Home Blog Page 3078

ಸಿಡಿಲು ಬಡಿದು ಯುವಕ ಹಾಗೂ ಎರಡು ಎತ್ತು ಸಾವು!

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ


ಮಂಗಳವಾರ ಸಂಜೆ ಜಿಲ್ಲೆಯ ವಿವಿಧೆಡೆ ಮಳೆ ಸುರಿದಿದೆ. ಯಲಬುರ್ಗಾ ತಾಲೂಕಿನ ಗಾಣಧಾಳ ಪಂಚಾಯಿತಿ ವ್ಯಾಪ್ತಿಯ ಹಿರೇವಡ್ರಕಲ್ ಗ್ರಾಮದ ಹೊರವಲಯದಲ್ಲಿ ಸಿಡಿಲು‌ ಬಡಿದು ಓರ್ವ ಯುವಕ‌‌ ಸಾವನ್ನಪ್ಪಿದ್ದು, ಹಾಗೂ ಎರಡು ಎತ್ತುಗಳು ಸಹ ಅಸು ನೀಗಿವೆ.

ಮೃತ ಯುವಕನನ್ನು ದ್ಯಾಮಣ್ಣ ಪುರದ (17) ಎಂದು ಗುರುತಿಸಲಾಗಿದೆ. ಮಳೆ ಬಂದ ವೇಳೆ ಹೊಲದಲ್ಲಿ ತಾಯಿಯೊಂದಿಗೆ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಸಿಡಿಲಿನ ಶಾಖದಿಂದ ಯುವಕನ ತಾಯಿ ಗಾಯಗೊಂಡಿದ್ದಾರೆ.

ಬನ್ನಿಕಟ್ಟಿ ಏರಿಯಾದಲ್ಲಿ ನಾಳೆ ಅರ್ಧ ದಿನ‌ ಕರೆಂಟ್ ಇರಲ್ಲ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ನಗರದ ಎಫ್-9 ಬನ್ನಿಕಟ್ಟಿ ಫೀಡರ್‌ಗೆ ಒಳಪಡುವ ಏರಿಯಾಗಳಲ್ಲಿ ವಿದ್ಯುತ್ ಕಾಮಗಾರಿಗಳ ತುರ್ತು ಕೆಲಸ ನಡೆಯುತ್ತಿರುವ ಹಿನ್ನಲೆ ಜು. 07 ರಂದು ಬೆಳಿಗ್ಗೆ 09 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.
ಬನ್ನಿಕಟ್ಟಿ ಫೀಡರ್‌ಗೆ ಒಳಪಡುವ ತಾಲ್ಲೂಕ ಪಂಚಾಯತ್ ಕಾಂಪ್ಲೆಕ್ಸ್, ಅಶೋಕ್ ಸರ್ಕಲ್, ಜವಾಹರ ರಸ್ತೆ, ದಿವಟರ್ ಸರ್ಕಲ್, ಕೊಪ್ಪಳ ಪೊಲೀಸ್ ಠಾಣೆ, ಪದಕಿ ಲೇಔಟ್, ಟ್ರಿನಿಟಿ ಶಾಲೆ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಜು. 07 ರಂದು ಬೆಳಿಗ್ಗೆ 09 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ದುರಸ್ತಿ ಕಾಮಗಾರಿ ಮುಗಿದ ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಗ್ರಾಹಕರು ಯಾವುದೇ ವಿದ್ಯುತ್ ದುರಸ್ಥಿ ಕಾರ್ಯಗಳಲ್ಲಿ ತೊಡಗದೆ ಸಹಕರಿಸಬೇಕು. ಒಂದು ವೇಳೆ ವಿದ್ಯುತ್ ಅವಘಡ ಸಂಭವಿಸಿದಲ್ಲಿ ಕಂಪನಿಯು ಜವಾಬ್ದಾರಿಯಾಗಿರುವುದಿಲ್ಲ ಎಂದು ಜೆಸ್ಕಾಂ ಕೊಪ್ಪಳ ಕಾರ್ಯ ಮತ್ತು ಪಾಲನಾ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಟ್ರಾನ್ಸ್‌ಮೀಟರ್ ಏರಿ ನೇಣು ಬಿಗಿದುಕೊಂಡ ಯುವಕ!

