Home Blog Page 3070

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದಿಂದ ಗಣರಾಜ್ಯೋತ್ಸವ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಕಚೇರಿಯಲ್ಲಿ ಮಂಗಳವಾರ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು.

ವೆಲ್ಫೇರ್ ಪಾರ್ಟಿ ರಾಜ್ಯಾಧ್ಯಕ್ಷರಾದ ಅಡ್ವಕೇಟ್ ತಾಹಿರ್ ಹುಸೇನ್ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಖಾನ್, ರಾಜ್ಯ ಮಾಧ್ಯಮ ಕಾರ್ಯದರ್ಶಿ ಜಾಗಿರ್ದಾರ, ಮಹಿಳಾ ವಿಭಾಗದ ರಾಜ್ಯಾಧ್ಯಕ್ಷರಾದ ತಲತ್ ಯಾಸ್ಮಿನ್, ಆಸಿಫ್ , ಸೈಯದ್, ಫಸಲ್, ಇರ್ಫಾನ್ ರೋಣ, ಅಬ್ದುಲ್ ಸಲಾಂ ಕಾರ್ಯಕ್ರಮದಲ್ಲಿ ಇದ್ದರು.

ಗದುಗಿನ ಗದ್ದುಗೆಗಾಗಿ ಕೈ-ಕಮಲ ಗುದ್ದಾಟ: ಅಧ್ಯಕ್ಷ, ಉಪಾಧ್ಯಕ್ಷ ಕುರ್ಚಿಗಾಗಿ ಬಿಗ್ ಫೈಟ್!

ಹೊಂಬಳ, ಅಂತೂರ- ಬೆಂತೂರ ಬಿಜೆಪಿ ಬೆಂಬಲಿಗರ ತೆಕ್ಕೆಗೆ?
ಸಮಬಲ ಸಾಧಿಸಿರುವ ಬಿಂಕದಕಟ್ಟಿ ಮೇಲೆ ಕೈ-ಕಮಲ ಕಣ್ಣು

ದುರಗಪ್ಪ ಹೊಸಮನಿ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ನಾಲ್ಕು ತಾಲ್ಲೂಕುಗಳ 55 ಗ್ರಾಮ ಪಂಚಾಯತಿಗಳ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಪಟ್ಟಿ ಪ್ರಕಟವಾಗಿದ್ದು, ಆಕಾಂಕ್ಷಿಗಳ ಸಂಖ್ಯೆ ಹಿರಿದಾಗಿದೆ.
ಮೀಸಲಾತಿಯ ಮೇಲೆ ಕಣ್ಣಿಟ್ಟಿದ್ದ ಗದಗ, ಮುಂಡರಗಿ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲ್ಲೂಕಿನ ಗ್ರಾ.ಪಂ. ಸದಸ್ಯರು ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದರೂ ಅಧಿಕಾರಕ್ಕಾಗಿ ರಾಜಕೀಯ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಸದಸ್ಯರ ಮಧ್ಯೆ ಅಧಿಕಾರಕ್ಕಾಗಿ ತಿಕ್ಕಾಟವೂ ನಡೆದಿದೆ.

ಕಾಂಗ್ರೆಸ್, ಬಿಜೆಪಿಗಳು ತಮ್ಮ ಪಕ್ಷದ ಬೆಂಬಲಿತ ಸದಸ್ಯರನ್ನು ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸೂಕ್ತ ಅಭ್ಯರ್ಥಿಗಳ ಹುಡುಕಾಟ ನಡೆಸಿದ್ದಾರೆ. ಇದಕ್ಕಾಗಿ ಸದಸ್ಯರೊಂದಿಗ ಸಾಲು ಸಾಲು ಸಭೆ ನಡೆಸಿ, ಅಭಿಪ್ರಾಯ ಕಲೆ ಹಾಕುತ್ತಿದ್ದಾರೆ.

ಹೊಂಬಳ ಗ್ರಾಪಂ ಬಿಜೆಪಿ ಬೆಂಬಲಿಗರ ತೆಕ್ಕೆಗೆ?

ಹೊಂಬಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಪಂಗಡ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸರಸ್ವತಿ ಬಸವರಾಜ ಬಳ್ಳಾರಿ ಮಾತ್ರ ಗೆಲುವು ಸಾಧಿಸಿದ್ದಾರೆ. ಈ ಪಂಚಾಯತಿಗೆ ಎಸ್.ಟಿ. ಮೀಸಲಾತಿ ಸಿಕ್ಕಿದ್ದು, ಹೊಂಬಳದಲ್ಲಿ ಬಹುತೇಕ ಬಿಜೆಪಿಗೆ ಅಧಿಕಾರ ಸಿಗಲಿದೆ. ಅಂತೂರ-ಬೆಂತೂರ ಗ್ರಾ.ಪಂ.ನ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಯಲ್ಲವ್ವ ದುರಗಪ್ಪ ಹೊಸಮನಿ ಜಯಭೇರಿ ಬಾರಿಸಿದ್ದು, ಪಂಚಾಯತಿಗೆ ಎಸ್ಸಿ ಮಹಿಳಾ ಮೀಸಲಾತಿಯೂ ಬಂದಿದೆ. ಈ ಗ್ರಾ.ಪಂ. ಕಮಲದ ಪಾಲಾಗುವ ಲಕ್ಷಣಗಳು ಗೋಚರಿಸುತ್ತಿವೆ. ಹಾಗಾದಲ್ಲಿ ಗದಗ ತಾಲ್ಲೂಕಿನ 2 ಗ್ರಾ.ಪಂ.ಗಳಲ್ಲಿ ಬಿಜೆಪಿಗೆ ಅಧಿಕಾರ ಸಿಕ್ಕಂತಾಗಲಿದೆ.

ಗ್ರಾ.ಪಂ. ಸದಸ್ಯರ ಲೆಕ್ಕಾಚಾರ:
ಗ್ರಾ.ಪಂ. ಸದಸ್ಯರು ತಮ್ಮ ಬೆಂಬಲಿಗರೊಂದಿಗೆ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಅಧ್ಯಕ್ಷ ಪಟ್ಟ ಕೊಡುವಂತೆ ಬಿಗಿಪಟ್ಟು ಹಿಡಿದಿದ್ದಾರೆ. ಬಹುಮತ ತೋರಿಸಲು ರಣತಂತ್ರ ಹೆಣೆಯುತ್ತಿದ್ದಾರೆ.
ಮೀಸಲಾತಿ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅಧ್ಯಕ್ಷ ಸ್ಥಾನ ಕೊಡಲೇಬೇಕೆಂದು ಸದಸ್ಯರು ನಾಯಕರ ಹಿಂದೆ ದುಂಬಾಲು ಬಿದ್ದಿದ್ದಾರೆ. ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿರುವುದರಿಂದ ಸದಸ್ಯರಲ್ಲಿ ಅಸಮಾಧಾನ ಉಂಟಾಗದಂತೆ ನೋಡಿಕೊಳ್ಳಲು 50-50 ಅಧಿಕಾರ ಹಂಚಿಕೆ ಸೂತ್ರಕ್ಕೂ ಮುಂದಾಗಿದ್ದಾರೆ.

