ಹೊಸಳ್ಳಿ ರಸ್ತೆಯ ಲಕ್ಷ್ಮಿ ವೆಂಕಟೇಶ್ವರ ಕಾಲೋನಿಯಲ್ಲಿ ಹೈಟೆಕ್ ವೈಶ್ಯವಾಟಿಕೆ ದಂಧೆ ನಡೆಸಲಾಗುತ್ತಿದೆ ಎಂದು ಖಚಿತ ದೂರು ಬಂದ ಹಿನ್ನೆಲೆಯಲ್ಲಿ ನಗರ ಪೋಲಿಸರು ದಾಳಿ ಮಾಡಿ ಇಬ್ಬರು ಮಹಿಳೆಯರು ಸೇರಿ ಐವರನ್ನು ವಶಕ್ಕೆ ಪಡೆದುಕೊಂಡ ಘಟನೆ ಶುಕ್ರವಾರ ನಡೆದಿದೆ.
DYSP ರುದ್ರೇಶ ಉಜ್ಜನಕೊಪ್ಪ ರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಗರ ಪೋಲಿಸ್ ಠಾಣೆಯ PI ವೆಂಕಟಸ್ವಾಮಿ, ನಗರದ ಹೊಸಳ್ಳಿ ರಸ್ತೆಯಲ್ಲಿ ಬರುವ ಲಕ್ಷ್ಮೀ ವೆಂಕಟೇಶ್ವರ ಕಾಲೋನಿಯ ಸಿದ್ದಲಿಂಗಯ್ಯ ಸಿದ್ದಪ್ಪ ಎನ್ನುವವರ ಮನೆಯನ್ನು ವಿಜಯಪುರ ಜಿಲ್ಲೆಯ ಬಸವರಾಜ ವಕ್ಕಲಿಗ ಎಂಬ ವ್ಯಕ್ತಿ ಕಳೆದ ಫೆ.20ರಂದು ಮನೆ ಬಾಡಿಗೆಗೆ ತೆಗೆದುಕೊಂಡು ವೈಶ್ಯವಾಟಿಕೆ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ.
ಮೂವರು ಅಂದರ್
ಮೂಲತಃ ವಿಜಯಪುರ ಜಿಲ್ಲೆಯವನಾದ ಬಸವರಾಜ ವಕ್ಕಲಿಗ, ಮಹಾರಾಷ್ಟ್ರದ ಪುಣೆ ಹಾಗು ವಿಜಯಪುರದ ಕಡೆಯಿಂದ ಮಹಿಳೆಯರನ್ನು ಕರೆ ತಂದು ವೇಶ್ಯಾವಾಟಿಕೆ ನಡೆಸುತ್ತಿದ್ದ ಎಂದು ತಿಳಿದು ಬಂದಿದ್ದು, ಸಧ್ಯಕ್ಕೆ ಮಹಾರಾಷ್ಟ್ರ ಮೂಲದ ಒಬ್ಬ ಸಂತ್ರಸ್ತೆ ಮತ್ತು ವಿಜಯಪುರ ಜಿಲ್ಲೆಯ ಒಬ್ಬ ಸಂತ್ರಸ್ತೆ ಸೇರಿ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿ ಸಾಂತ್ವನ ಕೇಂದ್ರಕ್ಕೆ ಒಪ್ಪಿಸಲಾಗಿದೆ.
ಬಸವರಾಜ ವಿಜಯಪುರ, ಸುರೇಶ್ ಸಿಂಧನೂರು ಹಾಗೂ ಬಸವರಾಜ ತೋಟದ ಮಸ್ಕಿ ಎಂಬುವವರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
21ನೇ ಶತಮಾನಕ್ಕೆ ಪಾದಾರ್ಪಣೆ ಮಾಡಿದ್ದರೂ ಅಸ್ಪೃಶ್ಯತೆ ಆಚರಣೆ ಇನ್ನೂ ಜೀವಂತವಾಗಿದೆ. ಮೇಲು ಕೀಳೆಂಬ ಬೇಧ ಭಾವ ತಾಂಡವಾಡುತ್ತಿದೆ.
ಈ ನಡುವೆ ಅಸ್ಪೃಶ್ಯತೆ ನಿವಾರಣೆಗೆ ಜಿಲ್ಲೆಯ ಮುಂಡರಗಿ ತಾಲೂಕು ತಹಶೀಲ್ದಾರ ಆಶಪ್ಪ ಪೂಜಾರ ಅವರು ಸ್ವತಃ ಪರಿಶಿಷ್ಟ ಜಾತಿ ಜನಾಂಗದವರು ಕುಡಿದ ಚಹಾ ಕಪ್ಪನ್ನು(ಗ್ಲಾಸ್) ತೊಳೆಯುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದು, ತಹಶೀಲ್ದಾರ್ ರ ಕಾರ್ಯಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.
