Home Blog Page 3092

ತುಂಗಭದ್ರೆ ತಟದಲ್ಲಿ ಅಕ್ರಮ ಮರಳು ದಾಸ್ತಾನು: ಕೋಟ್ಯಾಂತರ ರೂ. ಮೌಲ್ಯದ ಮರಳು ಜಪ್ತಿ

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ತಾಲೂಕಿನ ತುಂಗಭದ್ರೆ ದಡದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, ಅಪಾರ ಪ್ರಮಾಣದಲ್ಲಿ ಕೋಟ್ಯಾಂತರ ರೂ. ಮೌಲ್ಯದ ಮರಳು ವಶಪಡಿಸಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅಧಿಕೃತವಾಗಿ ಪರವಾನಗಿ ಪಡೆದ ಮರಳು ಬ್ಲಾಕ್ ಗಳು ಇದ್ದಾಗಲೂ ಸಹ, ಶಿಂಗಟಾಲೂರ ಮತ್ತು ಸುತ್ತಮುತ್ತಲಿನ ಗ್ರಾಮದ ಕೆಲ ಖದೀಮರು ರಾಜಾರೋಷವಾಗಿ ತುಂಗಭದ್ರೆಯ ಒಡಲು ಬಗೆದು ಅಪಾರ ಪ್ರಮಾಣದಲ್ಲಿ ಮರಳು ಸಂಗ್ರಹ ಮಾಡಿದ್ದರು.

ಈ ಬಗ್ಗೆ ಮಾಹಿತಿ ಆಧರಿಸಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ರಾಜೇಶ್, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ತಹಸೀಲ್ದಾರ್ ಆಶಪ್ಪ ಪೂಜಾರ ಹಾಗೂ ಪೊಲೀಸ್ ಇಲಾಖೆಯ 50ಕ್ಕೂ ಹೆಚ್ಚು ಸಿಬ್ಬಿಂದಿ ಸಹಯೋಗದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ, ಕೋಟ್ಯಾಂತರ ರೂ. ಮೌಲ್ಯದ ಮರಳನ್ನು ಶಿಂಗಟಾಲೂರ ಗ್ರಾಮದ ವ್ಯಾಪ್ತಿಯ ಹಲವು ಕಡೆಗಳಲ್ಲಿ ದಾಳಿ ನಡೆಸಿ, ಸುಮಾರು 100 ಟಿಪ್ಪರ್ ಮರಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಪ್ರಕರಣ ದಾಖಲಾಗಲ್ಲ

ತುಂಗಭದ್ರಾ ನದಿ ತೀರದಿಂದ ಯಾರೂ ಬೇಕಾದರೂ ಹೀಗೆ ಮರಳು ತೆಗೆದು ದಾಸ್ತಾನು ಮಾಡಿಕೊಳ್ಳಬಹುದು. ಮಾರಿಕೊಳ್ಳಬಹುದು. ಅಧಿಕಾರಿಗಳು ಸಹ ನಿಯಮಿತವಾಗಿ ದಾಳಿ ನಡೆಸಿ ಅಕ್ರಮ ದಾಸ್ತಾನು ವಶಪಡಿಸಿಕೊಳ್ಳುತ್ತಲೆ ಇರುತ್ತಾರೆ. ಆದರೆ ಯಾರ ಮೇಲೂ ದೂರು ದಾಖಲಾಗುವುದಿಲ್ಲ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಮರಳ್ಳುಗಳ್ಳರು ದಾಳಿ ನಂತರ ಮತ್ತೆ ತುಂಗಭದ್ರೆಯ ಒಡಲಿಗೆ ಕೈ ಹಾಕುತ್ತಾರೆ. ಅಧಿಕಾರಿಗಳು ಬಂದು ಮರಳು ತೆಗೆದುಕೊಂಡು ಹೋಗುತ್ತಾರೆ. ಒಟ್ಟಿನಲ್ಲಿ ಇದೊಂದು ಆಡೋಣ ಬಾ… ಕೆಡಿಸೋಣ ಬಾ ಎನ್ನುವುದು ದಾಳಿಯ ಉದ್ದೇಶ ಇರಬಹುದು ಎನ್ನುವ ಅನುಮಾನಗಳು ವ್ಯಕ್ತವಾಗಿವೆ.

