ತಾಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯತಿಯಲ್ಲಿ ಮಂಗಳವಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2020-2021ನೇ ಸಾಲಿನ 2ನೇ ಹಂತದ ಮತ್ತು 14ನೇ ಹಣಕಾಸು ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಯು ಗ್ರಾಪಂ ಅಧ್ಯಕ್ಷ ಮುತ್ತು ರಾಯರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ನೋಡಲ್ ಅಧಿಕಾರಿ ಸ್ನೇಹಾ ಕೊಪ್ಪದ ಹಾಗೂ ಪಿಡಿಒ ಶೈನಜಾ ಮುಜಾವರ ಕಾರ್ಯಕ್ರಮ ನಡೆಸಿ ಕೊಟ್ಟರು. ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಮಲ್ಲವ್ವ ಮರಿಯಣ್ಣವರ, ಸದಸ್ಯರಾದ ಬಾಪುಗೌಡ ಹಿರೇಗೌಡ್ರ, ಲಕ್ಷ್ಮಣ ಕಂಬಳಿ, ಶರಣಪ್ಪ ಹಳೇಮನಿ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಈರವ್ವ ಮುದಿಗೌಡ್ರ, ಶೋಭಾ ಕೋಣಣ್ಣವರ, ಶ್ರುತಿ ಬ್ಯಾಳಿ, ನಿರ್ಮಲಾ ತಳವಾರ, ಶಂಕ್ರವ್ವ ಚಲವಾದಿ, ಅಂಗನವಾಡಿ ಕಾರ್ಯಕರ್ತೆಯರಾದ ಮಂಜುಳಾ ತೋರಗಲ್, ಸವಿತಾ ರಾಯರೆಡ್ಡಿ, ಭಾರತಿ ಪಾಟೀಲ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಬಳ್ಳಾರಿ ಜಿಲ್ಲಾ ಉಸ್ತುವಾರಿ ಹೊಣೆಯಿಂದ ಸಚಿವ ಆನಂದ್ ಸಿಂಗ್ ಅವರನ್ನು ಕೈ ಬಿಡಿ, ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳುವೆ’ ಎಂದು ಶಾಸಕ ಜಿ. ಸೋಮಶೇಖರ ರೆಡ್ಡಿ ಆಗ್ರಹಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆ ವಿಭಜನೆಯಿಂದ ನೋವಾಗಿದೆ. ಸರ್ಕಾರ ಪಕ್ಷ ನಿಷ್ಠೆಯನ್ನು ಕಡೆಗಣಿಸಿ ಪಕ್ಷಾಂತರಿಗಳಿಗೆ ಮಣೆ ಹಾಕಿದೆ ಎಂದು ದೂರಿದರು.
ಆಂಧ್ರ ಗಡಿಯಿಂದ ಬಳ್ಳಾರಿ ಕೇವಲ 10 ಕಿಲೋಮೀಟರ್ ದೂರದಲ್ಲಿದೆ. ಬೆಳಗಾವಿ ಜಿಲ್ಲೆಯ ರೀತಿಯಲ್ಲಿ ಇನ್ನೊಂದು ಜಿಲ್ಲೆಯಲ್ಲಿ ಬೆಂಕಿ ಹಚ್ಚುವ ಪ್ರಯತ್ನದ ಭಾಗವಾಗಿ ವಿಭಜನೆ ನಡೆದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಚಿವ ಆನಂದ ಸಿಂಗ್ ಕೇಳಿದ್ದನ್ನೆಲ್ಲ ಮುಖ್ಯಮಂತ್ರಿ ಕೊಡುತ್ತಿದ್ದಾರೆ. ಜಿಲ್ಲೆಯನ್ನು ಹೋಳು ಮಾಡಿದ ಉಸ್ತುವಾರಿ ಸಚಿವ ನಮಗೆ ಬೇಡವೇ ಬೇಡ ಎಂದು ಪ್ರತಿಪಾದಿಸಿದರು.
ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷ ಹಾಗೂ ಪದಾಧಿಕಾರಿಗಳು ನೂತನವಾಗಿ ವಿಧಾನ ಪರಿಷತ್ತಿನ ಸಭಾಪತಿಯಾಗಿ ಆಯ್ಕೆಯಾಗಿರುವ ಶ್ರೀ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿ ಹೂಗುಚ್ಚ ನೀಡಿ ಅಭಿನಂದನೆ ಸಲ್ಲಿಸಿದರು.
ಇದೆ ವೇಳೆ ಪಿಂಜಾರ ನದಾಫ ಸಮುದಾಯದ ಎಲ್ಲ ಯುವಕರು ಸೇರಿ ಸಮುದಾಯದಕ್ಕೆ ಒಂದು ಒಳ್ಳೆಯ ಕೊಡುಗೆ ನೀಡಿ ಎಂದು ನೂತನ ಸಭಾಪತಿ ಸಲಹೆ ನೀಡಿದರು.
ಮಾಜಿ ಶಾಸಕ ಎನ್ ಎಚ್ ಕೋನರೆಡ್ಡಿ, ರಾಜ್ಯಾಧ್ಯಕ್ಷ ಡಾ. ಅಬ್ದುಲ್ ರಜಾಕ್ ನದಾಫ್, G.N.ತೋಟದ, ಜಿಲ್ಲಾ ಅಧ್ಯಕ್ಷ ಬಾಬಾ ಕಲ್ಮಲಾ, ಮಹಮ್ಮದ್ ಅಲಿ ಸೇರಿದಂತೆ ಇತರರು ಇದ್ದರು
ಸುಮಾರು 17 ವರ್ಷಗಳ ಬಳಿಕ ಅಂದರೆ, 2004ರಲ್ಲಿ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಪತಿ ಮಹಾಶಯನನ್ನು ವಶಕ್ಕೆ ಪಡೆಯುವಲ್ಲಿ ಗದಗ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹಿರೆಮಲ್ಲಾಪೂರ(ಅಂಕಲಿ) ಗ್ರಾಮದ ವೀರಯ್ಯ ಶಿವಯ್ಯ ಹಿರೇಮಠ ಬಂಧಿತ ವ್ಯಕ್ತಿ. ಆರೋಪಿ ವೀರಯ್ಯ 2004ರ ಡಿ.16ರಂದು ತನ್ನ ಪತ್ನಿ ಈರಮ್ಮಳ ಮೇಲೆ ಶೀಲದ ಕುರಿತು ಸಂಶಯ ವ್ಯಕ್ತಪಡಿಸಿ ಅಂಕಲಿ ಗ್ರಾಮದ ದೊಡ್ಡಹಳ್ಳದಲ್ಲಿ ಕೊಲೆ ಮಾಡಿ, ಪುರಾವೆ ನಾಶಪಡಿಸಿ ಪರಾರಿಯಾಗಿದ್ದನು.
ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ಇಲ್ಲಿಯವರೆಗೂ ಆರೋಪಿಯ ಸುಳಿವು ಪತ್ತೆಯಾಗಿರಲಿಲ್ಲ. ಕೊನೆಗೆ ಲಕ್ಷ್ಮೇಶ್ವರ ಠಾಣೆಯ ಪಿಎಸ್‌ಐ ಶಿವಯೋಗಿ ಲೋಹಾರ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ಮಂಗಳೂರಿಗೆ ತೆರಳಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ವ್ಯಾಪ್ತಿಯ ಮರಳಿಕಟ್ಟಿಯಲ್ಲಿ ಫೆ.4ರಂದು ಆರೋಪಿ ವೀರಯ್ಯನನ್ನು ಬಂಧಿಸಿದ್ದಾರೆ. ಬಳಿಕ ಲಕ್ಷ್ಮೇಶ್ವರ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ವಿಜಯಸಾಕ್ಷಿ ಸುದ್ದಿ ಬೆಂಗಳೂರು
ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಮತ್ತು ಫಲಿತಾಂಶವನ್ನು ಉತ್ತಮಪಡಿಸುವ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಇನ್ನು ಮುಂದೆ ಮುಖ್ಯ ಶಿಕ್ಷಕರು ಸಹ ವಾರದಲ್ಲಿ 12 ಗಂಟೆ ಪಾಠ ಬೋಧನೆ ಮಾಡಬೇಕಾಗಿದೆ.
