ಬಿಜೆಪಿ ಸರ್ಕಾರಕ್ಕೆ ಹಾಗೂ ನಾಯಕರಿಗೆ ಪರಿಶಿಷ್ಟ ಜಾತಿ, ಪಂಗಡದವರ ಕಲ್ಯಾಣ ಬೇಕಿಲ್ಲ. ಅಲ್ಲದೇ, ಅಭಿವೃದ್ಧಿಗೊಳಿಸಬೇಕೆಂಬ ಇಚ್ಛಾಶಕ್ತಿಯೂ ಇಲ್ಲವೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ಬಿಜೆಪಿ ವಿರುದ್ಧ ಕಿಡಿಕಾರಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಪರಿಶಿಷ್ಟ ಜಾತಿ, ಪಂಗಡಕ್ಕೆ ವಿಶೇಷ ಘಟಕ ಯೋಜನೆ ಜಾರಿಗೆ ತಂದಿದ್ದರು. ಪ್ರತಿವರ್ಷ ಅವರಿಗೆ ಆಯವ್ಯಯದಲ್ಲಿ ಹಣವಿಡುತ್ತಿದ್ದ ಅವರು, ಮೀಸಲಿಟ್ಟ ಹಣವನ್ನು ಸಂಪೂರ್ಣವಾಗಿ ಖರ್ಚು ಮಾಡಿದರು ಎಂದರು.
ಆದರೆ, ಈ ಸರ್ಕಾರಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸರಿಯಾದ ರೀತಿಯಲ್ಲಿ ಹಣ ಖರ್ಚು ಮಾಡುತ್ತಿಲ್ಲ. ಬೇರೆ ಉದ್ದೇಶಕ್ಕೆ ಬಳಸುತ್ತಿದ್ದಾರೆ. ಈ ವಿಷಯ ಅಸೆಂಬ್ಲಿಯಲ್ಲಿಯೂ ಚರ್ಚೆ ಆಗಿದೆ. ಈ ಇಲಾಖೆಯ ಹಣವನ್ನು ಪರಿಶಿಷ್ಟರಿಗೆ ಬಳಸಬೇಕು. ಇಲ್ಲವಾದಲ್ಲಿ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ರಾಜ್ಯ ಸರ್ಕಾರದ ಮಂತ್ರಿ ಮಂಡಲದಲ್ಲಿ ಹೊಂದಾಣಿಕೆ ಇಲ್ಲ. ಅಲ್ಲದೇ, ಇಂತಹ ಕೆಲಸಕ್ಕೆ ಬಾರದ ಸರ್ಕಾರವನ್ನು ನಾನು ನೋಡಿಲ್ಲ. ಅವರ ಸಚಿವರು, ಶಾಸಕರೇ ಮಾತನಾಡುತ್ತಿರುವುದನ್ನು ನೋಡಿದ್ದೇವೆ. ದಕ್ಷಿಣ ಭಾರತದಲ್ಲಿ ಯಡಿಯೂರಪ್ಪಗೆ ಗೋಲ್ಡನ್ ಸಮಯ ಸಿಕ್ಕಿತ್ತು. ಆದರೆ, ಅವರು ಅದನ್ನ ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ನನಗೆ ಜೀವನ ಕೊಟ್ಟ ಪಕ್ಷ. ನಮಗೆ ಯಾವುದೆ ಆಸೆ ಇಲ್ಲ. ಪಕ್ಷದಿಂದ ಯಾವುದನ್ನೂ ನಿರೀಕ್ಷಿಸಿಲ್ಲ. ನಾನು ಸೋತಾಗಲೂ ಪಕ್ಷ ನನ್ನ ಬಿಟ್ಟಿಲ್ಲ. ನಾನು ಸೋತೆ ಅಂತಾ ಕೆಲಸ ಮಾಡುವುದನ್ನೂ ನಿಲ್ಲಿಸಿಲ್ಲ. ನಾನು ಸದಾ ಜನರ ಜೊತೆ ಇದ್ದೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ಸ್ಪಷ್ಟಪಡಿಸಿದರು.
ಸಮೀಪದ ಚಿಂಚಲಿ ಗ್ರಾಮದಲ್ಲಿ ರಾಷ್ಟ್ರೀಯ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತಿ ಸದಸ್ಯ ನಿಂಗರಡ್ಡಿ ತೇರಿನಗಡ್ಡಿ ಚಾಲನೆ ನೀಡಿದರು.
ಸದಸ್ಯರಾದ ಗೌರಮ್ಮ ಕರಿಗಾರ ರೂಪಾ ಕುರುಬರ, ಮುಖಂಡರಾದ ನಾಗೇಶ್ ಕುರುಬರ, ಶರಣಪ್ಪ ನಂದಿಕೋಲಮಠ, ಬಸಪ್ಪ ಗುಡಸಲಮನಿ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಗೋವಾ ಸಿಎಂ ಮಹದಾಯಿ ಕ್ಯಾತೆ ಬೆನ್ನಲ್ಲೇ, ರೈತರು ಹೋರಾಟದ ಎಚ್ಚರಿಕೆ ನೀಡಿದ್ದು, ಬೆಂಗಳೂರು ಚಲೋ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ.
