Home Blog Page 3064

ಪತ್ನಿ ಕೊಲೆಗೈದು ಪರಾರಿ; 17 ವರ್ಷಗಳ ನಂತರ ಪತಿ ಪೊಲೀಸರ ಬಲೆಗೆ

ವಿಜಯಸಾಕ್ಷಿ ಸುದ್ದಿ, ಗದಗ

ಸುಮಾರು 17 ವರ್ಷಗಳ ಬಳಿಕ ಅಂದರೆ, 2004ರಲ್ಲಿ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಪತಿ ಮಹಾಶಯನನ್ನು ವಶಕ್ಕೆ ಪಡೆಯುವಲ್ಲಿ ಗದಗ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹಿರೆಮಲ್ಲಾಪೂರ(ಅಂಕಲಿ) ಗ್ರಾಮದ ವೀರಯ್ಯ ಶಿವಯ್ಯ ಹಿರೇಮಠ ಬಂಧಿತ ವ್ಯಕ್ತಿ. ಆರೋಪಿ ವೀರಯ್ಯ 2004ರ ಡಿ.16ರಂದು ತನ್ನ ಪತ್ನಿ ಈರಮ್ಮಳ ಮೇಲೆ ಶೀಲದ ಕುರಿತು ಸಂಶಯ ವ್ಯಕ್ತಪಡಿಸಿ ಅಂಕಲಿ ಗ್ರಾಮದ ದೊಡ್ಡಹಳ್ಳದಲ್ಲಿ ಕೊಲೆ ಮಾಡಿ, ಪುರಾವೆ ನಾಶಪಡಿಸಿ ಪರಾರಿಯಾಗಿದ್ದನು.

ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ಇಲ್ಲಿಯವರೆಗೂ ಆರೋಪಿಯ ಸುಳಿವು ಪತ್ತೆಯಾಗಿರಲಿಲ್ಲ. ಕೊನೆಗೆ ಲಕ್ಷ್ಮೇಶ್ವರ ಠಾಣೆಯ ಪಿಎಸ್‌ಐ ಶಿವಯೋಗಿ ಲೋಹಾರ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ಮಂಗಳೂರಿಗೆ ತೆರಳಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ವ್ಯಾಪ್ತಿಯ ಮರಳಿಕಟ್ಟಿಯಲ್ಲಿ ಫೆ.4ರಂದು ಆರೋಪಿ ವೀರಯ್ಯನನ್ನು ಬಂಧಿಸಿದ್ದಾರೆ. ಬಳಿಕ ಲಕ್ಷ್ಮೇಶ್ವರ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮುಖ್ಯ ಶಿಕ್ಷಕರೂ ಪಾಠ ಮಾಡಬೇಕು! ; ಆಡಳಿತದ ಕಾರ್ಯಭಾರ ಜೊತೆಗೆ ಬಿತ್ತು ಪಾಠದ ಭಾರ

