Home Blog Page 3086

ಸಿಎಂ ಯಡಿಯೂರಪ್ಪ ರಾಜೀನಾಮೆಗೆ ವಾಟಾಳ್ ಒತ್ತಾಯ!

ವಿಜಯಸಾಕ್ಷಿ ಸುದ್ದಿ, ಮೈಸೂರು

ಸಿಎಂ ಬಿ.ಎಸ್. ಯಡಿಯೂರಪ್ಪ ರಾಜೀನಾಮೆಗೆ ಒತ್ತಾಯಿಸಿ ವಾಟಾಳ್ ನಾಗರಾಜ್ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸಿಎಂ ಯಡಿಯೂರಪ್ಪ ಸರ್ವಾಧಿಕಾರಿ. ಸಿಎಂ ಬಗ್ಗೆ ಮಠಾಧೀಶರಿಗೆ ಏಕೆ ಇಷ್ಟೊಂದು ಒಲವು ಇದೆ. ಬಿ.ಡಿ. ಜತ್ತಿ, ನಿಜಲಿಂಗಪ್ಪ, ಕಂಠಿ ಅವರಿಗಿಲ್ಲದ ಒಲವು ಯಡಿಯೂರಪ್ಪ ಅವರ ಬಗ್ಗೆ ಏಕಿದೆ? ಯಡಿಯೂರಪ್ಪ ದುರಾಡಳಿತ ನಡೆಸಿದ್ದಾರೆ ಎಂದು ಪ್ರತಿಭಟಿಸಿದ್ದಾರೆ.

ಬಿಜೆಪಿಗೆ ಯಡಿಯೂರಪ್ಪನೇ ಹೈಕಮಾಂಡ್. ಈ ಸರ್ಕಾರದಲ್ಲಿ ಮಂತ್ರಿಗಳು ಇಲ್ಲ, ಶಾಸಕರು ಇಲ್ಲ ಸಂಸದರು ಇಲ್ಲ‌. ಎಲ್ಲರನ್ನು ಹೆದರಿಸಿ ಇಟ್ಟುಕೊಂಡಿದ್ದಾರೆ. ಕೊರೊನಾ ತುರ್ತು ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಯಡಿಯೂರಪ್ಪ ವಿಫಲರಾಗಿದ್ದಾರೆ. ಕೂಡಲೇ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಕನ್ನಡ ಭಾಷೆಗೆ ಧಕ್ಕೆಯಾಗುತ್ತದೆ. ಪದವಿ ಶಿಕ್ಷಣ ಕನ್ನಡ ಪಠ್ಯ ಕಡಿತ ಮಾಡಿರುವುದು ಸರಿಯಾದ ನಿಲುವಲ್ಲ. ಸರ್ಕಾರ ಕೂಡಲೇ ಹಳೇ ಶಿಕ್ಷಣ ಪದ್ದತಿಯನ್ನೇ ಮುಂದುವರೆಸಬೇಕು ಎಂದು ವಾಟಾಳ್ ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ 5 ಸಾವಿರದ ಗಡಿಯ ಒಳಗೆ ಬಂದ ಸೋಂಕು!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಅನ್ ಲಾಕ್ ಮಾಡಲು ರಾಜ್ಯ ಸರ್ಕಾರ ಪ್ರಾರಂಭಿಸಿದೆ. ಇಂದು ರಾಜ್ಯದಲ್ಲಿ 4,517 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಶೇಕಡಾವಾರು ಪ್ರಮಾಣ ಇಳಿಕೆಯಾಗಿದ್ದು, ಇಂದು ಶೇ. 2.58ರಷ್ಟು ದಾಖಲಾಗಿದೆ. ಅಲ್ಲದೇ, ಇಂದು 120 ಜನ ಸಾವನ್ನಪ್ಪಿದ್ದಾರೆ.

ಇಂದು ರಾಜ್ಯದಲ್ಲಿ 8,456 ಜನ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದುವರೆಗೂ ರಾಜ್ಯದಲ್ಲಿ 33,883 ಸೋಂಕಿತರು ಕೊರೊನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಮೃತರ ಶೇಕಡಾವಾರು ಪ್ರಮಾಣ ಸಹ ಇಳಿಕೆಯಾಗಿದೆ.

