Home Blog Page 3083

ರೈತರಿಗೆ ಬೆಳೆ ವಿಮೆ ಪಾವತಿಗೆ ಸಹಕರಿಸಿ; ಜಿಲ್ಲಾಧಿಕಾರಿ ಸೂಚನೆ

ವಿಜಯಸಾಕ್ಷಿ ಸುದ್ದಿ, ಗದಗ

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮಾ ಪಾವತಿಸುವ ರೈತರಿಗೆ ಬೆಳೆ ವಿಮೆ ಕಂತು ಪಾವತಿಸಲು ಸಮರ್ಪಕ ಮಾಹಿತಿ ಒದಗಿಸುವುದರೊಂದಿಗೆ ವಿಮೆ ಮೊತ್ತ ಪಾವತಿಗೆ ಕೃಷಿ ಇಲಾಖೆ ಹಾಗೂ ಬ್ಯಾಂಕ್ ಅಧಿಕಾರಿಗಳು ಸೂಕ್ತ ಸಹಕಾರ ಒದಗಿಸಬೇಕೆಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಸೂಚಿಸಿದರು.

ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲೆಯಲ್ಲಿ ಮುಂಗಾರು 2021 ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ ಬೀಮಾ ಯೋಜನೆಯ ಅನುಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ರೈತರನ್ನು ನೋಂದಣಿ ಮಾಡುವಲ್ಲಿ ಕಡ್ಡಾಯವಾಗಿ ರೈತರಿಂದ ಲಿಖಿತ ರೂಪದಲ್ಲಿ ಅರ್ಜಿ ಮತ್ತು ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳಬೇಕು. ಈ ಯೋಜನೆಯಲ್ಲಿ ಬೆಳೆ ಸಮೀಕ್ಷೆ ತಂತ್ರಾಂಶದೊಂದಿಗೆ ತಾಳೆ ಮಾಡಿ, ಬಿತ್ತಿದ ಬೆಳೆಯನ್ನು ಬೆಳೆ ವಿಮೆ ಯೋಜನೆಯಲ್ಲಿ ನೋಂದಾಯಿಸಬೇಕು ಹಾಗೂ ಇದರ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ತಿಳಿಸಿದರು.

ಯಾವುದೇ ಕಾರಣಕ್ಕೂ ರೈತರಿಂದ ನಿಗದಿಗಿಂತ ಹೆಚ್ಚಿನ ದರವನ್ನು ಸಾರ್ವಜನಿಕ ಸೇವಾ ಕೇಂದ್ರದವರು ಪಡೆದುಕೊಳ್ಳಬಾರದು. ರೈತರು ಸಲ್ಲಿಸಿದ ಅರ್ಜಿಗಳನ್ನು ಕೊನೆಯ ದಿನಾಂಕದವರೆಗೆ ಕಾಯದೆ ಅವರು ಅರ್ಜಿ ಸಲ್ಲಿಸಿದ ದಿನವೇ ತಂತ್ರಾಂಶದಲ್ಲಿ ಅಳವಡಿಸಲು ಮುಂದಾಗಬೇಕು. ಜಿಲ್ಲೆಯ ರೈತರಿಗೆ ಕಳಪೆ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳ ವಿತರಣೆಯಾಗದಂತೆ ಕ್ರಮ ವಹಿಸಬೇಕು. ಈ ಕುರಿತು ಕೃಷಿ ವಿಚಕ್ಷಣಾ ದಳದ ಅಧಿಕಾರಿಗಳು ಕಾಲ ಕಾಲಕ್ಕೆ ತಪಾಸಣೆ ನಡೆಸಿ ಹೆಚ್ಚಿನ ದರಕ್ಕೆ ಬಿತ್ತನೆ ಬೀಜ ಮಾರಾಟ ಮಾಡುವವರ ಹಾಗೂ ಕಳಪೆ ಬಿತ್ತನೆ ಬೀಜ ರಸಗೊಬ್ಬರ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

ನೂಕುನುಗ್ಗಲು ತಪ್ಪಿಸಿ

ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆಯಲ್ಲಿ ನೂಕುನುಗ್ಗಲು ಆಗದಂತೆ ಸೂಕ್ತ ಕ್ರಮಗಳನ್ನು ಅನುಸರಿಸಬೇಕು. ಕೋವಿಡ್ ಮಾರ್ಗಸೂಚಿಗಳ ಉಲ್ಲಂಘನೆಯಾಗದಂತೆ ಜಿಲ್ಲೆಯ ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳ ವಿತರಣೆಯಾಗುವಂತೆ ಸೂಕ್ತ ಕ್ರಮ ವಹಿಸಬೇಕೆಂದು ಅವರು ತಿಳಿಸಿದರು.

ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿರುವ ಬಿತ್ತನೆ ಬೀಜ ಮತ್ತು ರಸಗೊಬ್ಬರ, ಕೀಟನಾಶಕಗಳ ದಾಸ್ತಾನು ವಿವರಗಳನ್ನು ಪ್ರರ್ದಶಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಮಾತನಾಡಿ, ಪ್ರಸಕ್ತ ಸಾಲು ಮತ್ತು ಹಂಗಾಮಿನಲ್ಲಿ ವಿವಿಧ ವಿಮಾ ಘಟಕಗಳಲ್ಲಿ ಅಧಿಸೂಚಿಸಲಾದ ಬೆಳೆಗಳಿಗೆ ಬೆಳೆ ಸಾಲ ಪಡೆದ / ಪಡೆಯದ ರೈತರು ಸದರಿ ಯೋಜನೆಯಡಿ ಭಾಗವಹಿಸಬಹುದು. ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಖಾತೆ ಪುಸ್ತಕ, ಬ್ಯಾಂಕ್ ಪಾಸ್ ಪುಸ್ತಕ, ಕಂದಾಯ ರಶೀದಿ ಮತ್ತು ಆಧಾರ್ ಸಂಖ್ಯೆ ನೀಡಬೇಕು. ಬ್ಯಾಂಕನಲ್ಲಿ ಬೆಳೆ ಸಾಲ ಮಂಜೂರಾದ ಎಲ್ಲ ರೈತರನ್ನು ಕಡ್ಡಾಯವಾಗಿ ಈ ಯೋಜನೆಯಲ್ಲಿ ಒಳಪಡಿಸಲಾಗುವುದು. ರೈತರು ಬೆಳೆ ವಿಮೆಯಡಿ ನೋಂದಾಯಿಸಲು ಕೊನೆಯ ದಿನಾಂಕ ಹೆಸರು (ಮಳೆ ಆಶ್ರಿತ) ಬೆಳೆಗೆ ಜುಲೈ. 15, ಇನ್ನುಳಿದ ಬೆಳೆಗೆ ಜು.31 ಆಗಿದ್ದು, ಸೂರ್ಯಕಾಂತಿ (ನೀರಾವರಿ, ಮಳೆ ಆಶ್ರಿತ) ಬೆಳೆಗಳಿಗೆ ಆಗಸ್ಟ್. 16 ಆಗಿರುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ತೋಟಗಾರಿಕೆ, ಅಂಕಿ ಸಂಖ್ಯಾ ಅಧಿಕಾರಿಗಳು, ವಿಮಾ ಕಂಪನಿ ಅಧಿಕಾಗಿಗಳು, ವಿವಿಧ ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಫೇಸ್‌ಬುಕ್ ಪರಿಚಯ, ಲವ್ವು ಮತ್ತು ಮ್ಯಾರೇಜ್; ಏಳು ತಿಂಗಳಲ್ಲೇ ಯುವತಿ ಬದುಕು ದುರಂತ ಅಂತ್ಯ!

ವಿಜಯಸಾಕ್ಷಿ ಸುದ್ದಿ, ಗಂಗಾವತಿ:

ಫೇಸ್‌ಬುಕ್‌ ನಲ್ಲಿ ಪರಿಚಯವಾದ ಹುಡುಗನನ್ನು ಮದುವೆಯಾದ ಯುವತಿಯ ಬದುಕು ಕೇವಲ ಏಳು ತಿಂಗಳಲ್ಲೇ ದುರಂತ ಅಂತ್ಯ ಕಂಡಿದೆ. ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತು ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಸಣಾಪುರದಲ್ಲಿ ನಡೆದಿದೆ.

