Home Blog Page 3088

ಸಕಾಲದಲ್ಲಿ ’ಸಕಾಲ ಸೇವೆ’ ಒದಗಿಸಿ: ಜಿಲ್ಲಾಧಿಕಾರಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗದಗ
ಸಕಾಲ ಸೇವೆಯಲ್ಲಿ ಸ್ವೀಕೃತವಾಗಿರುವ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ಮಾಡದೇ ಸಾರ್ವಜನಿಕರಿಗೆ ಕಾಲಮಿತಿಯೊಳಗೆ ಸೇವೆ ಒದಗಿಸಬೇಕು. ಜಿಲ್ಲೆಯಲ್ಲಿ ಅವಧಿ ಮೀರಿ ಬಾಕಿ ಉಳಿದಿರುವ ಪ್ರಕರಣಗಳನ್ನು ವಿಚಾರಣೆ ನಡೆಸಿ, ತ್ವರಿತವಾಗಿ ಇತ್ಯರ್ಥಗೊಳಿಸಬೇಕು’ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಸೂಚಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಸಕಾಲ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿನಾಕಾರಣ ತಿರಸ್ಕರಿಸಬೇಡಿ
ಸಕಾಲ ಸೇವೆಯನ್ನು ನಾಗರಿಕರಿಗೆ ಸಮಯಬದ್ಧವಾಗಿ ನೀಡಿ, ಸಮರ್ಪಕವಾಗಿ ಅನು?ನಗೊಳಿಸಬೇಕು. ಸಕಾಲದಲ್ಲಿ ಸ್ವೀಕೃತವಾಗಿರುವ ಅರ್ಜಿಗಳನ್ನು ವಿನಾಕಾರಣ ಅಥವಾ ಉದ್ದೇಶಪೂರಿತವಾಗಿ ತಿರಸ್ಕೃತಗೊಳಿಸಬಾರದು. ನಿಗದಿತ ಅವಧಿಯೊಳಗೆ ಅರ್ಜಿಗಳ ವಿಲೇವಾರಿ ಆಗುವಂತೆ ಕ್ರಮ ವಹಿಸಬೇಕು ಎಂದರು.

ಸಕಾಲ ಸೇವೆಯಲ್ಲಿ ತಾಂತ್ರಿಕ ದೋ?ಗಳು ಉದ್ಭವಿಸಿದಲ್ಲಿ ಸಕಾಲಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ, ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಸಕಾಲ ಸೇವೆ ಒದಗಿಸುತ್ತಿರುವ ಇಲಾಖೆಯಲ್ಲಿ ಸಾರ್ವಜನಿಕರಿಗೆ ಕಾಣಿಸುವಂತೆ ಕಡ್ಡಾಯವಾಗಿ ನಾಮಫಲಕ ಅಳವಡಿಸಬೇಕು. ಪ್ರತಿನಿತ್ಯ ಅಧಿಕಾರಿಗಳು ಕಚೇರಿಗೆ ಹಾಜರಾದ ತಕ್ಷಣ ಸಕಾಲ ಸೇವೆಯಲ್ಲಿ ಸ್ವೀಕೃತವಾಗಿರುವ ಅರ್ಜಿಗಳ ಬಗ್ಗೆ ಪರಿಶೀಲನೆ ನಡೆಸಬೇಕು. ಸಕಾಲ ಸೇವೆ ನೀಡುತ್ತಿರುವ ಜಿಲ್ಲೆಯ ಎಲ್ಲ ಇಲಾಖೆಗಳು ತ್ವರಿತ ಅರ್ಜಿ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಚುರುಕಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಸಕಾಲ ಯೋಜನೆ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ವರದಿ ನೀಡಲು ಸೂಚನೆ: ಜಿಲ್ಲೆಯಲ್ಲಿ ೪೫ ಇಲಾಖೆಗಳಲ್ಲಿ ೫೨೪ ಸಕಾಲ ಸೇವೆಗಳನ್ನು ಒದಗಿಸಲಾಗುತ್ತಿದ್ದು, ಸಕಾಲ ಅರ್ಜಿಗಳ ಸ್ವೀಕೃತಿಯಲ್ಲಿ ಇಳಿಕೆಯಾಗುತ್ತಿದೆ. ಅಲ್ಲದೆ, ಕೆಲವು ಇಲಾಖೆಗಳಲ್ಲಿ ಶೂನ್ಯ ಅರ್ಜಿಗಳ ಸ್ವೀಕೃತಿ ಆಗಿರುವ ಬಗ್ಗೆ ಗಮನಿಸಲಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕಚೇರಿಗಳಿಗೆ ಭೇಟಿ ನೀಡಿ, ಸಕಾಲದಡಿ ಶೂನ್ಯ ಸ್ವೀಕೃತಿಗೆ ಕಾರಣಗಳ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಿದರು.
ಬೆಳೆ ಸಮೀಕ್ಷೆ ಪೂರ್ಣಗೊಳಿಸಿ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹಾನಿಯಾಗಿರುವ ಬೆಳೆಗಳ ಬಗ್ಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಕೈಗೊಂಡಿರುವ ಜಂಟಿ ಬೆಳೆ ಸಮೀಕ್ಷೆ ಕಾರ್ಯ ಶೀಘ್ರವೇ ಪೂರ್ಣಗೊಳಿಸಬೇಕು. ಬೆಳೆ ಮತ್ತು ಮನೆ ಹಾನಿ ಆಗಿರುವ ಕುರಿತು ವರದಿ ಸಲ್ಲಿಸಬೇಕು. ಶಿಥಿಲಾವಸ್ಥೆಯಲ್ಲಿರುವ ಮಣ್ಣಿನ ಮನೆಗಳಲ್ಲಿ ವಾಸ ಮಾಡುತ್ತಿರುವ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಬೇಕು. ಮಳೆ ಪ್ರಮಾಣ ಕಡಿಮೆ ಆದನಂತರ ಜಿಲ್ಲೆಯಲ್ಲಿ ಹಾನಿಗೊಳಗಾಗಿರುವ ರಸ್ತೆಗಳನ್ನು ದುರಸ್ಥಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ನಿರ್ದೇಶಿಸಿದರು.
ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ ಎಂ., ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಸ್.ಎನ್. ರುದ್ರೇಶ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಿ. ಕಲ್ಲೇಶ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ., ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿ.ಎಲ್. ಬಾರಾಟಕ್ಕೆ, ವಯಸ್ಕರ ಶಿಕ್ಷಣಾಧಿಕಾರಿ ಮಂಗಳಾ ತಾಪಸ್ಕರ್ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಇದ್ದರು.
 