ಅಕ್ರಮ ಮರಳು ದಾಸ್ತಾನಿನ ಮಾಹಿತಿ ಇರುವ ಅಧಿಕಾರಿಗಳಿಗೆ ಅದನ್ನು ಸಂಗ್ರಹಿಸುವ ವ್ಯಕ್ತಿಯ ಮಾಹಿತಿಯೂ ಇರುತ್ತದೆ. ಆದರೂ ಯಾರ ಮೇಲೆಯೂ ದೂರು ದಾಖಲಾಗದಿರುವ ಹಿಂದೆ ರಾಜಕೀಯ ಉದ್ದೇಶ ಅಡಗಿದೆ. ಕೆಲ ಪ್ರಭಾವಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಹೀಗಾಗಿ ಅಂಥವರ ಮೇಲೆ ದೂರು ದಾಖಲಾಗುವುದೇ ಇಲ್ಲ. ಒಟ್ಟಾರೆ ಇದೊಂದು ನಾಟಕ ಅಷ್ಟೆ ಎನ್ನುತ್ತಾರೆ ಶಿಂಗಟಾಲೂರಿನ ಕೆಲವು ಗ್ರಾಮಸ್ಥರು.

ಜಿಲ್ಲೆಯ ಮಟ್ಟಿಗೆ ಮಂಗಳವಾರ ಬೆಳ್ಳಂಬೆಳಗ್ಗೆ ನಡೆದ ದಾಳಿಯಲ್ಲಿ ಅಪಾರ ಪ್ರಮಾಣದ ಮರಳು ವಶಕ್ಕೆ ಪಡೆದಿದ್ದಾರೆ. ಜಿಲ್ಲಾಧಿಕಾರಿ ಸುಂದರೇಶ ಬಾಬು ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಸಹ ದಾಳಿ ನಡೆದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.

ಫುಡ್ ಕಿಟ್ ನೆಪದಲ್ಲಿ ಮಕ್ಕಳ ಬಳಕೆ; ಪ್ರಚಾರದ ಬರದಲ್ಲಿ ನಿಯಮ ಉಲ್ಲಂಘಿಸಿದ ಲಾಡ್

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಲಾಕ್ ಡೌನ್ ಸಂದರ್ಭದಲ್ಲಿ ಫುಡ್ ಕಿಟ್ ವಿತರಣೆಯ ನೆಪದಲ್ಲಿ ಮಕ್ಕಳನ್ನು ಬಳಕೆ ಮಾಡಿಕೊಂಡು ನಿಯಮ ಉಲ್ಲಂಘನೆ ಮಾಡಿದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ. ಫುಡ್ ಕಿಟ್ ಹಂಚುವ ನೆಪದಲ್ಲಿ ಮಾಜಿ ಸಚಿವ ಸಂತೋಷ ಲಾಡ್ ಮಕ್ಕಳ ಬಳಕೆ ಮಾಡಿಕೊಂಡಿದ್ದಾರೆ. ಅಲ್ಲದೆ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮಾಸ್ಕ್ ಧರಿಸದೆ ಸಾವಿರಾರು ಜನರನ್ನು ಸೇರಿಸಿ ಕೋವಿಡ್ ನಿಯಮಕ್ಕೆ ಕಾಸಿನ ಕಿಮ್ಮತ್ತು ನೀಡಿಲ್ಲ. ಸಾಮಾಜಿಕ ಅಂತರಕ್ಕೂ ಯಾವುದೇ ಬೆಲೆ ನೀಡಿಲ್ಲ. ಸ್ವತಃ ಲಾಡ್ ಮಾಸ್ಕ್ ಧರಿಸದೆ ಭಾಗವಹಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮಕ್ಕಳು ಸೇರಿದಂತೆ ಸಾವಿರಾರು ಜನ ಸಾರ್ವಜನಿಕರನ್ನು ಸೇರಿಸಿ ಪ್ರಚಾರ ನಡೆಸಿದ್ದಾರೆ. ಅಲ್ಲದೇ ಈಗನಿಂದಲೇ ಚುನಾವಣೆ ಪ್ರಚಾರ ಆರಂಭಿಸಿರುವ ಲಾಡ್ ಕಳೆದ ಮೂರು ನಾಲ್ಕು ದಿನಗಳಿಂದ ಕಲಘಟಗಿ ಕ್ಷೇತ್ರದಲ್ಲಿಯೇ ಬೀಡು ಬಿಟ್ಟಿದ್ದಾರೆ. ಈ ವೇಳೆ ಮಾಸ್ಕ್ ಧರಿಸದ ಮಕ್ಕಳನ್ನು ಬಳಕೆ ಮಾಡಿಕೊಂಡಿದ್ದು, ಲಾಡ್ ವಿರುದ್ದ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಬೇಕಿದೆ ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.

