Home Blog Page 3087

ಹೊಲದಲ್ಲೇ ಕೊಳೆಯುತ್ತಿದೆ ಶೇಂಗಾ ಬೆಳೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಮಳೆಯಾದರೆ ಕೇಡಲ್ಲ, ಮನೆ ಮಗ ಉಂಡರೆ ಕೇಡಲ್ಲ ಎನ್ನುವ ಗಾದೆ ಮಾತು ಈ ಬಾರಿ ರೈತರ ಪಾಲಿಗೆ ಸುಳ್ಳಾಗುವಂತೆ ಕಾಣುತ್ತಿದೆ. ಏಕೆಂದರೆ, ಅತಿಯಾದ ಮಳೆಯಿಂದ ಮುದ್ರಣ ಕಾಶಿ ಗದಗ ಜಿಲ್ಲೆಯ ಅನ್ನದಾತರು ಸಂಕ?ಕ್ಕೆ ಈಡಾಗಿದ್ದಾರೆ. ಫಸಲು ಕೈ ಸೇರುವ ಸಮಯದಲ್ಲಿ ಅತಿಯಾದ ಮಳೆಯಿಂದ ಬೆಳೆ ಜಮೀನಿನಲ್ಲಿ ಕೊಳೆಯುವಂತಾಗಿದೆ.
ಮುದ್ರಣ ಕಾಶಿಯಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ಉಂಟಾಗಿದೆ. ಫಸಲು ಪಡೆಯುವ ವೇಳೆಯಲ್ಲಿ ಅತಿಯಾದ ಮಳೆ ಸುರಿದಿದ್ದರಿಂದ ಬೆಳೆದು ನಿಂತಿರುವ ಹಾಗೂ ಕಿತ್ತು ಹಾಕಿರುವ ಶೇಂಗಾ ಜಮೀನಿನಲ್ಲಿ ಕೊಳೆಯುತ್ತಿದೆ. ತಮಗೆ ಸೂಕ್ತ ಪರಿಹಾರ ನೀಡುವಂತೆ ಅನ್ನದಾತರು ಒತ್ತಾಯ ಮಾಡುತ್ತಿದ್ದಾರೆ.
ಹೌದು. ಗದಗ ಜಿಲ್ಲೆಯ ಅನ್ನದಾತರು ತತ್ತರಿಸಿ ಹೋಗಿದ್ದಾರೆ. ಅತಿಯಾದ ಮಳೆಯಿಂದ ಬೆಳೆದ ಬೆಳೆ ಜಮೀನಿನಲ್ಲಿ ಕೊಳೆಯುವಂತಾಗಿದೆ.

ಸರ್ಕಾರ ನೆರವಿಗೆ ಬರಲಿ
ಈ ಬಾರಿ ಸಕಾಲಕ್ಕೆ ಉತ್ತಮ ಮಳೆಯಾಗಿದ್ದು, ಬೆಳೆಗಳು ಸಮೃದ್ಧವಾಗಿ ಬೆಳೆದಿದ್ದವು. ಇನ್ನೇನು ಫಸಲು ಕೈ ಸೇರುವ ಸಮಯದಲ್ಲಿ ವರುಣನ ಆರ್ಭಟಕ್ಕೆ ಬೆಳೆದ ಬೆಳೆ ಜಮೀನಿನಲ್ಲಿ ಕೊಳೆಯುವಂತಾಗಿದೆ. ಬೆಳೆ ನಾಶವಾಗಿದ್ದು, ಸರ್ಕಾರ ನಮ್ಮ ನೆರವಿಗೆ ಬರಲಿ ಎಂದು ಬೆಳೆ ಹಾನಿ ಅನುಭವಿಸಿದ ರೈತ ರುದ್ರಗೌಡ ಪಾಟೀಲ ಆಗ್ರಹಿಸಿದ್ದಾರೆ.

ಅಂದ ಹಾಗೆ ಗದಗ ಜಿಲ್ಲೆಯ ಮುಳಗುಂದ, ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಮುಂತಾದ ಭಾಗಗಳ ರೈತರು ಬೆಳೆದ ಶೇಂಗಾ ನಾಶವಾಗಿದೆ. ಫಸಲು ಕೊಡುವ ಸಮಯವಾದ್ದರಿಂದ ರೈತರು ಶೇಂಗಾ ಕಟಾವು ಮಾಡಿ ರಾಶಿ ಮಾಡಿ, ಮಾರಾಟ ಮಾಡುವ ಸಿದ್ಧತೆಯಲ್ಲಿದ್ದರು. ಆದರೆ, ಕಳೆದ ಎರಡು ವಾರಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ರೈತರು, ರೈತ ಕಾರ್ಮಿಕರು ಜಮೀನುಗಳಿಗೆ ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಶೇಂಗಾ ಬೆಳೆ ಜಮೀನಿನಲ್ಲಿ ಕೊಳೆಯುತ್ತಿದೆ. ಅತಿಯಾದ ಮಳೆಯಿಂದ ಇನ್ನುಳಿದ ಶೇಂಗಾ ಕಟಾವು ಮಾಡದ ಸ್ಥಿತಿ ನಿರ್ಮಾಣವಾಗಿದೆ. ಒಂದು ಎಕರೆ ಶೇಂಗಾಕ್ಕೆ 15ರಿಂದ 20 ಸಾವಿರ ರೂಪಾಯಿ ಖರ್ಚು ಮಾಡಿದರೂ ಬೆಳೆದ ಬೆಳೆ ರೈತರ ಕೈಗೆ ಬರುತ್ತಿಲ್ಲ. ಹೀಗಾಗಿ ಅತಿವೃಷ್ಟಿ ಪರಿಹಾರ ನೀಡಬೇಕೆಂದು ರೈತರು ಒತ್ತಾಯ ಮಾಡುತ್ತಿದ್ದಾರೆ.

