Home Blog Page 3093

ಗ್ರಾ.ಪಂ. ಚುನಾವಣೆ, ಯುವಕರ ಸ್ಪರ್ಧೆ ಅಗತ್ಯ: ಮುತ್ತು ರಾಯರೆಡ್ಡಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ:
ಗ್ರಾಮೀಣ ಪ್ರದೇಶದ ಅಭಿವೃದ್ಧಿ ಆಗಬೇಕಾದರೆ ಸದ್ಯದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಯುವಕರು ಹೆಚ್ಚು ಸ್ಪರ್ದೆ ಮಾಡುವ ಅಗತ್ಯವಿದೆ ಎಂದು ಯುವ ಮುಖಂಡ ಮುತ್ತು ರಾಯರೆಡ್ಡಿ ಆಶಯ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯತಿಯ 3ನೇ ವಾರ್ಡ್‌ಗೆ ಸ್ಪರ್ದಿಸಿರುವ ಮುತ್ತು ರಾಯರೆಡ್ಡಿ, ಗ್ರಾಮಗಳ ಶಕ್ತಿ ಕೇಂದ್ರ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಈ ಬಾರಿ ಯುವಕರು ಹೆಚ್ಚಿನ ಸಂಖೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂದರು.

ಯುವಕರಿಂದಲೇ ಗ್ರಾಮ. ಪಟ್ಟಣ. ತಾಲ್ಲೂಕು ಜಿಲ್ಲೆ ಸೇರಿದಂತೆ ರಾಜ್ಯ, ರಾಷ್ಟ್ರಗಳ ಅಭಿವೃದ್ಧಿ ಸಾಧ್ಯ. ಇದಕ್ಕಾಗಿ ಪ್ರಸಕ್ತ ಗ್ರಾಮ ಪಂಚಾಯಿತಿ ಚುಣಾವಣೆಯಲ್ಲಿ ಸ್ಪರ್ಧೆಗಿಳಿಯುತ್ತಿರುವ ಯುವ ಪಡೆಯನ್ನು ಬೆಂಬಲಿಸುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.

ಗ್ರಾಮದ ಅಭಿವೃದ್ಧಿಯಾಗದ ಹೊರತು ರಾಷ್ರದ ಅಭಿವೃದ್ಧಿ ಸಾಧ್ಯವಿಲ್ಲ. ಹಳ್ಳಿಗಳಿಗೆ ನೈರ್ಮಲ್ಯ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಯುವಕರು ನಿಸ್ವಾರ್ಥ ಸೇವೆ ಮಾಡಲಿದ್ದಾರೆ ಎಂದ ಮುತ್ತು, ತಾತ ಮುತ್ತಾತರ ಕಾಲದಿಂದಲೂ ರಾಜಕೀಯ ಮಾಡುತ್ತಿರುವ ಹಳೆ ಮುಖಗಳ ಬದಲಿಗೆ ಅಭಿವೃದ್ಧಿಗಾಗಿ ನಾನಾ ಕನಸುಗಳನ್ನು ಹೊತ್ತು ಹಳ್ಳಿ ಅಖಾಡಕ್ಕೆ ಧುಮುಕುತ್ತಿರುವ ಯುವಕರ ದಂಡು ಈ ಬಾರಿಯ ಗ್ರಾಮ ಪಂಚಾಯತಿಯ ಚುನಾವಣೆಗಳಲ್ಲಿ ಗೆಲುವಿನ ನಗೆ ಬೀರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗ್ರಾ.ಪಂ.ಚುನಾವಣೆ- 2020, ಮೊದಲ ಹಂತದ ಚುನಾವಣೆಗೆ 2802 ನಾಮಪತ್ರ ಸಲ್ಲಿಕೆ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯತ ಚುನಾವಣೆಗೆ ಅಭ್ಯರ್ಥಿಗಳಿಂದ ನಾಮಪತ್ರಗಳ ಸ್ವೀಕರಿಸುವ ಅವಧಿ ಶುಕ್ರವಾರದಂದು(ಡಿ.11) ಮುಕ್ತಾಯವಾಗಿದೆ. ಮೊದಲ ಹಂತದ ಗ್ರಾಮ ಪಂಚಾಯತಿಗಳ ಒಟ್ಟು 801 ಸ್ಥಾನಗಳಿಗೆ 1212 ಮಹಿಳೆಯರು ಸೇರಿದಂತೆ ಒಟ್ಟು 2802 ನಾಮಪತ್ರಗಳ ಸಲ್ಲಿಕೆಯಾಗಿವೆ.

ಮೊದಲ ಹಂತದಲ್ಲಿ ಗದಗ ತಾಲೂಕಿನ 26 ಗ್ರಾಮ ಪಂಚಾಯತಿಗಳ 438 ಸ್ಥಾನಗಳಿಗೆ ಅನುಸೂಚಿತ ಜಾತಿ 251, ಅನುಸೂಚಿತ ಪಂಗಡದ 85, ಹಿಂದುಳಿದ ‘ಅ ವರ್ಗ 263, ಹಿಂದುಳಿದ ‘ಬ ವರ್ಗ 52, ಸಾಮಾನ್ಯ 789 ಸೇರಿ ಒಟ್ಟು 1440 ನಾಮಪತ್ರಗಳು ಸಲ್ಲಿಕೆಯಾಗಿವೆ.