ಕೊರೊನಾ; ಗದಗ ಜಿಲ್ಲೆಯ ಜನರಿಗೆ ನೆಮ್ಮದಿ ಮೂಡಿಸಿದ ಸೋಮವಾರ!

0

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಇಂದು 28 ಜನರಿಗೆ ಸೋಂಕು ತಗುಲಿದೆ. ಇಂದಿನ ವರದಿಯಲ್ಲಿ ಕೋವಿಡ್ ನಿಂದ ಯಾವುದೇ ಸಾವು ಆಗದಿರವುದು ಜಿಲ್ಲೆಯ ಮಟ್ಟಿಗೆ ನೆಮ್ಮದಿ ಮೂಡಿಸಿದೆ.

ಇಂದು 28 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 25425 ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -12, ಮುಂಡರಗಿ-04, ನರಗುಂದ-02, ರೋಣ-03, ಶಿರಹಟ್ಟಿ-05, ಹೊರಜಿಲ್ಲೆಯ-02 ಸೇರಿದಂತೆ 28 ಪ್ರಕರಣಗಳು ದೃಢಪಟ್ಟಿವೆ.

ಇಂದು 113 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 24494 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 643 ಜನ ಸೋಂಕಿತರು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 85 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಬಿಜೆಪಿಗೆ ವೋಟ್ ಹಾಕಿ ಹೊಟ್ಟಿ ಮ್ಯಾಗ್ ತಣ್ಣೀರ ಬಟ್ಟಿ ಹಾಕೊಳದಾಗೈತ್ರಿ!

