Home Blog Page 3084

ಹಳೆ ನೋಟುಗಳ ಎಕ್ಸಚೆಂಜ್ ಜಾಲ ಪತ್ತೆ: ಡಾಕ್ಟರ್, ಸಂಘಟಕರ ಬಂಧನ!

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:
ನೋಟು ಅಮಾನ್ಯದಿಂದ ಮೌಲ್ಯ ಕಳೆದುಕೊಂಡಿರುವ 5 ನೂರು ಮತ್ತು ಸಾವಿರ ರೂಪಾಯಿಗಳ ಎಕ್ಸಚೆಂಜ್ ಮಾಡುತ್ತಿದ್ದ ಜಾಲವೊಂದು ಕೊಪ್ಪಳದಲ್ಲಿ ಸಿಕ್ಕು ಬಿದ್ದಿದೆ. ಮೈಸೂರು ಮೂಲದ ಇಬ್ಬರು ಹಾಗೂ ಕೊಪ್ಪಳ ಜಿಲ್ಲೆಯ ಆರ್ ಎಂಪಿ ವೈದ್ಯ ಸೇರಿದಂತೆ ಇತರೆ ೫ ಜನರನ್ನು ಪೋಲಿಸರು ಬಂಧಿಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆಯೇ ಎಲ್ಲ ನೋಟುಗಳನ್ನು ಸರಕಾರ ವಾಪಸ್ ಪಡೆದಿತ್ತು. ಇದರ ಚಲಾವಣೆಯನ್ನು ರದ್ದು ಮಾಡಿತ್ತು. ಆದರೆ ಈಗಲೂ ಕೆಲವೆಡೆ ಅಕ್ರಮವಾಗಿ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸುವ ಜಾಲಗಳು ಸಕ್ರೀಯವಾಗಿವೆ.

ರಾಜ್ಯದ ವಿವಿಧೆಡೆ ಇಂತಹ ಜಾಲಗಳು ಸಿಕ್ಕಿ ಬೀಳುತ್ತಲೇ ಇವೆ. ಕೊಪ್ಪಳದ ಖಾಸಗಿ ಲಾಡ್ಜವೊಂದರಲ್ಲಿ ತಂಗಿದ್ದ ಗುಂಡ್ಲುಪೇಟೆಯ ಮಂಜುನಾಥ, ಬೆಂಗಳೂರಿನ ಧನಲಕ್ಷ್ಮೀ ಸೇರಿದಂತೆ ಕೊಪ್ಪಳದ ಅಸೀಪ್ ಅಲಿ, ರಫಿಕ್, ಟಿಕ್ಕೆ ನಾಯಕ, ಹಿರೇಬಗನಾಳದ ಆರ್ ಎಂಪಿ ವೈದ್ಯ ವೀರೇಶ ಗಟ್ಟಿ ಇವರನ್ನು ಬಂಧಿಸಲಾಗಿದೆ. ಇನ್ನೊಬ್ಬ ಹನುಮಂತ ಎನ್ನುವ ವ್ಯಕ್ತಿ ಪರಾರಿಯಾಗಿದ್ದಾನೆ.

ಬಂಧಿತರಿಂದ 65ಸಾವಿರ ಮೌಲ್ಯದ ಹಳೆಯ 5 ನೂರು ಮತ್ತು ಸಾವಿರ ರೂಪಾಯಿಯ 130 ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಳೆಯ ನೋಟುಗಳನ್ನು ಪೂಜೆ ಮಾಡಿದ್ರೆ ಹೊಸ ನೋಟುಗಳಾಗುತ್ತವೆ, ದ್ವಿಗುಣವಾಗುತ್ತವೆ ಎಂದು ನಂಬಿಸಲಾಗುತ್ತಿತ್ತು ಎಂದು ಹೇಳಲಾಗಿದೆ.

ಬಂಧಿತರಲ್ಲಿ ಹೆಚ್ಚಿನವರು ಕನ್ನಡಪರ ಸಂಘಟನೆಯೊಂದಕ್ಕೆ ಸೇರಿದವರು ಎಂದು ಹೇಳಲಾಗಿದೆ. ಕೊಪ್ಪಳ ನಗರ ಠಾಣೆಯ ಸಿಪಿಐ ಮಾರುತಿ ಗುಳ್ಳಾರಿ ನೇತೃತ್ವದಲ್ಲಿ ಪೋಲಿಸರ ತಂಡ ಕಾರ್ಯಾಚರಣೆ ಮಾಡಿ ಬಂಧಿತರಿಂದ 6 ಮೊಬೈಲ್, ಮಾರುತಿ ಸುಜುಕಿ ಕಾರನ್ನು ವಶಪಡಿಸಿಕೊಳ್ಳಲಾಗಿದ್ದು. ಆರೋಪಿತರನ್ನು ನ್ಯಾಯಾದೀಶರ ಮುಂದೆ ಹಾಜರುವಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ. ಸ್ಟಿಂಗ್ ಆಪರೇಷನ್ ನಡೆಸಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದ್ದು ಹೆಚ್ಚಿನ ತನಿಖೆ ನಡೆದರೆ ಈ ಜಾಲದ ಆಳ ಅಗಲ ತಿಳಿಯಲಿದೆ.

