ಮೊದಲ ಬಾರಿಗೆ ಬಾಲೆಹೊಸೂರಿನ ಶ್ರೀದಿಂಗಾಲೇಶ್ವರ ಮಠಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ದಿಂಗಾಲೇಶ್ವರ ಶ್ರೀಗಳ ಆಶೀರ್ವಾದ ಪಡೆದರು.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರ ಗ್ರಾಮದ ದಿಂಗಾಲೇಶ್ವರ ಮಠಕ್ಕೆ ಆಗಮಿಸಿದ ಡಿಕೆಶಿ ಅವರನ್ನು ಆರತಿ ಬೆಳಗಿ ಕಳಶದೊಂದಿಗೆ ದಿಂಗಾಲೇಶ್ವರ ಮಠದ ಕಿರಿಯ ಶ್ರೀಗಳು ಸ್ವಾಗತಿಸಿದರು. ಅಭಿಮಾನಿಗಳು ಜಯ ಘೋಷ ಕೂಗಿದರು.
ಡಿಕೆಶಿ ಮಠಕ್ಕೆ ಆಗಮನದಿಂದ ನೂಕು ನುಗ್ಗಲು ಉಂಟಾಯಿತು. ಇದರಿಂದ ಕೋಪಗೊಂಡ ಡಿಕೆಶಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅಂಗರಕ್ಷಕನಿಗೆ ತರಾಟೆ ತೆಗೆದುಕೊಂಡರು. ಜನರ ನೂಕಾಟ ನಿಯಂತ್ರಿಸುವಂತೆ ತಿಳಿಸಿದರು.
ಡಿ.ಕೆ.ಶಿವಕುಮಾರ್ ದಿಂಗಾಲೇಶ್ವರ ಮಠಕ್ಕೆ ಭೇಟಿ ನೀಡಿದ್ದು, ಶ್ರೀಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಇವರಿಬ್ಬರ ಭೇಟಿ ಮತ್ತು ಮಾತುಕತೆ ತೀವ್ರ ಕುತೂಹಲ ಮೂಡಿಸಿದೆ.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಮರಳುಗಾರಿಕೆಗೆ ಕೊರತೆ ಏನಿಲ್ಲ. ಇಲ್ಲಿನ ಮರಳು ದೂರದ ಹುಬ್ಬಳ್ಳಿ, ಬಳ್ಳಾರಿಗೂ ಹೋಗುತ್ತಿತ್ತು. ಆದರೆ ಇತ್ತೀಚಿನ ಕಠಿಣ ಕಾನೂನುಗಳಿಂದ ಮರಳು ಅಕ್ರಮ ಅವ್ಯಾಹತವಾಗಿ ನಡೆಯುತ್ತಿದೆ ಎನ್ನಬಹುದು.
ಜಿಲ್ಲೆಯ ಗಂಗಾವತಿ ತಹಶೀಲ್ದಾರ್ ರೇಣುಕಾ ಅವರು ಸಾರ್ವಜನಿಕರೊಂದಿಗೆ ಸರಿಯಾಗಿ ವರ್ತಿಸುವುದಿಲ್ಲ, ದರ್ಪ ತೋರುತ್ತಾರೆ ಎಂಬ ಆರೋಪಗಳಿದ್ದವು. ಜೊತೆಗೆ ಮರಳು ಅಕ್ರಮಕ್ಕೆ ರೇಣುಕಾ ಮೇಡಂ ಅಭಯಹಸ್ತ ಇದೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಈ ಬಗ್ಗೆ ಸಾಮಾಜಿಕ ಹೋರಾಟಗಾರರು ತಹಶೀಲ್ದಾರ್ ಅವರಿಗೆ ಅಕ್ರಮಕ್ಕೆ ಬ್ರೆಕ್ ಹಾಕುವಂತೆ ಮೌಖಿಕವಾಗಿ, ಲಿಖಿತವಾಗಿ ದೂರು ನೀಡಿದರೂ ಕ್ರಮ ಕೈಗೊಳ್ಳದ ತಹಶೀಲ್ದಾರರು, ಅಕ್ರಮ ನಡೆಸುವವರು ಎಚ್ಚೆತ್ತುಕೊಳ್ಳುವಂತೆ ಮಾಡಿದ್ದರು ಎನ್ನಲಾಗಿದೆ.
ಮೂರ್ನಾಲ್ಕು ದಿನಗಳ ಹಿಂದೆ ಕಚೇರಿಯಲ್ಲೇ ಕುಲ್ಲಂಕುಲ್ಲಾ ಡೀಲ್‌ಗೆ ಇಳಿದ ತಹಶೀಲ್ದಾರರು ಮರಳು ಅಕ್ರಮಕ್ಕೆ ಲಂಚ ಪಡೆಯುತ್ತಿರೊ ದೃಶ್ಯ ಈಗ ಎಲ್ಲೆಡೆ ವೈರಲ್ ಆಗಿದೆ.