0

ವಿಜಯಸಾಕ್ಷಿ ಸುದ್ದಿ, ಗದಗ

ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ವತಿಯಿಂದ ರಾಜ್ಯಾದ್ಯಂತ ಹಳ್ಳಿಹಳ್ಳಿಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಗದಗ ತಾಲೂಕಿನ ಕೊಪ್ಪಳ ರಸ್ತೆಯ ಅಡವಿಸೋಮಾಪುರದಲ್ಲೂ ಪ್ರತಿಭಟನೆ ನಡೆಯಿತು. ಸಮೀಪದಲ್ಲಿ ಇರುವ ಪೆಟ್ರೋಲ್ ಬಂಕ್ ನಲ್ಲಿ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಆದೇಶದ ಮೇರಿಗೆ ನರಗುಂದ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಿ.ಆರ್. ಯಾವಗಲ್ ಆಜ್ಞೆಯಂತೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಗ್ರಾಪಂನ ಮಾಜಿ ಸದಸ್ಯ ರಾಜು ಪೆಂಡಾರ್, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ವಿವೇಕ್ ಯಾವಗಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ವಿವೇಕ್ ಯಾವಗಲ್ ಅವರು, ಪೆಟ್ರೋಲ್ ಹಾಗೂ ಡೀಸೆಲ್ ಹಾಕಿಸಿಕೊಳ್ಳಲು ಬರುತ್ತಿದ್ದ ಗ್ರಾಹಕರನ್ನೇ ಮಾತನಾಡಿಸಿ, ಪೆಟ್ರೋಲ್, ಡೀಸೆಲ್ ದರದಿಂದ ಜನರಿಗೆ ಆಗುತ್ತಿರುವ ನೋವುಗಳನ್ನು ಆಲಿಸುವ ಪ್ರಯತ್ನ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಹಕರು ಬಿಜೆಪಿ ವಿರುದ್ಧ ಗುಡುಗಿದ್ದಾರೆ. ಟಂಟಂ ಚಾಲಕನೊಬ್ಬ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಬಡವರು ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳುವಂತಾಗಿದೆ. ಬಿಜೆಪಿಗೆ ಬೆಂಬಲಿಸಿದ್ದಕ್ಕೆ ಈ ಪರಿಸ್ಥಿತಿ ಅನುಭವಿಸಬೇಕಾಗಿದೆ. ಹೀಗಾಗಿ ಯಾರೂ ಬಿಜೆಪಿಗೆ ಸಪೋರ್ಟ್ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂಗವಿಕಲ ವ್ಯಕ್ತಿಯೊಬ್ಬರು, ಬಿಜೆಪಿಗೆ ಮತ ಹಾಕಿ ತಪ್ಪು ಮಾಡಿದ್ದೇವೆ. ಕೊರೊನಾದಿಂದಾಗಿ ಕೈಯಲ್ಲಿ ಕೆಲಸವಿಲ್ಲ. ನಮಗೆ ರೂ. 1400 ಗೌರವ ಧನ ನೀಡುತ್ತಾರೆ. ಇದರಲ್ಲಿಯೇ ನಾನು ಕುಟುಂಬ ನಿರ್ವಹಣೆ ಮಾಡಬೇಕು. ಐವರು ಮನೆಯಲ್ಲಿದ್ದೇವೆ. ಲಾಕ್ ಡೌನ್ ಸಂದರ್ಭದಲ್ಲಿಯೇ ಅಗತ್ಯ ವಸ್ತುಗಳ ಬೆಲೆ, ಗ್ಯಾಸ್, ಪೆಟ್ರೋಲ್ ಬೆಲೆ ಏರಿಸಿದ್ದಾರೆ. ಇದರಿಂದಾಗಿ ಬದುಕೇ ಬೇಡ ಎನ್ನುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅನ್ನದಾತ ಸರ್ಕಾರವೇ ರಾಜ್ಯದಲ್ಲಿ ಆಡಳಿತದಲ್ಲಿದ್ದರೆ ನಮ್ಮಂತಹ ಬಡವರು ಉತ್ತಮ ಜೀವನ ಸಾಗಿಸಬಹುದು ಎಂದು ಹೇಳಿದ್ದಾರೆ.

ಕೂದಲು ಆಯ್ದು ಜೀವನ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬ, ಸಾರ್, ನನಗೆ ತುಂಬಾ ತೊಂದರೆಯಾಗುತ್ತಿದೆ. ಊರೂರು ಅಲೆದು ನಾವು ಕೂದಲು ಆರಿಸಿ ಜೀವನ ಮಾಡುತ್ತೇವೆ. ಸದ್ಯ ಲಾಕ್ ಡೌನ್ ಇರುವುದರಿಂದ ಜನ ಮನೆಯಿಂದ ಹೊರಗೆ ಬರುತ್ತಿಲ್ಲ. ಹೀಗಾಗಿ ದಿನಂಪ್ರತಿ ರೂ. 120 ರಿಂದ 130 ದುಡಿಯುತ್ತಿದ್ದೇವೆ. ಆದರೆ, ಪೆಟ್ರೋಲ್ ದರ ನೂರು ದಾಟಿದೆ. ಇದರಿಂದಾಗಿ ದುಡಿದ ಹಣ ಕೈ ಸೇರುತ್ತಿಲ್ಲ. ಪೆಟ್ರೋಲ್ ಗಾಗಿಯೇ ಅದು ಖರ್ಚಾಗುತ್ತಿದೆ. ನಮಗೆ ತುಂಬಾ ಕಷ್ಟವಾಗಿದೆ. ತುತ್ತು ಅನ್ನಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಸರ್ಕಾರ ಬಡವರ ಪರ ಕಾರ್ಯ ಮಾಡುತ್ತಿಲ್ಲ. ನಮ್ಮಂತಹ ಜನರ ಬದುಕು ನೋಡಿಕೊಂಡು ಅವರ ದರ ಏರಿಸುವ ಚಿಂತನೆ ಮಾಡಬೇಕು. ಈ ಸರ್ಕಾರ ಯಾವುದಕ್ಕೂ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ನ ಉಪಾಧ್ಯಕ್ಷ ವಿಜಯ ಚಲವಾದಿ, ಗ್ರಾಮ ಪಂಚಾಯತಿ ಸದಸ್ಯ ರಮೇಶ್ ಹಂಡಿ, ಮಲ್ಲಪ್ಪ ಅಸುಂಡಿ, ಮುಖಂಡರಾದ ಗಣೇಶ್ ಜಡಿ, ನಂದೇಶಪ್ಪ ಬೆಳ್ಳಿ, ಹಜರತಸಾಬ ಪೆಂಡಾರ, ಜಿನೇಸಾಬ ಮುಲ್ಲಾನವರ, ಬಸವರಾಜ್ ಈರಣ್ಣವರ, ರಾಘವೇಂದ್ರ ಪುರದ, ಮಂಜುನಾಥ ಸೊರಟೂರ, ಮೌಲಾಸಾಬ ಪೆಂಡಾರ, ಲೋಹಿತ್ ಗೌಡ್ರು, ಗೋಪಾಲ ಕಾರಬಾರಿ, ಸುಭಾಷ್ ಲಮಾಣಿ, ಭಕ್ಷಿ ಪೆಂಡಾರ, ಖಾದರ ಅಲ್ತಾಪ ನದಾಫ್, ರಫೀಕ್ ಮುಲ್ಲಾನವರ, ಗ್ರಾ.ಪಂ ಮಾಜಿ ಸದಸ್ಯ ಈರಪ್ಪ, ಬಸವರಾಜ್ ಹಮ್ಮಗಿ ಸೇರಿದಂತೆ, ಅಡವಿಸೋಮಾಪೂರ ತಾಂಡಾ, ಪಾಪನಾಶಿ ತಾಂಡಾದ ನೂರಾರು ಜನ ಪಾಲ್ಗೊಂಡಿದ್ದರು.

