Home Blog Page 3088

ಕಚೇರಿ ಹೊರಗೆ ಅಧಿಕಾರಿ, ಸಿಬ್ಬಂದಿ ಕರ್ತವ್ಯ! ಗುತ್ತಿಗೆದಾರರ ಕೆಲಸ ಸಲೀಸು, ಜನರದ್ದು ಕಷ್ಟ!

(ಅಭಿವೃದ್ಧಿ ಮರೆತ ಚಿಂಚಲಿ, ಭಾಗ-2)

ದುರ್ಗಪ್ಪ ಹೊಸಮನಿ

ವಿಜಯಸಾಕ್ಷಿ ಸುದ್ದಿ, ಮುಳಗುಂದ

ಗದಗ ತಾಲ್ಲೂಕಿನ 27 ಗ್ರಾಮ ಪಂಚಾಯತಿಗಳ ಪೈಕಿ ಚಿಂಚಲಿ ಗ್ರಾ.ಪಂ. ಆಡಳಿತ ಸಂಪೂರ್ಣ ಹಳಿ ತಪ್ಪಿ, ತುಕ್ಕು ಹಿಡಿದಿದೆ. ಅಧಿಕಾರಿಗಳು ಕಚೇರಿಗೆ ಬೇಕಾಬಿಟ್ಟಿಯಾಗಿ ಆಗಮಿಸುತ್ತಿದ್ದು, ವಾರದಲ್ಲಿ 1-2 ದಿನ ಕಚೇರಿಯಲ್ಲಿ ಕಾಣಸಿಗುತ್ತಾರೆ. ಇದರಿಂದ ಜನರು ತಮ್ಮ ಕೆಲಸ ಮಾಡಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ತುರ್ತು ಕೆಲಸಗಳಿದ್ದಲ್ಲಿ ಸಾರ್ವಜನಿಕರು ಅಧಿಕಾರಿಗಳು ಇರುವಲ್ಲಿಗೆ ಹುಡುಕಿಕೊಂಡು ದೂರದ ಗದಗ ನಗರಕ್ಕೇ ಬರಬೇಕಿದೆ.

ಚಿಂಚಲಿ ಗ್ರಾ.ಪಂ.ನಲ್ಲಿ ಹಲವು ವರ್ಷಗಳಿಂದ ಅಧಿಕಾರಿಗಳ ಕಾರ್ಯವೈಖರಿ ಹದಗೆಟ್ಟು ಹಳ್ಳ ಹಿಡಿದಿದ್ದು, ಸಮಸ್ಯೆಗಳ ಕೂಪವಾಗಿದೆ.
ಗ್ರಾ.ಪಂ. ವ್ಯಾಪ್ತಿಯ ನೀಲಗುಂದ ಗ್ರಾಮಸ್ಥರು ಸಾಕಷ್ಟು ವರ್ಷಗಳಿಂದ ಇಲ್ಲಿನ ಅನನೂಕೂಲ ನೋಡಿ ಬೇಸತ್ತಿದ್ದರು. ನಿತ್ಯ ಪಂಚಾಯತಿಗೆ ಬಂದರೂ ಆಗಬೇಕಿದ್ದ ಕೆಲಸ ಒಂದು ದಿನದಲ್ಲಿ ಆಗುತ್ತಿರಲಿಲ್ಲ. ಹಾಗಾಗಿ ಪ್ರತ್ಯೇಕ ಪಂಚಾಯತಿಗಾಗಿ ಆಗ್ರಹಿಸಿ ಗ್ರಾಮಸ್ಥರು ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಗ್ರಾ.ಪಂ.ಚುನಾವಣೆ ಬಹಿಷ್ಕರಿಸಿದ್ದರು.
ಕರೆದು ಕಟ್ಟುವರಿಲ್ಲ, ತುರಿಸಿ ಮೇವು ಹಾಕುವವರಿಲ್ಲ ಎಂಬಂತೆ ಇಲ್ಲಿ ಯಾರು ಹೇಳುವವರಿಲ್ಲ, ಕೇಳುವವರಿಲ್ಲ. ತಮ್ಮಿಚ್ಛೆ, ತಮ್ಮ ಕಾರುಬಾರು ಎಂಬಂತೆ ವರ್ತಿಸುತ್ತಿರುವ ಅಧಿಕಾರಿಗಳಿಗೆ ಕಾಸು ಕೊಟ್ಟರೆ ಏನು ಬೇಕಾದರೂ ಕೆಲಸ ಮಾಡಿ ಕೊಡುತ್ತಾರೆ ಎನ್ನಲಾಗುತ್ತಿದೆ. ಕೆಲಸಕ್ಕಾಗಿ ಅಲೆದಾಡುತ್ತಿರುವ ಇಲ್ಲಿನ ಜನರ ಪರಿಸ್ಥಿತಿ ಗಂಟೂ ಹೋಯ್ತು, ನಂಟೂ ಹೊಂಟೋಯ್ತು! ಎಂಬಂತಾಗಿದೆ.

ಗುತ್ತಿಗೆದಾರರ ಹಾವಳಿ: ಇಲ್ಲಿ ಬಹುತೇಕ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳು ಗುತ್ತಿಗೆದಾರರ ಕೆಲಸ ಮಾತ್ರ ಸಲೀಸಾಗಿ ಮಾಡಿಕೊಟ್ಟಿರುವ ಮತ್ತು ಮಾಡಿಕೊಡುತ್ತಿರುವ ನಿದರ್ಶನಗಳು ಸಾಕಷ್ಟಿವೆ. ಕಾಂಟ್ರ್ಯಾಕ್ಟ್ ದಾರರು ಇದ್ದಲ್ಲಿಯೇ ಬಂದು ಕೆಲಸ ಮಾಡಿಕೊಟ್ಟು ಹೋಗುತ್ತಿದ್ದಾರೆ. ಸಾರ್ವಜನಿಕರ ಕೆಲಸವೆಂದರೆ ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ, ಕೆಲಸಕ್ಕಾಗಿ ಕಾಲಾವಕಾಶ ತೆಗೆದುಕೊಂಡು ಅಲೆದಾಡಿಸುವ ಸಂಸ್ಕೃತಿ ಮುಂದುವರೆದಿದೆ. ಕೆಲಸವಾಗಬೇಕಾದರೆ ಜನರು ಅವರಿರವರ ಕೈ-ಕಾಲು ಹಿಡಿಯಬೇಕಾದ ಅನಿವಾರ್ಯತೆ ಬಂದೊದಗಿದೆ. ಹಾಗಾಗಿ ಜನರು ಪಂಚಾಯತಿಗೆ ಬರುವುದನ್ನೆ ಬಿಟ್ಟು ಬಿಟ್ಟಿದ್ದಾರೆ. ಆದರೆ, ಗುತ್ತಿಗೆದಾರರ ಹಾವಳಿ ಮಿತಿ ಮೀರಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಹಗರಣಗಳ ತಾಣ:
ಚಿಂಚಲಿ ಗ್ರಾಮ ಪಂಚಾಯತಿ ಮೇಲೆ ಯಾವೊಬ್ಬ ಅಧಿಕಾರಿಗಳು ಕಣ್ಣು ಹಾಯಿಸುತ್ತಿಲ್ಲ. ಇದರಿಂದ ಹಗರಣಗಳು ತಾಂಡವಾಡುತ್ತಿವೆ. ಅಧಿಕಾರಿಗಳು ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸದೆ ಗುತ್ತಿಗೆದಾರರ ತಾಳಕ್ಕೆ ತಕ್ಕಂತೆ ಕುಣಿಯುವ ಅಧಿಕಾರಿಗಳು ಹಣ ಲೂಟಿ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ಸರ್ಕಾರದ ಸುಮಾರು 15 ಲಕ್ಷ ರೂ. ಹಣ ದುರ್ಬಳಕೆ ಮಾಡಿಕೊಂಡಿದ್ದ, ಓರ್ವ ಪಿಡಿಒ ಮೇಲೆ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಹಾಗಾಗಿ ಅಕ್ರಮಗಳಿಗೆ ಹೆಚ್ಚು ಆಸ್ಪದ ನೀಡುತ್ತಿರುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಬೇಕಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕಿದೆ.

