ವಿಜಯಸಾಕ್ಷಿ ಸುದ್ದಿ, ಮೈಸೂರು: ಟ್ರಿಪಲ್ ರೈಡ್ ಹೋಗುತ್ತಿದ್ದ ಬೈಕ್ ವೊಂದನ್ನು ಓವರ್ ಟೆಕ್ ಮಾಡಿದ್ದಕ್ಕೆ, ಕೆಎಸ್ ಆರ್ ಟಿಸಿ ಚಾಲಕನಿಗರ ಮಾರಾಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಬೋಳನಹಳ್ಳಿ ಬಳಿ ನಡೆದಿದೆ.
ಹತ್ತಾರು ಜನರ ಎದುರೇ ಮಾರಕಾಸ್ತ್ರದಿಂದ ಚಾಲಕ ವೆಂಕಟೇಶ್ ಗೆ ಇರಿಯಲಾಗಿದೆ. ಬಸ್ ಹಾಸನದಿಂದ ಮೈಸೂರಿಗೆ ಬರುತ್ತಿತ್ತು. ಈ ವೇಳೆ ಟ್ರಿಪ್ಪಲ್ ರೈಡ್‌ನಲ್ಲಿದ್ದ ಬೈಕ್ ವೊಂದನ್ನು ಓವರ್ ಟೇಕ್ ಮಾಡಿದ್ದರು.
ಇದರಿಂದ ಕುಪಿತಗೊಂಡ ಬೈಕ್ ಸವಾರರು, ಬಹುದೂರದವರೆಗೂ ಬಸ್ ಫಾಲೋ ಮಾಡಿಕೊಂಡು ಬಂದು ಅಡ್ಡಗಟ್ಟಿ, ಬಸ್‌ನಿಂದ ಹೊಗೆ ಬಂತು ಅಂತ ಕ್ಯಾತೆ ತೆಗೆದರು. ನಂತರ ಪ್ರಯಾಣಿಕರ ಎದುರಲ್ಲೇ ಮಾತಿಗೆ ಮಾತು ಬೆಳೆಸಿ ಗಲಾಟೆ ಮಾಡಿ,ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಸಾರಿಗೆ ಸಿಬ್ಬಂದಿ ಹಾಗೂ ಯುವಕರ ಜಗಳದ ವೇಳೆ, ಚಾಲಕ ವೆಂಕಟೇಶ್ ರಿಗೆ ಚಾಕುವಿನಿಂದ ಚುಚ್ಚಿ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಚಾಲಕ ವೆಂಕಟೇಶ್‌ಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಪ್ರಯಾಣಿಕರು ಮೈಸೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಪಿರಿಯಾಪಟ್ಟಣ ಡಿಪೋಗೆ ಸೇರಿದ ಬಸ್ ಇದಾಗಿದ್ದು, ಆರೋಪಿಗಳ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು, ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಸಾಕ್ಷಿ ಸುದ್ದಿ, ಚಾಮರಾಜನಗರ: ಮುಳ್ಳುಹಂದಿ ಸೇರಿದಂತೆ ವಿವಿಧ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಮೂವರ ಮೇಲೆ ಕೊಳ್ಳೇಗಾಲ ಅರಣ್ಯ ಸಂಚಾರಿ ದಳದ ಪೊಲೀಸರು ದಾಳಿ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಜಿಲ್ಲೆಯ ಹನೂರು ತಾಲೂಕಿನ ಕಾಂಚಳ್ಳಿ ಗ್ರಾಮದ ಜಡೇಗೌಡ ( 53 ) ಬಂಧಿತ ಆರೋಪಿಯಾಗಿದ್ದಾನೆ. ಅದೇ ಗ್ರಾಮದ ಜೆ.ಮುನಿರಾಜು ಹಾಗೂ ಮುತ್ತು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಆರೋಪಿಗಳು ಪ್ರಾಣಿಗಳನ್ನು ಬೇಟೆಯಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಇಲ್ಲಿನ ಅರಣ್ಯ ಸಂಚಾರಿ ದಳದ ಪೊಲೀಸರು ದಾಳಿ ನಡೆಸಿದಾಗ ಇಬ್ಬರು ಆರೋಪಿಗಳು ಪರಾರಿಯಾಗಿದ್ದು , ಓರ್ವ ಆರೋಪಿಯನ್ನು ಬಂಧಿಸಿ, ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದ ಮುಳ್ಳುಹಂದಿ ಹಾಗೂ ಕಾಡುಹಂದಿಯ ಮಾಂಸ, ಒಂದು ಬೈಕ್ ಮತ್ತು ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು , ಬಂಧಿತ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ .
ದಾಳಿಯಲ್ಲಿ ಅರಣ್ಯ ಸಂಚಾರಿ ದಳದ ಹೆಡ್‌ಕಾನ್‌ಸ್ಟೇಬಲ್ ಗಳಾದ ಲೋಕೇಶ್, ಶಂಕರ, ತಮೀವುಲ್ಲಾ, ಬಸವರಾಜು, ಕುಮಾರಸ್ವಾಮಿ, ಸ್ವಾಮಿ, ರಾಮಚಂದ್ರ ಹಾಗೂ ಚಾಲಕ ಜಾಫರ್ ಪಾಲ್ಗೊಂಡಿದ್ದರು.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತ ಮತ್ತು ಜನ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕಲಬುರಗಿ ಜಿಲ್ಲಾ ಸಮಿತಿ ವತಿಯಿಂದ ನಗರದ ಜಗತ್ ವೃತ್ತದಲ್ಲಿ ಧರಣಿ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹಿರ್ ಹುಸೇನ್ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಜನವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿದೆ. ಬಿಜೆಪಿಗೆ ರೈತರು, ಕಾರ್ಮಿಕರು ಹಾಗೂ ಬಡ ಜನರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಸರ್ಕಾರಗಳು ಬ್ರಿಟಿಷರಿಗಿಂತಲೂ ಕಡೆಯಾದ ಅಪಾಯಕಾರಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿವೆ ಎಂದು ಕಿಡಿ ಕಾರಿದರು.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಉಪಾಧ್ಯಕ್ಷ ಅಬ್ದುಲ್ ಹಮೀದ್ ಫಾರಂ ಮಾತನಾಡಿ, ಕೇಂದ್ರ ಸರ್ಕಾರ ರಿಯಲ್ ಎಸ್ಟೇಟ್ ದಂಧೆಕೋರರು, ಬಂಡವಾಳಶಾಹಿಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಕೈಗೊಂಬೆಯಾಗಿದೆ. ಪ್ರಧಾನಿ ಮೋದಿಯವರ ಕೃಷಿ ವಿರೋಧಿ ನಡೆಯಿಂದ ರೈತ ಕುಲ ತಬ್ಬಲಿಯಾಗುವ ದುಸ್ಥಿತಿ ಬರಲಿದೆ ಎಂದು ಹರಿ ಹಾಯ್ದರು.
ಈ ಸಂದರ್ಭದಲ್ಲಿ , ಅಜೀಜ್ ಜಾಗಿರದಾರ್, ಸಲೀಂ ಅಹಮದ್ ಚಿತಾಪುರ, ಸಿದ್ದಣ್ಣ ಜಿ.ಚಕ್ರ, ಮೋಬಿನ್ ಅಹ್ಮದ್, ಅಜೀಜ್ ಪಟೇಲ್ ಯಾಳವಾರ್, ಮುನೀರ್ ಹಾಸ್ಮಿ, ಸಲೀಂ ಸದರಿ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.
ವಿಜಯಸಾಕ್ಷಿ ಸುದ್ದಿ, ಕಾರವಾರ: ಸಮುದ್ರದಲ್ಲಿ ಈಜಾಡುತ್ತಿದ್ದಾಗ ಅಲೆಗಳಿಗೆ ಸಿಕ್ಕಿ ಕೊಚ್ಚಿ ಹೋಗಿದ್ದ ಐವರ ಪೈಕಿ ಮೂವರು ಸಾವನ್ನಪ್ಪಿ ಇಬ್ಬರನ್ನು ರಕ್ಷಣೆ ಮಾಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ ನಡೆದಿದೆ.