ಜಿಲ್ಲೆಯ ನರಗುಂದ ಮಹದಾಯಿ ಹೋರಾಟ ವೇದಿಕೆಯಲ್ಲಿ ರೈತ ಸೇನಾ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ವೀರೇಶ ಸೊಬರದಮಠ ನೇತೃತ್ವದಲ್ಲಿ ಈ ಕುರಿತು ನಿರ್ಧಾರ ಕೈಗೊಂಡಿದ್ದಾರೆ.
ಮಹದಾಯಿ ನೀರಿಗಾಗಿ ಡ್ಯಾಂ ಕಾಮಗಾರಿ ಆರಂಭಿಸಬೇಕು. ಮಹಾರಾಷ್ಟ್ರ ಗಡಿ ವಿಚಾರದಲ್ಲಿ ರಾಜ್ಯದಲ್ಲಿ ಅಶಾಂತಿ ಹುಟ್ಟಿಸುವ ಕೆಲಸ ಮಾಡುತ್ತಿದೆ. ಕೂಡಲೇ ಅದಕ್ಕೆ ಕಡಿವಾಣ ಹಾಕಬೇಕು. ಅಲ್ಲದೇ, ನಂಜುಂಡಪ್ಪ ವರದಿಯನ್ನು ಕೂಡಲೇ ಜಾರಿಗೊಳಿಸಬೇಕೆಂದು ವೀರೇಶ ಸೊಬರದಮಠ ಒತ್ತಾಯಿಸಿದರು.
ಈ ತಿಂಗಳಲ್ಲಿ ಬೆಂಗಳೂರು ಚಲೋ ಸಮಯ ನಿಗದಿ ಮಾಡುತ್ತೇವೆ. ಅಲ್ಲದೇ, ನಮ್ಮ ಮೂರೂ ಬೇಡಿಕೆಗಳು ಈಡೇರುವವರಿಗೆ ಬೆಂಗಳೂರು ಬಿಟ್ಟು ಬರುವುದಿಲ್ಲವೆಂದು ಎಚ್ಚರಿಕೆ ನೀಡಿದ ಸೊಬರದಮಠ ಅವರು, ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ರವಿವಾರ ನಡೆದ ರಾಷ್ಟ್ರೀಯ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಸದಸ್ಯ ಮುತ್ತು ರಾಯರಡ್ಡಿ ಮಗುವಿಗೆ ಪೋಲಿಯೋ ಹನಿ ಹಾಕುವುದರೊಂದಿಗೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಡಾ.ಪ್ರಶಾಂತ ಮಲ್ಲಾಪೂರ, ಶರಾವತಿ ಹಿರೇಮಠ ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಬಳ್ಳಾರಿಯ ಖ್ಯಾತ ಕಲಾವಿದೆ ಮಂಜಮ್ಮ ಜೋಗತಿ ಅವರನ್ನು ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಹಾಗೂ ಧರ್ಮಪತ್ನಿ ಲಕ್ಷ್ಮೀ ಅರುಣಾ ಅವರು ಸನ್ಮಾನಿಸಿ ಗೌರವಿಸಿದರು.
ಬೆಂಗಳೂರಿನ ತಮ್ಮ ನಿವಾಸಕ್ಕೆ ಮಂಜಮ್ಮ ಜೋಗತಿ ಅವರನ್ನು ಆಹ್ವಾನಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಜನಾರ್ಧನ ರೆಡ್ಡಿ ಮಾತನಾಡಿ, ಕಳೆದ 20 ವರ್ಷಗಳ ಹಿಂದೆ ಬಳ್ಳಾರಿಯಲ್ಲಿ ಮೊದಲ ಬಾರಿಗೆ ನಾವು ನಗರಸಭೆಯ ಆಡಳಿತದ ಚುಕ್ಕಾಣಿ ಹಿಡಿದಿದ್ದೆವು. ಆಗ ನಗರಸಭೆಯ ಪಾರ್ಕ್ ವೊಂದರ ಉದ್ಘಾಟನಾ ಸಮಾರಂಭದಲ್ಲಿ ಮಂಜಮ್ಮನವರು ಅದ್ಭುತ ನೃತ್ಯ ಪ್ರದರ್ಶಿಸಿದ್ದರು. ನಾನು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವನಾದ ಸಂದರ್ಭದಲ್ಲಿಯೇ ಮಂಜಮ್ಮ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವ ಅವಕಾಶ ದೊರಕಿತು. ಇದು ನನ್ನ ಅದೃಷ್ಟವೆಂದು ಭಾವಿಸುತ್ತೇನೆ ಎಂದು ಮಾಜಿ ಸಚಿವ ಜನಾರ್ಧನರೆಡ್ಡಿ ಹರ್ಷ ವ್ಯಕ್ತಪಡಿಸಿದರು.
ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ದಂಪತಿಗಳಿಂದ ಸನ್ಮಾನ ಸ್ವೀಕರಿಸುತ್ತಿದ್ದಂತೆ, ಭಾವುಕರಾದ ಮಂಜಮ್ಮ ಜೋಗತಿಯವರ ಕಣ್ಣು ತೇವಗೊಂಡವು.
