Home Blog Page 3093

ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ದಾಖಲಿಸಿದ ನ್ಯೂಜಿಲೆಂಡ್!

ವಿಜಯಸಾಕ್ಷಿ ಸುದ್ದಿ, ಲಂಡನ್

ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ನಡೆದ ಟೆಸ್ಟ್ ಸರಣಿಯನ್ನು ನ್ಯೂಜಿಲೆಂಡ್ ತಂಡ ಗೆದ್ದು ಬೀಗಿದೆ. ಅಲ್ಲದೇ, ಭಾರತದೊಂದಿಗೆ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಆತ್ಮವಿಶ್ವಾಸ ಬೆಳೆಸಿಕೊಂಡಿದೆ.

ಲಂಡನ್‌ ನಲ್ಲಿ ನಡೆದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತ್ತು. ಆದರೆ, ಎರಡನೇ ಟೆಸ್ಟ್ ಪಂದ್ಯವನ್ನು ನ್ಯೂಜಿಲೆಂಡ್ ತಂಡ ಗೆದ್ದುಕೊಂಡಿದೆ. ಈ ಮೂಲಕ 1-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿತು.

ಎರಡನೇ ಟೆಸ್ಟ್ ನ ಮೊದಲನೇ ಇನ್ನಿಂಗ್ಸ್ ನಲ್ಲಿ ರಾಯ್ ಬರ್ನ್ಸ್ 81, ಲಾರೆನ್ಸ್ ಅಜೇಯ 81 ಹಾಗೂ ಮಾರ್ಕ್ ವುಡ್ 41 ರನ್ ಗಳಿಂದಾಗಿ ಇಂಗ್ಲೆಂಡ್ ತಂಡ ಎಲ್ಲ ವಿಕೆಟ್‍ ಗಳನ್ನು 303 ರನ್ ಗಳನ್ನು ಗಳಿಸಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ ನ್ಯೂಜಿಲೆಂಡ್ ತಂಡದ ಟ್ರೆಂಟ್ ಬೌಲ್ಟ್ 4, ಮ್ಯಾಟ್ ಹೆನ್ರಿ 3 ಹಾಗೂ ಅಜಜ಼್ ಪಟೇಲ್ 2 ವಿಕೆಟ್ ಪಡೆದು ಮಿಂಚಿದ್ದರು. ಆನಂತರ ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮುಂದುವರೆಸಿದ್ದ ನ್ಯೂಜಿಲೆಂಡ್ 388 ರನ್‌ ಗಳಿಗೆ ಆಲ್ ಔಟ್ ಆಯಿತು. ಈ ಮೂಲಕ ನ್ಯೂಜಿಲೆಂಡ್ ಗೆ 85 ರನ್ ಗಳ ಲೀಡ್ ಸಿಕ್ಕಿತ್ತು. ಇಂಗ್ಲೆಂಡ್ ತಂಡದ ಪರ ಸ್ಟುವರ್ಟ್ ಬ್ರಾಡ್ 4, ಮಾರ್ಕ್ ವುಡ್ 2 ಹಾಗೂ ಓಲಿ ಸ್ಟೋನ್ 2 ವಿಕೆಟ್‌ಗಳನ್ನು ಪಡೆದು ಮಿಂಚಿದ್ದರು.

ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ಬೌಲರ್ ಗಳ ಎದುರು ತತ್ತರಿಸಿ ಹೋದರು. ಕೇವಲ 122 ರನ್‌ ಗಳಿಗೆ ಇಂಗ್ಲೆಂಡ್ ಸರ್ವ ಪತನ ಕಂಡಿತು. ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ 2 ವಿಕೆಟ್ ಕಳೆದುಕೊಂಡು 41 ರನ್ ಗಳಿಸುವುದರ ಮೂಲಕ 8 ವಿಕೆಟ್ ಗಳ ಜಯ ಸಾಧಿಸಿತು.

ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಮ್ಯಾಟ್ ಹೆನ್ರಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ನ್ಯೂಜಿಲೆಂಡ್ ತಂಡದ ಯುವ ಆಟಗಾರ ಡಿವೋನ್ ಕಾನ್ವೆ ಹಾಗೂ ಇಂಗ್ಲೆಂಡ್ ತಂಡದ ರಾಯ್ ಬರ್ನ್ಸ್ ಇಬ್ಬರೂ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಈ ಗೆಲುವಿನ ಮೂಲಕ ನ್ಯೂಜಿಲೆಂಡ್ ತಂಡ ಆತ್ಮವಿಶ್ವಾಸದಲ್ಲಿಯೇ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಭಾರತವನ್ನು ಎದುರಿಸಲಿದೆ.