ಇಲ್ಲಿನ ಮುಖ್ಯ ಕಡಲತೀರದಲ್ಲಿ ಈಜಲು ತೆರಳಿದ್ದ 21 ವರ್ಷದ ಸುಮಾ, 20 ವರ್ಷದ ತಿಪ್ಪೇಶ ನಾಯಕ್ ಮತ್ತು 35 ವರ್ಷದ ರವಿ ಮೃತಪಟ್ಟಿದ್ದಾರೆ. ಇನ್ನಿಬ್ಬರನ್ನು ರಕ್ಷಣೆ ಮಾಡಿದ್ದು ಅಸ್ವಸ್ತಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತಪಟ್ಟವರು ಬೆಂಗಳೂರಿನ ಹೆಬ್ಬಗೋಡಿಯವರಾಗಿದ್ದು ಗಾರ್ಮೆಂಟ್ಸ್ ಕೆಲಸ ಮಾಡುತ್ತಿದ್ದವರಾಗಿದ್ದಾರೆ. ಸ್ನೇಹಿತರೊಂದಿಗೆ ಗೋಕರ್ಣಕ್ಕೆ ಪ್ರವಾಸಕ್ಕೆಂದು ಆಗಮಿಸಿದ್ದು ಈ ವೇಳೆ ಸಮುದ್ರದಲ್ಲಿ ಈಜುತ್ತಿದ್ದಾಗ ಒಮ್ಮೆಲೇ ಬಂದ ಅಲೆಗೆ ಈ ಐವರೂ ಕೊಚ್ಚಿಹೋಗಿದ್ದರು.
ತಕ್ಷಣ ಅಲ್ಲಿಯೇ ಇದ್ದ ಬೋಟಿಂಗ್ ಚಟುವಟಿಕೆ ನಡೆಸುವ ಸಿಬ್ಬಂದಿ ರಕ್ಷಣೆಗೆ ಧಾವಿಸಿ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ಮತ್ತೆ ಮೂವರನ್ನ ದಡಕ್ಕೆ ತಂದರಾದರೂ ಅಷ್ಟರಲ್ಲಾಗಲೇ, ಅವರು ಪ್ರಾಣಬಿಟ್ಟಿದ್ದರು. ಮೂವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಸಾಕ್ಷಿ ಸುದ್ದಿ, ಕಲಬುರಗಿ: ರಸ್ತೆಯಲ್ಲಿ ನಿಂತಿದ್ದ ಯುವಕರ ಮೇಲೆ ಗುಂಪೊಂದು ದಾಳಿ ನಡೆಸಿ, ಅವರ ಬಳಿಯಿದ್ದ ಮೊಬೈಲ್ ಹಾಗೂ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ಇಲ್ಲಿನ ಬಾಪು ನಗರದಲ್ಲಿ ನಡೆದಿದೆ.
ಗುಂಪಾಗಿ ಬಂದ ದುಷ್ಕರ್ಮಿಗಳು ಯುವಕರನ್ನು ಬೆದರಿಸಿ ಅವರ ಮೇಲೆ ಹಲ್ಲೆ ಮಾಡಿ ಮೊಬೈಲ್, ನಗದು ದೋಚಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಮಹ್ಮದ್ ಜಾಕೀರ್, ಮಜರ್ ಹಾಗೂ ಸತ್ತಾರ್ ಎನ್ನುವವರಿಗೆ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಗೊಂಡಿರುವ ಮೂವರೂ, ತಮ್ಮ ಬೈಕ್ ನಲ್ಲಿ ಪೆಟ್ರೋಲ್ ಮುಗಿದಿದ್ದರಿಂದ ಗೆಳೆಯರಿಗೆ ತರಲು ಹೇಳಿದ್ದು, ಗೆಳಯರ ಬರುವಿಕೆಗಾಗಿ ಕಾಯುತ್ತಿದ್ದ ವೇಳೆ ಹಲ್ಲೆ ನಡೆಸಲಾಗಿದೆ.
ಏಕಾಏಕಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮೊಬೈಲ್, ಹಣ ಕೊಡುವಂತೆ ಒತ್ತಾಯ ಮಾಡಿದ್ದಾರೆ. ತಮ್ಮ ಬಳಿ ಏನೂ ಇಲ್ಲ ಎಂದಾಗ ಹಲ್ಲೆ ಮಾಡಿ ಜೇಬಿನಲ್ಲಿದ್ದದ್ದನ್ನು ಕಿತ್ತುಕೊಂಡು ಪರಾರಿಯಾಗಿದ್ದಾಗಿ ಗಾಯಾಳುಗಳು ಹೇಳಿದ್ದಾರೆ. ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಸ್ಥಾನದಲ್ಲಿನ ನಿರ್ಬಂಧ ಮರಳಿ ತೆಗೆದುಕೊಳ್ಳಿ, ಇಲ್ಲವಾದರೆ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಚಿಂಚಲಿ ಗ್ರಾಮದಲ್ಲಿ ಮುತಾಲಿಕ್ ಮಾತನಾಡಿ, ಮಸೀದಿ, ಚರ್ಚ್‌ಗಳಿಗಿಲ್ಲದ ನಿರ್ಬಂಧ ದೇವಸ್ಥಾನಗಳಿಗೇಕೆ ಎಂದು ಪ್ರಶ್ನಿಸಿದರು.
ಚಿಂಚಲಿಯ ಪ್ರಸಿದ್ಧ ಮಾಯಕ್ಕದೇವಿ ದೇವಸ್ಥಾನದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯದಿಂದ ಬರುವ ಭಕ್ತರಿಗೆ ಅವಕಾಶ ನೀಡಬೇಕು. ತಕ್ಷಣ ದೇವಸ್ಥಾನದ ಮೇಲಿನ ನಿರ್ಬಂಧ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಮಸೀದಿಗಳಲ್ಲಿ ನಮಾಜ್, ಚರ್ಚಗಳಲ್ಲಿ ಪ್ರಾರ್ಥನೆ ನಡೆಯುತ್ತಿದೆ. ಆದರೆ, ದೇವಸ್ಥಾನಗಳಿಗೆ ಏಕೆ ತೊಂದರೆ ನೀಡುತ್ತಿದ್ದೀರಿ. ಬಾರ್, ಹೋಟೆಲ್, ಸಂತೆಗಳೆಲ್ಲವೂ ಓಪನ್ ಇವೆ. ಎಲ್ಲವನ್ನೂ ಬಂದ್‌ಗೊಳಿಸಿ ಲಾಕ್‌ಡೌನ್ ಮಾಡಿ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ವಿಜಯಸಾಕ್ಷಿ ಸುದ್ದಿ, ಗದಗ: ಖಾತೆ ಹಂಚಿಕೆ ಮತ್ತು ಬದಲಾವಣೆ ಮುಖ್ಯಮಂತ್ರಿಗಳ ಪರಾಮಾಧಿಕಾರ. ನನಗೆ ಯಾವುದೇ ಖಾತೆ ಕೊಟ್ಟರೂ, ಅದಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.
ಈ ಕುರಿತು ವಿಜಯಸಾಕ್ಷಿ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮೊದಲಿದ್ದ ಗಣಿ ಮತ್ತು ಭೂ ವಿಜ್ಞಾನ ಖಾತೆಯಲ್ಲೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದು, ಸದ್ಯ ಇದರ ಬದಲು ಯಾವುದೇ ಖಾತೆಯಾದರೂ ಸರಿ ಅದೇ ರೀತಿ ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ. ಖಾತೆ ಬದಲಾವಣೆ ಬಗ್ಗೆ ನನಗೆ ಯಾವುದೇ ಅಸಮಾಧಾನವಿಲ್ಲ ಎಂದರು.
ಖಾತೆ ಬದಲಾವಣೆ ಬಗ್ಗೆ ಅಸಮಾಧಾನವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ‘ನಾನು ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಏನೇ ಹಂಚಿಕೊಳ್ಳುವುದಿದ್ದರೂ ಪಕ್ಷದೊಳಗೆ ಚರ್ಚೆ ಮಾಡುತ್ತೇನೆ ಎಂದು ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು.