ಪ್ರತಿ ಟ್ರ್ಯಾಕ್ಟರ್‌ಗೆ 20 ಸಾವಿರ ರೂಪಾಯಿ ಕೊಡಬೇಕು. ಅಡ್ವಾನ್ಸ್ ಆಗಿ 10 ಸಾವಿರ ಕೊಡುವಂತೆ ಬೇಡಿಕೆ ಇಟ್ಟಿರೊ, ಎದುರಿಗಿದ್ದ ವ್ಯಕ್ತಿ 5 ಸಾವಿರ ರೂಪಾಯಿ ಅಡ್ವಾನ್ಸ್ ಎಂದು ಹೇಳುತ್ತಾನೆ. ಆಗ ತಹಶೀಲ್ದಾರರು ಇನ್ನೂ 15 ಸಾವಿರ ರೂಪಾಯಿ? ಅಂತ ಕೇಳುವ ದೃಶ್ಯ ವಿಡಿಯೋದಲ್ಲಿದೆ.
ಗಂಗಾವತಿ ತಹಶೀಲ್ದಾರರ ಬಗ್ಗೆ ನಿನ್ನೆಯಷ್ಟೇ ಈ ಕುರಿತು ದೂರು ಬಂದಿತ್ತು. ಈಗಾಗಲೇ ಎಚ್ಚರಿಕೆ ನೀಡಿದ್ದೇನೆ. ನನ್ನ ಬಳಿ ವಿಡಿಯೊ ಇಲ್ಲ. ವಿಡಿಯೋ ನೋಡಿದ ನಂತರ ಸರಕಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರ ಬರೆಯುತ್ತೇನೆ.
-ಚಿರತೆ ಇರೋ ಪ್ರದೇಶದಲ್ಲಿ ಹುಲಿಗಳ ಕಾಟ ಎಲ್ಲಿಂದ? –ಸುಳ್ಳು ಸುದ್ದಿ ವೈರಲ್ ಮಾಡೋರ ವಿರುದ್ಧ ಕಠಿಣ ಕ್ರಮ
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಜನ ಚಿರತೆಯೊಂದು ಶುಕ್ರವಾರ ನಸುಕಿನ ವೇಳೆ ಸೆರೆ ಸಿಕ್ಕಿದ್ದಕ್ಕೆ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೂ ಇನ್ನೂ ಮೂರ್ನಾಲ್ಕು ಚಿರತೆಗಳು ಸಂಗಾಪುರ, ಆನೆಗೊಂದಿ ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶದಲ್ಲಿ ಬೀಡು ಬಿಟ್ಟಿರುವ ಭಯ ಆವರಿಸಿಕೊಂಡಿರುವ ಈ ಹೊತ್ತಲ್ಲಿ ಮೂರ್ನಾಲ್ಕು ಹುಲಿಗಳು ಕೂಡಿಕೊಂಡು ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿರುವ, ಆ ಹುಲಿಗಳನ್ನು ಓಡಿಸಲು ಗುಂಡು ಹೊಡೆಯುತ್ತಿರುವ ಘಟನೆ ಗಂಗಾವತಿ ತಾಲೂಕಿನ ಸಂಗಾಪುರದಲ್ಲಿ ನಡೆಯುತ್ತಿದೆ ಎಂಬರ್ಥದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರನ್ನು ಮತ್ತಷ್ಟೂ ಆತಂಕಕ್ಕೆ ತಳ್ಳಿದೆ.