ವಿಜಯಸಾಕ್ಷಿ ಸುದ್ದಿ ಬೆಂಗಳೂರು
ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಮತ್ತು ಫಲಿತಾಂಶವನ್ನು ಉತ್ತಮಪಡಿಸುವ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಇನ್ನು ಮುಂದೆ ಮುಖ್ಯ ಶಿಕ್ಷಕರು ಸಹ ವಾರದಲ್ಲಿ 12 ಗಂಟೆ ಪಾಠ ಬೋಧನೆ ಮಾಡಬೇಕಾಗಿದೆ.
ರಾಜ್ಯದ ಸರಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ಕಲಿಕಾ ಗುಣಮಟ್ಟ ಮತ್ತು ಎಸ್‍ಎಸ್‍ಎಲ್‍ಸಿ ಫಲಿತಾಂಶ ಕಡಿಮೆಯಾಗಿರುವುದನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಅಲ್ಲದೇ ಜಿಲ್ಲಾವಾರು ವಿಶ್ಲೇಷಣಾ ವರದಿ ಗಮನಿಸಿದಾಗ ಮುಖ್ಯ ಶಿಕ್ಷಕರು ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಗಂಭೀರವಾಗಿ ತೊಡಗಿಕೊಂಡಿಲ್ಲ ಎನ್ನುವ ಅಂಶ ಸ್ಪಷ್ಟವಾಗಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್ ಅವರು ಮಹತ್ವದ ಆದೇಶ ಹೊರಡಿಸಿದ್ದು, ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಅಥವಾ ಸಂಯುಕ್ತ ಪದವಿಪೂರ್ವ ಕಾಲೇಜಿನ ಉಪ ಪ್ರಾಚಾರ್ಯರು ಕಡ್ಡಾಯವಾಗಿ ನಿಗದಿಪಡಿಸಿದ ವಿಷಯ ಕುರಿತು ಪಾಠ ಮಾಡಬೇಕು.
ಅದರಲ್ಲೂ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಆದ್ಯತೆ ಮೇರೆಗೆ ತರಗತಿಗಳನ್ನು ತೆಗೆದುಕೊಂಡು, ಪ್ರತಿ ತಿಂಗಳು ತಾವು ಮಾಡಿದ ಪಾಠ ಬೋಧನೆಯ ವರದಿಯನ್ನು ಬಿಆರ್‍ಸಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಿದಲ್ಲಿ ಮಾತ್ರ ಕಲಿಕೆಯ ಮಟ್ಟ ಸುಧಾರಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಖ್ಯ ಶಿಕ್ಷಕರು ಪಾಠ ಬೋಧನೆ ಮಾಡುತ್ತಿರುವ ಜೊತೆಗೆ ಪ್ರತಿ ತಿಂಗಳು ಶಾಲೆಯ ಕಲಿಕಾ ಗುಣಮಟ್ಟ ಏರಿಕೆಯಾಗುತ್ತಿರುವ ಕುರಿತು ಕ್ಷೇತ್ರ ಶಿಕ್ಷಣಾ„ಕಾರಿಗಳು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಜಂಟಿಯಾಗಿ ನೋಡಲ್ ಅ„ಕಾರಿಗಳೊಂದಿಗೆ ಚರ್ಚಿಸಬೇಕು. ಇಲಾಖೆಯ ಆದೇಶ ಸಮರ್ಪಕವಾಗಿ ಜಾರಿಯಾಗಲು ಶ್ರಮಿಸಬೇಕು ಎಂದು ವಿ. ಅನ್ಪುಕುಮಾರ ತಿಳಿಸಿದ್ದಾರೆ.

ಜಯ ಮೃತ್ಯುಂಜಯ ಸ್ವಾಮೀಜಿಗಳ ಭೇಟಿ: ಪಂಚಮಸಾಲಿ 2ಎ ಹೋರಾಟಕ್ಕೆ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಬೆಂಬಲ

2ಎ ಮೀಸಲಾತಿ ಕಲ್ಪಿಸುವಂತೆ ಒತ್ತಾಯ

ವಿಜಯಸಾಕ್ಷಿ ಸುದ್ದಿ, ಗದಗ

ವೀರಶೈವ ಲಿಂಗಾಯತ ಸಮಾಜದ ವಿವಿಧ ಉಪ ಪಂಗಡಗಳಿಗೆ 2ಎ ಮೀಸಲಾತಿ ಕಲ್ಪಿಸುವಂತೆ ಇಂದಿನ ಕೈಗಾರಿಕೆ ಸಚಿವರಾಗಿರುವ ಜಗದೀಶ್ ಶೆಟ್ಟರ್ ಅವರು ಅಂದು ಸಿಎಂ ಆಗಿದ್ದಾಗ ಸಿ.ಎಂ. ಉದಾಸಿಯವರ ನೇತೃತ್ವದ ಸಮಿತಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ವರದಿ ಆಧರಿಸಿ ಪಂಚಮಸಾಲಿ ಸಮುದಾಯಕ್ಕೆ ಶೀಘ್ರವೇ 2ಎ ಮೀಸಲಾತಿ ನೀಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿ ಕೊಡಬೇಕು ಎಂದು ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಒತ್ತಾಯಿಸಿದರು.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಕೂಡಲಸಂಗಮದ ಪಂಚಮಸಾಲಿ ಗುರುಪೀಠದ ಶ್ರೀಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಪಂಚಮಸಾಲಿ ಸಮಾಜದ ಮುಖಂಡ ಸಿದ್ದು ಪಲ್ಲೇದ ಅವರ ನೇತೃತ್ವದಲ್ಲಿ ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಸೇರಿದಂತೆ ಹಲವು ಮುಖಂಡರು ರವಿವಾರ ತುಮಕೂರು ಜಿಲ್ಲೆಯ ಶಿರಾ ಬಳಿ ಶ್ರೀಗಳನ್ನು ಭೇಟಿಯಾಗಿ ಹೋರಾಟಕ್ಕೆ ಬೆಂಬಲ ನೀಡಿ ಅವರು ಮಾತನಾಡಿದರು.

