Home Blog Page 3060

ವಿವಾದಗಳ ಸುಳಿಯಲ್ಲಿ ಅಳವಂಡಿ ಸಿದ್ಧೇಶ್ವರ ಮಠ

ವಿಜಯಸಾಕ್ಷಿ ಎಕ್ಸಕ್ಲೂಸೀವ್

//ಮಠ ಪುರಾಣ//

-ಅಪಾರ ಭಕ್ತರನ್ನು ಹೊಂದಿದ್ದರೂ ಕೈ ತಪ್ಪುತ್ತಿರುವ ಮಠಾಧಿಪತಿಯ ಹಿಡಿತ

-ಮಠಾಧೀಶರಾಗಿ ವರ್ಷ ತುಂಬಿದ್ದಕ್ಕೆ ಕೇಕ್ ಕತ್ತರಿಸಿದ ಸ್ವಾಮೀಜಿ!

-ಬಸವರಾಜ ಕರುಗಲ್.
ಕೊಪ್ಪಳ: ಮಠ ಮಾನ್ಯಗಳು ಧಾರ್ಮಿಕ ಹಾಗೂ ಭಕ್ತಿಯ ಕೇಂದ್ರಗಳು ಎಂಬ ಭಾವ ಬಹುತೇಕರಲ್ಲಿದೆ. ಮಠಗಳೆಂದರೆ ಹಾಗಿರುವುದು ಸಹಜವೇ. ಆದರೆ ಕೊಪ್ಪಳ ಜಿಲ್ಲೆಯೊಂದರ ಮಠ ಸದಾ ವಿವಾದದ ಕೇಂದ್ರ ಬಿಂದು. ಇದಕ್ಕೆಲ್ಲ ಕಾರಣ ಮಠಾಧಿಪತಿಯ ಕುಟುಂಬಸ್ಥರು!

ಕೊಪ್ಪಳ ಜಿಲ್ಲೆಯ ಅಳವಂಡಿಯಲ್ಲಿರುವ ಶ್ರೀ ಸಿದ್ಧೇಶ್ವರ ಮಠ ಸದ್ಯ ವಿವಾದದ ತಾಣವಾಗಿದೆ. ಈಚೆಗಷ್ಟೇ ವಿಜೃಂಭಣೆಯಿಂದ ಜಾತ್ರಾಮಹೋತ್ಸವದ ಅಂಗವಾಗಿ ರಥೋತ್ಸವ ನಡೆಯಿತು. ರಥೋತ್ಸವದ ಕ್ಷಣಗಳು ಈಗ ಮಠದ ಭಕ್ತರಲ್ಲಿ ಮತ್ತು ಮಠಾಧಿಪತಿಯ ಕುಟುಂಬಸ್ಥರಲ್ಲಿ ಕೋಲಾಹಲ ಸೃಷ್ಟಿಯಾಗುವಂತೆ ಮಾಡಿವೆ!

ರಥದ ಗಾಲಿಗೆ ಹುಟ್ಟು ಮತ್ತು ಸೊನ್ನಿ ಹಾಕುವ ವಿಷಯಕ್ಕೆ ಸಂಬಂಧಿಸಿದಂತೆ ಸ್ವಾಮೀಜಿಯ ಕುಟುಂಬಸ್ಥರು ತಕರಾರು ಮಾಡಿಕೊಂಡಿದ್ದಾರೆ. ಪ್ರತಿ ವರ್ಷದಂತೆ ತೇರು ಎಳೆಯುವ ಸಂದರ್ಭದಲ್ಲಿ ರಥದ ಗಾಲಿಗೆ ಹುಟ್ಟು ಸೊನ್ನಿ ಹಾಕಲಾಗುತ್ತದೆ. ಒಂದು ಚಕ್ರಕ್ಕೆ ಬೈರಾಪುರ ಗ್ರಾಮದ ಭಕ್ತರು ಸೊನ್ನಿ ಹಾಕಿದ್ದಾರೆ. ಅದರಿಂದ ಯಾವ ತೊಂದರೆಯೂ ಆಗಿಲ್ಲ. ಇನ್ನೊಂದು ಚಕ್ರಕ್ಕೆ ಅಳವಂಡಿಯವರು (ಅವರು ಪ್ರತಿ ವರ್ಷ ಹಾಕುತ್ತಿದ್ದವರೇ) ಸೊನ್ನಿ ಹಾಕಿದ್ದಾರೆ. ಅದು ಸಡಿಲವಾಗಿದ್ದರಿಂದ ತೇರೆಳುವಾಗ ರಥ ಅಲುಗಾಡಿದೆಯೇ ಹೊರತು ಯಾವ ಅನಾಹುತವೂ ಸಂಭವಿಸಿಲ್ಲ. ಇದನ್ನೇ ನೆಪ ಮಾಡಿಕೊಂಡ ಸ್ವಾಮೀಜಿ ಕುಟುಂಬಸ್ಥರು “ಜಾತ್ರೆಗೆ ನಿಮ್ಮನ್ಯಾರು ಕರೆದವರು?” ಎಂದು ದರ್ಪ ಮೆರೆದಿದ್ದಾರೆ. ದರ್ಪದ ಈ ನುಡಿ, ಗ್ರಾಮಸ್ಥರ ಸ್ವಾಭಿಮಾನಕ್ಕೆ ಧಕ್ಕೆ ತಂದು ಆಕ್ರೋಶದ ಕಿಡಿಯಾಗಿ ಹೊತ್ತಿಕೊಂಡಿದೆ.

ಇದು ಮಠದ ಕೆಲಸ, ಮಾತನಾಡಬೇಕಾದವರು ಸ್ವಾಮೀಜಿಯೇ ಹೊರತು, ಸ್ವಾಮೀಜಿಯ ಕುಟುಂಬಸ್ಥರಲ್ಲ. ಕುಟುಂಬಸ್ಥರು ಮಠದ ಜಾಗವನ್ನು ಸ್ವಾಮೀಜಿಗೆ ಬಿಟ್ಟು ಕೊಟ್ಟು, ಬೇರೆಡೆ ಹೋಗಲಿ. ಮಠ ಎಂದರೆ ಭಕ್ತಿ‌ಕೇಂದ್ರವಾಗಬೇಕೇ ಹೊರತು ರಾಜಕೀಯ ಸಭೆ ನಡೆಸುವ ತಾಣವಾಗಬಾರದು. ಕುಟುಂಬಸ್ಥರು ರಾಜಕೀಯ ಪಕ್ಷವೊಂದರಲ್ಲಿ ಗುರುತಿಸಿಕೊಂಡಿದ್ದು, ಮೊದಲು ರಾಜಕೀಯ ಸಭೆಗಳನ್ನು ಮಠದಲ್ಲಿ ನಡೆಸುವ ಅನಿಷ್ಠ ಕೈ ಬಿಡಿ ಎಂಬ ಕೂಗು ಮಾರ್ದನಿಸುತ್ತಿದ್ದಂತೆ, ಗ್ರಾಮಸ್ಥರು ಮತ್ತು ಸ್ವಾಮೀಜಿ ಕುಟುಂಬಸ್ಥರ ನಡುವೆ ದೊಡ್ಡ ವಾಗ್ವಾದವೇ ನಡೆದಿದೆ.