ಇಡೀ ರಾಜ್ಯದಲ್ಲಿ ಹುಲಿಗಳ ಸಂಖ್ಯೆ 526. ಬಂಡೀಪುರ, ದಾಂಡೇಲಿಯಂಥ ಪ್ರದೇಶಗಳಲ್ಲಿ ಹುಲಿ ಕಾಣಿಸಿಕೊಂಡದ್ದನ್ನ ಒಪ್ಪಬಹುದು. ದಟ್ಟ ಕಾನನ ಹುಲಿಗಳ ಮೆಚ್ಚಿನ ತಾಣ. ಗುಡ್ಡಗಾಡು ಪ್ರದೇಶದಲ್ಲಿ ಹುಲಿಗಳು ಬರಲಾರವು. ಅಂಥದ್ದರಲ್ಲಿ ಏಕಾಏಕಿ ವ್ಯಕ್ತಿಯೊಬ್ಬನ ಮೇಲೆ ಹುಲಿ ದಾಳಿ, ಹುಲಿ ಓಡಿಸಲು ಗುಂಡಿನ ಪ್ರತಿ ದಾಳಿ ಕೊಪ್ಪಳ ಜಿಲ್ಲೆಯಲ್ಲಿ ನಡೆಯಲು ಸಾಧ್ಯವೇ ಇಲ್ಲ. ಇದೆಲ್ಲ ಶುದ್ಧ ಸುಳ್ಳು. ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಮಾಡಿರುವ ಕೃತ್ಯ. ಜಿಲ್ಲೆಯ ಸಾರ್ವಜನಿಕರು ಈ ಬಗ್ಗೆ ಆತಂಕಗೊಳ್ಳುವ ಅಗತ್ಯ ಇಲ್ಲ. ಚಿರತೆ ಕಾಟದ ಬಗ್ಗೆ ಮೈ ಮರೆಯುವಂತಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪುರದಲ್ಲಿ ನಡೆದಿದೆ ಎನ್ನಲಾದ ಹುಲಿ ದಾಳಿಯ ವಿಡಿಯೊ ಫೇಕ್. ಅದು ಬೇರೆ ರಾಜ್ಯದಲ್ಲೊ ಅಥವಾ ಬೇರೆ ದೇಶದಲ್ಲೋ ಹಿಂದೆಂದೊ ನಡೆದಿರುವ ಘಟನೆ ಇರಬಹುದು. ಕೆಲವರು ಅದನ್ನು ಎಡಿಟ್ ಮಾಡಿ ಈ ರೀತಿ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿರುವ ಶಂಕೆ ಇದೆ. ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಸೈಬರ್ ಕ್ರೈಮ್‌ನವರಿಗೆ ಸೋಶಿಯಲ್ ಮೀಡಿಯಾ ಮೇಲೆ ಹದ್ದಿನ ಕಣ್ಣು ಇಡುವಂತೆಯೂ, ಈ ವಿಡಿಯೊ ಹರಿಬಿಟ್ಟಿರುವ ಆರೋಪಿಗಳನ್ನು ಪತ್ತೆ ಹಚ್ಚುವಂತೆಯೂ ಸೂಚಿಸಲಾಗುವುದು.
ಗ್ರಾಮ ಪಂಚಾಯತಿ ಚುನಾವಣೆ ರಾಜಕೀಯ ಪಕ್ಷಗಳಿಗೆ ಮಹತ್ವದ್ದಾಗಿದೆ. ತಳಮಟ್ಟದಲ್ಲಿ ಪಕ್ಷ ಬಲಪಡಿಸಲು ಸಹಕಾರಿಯಾಗಲಿದ್ದು, ಮುಂಬರುವ ವಿಧಾನಸಭಾ, ಲೋಕಸಭಾ ಸಾರ್ವತ್ರಿಕ ಚುನಾವಣೆಗಳಲ್ಲಿ ಸುಲಭವಾಗಿ ಗೆಲವು ಸಾಧಿಸಲು ಅನುಕೂಲವಾಗಲಿದೆ. ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ನೇರವಾಗಿ ಭಾಗವಹಿಸದಿದ್ದರೂ, ಕಾರ್ಯಕರ್ತರನ್ನು ಗೆಲ್ಲಿಸಲು ತೆರೆಮರೆಯಲ್ಲಿ ಕೆಲಸ ಮಾಡುತ್ತಿವೆ. ಪರೋಕ್ಷವಾಗಿ ಕಾರ್ಯಕರ್ತರ ಪರವಾಗಿ ಪ್ರಚಾರ ಮಾಡುತ್ತಿವೆ. ಗ್ರಾ.ಪಂ. ಪಕ್ಷಾತೀತ ಚುನಾವಣೆಯಾಗಿದ್ದರೂ, ಸ್ಪರ್ಧಿಸಿರುವ ಅಭ್ಯರ್ಥಿಗಳು ಒಂದಲ್ಲ ಒಂದು ರಾಜಕೀಯ ಪಕ್ಷದ ಬೆಂಬಲಿಗರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಮಹತ್ವದ ಆದೇಶ ಹೊರಡಿಸಿದ್ದು, ರಾಜಕೀಯ ಪಕ್ಷಗಳ ನಿದ್ದೆಗೆಡೆಸಿದೆ.
ರಾಜ್ಯ ಚುನಾವಣಾ ಆಯೋಗ ನ್ಯಾಯಾಲಯದ ಆದೇಶದಂತೆ ರಾಜ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಸುತ್ತಿದೆ. ಡಿ.22 ಹಾಗೂ 27 ರಂದು ಎರಡು ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಒಟ್ಟಾರೆ 5,762 ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ಘೋಷಣೆಯಾಗಿದೆ. ವಿವಿಧ ಕಾರಣಗಳಿಂದ 242 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯುತ್ತಿಲ್ಲ. ಒಟ್ಟು 92,121 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಇದು ಬೃಹತ್ ಚುನಾವಣೆಯಾಗಿದೆ. ಈಗಾಗಲೇ ಎರಡೂ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಅವಧಿ ಮುಗಿದಿದೆ.