ಜಿಲ್ಲೆಯ ಮುಂಡರಗಿ ತಾಲೂಕಿನ ಹಾರೋಗೇರಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ವಿಷಯ ತಿಳಿದ ಆಶಪ್ಪ ಪೂಜಾರ ಅವರು ಗುರುವಾರ ಗ್ರಾಮಕ್ಕೆ ತೆರಳಿ ಗ್ರಾಮದಲ್ಲಿರುವ ಸವರ್ಣಿಯರಿಗೆ ತಿಳುವಳಿಕೆ ನೀಡಿದರು.
ಹಾರೋಗೇರಿ ಗ್ರಾಮದಲ್ಲಿ ಬಹಳ ದಿನಗಳ ಹಿಂದೆ ದಲಿತರಿಗೆ ಚಹಾ ಅಂಗಡಿ ಒಳಗೆ ಪ್ರವೇಶ ಹಾಗೂ ಕ್ಷೌರ ಮಾಡುವುದನ್ನು ನಿಷೇಧಿಸಲಾಗಿತ್ತು. ಪರಿಶಿಷ್ಟ ಜಾತಿಯವರ ಮನೆಯಲ್ಲಿ ಯಾರಾದರೂ ಸಾವನ್ನಪ್ಪಿದರೆ ಸರ್ವರ್ಣಿಯರು ಊರಲ್ಲಿರುವ ಚಹಾ ಅಂಗಡಿಗಳನ್ನು ಬಂದ್ ಮಾಡುತ್ತಿದ್ದರು.
ಹೀಗಾಗಿ ಗ್ರಾಮದಲ್ಲಿ ಅಸ್ಪೃಶ್ಯತೆ ನಿವಾರಣೆಗಾಗಿ ತಹಶೀಲ್ದಾರ್ ಆಶಪ್ಪ ಪೂಜಾರಿ, ಸಿಪಿಐ ಸುಧೀರ್ ಕುಮಾರ್ ಬೆಂಕಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ ಅವರು ಜಾಗೃತಿ ಸಭೆ ನಡೆಸಿ, ಗ್ರಾಮಸ್ಥರೊಂದಿಗೆ ಚಹಾದ ಅಂಗಡಿಗೆ ಹೋಗಿ ಚಹಾ ಗ್ಲಾಸ್ ತೊಳೆಯುವ ಮೂಲಕ ಜಾಗೃತಿ ಮೂಡಿಸಿದರಲ್ಲದೇ, ಮತ್ತೊಬ್ಬರಿಗೆ ಮಾದರಿಯಾದರು.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಎಂ.ಎ.ನದಾಫ್, ಹಾರೋಗೇರಿ ಗ್ರಾಪಂ ಪಿಡಿಒ ಮಹೇಶ್ ಅಲ್ಲಿಪೂರ ಅವರು ಇದ್ದರು.
ಸರಕಾರಿ ವೈದ್ಯರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ವೈದ್ಯರ ಸ್ನೇಹಿತರಿಗೆ ಹಣಕ್ಕಾಗಿ ಬೇಡಿಕೆ ಇಟ್ಟಿರುವ ಘಟನೆ ಗದಗ ನಗರದಲ್ಲಿ ನಡೆದಿದೆ.
ನಗರದ ಜಿಲ್ಲಾಸ್ಪತ್ರೆ ವೈದ್ಯ ಡಾ. ಪ್ರಕಾಶ ಹೊಸಮನಿ ಎಂಬುವವರ ಫೇಸ್ಬುಕ್ ಖಾತೆಯನ್ನು ಫೇಕ್ ಮಾಡಿ ಹಣ ದರೋಡೆಗೆ ಮುಂದಾಗಿದ್ದಾರೆ.
ಡಾ.ಪ್ರಕಾಶ ಅವರು ನಗರದಲ್ಲಿ ಪ್ರತಿಷ್ಠಿತ ನ್ಯೂರೋ ಸರ್ಜನ್ ಸ್ಪೆಶಲಿಸ್ಟ್ ಆಗಿದ್ದು, ನಕಲಿ ಫೇಸ್ಬುಕ್ ಖಾತೆ ಮೂಲಕ ಸ್ನೇಹಿತರಿಗೆ ತುರ್ತಾಗಿ 15,000 ಬೇಕಿತ್ತು ಅಂತಾ ಸೈಬರ್ ದರೋಡೆಕೋರರು ಪೇಸ್ಬುಕ್ ಸಂದೇಶ ಕಳುಹಿಸಿದ್ದಾರೆ.
ಈ ವಿಷಯ ಸ್ನೇಹಿತರಿಂದ ಡಾ.ಪ್ರಕಾಶ ಅವರ ಗಮನಕ್ಕೆ ಬಂದಿದ್ದು, ತಮ್ಮೆಲ್ಲಾ ಸ್ನೇಹಿತರಿಗೆ ಖಾತೆ ಫೇಕ್ ಆಗಿರೋ ವಿಚಾರ ತಿಳಿಸಿದ್ದಾರೆ. ಅಲ್ಲದೇ, ಯಾರೂ ಕೂಡಾ ಹಣ ನೀಡದಂತೆ ತಮ್ಮ ವಿವಿಧ ವಾಟ್ಸಪ್ ಗ್ರುಪ್ ಗಳಲ್ಲಿ ಮನವಿ ಮಾಡಿದ್ದಾರೆ.