ವಿಜಯಸಾಕ್ಷಿ ಸುದ್ದಿ, ಕೊಪ್ಪಳ


ನಗರದ ಗದಗ ರಸ್ತೆಯ ಸಿಮೆಂಟ್ ಫ್ಯಾಕ್ಟರಿ ಪಕ್ಕದಲ್ಲಿರುವ ಟ್ರಾನ್ಸ್‌ಮೀಟರ್‌ ಏರಿ ಯುವಕನೊಬ್ಬ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ನೇತಾಡುವ ಸ್ಥಿತಿ ನೋಡಿದರೆ ಮಂಗಳವಾರ ನಸುಕಿನ ಜಾವ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಯುವಕನ ಹೆಸರು ಮತ್ತಿತರ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. ಕೊಪ್ಪಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅಪಘಾತದಲ್ಲಿ ಗಾಯಗೊಂಡು ಒದ್ದಾಡುತ್ತಿದ್ದ ಯುವಕ; ಕರ್ತವ್ಯ ಪ್ರಜ್ಞೆ ಮೆರೆದ ಸಿಪಿಐ ವಿಕಾಸ್ ಲಮಾಣಿ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಸೋಮವಾರ ಲಕ್ಷ್ಮೇಶ್ವರ ತಾಲೂಕಿನ ಗೊಜನೂರ ಮಾರ್ಗವಾಗಿ ಗದಗ ಜಿಲ್ಲಾ ಕೇಂದ್ರಕ್ಕೆ ತೆರಳುತ್ತಿದ್ದಂತ ಶಿರಹಟ್ಟಿ ಸಿಪಿಐ ವಿಕಾಸ್ ಲಮಾಣಿ ಅವರು ಮಾರ್ಗ ಮಧ್ಯೆ ಬೈಕ್ ಸ್ಕಿಡ್ಡಾಗಿ ಬಿದ್ದು ರಕ್ತ ಸಿಕ್ತವಾಗಿ ನರಳಾಡುತ್ತಿದ್ದ ಯುವಕನನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.

ಗೊಜನೂರು ಗ್ರಾಮದ ಬಳಿ ನಿಯಂತ್ರಣ ಕಳೆದುಕೊಂಡ ಬೈಕ್ ಸವಾರನೊಬ್ಬ ರಸ್ತೆ ಪಕ್ಕದಲ್ಲಿ ಒದ್ದಾಡುತ್ತಿದ್ದ. ಇದನ್ನು ಗಮನಿಸಿದ ಸಿಪಿಐ ವಿಕಾಸ ಲಮಾಣಿ ತಮ್ಮ ವಾಹನದಲ್ಲಿ ಇದ್ದ ಫಸ್ಟ್ ಎಡ್ ನಿಂದ ಪ್ರಥಮ ಚಿಕಿತ್ಸೆ ನೀಡಿದರು. ಅಷ್ಟೇ ಅಲ್ಲ 108 ಆಂಬುಲೆನ್ಸ್ ಗೆ ಕರೆ ಮಾಡಿ ವಾಹನ ಬರುವವರೆಗೂ ಸ್ಥಳದಲ್ಲಿಯೇ ಇದ್ದು ಗದಗ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಜಿಮ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟು ಮಾನವೀಯತೆ ಮೆರೆದರು. ಗಾಯಗೊಂಡಾತನು ಲಕ್ಕುಂಡಿ ಗ್ರಾಮದ ಯುವಕ ಎನ್ನಲಾಗಿದೆ.