ಮತವನ್ನ ಸ್ಕೇಲ್ ನಿಂದ ಅಳೆದ ಚುನಾವಣಾಧಿಕಾರಿ

0

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಕೊಪ್ಪಳ ಗವಿಸಿದ್ದೇಶ್ವರ ಪ್ರೌಢ ಶಾಲಾ ಆವರಣದಲ್ಲಿ ನಡೆದ ಮತ ಎಣಿಕೆ ವೇಳೆ ಬ್ಯಾಲೇಟ್ ಪೇಪರ್ ನಲ್ಲಿ ಇಬ್ಬರು ಅಭ್ಯರ್ಥಿಗಳ ಮಧ್ಯೆ ಮತ ಚಲಾಯಿಸಿದ್ದನ್ನು ಚುನಾವಣಾ ಅಧಿಕಾರಿ ಮತವನ್ನ ಸ್ಕೇಲ್ ನಿಂದ ಅಳೆದು ಗಮನ ಸೆಳೆದರು.
ಗೊಂಡಬಾಳ ಗ್ರಾಪಂನ ಮುದ್ದಾಬಳ್ಳಿ ಒಂದನೇ ವಾರ್ಡಿನ ಮತ ಎಣಿಕೆಯ ವೇಳೆ ಟಿವಿ ಚಿನ್ಹೆಯ ಗಾಳೆಪ್ಪ ಪೂಜಾರ ಹಾಗೂ ಆಟೋ ಚಿನ್ಹೆಯ ಮಧ್ಯೆ ಮತದಾರನೋರ್ವ ಮತ ಚಲಾಯಿಸಿದ್ದನು. ಈ ಮತ ಎಣಿಕೆಯಿಂದ ಹೊರಗಿಟ್ಟು ಮತ ಎಣಿಕೆ ಮಾಡಲಾಗಿತ್ತು. ಕೊನೆ ಹಂತದಲ್ಲಿ ಇಬ್ಬರು ಅಭ್ಯರ್ಥಿಗಳ ಮಧ್ಯೆ ಚಲಾಯಿಸಲಾಗಿದ್ದ ಮತ ಎಣಿಕೆ ವೇಳೆ ಚುನಾವಣಾಧಿಕಾರಿ ಆ ಮತ ಸ್ಕೇಲ್ ನಿಂದ ಅಳತೆ ಮಾಡಿ ಟಿವಿ ಚಿನ್ಹೆಯ ಮತಕ್ಕೆ ಹೆಚ್ಚು ಪ್ರಾಶಸ್ತ್ಯ ಬಂದ ಹಿನ್ನೆಲೆಯಲ್ಲಿ ಟಿವಿ ಅಭ್ಯರ್ಥಿಗೆ ಮತ ಎಂದು ಘೋಷಣೆ ಮಾಡಿದರು.

ಲಾರಿ ಚಾಲಕರ ಮೇಲಿನ ಹಲ್ಲೆ ಪ್ರಕರಣ, ಗ್ರಾಮೀಣ ಪೊಲೀಸರ ಭರ್ಜರಿ ಬೇಟೆ: ನಾಲ್ವರು ದರೋಡೆಕೋರರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ಲಾರಿ ಚಾಲಕರ ನಿದ್ದೆಗೆಡಿಸಿದ್ದ ನಾಲ್ಕು ಜನ ದರೋಡೆಕೋರರನ್ನು ಬಂಧಿಸುವಲ್ಲಿ ಗದಗ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಭರ್ಜರಿ ಬೇಟೆಯಾಡಿದ್ದಾರೆ.

ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಬೆಳ್ಳಟ್ಟಿ ಗ್ರಾಮದ ನಿವಾಸಿಗಳಾದ ಉಪೇಂದ್ರ ಮೋಡಿಕೇರ, ಲಕ್ಷ್ಮಣ ಮೋಡಿಕೇರ, ದುರಗಪ್ಪ ಮೋಡಿಕೇರ, ಶಿವಾಜಿ ಮೋಡಿಕೇರ ಬಂಧಿತ ಆರೋಪಿಗಳಾಗಿದ್ದಾರೆ. ಪೊಲೀಸರು ಬಂಧಿತರಿಂದ ಕಬ್ಬಿಣದ ರಾಡ್‌ಗಳು, ಖಾರದ ಪುಡಿ, ಖಾಲಿ ಬಾಟಲಿಗಳು, ಹಗ್ಗ ಹಾಗೂ ಸಣ್ಣ ಕಂದಲಿಯನ್ನು ವಶಕ್ಕೆ ಪಡೆಯಲಾಗಿದೆ.

