗಳಿಂದ ಬೆನ್ನು ತಟ್ಟಿಸಿಕೊಳ್ಳೊದು ಸಾಮಾನ್ಯವಾಗಿದೆ.

ಕಳೆದ ಒಂದು ತಿಂಗಳ ಹಿಂದೆ ಬೆಟಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಅನ್ನ ಭಾಗ್ಯದ ಅಕ್ಕಿ ಸಿಕ್ಕಿತ್ತು. ಆದರೆ ಪ್ರಕರಣ ದಾಖಲು ಆಗಲಿಲ್ಲ. ರಾಜೀಪಂಚಾಯಿತಿ ಮೂಲಕ ಅದಕ್ಕೆ ಎಳ್ಳು ನೀರು ಬಿಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ಬಗ್ಗೆ ಉನ್ನತ ತನಿಖೆ ನಡೆದಾಗ ಮಾತ್ರ ಸತ್ಯಾಂಶ ಹೊರಬೀಳಲಿದೆ.

ಕೊರೋನಾ; ಶುಕ್ರವಾರ 74 ಜನರಿಗೆ ಸೋಂಕು

0

ವಿಜಯಸಾಕ್ಷಿ ಸುದ್ದಿ, ಗದಗ

ಎಪ್ರಿಲ್ 23 ಶುಕ್ರವಾರ ಜಿಲ್ಲೆಯಲ್ಲಿ 74 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಗದಗ ನಗರ ಹಾಗೂ ತಾಲೂಕಿನಲ್ಲಿ 44 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮುಂಡರಗಿಯ 05, ನರಗುಂದದ 08, ರೋಣ ತಾಲೂಕಿನಲ್ಲಿ-11, ಹಾಗೂ ಶಿರಹಟ್ಟಿ ತಾಲೂಕಿನ-02, ಹೊರಜಿಲ್ಲೆಯ 04 ಜನರಿಗೆ ಸೋಂಕು ತಗುಲಿದೆ.

ಶುಕ್ರವಾರ 74 ಜನರಿಗೆ ಸೋಂಕು ತಗುಲುವ ಮೂಲಕ ಗದಗ ಜಿಲ್ಲೆಯಲ್ಲಿ ಇದುವರೆಗೂ 11951 ಪಾಸಿಟಿವ್ ಪ್ರಕರಣಗಳು ದೃಢಪಟ್ಟಂತಾಗಿದೆ.

ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ ನಿಂದ 141 ಜನರು ಮೃತಪಟ್ಟಿದ್ದಾರೆ. ಇಂದು 30 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದು, ಒಟ್ಟು ಇದುವರೆಗೂ 11350 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ 460 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 294 ಜನರ ವರದಿ ಬರಲು ಬಾಕಿ ಇದ್ದು, ಇದುವರೆಗೂ ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ 329294 ಮಾದರಿಗಳಲ್ಲಿ 317049 ಮಾದರಿಗಳು ನಕಾರಾತ್ಮಕವಾಗಿವೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

error: Content is protected !!