ಕಚ್ಚಿದ ಹಾವನ್ನೇ ಆಸ್ಪತ್ರೆಗೆ ಒಯ್ದ ಭೂಪ!

ವಿಜಯಸಾಕ್ಷಿ ಸುದ್ದಿ, ಬಳ್ಳಾರಿ

ತನಗೆ ಕಚ್ಚಿದ ಹಾವನ್ನು ಹಿಡಿದುಕೊಂಡು ಯುವಕನೊಬ್ಬ ಆಸ್ಪತ್ರೆಗೆ ಬಂದಿರುವ ಘಟನೆ ಜಿಲ್ಲೆಯ ಕಂಪ್ಲಿ ತಾಲೂಕಿನ ಉಪ್ಪಾರಳ್ಳಿಯಲ್ಲಿ ನಡೆದಿದೆ. ಇಂದು ಬೆಳಿಗ್ಗೆ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಗ್ರಾಮದ ಯುವಕ ಕಾಡಪ್ಪನ ಕಾಲಿಗೆ ಹಾವು ಕಚ್ಚಿದೆ. ಹಾವು ಕಚ್ಚಿದ ತಕ್ಷಣ ಎಚ್ಚರಗೊಂಡ ಕಾಡಪ್ಪ ಪಕ್ಕದಲ್ಲಿಯೇ ಇದ್ದ ಹಾವನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಗ್ರಾಮದ ಮಧ್ಯದಲ್ಲಿಯೇ ನಡೆದುಕೊಂಡು ಆಸ್ಪತ್ರೆಗೆ ತೆರಳಿದ್ದಾನೆ.
ಅಲ್ಲದೇ, ಈ ಯುವಕ ಹಾವನ್ನು ಕೈಯಲ್ಲಿಯೇ ಹಿಡಿದುಕೊಂಡು ಚಿಕಿತ್ಸೆಗಾಗಿ ಕಾದು ಕುಳಿತಿದ್ದಾನೆ. ಇದನ್ನು ಕಂಡ ವೈದ್ಯರೇ ಗಾಬರಿಗೊಂಡಿದ್ದಾರೆ. ಆ ನಂತರ ವೈದ್ಯರು ಚಿಕಿತ್ಸೆ ನೀಡಿದ್ದಾರೆ.

ಕರ್ನಾಟಕದ ಉದ್ಯೋಗ ಕನ್ನಡಿಗರ ಕೈಯಲ್ಲಿಯೇ ಇರಲಿ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಸಾಮಾಜಿಕ ಜಾಲತಾಣದಲ್ಲಿ ‘ಕರ್ನಾಟಕದ ಉದ್ಯೋಗ ಕನ್ನಡಿಗರಿಗೆ ಸಿಗಲಿ’ ಎಂಬ ಅಭಿಯಾನ ಪ್ರಾರಂಭವಾಗಿದೆ.
ಸದ್ಯ ಈ ಹ್ಯಾಶ್ ಟ್ಯಾಗ್ ಟ್ವೀಟರ್ ನಲ್ಲಿ ಟ್ರೆಂಡಿಂಗ್ ಆಗಿದೆ. ರಾಜ್ಯದಲ್ಲಿನ ಉದ್ಯೋಗಗಳು ಬೇರೆಯವರ ಪಾಲಾಗುತ್ತಿವೆ. ರಾಜ್ಯದಲ್ಲಿಯೇ ನಮ್ಮವರಿಗೆ ಅನ್ಯಾಯವಾಗುತ್ತಿದೆ ಎಂದು ಟ್ವೀಟ್ ಮಾಡುವ ಮೂಲಕ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

karnatakaJobsForkannadigas ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಅಭಿಯಾನ ಪ್ರಾರಂಭವಾಗಿದೆ. ಈ ಅಭಿಯಾನಕ್ಕೆ ಸಾಕಷ್ಟು ಕನ್ನಡಿಗರು ಕೈ ಜೋಡಿಸಿದ್ದಾರೆ.