ಮೃತಳನ್ನು ಮೂಲತಃ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಸಕೊಪ್ಪದ ಶಿಲ್ಪಾ ವಿಕ್ರಮ್ (22) ಎಂದು ಗುರುತಿಸಲಾಗಿದೆ. ಯುವತಿಯ ಸಾವಿಗೆ ಗಂಡ ವಿಕ್ರಮ್, ಮಾವ ದುರುಗಪ್ಪ, ಅಜ್ಜಿ ಹುಲಿಗೆಮ್ಮ ವರದಕ್ಷಿಣೆ ಕಿರಕುಳ ಕಾರಣ ಎಂದು ಮೃತಳ ತಂದೆ ಸಂತೋಷ್ ಪೀಟರ್ಪೌಲ್ ಗ್ರಾಮೀಣ ಪೊಲೀಸರಿಗೆ ದೂರು ನೀಡಿದ್ದಾರೆ.

ಯುವಕ ಮತ್ತು ಯುವತಿ ಕಳೆದ ಒಂದೂವರೆ ವರ್ಷದಿಂದ ಟಿಕ್ಟಾಕ್ನಲ್ಲಿ ಪರಿಚಯವಾಗಿದ್ದರು. ಪರಸ್ಪರ ಚಾಟಿಂಗ್ ಮೂಲಕ ಸ್ನೇಹ ಬೆಸೆದುಕೊಂಡಿದ್ದರಿಂದ ಇಬ್ಬರು ಪರಸ್ಪರ ಮೊಬೈಲ್ ನಂಬರ್ ಪಡೆದುಕೊಂಡಿದ್ದರು. ಕಳೆದ ವರ್ಷದ ಲಾಕ್ಡೌನ್ ಸಂದರ್ಭದಲ್ಲಿ ತನಗೆ ಬೇರೆ ಹುಡುಗನೊಂದಿಗೆ ಮನೆಯವರು ಮದುವೆ ಮಾಡುತ್ತಿದ್ದುದಾಗಿ ತಿಳಿಸಿದ ಶಿಲ್ಪಾ ತನ್ನನ್ನು ಕರೆದೊಯ್ಯುವಂತೆ ಕೋರಿದ್ದಳು. ಇದಕ್ಕೆ ಹುಡುಗ ಸಮ್ಮತಿಸಿದ್ದ. ಆಕೆಯನ್ನು ಕರೆತಂದು ಕಳೆದ ಡಿಸೆಂಬರ್‌ನಲ್ಲಿ ಮದುವೆಯಾಗಿದ್ದ. ಆದರೆ, ಅನ್ಯ ಜಾತಿಯ ಯುವತಿಯನ್ನು ಮದುವೆಯಾಗಿದ್ದಕ್ಕೆ ಮನೆಯಲ್ಲಿ ಕಿರುಕುಳ ನೀಡುತ್ತಿದ್ದರು ಎನ್ನಲಾಗ್ತಿದೆ. ಇದು ಯುವತಿ ಸಾವಿಗೆ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಫೇಸ್‌ಬುಕ್ ಲವ್ ಮ್ಯಾರೇಜ್; ಏಳು ತಿಂಗಳಲ್ಲೇ ಯುವತಿ ಬದುಕು ದುರಂತ ಅಂತ್ಯ!