ಶಿರಹಟ್ಟಿ ಠಾಣೆಯ ಸಿಪಿಐ ವಿಕಾಸ್ ಲಮಾಣಿ ಅವರ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ತಮ್ಮ ಹೊಲಸನ್ನು ನಮ್ಮ ಮೇಲೆ ಎರಚುವ ಕೆಲಸ ಮಾಡುತ್ತಿದೆ ಬಿಜೆಪಿ: ತಂಗಡಗಿ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಬಿಜೆಪಿ ತಮ್ಮಲ್ಲಿರುವ ಹೊಲಸನ್ನು ಕಾಂಗ್ರೆಸ್ ಮೇಲೆ ಎರಚುವ ಕೆಲಸಕ್ಕೆ ಮುಂದಾಗಿದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಗುಡುಗಿದರು‌.

ಕೊಪ್ಪಳದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಕಾಂಗ್ರೆಸ್ ಕೂಡ ಬಿಎಸ್ ವೈ ಎಂಜಲು ತಿನ್ನುತ್ತಿದೆ ಎಂಬ ಬಸನಗೌಡ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಸನಗೌಡ ತಮ್ಮ ಪಕ್ಷದ ಹೊಲಸನ್ನು ನಮ್ಮ ಮೇಲೆ ಎಸೆಯುತ್ತಿದ್ದಾರೆ. ಬಿಜೆಪಿ ಮುಖಂಡರು ಮೊದಲು ಇಬ್ಬರಲ್ಲಿ ಒಬ್ಬರ ವಿರುದ್ಧ ಕ್ರಮ ಕೈಗೊಳ್ಳಲಿ. ಸಿಎಂ ಯಡ್ಯೂರಪ್ಪ ಅವರನ್ನು ಕೆಳಗಿಳಿಸಲಿ ಅಥವಾ ಯತ್ನಾಳರನ್ನು ಉಚ್ಚಾಟನೆ ಮಾಡಲಿ ಎಂದು ಕಿಡಿ ಕಾರಿದರು.

ಕಾಂಗ್ರೆಸ್ ಯಾರ ಜೊತೆಯೂ ಹೊಂದಾಣಿಕೆ ರಾಜಕಾರಣ ಮಾಡುತ್ತಿಲ್ಲ.
ಹೊಂದಾಣಿಕೆ ರಾಜಕಾರಣ ಮಾಡಿದ್ದರೆ ಡಿಕೆಶಿ ಜೈಲಿಗೆ ಹೋಗುತ್ತಿರಲಿಲ್ಲ. ನಳೀನ್ ಕುಮಾರ ಕಟೀಲರಿಗೆ ತಾಕತ್ತಿದ್ದರೆ ಇಬ್ಬರಲ್ಲಿ ಒಬ್ಬರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶ್ರೀರಾಮುಲು ಪಿಎ ಅರೆಸ್ಟ್ ವಿಚಾರವಾಗಿ ಮಾತನಾಡಿದ ಅವರು, ಇದು ಕಳ್ಳರ ಸಂತೆ, ಯಾರು ದೊಡ್ಡ ಕಳ್ಳ, ಯಾರು ಸಣ್ಣ ಕಳ್ಳ ಎಂಬುದು ಗೊತ್ತಾಗಬೇಕಿದೆ

ಸರ್ಕಾರ ಕೊರೊನದಿಂದ ಮೃತಪಟ್ಟವರ ಬಗ್ಗೆ‌ ತಪ್ಪು ಲೆಕ್ಕ ನೀಡುತ್ತಿದೆ. ಇದರ ವಿರುದ್ಧ ಕಾಂಗ್ರೆಸ್ ಹೋರಾಟಕ್ಕೆ ಸಿದ್ಧವಾಗಿದೆ.
ಪೆಟ್ರೋಲ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧವೂ ಹೋರಾಟ ನಡೆಯಲಿದೆ. ದೇಶಾದ್ಯಂತ ಎಲ್ಲ ವಿಧಾನಸಭೆ ಕ್ಷೇತ್ರದಲ್ಲಿ ಸೈಕಲ್ ರ‌್ಯಾಲಿ ನಡೆಯಲಿದೆ ಎಂದು ಅವರು ತಿಳಿಸಿದರು.