ಬೆಂಬಲ ಬೆಲೆ, ವಿಮೆ ಕೊಡಿಸಲಿ: ಈ ಭಾಗದ ಹೆಸರು ಬೆಳೆ ಭಾಗಶಃ ಭೂತಾಯಿಯ ಮಡಿಲು ಸೇರಿ, ರೈತರು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದರು. ಶೇಂಗಾ ಬೆಳೆ ಸಮೃದ್ಧವಾಗಿ ಬೆಳದಿದ್ದು, ಆರ್ಥಿಕವಾಗಿ ಲಾಭ ಆಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿರುವಾಗ ಸತತ ಮಳೆಯಾಗಿದ್ದರಿಂದ ಶೇಂಗಾ ಬೆಳೆ ಜಮೀನಿನಲ್ಲಿ ಕೊಳೆಯುತ್ತಿದೆ. ಇನ್ನು ಹತ್ತಿ, ಮೆಣಸಿನಕಾಯಿ, ಗೋವಿನ ಜೋಳ, ಈರುಳ್ಳಿ ಬೆಳೆ ಸಹ ಅತಿಯಾದ ಮಳೆಯಿಂದ ಹಳದಿ ರೋಗಕ್ಕೆ ತುತ್ತಾಗಿವೆ. ಈಗ ಶೇಂಗಾ ಕಟಾವು ಮಾಡುವ ಸಮಯ. ಆದರೆ, ನಿರಂತರ ಮಳೆಯಿಂದ ಶೇಂಗಾ ನಾಶವಾಗಿದೆ. ಅಳಿದುಳಿದ ಶೇಂಗಾವನ್ನು ರಾಶಿ ಮಾಡಬೇಕು ಅಂದರೆ ಶೇಂಗಾ ಜೊತೆಗೆ ಮಣ್ಣು ಬರುತ್ತಿದೆ. ಹೀಗಾಗಿ ರೈತರು ಶೇಂಗಾ ಬೆಳೆಯ ರಾಶಿಯನ್ನು ಮಾಡಲು ಪರದಾಡುತ್ತಿದ್ದಾರೆ. ಸಾಲ ಸೋಲ ಮಾಡಿ ಬೆಳೆದ ಬೆಳೆ ಮಣ್ಣಲ್ಲಿ ಮಣ್ಣಾಗುತ್ತಿದೆ. ಶೇಂಗಾ ಬೆಳೆ ವಿಮೆ ಮಾಡಿಸಲಾಗಿದ್ದು, ಸರ್ಕಾರ ನಮಗೆ ವಿಮೆ ಹಾಗೂ ಶೇಂಗಾ ಬೆಳೆಗೆ ಬೆಂಬಲ ಬೆಲೆ ನೀಡಿ ಖರೀದಿ ಮಾಡಬೇಕು ಎಂದು ಬೆಳೆ ಹಾನಿಯಾದ ರೈತ ಚಂದ್ರಶೇಖರಗೌಡ ಆಗ್ರಹಿಸಿದ್ದಾರೆ.

ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ: ಸಲಗರೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಹಯೋಗದಲ್ಲಿ ಜಿಲ್ಲಾ ಸಮೀಕ್ಷಾ ಘಟಕದ ಕಚೇರಿ ಆವರಣದಲ್ಲಿ ನಡೆದ ಸಾರ್ವಜನಿಕರ ಮೇಲೆ ತಂಬಾಕು ಪದಾರ್ಥಗಳ ದು?ರಿಣಾಮಗಳ ಕುರಿತ ಬೀದಿ ನಾಟಕ ಜನಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜೆ. ಸಲಗರೆ ಉದ್ಘಾಟಿಸಿ, ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಿದರು..
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಬಸರೀಗಿಡದ ಮಾತನಾಡಿ, ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣದ ಕುರಿತು ಬೀದಿ ನಾಟಕಗಳ ಮೂಲಕ ಜನ ಜಾಗೃತಿ ಮೂಡಿಸಲಾಗುತ್ತಿದೆ. ಅಂಗಡಿಗಳ ಮೇಲೆ ದಾಳಿ ಮಾಡಿ ದಂಡ ವಸೂಲಿ ಮಾಡಲಾಗುತ್ತಿದೆ ಎಂದರು.
ಅಡವಿಸೋಮಾಪುರದ ಸಿದ್ಧಲಿಂಗೇಶ್ವರ ಜಾನಪದ ಕಲಾ ತಂಡದವರು ಬೀದಿ ನಾಟಕ ಪ್ರಸ್ತುತ ಪಡಿಸಿದರು.
ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ಜಗದೀಶ ನುಚ್ಚಿನ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಚವ್ಹಾಣ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು. ಎಸ್.ಎಸ್. ಪೀರಾ ಕಾರ್ಯಕ್ರಮ ನಿರೂಪಿಸಿದರು. ಬಸಮ್ಮ ಚಿತ್ತರಗಿ ವಂದಿಸಿದರು.
 