ಸದ್ಯ ಸಿ.ಸಿ ಪಾಟೀಲ್ ಅವರಿಗೆ ಗಣಿ ಮತ್ತು ಭೂ ವಿಜ್ಞಾನ ಖಾತೆಯ ಬದಲು ಸಣ್ಣ ಕೈಗಾರಿಕೆ ಮತ್ತು ವಾರ್ತಾ ಇಲಾಖೆ ಖಾತೆಗಳನ್ನು ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
*ಅಮೃತಸಿಟಿ ಯೋಜನೆಯಡಿ 1.5 ಕೋಟಿ ರೂ. ವೆಚ್ಚದಲ್ಲಿ ದುರಸ್ತಿ *ಜನರ ಕಣ್ಣಿಗೆ ಮಣ್ಣೆರಚಲು ಸಜ್ಜಾದ ಅಧಿಕಾರಿಗಳು *ಅಧಿಕಾರಿ, ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಿ: ಸ್ಥಳೀಯರು
ದುರಗಪ್ಪ ಹೊಸಮನಿ ವಿಜಯಸಾಕ್ಷಿ ವಿಶೇಷ, ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಅಮೃತಸಿಟಿ ಯೋಜನೆಯಡಿ ಹಲವಾರು ಕಾಮಗಾರಿಗಳನ್ನು ಕೈಗೊಂಡು ವರ್ಷಗಳೇ ಉರುಳಿದರೂ, ಬಹುತೇಕ ಕಡೆ ಕಾಮಗಾರಿ ಆಮೆ ವೇಗದಲ್ಲಿ ಸಾಗುತ್ತಿದೆ. ಕ್ರಿಯಾ ಯೋಜನೆಯಲ್ಲಿದ್ದಂತೆ ಕಾಮಗಾರಿ ನಡೆಯದೆ ಅಕ್ರಮಕ್ಕೆ ನಗರಸಭೆ ಅಧಿಕಾರಿಗಳು ಆಸ್ಪದ ನೀಡುತ್ತಿದ್ದಾರೆ ಎಂದು ಅವಳಿ ನಗರದ ಜನತೆ ಆರೋಪಿಸುತ್ತಿದ್ದಾರೆ.
ನಗರದ ಹಾತಲಗೇರಿ ನಾಕಾದಲ್ಲಿ ಬರುವ ರಾಜ ಕಾಲುವೆಗೆ ಸುಮಾರು 3-4 ಕಿ.ಮೀ. ವ್ಯಾಪ್ತಿಯ ಪ್ರದೇಶದಿಂದ ನೀರು ಹರಿದು ಬರುತ್ತಿದೆ. ಹಾಗಾಗಿ ಕೊಳಚೆ ನೀರು ಹೊರ ಹಾಕಲು ರಾಜಕಾಲುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ, ರಾಜಕಾಲುವೆಯ ಮೂರು ಪಟ್ಟು ಜಾಗವನ್ನು ಮುಚ್ಚಿ ನಾಲ್ಕನೇ ಭಾಗದಷ್ಟು ಮಾತ್ರ ಕಾಲುವೆ ಕೆಲಸ ಮಾಡಲಾಗುತ್ತಿದೆ. ಬಹುತೇಕ ನಗರಸಭೆ ಜಾಗೆ ಒತ್ತುವರಿಯಾಗಿದ್ದು, ಮತ್ತಷ್ಟು ಜಾಗೆ ಒತ್ತುವರಿಗೆ ನಗರಸಭೆ ಅವಕಾಶ ಕಲ್ಪಿಸಿಕೊಟ್ಟಿದೆ.