ಅಲ್ಲದೇ, ವೈದ್ಯರ ಸಹೋದರ ಸಂಭಂಧಿಗೂ ಈ ರೀತಿ ಪ್ರಕಾಶ ಅವರ ನಕಲಿ ಖಾತೆಯಿಂದ ಹಣದ ಬೇಡಿಕೆ ಬಂದಾಗ ದರೋಡೆಕೋರರಿಂದ ಮೊದಲು ಕೇವಲ ೧ ರೂ ಹಾಕಿಸಿಕೊಂಡಿದ್ದಾರೆ. ಈ ವೇಳೆ ಹಣ ಸಂದಾಯವಾಗಿ ದರೋಡೆಕೋರರ ಯುಟಿಐ ಸಂಖ್ಯೆ ಟ್ರೇಸ್ ಮಾಡಿದಾಗ ದರೋಡೆಕೋರರ ಹೆಸರನ್ನು ಸಹ ತೋರಿಸಿದೆ. ಈ ರೀತಿ ಸೈಬರ್ ಕ್ರೈಂ ದರೋಡೆಕೋರರನ್ನು ಪತ್ತೆ ಹಚ್ಚಬಹುದು ಎಂಬುವುದು ಪ್ರಕಾಶ ಅವರ ಅಭಿಪ್ರಾಯವಾಗಿದೆ.
ಜಿಲ್ಲೆಯಲ್ಲಿಯೂ ಸೈಬರ್ ಕ್ರೈಂ ದಂಧೆ ಹಬ್ಬಿದ್ದು, ಈ ಹಿಂದೆ ಪೊಲೀಸರನ್ನೂ ಬಿಡದೇ ಫೇಕ್ ಅಕೌಂಟ್ ಬಳಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಇದೀಗ ವೈದ್ಯರಿಗೂ ನಕಲಿ ಜಾಲತಾಣದ ತಲೆನೋವು ಶುರುವಾಗಿದೆ. ಈ ನಿಟ್ಟಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಡುವಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಡಾ.ಪ್ರಕಾಶ ಹೊಸಮನಿ ಒತ್ತಾಯಿಸಿದ್ದಾರೆ.
ಬ್ಯಾಂಕ್ ಗೆ ಹಣ ಕಟ್ಟಲು ಹೋಗಿ ಬೈಕ್ ಸಮೇತ 7 ಲಕ್ಷ ರೂ. ಹಣ ದೋಚಿಕೊಂಡು ಪರಾರಿಯಾಗಿ ಪ್ರೇಯಸಿಯೊಂದಿಗೆ ರಾಜಸ್ಥಾನದಲ್ಲಿ ಐಶಾರಾಮಿ ಜೀವನ ಕಳೆಯುತ್ತಿದ್ದ ಆರೋಪಿ ರಾಮಸಿಂಗ್ ನನ್ನು ಬಂಧಿಸುವಲ್ಲಿ ಗದಗ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ವಿಕಾಸ್ ಜೈನ್ ಎಂಬುವವರ ಮಾಲೀಕತ್ವದ ಜೈನ್ ಟ್ರೇಡರ್ಸ್ ಎಂಬ ಹೋಲ್ ಸೇಲ್ ಕಿರಾಣಿ ಅಂಗಡಿಯಲ್ಲಿ ಆರೋಪಿ ರಾಮಸಿಂಗ್ ಕೆಲಸ ಮಾಡುತ್ತಿದ್ದ. ಈತನನ್ನು ಮಾಲೀಕರು ಮನೆಯ ಮಗನಂತೆ ನೋಡಿಕೊಂಡಿದ್ದರು. ಮನೆಯಲ್ಲಿಯೇ ಊಟ, ವಸತಿ ವ್ಯವಸ್ಥೆ ಕಲ್ಪಿಸಿದ್ದರು. ಆದರೆ, ರಾಮಸಿಂಗ್ ಉಂಡ ಮನೆಯ ಜಂತಿ ಎಣಿಸಿದ್ದ.
ಕಳೆದ ತಿಂಗಳು ಜನೆವರಿ 19 ರಂದು ಜೈನ್ ಟ್ರೇಡರ್ಸ್ ಮಾಲೀಕ ವಿಕಾಸ್ ಜೈನ್ 7 ಲಕ್ಷ ರೂ. ಹಣ ಹಾಗೂ ಬೈಕ್ ಕೊಟ್ಟು ಏಕ್ಸಿಸ್ ಬ್ಯಾಂಕಿಗೆ ಹಣ ಕಟ್ಟಲು ಕಳುಹಿಸಿದ್ದರು. ಆದರೆ, ನಯವಂಚಕ ರಾಮಸಿಂಗ್, ಹಣ ಹಾಗೂ ದ್ವಿಚಕ್ರ ವಾಹನ ಸಮೇತ ನಾಪತ್ತೆಯಾಗಿದ್ದ.