ಕನ್ನಡಿಗರಿಗೆ ಉದ್ಯೋಗ ನೀಡುವ ಕುರಿತಾಗಿ ಸರೋಜಿನಿ ಮಹಿಷಿ ವರದಿ ಜಾರಿಗೆ ಮಾಡುವಂತೆ ಸರ್ಕಾರಕ್ಕೆ ಈ ಮೂಲಕ ಆಗ್ರಹಿಸಲಾಗಿದೆ.

ಚರಂಡಿ, ರಸ್ತೆ ಸ್ವಚ್ಛವಾಗಿಲ್ಲ ಎಂದು ಈ ಶಾಸಕ ಮಾಡಿದ್ದೇನು?

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಮೋರಿ ಕ್ಲೀನ್ ಆಗಿಲ್ಲ ಎಂಬ ಕಾರಣಕ್ಕೆ ಸಿಟ್ಟಾದ ಶಾಸಕರೊಬ್ಬರು ಕಂಟ್ರಾಕ್ಟರ್ ಮೇಲೆ ಕಸದ ರಾಶಿಯನ್ನೇ ಸುರಿವಿದ ಘಟನೆ ನಗರದಲ್ಲಿ ನಡೆದಿದೆ. ಚರಂಡಿಗಳನ್ನು ಸರಿಯಾಗಿ ಸ್ವಚ್ಛ ಮಾಡಿಲ್ಲ ಎಂದು ಶಿವಸೇನಾ ಶಾಸಕರೇ ಕಂಟ್ರಾಕ್ಟರ್ ಮೇಲೆ ಕಸದ ರಾಶಿ ಸುರಿವಿದ್ದಾರೆ. ಕಸದ ರಾಶಿ ಸುರುವಂತೆ ಜನರಿಗೆ ಹೇಳಿದ್ದಾರೆ. ಚರಂಡಿಗಳನ್ನು ಸರಿಯಾಗಿ ಸ್ವಚ್ಛ ಮಾಡಿಲ್ಲ ಎಂದು ಶಾಸಕರು ಗುತ್ತಿಗೆದಾರರಿಗೆ ಈ ಶಿಕ್ಷೆ ನೀಡಿ ಸುದ್ದಿಯಾಗಿದ್ದಾರೆ.

ಕಂಡಿವಲಿ ಕ್ಷೇತ್ರದ ಶಿವಸೇನಾ ಶಾಸಕ ದಿಲೀಪ್ ಲ್ಯಾಂಡೆ, ಈ ರೀತಿ ಮಾಡಿದವರು. ನೀರು ತುಂಬಿರುವ ರಸ್ತೆಯಲ್ಲಿ ಕುಳಿತುಕೊಳ್ಳಲು ಗುತ್ತಿಗೆದಾರರಿಗೆ ಹೇಳಿದ್ದಾರೆ. ನಂತರ ಕಸವನ್ನು ಆ ಗುತ್ತಿಗೆದಾರನ ಮೇಲೆ ಸುರಿಯುವಂತೆ ಹೇಳಿದ್ದಾರೆ. ಕಂಟ್ರಾಕ್ಟರ್ ಸರಿಯಾಗಿ ತನ್ನ ಕಾರ್ಯ ನಿರ್ವಹಿಸಿಲ್ಲ. ಹೀಗಾಗಿ ಆತನಿಗೆ ಶಿಕ್ಷೆ ನೀಡಲಾಯಿತು ಎಂದು ಶಾಸಕ ದಿಲೀಪ್ ಲ್ಯಾಂಡೆ ಹೇಳಿದ್ದಾರೆ.

ರಸ್ತೆ ಅಪಘಾತದಿಂದಾಗಿ ಚಿಂತಾಜನಕ ಸ್ಥಿತಿಯಲ್ಲಿ ಖ್ಯಾತ ನಟ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಸ್ತೆ ಅಪಘಾತದಲ್ಲಿ ನಟ ಸಂಚಾರಿ ವಿಜಯ್ ಗಾಯಗೊಂಡಿದ್ದಾರೆ. ಹೀಗಾಗಿ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರಿ ವಿಜಯ್, ಬೈಕ್ ನಲ್ಲಿ ಸ್ನೇಹಿತರ ಜೊತೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ವಿಜಯ್, ಮೆದುಳಿನ ಬಲಭಾಗ ಹಾಗೂ ಬಲ ತೊಡೆಗೆ ಗಂಭೀರ ಗಾಯಗಳಾಗಿವೆ. ಅಪಘಾತದ ತೀವ್ರತೆಗೆ ತೊಡೆಯ ಭಾಗ ಮುರಿದು, ತೀವ್ರ ರಕ್ತಸ್ರಾವವಾಗಿದೆ. ಆರೋಗ್ಯ ಚಿಂತಾಜನಕವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಸಂಚಾರಿ ವಿಜಯ್ ನಾನು ಅವಳಲ್ಲ ಸಿನಿಮಾ ನಟನೆಗೆ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ನಾತಿಚರಾಮಿ, ಜಂಟಲ್ಮೆಶನ್, ಆಕ್ಟ್ 1978, ಕೃಷ್ಣ ತುಳಸಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಲಸಿಕೆ ಹಾಕಿಸಿಕೊಂಡವರಿಗೆ ಉಚಿತ ಅಕ್ಕಿ!