ವಾರಕ್ಕೆಷ್ಟು ಸಭೆ?:
ಚಿಂಚಲಿ ಗ್ರಾ.ಪಂ. ಪಿಡಿಒ ಬರೀ ಗದಗದಲ್ಲಿ ಜಿಪಂ, ತಾಪಂ ಸಭೆ ಇದೆ ಎಂದು ದಿನನಿತ್ಯ ಒಂದಿಲ್ಲೊಂದು ಸುಳ್ಳು ಹೇಳಿ ಜನರ ಕಣ್ಣಿಗೆ ಮಂಕುಬೂದಿ ಎರಚುತ್ತಿದ್ದಾರೆ. ಸಭೆಯ ಹೆಸರಿನಲ್ಲಿ ಕಚೇರಿಗೆ ಗೈರಾಗಿ ಜಿಲ್ಲಾ ಕೇಂದ್ರದಲ್ಲಿ ಕುಳಿತು ಗುತ್ತಿಗೆದಾರರ ಕೆಲಸ ಮಾಡಿ ಕೊಡುತ್ತಿದ್ದಾರೆ. ಹಾಗಾಗಿ, ಒಂದು ವಾರದಲ್ಲಿ ಜಿಪಂ ಮತ್ತು ತಾಪಂಗಳಲ್ಲಿ ಪಿಡಿಒಗಳ ಸಭೆಗಳು ಎಷ್ಟು ನಡೆಯುತ್ತವೆ ಎಂಬುವುದನ್ನು ಸಿಇಒ ಹಾಗೂ ಇಒ ಅವರೇ ಉತ್ತರಿಸಬೇಕಿದೆ.

ನಡೆಯದ ಸಭೆಗಳು
ಪ್ರತಿ 6 ತಿಂಗಳಿಗೊಮ್ಮೆ ವಾರ್ಡ್ ಮತ್ತು ಗ್ರಾಮಸಭೆ ನಡೆದಿರುವ ಉದಾಹರಣೆಗಳಿಲ್ಲ. ಜನರ ಬೇಕುಬೇಡಗಳನ್ನು ತಿಳಿಯದೆ, ಗುತ್ತಿಗೆದಾರರ ಆಣತಿಯಂತೆ ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತಿದೆ. ಗ್ರಾಮಸ್ಥರ ಅಗತ್ಯಕ್ಕೆ ತಕ್ಕಂತೆ ಕ್ರಿಯಾಯೋಜನೆ ತಯಾರಿ ಆಗುತ್ತಿಲ್ಲ. ಪಿಡಿಒ ಅವರು ತಂದುಕೊಟ್ಟ ಇಂತಹ ಕಾಮಗಾರಿಗಳಿಗೆ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿಯ ಅಧಿಕಾರಿಗಳು ಕಣ್ಣುಮುಚ್ಚಿ ಅನುಮೋದನೆ ನೀಡುತ್ತಿದ್ದಾರೆ. ಇದರಿಂದ ಸಾರ್ವಜನಿಕರ ಕುಂದು ಕೊರತೆಗಳಿಗೆ ಶ್ವಾಶತ ಪರಿಹಾರ ಸಿಗುತ್ತಿಲ್ಲ.

ಬೆಳವಣಕಿ ಗ್ರಾಪಂ ‘ಕಮ್ಯೂನಿಸ್ಟ್’ ಪಕ್ಷದ ಪಾಲು: ಸಿಪಿಐ(ಎಂ), ಕಾಂಗ್ರೆಸ್ ಪಕ್ಷಗಳ ಮೈತ್ರಿ

ಎರಡನೇ ಬಾರಿಗೆ ಸಿಪಿಐ(ಎಂ)ಗೆ ಅಧಿಕಾರಕಳಕವ್ವ ಮೈಲಾರಪ್ಪ ಮಾದರಗೆ ಅಧ್ಯಕ್ಷ ಪಟ್ಟ?

ವಿಜಯಸಾಕ್ಷಿ ಸುದ್ದಿ, ಗದಗ

ಪ್ರಮುಖ ರಾಜಕೀಯ ಪಕ್ಷಗಳ ಭರಾಟೆಯ ನಡುವೆಯೂ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಬೆಂಬಲಿತ ಅಭ್ಯರ್ಥಿಗಳು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಲ್ಲದೆ, ಅಧ್ಯಕ್ಷ ಸ್ಥಾನವನ್ನೂ ಅಲಂಕರಿಸಲಿದ್ದಾರೆ.

