Home Blog Page 3061

17ನೇ ರಾಷ್ಟ್ರೀಯ ಸೈಕ್ಲಿಂಗ್ ಕ್ರೀಡಾಕೂಟ: ಮೊದಲ ದಿನವೇ ಗದುಗಿನ ಕುವರಿಗೆ ಕಂಚಿನ ಪದಕ

ವಿಜಯಸಾಕ್ಷಿ ಸುದ್ದಿ, ಗದಗ

17ನೇ ರಾಷ್ಟ್ರೀಯ ಸೀನಿಯರ್, ಜ್ಯೂನೀಯರ್ ಮತ್ತು ಸಬ್ ಜ್ಯೂನಿಯರ್ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್ ಕ್ರೀಡಾಕೂಟ ಸ್ಪರ್ಧೆಗಳು ಶುಕ್ರವಾರ ತಾಲೂಕಿನ ಬಿಂಕದಕಟ್ಟಿ ಗ್ರಾಮದ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಜರುಗಿದವು.

ಕ್ರೀಡಾಕೂಟದ ಮೊದಲ ದಿನವಾದ ಶುಕ್ರವಾರದಂದು 14 ಮತ್ತು 16 ವರ್ಷದ ಬಾಲಕ ಮತ್ತು ಬಾಲಕಿಯರಿಗಾಗಿ ವೈಯಕ್ತಿಕ ಟಾಯ್ ಟ್ರಾಯಲ್‌ನ 10 ಕಿಮೀ 4 ಸುತ್ತುಗಳ ಸೈಕಲ್ ಓಟದ ಸ್ಪರ್ಧೆ ನಡೆಯಿತು. ಅದರಂತೆ, 18 ವರ್ಷದ ಬಾಲಕರಿಗಾಗಿ ವೈಯಕ್ತಿಕ ಟಾಯ್ ಟ್ರಾಯಲ್‌ನ 18.4 ಕಿಮೀ 4 ಸುತ್ತುಗಳ ಸೈಕಲ್ ಓಟದ ಸ್ಪರ್ಧೆಗಳು ಜರುಗಿದವು.

16 ವರ್ಷದ ಬಾಲಕಿಯರಿಗಾಗಿ ನಡೆದ ವೈಯಕ್ತಿಕ ಟಾಯ್ ಟ್ರಾಯಲ್‌ನ 10 ಕಿ.ಮೀ.ನ 4 ಸುತ್ತುಗಳ ಸೈಕಲ್ ಓಟದ ಸ್ಪರ್ಧೆಯಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಕು.ಪವಿತ್ರಾ ಕುರ್ತಕೋಟಿ (41ನಿ.4ಸೆ) ನಲ್ಲಿ ಗುರಿ ಮುಟ್ಟುವ ಮೂಲಕ ತೃತೀಯ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.

14 ವರ್ಷದವರ ವಿಭಾಗ

ಮಹಾರಾಷ್ಟ್ರದ ಅದೀಪ ವಘಾ(ಪ್ರಥಮ), ಕರ್ನಾಟಕದ ಸಮರಪನ ಜೈನ್(ದ್ವಿತೀಯ), ಅಸ್ಸಾಂನ ಮಲವ ದತ್ತಾ(ತೃತೀಯ), ಬಾಲಕಿಯರ ವಿಭಾಗದಲ್ಲಿ ಮಹಾರಾಷ್ಟ್ರದ ಸಿದ್ಧಿ ಸಿರ್ಕೇ(ಪ್ರಥಮ), ಶರವನಿ ಪರಿತ್(ದ್ವಿತೀಯ), ಕರ್ನಾಟಕದ ಚಾಯಾ ನಾಗಶೆಟ್ಟಿ (ತೃತೀಯ) ಸ್ಥಾನ ಪಡೆದಿದ್ದಾರೆ.

16 ವರ್ಷದವರ ವಿಭಾಗ

ಬಾಲಕಿಯರ ವಿಭಾಗದಲ್ಲಿ ಕರ್ನಾಟಕದ ಕರಿನ್ ಮರ್ಶಲ್ (ಪ್ರಥಮ), ಕೇರಳದ ಅಗಸಾ ಅನ್ನ ಥೊಮಸ್(ದ್ವಿತೀಯ), ಕರ್ನಾಟಕದ ಪವಿತ್ರಾ ಕುರ್ತಕೋಟಿ (ತೃತೀಯ), ಬಾಲಕರ ವಿಭಾಗದಲ್ಲಿ
ಕರ್ನಾಟಕದ ಚರತಗೌಡ (ಪ್ರಥಮ), ಕೇರಳದ ಅದ್ವೈತ್ ಸನ್ಕರ್(ದ್ವಿತೀಯ), ಪಶ್ಚಿಮ ಬಂಗಾಳದ ಸುಧನಸು ಲಿಮಬು (ತೃತೀಯ) ಸ್ಥಾನ ಪಡೆದಿದ್ದಾರೆ.

18 ವರ್ಷದವರ ವಿಭಾಗ

ಬಾಲಕರ ವಿಭಾಗದಲ್ಲಿ ಕರ್ನಾಟಕದ ಅಡೋನಿಸ್ ತನಗ್ಪು (ಪ್ರಥಮ), ಹರ್ಶಿತ ಕೆ.ಜೆ.(ದ್ವಿತೀಯ) ಹಾಗೂ ಪ.ಬಂಗಾಳದ ರಾಜಕುಮಾರ ರಾಯ್ (ತೃತೀಯ) ಸ್ಥಾನ ಪಡೆದಿದ್ದಾರೆ.