ಕೊನೆಗೂ ಗ್ರಾಮದ ಹಿರಿಯ ಮುಖಂಡರು ಮಧ್ಯಸ್ಥಿಕೆ ವಹಿಸಿ ಸಂಧಾನ ಮಾಡಿದ್ದಾರೆ. ಈ ಸಂಧಾನ ತಾತ್ಕಾಲಿಕವಷ್ಟೇ. ಇಂಥ ಹತ್ತು ಹಲವು ಪಂಚಾಯಿತಿಗಳನ್ನು ಅಳವಂಡಿಯ ಶ್ರೀ ಸಿದ್ದೇಶ್ವರ ಮಠ ಕಂಡಿದೆ.

ಕೇಕ್ ಕತ್ತರಿಸಿ ಸಂಭ್ರಮಾಚರಣೆ
ಅಳವಂಡಿಯ ಈಗಿನ ಸ್ವಾಮೀಜಿ ಕಳೆದ ವರ್ಷವಷ್ಟೇ ಪಟ್ಟಕ್ಕೆ ಬಂದಿದ್ದರು. ಅವರಿಗಿಂತ ಹಿಂದಿದ್ದ ಸ್ವಾಮೀಜಿ ಮುಂಡರಗಿ ಕಾಲೊಂದರಲ್ಲಿ ಪಾಠ ಮಾಡುತ್ತಿದ್ದರು. ಕಾಲೇಜಿನ ವಿದ್ಯಾರ್ಥಿನಿಯೊಂದಿಗೆ ಪ್ರೇಮಾಂಕುರವಾಗಿ ಅವರು ಸನ್ಯಾಸತ್ಯ ತ್ಯಜಿಸಿದ್ದರು. ಈಗಿನ ಸ್ವಾಮೀಜಿ ಪೀಠಕ್ಕೆ ಬಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಧಾರ್ಮಿಕ ಕಾರ್ಯ, ಕಾರ್ಯಕ್ರಮ ನಡೆಸುವ ಬದಲು ಕೇಕ್ ಕತ್ತರಿಸಿ ವರ್ಷಾಚರಣೆಯನ್ನು ಸಂಭ್ರಮಿಸಿದ್ದೂ ಸಹ ವಿವಾದವಾಗಿದ್ದನ್ನ ಸ್ಮರಿಸಬಹುದು…

ಮೊಬೈಲ್ ಕದ್ದು ಸಿಕ್ಕುಬಿದ್ದ‌ ಕಳ್ಳನಿಗೆ ಗೂಸಾ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಮೊಬೈಲ್ ಕದ್ದು, ಎಸ್ಕೇಪ್ ಆಗುತ್ತಿದ್ದ ಕಳ್ಳನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳದ ಕೇಂದ್ರ ಬಸ್ ನಿಲ್ದಾಣದಲ್ಲಿ ಕಳ್ಳ ಸಿಕ್ಕಿಬಿದ್ದಿದ್ದು, ಬಸ್ ಹತ್ತುತ್ತಿದ್ದ ಸಾಲುಂಚಿಮರದ ಗ್ರಾಮದ ಪ್ರಯಾಣಿಕರೊಬ್ಬರ ಮೊಬೈಲ್ ಎಗರಿಸಿ ಓಡಿಹೋಗುತ್ತಿದ್ದ ವೇಳೆ ಬೆನ್ನತ್ತಿ ಹಿಡಿದ ಸಾರ್ವಜನಿಕರು ಗೂಸಾ ನೀಡಿದ್ದಾರೆ.

ಆಂದ್ರದಪ್ರದೇಶ ಕರ್ನೂಲ್ ನ ಮೂಲದ ನಾಣಿ ಎನ್ನುವವನು ಸಿಕ್ಕಿಬಿದ್ದ ಕಳ್ಳನಾಗಿದ್ದು, ಕದ್ದ ಎರಡು ಮೊಬೈಲ್ ಗಳನ್ನು ಬಸ್ ನಿಲ್ದಾಣ ಕಸದ ಬುಟ್ಟಿಯಲ್ಲಿ ಎಸೆದು ಹೋಗಿದ್ದಾನೆ. ಇನ್ನೂ ಈ ಹಿಂದೆಯೂ ಒಮ್ಮೆ ಸಿಕ್ಕಿಬಿದ್ದಿದ್ದ ನಾಣಿ ಮತ್ತೆ ಹಳೇ ಕಸಬುಗೆ ಕೈ ಹಾಕಿ ಸಿಕ್ಕಿಬಿದ್ದಿದ್ದಾನೆ. ಇನ್ನು ಸಾರ್ವಜನಿಕರು ನಾಣಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ

ಕಸಾಪದಿಂದ ನಿವೃತ್ತಿ ಹೊಂದಲು ಅದೇನು ನೌಕರಿ ಅಲ್ಲ, ಕನ್ನಡದ ಸೇವೆ ಸಲ್ಲಿಸುವ ಸ್ಥಾನ

ಮುಲಾಲಿಗೆ ಶೇಖರಗೌಡ ತಿರುಗೇಟು

-ಅನುಭವ ಇದೆ, ವಯಸ್ಸಾಗಿಲ್ಲ..

-ಅನನುಭವಿಗಳಿಂದ ಪಾಠ ಕಲಿಯಬೇಕಿಲ್ಲ.

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕಸಾಪ ಚುನಾವಣಾ ಕಣದಿಂದ ನಿವೃತ್ತಿ‌ ಘೋಷಿಸಲಿ ಎಂದು ಹೇಳಿರುವವರು ಕಸಾಪದ ಸ್ಥಾನಮಾನಗಳು ಕನ್ನಡ ನಾಡು-ನುಡಿಗೆ ಮಾಡಬೇಕಾದ ಸೇವೆ ಎಂಬುದನ್ನು ಮರೆತು ಅದನ್ನೊಂದು ನೌಕರಿ ಎಂದು ಭಾವಿಸಿದಂತಿದೆ. ನಿವೃತ್ತಿ ಹೊಂದಲು ಅದೇನು ನೌಕರಿಯಲ್ಲ, ಬದಲಾಗಿ ನುಡಿಸೇವೆಗಿರುವ ಸ್ಥಾನವಷ್ಟೇ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಶೇಖರಗೌಡ ಮಾಲೀಪಾಟೀಲ ಹೇಳಿದರು.

ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಷತ್‌ನಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿ ಅನುಭವ ಹೊಂದಿದ್ದೇನೆ. 90ಕ್ಕೂ ಹೆಚ್ಚು ವಯಸ್ಸಾದ ಗೋರುಚ ಅಂಥವರೆ ನುಡಿಸೇವೆಯಲ್ಲಿ ನಿರತರಾಗಿದ್ದಾರೆ. ನನಗೇನು ಮಗಾ ವಯಸ್ಸಾಗಿದೆ. ಅನನುಭವಿಗಳಿಂದ ನಾನೇನು ಪಾಠ ಕಲಿಯಬೇಕಿಲ್ಲ. ಅದು ಅವರ ಅಭಿಪ್ರಾಯವಷ್ಟೇ. ಇದುವರೆಗೂ ಚುನಾವಣೆಯಿಂದ ಹಿಂದೆ ಸರಿಯುವ ಕುರಿತು ಅವರು ನನ್ನೊಂದಿಗೆ ಚರ್ಚಿಸಿಲ್ಲ ಎಂದು ಹೆಸರು ಉಲ್ಲೇಖಿಸದೇ ರಾಜ್ಯಾಧ್ಯಕ್ಷ ಸ್ಥಾನದ ಮತ್ತೊಬ್ಬ ಆಕಾಂಕ್ಷಿ ರಾಜಶೇಖರ ಮುಲಾಲಿಗೆ ತಿರುಗೇಟು ನೀಡಿದರು.

ರಾಜ್ಯದಲ್ಲಿ ಸುಮಾರು 3.10 ಲಕ್ಷ ಜನ ಕಸಾಪ ಮತದಾರರಿದ್ದಾರೆ. ಉತ್ತರ ಕರ್ನಾಟಕದಲ್ಲಿ ಸರಿಸುಮಾರು 1.50 ಲಕ್ಷ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಸುಮಾರು 50 ಸಾವಿರ ಕಸಾಪ ಮತದಾರರಿದ್ದಾರೆ. ಇದುವರೆಗೂ ಉತ್ತರ ಕರ್ನಾಟಕದ ಇಬ್ಬರು ಮಹನೀಯರು ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯದ 20 ಜಿಲ್ಲೆಗಳಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ ಎಂದರು.

ಕೊಪ್ಪಳ ಜಿಲ್ಲೆಯಲ್ಲಿ ಈ ಹಿಂದೆ ಎರಡು ಬಾರಿ ಜಿಲ್ಲಾಧ್ಯಕ್ಷರಾಗಿ ಸಾಹಿತ್ಯ ಪರಿಷತ್ತನ್ನು ಜನರಿಗೆ ಪರಿಚಯಿಸಿದ್ದೇನೆ. ಕೊಪ್ಪಳ ನನ್ನ ತವರು ಜಿಲ್ಲೆ. ನಾನು ಜಿಲ್ಲೆಗೆ ಮನೆ ಮಗ ಇದ್ದಂತೆ. ಜಿಲ್ಲೆಯ ಜನರು ಕಸಾಪ ಚುನಾವಣೆಯಲ್ಲಿ ನನ್ನ ಪರವಾಗಿರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಸಾಪ ಸ್ಥಾನಗಳಿಗೆ ಸ್ಪರ್ಧಿಸಲು ಸಾಹಿತಿಯೇ ಆಗಿರಬೇಕು ಎಂಬ ನಿಯಮಾವಳಿ ಇಲ್ಲ. ಓದು-ಬರಹ ಗೊತ್ತಿರುವ 18 ವರ್ಷ ತುಂಬಿರುವ ಯಾರಾದರೂ ಸ್ಪರ್ಧಿಸಬಹುದು. ಆದರೂ ನಾನು 3 ಪ್ರವಾಸ ಕಥನ ಸೇರಿದಂತೆ ಒಟ್ಟು 6 ಪುಸ್ತಕ ಹೊರತಂದಿದ್ದೇನೆ. ಹರಿಕೃಷ್ಣ ಪುನರೂರು ಅವರಂಥ ಉದ್ಯಮಿಗಳು, ಜಿ.ನಾರಾಯಣ ಅವರಂಥ ರಾಜಕಾರಣಿಗಳು ಕಸಾಪದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ರಾಜಕಾರಣಿ, ಉದ್ಯಮಿ, ಸಾಹಿತಿಯಲ್ಲ ಅ‌ನ್ನೋದು ಮುಖ್ಯವಲ್ಲ. ಸಂಘಟನಾ ಚತುರತೆ ಪ್ರಧಾನವಾದದ್ದು. ನಾನು ಪಕ್ಷವೊಂದರ ಜೊತೆ ಗುರುತಿಸಿಕೊಂಡಿರಬಹುದು, ಹಾಗೆಂದು ಈ ವಿಷಯದಲ್ಲಿ ರಾಜಕಾರಣ, ಜಾತಿ ಬೆರೆಸಲಾರೆ. ಕನ್ನಡ ನಾಡು-ನುಡಿ ಸೇವೆ ಮಾಡಲು ನಾನು ಸಮರ್ಥನಿದ್ದೇನೆ. ಜನ ನನ್ನ ಕೈ ಹಿಡಿತಾರೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ರಾಜಶೇಖರ್ ಅಂಗಡಿ, ಹಿರಿಯ ಸಾಹಿತಿಗಳಾದ ವಿ.ಬಿ.ರಡ್ಡೇರ್, ವಿಠ್ಠಪ್ಪ ಗೋರಂಟ್ಲಿ, ಡಾ.ಮಹಾಂತೇಶ ಮಲ್ಲನಗೌಡರ್ ಇತರರು ಇದ್ದರು.