ಈ ಕುರಿತು ನಗರದ ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ಈ ನಾಲ್ವರು ಖದೀಮರು ಕಳೆದ ಒಂದು ವಾರದಿಂದ ಲಾರಿಗಳ ಚಾಲಕರ ಮೇಲೆ ಹಲ್ಲೆ ಮಾಡಿ ಮೊಬೈಲ್ ಹಾಗೂ ಹಣ ದೊಚುತ್ತಿದ್ದರು. ಡಿ.25 ರಂದು ಗದಗ ಗ್ರಾಮೀಣ ಹಾಗೂ ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿತ ಆರೋಪಿತರು ಲಾರಿ ಚಾಲಕರ ಮೇಲೆ ಹಲ್ಲೆ ನಡೆಸಿ, ದರೋಡೆ ಮಾಡಿ ಪರಾರಿಯಾಗಿದ್ದರು. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ತಿಳಿಸಿದರು.

ಪ್ರಕರಣ ಭೇದಿಸುವ ಸಲುವಾಗಿ ಡಿಎಸ್‌ಪಿ, ಸಿಪಿಐ ಗದಗ ಗ್ರಾಮೀಣ, ಸಿಪಿಐ ಗದಗ ಶಹರ, ಸಿಪಿಐ ಶಿರಹಟ್ಟಿ ವೃತ್ತ ಇವರ ನೇತೃತ್ವದಲ್ಲಿ ವಿಶೇಷ ಗಸ್ತು ತಂಡಗಳನ್ನು ರಚಿಸಿ ತನಿಖೆ ಕೈಗೊಳ್ಳಲಾಗಿತ್ತು. ಸೋಮವಾರ(ಡಿ.28) ರಾತ್ರಿ ನಗರದ ಲಕ್ಷೇಶ್ವರ ರಸ್ತೆಯ ರಾಧಾಕೃಷ್ಣನ್ ನಗರ ಕ್ರಾಸ್ ಸಮೀಪ ನಿಂತಿದ್ದ ದರೋಡೆಕೋರರಿಗೆ ವಿಶೇಷ ಗಸ್ತು ಕರ್ತವ್ಯದಲ್ಲಿದ್ದ ಗದಗ ಗ್ರಾಮೀಣ ಪಿಎಸ್‌ಐ ಅಜಿತ್‌ಕುಮಾರ್ ಹೊಸಮನಿ ನೇತೃತ್ವದ ತಂಡ ಕೈಗೆ ಕೋಳ ತೊಡಿಸಿದೆ. ಇವರಲ್ಲದೇ ಇನ್ನೂ ನಾಲ್ಕು ಜನ ಆರೋಪಿತರಿದ್ದು, ಬಂಧಿಸುವ ವೇಳೆ ಬೊಲೇರೋ ವಾಹನ ಸಮೇತ ಪರಾರಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

ತನಿಖಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಡಿಎಸ್‌ಪಿ ಎಸ್.ಕೆ.ಪ್ರಹ್ಲಾದ, ಗದಗ ಗ್ರಾಮೀಣ ಸಿಪಿಐ ಆರ್.ಎಸ್.ಕಪ್ಪತನವರ, ಗದಗ ಶಹರ ಸಿಪಿಐ ಪಿ.ವಿ.ಸಾಲಿಮಠ, ಶಿರಹಟ್ಟಿ ಸಿಪಿಐ ವಿಕಾಸ ಲಮಾಣಿ, ಪಿಇಎನ್ ಠಾಣೆಯ ಮಹಾಂತೇಶ ಪಿ.ಐ., ಪಿಎಸ್‌ಐ ಸುನೀಲ್ ನಾಯಕ, ಸಿಬ್ಬಂದಿಗಳಾದ ಆರ್.ಪಿ.ಹಿರೇಮಠ, ಪಿ.ಎಸ್.ಗಾಣಿಗೇರ, ಎಂ.ರಂಗರೇಜ್, ಡಿ.ಎಸ್.ನದಾಫ್, ಗಣೇಶ್ ಗ್ರಾಮ ಪುರೋಹಿತ, ಗಂಗಾಧರ ಕರಲಿಂಗಣ್ಣವರ, ಪಿ.ಎಸ್.ಶೆಟ್ಟೆಣ್ಣವರ, ಎಸ್.ಎ.ಗುಡ್ಡಿಮಠ, ಎ.ಪಿ.ದೊಡ್ಡಮನಿ, ಎಂ.ವಿ.ಹೂವಣ್ಣ ಸೇರಿದಂತೆ ಸಿಬ್ಬಮದಿಗಳ ಕರ್ತವ್ಯವನ್ನು ಎಸ್‌ಪಿ ಯತೀಶ್ ಎನ್. ಶ್ಲಾಘಿಸಿದರು.

