ವಿಜಯಸಾಕ್ಷಿ ಸುದ್ದಿ, ಕೋಲಾರ: ತಮ್ಮನಿಂದಲೇ ಅಣ್ಣನ ಕೊಲೆಯಾಗಿದ್ದ ಪ್ರಕಣವನ್ನು ಪೊಲೀಸರು ಈಗ ಬೇಧಿಸುವ ಮೂಲಕ ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ.
ಜ.22 ರಂದು ಜಿಲ್ಲೆಯ ಬಂಗಾರಪೇಟೆಯಲ್ಲಿ ಅಣ್ಣ ರಮೇಶ್ ನನ್ನು ಕೊಲೆ ಮಾಡಿದ ತಮ್ಮ ರಾಜೇಶ್ ಅಣ್ಣನ ಮೃತದೇಹವನ್ನು ಆಟೋದಲ್ಲಿ ಒಯ್ದು ಆಟೋ ಸಮೇತ ಸುಟ್ಟು ಹಾಕಿದ್ದ.
ಆರೋಪಿ ರಾಜೇಶನಿಗೆ ಮಕ್ಕಳಿಲ್ಲದ ಕಾರಣ ರಮೇಶನ ಮಕ್ಕಳನ್ನು ದತ್ತು ನೀಡುವಂತೆ ಒತ್ತಾಯ ಮಾಡ್ತಿದ್ದ. ಇದಕ್ಕೆ ರಮೇಶ್ ನಿರಾಕರಿಸಿದ್ದಕ್ಕೆ ಮಾತಿಗೆ ಮಾತು ಬೆಳೆದು ತಲೆಗೆ ಮಚ್ಚಿನಿಂದ ರಾಜೇಶ್ ಹಲ್ಲೆ ನಡೆಸಿ ರಮೇಶನನ್ನು ಕೊಂದಿದ್ದ.
ನಂತರ ಸ್ನೇಹಿತ ಅಜಯ್ ಸಹಾಯದಿಂದ ಆಟೋದಲ್ಲಿ ಹೋಗಿ ಸುಟ್ಟು ಹಾಕಿದ್ದ ಆರೋಪಿಗಳು. ಆಟೋ ನಂಬರ್ ನಿಂದ ಪೊಲೀಸರು ತನಿಖೆ ಆರಂಭಿಸಿದಾಗ ಮಾಹಿತಿ ಬಯಲಾಗಿದೆ.
ಬಂಗಾರಪೇಟೆ ಹೊರಹೊರವಲಯದ ಇಂದಿರಾನಗರ – ಮಲ್ಲಂಗುರ್ಕಿ ಅಂಡರ್ ಪಾಸ್ ಬಳಿ ಆಟೋ ಸಮೇತ ಆರೋಪಿತರು ಬೆಂಕಿ ಹಾಕಿದ್ದರು. ಸದ್ಯ ಆರೋಪಿಗಳಿಬ್ಬರು ಬಂಗಾರಪೇಟೆ ಪೊಲೀಸರ ವಶದಲ್ಲಿದ್ದಾರೆ.
ವಿಜಯಸಾಕ್ಷಿ ಸುದ್ದಿ, ದಾವಣಗೆರೆ: 500 ರೂ. ನೋಟು ತೋರಿಸಿ, 4.85 ಲಕ್ಷ ರೂಪಾಯಿಗಳನ್ನು ಖದೀಮರು ಲಪಟಾಯಿಸಿರುವ ಘಟನೆ ಜಿಲ್ಲೆಯ ಹೊನ್ನಾಳಿಯಲ್ಲಿ ನಡೆದಿದೆ.
ಹೊನ್ನಾಳಿಯ ಕೆನರಾ ಬ್ಯಾಂಕ್ ಬಳಿ ಈ ಘಟನೆ ನಡೆದಿದ್ದು, ಘಂಟ್ಯಾಪುರದ ಚಂದ್ರನಾಯ್ಕ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದಾರೆ. ಚಂದ್ರಾನಾಯ್ಕ ಅವರ ಗಮನ ಬೇರೆಡೆ ಸೆಳೆದು 4.85 ರೂ. ಲಕ್ಷ ಹಣವನ್ನು ಖಯರ್ನಾಕ್ ಕಳ್ಳರು ದೋಚಿದ್ದಾರೆ.