ರಾಜ್ಯದ ಸರಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ಕಲಿಕಾ ಗುಣಮಟ್ಟ ಮತ್ತು ಎಸ್‍ಎಸ್‍ಎಲ್‍ಸಿ ಫಲಿತಾಂಶ ಕಡಿಮೆಯಾಗಿರುವುದನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಅಲ್ಲದೇ ಜಿಲ್ಲಾವಾರು ವಿಶ್ಲೇಷಣಾ ವರದಿ ಗಮನಿಸಿದಾಗ ಮುಖ್ಯ ಶಿಕ್ಷಕರು ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಗಂಭೀರವಾಗಿ ತೊಡಗಿಕೊಂಡಿಲ್ಲ ಎನ್ನುವ ಅಂಶ ಸ್ಪಷ್ಟವಾಗಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್ ಅವರು ಮಹತ್ವದ ಆದೇಶ ಹೊರಡಿಸಿದ್ದು, ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಅಥವಾ ಸಂಯುಕ್ತ ಪದವಿಪೂರ್ವ ಕಾಲೇಜಿನ ಉಪ ಪ್ರಾಚಾರ್ಯರು ಕಡ್ಡಾಯವಾಗಿ ನಿಗದಿಪಡಿಸಿದ ವಿಷಯ ಕುರಿತು ಪಾಠ ಮಾಡಬೇಕು.
ಅದರಲ್ಲೂ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಆದ್ಯತೆ ಮೇರೆಗೆ ತರಗತಿಗಳನ್ನು ತೆಗೆದುಕೊಂಡು, ಪ್ರತಿ ತಿಂಗಳು ತಾವು ಮಾಡಿದ ಪಾಠ ಬೋಧನೆಯ ವರದಿಯನ್ನು ಬಿಆರ್‍ಸಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಿದಲ್ಲಿ ಮಾತ್ರ ಕಲಿಕೆಯ ಮಟ್ಟ ಸುಧಾರಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಖ್ಯ ಶಿಕ್ಷಕರು ಪಾಠ ಬೋಧನೆ ಮಾಡುತ್ತಿರುವ ಜೊತೆಗೆ ಪ್ರತಿ ತಿಂಗಳು ಶಾಲೆಯ ಕಲಿಕಾ ಗುಣಮಟ್ಟ ಏರಿಕೆಯಾಗುತ್ತಿರುವ ಕುರಿತು ಕ್ಷೇತ್ರ ಶಿಕ್ಷಣಾ„ಕಾರಿಗಳು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಜಂಟಿಯಾಗಿ ನೋಡಲ್ ಅ„ಕಾರಿಗಳೊಂದಿಗೆ ಚರ್ಚಿಸಬೇಕು. ಇಲಾಖೆಯ ಆದೇಶ ಸಮರ್ಪಕವಾಗಿ ಜಾರಿಯಾಗಲು ಶ್ರಮಿಸಬೇಕು ಎಂದು ವಿ. ಅನ್ಪುಕುಮಾರ ತಿಳಿಸಿದ್ದಾರೆ.
ನಗರದ ಜಿಮ್ಸ್ ಕಾಲೇಜಿನಲ್ಲಿ ಅಕೌಂಟ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ನಡೆದಿದೆ.