ರೋಣ ತಾಲೂಕಿನ ಬೆಳವಣಕಿ ಸ್ವತಂತ್ರ ಗ್ರಾಮ ಪಂಚಾಯತಿಯಲ್ಲಿ ಸಿಪಿಐ(ಎಂ) ಬೆಂಬಲಿತ ನಾಲ್ವರು ಸದಸ್ಯರು ಜಯಭೇರಿ ಬಾರಿಸಿದ್ದಾರೆ. ಬೆಳವಣಕಿ ಗ್ರಾಪಂನಲ್ಲಿ ಆರು ವಾರ್ಡ್‌ಗಳಿದ್ದು, 13 ಸದಸ್ಯ ಬಲ ಹೊಂದಿದೆ. ಇದರಲ್ಲಿ ಸಿಪಿಐ(ಎಂ) ಬೆಂಬಲಿತ ನಾಲ್ವರು ಗೆಲುವು ಸಾಧಿಸಿದ್ದು, ಹುಬ್ಬೇರುವಂತೆ ಮಾಡಿದೆ. ಇನ್ನುಳಿದ 9 ಸ್ಥಾನಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ತಲಾ ನಾಲ್ಕು ಸದಸ್ಯರು ವಿಜೇತರಾಗಿದ್ದಾರೆ. ಒಂದು ಸ್ಥಾನ ಪಕ್ಷೇತರ ಅಭ್ಯರ್ಥಿಯ ಪಾಲಾಗಿದೆ.

ಬೆಳವಣಕಿ ಗ್ರಾ.ಪಂ. ಅಧ್ಯಕ್ಷ ಪಟ್ಟ ದಕ್ಕಬೇಕಾದರೆ 8 ಸದಸ್ಯರ ಬೆಂಬಲ ಇರಬೇಕು. ಆದರೆ, ಇಲ್ಲಿನ ಜನರು ಯಾರಿಗೂ ಸ್ಪಷ್ಟ ಬಹುಮತ ನೀಡಿಲ್ಲ. ಸಿಪಿಐ(ಎಂ), ಕಾಂಗ್ರೆಸ್ ಹಾಗೂ ಬಿಜೆಪಿ ಮೂರು ಪಕ್ಷಗಳು ಬೆಳವಣಕಿಯಲ್ಲಿ ಸಮಬಲ ಸಾಧಿಸಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲು ಇನ್ನಿಲ್ಲದ ಕಸರತ್ತು ನಡೆಸಿವೆ.

ಸಿಪಿಐ(ಎಂ), ಕಾಂಗ್ರೆಸ್ ಮೈತ್ರಿ:

ಬಿಜೆಪಿಗೆ ಬೆಳವಣಕಿ ಪಟ್ಟ ಬಿಟ್ಟು ಕೊಡಬಾರದೆಂಬ ಕಾರಣಕ್ಕೆ ಸಿಪಿಐ(ಎಂ) ಹಾಗೂ ಕಾಂಗ್ರೆಸ್ ಪಕ್ಷ ಮೈತ್ರಿ ಮಾಡಿಕೊಳ್ಳಲು ಸಜ್ಜಾಗಿವೆ. ಒಂದು ಸುತ್ತಿನ ಮಾತುಕತೆ ನಡೆಸಿವೆ. ಸಿಪಿಐಎಂಗೆ ಅಧ್ಯಕ್ಷ ಸ್ಥಾನ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಉಪಾಧ್ಯಕ್ಷ ಸ್ಥಾನ ನೀಡಲು ಒಪ್ಪಂದ ಮಾಡಿಕೊಂಡಿವೆ. ಬಿಜೆಪಿ ಆಪರೇಷನ್ ಕಮಲ ಮಾಡುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳು ತಮ್ಮ ಸದಸ್ಯರನ್ನು ಭದ್ರವಾಗಿಟ್ಟುಕೊಂಡಿವೆ. ಓರ್ವ ಪಕ್ಷೇತರ ಸದಸ್ಯರನ್ನೂ ಸೆಳೆದುಕೊಳ್ಳಲು ಚಿಂತನೆ ನಡೆದಿದೆ. ಇತ್ತ ಬಿಜೆಪಿಯೂ ಓಲೈಕೆಯ ನೀತಿ ಅನುಸರಿಸುತ್ತಿದೆ.

ಅಧ್ಯಕ್ಷ ಸ್ಥಾನಕ್ಕೆ ಎಸ್‌ಸಿ ಮೀಸಲು:

ಬೆಳವಣಕಿ ಗ್ರಾ.ಪಂ.ಗೆ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ‘ಅ’ ವರ್ಗ ಮೀಸಲಾತಿ ಬಂದಿದೆ. ಒಪ್ಪಂದದಂತೆ ಫೆ. 4ರಂದು ನಡೆಯುವ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಸಿಪಿಐ(ಎಂ) ಬೆಂಬಲಿತ ಅಭ್ಯರ್ಥಿ ಕಳಕವ್ವ ಮೈಲಾರಪ್ಪ ಮಾದರ ಅವರಿಗೆ ಅಧ್ಯಕ್ಷ ಸ್ಥಾನ ಸಿಗುವುದು ಖಚಿತವಾಗಿದೆ. ಆದರೆ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಇನ್ನೂ ಯಾರ ಹೆಸರನ್ನೂ ಅಂತಿಮಗೊಳಿಸಿಲ್ಲ. ಹಾಗಾಗಿ, ಅದು ಗೌಪ್ಯವಾಗಿಯೇ ಉಳಿದಿದೆ.

ಕಳಕವ್ವ ಮಾದರ

ಸಿಪಿಐ(ಎಂ) ಪಾರದರ್ಶಕ ಆಡಳಿತ:

2010ರಲ್ಲೂ ಭಾರತೀಯ ಕಮ್ಯೂನಿಸ್ಟ್ ಪಕ್ಷ ಇಲ್ಲಿ ಅಧಿಕಾರಕ್ಕೆ ಬಂದಿತ್ತು. ಆಗ ಎರಡೂವರೆ ವರ್ಷ ಅಧಿಕಾರ ನಡೆಸಿತ್ತು. 7 ಸದಸ್ಯರನ್ನೊಳಗೊಂಡಿದ್ದ ಸಿಪಿಐ(ಎಂ) ಪಕ್ಷವನ್ನು ಕೌಜಗೇರಿ ಗ್ರಾಮದ ಮೂವರು ಪಕ್ಷೇತರ ಸದಸ್ಯರು ಬೆಂಬಲಿಸಿದ್ದರು. ಅಲ್ಪಾವಧಿಯಲ್ಲೇ ಪಾರದರ್ಶಕ ಆಡಳಿತ ನಡೆಸಿತ್ತು. ಕಾಲಕಾಲಕ್ಕೆ ವಾರ್ಡ್ ಹಾಗೂ ಗ್ರಾಮ ಸಭೆ ನಡೆಸಿ ಕುಡಿಯುವ ನೀರು, ರಸ್ತೆ ನಿರ್ಮಾಣ, ಬಡವರಿಗೆ ಮನೆ ನಿವೇಶನ, ಉದ್ಯೋಗ ಖಾತ್ರಿ ಯೋಜನೆ ಮೂಲಕ ದುಡಿಯುವ ಕೈಗಳಿಗೆ ಕೆಲಸ ನೀಡಿತ್ತು.