ವಿಜಯಸಾಕ್ಷಿ ಸುದ್ದಿ, ಅರುಣಾಚಲ ಪ್ರದೇಶ

ಜನರಿಗೆ ಕೊರೊನಾ ಲಸಿಕೆ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದರೂ ಲಸಿಕೆ ಹಾಕಿಕೊಳ್ಳಲು ಮಾತ್ರ ಮುಂದಾಗುತ್ತಿಲ್ಲ. ಹಲವು ಆತಂಕ ಹಾಗೂ ಭಯದಿಂದ ಲಸಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ. ಹೀಗಾಗಿ ಜನರನ್ನು ಸೆಳೆಯಲು ಹಲವೆಡೆ ಹಲವು ರೀತಿಯ ಪ್ರಯತ್ನಗಳು ನಡೆಯುತ್ತಲೇ ಇವೆ. ಹೀಗಾಗಿ ಅಕ್ಕಿ ಆಫರ್ ನೀಡಿ ಜನರಿಗೆ ಲಸಿಕೆ ಹಾಕಿಸುವ ಪ್ರಯತ್ನ ಅರುಣಾಚಲ ಪ್ರದೇಶದಲ್ಲಿ ನಡೆದಿದೆ.

ಅರುಣಾಚಲಪ್ರದೇಶದಲ್ಲಿ ಲಸಿಕೆ ಪಡೆದವರಿಗೆ 20 ಕೆಜಿ ಉಚಿತ ಅಕ್ಕಿ ಆಫರ್ ನೀಡಲಾಗಿದೆ. ಇಂದರಿಂದಾಗಿ ಆರಂಭದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದ ಜನರು, ಸಾಲುಗಟ್ಟಿ ಬಂದು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಅರುಣಾಚಲ ಪ್ರದೇಶದ ಸುಬನ್ಸಿರಿ ಜಿಲ್ಲೆಯ ಯಜಾಲಿಯ ವೃತ್ತಾಧಿಕಾರಿ ತಾಶಿ ವಾಂಗ್ ಚುಕ್ ಥೋಂಗ್ಡಾಕ್ ಎಂಬುವವರೇ ಜನರಿಗೆ ಅಕ್ಕಿ ಆಫರ್ ನೀಡಿದವರು. ಅವರು ಲಸಿಕೆ ಹಾಕಿಸಿಕೊಳ್ಳುವುದನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ.
ಇವರು 45 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಂಡರೆ, ಉಚಿತ ಅಕ್ಕಿ ನೀಡುವುದಾಗಿ ಘೋಷಿಸಿದ್ದಾರೆ. ಇದರಿಂದಾಗಿ, 80ಕ್ಕೂ ಹೆಚ್ಚು ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ.

ಈ ಭಾಗದಲ್ಲಿ ಲಸಿಕೆಯ ಕುರಿತು ಹಲವು ಕಿಡಿಗೇಡಿಗಳು ವದಂತಿಗಳನ್ನು ಹರಡಿದ್ದರು. ಹೀಗಾಗಿ ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಈ ಜನರಲ್ಲಿನ ಭಯ ದೂರವಾಗಿಸುವ ನಿಟ್ಟಿನಲ್ಲಿ ತಾಶಿವಾಂಗ್ ಅವರು ಲಸಿಕೆ ಹಾಕಿಸಿಕೊಂಡವರಿಗೆ 20 ಕೆಜಿ ಉಚಿತ ಅಕ್ಕಿ ನೀಡುವುದಾಗಿ ಘೋಷಿಸಿದ್ದರು. ಇದನ್ನು ಕೇಳಿದ್ದೆ ತಡ, ಜನರು ಸಾಲಲ್ಲಿ ನಿಂತು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ.