ವಿಜಯಸಾಕ್ಷಿ ಸುದ್ದಿ, ಗಂಗಾವತಿ
ಫೇಸ್ ಬುಕ್ ನಲ್ಲಿ ಪರಿಚಯವಾದ ಹುಡುಗನನ್ನು ಮದುವೆಯಾದ ಯುವತಿಯ ಬದುಕು ಕೇವಲ ಏಳು ತಿಂಗಳಲ್ಲೇ ದುರಂತ ಅಂತ್ಯ ಕಂಡಿದೆ. ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತು ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಸಣಾಪುರದಲ್ಲಿ ನಡೆದಿದೆ.
ಮೃತಳನ್ನು ಮೂಲತಃ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಸಕೊಪ್ಪದ ಶಿಲ್ಪಾ ವಿಕ್ರಮ್ (22) ಎಂದು ಗುರುತಿಸಲಾಗಿದೆ. ಯುವತಿಯ ಸಾವಿಗೆ ಗಂಡ ವಿಕ್ರಮ್, ಮಾವ ದುರುಗಪ್ಪ, ಅಜ್ಜಿ ಹುಲಿಗೆಮ್ಮ ವರದಕ್ಷಿಣೆ ಕಿರಕುಳ ಕಾರಣ ಎಂದು ಮೃತಳ ತಂದೆ ಸಂತೋಷ್ ಪೀಟರ್ಪೌಲ್ ಗ್ರಾಮೀಣ ಪೊಲೀಸರಿಗೆ ದೂರು ನೀಡಿದ್ದಾರೆ.
ಯುವಕ ಮತ್ತು ಯುವತಿ ಕಳೆದ ಒಂದೂವರೆ ವರ್ಷದಿಂದ ಫೇಸ್ಬುಕ್ ನಲ್ಲಿ ಪರಿಚಯವಾಗಿದ್ದರು. ಪರಸ್ಪರ ಚಾಟಿಂಗ್ ಮೂಲಕ ಸ್ನೇಹ ಬೆಸೆದುಕೊಂಡಿದ್ದರಿಂದ ಇಬ್ಬರು ಪರಸ್ಪರ ಮೊಬೈಲ್ ನಂಬರ್ ಪಡೆದುಕೊಂಡಿದ್ದರು. ಕಳೆದ ವರ್ಷದ ಲಾಕ್ಡೌನ್ ಸಂದರ್ಭದಲ್ಲಿ ತನಗೆ ಬೇರೆ ಹುಡುಗನೊಂದಿಗೆ ಮನೆಯವರು ಮದುವೆ ಮಾಡುತ್ತಿದ್ದುದಾಗಿ ತಿಳಿಸಿದ ಶಿಲ್ಪಾ ತನ್ನನ್ನು ಕರೆದೊಯ್ಯುವಂತೆ ಕೋರಿದ್ದಳು.
ಇದಕ್ಕೆ ಹುಡುಗ ಸಮ್ಮತಿಸಿದ್ದ. ಆಕೆಯನ್ನು ಕರೆತಂದು ಕಳೆದ ಡಿಸೆಂಬರ್ನಲ್ಲಿ ಮದುವೆಯಾಗಿದ್ದ.
ಆದರೆ, ಅನ್ಯ ಜಾತಿಯ ಯುವತಿಯನ್ನು ಮದುವೆಯಾಗಿದ್ದಕ್ಕೆ ಮನೆಯಲ್ಲಿ ಕಿರುಕುಳ ನೀಡುತ್ತಿದ್ದರು ಎನ್ನಲಾಗ್ತಿದೆ. ಇದು ಯುವತಿ ಸಾವಿಗೆ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ಸಿನ ಹಣೆಬರಹವೇ ಇಷ್ಟು; ಸಚಿವ ಶೆಟ್ಟರ್

ವಿಜಯಸಾಕ್ಷಿ ಸುದ್ದಿ, ಧಾರವಾಡ

ಮುಂದೆ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ ಎಂದು ಡಿ.ಕೆ.ಶಿವಕುಮಾರ ಹಾಗೂ ಸಿದ್ದರಾಮಯ್ಯನವರು ಕೈ ಎತ್ತಿ ಹಿಡಿದಿದ್ದರು. ಆದರೆ, ಈಗ ಅವರೇ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಕಿತ್ತಾಡುತ್ತಿದ್ದಾರೆ. ಇದನ್ನು ನೋಡಿದರೆ ಕಾಂಗ್ರೆಸ್‌ನವರಿಗೆ ಅಧಿಕಾರದ ದಾಹ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. ಕಾಂಗ್ರೆಸ್ಸಿನ ಹಣೆಬರಹವೇ ಇಷ್ಟು ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿದೆ. ಆ ಪಕ್ಷಕ್ಕೆ ಬಹುಮತ ಇಲ್ಲ. ಈ ರೀತಿ ಕಿತ್ತಾಡುವುದನ್ನು ಬಿಟ್ಟು ಕೊರೊನಾದ ಸಂದರ್ಭದಲ್ಲಿ ಸರ್ಕಾರಕ್ಕೆ ಸಲಹೆ ಕೊಡಬೇಕು ಎಂದರು.