ಟೊಂಕಕಟ್ಟಿ ನಿಂತ ಕೈ-ಕಮಲ:
ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮೂರರಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಗದಗ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ ಪರಾಜಿತಗೊಂಡಿತ್ತು. ಹಾಗಾಗಿ ಪಕ್ಷ ಬಲವರ್ಧನೆಗೆ ಕಮಲ ನಾಯಕರು ಟೊಂಕಕಟ್ಟಿ ನಿಂತಿದ್ದಾರೆ. ಮತ್ತೊಂಡೆದೆ, ಕಾಂಗ್ರೆಸ್ ನಾಯಕರು ಕ್ಷೇತ್ರ ತಮ್ಮ ಕೈ ತಪ್ಪಿ ಹೋಗಬಾರದೆಂದು ಪಣ ತೊಟ್ಟಿದ್ದಾರೆ. ಹಾಗಾಗಿ, ಗದಗ ತಾಲ್ಲೂಕಿನ ಮೀಸಲಾತಿ ಪಟ್ಟಿ ಸೋಮವಾರ ಪ್ರಕಟವಾಗುತ್ತಿದ್ದಂತೆ, ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸದಸ್ಯರ ಸಭೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಂಕದಕಟ್ಟಿ ಮೇಲೆ ಬಿಜೆಪಿ ಕಣ್ಣು

ಈ ಹಿಂದೆ ಕಾಂಗ್ರೆಸ್ ಪ್ರಬಲವಾಗಿದ್ದ ಬಿಂಕದಕಟ್ಟಿ ಗ್ರಾಮದಲ್ಲಿ ಮೊದಲ ಬಾರಿಗೆ ಬಿಜೆಪಿ ತನ್ನ ಖಾತೆ ತೆರೆದಿದೆ.14 ಸ್ಥಾನಗಳ ಪೈಕಿ 7 ಸ್ಥಾನಗಳಲ್ಲಿ ಗೆಲವು ಸಾಧಿಸಿದೆ. ಶ್ರೀನಿವಾಸ್ ತಮ್ಮನಗೌಡ್ರ ಅವರ ಧರ್ಮಪತ್ನಿ ಅಧ್ಯಕ್ಷ ಪಟ್ಟಕ್ಕಾಗಿ ಪೈಪೋಟಿ ನಡೆಸಿದ್ದಾರೆ. ಉಪಾಧ್ಯಕ್ಷ ಗಾದಿಗೆ ಡಿ.ಬಿ. ಕರಿಗೌಡ್ರ ಲಾಬಿ ನಡೆಸಿದ್ದಾರೆ. ಸಮಬಲ ಸಾಧಿಸಿರುವುದರಿಂದ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಕಮಲದತ್ತ ಸೆಳೆಯಲು ನಾಯಕರು ತೆರೆಮರೆಯ ಕಸರತ್ತು ನಡೆಸಿದ್ದಾರೆ. ಆಪರೇಷನ್ ಕಮಲಕ್ಕೆ ತುತ್ತಾಗದಂತೆ ಕಾಂಗ್ರೆಸ್ ನಾಯಕರು ತಮ್ಮ ಸದಸ್ಯರನ್ನು ಹಿಡಿದಿಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಕುದುರೆ ವ್ಯಾಪಾರ ಜೋರು?

ಆಡಳಿತ ರಚಿಸುವಲ್ಲಿ ಪಕ್ಷೇತರ ಸದಸ್ಯರು ಪ್ರಮುಖ ಪಾತ್ರ ವಹಿಸುವ ಹಿನ್ನೆಲೆಯಲ್ಲಿ ಅಂತಹ ಸದಸ್ಯರನ್ನು ಸೆಳೆಯುವ ಪ್ರಯತ್ನ ನಡೆದಿದೆ. ಸದಸ್ಯ ಬಲ ಹೆಚ್ಚಿಸಿಕೊಳ್ಳಲು ಹಾಗೂ ತಮ್ಮ ಸದಸ್ಯರನ್ನು ತಮ್ಮ ಬಳಿಯೇ ಇಟ್ಟುಕೊಳ್ಳಲು ರೆಸಾರ್ಟ್ ನತ್ತ ಮೊರೆ ಹೋಗಿದ್ದಾರೆ. ಅಲ್ಲದೇ, ತಮ್ಮ ಸದಸ್ಯರನ್ನು ಗೋವಾ ಮತ್ತು ಧರ್ಮಸ್ಥಳದತ್ತ ಕರೆದೊಯ್ಯುವ ಯೋಜನೆ ರೂಪಿಸುತ್ತಿದ್ದಾರೆ. ಆಸೆ, ಆಮಿಷಗಳಿಗೆ ಒಳಗಾಗದಂತೆ ನೋಡಿಕೊಳ್ಳಲು ಕೆಲವು ಸದಸ್ಯರನ್ನು ರೆಸಾರ್ಟ್‌ಗಳಲ್ಲಿ ಕೂಡಿ ಹಾಕಿದ್ದಾರೆ. ಕುದುರೆ ವ್ಯಾಪಾರವೂ ಜೋರಾಗಿದೆ.

ಕಾಂಗ್ರೆಸ್ ದುರಾಡಳಿತದಿಂದ ಜನರು ಬೇಸತ್ತಿದ್ದು, ಬಿಜೆಪಿಯತ್ತ ಹೆಚ್ಚು ಒಲವು ತೋರಿದ್ದಾರೆ. ಜಿಲ್ಲೆಯ ಬಹುತೇಕ ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ವಿಶ್ವಾಸವಿದೆ.

ಅನಿಲ ಮೆಣಸಿನಕಾಯಿ, ಬಿಜೆಪಿ ಯುವ ಮುಖಂಡರು

ಜಿಲ್ಲೆಯ 117 ಗ್ರಾ.ಪಂ.ಗಳ ಪೈಕಿ ಬಹುತೇಕ ಗ್ರಾಮ ಪಂಚಾಯತಿಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಲಿದ್ದು, ಶೇ. 75 ಗ್ರಾ.ಪಂ.ಗಳು ಕಾಂಗ್ರೆಸ್ ಪಕ್ಷದ ಪಾಲಾಗಲಿವೆ.