ಬಿಪಿಎಲ್ ಕುಟುಂಬಸ್ಥರಿಗೆ ಪರಿಹಾರ ಘೋಷಿಸಿದ ಸಿಎಂ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೋವಿಡ್ ನಿಂದಾಗಿ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ವ್ಯಕ್ತಿ ಸಾವನ್ನಪ್ಪಿದ್ದರೆ, ಅಂತಹ ಕುಟುಂಬಸ್ಥರಿಗೆ ರೂ. 1 ಲಕ್ಷ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸಿದೆ.
ಈ ಕುರಿತು ಸಿಎಂ ಬಿ.ಎಸ್. ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಸ್ಥರಿಗೆ ರೂ. 1 ಲಕ್ಷ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ. ಒಂದು ಕುಟುಂಬದಲ್ಲಿನ ಇಬ್ಬರು ಮೂವರು ದುಡಿಯುವ ವ್ಯಕ್ತಿ ಸಾವನ್ನಪ್ಪಿದ್ದರೂ ಒಬ್ಬರನ್ನು ಪರಿಗಣಿಸಿ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ.

30 ರಿಂದ 50 ವರ್ಷದೊಳಗಿನ ದುಡಿಯುವ ವ್ಯಕ್ತಿ ಕೋವಿಡ್ ಗೆ ಬಲಿಯಾಗಿದ್ದರೆ, ಅಂತಹ ಕುಟುಂಬಗಳಿಗೆ ಸರ್ಕಾರದ ಈ ನೆರವು ಸಿಗಲಿದೆ. ರಾಜ್ಯದಲ್ಲಿನ ಸುಮಾರು 25 ರಿಂದ 30 ಸಾವಿರ ಕುಟುಂಬಗಳು ಈ ಯೋಜನೆಯ ಲಾಭ ಪಡೆಯಬಹುದು ಎಂದು ಸರ್ಕಾರ ಅಂದಾಜಿಸಿದೆ.

ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಇಂತಹ ಯೋಜನೆಯೊಂದನ್ನು ಜಾರಿಗೊಳಿಸಿದೆ. ಮಹಾಮಾರಿಯಿಂದಾಗಿ ರಾಜ್ಯದಲ್ಲಿನ ಹಲವು ಕುಟುಂಬಗಳು ಬೀದಿಗೆ ಬಂದಿದ್ದು, ಅಂತಹ ಕುಟುಂಬಸ್ಥರ ನೆರವಿಗೆ ನಿಲ್ಲುವ ಉದ್ಧೇಶದಿಂದ ಸರ್ಕಾರ ಇಂತಹ ಮಹತ್ತರ ಯೋಜನೆ ಜಾರಿಗೊಳಿಸಿದೆ.