ಹಣದೊಂದಿಗೆ ಪರಾರಿಯಾಗಿದ್ದ ರಾಮಸಿಂಗ್ ಕದ್ದ ಹಣವನ್ನೆಲ್ಲಾ ತನ್ನ ಪ್ರೇಯಸಿಯೊಂದಿಗೆ ಕಾಲ ಕಳೆಯಲು ಬಳಸಿಕೊಳ್ಳಲು ನಿರ್ಧರಿಸಿದ್ದನು. ಈ ನಿಟ್ಟಿನಲ್ಲಿ ರಾಜಸ್ಥಾನಕ್ಕೆ ಹೋಗಿ ತಾನು ಇದ್ದಲ್ಲಿಗೆ ತನ್ನ ಹುಡುಗಿಯನ್ನು ಕರೆಸಿಕೊಂಡು ಅಲ್ಲಲ್ಲಿ ಜಾಲಿ ರೇಡ್ ನಡೆಸುತ್ತಾ ಪಾರ್ಕ್ ಅದು-ಇದು ಎಂದು ಸುತ್ತಾಡುತ್ತಾ ಪ್ರಿಯತಮೆಯೊಂದಿಗೆ ಸುಖಿಯ ಜೀವನ ಕಳೆಯುತ್ತಿದ್ದ.
ಆದರೆ, ಪ್ರಕರಣದ ಬೆನ್ನಟ್ಟಿದ್ದ ಪೊಲೀಸರು ರಾಮಸಿಂಗ್ ನ ಕಾಲ್ ಡಿಟೇಲ್ಸ್ ಪಡೆದುಕೊಂಡು ನಿರಂತರವಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಆರೋಪಿಯ ಸುಳಿವು ಸಿಕ್ಕಿದ್ದು, ಅಹ್ಮದಾಬಾದ್ ರೈಲು ನಿಲ್ದಾಣದಲ್ಲಿ ಆರೋಪಿ ರಾಮಸಿಂಗ್ ನನ್ನು ಬಂಧಿಸಿ ಕರೆ ತಂದಿದ್ದಾರೆ. ಪ್ರಿಯತಮೆ ಮೆಚ್ಚಿಸಲು ಆಕೆಗೆ ಖರ್ಚು ಮಾಡಿ ತೃಪ್ತಿ ಪಡಿಸಲು ಕಳ್ಳತನವೆಂಬ ದುರ್ಮಾರ್ಗ ಹಿಡಿದಿದ್ದ ರಾಮಸಿಂಗ್ ಸದ್ಯ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾನೆ.
ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಹಾಗೂ ಹಣ ಕಳೆದುಕೊಂಡಿದ್ದ ಜೈನ್ ಟ್ರೇಡರ್ಸ್ ಮಾಲೀಕ ವಿಕಾಸ್ ಜೈನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಹಣ ವಾಪಸ್ ನೀಡಿದ್ದಕ್ಕೆ ಅಂಗಡಿ ಮಾಲೀಕ ವಿಕಾಸ್ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ (ಗಂಗಾವತಿ): ಇಂದು ನಸುಕಿನ ಜಾವ ಆರೋಗ್ಯದಲ್ಲಿ ದಿಢೀರ್ ಏರುಪೇರು ಉಂಟಾಗಿದ್ದರಿಂದ ಗಂಗಾವತಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಗಂಗಾವತಿಯ ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಮ್ಮ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ ಮೂರನೇ ಸೆಮೆಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಹನುಮೇಶ್ ಹಂಚಿನಾಳ (20) ಸಾವನ್ನಪ್ಪಿದ್ದಾನೆ. ಆಸ್ಪತ್ರೆ ತಲುಪುವಷ್ಟರಲ್ಲಿ ವಿದ್ಯಾರ್ಥಿ ಪ್ರಾಣಪಕ್ಷಿ ಹಾರಿ ಹೋಗಿತ್ತು.
ಬಾಯಲ್ಲಿ ನೊರೆ ಕಾಣಸಿಕೊಂಡಿದ್ದರಿಂದ ಸಾವಿಗೆ ನಿಖರ ಕಾರಣಗಳು ತಿಳಿಯಲು ಶವಪರೀಕ್ಷೆ ಮಾಡಬೇಕು. ಬಳಿಕವಷ್ಟೇ ವಿದ್ಯಾರ್ಥಿಯ ಸಾವಿಗೆ ಕಾರಣ ಗೊತ್ತಾಗುತ್ತದೆ ಎಂದು ಆಸ್ಪತ್ರೆಯ ವೈದ್ಯಸಿಬ್ಬಂದಿ ತಿಳಿಸಿದ್ದಾರೆ. ಮೃತ ವಿದ್ಯಾರ್ಥಿ ಆತ್ಮಕ್ಕೆ ಶಾಂತಿ ಕೋರಿ ಕಾಲೇಜಿನಲ್ಲಿ ಮೌನ ಆಚರಿಸಲಾಯಿತು.