ಜಿ ಎಸ್ ಪಾಟೀಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ

ಉತ್ಸವದಂದೇ ಕಪ್ಪತಗುಡ್ಡಕ್ಕೆ ಬೆಂಕಿ: ಅಪಾರ ಸಸ್ಯ ಸಂಪತ್ತು ನಾಶ

ವಿಜಯಸಾಕ್ಷಿ ಸುದ್ದಿ, ಗದಗ

ಭಾನುವಾರದಂದು (ಜ.24) ಗದಗ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅರಣ್ಯ ಇಲಾಖೆ ಕಪ್ಪತ ಉತ್ಸವ-2021 ನಡೆಸುತ್ತಿತ್ತು. ಮತ್ತೊಂದೆಡೆ ಅಂದೇ ಮುಂಡರಗಿ ತಾಲ್ಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದ ಕಪ್ಪತಗುಡ್ಡ ವ್ಯಾಪ್ತಿಯಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದದ್ದು ವಿಪರ್ಯಾಸ.

ಸೋಮವಾರವೂ ಅಗ್ನಿದೇವನ ಅಟ್ಟಹಾಸ ಮುಂದುವರೆದಿದೆ. ಡೋಣಿ ಮತ್ತು ಡಂಬಳ ಗ್ರಾಮದ ಮಧ್ಯೆ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿದ್ದ ನೆಡುತೋಪು ಬೆಂಕಿ ಬಿದ್ದು ಭಾಗಶಃ ಸುಟ್ಟು ಹೋಗಿದೆ. ಬೆಳಗ್ಗೆ 11 ಗಂಟೆಗೆ ಹೊತ್ತಿಕೊಂಡ ಬೆಂಕಿ ರಾತ್ರಿ 8 ಗಂಟೆಯವರೆಗೂ ಕಾವಲುಗಾರರು ಬೆಂಕಿ ನಂದಿಸಿದ್ದಾರೆ. ಅದರಂತೆ ಶನಿವಾರ ಹಿರೇವಡ್ಡಟ್ಟಿ ಭಾಗದಲ್ಲಿ ಬೆಂಕಿ ಬಿದ್ದಿತ್ತು ಎಂದು ಮೂಲಗಳು ತಿಳಿಸಿವೆ.

ಕಪ್ಪತಗುಡ್ಡದ ಸೆರಗಂಚಿನ ಡಂಬಳ, ಹಿರೇವಡ್ಡಟ್ಟಿ ಚಿಕ್ಕವಡ್ಡಟ್ಟಿ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಬೆಂಕಿ ಬಿದ್ದು ಅಪಾರ ಪ್ರಮಾಣದ ಔಷಧಿ ಸಸ್ಯಗಳು ಸುಟ್ಟು ಕರಕಲಾಗಿವೆ. ಸೋಮವಾರ ರಾತ್ರಿ 8 ಗಂಟೆವರೆಗೆ ಬೆಂಕಿ ಹೊತ್ತಿ ಉರಿಯುತ್ತಿರುವದು ದಾರಿ ಹೋಕರಿಗೆ ಕಾಣಿಸಿದೆ. ಇದರಿಂದ ಬೇಸಿಗೆ ಆರಂಭಕ್ಕೂ ಮುನ್ನವೇ ಕಪ್ಪತ್ತಗುಡ್ಡಕ್ಕೆ ಬೆಂಕಿ ಕಾಟ ಶುರುವಾಗಿರುವುದು ಆಘಾತವನ್ನುಂಟು ಮಾಡಿದೆ.

ಕಪ್ಪತಗುಡ್ಡಕ್ಕೆ ಬೆಂಕಿ ಬಿದ್ದ ಬಗ್ಗೆ ವಿಜಯಸಾಕ್ಷಿಗೆ ಗೊತ್ತಾಗುತ್ತಿದ್ದಂತೆಯೇ ಮಾಹಿತಿಗಾಗಿ ಗದಗ ಉಪ ಅರಣ್ಯ ಸಂರಕ್ಷಾಧಿಕಾರಿ ಸೂರ್ಯಸೇನಾ ಅವರನ್ನು ಫೋನ್ ಮೂಲಕ ಸಂಪರ್ಕಿಸಿದಾಗ ಡಿಎಫ್‌ಒ ಅವರ ಉತ್ತರ ಮಾತ್ರ ಅಚ್ಚರಿ ಮೂಡಿಸುವ ರೀತಿಯಲ್ಲಿ ಇತ್ತು.

ಬೆಂಕಿ ಬಿದ್ದಿದೆ ಎಂದು ನಿಮಗೆ ಯಾರು ಹೇಳುತ್ತಿದ್ದಾರೆ? ಫೋಟೋ ಸಿಕ್ಕರೆ ಹಂಚಿಕೊಳ್ಳಿ. ನಮಗೆ ಸ್ಯಾಟ್‌ಲೈಟ್ ಮೂಲಕ ಅಥವಾ ನಮ್ಮ ಸಿಬ್ಬಂದಿಯಿಂದಲೂ ಮಾಹಿತಿ ಬಂದಿಲ್ಲ. ನಿಮಗೆ ಯಾರು ಮಾಹಿತಿ ಕೊಡುತ್ತಿದ್ದಾರೋ ಅವರೇ ಬೆಂಕಿ ಹಚ್ಚುತ್ತಿದ್ದಾರೆ ಎಂಬುವುದು ನಮಗೆ ಗೊತ್ತಾಗುತ್ತಿದೆ ಎಂದರು.

ವಿಜಯಸಾಕ್ಷಿ ಪತ್ರಿಕೆಯ ಸುದ್ದಿಯ ಮೇಲೆ ಆಗಾಗ ನಿಗಾವಹಿಸುತ್ತಿದ್ದು, ನಿಮಗೆ ಯಾರು ಮಾಹಿತಿ ಕೊಡುತ್ತಿದ್ದಾರೆಯೋ ಅವರ ಮೇಲೂ ನಿಗಾವಹಿಸುತ್ತಿದ್ದೇವೆ. ಸಿಡಿಯ ಡೇಟಾ ತೆಗೆಯುತ್ತಿದ್ದೇವೆ. ಬೇಗನೆ ಅವರು ಯಾರೆಂದು ಗುರುತಿಸಿ ಹಿಡಿಯುತ್ತೇವೆ. ಅದರಲ್ಲಿ ಎರಡು ಮಾತಿಲ್ಲ. ಈ ರೀತಿಯ ಸುಳ್ಳು ಮಾಹಿತಿ ಕೊಡಬಾರದು. ನಮ್ಮ ಹತ್ತಿರ ಎಲ್ಲಾ ಮಾಹಿತಿ ಇದೆ. ಸ್ಯಾಟ್‌ಲೈಟ್ ಮೂಲಕ ನಮಗೆ ಎಚ್ಚರಿಕೆ ಬರುತ್ತದೆ. ಇವತ್ತು (ಸೋಮವಾರ) ಬೆಂಕಿ ಬಿದ್ದಿದೆ. ಆದರೆ, ಡಂಬಳ, ಹಿರೇವಡ್ಡಟ್ಟಿಯಲ್ಲಿ ಅಲ್ಲ. ಡೋಣಿ ಪಶ್ಚಿಮದಲ್ಲಿ ಬೆಂಕಿ ಬಿದ್ದಿದ್ದು, ಬೆಂಕಿ ನಂದಿಸಲಾಗಿದೆ. ಯಾರು ಹಚ್ಚಿದ್ದಾರಂತೆಯೂ ಗೊತ್ತಾಗುತ್ತಿದೆ ಎಂದ ಡಿಎಫ್ಒ ಅವರು, ಪತ್ರಿಕೆಯ ಮೇಲೆ ಗೂಢಚಾರಿಕೆ ನಡೆಸಲಾಗುತ್ತಿದೆ ಎಂಬುದನ್ನು ನೇರವಾಗಿ ಹೇಳಿದ್ದಾರೆ.