ಬಳಿಕ ಮಾತನಾಡಿ, 20 ವರ್ಷಗಳ ಹಿಂದೆ ಕಲೆಗೆ ಪ್ರೋತ್ಸಾಹಿಸಿದ ತಾವು ಸಚಿವರಾಗಿದ್ದ ಸಂದರ್ಭದಲ್ಲಿ ಒಂದೇ ಒಂದು ಮನವಿಗೆ ನನಗೆ ರಾಜ್ಯೋತ್ಸವ ಪ್ರಶಸ್ತಿ ದೊರೆಯುವಂತೆ ಮಾಡಿದಿರಿ ಎಂದು ನೆನೆದರು. ಅಲ್ಲದೇ, ರೆಡ್ಡಿ ಅವರಿಗೆ ಬಂದಿರುವ ಕಷ್ಟಗಳನ್ನು ನೆನಪಿಸಿಕೊಂಡು ಗದ್ಗಧಿತರಾದರ ಮಂಜಮ್ಮರನ್ನು ಪಕ್ಕದಲ್ಲಿಯೇ ಇದ್ದ ಜನಾರ್ಧನ ರೆಡ್ಡಿ ಸಂತೈಸಿದರು.
ಇದೇ ಸರ್ಕಾರದಲ್ಲಿ ಜಾನಪದ ಅಕಾಡೆಮಿ ಅಧ್ಯಕ್ಷ ಸ್ಥಾನ, ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿತು. ಇದೀಗ ಮತ್ತದೇ ಸರ್ಕಾರದಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆಯುತ್ತಿರುವುದು ಸಂತಸ ತಂದಿದೆ ಎಂದು ಮಂಜಮ್ಮ ಜೋಗತಿ ಖುಷಿ ಪಟ್ಟರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ಇದ್ದರು.
ಅಧಿಕಾರಿ, ಜನಪ್ರತಿನಿಧಿಗಳ ಉತ್ತಮ ಸ್ಪಂದನೆ- ಇನ್ನೆರಡು ದಿನಗಳಲ್ಲಿ ಸಮಸ್ಯೆಗಳಿಗೆ ಇತಿಶ್ರೀ?
ದುರ್ಗಪ್ಪ ಹೊಸಮನಿ
ವಿಜಯಸಾಕ್ಷಿ ಸುದ್ದಿ, ಮುಳಗುಂದ
ಮೂರು ದಿನಗಳಿಂದ ‘ವಿಜಯಸಾಕ್ಷಿ’ ‘ಅಭಿವೃದ್ಧಿ ಮರೆತ ಚಿಂಚಲಿ ಎಂಬ ಅಡಿಬರಹದಲ್ಲಿ ಅಧಿಕಾರಿಗಳ ಕಾರ್ಯ ವೈಖರಿ, ಮೂಲಸೌಲಭ್ಯಗಳ ಕೊರತೆ, ಅಧಿಕಾರಿಗಳ ಮೇಲಿನ ದಬ್ಬಾಳಿಕೆ ಹೀಗೆ ಹತ್ತು ಹಲವು ಸಮಸ್ಯೆಗಳ ಹೂರಣದ ಕುರಿತು ಸರಣಿ ವರದಿಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿಂಚಲಿ ಗ್ರಾಮ ಪಂಚಾಯತಿಯಲ್ಲಿರುವ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸಲಾಗುವುದು ಎಂದು ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭರವಸೆ ನೀಡಿದ್ದಾರೆ.
‘ವಿಜಯಸಾಕ್ಷಿ’ಗೆ ಪ್ರತಿಕ್ರಿಯೆ ನೀಡಿರುವ ಜಿಪಂ ಸಿಇಒ ಡಾ| ಆನಂದ ಕೆ. ಅವರು, ಚಿಂಚಲಿ ಗ್ರಾ.ಪಂ.ನ ಸಮಸ್ಯೆಗಳಿಗೆ ಸ್ಪಂದಿಸಿದ್ದು, ಶೀಘ್ರವೇ ಪರಿಹರಿಸುವಂತೆ ಗದಗ ತಾ.ಪಂ. ಇಒ ಅವರಿಗೆ ಸೂಚಿಸಲಾಗುವುದು. ಸಾರ್ವಜನಿಕರಿಗೆ ಕಚೇರಿಯಲ್ಲಿ ಲಭ್ಯವಾಗಿರುವಂತೆ ಪಿಡಿಒಗೆ ಎಚ್ಚರಿಕೆ ನೀಡಲಾಗುವುದು. ಒಂದು ವೇಳೆ ಕಚೇರಿಗೆ ಸರಿಯಾಗಿ ಬಾರದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ನೆಟ್ವರ್ಕ್ ಸರಿಯಿಲ್ಲ
ಚಿಂಚಲಿ ಗ್ರಾಮ ಪಂಚಾಯತಿಯಲ್ಲಿ ಅಧಿಕಾರಿಗಳು ಜನರ ಕೈಗೆ ಸರಿಯಾಗಿ ಸಿಗುತ್ತಿಲ್ಲ. ಇಂಟರ್‌ನೆಟ್ ಇಲ್ಲವೆಂಬ ಕುಂಟು ನೆಪವೊಡ್ಡಿ ಗದಗ ನಗರಕ್ಕೆ ಹೋಗುತ್ತಿದ್ದಾರೆ ಎಂಬ ಆರೋಪದ ಕುರಿತು ತಾ.ಪಂ. ಇಒ ಜಿನಗಾ ಅವರು ಪ್ರತಿಕ್ರಿಯೆ ನೀಡಿದ್ದು, ಬಿಎಸ್ಸೆನ್ನೆಲ್, ಬಿಬಿಎನ್ನೆಲ್ ವರ್ಕ್ ಆಗುತ್ತಿಲ್ಲ. ಡಾಂಗಲ್ ಹಾಕಿ ಕೆಲಸ ಮಾಡುತ್ತಿದ್ದಾರೆ. ಸುಮಾರು 4-5 ಪಂಚಾಯತಿಗಳಲ್ಲೂ ಬಿಬಿಎನ್ನೆಲ್ ನೆಟ್‌ವರ್ಕ್ ಕೆಲಸ ಮಾಡುತ್ತಿಲ್ಲ. ಈ ಕುರಿತು ಬಿಎಸ್ಸೆನ್ನೆಲ್‌ಗೆ ಪತ್ರ ಕೊಟ್ಟಿದ್ದೇವೆ. ಸದ್ಯ ನಮ್ಮದೇ ಡಾಂಗಲ್ ಹಾಕಿ ಕೆಲಸ ಮಾಡುತ್ತಿದ್ದು, ಪರಿಶೀಲಿಸಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ತಿಳಿಸಿದರು.
