ವಿಜಯಸಾಕ್ಷಿ ಸುದ್ದಿ, ಕೊಪ್ಪಳ (ಗಂಗಾವತಿ): ಇಂದು ನಸುಕಿನ ಜಾವ ಆರೋಗ್ಯದಲ್ಲಿ ದಿಢೀರ್ ಏರುಪೇರು ಉಂಟಾಗಿದ್ದರಿಂದ ಗಂಗಾವತಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಗಂಗಾವತಿಯ ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಮ್ಮ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ ಮೂರನೇ ಸೆಮೆಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಹನುಮೇಶ್ ಹಂಚಿನಾಳ (20) ಸಾವನ್ನಪ್ಪಿದ್ದಾನೆ. ಆಸ್ಪತ್ರೆ ತಲುಪುವಷ್ಟರಲ್ಲಿ ವಿದ್ಯಾರ್ಥಿ ಪ್ರಾಣಪಕ್ಷಿ ಹಾರಿ ಹೋಗಿತ್ತು.
ಬಾಯಲ್ಲಿ ನೊರೆ ಕಾಣಸಿಕೊಂಡಿದ್ದರಿಂದ ಸಾವಿಗೆ ನಿಖರ ಕಾರಣಗಳು ತಿಳಿಯಲು ಶವಪರೀಕ್ಷೆ ಮಾಡಬೇಕು. ಬಳಿಕವಷ್ಟೇ ವಿದ್ಯಾರ್ಥಿಯ ಸಾವಿಗೆ ಕಾರಣ ಗೊತ್ತಾಗುತ್ತದೆ ಎಂದು ಆಸ್ಪತ್ರೆಯ ವೈದ್ಯಸಿಬ್ಬಂದಿ ತಿಳಿಸಿದ್ದಾರೆ. ಮೃತ ವಿದ್ಯಾರ್ಥಿ ಆತ್ಮಕ್ಕೆ ಶಾಂತಿ ಕೋರಿ ಕಾಲೇಜಿನಲ್ಲಿ ಮೌನ ಆಚರಿಸಲಾಯಿತು.
ವಿಜಯಸಾಕ್ಷಿ ಸುದ್ದಿ, ಗದಗ: ಸ್ಮಶಾನದಲ್ಲಿ ಶವಗಳನ್ನು ಹೂಳುವುದು, ಸುಡುವುದು ಸಂಪ್ರದಾಯ. ಆದರೆ ಅದೇ ಸ್ಮಶಾನಕ್ಕೆ ಕೊಳ್ಳಿ ಇಟ್ಟಿರುವ ಘಟನೆ ಮಂಗಳವಾರ ಗದಗ ಬೆಟಗೇರಿ ಅವಳಿ ನಗರದಲ್ಲಿ ನಡೆದಿದೆ.
ಬೆಟಗೇರಿಯ ಹೈಟೆಕ್ ಮುಕ್ತಿಧಾಮಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿ, ಸ್ಮಶಾನಕ್ಕೆ ಮುಕ್ತಿ ಕೊಡುವ ಪ್ರಯತ್ನ ನಡೆಸಿದ್ದಾರೆ. ಕಿಡಿಗೇಡಿಗಳ ಈ ಕೃತ್ಯದಿಂದ 22 ಎಕರೆ ವಿಶಾಲವಾದ ಸ್ಮಶಾನದ ಅರ್ಧ ಭಾಗ ಸುಟ್ಟು ಕರಕಲಾಗಿದೆ.
ಈ ಹಿಂದೆ ಎಚ್.ಕೆ. ಪಾಟೀಲ ಅವರು ಜಿಲ್ಲಾ ಉಸ್ತುವಾರಿ ಮಂತ್ರಿ ಆಗಿದ್ದ ಸಂದರ್ಭದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಸ್ಮಶಾನ ಅಭಿವೃದ್ಧಿ ಪಡಿಸಲಾಗಿತ್ತು. ನಗರದ ಮಧ್ಯಭಾಗದ ಉದ್ಯಾನ ಮೀರಿಸುವಂತೆ ಸ್ಮಶಾನದಲ್ಲಿ ಉದ್ಯಾನ ನಿರ್ಮಿಸಲಾಗಿತ್ತು. ಬೋರವೆಲ್ ಕೊರೆಯಿಸಿ ನೀರಿ ವ್ಯವಸ್ಥೆ ಮಾಡಲಾಗಿತ್ತು. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಸ್ಮಶಾನ ಅಕ್ಷರಶಃ ಸ್ಮಶಾನವಾಗಿ ಕಾಣುವಂತಾಗಿದೆ.
ಆಕಸ್ಮಿಕ ಬೆಂಕಿಗೆ ಸ್ಮಶಾನದ ಹುಲ್ಲು, ಗಿಡಮರಗಳು, ನೀರಿನ ಪೈಪ್ ಲೈನ್ ಸುಟ್ಟು ಹಾಳಾಗಿದೆ. ಕೋಟ್ಯಾಂತರ ರೂ. ವ್ಯಯಿಸಿ ಅಭಿವೃದ್ಧಿ ಪಡಿಸಿದ ಸ್ಮಶಾನ ಕಿಡಿಗೇಡಿಗಳ ಕೃತ್ಯಕ್ಕೆ ಆಹುತಿಯಾಗುದೆ.