ರಾಜ್ಯದಲ್ಲಿಯೇ ಪ್ರಥಮ

ಬೆಳವಣಕಿಯಲ್ಲಿ ಸಿಪಿಐ(ಎಂ) ಬೆಂಬಲಿತ ನಾಲ್ವರು ಸದಸ್ಯರು ಗೆಲುವು ಸಾಧಿಸುವ ಮೂಲಕ ರಾಜ್ಯದಲ್ಲಿಯೇ ಭಾರತದ ಕಮ್ಯೂನಿಸ್ಟ್ ಪಕ್ಷ ಗದಗ ಜಿಲ್ಲೆಯಲ್ಲಿ ಮಾತ್ರ ಅಧಿಕಾರ ಹಿಡಿಯುತ್ತಿರುವುದು ವಿಶೇಷ. 1ನೇ ವಾರ್ಡ್‌ನ ಸಿಪಿಐ(ಎಂ) ಬೆಂಬಲಿತ ಸದಸ್ಯ ಬಸವರಾಜ ವೀರಪ್ಪ ಮಂತೂರ ಸತತ ನಾಲ್ಕನೇ ಬಾರಿಗೆ ಗ್ರಾಪಂ ಸದಸ್ಯರಾಗಿ ಆಯ್ಕೆಯಾಗಿದ್ದರೆ, 2ನೇ ವಾರ್ಡ್‌ನ ಸುವರ್ಣ ಮಾರುತಿ ಶಗಣಿ ಅವರು ಮೂರನೇ ಬಾರಿಗೆ ಪುನರಾಯ್ಕೆಯಾಗಿದ್ದಾರೆ. ಅದರಂತೆ, ಸಿಪಿಐ(ಎಂ) ಬೆಂಬಲಿತ ಇನ್ನಿಬ್ಬರು ಗ್ರಾಪಂ ಸದಸ್ಯರಾದ ರೇಣುಕಾ ಕರಿಯಪ್ಪ ಕರ್ಕಿಕಟ್ಟಿ ಹಾಗೂ ಬೆಳವಣಕಿ ಗ್ರಾಪಂನ ಸಂಭಾವ್ಯ ಅಧ್ಯಕ್ಷೆ ಕಳಕವ್ವ ಮೈಲಾರಪ್ಪ ಮಾದರ ಸೇರಿ ನಾಲ್ವರು ಸದಸ್ಯರು ಆಯ್ಕೆಯಾಗಿದ್ದಾರೆ.

ಜನಪರ ಕೆಲಸ ಮಾಡಲು ಮತ್ತೊಮ್ಮೆ ಅವಕಾಶ ಸಿಕ್ಕಿದ್ದು, ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು. ಮಹಿಳೆಯರಿಗೆ ಸೂಕ್ತ ಶೌಚಾಲಯ ನಿರ್ಮಿಸಲಾಗುವುದು. ಗ್ರಾಮದ ಜನರಿಗೆ ಮೂಲಸೌಲಭ್ಯಗಳನ್ನು ಕಲ್ಪಿಸಲಾಗುವುದು.

ಬಸವರಾಜ್ ಮಂತೂರ, ಗ್ರಾ.ಪಂ ಸದಸ್ಯರು, ಬೆಳವಣಕಿ

ನರಗುಂದ ತಾಲ್ಲೂಕಿನ ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ: ಯಾವ ಗ್ರಾಪಂ, ಯಾವ ಮೀಸಲಾತಿ?

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ನರಗುಂದ ತಾಲ್ಲೂಕಿನ 13 ಗ್ರಾಮ ಪಂಚಾಯತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪಟ್ಟಿ ಪ್ರಕಟವಾಗಿದೆ.

ಗ್ರಾಮ ಪಂಚಾಯತಿಯ ಮೀಸಲಾತಿ ವಿವರ ಈ ಕೆಳಗಿನಂತಿವೆ.

ವಾಸನ ಗ್ರಾ.ಪಂ- ಅಧ್ಯಕ್ಷ-ಸಾಮಾನ್ಯ ಮಹಿಳೆ , ಉಪಾಧ್ಯಕ್ಷ – ಅನುಸೂಚಿತ ಪಂಗಡ ಮಹಿಳೆ

ಕೊಣ್ಣೂರು ಗ್ರಾ.ಪಂ-ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಹಿಂದುಳಿದ ‘ಅ’ ವರ್ಗ ಮಹಿಳೆ

ಶಿರೋಳ ಗ್ರಾ.ಪಂ-ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಹಿಂದುಳಿದ ‘ಬ’ ವರ್ಗ

ರಡ್ಡೇರನಾಗನೂರ ಗ್ರಾ.ಪಂ- ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ

ಹದಲಿ ಗ್ರಾ.ಪಂ- ಅಧ್ಯಕ್ಷ- ಹಿಂದುಳಿದ ‘ಬ’ ವರ್ಗ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

ಬೈರನಹಟ್ಟಿ ಗ್ರಾ.ಪಂ- ಅಧ್ಯಕ್ಷ -ಪರಿಶಿಷ್ಟ ಪಂಗಡ ಮಹಿಳೆ, ಉಪಾಧ್ಯಕ್ಷ- ಹಿಂದುಳಿದ ‘ಅ’ ವರ್ಗ

ಸುರಕೋಡ ಗ್ರಾ.ಪಂ-ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ- ಸಾಮಾನ್ಯ

ಬನಹಟ್ಟಿ ಗ್ರಾ.ಪಂ- ಅಧ್ಯಕ್ಷ- ಹಿಂದುಳಿದ ‘ಅ’ ವರ್ಗ ಮಹಿಳೆ, ಉಪಾಧ್ಯಕ್ಷ- ಪರಿಶಿಷ್ಟ ಜಾತಿ ಮಹಿಳೆ

ಹುಣಸಿಕಟ್ಟಿ ಗ್ರಾ.ಪಂ.-ಅಧ್ಯಕ್ಷ- ಹಿಂದುಳಿದ ‘ಅ’ ವರ್ಗ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

ಕಣಕಿಕೊಪ್ಪ ಗ್ರಾ.ಪಂ.-ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ

ಚಿಕ್ಕನರಗುಂದ ಗ್ರಾ.ಪಂ.-ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಹಿಂದುಳಿದ ‘ಅ’ ವರ್ಗ ಮಹಿಳೆ

ಹಿರೇಕೊಪ್ಪ ಗ್ರಾ.ಪಂ- ಅಧ್ಯಕ್ಷ -ಹಿಂದುಳಿದ ‘ಅ’ ವರ್ಗ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ

ಬೆನಕನಕೊಪ್ಪ ಗ್ರಾ.ಪಂ- ಅಧ್ಯಕ್ಷ- ಪರಿಶಿಷ್ಟ ಜಾತಿ ಮಹಿಳೆ,ಉಪಾಧ್ಯಕ್ಷ- ಸಾಮಾನ್ಯ

ಅಕ್ರಮ ಸಂಬಂಧ ಹೊಂದಿದ್ದ ಪ್ರೇಮಿಗಳಿಬ್ಬರ ಆತ್ಮಹತ್ಯೆ

0

ವಿಜಯಸಾಕ್ಷಿ ಸುದ್ದಿ, ರಾಯಚೂರು: ಅಕ್ರಮ ಸಂಬಂಧದಲ್ಲಿದ್ದ ಪ್ರೇಮಿಗಳಿಬ್ಬರ ನಡುವೆ ವೈಮನಸ್ಸು ಬಂದ ಕಾರಣಕ್ಕೆ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಹೇಮನಾಳ ಗ್ರಾಮದಲ್ಲಿ ನಡೆದಿದೆ.

ರಂಗಣ್ಣ ನಾಯಕ್ ( 30), ರಂಗಮ್ಮ(18) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಮದುವೆಯಾಗಿ ಆರು ವರ್ಷವಾದರೂ ರಂಗಣ್ಣ ನಾಯಕ್ ಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಚಪ್ಪರ ಗುಂಡಿ ಮಸೀದಿ ಗ್ರಾಮದ ರಂಗಮ್ಮ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದ.

ರಂಗಮ್ಮ ಸಹ ವಿವಾಹವಾಗಿ ಆಕೆಯ ಪತಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾನೆ. ತವರುಮನೆಯಲ್ಲಿ ಉಳಿದುಕೊಂಡಿದ್ದ ರಂಗಮ್ಮ ರಂಗಣ್ಣ ನಾಯಕ್ ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಜಾತ್ರೆಯ ನಿಮಿತ್ತ ರಂಗಣ್ಣನ ಪತ್ನಿ ಶಿವಮ್ಮ ತನ್ನ ತವರುಮನೆ ಕೊತ್ತದೊಡ್ಡಿ ಗ್ರಾಮಕ್ಕೆ ಹೋಗಿದ್ದಳು.

ಈ ವೇಳೆ ರಂಗಣ್ಣನ ಮನೆಗೆ ರಂಗಮ್ಮ ಬಂದಿದ್ದಾಳೆ. ಪ್ರೇಮಿಗಳ ಮಧ್ಯೆ ವೈಮನಸ್ಸು ಉಂಟಾಗಿ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಪತಿಯ ಸಾವಿನ ಬಳಿಕವಷ್ಟೇ ಪತ್ನಿ ಶಿವಮ್ಮಳಿಗೆ ಪತಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದುಬಂದಿದೆ. ಮೃತನ ಪತ್ನಿ ಶಿವಮ್ಮಳ ಹೇಳಿಕೆ ಆಧಾರದ ಮೇಲೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಮ್ಮನಿಂದಲೇ ಅಣ್ಣನ ಕೊಲೆ: ಪ್ರಕರಣ ಬೇಧಿಸಿದ ಪೊಲೀಸರು

0

ವಿಜಯಸಾಕ್ಷಿ ಸುದ್ದಿ, ಕೋಲಾರ: ತಮ್ಮನಿಂದಲೇ ಅಣ್ಣನ ಕೊಲೆಯಾಗಿದ್ದ ಪ್ರಕಣವನ್ನು ಪೊಲೀಸರು ಈಗ ಬೇಧಿಸುವ ಮೂಲಕ ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ.

ಜ.22 ರಂದು ಜಿಲ್ಲೆಯ ಬಂಗಾರಪೇಟೆಯಲ್ಲಿ ಅಣ್ಣ ರಮೇಶ್ ನನ್ನು ಕೊಲೆ ಮಾಡಿದ ತಮ್ಮ ರಾಜೇಶ್ ಅಣ್ಣನ ಮೃತದೇಹವನ್ನು ಆಟೋದಲ್ಲಿ ಒಯ್ದು ಆಟೋ ಸಮೇತ ಸುಟ್ಟು ಹಾಕಿದ್ದ.

ಆರೋಪಿ ರಾಜೇಶನಿಗೆ ಮಕ್ಕಳಿಲ್ಲದ ಕಾರಣ ರಮೇಶನ ಮಕ್ಕಳನ್ನು ದತ್ತು ನೀಡುವಂತೆ ಒತ್ತಾಯ ಮಾಡ್ತಿದ್ದ. ಇದಕ್ಕೆ ರಮೇಶ್ ನಿರಾಕರಿಸಿದ್ದಕ್ಕೆ ಮಾತಿಗೆ ಮಾತು ಬೆಳೆದು ತಲೆಗೆ ಮಚ್ಚಿನಿಂದ ರಾಜೇಶ್ ಹಲ್ಲೆ ನಡೆಸಿ ರಮೇಶನನ್ನು ಕೊಂದಿದ್ದ.

ನಂತರ ಸ್ನೇಹಿತ ಅಜಯ್ ಸಹಾಯದಿಂದ ಆಟೋದಲ್ಲಿ ಹೋಗಿ ಸುಟ್ಟು ಹಾಕಿದ್ದ ಆರೋಪಿಗಳು. ಆಟೋ ನಂಬರ್ ನಿಂದ ಪೊಲೀಸರು ತನಿಖೆ ಆರಂಭಿಸಿದಾಗ ಮಾಹಿತಿ ಬಯಲಾಗಿದೆ.

ಬಂಗಾರಪೇಟೆ ಹೊರಹೊರವಲಯದ ಇಂದಿರಾನಗರ – ಮಲ್ಲಂಗುರ್ಕಿ ಅಂಡರ್ ಪಾಸ್ ಬಳಿ ಆಟೋ ಸಮೇತ ಆರೋಪಿತರು ಬೆಂಕಿ ಹಾಕಿದ್ದರು. ಸದ್ಯ ಆರೋಪಿಗಳಿಬ್ಬರು ಬಂಗಾರಪೇಟೆ ಪೊಲೀಸರ ವಶದಲ್ಲಿದ್ದಾರೆ.

500 ರೂ ತೋರಿಸಿ 4.85 ಲಕ್ಷ ಉಡೀಸ್!