ಬೆಂಕಿ ಹಚ್ಚಿದವರ ವಿರುದ್ಧ ಕ್ರಮ ಕೈಗೊಳ್ಳಬಹುದಲ್ಲಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದಕ್ಕೆ ಸಾಕ್ಷಿ ಬೇಕು. ಅರಣ್ಯದಲ್ಲಿ ಇವರೇ ಹಚ್ಚಿದ್ದಾರೆಂಬ ಮಾಹಿತಿ ಸಿಗುವುದಿಲ್ಲ. ನೀವು ನಮಗೆ ಸಹಾಯ ಮಾಡಬೇಕು. ನಿಮ್ಮ ಕರ್ತವ್ಯವನ್ನು ನೀವು ಮಾಡಬೇಕು. ಆದರೆ, ಎರಡೂ ಕಡೆ ಮಾಡಬೇಕು. ತಪ್ಪು ಮಾಡಿದವರನ್ನು ಬೆಳೆಸಬಾರದು. ನೀವು ಯಾರ ಕಡೆಯಿಂದ ಮಾಹಿತಿ ತೆಗದುಕೊಂಡಿದ್ದಿರಲ್ಲಾ ಅವರೇ ಮೂರ್ನಾಲ್ಕು ವರ್ಷದಿಂದ ಆ ಜಾಗದಲ್ಲಿ ಬೆಳೆಯುತ್ತಾ ಬರುತ್ತಿದ್ದಾರೆ ಎಂದು ಹೇಳಿದರು. ಕಪ್ಪತಗುಡ್ಡಕ್ಕೆ ಬೆಂಕಿ ಬಿದ್ದಿದೆ ಎಂದು ಜನರು ಮಾಧ್ಯಮಕ್ಕೆ ಮಾಹಿತಿ ನೀಡುವುದು ತಪ್ಪೇ? ಎಂಬ ಪ್ರಶ್ನೆ ಪರಿಸರವಾದಿಗಳಲ್ಲಿ ಮೂಡಿದೆ. ಇನ್ನೊಂದೆಡೆ, ಮಾಹಿತಿದಾರರ ಮೇಲೆ ಅರಣ್ಯ ಇಲಾಖೆ ಕಣ್ಗಾವಲಿರಿಸಿದೆ ಎನ್ನುವ ರೀತಿಯಲ್ಲಿ ಬೆದರಿಕೆ ತಂತ್ರ ಅನುಸರಿಸುತ್ತಿದೆಯಾ ಎಂಬ ಪ್ರಶ್ನೆ ಈ ಮೇಲಿನ ಹೇಳಿಕೆ ಗಮನಿಸಿದಾಗ ಮೂಡುತ್ತದೆ.

ಮುಂಡರಗಿ ತಾಲ್ಲೂಕಿನ ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ಮುಂಡರಗಿ ತಾಲ್ಲೂಕಿನ 19 ಗ್ರಾಮ ಪಂಚಾಯತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪಟ್ಟಿ ಪ್ರಕಟವಾಗಿದೆ.

ಗ್ರಾಮ ಪಂಚಾಯತಿಯ ಮೀಸಲಾತಿ ವಿವರ ಈ ಕೆಳಗಿನಂತಿವೆ.

ಮೇವುಂಡಿ ಗ್ರಾ.ಪಂ. ಹಾಗೂ ಬಿಡನಾಳ ಗ್ರಾ.ಪಂ.ಅಧ್ಯಕ್ಷ -ಹಿಂದುಳಿದ ‘ಅ’ ವರ್ಗ ಮಹಿಳೆ, ಉಪಾಧ್ಯಕ್ಷ – ಪರಿಶಿಷ್ಟ ಜಾತಿ

ಡೋಣಿ ಗ್ರಾ.ಪಂ.ಅಧ್ಯಕ್ಷ – ಹಿಂದುಳಿದ ‘ಬ’ ವರ್ಗ, ಉಪಾಧ್ಯಕ್ಷ – ಸಾಮಾನ್ಯ ಮಹಿಳೆ

ಆಲೂರು ಗ್ರಾ.ಪಂ. ಅಧ್ಯಕ್ಷ – ಸಾಮಾನ್ಯ, ಉಪಾಧ್ಯಕ್ಷ – ಸಾಮಾನ್ಯ ಮಹಿಳೆ

ಹಿರೇವಡ್ಡಟ್ಟಿ ಗ್ರಾ.ಪಂ. ಅಧ್ಯಕ್ಷ – ಸಾಮಾನ್ಯ, ಉಪಾಧ್ಯಕ್ಷ – ಪರಿಶಿಷ್ಟ ಪಂಗಡ ಮಹಿಳೆ

ಕೊರ್ಲಹಳ್ಳಿ ಗ್ರಾ.ಪಂ. ಅಧ್ಯಕ್ಷ – ಸಾಮಾನ್ಯ, ಉಪಾಧ್ಯಕ್ಷ – ಸಾಮಾನ್ಯ ಮಹಿಳೆ

ಹಾರೋಗೇರಿ ಗ್ರಾ.ಪಂ. ಹಾಗೂ ಶಿವಾಜಿನಗರ ಗ್ರಾ.ಪಂ.ಅಧ್ಯಕ್ಷ – ಸಾಮಾನ್ಯ, ಉಪಾಧ್ಯಕ್ಷ – ಪರಿಶಿಷ್ಟ ಜಾತಿ ಮಹಿಳೆ

ಕದಂಪೂರ ಗ್ರಾ.ಪಂ. ಅಧ್ಯಕ್ಷ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ – ಪರಿಶಿಷ್ಟ ಪಂಗಡ

