Home Blog Page 3082

ಕಾಂಗ್ರೆಸ್‌ನದ್ದು ರೈತ ವಿರೋಧಿ ಕೆಲಸ: ಕೇಂದ್ರ ಸಚಿವ ಸದಾನಂದಗೌಡ

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ

ದೇಶದಲ್ಲಿ ರೈತರ ಪರವಾಗಿರುವ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದ್ದರೂ, ವಿರೋಧಿಗಳು ರೈತರನ್ನು ಉಯಿಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ರೈತರ ಮುಖವಾಡ ಹಾಕಿಕೊಂಡು ಕಾರ್ಯಾಚರಣೆ ಮಾಡುತ್ತಿರುವುದು ರೈತ ವಿರೋಧಿಯಾಗಿದೆ. ಪಂಜಾಬ್‌ನಲ್ಲಿರುವ ಕಾಂಗ್ರೆಸ್ ಸರ್ಕಾರ ರೈತರನ್ನು ಬೆಂಬಲಿಸಿ ಕಣಕ್ಕಿಳಿಸುತ್ತಿದೆ ಎಂದು ದೂರಿದರು.

ಸಚಿವ ಸಂಪುಟದ ಕುರಿತು ಪ್ರಕ್ರಿಯಿಸಿದ ಅವರು, ಸಂಪುಟ ರಚನೆ ಅಧಿಕಾರ ಮುಖ್ಯಮಂತ್ರಿಗಳಿಗೆ ಬಿಟ್ಟಿದ್ದು. ಬೇರೆ ಪಕ್ಷದಿಂದ ಕೆಲವರು ರಾಜೀನಾಮೆ ನೀಡಿ ಬಂದಿದ್ದಾರೆ. ಅವರಿಗೆ ಆದ್ಯತೆ ನೀಡಿದ್ದರಿಂದ ಪಕ್ಷದ ಕೆಲವರಿಗೆ ತೊಂದರೆಯಾಗಿದೆ.

ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ನಿತ್ಯವೂ ಮಾತನಾಡುವ ಚಾಳಿ ಇದೆ. ಇವ್ರೇ ಎಲ್ಲಾ ಮಾಡುತ್ತಿದ್ದರೆ, ಏಕೋಪಾದ್ಯಯ ಶಾಲೆಯ ಮುಖ್ಯೋಪಾದ್ಯಾಯರು ಆಗುತ್ತಿದ್ದರು ಎಂದು ವ್ಯಂಗ್ಯವಾಡಿದರು.

ಜೆಡಿಎಸ್ ಬಿಜೆಪಿ ಜೊತೆ ಕೈಜೋಡಿಸುತ್ತದೆ ಎಂಬುವುದು ಗೊತ್ತಿಲ್ಲ. ಆದರೆ, ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬಂದವರನ್ನು ಸೇರಿಸಿಕೊಳ್ಳುತ್ತೇವೆ. ಮೇಲ್ಮನೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ ಕಡಿಮೆ ಇರುವುದರಿಂದ ನಮ್ಮ ಜೊತೆ ಬರುತ್ತೇನೆ ಎಂದು ಹೇಳಿದ್ದು, ಜೆಡಿಎಸ್‌ಗೆ ಉಪ ಸಭಾಪತಿ, ಬಿಜೆಪಿಗೆ ಸಭಾಪತಿಯಾಗುವ ಒಪ್ಪಂದ ಆಗಬಹದು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಹೇಳಿದರು.

ಚಿರತೆ ದಾಳಿಯಿಂದ ಮೃತಪಟ್ಟ ಯುವಕನ ಸಂಬಂಧಿಕರ ಅಹೋರಾತ್ರಿ ಪ್ರತಿಭಟನೆ: ಜನರ ಆಗ್ರಹಕ್ಕೆ ಮಣಿದು ಸಚಿವ ಆನಂದ್ ಸಿಂಗ್ ಭೇಟಿ

ಪ್ರಮುಖಾಂಶಗಳು

-ಶಾಸಕ ಪರಣ್ಣ ಮುನವಳ್ಳಿಗೆ ತಟ್ಟಿದ ಪ್ರತಿಭಟನೆ ಬಿಸಿ

-10 ಲಕ್ಷ ರೂಪಾಯಿ ಪರಿಹಾರ ಘೋಷಣೆ

-ಸುಮಾರು 8 ಗಂಟೆಗಳ ಕಾಲದ ಪ್ರತಿಭಟನೆಯಿಂದ ಸಂಚಾರ ಅಸ್ತವ್ಯಸ್ತಮೃತ ಯುವಕನ ಕುಟುಂಬಸ್ಥರಿಗೆ ಸಚಿವರ ಸಾಂತ್ವನ

ವಿಜಯಸಾಕ್ಷಿ ಸುದ್ದಿ, ಗಂಗಾವತಿ:
ಕುರಿ ಮೇಯಿಸಲು ತೆರಳಿದ್ದ ಕುರಿಗಾಹಿ ಮೇಲೆ ದಾಳಿ ನಡೆಸಿ ಕೊಂದಿದ್ದ ಚಿರತೆ ಸೆರೆಗೆ ಆಗ್ರಹಿಸಿ ಶುಕ್ರವಾರ ರಾತ್ರಿಯಿಂದಲೂ ಕರಿಯಮ್ಮನಗಡ್ಡಿಯಲ್ಲಿ ತೀವ್ರ ಪ್ರತಿಭಟನೆ ನಡೆಯಿತು. ಜನರ ಆಕ್ರೋಶದಿಂದ ಬೆಚ್ಚಿ ಬಿದ್ದ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿತು. ಸುಮಾರು 8 ಗಂಟೆಗಳ ಕಾಲ ನಡೆದ ಪ್ರತಿಭಟನೆಯಿಂದ ಸಂಚಾರ ಅಸ್ತವ್ಯಸ್ತಗೊಂಡಿತು.