ಕೊಪ್ಪಳ ಜಿಲ್ಲೆಯಲ್ಲಿ ಮಟ್ಕಾ, ಇಸ್ಪೀಟ್ ನಿರಂತರ ನಡೆಯುತ್ತಿದೆ. ಇದರ ವಿರುದ್ಧ ಎಸ್ಪಿ,‌ ಡಿಸಿ ಮೌನವಾಗಿದ್ದಾರೆ. ಜಿಲ್ಲಾ ಮಂತ್ರಿಗಳೂ ಇದರಲ್ಲಿ ಶಾಮೀಲಾಗಿರುವ ಅನುಮಾನ ಇದೆ. ಮಟ್ಕಾ, ಮರಳು ಮಾಫಿಯಾದಲ್ಲಿ ಕನಕಗಿರಿ ಶಾಸಕರೂ ಭಾಗಿಯಾಗಿದ್ದಾರೆ ಎಂಬ ಅನುಮಾನ ಇದೆ. ಇಡೀ ಜಿಲ್ಲೆಯಲ್ಲಿ ಪೊಲೀಸ್ ಠಾಣೆಗಳು ಬಿಜೆಪಿ ಕಚೇರಿ ಆಗಿವೆ. ಬಿಜೆಪಿ ಕಾರ್ಯಕರ್ತರು ಅವರಿವರ ಮಾಮೂಲಿ ‌ಫಿಕ್ಸ್ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಗ್ರಾ.ಪಂ. ಪಕ್ಕದಲ್ಲೇ ಅನ್ನಭಾಗ್ಯ ಅಕ್ಕಿ ಅಕ್ರಮ ಸಂಗ್ರಹ; ಲಕ್ಷಾಂತರ ರೂ. ಮೌಲ್ಯದ ಅಕ್ಕಿ ಜಪ್ತಿ

ವಿಜಯಸಾಕ್ಷಿ ಸುದ್ದಿ, ಗದಗ

ಗ್ರಾಮ ಪಂಚಾಯತಿ ಕಾರ್ಯಾಲಯದ ಪಕ್ಕದಲ್ಲೇ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಂಗ್ರಹಿಸಿದ್ದ ಅಂಗಡಿಯೊಂದರ ಮೇಲೆ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಲಕ್ಷಾಂತರ ರೂ. ಬೆಲೆ ಬಾಳುವ ಅಕ್ಕಿ ವಶಪಡಿಸಿಕೊಂಡ ಘಟನೆ ಜಿಲ್ಲೆಯ ಹೊಳೆಆಲೂರು ಗ್ರಾಮದಲ್ಲಿ ನಡೆದಿದೆ.

ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದ ಸರಕಾರಿ ಆಸ್ಪತ್ರೆ ಬಳಿಯ ನಿವಾಸಿ, ಕಾಳು ಕಡಿ‌ ವ್ಯಾಪಾರಿ ಕುಮಾರಸ್ವಾಮಿ ಶಿವಯ್ಯ ವಸ್ತ್ರದ ಎಂಬಾತನೇ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿದ್ದ.

ಖಚಿತ ಮಾಹಿತಿ ಆಧಾರದ ಮೇಲೆ ಪುಡ್ ಇನ್ಸ್‌ಪೆಕ್ಟರ್ ಮಂಜುನಾಥ್ ತಳ್ಳಿಹಾಳ ಹಾಗೂ ಸಿಬ್ಬಂದಿ ಕುಮಾರಸ್ವಾಮಿ ವಸ್ತ್ರದನ ಅಂಗಡಿಯ ಮೇಲೆ ದಾಳಿ ಮಾಡಿದಾಗ 1ಲಕ್ಷ 30 ಸಾವಿರ ಬೆಲೆ ಬಾಳುವ 45 ಕ್ವಿಂಟಾಲ್ ಅಕ್ಕಿ ಸಿಕ್ಕಿ ಬಿದ್ದಿದೆ. ಆರೋಪಿ ಕುಮಾರಸ್ವಾಮಿ ವಸ್ತ್ರದ ವಿರುದ್ಧ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಳು ಕಡಿ ವ್ಯಾಪಾರದ ನೆಪದಲ್ಲಿ ಅನ್ನಭಾಗ್ಯ ಯೋಜನೆಯಲ್ಲಿ ಸರಕಾರ ಹಂಚಿಕೆ ಮಾಡುವ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ, ದೊಡ್ಡ ಬೆಲೆಗೆ ಬೇರೆ ಕಡೆ ಸಾಗಾಟ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಜುಲೈ 19 ರವರೆಗೂ ಗದಗ ಜಿಲ್ಲೆಯಲ್ಲಿ ನಿಷೇದಾಜ್ಞೆ