ಮೊದಲ ಹಂತದಲ್ಲಿ ರಾಜ್ಯದ ಒಟ್ಟು 117 ತಾಲ್ಲೂಕುಗಳ 3,019 ಗ್ರಾ.ಪಂ. 48,048 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಈಗಾಗಲೇ 4,377 ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿಯಾಗಿದ್ದಾರೆ. ಅಂತಿಮವಾಗಿ 1,17,387 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಚುನಾವಣಾ ಕಣ ರಂಗೇರಿದೆ. ಗದಗ ಜಿಲ್ಲೆಯೊಂದರಲ್ಲೇ ಮೂರು ತಾಲ್ಲೂಕುಗಳ 53 ಗ್ರಾ.ಪಂ.ಗಳ 801 ಸ್ಥಾನಗಳಿಗೆ 2216 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
ಇದು ಪಕ್ಷ ಆಧಾರ ರಹಿತ ಚುನಾವಣೆ
ಗ್ರಾ.ಪಂ.ಚುನಾವಣೆಯು ಕರ್ನಾಟಕ ಗ್ರಾಮ್ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದಂತೆ ಪಕ್ಷ ಆಧಾರ ರಹಿತವಾಗಿ ನಡೆಸಲಾಗುತ್ತಿದೆ. ಹಾಗಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಅಭ್ಯರ್ಥಿಗಳಿಗೆ ರಾಜಕೀಯ ಪಕ್ಷಗಳ ಚಿಹ್ನೆಗಳನ್ನು ನೀಡುವುದಿಲ್ಲ. ಅದರ ಬದಲಿಗೆ ಸಾಮಾನ್ಯ ಚಿಹ್ನೆಗಳನ್ನು ಕೊಡಲಾಗುತ್ತದೆ ಎಂದು ಆಯೋಗ ತಿಳಿಸಿದೆ.
ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿಗಳಿಗೆ ಆಯೋಗ ಸೂಚನೆ
ಗ್ರಾ.ಪಂ.ಚುನಾವಣೆಗಳು ಪಕ್ಷರಹಿತ ಚುನಾವಣೆಯಾಗಿದ್ದು, ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಭಾಗಿಯಾಗುವ ಸಾಧ್ಯತೆಗಳಿವೆ. ಚುನಾವಣೆ ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗುವ, ಸಭೆ ಸಮಾರಂಭಗಳನ್ನು ನಡೆಸುವ ಹಾಗೂ ರಾಜಕೀಯ ನಾಯಕರ ಫೋಟೊಗಳಿರುವ ಕರಪತ್ರ ಹಂಚುವ ಮತ್ತು ಪಕ್ಷದ ಬವುಟ ಹಿಡಿದು ಪ್ರಚಾರ ಮಾಡುವ ಸಂಭವವಿದೆ. ಆ ಬಗ್ಗೆ ಗಮನಹರಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಚುನಾವಣಾ ಆಯೋಗ ಆಯಾ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದೆ.
ಪ್ರಚಾರದಲ್ಲಿ ಭಾಗವಹಿಸಿದರೆ ಕಾನೂನು ಕ್ರಮ
ರಾಜಕೀಯ ಪಕ್ಷಗಳ ನಾಯಕರು ಚುನಾವಣೆ ಪ್ರಚಾರದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗವಹಿಸುವಂತಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಕಟ್ಟುನಿಟ್ಟಿನ ಆದೇಶ ಮಾಡಿದೆ. ರಾಜಕೀಯ ನಾಯಕರು ಸಭೆಗಳನ್ನು ನಡೆಸಿ ಮತದಾರರ ಮೇಲೆ ಪ್ರಭಾವ ಬೀರುವುದಕ್ಕೂ ಅವಕಾಶವಿಲ್ಲ. ಯಾವುದೇ ಸಂದರ್ಭದಲ್ಲಿಯೂ ಗ್ರಾ.ಪಂ. ಚುನಾವಣೆಯಲ್ಲಿ ಪಕ್ಷ ರಾಜಕೀಯ ಸಲ್ಲದು. ಒಂದು ವೇಳೆ ರಾಜಕೀಯ ನಾಯಕರು ಯಾರಾದರೂ ಮಾಡಿದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಲಿದ್ದು, ಪ್ರಕರಣ ದಾಖಲಾಗುತ್ತದೆ ಎಂದು ರಾಜ್ಯ ಚುನಾವಣಾ ಆಯೋಗ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದೆ.
ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿ ಚುನಾವಣೆಯು ಎರಡು ಹಂತಗಳಲ್ಲಿ ನಡೆಯಲಿದ್ದು, ಚುನಾವಣಾ ಆಯೋಗದಿಂದ ಮತದಾನ ಮಾಡಲು ಅನುಕೂಲವಾಗುವಂತೆ ಬಿಎಲ್ಓ ಮೂಲಕ ಮತದಾರರ ಮನೆ ಮನೆಗೆ ವೋಟರ ಸ್ಲಿಪ್ ಹಂಚಿಕೆ ಮಾಡಬೇಕು ಎಂದು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಯಲ್ಲಪ್ಪ ಬಾಬರಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೋಬ್ಬ ಮತದಾರರ ಮನೆ ಮನೆಗೆ ಚುನಾವಣೆ ಆಯೋಗದಿಂದ ವೋಟರ್ ಸ್ಲಿಪ್ ಹಂಚಿಕೆ ಮಾಡಲಾಗಿತ್ತು. ಈಬಾರಿ ಗ್ರಾಮ ಪಂಚಾಯಿತಿ ಚುನಾವಣೆಗೆ ಆಯೋಗ ಆಯಾ ಗ್ರಾಮದ ಬಿ ಎಲ್ ಓ ಮೂಲಕ ವೋಟರ್ ಸ್ಲಿಪ್ ಹಂಚುವದರಿಂದ ಅತಿ ಹೆಚ್ಚು ಮತದಾನ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದರಿಂದ, ಮತದಾರರು ಮತಗಟ್ಟೆಗೆ ಹೋಗು ಮುನ್ನ ತಮ್ಮ ಮನೆಯಲ್ಲಿರುವ ವೋಟರ್ ಸ್ಲಿಪ್ ತೆಗೆದುಕೊಂಡು ಹೋಗಲು ಸಹಕಾರಿಯಾಗುತ್ತದೆ. ಇಲ್ಲದಿದ್ದರೆ, ಸ್ಲಿಪ್ ಬರೆದು ಕೊಡುವವರೆಗೂ ಕಾಯಬೇಕಾಗಿದ್ದು, ಜನಜಂಗುಳಿ ಉಂಟಾಗುವುದರಿಂದ ಸ್ಲಿಪ್ ಬೇಗ ಸಿಗದಿರುವ ಕಾರಣಕ್ಕೆ ಮಹಿಳಾ ಮತದಾರರು ನಿರಾಶೆಗೊಂಡು ಮರಳಿ ಮನೆಗೆ ಹೋಗುವ ಸಾಧ್ಯತೆ ಇದೆ.
ಯಲ್ಲಪ್ಪ ಬಾಬರಿ
ಗ್ರಾಮ ಪಂಚಾಯಿತಿ ಚುನಾವಣೆ ಗ್ರಾಮೀಣ ಪ್ರದೇಶದಲ್ಲಿ ನಡೆಯುವುದರಿಂದ ಅನೇಕ ಜನ ಕೂಲಿ ಕಾರ್ಮಿಕರು, ರೈತರೇ ಹೆಚ್ಚಿದ್ದಾರೆ. ಹಾಗಾಗಿ ಕಡ್ಡಾಯ ಮತದಾನ ಮಾಡಲು ಗ್ರಾ.ಪಂ.ನಿಂದ ಡಂಗುರ ಸಾರಬೇಕು. ಧ್ವನಿವರ್ಧಕಗಳ ಮೂಲಕ ತಪ್ಪದೇ ಮತದಾನ ಮಾಡುವಂತೆ ಪ್ರಚಾರ ಮಾಡಬೇಕು. ಅಲ್ಲದೇ, ಚುನಾವಣಾ ದಿನದಂದು ಸರ್ಕಾರಿ ನೌಕರರಿಗೆ ಸಾರ್ವತ್ರಿಕ ರಜಿ ಪೋಷಿಸಬೇಕು ಎಂದು ಗ್ರಾ.ಪಂ. ಉಪಾಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ ಮನವಿ ಮಾಡಿದ್ದಾರೆ.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಜಿಲ್ಲೆಯ ಆನೆಗೊಂದಿಯಲ್ಲಿ ಚಿರತೆಗಳ ಸುಳಿವಿಗಾಗಿ ವಿಶೇಷ ತಂಡ ನಡೆಸಿದ ಕಾರ್ಯಾಚರಣೆಗೆ ಚಿರತೆಯೊಂದು ಸೆರೆ ಸಿಕ್ಕಿದೆ. ಆದರೆ ಸೆರೆ ಸಿಕ್ಕ ಚಿರತೆ ನರಭಕ್ಷಕವೊ? ಅಥವಾ ಬೇರೊಂದು ಚಿರತೆಯೋ? ಎಂಬುದಿನ್ನೂ ದೃಢಪಟ್ಟಿಲ್ಲ.