ಜಿಲ್ಲೆಯಲ್ಲಿ ಚಿರತೆ ದಾಳಿ ತಲ್ಲಣ ಮೂಡಿಸಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಇಬ್ಬರು ಜೀವ ತೊರೆದಿದ್ದಾರೆ. ಇಷ್ಟೆಲ್ಲ ಅವಘಡ ಸಂಭವಿಸಿದರೂ ಕೂಗಳತೆ ದೂರದಲ್ಲಿರುವ ಅರಣ್ಯ ಸಚಿವ ಆನಂದ್ ಸಿಂಗ್ ಭೇಟಿ ನೀಡಿರಲಿಲ್ಲ. ಹಾಗಾಗಿ ಸಚಿವರು ಸ್ಥಳಕ್ಕೆ ಬರಲೇಬೇಕೆಂದು ಬಿಗಿಪಟ್ಟು ಹಿಡಿದು ಸುತ್ತಮುತ್ತಲಿನ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಸಚಿವರು ಬೆಳಗ್ಗೆ ಬರುವುದಾಗಿ ಭರವಸೆ ನೀಡಿದರೂ ಮಧ್ಯಾಹ್ನವಾದರೂ ಬರಲಿಲ್ಲ. ‌ಸಚಿವರು ಸ್ಥಳಕ್ಕೆ ಬರುವವರೆಗೆ ಶವಸಂಸ್ಕಾರ ಮಾಡದಿರಲು ಕುಟುಂಬಸ್ಥರು ನಿರ್ಧರಿಸಿದರು.

ಕೊನೆಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಆಗಮಿಸಿದ ಅರಣ್ಯ ಸಚಿವ ಆನಂದಸಿಂಗ್ ಅವರಿಗೆ ಕರಿಯಮ್ಮಗಡ್ಡಿ, ವಿರೂಪಾಪೂರಗಡ್ಡಿ, ಸಾಣಾಪೂರ ಸುತ್ತಲಿನ ಗ್ರಾಮಸ್ಥರು ಮಹಿಳೆಯರು ಮುತ್ತಿಗೆ ಹಾಕಿ ಪ್ರತಿಭಟಿಸಿದ ಪ್ರಸಂಗ ಜರುಗಿತು.

ಕಳೆದ ಮೂರ್ನಾಲ್ಕು ತಿಂಗಳಿಂದ ಆನೆಗೊಂದಿ ಭಾಗದಲ್ಲಿ ಚಿರತೆಗಳು ಕರಡಿಗಳ ಹಾವಳಿ ಹೆಚ್ಚಾಗಿದೆ. ಈಗಾಗಲೇ ಚಿರತೆ ದಾಳಿಯಲ್ಲಿ ಇಬ್ಬರು ಯುವಕರು ಮೃತರಾಗಿದ್ದು ಹಲವರಿಗೆ ಗಾಯಗಳಾಗಿವೆ. ಕುರಿ ಆಡು ದನಗಳ ಮೇಲೆ ಚಿರತೆಗಳು ನಿರಂತರ ದಾಳಿ ನಡೆಸುತ್ತಿದ್ದು ಪಕ್ಕದಲ್ಲಿದ್ದರೂ ಅರಣ್ಯ ಸಚಿವರು ಆನೆಗೊಂದಿ ಭಾಗಕ್ಕೆ ಭೇಟಿ ನೀಡದೇ ನಿರ್ಲಕ್ಷ್ಯ ಮಾಡಲಾಗಿದೆ. ಆನೆಗೊಂದಿ ಸುತ್ತಲಿನ ಗುಡ್ಡಪ್ರದೇಶದಲ್ಲಿ ಜನರಿಗೆ ಅರಣ್ಯ ಇಲಾಖೆಯವರು ನಿರಂತರ ಕಿರುಕುಳ ನೀಡುತ್ತಿದ್ದಾರೆ. ಒಂದು ಕಡೆ ಪ್ರಾಣಿಗಳ ಕಾಟ ಇನ್ನೊಂದು ಕಡೆ ಅರಣ್ಯ ಇಲಾಖೆಯವರ ಕಾಟ ನಿರಂತರವಾಗಿದೆ ಎಂದು ಪ್ರತಿಭಟನಾನಿರತರು ಸಚಿವರಿಗೆ ದೂರಿದರು.

ಚಿರತೆ ಕರಡಿಗಳ ಬಗ್ಗೆ ಅರಣ್ಯ ಇಲಾಖೆಯವರಿಗೆ ಮೊಬೈಲ್ ಕರೆ ಮಾಡಿ ಮಾಹಿತಿ ನೀಡಿದರೂ ನಿರ್ಲಕ್ಷ್ಯ ಮಾಡುತ್ತಾರೆ. ಅಕ್ರಮ ಮರಳು ಗಣಿಗಾರಿಕೆ ಮಾಹಿತಿ ನೀಡಿದರೆ ಕ್ಷಣದಲ್ಲಿ ದಾಳಿ ಮಾಡುತ್ತಾರೆ. ಹಣಕ್ಕಾಗಿ ಜನರನ್ನು ಅರಣ್ಯ ಇಲಾಖೆಯವರು ಪೀಡಿಸುತ್ತಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಎಂಎಲ್ಸಿ ಎಚ್.ಶ್ರೀನಾಥ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ ಕಿಶೋರ ಪ್ರತಿಭಟನಾ ನಿರತರನ್ನು ಸಮಾಧಾನ ಮಾಡಿದರು.
ನಂತರ ಸಚಿವ ಆನಂದ್ ಸಿಂಗ್ ಮೃತದೇಹವಿದ್ದ ಸ್ಥಳಕ್ಕೆ ನಡೆದುಕೊಂಡು ಹೋಗಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಕುಟುಂಬಸ್ಥರ ಅಹವಾಲನ್ನು ಆಲಿಸಿದರು.

ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ ಕಿಶೋರ, ಎಸ್ಪಿ ಟಿ.ಶ್ರೀಧರ, ಡಿಎಫ್‍ಐ ಹರ್ಷಾಭಾನು, ಎಸಿ ನಾರಾಯಣರೆಡ್ಡಿ ಕನಕರೆಡ್ಡಿ, ತಹಸೀಲ್ದಾರ್ ಎಂ.ರೇಣುಕಾ, ಡಿಎಸ್‍ಪಿ ರುದ್ರೇಶ ಉಜ್ಜನಕೊಪ್ಪ,ತಾ.ಪಂ.ಸದಸ್ಯ ವೈ.ರಮೇಶ, ಗ್ರಾ.ಪಂ.ಸದಸ್ಯರಾದ ಕೆ.ನಾಗೇಶ, ರಘುವರ್ಮಾ, ಅಶೋಕ ಸೇರಿ ಗ್ರಾಮಸ್ಥರಿದ್ದರು.