ರಾಜಧಾನಿಯಲ್ಲಿ ಸಾವಿರಕ್ಕೂ ಕಡಿಮೆ ಕೊರೊನಾ ಪ್ರಕರಣಗಳ ವರದಿಯಾಗಿವೆ. ನಗರದಲ್ಲಿ ಇಂದು 933 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಕೇವಲ 12 ಜನ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಸದ್ಯ 71,282 ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಬೀದರ್, ಕಲಬುರಗಿ ಮತ್ತು ವಿಜಯಪುರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಒಂದಂಕಿಗೆ ಇಳಿದಿದೆ. ಬೆಂಗಳೂರು ನಗರದ ಸೇರಿದಂತೆ ಮೈಸೂರು ಮತ್ತು ದಕ್ಷಿಣ ಕನ್ನಡದಲ್ಲಿ 500ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಇಂದು ರಾಜ್ಯದ ಬಾಗಲಕೋಟೆ 10, ಬಳ್ಳಾರಿ 67, ಬೆಳಗಾವಿ 201, ಬೆಂಗಳೂರು ಗ್ರಾಮಾಂತರ 111, ಬೆಂಗಳೂರು ನಗರ 933, ಬೀದರ್ 6, ಚಾಮರಾಜನಗರ 61, ಚಿಕ್ಕಬಳ್ಳಾಪುರ 123, ಚಿಕ್ಕಮಗಳೂರು 183, ಚಿತ್ರದುರ್ಗ 74, ದಕ್ಷಿಣ ಕನ್ನಡ 525, ದಾವಣಗೆರೆ 136, ಧಾರವಾಡ 77,

ಗದಗ 28, ಹಾಸನ 346, ಹಾವೇರಿ 24, ಕಲಬುರಗಿ 9, ಕೊಡಗು 137, ಕೋಲಾರ 77, ಕೊಪ್ಪಳ 61, ಮಂಡ್ಯ 131, ಮೈಸೂರು 545, ರಾಯಚೂರು 19, ರಾಮನಗರ 12, ಶಿವಮೊಗ್ಗ 141, ತುಮಕೂರು 144, ಉಡುಪಿ 167, ಉತ್ತರ ಕನ್ನಡ 146, ವಿಜಯಪುರ 7 ಮತ್ತು ಯಾದಗಿರಿಯಲ್ಲಿ 16 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ – 217 ರನ್ ಗೆ ಸರ್ವ ಪತನ ಕಂಡ ಭಾರತ!

ವಿಜಯಸಾಕ್ಷಿ ಸುದ್ದಿ, ಸೌಥಾಂಪ್ಟನ್

ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ ಹೀನಾಯ ಪ್ರದರ್ಶನ ತೋರಿದೆ. ಕೇವಲ 217 ರನ್ ಗಳಿಗೆ ಭಾರತ ತಂಡ ಸರ್ವ ಪತನ ಕಂಡಿದೆ.

ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಫೈನಲ್ ಪಂದ್ಯದಲ್ಲಿ ಸೆಣಸಾಟ ನಡೆಸುತ್ತಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡ 92.1 ಓವರ್ ಗಳಿಗೆ 217 ರನ್ ಗಳಇಗೆ ಸರ್ವಪತನ ಕಂಡಿತು.
ಭಾರತ ತಂಡದ ಪರ ನಾಯಕ ವಿರಾಟ್ ಕೊಹ್ಲಿ 44, ಉಪನಾಯಕ ಅಜಿಂಕ್ಯ ರಹಾನೆ 49, ರೋಹಿತ್ ಶರ್ಮಾ 34 ಹಾಗೂ ಶುಭಮನ್ ಗಿಲ್ 28 ರನ್ ಗಳಿಸಿದ್ದಾರೆ.

ನ್ಯೂಜಿಲ್ಯಾಂಡ್ ಪರ ಕೈಲ್ ಜಾಮಿಸನ್ ಅದ್ಭುತ ದಾಳಿ ಸಂಘಟಿಸಿದ್ದಾರೆ. ಜಾಮಿಸನ್ ಭಾರತೀಯ ತಂಡದ ಪ್ರಮುಖ 5 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ನ ಮೊದಲ ಪಂದ್ಯ ಮಳೆಯಿಂದಾಗಿ ಸ್ಥಗಿತಗೊಂಡಿತ್ತು.

ಟಾಸ್ ಸೋತ ಭಾರತ ಬ್ಯಾಟಿಂಗ್ ಆರಂಭಿಸಿತ್ತು. ನಿನ್ನೆ ಚಹಾ ವಿರಾಮದ ಬಳಿಕ ಎರಡು- ಮೂರು ಬಾರಿ ಬ್ಯಾಡ್ ಲೈಟ್ ಪಂದ್ಯಕ್ಕೆ ಆಂತಕ ಸೃಷ್ಟಿಸಿತ್ತು. ಆದರೆ, ಇಂದು ಭಾರತ ಬ್ಯಾಟಿಂಗ್ ಆರಂಭಿಸಿದರೂ ಅಭಿಮಾನಿಗಳಲ್ಲಿ ಸಂತಸ ಮೂಡಿಸಲು ಸಾಧ್ಯವಾಗಲಿಲ್ಲ.