ರಸ್ತೆ ದುರಸ್ತಿ, ಬೆಳೆ ಸಮೀಕ್ಷೆ ಶೀಘ್ರ ಪೂರ್ಣಗೊಳಿಸಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ರಸ್ತೆಗಳು ಹಾನಿಗೀಡಾಗಿದ್ದು, ತಕ್ಷಣವೇ ಸಂಬಂಧಿಸಿದ ಇಲಾಖಾಧಿಕಾರಿಗಳು ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳ ರಸ್ತೆ ಸುಧಾರಣೆಗೆ ಸೂಕ್ತ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಸೂಚಿಸಿದರು.
ಜಿಲ್ಲಾಡಳಿತ ಭವನದ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಅ. 16 ಜರುಗಿದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ರಸ್ತೆಗಳು ಹಾನಿಯಾಗಿ ನಿತ್ಯ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಆದಷ್ಟು ಶೀಘ್ರವಾಗಿ ರಸ್ತೆ ಸುಧಾರಣೆಗೆ ಮುಂದಾಗುವ ಮೂಲಕ ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದರು.
ವಾರದೊಳಗೆ ವರದಿ ಸಲ್ಲಿಸಿ:ಅತಿವೃಷ್ಟಿಯಿಂದಾಗಿ ಹಾನಿಗೊಳಗಾದ ಜಿಲ್ಲೆಯ ಬೆಳೆಹಾನಿ ಕುರಿತು ಕೃಷಿ, ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ ನಡೆಸುತ್ತಿರುವ ಸಮೀಕ್ಷೆ ಕಾರ್ಯ ಶೀಘ್ರ ಪೂರ್ಣಗೊಳಿಸಿ ಪರಿಹಾರ ಪೋರ್ಟಲ್‌ನಲ್ಲಿ ಮಾಹಿತಿ ಒದಗಿಸಬೇಕು. ಅಧಿಕ ಮಳೆಯಿಂದಾಗಿ ಜಿಲ್ಲೆಯ ಗ್ರಾಮೀಣ, ನಗರ, ಪಟ್ಟಣ ಪ್ರದೇಶಗಳಲ್ಲಿ ಹಾನಿಗೊಳಗಾದ ಮನೆಗಳ ಸಮೀಕ್ಷಾ ಕಾರ್ಯವನ್ನು ಪೂರ್ಣಗೊಳಿಸಿ, ಕೂಡಲೇ ಪರಿಹಾರ ಒದಗಿಸಿ, ಒಂದು ವಾರದೊಳಗೆ ವರದಿ ಸಲ್ಲಿಸಬೇಕು. ಜಿಲ್ಲೆಯಲ್ಲಿ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಮಳೆ ಪ್ರಮಾಣ ಕಡಿಮೆಯಾದ ಬಳಿಕ ಎಲ್ಲ ಅಧಿಕಾರಿಗಳು ಕ್ಷೇತ್ರ ಭೇಟಿ ಮಾಡಿ, ಹಾನಿಗೊಳಗಾದ ಬೆಳೆ, ಮನೆ ಹಾನಿಗಳ ಸಮೀಕ್ಷೆ ಮಾಡಿ ಪರಿಹಾರಕ್ಕೆ ಸೂಕ್ತ ಕ್ರಮ ಜರುಗಿಸಬೇಕು ಎಂದರು.

ಅರಿವು ಮೂಡಿಸಿ
ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಜನರಲ್ಲಿ ಜನಾಂದೋಲನ ರೀತಿಯ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಏರ್ಪಡಿಸಿ, ಅರಿವು ಮೂಡಿಸಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಾಸ್ಕ್ ಬಳಸದೆ ನಿಯಮಗಳ ಉಲ್ಲಂಘಿಸಿದಲ್ಲಿ ದಂಡ ವಿಧಿಸಬೇಕು. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಎಲ್ಲ ಸರಕಾರಿ ಕಚೇರಿಗಳ ಅಧಿಕಾರಿ, ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕಚೇರಿಗೆ ಬರುವ ಸಾರ್ವಜನಿಕರಿಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಿಳಿಸಬೇಕು.
– ಎಂ. ಸುಂದರೇಶ್ ಬಾಬು, ಜಿಲ್ಲಾಧಿಕಾರಿ, ಗದಗ

ಅಗತ್ಯವಿದ್ದಲ್ಲಿ ಖಾಸಗಿ ವೈದ್ಯರ ಬಳಕೆ: ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಾಲೂಕುವಾರು ನಿಗದಿತ ಗುರಿಯನುಸಾರ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಬೇಕು. ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡಿ ಪರೀಕ್ಷಿಸುವ ಕಾರ್ಯ ಚುರುಕುಗೊಳಿಸಬೇಕು. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಗೃಹ ನಿಗಾದಲ್ಲಿರುವವರ ಮನೆಗಳಿಗೆ ಅಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಿ, ಪರಿಶೀಲಿಸಬೇಕು. ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಂಪರ್ಕದ ಹೆಚ್ಚುವರಿ 50 ಹಾಸಿಗೆಗಳ ವ್ಯವಸ್ಥೆ ಮಾಡಿಕೊಂಡಿದ್ದು, ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಸೋಂಕಿನಿಂದ ದಾಖಲಾದ ರೋಗಿಗೆ ತುರ್ತು ಚಿಕಿತ್ಸೆಯ ಅಗತ್ಯವಿದ್ದಲ್ಲಿ ಅವರನ್ನು ತಕ್ಷಣ ಜಿಲ್ಲೆಯ ನಿಗದಿತ ಕೋವಿಡ್ ಆಸ್ಪತ್ರೆಗೆ ವರ್ಗಾಯಿಸಬೇಕು. ಸೋಂಕಿತರ ಚಿಕಿತ್ಸೆಗಾಗಿ ಅಗತ್ಯವಿದ್ದಲ್ಲಿ ಖಾಸಗಿ ವೈದ್ಯರನ್ನು ಬಳಸಿಕೊಳ್ಳಬೇಕು. ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು, ಸಿಬ್ಬಂದಿಗೆ ಅಗತ್ಯ ಸುರಕ್ಷಾ ಪರಿಕರಗಳನ್ನು ಒದಗಿಸಬೇಕೆಂದು ಸೂಚಿಸಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಆನಂದ ಕೆ., ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ ಎಂ., ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ ಎಸ್.ಎನ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಸತೀಶ ಬಸರಿಗಿಡದ, ಜಂಟಿ ಕೃಷಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ, ಇತರ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
 