ವಿಜಯಸಾಕ್ಷಿ ಸುದ್ದಿ, ಗದಗ: ಸ್ಮಶಾನದಲ್ಲಿ ಶವಗಳನ್ನು ಹೂಳುವುದು, ಸುಡುವುದು ಸಂಪ್ರದಾಯ. ಆದರೆ ಅದೇ ಸ್ಮಶಾನಕ್ಕೆ ಕೊಳ್ಳಿ ಇಟ್ಟಿರುವ ಘಟನೆ ಮಂಗಳವಾರ ಗದಗ ಬೆಟಗೇರಿ ಅವಳಿ ನಗರದಲ್ಲಿ ನಡೆದಿದೆ.
ಬೆಟಗೇರಿಯ ಹೈಟೆಕ್ ಮುಕ್ತಿಧಾಮಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿ, ಸ್ಮಶಾನಕ್ಕೆ ಮುಕ್ತಿ ಕೊಡುವ ಪ್ರಯತ್ನ ನಡೆಸಿದ್ದಾರೆ. ಕಿಡಿಗೇಡಿಗಳ ಈ ಕೃತ್ಯದಿಂದ 22 ಎಕರೆ ವಿಶಾಲವಾದ ಸ್ಮಶಾನದ ಅರ್ಧ ಭಾಗ ಸುಟ್ಟು ಕರಕಲಾಗಿದೆ.
ಈ ಹಿಂದೆ ಎಚ್.ಕೆ. ಪಾಟೀಲ ಅವರು ಜಿಲ್ಲಾ ಉಸ್ತುವಾರಿ ಮಂತ್ರಿ ಆಗಿದ್ದ ಸಂದರ್ಭದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಸ್ಮಶಾನ ಅಭಿವೃದ್ಧಿ ಪಡಿಸಲಾಗಿತ್ತು. ನಗರದ ಮಧ್ಯಭಾಗದ ಉದ್ಯಾನ ಮೀರಿಸುವಂತೆ ಸ್ಮಶಾನದಲ್ಲಿ ಉದ್ಯಾನ ನಿರ್ಮಿಸಲಾಗಿತ್ತು. ಬೋರವೆಲ್ ಕೊರೆಯಿಸಿ ನೀರಿ ವ್ಯವಸ್ಥೆ ಮಾಡಲಾಗಿತ್ತು. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಸ್ಮಶಾನ ಅಕ್ಷರಶಃ ಸ್ಮಶಾನವಾಗಿ ಕಾಣುವಂತಾಗಿದೆ.
ಆಕಸ್ಮಿಕ ಬೆಂಕಿಗೆ ಸ್ಮಶಾನದ ಹುಲ್ಲು, ಗಿಡಮರಗಳು, ನೀರಿನ ಪೈಪ್ ಲೈನ್ ಸುಟ್ಟು ಹಾಳಾಗಿದೆ. ಕೋಟ್ಯಾಂತರ ರೂ. ವ್ಯಯಿಸಿ ಅಭಿವೃದ್ಧಿ ಪಡಿಸಿದ ಸ್ಮಶಾನ ಕಿಡಿಗೇಡಿಗಳ ಕೃತ್ಯಕ್ಕೆ ಆಹುತಿಯಾಗುದೆ.
ಈ ಕುರಿತು ವಿಜಯಸಾಕ್ಷಿ ಜೊತೆ ಮಾತನಾಡಿದ ಬೆಟಗೇರಿ ಮುಕ್ತಿಧಾಮ ನಿರ್ವಹಣೆ ಸಮಿತಿ ಅಧ್ಯಕ್ಷ, ರೈಲ್ವೆ ಹೋರಾಟಗಾರ ಗಣೇಶಸಿಂಗ್ ಬ್ಯಾಳಿ, ಕಿಡಿಗೇಡಿಗಳು ಸ್ಮಶಾನಕ್ಕೆ ಬೆಂಕಿ ಹಚ್ಚಿದ್ದಾರೆ. ಸ್ಮಶಾನದಲ್ಲಿ ಅಳವಡಿಸಿದ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ಮಾರ್ಚ್ 3 ರಂದು ಪೊಲೀಸರಿಗೆ ದೂರು ನೀಡಲಾಗುವುದು. ಬೆಟಗೇರಿ ಸ್ಮಶಾನದ ಇತಿಹಾಸದಲ್ಲೆ ಇಂಥ ಘಟನೆ ನಡೆದಿಲ್ಲ ಎಂದರು.