ಧಮ್ಮಿದ್ರೆ ಬಾರೊ…ಮಾಜಿ ಸಚಿವ ತಂಗಡಗಿ ವಿರುದ್ಧ ಗುಡುಗಿದ ದಢೇಸೂಗುರು

-ಪುಣ್ಯಾತ್ಮ, ದೊಡ್ಡಮನುಷ್ಯ ತಂಗಡಗಿ ಸಾರಥಿ ಪಾತ್ರ ಬಿಟ್ಟು ಬೇರೆ ಪಾತ್ರದಲ್ಲಿ ಮುಂದೆ ಬಾ.. ನಾವ್ಯಾರು ಅಂತ ತೋರಸ್ತಿವಿ

-2023ರ ಚುನಾವಣೆಯಲ್ಲೂ ಬಿಜೆಪಿನೇ ಗೆಲ್ಲೋದು, ಬೇಕಾದರೆ ರಕ್ತದಲ್ಲಿ ಬರೆದುಕೊಡ್ತಿನಿ

-ಸಿಎಂ ಯಡಿಯೂರಪ್ಪಗೆ ವಿಜಯೇಂದ್ರ ಸುಪುತ್ರನಾದರೆ, ದಢೇಸೂಗೂರು ಮಾನಸಪುತ್ರ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಮಾಜಿ‌ ಸಚಿವ ಶಿವರಾಜ ತಂಗಡಗಿ ಬಿಜೆಪಿ ಕಾರ್ಯಕರ್ತರನ್ನು ಬ್ರಿಟಿಷರಂತೆ ಓಡಸ್ತಿನಿ, ಆರ್‌ಎಸ್‌ಎಸ್ ಕೈ ಕತ್ತರಿಸಬೇಕು ಅಂತ ಹೇಳಿಕೊಂಡು ಓಡಾಡುತ್ತಿದ್ದಾರೆ. ಅವರಿಗೆ ಧಮ್ಮಿದ್ದರೆ ಬಿಜೆಪಿ ಕಾರ್ಯಕರ್ತರನ್ನು ಟಚ್ ಮಾಡಲಿ ನೋಡೋಣ ಎಂದು ಶಾಸಕ ಬಸವರಾಜ ದಢೇಸೂಗೂರು ಸವಾಲು ಹಾಕಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಅವರು ಕಾರಟಗಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು ಮಾಜಿ ಸಚಿವ ಶಿವರಾಜ ತಂಗಡಗಿ ವಿರುದ್ಧ ವಾಗ್ದಾಳಿ ನಡೆಸಿದರು.

ನಾವೇನು ಮಾತಿನಲ್ಲಿ ಕಡಿಮೆ ಇಲ್ಲ. ತಂಗಡಗಿ ಕನಕಗಿರಿ ಕ್ಷೇತ್ರಕ್ಕೆ ಬಂದಾಗ ಎಂಥ ಚಪ್ಪಲಿ ಹಾಕಿಕೊಂಡು ಬಂದಿದ್ದೆ ನನಗೆ ಗೊತ್ತು. 2008ರಲ್ಲಿ ನೀನು ಹಾಕಿಕೊಂಡಿದ್ದ ಚಪ್ಪಲಿ ಫೋಟೊ ನನ್ನ ಬಳಿ ಇವೆ. ಈಗ ಎಂಥ ಬೂಟ್ ಹಾಕ್ತಿಯ, ಆಗ ನಿನ್ನ ಚಪ್ಪಲಿ ಹೇಗಿದ್ದವು ಗೊತ್ತು. ನೀನು 2008ರಲ್ಲಿ ಉದ್ರಿ ಪೆಟ್ರೋಲ್ ಹಾಕಿಸಿದ್ದು ನನಗೆ ಗೊತ್ತಿದೆ. ಉದ್ರಿ ಪೆಟ್ರೋಲ್ ಹಾಕಿಸಿ ಇನ್ನೂ ಹಣ ಕೊಟ್ಟಿಲ್ಲ ಎಂದು ವ್ಯಂಗ್ಯವಾಡಿದರು.

ನನ್ನ ಆಸ್ತಿ ಎಷ್ಟು ಅಂತಾ ಲೆಕ್ಕ ಕೊಡ್ತಿನಿ? ನಿನ್ನ ಆಸ್ತಿ ಎಷ್ಟು ಅಂತಾ ಹೇಳು. ನಾನು ಹುಟ್ಟುತ್ತಲೇ ಶ್ರೀಮಂತ. ನೂರಾರು ಎಕರೆ ಜಮೀನು ಇದೆ. 2013ರಲ್ಲಿ ಚುನಾವಣೆಯಲ್ಲಿ ಸೋತಿದ್ದಕ್ಕೆ 2018ರಲ್ಲಿ ಜನ ನನಗೆ ದಾನ ಮಾಡಿ ಗೆಲ್ಲಿಸಿದ್ದಾರೆ. ಮುಂದಿನ ಚುನಾವಣೆಯಲ್ಲೂ ಗೆಲ್ಲೋದು ಬಿಜೆಪಿನೇ. ಇದು ಸೂರ್ಯಚಂದ್ರರು ಇರುವಷ್ಟೇ ಸತ್ಯ. ಬೇಕಾದರೆ ರಕ್ತದಲ್ಲಿ ಬರೆದು ಕೊಡ್ತಿನಿ. ಜನ ಮತ್ತು ದೈವಬಲ ಬಿಜೆಪಿ ಜೊತೆಗಿದೆ. ಸಹೋದರ ತಂಗಡಗಿ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಹಗಲುಗನಸು‌ ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಪುಣ್ಯಾತ್ಮ, ದೊಡ್ಡಮನುಷ್ಯ ತಂಗಡಗಿಯವರು ಬಯಲಾಟದಲ್ಲಿ ಸಾರಥಿ ಪಾತ್ರ ಮಾಡುವಂತೆ ಕಾರ್ಯಕ್ರಮಗಳಲ್ಲಿ ಮಾತಾಡ್ತಾರೆ. ನಾವು ಸಾರಥಿಯನ್ನು ಎದುರಿಸುವುದಿಲ್ಲ. ಭೀಮ, ಕೀಚಕನಂಥವರನ್ನು ಎದುರಿಸುತ್ತೇವೆ. ಹಾಸ್ಯ ಪಾತ್ರ ಮಾಡುವುದನ್ನು ಬಿಟ್ಟು ದೊಡ್ಡ ಪಾತ್ರದಲ್ಲಿ‌ ಮುಂದೆ ಬರಲಿ. ಆಗ ಹೇಗೆ ಎದುರಿಸುತ್ತೇವೆ ಎಂಬುದನ್ನು ನೋಡಲಿ ಎಂದು ಕಿಡಿ ಕಾರಿದರು.