 

ಕೊರೊನಾ ಸೋಂಕು ಮನುಕುಲಕ್ಕೆ ಮಾರಕ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಕೊರೊನಾ ಸೋಂಕು ಜಾಗತಿಕವಾಗಿ ಮಾನವ ಕುಲಕ್ಕೆ ಮಾರಕವಾಗಿದ್ದು, ನಮ್ಮ ಜೀವ ರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ವ್ಯಕ್ತಿಗತ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೊರೊನಾ ಸೋಂಕು ನಿಯಂತ್ರಿಸಲು ಸಾರ್ವಜನಿಕರು ಕೈಜೋಡಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜಶೇಖರ ಪಾಟೀಲ ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಗದಗ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಲಯನ್ಸ್ ಕ್ಲಬ್ ಸಹಯೋಗದಲ್ಲಿ ನಡೆದ ಕೋವಿಡ್-೧೯ ಜನಾಂದೋಲನ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೋವಿಡ್-19 ಸೋಂಕಿಗೆ ಸದ್ಯ ಔ?ಧ ಇಲ್ಲದಿರುವ ಕಾರಣ ಪ್ರತಿಯೊಬ್ಬರೂ ಜಾಗೃತರಾಗಿರಬೇಕು. ಸುರಕ್ಷಿತವಾಗಿರಲು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೊರೊನಾ ನಿಯಂತ್ರಿಸಬೇಕು. ಆಗಾಗ ಸೋಪು ಹಾಗೂ ನೀರಿನಿಂದ ಕೈ ತೊಳೆದುಕೊಳ್ಳುವ ಮೂಲಕ ಕೋವಿಡ್‌ನಿಂದ ದೂರವಿರಬೇಕು. ನಾವು ಸುರಕ್ಷಿತವಾಗಿದ್ದು, ಇತರರನ್ನೂ ಸುರಕ್ಷಿತವಾಗಿರಿಸಬೇಕು ಎಂದರು.
ಜನಸಂದಣಿ ಇರುವ ಪ್ರದೇಶಗಳಲ್ಲಿ ಜಾಗೃತರಾಗಿದ್ದು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೋವಿಡ್‌ಗೆ ಸಂಬಂಧಿಸಿದ ಯುಕ್ತವಾದ ವರ್ತನೆಯನ್ನು ಅನುಸರಿಸುವುದರ ಜತೆಗೆ ಬೇರೆಯವರು ಅದನ್ನು ಅನುಸರಿಸುವಂತೆ ಉತ್ತೇಜನ ನೀಡಬೇಕು. ಈ ಮೂಲಕ ಮಾರಣಾಂತಿಕ ವೈರಾಣು ಹರಡುವುದನ್ನು ತಡೆಗಟ್ಟಬೇಕು ಎಂದು ನ್ಯಾ| ಪಾಟೀಲ ಹೇಳಿದರು.
ಕೋವಿಡ್-19 ತಡೆಗಟ್ಟವ ಕುರಿತು ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಜಿಲ್ಲಾ ಪೊಲೀಸ್ ವರಿ?ಧಿಕಾರಿ ಯತೀಶ್ ಎನ್., ಅಪರ ಜಿಲ್ಲಾ ಸತ್ರ ನ್ಯಾಯಾಧೀಶರಾದ ಎಂ.ವಿ. ನರಸಿಂಹಸಾ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ. ಸಲಗರೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸತೀಶ್ ಬಸರೀಗಿಡದ, ಜಿಲ್ಲಾ ನ್ಯಾಯವಾದಿಗಳ ಸಂಘ, ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳು ಇದ್ದರು.