ನಗರದ ಹೊಸ ಹುಡ್ಕೋ ಕಾಲನಿಯ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮಧ್ಯಾಹ್ನ ನಡೆಸಿದ ಕಾರ್ಯಾಚರಣೆ ವೇಳೆ ಪತ್ತೆಯಾದ ಹೆಜ್ಜೆ ಗುರುತು ಚಿರತೆಯದ್ದು ಎಂದು ನಂಬಲಾಗಿತ್ತು. ಆದರೆ, ಈ ಕುರಿತು ಮಂಗಳವಾರ ರಾತ್ರಿ ವಿಜಯಸಾಕ್ಷಿಗೆ ಮಾಹಿತಿ ನೀಡಿರುವ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್, ‘ಇದು ಚಿರತೆಯ ಹೆಜ್ಜೆ ಗುರುತಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಹಿಂದಿರುವ ಹೊಸ ಹುಡ್ಕೋ ಕಾಲನಿಯಲ್ಲಿ ಚಿರತೆ ಅಡ್ಡಾಡಿದೆ ಎಂದು ಅಲ್ಲಿನ ನಿವಾಸಿಗಳು ಹೇಳುತ್ತಿರುವ ಕಾರಣಕ್ಕಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ. ಈಗಾಗಲೇ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಮಂಗಳವಾರ ರಾತ್ರಿಯಿಡೀ ಅಧಿಕಾರಿಗಳನ್ನು ಗಸ್ತಿಗಾಗಿ ನಿಯೋಜಿಸಲಾಗಿದೆ. ಅಲ್ಲದೇ, ಚಿರತೆಯ ಚಲನವನಗಳನ್ನು ಪತ್ತೆ ಹಚ್ಚಲು ಅಲ್ಲಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಒಂದು ವೇಳೆ ಕ್ಯಾಮೆರಾಗಳಲ್ಲಿ ಚಿರತೆಯ ಓಡಾಟ ಸೆರೆಯಾದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಸ್ವತಃ ಡಿಎಫ್‌ಒ ಸೂರ್ಯಸೇನ್ ಅವರೇ, ಡ್ರೋಣ್ ಕ್ಯಾಮೆರಾ ಮೂಲಕ ಅಂಬೇಡ್ಕರ್ ಭವನದ ಹಿಂಬದಿಯ ಪ್ರದೇಶದಲ್ಲಿರುವ ಹಳ್ಳ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಹಿಂಭಾಗ ಮತ್ತು ಹೊಸ ಹುಡ್ಕೋ ಕಾಲನಿಯಲ್ಲಿ ಪರಿಶೀಲನೆ ನಡೆಸಿದರು. ಆದರೆ ಯಾವುದೇ ಚಲನವಲನ ಕಂಡುಬಂದಿಲ್ಲ ಎನ್ನಲಾಗಿದೆ.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಮಾಜಿ ಸಚಿವ ಶಿವರಾಜ ತಂಗಡಗಿ ಶ್ರೀದೇವಿ ಮಟಕಾ ಕಂಪನಿ ವಿರುದ್ಧ ಮಾತ್ರ ಎಸ್ಪಿಯವರಿಗೆ ದೂರು ನೀಡಿರುವುದು ಸಮಂಜಸವಲ್ಲ, ಅವರ ಬೆಂಬಲಿಗ ವಿಶ್ವನಾಥ ಸಹ ಮಟ್ಕಾ ದಂಧೆಯಲ್ಲಿ ತೊಡಗಿದ್ದಾರೆ. ಕೂಡಲೇ ಎಲ್ಲ ಮಟಕಾ ಕಂಪನಿಗಳನ್ನು ಬಂದ್ ಮಾಡಿಸಿ ದಂಧೆಕೋರರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ಮಂಗಳವಾರ ಭಾರತೀಯ ಕೃಷಿ ಕಾರ್ಮಿಕ ರೈತ ಸಂಘಟನೆಯ ಮುಖಂಡರು ದೂರು ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಅವರಿಗೆ ದೂರು ಸಲ್ಲಿಸಿದ ಅವರು, ತಂಗಡಗಿಯವರಿಗೆ ನಿಜವಾಗಲೂ ಮಟಕಾ ಬಂದ್ ಮಾಡಿಸುವ ಕಳಕಳಿ ಇದ್ದರೆ ಎಲ್ಲ ಮಟಕಾ ಕಂಪನಿಗಳನ್ನು ಬಂದ್ ಮಾಡಿಸುವಂತೆ ದೂರು ನೀಡಬೇಕಿತ್ತು. ಆದರೆ ಶಿವರಾಜ ಅವರ ಕಣ್ಣು ಶ್ರೀದೇವಿ ಕಂಪನಿ ಮೇಲಷ್ಟೇ ಯಾಕೆ ಎಂದು ಸಂಘಟನೆಯ ಗಂಗಾವತಿ ತಾಲೂಕಾಧ್ಯಕ್ಷ ಬಿ.ಕಿಶೋರ್ ಪ್ರಶ್ನಿಸಿದರು.
ಶಿವರಾಜ ತಂಗಡಗಿಯವರ ಬಲಗೈ ಭಂಟ ವಿಶ್ವನಾಥಸ್ವಾಮಿ ಕನಕಗಿರಿ 15-20 ವರ್ಷಗಳಿಂದ ಮಟ್ಕಾ ಆಡಿಸುತ್ತಿದ್ದಾರೆ. ಮೊದಲು ಅವರನ್ನು ಗಡಿಪಾರು ಮಾಡಬೇಕು. ಜೊತೆಗೆ ಜಿಲ್ಲೆಯ ಯಾವುದೇ ಭಾಗದಲ್ಲಾದರೂ, ಯಾವುದೇ ಮಟಕಾ ಕಂಪನಿಯಾದರೂ ಸರಿ ಎಲ್ಲವನ್ನೂ ಬಂದ್ ಮಾಡಿಸಬೇಕು ಎಂದು ಅವರು ಒತ್ತಾಯಿಸಿದರು.