ರಾಜ್ಯದಲ್ಲಿ ಇದುವರೆಗೂ ಪಂಚಮಸಾಲಿ ಸಮುದಾಯ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗ ಶೈಕ್ಷಣಿಕವಾಗಿ ತೀರಾ ಹಿಂದುಳಿದೆ. ಈ ನಿಟ್ಟಿನಲ್ಲಿ ಹಲವು ದಿನಗಳಿಂದ ಶ್ರೀಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿರುವುದು ಸ್ವಾಗತಾರ್ಹವಾಗಿದೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಶೀಘ್ರವೇ ಮುಖ್ಯಮಂತ್ರಿಗಳು
ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

೨ಎ ಮೀಸಲಾತಿಗಾಗಿ ನಡೆಯುತ್ತಿರುವ ಪಾದಯಾತ್ರೆ ಯೋಗ್ಯವಾಗಿದ್ದು, ಹೋರಾಟಕ್ಕೆ ಜಯ ಸಿಗಲಿ ಎಂದು ಆಶಿಸಿದರಲ್ಲದೇ, ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ ಜೊತೆ ಮುಂದಿನ ಹೋರಾಟಗಳ ರೂಪರೇಷೆಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಅನಿಲ್ ಮೆಣಸಿನಕಾಯಿ ಚರ್ಚಿಸಿದರು.

ಈ ಸಂದರ್ಭದಲ್ಲಿ ಅನಿಲ್ ಅಬ್ಬಿಗೇರಿ, ದಾವಣಗೇರಿಯ ಎ.ಸಿ.ಶಂಬಣ್ಣ, ಅನಿಲ್ ಪಾಟೀಲ್ (ಮಲಸಮುದ್ರ), ಕೆ.ವಿ.ಗದುಗಿನ, ಅಯ್ಯಪ್ಪ ಅಂಗಡಿ, ಶರಣಪ್ಪ ಗೊಳಗೊಳಕಿ, ಶಿವರಾಜ್ ಶಿವನಗೌಡರ, ಬಸವರಾಜ್ ಗಡ್ಡೆಪ್ಪನವರ ಸೇರಿದಂತೆ ಸಮಾಜದ ಪ್ರಮುಖ ಮುಖಂಡರು, ಯುವಕರು ಉಪಸ್ಥಿತರಿದ್ದರು.

ದಲಿತ ಮುಖಂಡನ ಬರ್ಬರ ಹತ್ಯೆ: ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಮುಖಂಡ

ವಿಜಯಸಾಕ್ಷಿ ಸುದ್ದಿ, ಚಿಕ್ಕಬಳ್ಳಾಪುರ: ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ, ದಲಿತ ಸಂಘರ್ಷ ಸಮಿತಿ ಮುಖಂಡರೊಬ್ಬರನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೋಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬೋಗೇನಹಳ್ಳಿ ನರಸಿಂಹಪ್ಪ (45) ಕೊಲೆಯಾದ ದುರ್ದೈವಿಯಾಗಿದ್ದಾರೆ. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈಯಲಾಗಿದ್ದು, ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿನ ವ್ಯವಹಾರ ಅಥವಾ ಹಳೆ ವೈಷಮ್ಯ ಕಾರಣವಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.

ಸ್ಥಳಕ್ಕೆ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ನೂತನ ಗ್ರಾ.ಪಂ.ಅಧ್ಯಕ್ಷೆ ಮನೆಗೆ ಬೆಂಕಿ ಇಟ್ಟ ಕಿಡಿಗೇಡಿಗಳು!