ಮೂರು ವರ್ಷದ ಕಂದನ ಕತ್ತು ಹಿಸುಕಿ ಕೊಂದ ಪಾಪಿ ತಂದೆ; ಕೊಲೆಗೆ ಮೂರ್ಛೆರೋಗವೇ ಪ್ರೇರಣೆ

ವಿಜಯಸಾಕ್ಷಿ ಸುದ್ದಿ, ಗದಗ

ಅದೆಷ್ಟೋ ಗಂಡ-ಹೆಂಡಿರು ಮಕ್ಕಳು ಬೇಕೆಂದು ಮುಕ್ಕೋಟಿ ದೇವರಿಗೂ ಹರಕೆ ಹೊರುತ್ತಾರೆ. ಹುಟ್ಟಿದ ಮಗು ಅದು ಕಪ್ಪಗಿರಲಿ, ಬೆಳ್ಳಗಿರಲಿ ಹೆತ್ತರವರಿಗೆ ಹೆಗ್ಗಣವೇ ಮುದ್ದು ಎಂಬ ಗಾದೆಯಂತೆ ಮಕ್ಕಳನ್ನು ಅಪ್ಪಿಕೊಂಡು ಮುದ್ದಾಡುತ್ತಾರೆ. ಅದೇ ಮಕ್ಕಳ ಮದುವೆಯಾಗಿ ಮನೆಗೆ ಸೊಸೆ ಅಥವಾ ಅಳಿಯ ಬಂದರೂ ಮಕ್ಕಳ ಮೇಲಿನ ಮಮಕಾರ ಮಾತ್ರ ಕಡಿಮೆಯಾಗುವುದಿಲ್ಲ.

ಆದರೆ, ಇಲ್ಲೊಬ್ಬ ಪಾಪಿ ತಂದೆ ಫಿಟ್ಸ್ ಕಾಯಿಲೆಯಿಂದ ಬಳಲುತ್ತಿದ್ದ ಭುವನೇಶ್ವರಿ ಎಂಬ ತನ್ನ ಮೂರು ವರ್ಷದ ಕಂದಮ್ಮನ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ಅಮಾನವೀಯ ಘಟನೆ ಗದಗ ತಾಲೂಕಿನಲ್ಲಿ ನಡೆದಿದ್ದು, ಪತಿಯ ವಿರುದ್ಧ ಪತ್ನಿ ಕವಿತಾ ಗಣೇಶ ಮಡಿವಾಳರ ದೂರು ನೀಡಿದ್ದಾಳೆ.

ಗದಗ ತಾಲೂಕಿನ ಹೊಸಹಳ್ಳಿ ಗ್ರಾಮದ ಗಣೇಶ ಬೂದಪ್ಪ ಮಡಿವಾಳರ(೩೩) ಎಂಬುವವನೇ ಮಗಳನ್ನು ಕೊಲೆ ಮಾಡಿದ ಕನಿಕರವಿಲ್ಲದ ನತದೃಷ್ಟ ತಂದೆಯಾಗಿದ್ದಾನೆ.

ಸತ್ರೆ ಮೂರು ದಿನದ ದುಃಖ!

ಆರೋಪಿ ಗಣೇಶ, ಹುಲಕೋಟಿಯ ಆರ್‌ಎಂಎಸ್ ಆಸ್ಪತ್ರೆಯಲ್ಲಿ ಮಗಳ ಫಿಟ್ಸ್ ಕಾಯಿಲೆಗೆ ಸಾಕಷ್ಟು ಹಣ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿದ್ದಾನೆ. ಇವಳಿಗೆ ಹೀಗೆ ಚಿಕಿತ್ಸೆ ಕೊಡಿಸುತ್ತಾ ಹೋದರೆ, ಹೊಲ ಮನೆ ಮಾರಾಟ ಮಾಡಬೇಕಾಗುತ್ತದೆ. ಅಲ್ಲದೇ, ಇದರಿಂದ ಜೀವನವೂ ಹಾಳಾಗುತ್ತದೆ. ಸತ್ತರೆ ಮೂರು ದಿನದ ದುಃಖವೆಂದು ತಿಳಿದು ಕೊಲೆಗೈದಿದ್ದಾನೆ. ಈ ದುರುದ್ದೇಶದಿಂದಲೇ ಜ.11ರಂದು ಗದಗ ಜಿಲ್ಲಾಸ್ಪತ್ರೆಯಿಂದ ಆಟೋದಲ್ಲಿ ನಗರದ ಹೆರಿಗೆ ಆಸ್ಪತ್ರೆಗೆ ಕರೆದುಕೊಂಡು ಬರುವ ಮಾರ್ಗ ಮಧ್ಯೆ ಇರುವ ಮಲ್ಲಸಮುದ್ರ ಕ್ರಾಸ್ ಬಳಿ ಭುವನೇಶ್ವರಿ ಕುತ್ತಿಗೆಯಲ್ಲಿ ಕಟ್ಟಿದ್ದ ದಾರದಿಂದ ಕೊಲೆ ಮಾಡಿದ್ದಾನೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ:
ಕಳೆದ ಜ.11 ರಂದು ಭುವನೇಶ್ವರಿ ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ಇದ್ದಾಗ ಇವಳಿಗೆ ಫಿಟ್ಸ್ ಬಂದಿದೆ. ಆಗ ಅಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಅವಳಿಗೆ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆಯಂತೆ ಆರೋಪಿ ತಂದೆ ಗಣೇಶ, ತನ್ನ ಮಗಳನ್ನು ಗದಗ ಜಿಲ್ಲಾ ಆಸತ್ರ್ರೆಗೆ ಕರೆದುಕೊಂಡು ಬಂದಿದ್ದಾನೆ. ಅಲ್ಲಿನ ವೈದ್ಯರು ನಗರದ ತಾಲೂಕು ಹೆರಿಗೆ ಆಸ್ಪತ್ರೆಯಲ್ಲಿ ಚಿಕ್ಕ ಮಕ್ಕಳ ತಜ್ಞರಿದ್ದು, ಅವರ ಬಳಿ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ.
ಆಗ ಆರೋಪಿ ಗಣೇಶ ಚಿಕಿತ್ಸೆಗಾಗಿ ಮಗಳು ಭುವನೇಶ್ವರಿಯನ್ನು ಹೆರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಆಕೆಯನ್ನು ಪರೀಕ್ಷೆ ಮಾಡಿದ ವೈದ್ಯರು ಭುವನೇಶ್ವರಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ, ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಶವ ತೆಗೆದುಕೊಂಡು ಹೋಗುವಂತೆ ಹೇಳಿದ್ದಾರೆ. ವೈದ್ಯರು ಹೇಳಿದಂತೆ ಶವಗಾರದಲ್ಲಿ ಮಗಳ ಮೃತದೇಹವನ್ನಿಟ್ಟು ಬಳಿಕ ತನ್ನ ಹೆಂಡತಿ ಹಾಗೂ ಮನೆಯವರಿಗೆ ಸುದ್ದಿ ತಿಳಿಸಿದ್ದಾನೆ. ತಾಯಿ ಬಂದು ಮಗಳ ಶವ ನೋಡಿ ಸಾವಿನಲ್ಲಿ ಸಂಶಯವಿರುವುದಾಗಿ ದೂರಿದಾಗ ಎಫ್‌ಐಆರ್‌ನಲ್ಲಿ ಈ ಮೇಲಿನ ಸಂಗತಿಗಳು ತಿಳಿದು ಬಂದಿವೆ.