ಪುನೀತ್ ರಾಜಕುಮಾರ್ ಅಭಿನಯದ ’ಜೇಮ್ಸ್’ ಚಿತ್ರೀಕರಣ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ’ಜೇಮ್ಸ್’ ಸಿನಿಮಾ ಚಿತ್ರೀಕರಣ ಗಂಗಾವತಿ ತಾಲೂಕಿನ ಮಲ್ಲಾಪುರ ಗ್ರಾಮದ ಹೊರ ವಲಯದಲ್ಲಿ ನಡೆಯಿತು. ಚಿತ್ರದ ಸಾಹಸ ದೃಶ್ಯವೊಂದರ ಚಿತ್ರೀಕರಣಕ್ಕಾಗಿ ಸೆಟ್ ಹಾಕಲಾಗಿದ್ದು, ಒಂದು ವಾರದಿಂದ ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಈಗಾಗಲೇ ಹೊಸಪೇಟೆ ಸುತ್ತಲಿನ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಗಂಗಾವತಿ ತಾಲೂಕಿನ ಮಲ್ಲಾಪುರ ಗ್ರಾಮದ ಹೊರ ವಲಯದಲ್ಲಿರುವ ಬಯಲು ಹಾಗೂ ಬೆಟ್ಟದ ಸುಂದರ ಪ್ರಾಕೃತಿಕ ಸ್ಥಳದಲ್ಲಿ ಸೆಟ್ ಹಾಕಲಾಗಿತ್ತು.
ಗಂಗಾವತಿಯಲ್ಲಿ ಜೇಮ್ಸ್ ಚಿತ್ರೀಕರಣ: ಈ ಮೊದಲು ಅ. 21ಕ್ಕೆ ಶೂಟಿಂಗ್ ನಿಗದಿ ಮಾಡಲಾಗಿತ್ತು. ಆದರೆ, ಅದಕ್ಕೂ ಮುನ್ನವೇ ಶೂಟಿಂಗ್ ಮಾಡಲಾಗಿದೆ. ಬೆಳಗ್ಗೆ 11 ಗಂಟೆಗೆ ಆಗಮಿಸಿದ ಪುನೀತ್, ಕೆಲವು ತಾಂತ್ರಿಕ ಸಮಸ್ಯೆಯಿಂದಾಗಿ ವಾಪಸ್ ಹೋದರು. ಸಂಜೆ ಮತ್ತೆ ಶೂಟಿಂಗ್ ನಡೆಯಿತು. ಚಿತ್ರೀಕರಣ ವೀಕ್ಷಿಸಲು ನಗರ ಹಾಗೂ ಮಲ್ಲಾಪುರ ಗ್ರಾಮದ ಸುತ್ತಲಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಆದರೆ, ಪೊಲೀಸರು ಮತ್ತು ಚಿತ್ರ ತಂಡದ ಬೌನ್ಸರ್‌ಗಳ ಭದ್ರತೆಯಿದ್ದ ಕಾರಣ ಬೆಟ್ಟ ಹತ್ತಿ, ದೂರದಿಂದಲೇ ಶೂಟಿಂಗ್ ವೀಕ್ಷಿಸಿದರು.