ಕೊರೊನಾ ಮೂರನೇ ಅಲೆ ಸಂಬಂಧ ಸರ್ಕಾರ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದೆ. ಜಿಲ್ಲಾವಾರು ಸಭೆಗಳನ್ನು ನಡೆಸಿ ಅದರ ಬಗ್ಗೆ ಕ್ರಮ ವಹಿಸಲಾಗುತ್ತಿದೆ. ರಾಜ್ಯಮಟ್ಟದಲ್ಲಿ ದೇವಶೆಟ್ಟಿ ಅವರ ನೇತೃತ್ವದ ಸಮಿತಿ ವರದಿ ಸಲ್ಲಿಸಿದೆ. ಆ ವರದಿ ಆಧಾರದ ಮೇಲೆ ಸಿಎಂ ಕ್ರಮ ಕೈಗೊಳ್ಳುತ್ತಾರೆ ಎಂದು ಶೆಟ್ಟರ್ ತಿಳಿಸಿದರು.

ಇನ್ನು ಶಾಸಕ ಅರವಿಂದ ಬೆಲ್ಲದ ಹಾಗೂ ನಿಮ್ಮ ಮಧ್ಯೆ ಮನಸ್ತಾಪವಿದೆಯೇ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಸಚಿವ ಶೆಟ್ಟರ್, ನೀವು ಅವರನ್ನೇ ಕೇಳಿ, ಇಂತಹ ಸಣ್ಣ ಸಣ್ಣ ವಿಚಾರಗಳನ್ನು ನನಗೆ ಕೇಳಿದರೆ ಹೇಗೆ ಎಂದು ಹೇಳಿ ಹೊರಟು ಹೋದರು.

ಕಾಂಗ್ರೆಸ್‌ನಲ್ಲಿ ಟವಲ್ ಹಾಕೊ ಕೆಲಸ ಶುರುವಾಗಿದೆ; ಕಟೀಲ್ ಲೇವಡಿ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಸಿಎಂ ಕುರ್ಚಿ ಖಾಲಿನೇ ಆಗಿಲ್ಲ. ಆಗಲೇ ಟವಲ್ ಹಾಕೊ ಕೆಲಸ ಕಾಂಗ್ರೆಸ್‌ನಲ್ಲಿ ಶುರುವಾಗಿದೆ ಎಂದು ಬಿಜೆಪಿ ರಾಜ್ಯಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಲೇವಡಿ ಮಾಡಿದರು.
ಕೊಪ್ಪಳದಲ್ಲಿ ಬುಧವಾರ ಜಿಲ್ಲಾ ಬಿಜೆಪಿ ಕಾರ್ಯಾಲಯದ ಕಟ್ಟಡ ಕಾಮಗಾರಿ ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿ, ಬಿಜೆಪಿಯಲ್ಲಿ ಭಿನ್ನಮತವೂ ಇಲ್ಲ, ಭಿನ್ನಾಭಿಪ್ರಾಯವೂ ಇಲ್ಲ. ಅವೆಲ್ಲ ಕಾಂಗ್ರೆಸ್‌ನಲ್ಲಿ ಇವೆ ಎಂದು ಕುಟುಕಿದರು.
ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಬಣ ರಾಜಕೀಯ ಶುರುವಾಗಿದೆ. ಸಿಎಂ ಹುದ್ದೆ ಸಲುವಾಗಿ ಮ್ಯೂಜಿಕ್ ಚೇರ್ ಆಟ ನಡೆದಿದ್ದು ಸಿದ್ದು, ಡಿಕೆಶಿ ಟವಲ್ ಹಾಕಲು ಶುರು ಮಾಡಿದ್ದಾರೆ ಎಂದರು.
ಕಾಂಗ್ರೆಸ್‌ನ ಪರಿಸ್ಥಿತಿ ಹೇಗಿದೆ ಎಂದರೆ ಮದುವೆಗೆ ಮುಂಚೆನೇ ಮಕ್ಕಳ ಬಗ್ಗೆ ಯೋಚಿಸಿದಂತಾಗಿದೆ. ಬಿಜೆಪಿ ಶಿಸ್ತಿನ ಪಕ್ಷ, ನಮ್ಮಲ್ಲಿ ಒಗ್ಗಟ್ಟಿದೆ. ರಾಜ್ಯದ 9 ಕಡೆ ಜಿಲ್ಲಾ ಬಿಜೆಪಿ ಕಚೇರಿಯ ಕಟ್ಟಡ ಕಾಮಗಾರಿ ನಡೆದಿವೆ. ಅದರಲ್ಲಿ ಕೊಪ್ಪಳ ಸಹ ಒಂದು. ಕೊಪ್ಪಳ ಜಿಲ್ಲೆಯ ಬಿಜೆಪಿ ಜಿಲ್ಲಾ ಕಚೇರಿ ಕಟ್ಟಡ ಮೂರನೇ ಮಹಡಿವರೆಗೆ ಕಾಮಗಾರಿ ನಡೆಯುತ್ತಿದ್ದು ತೀವ್ರವಾಗಿದೆ. ಬರುವ ದೀಪಾವಳಿ ಹಬ್ಬದೊಳಗೆ ಜಿಲ್ಲಾ ಬಿಜೆಪಿ ಕಚೇರಿ ಉದ್ಘಾಟಿಸಲು ಚಿಂತನೆ ನಡೆದಿದೆ ಎಂದರು.
ಈ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ, ಶಾಸಕರಾದ ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ ಮತ್ತಿತರರು ಇದ್ದರು.