ಯುವಕರ ಮೇಲೆ ಭರವಸೆ
ಈ ಬಾರಿಯ ಗ್ರಾ.ಪಂ. ಚುನಾವಣೆಯಲ್ಲಿ ಚಿಂಚಲಿ ಗ್ರಾ.ಪಂ.ಗೆ ಯುವಕರೇ ಹೆಚ್ಚಾಗಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇವರು ಹದಗೆಟ್ಟಿರುವ ಪಂಚಾಯತಿ ಆಡಳಿತದಲ್ಲಿ ವಿನೂತನ ಬದಲಾವಣೆ ತರುತ್ತಾರೆಂಬ ಭರವಸೆಯನ್ನು ಜನರು ಇಟ್ಟುಕೊಂಡಿದ್ದಾರೆ. ಆದರೆ, ನೂತನ ಗ್ರಾಪಂ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು ಹಳಿ ತಪ್ಪಿದ ಆಡಳಿತವನ್ನು ಸರಿ ದಾರಿಗೆ ತರುವರೇ? ಅಭಿವೃದ್ಧಿ ಪರ ಕೆಲಸಗಳನ್ನು ಮಾಡುವರೇ? ಎಂಬ ಪ್ರಶ್ನೆ ಪಂಚಾಯತಿ ವ್ಯಾಪ್ತಿಯಲ್ಲಿ ಉದ್ಭವಿಸಿದೆ.
ಇನ್ನೆರಡು ದಿನಗಳಲ್ಲಿ ಪರಿಹಾರ!
ಚಿಂಚಲಿ ಗ್ರಾಪಂ ಪಿಡಿಒ ಎಸ್.ಎಸ್. ತೊಂಡಿಹಾಳ ಅವರಿಗೆ ತಾಪಂ ಇಒ ಜಿನಗಾ ಅವರು ಕಾನ್ಫರೆನ್ಸ್ ಕರೆ ಮಾಡಿ, ಶೀಘ್ರವೇ ಚಿಂಚಲಿ ಪಂಚಾಯತಿ ಸಮಸ್ಯೆ ಸರಿಪಡಿಸುವಂತೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ, ಬಿಬಿಎನ್ನೆಲ್ ನೆಟ್‌ವರ್ಕ್ ಸ್ಥಗಿತಗೊಂಡಿದ್ದು, ಸದ್ಯ ಮೊಬೈಲ್‌ನಲ್ಲಿ ಕೆಲಸ ಮಾಡಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸಿ ಪ್ರತಿಯೊಂದನ್ನೂ ಪಂಚಾಯತಿ ವ್ಯಾಪ್ತಿಯಲ್ಲೇ ತೆಗದುಕೊಡುವಂತೆ ಕ್ರಮ ಕೈಗೊಳ್ಳುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸರಿಯಾಗಿ ಕಚೇರಿಯಲ್ಲಿದ್ದರೆ ಪಂಚಾಯತಿಯ ಎಲ್ಲ ಸಮಸ್ಯೆಗಳೂ ಬಗೆಹರಿಯುತ್ತವೆ. ಹಾಗಾಗಿ ಪಿಡಿಒಗಳಿಗೆ ಕಚೇರಿಯಲ್ಲಿ ಲಭ್ಯವಿರುವಂತೆ ಸಂಬಂಧಿಸಿದ ತಾಪಂ ಇಒ ಅವರಿಗೆ ಸೂಚನೆ ನೀಡಲಾಗುವುದು.
ಡಾ|ಆನಂದ ಕೆ., ಜಿಪಂ ಸಿಇಒ
ಒಳ್ಳೆಯ ಪಿಡಿಒ ಅವರನ್ನೇ ತಂದು ಹಾಕಿದ್ದೇವಲ್ರಿ?