ಚಂದ್ರಾನಯ್ಕ ಕೆನರಾ ಬ್ಯಾಂಕಿನಿಂದ ಹಣ ಬಿಡಿಸಿಕೊಂಡು ಮರಳುತ್ತಿದ್ದರು. ಇದನ್ನು ಗಮನಿಸಿ ಚಂದ್ರನಾಯ್ಕ ಅವರನ್ನು ಖದೀಮರು ಹಿಂಬಾಲಿಸಿ, 500 ನೋಟನ್ನು ಕೆಳಗೆ ಬೀಳಿಸಿ ಚಂದ್ರನಾಯ್ಕರನ್ನು ಯಾಮಾರಿಸಿ ಹಣ ಕಳ್ಳತನ ಮಾಡಿದ್ದಾರೆ.
ಕಳ್ಳರ ಈ ಕೃತ್ಯ ಸಿಸಿ ಕ್ಯಾಮೆರಗಳಲ್ಲಿ ದೃಶ್ಯಾವಳಿ ಸೆರೆಯಾಗಿದ್ದು, ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಒಂದೇ ಕುಟುಂಬದ ನಾಲ್ವರು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬುಧವಾರ ತಡರಾತ್ರಿ ಬೆಳಗಾವಿ ಜಿಲ್ಲೆಯ ರಾಯಬಾಗ ರೈಲು ನಿಲ್ದಾಣದ ಬಳಿ ನಡೆದಿದೆ.
ಜಿಲ್ಲೆಯ ಬೀರಡಿ ಗ್ರಾಮದ ಸಾತಪ್ಪ ಅಣ್ಣಪ್ಪ ಸುತಾರ್(60), ಪತ್ನಿ ಮಹಾದೇವಿ(50), ಮಕ್ಕಳಾದ ದತ್ತಾತ್ರೇಯ (28), ಸಂತೋಷ (25) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಗಳಾಗಿದ್ದಾರೆ.
ನಿಜಾಮುದ್ದೀನ್ ಎಕ್ಸ್ಪ್ರೆಸ್ ರೈಲಿಗೆ ತಲೆಕೊಟ್ಟು ಸೂಸೈಡ್ ಮಾಡಿಕೊಂಡಿರುವವರ ಮೃತದೇಹಗಳನ್ನು ರಾಯಬಾಗ ತಾಲ್ಲೂಕಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಗ್ರಾಮದಲ್ಲಿ ಸಾಮೂಹಿಕ ಅಂತ್ಯಸಂಸ್ಕಾರ ನಡೆಸಲಾಗಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ತಂದೆ ಮಾಡಿದ ಸಾಲ ತೀರಿಸಲಾಗದೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.
ಬೆಳಗಾವಿ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.
ಮಹಾರಾಷ್ಟ್ರಕ್ಕೆ ಬೆಳಗಾವಿ ಅಲ್ಲ. ರಾಜ್ಯದ ಒಂದಿಂಚು ಜಾಗ ಬಿಟ್ಟುಕೊಡುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ್ರ ಅಲ್ಲಿನ ಪುಂಡರಿಗೆ ಎಚ್ಚರಿಕೆ ನೀಡಿದರು.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ಉದ್ಧಟತನದ ಹೇಳಿಕೆ ಖಂಡಿಸಿ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಮಾತನಾಡಿದ ಅವರು, ಭಾರತ-ಪಾಕ್ ಗಡಿಯಲ್ಲಿ ಪಾಕಿಸ್ತಾನ ಹೇಗೆ ನಡೆದುಕೊಳ್ಳುತ್ತಿದೆಯೋ ಆ ರೀತಿ ಬೆಳಗಾವಿ ಗಡಿ ವಿಚಾರದಲ್ಲಿ ಮಹಾರಾಷ್ಟ್ರ ನಡೆದುಕೊಳ್ಳುತ್ತಿದೆ ಎಂದು ಕಿಡಿ ಕಾಡಿದರು.
ಬೆಳಗಾವಿ ಗಡಿಯೊಳಗೆ ಎಂಇಎಸ್, ಹೊರಗಡೆ ಶಿವಸೇನೆ ಕಿರಿಕ್ ಮಾಡುತ್ತಿವೆ. ಇಂತಹ ಪುಂಡಾಟಿಕೆ ಕರ್ನಾಟಕದಲ್ಲಿ ನಡೆಯುವುದಿಲ್ಲ. ಬೆಳಗಾವಿ, ನಿಪ್ಪಾಣಿ, ಕಾರವಾರ ಅಲ್ಲದೇ, ರಾಜ್ಯದ ಒಂದಿಂಚೂ ಜಾಗ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ.