 

ಅಂಡರ್ ಪಾಸ್ ಸ್ವಚ್ಛಗೊಳಿಸಿ ಆಪ್ ಕಾರ್ಯಕರ್ತರಿಂದ ವಿಭಿನ್ನ ಪ್ರತಿಭಟನೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಹುಬ್ಬಳ್ಳಿ
ಸನಾ ಕಾಲೇಜು ಪಕ್ಕದ ಬಿ.ಆರ್.ಟಿ.ಎಸ್. ಬಸ್ ನಿಲ್ದಾಣದಲ್ಲಿ ಅವೈಜ್ಞಾನಿಕ ಅಂಡರ್ ಪಾಸ್ ನಿರ್ಮಾಣ ಮಾಡಿರುವುದನ್ನು ಖಂಡಿಸಿ ಆಮ್ ಆದ್ಮಿ ಪಕ್ಷ ಶುಕ್ರವಾರ ಅಂಡರ್ ಪಾಸ್ ಸ್ವಚ್ಛಗೊಳಿಸಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿತು.
ಇಲ್ಲಿನ ಬೈರಿದೇವರಕೊಪ್ಪದ ಸನಾ ಕಾಲೇಜು ಪಕ್ಕದ ಬಿ.ಆರ್.ಟಿ.ಎಸ್. ಅಂಡರ್ ಪಾಸ್ ಸಂಪೂರ್ಣ ಹದಗೆಟ್ಟಿದ್ದು, ಜನರು ಪ್ರಾಣ ಅಂಗೈಯಲ್ಲಿ ಹಿಡಿದು ರಸ್ತೆ ದಾಟುವಂತಾಗಿದೆ.
ಯೋಜನೆಯಲ್ಲಿ ಏಕೈಕ ಅಂಡರ್ ಪಾಸ್ ಇದ್ದರೂ ಅದರ ನಿರ್ವಹಣೆಯಲ್ಲಿ ಬಿ.ಆರ್.ಟಿ.ಎಸ್. ಎಡವಿದೆ. ಒಂದು ವರ್ಷದಿಂದ ಅಂಡರ್ ಪಾಸ್ ನಲ್ಲಿ ನೀರು ನಿಂತು ಕೆರೆಯಂತಾಗಿದೆ. ಬಿ.ಆರ್.ಟಿ.ಎಸ್. ಬಸ್ ನಿಲ್ದಾಣದಿಂದ ಬಸ್ಸಿಳಿದು ರಸ್ತೆ ದಾಟಲು ಕಷ್ಟವಾಗುತ್ತಿದ್ದು, ಇದನ್ನು ಖಂಡಿಸಿ ಆಮ್ ಆದ್ಮಿ ಪಕ್ಷದ ಮುಖಂಡರು, ಕಾರ್ಯಕರ್ತರು ಅಂಡರ್ ಪಾಸ್ ಸ್ವಚ್ಛಗೊಳಿಸಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದೇವೆ. ಸ್ವಚ್ಛ ಭಾರತ ಜಪ ಮಾಡುವ ನಾಯಕರಿಗೆ ಬಿ.ಆರ್.ಟಿ.ಎಸ್. ಅಂಡರ್ ಪಾಸ್ ಕಣ್ಣಿಗೆ ಬಿದ್ದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು, ಕೇಂದ್ರ ಸಚಿವರು ಹಾಗೂ ಶಾಸಕರು ಕಾಡಿಡಾರ್ ಗೆ ಭೇಟಿ ನೀಡಿ, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಮುಂದಾಗಬೇಕೆದು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಆಗ್ರಹಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ ನರಗುಂದ, ಕಾರ್ಯಕಾರಿ ಸಮಿತಿಯ ಸದಸ್ಯ ಅನಂತಕುಮಾರ ಭಾರತೀಯ, ಪಶ್ಚಿಮ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಶಶಿಕುಮಾರ್ ಸುಳ್ಳದ, ಲಕ್ಷ್ಮಣ ರಾಥೋಡ, ವಿ.ವಿ. ಮಾಗನೂರ, ಶಿವಲಿಂಗಪ್ಪ ಜಡೇನವರ, ಭೀಮಸಿ ಪೂಜಾರ, ಯುವ ಘಟಕದ ಉಸ್ತುವಾರಿ ಡೇನಿಯಲ್ ಐಕೋಸ್, ವೀರೇಂದ್ರ ಸಾಂಬ್ರಾಣಿ, ಲತಾ, ಶಿವಕಿರಣ ಇದ್ದರು.