ವಿಜಯಸಾಕ್ಷಿ ಸುದ್ದಿ, ಗದಗ: ನಗರದಲ್ಲಿ ಕಳೆದ ಮೂರು ಗಂಟೆಯಿಂದ ಚಿರತೆ ಓಡಾಡುತ್ತಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ, ಗದಗ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ವಿಜಯಸಾಕ್ಷಿಗೆ ಮಾಹಿತಿ ನೀಡಿರುವ ಅವರು, ಇದುವರೆಗೂ ಗದಗ ನಗರದಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಚಿರತೆ ಕಾಣಿಸಿಕೊಂಡಿರುವ ಕುರಿತು ಯಾವುದೇ ಖಚಿತತೆ ಇಲ್ಲ. ಆದರೂ ಜನರ ಆತಂಕ ನಿವಾರಣೆಗಾಗಿ ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆ ಇರಬಹುದು ಎನ್ನಲಾಗಿರುವ ಸ್ಥಳದಲ್ಲಿ ಹುಡುಕಾಟ ನಡೆಸಿದ್ದಾರೆ ಎಂದು ಸೂರ್ಯಸೇನ್ ಸ್ಪಷ್ಟಪಡಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಹಂಪಿ ಝೂನಿಂದ ಅನಸ್ತೇಶಿಯಾ ಇಂಜೆಕ್ಷನ್ ತರಿಸಲಾಗುತ್ತಿದೆ. ಅದರ ಜೊತೆಗೆ ಡ್ರೋಣ್ ಕ್ಯಾಮೆರಾವನ್ನೂ ಸಹ ಬಳಸಿಕೊಳ್ಳಲಾಗುವುದು. ರಕ್ಷಣಾ ಕಾರ್ಯಾಚರಣೆ ನಡೆಸುವ ತಂಡವೂ ಸಹ ಸಿದ್ಧವಾಗಿದೆ ಎಂದು ಅವರು ವಿಜಯಸಾಕ್ಷಿಗೆ ತಿಳಿಸಿದ್ದಾರೆ.
ನಗರದ ರಿಂಗ್ ರೋಡ್ ನಲ್ಲಿರುವ ಅಂಬೇಡ್ಕರ್ ಭವನದ ಸುತ್ತಮುತ್ತ ಚಿರತೆ ನೋಡಿರುವುದಾಗಿ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದರಿಂದ ಚಿರತೆಯ ಸುದ್ದಿ ಹರಡಿದ್ದು, ಅರಣ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಗೆ ನಡೆಸುತ್ತಿದ್ದಾರೆ.
ಇದರಿಂದಾಗಿ ಅಂಬೇಡ್ಕರ್ ಭವನದ ಹಿಂದೆ ಇರುವ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದು, ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ.
-ಆರೋಪ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಎಸ್ಪಿ
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಜಿಲ್ಲೆಯ ರೋಚಕ ಕ್ಷೇತ್ರ ಕನಕಗಿರಿ ವಿಧಾನಸಭಾ ಕ್ಷೇತ್ರದ ರಾಜಕೀಯ ಜಗಳ್‌ಬಂಧಿ ತಾರಕಕ್ಕೇರುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಟ್ರ್ಯಾಕ್ಟರ್ ರ‌್ಯಾಲಿ ಮಾಡಿದರೆ, ವಿಜಯೇಂದ್ರ ಆಗಮನದ ಹಿನ್ನೆಲೆಯಲ್ಲಿ ಬಿಜೆಪಿ ಸಹ ಭಾರೀ ಪ್ರಮಾಣದ ರ‌್ಯಾಲಿ ನಡೆಸಿತು. ಈ ನಡುವೆ ಶ್ರೀದೇವಿ ಹೆಸರಿನ ಮಟಕಾ ದಂಧೆ ಕುರಿತು ದೊಡ್ಡ ಚರ್ಚೆಯೇ ಶುರುವಾಗಿದೆ.
ಜಿಲ್ಲೆಯಲ್ಲಿ ವಿಶೇಷವಾಗಿ ಕನಕಗಿರಿ ಕ್ಷೇತ್ರದಲ್ಲಿ ನಾನಾ ಹೆಸರಿನಲ್ಲಿ ಮಟಕಾ ಆಡಿದರೆ ಪೊಲೀಸ್ ಅತಿಥಿಯಾಗುವುದು ನಿಶ್ಚಿತ. ಆದರೆ ಶ್ರೀದೇವಿ ಹೆಸರಿನ ಮಟಕಾ ಆಡಿದರೆ ಯಾವ ಪೊಲೀಸರು ಏನೂ ಮಾಡಲ್ವಂತೆ…?