ಮಹಾಮಾರಿಗೆ ಬಲಿಯಾದ ಲಕ್ಷ್ಮೀ, ಶಾಂತಲಾ! ಏಕಾಂಗಿಯಾಯಿತೆ ಗಾಯತ್ರಿ?

ವಿಜಯಸಾಕ್ಷಿ ಸುದ್ದಿ, ಮೈಸೂರು

ಕೊರೊನಾ ಮಹಾಮಾರಿ ಬಡವರ ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ. ಹಲವು ಕುಟುಂಬಗಳು ತಂದೆ – ತಾಯಿ ಕಳೆದುಕೊಂಡು ತಬ್ಬಲಿಯಾಗಿದ್ದಾರೆ.
ಸದ್ಯ ಇದರ ಹೊಡೆತಕ್ಕೆ ಹಲವಾರು ಉದ್ಯಮಗಳು ಕೂಡ ಬಂದ್ ಆಗಿವೆ. ಹಲವಾರು ಕುಟಂಬಗಳಿಗೆ ಅನ್ನದ ಹಾದಿ ಬಂದ್ ಆಗುತ್ತಿವೆ. ಸದ್ಯ ಈ ಸಾಲಿಗೆ ಇಲ್ಲಿಯವರೆಗೂ ಜನರಿಗೆ ಮನರಂಜನೆ ನೀಡುತ್ತಿದ್ದ ನಗರದಲ್ಲಿನ ಲಕ್ಷ್ಮೀ ಟಾಕೀಸ್ ಬಂದ್ ಆಗಿದೆ.

ಇತ್ತೀಚೆಗಷ್ಟೇ ನಗರದಲ್ಲಿನ ಶಾಂತಲಾ ಟಾಕೀಸ್ ನಷ್ಟದಿಂದ ಬಂದ್ ಆಗಿತ್ತು. ಈಗ ಈ ಸಾಲಿಗೆ ಲಕ್ಷ್ಮೀ ಟಾಕೀಸ್ ಸೇರಿದೆ. ಹೀಗಾಗಿ ಗಾಯತ್ರಿ ಟಾಕೀಸ್ ಒಂದೇ ಜನರಿಗೆ ಮನರಂಜನೆ ನೀಡುವ ಉದ್ಧೇಶದಿಂದ ಉಳಿದಿದೆ.

ಈ ಮೂರು ಚಿತ್ರಮಂದಿರಗಳು ತ್ರಿನೇತ್ರಿಗಳಂತೆ ಇದ್ದವು. ಒಂದೇ ರಸ್ತೆಯಲ್ಲಿ ಈ ಮೂರು ಚಿತ್ರಮಂದಿರಗಳು ಇದ್ದವು. ಹೀಗಾಗಿ ಇಲ್ಲಿಯ ಜನ ಇವುಗಳನ್ನು ಒಂದೇ ರಸ್ತೆಯಲ್ಲಿನ ಕುವರಿಯರು ಎಂದೇ ಕರೆಯುತ್ತಿದ್ದರು. ಆದರೆ, ಹಲವು ವರ್ಷಗಳಿಂದ ಜನರಿಗೆ ಮನರಂಜನೆ ನೀಡುತ್ತಿದ್ದ ಇವು ಬಂದ್ ಆಗಿವೆ. ನಷ್ಟಕ್ಕೆ ತುತ್ತಾಗಿ ಮಾಲೀಕರು ಇವುಗಳನ್ನು ಬಂದ್ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.

ಕುದುರೆ ಜೊತೆ ರೇಸ್ ಮಾಡಿದ ಧೋನಿ?

ವಿಜಯಸಾಕ್ಷಿ ಸುದ್ದಿ, ರಾಂಚಿ

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೈದಾನದಲ್ಲಿ ರನ್ ಕದಿಯಲು ಓಡುತ್ತಿದ್ದರೆ, ಎದುರಿಗಿರುವ ಇನ್ನೊಬ್ಬ ಆಟಗಾರ ಸುಸ್ತಾಗಿ ಹೋಗುವುದು ಶತಸಿದ್ಧ ಎಂದೇ ಎಲ್ಲರೂ ಹೇಳುತ್ತಿದ್ದರು. ಈ ಕುದುರೆ ವೇಗಿ ಈಗ ಕುದುರೆಯೊಂದಿಗೆ ರೇಸ್ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ನಂತರ ಧೋನಿ ಸದ್ಯ ಐಪಿಎಲ್ ನಲ್ಲಿ ಮಾತ್ರ ಆಡುತ್ತಿದ್ದಾರೆ.