ಆನೆಗೊಂದಿ ಭಾಗದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಳವಾಗಿದ್ದು ರಾಜ್ಯದ ವಿವಿಧೆಡೆ ಇತ್ತೀಚೆಗೆ ಜನ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ ಆನೆಗೊಂದಿ ಸುತ್ತಲಿನ ಪ್ರದೇಶದಲ್ಲಿ ಇಬ್ಬರು ಯುವಕರು ಚಿರತೆ ದಾಳಿಯಲ್ಲಿ ಮೃತರಾಗಿದ್ದಾರೆ. ಇವರ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 7.5 ಲಕ್ಷ ಹಾಗೂ ತಾವು ವೈಯಕ್ತಿಕವಾಗಿ 2.5 ಲಕ್ಷ ರೂ.ಒಟ್ಟು 10 ಲಕ್ಷ ರೂ.ಗಳನ್ನು ವಿತರಿಸಲಾಗುತ್ತದೆ ಎಂದು ಸಚಿವ ಆನಂದ್ ಸಿಂಗ್ ಘೋಷಿಸಿದರು.

ಈಗಾಗಲೇ ಚಿರತೆಯನ್ನು ಶೂಟೌಟ್ ಮಾಡಲು ಸರಕಾರ ಕಾನೂನು ತಜ್ಞರು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತರ ಜತೆ ಚರ್ಚೆ ನಡೆಸಿದ್ದು ಸೋಮವಾರ ಸಂಜೆಯೊಳಗೆ ಶೂಟೌಟ್ ಮಾಡಲು ಆದೇಶ ನೀಡುವ ಸಂದರ್ಭವಿದ್ದು ಜನರ ಜೀವ ಸಂರಕ್ಷಣೆ ಮಾಡಲು ಅಗತ್ಯ ಕ್ರಮ ಜರುಗಿಸಲಾಗುತ್ತದೆ. ಈಗಾಗಲೇ ಶಾಸಕ ಪರಣ್ಣ ಮುನವಳ್ಳಿ ಜತೆ ಚರ್ಚೆ ಮಾಡಿದ್ದು ಮೃತ ರಾಘವೇಂದ್ರ ಕುಟುಂಬದವರಿಗೆ ಸ್ಥಳೀಯವಾಗಿ ನೌಕರಿ ಕೊಡಿಸುವ ಕುರಿತು ಚಿಂತನೆ ಮಾಡಲಾಗಿದೆ ಎಂದು ಸಚಿವ ಆನಂದ್ ಸಿಂಗ್ ತಿಳಿಸಿದರು.


ಚಿರತೆಧಾಮ ಮಾಡುವ ಉದ್ದೇಶ ಇಲ್ಲ

ಆನೆಗೊಂದಿ ಭಾಗದಲ್ಲಿ ಚಿರತೆ ಧಾಮ ಮಾಡುವ ಯಾವುದೇ ಉದ್ದೇಶ ಸರಕಾರದ ಮುಂದೆ ಇಲ್ಲ. ಏಳುಗುಡ್ಡ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಕಾರಿಕೆ ಸ್ಪೋಟದಿಂದ ಚಿರತೆಗಳು, ಕರಡಿಗಳು ಅಂಜನಾದ್ರಿ ಬೆಟ್ಟದ ಸುತ್ತ ವಲಸೆ ಬಂದಿರಬಹುದು. ಆದ್ದರಿಂದ ಕೂಡಲೇ ಅಕ್ರಮ ಕಲ್ಲು ಗಣಿಗಾರಿಕೆ ನಿಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.


ಆನಂದಸಿಂಗ್ ಅರಣ್ಯ ಸಚಿವರು

ನನಗೀಗ ಎಪ್ಪತ್ತು, ಅಧಿಕಾರವೀಗ ಯುವಕರ ಸ್ವತ್ತು: ರಾಜಕೀಯ ನಿವೃತ್ತಿಯತ್ತ ಸಂಸದ ಕರಡಿ!

-ಮತದಾರರ ಆಶೋತ್ತರ ಈಡೇರಿಕೆಯತ್ತ ಗಮನವಿರಲಿ,-ಆಸೆ ಆಮೀಷಗಳಿಗೆ ಬಲಿಯಾಗಬೇಡಿ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:
ಹಳೇ ಬೇರು, ಹೊಸ ಚಿಗುರು ಎನ್ನುವ ಕಾಲಘಟ್ಟವಿದು. ನನಗೀಗ ಎಪ್ಪತ್ತು ವರ್ಷ ವಯಸ್ಸು. ಗ್ರಾಮ ಪಂಚಾಯತಿಗೆ ಚುನಾಯಿತರಾದವರೆಲ್ಲ ಯುವಕರಿದ್ದೀರಿ. ಅಧಿಕಾರ ಈಗೇನಿದ್ದರೂ ಯುವಕರ ಸ್ವತ್ತು. ನಿಮಗೆ ಸರಿಯಾದ ಮಾರ್ಗದರ್ಶನ ನೀಡಲು ನಾವು ಸಿದ್ಧರಿದ್ದೇವೆ. ಮತದಾರರ ವಿಶ್ವಾಸ ಉಳಿಸಿಕೊಂಡು ಎತ್ತರೆತ್ತರಕ್ಕೆ ಚುನಾಯಿತರು ಬೆಳೆಯಬೇಕು ಎಂದು ಸಂಸದ ಕರಡಿ ಸಂಗಣ್ಣ‌ ಕರೆ ನೀಡಿದರು.