10 ಅಡಿ ಕಾಲುವೆ: ಹಾತಲಗೇರಿ ನಾಕಾದಲ್ಲಿರುವ ರಾಘವೇಂದ್ರ ಸ್ವಾಮಿ ದೇವಸ್ಥಾನದಿಂದ ಕಣಗಿನಹಾಳ ರಸ್ತೆಯವರೆಗೆ ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ಒಟ್ಟು 831 ಮೀ. ಉದ್ಧದ ರಾಜಕಾಲುವೆ ದುರಸ್ತಿಗೊಳಿಸಲಾಗುತ್ತಿದೆ. ಆದರೆ, ಒಟ್ಟು 40 ಅಡಿ ಅಗಲದ ರಾಜಕಾಲುವೆಯಲ್ಲಿ ಕೇವಲ 10 ಅಡಿ ಕಾಲುವೆಯನ್ನು ಮಾತ್ರ ನಿರ್ಮಿಸಲಾಗುತ್ತಿದೆ. ಇನ್ನುಳಿದ 30 ಅಡಿ ಜಾಗವನ್ನು ಖಾಲಿ ಬಿಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೇವಲ 831 ಅಡಿ ಉದ್ದ ಮತ್ತು 10 ಅಡಿ ಅಗಲದ ಕಾಲುವೆ ಕಾಮಗಾರಿಯಲ್ಲಿ ದುಡ್ಡು ಲಪಟಾಯಿಸುವ ಹುನ್ನಾರ ಅಡಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹಲವು ಸಮಸ್ಯೆ: ನಗರದ ರಾಜೀವ್ ಗಾಂಧಿ, ಹುಡ್ಕೋ ಕಾಲನಿ, ಸಾಯಿಬಾಬಾ ದೇವಸ್ಥಾನದಿಂದ ನೀರು ಹರಿದು ಬರುತ್ತಿದೆ. ಮಳೆಗಾಲದಲ್ಲಿ ಇಡೀ ರಾಜಕಾಲುವೆ ಭರ್ತಿಯಾಗಿ ಹರಿಯುವುದರಿಂದ ಪಕ್ಕದ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗುತ್ತಿವೆ. ಕಾಲುವೆ ತುಂಬಿ ರಸ್ತೆ ಮೇಲೆಲ್ಲ ನೀರು ಹರಿಯುವುದರಿಂದ ವಾಹನ ಸಂಚಾರಕ್ಕೆ ಸಂಚಕಾರ ಉಂಟಾಗುತ್ತಿದೆ. ಇದರಿಂದ ಕಳೆದ ವರ್ಷ ಓರ್ವ ವ್ಯಕ್ತಿ ಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಲ್ಲದೆ, ವಾಹನಗಳು ನೀರಿನ ರಭಸಕ್ಕೆ ಹರಿದು ಹೋಗಿದ್ದವು. ಹೀಗೆ ಪ್ರತಿವರ್ಷ ಒಂದಿಲ್ಲೊಂದು ಸಮಸ್ಯೆ ಉದ್ಭವಿಸುತ್ತಿದೆ. ಹಾಗಾಗಿ ಇಂತಹ ದುರಂತಗಳನ್ನು ತಪ್ಪಿಸಲು ಅಮೃತಸಿಟಿ ಯೋಜನೆಯಡಿ ರಾಜಕಾಲುವೆ ನಿರ್ಮಿಸಲಾಗುತ್ತಿದ್ದು, ಈ ಯೋಜನೆ ಕೇವಲ ನೆಪ ಮಾತ್ರಕ್ಕೆ ಎನ್ನುವಂತಾಗಿದೆ.
ಅಧಿಕಾರಿಗಳ ಸಮರ್ಥನೆ: ಮುಳ್ಳು ಕಂಟಿಗಳು ತುಂಬಿ ಪ್ರವಾಹ ಬರುತ್ತಿದ್ದು, ನೀರು ಸರಾಗವಾಗಿ ಹೋಗುವುದಕ್ಕೆ 10 ಅಡಿ ಅಗಲದ ಕಾಲುವೆ ಸಾಕಾಗುತ್ತದೆ ಎಂದು ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ. ಮುಂದೆ ಸಂಭವಿಸಬಹುದಾದ ದುರಂತಗಳಿಗೆ ಮುಂಚಿತವಾಗಿಯೇ ದೀರ್ಘಕಾಲದ ಪರಿಹಾರ ಕಂಡುಕೊಂಡರೆ ಸದ್ಯದ ರಾಜಕಾಲುವೆ ಮಾಡುತ್ತಿರುವುದು ಸಾರ್ಥಕವಾಗುತ್ತದೆ. ಇಲ್ಲದಿದ್ದರೆ ಕೋಟಿಗಟ್ಟಲೆ ಹಣ ವ್ಯಯಿಸಿ ಜನರ ಕಣ್ಣಿಗೆ ಮಣ್ಣೆರೆಚಿದಂತಾಗುತ್ತದೆ ಎಂದು ನಗರದ ಜನರು ದೂರುತ್ತಿದ್ದಾರೆ.