ಕನ್ನಡದ ಗಂಧ ಗಾಳಿ ಇಲ್ಲದವರು, ಕನ್ನಡದ ಬಗ್ಗೆ ಉಡಾಫೆಯಾಗಿ ಮಾತನಾಡುವುದನ್ನು ಸಹಿಸುವುದಿಲ್ಲ. ಮುಂದಿನ ದಿನಗಳಲ್ಲಿ ಕನ್ನಡ ನಾಡು, ನುಡಿಗಾಗಿ ಹೋರಾಟಗಳು ಹೆಚ್ಚಾಗಬೇಕು ಎಂದು ಟಿ.ಎ.ನಾರಾಯಣಗೌಡ್ರ ಆಶಿಸಿದರು.
ಶಾಲಾ ಮಕ್ಕಳಿಗೆ ದಿನಂಪ್ರತಿ ಯೋಗವನ್ನು ಕಡ್ಡಾಯವಾಗಿ ಶಿಕ್ಷಕರು ಹೇಳಿಕೊಟ್ಟಲ್ಲಿ ಅವರ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸಿ ಮುಂದಿನ ದಿನಗಳಲ್ಲಿ ರೋಗ ರಹಿತ ಸಮಾಜ ನಿರ್ಮಾಣ ಮಾಡುವಲ್ಲಿ ಜಿಲ್ಲೆಯ ಎಲ್ಲ ದೈಹಿಕ ಶಿಕ್ಷಕರು ಮನ ಪೂರ್ವಕವಾಗಿ ಪ್ರಯತ್ನಿಸಬೇಕು ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷ ಈರಣ್ಣ ನಾಡಗೌಡ ನುಡಿದರು.
ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದ ಸಭಾಭವನದಲ್ಲಿ ಜರುಗಿದ ರಾಷ್ಟ್ರೀಯ ಆಯುಷ್ ಅಭಿಯಾನ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಗದಗ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ದೈಹಿಕ ಶಿಕ್ಷಕ ಶಿಕ್ಷಕಿಯರಿಗೆ ನಡೆದ ಯೋಗ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಜಿ.ಪಂ. ಸದಸ್ಯ ವಾಸಣ್ಣ ಕುರಡಗಿ, ಗದಗ ತಾಲೂಕು ಪಂಚಾಯತ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ಜಿಲ್ಲಾ ಆಯುಷ ಅಧಿಕಾರಿ ಡಾ.ಸುಜಾತಾ ಪಾಟೀಲ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ ಬಸವಂತಪ್ಪ, ಯುವಜನ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಶ್ವನಾಥ.ಬಿ.ಜಿ. ಸೇರಿದಂತೆ ದೈಹಿಕ ಶಿಕ್ಷಕರು, ಆಯುಷ ಇಲಾಖೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವ್ಯಾಪಾರ ಸಂಸ್ಥೆಗಳ ಅನುಚಿತ ವ್ಯಾಪಾರಿ ಪದ್ಧತಿಗಳಾದ ಕಲಬೆರಕೆ, ಕಾಳಸಂತೆ ವ್ಯಾಪಾರ, ತೂಕ ಮತ್ತು ಅಳತೆಯಲ್ಲಿ ಕೊರತೆ, ವಂಚನೆಯ ಜಾಹೀರಾತು, ಮುಂತಾದವುಗಳಿಂದ ಗ್ರಾಹಕರು ಜಾಗೃತರಾಗಿರುವಂತೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಎ.ಮೌಲಿ ಹೇಳಿದರು.
ಗದಗ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಹಕರು ಯಾವುದೇ ವಸ್ತು ಖರೀದಿಯಲ್ಲಿ ವಂಚನೆ ಕಂಡುಬಂದಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿ ನ್ಯಾಯ ಪಡೆಯಬಹುದಾಗಿದೆ. ಅನೇಕ ಸಂದರ್ಭದಲ್ಲಿ ಗ್ರಾಹಕರು ಅವಶ್ಯಕ ಜ್ಞಾನದ ಕೊರತೆಯಿಂದಾಗಿ ವ್ಯಾಪಾರ ಸಂಸ್ಥೆಗಳಿಂದ ಶೋಷಣೆಗೊಳಪಟ್ಟು ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲಾಗುತ್ತಿಲ್ಲ. ಈ ಕುರಿತು ಗ್ರಾಹಕರಿಗೆ ಸೂಕ್ತ ಶಿಕ್ಷಣ ಹಾಗೂ ಹಕ್ಕುಗಳ ಮಾಹಿತಿಯನ್ನು ನೀಡುವುದರ ಮೂಲಕ ಜಾಗೃತಿ ಮೂಡಿಸಲು ಕರೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ.ಸಲಗರೆ ಮಾತನಾಡಿ, ಗ್ರಾಹಕರು ತಾವು ಸರಕು ಮತ್ತು ಸೇವೆಗಳನ್ನು ಖರೀದಿಸುವ ಸಂದರ್ಭದಲ್ಲಿ ಅದರ ಸ್ವಭಾವ, ಬೆಲೆ, ತಯಾರಿಕೆಯ ಮತ್ತು ವಾಯಿದೆಯ ದಿನಾಂಕ, ಸರಕುಗಳನ್ನು ಉಪಯೋಗಿಸುವ ಬಗ್ಗೆ ನಿರ್ದೇಶನ ಹಾಗೂ ಸರಕುಗಳನ್ನು ಉಪಯೋಗಿಸುವಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಯ ಬಗ್ಗೆ ಜಾಗರೂಕರಾಗಿರಬೇಕು. ಇಂದು ವ್ಯಾಪಾರಸ್ಥರು ತಮ್ಮ ಸ್ವಂತ ಲಾಭಕ್ಕಾಗಿ ಸರಕಿನ ಮೂಲ ಗುಣ ಮಟ್ಟದಲ್ಲಿ ವ್ಯತ್ಯಾಸ ಮಾಡುವದರ ಮೂಲಕ ಗ್ರಾಹಕರನ್ನು ಶೋಷಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಯಾವುದೇ ವಸ್ತು ಖರೀದಿಸಿದರೆ ಅದಕ್ಕೆ ಕಡ್ಡಾಯವಾಗಿ ರಶೀದಿಯನ್ನು ಪಡೆಯಬೇಕು. ತಾವು ಖರೀದಿಸಿದ ವಸ್ತುವಿನಲ್ಲಿ ಯಾವುದೇ ನ್ಯೂನತೆಗಳು ಕಂಡುಬಂದಲ್ಲಿ ದೂರು ದಾಖಲಿಸಲು ರಶೀದಿ ಅವಶ್ಯಕವಾಗಿದೆ ಎಂದರು.
ಮಾರುಕಟ್ಟೆಯಲ್ಲಿನ ವ್ಯಾಪಾರಿ ಸಂಸ್ಥೆಗಳ ಅನುಚಿತ ವ್ಯಾಪಾರಿ ಪದ್ಧತಿಯಿಂದ ರಕ್ಷಣೆ ಪಡೆಯಲು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಕಾನೂನುಗಳು ಜಾರಿಯಲ್ಲಿದ್ದು ಇದರ ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಬಿ.ಎಸ್.ಕೇರಿ ಮಾತನಾಡಿ, ಮಾರುಕಟ್ಟೆಯಲ್ಲಿ ಯಾವುದೇ ವಸ್ತು ಖರೀದಿಸಿದರೆ ರಶೀದಿ ಪಡೆಯಬೇಕು. ಒಂದು ವೇಳೆ ಖರೀದಿಸಿದ ವಸ್ತುಗಳ ಬಾಳಿಕೆ ನಿಗದಿತ ಅವಧಿಯೊಳಗೆ ನ್ಯೂನತೆಗಳೇನಾದರು ಕಂಡುಬಂದಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಬಹುದಾಗಿದೆ. ಹೊಸದಾಗಿ ಜಾರಿಗೊಂಡ ಗ್ರಾಹಕರ ಸಂರಕ್ಷಣಾ ಕಾಯ್ದೆ 2019ರ ಅನ್ವಯ ಎರಡು ಕಡೆಯ ಕಕ್ಷಿದಾರರ ಮಧ್ಯಸ್ಥಿಕೆ ವಹಿಸಿ ರಾಜಿ ಸಂಧಾನದ ಮೂಲಕ ಪ್ರಕರಣವನ್ನು ಶೀಘ್ರವೇ ಇತ್ಯರ್ಥ ಪಡಿಸಬಹುದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಸಮೀಉನ್ನಿಸಾ. ಸಿ.ಎಚ್. ಮಾತನಾಡಿ, ಹೊಸದಾಗಿ ಜಾರಿಗೊಂಡ ಗ್ರಾಹಕರ ಸಂರಕ್ಷಣಾ ಕಾಯ್ದೆ 2019ರ ಅನ್ವಯ ಗ್ರಾಹಕರ ರಕ್ಷಣಾ ವೇದಿಕೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವಾಗಿ ಬದಲಾಗಿದೆ. ಈ ಕಾಯ್ದೆಯಡಿ ಗ್ರಾಹಕರು ಯಾವುದೇ ಭಾಗದಿಂದ ಗ್ರಾಹಕರ ನ್ಯಾಯಾಲಯದಲ್ಲಿ ದೂರು ದಾಖಲಿಸಬಹುದಾಗಿದೆ. ದೂರದಾರರು ಆನಲೈನ್ ಮೂಲಕವು ದೂರು ದಾಖಲಿಸಿ ಶೀಘ್ರವೇ ಪ್ರಕರಣವನ್ನು ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ. ಗ್ರಾಹಕರ ಹಿತಾಸಕ್ತಿ ಕಾಪಾಡಲು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿರುವ ಕಾನೂನುಗಳನ್ನು ಇಂದಿನ ಯುವಜನತೆ ವಿಧ್ಯಾರ್ಥಿಗಳು ಅರಿತು ಕೊಂಡು ಜಾಗೃತರಾಗಿ ಇತರರಲ್ಲೂ ಜಾಗೃತಿ ಮೂಡಿಸಲು ತಿಳಿಸಿದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ವಿಶ್ರಾಂತ ಸದಸ್ಯ ಎಫ್.ಪಿ.ಲಕ್ಷ್ಮೇಶ್ವರಮಠ ಗ್ರಾಹಕರ ಸಂರಕ್ಷಣಾ ಕಾಯ್ದೆ 2019ರ ಹೊಸ ವೈಶಿಷ್ಟ್ಯಗಳ ಕುರಿತು ಉಪನ್ಯಾಸ ನೀಡಿದರು.
ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎಸ್.ಜಿ.ಪಲ್ಲೇದ, ಕಾನೂನು ಮಾಪನಶಾಸ್ತ್ರ ಸಹಾಯಕ ನಿಯಂತ್ರಕ ಆರ್.ಕೆ.ಕೊಪ್ಪರ, ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಬಿ.ಜಿ.ಗಿರಿತಮ್ಮಣ್ಣವರ, ಆ.ನಾ.ಸ. ಮತ್ತು ಗ್ರಾ.ವ್ಯ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರೀತಿ ದೊಡಮನಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಚೇರಿ ವ್ಯವಸ್ಥಾಪಕಿ ಗಿರಿಜಮ್ಮ ಹಿರೇಮಠ, ಕಾಲೇಜು ಸಿಬ್ಬಂದಿ ಹಾಗೂ ವಿಧ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ.ರಾಜೇಂದ್ರ ಗಡಾದ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಪ್ರಯುಕ್ತ ಜರುಗಿಸಲಾದ ಭಾಷಣ ಹಾಗೂ ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮನಾ ವಿತರಿಸಲಾಯಿತು.
ಪ್ರಾತ್ಯಕ್ಷತೆ: ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಅಂಗವಾಗಿ ಗ್ರಾಹಕರ ಜಾಗೃತಿಗಾಗಿ ಆಹಾರ ಕಲಬೆರೆಕೆ, ಆಹಾರ ಸುರಕ್ಷತೆ ಹಾಗೂ ಆಹಾರ ಕಲಬೆರೆಕೆ, ತೂಕ ಮತ್ತು ಅಳತೆ ಹಾಗೂ ಪೊಟ್ಟಣ ಸಾಮಗ್ರಿಗಳ ವಸ್ತು ಪ್ರದರ್ಶನ ಹಾಗೂ ಎಲ್.ಪಿ.ಜಿ. ಸುರಕ್ಷತೆ ಕುರಿತು ಪ್ರಾತ್ಯಕ್ಷಿಕತೆ ಜರುಗಿತು.
ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತರು ಕೈಗೊಂಡಿದ್ದ ಟ್ರ್ಯಾಕ್ಟರ್ ರ್ಯಾಲಿ ಹಿಂಸಾಚಾರಕ್ಕೆ ಸಮಾಜಘಾತಕ ಶಕ್ತಿಗಳೇ ಕಾರಣ ಎಂದು ರೈತ ಸಂಘಟನೆಗಳ ಒಕ್ಕೂಟವಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.
ಟ್ರ್ಯಾಕ್ಟರ್ ರ್ಯಾಲಿಯ ಸಂದರ್ಭದಲ್ಲಿ ದೆಹಲಿಯಲ್ಲಿ ಹಿಂಸಾಚಾರ ನಡೆಸಿದವರಿಗೂ ರೈತರ ಸಂಘಟನೆಗಳಿಗೂ ಯಾವುದೇ ಸಂಬಂಧವಿಲ್ಲ. ಕೆಲವರು ಪೂರ್ವಯೋಜಿತರಾಗಿ ಇಂತಹ ಕೃತ್ಯ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ.
ನಿಗದಿಯಾಗಿದ್ದ ಮಾರ್ಗವನ್ನು ಬಿಟ್ಟು ಬೇರೆ ದಾರಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇದರಿಂದಾಗಿ ಪೊಲೀಸರೊಂದಿಗೆ ಘರ್ಷಣೆ ನಡೆದಿದೆ.