ಹಿಂಗಾರು ಬಿತ್ತನೆಗೆ ಅಧಿಕ ಮಳೆ ಅಡ್ಡಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ನರಗುಂದ
ಹಿಂಗಾರು ಹಂಗಾಮು ಅಕ್ಟೋಬರ್ ಮೊದಲ ವಾರದಿಂದ ಆರಂಭ ಕಂಡಿದ್ದರೂ ನರಗುಂದ ತಾಲೂಕಿನ ಹೆಚ್ಚಿನ ಸಂಖ್ಯೆ ರೈತರು ಇನ್ನೂ ಭೂಮಿ ಹದಗೊಳಿಸಲು ತೊಂದರೆ ಅನುಭವಿಸುವಂತಾಗಿದೆ.
ಕಳೆದ ವರ್ಷದ ಹಿಂಗಾರು ಇದೇ ಅವಧಿಯಲ್ಲಿ ಶೇ. 20ರಷ್ಟು ಬಿತ್ತನೆಗೊಂಡಿತ್ತು. ಈ ವರ್ಷದ ಆಗಸ್ಟ್ ಮತ್ತು ಅಕ್ಟೋಬರ್ ಅವಧಿಯಲ್ಲಿ ಹೆಚ್ಚಿನ ಮಳೆ ಕಂಡಿದ್ದರಿಂದ ಹಿಂಗಾರು ಹಂಗಾಮಿನ ತಿಥಿ ಮುಗಿಯುವುದರೊಳಗಾಗಿ ರೈತರು ಬಿತ್ತನೆ ಪೂರ್ಣಗೊಳಿಸಬೇಕಿದೆ. ಆದರೆ, ಹೆಚ್ಚಿನ ಮಳೆಯಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಈ ನಡುವೆ ಮುಂಗಾರು ಹಂಗಾಮಿನಲ್ಲಿ ಬೆಳೆದ ಅನೇಕ ಬೆಳೆಗಳನ್ನು ತಾಲೂಕಿನ ಕೊಣ್ಣೂರ ಬೂದಿಹಾಳ ಮತ್ತು ಕಪ್ಪಲಿ, ಕಲ್ಪಾಪೂರ, ಶಿರೋಳ, ವಾಸನ, ಬೆಳ್ಳೇರಿ, ಸುರಕೋಡ, ಮುಗನೂರ ಗ್ರಾಮದ ರೈತರು ಮಲಪ್ರಭೆ ಹಾಗೂ ಬೆಣ್ಣೆಹಳ್ಳದ ಪ್ರವಾಹದಿಂದ ಕಳೆದುಕೊಂಡು ತೊಂದರೆ ಅನುಭವಿಸುವಂತಾಗಿದೆ. ಕೊಣ್ಣೂರ, ವಾಸನ, ಬೆಳ್ಳೇರಿ ಮತ್ತು ಬೂದಿಹಾಳದ ರೈತರು ಬೆಳೆದ ತರಕಾರಿ, ಪೇರಲ ಮತ್ತು ಇತರ ಬೆಳೆಗಳು ಹಾನಿಗೊಂಡು ಆತಂಕ ಎದುರಿಸುತ್ತಿದ್ದಾರೆ.
ಬಿತ್ತನೆ ಬೀಜ ಲಭ್ಯ:
ಕೆಲವೇ ಕೆಲವು ಗ್ರಾಮೀಣ ಭಾಗಗಳ ರೈತರು ಹಿಂಗಾರು ಹಂಗಾಮಿಗೆ ಸೂರ್ಯಪಾನ ಬಿತ್ತನೆ ಮಾಡಿದ್ದಾರೆ. ಮಳೆಯ ಪರಿಣಾಮದಿಂದ ಅವರಿಗೂ ತೊಂದರೆ ತಪ್ಪಿಲ್ಲ. ಈ ನಡುವೆ ಅ. 9ರಿಂದ ಹಿಂಗಾರು ಹಂಗಾಮಿಗಾಗಿ ನರಗುಂದ ಹಾಗೂ ಕೊಣ್ಣೂರಿನ ಮತ್ತು ಟಿಎಪಿಸಿಎಂಎಸ್ ಹಾಗೂ ಸುರಕೋಡ ಗ್ರಾಮದ ರೈತ ಸೇವಾ ಕೇಂದ್ರದಲ್ಲಿ ಹಿಂಗಾರು ಬಿತ್ತನೆ ಬೀಜ ಒದಗಿಸಲಾಗುತ್ತಿದೆ.
ಸದ್ಯದ ಸ್ಥಿತಿಯಲ್ಲಿ ಕಡಲೆ ಮತ್ತು ಜೋಳದ ಬೀಜಗಳನ್ನು ರೈತ ಸಂಪರ್ಕ ಕೇಂದ್ರದಿಂದ ನೀಡಲಾಗುತ್ತಿದೆ. ಸಾಮಾನ್ಯವರ್ಗದವರಿಗೆ ಕಡಲೆ 20 ಕೆಜಿ ಪ್ಯಾಕೇಟಿಗೆ 900 ರೂ., ಎಸ್‌ಟಿ/ಎಸ್‌ಟಿ ವರ್ಗದವರಿಗೆ 650 ರೂ., 3 ಕೆಜಿ ಜೊಳದ ಪ್ಯಾಕೇಟಿಗೆ ಸಾಮಾನ್ಯ ವರ್ಗಕ್ಕೆ 110 ರೂ., ಎಸ್‌ಸಿ/ಎಸ್‌ಟಿ ಜನಾಂಗಕ್ಕೆ 81 ರೂ. ದರದಲ್ಲಿ ರೈತ ಸಂಪರ್ಕ ಕೇಂದ್ರಗಳಿಂದ ಒದಗಿಸಲಾಗುತ್ತಿದೆ. ಗೋದಿ ಮತ್ತು ಸೂರ್ಯಪಾನ ಬೀಜಗಳು ಇನ್ನೂ ರೈತ ಸಂಪರ್ಕ ಕೇಂದ್ರದಲ್ಲಿ ದೊರೆಯುತ್ತಿಲ್ಲ. ಆ ಬೀಜಗಳನ್ನು ಆದಷ್ಟು ಶೀಘ್ರ ತರಿಸಿ ರೈತರಿಗೆ ಒದಗಿಸಲಾಗುವುದು ಎಂಧು ಕೃಷಿ ಇಲಾಖೆ ಮಾಹಿತಿ ನೀಡಿದೆ.