ಜೈಲು ವಾಸ ಅನುಭವಿಸಿದ್ದ ಆರೋಪಿಗಳು

ಈ ನಾಲವ್ರು ಆರೋಪಿಗಳು ಕಳೆದ ಜುಲೈನಲ್ಲಿ ಪೊಲೀಸರು, ವಾಚ್‌ಮನ್ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದರು, ಈ ವೇಳೆ ಸಿಕ್ಕಿಹಾಕಿಕೊಂಡು ಜೈಲು ವಾಸ ಅನುಭವಿಸುತ್ತಿದ್ದರು. ಕಳೆದ ಹನ್ನೆರಡು ದಿನಗಳ ಹಿಂದಷ್ಟೇ (ಡಿ.17) ಜಾಮೀನು ಮೇಲೆ ಹೊರ ಬಂದಿದ್ದರು. ಜೈಲಿನಿಂದ ಹೊರ ಬರುತ್ತಿದ್ದಂತೆ ಆರೋಪಿಗಳು ತಮ್ಮ ಹಳೇ ಚಾಳಿ ಮುಂದುವರೆಸಿದ್ದರು. ಇನ್ನು ಆರೋಪಿತರು ಕ್ಲರ್ಕ್ ಇನ್ ಹೋಟೆಲ್, ಪಾರ್ಶ್ವನಾಥ ಶಾಲೆ ಬಳಿ, ಶಿರಹಟ್ಟಿ ಪಟ್ಟಣದಲ್ಲೂ ದಾಳಿ ಮಾಡಿದ್ದರು ಎನ್ನಲಾಗುತ್ತಿದೆ.

ಉಪ ಸಭಾಪತಿ ಧರ್ಮೇಗೌಡ ನಿಧನಕ್ಕೆ ಮಹಾಮಂಡಳ ಸಂತಾಪ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ವಿಧಾನ ಪರಿಷತ್ತಿನ ಉಪ ಸಭಾಪತಿ ಎಸ್ ಎಲ್ ಧರ್ಮೇಗೌಡ ಅವರ ನಿಧನಕ್ಕೆ ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷ ಡಾ. ಅಬ್ದುಲ್ ರಜಾಕ್ ನದಾಫ್ ಹಾಗೂ ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ಧರ್ಮೇಗೌಡರ ನಿಧನದಿಂದ ಮನಸ್ಸಿಗೆ ನೋವುಂಟಾಗಿದೆ. ಶ್ರೀಯುತರ ಅಗಲಿಕೆಯಿಂದ ಸಹಕಾರಿ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದ, ಹಿರಿಯ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದಿದ್ದಾರೆ.

ಅವರ ಆತ್ಮಕ್ಕೆ ಭಗವಂತನು ಸದ್ಗತಿ ಕರುಣಿಸಲಿ ಎಂದು ಸಂತಾಪ ಸಂದೇಶದ ಮೂಲಕ ಪ್ರಾರ್ಥಿಸಿದ್ದಾರೆ.

ಸಜ್ಜನ ವ್ಯಕ್ತಿತ್ವ ಹೊಂದಿದ್ದ ಅವರ ಹಠಾತ್‌ ಮರಣದ ನೋವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ರೈಲಿಗೆ ತಲೆಕೊಟ್ಟು ವಿಧಾನ ಪರಿಷತ್ ಉಪ ಸಭಾಪತಿ ಧರ್ಮೇಗೌಡ ಆತ್ಮಹತ್ಯೆ!

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಚಿಕ್ಕಮಗಳೂರು

ವಿಧಾನಪರಿಷತ ಉಪ ಸಭಾಪತಿ‌ ಎಸ್.ಎಲ್.ಧರ್ಮೇಗೌಡ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜಿಲ್ಲೆಯ ಕಡೂರು ತಾಲ್ಲೂಕಿನ ಗುಣಸಾಗರ ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮನೆಯಿಂದ ಒಬ್ಬರೇ ಹೊರಟವರು ರಾತ್ರಿ ಬಹಳ ಹೊತ್ತಾದರೂ ಮರಳಲಿಲ್ಲ. ಫೋನ್ ರಿಂಗ್ ಆಗುತ್ತಿದ್ದರೂ ರಿಸೀವ್ ಆಗುತ್ತಿರಲಿಲ್ಲ. ಅನುಮಾನಗೊಂಡು ಗನ್ ಮ್ಯಾನ್, ಪೊಲೀಸರು, ಸ್ಥಳೀಯರು ಹುಡುಕಿದಾಗ ಅವರು ರೈಲಿಗೆ ಸಿಕ್ಕು ಮೃತಪಟ್ಟಿರುವುದು ಗೊತ್ತಾಗಿದೆ.