ಕೊರೊನಾ; ಭಾನುವಾರವೂ 28 ಜನರಿಗೆ ಸೋಂಕು, ಒಬ್ಬರ ಸಾವು

0

ವಿಜಯಸಾಕ್ಷಿ ಸುದ್ದಿ, ಗದಗ

ಇಂದು ಭಾನುವಾರ 28 ಜನರಿಗೆ ಸೋಂಕು ತಗುಲಿದೆ. ಕೋವಿಡ್ ನಿಂದಾಗಿ ಒಬ್ಬರು ಮೃತಪಟ್ಟ ಬಗ್ಗೆ ಜಿಲ್ಲಾಡಳಿತ ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಇದರಿಂದಾಗಿ ಇದುವರೆಗೂ ಕೋವಿಡ್ ನಿಂದಾಗಿ 293 ಜನ ಮೃತಪಟ್ಟಂತಾಗಿದೆ.

ಜಿಲ್ಲೆಯ ಮುಂಡರಗಿ ತಾಲೂಕಿನ ಕಲಕೇರಿ ನಿವಾಸಿ 82 ವರ್ಷದ ವ್ಯಕ್ತಿ ಜೂನ್ 13 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜೂನ್ 17 ರಂದು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದು, ಮೃತರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಪ್ರಕಟಣೆ ನೀಡಿದ್ದಾರೆ.

ಇಂದು 28 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 25611 ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -06, ಮುಂಡರಗಿ-11, ನರಗುಂದ-00, ರೋಣ-02, ಶಿರಹಟ್ಟಿ-09, ಹೊರಜಿಲ್ಲೆಯ-00 ಸೇರಿದಂತೆ 28 ಪ್ರಕರಣಗಳು ದೃಢಪಟ್ಟಿವೆ.

ಇಂದು 63 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 24964 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 354 ಜನ ಸೋಂಕಿತರು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 80 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಅನ್ ಲಾಕ್ ಜಾರಿ – ಬಸ್ ಸಂಚಾರಕ್ಕೆ ಅನುಮತಿ!

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಸರ್ಕಾರವು ಲಾಕ್ ಡೌನ್ ನಿರ್ಬಂಧಗಳನ್ನು ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ಕೋವಿಡ್ ಮಾರ್ಗ ಸೂಚಿ ನಿರ್ದೇಶನಗಳಂತೆ ಸೋಮವಾರ ಬೆಳಿಗ್ಗೆಯಿಂದ ಬಸ್ ಗಳ ಸಂಚಾರ ಆರಂಭಿಸಲಾಗುತ್ತದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ನಗರದ ಹೊಸೂರು ಬಸ್ ನಿಲ್ದಾಣ ಮತ್ತು ಗೋಕುಲ ರಸ್ತೆ ಬಸ್ ನಿಲ್ದಾಣ , ನವಲಗುಂದ, ಅಣ್ಣಿಗೇರಿ, ಕಲಘಟಗಿ, ಕುಂದಗೋಳ, ತಡಸ ಸೇರಿದಂತೆ ಪ್ರಮುಖ ನಗರಗಳಿಗೆ ಬಸ್ ಸಂಚರಿಸಲಿವೆ. ನೆರೆಯ ಜಿಲ್ಲೆಗಳಾದ ಗದಗ, ಇಲಕಲ್, ಬಾಗಲಕೋಟೆ, ವಿಜಯಪುರ, ಹಾವೇರಿ, ದಾವಣಗೆರೆ,ಶಿರಸಿ, ಬೆಳಗಾವಿ ಮತ್ತಿತರ ಸ್ಥಳಗಳಿಗೆ ಬಸ್ ಸಂಚಾರ ಆರಂಭಿಸಲಾಗುತ್ತದೆ. ಪ್ರಯಾಣಿಕರ ಪ್ರತಿಕ್ರಿಯೆ ಗಮನಿಸಿ ದೂರದ ಊರುಗಳಿಗೆ ವಿಸ್ತರಿಸಲು ಕ್ರಮ ವಹಿಸಲಾಗುತ್ತದೆ ಎಂದು ಹೇಳಿದ್ದಾರೆ.