ನಗರದ ಎಂಪಿ ಪ್ಯಾಲೇಸ್‌ನಲ್ಲಿ ಶನಿವಾರ ನಡೆದ ಗ್ರಾಮ ಪಂಚಾಯತ ಬಿಜೆಪಿ ಬೆಂಬಲಿತ ನೂತನ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಜಿಲ್ಲೆಯ ವಿವಿಧ ಗ್ರಾಮ‌ ಪಂಚಾಯಿತಿಗಳಿಗೆ ಹೊಸದಾಗಿ ಆಯ್ಕೆ ಯಾಗಿರುವ ಬಿಜೆಪಿ‌ ಬೆಂಬಲಿತ ಸದಸ್ಯರು ಯಾವುದೇ ಆಸೆ ಆಮೀಷಗಳಿಗೆ ಬಲಿಯಾಗದೇ, ಮತದಾರರ ಆಶೋತ್ತರ ಈಡೇರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಇಂದು ಎಲ್ಲೆಡೆ ಭ್ರಷ್ಟಾಚಾರ ಮಿತಿ‌ ಮೀರಿದೆ. ಅದಕ್ಕೂ ಅಂತ್ಯಕಾಲ ಇದ್ದೇ ಇರುತ್ತೆ. ಭ್ರಷ್ಟಾಚಾರದ ಆಡಳಿತದಿಂದ ಜನತೆಯ ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ. ಕಳಂಕರಹಿತ, ಜನಪರ ಕೆಲಸ ಸದಾ ನಮ್ಮನ್ನು ಬೆಳೆಸುತ್ತದೆ. ಗ್ರಾಮೀಣ ಭಾಗದ ಸರ್ವತೋಮುಖ ಅಭಿವೃದ್ಧಿಗಾಗಿ ಚುನಾಯಿತ ಗ್ರಾಮ ಪಂಚಾಯತಿ ಸದಸ್ಯರು ಶ್ರಮಿಸುವ ಮೂಲಕ ಗಾಂಧಿ ಕಂಡ ಕನಸನ್ನು ನನಸಾಗಿಸಬೇಕು ಎಂದು ಕಿವಿ ಮಾತು ಹೇಳಿದರು.

ಮನೆಗಳು ಸೇರಿದಂತೆ ಸರಕಾರದಿಂದ ಬರುವ ಯೋಜನೆಗಳನ್ನು ಬಡಜನರಿಗೆ ಮುಟ್ಟಿಸುವ ಕೆಲಸ ಮಾಡಿದರೆ ಅದಕ್ಕಿಂತ ಪುಣ್ಯದ ಕೆಲಸ ಬೇರೊಂದಿಲ್ಲ. ಇದು ನಮಗೆಲ್ಲ ಸಿಕ್ಕಿರುವ ಸದಾವಕಾಶ. ಸಿಎಂ ಯಡಿಯೂರಪ್ಪನವರು ಸೇರಿದಂತೆ ಇತರರು ಜಿಲ್ಲೆಗೆ ಆಗಮಿಸಲಿದ್ದಾರೆ. ಅವರು ನಮ್ಮ ಕೆಲಸ ನೋಡಿ ಬೆನ್ನು ತಟ್ಟಿ ಇತರರಿಗೆ ಮಾದರಿ ಎನ್ನುವಂತೆ ಕೆಲಸ ಮಾಡಬೇಕು ಎಂದು ಹುರಿದುಂಬಿಸಿದರು.

ಆತ್ಮನಿರ್ಭರ ಯೋಜನೆಯಡಿಯಲ್ಲಿ 25 ಸಾವಿರ ಜನರಿಗೆ ಉದ್ಯೋಗವಕಾಶ ಸಿಗಲಿದೆ. ಕೊಪ್ಪಳದ ಏತ ನೀರಾವರಿ, ಸಿಂಗಟಾಲೂರ ಏತನೀರಾವರಿ ಕುಂಠಿತವಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಸಂಬಂದಿಸಿದಂತೆ ನಮಗೆ ಸಾಕಷ್ಟು ಯೋಜನೆಗಳು, ಕನಸುಗಳಿವೆ. ಭ್ರಷ್ಟಾಚಾರ ಮಾಡಿದರೆ ಮುಂದೊಂದು ದಿನ ಅದು ಶಾಪವಾಗಿ ಕಾಡುತ್ತೆ. ಜನತಾ ಮನೆಗಳ ಕಾನ್ಸೆಪ್ಟ್‌ನ್ನು ನಿಮ್ಮೆಲ್ಲರ ಪರವಾಗಿ ಮಾಡುತ್ತೇವೆ. 8 ಸಾವಿರಕ್ಕೂ ಹೆಚ್ಚು ಮನೆಗಳ ನಿರ್ಮಾಣ ನನೆಗುದಿಗೆ ಬಿದ್ದಿದೆ. ಇವತ್ತು ನಾವು ಇರಬಹುದು, ನಾಳೆ ಇರಲಿಕ್ಕಿಲ್ಲ. ಆದರೆ ಅಭಿವೃದ್ಧಿ ಕೆಲಸಗಳು ಉಳಿಯುತ್ತವೆ ಎಂದು ಸ್ಫೂರ್ತಿ ತುಂಬಿದರು.

ಚುನಾಯಿತರಿಗೆ ಹಲವು ಸಂದರ್ಭಗಳಲ್ಲಿ ಹಣದ ಆಮೀಷ ನೀಡಲಾಗುತ್ತೆ. ನಮ್ಮ ಆಡಳಿತಾವಧಿಯಲ್ಲಿ ಹಣವೊಂದೇ ಮುಖ್ಯವಲ್ಲ. ಮುಂದಿನ ಅವಧಿಗೂ ಆಯ್ಕೆಯಾಗುವಂತೆ ಕೆಲಸ ಮಾಡಿದರೆ ಗ್ರಾಮ ಅಭಿವೃದ್ದಿಯಾಗುತ್ತೆ. ಎಲ್ಲರೂ ನಾಯಕತ್ವ ಗುಣವನ್ನು ರೂಢಿಸಿಕೊಳ್ಳಬೇಕು. ಕೊಪ್ಪಳ ತಾಲೂಕನ್ನು ಮಾದರಿ ತಾಲೂಕನ್ನಾಗಿ ಮಾಡುವ ಪ್ರತಿಜ್ಞೆ ಮಾಡೋಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಗುಳಗಣ್ಣವರ, ಅಮರೇಶ ಕರಡಿ, ಈಶಣ್ಣ ಮಾದಿನೂರ, ಲಕ್ಷ್ಮೀ ಕಂದಾರಿ, ಪ್ರದೀಪ ಹಿಟ್ನಾಳ, ಸಿದ್ದೇಶ್ ಬಸವರಾಜ್ ಭೋವಿ, ಕರಿಯಪ್ಪ ಮೇಟಿ ಸೇರಿದಂತೆ ಇತರರು ಮಾತನಾಡಿದರು.