ರೈಲಿನ ರಭಸಕ್ಕೆ ದೇಹ ಎರಡು ತುಂಡಾಗಿ ಎರಡು ದಿಕ್ಕಿಗೆ ಬಿದ್ದಿತ್ತು. ತಲೆ ಗುರುತು ಹಿಡಿದು ಮೃತದೇಹ ಧರ್ಮೇಗೌಡರದ್ದೇ ಎಂದು ಖಚಿತಪಡಿಸಿಕೊಂಡ ಗನ್ ಮನ್ ಪೊಲೀಸರಿಗೆ ದೂರು ನೀಡಿದ್ದಾರೆ.

ಸದ್ಯದ ಮಟ್ಟಿಗೆ ಇದೊಂದು ಆತ್ಮಹತ್ಯೆ ಎನ್ನಲಾಗುತ್ತಿದೆ. ಆದರೆ ಇತರೆ ಸಾಧ್ಯತೆಗಳನ್ನು ತಳ್ಳಿ ಹಾಕದ ಪೊಲೀಸರು ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ,ಸಿ.ಟಿ. ರವಿ ಸೇರಿದಂತೆ ಜಿಲ್ಲೆಯ ಶಾಸಕರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಜೆಡಿಎಸ್ ವರಿಷ್ಠ ದೇವೇಗೌಡರು ಮತ್ತು ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಚಿಕ್ಕಮಗಳೂರಿಗೆ ತೆರಳಲಿದ್ದಾರೆ.

16 ಡಿಸಬರ್ 1955 ರಂದು ಜನಿಸಿದ್ದ ಧರ್ಮೇಗೌಡರಿಗೆ 65 ವರ್ಷ ವಯಸ್ಸಾಗಿತ್ತು. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಕಳೆದ ಕೆಲ ದಿನಗಳ ಹಿಂದಷ್ಟೇ ಪರಿಷತ್ ನಲ್ಲಿ ನಡೆದ ಘಟನೆಯಿಂದ ನೊಂದು ಈ ರೀತಿ ಮಾಡಿಕೊಂಡರಾ ಎಂಬ ಅನುಮಾನಗಳು ಕಾಡುತ್ತಿವೆ.

ಗ್ರಾಮ ಪಂಚಾಯತಿ ಮಟ್ಟದಿಂದ ಬೆಳೆದು ಬಂದಿದ್ದ ಎಸ್.ಎಲ್.ಧರ್ಮೇಗೌಡರು ಬಿಳಕಲ್ ಗ್ರಾ.ಪಂ.ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರು. ಎರಡು ಬಾರಿ ತಾ.ಪಂ.ಸದಸ್ಯರಾಗಿದ್ದರು. ಅಲ್ಲದೇ, ಬೀರೂರು ಶಾಸಕರಾಗಿದ್ದ ಅವರು ವಿಧಾನ ಪರಿಷತ್ ಉಪ ಸಭಾಪತಿಯಾಗಿ ಆಯ್ಕೆಯಾಗಿದ್ದರು.

ಅಲ್ಲದೇ, ವಿವಿಧ ನಿಗಮ-ಮಂಡಳ, ಬ್ಯಾಂಕ್ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಎಸ್.ಎಲ್.ಧರ್ಮೇಗೌಡ ಅವರ ಅಕಾಲಿಕ ಸಾವಿಗೆ ಸಿಎಂ ಯಡಿಯೂರಪ್ಪ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ‌ ಸಿಎಂ ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ.

ಎಸ್.ಎಲ್.ಬೋಜೇಗೌಡ ಮತ್ತು ಎಸ್.ಎಲ್.ಧರ್ಮೇಗೌಡ ಸಹೋದರರು ದೇವೇಗೌಡರ ಕುಟುಂಬಕ್ಕೆ ಹತ್ತಿರದವರಾಗಿದ್ದು
ಜೆ ಡಿ ಎಸ್ ಜತೆಗೇ ರಾಜಕೀಯ ಜೀವನ ಆರಂಭಿಸಿದ್ದರು. ಯಾವತ್ತೂ ಪಕ್ಷ ನಿಷ್ಠೆ ಬದಲಿಸಿರಲಿಲ್ಲ.