ಬಾಗೇವಾಡಿ ಗ್ರಾ.ಪಂ., ಬಿದರಳ್ಳಿ ಗ್ರಾ.ಪಂ., ಹೆಸರೂರು ಗ್ರಾ.ಪಂ. ಹಾಗೂ ಸಿಂಗಟಾಲೂರು ಅಧ್ಯಕ್ಷ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ – ಸಾಮಾನ್ಯ

ಕಲಕೇರಿ ಗ್ರಾ.ಪಂ.ಅಧ್ಯಕ್ಷ – ಪರಿಶಿಷ್ಟ ಜಾತಿ, ಉಪಾಧ್ಯಕ್ಷ – ಹಿಂದುಳಿದ ‘ಬ’ ವರ್ಗ

ಹಮ್ಮಿಗಿ ಗ್ರಾ.ಪಂ.ಅಧ್ಯಕ್ಷ – ಪರಿಶಿಷ್ಟ ಜಾತಿ, ಉಪಾಧ್ಯಕ್ಷ – ಹಿಂದುಳಿದ ‘ಅ’ ವರ್ಗ ಮಹಿಳೆ

ಡಂಬಳ ಗ್ರಾಪಂ ಅಧ್ಯಕ್ಷ – ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ – ಸಾಮಾನ್ಯ ಮಹಿಳೆ

ಜಂತ್ಲಿಶಿರೂರ ಗ್ರಾ.ಪಂ. ಅಧ್ಯಕ್ಷ – ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ – ಹಿಂದುಳಿದ ‘ಅ’ ವರ್ಗ ಮಹಿಳೆ

ಮುರುಡಿ/ಮುರುಡಿ ತಾಂಡಾ ಗ್ರಾಪಂ ಅಧ್ಯಕ್ಷ – ಪರಿಶಿಷ್ಟ ಪಂಗಡ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

ಹಳ್ಳಿಕೇರಿ ಗ್ರಾ.ಪಂ. ಅಧ್ಯಕ್ಷ – ಪರಿಶಿಷ್ಟ ಪಂಗಡ ಮಹಿಳೆ, ಉಪಾಧ್ಯಕ್ಷ – ಸಾಮಾನ್ಯ

ಟೂರಿಸಂ ಮಿನಿಸ್ಟರ್‌ ಪೋಸ್ಟ್‌ ನಿಕಾಲ್‌ ದಿಯಾ, ಓನ್ಲಿ ಇಂಡಸ್ಟ್ರಿಯಲ್ ಎಂದ ಸಚಿವ ಆನಂದ್ ಸಿಂಗ್

ವಿಜಯಸಾಕ್ಷಿ ಸುದ್ದಿ, ಹೊಸಪೇಟೆ

ಪ್ರವಾಸೋದ್ಯಮ ಸಚಿವರಾದ ವಿಷಯ ಕೇಳಿ ಖುಷಿಯಾಯಿತು ನಿಮ್ಮನ್ನು ಅಭಿನಂದಿಸಲು ಬಂದಿರುವೆ’ ಎಂದು ಉದ್ಯಮಿ ರಾಜು ಭೂರಟ್‌ ಅವರು ಸಚಿವ ಆನಂದ್‌ ಸಿಂಗ್‌ ಅವರಿಗೆ ಹೇಳಿದರು.

ಅದಕ್ಕೆ ಪ್ರತಿಕ್ರಿಯಿಸಿದ ಆನಂದ್‌ ಸಿಂಗ್‌, ‘ಟೂರಿಸಂ ಮಿನಿಸ್ಟರ್‌ ಪೋಸ್ಟ್‌ ನಿಕಾಲ್‌ ದಿಯಾ (ಪ್ರವಾಸೋದ್ಯಮ ಖಾತೆಯಿಂದ ನನ್ನನ್ನು ತೆಗೆದು ಹಾಕಿದ್ದಾರೆ). ಕೈಗಾರಿಕೆ ಖಾತೆ ಸಿಗಬಹುದು. ನೀವು ಕೈಗಾರಿಕೆ ಆರಂಭಿಸಿ’ ಎಂದಾಗ ರಾಜು ಅವರು ಅಚ್ಚರಿ ವ್ಯಕ್ತಪಡಿಸಿದರು.

ನಾಳೆ ಸಚಿವ ಸ್ಥಾನಕ್ಕೆ ಮಾಧುಸ್ವಾಮಿ ರಾಜೀನಾಮೆ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಪದೇ ಪದೇ ಖಾತೆ ಅದಲು-ಬದಲು ಮಾಡುತ್ತಿರುವುದರಿಂದ ಸಿಎಂ ಯಡಿಯೂರಪ್ಪ ವಿರುದ್ಧ ಅಸಮಾಧಾನಗೊಂಡಿರುವ ಸಚಿವ ಮಾಧುಸ್ವಾಮಿ, ನಾಳೆ ಮಧ್ಯಾಹ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು, ಜನವರಿ 26ರ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಬಳಿಕ, ಸಚಿವ ಸ್ಥಾನಕ್ಕೆ ತಾವು ರಾಜೀನಾಮೆ ನೀಡುತ್ತೇನೆ.

ಅದನ್ನು ಅಂಗೀಕರಿಸೋದು, ಸಿಎಂ ಯಡಿಯೂರಪ್ಪ ನಿರ್ಧಾರಕ್ಕೆ ಬಿಟ್ಟದ್ದು ಎಂಬುದಾಗಿ ತಿಳಿಸಿದ್ದಾರೆ.

ವರದಿ:ಡಾ. ಅಬ್ದುಲ್ ರಜಾಕ್

ಗದಗ ತಾಲ್ಲೂಕಿನ ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ: ಯಾವ ಪಂಚಾಯತಿ ಯಾರಿಗೆ? ಇಲ್ಲಿದೆ ಮಾಹಿತಿ

0

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ತಾಲ್ಲೂಕಿನ 27 ಗ್ರಾಮ ಪಂಚಾಯತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪಟ್ಟಿ ಪ್ರಕಟವಾಗಿದೆ.

ಗ್ರಾಮ ಪಂಚಾಯತಿಯ ಮೀಸಲಾತಿ ವಿವರ ಈ ಕೆಳಗಿನಂತಿವೆ.