0

ವಿಜಯಸಾಕ್ಷಿ ಸುದ್ದಿ, ಕೋಲಾರ: ಗ್ರಾಮ ಪಂಚಾಯತಿಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಸದಸ್ಯೆಯ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಆರೋಪ ಕೇಳಿಬಂದಿದೆ.

ಚುನಾವಣೆ ಮುಗಿದರೂ ಅದರ ಕಾವು ಆರಿಲ್ಲ ಎನ್ನುವಂತಹ ಈ ಘಟನೆ ಕೋಲಾರ ಜಿಲ್ಲೆ ಮುಳಬಾಗಲು ತಾಲೂಕಿನ ರಾಜೆಂದ್ರಹಳ್ಳಿಯಲ್ಲಿ ನಡೆದಿದೆ.

ಶನಿವಾರ ನೂತನವಾಗಿ ಗ್ರಾಮಪಂಚಾಯತಿಗೆ ಅಧ್ಯಕ್ಷರಾಗಿ ಆಯ್ಕೆಯಾದ ನೂರ್ ಜಹಾನ್ ಎಂಬುವವರ ಮನೆಗೆ ಬೆಂಕಿ ಹಚ್ಚಲಾಗಿದೆ. ಇವರು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಬೆಂಬಲದಿಂದ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ, ವಿರೋಧಿ ಗುಂಪಿನವರು ಬೆಂಕಿ ಹಚ್ಚಿದ್ದಾರೆ ಎಂದು ನೂರ್ ಜಹಾನ್ ಆರೋಪ ಮಾಡಿದ್ದಾರೆ.

ಹೆಂಚಿನ ಮನೆಯಾಗಿರುವ ಹಿನ್ನೆಲೆಯಲ್ಲಿ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಉದ್ದೇಶ ಪೂರ್ವಕವಾಗಿ ಕಿಟಕಿ ಮೂಲಕ ಒಣ ಹುಲ್ಲನ್ನು ಹಾಕಿ ಬೆಂಕಿ ಹಾಕಲಾಗಿದೆ.

ಸ್ಥಳಕ್ಕೆ ಮುಳಬಾಗಲು ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಘಟನೆ ಕುರಿತು ನಂಗಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ರೈತರಿಗೆ ಸ್ವಾತಂತ್ರ್ಯ ಸಿಕ್ಕಿಲ್ಲವೆಂದ ಕೇಂದ್ರ ಸಚಿವ ಸದಾನಂದಗೌಡ

ವಿಜಯಸಾಕ್ಷಿ ಸುದ್ದಿ, ಮೈಸೂರು

ರಿಹಾನ ಏನಾದರೂ ಭತ್ತದ ಗದ್ದೆ ನೋಡಿದ್ದಾರಾ?. ಬಹುಶಃ ಅವರು ಭತ್ತದ ಗದ್ದೆ ಮುಂದೆ ನಿಂತು ಪೋಟೋ ತೆಗೆಸಿಕೊಂಡು ಹೋಗಿರಬಹುದು ಎಂದು ಪಾಪ್ ಸಿಂಗರ್ ರಿಹಾನ ವಿರುದ್ಧ ಕೇಂದ್ರ ಸಚಿವ ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ರಿಹಾನಗೆ ರೈತರ ಶ್ರಮದ ಬಗ್ಗೆ ಏನು ಗೊತ್ತಿದೆ. ರೈತರು ಮಾರಾಟ ಹೇಗೆ ಮಾಡ್ತಾರೆ ಅಂತಾ ರಿಹಾನಗೆ ಗೊತ್ತಾ? ಎಂದು ಪ್ರಶ್ನಿಸಿರುವ ಅವರು,
ವಿದೇಶಿ ಕೈಗೊಂಬೆಯಾಗಿ ಅವರು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಅವರು ಯಾವತ್ತಾದರೂ ಭತ್ತದ ಗದ್ದೆಯನ್ನಾದ್ರೂ ನೋಡಿದ್ರೆ ಹೇಳಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಆದರೆ ರೈತನಿಗೆ ಇನ್ನು ಸ್ವಾತಂತ್ರ್ಯ ಸಿಕ್ಕಿಲ್ಲ.
ರೈತನಿಗೆ ಆತ ಬೆಳೆದ ಬೆಳೆಯನ್ನು ಮುಕ್ತವಾಗಿ ಮಾರಲು ನಾವು ಸ್ವಾತಂತ್ರ್ಯ ನೀಡುತ್ತಿದ್ದೇವೆ ಎಂದು ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡರು.