ಈ ಕುರಿತು ವಿಜಯಸಾಕ್ಷಿ ಜೊತೆ ಮಾತನಾಡಿದ ಬೆಟಗೇರಿ ಮುಕ್ತಿಧಾಮ ನಿರ್ವಹಣೆ ಸಮಿತಿ ಅಧ್ಯಕ್ಷ, ರೈಲ್ವೆ ಹೋರಾಟಗಾರ ಗಣೇಶಸಿಂಗ್ ಬ್ಯಾಳಿ, ಕಿಡಿಗೇಡಿಗಳು ಸ್ಮಶಾನಕ್ಕೆ ಬೆಂಕಿ ಹಚ್ಚಿದ್ದಾರೆ. ಸ್ಮಶಾನದಲ್ಲಿ ಅಳವಡಿಸಿದ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ಮಾರ್ಚ್ 3 ರಂದು ಪೊಲೀಸರಿಗೆ ದೂರು ನೀಡಲಾಗುವುದು. ಬೆಟಗೇರಿ ಸ್ಮಶಾನದ ಇತಿಹಾಸದಲ್ಲೆ ಇಂಥ ಘಟನೆ ನಡೆದಿಲ್ಲ ಎಂದರು.
ನಗರದ ಹೊಸ ಹುಡ್ಕೋ ಕಾಲನಿಯ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮಧ್ಯಾಹ್ನ ನಡೆಸಿದ ಕಾರ್ಯಾಚರಣೆ ವೇಳೆ ಪತ್ತೆಯಾದ ಹೆಜ್ಜೆ ಗುರುತು ಚಿರತೆಯದ್ದು ಎಂದು ನಂಬಲಾಗಿತ್ತು. ಆದರೆ, ಈ ಕುರಿತು ಮಂಗಳವಾರ ರಾತ್ರಿ ವಿಜಯಸಾಕ್ಷಿಗೆ ಮಾಹಿತಿ ನೀಡಿರುವ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್, ‘ಇದು ಚಿರತೆಯ ಹೆಜ್ಜೆ ಗುರುತಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಹಿಂದಿರುವ ಹೊಸ ಹುಡ್ಕೋ ಕಾಲನಿಯಲ್ಲಿ ಚಿರತೆ ಅಡ್ಡಾಡಿದೆ ಎಂದು ಅಲ್ಲಿನ ನಿವಾಸಿಗಳು ಹೇಳುತ್ತಿರುವ ಕಾರಣಕ್ಕಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ. ಈಗಾಗಲೇ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಮಂಗಳವಾರ ರಾತ್ರಿಯಿಡೀ ಅಧಿಕಾರಿಗಳನ್ನು ಗಸ್ತಿಗಾಗಿ ನಿಯೋಜಿಸಲಾಗಿದೆ. ಅಲ್ಲದೇ, ಚಿರತೆಯ ಚಲನವನಗಳನ್ನು ಪತ್ತೆ ಹಚ್ಚಲು ಅಲ್ಲಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಒಂದು ವೇಳೆ ಕ್ಯಾಮೆರಾಗಳಲ್ಲಿ ಚಿರತೆಯ ಓಡಾಟ ಸೆರೆಯಾದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಸ್ವತಃ ಡಿಎಫ್‌ಒ ಸೂರ್ಯಸೇನ್ ಅವರೇ, ಡ್ರೋಣ್ ಕ್ಯಾಮೆರಾ ಮೂಲಕ ಅಂಬೇಡ್ಕರ್ ಭವನದ ಹಿಂಬದಿಯ ಪ್ರದೇಶದಲ್ಲಿರುವ ಹಳ್ಳ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಹಿಂಭಾಗ ಮತ್ತು ಹೊಸ ಹುಡ್ಕೋ ಕಾಲನಿಯಲ್ಲಿ ಪರಿಶೀಲನೆ ನಡೆಸಿದರು. ಆದರೆ ಯಾವುದೇ ಚಲನವಲನ ಕಂಡುಬಂದಿಲ್ಲ ಎನ್ನಲಾಗಿದೆ.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಮಾಜಿ ಸಚಿವ ಶಿವರಾಜ ತಂಗಡಗಿ ಶ್ರೀದೇವಿ ಮಟಕಾ ಕಂಪನಿ ವಿರುದ್ಧ ಮಾತ್ರ ಎಸ್ಪಿಯವರಿಗೆ ದೂರು ನೀಡಿರುವುದು ಸಮಂಜಸವಲ್ಲ, ಅವರ ಬೆಂಬಲಿಗ ವಿಶ್ವನಾಥ ಸಹ ಮಟ್ಕಾ ದಂಧೆಯಲ್ಲಿ ತೊಡಗಿದ್ದಾರೆ. ಕೂಡಲೇ ಎಲ್ಲ ಮಟಕಾ ಕಂಪನಿಗಳನ್ನು ಬಂದ್ ಮಾಡಿಸಿ ದಂಧೆಕೋರರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ಮಂಗಳವಾರ ಭಾರತೀಯ ಕೃಷಿ ಕಾರ್ಮಿಕ ರೈತ ಸಂಘಟನೆಯ ಮುಖಂಡರು ದೂರು ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಅವರಿಗೆ ದೂರು ಸಲ್ಲಿಸಿದ ಅವರು, ತಂಗಡಗಿಯವರಿಗೆ ನಿಜವಾಗಲೂ ಮಟಕಾ ಬಂದ್ ಮಾಡಿಸುವ ಕಳಕಳಿ ಇದ್ದರೆ ಎಲ್ಲ ಮಟಕಾ ಕಂಪನಿಗಳನ್ನು ಬಂದ್ ಮಾಡಿಸುವಂತೆ ದೂರು ನೀಡಬೇಕಿತ್ತು. ಆದರೆ ಶಿವರಾಜ ಅವರ ಕಣ್ಣು ಶ್ರೀದೇವಿ ಕಂಪನಿ ಮೇಲಷ್ಟೇ ಯಾಕೆ ಎಂದು ಸಂಘಟನೆಯ ಗಂಗಾವತಿ ತಾಲೂಕಾಧ್ಯಕ್ಷ ಬಿ.ಕಿಶೋರ್ ಪ್ರಶ್ನಿಸಿದರು.