ಐಪಿಎಲ್ ಕೊರೊನಾದಿಂದಾಗಿ ಮುಂದೂಡಲ್ಪಟ್ಟಿದ್ದರಿಂದಾಗಿ ಧೋನಿ ಸದ್ಯ ತಮ್ಮ ಕುಟುಂಬದೊಂದಿಗೆ ರಾಂಚಿಯಲ್ಲಿರುವ ಫಾರ್ಮ್ ಹೌಸ್ ನಲ್ಲಿ ಕಾಲ ಕಳೆಯುತ್ತಿದ್ದಾರೆ. ಫಾರ್ಮ್ ಹೌಸ್ ನಲ್ಲಿ ಇತ್ತೀಚೆಗಷ್ಟೇ ತಂದಿದ್ದ ಬಿಳಿ ವರ್ಣದ ಕುದುರೆಯೊಂದಿಗೆ ಧೋನಿ ರೇಸ್‍ ಗೆ ಇಳಿದಿದ್ದಾರೆ. ಈ ರೇಸ್ನನ ವೀಡಿಯೋ ಒಂದನ್ನು ಪತ್ನಿ ಸಾಕ್ಷಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಧೋನಿ ಕುದುರೆಯೊಂದಿಗೆ ವೇಗವಾಗಿ ಓಡುತ್ತಿದ್ದಾರೆ. ಆದರೆ, ಧೋನಿಯನ್ನು ಕುದುರೆ ರೇಸ್ ನಲ್ಲಿ ಸೋಲಿಸಿದೆ. ಧೋನಿಯನ್ನು ಇಲ್ಲಿ ಕುದುರೆ ಬೆವರಿಳಿಸಿದೆ. ಕೆಳದಿನಗಳ ಹಿಂದೆ ಧೋನಿ ಚೇತಕ್ ಹಾಗೂ ಲಿಲ್ಲಿ ಎಂಬ ಹೆಸರಿನ ಎರಡು ಕುದುರೆಗಳನ್ನು ಖರೀದಿಸಿದ್ದರು. ಕುದುರೆಯೊಂದಿಗಿನ ಫೋಟೋವನ್ನು ಸಾಕ್ಷಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಮೈದಾನದಲ್ಲಿ ಕುಸಿದು ಬಿದ್ದ ಡು ಪ್ಲೆಸಿಸ್!

ವಿಜಯಸಾಕ್ಷಿ ಸುದ್ದಿ, ಯುಎಇ

ಮಹಾಮಾರಿಯಿಂದಾಗಿ 2021ರ ಪಾಕಿಸ್ತಾನ್ ಲೀಗ್ ಟೂರ್ನಿ ಕೂಡ ಅರ್ಧಕ್ಕೆ ನಿಂತಿತ್ತು. ಸದ್ಯ ಈ ಟೂರ್ನಿ ಜೂ. 9ರಿಂದ ಯುಎಇಯಲ್ಲಿ ಆರಂಭವಾಗಿದೆ. ಈ ಲೀಗ್ ನಲ್ಲಿ ಸೌತ್ ಆಫ್ರಿಕಾ ತಂಡದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಕೂಡ ಭಾಗವಹಿಸಿದ್ದಾರೆ. ಅವರು ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ಪರ ಆಡುತ್ತಿದ್ದಾರೆ.

ಶನಿವಾರ ಕ್ವೆಟ್ಟಾ ಗ್ಲಾಡಿಯೇಟರ್ಸ್ ಮತ್ತು ಪೇಶಾವರ್ ಜಲ್ಮಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ಫಾಫ್ ಡು ಪ್ಲೆಸಿಸ್ ತೀವ್ರವಾಗಿ ಗಾಯಗೊಂಡಿದ್ದಾರೆ. ತಂಡದ ಏಳನೇ ಓವರ್‌ ವೇಳೆ ಬೌಂಡರಿ ಗೆರೆಯಲ್ಲಿ ನಿಂತ ಸಂದರ್ಭದಲ್ಲಿ ಬೌಲ್ ತಡೆಯುವ ಪ್ರಯತ್ನದಲ್ಲಿದ್ದ ಫಾಫ್ ಡು ಪ್ಲೆಸಿಸ್ ತಲೆಗೆ ತಂಡದ ಸಹ ಆಟಗಾರ ಮೊಹಮ್ಮದ್ ಹಸ್ನೈನ್ ಕಾಲು ಬಲವಾಗಿ ಬಡಿದಿದೆ.