ರೈತರು ಈಗ ಸರ್ಕಾರದ ಕೈಗೊಂಬೆಯಾಗಿದ್ದಾರೆ.
ಬೇಕಾದವರಿಗೆ ಬೆಳೆ ಮಾರಾಟ ಮಾಡಲು ಸ್ವಾತಂತ್ರ್ಯ ಇಲ್ಲವಾಗಿದೆ.
ತನ್ನ ಬೆಳೆಗೆ ಯಾರಾದರೂ ಹೆಚ್ಚು ಬೆಲೆ ಕೊಡುತ್ತಾರೆ ಎಂದರೆ ಕೊಡಲಿ ಬಿಡಿ.
ಸುಮ್ಮನೆ ಏಕೆ ಹಠ ಮಾಡುತ್ತೀರಾ?
ರೈತರಿಗೆ ಬೆಂಬಲ ಬೆಲೆ ನೀಡಿದ್ದು ಮೋದಿ ಸರ್ಕಾರ ಎಂದರು.

ಪ್ರತಿಭಟನೆಗಳು ಪಟ್ಟಭದ್ರ ಹಿತಾಸಕ್ತಿಗಳಿಂದ ನಡೆಯುತ್ತಿವೆ. ಕೃಪಾಪೋಷಿತ ಜನರ ಪ್ರೇರಣೆಯಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ.
ನಾವು ಹೊಂದಾಣಿಕೆಯಾಗಿದ್ದೀವಿ, ಮಾತುಕತೆಗೂ ಸಿದ್ಧರಿದ್ದೀವಿ.
ಆದರೆ ರೈತರೇ ಹಠ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.

ಪಿಎಸ್ಐಗೆ ಮೋಸ ಮಾಡಿದ ಖತರ್ನಾಕ್ ಖದೀಮ!

0

ವಿಜಯಸಾಕ್ಷಿ ಸುದ್ದಿ, ಕಲಬುರಗಿ: ಪೊಲೀಸರ ಬಳಿ ಮೋಸ ಹೋದವರು ಹೋಗಿ ದೂರು ನೀಡುವುದು ಎಲ್ಲೆಡೆ ಕಾಮನ್. ಆದರೆ ಇಲ್ಲೊಬ್ಬ ಪಿಎಸ್ಐ ಅವರು ಸ್ವತಃ ತಾವೇ ಖತರ್ನಾಕ್ ಖದೀಮನ ವಂಚನೆಗೊಳಗಾಗಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ.

ಹೌದು ಈ ಘಟನೆ ನಡೆದಿರೋದು ಕಲಬುರಗಿಯಲ್ಲಿ ಇಲ್ಲಿನ ಡಿಸಿಬಿ ಪಿಎಸ್ಐ ಮಂಜುನಾಥ ಹೂಗಾರ ಮೋಸಗಾರನ ಮಾತು ನಂಬಿ ಹಣ ಕೊಟ್ಟು ಮೋಸ ಹೋಗಿದ್ದಾರೆ‌. ಇನ್ನು ಸ್ಥಳೀಯ ಚಾನಲ್ ವೊಂದರ ವರದಿಗಾರ ಎಂದು ಹೇಳಿಕೊಂಡಿರುವ ಖಾಸಿಂ ಪಟೇಲ್ ಪಿಎಸ್ಐ ಮಂಜುನಾಥ್ ಅವರಿಗೆ ಚಳ್ಳೆ ಹಣ್ಣು ತಿನಿಸಿರುವ ಖತರ್ನಾಕ್ ಖದೀಮನಾಗಿದ್ದಾನೆ.