ಈ ಸಂದರ್ಭದಲ್ಲಿ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ, ಜಿಪಂ ಮಾಜಿ ಅಧ್ಯಕ್ಷ ಅಮರೇಶ ಕುಳಗಿ, ಜಿಪಂ ಮಾಜಿ ಸದಸ್ಯ ಸಾಲೋಣಿ ವೀರೇಶ್, ಬಿಜೆಪಿ‌ ಮುಖಂಡರಾದ ನಾಗರಾಜ ಬಿಲ್ಗಾರ್, ಬಸವರಾಜಪ್ಪ, ಮಹಾಂತೇಶ ಸಜ್ಜನ, ಶ್ರೀಧರ ಕೆಸರಟ್ಟಿ ಮತ್ತಿತರರು ಇದ್ದರು.

‘ಪೊಗರು ವೀಕ್ಷಿಸಲು ಮುಗಿಬಿದ್ದ ‘ಪ್ರೇಕ್ಷಕರು

ನಗರದ ಚಿತ್ರಮಂದಿರಗಳೆರಡೂ ಹೌಸ್‌ಫುಲ್ ಪ್ರದರ್ಶನ

ವಿಜಯಸಾಕ್ಷಿ ಸುದ್ದಿ, ಗದಗ

ಕೊರೊನಾ ಹೊಡೆತಕ್ಕೆ ಬಹುತೇಕ ಬಾಗಿಲು ಮುಚ್ಚಿದ್ದ ಚಿತ್ರಮಂದಿರಗಳು ಲಾಕ್‌ಡೌನ್ ಬಳಿಕ ಪುನರಾರಂಭವಾಗಿದ್ದು ಶುಕ್ರವಾರ ಆಕ್ಸನ್ ಫ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ಪೊಗರು ಸಿನಿಮಾ ಬಿಡುಗಡೆಗೊಂಡಿದ್ದು, ರಾಜ್ಯ ಸೇರಿದಂತೆ ಪರರಾಜ್ಯದಲ್ಲೂ ಧೂಳೆಬ್ಬಿಸಿದೆ.

ನಗರದ ಮಹಾಲಕ್ಷ್ಮೀ ಹಾಗೂ ಶಾಂತಿ ಚಿತ್ರ ಮಂದಿರಗಳಲ್ಲಿ ಪೊಗರು ಸಿನಿಮಾ ಬಿಡುಗಡೆಗೊಂಡಿದ್ದು, ಉಭಯ ಥಿಯೇಟರ್‌ಗಳು ಹೌಸ್‌ಫುಲ್ ಪ್ರದರ್ಶನ ನೀಡುತ್ತಿವೆ. ಟಿಕೆಟ್ ಖರೀದಿಸಲು ಪ್ರೇಕ್ಷಕರು ಮುಗಿ ಬಿದ್ದಿದ್ದ ದೃಶ್ಯಗಳು ಶುಕ್ರವಾರ ಕಂಡು ಬಂದವು.

ಲಾಕ್‌ಡೌನ್ ಬಳಿಕ ಚಿತ್ರಮಂದಿರಗಳು ಆರಂಭಗೊಂಡಿದ್ದರೂ ಸಿನಿ ಪ್ರೇಕ್ಷಕರಿಲ್ಲದೇ ಖಾಲಿ ಹೊಡೆಯುತ್ತಿದ್ದವು. ಆದರೆ, ಪೊಗರು ಸಿನಿಮಾದಿಂದ ಚಿತ್ರಮಂದಿಗಳಿಗೆ ಕಳೆ ಬಂದಿದೆ. ನೆಚ್ಚಿನ ನಟನ ಚಿತ್ರವನ್ನು ಕಣ್ತುಂಬಿಕೊಳ್ಳಲು ತಂಡೋಪತಂಡವಾಗಿ ಜನರು ಚಿತ್ರಮಂದಿರಗಳಿಗೆ ಹೆಜ್ಜೆ ಹಾಕಿದರು.