ಸೋಂಕಿನ ಹಿನ್ನೆಲೆಯಲ್ಲಿ ಬಸ್, ಡಿಪೋ ಹಾಗೂ ಬಸ್ ನಿಲ್ದಾಣಗಳಲ್ಲಿ ಸ್ಯಾನಿಟೈಜೇಷನ್ ಮಾಡಲಾಗಿದೆ. ಲಸಿಕೆ ಪಡೆದುಕೊಂಡಿರುವ ಸಿಬ್ಬಂದಿಗಳನ್ನು ಮಾತ್ರ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ. ಸಿಬ್ಬಂದಿಗಳಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ವೈಯಕ್ತಿಕ ಬಳಕೆಗೆ ಸ್ಯಾನಿಟೈಸರ್ ನೀಡಲಾಗಿದೆ ಎಂದು ಹೇಳಿದ್ದಾರೆ.

ಶೇ. 50ರಷ್ಟು ಸಾಮರ್ಥ್ಯದಲ್ಲಿ ಪ್ರಯಾಣಿಕರಿಗೆ ಅವಕಾಶ ನೀಡಲಾಗುತ್ತದೆ. ನಿಂತು ಪ್ರಯಾಣಕ್ಕೆ ಅವಕಾಶವಿರುವುದಿಲ್ಲ. ಬೆಳಿಗ್ಗೆಯಿಂದ ಸಂಜೆ 7ರ ವರೆಗೆ ಬಸ್ ಗಳು ಸಂಚರಿಸಲಿವೆ. ಮಾಸ್ಕ್ ಧರಿಸುವುದು ಕಡ್ಡಾಯ. ಸಾಮಾಜಿಕ ಅಂತರ ಕಾಪಾಡುವ ಮೂಲಕ ಕೋವಿಡ್ ಮಾರ್ಗಸೂಚಿ ನಿರ್ದೇಶನಗಳ ಸಮರ್ಪಕ ಅನುಷ್ಠಾನಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

ಹುಬ್ಬಳ್ಳಿ ಗ್ರಾಮಾಂತರ ವಿಭಾಗದಲ್ಲಿ ಒಟ್ಟು 2216 ನೌಕರಸ್ಥರಿದ್ದಾರೆ. ಈ ಪೈಕಿ 1500ಕ್ಕೂ ಹೆಚ್ಚು ಚಾಲಕರು ಹಾಗೂ ನಿರ್ವಾಹಕರಿದ್ದಾರೆ. ಶೇ. 97ರಷ್ಟು ಸಿಬ್ಬಂದಿ ಮೊದಲ ಡೋಸ್ ಪಡೆದುಕೊಂಡಿದ್ದಾರೆ. ಕೆಲವರು ಎರಡನೇ ಡೋಸ್ ಪಡೆದುಕೊಂಡಿದ್ದಾರೆ. ಇನ್ನುಳಿದವರು ಕೂಡಲೆ ಲಸಿಕೆ ಪಡೆದುಕೊಳ್ಳುವಂತೆ ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

ಕೋವಿಡ್ ಪೂರ್ವದಲ್ಲಿ ಗೋವಾ, ಮಹಾರಾಷ್ಟ್ರ , ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ಪಕ್ಕದ ರಾಜ್ಯಗಳಿಗೆ ವೊಲ್ವೊ, ಸ್ಲೀಪರ್ , ರಾಜಹಂಸ ಮತ್ತು ವೇಗದೂತ ಸಾರಿಗೆಗಳು ಸೇರಿ ಹುಬ್ಬಳ್ಳಿ ಯಿಂದ 65 ಬಸ್ ಗಳು ನೆರೆಯ ರಾಜ್ಯಗಳಿಗೆ ಸಂಚರಿಸುತ್ತಿದ್ದವು. ಸರ್ಕಾರದ ಅನುಮತಿ ಬಂದ ನಂತರದಲ್ಲಿ ಈ ಬಸ್ ಗಳ ಸಂಚಾರ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.

ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನಗರದಲ್ಲಿನ ಹಳೆಯ ಬಸ್ ನಿಲ್ದಾಣದ ಪುನರ್ ನಿರ್ಮಾಣ ಕಾಮಗಾರಿಯ ಪ್ರಯುಕ್ತ ಬಸ್ ನಿಲ್ದಾಣದ ಈಗಿರುವ ಕಟ್ಟಡವನ್ನು ತೆರವುಗೊಳಿಸುವ ಕೆಲಸ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಹಳೆ ಬಸ್ ನಿಲ್ದಾಣದಿಂದ ಗ್ರಾಮೀಣ ಪ್ರದೇಶಗಳಿಗರ ಸಂಚರಿಸುತ್ತಿದ್ದ ಎಲ್ಲಾ ಬಸ್ಸುಗಳನ್ನು ಹೊಸೂರು ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ.
ಅದರಂತೆ ಕುಂದಗೋಳ, ಸಂಶಿ, ಶಿರಹಟ್ಟಿ, ಹುಲಗೂರ, ಕಲಘಟಗಿ, ತಡಸ, ನವಲಗುಂದ, ಅಣ್ಣಿಗೇರಿ ಮತ್ತಿತರ ಗ್ರಾಮೀಣ ಸ್ಥಳಗಳಿಗೆ ಹೋಗವ ಎಲ್ಲಾ ಬಸ್ ಗಳು ಹೊಸೂರು ಬಸ್ ನಿಲ್ದಾಣದಿಂದ ಹೊರಡುತ್ತವೆ.

ಮಗಳೊಂದಿಗೆ ಆತ್ಮಹತ್ಯೆಗೆ ಶರಣಾದ ಮಹಿಳೆ!

ವಿಜಯಸಾಕ್ಷಿ ಸುದ್ದಿ, ಹಾಸನ

ಅಪಘಾತದಲ್ಲಿ ಪತಿ ತೀರಿಕೊಂಡಿದ್ದಕ್ಕೆ ಬೇಸರದಿಂದ ತನ್ನ ಎರಡು ವರ್ಷದ ಮಗಳೊಂದಿಗೆ ತಾಯಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಆನೆ ಮಹಲ್ ಗ್ರಾಮದಲ್ಲಿ ನಡೆದಿದೆ. ಪ್ರಜ್ವಲ (26), ಸಾಧ್ವಿ (2) ಮೃತ ದುರ್ದೈವಿಗಳಾಗಿದ್ದಾರೆ.

ಅಪಘಾತದಲ್ಲಿ ಪ್ರಜ್ವಲ ಅವರ ಗಂಡ ಸುರೇಂದ್ರ ಸಾವನ್ನಪ್ಪಿದ್ದರು. ಈ ನಡುವೆ ಪ್ರಜ್ವಲ ಅವರಿಗೆ ಇನ್ನೊಂದು ಮದುವೆ ಮಾಡಿದ್ದರು. ಆನೆಮಹಲ್ ಗ್ರಾಮದ ಮೋಹನ್ ಎಂಬುವವರೊಂದಿಗೆ ಮದುವೆ ಮಾಡಲಾಗಿತು. ಪತಿಯ ಹೆಂಡತಿ ಕೂಡ ಮೂರು ತಿಂಗಳ ಹಿಂದೆ ಸಾವನ್ನಪ್ಪಿದ್ದರು. ಹೀಗಾಗಿ ಇಬ್ಬರ ಮದುವೆ ಮಾಡಿದ್ದರು.
ಆದರೆ, ಪ್ರಜ್ವಲ ಮಾತ್ರ ಮೊದಲ ಗಂಡನ ನೆನಪಿನಲ್ಲಿಯೇ ಇದ್ದರು. ಹೀಗಾಗಿ ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಸಕಲೇಶಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಕ್ರವರ್ತಿ ಸೂಲಿಬೆಲೆ ವಿರುದ್ಧ ದೂರು ದಾಖಲು!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಲ್ಲಿಯ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಂಗ್ರೆಸ್ ಪಕ್ಷದ ವಿರುದ್ಧ ಸೂಲಿಬೆಲೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರೋಪಿಸಿ ಹನುಮಂತನಗರ ಬ್ಲಾಕ್ ಕಾಂಗ್ರೆಸ್ ಮುಖಂಡ ತೇಜೇಶ್ ಕುಮಾರ್ ದೂರು ನೀಡಿದ್ದರು.

ಜೂ. 7 ರಂದು ಸಾಮಾಜಿಕ ಜಾಲತಾಣದಲ್ಲಿ ಚಕ್ರವರ್ತಿ ಸೂಲಿಬೆಲೆ ಹಾಕಿದ್ದ ವಿಷಯಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು. “ಕಾಂಗ್ರೆಸ್ ಆಕ್ಸಿಜನ್ ಅಕ್ರಮ ದಾಸ್ತಾನು ಮಾಡಿ ಜನರಿಗೆ ಸಿಗದ ಹಾಗೆ ಮಾಡಿತು. ಅಮಾಯಕರ ಸಾವನ್ನು ಸಂಭ್ರಮಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜು ಹಾಕಿತು ಎಂದು ಅವರು ಆರೋಪಿಸಿದ್ದರು.