ಶಿವರಾಜ ತಂಗಡಗಿಯವರ ಬಲಗೈ ಭಂಟ ವಿಶ್ವನಾಥಸ್ವಾಮಿ ಕನಕಗಿರಿ 15-20 ವರ್ಷಗಳಿಂದ ಮಟ್ಕಾ ಆಡಿಸುತ್ತಿದ್ದಾರೆ. ಮೊದಲು ಅವರನ್ನು ಗಡಿಪಾರು ಮಾಡಬೇಕು. ಜೊತೆಗೆ ಜಿಲ್ಲೆಯ ಯಾವುದೇ ಭಾಗದಲ್ಲಾದರೂ, ಯಾವುದೇ ಮಟಕಾ ಕಂಪನಿಯಾದರೂ ಸರಿ ಎಲ್ಲವನ್ನೂ ಬಂದ್ ಮಾಡಿಸಬೇಕು ಎಂದು ಅವರು ಒತ್ತಾಯಿಸಿದರು.
ವಿಜಯಸಾಕ್ಷಿ ಸುದ್ದಿ, ಗದಗ: ನಗರದಲ್ಲಿ ಕಳೆದ ಮೂರು ಗಂಟೆಯಿಂದ ಚಿರತೆ ಓಡಾಡುತ್ತಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ, ಗದಗ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ವಿಜಯಸಾಕ್ಷಿಗೆ ಮಾಹಿತಿ ನೀಡಿರುವ ಅವರು, ಇದುವರೆಗೂ ಗದಗ ನಗರದಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಚಿರತೆ ಕಾಣಿಸಿಕೊಂಡಿರುವ ಕುರಿತು ಯಾವುದೇ ಖಚಿತತೆ ಇಲ್ಲ. ಆದರೂ ಜನರ ಆತಂಕ ನಿವಾರಣೆಗಾಗಿ ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆ ಇರಬಹುದು ಎನ್ನಲಾಗಿರುವ ಸ್ಥಳದಲ್ಲಿ ಹುಡುಕಾಟ ನಡೆಸಿದ್ದಾರೆ ಎಂದು ಸೂರ್ಯಸೇನ್ ಸ್ಪಷ್ಟಪಡಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಹಂಪಿ ಝೂನಿಂದ ಅನಸ್ತೇಶಿಯಾ ಇಂಜೆಕ್ಷನ್ ತರಿಸಲಾಗುತ್ತಿದೆ. ಅದರ ಜೊತೆಗೆ ಡ್ರೋಣ್ ಕ್ಯಾಮೆರಾವನ್ನೂ ಸಹ ಬಳಸಿಕೊಳ್ಳಲಾಗುವುದು. ರಕ್ಷಣಾ ಕಾರ್ಯಾಚರಣೆ ನಡೆಸುವ ತಂಡವೂ ಸಹ ಸಿದ್ಧವಾಗಿದೆ ಎಂದು ಅವರು ವಿಜಯಸಾಕ್ಷಿಗೆ ತಿಳಿಸಿದ್ದಾರೆ.
ನಗರದ ರಿಂಗ್ ರೋಡ್ ನಲ್ಲಿರುವ ಅಂಬೇಡ್ಕರ್ ಭವನದ ಸುತ್ತಮುತ್ತ ಚಿರತೆ ನೋಡಿರುವುದಾಗಿ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದರಿಂದ ಚಿರತೆಯ ಸುದ್ದಿ ಹರಡಿದ್ದು, ಅರಣ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಗೆ ನಡೆಸುತ್ತಿದ್ದಾರೆ.
ಇದರಿಂದಾಗಿ ಅಂಬೇಡ್ಕರ್ ಭವನದ ಹಿಂದೆ ಇರುವ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದು, ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ.