ರಾಜ್ಯಾದ್ಯಂತ ಬಿಡುಗಡೆಗೊಂಡಿರುವ ದೃವ ಸರ್ಜಾ ಅಭಿನಯದ ಪೊಗರು ಚಿತ್ರ ಹೌಸ್‌ಫುಲ್ ಪ್ರದರ್ಶನ ಕಾಣುವ ಮೂಲಕ ಮನರಂಜನೆ ಇಲ್ಲದೇ ಖಾಲಿ ಕುಳಿತಿದ್ದ ಚಿತ್ರ ರಸಿಕರ ಹಾಗೂ ಕೊರೊನಾ ಸಂದರ್ಭದಲ್ಲಿ ಸಕಾಷ್ಟು ಆರ್ಥಿಕ ಸಂಕಷ್ಟ ಎದುರಿಸಿದ್ದ ಚಿತ್ರ ಮಂದಿರದ ಮಾಲೀಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಅದರಂತೆ, ಗದಗ ನಗರದ ನಾಲ್ಕು ಪ್ರಮುಖ ಚಿತ್ರ ಮಂದಿರಗಳ ಪೈಕಿ ಎರಡು ಚಿತ್ರಮಂದಿರಗಳು ಫೆ.೫ ರಂದು ಆರಂಭವಾಗಿದ್ದು, ಆರಂಭದಲ್ಲಿ ಪ್ರೇಕ್ಷಕರ ಕೊರತೆಯಿಂದ ನೀರಸ ಪ್ರತಿಕ್ರಿಯೆ ಉಂಟಾಗಿತ್ತು. ಸುಮಾರು ಎರಡು ವಾರಗಳ ನಂತರ ಚಿತ್ರ ಮಂದಿರ ತುಂಬಿ ತುಳುಕುತ್ತಿದ್ದು, ಅಭಿಮಾನಿಗಳು ಚಿತ್ರಮಂದಿರಗಳ ಮುಂದೆ ಪಟಾಕಿ ಸಿಡಿಸಿ ತಮ್ಮ ನೆಚ್ಚಿನ ನಾಯಕನ ಸಿನಿಮಾವನ್ನು ಕಣ್ತುಂಬಿಕೊಂಡರು.

ರೈತರಿಗೆ ಜಮೀನು ಬಾಡಿಗೆ ನೀಡಲು ಆಗ್ರಹಿಸಿ ತಹಸೀಲ್ದಾರ್ ಕಚೇರಿ ಮುಂದೆ ಧರಣಿ

ವಿಜಯಸಾಕ್ಷಿ ಸುದ್ದಿ, ರಾಯಚೂರು

ಜಿಲ್ಲೆಯ ಸಿಂಧನೂರು ರೈತರಿಗೆ ಜಮೀನು ಬಾಡಿಗೆ ನೀಡಲು ಆಗ್ರಹಿಸಿ ಕರ್ನಾಟಕ ರೈತ ಸಂಘ ಹಾಗೂ ಕುರಿ ಮತ್ತು ಜಾನುವಾರಗಳ ಸಂತೆ ಬಳಕೆದಾರರ ವೇದಿಕೆ ವತಿಯಿಂದ ತಹಸೀಲ್ದಾರ್ ಕಚೇರಿ ಮುಂದೆ ಅನಿರ್ದಿಷ್ಟ ಧರಣಿ ಆರಂಭಿಸಿಲಾಗಿದೆ.

ರೈತರು ತಮ್ಮ ಅಡಚಣೆ ಸಲುವಾಗಿ ತಾವು ಸಾಕಿ ಬೆಳೆಸಿದ ಜಾನುವಾರುಗಳನ್ನು ಕೃಷಿಕ ಇತರ ರೈತರಿಗೆ ಮಾರಾಟ ಮಾಡಿ ತಾವು ಮಾಡಿರುವ ಸಾಲಗಳನ್ನು ಕೃಷಿ ಚಟುವಟಿಕೆ, ಮಕ್ಕಳ ವಿದ್ಯಾಭ್ಯಾಸ ಇತರ ಸಾಲಗಳನ್ನು ತೀರಿಸಲು ಸಿಂಧನೂರು ನಗರದಲ್ಲಿ ಎಪಿಎಂಸಿಯವರು ಸರ್ವೆ ನಂಬರ್ 995/p8 ಎಕರೆ 3.ಗುಂಟೆ 20 ಜಾಗವನ್ನು ಬಾಡಿಗೆ ರೂಪದಲ್ಲಿ ತೆಗೆದುಕೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ಧರಣಿ ಆರಂಭಿಸಲಾಗಿದೆ.

ಈಗಾಗಲೇ 2008ರಿಂದ 2018ವರೆಗೆ ಎಪಿಎಂಸಿ ಬಾಡಿಗೆ ಕೊಡುತ್ತಾ ಬಂದಿದ್ದು ಇದನ್ನು ಮುಂದುವರಿಸಿಕೊಂಡು ಹೋಗಬೇಕು.

ಯಾವುದೇ ಕಾರಣಕ್ಕೂ ಪ್ರಭಾವಿಗಳ ಪ್ರಭಾವಕ್ಕೆ ಮಣಿದು ಬೇರೆಯವರಿಗೆ ಬಿಟ್ಟುಕೊಡಬಾರದು, ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಇದೇ ಜಾಗದಲ್ಲಿ ಜಾನುವಾರುಗಳನ್ನು ಮಾರಲು ಅನುಕೂಲ ಮಾಡಿಕೊಡಬೇಕು.

ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ದಂಡಾಧಿಕಾರಿಗಳು ಮಧ್ಯಸ್ಥಿಕೆಯನ್ನು ವಹಿಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ತಹಸೀಲ್ದಾರ್ ಕಾರ್ಯಾಲಯದ ಮುಂದೆ ನೂರಾರು ರೈತರು ಧರಣಿ ಕುಳಿತಿದ್ದಾರೆ.