ಪಾರ್ಟಿಗೆಂದು ಹೋದ ದಲಿತ ಯುವಕನ ಬರ್ಬರ ಹತ್ಯೆ!

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಸ್ನೇಹಿತರ ಜೊತೆ ಮಂಗಳವಾರ ರಾತ್ರಿ ಪಾರ್ಟಿಗೆಂದು ಹೋದ ಯುವಕ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಕಾರಟಗಿ ತಾಲೂಕಿನ ಬರಗೂರು ಗ್ರಾಮದಲ್ಲಿ ನಡೆದಿದೆ.
ದಲಿತ ಯುವಕ ದಾನೇಶ್ (22) ಶವವಾಗಿ ಪತ್ತೆಯಾಗಿದ್ದು, ಹತ್ಯೆಯಾಗಿರುವ ಶಂಕೆ ವ್ಯಕ್ತವಾಗಿದೆ. ಗ್ರಾಮದ ಕೆಲವರೊಂದಿಗೆ ಕೆಲದಿನಗಳ ಹಿಂದೆ ಪ್ರೀತಿ ವಿಷಯಕ್ಕಾಗಿ ದಾನೇಶ್ ಜಗಳ ಮಾಡಿಕೊಂಡಿದ್ದು, ಸೇಡಿಗಾಗಿ ಕೊಲೆ ಮಾಡಿರಬಹುದು ಎನ್ನಲಾಗಿದೆ. ಕಾರಟಗಿ ಪಿಎಸ್ಐ ಮಲ್ಲಪ್ಪ‌ ಮತ್ತು ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷ ಇಟ್ಟ ಕಿಡಿಗೇಡಿಗಳು; 30ಕ್ಕೂ ಅಧಿಕ ಹಂದಿಗಳ ಸಾವು

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ನಗರದ ಸಜ್ಜಿಓಣಿಯಲ್ಲಿ ಮಂಗಳವಾರ ರಾತ್ರಿ ಕೆಲ‌ ಕಿಡಿಗೇಡಿಗಳು ಅಲ್ಲಿದ್ದ ಹಂದಿಗಳಿಗೆ ವಿಷ ಇಟ್ಟಿದ್ದರಿಂದ ಮೂವತ್ತಕ್ಕೂ ಅಧಿಕ ಹಂದಿಗಳು ಅಸುನೀಗಿವೆ.
ದುರ್ಗಪ್ಪ ಪೂಜಾರ ಅವರಿಗೆ ಸೇರಿದ ಈ ಹಂದಿಗಳ ಸಾವಿನಿಂದ ಸುಮಾರು 40 ಸಾವಿರ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕೆಲ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ವಿಷ ಇಟ್ಟಿದ್ದಾರೆ.
ಹಂದಿ ಸಾಕಾಣಿಕೆಯಿಂದ ಬದುಕು ಸಾಗಿಸುತ್ತಿರುವ ನಮಗೆ ದಿಢೀರನೇ ಇಷ್ಟೊಂದು‌‌ ನಷ್ಟ ಎದುರಿಸುವ ಶಕ್ತಿ ಇಲ್ಲ ಎಂದು ಅವರು ಅಲವತ್ತುಕೊಂಡರು.

ಪೆಟ್ರೋಲ್ ಸುರಿದು ಮಗನನ್ನೇ ಮುಗಿಸಲು ಯತ್ನಿಸಿದ ತಂದೆ!