ನರಗುಂದ: ಕೃಷಿ ಪರಿಕರ ಮಾರಾಟಗಾರರ ಸಭೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ನರಗುಂದ
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಕೃಷಿ ಇಲಾಖೆ ವತಿಯಿಂದ ಕೃಷಿ ಪರಿಕರ ಮಾರಾಟಗಾರರ ಸಭೆಯನ್ನು ಅ. ೧೫ರಂದು ಆಯೋಜಿಸಲಾಗಿತ್ತು. ಗದುಗಿನ ಸಹಾಯಕ ಕೃಷಿ ನಿರ್ದೇಶಕ ಜಾರಿದಳದ ಸಂತೊಷ ಪಟ್ಟದಕಲ್ ಕೃಷಿ ಪರಿಕರ ಮಾರಾಟಗಾರರಿಗೆ ಕೆಲವು ನಿರ್ದೇಶನಗಳನ್ನು ನೀಡಿದರು.
ಪಟ್ಟದಕಲ್ ಸಭೆಯಲ್ಲಿ ಮಾತನಾಡಿ, ಕಂಪನಿಗಳಿಂದ ಕೀಟನಾಶಕ ಕೊಳ್ಳುವಾಗ ಕೀಟನಾಶಕಗಳೊಂದಿಗೆ ಮಾಹಿತಿ ಚೀಟಿ ಇರುವುದನ್ನು ಪರೀಕ್ಷಿಸಿ ಖಾತರಿಪಡಿಸಿಕೊಳ್ಳಬೇಕು. ಪರವಾನಗಿಯಲ್ಲಿ ನಮೂದಿಸಿದ ಕೀಟನಾಶಕಗಳನ್ನು ಮಾತ್ರ ಮಾರಾಟ ಮಾಡಬೇಕು. ನೋಂದಾಯಿತ ಜೈವಿಕ ಕೀಟನಾಶಕಗಳನ್ನು ಮಾತ್ರ ಮಾರಾಟ ಮಾಡಬೇಕು.
ನೋಂದಾಯಿತವಲ್ಲದ ಲಘು ಪೋಷಕಾಂಶಗಳನ್ನು ಮಾರುವಂತಿಲ್ಲ. ಅವಧಿ ಮುಗಿದ ಕೀಟನಾಶಕಗಳನ್ನು ಮಾರಾಟ ಮಾಡಕೂಡದು. ಈ ತರಹದ ಕೀಟನಾಶಕಗಳ ಮೇಲೆ ನಮೂದಿಸಿದ ಅವಧಿ ಮುಗಿಯುವ ದಿನಾಂಕವನ್ನು ಯಾವುದೇ ಕಾರಣಕ್ಕೂ ತಿರುವಂತಿಲ್ಲ. ಗಂಧಕ ಮೂಲದ ಕೀಟನಾಶಕಗಳನ್ನು ಮಾರಾಟ ಮಾಡುವಾಗ ಈ ಕೀಟನಾಶಕಗಳ ಸ್ಟಾಕ್‌ನ್ನು ಪ್ರತ್ಯೇಕ ಸ್ಟಾಕ್ ಬುಕ್‌ನಲ್ಲಿ ನಮೂದಿಸುವುದು.