ಟ್ರ್ಯಾಕ್ಟರ್ ಪಲ್ಟಿ; ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವು, ಏಳು ಜನರಿಗೆ ಗಾಯ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಟ್ರ್ಯಾಕ್ಟರ್ ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದು, ಏಳು ಜನರು ಗಾಯಗೊಂಡಿರುವ ದುರ್ಘಟನೆ ಲಕ್ಷೇಶ್ವರ ತಾಲೂಕಿನ ಗುಂಜಳ ರಸ್ತೆಯಲ್ಲಿ ನಡೆದಿದೆ.

ಲಕ್ಷ್ಮೇಶ್ವರ ಪಟ್ಟಣದ ನಿವಾಸಿಗಳಾದ ಸರೋಜವ್ವ ಹಿತ್ತಲಮನಿ (40) ಹಾಗೂ ಸೋಮವ್ವ ಅಡುಗೆಮನಿ (48) ಸ್ಥಳದಲ್ಲೇ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ದುರಗವ್ವ ದೂಳಮ್ಮನವರ,
ಬಸಮ್ಮ ಗಡದವರ, ಗಂಗವ್ವ ಹೊಸಮನಿ, ಬಸವ್ವ ಸಂದಿಮನಿ
ಶೋಭಕ್ಕ ದೂಳಮ್ಮನವರ,
ಸುಂದರವ್ವ ಗಡದವರ ಹಾಗೂ
ಯಲ್ಲವ್ವ ಬೂದಿಹಾಳ ಎಂಬುವವರು ಗಾಯಗೊಂಡಿದ್ದಾರೆ.

ಇಂದು ನಸುಕಿನಲ್ಲಿ ಕಡಲೆ ಬೆಳೆ ಕಿತ್ತು ಟ್ರ್ಯಾಕ್ಟರ್ ನಲ್ಲಿ ಹೇರಿಕೊಂಡು ಮತ್ತೊಂದು ಜಮೀನಿಗೆ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿದೆ.

ಸದ್ಯ ಗಾಯಾಳುಗಳನ್ನು ಚಿಕಿತ್ಸೆಗಾಗಿ ಲಕ್ಷ್ಮೇಶ್ವರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಶಿರಹಟ್ಟಿ ಸಿಪಿಐ ವಿಕಾಸ ಲಮಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

‘133 ದಿನ 92 ಪ್ರಕರಣ, ಒಂದೂ ಸಾವಿಲ್ಲ; ಜಿಲ್ಲೆಯಲ್ಲಿ ಎರಡಂಕಿ ದಾಟದ ಸೋಂಕಿತರು

0

ಕೋವಿಡ್ 2ನೇ ಅಲೆಯ ನಿಯಂತ್ರಣಕ್ಕೆ ಮುಂಜಾಗೃತಾ ಕ್ರಮ
ಕೊರೋನಾ ಲಸಿಕೆ ವಿತರಣೆ: ಜಿಲ್ಲೆಯಲ್ಲಿ ಶೇ.73ರಷ್ಟು ಸಾಧನೆ

ದುರುಗಪ್ಪ ಹೊಸಮನಿ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲಿ ಕಳೆದ ನಾಲ್ಕೈದು ತಿಂಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗಿದ್ದು, ಎರಡಂಕಿ ದಾಟುತ್ತಿಲ್ಲ. ಕೊರೊನಾ ಸೋಂಕಿತರ ಇಳಿಕೆಯ ಜೊತೆಗೆ ಗುಣಮುಖರ ಸಂಖ್ಯೆಯೂ ಅಷ್ಟೇ ಶರವೇಗದಲ್ಲಿ ಏರಿಕೆಯಾಗುತ್ತಿದೆ.

ದಿನ ಒಂದಕ್ಕೆ ಕೇವಲ ಒಂದೆರೆಡು ಸಕ್ರಿಯ ಪ್ರಕರಣಗಳು ಮಾತ್ರ ವರದಿಯಾಗುತ್ತಿರುವುದು ಜಿಲ್ಲೆಯ ಜನರಲ್ಲಿ ಹರ್ಷವನ್ನುಂಟು ಮಾಡಿದೆ. ಅಲ್ಲದೇ, ಕೋವಿಡ್ ನಿಯಂತ್ರಿಸುವಲ್ಲಿ ಜಿಲ್ಲಾಡಳಿತದ ಕಾರ್ಯವೈಖರಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ದೇಶದಲ್ಲಿ ಲಾಕಡೌನ್ ಜಾರಿಯಾಗಿ ಒಂದು ತಿಂಗಳ ಬಳಿಕ ಕಳೆದ ವರ್ಷ ಏಪ್ರಿಲ್‌ನಲ್ಲಿ ಗದಗ ನಗರದ ರಂಗನವಾಡಿಯ ಮಹಿಳೆಯಲ್ಲಿ ಮೊದಲ ಕೊರೊನಾ ಸಕ್ರಿಯ ಪ್ರಕರಣ ಪತ್ತೆಯಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸುಮಾರು 65 ವರ್ಷದ ಮಹಿಳೆ ಏಪ್ರಿಲ್‌ನಲ್ಲೇ ಮೃತಪಟ್ಟಿದ್ದಳು. ಇದು ಜಿಲ್ಲೆಯ ಜನರನ್ನು ಆತಂಕಕ್ಕೀಡು ಮಾಡಿತ್ತು.