ರಸಗೊಬ್ಬರ ಪರವಾನಿಗೆ ಅಮಾನತು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಮುಂಡರಗಿಯ ಅನಧಿಕೃತ ಕೃಷಿ ಪರಿಕರ ದಾಸ್ತಾನು ಮಳಿಗೆ ಜೆ.ಎಚ್.ಎಚ್. ಅಗ್ರೋ ಕೇಂದ್ರಕ್ಕೆ ಬೆಳಗಾವಿಯ ಜಂಟಿ ಕೃಷಿ ನಿರ್ದೇಶಕರ ನೇತೃತ್ವದಲ್ಲಿ ಅ. 10ರಂದು ಭೇಟಿ ನೀಡಿ ಪರಿಶೀಲಿಸಲಾಯಿತು.
ಈ ವೇಳೆ ರಸಗೊಬ್ಬರ ಪರವಾನಿಗೆಯಲ್ಲಿ ಅನುಮತಿಸದ ರಸಗೊಬ್ಬರವಲ್ಲದ ದಾಸ್ತಾನು ಕಂಡು ಬಂದಿದ್ದು, ಪರವಾನಗಿದಾರರು ರಸಗೊಬ್ಬರ ನಿಯಂತ್ರಣಾಜ್ಞೆ ಉಲ್ಲಂಘಿಸಿದ್ದಾರೆ. ಹೀಗಾಗಿ ರಸಗೊಬ್ಬರ ಪರಿವೀಕ್ಷಕರು ಕೃಷಿ ಮಳಿಗೆಯ ರಸಗೊಬ್ಬರವಲ್ಲದ ದಾಸ್ತಾನನ್ನು ಜಪ್ತಿ ಮಾಡಿದ್ದಾರೆ.
ರಸಗೊಬ್ಬರ ನಿಯಂತ್ರಣಾಜ್ಞೆ ನಿಯಮ ಉಲ್ಲಂಘಿಸಿರುವುದರಿಂದ ಅ. 13ರಿಂದ ಮುಂದಿನ 15 ದಿನಗಳವರೆಗೆ ರಸಗೊಬ್ಬರ ಪರವಾನಿಗೆ ಅಮಾನತುಗೊಳಿಸಿ ಮುಂಡರಗಿಯ ಸಹಾಯಕ ಕೃಷಿ ನಿರ್ದೇಶಕರು ಆದೇಶಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಹತ್ರಾಸ್ ಪ್ರಕರಣ: ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ತನಿಖೆಗೆ ಒಪ್ಪಿಸಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಯುವತಿ ಮೇಲೆ ದೌರ್ಜನ್ಯ ನಡೆದಿರುವ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಸಬೇಕೆಂದು ಸಿಐಟಿಯು ಒತ್ತಾಯಿಸಿದೆ.
ಸಿಐಟಿಯು, ಎಐಕೆಎಸ್, ಎಐಎಡಬ್ಲ್ಯೂಯು ಮತ್ತು ಎಐಡಿಡಬ್ಲ್ಯೂಎ ಸಂಘಟನೆಗಳ ನಿಯೋಗವು ಹತ್ರಾಸ್‌ನ ಗುಲರಿ ಗ್ರಾಮಕ್ಕೆ ಅ. ೪ರಂದು ಭೇಟಿ ನೀಡಿ ಮೃತ ಯುವತಿಯ ಕುಟುಂಬಕ್ಕೆ ಬೆಂಬಲ ಹಾಗೂ ಸೌಹಾರ್ದದ ಭರವಸೆ ನೀಡಿತ್ತು.
ಉನ್ನಾವೋ ಮಾದರಿಯ ಪ್ರಕರಣಗಳು ಹೆಚ್ಚುತ್ತಿದ್ದು, ಯೋಗಿ ನೇತೃತ್ವದ ಸರ್ಕಾರ ಉತ್ತರ ಪ್ರದೇಶದಲ್ಲಿ ಅಪರಾಧೀಕರಣದ ಆಳ್ವಿಕೆಯನ್ನು ಬಲಪಡಿಸುತ್ತಿದೆ. ದೌರ್ಜನ್ಯಗಳು ಹೆಚ್ಚುತ್ತಿವೆ. ರಾಜ್ಯವು ಮೇಲ್ಜಾತಿ ಭೂಮಾಲಕ ಶಕ್ತಿಗಳ ಪ್ರಯೋಗಾಲಯವಾಗಿದೆ. ದಲಿತರನ್ನು ಮತ್ತು ನ್ಯಾಯಕ್ಕಾಗಿ ಧ್ವನಿ ಎತ್ತುವವರನ್ನು ಹೆದರಿಸಲಾಗುತ್ತಿದೆ. ಇದರ ವಿರುದ್ಧ ನಿರಂತರ ಹೋರಾಟಗಳ ಭಾಗವಾಗಿ ಸಿಐಟಿಯು, ಎಐಕೆಎಸ್ ಮತ್ತು ಎಐಎಡಬ್ಲ್ಯು ಸಂಘಟನೆಗಳ ಜಂಟಿ ಸಭೆಯನ್ನು ನಡೆಸಲಾಗಿದ್ದು, ದಲಿತರು, ಮಹಿಳೆಯರು ಮತ್ತು ಸಾಮಾಜಿಕವಾಗಿ ಹಿಂದುಳಿದವರ ಮೇಲಿನ ದಮನ, ದೌರ್ಜನ್ಯಗಳ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ಭಾಗವಾಗಿ ಕೊಪ್ಪಳ ತಾಲೂಕು ಜಂಟಿ ಕ್ರಿಯಾ ಸಮಿತಿ ತಹಸೀಲ್ದಾರರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿತು.
ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ 1989ನ್ನು ಹಿಂದಿನ ಸರ್ಕಾರಗಳು ಸಮರ್ಪಕವಾಗಿ ಜಾರಿ ಮಾಡಲಿಲ್ಲ ಆದರೆ ಬಿಜೆಪಿ ಸರ್ಕಾರ ಕಾಯ್ದೆಯನ್ನು ದುರ್ಬಲಗೊಳಿಸುತ್ತದೆ. ಇದರಿಂದ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ. ಹತ್ರಾಸ್‌ನಲ್ಲಿ ೧೯ರ ಹರೆಯದ ದಲಿತ ಯುವತಿಯನ್ನು ಮೇಲ್ಜಾತಿ ಭೂಮಾಲೀಕರು ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದು ಅಮಾನುಷ ಕೃತ್ಯ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಬೇಡಿಕೆಗಳು
ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ನಿಗದಿತ ಅವಧಿಯಲ್ಲಿ ಹತ್ರಾಸ್ ಪ್ರಕರಣದ ಪರಿಣಾಮಕಾರಿ ತನಿಖೆ ಮಾಡಬೇಕು. ಕರ್ತವ್ಯ ನಿರ್ವಹಿಸದ ಪೊಲೀಸ್ ಮತ್ತು ಇತರ ಅಧಿಕಾರಿಗಳಿಗೆ ಕಠಿನ ಶಿಕ್ಷೆ ವಿಧಿಸಬೇಕು. ಮೃತ ಯುವತಿಯ ಕುಟುಂಬಕ್ಕೆ ಗರಿಷ್ಠ ರಕ್ಷಣೆ ನೀಡಬೇಕು. ಎಲ್ಲ ಪ್ರಕರಣಗಳಲ್ಲಿ ದೌರ್ಜನ್ಯಕ್ಕೊಳಗಾದವರಿಗೆ ನ್ಯಾಯ ದೊರಕಿಸಬೇಕು. ನ್ಯಾಯಮೂರ್ತಿ ವರ್ಮಾ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು. ದೌರ್ಜನ್ಯಕ್ಕೊಳಗಾದವರ ಕುಟುಂಬಗಳಿಗೆ ಕೃಷಿ ಭೂಮಿ ಮತ್ತು ವಾಸಕ್ಕೆ ಮನೆಗಳು ಒದಗಿಸಬೇಕು. ಎಲ್ಲರಿಗೂ ಉದ್ಯೋಗವನ್ನು ಮತ್ತು ಕನಿಷ್ಠ ವೇತನವನ್ನು ಖಚಿತಪಡಿಸಬೇಕು. ಮೀಸಲಾತಿ, ದಲಿತರ ದೌರ್ಜನ್ಯ ತಡೆ ಕಾಯ್ದೆ ಮತ್ತು ಮಹಿಳಾ ದೌರ್ಜನ್ಯ ವಿರೋಧಿ ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಸಿಐಟಿಯು ಸಂಘಟನೆಯ ಕಾಸಿಂ ಸರ್ದಾರ, ಹನುಮೇಶ ಕಲ್ಮಂಗಿ, ಸುಂಕಪ್ಪ ಗದಗ, ಅಂದಪ್ಪ ಬರದೂರು, ಹುಸೇನಸಾಬ ನದಾಫ್, ಸಂಜಯ್ ದಾಸ, ಹುಲುಗಪ್ಪ ಗೋಕಾವಿ, ?ಣ್ಮುಖಪ್ಪ ಹಿರೇಬೀಡನಾಳ, ಉಮೇಶ ಬಳಗೇರಿ, ಇಸ್ಮಾಯಿಲ್ ಅಗಳಕೇರಾ, ವೆಂಕಟೇಶ ಅಗಳಕೇರಾ, ಬಿ. ಕಂಠಿಬಸವೇಶ್ವರ, ನಿಂಗಪ್ಪ ಹಳ್ಳಿ, ಅಮೀನಾ ಬೇಗಂ, ಉಸ್ಮಾನ ಸಾಬ, ಅಕ್ಕಮ್ಮ ಗೊಲ್ಲರ, ಬಂದಮ ಹಕಾರಿ, ಗಂಗವ್ವ, ರೇಣುಕವ್ವ ಇಡಕಲ್, ನಿಂಗಪ್ಪ ಪುರದ, ಹನುಮಪ್ಪ ಗೌಡ್ರ, ಭರಮಣ್ಣ ಭೀಮನೂರು, ಫಕೀರಮ್ಮ ಮಿರಗನತಾಂಡಿ, ಯಮುನಾ ಹೊಸಮನಿ, ಶೃತಿ ಆದಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
 