ಕಾಯ್ದೆ ಉಲ್ಲಂಘಿಸಬೇಡಿ:
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ ಅಂಗಡಿ ಸಭೆಯಲ್ಲಿ ಮಾತನಾಡಿ, ಕೃಷಿ ಪರಿಕರ ಮಾರಾಟಗಾರರು ಯಾವುದೇ ಸಂದರ್ಭದಲ್ಲಿ ಕಾಯ್ದೆಗಳನ್ನು ಉಲ್ಲಂಘಿಸದೆ ಕಾಯ್ದೆಗನುಸಾರವಾಗಿ ತಮ್ಮ ವ್ಯಾಪಾರ ನಡೆಸಿಕೊಂಡು ಹೋಗಬೇಕೆಂದು ಸೂಚಿಸಿದರು.

ರಸಗೊಬ್ಬರ ಚೀಲದ ಮೇಲೆ ನಮೂದಿಸಿದ ಮೂಲ ಬೆಲೆಗಿಂತ ಹೆಚ್ಚಿನ ದರದಲ್ಲಿ ಗೊಬ್ಬರ ಮಾರಾಟ ಮಾಡುವಂತಿಲ್ಲ. ಬೀಜ ಮಾರಾಟ ಮಾಡುವಾಗ ಬಿಲ್ ಬುಕ್‌ನ್ನು ಕಡ್ಡಾಯವಾಗಿ ನಿರ್ವಹಿಸಬೇಕು. ಬೀಜ ಮಾರಾಟ ಮಾಡುವವರು ಕಡ್ಡಾಯವಾಗಿ ಮೂಲ ಪ್ರಮಾಣಪತ್ರ ಪಡೆಯಬೇಕು, ರಸಗೊಬ್ಬರ ಮಾರಾಟ ಮಾಡುವಾಗ ಕಡ್ಡಾಯವಾಗಿ ಪಿಓಎಸ್ ಮಶಿನ್ ಬಿಲ್ಲಿನೊಂದಿಗೆ ಕೈ ಬರಹದ ಬಿಲ್ಲನ್ನು ನೀಡಬೇಕೆಂದರು. ರೈತರಿಗೆ ಉತ್ತಮ ಗುಣಮಟ್ಟದ ಕೃಷಿ ಪರಿಕರಗಳನ್ನು ಮಾರಾಟ ಮಾಡಬೇಕೆಂದು ಕೃಷಿ ಪರಿಕರ ಮಾರಾಟಗಾರರಿಗೆ ಪಟ್ಟದಕಲ್ ಸೂಚಿಸಿದರು.
ಕೃಷಿ ಇಲಾಖೆ ತಾಂತ್ರಿಕ ವರ್ಗದ ಅಧಿಕಾರಿ ಶ್ರೀಶೈಲ ಅಂಗಡಿ, ಎಸ್.ಆರ್. ಭಜಂತ್ರಿ ಹಾಗೂ ಕೃಷಿ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು. ವೆಂಕಟೇಶ ಗುಡಿಸಾಗರ ಸ್ವಾಗತಿಸಿದರು ಕೃಷಿ ಇಲಾಖೆ ಸಿಬ್ಬಂದಿ ಸಾಠೆ ಶಿವಾಜಿ ನಿರ್ವಹಿಸಿದರು.
 

ಕೊರೊನಾ ನಿಯಂತ್ರಣಕ್ಕೆ ನಿರಂತರ ಶ್ರಮಿಸುತ್ತಿರುವ ಎಎಸ್‌ಐ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ನರಗುಂದ
ಇಲ್ಲಿನ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿ ಸೇವೆ ಸಲ್ಲಿಸುತ್ತಿರುವ ವಿ.ಜಿ. ಪವಾರ ಅವರು ಕೊರೊನಾ ನಿಯಂತ್ರಣಕ್ಕಾಗಿ ಶ್ರಮಿಸುತ್ತ, ಮಾದರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.
ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮಕ್ಕಳಿಗೆ ಕೊರೊನಾ ನಿಯಂತ್ರಣ ಕುರಿತು ಮಾಹಿತಿ ನೀಡುವ ಜತೆಗೆ, ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚನೆ ನೀಡುತ್ತಿದ್ದಾರೆ.
ಮಕ್ಕಳಿಗೆ ಸರಿಯಾಗಿ ಮಾಸ್ಕ್ ಧರಿಸುವ ಕುರಿತು ಪ್ರಾತ್ಯಕ್ಷಿಕೆ ನೀಡುತ್ತಿದ್ದಾರೆ. ಇಷ್ಟಾಗಿಯೂ ಮಾಸ್ಕ್ ಧರಿಸದ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ದಂಡ ವಿಧಿಸುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆಯುತ್ತಿದ್ದಾರೆ.