ಭೂಗಳ್ಳರಿಗೆ ಅನುಕೂಲ?: ರಾಜಕಾಲುವೆ ಸಂಕುಚಿತಗೊಳಿಸಿರುವುದರಿಂದ ಸರ್ಕಾರಿ ಜಾಗೆ ಒತ್ತುವರಿ ಮಾಡಿಕೊಳ್ಳುವ ಭೂಗಳ್ಳರಿಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಂತಾಗಿದ್ದು, ಕಾಮಗಾರಿಯಲ್ಲಿ ಅಕ್ರಮ ನಡೆದಿರುವ ಸಂಶಯ ವ್ಯಕ್ತವಾಗುತ್ತಿದೆ. ಹೈಕೋರ್ಟ್ ನಿಯಮ ಮೀರಿ ರಾಜಕಾಲುವೆ ದುರಸ್ತಿಗೆ ಗುತ್ತಿಗೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ತನಿಖೆ ಕೈಗೊಂಡು ತಪ್ಪಿತಸ್ಥ ಅಧಿಕಾರಿ ಹಾಗೂ ಗುತ್ತಿಗೆದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ಮೊದಲಿನಷ್ಟೇ ಅಗಲ ಇರಲಿ ಮಳೆಗಾಲದಲ್ಲಿ ರಾಜಕಾಲುವೆಯಲ್ಲಿ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದ್ದು, ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿ ತುಂಬಾ ತೊಂದರೆಯಾಗುತ್ತಿದೆ. ಹಾಗಾಗಿ ಮೊದಲಿನ ಅಳತೆಯಂತೆ ಕಾಲುವೆ ನಿರ್ಮಿಸಿ ಅನುಕೂಲ ಮಾಡಿಕೊಡಬೇಕು. ಎಸ್.ಎಂ. ಅಂಗಡಿ, ಸ್ಥಳೀಯರು
40 ಅಡಿ ಕಾಲುವೆ ಇಲ್ಲ ಚರಂಡಿ ಇಲ್ಲದಿದ್ದ ಕಾರಣ ನೀರು ಸರಾಗವಾಗಿ ಹರಿಯಲಾಗದೆ ಒಂದೆಡೆ ನಿಲ್ಲುತ್ತಿತ್ತು. ಇದರಿಂದ ನೀರು ಅಗಲವಾಗುತ್ತಿತ್ತು. ಇಲ್ಲಿ 40 ಅಡಿ ಅಗಲದ ರಾಜ ಕಾಲುವೆ ಇಲ್ಲ. ಅಲ್ಲದೆ, ಇದು ಸರ್ಕಾರದಿಂದ ಅನುಮೋದಿತಗೊಂಡಿದೆ. ಸದ್ಯ ನಿರ್ಮಾಣವಾಗುತ್ತಿರುವ ಕಾಲುವೆಯಲ್ಲಿ ಮೊದಲಿಗಿಂತ ಒಂದೂವರೆ ಪಟ್ಟು ಹೆಚ್ಚು ನೀರು ಹೋಗುತ್ತದೆ. ಒಂದು ವೇಳೆ ರಾಜಕಾಲುವೆ ಅತಿಕ್ರಮಣವಾಗಿದ್ದರೆ ತೆರವುಗೊಳಿಸುತ್ತೇವೆ. ರಮೇಶ್ ಜಾಧವ, ಪೌರಾಯುಕ್ತರು, ಗದಗ-ಬೆಟಗೇರಿ ನಗರಸಭೆ
ವಿಜಯಸಾಕ್ಷಿ ಸುದ್ದಿ, ಬೀದರ್: ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್ ದೇಶಕ್ಕೆ ಹೋಗಿದ್ದ ಜಿಲ್ಲೆಯ ಔರಾದ್ ತಾಲೂಕಿನ ಹುಲ್ಯಾಳ ತಾಂಡದ ಯುವಕ ಅಪಹರಣಕ್ಕೊಳಗಾಗಿರುವ ಘಟನೆ ನಡೆದಿದೆ.