ಜಾಗತಿಕ ಹಿರಿಯರ ದಿನಾಚರಣೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ
ನರಗುಂದ ಪಟ್ಟಣದ ಬಾಬಾಸಾಹೇಬ ಭಾವೆ ಆರೋಗ್ಯ ಕೇಂದ್ರದಲ್ಲಿ ಅ. 16ರಂದು ಜಾಗತಿಕ ಹಿರಿಯರ ದಿನವನ್ನು ಆಚರಿಸಲಾಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಜಾಗೃತಿ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು. ಅನಂತರ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮವನ್ನು ತಹಸೀಲ್ದಾರ ಎ.ಎಚ್. ಮಹೇಂದ್ರ ಉದ್ಘಾಟಿಸಿದರು.
ತಹಸೀಲ್ದಾರರು ಮಾತನಾಡಿ, ಸರ್ಕಾರ ಹಿರಿಯರಿಗಾಗಿ ರೂಪಿಸಿರುವ ಯೋಜನೆಗಳ ಕುರಿತು ಗ್ರಾಮ ಮಟ್ಟದಲ್ಲಿ ಎಲ್ಲರಿಗೂ ಜಾಗೃತಿ ಮೂಡಿಸಬೇಕು. ಇವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ರೇಣುಕಾ ಕೊರವನವರ ಮಾತನಾಡಿ, ಇಲಾಖೆಯ ಆದೇಶದಂತೆ ಅ. 1ರಂದು ಜಾಗತಿಕ ಹಿರಿಯರ ದಿನವನ್ನು ಆಚರಿಸಲಾಗುತ್ತದೆ. ಈ ಮುಖಾಂತರ ಹಿರಿಯ ನಾಗರಿಕರಿಗಾಗಿ ನಮ್ಮ ಇಲಾಖೆಯಲ್ಲಿರುವ ಸೌಲಭ್ಯಗಳ ಕುರಿತು ಮತ್ತು ಹಿರಿಯರು ತಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದರು.
ಆಸ್ಪತ್ರೆಯ ಹಿರಿಯ ಆರೋಗ್ಯ ವಿಭಾಗದ ಶಿಕ್ಷಣಾಧಿಕಾರಿ ಜಿ.ವಿ. ಕೊಣ್ಣೂರ ಉಪನ್ಯಾಸ ನೀಡಿ, ವಯಸ್ಸಾದವರಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳು, ಅವುಗಳ ಪರಿಹಾರ ಹಾಗೂ ಮುಂಜಾಗ್ರತಾ ಕ್ರಮಗಳನ್ನು ವಿವರಿಸಿದರು,
ಭುವನೇಶ್ವರಿ ಕೆ. ಪ್ರಾರ್ಥನೆ ಗೀತೆ ಹಾಡಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಬಿ. ಜೋಶಿ ಸ್ವಾಗತಿಸಿದರು. ಎಂ.ಆರ್. ಕುಲಕರ್ಣಿ, ನಾಗರಾಜ ವಿಠಪ್ಪನವರ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ತಾಲೂಕು ಆರೋಗ್ಯಾಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.

ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ ಬಳಸಿ: ಹುಕ್ಕೇರಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ
ಕೊರೊನಾ ಬಹಳಷ್ಟು ಅಪಾಯಕಾರಿಯಾಗಿ ಕಂಡುಬಂದಿದ್ದು, ಇದರ ನಿಯಂತ್ರಣಕ್ಕಾಗಿ ಎಲ್ಲರೂ ಮಾಸ್ಕಗಳನ್ನು ಹಾಗೂ ಸ್ಯಾನಿಟೈಸರ್ ಉಪಯೋಗಿಸುವುದನ್ನು ಕಡ್ಡಾಯವಾಗಿ ಮುಂದುವರೆಸಿ ಆರೋಗ್ಯ ಕಾಪಾಡಿಕೊಳ್ಳಲು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಎಲ್.ಎಸ್. ಹುಕ್ಕೇರಿ ತಿಳಿಸಿದರು.
ನರಗುಂದ ಜೆಎಂಎಫ್‌ಸಿ ನ್ಯಾಯಾಲಯ ಹಾಗೂ ಪೊಲೀಸ್ ಠಾಣೆ, ಆರೋಗ್ಯ ಇಲಾಖೆ ಹಾಗೂ ಕಾನೂನು ನೆರವು ಸಮಿತಿ ಮತ್ತು ನ್ಯಾಯವಾದಿಗಳ ಸಂಘದ ವತಿಯಿಂದ ಅ. 17ರಂದು ಕೊರೊನಾ ತಡೆಗಟ್ಟಲು ಹಾಕಿಕೊಂಡ ಜನಜಾಗೃತಿ ಅಭಿಯಾನ ರ‍್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ರಮೇಶ ನಾಯ್ಕರ್, ಸಿಪಿಐ ಡಿ.ಬಿ. ಪಾಟೀಲ, ಎಎಸ್‌ಐ ವಿ.ಜಿ. ಪವಾರ, ಎಸ್.ಆರ್. ರಾಯನಗೌಡ್ರ, ಎಂ.ವಿ. ಮೂಲಿಮನಿ, ಎಂ.ಆರ್. ಕುಲಕರ್ಣಿ, ಜಿ.ವಿ. ಕೊಣ್ಣೂರ, ಸಿ.ಎಸ್. ಪಾಟೀಲ, ಎಂ.ಎಚ್. ತಹಸೀಲ್ದಾರ, ಎಂ.ಆರ್. ಕುಲಕರ್ಣಿ, ಕೆ.ಎಸ್. ಹೂಲಿ, ಆರ್.ಟಿ. ಪಾಟೀಲ, ಎಸ್.ಎಂ. ಗುಗ್ಗರಿ, ಆನಂದ ಭೋಸಲೆ, ಎಸ್.ಎಂ. ಜಲಗೇರಿ, ನಿಂಗಪ್ಪ ಚಂದ್ರ, ಅಭಿಷೇಕ ಹಡಪದ, ಆನಂದ ಹೂಗಾರ, ಎಸ್.ಟಿ. ಗಣಿ, ಎ.ಆರ್. ತಳವಾರ ಉಪಸ್ಥಿತರಿದ್ದರು.

ಬಳಗಾನೂರು ಗ್ರಾಮದ ಘಟನೆಯ ಅಸಲಿಯತ್ತು ಏನು?

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ರಾಯಣ್ಣ ಮೂರ್ತಿ ತೆರವುಗೊಳಿಸಿದ ಘಟನೆಯ ಕುರಿತ ಅಸಲಿಯತ್ತು ಈಗ ಹೊರಬಂದಿದೆ. 2019 ಜನವರಿ 17 ರಂದು ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗಾಗಿ ಬಳಗಾನೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಟ್ರಸ್ಟ್‌ಗೆ ಗ್ರಾಮಪಂಚಾಯತಿಯವರು ಮೂರ್ತಿ ಪ್ರತಿಷ್ಠಾಪನೆಗಾಗಿ 500 ರೂಪಾಯಿಗಳ ಪಾವತಿಯನ್ನೂ ಪಡೆದಿದ್ದಾರೆ.
ಅದಕ್ಕೂ ಒಂದು ದಿನ ಹಿಂದೆ ಅಂದರೆ 2019 ರ ಜನವರಿ 16 ರಂದು ಮೂರ್ತಿ ಸ್ಥಾಪನೆಗೆ ಪರವಾನಿಗೆ ಪತ್ರವನ್ನೂ ಸಹ ಗ್ರಾಮಪಂಚಾಯತಿಯ ಕಡೆಯಿಂದ ಸದರಿ ಟ್ರಸ್ಟ್‌ಗೆ ನೀಡಲಾಗಿದೆ. ಅದರಂತೆ ನಿನ್ನೆ ರಾತ್ರಿ ಟ್ರಸ್ಟ್‌ನ ವತಿಯಿಂದ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.

ಆದರೆ ಇಂದು ಬೆಳ್ಳಂಬೆಳಗ್ಗೆ ಪೊಲೀಸರು ಗ್ರಾಮಕ್ಕೆ ಬಂದು ಹಾಲುಮತ ಸಮಾಜದವರನ್ನು ಮೂರ್ತಿ ಕುರಿತು ಮಾತನಾಡುವುದಾಗಿ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಸಭೆ ಸೇರಿಸಿ ಮತ್ತೊಂದೆಡೆ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಬೇರೆಡೆ ಸ್ಥಳಾಂತರ ಮಾಡಿದ್ದಾರೆ ಎಂದು ಸಮಾಜದ‌ ರವಿ ಆರೋಪ ಮಾಡಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆ ಸಭೆ ಸೇರಿದ್ದ ಜನರೆಲ್ಲರೂ ಮೂರ್ತಿಯ ಕಡೆ ಹೋದಾಗ ಅವರನ್ನು ಬ್ಯಾರಿಕೇಡ್ ಹಾಕಿ ತಡೆಯುವುದಲ್ಲದೇ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ ಎನ್ನಲಾಗಿದ್ದು, ಘಟನೆ ಸಂಬಂಧ ಹತ್ತು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಟ್ರಸ್ಟ್‌ಗೆ ನೀಡಿರುವ ಪರವಾನಿಗೆಯಂತೆ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಯಾಗಬೇಕು, ವಶಕ್ಕೆ ಪಡೆದವರನ್ನು ಕೂಡಲೇ ಬಿಡುಗಡೆಗೊಳಿಸಬೇಕೆನ್ನುವುದು ಹಾಲುಮತ ಸಮಾಜದವರ ಆಗ್ರಹವಾಗಿದೆ. ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

error: Content is protected !!