ಹನಮಂತಪ್ಪ ಪೂಜಾರ, ಜಿ.ಪಂ ಸದಸ್ಯ
ಹಲವು ವರ್ಷಗಳಿಂದ ಚಿಂಚಲಿ ಗ್ರಾಪಂ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಕಾರ್ಯವೈಖರಿಗೆ ಜನರು ಬೇಸತ್ತಿದ್ದಾರೆ. ಒಂದೇ ಕೆಲಸಕ್ಕೆ ನೂರೆಂಟು ಬಾರಿ ಅಲೆದಾಡಿ ಸುಸ್ತಾಗಿದ್ದಾರೆ. ಹಾಗಾಗಿ, ಪಂಚಾಯತಿ ಮಟ್ಟದಲ್ಲೇ ಪ್ರತಿಯೊಂದು ಸಮಸ್ಯೆಗೂ ಶೀಘ್ರವೇ ಪರಿಹಾರ ಸಿಗುವಂತೆ ನೋಡಿಕೊಳ್ಳಲಾಗುವುದು. ಅಲ್ಲದೇ, ಮೂರು ಹಳ್ಳಿಗಳಿಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಆದ್ಯತೆ ನೀಡಲಾಗುವುದು.
ಚಂದ್ರಶೇಖರ ಆರ್, ಹರಿಜನ, ಮುತ್ತು ರಾಮರಡ್ಡಿ, ಗ್ರಾ.ಪಂ ಸದಸ್ಯರು ಚಿಂಚಲಿ
ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಡ ಕೂಲಿ ಕಾರ್ಮಿಕರನ್ನು ಬೀದಿಗೆ ತಳ್ಳುವ ಹುನ್ನಾರ ನಡೆಸುತ್ತಿದೆ. ಈ ನಿಟ್ಟಿನಲ್ಲಿ ರೈತ, ಕಾರ್ಮಿಕ ವಿರೋಧಿ ಕೃಷಿ ಸಂಬಂಧಿ ಕಾಯ್ದೆಗಳನ್ನು ಜಾರಿಗೆ ತಂದಿದೆ. ಹಾಗಾಗಿ ಜನಸಾಮಾನ್ಯರಿಗೆ ಮುಂಬರುವ ದಿನಗಳು ಮಾರಕವಾಗಲಿವೆ ಎಂದು ಸಿಐಟಿಯು ಹಾಗೂ ಹಮಾಲಿ ನೌಕರರ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಆತಂಕ ವ್ಯಕ್ತಪಡಿಸಿದರು.
ಗದಗ ನಗರದ ಗಾಂಧಿ ವೃತ್ತಕ್ಕೆ ಶನಿವಾರ ಆಗಮಿಸಿದ ಕರ್ನಾಟಕ ಪ್ರಾಂತ ರೈತ, ಸಂಘ, ಸಿಐಟಿಯು, ಎಐಎಡಬ್ಲ್ಯೂಯು, ಜನವಾದಿ ಮಹಿಳಾ ಸಂಘಟನೆ ಎಸ್‌ಎಫ್‌ಐ, ಡಿವೈಎಫ್‌ಐ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ನಡೆಸುತ್ತಿರುವ ರೈತ-ಕಾರ್ಮಿಕರ ವಿರೋಧಿ ಕೃಷಿ ಸಂಬಂಧಿ ಕಾಯ್ದೆಗಳು ಹಾಗೂ ಕಾರ್ಮಿಕ ಸಂಹಿತೆಗಳ ವಿರುದ್ಧದ ಪ್ರಚಾರ ಜಾಥಾ ಸ್ವಾಗತ ಹಾಗೂ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಆಹಾರ ಭದ್ರತೆ, ಉದ್ಯೋಗದ ಉಳುವಿಗಾಗಿ ಹಾಗೂ ಜೀವನಾವಶ್ಯಕ ವಸ್ತುಗಳು, ಪ್ರೆಟ್ರೋಲ್, ಡಿಸೇಲ್, ಅಡುಗೆ ಅನಿಲಗಳ ಬೆಲೆ ದಿನನಿತ್ಯ ಗಗನಕ್ಕೆ ಏರುತ್ತಿವೆ. ಆಳುವ ಸರ್ಕಾರಗಳು ಎಲ್ಲ ಕ್ಷೇತ್ರ ಹಾಗೂ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುತ್ತಿವೆ. ಬಡ, ಕೂಲಿ ಕಾರ್ಮಿಕರು ಹಾಗೂ ಜನ ಸಾಮಾನ್ಯರ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿವೆ ಎಂದು ಮಹೇಶ ಪತ್ತಾರ ಆರೋಪಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಮಹೇಶ ಹಿರೇಮಠ, ಪ್ರಧಾನ ಕಾರ್ಯದರ್ಶಿ ಮಾರುತಿ ಚಿಟಗಿ ಮಾತನಾಡಿ, 2020ರಲ್ಲಿ ಅಂಗೀಕರಿಸಿರುವ ತ್ರಿವಳಿ ಕೃಷಿ ಶಾಸನಗಳು, ಉದ್ಧೇಶಿತ ವಿದ್ಯುತ್ ತಿದ್ದುಪಡಿ ಮಸೂದೆಗಳು ಸೇರಿದಂತೆ 29 ಕಾರ್ಮಿಕ ಕಾನೂನುಗಳು ರದ್ದಾಗಬೇಕು. ಸರ್ಕಾರ ಜಾರಿಗೊಳಿಸಿರುವ ಕಾಯ್ದೆಗಳು ದೇಶದ ಜನತೆಯ ಉದ್ಯೋಗ, ಆಹಾರ ಭದ್ರತೆ ನಾಶಗೊಳಿಸಿ ಹಸಿವು ಮತ್ತು ನಿರುದ್ಯೋಗ ಹೆಚ್ಚಳಗೊಳಿಸುತ್ತಿವೆ ಎಂದು ದೂರಿದರು. ಈ ಸಂದರ್ಭದಲ್ಲಿ ರೋಣ ತಾಲೂಕಿನ ಬೆಳವಣಕಿ ಗ್ರಾಮದ ಕಲಾ ತಂಡದವರು ರೈತ ವಿರೋಧಿ ಕಾನೂನು ಅರಿವು ಹಾಗೂ ಜಾಗೃತಿ ಮೂಡಿಸಿದರು.