ಫೆ.23ರವರೆಗೆ ಜಿಲ್ಲೆಯಲ್ಲಿ ಒಟ್ಟು 2,40,767 ಜನರು ಕೊರೊನಾ ನಿಗಾಕ್ಕೆ ಒಳಗಾಗಿದ್ದಾರೆ. ಸೋಂಕಿನ ಪರೀಕ್ಷೆಗಾಗಿ ಒಟ್ಟು 2,47,107 ಮಾದರಿ ಸಂಗ್ರಹಿಸಲಾಗಿದೆ. ಇಲ್ಲಿಯವರೆಗೆ ಒಟ್ಟು 2,35,940 ವರದಿಗಳು ನಕಾರಾತ್ಮಕವಾಗಿವೆ. ಇನ್ನೂ 156 ಜನರ ವರದಿ ಬರಲು ಬಾಕಿ ಇದ್ದು, ಒಟ್ಟು 11,011 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೇ, ಅಕ್ಟೋಬರ್ 15ರವರೆಗೆ ಒಟ್ಟು 141 ಜನರು ಕೊರೊನಾದಿಂದ ಮೃತಪಟ್ಟಿದ್ದು, ಸೋಂಕಿನಿಂದ ಒಟ್ಟು 10,862 ಗುಣಮುಖರಾಗಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ 8 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 92 ಕೊರೊನಾ ಸಕಾರಾತ್ಮಕ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು 11,011 ಕೊರೊನಾ ಪ್ರಕರಣಗಳು ಪತ್ತೆಯಾದಂತಾಗಿವೆ. ಕಳೆದ ವರ್ಷ ಅಕ್ಟೋಬರ್ 15ರವರೆಗೆ ಕೊರೊನಾದಿಂದ ಸಾವು ಸಂಭವಿಸಿದ್ದು, ಜಿಲ್ಲೆಯಲ್ಲಿ ಇದೇ ಕೊನೆಯ ಸಾವಾಗಿದೆ. ಅಲ್ಲಿಂದ ಇಲ್ಲಿಯವರೆಗೂ ಸುಮಾರು 133 ದಿನಗಳಿಂದ ಕೋವಿಡ್‌ನಿಂದ ಯಾವುದೇ ಸಾವು ಸಂಭವಿಸಿರುವ ವರದಿಯಾಗಿಲ್ಲ. ಇನ್ನು ಗಂಟಲು ದ್ರವದ ಮಾದರಿ ಪರೀಕ್ಷೆಗಳನ್ನು ನಿರಂತರವಾಗಿ ಮಾಡಲಾಗುತ್ತಿದ್ದು, ಪ್ರತಿದಿನ 1000ಕ್ಕೂ ಹೆಚ್ಚು ಗಂಟಲು ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ. ಈಗಾಗಲೇ ಜಿಲ್ಲೆಯಾದ್ಯಂತ ಕೊರೊನಾ ಲಸಿಕಾ ಕಾರ್ಯಕ್ರಮ ಆರಂಭಗೊಂಡಿದ್ದು, ಶೇ.73ರಷ್ಟು ಗುರಿ ಸಾಧಿಸಿದೆ.

ನೆರೆಯ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಭೀತಿಯ ಶುರುವಾಗಿರುವ ಬೆನ್ನಲ್ಲೆ ಈಗಾಗಲೇ ರಾಜ್ಯ ಸರಕಾರ ಗಡಿ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಈ ನಡುವೆಯೂ ಜಿಲ್ಲೆಯ ಕೊರೊನಾ ಪ್ರಕರಣಗಳ ಸಂಖ್ಯೆ ಸಮಾಧಾನ ತಂದಿದೆ. ಅಲ್ಲದೇ, ಕೋವಿಡ್-19 ಸೋಂಕಿನ ಎರಡನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ.

ಜಿಲ್ಲಾಡಳಿತ ಆರಂಭದಿಂದಲೂ ಕೊರೊನಾ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮಕೈಗೊಂಡಿತ್ತು. ಕೊರೊನಾ ಸೋಂಕಿತರಿಗಾಗಿಯೇ ಪ್ರತ್ಯೇಕ ಆಸ್ಪತ್ರೆಯ ವ್ಯವಸ್ಥೆ ಮಾಡಿಕೊಳ್ಳುವ ಮೂಲಕ ಸೋಂಕಿತರ ಮೇಲೆ ಹೆಚ್ಚು ನಿಗಾವಹಿಸಿತ್ತು. ಅಲ್ಲದೇ, ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರನ್ನು ತ್ವರಿತವಾಗಿ ಪತ್ತೆ ಹಚ್ಚುವ ಮೂಲಕ ಕೊರೊನಾಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದೆ.

ಕೊರೊನಾ ಸಂಶಯಾಸ್ಪದ ವ್ಯಕ್ತಿಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ಬರುವುದು ಅನುಮಾನ. ಆದರೂ, ಜಿಲ್ಲೆಯಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ

ಡಾ,ಸತೀಶ್ ಬಸರಿಗಿಡದ, ಡಿಎಚ್ಒ

ಜನರಲ್ಲಿ ಜಾಗೃತಿ

ನೆರೆಯ ಕೇರಳ, ಮಹಾರಾಷ್ಟ್ರ ರಾಜ್ಯಗಳಲ್ಲಿ ಕೊರೊನಾ ಎರಡನೇ ಅಲೆ ಜೋರಾಗಿದ್ದು, ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ರಾಜ್ಯದಲ್ಲೂ ಕೋವಿಡ್-19 ಸೋಂಕು ಮರಳಿ ಅಬ್ಬರಿಸಬಹುದಾದ ಸಾಧ್ಯತೆಗಳಿದ್ದು, ಜಿಲ್ಲೆಯಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಜಿಲ್ಲಾಡಳಿತ ಕೊರೊನಾ ಕುರಿತು ನಿರಂತರವಾಗಿ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರ ಮೂಲಕ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸ್ ಬಳಕೆಯ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ನೀಡಲಾಗುತ್ತಿದೆ.

ಕಾಲಿಗೆ ಚಪ್ಪಲಿ ಹಾಕ್ಕೊಂಡೇ ಶಾಸಕರಿಂದ ಭೂಮಿಪೂಜೆ ; ಸಾರ್ವಜನಿಕರ ಆಕ್ರೋಶ


ವಿಜಯಸಾಕ್ಷಿ ಸುದ್ದಿ, ಗದಗ

ದ್ರುವಾ ಸರ್ಜಾ ಅಭಿನಯದ, ನಂದಕಿಶೋರ್ ನಿರ್ದೇಶನದ ಬಹು ನಿರೀಕ್ಷಿತ ಪೊಗರು ಕನ್ನಡ ಸಿನಿಮಾದಲ್ಲಿ ಪುರೋಹಿತರೊಬ್ಬರ ಮೇಲೆ ಖಳ ನಾಯಕನೊಬ್ಬ ಪಾದರಕ್ಷೆ ಹಾಕಿಕೊಂಡಿರುವ ಪಾದವನ್ನು ಭುಜದ ಮೇಲೆ ಇಟ್ಟಿದ್ದು, ರಾಜ್ಯದಾದ್ಯಂತ ವಿವಾದಕ್ಕೆ ಕಾರಣವಾಗಿದ್ದು, ಸಿನಿಮಾದ ಆ ದೃಶ್ಯವನ್ನೇ ಕಡಿತ ಮಾಡುವವರೆಗೂ ಬಂದು ತಲುಪಿದ ಬೆನ್ನಲ್ಲೇ ಇಲ್ಲೊಬ್ಬ ಬಿಜೆಪಿ ಶಾಸಕರು ಕಾಲಲ್ಲಿ ಚಪ್ಪಲಿ ಹಾಕಿಕೊಂಡೇ ಕಾಮಗಾರಿಯ ಭೂಮಿಪೂಜೆ ನೆರವೇರಸಿರುವ ಘಟನೆ ಬೆಳಕಿಗೆ ಬಂದಿದೆ.