-ಆರೋಪ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಎಸ್ಪಿ
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಜಿಲ್ಲೆಯ ರೋಚಕ ಕ್ಷೇತ್ರ ಕನಕಗಿರಿ ವಿಧಾನಸಭಾ ಕ್ಷೇತ್ರದ ರಾಜಕೀಯ ಜಗಳ್‌ಬಂಧಿ ತಾರಕಕ್ಕೇರುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಟ್ರ್ಯಾಕ್ಟರ್ ರ‌್ಯಾಲಿ ಮಾಡಿದರೆ, ವಿಜಯೇಂದ್ರ ಆಗಮನದ ಹಿನ್ನೆಲೆಯಲ್ಲಿ ಬಿಜೆಪಿ ಸಹ ಭಾರೀ ಪ್ರಮಾಣದ ರ‌್ಯಾಲಿ ನಡೆಸಿತು. ಈ ನಡುವೆ ಶ್ರೀದೇವಿ ಹೆಸರಿನ ಮಟಕಾ ದಂಧೆ ಕುರಿತು ದೊಡ್ಡ ಚರ್ಚೆಯೇ ಶುರುವಾಗಿದೆ.
ಜಿಲ್ಲೆಯಲ್ಲಿ ವಿಶೇಷವಾಗಿ ಕನಕಗಿರಿ ಕ್ಷೇತ್ರದಲ್ಲಿ ನಾನಾ ಹೆಸರಿನಲ್ಲಿ ಮಟಕಾ ಆಡಿದರೆ ಪೊಲೀಸ್ ಅತಿಥಿಯಾಗುವುದು ನಿಶ್ಚಿತ. ಆದರೆ ಶ್ರೀದೇವಿ ಹೆಸರಿನ ಮಟಕಾ ಆಡಿದರೆ ಯಾವ ಪೊಲೀಸರು ಏನೂ ಮಾಡಲ್ವಂತೆ…?
ಹೀಗಂತ ದೂರು ನೀಡಿದ್ದು ಮಾಜಿ ಸಚಿವ ಶಿವರಾಜ ತಂಗಡಗಿ. ಶ್ರೀದೇವಿ ಹೆಸರಿನಲ್ಲಿ ಗಂಗಾವತಿಯ ಪೊಲೀಸ್ ಅಧಿಕಾರಿಯೊಬ್ಬರು ಮಟಕಾ ಆಡಿಸುತ್ತಿದ್ದಾರೆ. ಇದು ಶೇಕಡಾ ನೂರರಷ್ಟು ಸತ್ಯ. ಮೊದಲ ಹಂತವಾಗಿ ದೂರು ದಾಖಲಿಸುತ್ತಿದ್ದೇವೆ. ಪೊಲೀಸರು ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿಯವರು, ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಅವರಿಗೆ ಮನವಿ ಸಲ್ಲಿಸಿದರು.
ಮಟಕಾ ದಂಧೆ, ಮರಳು ಅಕ್ರಮ ನಾನು ಮಂತ್ರಿಯಾದಾಗಲೂ ಕನಕಗಿರಿ ಕ್ಷೇತ್ರದಲ್ಲಿ ಇತ್ತು. ಸಾಧ್ಯವಾದಷ್ಟು ಅಕ್ರಮ ನಿಯಂತ್ರಣಕ್ಕೆ ಶ್ರಮಿಸಿದ್ದೇನೆ. ಈಗ ನನ್ನ ಕ್ಷೇತ್ರದಲ್ಲೇ ಗಂಗಾವತಿಯ ಪೊಲೀಸ್ ಅಧಿಕಾರಿಯೊಬ್ಬರು ಮಟಕಾ ದಂಧೆ ನಡೆಸಲು ಕುಮ್ಮಕ್ಕು ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಸತ್ಯಾಂಶ ಇಲ್ಲದ, ಸಮರ್ಪಕ ಸಾಕ್ಷಿಗಳಲ್ಲದ ಯಾವ ಸಂಗತಿಯ ಬೆನ್ನ ಹಿಂದೆ ಬೀಳಲ್ಲ. ಪೊಲೀಸ್ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಬೇಕು. ತನಿಖೆ ಸರಿಯಾಗಿದ್ದರೆ ತಪ್ಪಿತಸ್ಥರು ಖಂಡಿತವಾಗಿ ಬಲೆಗೆ ಬೀಳ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ತಂಗಡಗಿ, ಒಂದೊಮ್ಮೆ ಈ ಪ್ರಕರಣವನ್ನು ಇಲಾಖೆಯ ಉನ್ನತ ಅಧಿಕಾರಿಗಳು ಉದಾಸೀನ ಮಾಡಿದರೆ ಶ್ರೀದೇವಿ ಹೆಸರಿನ ಮಟಕಾ ದಂಧೆಗೆ ಪೊಲೀಸ್ ಅಧಿಕಾರಿ ಕುಮ್ಮಕ್ಕು ನೀಡುತ್ತಿರುವ ಆಡಿಯೊವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗುವುದು. ಆನಂತರ ಬೀದಿಗಿಳಿದು ಹಂತ ಹಂತವಾಗಿ ಹೋರಾಟ ನಡೆಸಲಾಗುವುದು. ಈ ಬಗ್ಗೆ ಅಧಿವೇಶನದಲ್ಲೂ ನಮ್ಮ ಪಕ್ಷದ ಮುಖಂಡರು ಚರ್ಚಿಸುತ್ತಾರೆ ಎಂದು ತಿಳಿಸಿದರು.