ಹೊಸ ವರ್ಷ ಸಂಭ್ರಮಾಚರಣೆಗೆ ಬ್ರೇಕ್; ಡಿ.31 ಸಂಜೆಯಿಂದ ನಿಷೇಧಾಜ್ಞೆ ಜಾರಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೊನಾ ವೈರಸ್ ರೂಪಾಂತರ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ಡಿ.31 ರ ಸಂಜೆ 6 ರಿಂದ ಜ.1 ರವರೆಗೆ ನಿಷೇದಾಜ್ಞೆ ಜಾರಿಗೊಳಿಸಲಾಗಿದ್ದು, ಡಿ.31 ರ ರಾತ್ರ 8 ಗಂಟೆಯಿಂದ ಬೆಂಗಳೂರಿನ ಪ್ಲೈ ಓವರ್ ಬಂದ್ ಆಗಿರಲಿವೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವೈರಸ್ ರೂಪಾಂತರ ಹಿನ್ನೆಲೆಯಲ್ಲಿ ಮತ್ತಷ್ಟು ಕಠಿಣ ನಿಬಂದನೆಗಳಿದ್ದು, ಐದಕ್ಕಿಂತ ಹೆಚ್ಚು ಜನರು ಒಂದೆಡೆ ಸೇರಲು ಅವಕಾಶವಿಲ್ಲ. ಪ್ರತಿಯೊಬ್ಬರು ಕೊವಿಡ್ ನಿಯಮ ಪಾಲಿಸಬೇಕು ಎಂದರು.

ಖಾಸಗಿ ಕ್ಲಬ್ ಗಳು, ಅಪಾರ್ಟ್ಮೆಂಟ್ ನಿವಾಸಿಗಳಿಗೆ ಆಚರಣೆಗೆ ಅವಕಾಶವಿದ್ದು, ಯಾವುದೇ ಬ್ಯಾಂಡ್, ಮ್ಯೂಸಿಕ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಿಲ್ಲ. ಹೊಸ ವರ್ಷಾಚರಣೆಗೆ ಡಿಜೆ ಅವಕಾಶವಿಲ್ಲ.

ಡಿ.31 ರಿಂದ ಬೆಂಗಳೂರು ನಗರಾದ್ಯಾಂತ ಹೆಚ್ಚಿನ ಕಡೆ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ಮಾಡುತ್ತೇವೆ. ಅನಾವಶ್ಯಕವಾಗಿ ಜಾಲಿರೈಡ್ ತೆರಳಲು ಅವಕಾಶವಿಲ್ಲ. ಅಲ್ಲದೇ, ವ್ಹಿಲಿಂಗ್, ಡ್ರಾಗ್ ರೈಡ್ ಮಾಡಿದರೆ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ಪಂತ್ ತಿಳಿಸಿದರು.

ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ನಾಕಾಬಂದಿ ಸ್ಥಾಪಿಸಲಾಗುವುದು. ಮಾಲ್, ರೆಸ್ಟೋರೆಂಟ್, ಪಬ್, ಕ್ಲಬ್ ಗಳಲ್ಲಿ ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸಬೇಕು.
ಅಡ್ವಾನ್ಸ್ ಬುಕಿಂಗ್ ಮಾಡಿದ ಶೇ.50 ಜನರಿಗೆ ಮತ್ತು ಪ್ರವೇಶ ಕೂಪನ್ ಪಡೆದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ರಾತ್ರಿ 11 ಕ್ಕೆ ಬಾರ್, ವೈನ್ ಶಾಪ್ ಬಂದ್ ಮಾಡಬೇಕು. ತುರ್ತು ಸೇವೆ, ತುರ್ತು ಚಟುವಟಿಕೆಗಳಿಗೆ ಎಂದಿನಂತೆ ಅವಕಾಶ ಕಲ್ಪಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.

ಗ್ರಾ.ಪಂ. ಚುನಾವಣೆ: ಜಿಲ್ಲೆಯ 7 ಕಡೆ ಮತ ಎಣಿಕೆ ಕೇಂದ್ರ

ವಿಜಯಸಾಕ್ಷಿ ಸುದ್ದಿ, ಗದಗ

ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ ಮೊದಲನೇ ಹಾಗೂ ಎರಡನೇ ಹಂತದ ಮತದಾನ ಮುಕ್ತಾಯಗೊಂಡಿದ್ದು, ಡಿ.30 ರಂದು ಮತ ಎಣಿಕೆ ಕಾರ್ಯವು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದೆ.