ಹರ್ಲಾಪುರ ಗ್ರಾ.ಪಂ.ಸೊರಟೂರ ಗ್ರಾ.ಪಂ.ಹಾಗೂ ತಿಮ್ಮಾಪುರ ಗ್ರಾ.ಪಂ.ಅಧ್ಯಕ್ಷ -ಹಿಂದುಳಿದ ‘ಅ’ ವರ್ಗ, ಉಪಾಧ್ಯಕ್ಷ – ಪರಿಶಿಷ್ಟ ಜಾತಿ ಮಹಿಳೆ

ಕೋಟುಮಚಗಿ ಗ್ರಾ.ಪಂ.ಅಧ್ಯಕ್ಷ – ಹಿಂದುಳಿದ ‘ಅ’ ವರ್ಗ ಮಹಿಳೆ, ಉಪಾಧ್ಯಕ್ಷ – ಸಾಮಾನ್ಯ

ಯಲಿಶಿರೂರು ಗ್ರಾ.ಪಂ. ಅಧ್ಯಕ್ಷ – ಹಿಂದುಳಿದ ‘ಅ’ ವರ್ಗ ಮಹಿಳೆ, ಉಪಾಧ್ಯಕ್ಷ – ಪರಿಶಿಷ್ಟ ಜಾತಿ

ಬಿಂಕದಕಟ್ಟಿ ಗ್ರಾ.ಪಂ. ಅಧ್ಯಕ್ಷ – ಹಿಂದುಳಿದ ‘ಬ’ ವರ್ಗ ಮಹಿಳೆ, ಉಪಾಧ್ಯಕ್ಷ – ಸಾಮಾನ್ಯ

ಬಳಗಾನೂರ ಗ್ರಾ.ಪಂ. ಅಧ್ಯಕ್ಷ – ಸಾಮಾನ್ಯ, ಉಪಾಧ್ಯಕ್ಷ – ಸಾಮಾನ್ಯ ಮಹಿಳೆ

ಲಿಂಗದಾಳ ಗ್ರಾ.ಪಂ. ಅಧ್ಯಕ್ಷ – ಸಾಮಾನ್ಯ, ಉಪಾಧ್ಯಕ್ಷ – ಸಾಮಾನ್ಯ ಮಹಿಳೆ

ಬೆಳಹೊಡ ಗ್ರಾ.ಪಂ.ಅಧ್ಯಕ್ಷ – ಸಾಮಾನ್ಯ, ಉಪಾಧ್ಯಕ್ಷ – ಸಾಮಾನ್ಯ ಮಹಿಳೆ

ಕಣಗಿನಹಾಳ ಗ್ರಾ.ಪಂ. ಅಧ್ಯಕ್ಷ – ಸಾಮಾನ್ಯ, ಉಪಾಧ್ಯಕ್ಷ – ಹಿಂದುಳಿದ ‘ಅ’ ವರ್ಗ ಮಹಿಳೆ

ಅಡವಿಸೋಮಾಪುರ ಗ್ರಾ.ಪಂ. ಅಧ್ಯಕ್ಷ – ಸಾಮಾನ್ಯ , ಉಪಾಧ್ಯಕ್ಷ – ಪರಿಶಿಷ್ಟ ಪಂಗಡ ಮಹಿಳೆ

ಹರ್ತಿ ಗ್ರಾ.ಪಂ. ಹಾಗೂ ಚಿಂಚಲಿ ಗ್ರಾ.ಪಂ.ಅಧ್ಯಕ್ಷ – ಸಾಮಾನ್ಯ , ಉಪಾಧ್ಯಕ್ಷ – ಸಾಮಾನ್ಯ ಮಹಿಳೆ

ನೀರಲಗಿ ಗ್ರಾ.ಪಂ. ಹಾಗೂ ಚಿಕ್ಕಹಂದಿಗೋಳ ಗ್ರಾ.ಪಂ.ಅಧ್ಯಕ್ಷ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ -ಸಾಮಾನ್ಯ

ಅಸುಂಡಿ ಗ್ರಾಪಂ ಅಧ್ಯಕ್ಷ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ – ಪರಿಶಿಷ್ಟ ಜಾತಿ

ಹಾತಲಗೇರಿ ಗ್ರಾ.ಪಂ. ಅಧ್ಯಕ್ಷ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ – ಹಿಂದುಳಿದ ‘ಅ’ ವರ್ಗ

ನಾಗಾವಿ ಗ್ರಾಪಂ ಹಾಗೂ ಲಕ್ಕುಂಡಿ ಗ್ರಾ.ಪಂ. ಅಧ್ಯಕ್ಷ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ

ಬೆಳದಡಿ ಗ್ರಾ.ಪಂ. ಅಧ್ಯಕ್ಷ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ – ಪರಿಶಿಷ್ಟ ಪಂಗಡ

ಕದಡಿ ಗ್ರಾಪಂ ಅಧ್ಯಕ್ಷ- ಪರಿಶಿಷ್ಟ ಜಾತಿ, ಉಪಾಧ್ಯಕ್ಷ – ಹಿಂದುಳಿದ ‘ಅ’ ವರ್ಗ ಮಹಿಳೆ

ಹುಲಕೋಟಿ ಗ್ರಾಪಂ ಅಧ್ಯಕ್ಷ- ಪರಿಶಿಷ್ಟ ಜಾತಿ, ಉಪಾಧ್ಯಕ್ಷ – ಸಾಮಾನ್ಯ ಮಹಿಳೆ

ಹುಯಿಲಗೋಳ ಗ್ರಾಪಂ ಅಧ್ಯಕ್ಷ – ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ – ಹಿಂದುಳಿದ ‘ಬ’ ವರ್ಗ

ಅಂತೂರ-ಬೆಂತೂರ ಗ್ರಾ.ಪಂ.ಅಧ್ಯಕ್ಷ- ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ – ಹಿಂದುಳಿದ ‘ಅ’ ವರ್ಗ