ಚಿರತೆ ಪತ್ತೆಗಾಗಿ ನಾಲ್ವರ ವಿಶೇಷ ವನ್ಯ ಜೀವಿ ತಜ್ಞರ ತಂಡ ಭೇಟಿ ನೀಡಿತ್ತು. ತಂಡಕ್ಕೆ ಕೈ ಜೋಡಿಸಿದ ವೈಲ್ಡ್ ಲೈಫ್ ಎಸ್ ಎಸ್ ಓ ಸಂಸ್ಥೆ, ಈ ಹಿಂದೆ ಬಂಡಿಪುರ, ಬನ್ನೇರುಘಟ್ಟ, ನಾಗರಹೊಳೆ ಸೇರಿ ವಿವಿಧಡೆ ಪ್ರಾಣಿಗಳ ಸಂಶೋಧಿಸಿದೆ.
ಪ್ರಾಣಿಗಳ ಜೀವನ ಹಾಗೂ ಮಾನವ ಪ್ರಾಣಿಗಳ ಸಂಘರ್ಷದ ಕುರಿತು ಅಧ್ಯಯನ ಮಾಡುವ ವೈಲ್ಡ್ ಲೈಫ್ ಎಸ್ ಎಸ್ ಓ, ಚಿರತೆಗಳ ಚಲವಲನ, ವಾಸವಿರುವ ಸ್ಥಳ, ಆಹಾರ ಪದ್ಧತಿ, ಬೇಟೆಯಾಡುವ ವಿಧಾನ, ಹೆಜ್ಜೆಗುರುತು ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿತ್ತು.
ವಿಶೇಷ ತಂಡದ ಕಾರ್ಯಾಚರಣೆಯಿಂದ ಒಂದು ಚಿರತೆ ಸೆರೆ ಸಿಕ್ಕಿದೆ. ನಿನ್ನೆಯಿಂದ ಚಲನವಲನ ಗುರುತಿಸಿ ಚಿರತೆ ಸೆರೆ ಹಿಡಿಯುವಲ್ಲಿ ವಿಶೇಷ ತಂಡವು ಯಶಸ್ವಿಯಾಗಿದೆ.
ಸೆರೆ ಸಿಕ್ಕಿರುವ ಚಿರತೆ ಈ ಹಿಂದೆ ಪೂಜಾರಿಯನ್ನು ಕೊಂದು ತಿಂದ ಚಿರತೆಯಾ? ಎನ್ನುವ ಬಗ್ಗೆ ಸ್ಪಷ್ಟತೆಯಿಲ್ಲ ಎಂದು ಡಿಎಫ್‌ಓ ಹರ್ಷಭಾನು ಮಾಹಿತಿ ನೀಡಿದ್ದಾರೆ.
ಬೋನ್‌ಗಳ ಇರಿಸುವಿಕೆಗೆ ಸೂಕ್ತ ಸ್ಥಳಗಳ ಆಯ್ಕೆಯ ಕಾರ್ಯಾಚರಣೆ ನಡೆದಿದ್ದು, ಅತಿ ಹೆಚ್ಚು ಚಿರತೆಗಳು ಓಡಾಡುವ ಸ್ಥಳಗಳ ಮಾಹಿತಿಗಾಗಿ ಆನೆಗೊಂದಿ ಸುತ್ತಮುತ್ತ ತಂಡಗಳು ಶೋಧನೆ ನಡೆಸುತ್ತಿವೆ.
ಆನೆಗೊಂದಿಯ ಚಿರತೆಗಳ ಚಲನವಲನ ಪತ್ತೆಗೆ 8 ಕ್ಕೂ ಹೆಚ್ಚು ಸ್ಥಳಗಳಲ್ಲಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಇನ್ನೂ ಮೂರ್ನಾಲ್ಕು ಚಿರತೆಗಳು ಬೆಟ್ಟದ ಸುತ್ತ ಮುತ್ತ ಬೀಡು ಬಿಟ್ಟಿದ್ದು ಸಾರ್ವಜನಿಕರು ಸಂಜೆ 5ರ ಮೇಲೆ ಓಡಾಡದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಡಿಸೆಂಬರ್ 17 ರವರೆಗಿನ ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣ ಪ್ರಕರಣಗಳ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಬಿಡುಗಡೆ ಮಾಡಿದ್ದಾರೆ.
ಇದುವರೆಗೆ ಜಿಲ್ಲೆಯಲ್ಲಿ 151387 ಜನ ನಿಗಾಕ್ಕೆ ಒಳಗಾಗಿದ್ದಾರೆ. ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು 156825 ಮಾದರಿಗಳಲ್ಲಿ 145606 ಮಾದರಿಗಳು (ನೆಗೆಟಿವ್) ನಕಾರಾತ್ಮಕವಾಗಿವೆ. 370 ಮಾದರಿಗಳ ವರದಿ ಬರಲು ಬಾಕಿ ಇದೆ.