ಸಿಐಟಿಯು ರಾಜಾಧ್ಯಕ್ಷೆ ಎಸ್.ವರಲಕ್ಷ್ಮೀ, ಎಂ.ಬಿ. ನಾಡಗೌಡ್ರ, ಸಿಐಟಿಯು ಮುಖಂಡರಾದ ಬಸವರಾಜ ಮಂತೂರ, ಪೀರು ರಾಠೋಡ, ಮಹಾಗುಂಡಪ್ಪ ಅಂಗಡಿ, ರೈತ ಸಂಘದ ಮುಖಂಡರಾದ ಮುತ್ತನಗೌಡ ಚೌಡರೆಡ್ಡಿ, ಮಹಾದೇವಗೌಡ ಪಾಟೀಲ, ಸಂಗಣ್ಣ ದಂಡಿನ ಸೇರಿದಂತೆ ಗ್ರಾಪಂ ನೌಕರರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಹಮಾಲಿ ಕಾರ್ಮಿಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಗಣರಾಜ್ಯೋತ್ಸವ ದಿನ ದೆಹಲಿಯಲ್ಲಿ ನಡೆದ ಅಹಿತಕರ ಘಟನೆಗೆ ನೈತಿಕ ಹೊಣೆ ಹೊತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ಘಟಕದ ವತಿಯಿಂದ ಗದಗ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಟ್ರ್ಯಾಕ್ಟರ್ ರ‍್ಯಾಲಿ ವೇಳೆ ನಡೆದ ಅಹಿತಕರ ಘಟನೆಗೆ ಪ್ರತಿಭಟನಕಾರರನ್ನು ಹೊಣೆ ಮಾಡುವುದು ಸರಿಯಲ್ಲ. ರೈತ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ತಕ್ಷಣ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು. ಮಹ್ಮದ ಎನ್. ಶಾಲಗಾರ, ಅಶೋಕ ಮಂದಾಲಿ, ವಿನೋದ ಶಿದ್ಲಿಂಗ, ಶಿವರಾಜ ಕೋಟಿ, ಯೂಸುಫ್ ಡಂಬಳ, ಆಸೀಫ್ ರಾಮೇನಹಳ್ಳಿ, ಸರಫರಾಜ ಬಬರ್ಚಿ, ರಿಯಾಜ ಕುದುರಿ, ಅಬ್ದುಲ್ ಗಫೂರ್ ಪಾಶ್ಚಾಪುರ, ಬಾಬುಸಾಬ ನಾರಾಯಣಕೇರಿ, ಕಾರ್ಯಕರ್ತರು ಉಪಸ್ಥಿತರಿದ್ದರು.
360 ಕೋಟಿ ರೂ. ನೀಡುವಂತೆ ಸರ್ಕಾರಕ್ಕೆ ಮನವಿ– ಹೆಚ್ಚಿನ ಅನುದಾನ ಕೊಡಿಸುವುದಾಗಿ ಸಚಿವರ ಭರವಸೆ
ಓಂಕಾರ ಮಠಪತಿ
ವಿಜಯಸಾಕ್ಷಿ ಸುದ್ದಿ, ಬೀದರ
ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಹೆಚ್ಚಿನ ಅನುದಾನ ನೀಡಿರುವ ರಾಜ್ಯ ಸರ್ಕಾರ, ರಾಜ್ಯದ ಏಕೈಕ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾನಿಲಯಕ್ಕೆ ಸಮರ್ಪಕ ಅನುದಾನ ನೀಡದೇ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕಳೆದ 2020-21ರ ಅವ್ಯವಯದಲ್ಲಿ 738 ಕೋಟಿ ರೂ. ಅನುದಾನ ನೀಡುವಂತೆ ಪಶು ವಿಶ್ವವಿದ್ಯಾನಿಲಯ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ರಾಜ್ಯ ಸರ್ಕಾರ ಕೇವಲ 167 ಕೋಟಿ ರೂ. ಅನುದಾನ ಕೊಟ್ಟಿದೆ.
ಸಂಶೋಧನೆಗಾಗಿ ನೀಡಿದ್ದ 1306 ಲಕ್ಷ ರೂ. ಹಣವನ್ನು ಮರಳಿ ಪಡೆದಿದೆ. ಇದರಿಂದ ರಾಜ್ಯ ಸರ್ಕಾರ ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬ ನೀತಿ ಅನುಸರಿಸುತ್ತಿದೆ.