ಹೀಗಂತ ದೂರು ನೀಡಿದ್ದು ಮಾಜಿ ಸಚಿವ ಶಿವರಾಜ ತಂಗಡಗಿ. ಶ್ರೀದೇವಿ ಹೆಸರಿನಲ್ಲಿ ಗಂಗಾವತಿಯ ಪೊಲೀಸ್ ಅಧಿಕಾರಿಯೊಬ್ಬರು ಮಟಕಾ ಆಡಿಸುತ್ತಿದ್ದಾರೆ. ಇದು ಶೇಕಡಾ ನೂರರಷ್ಟು ಸತ್ಯ. ಮೊದಲ ಹಂತವಾಗಿ ದೂರು ದಾಖಲಿಸುತ್ತಿದ್ದೇವೆ. ಪೊಲೀಸರು ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿಯವರು, ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಅವರಿಗೆ ಮನವಿ ಸಲ್ಲಿಸಿದರು.
ಮಟಕಾ ದಂಧೆ, ಮರಳು ಅಕ್ರಮ ನಾನು ಮಂತ್ರಿಯಾದಾಗಲೂ ಕನಕಗಿರಿ ಕ್ಷೇತ್ರದಲ್ಲಿ ಇತ್ತು. ಸಾಧ್ಯವಾದಷ್ಟು ಅಕ್ರಮ ನಿಯಂತ್ರಣಕ್ಕೆ ಶ್ರಮಿಸಿದ್ದೇನೆ. ಈಗ ನನ್ನ ಕ್ಷೇತ್ರದಲ್ಲೇ ಗಂಗಾವತಿಯ ಪೊಲೀಸ್ ಅಧಿಕಾರಿಯೊಬ್ಬರು ಮಟಕಾ ದಂಧೆ ನಡೆಸಲು ಕುಮ್ಮಕ್ಕು ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಸತ್ಯಾಂಶ ಇಲ್ಲದ, ಸಮರ್ಪಕ ಸಾಕ್ಷಿಗಳಲ್ಲದ ಯಾವ ಸಂಗತಿಯ ಬೆನ್ನ ಹಿಂದೆ ಬೀಳಲ್ಲ. ಪೊಲೀಸ್ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಬೇಕು. ತನಿಖೆ ಸರಿಯಾಗಿದ್ದರೆ ತಪ್ಪಿತಸ್ಥರು ಖಂಡಿತವಾಗಿ ಬಲೆಗೆ ಬೀಳ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ತಂಗಡಗಿ, ಒಂದೊಮ್ಮೆ ಈ ಪ್ರಕರಣವನ್ನು ಇಲಾಖೆಯ ಉನ್ನತ ಅಧಿಕಾರಿಗಳು ಉದಾಸೀನ ಮಾಡಿದರೆ ಶ್ರೀದೇವಿ ಹೆಸರಿನ ಮಟಕಾ ದಂಧೆಗೆ ಪೊಲೀಸ್ ಅಧಿಕಾರಿ ಕುಮ್ಮಕ್ಕು ನೀಡುತ್ತಿರುವ ಆಡಿಯೊವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗುವುದು. ಆನಂತರ ಬೀದಿಗಿಳಿದು ಹಂತ ಹಂತವಾಗಿ ಹೋರಾಟ ನಡೆಸಲಾಗುವುದು. ಈ ಬಗ್ಗೆ ಅಧಿವೇಶನದಲ್ಲೂ ನಮ್ಮ ಪಕ್ಷದ ಮುಖಂಡರು ಚರ್ಚಿಸುತ್ತಾರೆ ಎಂದು ತಿಳಿಸಿದರು.
“ಈಗಾಗಲೇ ಈ ಬಗ್ಗೆ ತನಿಖೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಮಟಕಾ ದಂಧೆಯಲ್ಲಿ ತೊಡಗಿದ್ದ ಸುಮಾರು 21 ಜನರನ್ನು ಗಡಿ ಪಾರು ಮಾಡಲಾಗಿದೆ. ಇದರಲ್ಲಿ ಪೊಲೀಸ್ ಅಧಿಕಾರಿ ಭಾಗಿಯಾಗಿದ್ದಾರೆ ಎನ್ನುವ ಆರೋಪ ಬಂದಿದ್ದು, ಆರೋಪ ಸಾಬೀತಾದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.”
ಟಿ. ಶ್ರೀಧರ್, ಎಸ್ಪಿ, ಕೊಪ್ಪಳ
ಹ…. ದುಡ್ಡಿನಿಂದ ಬಿಜೆಪಿ ಅಧಿಕಾರಕ್ಕೆ “ಕನಕಗಿರಿ ಕ್ಷೇತ್ರದಲ್ಲೇ ಅಕ್ರಮಗಳು ಹೆಚ್ಚುತ್ತಿವೆ. ಜವಾಬ್ದಾರಿಯುತ ನಾಗರಿಕನಾಗಿ ಪೊಲೀಸರಿಗೆ ದೂರು ಕೊಟ್ಟಿದ್ದೇನರ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಹ… ದುಡ್ಡಿನಿಂದ. ನಮ್ಮ ಪಕ್ಷದಲ್ಲಿ ಶಾಸಕ, ಸಚಿವರಾಗಿದ್ದವರು ಬಿಜೆಪಿ ಜೊತೆ ಕೈ ಜೋಡಿಸಿದ್ದು ಹ…. ದುಡ್ಡಿಗಾಗಿ.”