D H ಪೂಜಾರ್, ಕರ್ನಾಟಕ ರೈತ ಸಂಘ ರಾಜ್ಯಾಧ್ಯಕ್ಷ ರಮೇಶ ಪಾಟೀಲ್ ಬೇರಿಗಿ, ಕರ್ನಾಟಕ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮೋಯಿನ್ ಪಾಶಾ, ಕು.ಜಾ.ಸಂ ಬ.ವೆ ತಾಲ್ಲೂಕು ಅಧ್ಯಕ್ಷ, ಸಿಂಧನೂರು ಚಿಟ್ಟಿಬಾಬು, ಬಿ ಎನ್ ಯರದಿಹಾಳ, ಮುಸ್ತಫಾ ಅಮೀನ್ ಸಾಬ್ ನದಾಫ್ ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.

ವರದಿ.ಡಾ.ಅಬ್ದುಲ್ ರಜಾಕ್

ಹೆತ್ತ ಮಗುವನ್ನೇ ಕೊಂದ ಪಾಪಿಗೆ ಮರಣದಂಡನೆ!

ವಿಜಯಸಾಕ್ಷಿ ಸುದ್ದಿ, ಗದಗ: ಹೆತ್ತ ಮಗುವನ್ನೇ ಕೊಂದ ಪಾಪಿ ತಂದೆಗೆ ಮರಣದಂಡನೆ ಶಿಕ್ಷೆ ವಿಧಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ರಾಜಶೇಖರ ವಿ ಪಾಟೀಲರು ಈ ಆದೇಶ ನೀಡಿದ್ದಾರೆ.

ಅಪರಾಧಿ ಪ್ರಶಾಂತಗೌಡ ಪಾಟೀಲ್ ನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದು, ಈತ ತನ್ನ ಒಂದೂವರೆ ವರ್ಷದ ಮಗುವನ್ನು ಕತ್ತು ಹಿಸುಕಿ ಕೊಂದು ಸುಟ್ಟು ಹಾಕಿ ವಿಕೃತಿ ತೋರಿದ್ದ. ಜಿಲ್ಲೆಯ ರೋಣ ತಾಲೂಕಿನ ಹುಲ್ಲೂರ ಗ್ರಾಮದ ಪ್ರಶಾಂತಗೌಡ ಪಾಟೀಲ್, ಮಹಿಳೆಯೊಬ್ಬಳನ್ನು ಪ್ರೀತಿ ಮಾಡಿ ಮದುವೆಯಾಗಿ ದೋಖಾ ಮಾಡಿದ್ದ. ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿದ್ದ ಈ ಮಗುವನ್ನು ಕೊಲೆ ಮಾಡಿದ್ದ.

ಈತನಿಂದ ನೊಂದ ಮಹಿಳೆ ಜೀವನಾಂಶ ಬೇಡಿ‌ ಕೋರ್ಟ್ ಮೊರೆ ಹೋಗಿದ್ದ ಕಾರಣದಿಂದ ಕುಪಿತಗೊಂಡ ಪ್ರಶಾಂತಗೌಡ ಪಾಟೀಲ್ ತನ್ನ ಒಂದೂವರೆ ವರ್ಷದ ಮಗುವನ್ನು ಕಿಡ್ನಾಪ್ ಮಾಡಿ ಕೊಂದು ಹಾಕಿದ್ದ. ಪ್ರಶಾಂತಗೌಡ ಪಾಟೀಲ್ ಏಪ್ರಿಲ್ 6, 2015 ರಂದು ಗಜೇಂದ್ರಗಡ ಪಟ್ಟಣದ ಕಾಲಕಾಲೇಶ್ವರ ಗುಡ್ಡದಲ್ಲಿ ಕೊಲೆ ಮಾಡಿದ್ದ. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಹಿಳಾ ಕಾಯಕೋತ್ಸವ ಅಭಿಯಾನಕ್ಕೆ ಮೂವರು ಸದಸ್ಯರ ಆಯ್ಕೆ

ವಿಜಯಸಾಕ್ಷಿ ಸುದ್ದಿ, ನರಗುಂದ

ತಾಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಮಹಿಳೆಯರಿಗಾಗಿ ಮಹಿಳಾ ಕಾಯಕೋತ್ಸವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಗ್ರಾಮ ಪಂಚಾಯತಿ ಅಧ್ಯಕ್ಷ ಮುತ್ತು ರಾಯರೆಡ್ಡಿ ಚಾಲನೆ ನೀಡಿದರು.

ರತ್ನವ್ವ ಸರ್ವಮಾನೇದ,
ಬಸಮ್ಮ ಯರಗಟ್ಟಿ ಹಾಗೂ ವಿಜಯಲಕ್ಷ್ಮಿ ಕಳಸದ ಇವರನ್ನು ಮಹಿಳಾ ಕಾಯಕೋತ್ಸವದ ಅಭಿಯಾನದ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

ಈ ಮೂವರು ಸದಸ್ಯರು, ಗ್ರಾಮದಲ್ಲಿ ಸಮನ್ವಯತೆ ಕಾಪಾಡುವುದು, ಮಹಿಳೆಯರಿಗೆ ಕೂಲಿ ಕೆಲಸ, ಪುರುಷ ಹಾಗೂ ಮಹಿಳೆಯರಿಗೆ ಸಮಾನ ಕೂಲಿ ಸೇರಿದಂತೆ ಗ್ರಾಮದ ಸರ್ವೇ ನಡೆಸಲು ಸಭೆಯಲ್ಲಿ ಸೂಚಿಸಲಾಯಿತು.

ಸಭೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಬಾಪುಗೌಡ ಹಿರೇಗೌಡ್ರ, ಶರಣಪ್ಪ ಹಳೇಮನಿ, ಲಕ್ಮಣ ಕಂಬಳಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶೈನಾಜ್ ಮುಜಾವರ, ಕಾರ್ಯದರ್ಶಿ ಕೆಂಚಪ್ಪ ಮಾದರ, ಸಿಬ್ಬಂದಿ ಶಿವು ಯಲಿಗಾರ ಇದ್ದರು.

ಮೀಸಲಾತಿ ಕಲ್ಪಿಸಿ ಸಮಾಜಕ್ಕೆ ಶಕ್ತಿ ನೀಡಿ: ಮೋಹನ್ ಮಾಳಶೆಟ್ಟಿ

ಫೆ.21ರಂದು ಬೆಂಗಳೂರಿನಲ್ಲಿ ಪಂಚಮಸಾಲಿ ಸಮಾವೇಶ:
ಜಿಲ್ಲೆಯಿಂದ ಸುಮಾರು 30,000 ಜನರು ಭಾಗಿ

ವಿಜಯಸಾಕ್ಷಿ ಸುದ್ದಿ, ಗದಗ

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಈಗಾಗಲೇ ಪಾದಯಾತ್ರೆ ನಡೆಯುತ್ತಿದ್ದು, ಫೆ.21ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಜಿಲ್ಲೆಯಿಂದ ಸುಮಾರು 30 ಸಾವಿರ ಜನರು ಭಾಗಿಯಾಗುವ ನಿರೀಕ್ಷೆ ಇದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೂಡಲಸಂಗಮದಿಂದ ಬಸವಜಯ ಮೃತ್ಯುಂಜಯ ಶ್ರೀಗಳು ಪಾದಯಾತ್ರೆ ಹಮ್ಮಿಕೊಂಡಿದ್ದು, ಅದಕ್ಕೆ ಹರಿಹರ ಗುರುಪೀಠದ ವಚನಾನಂದ ಶ್ರೀಗಳು ಸಾಥ್ ಕೊಟ್ಟಿದ್ದಾರೆ. ಈಗಾಗಲೇ ಪಾದಯಾತ್ರೆ ಬೆಂಗಳೂರು ಸಮೀಪಿಸಿದ್ದು, ಫೆ.21 ರಂದು 2ಎ ಮೀಸಲಾತಿ ಕಲ್ಪಿಸಿ ಪಂಚಮಸಾಲಿ ಸಮಾಜಕ್ಕೆ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಶಕ್ತಿ ತುಂಬುವಂತೆ ಆಗ್ರಹಿಸಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಉಭಯ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಸಭೆ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮಾವೇಶಕ್ಕೆ ರಾಜ್ಯಾದ್ಯಂತ ಸಾಕಷ್ಟು ಸಂಖ್ಯೆಯಲ್ಲಿ ಪಂಚಮಸಾಲಿ ಸಮಾಜದ ಜನರು ಆಗಮಿಸಲಿದ್ದು, ಜಿಲ್ಲೆಯಿಂದ ಜನರನ್ನು ಕರೆದುಕೊಂಡು ಹೋಗಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಂಚಮಸಾಲಿ ಕ್ಷೇಮಾಭಿವೃದ್ಧಿ ಸಂಘದಿಂದ ಬೆಟಗೇರಿಯಿಂದ 5 ಬಸ್, 25 ಕ್ರಶರ್‌ಗಳ ವ್ಯವಸ್ಥೆ ಮಾಡಲಾಗಿದೆ. ಅದರಂತೆ ಜಿಲ್ಲೆಯ ಲಕ್ಷ್ಮೇಶ್ವರ, ಗಜೇಂದ್ರಗಡ, ಶಿರಹಟ್ಟಿ, ರೋಣ ಸೇರಿದಂತೆ ವಿವಿಧ ಭಾಗಗಳಿಂದ ಜನರು ಸಮಾವೇಶಕ್ಕೆ ಹೋಗಲು ತಯಾರಿ ಮಾಡಿಕೊಳ್ಳಲಾಗಿದೆ ಎಂದು ಮೋಹನ್ ಮಾಳಶೆಟ್ಟಿ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಅನೀಲ್ ಪಾಟೀಲ್, ಸಿದ್ದು ಪಲ್ಲೇದ, ಅಯ್ಯಪ್ಪ ಅಂಗಡಿ, ಮಲ್ಲಿಕಾರ್ಜುನ ಹಿರೇಕೊಪ್ಪ, ಮಹೇಶ್, ಶಿವನಗೌಡ ಇದ್ದರು.