ಹಿಂಸಾಚಾರದ ಘಟನೆಗಳನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ. ಇದು ಸ್ವೀಕಾರಾರ್ಹವಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.
ರೈತರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗಿಯಾದ ರೈತರಿಗೆ ಧನ್ಯವಾದ ಹೇಳಬಯಸುತ್ತೇವೆ. ಆದರೆ, ಇದೇ ವೇಳೆ ನಡೆದ ಹಿಂಸಾಚಾರವನ್ನು ಖಂಡಿಸುತ್ತೇವೆ.
ದುಷ್ಕೃತ್ಯದಲ್ಲಿ ಭಾಗಿಯಾದವರಿಗೂ ರೈತ ಸಂಘಟನೆಗಳಿಗೂ ಯಾವುದೇ ಸಂಬಂಧವಿಲ್ಲವೆಂದು ಸಂಯುಕ್ತ ಕಿಸಾನ್ ಮೋರ್ಚಾ ಪ್ರಕಟಣೆ ನೀಡಿದೆ.
ಶಾಂತಿಯೇ ನಮ್ಮ ಅತಿದೊಡ್ಡ ಶಕ್ತಿಯಾಗಿದೆ. ನಾವು ನಿಯಮ ಉಲ್ಲಂಘಿಸಿ ಹೋರಾಟ ನಡೆಸುವುದಾಗಿದ್ದರೆ ಎರಡು ತಿಂಗಳ ಕಾಲ ಮಳೆ, ಚಳಿಯಲ್ಲಿ ಶಾಂತಿಯುತ ಪ್ರತಿಭಟನೆ ಕೈಗೊಳ್ಳುತ್ತಿರಲಿಲ್ಲ.
ನಾವು ಶಿಸ್ತಿನ ಮಾರ್ಗದಲ್ಲಿಯೇ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದೇವೆ. ಆದರೆ, ಕೆಲವು ಸಮಾಜಘಾತುಕ ಶಕ್ತಿಗಳು ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿದ್ದಾರೆ.
ಪ್ರತಿಭಟನೆ ವೇಳೆ ಒಳನುಸುಳಿದ ಸಮಾಜಘಾತಕ ಶಕ್ತಿಗಳು ಇಂತಹ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಿದೆ
ದೆಹಲಿಯಲ್ಲಿ ನಡೆಯುತ್ತಿರುವುದು ರೈತರ ಹೋರಾಟವಲ್ಲ, ಭಯೋತ್ಪಾದಕರ ರೀತಿಯಲ್ಲಿ ಭಯೋತ್ಪಾದನೆ ಮಾಡಿದಂತಹ ಭಯಾನಕ ಕೃತ್ಯ ಎಂದು ಸಚಿವ ಬಿ.ಸಿ ಪಾಟೀಲ್ ದೆಹಲಿ ದಂಗೆಯನ್ನು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅವರು ಕೊಪ್ಪಳದಲ್ಲಿ ಮಂಗಳವಾರದಂದು ಸುದ್ದಿಗಾರರೊಂದಿಗೆ ಮಾತನಾಡಿ, ರೈತರು ಈ ರೀತಿ ಕಾನೂನನ್ನು ಕೈಗೆ ತೆಗೆದುಕೊಂಡಿದ್ದು, ಇತಿಹಾಸದಲ್ಲಿಯೇ ಇಲ್ಲ. ಇದರ ಹಿಂದೆ ಭಯೋತ್ಪಾದಕರು, ಖಲಿಸ್ತಾನ್, ಕಾಂಗ್ರೆಸ್ ನವರು ಇದ್ದಾರೆ. ಮೋದಿಯವರ ಜನಪ್ರಿಯತೆ ಹಾಗೂ ಕೇಂದ್ರ ಸರ್ಕಾರವನ್ನು ಕೆಡವಲು ಆಗುವುದಿಲ್ಲ ಎಂದು ತಿಳಿದು, ಭಯೋತ್ಪಾದಕರಿಗೆ ರೈತರ ಪಟ್ಟ ಹಾಕಿ ದೆಹಲಿಯಲ್ಲಿ ಕೃತ್ಯ ನಡೆಸಲಾಗಿದೆ ಎಂದರು.