ಜಿಲ್ಲೆಯಲ್ಲಿ ಇಂದಿನ 06 (ಗದಗ-04, ಮುಂಡರಗಿ-01, ಶಿರಹಟ್ಟಿ-01) ಪ್ರಕರಣಗಳು ಸೇರಿದಂತೆ ಒಟ್ಟು 10849 ಕೊವಿಡ್-19 ಪಾಸಿಟಿವ್ ಪ್ರಕರಣಗಳು ಧೃಡಪಟ್ಟಿವೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ ಕೊವಿಡ್ ಸೋಂಕಿಗೆ 141 ಜನ ಮೃತಪಟ್ಟಿದ್ದು, ಇಂದಿನ 14 ಜನ ಸೇರಿದಂತೆ ಒಟ್ಟು 10679 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 29 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಲವ್ ಜಿಹಾದ್ ಕಾಯ್ದೆ ದೇಶದಲ್ಲಿ ಬರಲೇಬೇಕು. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಈ ಬಗ್ಗೆ ಚಿಂತನೆ ಮಾಡಿ ಕಾಯ್ದೆ ಜಾರಿಗೊಳಿಸುತ್ತೇವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಹಾವೇರಿಯಲ್ಲಿ ಗುರುವಾರ ಮಾತನಾಡಿದ ಅವರು, ವಿಧಾನ ಪರಿಷತ್ ರದ್ದು ಮಾಡುವುದು ದೊಡ್ಡ ವಿಷಯವಲ್ಲ. ಪರಿಷತ್ತಿನಲ್ಲಿ ಮೊನ್ನೆ ನಡೆದ ಘಟನೆ ಅಮಾನವೀಯ. ಅದು ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಮತ್ತು ಗೂಂಡಾಗಿರಿ ತೋರಿಸುತ್ತದೆ ಎಂದು ಲೇವಡಿ ಮಾಡಿದರು.
ಒಬ್ಬ ಉಪಸಭಾಪತಿಯನ್ನೇ ಎಳೆದು ಹಾಕ್ತಾರಂದ್ರೆ ಅವರು ಆ ಸ್ಥಾನಕ್ಕೆ ಚ್ಯುತಿ ತಂದಿದ್ದಾರೆ. ಈ ಕುರಿತು ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ. ರಾಜ್ಯಪಾಲರು ದೂರಿನ ಮೇರೆಗೆ ಏನು ಕ್ರಮ ಕೈಗೊಳ್ಳುತ್ತಾರೆ ಅದರ ಮೇಲೆ ಮುಂದಿನ ಯೋಜನೆ ರೂಪಿಸಲಾಗುವುದು ಎಂದು ಸಚಿವರು ತಿಳಿಸಿದರು.
ಮಾಜಿ ಸಿಎಂ ಕುಮಾರಸ್ವಾಮಿಗೆ ಪ್ರಧಾನಿ ಮೋದಿ ಜನ್ಮದಿನದ ಶುಭಾಶಯ ಕೋರಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಿಸಿಪಿ, ಅದು ಪ್ರಧಾನಿ ನರೇಂದ್ರ ಮೋದಿಯವರ ದೊಡ್ಡತನ. ಜನ್ಮದಿನದ ದಿನ ಶುಭಾಶಯ ಕೋರುವುದು ಮಾನವೀಯತೆ. ರಾಜಕೀಯ ವೈರಿಗಳಾಗಿ ಇರುತ್ತೇವೆ. ಆದರೆ ಮದುವೆ, ಜನ್ಮದಿನದ ಸಮಯದಲ್ಲಿ ಶುಭಾಶಯ ಕೋರುವುದರಲ್ಲಿ ತಪ್ಪೇನಿದೆ ಎಂದ ಅವರು, ನಾನೂ ಸಹ ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳುತ್ತೇನೆ ಎಂದು ಶುಭಾಶಯ ಕೋರಿದರು.
ಜೆಡಿಎಸ್ ಪಕ್ಷ ಮಿಠಾಯಿ ಕೊಟ್ಟವರ ಬಳಿ ಹೋಗುತ್ತೆ ಎಂಬ ಎಚ್.ವಿಶ್ವನಾಥ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದು ಅವರ ವೈಯಕ್ತಿಕ ವಿಚಾರ. ಅವರು ಅದೇ ಪಕ್ಷದವರಾಗಿದ್ದವರು. ಹಾಗಾಗಿ ಆ ರೀತಿ ಮಾತನಾಡುವುದು ಸರಿಯಲ್ಲ. ಗ್ರಾ.ಪಂ.ಚುನಾವಣೆಯ ಬಳಿಕ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಸಿಎಂ ಮತ್ತು ಪಕ್ಷದ ವರಿಷ್ಠರು ಕ್ರಮಕೈಗೊಳ್ಳುತ್ತಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.