ಭಾವೈಕ್ಯತೆ ದಿನವೆಂದು ಆಚರಿಸಿ, ಭವನ ನಿರ್ಮಿಸಿ: ಮಲ್ಲಿಕಾರ್ಜುನ ಐಲಿ ಆಗ್ರಹ

ಫೆ.21ರಂದು ಲಿಂ.ಡಾ.ತೋಂಟದ ಸಿದ್ಧಲಿಂಗಶ್ರೀಗಳ ಜನ್ಮದಿನ
ಅಂದು ಬಾವೈಕ್ಯತೆ ಯಾತ್ರೆ, ಹಲವು ಪುಸ್ತಕಗಳ ಬಿಡುಗಡೆ

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದಲ್ಲಿ ಲಿಂಗೈಕ್ಯ ಡಾ.ತೋಂಟದ ಸಿದ್ಧಲಿಂಗ ಶ್ರೀಗಳು ಭಾವೈಕ್ಯತೆಗಾಗಿ ಸಲ್ಲಿಸಿದ ಸೇವೆ ಪರಿಗಣಿಸಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಹಲವು ಪ್ರಶಸ್ತಿಗಳು ದೊರೆತಿದ್ದು, ಶ್ರೀಗಳ ಹೆಸರಿನಲ್ಲಿ ಫೆ.21ರಂದು ರಾಜ್ಯ ಸರಕಾರ ಭಾವೈಕ್ಯತೆ ದಿನವೆಂದು ಆಚರಿಸಬೇಕು ಎಂದು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಐಲಿ ಒತ್ತಾಯಿಸಿದರು.

ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರಕಾರ ಪ್ರತಿವರ್ಷ ಡಾ.ತೋಂಟದ ಸ್ವಾಮೀಜಿಗಳ ಹೆಸರಿನಲ್ಲಿ ಭಾವೈಕ್ಯತೆ ಪ್ರಶಸ್ತಿ ನೀಡಬೇಕು. ಅಲ್ಲದೇ, ನಗರದಲ್ಲಿ ಭಾವೈಕ್ಯತೆ ಭವನ ನಿರ್ಮಿಸಬೇಕೆಂದು ಆಗ್ರಹಿಸಿದ ಅವರು, ಶ್ರೀಗಳ ಆಶಯದಂತೆ ಭವನ ಕಟ್ಟಲು ನಗರದ ಹೃದಯ ಭಾಗದಲ್ಲಿರುವ ಜಾತ್ರೆಯ ಬಯಲು ಜಾಗೆ ಮೀಸಲಿಡಲಾಗಿದೆ ಎಂದು ತಿಳಿಸಿದರು.

ಪುಸ್ತಕ ಬಿಡುಗಡೆ ಸಮಾರಂಭದ ಸಾನಿಧ್ಯವನ್ನು ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸುವರು. ಅದರಂತೆ ಮುಂಡರಗಿ ತೋಂಟದಾರ್ಯ ಶಾಖಾಮಠದ ನಿಜಗುಣಾನಂದಪ್ರಭು, ಶಿರೋಳದ ಗುರುಬಸವ, ಭೈರನಟ್ಟಿಯ ಶಾಂತಲಿಂಗ, ಸಂಡೂರಿನ ಪ್ರಭು, ಅರಸಿಕೆರೆಯ ಶಾಂತಲಿಂಗ, ಆಳಂದದ ಕೋರಣೇಶ್ವರ, ಯಶವಂತನಗರದ ಗಂಗಾಧರ ಮಹಾಸ್ವಾಮಿಗಳು ಹಾಗೂ ತೋಂಟದಾರ್ಯ ಮಠದ ಮಹಾಂತದೇವರು ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಈ ಸಂದರ್ಭದಲ್ಲಿ ಲಿಂ.ಡಾ.ತೋಂಟದ ಶ್ರೀಗಳ ಕುರಿತು ಡಾ.ಜಗದೀಶ ಕೊಪ್ಪ ಹಾಗೂ ಪ್ರೊ.ಶಶಿಧರ ತೋಡಕರ ಸಂಪಾದಿಸಿದ ’ಸಮಾಜಮುಖಿ’,
ಪ್ರೊ.ಮಲ್ಲಿಕಾರ್ಜುನ ಹುಲಗಬಾಳಿ ರಚಿಸಿದ ‘ಸನ್ನಿಧಾನ’, ವೀರನಗೌಡ ಮರಿಗೌಡರ ರಚಿಸಿದ ‘ವಿಶ್ವ ಮಾನವ’, ಜಿ.ವಿ ಹಿರೇಮಠ ರಚಿಸಿದ ‘ಡಂಬಳದ ತೋಂಟದ ಅರ್ಧನಾರೀಶ್ವರ ಶಿವಯೋಗಿಗಳು’ ಎಂಬ ಕೃತಿಗಳನ್ನು ನಿವೃತ್ತ ಗೃಹ ಕಾರ್ಯದರ್ಶಿ ಡಾ.ಎಸ್.ಎಂ.ಜಾಮದಾರ ಬಿಡುಗಡೆಗೊಳಿಸುವರು ಎಂದು ಮಲ್ಲಿಕಾರ್ಜುನ ಐಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಅಮರೇಶ ಅಂಗಡಿ, ದಾನಯ್ಯ ಗಣಾಚಾರಿ, ಚಂದ್ರು ಚವ್ಹಾಣ, ಗಂಗಾಧರ ಹಿರೇಮಠ, ಕೊಟ್ರೇಶ ಮೆಣಸಿನಕಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಫೆ.21ರಂದು ಭಾವೈಕ್ಯತೆ ಯಾತ್ರೆ
ತ್ರಿವಿಧ ದಾಸೋಹಿ ಲಿಂ.ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ 72ನೇ ಜಯಂತಿ ಅಂಗವಾಗಿ ಭಾವೈಕ್ಯತಾ ದಿನಾಚರಣೆ ಹಾಗೂ ಶ್ರೀಗಳ ಕುರಿತ ಗ್ರಂಥಗಳ ಬಿಡುಗಡೆ ಸಮಾರಂಭವು ಫೆ.21 ರಂದು ಭಾನುವಾರ ಬೆ.11 ಗಂಟೆಗೆ ನಗರದ ತೋಂಟದಾರ್ಯ ಸಂಸ್ಥಾನ ಮಠದಲ್ಲಿ ಜರುಗಲಿದೆ. ಇದರ ಅಂಗವಾಗಿ ಅಂದು ಬೆ. 9 ಗಂಟೆಗೆ ಬಸವೇಶ್ವರ ಪುತ್ಥಳಿಯಿಂದ ಶ್ರೀಮಠದವರೆಗೆ ಭಾವೈಕ್ಯತಾ ಯಾತ್ರೆ ನಡೆಯಲಿದೆ ಎಂದು ಮಲ್ಲಿಕಾರ್ಜುನ ಐಲಿ ಮಾಹಿತಿ ನೀಡಿದರು.