ಅನುದಾನ ಕೊಡಿಸಿಲ್ಲ
ಪಶುಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ತವರು ಜಿಲ್ಲೆಯವರಾಗಿದ್ದರೂ ಸಮರ್ಪಕ ಅನುದಾನ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಇದರಿಂದ ರಾಜ್ಯದಲ್ಲಿರುವ ಪಶುಸಂಗೋಪನಾ ವಿಶ್ವವಿದ್ಯಾನಿಲಯಗಳು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿವೆ. ಹಿಂದಿನ ಸರ್ಕಾರಗಳು ಸಮರ್ಪಕ ಅನುದಾನ ನೀಡುತ್ತಿದ್ದವು. ಆದರೆ, ಕಳೆದ ವರ್ಷದಿಂದ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಅಯವ್ಯಯದಲ್ಲಿ ಹಣ ಸರಿಯಾಗಿ ಮಂಜೂರು ಆಗುತ್ತಿಲ್ಲ.
ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಸರ್ಕಾರ ಕೊಟ್ಟಿರುವ 167 ಕೋಟಿ ರೂ. ಸಿಬ್ಬಂದಿಗಳ ಸಂಬಳ ಹಾಗೂ ವಿಶ್ವವಿದ್ಯಾನಿಲಯದ ನಿರ್ವಹಣೆಗೆ ಖರ್ಚಾಗಿದೆ. ಸಂಶೋಧನೆ ನೇಮಕಾತಿ ಸೇರಿದಂತೆ ಎಲ್ಲವೂ ನೆನೆಗುದಿಗೆ ಬಿದ್ದಿವೆ. ಕಳೆದೊಂದು ವರ್ಷದಿಂದ ಪಶು ವಿಶ್ವವಿದ್ಯಾನಿಲಯ ಅಕ್ಷರಶ: ಸ್ತಬ್ಧವಾಗಿದೆ. ಅನುದಾನದ ಕೊರತೆಯಿಂದಾಗಿ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ.
ಕೋವಿಡ್ ಕಾರಣ
ಕಳೆದ ವರ್ಷ ಕೋವಿಡ್ ಇರುವ ಕಾರಣ ಕಡಿಮೆ ಬಜೆಟ್ ಕೊಡಲಾಗಿದೆ ಎಂದು ಹೇಳುತ್ತಿರುವ ಸರ್ಕಾರ ರಾಜ್ಯದ ಉಳಿದ ಎಲ್ಲಾ ವಿಶ್ವವಿದ್ಯಾನಿಲಯಕ್ಕಿಂತ ಕಡಿಮೆ ಅನುದಾನ ನೀಡಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಶೇ.80 ರಷ್ಟು ಅನುದಾನ ಕಡಿತವಾಗಿದ್ದು, ಸಚಿವ ಪ್ರಭು ಚವ್ಹಾಣ ಅವರು ಕಾಳಜಿ ವಹಿಸುವ ಅವಶ್ಯಕತೆ ಇದೆ.
360 ಕೋಟಿ ರೂ.ಗೆ ಬೇಡಿಕೆ ಹಣಕಾಸಿನ ತೊಂದರೆಯಿಂದಾಗಿ ಸದ್ಯ ಪಶು ವಿವಿಯಲ್ಲಿ ನೇಮಕಾತಿ, ಹೊಸ ಕಾಲೇಜುಗಳ ಸ್ಥಾಪನೆ ಸೇರಿದಂತೆ ಎಲ್ಲವೂ ನಿಂತಿವೆ. ಹಾಗಾಗಿ, 2021-22ನೇ ಸಾಲಿನಲ್ಲಿ 360 ಕೋಟಿ ರೂ. ಅನುದಾನ ಒದಗಿಸುವಂತೆ ವಿಶ್ವವಿದ್ಯಾಲಯ ಬೇಡಿಕೆ ಇಟ್ಟಿದೆ.
ಅಥಣಿ ಹಾಗೂ ಪುತ್ತೂರಿನಲ್ಲಿ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಪ್ರಾರಂಭಿಸುವಂತೆ ಒತ್ತಡವಿದೆ. ಆದರೆ, ಅದಕ್ಕೆ ಬೇಕಾಗಿರುವ ಹಣಕಾಸು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿಯ ಬಗ್ಗೆ ರಾಜ್ಯ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ. ಹಾಗಾಗಿ ಸರ್ಕಾರದಿಂದ ಅನುಮತಿ ಸಿಕ್ಕ ಮೇಲೆ ಈ ಕುರಿತು ಯೋಚಿಸಲಾಗುವುದು.