ಇದು ಸುಳ್ಳು ಆರೋಪವಾಗಿದ್ದು, ಈ ಮೂಲಕ ಪಕ್ಷಕ್ಕೆ ಕೆಟ್ಟ ಹೆಸರು ತರಿಸಲಾಗುತ್ತಿದೆ ಎಂದು ತೇಜೇಶ್ ಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮಡದಿ ಸಾವಿಗೆ ಮನನೊಂದು ಪತಿ, ಮಕ್ಕಳು ಆತ್ಮಹತ್ಯೆಗೆ ಶರಣು!

ವಿಜಯಸಾಕ್ಷಿ ಸುದ್ದಿ, ಚಿಕ್ಕೋಡಿ

ಹೃದಯಾಘಾತದಿಂದ ಹೆಂಡತಿ ಸಾವನ್ನಪ್ಪಿದ್ದಕ್ಕೆ ಮನನೊಂದ ಪತಿ ಹಾಗೂ ಮಕ್ಕಳು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಚಿಕ್ಕೋಡಿ ತಾಲೂಕಿನ ಪೊಗತ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ. ಚನ್ನವ್ವ ರಂಗಾಪುರೆ(40) ಹೃದಯಾಘಾತದಿಂದ ಕಳೆದ ಒಂದು ವಾರದ ಹಿಂದೆಯೇ ಸಾವನ್ನಪ್ಪಿದ್ದರು.
ಆದರೆ, ಅವರ ಸಾವನ್ನು ಕುಟುಂಬಸ್ಥರಿಗೆ ಅರಗಿಸಿಕೊಳ್ಳಲು ಆಗುತ್ತಿರಲಿಲ್ಲ. ಹೀಗಾಗಿ ಇಂದು ಪತಿ ಕಾಡಪ್ಪ(47), ಕೀರ್ತಿ(20), ಸ್ಪೂರ್ತಿ(18) ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಎಲ್ಲರೂ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಿಂದಾಗಿ ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧಾರವಾಡ ಜಿಲ್ಲೆ ಅನ್ ಲಾಕ್

ವಿಜಯಸಾಕ್ಷಿ ಸುದ್ದಿ, ಧಾರವಾಡ

ಹಲವಾರು ಗೊಂದಲಗಳಿಗೆ ಕಾರಣವಾಗಿದ್ದ ಧಾರವಾಡ ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರೆಸುವ ಬಗೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧಿಕೃತವಾಗ ಧಾರವಾಡ ಜಿಲ್ಲೆಯನ್ನು ಅನ್ ಲಾಕ್ ಮಾಡಿ ಆದೇಶ ನೀಡಿದ್ದಾರೆ.

ಆರೋಗ್ಯ ಇಲಾಖೆ ಮತ್ತು ವಾರ್ ರೂಮ್ ನ ಸಮನ್ವಯದ ಕೊರತೆಯಿಂದ ಧಾರವಾಡ ಜಿಲ್ಲೆ ಅನ್ ಲಾಕ್ ನಿಂದ ಹೊರಗೆ ಉಳಿದಿತ್ತು. ಹೀಗಾಗಿ ಇಂದು ಜಿಲ್ಲಾ ಉಸ್ತವಾರಿ ಜಗದೇಶ್ ಶೆಟ್ಟರ ಸರ್ಕಾರದ ಮುಖ್ಯ ಕಾರ್ಯದರ್ಶಿ ಜೊತೆಯಲ್ಲಿ ಮಾತನಾಡಿ ಧಾರವಾಡ ಜಿಲ್ಲೆಯಲ್ಲಿ ಅನ್ ಲಾಕ್ ಆದೇಶ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಮಾತನಾಡಿದ ಅವರು ಇದರಲ್ಲಿ ಜಿಲ್ಲಾಡಳಿತದಿಂದ ಯಾವುದೇ ತಪ್ಪಾಗಿಲ್ಲ, ಧಾರವಾಡ ಅನ್ ಲಾಕ್ ಆಗದಿದ್ದರೆ ಆರ್ಥಿಕ ಚಟುವಟಿಕೆಗೆ ಹೊಡೆತ ಬೀಳಲಿದೆ. ಮುಖ್ಯಮಂತ್ರಿಗಳು, ಕಾಯದರ್ಶಿ ಹಾಗೂ ಸಚಿವ ಸುಧಾಕರ್ ಜೊತೆಗೆ ಮಾತನಾಡಿದ್ದೇನೆ. ಹೀಗಾಗಿ ಸರ್ಕಾರ ಅನ್ ಲಾಕ್ ಮಾಡಿ ಆದೇಶ ನೀಡಿದೆ ಎಂದಿದ್ದಾರೆ.

ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6 ರಿಂದ ಸಂಜೆ 5 ಗಂಟೆಯವರೆಗೆ ಅವಕಾಶ ಇದೆ. ಹೋಟೆಲ್‌ಗಳಲ್ಲಿ ಶೇ.50 ರಷ್ಟು ಗ್ರಾಹಕರಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಇನ್ನೂ ಯಾವ್ಯಾವುದಕ್ಕೆ ಅವಕಾಶ ನೀಡಲಾಗುತ್ತದೆ ಎಂಬುದರ ಕುರಿತು ಸ್ಪಷ್ಟ ಮಾಹಿತಿ ನಿರೀಕ್ಷಿಸಲಾಗಿದೆ.

ಧಾರವಾಡ ಜಿಲ್ಲೆ ಅನ್ ಲಾಕ್ ಕುರಿತು ಪರಿಷ್ಕೃತ ಆದೇಶ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ರಾಜ್ಯ ಸರ್ಕಾರ ಕೋವಿಡ್ ಅನ್‌ ಲಾಕ್ ಕುರಿತು ಹೊರಡಿಸಿದ ಆದೇಶದಲ್ಲಿ ಧಾರವಾಡ ಜಿಲ್ಲೆ ಬಿಟ್ಟು ಹೋಗಿದ್ದು. ಜಿಲ್ಲೆಯಲ್ಲಿ 10 ದಿನಗಳ ಕೋವಿಡ್ ಪಾಸಿಟಿವಿಟಿ ದರ ಸರಾಸರಿ ದರ ಶೇ.4.5 ರಷ್ಟಿದೆ. ಧಾರವಾಡ ಜಿಲ್ಲೆಗೂ ಅನ್‌ ಲಾಕ್ ಆದೇಶ ವಿಸ್ತರಿಸಿ ಸರ್ಕಾರದಿಂದ ಪರಿಷ್ಕೃತ ಆದೇಶ ಹೊರಡಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಜಿಲ್ಲೆಯಲ್ಲಿನ ಕೋವಿಡ್ ಸ್ಥಿತಿಗತಿ ಹಾಗೂ ಕೋವಿಡ್ ಲಸಿಕಾ ಅಭಿಯಾನದ ಕುರಿತು ಅಧಿಕಾರಿಗಳ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐ.ಸಿ.ಎಂ.ಆರ್ ವರದಿಯಲ್ಲಿ ಜಿಲ್ಲೆಯ ಪಾಸಿಟಿವಿಟಿ ದರ ಶೇ. 5ಕ್ಕಿಂತಲೂ ಕಡಿಮೆಯಿದೆ. ಆದರೆ, ಸ್ಟೇಟ್ ವಾರ್ ರೂಮ್‌ ನಿಂದ ಸಿಎಂ ನೇತೃತ್ವದಲ್ಲಿ ಜರುಗಿದ ಸಭೆಗೆ ಧಾರವಾಡ ಜಿಲ್ಲೆಯ ಪಾಸಿಟಿವಿ ದರ ಶೇ. 5.7 ರಷ್ಟಿದೆ ಎಂದು ಮಾಹಿತಿ ನೀಡಿದ್ದಾರೆ. ಹಾಗಾಗಿ ಅನ್‌ ಲಾಕ್ ಆದೇಶದಲ್ಲಿ ಜಿಲ್ಲೆಯ ಹೆಸರು ಕೈಬಿಟ್ಟಿತ್ತು.