ಮೈಸೂರಿನಲ್ಲೂ ಬೆಂಗಳೂರು ಮಾದರಿಯಲ್ಲಿ ಸಿಂಗಲ್ ಬೆಡ್, ಡಬಲ್ ಬೆಡ್, ತ್ರಿಬಲ್ ಬೆಡ್ ಗಳ ಗುಂಪು ಮನೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಮೈಸೂರಿನ ಮೊದಲ ಟೌನ್ ಶಿಪ್ ಗೆ ಈಗಾಗಲೇ ಭೂಮಿ ಗೊತ್ತುಪಡಿಸಿದ್ದೇವೆ ಎಂದು ಸಹಕಾರಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಮೈಸೂರಿನಲ್ಲಿ ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸದ ಸಚಿವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ಸೇರಿದ 22 ಎಕರೆಯಲ್ಲಿ 2500 ಸೈಟ್ ನಿರ್ಮಿಸಲಾಗುತ್ತಿದೆ. ಈ ವಿಚಾರವಾಗಿ ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜ್ ಜೊತೆ ಮಾತನಾಡಿದ್ದೇನೆ. ಬಿಡಿಎ ಮಾದರಿಯಲ್ಲಿ ಮುಡಾದಿಂದಲೂ ಜನರಿಗೆ ಅನುಕೂಲವಾಗುವಂತೆ ಗುಂಪುಮನೆ ನೀಡಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು.
ಮೈಸೂರು ಮುಡಾವನ್ನು ದಲ್ಲಾಳಿ ಮುಕ್ತ ಮಾಡುತ್ತೇವೆ. ದಲ್ಲಾಳಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಯಾರಾದರೂ ಅಧಿಕಾರಿ ದಲ್ಲಾಳಿಯನ್ನು ಸಂಪರ್ಕಿಸುವಂತೆ ಹೇಳಿದರೆ ತಕ್ಷಣ ಅಧ್ಯಕ್ಷರಿಗೆ, ಆಯುಕ್ತರಿಗೆ ದೂರು ನೀಡಿ. ಮುಡಾಗೆ ದಲ್ಲಾಳಿಗಳ ಪ್ರವೇಶ ತಡೆಯಲು ಪೊಲೀಸ್ ಟಾಸ್ಕ್ ಫೋರ್ಸ್ ರಚಿಸಲು ತಿಳಿಸಿದ್ದೇನೆ ಎಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಪರಿಷತ್ ಒಳಗೆ ಮಾಸ್ಕ್ ಹಾಕದವರಿಗೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದವರಿಗೆ, ದಂಡ ಹಾಕಬೇಕು. ಸಭಾಪತಿಗಳೇ ಈ ನಿರ್ಣಯ ಕೈಗೊಳ್ಳಲಿ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಆಗ್ರಹಿಸಿದರು.
ವಿಧಾನ ಪರಿಷತ್ ನಲ್ಲಿ ಗದ್ದಲ ಮಾಡುವ ವೇಳೆ ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನಪ್ರತಿನಿಧಿಗಳ ವಿರುದ್ಧ ಜನರ ಆಕ್ರೋಶ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ನಿಯಮ ಜನರಿಗೂ, ಜನಪ್ರತಿನಿಧಿಗಳಿಗೂ ಎಲ್ಲರಿಗೂ ಒಂದೇ. ನಿಯಮ ಪಾಲಿಸದ ಜನಪ್ರತಿನಿಧಿಗಳಿಗೆ ದಂಡ ವಿಧಿಸಿ ಎಂದರು.
ಜನ ಸಾಮಾನ್ಯರು ಈ ವಿಚಾರದಲ್ಲಿ ಎತ್ತಿರುವ ಧ್ವನಿ ನ್ಯಾಯಸಮ್ಮತ. ನಾನು ಆ ಪಕ್ಷ ಈ ಪಕ್ಷ ಎಂದು ಮಾತಾನಾಡುತ್ತಿಲ್ಲ. ಎಲ್ಲರಿಗು ಒಂದೇ ನಿಯಮ ಅನ್ವಯ ಆಗಲಿ ಎಂದಷ್ಟೇ ಹೇಳುತ್ತಿದ್ದೇನೆ ಎಂದು ತಿಳಿಸಿದರು.
ಮೇಲ್ಮನೆ ರದ್ದತಿ ಮಾಡಿ ಎಂಬ ಚರ್ಚೆಯ ಬಗ್ಗೆ ಉತ್ತರಿಸಿ, ಅಂತಹ ಯಾವುದೇ ಚರ್ಚೆಗಳು ಇಲ್ಲ. ಆಗಿರುವ ತಪ್ಪಿನ ಬಗ್ಗೆ ಸಭಾಪತಿಗಳು ಕ್ರಮ ಕೈಗೊಳ್ಳುತ್ತಾರೆ.ಈ ಬಗ್ಗೆ ಹೆಚ್ಚಿನ ಚರ್ಚೆಯೂ ಬೇಡ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಮ್ಮ ಮಾತಿಗೆ ತೆರೆ ಎಳೆದರು.