ಬಿಜೆಪಿ ಅಂದ್ರೆ ಅದು ಹಿಂದೂ ಧರ್ಮದ ಪ್ರತಿಪಾದಕ ಪಕ್ಷ. ಅದರಲ್ಲಿನ ಶಾಸಕರೂ ಅಷ್ಟೇ ಹಿಂದೂ ಧರ್ಮದ ಪರಿಪಾಲಕರು ಮತ್ತು ಆರಾಧಕರು ಎಂದು ಬಣ್ಣಿಸಲಾಗುತ್ತದೆ. ಅಲ್ಲದೇ, ಪಕ್ಷದ ತತ್ವ ಸಿದ್ದಾಂತಗಳನ್ನು ಚಾಚೂ ತಪ್ಪದೇ ಪಾಲಿಸುತ್ತಾರೆ. ಯಾವುದೇ ಶುಭ ಸಂದರ್ಭಗಳಲ್ಲಿ, ಪೂಜಾ ಕೈಂಕರ್ಯಗಳಲ್ಲಿ ಪಾದಕ್ಕೆ ಪಾದರಕ್ಷೆ ಹಾಕಿಕೊಳ್ಳದೇ, ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಸಾಮಾನ್ಯ.

ಆದರೆ, ಜಿಲ್ಲೆಯ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಅವರು ಕಾಲಿಗೆ ಪಾದರಕ್ಷೆ ಹಾಕಿಕೊಂಡೇ ಭೂಮಿಪೂಜೆ ನೆರವೇರಿಸಿದ ಘಟನೆ ಬುಧವಾರ ಲಕ್ಷ್ಮೇಶ್ವರ ಸಮೀಪದ ಮುಕ್ತಿಮಂದಿರದಲ್ಲಿ ನಡೆದಿದೆ.

ಲಕ್ಷ್ಮೇಶ್ವರದ ಪಂಪ ಸರ್ಕಲ್‌ನಿಂದ ಶ್ರೀಕ್ಷೇತ್ರ ಮುಕ್ತ್ತಿಮಂದಿರದವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಯ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಇಂತಹ ದೃಶ್ಯ ಕಂಡು ಬಂದಿತು. ಈ ಸಂದರ್ಭದಲ್ಲಿ ಓರ್ವ ಸ್ವಾಮೀಜಿಗಳು ಸೇರಿದಂತೆ ಹಲವರು ಇಂತಹ ದೃಶ್ಯವೊಂದಕ್ಕೆ ಸಾಕ್ಷಿಯಾದರು. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.

ಕಳೆದಹೋದ ಮರ್ಯಾದೆ ಮತ್ತೆ ಬರುವಂತೆ ದುರ್ಗದೇವಿಗೆ ಪತ್ರ ಬರೆದು ಬೇಡಿಕೊಂಡ ಭಕ್ತ

0

ವಿಜಯಸಾಕ್ಷಿ ಸುದ್ದಿ, ಗಂಗಾವತಿ

ಕಳೆದುಹೋದ ಮರ್ಯಾದೆ ಮಾನ ಸನ್ಮಾನಗಳು ಮತ್ತೆ ಬರಲು ಆಶೀರ್ವಾದ ಮಾಡುವಂತೆ ಭಕ್ತನೋರ್ವ ಗಂಗಾವತಿ ಗ್ರಾಮದೇವತೆ ದುರುಗಮ್ಮ ಹುಂಡಿಗೆ ಕಾಣಿಕೆ ಸಮೇತ ಪತ್ರ ಬರೆದು ಹಾಕಿದ್ದಾನೆ.

ದೇವತೆಯ ಕಾಣಿಕೆ ಪೆಟ್ಟಿಗೆ (ಹುಂಡಿ) ಎಣಿಕೆಯ ಸಂದರ್ಭದಲ್ಲಿ ಪತ್ರ ಕಂಡು ಬಂದಿದ್ದು ಏಲಕ್ಕಿ ಚಕ್ಕಿ ಸಮೇತ ಪತ್ರಕ್ಕೆ ಅರಿಷಿಣ ಕುಂಕುಮ ಹಚ್ಚಿ ಪತ್ರವನ್ನು ಹುಂಡಿಯಲ್ಲಿ ಹಾಕಿದ್ದಾರೆ.

ಸಿದ್ದಾಪುರದಲ್ಲಿ‌ ಪ್ಲಾಟ್ ಮಾರಾಟವಾಗಲಿ, ಅಕ್ಕ, ಅಣ್ಣ ತಮ್ಮನ ಮದುವೆಯಾಗಲಿ, ಕೋರ್ಟಿನಲ್ಲಿರುವ ಕೇಸ್ ಗೆದ್ದು ಹೊಲದ ಹಣ ಬೇಗನೆ ಬರಲಿ, ಇಡೀ ಕುಟುಂಬ ಕಷ್ಟದಿಂದ ಬೇಗನೆ ಹೊರಗೆ ಬರಲಿ ಎಂದು‌ ಪತ್ರದಲ್ಲಿ ಬರೆಯಲಾಗಿದೆ.

ಬುಧವಾರ ಹುಂಡಿಯ ಹಣ ಎಣಿಕೆ ಮಾಡಲಾಗಿದ್ದು ಒಟ್ಟು 2,10,070 ರೂ ಸಂಗ್ರಹವಾಗಿದೆ. ಕಳೆದ 5 ತಿಂಗಳ ಹಿಂದೆ ಹುಂಡಿ ಎಣಿಕೆ ಸಂದರ್ಭದಲ್ಲಿ 2,17.000 ರೂ ಹಣ ಸಂಗ್ರಹವಾಗಿತ್ತು
ಹುಂಡಿ ಎಣಿಕೆ ಸಂದರ್ಭದಲ್ಲಿ ಜೋಗದ ನಾರಾಯಣಪ್ಪ, ಬಿ.ಅಶೋಕ, ಬಿಚ್ಚಾಲಿ ಮಲ್ಲಿಕಾರ್ಜುನ, ವಾಮರಜ್ಯೋತಿ ವೆಂಕಟೇಶ ಗೀತಾವಿಕ್ರಂ ಸೇರಿ ಅನೇಕರಿದ್ದರು.