0

ವಿಜಯಸಾಕ್ಷಿ ಸುದ್ದಿ, ದಾವಣಗೆರೆ: 500 ರೂ. ನೋಟು ತೋರಿಸಿ, 4.85 ಲಕ್ಷ ರೂಪಾಯಿಗಳನ್ನು ಖದೀಮರು ಲಪಟಾಯಿಸಿರುವ ಘಟನೆ ಜಿಲ್ಲೆಯ ಹೊನ್ನಾಳಿಯಲ್ಲಿ ನಡೆದಿದೆ.

ಹೊನ್ನಾಳಿಯ ಕೆನರಾ ಬ್ಯಾಂಕ್‌ ಬಳಿ ಈ ಘಟನೆ ನಡೆದಿದ್ದು, ಘಂಟ್ಯಾಪುರದ ಚಂದ್ರನಾಯ್ಕ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದಾರೆ. ಚಂದ್ರಾನಾಯ್ಕ ಅವರ ಗಮನ ಬೇರೆಡೆ ಸೆಳೆದು 4.85 ರೂ. ಲಕ್ಷ ಹಣವನ್ನು ಖಯರ್ನಾಕ್ ಕಳ್ಳರು ದೋಚಿದ್ದಾರೆ.

ಚಂದ್ರಾನಯ್ಕ ಕೆನರಾ ಬ್ಯಾಂಕಿನಿಂದ ಹಣ ಬಿಡಿಸಿಕೊಂಡು ಮರಳುತ್ತಿದ್ದರು. ಇದನ್ನು ಗಮನಿಸಿ ಚಂದ್ರನಾಯ್ಕ ಅವರನ್ನು ಖದೀಮರು ಹಿಂಬಾಲಿಸಿ, 500 ನೋಟನ್ನು ಕೆಳಗೆ ಬೀಳಿಸಿ ಚಂದ್ರನಾಯ್ಕರನ್ನು ಯಾಮಾರಿಸಿ ಹಣ ಕಳ್ಳತನ ಮಾಡಿದ್ದಾರೆ.

ಕಳ್ಳರ ಈ ಕೃತ್ಯ ಸಿಸಿ ಕ್ಯಾಮೆರಗಳಲ್ಲಿ ದೃಶ್ಯಾವಳಿ ಸೆರೆಯಾಗಿದ್ದು, ಹೊನ್ನಾಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.

ರೈಲಿಗೆ ತಲೆಕೊಟ್ಟು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ: ಸಾಲ ತೀರಿಸಲಾಗದೇ ಸಾವಿಗೆ ಶರಣು?

0

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಒಂದೇ ಕುಟುಂಬದ ನಾಲ್ವರು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ
ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬುಧವಾರ ತಡರಾತ್ರಿ ಬೆಳಗಾವಿ ಜಿಲ್ಲೆಯ ರಾಯಬಾಗ ರೈಲು ನಿಲ್ದಾಣದ ಬಳಿ ನಡೆದಿದೆ.

ಜಿಲ್ಲೆಯ ಬೀರಡಿ ಗ್ರಾಮದ ಸಾತಪ್ಪ ಅಣ್ಣಪ್ಪ ಸುತಾರ್(60), ಪತ್ನಿ ಮಹಾದೇವಿ(50), ಮಕ್ಕಳಾದ ದತ್ತಾತ್ರೇಯ (28), ಸಂತೋಷ (25) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಗಳಾಗಿದ್ದಾರೆ.

ನಿಜಾಮುದ್ದೀನ್ ಎಕ್ಸ್‌ಪ್ರೆಸ್‌ ರೈಲಿಗೆ ತಲೆಕೊಟ್ಟು ಸೂಸೈಡ್ ಮಾಡಿಕೊಂಡಿರುವವರ ಮೃತದೇಹಗಳನ್ನು ರಾಯಬಾಗ ತಾಲ್ಲೂಕಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಗ್ರಾಮದಲ್ಲಿ ಸಾಮೂಹಿಕ ಅಂತ್ಯಸಂಸ್ಕಾರ ನಡೆಸಲಾಗಿದೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ತಂದೆ ಮಾಡಿದ ಸಾಲ ತೀರಿಸಲಾಗದೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.

ಬೆಳಗಾವಿ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.

ಮಹಾರಾಷ್ಟ್ರಕ್ಕೆ ರಾಜ್ಯದ ಒಂದಿಂಚೂ ಜಾಗ ಬಿಟ್ಟು ಕೊಡಲ್ಲ : ಕರವೇ ನಾರಾಯಣಗೌಡ್ರ ಕಿಡಿ

ವಿಜಯಸಾಕ್ಷಿ ಸುದ್ದಿ, ಗದಗ

ಮಹಾರಾಷ್ಟ್ರಕ್ಕೆ ಬೆಳಗಾವಿ ಅಲ್ಲ. ರಾಜ್ಯದ ಒಂದಿಂಚು ಜಾಗ ಬಿಟ್ಟುಕೊಡುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ್ರ ಅಲ್ಲಿನ ಪುಂಡರಿಗೆ ಎಚ್ಚರಿಕೆ ನೀಡಿದರು.

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ಉದ್ಧಟತನದ ಹೇಳಿಕೆ ಖಂಡಿಸಿ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಮಾತನಾಡಿದ ಅವರು, ಭಾರತ-ಪಾಕ್ ಗಡಿಯಲ್ಲಿ ಪಾಕಿಸ್ತಾನ ಹೇಗೆ ನಡೆದುಕೊಳ್ಳುತ್ತಿದೆಯೋ ಆ ರೀತಿ ಬೆಳಗಾವಿ ಗಡಿ ವಿಚಾರದಲ್ಲಿ ಮಹಾರಾಷ್ಟ್ರ ನಡೆದುಕೊಳ್ಳುತ್ತಿದೆ ಎಂದು ಕಿಡಿ ಕಾಡಿದರು.

ಬೆಳಗಾವಿ ಗಡಿಯೊಳಗೆ ಎಂಇಎಸ್, ಹೊರಗಡೆ ಶಿವಸೇನೆ ಕಿರಿಕ್ ಮಾಡುತ್ತಿವೆ. ಇಂತಹ ಪುಂಡಾಟಿಕೆ ಕರ್ನಾಟಕದಲ್ಲಿ ನಡೆಯುವುದಿಲ್ಲ. ಬೆಳಗಾವಿ, ನಿಪ್ಪಾಣಿ, ಕಾರವಾರ ಅಲ್ಲದೇ, ರಾಜ್ಯದ ಒಂದಿಂಚೂ ಜಾಗ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ.