“ಈಗಾಗಲೇ ಈ ಬಗ್ಗೆ ತನಿಖೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಮಟಕಾ ದಂಧೆಯಲ್ಲಿ ತೊಡಗಿದ್ದ ಸುಮಾರು 21 ಜನರನ್ನು ಗಡಿ ಪಾರು ಮಾಡಲಾಗಿದೆ. ಇದರಲ್ಲಿ ಪೊಲೀಸ್ ಅಧಿಕಾರಿ ಭಾಗಿಯಾಗಿದ್ದಾರೆ ಎನ್ನುವ ಆರೋಪ ಬಂದಿದ್ದು, ಆರೋಪ ಸಾಬೀತಾದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.”
ಟಿ. ಶ್ರೀಧರ್, ಎಸ್ಪಿ, ಕೊಪ್ಪಳ
ಹ…. ದುಡ್ಡಿನಿಂದ ಬಿಜೆಪಿ ಅಧಿಕಾರಕ್ಕೆ “ಕನಕಗಿರಿ ಕ್ಷೇತ್ರದಲ್ಲೇ ಅಕ್ರಮಗಳು ಹೆಚ್ಚುತ್ತಿವೆ. ಜವಾಬ್ದಾರಿಯುತ ನಾಗರಿಕನಾಗಿ ಪೊಲೀಸರಿಗೆ ದೂರು ಕೊಟ್ಟಿದ್ದೇನರ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಹ… ದುಡ್ಡಿನಿಂದ. ನಮ್ಮ ಪಕ್ಷದಲ್ಲಿ ಶಾಸಕ, ಸಚಿವರಾಗಿದ್ದವರು ಬಿಜೆಪಿ ಜೊತೆ ಕೈ ಜೋಡಿಸಿದ್ದು ಹ…. ದುಡ್ಡಿಗಾಗಿ.”
ನಾವು ಪ್ರಮಾಣಿಕವಾಗಿ ಸರ್ಕಾರವನ್ನು ತಂದಿದ್ದೇವೆ. ಆದರೆ, ಯಾವುದೇ ಜೂಜಾಟದ ದುಡ್ಡಿನಿಂದ ಸರ್ಕಾರ ರಚನೆ ಮಾಡುವ ದರ್ದು ನಮಗಿಲ್ಲ ಎಂದು ತೋಟಗಾರಿಕೆ ಇಲಾಖೆ ಸಚಿವ ಆರ್. ಶಂಕರ್ ಅವರು ಹೆಚ್ಡಿಕೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಸ್ಪೀಟ್, ಜೂಜಾಟದ ಹಡಬಿಟ್ಟಿ ದುಡ್ಡಿನಿಂದ ಬಿಜೆಪಿ ಸರ್ಕಾರ ತಂದಿದ್ದಾರೆ ಎಂಬ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರ ಹೇಳಿಕೆ ಪ್ರತಿಕ್ರಿಯಿಸಿ ಅವರು, ರಾಜಕಾರಣ ಅಂದರೆ ಆರೋಪ ಪ್ರತ್ಯಾರೋಪಗಳು ಇದ್ದದ್ದೆ. ಆದರೆ, ನಾವು ಯಾವುದೇ ಜೂಜಾಟದ ಹಣದಿಂದ ಸರ್ಕಾರ ತಂದಿಲ್ಲ. ಆ ದರ್ದು ನಮಗೆ ಇಲ್ಲ ಎಂದರು. ಇನ್ನು ಎಚ್. ವಿಶ್ವನಾಥ ಅವರ ಕುರಿತು ಯಾವುದೇ ಪ್ರತಿಕ್ರಿಯೆ ನೀಡದ ಸಚಿವ ಆರ್. ಶಂಕರ್ ಅವರು, ನನ್ನದು ದೊಡ್ಡ ಇಲಾಖೆ. ನಾನು ತೋಟಗಾರಿಕೆ ಇಲಾಖೆಯ ಸಚಿವನಾಗಿ ಅಧಿಕಾರ ವಹಿಸಿಕೊಂಡು ಈಗಷ್ಟೇ ಕೆಲ ದಿನಗಳಾಗಿವೆ. ಇಲಾಖೆಯ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳುತ್ತಿದ್ದೇನೆ. ಆದರೆ, ತೋಟಗಾರಿಕಾ ಇಲಾಖೆಗೆ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ ಎಂದರು.
ತೋಟಗಾರಿಕಾ ಬೆಳೆಗಳಿಗೆ ಶಿಥಿಲ ಘಟಕಗಳು ಸೇರಿದಂತೆ ಅನೇಕ ಸೌಲಭ್ಯಗಳು ಬೇಕು. ಇದಕ್ಕಾಗಿ ಹೆಚ್ಚಿನ ಅನುದಾನ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಇಲಾಖೆಗೆ ಈ ಬಾರಿಯ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಒದಗಿಸುವಂತೆ ಸಿಎಂ ಅವರಿಗೆ ಮನವಿ ಮಾಡಿದ್ದೇನೆ ಎಂದರು.
ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕು ಎಂಬುದರ ಕುರಿತು ನನ್ನ ಮನವಿಯನ್ನು ಸಿಎಂ ಅವರಿಗೆ ನಾನು ಸಲ್ಲಿಸಿದ್ದೇನೆ. ಎಲ್ಲ ಸಮುದಾಯಗಳನ್ನು ಹೇಗೆ ತೆಗೆದುಕೊಂಡು ಹೋಗಬೇಕು ಎಂಬುದು ಸಿಎಂ ಅವರಿಗೆ ಗೊತ್ತಿದೆ. ಅದನ್ನು ಅವರು ಸಮರ್ಪಕವಾಗಿ ನಿಭಾಯಿಸುತ್ತಾರೆ. ನಾನು ಪ್ರಾಮಾಣಿಕವಾಗಿ ನಮ್ಮ ಸಮುದಾಯದ ಅಹವಾಲನ್ನು ಸಿಎಂ ಅವರಿಗೆ ಸಲ್ಲಿಸಿದ್ದೇನೆ. ಉಳಿದಂತೆ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದರು
ನಗರದ ಕುಸನೂರು ರಸ್ತೆಯಲ್ಲಿರುವ ತಿಲಕನಗರ ಬಡಾವಣೆಯಲ್ಲಿ ನಳದ ಪೈಪುಗಳು ಒಡೆದು ಹೋಗಿದ್ದು , ಶೀಘ್ರ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಕರ್ನಾಟಕ ವೆಲ್ಫೇರ್ ಪಾರ್ಟಿ ಕಲಬುರ್ಗಿ ದಕ್ಷಿಣ ದಕ್ಷಿಣ ವಲಯ ಅಧ್ಯಕ್ಷ ಪ್ರಕಾಶ್ ಪಾಟೀಲ್ ಆಗ್ರಹಿಸಿದ್ದಾರೆ.
ಕಲಬುರ್ಗಿ ಒಳಚರಂಡಿ ಮಂಡಳಿ ಅಧಿಕಾರಿಗೆ ಮನವಿ ಸಲ್ಲಿಸಿದ ಅವರು, ಬಡಾವಣೆಯಲ್ಲಿ ಒಳಚರಂಡಿ ಕಾಮಗಾರಿ ಮಾಡುವಾಗ ಕೆಲವು ಕಡೆಗಳಲ್ಲಿ ನಳದ ಪೈಪುಗಳು ಒಡೆದು ಹೋಗಿವೆ.
ಬೇಸಿಗೆಕಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಡಾವಣೆಯ ಜನರಿಗೆ ಕುಡಿಯುವ ನೀರಿನ ತೊಂದರೆ ಆಗದಂತೆ ಕೂಡಲೇ ಒಳಚರಂಡಿ ಮಂಡಳಿ ದುರಸ್ತಿಗೆ ಮುಂದಾಗುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಸಲೀಂ ಅಹ್ಮದ್ ಚಿತಾಪುರ, ಜಿಲ್ಲಾ ಉಪಾಧ್ಯಕ್ಷರು ಸಿದ್ದಣ್ಣ ಚಕ್ರ ಜಿ, ಕಲಬುರ್ಗಿ ದಕ್ಷಿಣ ಮತಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಅಫ್ಜಲ್ ಖಾನ್ ಇನ್ನಿತರರು ಉಪಸ್ಥಿತರಿದ್ದರು.
ನಗರದ ಖಾನತೋಟದ ಸಂತೋಷ ಖಟವಟೆ ಅವರ ಮನೆಯ ಬಳಿಯಿರುವ ಸಾರ್ವಜನಿಕ ಸ್ಥಳವೊಂದರಲ್ಲಿ ಇಸ್ಪೀಟು ಆಡುತ್ತಿದ್ದ ಇಬ್ಬರು ವ್ಯಾಪಾರಸ್ಥರು ಸೇರಿದಂತೆ ಹತ್ತು ಜನರನ್ನು ಬಂಧಿಸಿ, ಸುಮಾರು 48,780 ರೂ. ಹಣ ವಶಪಡಿಸಿಕೊಂಡಿದ್ದಾರೆ.
ವ್ಯಾಪಾರಸ್ಥರಾದ ಗದಗ ಶಹರದ ವಿಎನ್ ಟಿ ರಸ್ತೆಯ ನಿವಾಸಿ ಸಂತೋಷ ಅಶೋಕ ಖಟವಟೆ, ಕಿಲ್ಲಾ ಓಣಿಯ ಪರಶುರಾಮ ಬೋಜರಾಜಸಾ ದಲ್ಬಂಜನ್ ಇಬ್ಬರು ಪ್ರಮುಖ ಆರೋಪಿಗಳಾಗಿದ್ದಾರೆ.