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಾದ್ಯಂತ ಕೋವಿಡ್-19 ವೈರಸ್ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ದಂಡ ಪ್ರಕ್ರಿಯೆ ಸಂಹಿತೆ 1973 , ಸಾಂಕ್ರಾಮಿಕ  ರೋಗ ಕಾಯ್ದೆ 1897  ದಿ ಕರ್ನಾಟಕ ಎಪಿಡಮಿಕ್ ಡಿಸೀಸ್ ಕೋವಿಡ್-19 ರೆಗ್ಯುಲೇಷನ್ 2020 ಹಾಗೂ ವಿಪತ್ತು ನಿರ್ವಹಣಾ  ಕಾಯ್ದೆ 2005 ರ ಪ್ರಕಾರ ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಮುಖಗವಸುಗಳನ್ನು ಧರಿಸುವಿಕೆ, ಕೈಗಳನ್ನು ಶುಚಿಯಾಗಿಡುವಿಕೆ, ಮತ್ತು ದೈಹಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.

ಇದನ್ನೂ ಓದಿ ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಮುಂಜಾಗ್ರತೆ ಪಾಲಿಸಿ; ಡಿಸಿ

ಸರ್ಕಾರದ ಹೊರಡಿಸಿದ ಜುಲೈ 3 ಆದೇಶದಲ್ಲಿ ಅವಕಾಶ ನೀಡಿದ ಚಟುವಟಿಕೆಗಳಿಗೆ ಅನುಮತಿ ನೀಡಿದೆ. ಆದೇಶದಲ್ಲಿ ಹೊರಡಿಸಿರುವ ಷರತ್ತುಗಳಿಗೆ ಒಳಪಟ್ಟು  ಮತ್ತು ಅವುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಸಲುವಾಗಿ ಜುಲೈ 5 ರ ಬೆಳಗಿನ 6 ಗಂಟೆಯಿಂದ ಜುಲೈ 19 ಬೆಳಗಿನ 6 ಗಂಟೆಯವರೆಗೆ ಜಿಲ್ಲಾದ್ಯಂತ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಮುಂಜಾಗ್ರತೆ ಪಾಲಿಸಿ; ಡಿಸಿ

ಮುಖಗವಸು ಧರಿಸದಿದ್ದರೆ ಅಂತಹವರ ವಿರುದ್ಧ ನಗರ ಪಾಲಿಕೆ ಪ್ರದೇಶಗಳಲ್ಲಿ ರೂ.250 ಮತ್ತು ಇನ್ನಿತರ ಪ್ರದೇಶಗಳಲ್ಲಿ  ರೂ.100  ದಂಡವನ್ನು ವಿಧಿಸಲಾಗುವುದು ಹಾಗೂ ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 188 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಜಿಲ್ಲಾ, ತಾಲೂಕು ಪಂಚಾಯತಿ ಮೀಸಲಾತಿ; ಸಚಿವರಿಂದ ಅಹಿಂದ ವರ್ಗಕ್ಕೆ ಅನ್ಯಾಯ