ಕನ್ನಡದ ಗಂಧ ಗಾಳಿ ಇಲ್ಲದವರು, ಕನ್ನಡದ ಬಗ್ಗೆ ಉಡಾಫೆಯಾಗಿ ಮಾತನಾಡುವುದನ್ನು ಸಹಿಸುವುದಿಲ್ಲ. ಮುಂದಿನ ದಿನಗಳಲ್ಲಿ ಕನ್ನಡ ನಾಡು, ನುಡಿಗಾಗಿ ಹೋರಾಟಗಳು ಹೆಚ್ಚಾಗಬೇಕು ಎಂದು ಟಿ.ಎ.ನಾರಾಯಣಗೌಡ್ರ ಆಶಿಸಿದರು.

ಯೋಗದಿಂದ ರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಶಿಕ್ಷಕರು ಕೈಜೋಡಿಸಿ

ವಿಜಯಸಾಕ್ಷಿ ಸುದ್ದಿ, ಗದಗ

ಶಾಲಾ ಮಕ್ಕಳಿಗೆ ದಿನಂಪ್ರತಿ ಯೋಗವನ್ನು ಕಡ್ಡಾಯವಾಗಿ ಶಿಕ್ಷಕರು ಹೇಳಿಕೊಟ್ಟಲ್ಲಿ ಅವರ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸಿ ಮುಂದಿನ ದಿನಗಳಲ್ಲಿ ರೋಗ ರಹಿತ ಸಮಾಜ ನಿರ್ಮಾಣ ಮಾಡುವಲ್ಲಿ ಜಿಲ್ಲೆಯ ಎಲ್ಲ ದೈಹಿಕ ಶಿಕ್ಷಕರು ಮನ ಪೂರ್ವಕವಾಗಿ ಪ್ರಯತ್ನಿಸಬೇಕು ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷ ಈರಣ್ಣ ನಾಡಗೌಡ ನುಡಿದರು.

ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದ ಸಭಾಭವನದಲ್ಲಿ ಜರುಗಿದ ರಾಷ್ಟ್ರೀಯ ಆಯುಷ್ ಅಭಿಯಾನ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಗದಗ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ದೈಹಿಕ ಶಿಕ್ಷಕ ಶಿಕ್ಷಕಿಯರಿಗೆ ನಡೆದ ಯೋಗ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಜಿ.ಪಂ. ಸದಸ್ಯ ವಾಸಣ್ಣ ಕುರಡಗಿ, ಗದಗ ತಾಲೂಕು ಪಂಚಾಯತ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ಜಿಲ್ಲಾ ಆಯುಷ ಅಧಿಕಾರಿ ಡಾ.ಸುಜಾತಾ ಪಾಟೀಲ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ ಬಸವಂತಪ್ಪ, ಯುವಜನ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಶ್ವನಾಥ.ಬಿ.ಜಿ. ಸೇರಿದಂತೆ ದೈಹಿಕ ಶಿಕ್ಷಕರು, ಆಯುಷ ಇಲಾಖೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಗ್ರಾಹಕರ ಶೋಷಣೆ ನಿಯಂತ್ರಣಕ್ಕೆ ಸೂಕ್ತ ಶಿಕ್ಷಣ ಹಾಗೂ ಹಕ್ಕುಗಳ ಮಾಹಿತಿಯ ಅರಿವು ಅಗತ್ಯ

0

ವಿಜಯಸಾಕ್ಷಿ ಸುದ್ದಿ, ಗದಗ

ವ್ಯಾಪಾರ ಸಂಸ್ಥೆಗಳ ಅನುಚಿತ ವ್ಯಾಪಾರಿ ಪದ್ಧತಿಗಳಾದ ಕಲಬೆರಕೆ, ಕಾಳಸಂತೆ ವ್ಯಾಪಾರ, ತೂಕ ಮತ್ತು ಅಳತೆಯಲ್ಲಿ ಕೊರತೆ, ವಂಚನೆಯ ಜಾಹೀರಾತು, ಮುಂತಾದವುಗಳಿಂದ ಗ್ರಾಹಕರು ಜಾಗೃತರಾಗಿರುವಂತೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಎ.ಮೌಲಿ ಹೇಳಿದರು.

ಗದಗ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಹಕರು ಯಾವುದೇ ವಸ್ತು ಖರೀದಿಯಲ್ಲಿ ವಂಚನೆ ಕಂಡುಬಂದಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿ ನ್ಯಾಯ ಪಡೆಯಬಹುದಾಗಿದೆ. ಅನೇಕ ಸಂದರ್ಭದಲ್ಲಿ ಗ್ರಾಹಕರು ಅವಶ್ಯಕ ಜ್ಞಾನದ ಕೊರತೆಯಿಂದಾಗಿ ವ್ಯಾಪಾರ ಸಂಸ್ಥೆಗಳಿಂದ ಶೋಷಣೆಗೊಳಪಟ್ಟು ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲಾಗುತ್ತಿಲ್ಲ. ಈ ಕುರಿತು ಗ್ರಾಹಕರಿಗೆ ಸೂಕ್ತ ಶಿಕ್ಷಣ ಹಾಗೂ ಹಕ್ಕುಗಳ ಮಾಹಿತಿಯನ್ನು ನೀಡುವುದರ ಮೂಲಕ ಜಾಗೃತಿ ಮೂಡಿಸಲು ಕರೆ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ.ಸಲಗರೆ ಮಾತನಾಡಿ, ಗ್ರಾಹಕರು ತಾವು ಸರಕು ಮತ್ತು ಸೇವೆಗಳನ್ನು ಖರೀದಿಸುವ ಸಂದರ್ಭದಲ್ಲಿ ಅದರ ಸ್ವಭಾವ, ಬೆಲೆ, ತಯಾರಿಕೆಯ ಮತ್ತು ವಾಯಿದೆಯ ದಿನಾಂಕ, ಸರಕುಗಳನ್ನು ಉಪಯೋಗಿಸುವ ಬಗ್ಗೆ ನಿರ್ದೇಶನ ಹಾಗೂ ಸರಕುಗಳನ್ನು ಉಪಯೋಗಿಸುವಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಯ ಬಗ್ಗೆ ಜಾಗರೂಕರಾಗಿರಬೇಕು. ಇಂದು ವ್ಯಾಪಾರಸ್ಥರು ತಮ್ಮ ಸ್ವಂತ ಲಾಭಕ್ಕಾಗಿ ಸರಕಿನ ಮೂಲ ಗುಣ ಮಟ್ಟದಲ್ಲಿ ವ್ಯತ್ಯಾಸ ಮಾಡುವದರ ಮೂಲಕ ಗ್ರಾಹಕರನ್ನು ಶೋಷಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಯಾವುದೇ ವಸ್ತು ಖರೀದಿಸಿದರೆ ಅದಕ್ಕೆ ಕಡ್ಡಾಯವಾಗಿ ರಶೀದಿಯನ್ನು ಪಡೆಯಬೇಕು. ತಾವು ಖರೀದಿಸಿದ ವಸ್ತುವಿನಲ್ಲಿ ಯಾವುದೇ ನ್ಯೂನತೆಗಳು ಕಂಡುಬಂದಲ್ಲಿ ದೂರು ದಾಖಲಿಸಲು ರಶೀದಿ ಅವಶ್ಯಕವಾಗಿದೆ ಎಂದರು.