ಇದನ್ನೂ ಓದಿ ಧಾರವಾಡ ಜಿಲ್ಲೆ ಅನ್ ಲಾಕ್

ಜಿಲ್ಲೆಯಲ್ಲಿ ಜನರು ಲಾಕ್‌ ಡೌನ್ ಸಂದರ್ಭದಲ್ಲಿ ಹೆಚ್ಚಿನ ಸಹಕಾರ ನೀಡಿದ್ದಾರೆ. ಹುಬ್ಬಳ್ಳಿ ವ್ಯಾಪಾರ ವಹಿವಾಟಿಗೆ ಹೆಸರಾಗಿದೆ. ಅಕ್ಕ ಪಕ್ಕದ ಜಿಲ್ಲೆಗಳ ಹಾಗೆಯೇ ಧಾರವಾಡ ಜಿಲ್ಲೆಯಲ್ಲಿ ಕೂಡ ಸ್ವಾಭಾವಿಕವಾಗಿ ಅನ್‌ ಲಾಕ್ ಮಾಡಬೇಕು. ಸರ್ಕಾರ ಹೊರಡಿಸಿದ ಅನ್‌ ಲಾಕ್ ಮಾರ್ಗಸೂಚಿಗಳನ್ನು ಯಥಾವತ್ತಾಗಿ ಜಿಲ್ಲೆಯಲ್ಲಿ ಪಾಲಿಸಲಾಗುವುದು. ಈ ಬಾರಿ ಅನ್‌ ಲಾಕ್ ಮಾರ್ಗಸೂಚಿಯಲ್ಲಿ ವ್ಯಾಪಾರ ವಹಿವಾಟಿಗಳಿಗೆ ಸಮಯ ಹೆಚ್ಚಿಸಲಾಗಿದೆ. ಬಿ.ಆರ್.ಟಿ.ಎಸ್ ಸೇರಿದಂತೆ ಅಂತರ್ ಜಿಲ್ಲಾ ಬಸ್ ಓಡಾಟ ಪ್ರಾರಂಭವಾಗವುದು. ಅಂತರಾಜ್ಯ ಬಸ್ ಓಡಾಟಗಳ ಬಗ್ಗೆ ರಾಜ್ಯ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಪ್ರಧಾನಿ ಮಂತ್ರಿಯವರ ಆಶ್ವಾಸನೆಯಂತೆ ನಾಳೆ ಜೂ. 21ರಂದು ಕೋವಿಡ್ ಲಸಿಕಾ ಮೇಳಕ್ಕೆ ಚಾಲನೆ ನೀಡಲಾಗುವುದು. 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಹಾಗೂ 18 ವರ್ಷ ಮೇಲ್ಪಟ್ಟ ಆರೋಗ್ಯ ಹಾಗೂ ಮಂಚೂಣಿ ಕಾರ್ಯಕರ್ತರು, ಸರ್ಕಾರ ಸೂಚಿಸಿದ ಆದ್ಯತಾ ಗುಂಪುಗಳಿಗೆ ಲಸಿಕೆ ನೀಡಲಾಗುವುದು. ಯುವ ಜನರು ಗೊಂದಲಕ್ಕೆ ಈಡಾಗುವುದು ಬೇಡ. 18 ವರ್ಷ ಮೇಲ್ಪಟ್ಟ ಮಂಚೂಣಿ ಕಾರ್ಯಕರ್ತರು ಹಾಗೂ ಆದ್ಯತಾ ಗುಂಪಿಗೆ ಸೇರಿದವರು ಮಾತ್ರ ಲಸಿಕಾ ಕೇಂದ್ರಗಳಿಗೆ ತೆರಳಿ ಲಸಿಕೆ ಪಡೆಯಬೇಕು ಎಂದು ಹೇಳಿದ್ದಾರೆ.‌

ಜಿಲ್ಲೆಯಲ್ಲಿ ಸದ್ಯ 38,020 ಕೋವಿಡ್‌ ಶೀಲ್ಡ್, 12,460 ಕೋವ್ಯಾಕ್ಸಿನ್ ಸೇರಿದಂತೆ ಒಟ್ಟು 50,480 ಲಸಿಕೆ ಲಭ್ಯ ಇವೆ. ಜೂ. 21 ರಂದು‌ 27 ಸಾವಿರ ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ 201 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಪೊಲೀಸ್ ಆಯುಕ್ತ ಲಾಭುರಾಮ್, ಜಿಪಂ ಸಿ.ಇ.ಓ ಡಾ. ಬಿ.ಸುಶೀಲ, ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ್ ಇಟ್ನಾಳ್, ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ್, ಉಪ ವಿಭಾಗಾಧಿಕಾರಿ ಗೋಪಾಲಕೃಷ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ್, ಜಿಲ್ಲಾ ಆರ್.ಸಿ.ಎಚ್ .ಓ ಡಾ.ಎಸ್.ಎಂ. ಹೊನಕೇರಿ, ತಹಶೀಲ್ದಾರ್ ಶಶಿಧರ ಮಾಡ್ಯಾಳ ಸೇರಿದಂತೆ ಹಲವರು ಇದ್ದಾರೆ.

error: Content is protected !!