ವಿಜಯಸಾಕ್ಷಿ ಸುದ್ದಿ, ಗದಗ

ರಾಜ್ಯ ಸರಕಾರದಿಂದ ಜಿಲ್ಲೆಯ ವಿವಿಧ
ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಕ್ಷೇತ್ರಗಳಿಗೆ ಘೋಷಣೆ ಮಾಡಿರುವ ಮೀಸಲಾತಿಯಲ್ಲಿ ಅಹಿಂದ ವರ್ಗಕ್ಕೆ ಅನ್ಯಾಯವಾಗಿದ್ದು, ಇದರ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲರ ಕೈವಾಡವಿದೆ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಸಂಯೋಜಕ ರಾಜು ಪೆಂಡಾರ ಆರೋಪಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲಾ ಪಂಚಾಯತಿಯ ಕೆಲ ಕ್ಷೇತ್ರಗಳಲ್ಲಿ ಮೀಸಲಾತಿ ಘೋಷಣೆಯಲ್ಲಿ ತಾರತಮ್ಯ ಮಾಡಲಾಗಿದೆ. ಲಕ್ಕುಂಡಿ, ಸೊರಟೂರು ಕ್ಷೇತ್ರ, ಕೋಟುಮಚಗಿ, ಕದಾಂಪೂರ, ಅಡವಿಸೋಮಾಪೂರ, ಹುಯಿಲಗೋಳ, ತಾಲೂಕು ಪಂಚಾಯತಿ ಕ್ಷೇತ್ರಗಳ ಮೀಸಲಾತಿ ಘೋಷಣೆಯಲ್ಲಿ ಅಹಿಂದ ವರ್ಗಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಪೆಂಡಾರ ದೂರಿದ್ದಾರೆ.

ಸಚಿವ ಸಿ ಸಿ ಪಾಟೀಲರು ಅಧಿಕಾರ ದುರುಪಯೋಗ ಮಾಡಿಕೊಂಡು ತಮಗೆ ಬೇಕಾದ ಹಾಗೆ ಮೀಸಲಾತಿ ಘೋಷಣೆ ಮಾಡಿಸಿದ್ದಾರೆ ಎಂದು ರಾಜು ಪೆಂಡಾರ ಆರೋಪಿಸಿದ್ದಾರೆ.

ಸಿಎಂ ಬದಲಾವಣೆ, ದಲಿತ ಸಿಎಂ ಮಾತೇ ಬೇಡ: ಕಾರಜೋಳ

-ಕಾಂಗ್ರೆಸ್ ವಿಸರ್ಜನೆ ಆಗುವ ಕಾಲ ಸನ್ನೀಹಿತ

-ಮುಂದಿನ ಎರಡು ವರ್ಷವೂ ಯಡಿಯೂರಪ್ಪ ಅವರೇ ಸಿಎಂ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಬಿಜೆಪಿಯಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಮಾತೇ ಇಲ್ಲ. ಮುಂದಿನ ಎರಡೂ ವರ್ಷವೂ ಯಡಿಯೂರಪ್ಪ ಅವರೇ ಸಿಎಂ. ದಲಿತ ಸಿಎಂ ಪ್ರಶ್ನೆ ಈಗ ಬೇಡ. ಯಡಿಯೂರಪ್ಪ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸಿ ಗೆದ್ದಾಗ ಕೇಳಿ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಎಂಬುದು ಪಕ್ಷವೇ ಅಲ್ಲ. ಸ್ವಾತಂತ್ರ್ಯಕ್ಕಾಗಿ ಕಟ್ಟಿದ್ದ ಸಂಘಟನೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಕಾಂಗ್ರೆಸ್ ಸಂಘಟನೆ ವಿಸರ್ಜಿಸುವಂತೆ ಗಾಂಧೀಜಿ ಹೇಳಿದ್ದರು. ಈಗ ಕಾಂಗ್ರೆಸ್ ವಿಸರ್ಜಿಸುವ ಕಾಲ ಸನ್ನೀಹಿತವಾಗಿದೆ ಎಂದು ಅವರು ಲೇವಡಿ ಮಾಡಿದರು.