ಮಾರುಕಟ್ಟೆಯಲ್ಲಿನ ವ್ಯಾಪಾರಿ ಸಂಸ್ಥೆಗಳ ಅನುಚಿತ ವ್ಯಾಪಾರಿ ಪದ್ಧತಿಯಿಂದ ರಕ್ಷಣೆ ಪಡೆಯಲು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಕಾನೂನುಗಳು ಜಾರಿಯಲ್ಲಿದ್ದು ಇದರ ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಬಿ.ಎಸ್.ಕೇರಿ ಮಾತನಾಡಿ, ಮಾರುಕಟ್ಟೆಯಲ್ಲಿ ಯಾವುದೇ ವಸ್ತು ಖರೀದಿಸಿದರೆ ರಶೀದಿ ಪಡೆಯಬೇಕು. ಒಂದು ವೇಳೆ ಖರೀದಿಸಿದ ವಸ್ತುಗಳ ಬಾಳಿಕೆ ನಿಗದಿತ ಅವಧಿಯೊಳಗೆ ನ್ಯೂನತೆಗಳೇನಾದರು ಕಂಡುಬಂದಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಬಹುದಾಗಿದೆ. ಹೊಸದಾಗಿ ಜಾರಿಗೊಂಡ ಗ್ರಾಹಕರ ಸಂರಕ್ಷಣಾ ಕಾಯ್ದೆ 2019ರ ಅನ್ವಯ ಎರಡು ಕಡೆಯ ಕಕ್ಷಿದಾರರ ಮಧ್ಯಸ್ಥಿಕೆ ವಹಿಸಿ ರಾಜಿ ಸಂಧಾನದ ಮೂಲಕ ಪ್ರಕರಣವನ್ನು ಶೀಘ್ರವೇ ಇತ್ಯರ್ಥ ಪಡಿಸಬಹುದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಸಮೀಉನ್ನಿಸಾ. ಸಿ.ಎಚ್. ಮಾತನಾಡಿ, ಹೊಸದಾಗಿ ಜಾರಿಗೊಂಡ ಗ್ರಾಹಕರ ಸಂರಕ್ಷಣಾ ಕಾಯ್ದೆ 2019ರ ಅನ್ವಯ ಗ್ರಾಹಕರ ರಕ್ಷಣಾ ವೇದಿಕೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವಾಗಿ ಬದಲಾಗಿದೆ. ಈ ಕಾಯ್ದೆಯಡಿ ಗ್ರಾಹಕರು ಯಾವುದೇ ಭಾಗದಿಂದ ಗ್ರಾಹಕರ ನ್ಯಾಯಾಲಯದಲ್ಲಿ ದೂರು ದಾಖಲಿಸಬಹುದಾಗಿದೆ. ದೂರದಾರರು ಆನಲೈನ್ ಮೂಲಕವು ದೂರು ದಾಖಲಿಸಿ ಶೀಘ್ರವೇ ಪ್ರಕರಣವನ್ನು ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ. ಗ್ರಾಹಕರ ಹಿತಾಸಕ್ತಿ ಕಾಪಾಡಲು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿರುವ ಕಾನೂನುಗಳನ್ನು ಇಂದಿನ ಯುವಜನತೆ ವಿಧ್ಯಾರ್ಥಿಗಳು ಅರಿತು ಕೊಂಡು ಜಾಗೃತರಾಗಿ ಇತರರಲ್ಲೂ ಜಾಗೃತಿ ಮೂಡಿಸಲು ತಿಳಿಸಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ವಿಶ್ರಾಂತ ಸದಸ್ಯ ಎಫ್.ಪಿ.ಲಕ್ಷ್ಮೇಶ್ವರಮಠ ಗ್ರಾಹಕರ ಸಂರಕ್ಷಣಾ ಕಾಯ್ದೆ 2019ರ ಹೊಸ ವೈಶಿಷ್ಟ್ಯಗಳ ಕುರಿತು ಉಪನ್ಯಾಸ ನೀಡಿದರು.

ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎಸ್.ಜಿ.ಪಲ್ಲೇದ, ಕಾನೂನು ಮಾಪನಶಾಸ್ತ್ರ ಸಹಾಯಕ ನಿಯಂತ್ರಕ ಆರ್.ಕೆ.ಕೊಪ್ಪರ, ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಬಿ.ಜಿ.ಗಿರಿತಮ್ಮಣ್ಣವರ, ಆ.ನಾ.ಸ. ಮತ್ತು ಗ್ರಾ.ವ್ಯ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರೀತಿ ದೊಡಮನಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಚೇರಿ ವ್ಯವಸ್ಥಾಪಕಿ ಗಿರಿಜಮ್ಮ ಹಿರೇಮಠ, ಕಾಲೇಜು ಸಿಬ್ಬಂದಿ ಹಾಗೂ ವಿಧ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ.ರಾಜೇಂದ್ರ ಗಡಾದ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಪ್ರಯುಕ್ತ ಜರುಗಿಸಲಾದ ಭಾಷಣ ಹಾಗೂ ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮನಾ ವಿತರಿಸಲಾಯಿತು.

ಪ್ರಾತ್ಯಕ್ಷತೆ: ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಅಂಗವಾಗಿ ಗ್ರಾಹಕರ ಜಾಗೃತಿಗಾಗಿ ಆಹಾರ ಕಲಬೆರೆಕೆ, ಆಹಾರ ಸುರಕ್ಷತೆ ಹಾಗೂ ಆಹಾರ ಕಲಬೆರೆಕೆ, ತೂಕ ಮತ್ತು ಅಳತೆ ಹಾಗೂ ಪೊಟ್ಟಣ ಸಾಮಗ್ರಿಗಳ ವಸ್ತು ಪ್ರದರ್ಶನ ಹಾಗೂ ಎಲ್.ಪಿ.ಜಿ. ಸುರಕ್ಷತೆ ಕುರಿತು ಪ್ರಾತ್ಯಕ್ಷಿಕತೆ ಜರುಗಿತು.

error: Content is protected !!