ಕೊಪ್ಪಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಗೆದ್ದಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭಾಗವಹಿಸಿದ್ದರು. ನಗರಾಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷ ಮಹಾಂತೇಶ ಮಾಲಿಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಗಣೇಶ ಹೊರತಟ್ನಾಳ ಕಾರ್ಯಕ್ರಮ ನಿರ್ವಹಿಸಿದರು.

ಚುನಾವಣಾ ದ್ವೇಷಕ್ಕೆ ಅಡಿಕೆ ತೋಟ ನಾಶ

ವಿಜಯಸಾಕ್ಷಿ ಸುದ್ದಿ, ತುಮಕೂರು: ಗ್ರಾಮ ಪಂಚಾಯಿತಿ ಚುನಾವಣೆಯ ರಾಜಕೀಯ ದ್ವೇಷಕ್ಕೆ ನೂರಾರು ಅಡಿಕೆ ಮರಗಳು ಬೆಂಕಿಗಾಹುತಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಗ್ರಾಮಪಂಚಾಯತಿ ಚುನಾವಣೆಯ ಪ್ರಚಾರಕ್ಕೆ ಹೋದ ತಪ್ಪಿಗೆ ಗುಬ್ಬಿ ತಾಲೂಕಿನ ಸಿ ಎಸ್ ಪುರ ಹೋಬಳಿಯ ನೆಟ್ಟೆಗೆರೆ ಗೇಟ್ ಸಮೀಪ ಈ ಘಟನೆ ನಡೆದಿದೆ.

ನೆಟ್ಟೆಗೆರೆಯ ನಿವಾಸಿ ಮಾಯಣ್ಣಗೌಡ ಎಂಬುವರು ಪಂಚಾಯತಿ ಚುನಾವಣೆ ವೇಳೆ ಗಿರಿಯಮ್ಮ ಅನ್ನೋ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದು, ಇದನ್ನು ಸಹಿಸದೇ ವಿರೋಧಿ ಬಣದವರು ಈ ದುಶ್ಕೃತ್ಯ ಎಸಗಿದ್ದಾರೆ ಅಂತಾ ಆರೋಪಿಸಿದ್ದಾರೆ.

ತಡರಾತ್ರಿ ಸುಮಾರು 250ಕ್ಕೂ ಹೆಚ್ಚು ಅಡಿಕೆ ಮರಗಳಿಗೆ ಬೆಂಕಿ ಇಟ್ಟ ನಂತರ ಕಿಡಿಗೇಡಿಗಳು ಪರಾರಿಯಾಗಿದ್ದಾರೆ‌. ಬೆಳೆಯುವ ಹಂತದಲ್ಲಿದ್ದ ಅಡಿಕೆ ಗಿಡಗಳು, ಹನಿ ನೀರಾವರಿಯ ಪೈಪ್ ಗಳು, ಪಂಪ್ ಸೆಟ್ ಮೋಟಾರ್ ಗಳು ಬೆಂಕಿಗೆ ಆಹುತಿಯಾಗಿದ್ದು, ಸುಮಾರು 10 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎನ್ನಲಾಗಿದೆ.

ಕೊರೋನಾ ವಾರಿಯರ್ಸ್‌ ಗೆ ಪರಿಹಾರ ಕೊಡಲು ಸರ್ಕಾರ ಕುಂಟು ನೆಪ: ವರಲಕ್ಷ್ಮೀ ಆರೋಪ

0

ವಿಜಯಸಾಕ್ಷಿ ಸುದ್ದಿ, ಉಡುಪಿ

ಕೊರೋನಾ ಅವಧಿಯಿಂದ
ಇಲ್ಲಿಯ ತನಕ 27 ಜನ ಅಂಗನವಾಡಿ ಕಾರ್ಯಕರ್ತೆಯರು ಮೃತ ಪಟ್ಟಿದ್ದಾರೆ. ಆದರೆ, 26 ಮಂದಿಗೆ ರಾಜ್ಯ ಸರ್ಕಾರ ಪರಿಹಾರ ನೀಡದೆ ಕುಂಟು ನೆಪ ಹೇಳುತ್ತಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರ ಸಂಘದ ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಆಕ್ರೋಶ ವ್ಯಕ್ತಪಡಿಸಿದರು.

ಉಡುಪಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂಗನವಾಡಿ ಕಾರ್ಯಕರ್ತೆಯನ್ನು ಕೊರೋನಾ ವಾರಿಯರ್ ಎಂದು ಹೇಳಲಾಗುತ್ತಿದೆ. ಆದರೆ, ಸಾವನ್ನಪ್ಪಿರುವ ವಾರಿಯರ್ ಗಳಿಗೆ ಇನ್ನೂವರೆಗೂ ಪರಿಹಾರ ಸಿಕ್ಕಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ಬಿಸಿಯೂಟ ನೌಕರರಿಗೆ 2600 ರೂ. ಸಂಬಳ ಪಡೆಯುತ್ತಿದ್ದು,
ಸೆಪ್ಟೆಂಬರ್ ನಿಂದ ಸಂಬಳ ಕೊಟ್ಟಿಲ್ಲ. ನಾಲ್ಕು ತಿಂಗಳ ಸಂಬಳ ಬಾಕಿ ಉಳಿಸಿಕೊಂಡಿದೆ. ಎಲ್ಲ ಕೆಲಸಗಳನ್ನು ಮಾಡಿಸಿ ಅನ್ಯಾಯವೆಸಗಿದೆ ಎಂದು ದೂರಿದರು.

ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುವ ಭರವಸೆಯಷ್ಟೇ ಸಿಗುತ್ತಿದ್ದು, ಬೇಡಿಕೆ ಈಡೇರದಿದ್ದರೆ ಬಜೆಟ್ ಅಧಿವೇಶನ ಸಂದರ್ಭದಲ್ಲಿ ವಿಧಾನಸೌಧ ಚಲೋ ಹಮ್ಮಿಕೊಳ್ಳುತ್ತೇವೆ ಎಂದು ರಾಜ್ಯ ಸರ್ಕಾರವನ್ನು ವರಲಕ್ಷ್ಮೀ
ಎಚ್ಚರಿಸಿದರು.

ಬೈಕ್ ಗೆ ಸರಕಾರಿ ವಾಹನ ಡಿಕ್ಕಿ; ಸ್ಥಳದಲ್ಲೇ ಇಬ್ಬರ ದುರ್ಮರಣ

ವಿಜಯಸಾಕ್ಷಿ ಸುದ್ದಿ, ಹಾವೇರಿ

ಸರ್ಕಾರಿ ಅಧಿಕಾರಿಯೊಬ್ಬರ ಬೊಲೆರೋ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ
ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬ್ಯಾಡಗಿ ತಾಲ್ಲೂಕಿನ ಕದಮನಹಳ್ಳಿ ಗ್ರಾಮದ ಬಳಿ ನಡೆದಿದೆ.

ಹಾವೇರಿ ತಾಲ್ಲೂಕಿನ ಗಣಜೂರು ಗ್ರಾಮದ ಮಂಜು ಸೋಮನಕಟ್ಟಿ (37) ಹಾಗೂ ಬಸವರಾಜ್ ವಾಲ್ಮೀಕಿ (40) ಮೃತ ದುರ್ದೈವಿಗಳಾಗಿದ್ದಾರೆ.

ಮೃತರು ಹೊನ್ನತ್ತಿ ಮತ್ತು ಕದರಮಂಡಲಗಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು ವಾಪಸ್ಸು ಆಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಹಾವೇರಿಯಿಂದ ರಾಣೆಬೆನ್ನೂರು ಕಡೆ ಹೊರಟಿದ್ದ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಸರ್ಕಾರಿ ಬೊಲೆರೋ ವಾಹನ ವಾಹನ ಬೈಕ್ ಗೆ ಡಿಕ್ಕಿ ಹೊಡೆದಿದೆ.

ಬ್ಯಾಡಗಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿದ್ದಾರೆ.

ಡಿವೈಎಸ್‌ಪಿ ವಿದ್ಯಾನಂದ ನಾಯಕಗೆ ಮುಖ್ಯಮಂತ್ರಿಗಳ ಪದಕ

0

ವಿಜಯಸಾಕ್ಷಿ ಸುದ್ದಿ, ಗದಗ

ಸಶಸ್ತ್ರ ಮೀಸಲು ಪಡೆ (ಡಿಎಆರ್) ಡಿವೈಎಸ್‌ಪಿ ವಿದ್ಯಾನಂದ ನಾಯಕ ಅವರು 2019ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆಯಾಗಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸಾಧನೆಗೈದಿರುವ ಬಗ್ಗೆ ಇಲಾಖೆಯ ಗುಪ್ತ ವರದಿ (ಎಸಿಆರ್) ಆಧರಿಸಿ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪಿಡಬ್ಲ್ಯೂಡಿ ಇಂಜನೀಯರ್ ಆಗಿದ್ದ ವೆಂಕಟಪತಿ ನಾಯಕ ಹಾಗೂ ನಿವೃತ್ತ ಶಿಕ್ಷಕಿ ಸಾವಿತ್ರಿ ನಾಯಕ ದಂಪತಿ ಪುತ್ರರಾಗಿರುವ ಗೋಕರ್ಣ ಮೂಲದ ಡಿವೈಎಸ್‌ಪಿ ವಿದ್ಯಾನಂದ ನಾಯಕ ಅವರು, 14 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

2006ರಲ್ಲಿ ಕಲಬುರಗಿ ಜಿಲ್ಲೆಯ ಮೂಲಕ ಪೊಲೀಸ್ ಸೇವೆಗೆ ಸೇರ್ಪಡೆಗೊಂಡಿರುವ ಅವರು, ನಂತರ ಹಾವೇರಿ, ಉಡುಪಿ, ಬೆಂಗಳೂರು, ಕಾರವಾರ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದು, ಸದ್ಯ ಗದಗ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

2010ರಲ್ಲಿ ಕಾರವಾರದಲ್ಲಿ ಸಂಭವಿಸಿದ ಕಡವಾಡ ಗುಡ್ಡ ದುರಂತ ಹಾಗೂ ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಉಂಟಾದ ನೆರೆ ಹಾವಳಿಯ ಸಂದರ್ಭದಲ್ಲಿ ಒಂದು ವಾರಗಳ ಕಾಲ ಸ್ಥಳದಲ್ಲಿಯೇ ಬೀಡು ಬಿಟ್ಟು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದರು.

ಮುಖ್ಯಮಂತ್ರಿಗಳ ಪದಕ ಪ್ರಶಸ್ತಿಗೆ ಆಯ್ಕೆಯಾಗಿರುವ ಡಿವೈಎಸ್‌ಪಿ ವಿದ್ಯಾನಂದ ನಾಯಕ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಅಭಿನಂದಿಸಿದ್ದಾರೆ.