ಗದಗ ನಗರದ ಶ್ರೀಗುರುಬಸವ ಆಂಗ್ಲ ಮಾಧ್ಯಮ ಶಾಲೆ, ತೋಂಟದಾರ್ಯ ಇಂಜನೀಯರಿಂಗ್ ಕಾಲೇಜು, ಲಕ್ಷ್ಮೇಶ್ವರ ಪಟ್ಟಣದ ಪುರಸಭೆ ಕಲಾ ಮಹಾವಿದ್ಯಾಲಯ, ಶಿರಹಟ್ಟಿಯ ಎಫ್.ಎಂ.ಡಬಾಲಿ ಪದವಿ ಪೂರ್ವ ಮಹಾವಿದ್ಯಾಲಯ, ಮುಂಡರಗಿಯ ಕೆ.ಆರ್. ಬೆಲ್ಲದ ಕಾಲೇಜು,

ರೋಣದ ಡಿ.ಪೌಲ್ ಅಕಾಡೆಮಿ ಶಾಲೆ, ಗಜೇಂದ್ರಗಡದ ಶ್ರೀಜಗದ್ಗುರು ತೋಂಟದಾರ್ಯ ಆಂಗ್ಲ ಮಾಧ್ಯಮ ಶಾಲೆ ಹಾಗೂ ನರಗುಂದ ಪಟ್ಟಣದ ಶ್ರೀವಿಶ್ವೇಶ್ವರಯ್ಯ ಪಾಲಿಟೆಕ್ನಿಕ್ ಗಳಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ನಾನು ದನದ ಮಾಂಸ ತಿನ್ನುತ್ತೇನೆ ಅದನ್ನ ಕೇಳೋದಕ್ಕೆ ಅವ್ರ್ಯಾರು? ಸಿದ್ದರಾಮಯ್ಯ ಪ್ರಶ್ನೆ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಮೂಲಕ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿದ ಬೆನ್ನಲ್ಲೇ ಮಾಜಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿರುವ ಅವರು, ದನದ ಮಾಂಸ ಕೆಲವರ ಆಹಾರ ಪದ್ಧತಿ, ಅದನ್ನೇಕೆ ಪ್ರಶ್ನೆ ಮಾಡ್ತೀರಾ?. ಆಹಾರ ಆಯ್ಕೆ ಅವರವರ ಇಚ್ಛೆ ಅದನ್ನು ಕಟ್ಟಿಕೊಂಡು ಇವರಿಗೇನು? ಎಂದು ಪ್ರಶ್ನಿಸಿರುವ ಅವರು ನನ್ನ ಆಹಾರ ನನ್ನ ಹಕ್ಕು ಎಂದು ಹೇಳಿದ್ದಾರೆ.

ನಾನು ದನದ ಮಾಂಸ ತಿನ್ನುತ್ತೇನೆ ಅದನ್ನ ಕೇಳುವುದಕ್ಕೆ ಅವರು ಯಾರು? ಎಂದು ಬಹಿರಂಗವಾಗಿಯೇ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ವಿರೋಧಿಸಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ರವಿವಾರವಷ್ಟೇ ಮೈಸೂರು ಜಿಲ್ಲೆಯ ಸಿದ್ದರಾಮಯ್ಯನಹುಂಡಿಯಲ್ಲಿ ಹನುಮನ ಹುಟ್ಟಿದ ದಿನವನ್ನು ಕೇಳಿ ಸಿದ್ದರಾಮಯ್ಯ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಬಿಜೆಪಿ ನಾಯಕರು ಮುಗಿ ಬಿದ್ದಿದ್ದರು. ಸಿದ್ದರಾಮಯ್ಯ ಹೇಳಿಕೆಗೆ ಪ್ರತಿರೋಧ ವ್ಯಕ್ತಪಡಿಸಿದ್ದರು.

ಸುಗ್ರಿವಾಜ್ಞೆ ಮೂಲಕ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ; ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು

ಸುಗ್ರಿವಾಜ್ಞೆ ಹೊರಡಿಸುವ ಮೂಲಕ ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿದೆ.

ಸೋಮವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುಗ್ರಿವಾಜ್ಞೆಗೆ ಅನುಮೋದನೆ ಸಿಕ್ಕಿದೆ. ಈ ಕುರಿತು ಸುದೀರ್ಘ ಚರ್ಚೆ ನಡೆಸಿದೆ.

ವಿಧಾನಸಭೆಯಲ್ಲಿ ಗೋ ಹತ್ಯೆ ಕಾಯ್ದೆಗೆ ಅಂಗೀಕಾರ ಪಡೆದಿದ್ದ ರಾಜ್ಯ ಸರ್ಕಾರ, ವಿಧಾನ ಪರಿಷತ್ ನಲ್ಲಿ ಪಡೆಯಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಮುಂದಿನ ಅಧಿವೇಶನದವರೆಗೂ ಕಾಯದೇ ಸುಗ್ರಿವಾಜ್ಞೆ ಮೂಲಕ ಕಾಯ್ದೆ ಜಾರಿ ಮಾಡಿದೆ.