ಅದರಂತೆ, ಬಸವೇಶ್ವರ ನಗರದ ವಿಜಯಕುಮಾರ್ ಪಟದಯ್ಯ ಹಿರೇಮಠ, ಸೇವಾಲಾಲ್ ನಗರದ ಕಿರಣ್ ಶಿವಪ್ಪ ಅಂಗಡಿ, ಬೆಟಗೇರಿಯ ಅಂಬಾಭವಾನಿ ಸರ್ಕಲ್ ನಿವಾಸಿ ಬಸವರಾಜ್ ಮಲ್ಲಪ್ಪ ಬಾರಕೇರ್, ಹುಬ್ಬಳ್ಳಿ ರಸ್ತೆಯ ನಿವಾಸಿ ಬಸವರಾಜ್ ಪ್ರಬಯ್ಯ ಹಿರೇಮಠ, ಬೆಟಗೇರಿಯ ನಿವಾಸಿ ರಾಜು ಮೆಹರವಾಡೆ ಹಾಗೂ ದಾಸರ ಓಣಿಯ ಜಗ್ಗು ಪವಾರ್ ಬಂಧಿತ ಆರೋಪಿಗಳಾಗಿದ್ದಾರೆ.
ಇಸ್ಪೀಟು ಅಡ್ಡೆಯ ಮೇಲೆ ದಾಳಿ ನಡೆಸಿದ ವೇಳೆ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.
-ಅಪಾರ ಭಕ್ತರನ್ನು ಹೊಂದಿದ್ದರೂ ಕೈ ತಪ್ಪುತ್ತಿರುವ ಮಠಾಧಿಪತಿಯ ಹಿಡಿತ
-ಮಠಾಧೀಶರಾಗಿ ವರ್ಷ ತುಂಬಿದ್ದಕ್ಕೆ ಕೇಕ್ ಕತ್ತರಿಸಿದ ಸ್ವಾಮೀಜಿ!
-ಬಸವರಾಜ ಕರುಗಲ್. ಕೊಪ್ಪಳ: ಮಠ ಮಾನ್ಯಗಳು ಧಾರ್ಮಿಕ ಹಾಗೂ ಭಕ್ತಿಯ ಕೇಂದ್ರಗಳು ಎಂಬ ಭಾವ ಬಹುತೇಕರಲ್ಲಿದೆ. ಮಠಗಳೆಂದರೆ ಹಾಗಿರುವುದು ಸಹಜವೇ. ಆದರೆ ಕೊಪ್ಪಳ ಜಿಲ್ಲೆಯೊಂದರ ಮಠ ಸದಾ ವಿವಾದದ ಕೇಂದ್ರ ಬಿಂದು. ಇದಕ್ಕೆಲ್ಲ ಕಾರಣ ಮಠಾಧಿಪತಿಯ ಕುಟುಂಬಸ್ಥರು!
ಕೊಪ್ಪಳ ಜಿಲ್ಲೆಯ ಅಳವಂಡಿಯಲ್ಲಿರುವ ಶ್ರೀ ಸಿದ್ಧೇಶ್ವರ ಮಠ ಸದ್ಯ ವಿವಾದದ ತಾಣವಾಗಿದೆ. ಈಚೆಗಷ್ಟೇ ವಿಜೃಂಭಣೆಯಿಂದ ಜಾತ್ರಾಮಹೋತ್ಸವದ ಅಂಗವಾಗಿ ರಥೋತ್ಸವ ನಡೆಯಿತು. ರಥೋತ್ಸವದ ಕ್ಷಣಗಳು ಈಗ ಮಠದ ಭಕ್ತರಲ್ಲಿ ಮತ್ತು ಮಠಾಧಿಪತಿಯ ಕುಟುಂಬಸ್ಥರಲ್ಲಿ ಕೋಲಾಹಲ ಸೃಷ್ಟಿಯಾಗುವಂತೆ ಮಾಡಿವೆ!
ರಥದ ಗಾಲಿಗೆ ಹುಟ್ಟು ಮತ್ತು ಸೊನ್ನಿ ಹಾಕುವ ವಿಷಯಕ್ಕೆ ಸಂಬಂಧಿಸಿದಂತೆ ಸ್ವಾಮೀಜಿಯ ಕುಟುಂಬಸ್ಥರು ತಕರಾರು ಮಾಡಿಕೊಂಡಿದ್ದಾರೆ. ಪ್ರತಿ ವರ್ಷದಂತೆ ತೇರು ಎಳೆಯುವ ಸಂದರ್ಭದಲ್ಲಿ ರಥದ ಗಾಲಿಗೆ ಹುಟ್ಟು ಸೊನ್ನಿ ಹಾಕಲಾಗುತ್ತದೆ. ಒಂದು ಚಕ್ರಕ್ಕೆ ಬೈರಾಪುರ ಗ್ರಾಮದ ಭಕ್ತರು ಸೊನ್ನಿ ಹಾಕಿದ್ದಾರೆ. ಅದರಿಂದ ಯಾವ ತೊಂದರೆಯೂ ಆಗಿಲ್ಲ. ಇನ್ನೊಂದು ಚಕ್ರಕ್ಕೆ ಅಳವಂಡಿಯವರು (ಅವರು ಪ್ರತಿ ವರ್ಷ ಹಾಕುತ್ತಿದ್ದವರೇ) ಸೊನ್ನಿ ಹಾಕಿದ್ದಾರೆ. ಅದು ಸಡಿಲವಾಗಿದ್ದರಿಂದ ತೇರೆಳುವಾಗ ರಥ ಅಲುಗಾಡಿದೆಯೇ ಹೊರತು ಯಾವ ಅನಾಹುತವೂ ಸಂಭವಿಸಿಲ್ಲ. ಇದನ್ನೇ ನೆಪ ಮಾಡಿಕೊಂಡ ಸ್ವಾಮೀಜಿ ಕುಟುಂಬಸ್ಥರು “ಜಾತ್ರೆಗೆ ನಿಮ್ಮನ್ಯಾರು ಕರೆದವರು?” ಎಂದು ದರ್ಪ ಮೆರೆದಿದ್ದಾರೆ. ದರ್ಪದ ಈ ನುಡಿ, ಗ್ರಾಮಸ್ಥರ ಸ್ವಾಭಿಮಾನಕ್ಕೆ ಧಕ್ಕೆ ತಂದು ಆಕ್ರೋಶದ ಕಿಡಿಯಾಗಿ ಹೊತ್ತಿಕೊಂಡಿದೆ.