ದಲಿತರು, ಅಲ್ಪಸಂಖ್ಯಾತರಯ ಹಾಗೂ ಹಿಂದುಳಿದ ವರ್ಗದವರನ್ನು ಕಾಂಗ್ರೆಸ್ ವೋಟ್ ಬ್ಯಾಂಕ್ ಮಾಡಿಕೊಂಡು ದೇಶದಲ್ಲಿ 60 ವರ್ಷ ಆಳ್ವಿಕೆ ಮಾಡಿದರು. ಆದರೆ ಅಭಿವೃದ್ಧಿ ಮಾತ್ರ ಶೂನ್ಯವಾಗಿತ್ತು. ಈಗ ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರು ವಿದ್ಯಾವಂತರಾಗಿದ್ದಾರೆ. ಅದಕ್ಕಾಗಿ ಕಳೆದೆರಡು ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದ ದೂರವಾಗಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ದೇಶದಲ್ಲಿ ಅನಾಥಸ್ಥಿತಿ ಅನುಭವಿಸುತ್ತಿದೆ. ಯಾವ ಸಂದರ್ಭದಲ್ಲೂ ದೇಶದಲ್ಲಿ ಆಡಳಿತಕ್ಕೆ ಬರುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ. ಶೀಘ್ರವೇ ಕಾಂಗ್ರೆಸ್ ದೇಶದಿಂದ ತೊಲಗುವ ಸಮಯ ಹತ್ತಿರ ಬಂದಿದೆ ಎಂದು ವ್ಯಂಗ್ಯವಾಡಿದರು.

ಈ ಸಂದರ್ಭದಲ್ಲಿ ಶಾಸಕ ಅಮರೇಗೌಡ ಬಯ್ಯಾಪುರ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ ಮತ್ತಿತರರು ಇದ್ದರು.

ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಮುಂಜಾಗ್ರತೆ ಪಾಲಿಸಿ; ಡಿಸಿ

ವಿಜಯಸಾಕ್ಷಿ ಸುದ್ದಿ, ಗದಗ

ಕೋವಿಡ್-19 ನಿಯಂತ್ರಣ ತಾಂತ್ರಿಕ ಸಲಹೆಗಳನ್ನು ಗಮನಿಸಿ ಸಚಿವ ಸಂಪುಟ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ದಿನಾಂಕ: 05-07-2021 ರಂದು ಬೆಳಿಗ್ಗೆ 6 ಗಂಟೆಯಿಂದ ದಿನಾಂಕ: 19-07-2021 ಬೆಳಿಗ್ಗೆ 6 ಗಂಟೆಯವರೆಗೆ ಜಾರಿಗೆ ಬರುವಂತೆ ಈ ಕೆಳ ಕಾಣಿಸಿದ ಸಡಿಲಿಕೆಗಳು/ನಿರ್ಬಂಧಗಳನ್ನು ಸರ್ಕಾರ ಜಾರಿಗೊಳಿಸಿದೆ. ಜಿಲ್ಲೆಯಲ್ಲಿ ಇವುಗಳು ಯಥಾವತ್ತಾಗಿ ಜಾರಿಯಲ್ಲಿರುತ್ತವೆ.

ಸರ್ಕಾರಿ/ಖಾಸಗಿ ಕಛೇರಿಗಳು ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳು ಶೇ. 100 ರಷ್ಟು ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ.

ಮಾಲ್ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.

ಮೆಟ್ರೋ ಸೇರಿದಂತೆ ಸಾರ್ವಜನಿಕ ಸಾರಿಗೆ ವಾಹನಗಳ ಆಸನಗಳ ಸಾಮರ್ಥ್ಯಕ್ಕನುಗುಣವಾಗಿ ಶೇ. 100 ರಷ್ಟು ಪ್ರಮಾಣಿಕರೊಂದಿಗೆ ಸಂಚರಿಸಲು ಅವಕಾಶ ನೀಡಲಾಗಿದೆ.

ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಸೇವಾ ಕಾರ್ಯ, ಇತರೆ ಕಾರ್ಯಗಳಿಗೆ ಅವಕಾಶವಿಲ್ಲ.

ಮದುವೆ ಹಾಗೂ ಇನ್ನಿತರೆ ಕೌಟುಂಬಿಕ ಶುಭ ಸಮಾರಂಭಗಳಿಗೆ 100 ಜನರೊಂದಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ.

ಅಂತ್ಯ ಸಂಸ್ಕಾರಕ್ಕೆ 20 ಸದಸ್ಯರು ಭಾಗವಹಿಸಲು ಅವಕಾಶ ನೀಡಲಾಗಿದೆ.