ನಸ್ರೀನ್ ಬಾನು(26) ನೇಣಿಗೆ ಶರಣಾಗಿರುವ ದುರ್ದೈವಿಯಾಗಿದ್ದು, ಹುಲಕೋಟಿ ಗ್ರಾಮದ ಹುಡ್ಕೋ ಕಾಲೋನಿಯಲ್ಲಿರುವ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಗದಗ ಜಿಮ್ಸ್ ಕಾಲೇಜಿನಲ್ಲಿ ಕಳೆದ ಐದಾರು ವರ್ಷಗಳಿಂದ ನಸ್ರೀನ್ ಬಾನು ಅಕೌಂಟ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಳು. ಶನಿವಾರ ಕೆಲಸಕ್ಕೆ ಹಾಜರಾಗಿ ಮರಳಿದ್ದಳು. ಆದರೆ ಇಂದು ನೇಣುಬಿಗಿದ ಸ್ಥಿತಿಯಲ್ಲಿ ನಸ್ರೀನ್ ಬಾನು ದೇಹ ಪತ್ತೆಯಾಗಿದೆ.
ನಸ್ರೀನ್ ಬಾನು ಆತ್ಮಹತ್ಯೆಯ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗುತ್ತಿದ್ದು, ಸದ್ಯಕ್ಕೆ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಸರಿಯಾದ ತನಿಖೆಯಿಂದಷ್ಟೇ ಈ ಸಾವಿನ ನಿಖರ ಕಾರಣ ಹೊರಬರಬೇಕಿದೆ.
ವೀರಶೈವ ಲಿಂಗಾಯತ ಸಮಾಜದ ವಿವಿಧ ಉಪ ಪಂಗಡಗಳಿಗೆ 2ಎ ಮೀಸಲಾತಿ ಕಲ್ಪಿಸುವಂತೆ ಇಂದಿನ ಕೈಗಾರಿಕೆ ಸಚಿವರಾಗಿರುವ ಜಗದೀಶ್ ಶೆಟ್ಟರ್ ಅವರು ಅಂದು ಸಿಎಂ ಆಗಿದ್ದಾಗ ಸಿ.ಎಂ. ಉದಾಸಿಯವರ ನೇತೃತ್ವದ ಸಮಿತಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ವರದಿ ಆಧರಿಸಿ ಪಂಚಮಸಾಲಿ ಸಮುದಾಯಕ್ಕೆ ಶೀಘ್ರವೇ 2ಎ ಮೀಸಲಾತಿ ನೀಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿ ಕೊಡಬೇಕು ಎಂದು ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಒತ್ತಾಯಿಸಿದರು.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಕೂಡಲಸಂಗಮದ ಪಂಚಮಸಾಲಿ ಗುರುಪೀಠದ ಶ್ರೀಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಪಂಚಮಸಾಲಿ ಸಮಾಜದ ಮುಖಂಡ ಸಿದ್ದು ಪಲ್ಲೇದ ಅವರ ನೇತೃತ್ವದಲ್ಲಿ ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಸೇರಿದಂತೆ ಹಲವು ಮುಖಂಡರು ರವಿವಾರ ತುಮಕೂರು ಜಿಲ್ಲೆಯ ಶಿರಾ ಬಳಿ ಶ್ರೀಗಳನ್ನು ಭೇಟಿಯಾಗಿ ಹೋರಾಟಕ್ಕೆ ಬೆಂಬಲ ನೀಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ಇದುವರೆಗೂ ಪಂಚಮಸಾಲಿ ಸಮುದಾಯ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗ ಶೈಕ್ಷಣಿಕವಾಗಿ ತೀರಾ ಹಿಂದುಳಿದೆ. ಈ ನಿಟ್ಟಿನಲ್ಲಿ ಹಲವು ದಿನಗಳಿಂದ ಶ್ರೀಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿರುವುದು ಸ್ವಾಗತಾರ್ಹವಾಗಿದೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಶೀಘ್ರವೇ ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