ವಿಜಯಸಾಕ್ಷಿ ಸುದ್ದಿ, ಮಂಗಳೂರು

ತಂದೆಯೇ ಮಗನನ್ನು ಮನೆಯಲ್ಲಿ ಕೂಡಿ ಹಾಕಿ ಪೆಟ್ರೋಲ್ ಸುರಿದು ಕೊಲೆಗೆ ಯತ್ನಿಸಿದ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದೆ. ತಾಲೂಕಿನ ಜಪ್ಪಿನಮೊಗರು ಗ್ರಾಮದ ಕೊಪ್ಪರಿಗೆಗುತ್ತು ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವಿಶ್ವನಾಥ ಶೆಟ್ಟಿ ಎಂಬ ವ್ಯಕ್ತಿಯೇ ತಮ್ಮ ಮಗ ಸ್ವಾಮಿತ್ ಶೆಟ್ಟಿ(25) ಯನ್ನು ಕೂಡಿ ಹಾಕಿ ಪೆಟ್ರೋಲ್ ಸುರಿದು ಕೊಲೆ ಮಾಡಲು ಯತ್ನಿಸಿದವರು.

ದನಗಳನ್ನು ಹೊರಗೆ ಕಟ್ಟುವ ವಿಚಾರವಾಗಿ ತಂದೆ ಹಾಗೂ ಮಗನ ಮಧ್ಯೆ ಜಗಳ ನಡೆದಿದೆ. ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ. ಆ ನಂತರ ಮಗನನ್ನು ಮನೆಯೊಳಗೆ ಕೂಡಿ ಹಾಕಿದ್ದಾನೆ. ಅದೇ ಸಿಟ್ಟಿನಲ್ಲಿ ಪುತ್ರನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಸುಟ್ಟಗಾಯಗಳಿಂದ ಬಳಲುತ್ತಿರುವ ಸ್ವಾಮಿತ್ ಶೆಟ್ಟಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಂಕನಾಡಿ ನಗರ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ಮರ್ಯಾದೆ ಹತ್ಯೆಯಿಂದ ಬೆಚ್ಚಿ ಬಿದ್ದ ವಿಜಯಪುರ!

ವಿಜಯಸಾಕ್ಷಿ ಸುದ್ದಿ, ವಿಜಯಪುರ

ಅನ್ಯ ಕೋಮಿನ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ಅಪ್ರಾಪ್ತ ಬಾಲಕಿಯ ತಂದೆಯೇ ಸ್ವಂತ ಮಗಳು ಹಾಗೂ ಆಕೆಯ ಪ್ರಿಯಕರನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.
ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಗಡಿ ಗ್ರಾಮ ಸಲಾದಹಳ್ಳಿಯಲ್ಲಿ ಈ ಘನಘೋರ ಕೃತ್ಯ ನಡೆದಿದೆ. ಗ್ರಾಮದ ಯುವಕ ಬಸವರಾಜ ಬಡಿಗೇರ (19) ಹಾಗೂ ಪಕ್ಕದ ಗ್ರಾಮ ಖಾನಾಫುರದ ಅಪ್ರಾಪ್ತ ಬಾಲಕಿ ಕೊಲೆಯಾದವರು.