ಈಜುಕೊಳಗಳಲ್ಲಿ ಮತ್ತು ಕ್ರೀಡಾ ಸಂಕೀರ್ಣಗಳಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಅವಕಾಶ ನೀಡಲಾಗಿದೆ. ವೀಕ್ಷಕರಿಗೆ ಅವಕಾಶವಿಲ್ಲ.

ಬಾರಗಳು ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಪಬ್ ಗಳು ಕಾರ್ಯನಿರ್ವಹಿಸಲು ಅವಕಾಶವಿಲ್ಲ.

ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುವುದಿಲ್ಲ.

ಸಾಮಾಜಿಕ, ಧಾರ್ಮಿಕ, ಮತ್ತು ರಾಜಕೀಯ ಸಭೆ ಸಮಾರಂಭಗಳಿಗೆ ಹಾಗೂ ಇತರೆ ಸಮಾರಂಭಗಳಿಗೆ ಅವಕಾಶವಿಲ್ಲ.

ಚಿತ್ರಮಂದಿರಗಳು ಕಾರ್ಯನಿರ್ವಹಣೆಗೆ ಅವಕಾಶವಿಲ್ಲ.
ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯಲು ಪ್ರತ್ಯಕ ಆದೇಶ ಸರ್ಕಾರ ಹೊರಡಿಸುವವರೆಗೆ ತೆರೆಯಲು ಅವಕಾಶ ಇರುವುದಿಲ್ಲ.

ಕೆಲವು ಚಟುವಟಿಕೆಗಳನ್ನು ಹೊರತುಪಡಿಸಿ, ಉಳಿದಂತೆ ಅಗತ್ಯ ಆರ್ಥಿಕ ಚಟುವಟಿಕೆಗಳಿಗೆ ಹಾಗೂ ಕೃಷಿ ಚಟುವಟಿಕೆ ಕೈಗೊಳ್ಳಲು ಅವಕಾಶವಿದೆ.

ಸರ್ಕಾರ ಅನುಮತಿಸಲಾದ ಚಟುವಟಿಕೆ ಕೈಗೊಳ್ಳುವಲ್ಲಿ ಕೋವಿಡ್ ಮಾರ್ಗಸೂಚಿಗಳ ಪಾಲನೆ ಕಡ್ಡಾಯವಾಗಿದೆ.
ಕೊರೋನಾ ಕರ್ಫ್ಯೂ (ನೈರ್ಟ್ ಕರ್ಫ್ಯೂ) ರಾತ್ರಿ 9.00 ರಿಂದ ಬೆಳಿಗ್ಗೆ 5.00 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.

ಕೋವಿಡ್-19 ನಿಯಂತ್ರಿಸುವ ದೃಷ್ಟಿಯಿಂದ ಸಾರ್ವಜನಿಕರು ನಿಯಂತ್ರಣ ಕ್ರಮಗಳಾದ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ವೈಯಕ್ತಿಕ ಮತ್ತು ಸಾಮಾಜಿಕ ಸ್ವಚ್ಛತೆ ಕಡೆಗೆ ಗಮನ ಹರಿಸಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲು ವಿನಂತಿ.

ಜಿಲ್ಲೆಯಲ್ಲಿ ಸೋಂಕು ನಿಯಂತ್ರಣದಲ್ಲಿದ್ದರು ಕೂಡಾ ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರಬರದೆ ತೀರಾ ಅಗತ್ಯ ಸಂದರ್ಭಗಳಲ್ಲಿ ಮಾತ್ರ ಹೊರಬರಬೇಕು. ಜಿಲ್ಲೆಯಲ್ಲಿ ಸೋಂಕು ಹರಡದಂತೆ ನಿಯಂತ್ರಿಸಲು ಸಾರ್ವಜನಿಕರು ಸ್ವಯಂ ಮುಂಜಾಗೃತಾ ಕ್ರಮಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ತಿಳಿಸಿದ್ದಾರೆ.

error: Content is protected !!