ಇಬ್ಬರೂ ಸೇರಿ ಒಟ್ಟಾಗಿ ಬೌಂಡರಿ ತಡೆಯುವ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಡು ಪ್ಲೆಸಿಸ್ ತೀವ್ರ ಗಾಯಕ್ಕೊಳಗಾಗಿದ್ದಾರೆ ಎನ್ನಲಾಗಿದೆ. ಕೂಡಲೇ ಮೈದಾನದಲ್ಲಿಯೇ ಕುಸಿದು ಬಿದ್ದಿದ್ದಾರೆ. ಅಬುಧಾಬಿಯ ಆಸ್ಪತ್ರೆಯೊಂದಕ್ಕೆ ಅವರನ್ನು ಕೂಡಲೇ ಸಾಗಿಸಲಾಯಿತು ಎಂದು ಪಾಕ್ ನ ಮಾಧ್ಯಮಗಳು ವರದಿ ಮಾಡಿವೆ.

ಕಾಮಗಾರಿ ಮಾಹಿತಿ ಕೇಳಿದ ಯುವಕನ ಮೇಲೆ ಹಲ್ಲೆ ಮಾಡಿದ ಗ್ರಾ. ಪಂ. ಸದಸ್ಯ

ವಿಜಯಸಾಕ್ಷಿ ಸುದ್ದಿ, ಗದಗ

ಗ್ರಾಮ ಪಂಚಾಯತಿ ವತಿಯಿಂದ ಕೈಗೊಂಡಿದ್ದ ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನೆ ಮಾಡಿದ ಯುವಕನ ಮೇಲೆ, ಬಿಡಿಸಲು ಬಂದ ಅವನ ತಾಯಿಯ ಮೇಲೂ ಗ್ರಾಮ ಪಂಚಾಯತಿ ಸದಸ್ಯನೊಬ್ಬ ತನ್ನ ಸಹಚರರೊಂದಿಗೆ ಸೇರಿ ಹಲ್ಲೆ ಮಾಡಿದ ಘಟನೆ ನಡೆದಿದೆ.

ಗದಗ ತಾಲೂಕಿನ ಅಂತೂರ- ಬೆಂತೂರ ಗ್ರಾಮದಲ್ಲಿ ನಡೆದಿರುವ ಕಾಮಗಾರಿಯ ಬಗ್ಗೆ ಗ್ರಾಮದ ನೀಲಪ್ಪ ಹನಮಂತಪ್ಪ ಕಟಗಿ ಎಂಬಾತ ಮಾಹಿತಿ ಕೇಳಿದ್ದ. ಇದರಿಂದ ಸಿಟ್ಟಾದ ಗ್ರಾಮ ಪಂಚಾಯತಿ ಸದಸ್ಯ ಚನ್ನಬಸಪ್ಪ ಬಸಪ್ಪ ಪತ್ತಾರ ಎಂಬುವವರು ತನ್ನ ಸಹಚರರಾದ ಮುತ್ತಪ್ಪ ವೆಂಕಣ್ಣ ಜಿನಗಿ, ಶಿವಪ್ಪ ದೇವಪ್ಪ ಕೋಳಿವಾಡ ಹಾಗೂ ಮುತ್ತಣ್ಣ ಉಡಚಪ್ಪ ಹಡಗಲಿ ಎಂಬುವವರನ್ನು ಕರೆದುಕೊಂಡು ಫಿರ್ಯಾದಿ ನೀಲಪ್ಪ ಹನಮಂತಪ್ಪ ಕಟಗಿಗೆ ಅವಾಚ್ಯ ಶಬ್ದಗಳಿಂದ ‌ನಿಂದಿಸಿ ಹಲ್ಲೆ ಮಾಡಿದ್ದಾರೆ. ಬಿಡಿಸಲು ಬಂದ ನೀಲಪ್ಪನ ತಾಯಿಯ ಮೇಲೂ ಹಲ್ಲೆ ಮಾಡಿದ್ದಾರೆ.

ಈ ಕುರಿತು ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!