ಮೋಸಕ್ಕೊಳಗಾದ ಪಿಎಸ್ಐ ಮಂಜುನಾಥ್

ಕಲಬುರಗಿ ಎಸ್ಪಿ ನನಗೆ ತುಂಬಾ ಕ್ಲೋಸ್ ಅಂತ ಹೇಳಿ ಪಿಎಸ್ಐ ಕಡೆಯಿಂದಲೇ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿದ ಖತರ್ನಾಕ್ ಆಸಾಮಿ ಖಾಸೀಂ ಪಟೇಲ್ ಈಗ ಅಂದರ್ ಆಗಿದ್ದಾನೆ.

ಇದು SP ಮೇಡಂ ಮೇಡಂರ ಪರ್ಸನಲ್ ನಂಬರ್ ಅಂತ ಬೇರೊಂದು ನಂಬರ್ ನೀಡಿದ್ದ. ಎಸ್ಪಿ ಅವರ ಡಿಪಿ ನೋಡಿ ಎಸ್ಪಿ ಎಂದೇ ನಂಬಿ ಚಾಟ್ ಮಾಡಿದ್ದ ಪಿಎಸ್ಐ ಮಂಜುನಾಥ ಹೂಗಾರ 8 ಲಕ್ಷ 50 ಸಾವಿರ ರೂಪಾಯಿ ಕೊಟ್ಟಿದ್ದ. ನಂತರ ಅನುಮಾನಗೊಂಡು ಎಸ್ಪಿ ಅವರನ್ನು ಭೇಟಿ ಮಾಡಿದಾಗ ನಿಜಾಂಶ ಬಯಲಾಗಿದ್ದು, ತಾನು ಮೋಸ ಹೋಗಿದ್ದಾಗಿ ತಿಳಿದ ಪಿಎಸ್ಐ ಮಂಜುನಾಥ್ ದೂರು ನೀಡಿದ್ದರು.

ಪಿಎಸ್ಐ ನೀಡಿದ ದೂರು ಆಧರಿಸಿ ಆರೋಪಿ ಖಾಸಿಂ ಪಟೇಲ್ ನನ್ನು ಕಲಬುರಗಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆದರೆ ಪಿಎಸ್ಐ ಮಂಜುನಾಥ್ ಎಸ್ಪಿ ಗೆಸರು ಹೇಳಿದ ಕೂಡಲೇ ಲಕ್ಷಾಂತರ ರೂಪಾಯಿ ಹಣ ನೀಡಿದ ಉದ್ದೇಶವೇನು ಎನ್ನೋ ವಿಚಾರ ಮಾತ್ರ ಹೊರಬರಬೇಕಿದೆ.

ಟೈಯರ್, ಟ್ಯೂಬ್ ಕದ್ದವರ ಬಂಧನ: 2 ಲಕ್ಷ ರೂ. ಸರಕು ಜಪ್ತಿ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಇಲ್ಲಿನ ಗೋಕುಲ ರಸ್ತೆಯ ಇಂಡಸ್ಟ್ರೀಯಲ್ ಎಸ್ಟೇಟ್‌ನಲ್ಲಿನ ಶ್ರೀಶಿವಶಕ್ತಿ ಎಂಟರ್‌ಪ್ರೈಜಿಸ್ ಗೋಡೌನನಲ್ಲಿದ್ದ ಟೈಯರ್, ಟ್ಯೂಬ್ ಮತ್ತು ಪ್ಲ್ಯಾಪ್‌ಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಖದೀಮರನ್ನು ಬಂಧಿಸುವಲ್ಲಿ ಗೋಕುಲ್ ರಸ್ತೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಗೋಕುಲ ರಸ್ತೆಯ ಮಾರುತಿನಗರದ ಹಳ್ಳೆಪ್ಪ ದೇವಪ್ಪ ಪೂಜಾರ ಹಾಗೂ ಗದಗ-ಬೆಟಗೇರಿ ನರಸಾಪೂರದ ವಸೀಂ ಮಕ್ತುಮಸಾಬ್ ಸೈದಾಪೂರ ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ ಸುಮಾರು 2 ಲಕ್ಷ 10 ಸಾವಿರ ರೂ.ಮೌಲ್ಯದ ಟ್ರಕ್‌ನ(ಲಾರಿ) 11 ಟೈಯರ್, ಟ್ಯೂಬ್ ಹಾಗೂ ಪ್ಲ್ಯಾಪ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಗೋಡೌನದ ಸಿಮೆಂಟ್ ಸೀಟಿನ ನಟ್ ಬೋಲ್ಟ್ ಬಿಚ್ಚಿ ಗೋಡೌನದಲ್ಲಿ ಇಳಿದು ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ಖದಿಮರು ಬಾಯಿ ಬಿಟ್ಟಿದ್ದಾರೆ. ಇನ್ನು ಕಳ್ಳತನಕ್ಕೆ ಸಹಾಯ ಸಹಕಾರ ನೀಡಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದು, ತನಿಖೆ ಮುಂದುವರೆಸಿದ್ದಾರೆ.