ಇದು ಮಠದ ಕೆಲಸ, ಮಾತನಾಡಬೇಕಾದವರು ಸ್ವಾಮೀಜಿಯೇ ಹೊರತು, ಸ್ವಾಮೀಜಿಯ ಕುಟುಂಬಸ್ಥರಲ್ಲ. ಕುಟುಂಬಸ್ಥರು ಮಠದ ಜಾಗವನ್ನು ಸ್ವಾಮೀಜಿಗೆ ಬಿಟ್ಟು ಕೊಟ್ಟು, ಬೇರೆಡೆ ಹೋಗಲಿ. ಮಠ ಎಂದರೆ ಭಕ್ತಿಕೇಂದ್ರವಾಗಬೇಕೇ ಹೊರತು ರಾಜಕೀಯ ಸಭೆ ನಡೆಸುವ ತಾಣವಾಗಬಾರದು. ಕುಟುಂಬಸ್ಥರು ರಾಜಕೀಯ ಪಕ್ಷವೊಂದರಲ್ಲಿ ಗುರುತಿಸಿಕೊಂಡಿದ್ದು, ಮೊದಲು ರಾಜಕೀಯ ಸಭೆಗಳನ್ನು ಮಠದಲ್ಲಿ ನಡೆಸುವ ಅನಿಷ್ಠ ಕೈ ಬಿಡಿ ಎಂಬ ಕೂಗು ಮಾರ್ದನಿಸುತ್ತಿದ್ದಂತೆ, ಗ್ರಾಮಸ್ಥರು ಮತ್ತು ಸ್ವಾಮೀಜಿ ಕುಟುಂಬಸ್ಥರ ನಡುವೆ ದೊಡ್ಡ ವಾಗ್ವಾದವೇ ನಡೆದಿದೆ.
ಕೊನೆಗೂ ಗ್ರಾಮದ ಹಿರಿಯ ಮುಖಂಡರು ಮಧ್ಯಸ್ಥಿಕೆ ವಹಿಸಿ ಸಂಧಾನ ಮಾಡಿದ್ದಾರೆ. ಈ ಸಂಧಾನ ತಾತ್ಕಾಲಿಕವಷ್ಟೇ. ಇಂಥ ಹತ್ತು ಹಲವು ಪಂಚಾಯಿತಿಗಳನ್ನು ಅಳವಂಡಿಯ ಶ್ರೀ ಸಿದ್ದೇಶ್ವರ ಮಠ ಕಂಡಿದೆ.
ಕೇಕ್ ಕತ್ತರಿಸಿ ಸಂಭ್ರಮಾಚರಣೆ ಅಳವಂಡಿಯ ಈಗಿನ ಸ್ವಾಮೀಜಿ ಕಳೆದ ವರ್ಷವಷ್ಟೇ ಪಟ್ಟಕ್ಕೆ ಬಂದಿದ್ದರು. ಅವರಿಗಿಂತ ಹಿಂದಿದ್ದ ಸ್ವಾಮೀಜಿ ಮುಂಡರಗಿ ಕಾಲೊಂದರಲ್ಲಿ ಪಾಠ ಮಾಡುತ್ತಿದ್ದರು. ಕಾಲೇಜಿನ ವಿದ್ಯಾರ್ಥಿನಿಯೊಂದಿಗೆ ಪ್ರೇಮಾಂಕುರವಾಗಿ ಅವರು ಸನ್ಯಾಸತ್ಯ ತ್ಯಜಿಸಿದ್ದರು. ಈಗಿನ ಸ್ವಾಮೀಜಿ ಪೀಠಕ್ಕೆ ಬಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಧಾರ್ಮಿಕ ಕಾರ್ಯ, ಕಾರ್ಯಕ್ರಮ ನಡೆಸುವ ಬದಲು ಕೇಕ್ ಕತ್ತರಿಸಿ ವರ್ಷಾಚರಣೆಯನ್ನು ಸಂಭ್ರಮಿಸಿದ್ದೂ ಸಹ ವಿವಾದವಾಗಿದ್ದನ್ನ ಸ್ಮರಿಸಬಹುದು…