17ನೇ ರಾಷ್ಟ್ರೀಯ ಸೈಕ್ಲಿಂಗ್ ಕ್ರೀಡಾಕೂಟ: ಸೈಕಲ್ ಜಾಥಾಗೆ ಚಾಲನೆ

ವಿಜಯಸಾಕ್ಷಿ ಸುದ್ದಿ, ಗದಗ

17ನೇ ರಾಷ್ಟ್ರೀಯ ಸಿನಿಯರ್, ಜ್ಯೂನಿಯರ್ ಹಾಗೂ ಸಬ್ ಜ್ಯೂನಿಯರ್ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‍ಶಿಪ್ ಕ್ರೀಡಾಕೂಟವು ಇಂದಿನಿಂದ ಫೆ.೨೧ ರವರೆಗೆ ಗದಗ ತಾಲೂಕಿನ ಬಿಂಕದಕಟ್ಟಿಯ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ನಡೆಯುತ್ತಿವೆ.

ಈ ಹಿನ್ನೆಲೆಯಲ್ಲಿ ಇಂದು ನಗರದ ಕೆ.ಎಚ್. ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಸೈಕಲ್ ಜಾಥಾಗೆ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರು ಸೈಕಲ್ ಜಾಥಾಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಸೈಕಲ್ ಜಾಥಾದಲ್ಲಿ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಜಿಪಂ ಸಿಇಒ ಭರತ್ ಎಸ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ಡಿಎಫ್ಒ ಸೂರ್ಯಸೇನ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ.ಬಿ.ವಿಶ್ವನಾಥ್, ಸೈಕ್ಲಿಂಗ್ ತರಬೇತುದಾರ ಅನಂತ ದೇಸಾಯಿ ಸೇರಿದಂತೆ ನೂರಾರು ಸೈಕ್ಲಿಸ್ಟ್ ಗಳು ಭಾಗಿಯಾಗಿದ್ದರು.

ಜಿಲ್ಲಾ ಕ್ರೀಡಾಂಗಣದಿಂದ ಅಸುಂಡಿ ಗ್ರಾಮದ ಕುವೆಂಪು ಶಾಲೆಯವರೆಗೆ ಸೈಕಲ್ ಜಾಥಾ ನಡೆಯಿತು.

ಕಾರ್ ಲಾರಿ ಮುಖಾಮುಖಿ ಡಿಕ್ಕಿ, ಸ್ಥಳದಲ್ಲೇ ಇಬ್ಬರ ಸಾವು

0

ವಿಜಯಸಾಕ್ಷಿ ಸುದ್ದಿ, ಗದಗ
ಲಾರಿ ಕಾರ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟು, ಮೂವರಿಗೆ ಗಾಯಗಳಾಗಿರುವ ಘಟನೆ ತಾಲೂಕಿನ ಹುಲಕೋಟಿ ಗ್ರಾಮದ ಬಳಿ ನಡೆದಿದೆ.
ಮೃತರನ್ನು ಪ್ರೇಮ ಈಶ್ವರಗೌಡ ಪಾಟೀಲ್(55) ಹಾಗೂ ಕಾರ್ ಚಾಲಕ ಅನ್ವರ್ ಎಂದು ತಿಳಿದುಬಂದಿದೆ. ಈಶ್ವರಗೌಡ ರುದ್ರಗೌಡ ಪಾಟೀಲ್, ಶಿವಾಬಾಯಿ ಮೇಲಗಿರಿಗೌಡ ಪಾಟೀಲ್, ಮಹಾರಾಜ ಮೇಲಗಿರಿಗೌಡ ಪಾಟೀಲ್ ಎಂದು ಗಾಯಾಳುಗಳಾಗಿದ್ದು , ಇವರಿಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕೊತ್ಸೆ ನೀಡಲಾಗುತ್ತಿದೆ.
ಮೂಲತಃ ರೋಣ ತಾಲೂಕಿನ ಮಾಳವಾಡ ಗ್ರಾಮದವರಾದ ಇವರು ಹಲವು ವರ್ಷಗಳಿಂದ ಧಾರವಾಡದಲ್ಲಿ ನೆಲೆಸಿದ್ದರು. ಇಂದು ಸ್ವಗ್ರಾಮ ಮಾಳವಾಡದಲ್ಲಿ ತಮ್ಮ ಜಮೀನಿಗೆ ಭೇಟಿ ನೀಡಿ ವಾಪಾಸು ತೆರಳುವಾಗ, ಹುಲಕೋಟಿ ಗ್ರಾಮದ ಬಳಿಯಿರುವ ರೂರಲ್ ಇಂಜಿನಿಯರಿಂಗ್ ಕಾಲೇಜು ಸಮೀಪ ಈ ದುರ್ಘಟನೆ ನಡೆದಿದೆ. ಗದಗ ಗ್ರಾಮೀಣ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

error: Content is protected !!