ಕುರ್ತಕೋಟಿ ಗ್ರಾಪಂ ಅಧ್ಯಕ್ಷ- ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ

ಕಳಸಾಪುರ ಗ್ರಾಪಂ ಅಧ್ಯಕ್ಷ- ಪರಿಶಿಷ್ಟ ಪಂಗಡ, ಉಪಾಧ್ಯಕ್ಷ – ಸಾಮಾನ್ಯ ಮಹಿಳೆ

ಹೊಂಬಳ ಗ್ರಾಪಂ ಅಧ್ಯಕ್ಷ – ಪರಿಶಿಷ್ಟ ಪಂಗಡ ಮಹಿಳೆ, ಉಪಾಧ್ಯಕ್ಷ- ಹಿಂದುಳಿದ ‘ಅ’ ವರ್ಗ

ಬ್ಯಾಂಕ್ ಮ್ಯಾನೇಜರ್ ಮೇಲೆ ಹಲ್ಲೆ: ಕೊನೆಗೂ ಜೈಲು ಪಾಲಾದ ಆರೋಪಿ

ವಿಜಯಸಾಕ್ಷಿ ಸುದ್ದಿ, ಗದಗ

ಬ್ಯಾಂಕ್ ಮ್ಯಾನೇಜರ್ ಒಬ್ಬರ ಮನೆಗೆ ಇಬ್ಬರು ವ್ಯಕ್ತಿಗಳು ರಾತ್ರಿವೇಳೆ ನುಗ್ಗಿ ಹಣ ಡ್ರಾ ಮಾಡಿಕೊಡುವಂತೆ ದರ್ಪ ತೋರಿದ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಬಾಲೆಹೊಸೂರು ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಜನವರಿ 15 ರ ರಾತ್ರಿ ಬಾಲೆಹೊಸೂರಿನ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಹನುಮಂತಪ್ಪ ಫಕ್ಕೀರಪ್ಪ ದೊಡ್ಡಮನಿ ಎಂಬುವವರು ಇದ್ದ ಮನೆಗೆ ‌ನುಗ್ಗಿದ ನಾಗರಾಜ್ ಭರಮಪ್ಪ ಚಿಗರಿ ಹಾಗೂ ಸ್ನೇಹಿತ ನವೀನಕುಮಾರ ಬಸವಣ್ಣೆಪ್ಪ ಕಡೆಮನಿ, ಬ್ಯಾಂಕ್ ಮ್ಯಾನೇಜರ್ ಹನುಮಂತಪ್ಪ ದೊಡ್ಡಮನಿ ಮೇಲೆ ಹಲ್ಲೆ ಮಾಡಿ ಈಗಲೇ ಹಣ ಡ್ರಾ ಮಾಡಿಕೊಡುವಂತೆ ಜೀವ ಬೆದರಿಕೆ ಹಾಕಿದ್ದಾರೆ. ಈ ಕುರಿತು ಲಕ್ಷ್ಮೇಶ್ವರ ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ದಾಖಲು ಮಾಡಿಕೊಳ್ಳಲು ಹಿಂದೆ ಮುಂದೆ ನೋಡಿದ್ದರು. ಕೊನೆಗೂ ಕಾಟಾಚಾರದ ಎಫ್ಐಆರ್ ಹಾಕಿ ಜಾಮೀನು ಸಿಗುವಂತೆ ನೋಡಿಕೊಂಡಿದ್ದರು.

ಈ ಪ್ರಕರಣದಿಂದ ಪಾಠ ಕಲಿಯದ‌ ಆರೋಪಿಗಳ ಪೈಕಿ ನವೀನಕುಮಾರ ಕಡೆಮನಿ ಎಂಬಾತ ಮತ್ತೆ ಜನವರಿ 20 ರಂದು ಬ್ಯಾಂಕ್ ಗೆ ನುಗ್ಗಿ ಪೊಲೀಸ್ ಕಂಪ್ಲೀಟ್ ಕೊಟ್ಟಿದ್ದಕ್ಕೆ ಸಿಟ್ಟಾಗಿ ಮ್ಯಾನೇಜರ್ ಹನುಮಂತಪ್ಪ ಅವರ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾನೆ.

ಬ್ಯಾಂಕಿನ ಇತರ ಸಿಬ್ಬಂದಿಗಳು ಜಗಳ ಬಿಡಿಸಲು ಬಂದಾಗ ಅವರ ಮೇಲೂ ಹಲ್ಲೆ ಮಾಡಿ ಮ್ಯಾನೇಜರ್ ಇದ್ದ ಕಡೆ ಕುರ್ಚಿ ಎತ್ತಿ ಹಾಕಿದ್ದಾನೆ. ಇದರಿಂದಾಗಿ ಬ್ಯಾಂಕ್ ನ ಗ್ಲಾಸ್ ಗಳು ಪುಡಿಪುಡಿಯಾದವು. ಅಷ್ಟಕ್ಕೇ ಸುಮ್ಮನಾಗದ ಆರೋಪಿ‌ ನವೀನಕುಮಾರ, ಖಾತೆಯಲ್ಲಿನ ಹಣ ಈಗಲೇ ಡ್ರಾ ಮಾಡಿಕೊಡಿ ಎಂದು ದಮಕಿ ಹಾಕಿದ್ದಾನೆ.

ಈ ಘಟನೆಯಿಂದಾಗಿ ಬ್ಯಾಂಕಿನ ಸಿಬ್ಬಂದಿ, ಸಾರ್ವಜನಿಕರು ಬೆಚ್ಚಿಬಿದ್ದು ಪೊಲೀಸರಿಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ನವೀನಕುಮಾರನನ್ನು ವಶಕ್ಕೆ ಪಡೆದು ಬ್ಯಾಂಕ್ ಮ್ಯಾನೇಜರ್ ಹನುಮಂತಪ್ಪ ಕೊಟ್ಟ ದೂರಿನ ಮೇರೆಗೆ ಸದ್ಯಕ್ಕೆ ಹೊರಬರದಂತಹ ವಿವಿಧ ಕಲಂಗಳ ಹಾಕಿ ಜೈಲು ಕಂಬಿ ಎಣಿಸುವಂತೆ ಮಾಡಿದ್ದಾರೆ.

ಲಕ್ಷ್ಮೇಶ್ವರ ಪೊಲೀಸರು ಮೊದಲ ಪ್ರಕರಣದಲ್ಲಿ ಈ ರೀತಿ ಮಾಡಿದ್ದರೇ ಮತ್ತೊಮ್ಮೆ ಗಲಾಟೆ ಆಗುತ್ತಿರಲಿಲ್ಲ ಎಂದು ಜನ ಹೇಳುತ್ತಿದ್ದಾರೆ.

ಅಂತೂ ಇಂತೂ ಪೊಲೀಸರ ಉದಾಸೀನ ಎಂತಹ ಅನಾಹುತಕ್ಕೆ ಕಾರಣವಾಗಬಲ್ಲದು ಅನ್ನೋದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.

ಬೈಕ್ ಸವಾರನನ್ನು ಬೂಟಿನಿಂದ ಒದ್ದ ಸಿಪಿಐ!

0

ವಿಜಯಸಾಕ್ಷಿ ಸುದ್ದಿ, ತುಮಕೂರು: ಬೈಕ್ ಸವಾರನನ್ನು ರಸ್ತೆಯಲ್ಲಿಯೇ ಬೂಟುಕಾಲಿನಿಂದ ಒದೆಯುವ ಮೂಲಕ ಸಿಪಿಐ ಒಬ್ಬರು ತಮ್ಮ ಅಧಿಕಾರದ ದರ್ಪ ತೋರಿಸಿರುವ ಘಟನೆ ನಡೆದಿದೆ.