೨ಎ ಮೀಸಲಾತಿಗಾಗಿ ನಡೆಯುತ್ತಿರುವ ಪಾದಯಾತ್ರೆ ಯೋಗ್ಯವಾಗಿದ್ದು, ಹೋರಾಟಕ್ಕೆ ಜಯ ಸಿಗಲಿ ಎಂದು ಆಶಿಸಿದರಲ್ಲದೇ, ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ ಜೊತೆ ಮುಂದಿನ ಹೋರಾಟಗಳ ರೂಪರೇಷೆಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಅನಿಲ್ ಮೆಣಸಿನಕಾಯಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಅನಿಲ್ ಅಬ್ಬಿಗೇರಿ, ದಾವಣಗೇರಿಯ ಎ.ಸಿ.ಶಂಬಣ್ಣ, ಅನಿಲ್ ಪಾಟೀಲ್ (ಮಲಸಮುದ್ರ), ಕೆ.ವಿ.ಗದುಗಿನ, ಅಯ್ಯಪ್ಪ ಅಂಗಡಿ, ಶರಣಪ್ಪ ಗೊಳಗೊಳಕಿ, ಶಿವರಾಜ್ ಶಿವನಗೌಡರ, ಬಸವರಾಜ್ ಗಡ್ಡೆಪ್ಪನವರ ಸೇರಿದಂತೆ ಸಮಾಜದ ಪ್ರಮುಖ ಮುಖಂಡರು, ಯುವಕರು ಉಪಸ್ಥಿತರಿದ್ದರು.
ವಿಜಯಸಾಕ್ಷಿ ಸುದ್ದಿ, ಚಿಕ್ಕಬಳ್ಳಾಪುರ: ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ, ದಲಿತ ಸಂಘರ್ಷ ಸಮಿತಿ ಮುಖಂಡರೊಬ್ಬರನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೋಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬೋಗೇನಹಳ್ಳಿ ನರಸಿಂಹಪ್ಪ (45) ಕೊಲೆಯಾದ ದುರ್ದೈವಿಯಾಗಿದ್ದಾರೆ. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈಯಲಾಗಿದ್ದು, ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿನ ವ್ಯವಹಾರ ಅಥವಾ ಹಳೆ ವೈಷಮ್ಯ ಕಾರಣವಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
ಸ್ಥಳಕ್ಕೆ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವಿಜಯಸಾಕ್ಷಿ ಸುದ್ದಿ, ಕೋಲಾರ: ಗ್ರಾಮ ಪಂಚಾಯತಿಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಸದಸ್ಯೆಯ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಆರೋಪ ಕೇಳಿಬಂದಿದೆ.
ಚುನಾವಣೆ ಮುಗಿದರೂ ಅದರ ಕಾವು ಆರಿಲ್ಲ ಎನ್ನುವಂತಹ ಈ ಘಟನೆ ಕೋಲಾರ ಜಿಲ್ಲೆ ಮುಳಬಾಗಲು ತಾಲೂಕಿನ ರಾಜೆಂದ್ರಹಳ್ಳಿಯಲ್ಲಿ ನಡೆದಿದೆ.
ಶನಿವಾರ ನೂತನವಾಗಿ ಗ್ರಾಮಪಂಚಾಯತಿಗೆ ಅಧ್ಯಕ್ಷರಾಗಿ ಆಯ್ಕೆಯಾದ ನೂರ್ ಜಹಾನ್ ಎಂಬುವವರ ಮನೆಗೆ ಬೆಂಕಿ ಹಚ್ಚಲಾಗಿದೆ. ಇವರು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಬೆಂಬಲದಿಂದ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ, ವಿರೋಧಿ ಗುಂಪಿನವರು ಬೆಂಕಿ ಹಚ್ಚಿದ್ದಾರೆ ಎಂದು ನೂರ್ ಜಹಾನ್ ಆರೋಪ ಮಾಡಿದ್ದಾರೆ.