ಅಡ್ನೂರು ಶ್ರೀ ಲಿಂಗೈಕ್ಯ: ತೋಂಟದ ಶ್ರೀಗಳ ಕಂಬನಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗದಗ
ಭಕ್ತಾನುರಾಗಿಗಳು ಮತ್ತು ಸರಳ ಸಜ್ಜನಿಕೆಗೆ ಹೆಸರಾದ ಅಡ್ನೂರಿನ ದಾಸೋಹ ಮಠದ ಶ್ರೀ ಪಂಚಾಕ್ಷರ ಶಿವಾಚಾರ್ಯರು ಲಿಂಗೈಕ್ಯರಾದುದಕ್ಕೆ ಡಂಬಳ-ಗದಗ ಮಠದ ಶ್ರೀ ಜಗದ್ಗುರು ಡಾ| ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಕಂಬನಿ ಮಿಡಿದಿದ್ದಾರೆ.
ಸಿಂದಗಿಯ ಲಿಂ. ಶ್ರೀ ಶಾಂತವೀರ ಪಟ್ಟಾಧ್ಯಕ್ಷರ ಶಿಷ್ಯರಾಗಿದ್ದ ಶ್ರೀ ಪಂಚಾಕ್ಷರ ಶಿವಾಚಾರ್ಯರು ಅತ್ಯಂತ ಆಚಾರನಿಷ್ಠರಾಗಿದ್ದರು. ಗ್ರಾಮೀಣ ಬಡಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಹಗಲಿರುಳೂ ಶ್ರಮಿಸುತ್ತಿದ್ದರು. ಯಲಬುರ್ಗಾ ತಾಲೂಕಿನ ರಾಜೂರಿನಲ್ಲಿ ಸತತ ಮೂರು ದಶಕಗಳ ಕಾಲ ಪುರಾಣ ಪ್ರವಚನಗಳನ್ನು ನಡೆಸುತ್ತ, ಜನರಲ್ಲಿ ಧಾರ್ಮಿಕ ಜಾಗೃತಿಯನ್ನುಂಟು ಮಾಡಿದ್ದರು.
ತಮ್ಮ ಹಾಗೂ ಪುಟ್ಟರಾಜ ಕವಿ ಗವಾಯಿಗಳವರೊಂದಿಗೆ ಹಾರ್ದಿಕ ಸಂಬಂಧವನ್ನು ಹೊಂದಿದ್ದ, ಶ್ರೀಗಳು ಶಿಷ್ಯರ ಮೇಲೆ ಅಪಾರ ಅಂತಃಕರಣವುಳ್ಳವರಾಗಿದ್ದರು. ಪೂಜ್ಯರ ಅಗಲುವಿಕೆ ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾಗದ ನಷ್ಟವನ್ನುಂಟು ಮಾಡಿದೆ ಎಂದು ತೋಂಟದಾರ್ಯ ಮಠದ ಶ್ರೀಗಳು ತಮ್ಮ ಶೋಕ ಸಂತಾಪದಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮುಂದುವರೆದ ಗಾಂಜಾ ರೇಡ್; 55 ಸಾವಿರ ಮೌಲ್ಯದ ಗಾಂಜಾ ವಶ, ಆರೋಪಿ ಬಂಧನ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ 55 ಸಾವಿರ ಮೌಲ್ಯದ ಗಾಂಜಾ ವಶಪಡಿಸಿಕೊಂಡು, ಅದನ್ನು ಬೆಳೆದಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ತಾಲೂಕಿನ ಕೋಟುಮಚಗಿ ಗ್ರಾಮ ವ್ಯಾಪ್ತಿಯ ಸರ್ವೇ ನಂಬರ್ 443/4 ರಲ್ಲಿ ಕಾಂತಪ್ಪ ಕೆಂಚಪ್ಪ ಮೇಟಿ ಎಂಬುವರಿಗೆ ಸೇರಿದ ಹೊಲದಲ್ಲಿ ಈ ಗಾಂಜಾ ಬೆಳೆದಿದ್ದು, ಆರೋಪಿ ಕಾಂತಪ್ಪನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.

ಆರು ಹಸಿ ಗಾಂಜಾ ಗಿಡಗಳು ಹೂ ತೆನೆ ಬೀಜಗಳು ಸೇರಿದಂತೆ ಇದರ ಒಟ್ಟು ಮೌಲ್ಯ 55 ಸಾವಿರವಾಗಿದೆ.

ಗದಗ ಅಬಕಾರಿ ಡಿಸಿ ಮೋತಿಲಾಲ್ ನೇತೃತ್ವದಲ್ಲಿ ಈ ದಾಳಿಯನ್ನು ಗದಗ ವಲಯ ಹಾಗೂ ಜಿಲ್ಲಾ ಅಬಕಾರಿ ವಿಚಕ್ಷಣ ದಳದ ಅಧಿಕಾರಿಗಳು ನಡೆಸಿದ್ದಾರೆ. ಈ ಕುರಿತು ಗದಗ ಅಬಕಾರಿ ವಲಯ ಕಛೇರಿಯಲ್ಲಿ ಪ್ರಕರಣ ದಾಖಲಾಗಿದೆ‌.