ಹೊನ್ನಾಳಿ ಶಾಸಕ ರೇಣುಕಾಚಾರ್ಯರ ಸೇವೆಗೆ ವಿದೇಶದಲ್ಲಿಯೂ ಮೆಚ್ಚುಗೆ

ವಿಜಯಸಾಕ್ಷಿ ಸುದ್ದಿ, ದಾವಣಗೆರೆ

ಕೊರೊನಾ ಹೆಮ್ಮಾರಿ ರಾಜ್ಯಕ್ಕೆ ಕಾಲಿಟ್ಟಾಗಿನಿಂದಲೂ ಜೀವದ ಹಂಗು ತೊರೆದು ಹಗಲಿರುಳು ಜನರ ಸೇವೆಗೆ ನಿಂತವರ ಪಟ್ಟಿ ಮಾಡುತ್ತ ಹೋದರೆ, ಶಾಸಕ ರೇಣುಕಾಚಾರ್ಯ ಮೊದಲಿಗರಾಗಿ ನಿಲ್ಲಬಹುದೇನೊ? ಸದ್ಯ ಇವರ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.

ಶಾಸಕರ ಈ ಮಾನವೀಯ ಕಾರ್ಯಕ್ಕೆ ದುಬೈ ಕನ್ನಡಿಗರು ಮೆಚ್ಚುಗೆ ಮಾತುಗಳನ್ನು ಹೇಳಿ, ಧನ್ಯವಾದ ಅರ್ಪಿಸಿದ್ದಾರೆ. ವಿಡಿಯೋ ಸಂದೇಶದ ಮೂಲಕ ರೇಣುಕಾಚಾರ್ಯ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ದುಬೈ ಕನ್ನಡಿಗರ ಸಂಘದ ಅಧ್ಯಕ್ಷೆ ಉಮಾ ವಿದ್ಯಾಧರ್ ಮತ್ತು ಪದಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊರೊನಾ ಕಾಲದಲ್ಲಿ ನಿಮ್ಮ ಸೇವೆ ಅಪಾರ. ಶಾಸಕರೇ ನಿಮ್ಮಲ್ಲಿರುವ ಸಾಮಾಜಿಕ ಕಳಕಳಿ ಕಂಡು, ಕೆಲಸ, ಕಾರ್ಯಗಳನ್ನು ಮೆಚ್ಚಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ದುಬೈ ಕನ್ನಡಿಗರ ಸಂಘದ ಉಪಾಧ್ಯಕ್ಷ ವಿನೀತ್ ಕುಮಾರ್, ಸದಸ್ಯರಾದ ದೀಪಕ್ ಸೋಮಶೇಖರ್, ಅರುಣ್ ಕುಮಾರ್, ವೆಂಕಟ್ ಕಾಮತ್ ಮತ್ತು ಶ್ರೀನಿವಾಸ್ ಅರಸ್ ಈ ಸಂದರ್ಭದಲ್ಲಿ ಇದ್ದಾರೆ.

ಕೊರೊನಾಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾದ ವೃದ್ಧ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಕೊರೊನಾ ಚಿಕಿತ್ಸೆಗೆ ಹೆದರಿದ ವೃದ್ಧ ವ್ಯಕ್ತಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಇಲ್ಲಿಯ ಕಿಮ್ಸ್ ನಲ್ಲಿ ನಡೆದಿದೆ.
ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಕಿಮ್ಸ್ ಗೆ ದಾಖಲಿಸಲಾಗಿತ್ತು. ಹೀಗೆ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧ, ಕಿಮ್ಸ್ ಆಸ್ಪತ್ರೆಯ ಬಾತ್ ರೂಂ ನಲ್ಲಿ ನೇಣಿಗೆ ಶರಣಾಗಿದ್ದಾರೆ.