ಪ್ರೊ,ನಾರಾಯಣಸ್ವಾಮಿ, ಕುಲಪತಿ, ಪಶು ವೈದ್ಯಕೀಯ ವಿವಿ ಬೀದರ
ರಾಜ್ಯದ ಏಕೈಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಿಗಳ ವಿಶ್ವ ವಿದ್ಯಾನಿಲಯಕ್ಕೆ ಕಳೆದ ವರ್ಷ ಅತ್ಯಂತ ಕಡಿಮೆ ಬಜೆಟ್ ಅನುಮೋದನೆಗೊಂಡಿದ್ದು ಗಮನಕ್ಕಿದೆ. ೨೦೨೦-೨೧ಸಾಲಿಗೆ ಪಶು ವಿವಿ ಅವರು ೩೬೦ ಕೋಟಿ ರೂ. ಅನುದಾನ ಕೇಳಿದ್ದಾರೆ. ಈ ವರ್ಷದ ಅಯವ್ಯಯದಲ್ಲಿ ಹೆಚ್ಚಿನ ಅನುದಾನ ಕೊಡಿಸುವ ಪ್ರಯತ್ನ ಮಾಡುತ್ತೇನೆ.
ಪ್ರಭು ಚವ್ಹಾಣ, ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ
ಕರ್ನಾಟಕದ ಒಂದಿಂಚಲ್ಲ, ಸೆಂ.ಮೀ. ನಷ್ಟು ಜಾಗ ಬಿಟ್ಟು ಕೊಡಲ್ಲ. ಸುಮ್ಮನೆ ಕನ್ನಡಿಗರನ್ನು ಕೆರಳಿಸಿ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವ ಹುನ್ನಾರ ನಡೆಸಬೇಡಿ. ಇದರಲ್ಲಿ ರಾಜಕೀಯ ಷಡ್ಯಂತ್ರ ಮಾಡುವುದು ಸರಿಯಲ್ಲ ಎಂದು ಕರ್ನಾಟಕ ರೈತ ಸೇನಾ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ನರಗುಂದ ಪಟ್ಟಣದ ಮಹದಾಯಿ ವೇದಿಕೆಯಲ್ಲಿ ಈ ಬಗ್ಗೆ ಮಾತನಾಡಿ, ಉದ್ಧವ್ ಠಾಕ್ರೆ ವಿನಾಕಾರಣ ಹೇಳಿಕೆ ನೀಡುವುದನ್ನು ಬಿಟ್ಟು ಮಹಾರಾಷ್ಟ್ರ ರಾಜ್ಯದ ಅಭಿವೃದ್ಧಿ ಕಡೆ ಗಮನಹರಿಸಲಿ. ಕರ್ನಾಟಕದ ಬಗ್ಗೆ ಮಾತನಾಡುವ ಹಕ್ಕು ಅವರಿಗಿಲ್ಲ. ಹಾಗಾಗಿ ರಾಜ್ಯದ ಸಿಎಂ ಹಾಗೂ ಸಂಸದರು ಮಹಾರಾಷ್ಟ್ರಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಈಗಾಗಲೇ, ನದಿ ಮತ್ತು ಗಡಿ ಆಯೋಗದ ಅಧ್ಯಕ್ಷರು ಮಹಾದಾಯಿ ಹಾಗೂ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಗೆ ವರದಿ ಸಲ್ಲಿಸಿದ್ದಾರೆ. ಹೀಗೆ ಉದ್ಧಟತನ ಮುಂದುವರೆಸಿದರೆ ಕರ್ನಾಟಕದ ಗಡಿಯಾಚೆಗೂ ಒತ್ತುವರಿ ಮಾಡಬೇಕಾಗುತ್ತದೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರಿಗೆ ವಿರೇಶ್ ಸೊಬರದಮಠ ಸ್ಪಷ್ಟ ಸಂದೇಶ ರವಾನಿಸಿದರು.
ಇದೇ ಸಂದರ್ಭದಲ್ಲಿ ಮಹಾದಾಯಿ ನಮ್ಮ ತಾಯಿ ಇದ್ದಂತೆ ಎಂಬ ಗೋವಾ ಸಿಎಂ ಪ್ರಮೋದ್ ಸಾವಂತ್ ಅವರ ಹೇಳಿಕೆ ಖಂಡಿಸಿ, ಮಹದಾಯಿ ಕರ್ನಾಟಕದಲ್ಲಿ ಉಗಮವಾಗಿದ್ದು, ಮಹದಾಯಿ ನಮ್ಮ ತಾಯಿ. ಹಾಗಾಗಿ ನಾವೂ ನಮ್ಮ ತಾಯಿ ಮಹದಾಯಿ ಬಿಟ್ಟುಕೊಡುವುದಿಲ್ಲ ಎಂದು ಮಹದಾಯಿ ಹೋರಾಟಗಾರರು ಕಿಡಿಕಾರಿದರು.
ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಕರಣದಲ್ಲಿ ಕರ್ನಾಟಕಕ್ಕೆ ನ್ಯಾಯ ಸಿಕ್ಕಿದೆ. ಮುಂದಿನ ದಿನಮಾನಗಳಲ್ಲಿ ಡ್ಯಾಂ ಕಟ್ಟಿಸುತ್ತೇವೆ. ಉತ್ತರ ಕರ್ನಾಟಕದ ಭಾಗದ ಬಹುದಿನದ ಬೇಡಿಕೆ ಈಡೇರಿಸಲಿಕ್ಕೆ ಹೋರಾಟ ಮಾಡುತ್ತೇವೆ ಎಂದು ಕರ್ನಾಟಕ ರೈತ ಸೇನಾ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಗೋವಾ ಸಿಎಂಗೆ ಎಚ್ಚರಿಕೆ ನೀಡಿದರು.