ವಿಧಾನಸಭೆಯಲ್ಲಿ ಕಾಯ್ದೆ ಅಂಗೀಕಾರಗೊಳ್ಳುತ್ತಿದ್ದಂತೆ ರಾಜ್ಯಾದ್ಯಂತ ಕೆಲ ಹಿಂದೂಪರ ಸಂಘಟನೆಗಳು ಸಂಭ್ರಮಿಸಿದ್ದವು. ಅಲ್ಲದೇ, ಸರ್ಕಾರಕ್ಕೆ ಅಭಿನಂದ‌ನೆಗಳ ಸುರಿಮಳೆ ಗೈದಿದ್ದರು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಮೂಲಕ ಗೋ ಹತ್ಯೆ ಕಾಯ್ದೆ ಜಾರಿಗೊಳಿಸಿದೆ.

ಸಿದ್ದರಾಮಯ್ಯಗೆ ಅನುಮಾನಿಸುವ ಕಾಯಿಲೆ ಇದೆ; ಹನುಮ ಹುಟ್ಟಿದ್ದು ಗೊತ್ತಾ ಹೇಳಿಕೆಗೆ ಸಿ.ಟಿ.ರವಿ ಟಾಂಗ್

ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು

ತಾಯಿ ಇವರೇ ನಿಮ್ಮ ತಂದೆ ಎಂದರೆ ನಂಬುತ್ತಾರೆ, ಸಾಕ್ಷಿ ಕೇಳಲ್ಲ. ಕೆಲವರು ಸಾಕ್ಷಿ ಕೇಳುವ ಮನಸ್ಥಿತಿಯ ಜನರು ಇರುತ್ತಾರೆ. ಸಿದ್ದರಾಮಯ್ಯ ಸಾಕ್ಷಿ ಕೇಳುವ ಮನಸ್ಥಿತಿ ಇದ್ದರೆ ಅವರ ದೋಷ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟು ನೀಡಿದರು.

ಹನುಮ ಹುಟ್ಟಿದ್ದು ಗೊತ್ತಾ, ಸುಮ್ಮನೆ ತಿನ್ಲಾ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ಕೆಲವರಿಗೆ ಎಲ್ಲವನ್ನೂ ಅನುಮಾನಿಸುವ ಪ್ರವೃತ್ತಿ ಇರುತ್ತೆ. ಸಿದ್ದರಾಮಯ್ಯ ಅವರಿಗೂ ಅಂತಹ ಕಾಯಿಲೆ ಇದ್ರೆ ಅದು ಅವರ ದೋಷ. ನಂಬಿಕೆ ಎಲ್ಲವನ್ನೂ ಮೀರಿದ್ದು.
ನಂಬಿಕೆಗಳ ಮೇಲೆ ಜಗತ್ತು ಇರುವುದು ಎಂದು ಅಭಿಪ್ರಾಯ ಪಟ್ಟರು.

ಕೆಲವರಿಗೆ ಭಗವಂತ ಕಾಣಲ್ಲ, ಕೆಲವರಿಗೆ ಎಲ್ಲ ಕಡೆ ಕಾಣುತ್ತಾನೆ.
ನೋಡುವ ದೃಷ್ಟಿ ಇರುವವರಿಗೆ ಭಗವಂತನನ್ನು ತೋರಿಸಬಹುದು.
ನೋಡುವ ದೃಷ್ಟಿ ಇಲ್ಲದವರಿಗೆ ಎಲ್ಲಿ ನಿಂತರೂ ಭಗವಂತ ಕಾಣುವುದಿಲ್ಲ ಎಂದು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.

ಸಿದ್ದರಾಮಯ್ಯ ಅವರಿಗೆ ನಂಬಿಕೆ ಹುಟ್ಟಿನಿಂದ ಬಂದಿರುವುದಲ್ಲ, ಸಹವಾಸ ದೋಷದಿಂದ ಬಂದಿರುವದು. ಅವರ ತಂದೆ-ತಾಯಿಗೆ ದೇವರ ಮೇಲೆ ಶ್ರದ್ಧೆ ಇರುವ ಕಾರಣಕ್ಕೆ ದೇವರ ಹೆಸರಿಟ್ಟರು. ಸಹವಾಸ ದೋಷದಿಂದ ಅವರು ಕೆಟ್ಟಿದ್ದಾರೆ ಎಂದು ಸಿ.ಟಿ.ರವಿ ಹೇಳಿದರು.

error: Content is protected !!