ಸರಿಯಾದ ಸಮಯಕ್ಕೆ ಬಾರದ ಬಸ್ಸುಗಳು; ಕಾಲೇಜು ವಿದ್ಯಾರ್ಥಿಗಳ ಪರದಾಟ

0

ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನೂರಾರು ವಿದ್ಯಾರ್ಥಿಗಳು

ವಿಜಯಸಾಕ್ಷಿ ಸುದ್ದಿ, ಕೊಪ್ಪಳ : ಗ್ರಾಮಾಂತರ ಭಾಗದ ಕಾಲೇಜ್ ವಿದ್ಯಾರ್ಥಿಗಳು ಬಸ್ಸುಗಳಿಲ್ಲದೇ ಪರದಾಟ ನಡೆಸುತ್ತಿತುವುದು ಕೊಪ್ಪಳ ಜಿಲ್ಲೆಯಲ್ಲಿ ಸರ್ವೇಸಾಮಾನ್ಯವಾಗಿಬಿಟ್ಟಿದೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಏಕಾಏಕಿ ರಾಜ್ಯಹೆದ್ದಾರಿ ಬಂದ್ ಮಾಡಿ ಬಸ್ಸಗಳನ್ನು ತಡೆದ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ನಡೆದಿದೆ. ಯಲಬುರ್ಗಾ ತಾಲೂಕಿನ ಕುದರಮೋತಿ ಗ್ರಾಮದಲ್ಲಿ ಬಸ್ಸುಗಳು ನಿಲ್ಲಿಸದೆ ಹೋಗುತ್ತಿದ್ದು, ಇದರಿಂದ ಕಾಲೇಜುಗಳಿಗೆ ಹೋಗಲು ಸಮಸ್ಯೆಯಾಗುತ್ತಿತ್ತು. ಇದರಿಂದ ರೊಚ್ಚಿಗೆದ್ದ ನೂರಾರು ಕಾಲೇಜ್ ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿ, ಹತ್ತಾರು ಬಸ್ಸುಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದರು.

ಇನ್ನು ಈ ಬಗ್ಗೆ ಜಿಲ್ಲೆಯ KSRTC ವಿಭಾಗದ ಡಿಪೋ ಮ್ಯಾನೇಜರ್ ಗಳಲ್ಲಿ ಎಸ್ಎಫ್ಐ ಸಂಘಟನೆಯು ಮನವಿ ಮಾಡಿಕೊಂಡಿದ್ದು, ಜಿಲ್ಲೆಯಾದ್ಯಂತ ಕಾಲೇಜು ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಗ್ರಾಮಗಳಿಂದ ನಗರಕ್ಕೆ ಬಸ್ಸ್ ಗಳನ್ನು ಬಿಡಬೇಕು ಇಲ್ಲದಿದ್ದಲ್ಲಿ ನಿಮ್ಮ ಕಚೇರಿಯ ಮುಂದೆ ದಿನನಿತ್ಯ ಹೋರಾಟ ಮಾಡಲು ಮುಂದಾಗಬೇಕಾಗುತ್ತದೆ ಎಚ್ಚರಿಸಿದ್ದಾರೆ.

ಸರಿಯಾದ ಸಮಯಕ್ಕೆ ಬಾರದ ಬಸ್ಸುಗಳು. ಕಾಲೇಜು ವಿದ್ಯಾರ್ಥಿಗಳ ಪರದಾಟ. ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನೂರಾರು ವಿದ್ಯಾರ್ಥಿಗಳು

0

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಗ್ರಾಮಾಂತರ ಭಾಗದ ಕಾಲೇಜ್ ವಿದ್ಯಾರ್ಥಿಗಳು ಬಸ್ಸುಗಳಿಲ್ಲದೇ ಪರದಾಟ ನಡೆಸುತ್ತಿತುವುದು ಕೊಪ್ಪಳ ಜಿಲ್ಲೆಯಲ್ಲಿ ಸರ್ವೇಸಾಮಾನ್ಯವಾಗಿಬಿಟ್ಟಿದೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಏಕಾಏಕಿ ರಾಜ್ಯಹೆದ್ದಾರಿ ಬಂದ್ ಮಾಡಿ ಬಸ್ಸಗಳನ್ನು ತಡೆದ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ನಡೆದಿದೆ.
ಯಲಬುರ್ಗಾ ತಾಲೂಕಿನ ಕುದರಮೋತಿ ಗ್ರಾಮದಲ್ಲಿ ಬಸ್ಸುಗಳು ನಿಲ್ಲಿಸದೆ ಹೋಗುತ್ತಿದ್ದು, ಇದರಿಂದ ಕಾಲೇಜುಗಳಿಗೆ ಹೋಗಲು ಸಮಸ್ಯೆಯಾಗುತ್ತಿತ್ತು. ಇದರಿಂದ ರೊಚ್ಚಿಗೆದ್ದ ನೂರಾರು ಕಾಲೇಜ್ ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿ, ಹತ್ತಾರು ಬಸ್ಸುಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದರು.
ಇನ್ನು ಈ ಬಗ್ಗೆ ಜಿಲ್ಲೆಯ KSRTC ವಿಭಾಗದ ಡಿಪೋ ಮ್ಯಾನೇಜರ್ ಗಳಲ್ಲಿ ಎಸ್ಎಫ್ಐ ಸಂಘಟನೆಯು ಮನವಿ ಮಾಡಿಕೊಂಡಿದ್ದು, ಜಿಲ್ಲೆಯಾದ್ಯಂತ ಕಾಲೇಜು ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಗ್ರಾಮಗಳಿಂದ ನಗರಕ್ಕೆ ಬಸ್ಸ್ ಗಳನ್ನು ಬಿಡಬೇಕು ಇಲ್ಲದಿದ್ದಲ್ಲಿ ನಿಮ್ಮ ಕಚೇರಿಯ ಮುಂದೆ ದಿನನಿತ್ಯ ಹೋರಾಟ ಮಾಡಲು ಮುಂದಾಗಬೇಕಾಗುತ್ತದೆ ಎಚ್ಚರಿಸಿದ್ದಾರೆ..

error: Content is protected !!