ಜಿಲ್ಲೆಯ ಮಧುಗಿರಿ ಸಿಪಿಐ ಸರ್ದಾರ್ ಅವರೇ ಈ ಘನಾಂಧಾರಿ ಕೆಲಸ ಮಾಡಿದ್ದು, ನಡುರಸ್ತೆಯಲ್ಲೇ ಬೈಕ್ ಸವಾರನನ್ನು ಬೂಟು ಕಾಲಿನಿಂದ ಒದ್ದಿದ್ದಾರೆ. ಮಧುಗಿರಿ ಪಟ್ಟಣದ ನೃಪತುಂಗಾ ಸರ್ಕಲ್ ನಲ್ಲಿ ಘಟನೆ ನಡೆದಿದ್ದು, ಸಿಪಿಐ ಸರ್ದಾರ್ ವಾಹನ ತಪಾಸಣೆ ನಡೆಸಿ ದಂಡ ಹಾಕುತ್ತಿದ್ದರು.

ಸಿಪಿಐ ಸರ್ದಾರ್

ಈ ವೇಳೆ ಬೈಕ್ ಸವಾರನೊಬ್ಬ ದಂಡ ಕಟ್ಟಡೇ ತಡ ಮಾಡಿದ್ದಕ್ಕೆ ಅತನಿಗೆ ಸಿಪಿಐ ಸರ್ದಾರ್ ಕಾಲಿನಿಂದ ಒದ್ದಿದ್ದಾರೆ. ಈ ವೇಲೆ ಸವಾರನು ನೆಲಕ್ಕೆ ಹಾರಿಬಿದ್ದಿದ್ದಾನೆ. ಆಗಲೂ ಸುಮ್ಮನೆ ಬಿಡಿದ ಸಿಪಿಐ ಸರ್ದಾರ್ ಅವಾಚ್ಯವಾಗಿ ನಿಂದಿಸಿದ್ದಾರೆ.

ಸಿಪಿಐ ದರ್ಪದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಿಪಿಐ ಅಬ್ಬರಕ್ಕೆ ಸಾರ್ವಜನಿಕರು ಆಕ್ರೋಷ ವ್ಯಕ್ತಪಡಿಸಿದ್ದಾರೆ. ಸಿಪಿಐ ಸರ್ದಾರ್ ವರ್ತನೆಯಿಂದ ಬೇಸತ್ತ ಮಧುಗಿರಿ ಸಾರ್ವಜನಿಕರು, ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಗದಗ-ಹುಬ್ಬಳ್ಳಿ ಮಧ್ಯೆ ಎಲೆಕ್ಟ್ರಿಕ್ ಬಸ್ ಪ್ರಾರಂಭ: ಸಾರಿಗೆ ಸಚಿವ ಸವದಿ ಭರವಸೆ

ವಿಜಯಸಾಕ್ಷಿ ಸುದ್ದಿ, ಗದಗ

ರಾಜ್ಯದಲ್ಲಿ ಎಲೆಕ್ಟ್ರಿಕ್ ಬಸ್ ಗೆ ಕೇಂದ್ರ ಸರ್ಕಾರ 55 ಲಕ್ಷ ರೂ. ಸಬ್ಸಿಡಿ ಕೊಡುತ್ತಿದ್ದು, ಸಬ್ಸಿಡಿ ಹಣ ಬಳಸಿಕೊಂಡು ಸುಮಾರು 350 ಎಲೆಕ್ಟ್ರಿಕ್ ಬಸ್‌ಗಳನ್ನು ಹೊರಗುತ್ತಿಗೆಯಲ್ಲಿ ಖರೀದಿ ಮಾಡಿ ಮುಂದಿನ ತಿಂಗಳ ಮೊದಲ ವಾರದಲ್ಲಿ ಸಂಚಾರ ಆರಂಭಿಸಲಾಗುವುದು. ಅದರಲ್ಲಿ ಹುಬ್ಬಳ್ಳಿ-ಧಾರವಾಡಕ್ಕೆ 50 ಬಸ್‌ಗಳನ್ನು ನೀಡಲಾಗುತ್ತಿದ್ದು, ಹುಬ್ಬಳ್ಳಿ-ಗದಗ ನಡುವೆಯೂ ಎಲೆಕ್ಟ್ರಿಕ್ ಬಸ್ ಸಂಚಾರ ಪ್ರಾರಂಭಿಸಲಾಗುವುದು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.

ನಗರದ ನವೀಕೃತ ಬಸ್‌ ನಿಲ್ದಾಣ ಉದ್ಘಾಟಿಸಿದ ಬಳಿಕ ಸಚಿವರು ಮಾಧ್ಯಮದವರೊಂದಿಗೆ ಮಾತನಾಡಿದರು.

ರೆಸಾರ್ಟ್ ರಾಜಕಾರಣದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚಿಕ್ಕಮಗಳೂರಿಗೆ ಇಲಾಖೆಯ ಪರಿಶೀಲನಾ ಸಭೆಗೆ ಹೋದಾಗ ಸಚಿವರು, ಶಾಸಕರು ಭೇಟಿಯಾಗುವುದು ಸ್ವಾಭಾವಿಕ. ನಾನು ಇಲ್ಲಿಗೆ ಬಂದ ಮೇಲೆ ನನ್ನನ್ನು ಅನೇಕರು ಭೇಟಿ ಮಾಡುತ್ತಾರೆ. ಅದಕ್ಕೂ ಇದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಈಗಾಗಲೇ ಶೇ.95 ರಷ್ಟು ಸರಿ ಹೋಗಿದೆ. ಇನ್ನುಳಿದ ಶೇ.5 ರಷ್ಟನ್ನೂ ಸರಿಪಡಿಸಲಾಗುವುದು ಎಂದು ಹೇಳಿದರು.

ಸಹಜವಾಗಿ ಎಲ್ಲರಿಗೂ ದೊಡ್ಡದಾಗಿರುವ ಇಲಾಖೆ ಬೇಕು. ಆದರೆ, ಕೆಲಸ ಮಾಡಲು ಸಣ್ಣ ಹಾಗೂ ದೊಡ್ಡ ಇಲಾಖೆ ಅಂತಿಲ್ಲ. ಕೆಲಸ ಮಾಡುವವನಿಗೆ ಯಾವ ಇಲಾಖೆಯಾದರು ಅಷ್ಟೇ. ಭಾರ ಹೊರುವವನಿಗೆ ಹಿಂದೆ ಹೊತ್ತರು ಅಷ್ಟೇ, ಮುಂದೆ ಹೊತ್ತರು ಅಷ್ಟೇ ಎಂದು ವಲಸಿಗರ ಸಚಿವ ಸ್ಥಾನದ ಅಸಮಾಧಾನದ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಈಗಾಗಲೇ ಸಮಿತಿ ರಚಿಸಿದ್ದು, ಇನ್ನೊಂದು ತಿಂಗಳೊಳಗಾಗಿ ಬೇಡಿಕೆ ಈಡೇರಿಸಲಾಗುವುದು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಭರವಸೆ ನೀಡಿದರು.

error: Content is protected !!