ಹುಲ್ಯಾಳ ತಾಂಡಾದ 21 ವರ್ಷದ ಅಜಯ್ ರಾಠೋಡ್ ಡಿ.14 ರಂದು ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್ ದೇಶಕ್ಕೆ ಹೋಗಿದ್ದ. ಜನವರಿ 16 ರಂದು ಅಜಯ್ನನ್ನು ಅಪಹರಿಸಿದ ದುಷ್ಕರ್ಮಿಗಳು, ಹುಲ್ಯಾಳ ತಾಂಡದಲ್ಲಿರುವ ಆತನ ಸಂಬಂಧಿಕರಿಗೆ ಫೋನ್ ಮಾಡಿ 1 ಕೋಟಿ ರೂ. ನೀಡುವಂತೆ ಬೆದರಿಕೆ ಕರೆ ಮಾಡಿದ್ದಾರೆ.
ಯುವಕನ ಸಂಬಂಧಿಕರು ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಡಿ.ಎಲ್ ಅವರ ಗಮನಕ್ಕೆ ತಂದಿದ್ದಾರೆ. ದುಷ್ಕರ್ಮಿಗಳು ಆ ಬಳಿಕ ಅಜಯ್ನನ್ನು ಕಿರ್ಗಿಸ್ತಾನ್ಗೆ ಕರೆದುಕೊಂಡು ಹೋಗಿ 1 ಕೋಟಿ ನೀಡದಿದ್ದಲ್ಲಿ ಅಫ್ಘಾನಿನಿಸ್ತಾನ ಗಡಿಯಲ್ಲಿ ಕೊಂದು ಬಿಸಾಕುವ ಬೆದರಿಕೆ ಕರೆ ಮಾಡುವುದರ ಜೊತೆಗೆ ಆತನ ಕೈ-ಕಾಲುಗಳನ್ನು ಕಟ್ಟಿ ಹಾಕಿರುವ ಫೋಟೋ ರವಾನಿಸಿದ್ದಾರೆ.
ಎರಡು ಬಾರಿ ವಿಡಿಯೋ ಕಾಲ್ ಮೂಲಕ ಕುಟುಂಬ ಸದಸ್ಯರಿಗೆ ಬೆದರಿಕೆ ಹಾಕಿರುವ ದುಷ್ಕರ್ಮಿಗಳು ಕೂಡಲೇ ಹಣ ನೀಡುವಂತೆ ಒತ್ತಾಯ ಮಾಡಿದ್ದಾರೆ. ಆದರೆ ಈ ಘಟನೆ ಕುರಿತು ಸ್ಪಷ್ಟನೆ ನೀಡಿರುವ ಬೀದರ್ ಎಸ್ಪಿ ನಾಗೇಶ್, ಕಿಡ್ನಾಪ್ ಆಗಿರುವ ಕುರಿತು ಸ್ಪಷ್ಟ ಮಾಹಿತಿಯಿಲ್ಲ. ಆ ಹುಡುಗನೇ ಕುಟುಂಬಸ್ಥರನ್ನು ಸಂಪರ್ಕಿಸಿದ್ದು, ಕಿರ್ಗಿಸ್ಥಾನಕ್ಕೆ ಹೋಗಿರುವುದಾಗಿ ತಿಳಿಸಿದ್ದಾನೆ. ನಾವು ಇಂಡಿಯನ್ ಅಂಬಾಸಿ ಅಧಿಕಾರಿಗಳಿಗೆ ಸಂಪರ್ಕಿಸಿದ್ದು, ಅವರು ಈಗ ಆ ಹುಡುಗನನ್ನು ಮರಳಿ ತವರಿಗೆ ಕಳಿಸುತ್ತಿದ್ದಾರೆ. ಕಿಡ್ನ್ಯಾಪ್ ಕುರಿತು, ಅಲ್ಲಿಯ ಅಧಿಕಾರಿಗಳಿಗೂ ಸಹ ಹುಡುಗ ಸರಿಯಾದ ಮಾಹಿತಿ ನೀಡಿಲ್ಲ ಎಂದಿದ್ದಾರೆ. ಆತ ಮರಳಿ ಬಂದ ನಂತರ ಹೆಚ್ಚಿನ ಮಾಹಿತಿಗೆ ಆತನನ್ನೇ ಸಂಪರ್ಕಿಸಬೇಕಾಗುತ್ತದೆ ಎಂದರು.