ಮನೆಯ ಛಾವಣಿ ಕುಸಿದು ವೃದ್ಧೆ ಸಾವು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಕಳೆದ ಮೂರು ದಿನಗಳಿಂದ ಸುರಿದ ಮಳೆಗೆ ಹಸಿಯಾಗಿದ್ದ ಮನೆಯ ಛಾವಣಿ ಕುಸಿದು ವೃದ್ಧೆಯೊಬ್ಬರು ಮೃತಪಟ್ಟಿದ್ದು ಮೊಮ್ಮಗ ತೀವ್ರವಾಗಿ ಗಾಯಗೊಂಡ ಘಟನೆ ಕೊಪ್ಪಳ ತಾಲೂಕಿನ ಟನಕನಕಲ್ ಗ್ರಾಮದಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.

ಈರಮ್ಮ ಮೆಳ್ಳಿಕೇರಿ (86) ಮೃತ ವೃದ್ಧೆ. ಮೊಮ್ಮಗ ಪರಪ್ಪನಿಗೂ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.


ಸ್ಥಳಕ್ಕೆ ತಹಸೀಲ್ದಾರ ಜಿ.ಬಿ.ಮಜ್ಜಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾಲಮಿತಿಯೊಳಗೆ ತೆರಿಗೆ ವಸೂಲಿ ಮಾಡಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ನಗರ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಆರ್ಥಿಕವಾಗಿ ಸದೃಢವಾಗಲು ಸಾರ್ವಜನಿಕರಿಂದ ಸಕಾಲಕ್ಕೆ ತೆರಿಗೆ ವಸೂಲಿ ಮಾಡಬೇಕು. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರ, ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ತಹಸೀಲ್ದಾರರೊಡನೆ ಹಾನಿಗೊಳಗಾದ ಮನೆಗಳ ಜಂಟಿ ಸಮೀಕ್ಷೆ ಜರುಗಿಸಿ ಸಂತ್ರಸ್ತರಿಗೆ ನೆರವು ನೀಡಲು ಅಗತ್ಯದ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿದ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈಗಾಗಲೇ ಬಾಕಿ ಉಳಿಸಿಕೊಂಡಿರುವ ತೆರಿಗೆಗಳನ್ನು ಗುರಿ ನಿಗದಿಪಡಿಸಿಕೊಂಡು ಕಾಲಮಿತಿಯೊಳಗೆ ವಸೂಲಿ ಮಾಡಲು ಕಾರ್ಯೋನ್ಮುಖರಾಗಬೇಕು. ಸ್ಥಳೀಯ ಸಂಸ್ಥೆಗಳ ಆದಾಯ ಹೆಚ್ಚಿಸಲು ಈಗಾಗಲೇ ಸಾರ್ವಜನಿಕರು ತೆರಿಗೆಗಳನ್ನು ಭರಿಸುತ್ತಿದ್ದು, ನ್ಯಾಯಯುತವಾಗಿ ತೆರಿಗೆಗೊಳಪಡುವ ವಿವಿಧ ರೀತಿಯ ಕಟ್ಟಡಗಳ ಅನುಗುಣವಾಗಿ ವ್ಯತ್ಯಾಸವಾಗಿ ಭರಿಸುತ್ತಿರುವ ತೆರಿಗೆಯನ್ನು ಗುರುತಿಸಲು ಸ್ಥಳೀಯ ಸಂಸ್ಥೆಗಳವಾರು, ವಾರ್ಡ್‌ವಾರು ಸಮೀಕ್ಷೆ ಕೈಗೊಳ್ಳಬೇಕು. ತೆರಿಗೆ ವಂಚನೆಯಾಗದಂತೆ ನಿಗಾವಹಿಸಬೇಕು ಎಂದು ಸ್ಥಳೀಯ ಸಂಸ್ಥೆ ಮುಖ್ಯಸ್ಥರಿಗೆ ತಿಳಿಸಿದರು.
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಈಗಾಗಲೇ ನಗರ ಸ್ಥಳೀಯ ಸಂಸ್ಥೆಗಳು ನಗರದ ಸ್ವಚ್ಛತೆಗೆ ಶ್ರಮಿಸುತ್ತಿದ್ದು, ಹಸಿ ಕಸ ಒಣ ಕಸ ವಿಂಗಡಣೆಯಲ್ಲಿ ಶೇ.100% ರಷ್ಟು ಗುರಿ ಸಾಧಿಸಬೇಕು. ದಿನನಿತ್ಯ ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಮೂಲಭೂತ ಸೌಲಭ್ಯಗಳಾದ ಒಳಚರಂಡಿ, ಸ್ವಚ್ಚತೆ, ಬಿದಿ ದೀಪ ನಿರ್ವಹಣೆ, ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತಲುಪಿಸಿ ತಮ್ಮ ಕರ್ತವ್ಯ ಪ್ರಜ್ಞೆಯನ್ನು ನಿರ್ವಹಿಸಲು ಸೂಚಿಸಿದರು.