ಹೆಂಚಿನ ಮನೆಯಾಗಿರುವ ಹಿನ್ನೆಲೆಯಲ್ಲಿ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಉದ್ದೇಶ ಪೂರ್ವಕವಾಗಿ ಕಿಟಕಿ ಮೂಲಕ ಒಣ ಹುಲ್ಲನ್ನು ಹಾಕಿ ಬೆಂಕಿ ಹಾಕಲಾಗಿದೆ.
ಸ್ಥಳಕ್ಕೆ ಮುಳಬಾಗಲು ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಘಟನೆ ಕುರಿತು ನಂಗಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಿಹಾನ ಏನಾದರೂ ಭತ್ತದ ಗದ್ದೆ ನೋಡಿದ್ದಾರಾ?. ಬಹುಶಃ ಅವರು ಭತ್ತದ ಗದ್ದೆ ಮುಂದೆ ನಿಂತು ಪೋಟೋ ತೆಗೆಸಿಕೊಂಡು ಹೋಗಿರಬಹುದು ಎಂದು ಪಾಪ್ ಸಿಂಗರ್ ರಿಹಾನ ವಿರುದ್ಧ ಕೇಂದ್ರ ಸಚಿವ ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ರಿಹಾನಗೆ ರೈತರ ಶ್ರಮದ ಬಗ್ಗೆ ಏನು ಗೊತ್ತಿದೆ. ರೈತರು ಮಾರಾಟ ಹೇಗೆ ಮಾಡ್ತಾರೆ ಅಂತಾ ರಿಹಾನಗೆ ಗೊತ್ತಾ? ಎಂದು ಪ್ರಶ್ನಿಸಿರುವ ಅವರು, ವಿದೇಶಿ ಕೈಗೊಂಬೆಯಾಗಿ ಅವರು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಅವರು ಯಾವತ್ತಾದರೂ ಭತ್ತದ ಗದ್ದೆಯನ್ನಾದ್ರೂ ನೋಡಿದ್ರೆ ಹೇಳಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಆದರೆ ರೈತನಿಗೆ ಇನ್ನು ಸ್ವಾತಂತ್ರ್ಯ ಸಿಕ್ಕಿಲ್ಲ. ರೈತನಿಗೆ ಆತ ಬೆಳೆದ ಬೆಳೆಯನ್ನು ಮುಕ್ತವಾಗಿ ಮಾರಲು ನಾವು ಸ್ವಾತಂತ್ರ್ಯ ನೀಡುತ್ತಿದ್ದೇವೆ ಎಂದು ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡರು.
ರೈತರು ಈಗ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಬೇಕಾದವರಿಗೆ ಬೆಳೆ ಮಾರಾಟ ಮಾಡಲು ಸ್ವಾತಂತ್ರ್ಯ ಇಲ್ಲವಾಗಿದೆ. ತನ್ನ ಬೆಳೆಗೆ ಯಾರಾದರೂ ಹೆಚ್ಚು ಬೆಲೆ ಕೊಡುತ್ತಾರೆ ಎಂದರೆ ಕೊಡಲಿ ಬಿಡಿ. ಸುಮ್ಮನೆ ಏಕೆ ಹಠ ಮಾಡುತ್ತೀರಾ? ರೈತರಿಗೆ ಬೆಂಬಲ ಬೆಲೆ ನೀಡಿದ್ದು ಮೋದಿ ಸರ್ಕಾರ ಎಂದರು.
ಪ್ರತಿಭಟನೆಗಳು ಪಟ್ಟಭದ್ರ ಹಿತಾಸಕ್ತಿಗಳಿಂದ ನಡೆಯುತ್ತಿವೆ. ಕೃಪಾಪೋಷಿತ ಜನರ ಪ್ರೇರಣೆಯಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ನಾವು ಹೊಂದಾಣಿಕೆಯಾಗಿದ್ದೀವಿ, ಮಾತುಕತೆಗೂ ಸಿದ್ಧರಿದ್ದೀವಿ. ಆದರೆ ರೈತರೇ ಹಠ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.