ಕೆಲವು ದಿನಗಳಿಂದ ಚಿಕಿತ್ಸೆಗೆ ವೃದ್ಧ ಸ್ಪಂದಿಸುತ್ತಿದ್ದರು. ಆದರೆ, ಏಕಾಏಕಿ ಸಾವಿಗೆ ಶರಣಾಗಿದ್ದಾರೆ. ಮೃತ ವ್ಯಕ್ತಿಯನ್ನು 78 ವರ್ಷದ ನಗರದ ರಣದಮ್ಮ ಕಾಲೋನಿಯ ನಿವಾಸಿ ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ಹಿಟ್ಟಿನ ಗಿರಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ.

ಆಸ್ಪತ್ರೆಗೆ ದಾಖಲಾಗಿದ್ದ ದಿನದಿಂದಲೂ ಈ ವ್ಯಕ್ತಿ ಮಾನಸಿಕವಾಗಿ ಆಘಾತಗೊಂಡಿದ್ದ. ಹೀಗಾಗಿಯೇ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ವಿದ್ಯಾನಗರ ಠಾಣೆಯ ಇನ್ಸಪೆಕ್ಟರ್ ಮಹಾಂತೇಶ ಹೋಳಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ರಾಜ್ಯದಲ್ಲಿ ಇನ್ನೂ 5 ದಿನ ಅಬ್ಬರಿಸಲಿದ್ದಾನೆ ಮಳೆರಾಯ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಮಳೆರಾಯನ ಅಬ್ಬರ ಶುರುವಾಗಿದೆ. ಇದರ ಮಧ್ಯೆ ಜೂ. 17ರ ವರೆಗೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಈ ಪ್ರದೇಶದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇಂದು ಬೆಳಿಗ್ಗೆಯಿಂದ ಕೂಡ ಕರಾವಳಿ, ಮಲೆನಾಡು ಸೇರಿದಂತ ಹಲವು ಜಿಲ್ಲೆಗಳಲ್ಲಿ ಮಳೆ ಉತ್ತಮವಾಗಿಯೇ ಸುರಿದಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಇಂದಿನಿಂದಲೇ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಅಲ್ಲದೇ, ಈ ಮೂರು ಜಿಲ್ಲೆಗಳಲ್ಲಿ ನಾಳೆ ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಜೂ. 16 ಹಾಗೂ 17ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನುಳಿದಂತೆ ಉಳಿದ ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಉತ್ತರ ಒಳನಾಡಿನಲ್ಲಿ ಕೂಡ ಸೋಮವಾರದಿಂದ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಜೂ. 14 ರಿಂದ ಎರಡು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಯಾದಗಿರಿ, ವಿಜಯಪುರ, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಇರಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಕೊಡಗು ಜಿಲ್ಲೆಯಲ್ಲಿ ಕೂಡ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

38 ಪತ್ನಿಯರನ್ನು ಹೊಂದಿದ್ದ ದೊಡ್ಡ ಸಂಸಾರಸ್ಥ ಇನ್ನಿಲ್ಲ

ವಿಜಯಸಾಕ್ಷಿ ಸುದ್ದಿ, ಐಜಾಲ್

ಈ ವ್ಯಕ್ತಿಗೆ ಬರೋಬ್ಬರಿ 38 ಪತ್ನಿಯರು, 89 ಮಕ್ಕಳು ಹಾಗೂ 33 ಜನ ಮೊಮ್ಮಕ್ಕಳು ಇದ್ದರು. ಈ ಕುಟುಂಬ ಇಡೀ ಜಗತ್ತಿನಲ್ಲಿಯೇ ಅತಿ ದೊಡ್ಡ ಕುಟುಂಬ ಎಂದೇ ಖ್ಯಾತಿ ಪಡೆದಿತ್ತು. ಆದರೆ, ಇಷ್ಟೊಂದು ದೊಡ್ಡ ಕುಟುಂಬ ಸೃಷ್ಟಿಸಿದ್ದ ವ್ಯಕ್ತಿ ಮಾತ್ರ ಇನ್ನಿಲ್ಲದಾಗಿದೆ.