ಪೌರಕಾರ್ಮಿಕರ ಆರೋಗ್ಯದ ಬಗ್ಗೆ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಚರ್ಚಿಸಿದ ಅವರು ಕೊವಿಡ್-19 ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಪ್ರತಿವಾರ ಮಾಸ್ಕ, ಸುರಕ್ಷಾ ಪರಿಕರಗಳನ್ನು ಪೂರೈಸಲು ಹಾಗೂ ಕೊವಿಡ್ ಪ್ರದೇಶಗಳಲ್ಲಿ ತಾಜ್ಯ ನಿರ್ವಹಣೆಯಲ್ಲಿರುವ ಸಿಬ್ಬಂದಿಗಳು ಸುರಕ್ಷಾ ಪರಿಕರಗಳನ್ನು ಬಳಸಿ ನಿರ್ವಹಿಸಬೇಕು. ಆತ್ಮ ನಿರ್ಭರ ಭಾರತ ಯೋಜನೆಯಡಿ ಸರ್ಕಾರದಿಂದ ನೀಡಿದ ನಿರ್ದೇಶನಗಳನ್ವಯ ಎಲ್ಲ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್‌ಬಾಬು ಸೂಚಿಸಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ರುದ್ರೇಶ ಎಸ್.ಎನ್. ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ರಮೇಶ ಜಾದವ, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಅಭಿಯಂತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಲಕ್ಕುಂಡಿ ಸ್ಮಶಾನದಲ್ಲಿ ವನಮಹೋತ್ಸವ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಲಕ್ಕುಂಡಿ
ಇಲ್ಲಿಯ ಕದಾಂಪೂರ ರಸ್ತೆಯಲ್ಲಿರುವ ಮುಸಲ್ಮಾನ ಸಮಾಜದ ಸ್ಮಶಾನದಲ್ಲಿ ಅಂಜುಮನ್ ಇಸ್ಲಾಂ ಕಮಿಟಿ ಆಶ್ರಯದಲ್ಲಿ (ಕಬರಸ್ತಾನ) ವನ ಮಹೋತ್ಸವ ಆಚರಿಸಲಾಯಿತು.
ಸಸಿ ನೆಡುವುದರ ಮೂಲಕ ವನ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಪೀರಸಾಬ ನದಾಫ ಅವರು ಸ್ಮಶಾನದಲ್ಲಿ ಅಂತ್ಯಕ್ರಿಯೆಗೆ ತೊಂದರೆಯಾಗಿ ಬೆಳೆದು ನಿಂತಿದ್ದ ಜಾಲಿ ಕಂಟಿಗಳು ಸೇರಿದಂತೆ ಇತರೆ ವ್ಯಾಜ್ಯ ಗಿಡಗಳನ್ನು ಕಳೆದ ವಾರ ಸ್ವಚ್ಛಗೊಳಿಸಲಾಯಿತು.
ಈಗ ಕಮಿಟಿ ಹಾಗೂ ಗ್ರಾಮಸ್ಥರ ನೆರವಿನೊಂದಿಗೆ 350 ಸಸಿಗಳನ್ನು ನೆಡಲಾಗಿದೆ. ಇದರಲ್ಲಿ 300 ಹುಣಸೆ ಸಸಿ ಸೇರಿದಂತೆ ಇತರೆ ಸಸಿಗಳನ್ನು ನೆಡಲಾಗುತ್ತಿದೆ. ಇದರಿಂದ ಸ್ಮಶಾನದಲ್ಲಿ ಅಂತ್ಯಕ್ರಿಯೆಗೆ ಬರುವ ಜನರಿಗೆ ನೆರಳಿನೊಂದಿಗೆ ಉತ್ತಮ ಪರಿಸರ ನಿರ್ಮಾಣವಾಗುತ್ತದೆ. ಎಂದರು.
ಕಮಿಟಿ ಉಪಾಧ್ಯಕ್ಷ ನಜೀರಅಹ್ಮದ ಕಿರಟಗೇರಿ, ಎಂ.ಎನ್.ಉಮಚಗಿ, ಜಂದೀಸಾಬ ನದಾಫ, ರುದ್ರಪ್ಪ ಮುಸ್ಕಿನಬಾವಿ,ಮೈಲಾರಪ್ಪ ಗುಂಜಳ, ಈರಣ್ಣ ಕಂಚಗಾರ, ಅಬ್ಬಾಸಲಿ ಹಂದ್ರಾಳ, ಇಬ್ರಾಹೀಂಸಾಬ ನದಾಫ, ಅಶೋಕ ಮುಸ್ಕಿನಬಾವಿ, ಹಸನಸಾಬ ನದಾಫ, ಕಾಶಿಂಸಾಬ ತಹಶಿಲ್ದಾರ, ಜಂದೀಸಾಬ ಹಮ್ಮಸಾಗರ, ಇಮ್ರಾನ ಕೊರ್ಲಹಳ್ಳಿ, ನಾಮದೇವ ದಾಸ್ಮನಿ, ಜಾಕೀರಸಾಬ ಯರಗುಡಿ ಪೀರಸಾಬ ನದಾಫ ಹಾಜರಿದ್ದರು.
 

error: Content is protected !!