ಚಿರತೆ ದಾಳಿಗೆ ಮತ್ತೊಬ್ಬ ಯುವಕ ಬಲಿ! ನರಭಕ್ಷಕ ಚಿರತೆ ಕಾಟಕ್ಕೆ ಬೆಚ್ಚಿ ಬಿದ್ದ ಜನ

0

ವಿಜಯಸಾಕ್ಷಿ ಸುದ್ದಿ, ಗಂಗಾವತಿ:
ದನ ಕಾಯಲು ಕುರುಚಲು ಬೆಟ್ಟದ ಪ್ರದೇಶಕ್ಕೆ ತೆರಳಿದ್ದ ಯುವಕನ ಮೇಲೆ ಚಿರತೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿದ್ದರಿಂದ ಯುವಕ ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ ಸಂಭವಿಸಿದೆ.
ಮೃತ ಯುವಕನನ್ನು ಕರಿಯಮ್ಮನಗಡ್ಡಿಯ ರಾಘವೇಂದ್ರ ವೆಂಕಟೇಶ (19) ಎಂದು ಗುರುತಿಸಲಾಗಿದೆ. ವಿರುಪಾಪುರ ಗಡ್ಡೆಯಲ್ಲಿ (ಋಷಿಮುಖ ಬೆಟ್ಟದ ಹಿಂದೆ ಹಾಗೂ ಗೋವನ್ ಕಾರ್ನರ್ ಹೊಟೇಲ್ ಮಧ್ಯ ಭಾಗದಲ್ಲಿ) ಈ ಘಟನೆ ನಡೆದಿದೆ.
ಚಿರತೆ ದಾಳಿಯ ಭೀತಿಯಿಂದಾಗಿ ಇತ್ತೀಚೆಗೆ ಬೆಟ್ಟದ ಪ್ರದೇಶಕ್ಕೆ ಯಾರೂ ಹೋಗುತ್ತಿರಲಿಲ್ಲ. ಆದರೆ, ಈ ಯುವಕ ಬೆಟ್ಟದ ಸಮೀಪ ಇರುವ ಕುರುಚಲ ಪ್ರದೇಶದಲ್ಲಿ ಗೋವುಗಳನ್ನು ಮೇಯಿಸಲು ಹೋದಾಗ ಈ ಘಟನೆ ನಡೆದಿದೆ.
ಚಿರತೆ ಯುವಕನ ಮೇಲೆ ದಾಳಿ ಮಾಡುತ್ತಿದ್ದಂತೆಯೇ ಗೋವುಗಳು ಚಲ್ಲಾಪಿಲ್ಲಿಯಾಗಿ ಓಡಿ ತಪ್ಪಿಸಿಕೊಂಡಿವೆ. ಗೋವುಗಳು ಓಡುತ್ತಿರುವುದನ್ನು ದೂರದಿಂದ ಗಮನಿಸಿದ ಸ್ಥಳಿಯರು ಘಟನೆ ಸ್ಥಳಕ್ಕೆ ಬಂದಾಗಲೇ ಚಿರತೆ ದಾಳಿ ಮಾಡಿರುವುದು ಖಚಿತವಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈಚೆಗಷ್ಟೇ ಚಿರತೆ ಇಲ್ಲಿನ ದುರ್ಗಾದೇವಿ ದೇವಸ್ಥಾನದ ಪೂಜಾರಿಯನ್ನು ಹೊತ್ತೊಯ್ದು ತಿಂದು ಸಾಯಿಸಿತ್ತು. ಬಾಲಕನ ಮೇಲೂ ಚಿರತೆ ದಾಳಿ ನಡೆಸಿತ್ತು. ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದ. ಇದೀಗ ಚಿರತೆ ಗಂಗಾವತಿ ತಾಲೂಕಿನಲ್ಲಿ ಎರಡನೇ ಬಲಿ ಪಡೆದಿದೆ.

ಹೊಟ್ಟಿನ ಬಣವೆಗೆ ಬೆಂಕಿಯಿಟ್ಟ ಕಿಡಿಗೇಡಿಗಳು; ಸುಟ್ಟು ಕರಕಲಾದ ಮೇವು

ವಿಜಯಸಾಕ್ಷಿ ಸುದ್ದಿ, ನರೇಗಲ್

ದುಷ್ಕರ್ಮಿಗಳು ಹೊಟ್ಟು- ಮೇವಿನ ಬಣವೆಗೆ ಬೆಂಕಿ ಹಚ್ಚಿದ್ದು, ಬೆಂಕಿಯ ಕೆನ್ನಾಲೆಗೆ ಹೊಟ್ಟು ಸುಟ್ಟು ಭಸ್ಮವಾಗಿರುವ ಘಟನೆ
ರೋಣ ತಾಲ್ಲೂಕಿನ ಕುರಡಗಿ ಗ್ರಾಮದಲ್ಲಿ ನಡೆದಿದೆ.

ಸಹೋದರ ಸಂಬಂಧಿಗಳಾದ ನಾಗಪ್ಪ ದೇವರಮನಿ, ಬಸಪ್ಪ ದೇವರಮನಿ, ಮಹಾರುದ್ರಪ್ಪ ದೇವರಮನಿ, ವೀರೇಶ ದೇವರಮನಿ ಎಂಬುವವರಿಗೆ ಸೇರಿದ್ದ ಬಣವೆಗೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ.

ವರ್ಷಪೂರ್ತಿ ದನಕರುಗಳಿಗೆ ಸಂಗ್ರಹಿಟ್ಟಿದ್ದ ಆಹಾರ ಬೆಂಕಿಗಾಹುತಿಯಾಗಿದೆ. ಇದರಿಂದ ಲಕ್ಷಾಂತರ ರೂ. ಮೌಲ್ಯದ ಹೊಟ್ಟು ಮೇವು ಸುಟ್ಟು ಕರಕಲಾಗಿದ್ದು, ರೈತರ ಆಕ್ರಂದನ ಮುಗಿಲು ಮುಟ್ಟಿದೆ.

ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕದಳ ಹಾಗೂ ಗ್ರಾಮಸ್ಥರ ನೆರವಿನಿಂದ ಬೆಂಕಿ‌ ನಂದಿಸಿದ್ದಾರೆ‌. ಬೆಂಕಿ ಬಿದ್ದ ಬಣವೆಯ ಅಕ್ಕಪಕ್ಕದಲ್ಲೇ ನೂರಾರು ಹೊಟ್ಟು ಮೇವಿನ ಬಣವೆಗಳಿದ್ದಿದ್ದರಿಂದ ಸಂಭವಿಸಬಹುದಾದ ಭಾರೀ ದುರಂತವೊಂದನ್ನು ತಪ್ಪಿಸಿದ್ದಾರೆ.

ನರೇಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಶಾಲೆಗೆ ಮರಳಿದ ಮಕ್ಕಳು, ಹೂಮಳೆ ಸುರಿಸಿ, ಸಿಹಿ ವಿತರಿಸಿ ಶಾಲಾ ಮಕ್ಕಳಿಗೆ ಭರ್ಜರಿ ಸ್ವಾಗತ

0

-ತೊಲಗಲಿ ಕೊರೋನಾ, ಎಂದಿನಂತೆ ಶಾಲೆಗೆ ಮರಳೋಣ

-ಶಾಲಾರಂಭದ ಜೊತೆ ಹೊಸ ವರ್ಷಾಚರಣೆಯ ಸಿಹಿ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:
ಕೊರೋನಾ ಮಹಾಮಾರಿ ಶಾಲಾ ಮಕ್ಕಳಿಗೆ ಶಾಲೆಯ ಮುಖ ನೋಡದಂತೆ ಮಾಡಿತ್ತು. ಇದೀಗ ವೈರಸ್‌ನ ಅಬ್ಬರ ಕಡಿಮೆಯಾಗಿದ್ದು ಮಕ್ಕಳು ಸಂತಸದಿಂದ ಶಾಲೆಗೆ ಮರಳಿದ್ದಾರೆ. ಆದರೂ ಕೊರೊನಾ ಗುಮ್ಮ ಇನ್ನೂ ಇರುವುದರಿಂದ ಎಲ್ಲ ಶಾಲೆಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ.

ಕಳೆದ ೧೦ ತಿಂಗಳಿಂದ ಬಂದ್ ಆಗಿದ್ದ ಶಾಲಾ ಕಾಲೇಜುಗಳು ಹೊಸ ವರ್ಷಕ್ಕೆ ಆರಂಭವಾದ ಹಿನ್ನೆಲೆಯಲ್ಲಿ ಒಂದಡೆ ಶಾಲೆಗಳಿಗೆ ತಳಿರು ತೋರಣಗಳಿಂದ ಶೃಂಗಾರ ಗೊಳಿಸುವ ಮೂಲಕ ಸಾಮಾಜಿಕ ಅಂತರ ಪಾಲನೆ, ಥರ್ಮಲ್ ಸ್ಕ್ರೀನಿಂಗ್ ಸೇರಿ ಕೋವಿಡ್ ನಿಯಮ ಪಾಲನೆ ಹೀಗೆ ಮಕ್ಕಳನ್ನು ಶಾಲೆಗೆ ಶುಕ್ರವಾರ ಭರ್ಜರಿ ಸ್ವಾಗತಿಸಲಾಯಿತು. 

ನಗರದ ಹೊರ ವಲಯದಲ್ಲಿರುವ ಸರಸ್ವತಿ ವಿದ್ಯಾ ಮಂದಿರ ಶಾಲೆಯಲ್ಲಿ ಮಕ್ಕಳಿಗೆ ಮಾಸ್ಕ್ ಜಾಗೂ ಸಾನಿಟೈಜರ್ ಮತ್ತು ಸಿಹಿ ವಿತರಿಸುವ ಮೂಲಕ ಶಾಲೆಗಳನ್ನು ಆರಂಭಿಸಲಾಯಿತು. ಅದರಂತೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ‌ಮನಸ್ಸಿಗೆ ಮುದ ನೀಡಲು ಶಾಲೆಯನ್ನು ಮಾವಿನ ತೋಪು ಹಾಗೂ ಹೂಮಾಲೆ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಅಲ್ಲದೇ, ಮಕ್ಕಳಿಗೆ ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ನಂತರ ಚಾಕಲೇಟ್ ನೀಡಿ ತರಗತಿಗೆ ಆಹ್ವಾನ ನೀಡಿದ ದೃಶ್ಯಗಳು ಕಂಡ ಬಂದವು.

ಅದಲ್ಲದೆ ಶಾಲೆಗೆ ಬರುವ ಮಕ್ಕಳಿಗೆ ಮಾಸ್ಕ್ ಮತ್ತು ಸಾನಿಟೈಜರ್ ಹಾಗೂ ಮಕ್ಕಳ ತಲೆಯ ಮೇಲೆ ಹೂ ಮಳೆ ಸುರಿಸುವ ಮೂಲಕ ಆತ್ಮೀಯವಾಗಿ ಸ್ವಾಗತಿಸಲಾಯಿತು.

ಮಕ್ಕಳು ಸಹ ಸರತಿಯಲ್ಲಿ ನಿಂತು, ಕೋವಿಡ್ ತಪಾಸಣೆಗೆ ಒಳಗಾಗಿ ಸಹಕಾರ ನೀಡಿದರು.
ಮನೆಯಲ್ಲಿ ಕುಳಿತು ಬಹಳ ಬೇಸರವಾಗಿತ್ತು. ಶಾಲೆ ಶುರುವಾಗಿದ್ದೇ ತಡ, ಶಾಲೆಗೆ ಓಡೋಡಿ ಬಂದೇವು. ಶಾಲೆಯ ಶಿಕ್ಷಕರು, ಸ್ನೇಹಿತರನ್ನು ಕಳೆದ ಹತ್ತು ತಿಂಗಳಿನಿಂದ ನೋಡಿರಲಿಲ್ಲ. ಈಗ ಬಹಳ ಖುಷಿಯಾಗಿದೆ ಎಂದು ಶಾಲಾ ಮಕ್ಕಳು ಸಂತಸ ಹಂಚಿಕೊಂಡರು.

 
ಕಳೆದ ಹತ್ತು ತಿಂಗಳಿಂದ ಕೋವಿಡ್ ಹಿನ್ನಲೆ ಶಾಲಾ-ಕಾಲೇಜಿಗೆ ಸರ್ಕಾರ ರಜೆ ಘೋಷಿಸಿತು. ಇದೀಗ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸರ್ಕಾರ ಶಾಲೆ ಆರಂಭಿಸಿದೆ. ಸರ್ಕಾರದ ನಿರ್ದೇಶನ ಹಾಗೂ ಕೋವಿಡ್ ನಿಯಮ ಪಾಲನೆ ಮೂಲಕ ಶಾಲೆ ಪ್ರಾರಂಭ ಮಾಡಿದೆ ಎಂದು ಶಿಕ್ಷಕ ಬಿರಪ್ಪ ಹಾಗೂ ಆರ್
ಹೆಚ್ ಅತ್ತನೂರು ತಿಳಿಸಿದರು. 

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ಇದ್ದರು. 

error: Content is protected !!