ವಿಶ್ವದ ಅತಿದೊಡ್ಡ ಕುಟುಂಬ ಹೊಂದಿದ್ದ ಜಿಯೋನಾ ಚಾನಾ(78) ಮಿಜೋರಾಂನಲ್ಲಿ ಸಾವನ್ನಪ್ಪಿದ್ದಾರೆ. ಚಾನಾ ಸಾವಿನ ಬಗ್ಗೆ ಮಿಜೋರಾಂ ಸಿಎಂ ಜೊರಾಮ್ತಂಗ ಟ್ವೀಟ್ ಮಾಡಿ ತಿಳಿಸಿದ್ದಾರೆ. 38 ಪತ್ನಿಯರು ಮತ್ತು 89 ಮಕ್ಕಳೊಂದಿಗೆ ವಿಶ್ವದ ಅತಿದೊಡ್ಡ ಕುಟುಂಬದ ಮುಖ್ಯಸ್ಥರೆಂದು ನಂಬಲಾದ ಜಿಯಾನ್-ಎ (76) ಗೆ ಮಿಜೋರಾಂ ಭಾರವಾದ ಹೃದಯದಿಂದ ವಿದಾಯ ಹೇಳಿದೆ. ಮಿಜೋರಾಂ ಮತ್ತು ಬಕ್ತಾಂಗ್ ತ್ಲಾಂಗ್ನುವಾಮ್ನಲ್ಲಿರುವ ಅವರ ಗ್ರಾಮವು ರಾಜ್ಯದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿತ್ತು ಎಂದು ಸಿಎಂ ಬರೆದುಕೊಂಡಿದ್ದಾರೆ.

ಚಾನಾಗೆ ಸಕ್ಕರೆ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡ ಇತ್ತು. ಚಾನಾ ತಮ್ಮ 17ನೇ ವಯಸ್ಸಿನಲ್ಲಿ ತಮಗಿಂತಲೂ ಮೂರು ವರ್ಷ ದೊಡ್ಡವರನ್ನು ಮದುವೆಯಾಗಿದ್ದರು. ಪರ್ವತದಿಂದ ಕೂಡಿದ ಹಳ್ಳಿಯಲ್ಲಿ ಅವರ ಕುಟುಂಬ 100ಕ್ಕೂ ಹೆಚ್ಚು ಕೊಠಡಿಗಳನ್ನು ಹೊಂದಿತ್ತು ಎಂದು ತಿಳಿದು ಬಂದಿದೆ. ಈ ಎಲ್ಲ ಸದಸ್ಯರು ನಾಲ್ಕು ಅಂತಸ್ತಿನ ಮನೆಯಲ್ಲಿ ವಾಸಿಸುತ್ತಿದ್ದರು. ಇವರ ಮನೆಯೇ ರಾಜ್ಯದ ಪ್ರಮುಖ ಆಕರ್ಷಣೀಯ ಕೇಂದ್ರವಾಗಿತ್ತು.

ಬಬ್ರುವಾಹನ, ಹುಲಿಯ ಹಾಲಿನ ಮೇವು ಖ್ಯಾತಿಯ ನಿರ್ಮಾಪಕ ಇನ್ನಿಲ್ಲ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಸ್ಯಾಂಡಲ್ ವುಡ್ ನಲ್ಲಿ ಹಲವು ಯಶಸ್ವಿ ಸಿನಿಮಾಗಳನ್ನು ನಿರ್ಮಿಸಿದ್ದ ಕೆಸಿಎನ್ ಚಂದ್ರಶೇಖರ್ ನಿಧನರಾಗಿದ್ದಾರೆ.
ಇವರು ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಹುಲಿಯ ಹಾಲಿನ ಮೇವು, ಬಬ್ರುವಾಹನ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ತಮ್ಮ ಸಂಸ್ಥೆಯ ಮೂಲಕ ಹಲವು ಯಶಸ್ವಿ ಸಿನಿಮಾಗಳನ್ನು ನೀಡುವ ಮೂಲಕ ಕನ್ನಡಕ್ಕೆ ತಮ್ಮದೆಯಾದ ಕೊಡುಗೆಗಳನ್ನು ನೀಡಿದ್ದಾರೆ.
ಇಂದು ಮಧ್ಯಾಹ್ನ ಚಂದ್ರಶೇಖರ್ ಅವರ ಅಂತ್ಯಕ್ರಿಯೆ ನಡೆಯಲಿದ್ದು, ಬೆಳಿಗ್ಗೆ 9 ಗಂಟೆಯಿಂದ ನಗರದ ಶಿವಾನಂದ ಸರ್ಕಲ್ ಬಳಿಯ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

error: Content is protected !!