ನಾಯಕತ್ವ ಬದಲಾವಣೆಗೆ ಮೀಸಲಾತಿ ಹೋರಾಟ ಕಾರಣವಾಗಬಹುದು: ಸಿದ್ಧರಾಮಶ್ರೀ ಎಚ್ಚರಿಕೆ

ವಿಜಯಸಾಕ್ಷಿ ಸುದ್ದಿ, ಗದಗ

ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸುವಂಥದ್ದು ಸರಕಾರದ ಕರ್ತವ್ಯ ಎಂದು ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು.

ಪಂಚಮಸಾಲಿ ೨ಎ ಮೀಸಲಾತಿ ಹೋರಾಟ ಕುರಿತು ಶುಕ್ರವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು, ಮೀಸಲಾತಿ ಹೋರಾಟ ಇಂದು ನಿನ್ನೆಯದಲ್ಲ. ಮೀಸಲಾತಿಗಾಗಿ ಹಲವು ದಶಕಗಳಿಂದ ಹೋರಾಟ ನಡೆಯುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರ ಈ ಬಗ್ಗೆ ಮೀನಾಮೇಷ ಎಣಿಸಬಾರದು. ಕಾಲಹರಣ ಮಾಡದೇ ಬೇಗನೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಜಾತಿಸಂಘಟನೆ ವಿಷಯಗಳನ್ನು ಸರಕಾರ ನಿರ್ಲಕ್ಷಿಸಬಾರದು.
ಜಾತಿ ಸಂಘರ್ಷ ನಿರ್ಲಕ್ಷಿಸಿದರೆ, ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ.
ಸಮುದಾಯದವರು ರೊಚ್ಚಿಗೇಳುತ್ತಾರೆ. ಇದರಿಂದ ಸಾರ್ವಜನಿಕ ಆಸ್ತಿ, ಪಾಸ್ತಿಗಳು ಹಾನಿಯಾಗಬಹುದು. ಅಂತಹ ಘಟನೆಗಳಿಗೆ ಸರಕಾರ ಹೊಣೆಯಾಗಬಾರದು ಎಂದು ಕಿವಿಮಾತು ಹೇಳಿದರು.

ಮೀಸಲಾತಿ ಪಡೆಯುವದು ಅವರ ಹಕ್ಕು, ಅದೇನೂ ಭಿಕ್ಷೆ ಅಲ್ಲ.
ಮುಂದಿನ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಬಹುದು.
ಸಮುದಾಯ ಒಟ್ಟಾಗಿ ಕೆಲಸ ಮಾಡಿದಲ್ಲಿ ಸರಕಾರ ಬಿದ್ದು ಹೋಗುವ ಸಂದರ್ಭ ಬರಬಹುದು. ಸಮಾಜದ ಎಲ್ಲ ಶಾಸಕರು ಪಕ್ಷಭೇದ ಮರೆತು ರಾಜೀನಾಮೆಗೆ ತಯಾರಾದರೆ, ಮೀಸಲಾತಿ ಕೊಡಲೇಬೇಕಾಗುತ್ತದೆ.
ನಾಯಕತ್ವ ಬದಲಾವಣೆಗೆ ಸಾಕಷ್ಟು ಕಾರಣಗಳಿರುತ್ತವೆ. ಮುಂದೊಂದು ದಿನ ಮೀಸಲಾತಿ ವಿಷಯವೂ ನಾಯಕತ್ವ ಬದಲಾವಣೆಗೆ ಕಾರಣವಾಗಬಹುದು ಎಂದು ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

error: Content is protected !!