ಇನ್ನು ನನ್ನ ಈ ಮಾತುಗಳಿಗೂ ಈಗಲೂ ಬದ್ಧನಾಗಿದ್ದು, ಸಂವಿಧಾನದಲ್ಲಿ ಹಾಗೂ ದೇಶದ ಹಿರಿಮೆಯಲ್ಲಿ ಕೆಂಪು ಕೋಟೆಗೆ ತನ್ನದೇ ಆದ ಗೌರವ ಇದೆ. ಕೆಂಪು ಕೋಟೆಯ ಮೇಲೆ ಭಾರತದ ಧ್ವಜ ಬಿಟ್ಟು, ಬೇರೆ ಧ್ವಜಗಳಿಗೂ ಕನಸಿನಲ್ಲೂ ಅವಕಾಶವಿಲ್ಲ. ಇಂತಹ ಸಂಧರ್ಭದಲ್ಲಿ ಕೆಂಪು ಕೋಟೆ ಮೇಲೆ ಬೇರೆ ಧ್ವಜ ಹಾರಿಸ್ತಾರೆ ಅಂದ್ರೆ ಅವರನ್ನು ಭಯೋತ್ಪಾದಕರನ್ನದೇ ಮತ್ತೇನೆಂದು ಕರೆಯಬೇಕು. ಇವರಿಲ್ಲೇರಿಗೂ ಪಾಕಿಸ್ತಾನ ಹಾಗೂ ಕಾಂಗ್ರೆಸ್ ಪಕ್ಷದ ಕುಮ್ಮಕ್ಕು ಇದೆ ಎಂದು ವಾಗ್ದಾಳಿ ನಡೆಸಿದರು.
ಹೆಚ್.ಕೆ ಪಾಟೀಲ್ರು ಯಾವತ್ತಾದ್ರೂ ಬೇಸಾಯ ಮಾಡಿದ್ದಾರಾ..?
ದೆಹಲಿಯಲ್ಲಿ ನಡೆಯುತ್ತಿರುವ ಭಯೋತ್ಪಾದಕರ ಕೃತ್ಯಕ್ಕೆ ರೈತರ ಬಣ್ಣ ಕಟ್ಟುತ್ತಿರುವ ಹೆಚ್.ಕೆ ಪಾಟೀಲರು ಯಾವತ್ತಾದ್ರೂ ಬೇಸಾಯ ಮಾಡಿದ್ದಾರಾ, ಅಥವಾ ಹೊಲದಲ್ಲಿ ಒಂದು ಹನಿ ಸುರಿಸಿ ಬಿತ್ತನೆ ಮಾಡಿದ್ದಾರಾ ಮೊದಲು ಹೇಳಲಿ.ಇಂತಹ ಕೃತ್ಯಕ್ಕೆ ಬೆಂಬಲಿಸುವ ಅವರು, ಮತ್ತು ಕಾಂಗ್ರೆಸ್ ಪಕ್ಷ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ. ನಿಜವಾದ ರೈತರು ಯಾರೂ ಸಹ ಪ್ರತಿಭಟನೆ ಮಾಡ್ತಾ ಇಲ್ಲ. ದೆಹಲಿಯಲ್ಲಿ ಪ್ರತಿಭಟನೆ ಮಾಡ್ತಾ ಇರೋ ಎಲ್ಲಾರು ಭಯೋತ್ಪಾದಕರು ಎಂದರು.
ಕೇಂದ್ರ ಸರ್ಕಾರ ಗಣರಾಜ್ಯೋತ್ಸವದಂದು ಅನ್ನದಾತರನ್ನು ಕಡೆಗಣಿಸಲಾಗಿದೆ. ರೈತರ ಹೋರಾಟವನ್ನ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಹೋರಾಟ ಹತ್ತಿಕ್ಕುವುದು ಘನಘೋರ ಅಪರಾಧ ಎಂದು ಶಾಸಕ ಎಚ್.ಕೆ.ಪಾಟೀಲ್ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ನಗರದ ಕೆ.ಎಚ್.ಪಾಟೀಲ್ ಕ್ರೀಡಾಂಗಣದಲ್ಲಿ ರೈತರ ಟ್ರ್ಯಾಕ್ಟರ್ ಪರೇಡ್ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿ, ಸರಕಾರಗಳು ರೈತರನ್ನ ಕಡೆಗಣಿಸುತ್ತಿವೆ. ರೈತರ ಪ್ರತಿಭಟನೆಯನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ. ಸರ್ಕಾರ ರೈತರ ಹಿತಕ್ಕೆ ವಿರೋಧವಾಗಿ ನಡೆದುಕೊಳ್ಳುತ್ತಿದೆ ಎಂದರು.
ರೈತರು ಟ್ರ್ಯಾಕ್ಟರ್ ರ್ಯಾಲಿ ಬಗ್ಗೆ ತಿಂಗಳಿನಿಂದ ತಿಳಿಸುತ್ತಾ ಬಂದಿದ್ದಾರೆ. ಇಂದು ರೈತರ ಪ್ರಯತ್ನಕ್ಕೆ ಅಡ್ಡಿಪಡಿಸುವ ಮೂಲಕ ಗಣರಾಜ್ಯೋತ್ಸವದ ಮಹತ್ವ ಹಾಗೂ ಘನತೆಯನ್ನು ಕಡಿಮೆ ಮಾಡಿದ್ದಾರೆ ಎಂದು ಆರೋಪಿಸಿದರು.