ಅಪ್ರಾಪ್ತ ಬಾಲಕಿಯು ಇಂದು ತನ್ನ ಪ್ರಿಯಕರ ಬಸವರಾಜ ಬಡಿಗೇರನನ್ನು ಭೇಟಿ ಮಾಡಿದ್ದಳು. ಈ ಸಂದರ್ಭದಲ್ಲಿ ಇಬ್ಬರನ್ನೂ ಒಟ್ಟಿಗೆ ಕಂಡ ಬಾಲಕಿಯ ತಂದೆ ಇಬ್ಬರನ್ನೂ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಅಕ್ಕಪಕ್ಕದ ಗ್ರಾಮದವರಾದ ಬಸವರಾಜ್ ಹಾಗೂ ಅಪ್ರಾಪ್ತ ಬಾಲಕಿ ಅನ್ಯಕೋಮಿನವರಾದರೂ ಇಬ್ಬರ ಮಧ್ಯೆ ಈ ಹಿಂದೆ ಸ್ನೇಹ ಉಂಟಾಗಿ ಅದು ಪ್ರೇಮಾಂಕುರಕ್ಕೆ ತಿರುಗಿತ್ತು. ಆದರೆ, ಇವರಿಬ್ಬರ ಪ್ರೇಮಕ್ಕೆ ಬಾಲಕಿಯರ ಮನೆಯವರ ತೀವ್ರ ವಿರೋಧವಿತ್ತು.
ಇಷ್ಟಾದರೂ ಬಸವರಾಜ್ ಹಾಗೂ ಅಪ್ರಾಪ್ತೆ ನಡುವೆ ಪ್ರೀತಿ ಕಡಿಮೆಯಾಗಿರಲಿಲ್ಲ. ಇಂದು ಇಬ್ಬರು ಪ್ರೇಮಿಗಳು ಸಲಾದಹಳ್ಳಿ ಗ್ರಾಮದ ಹೊರ ಭಾಗದಲ್ಲಿ ಒಟ್ಟಿಗೆ ಇದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಅಪ್ರಾಪ್ತೆಯ ಬಾಲಕಿಯ ತಂದೆ, ಇಬ್ಬರನ್ನು ನೋಡಿ ಕೋಪಗೊಂಡು ಕೊಲೆ ಮಾಡಿದ್ದಾನೆ.

ಸುದ್ದಿ ತಿಳಿದು ಸ್ಥಳಕ್ಕೆ ಕಲಕೇರಿ ಠಾಣೆಯ ಪೊಲೀಸರು ದೌಡಾಯಿಸಿದ್ದಾರೆ. ಘಟನೆಯಿಂದಾಗಿ ಸಲಾದಹಳ್ಳಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ರಾಜ್ಯದಲ್ಲಿ ಇಂದು ಸೋಂಕಿತರ ಸಂಖ್ಯೆ ಹೇಗಿದೆ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಇಂದು ಸೋಂಕಿತರ ಸಂಖ್ಯೆ ತಗ್ಗಿದ್ದು, ಇಂದು ಕೇವಲ 3,709 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, 139 ಜನ ಸಾವನ್ನಪ್ಪಿದ್ದಾರೆ.

ಇಂದು 8,111 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ರಾಜ್ಯದಲ್ಲಿ 1,18,592 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಇದುವರೆಗೂ 3,34,164 ಜನರು ಸಾವನ್ನಪ್ಪಿದ್ದಾರೆ.

ಬೆಂಗಳೂರಿನಲ್ಲಿ ಇಂದು 803 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 26 ಜನ ಸಾವನ್ನಪ್ಪಿದ್ದಾರೆ. ಸದ್ಯ ನಗರದಲ್ಲಿ 69,344 ಸಕ್ರಿಯ ಪ್ರಕರಣಗಳಿವೆ. ಇಂದು ಬೆಂಗಳೂರಿನಲ್ಲಿ 1,745 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇಂದು ರಾಜ್ಯದ ಬಾಗಲಕೋಟೆ 7, ಬಳ್ಳಾರಿ 44, ಬೆಳಗಾವಿ 134, ಬೆಂಗಳೂರು ಗ್ರಾಮಾಂತರ 103, ಬೆಂಗಳೂರು ನಗರ 803, ಬೀದರ್ 6, ಚಾಮರಾಜನಗರ 52, ಚಿಕ್ಕಬಳ್ಳಾಪುರ 38, ಚಿಕ್ಕಮಗಳೂರು 163, ಚಿತ್ರದುರ್ಗ 77, ದಕ್ಷಿಣ ಕನ್ನಡ 374, ದಾವಣಗೆರೆ 90, ಧಾರವಾಡ 30, ಗದಗ 11, ಹಾಸನ 309, ಹಾವೇರಿ 13, ಕಲಬುರಗಿ 14, ಕೊಡಗು 161, ಕೋಲಾರ 65, ಕೊಪ್ಪಳ 25, ಮಂಡ್ಯ 124, ಮೈಸೂರು 486, ರಾಯಚೂರು 15, ರಾಮನಗರ 20, ಶಿವಮೊಗ್ಗ 169, ತುಮಕೂರು 144, ಉಡುಪಿ 81, ಉತ್ತರ ಕನ್ನಡ 114, ವಿಜಯಪುರ 16 ಮತ್ತು ಯಾದಗಿರಿಯಲ್ಲಿ 11 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

error: Content is protected !!