ರೈತರ ಹೋರಾಟಕ್ಕೆ ಎಲ್ಲ ಪಕ್ಷದವರ ಬೆಂಬಲವೂ ಇದೆ. ಕಾಂಗ್ರೆಸ್ ಕೂಡ ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿದೆ ಎಂದು ಶಾಸಕ ಎಚ್.ಕೆ.ಪಾಟೀಲ್ ಹೇಳಿದರು.
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿರುವ ವಿವಿಧ ಕಾರ್ಯಕ್ರಮಗಳಿಗೆ ಮತ್ತು ಬಂಡವಾಳ ಹೂಡಿಕೆಗೆ ವೃತ್ತಿ ಪ್ರೋತ್ಸಾಹ ಯೋಜನೆಯಡಿ ಮೆಕ್ಯಾನಿಕ್, ಕಾರ್ಪೆಂಟರ್, ಹಣ್ಣು ಮತ್ತು ತರಕಾರಿ ಮಾರಾಟ, ಬೇಕರಿ, ಪಂಚರ್ ಮತ್ತು ವೆಲ್ಡಿಂಗ್ ಶಾಪ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ರಿಪೇರಿ ಇತ್ಯಾದಿ ವೃತ್ತಿಗಳಿಗೆ ಬ್ಯಾಂಕ್ ಸಹಯೋಗದೊಂದಿಗೆ ಸಬ್ಸಿಡಿ ಸಾಲ ಮತ್ತು ಸಹಾಯಧನ ನೀಡುವ ಯೋಜನೆಗೆ ಅವಶ್ಯಕ ಇರುವ ಅನುದಾನವನ್ನು ಒದಗಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ್ ಪಾಟೀಲ್ಗೆ ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷ ಡಾ. ಅಬ್ದುಲ್ ರಜಾಕ್ ನದಾಫ್ ಹಾಗೂ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಸರಕು ವಾಹನ, ಪ್ರಯಾಣಿಕ ಆಟೋ ಮತ್ತು ಸರಕು ಆಟೋ ಖರೀದಿಗೆ 1 ಲಕ್ಷ ರೂ,ಸಬ್ಸಿಡಿ ಮತ್ತು ಕಾರ್, ಜೀಪ್ ಖರೀದಿಗೆ 3 ಲಕ್ಷ ರೂ.ಸಬ್ಸಿಡಿ ಆಧಾರಿತ ಬ್ಯಾಂಕ್ ಸಾಲ ಸೌಲಭ್ಯಕ್ಕಾಗಿ, ವಿಧವೆ, ವಿಚ್ಛೇದಿತ ಮತ್ತು ಏಕ ಮಹಿಳೆಯರಿಗೆ ನವೋದ್ಯಮ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಒದಗಿಸಲು, ಅರಿವು ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅನುದಾನ ಒದಗಿಸಲು ಅವರು ಆಗ್ರಹ ಮಾಡಿದ್ದಾರೆ.
ಇನ್ನೂ ಉರ್ದು ಅಕಾಡಮಿಯಲ್ಲಿ 70 ವರ್ಷ ಮೀರಿದ ಪ್ರತಿಷ್ಠಿತ ಉರ್ದು ಸಾಹಿತಿಗಳಿಗೆ ಮಾಸಾಶನ ಮತ್ತು ಮಾರಣಾಂತಿಕ ಕಾಯಿಲೆಗಳ ಚಿಕಿತ್ಸೆಗೆ ಧನ ಸಹಾಯ ನೀಡುವ ಹೊಸ ಯೋಜನೆಗೆ, ಉರ್ದು ಅಕಾಡಮಿಯ ವಿವಿಧ ಕಾರ್ಯಕ್ರಮಗಳಿಗೆ ಅವಶ್ಯಕತೆ ಇರುವ ವಾರ್ಷಿಕ ಅನುದಾನ ಹಾಗೂ ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೆ ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಅನುಷ್ಠಾನಕ್ಕೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚನೆ ಮಾಡಿ ಇದನ್ನು ಕಾರ್ಯರೂಪಕ್ಕೆ ತರುವಂತೆ ಅವರು ಮಹಾಮಂಡಳದ ರಾಜ್ಯಾಧ್ಯಕ್ಷ ಡಾ. ಅಬ್ದುಲ್ ರಜಾಕ್ ನದಾಫ್ ಹಾಗೂ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.