ಲಕ್ಷ್ಮೇಶ್ವರ ತಾಲೂಕಿನ 13 ಗ್ರಾಮ ಪಂಚಾಯತಿಗಳ 174 ಸ್ಥಾನಗಳಿಗೆ ಅನುಸೂಚಿತ ಜಾತಿಯ 184, ಅನುಸೂಚಿತ ಪಂಗಡದ 55, ಹಿಂದುಳಿದ ‘ಅ ವರ್ಗ 67, ಹಿಂದುಳಿದ ‘ಬ ವರ್ಗ 12, ಸಾಮಾನ್ಯ 337 ಸೇರಿ ಒಟ್ಟು 655 ಉಮೇದುವಾರಿಕೆಗಳು ಸಲ್ಲಿಕೆಯಾಗಿವೆ.

ಶಿರಹಟ್ಟಿ ತಾಲೂಕಿನ 14 ಗ್ರಾಮ ಪಂಚಾಯತಿಗಳ 189 ಸ್ಥಾನಗಳಿಗೆ ಅನುಸೂಚಿತ ಜಾತಿಯ 157, ಅನುಸೂಚಿತ ಪಂಗಡದ 66, ಹಿಂದುಳಿದ ‘ಅ ವರ್ಗ 97, ಹಿಂದುಳಿದ ‘ಬ ವರ್ಗ 24, ಸಾಮಾನ್ಯ 367 ಸೇರಿ ಒಟ್ಟು 707 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣೆ ಶಾಖೆ ತಿಳಿಸಿದೆ.

ಕಿಡಿಗೇಡಿಗಳಿಂದ ಶೇಂಗಾ ಬಣವೆಗೆ ಬೆಂಕಿ; ರೈತ ಕುಟುಂಬದ ಕಣ್ಣೀರು

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ರಾತ್ರೋ ರಾತ್ರಿ ದುಷ್ಕರ್ಮಿಗಳು ಹಚ್ಚಿದ ಬೆಂಕಿಗೆ ಶೇಂಗಾ‌ ಬಣವೆಯೊಂದು ಸುಟ್ಟು‌ ಭಸ್ಮವಾಗಿರುವ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಹರದಗಟ್ಟಿ ಗ್ರಾಮದಲ್ಲಿ ನಡೆದಿದೆ.

ಶೇಂಗಾ ಬಣವೆ ಸುಟ್ಟಿದ್ದನ್ನು ಕಂಡ ರೈತನ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ರೈತ ನಿಂಗಪ್ಪ ಮಾಗಡಿ ಎಂಬುವವರಿಗೆ ಸೇರಿದ ಸುಮಾರು 15 ಟ್ಯಾಕ್ಟರ್ ಶೇಂಗಾ ಬಣವೆ ಬೆಂಕಿಗೆ ಆಹುತಿಯಾಗಿದೆ.

ಸಾಲ‌ ಸೂಲ ಮಾಡಿ ಕಷ್ಟಪಟ್ಟು 15 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಎರಡು ಲಕ್ಷ ರೂ.ಗೂ ಅಧಿಕ ಮೌಲ್ಯದ ಶೇಂಗಾ ಸಂಗ್ರಹಿಸಿಟ್ಟಿದ್ದ ಶೇಗಾ ಬೆಳೆ ಸುಟ್ಟು ಕರಕಲಾಗಿದೆ.

ಇದರಿಂದ ಕಂಗಾಲಾಗಿರುವ ರೈತ ಕುಟುಂಬ ವರ್ಷ ಪೂರ್ತಿ ದನಕರುಗಳಿಗೆ ಹೊಟ್ಟು ಮೇವಿಗೆ ಹೇಗೆ ಮಾಡುವುದೆಂಬ ಚಿಂತೆಯಲ್ಲಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ‌ ಸಿಬ್ಬಂದಿ‌ ದೌಡಾಯಿಸಿದ್ದು, ಬೆಂಕಿ ನಂದಿಸಿದ್ದಾರೆ. ಲಕ್ಷ್ಮೇಶ್ವರ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ‌ ಈ ಘಟನೆ ನಡೆದಿದೆ.

ಯಾರೋ ಕಿಡಿಗೇಡಿಗಳು ಬಣವೆಗೆ ಬೆಂಕಿ ಹಚ್ಚಿದ್ದು, ಅವರು ಯಾರೆಂಬುದನ್ನು ಪತ್ತೆ ಮಾಡಬೇಕು. ರೈತ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಬೇಕು.

ಮುತ್ತುರಾಜ ಗಣೆಪ್ಪನವರ, ಗ್ರಾಮಸ್ಥ

ಬಸ್ ಬಂದ್: ರೈಲ್ವೆ ನಿಲ್ದಾಣದಲ್ಲಿ ಕಣ್ಣೀರು ಹಾಕಿದ ಮಹಿಳೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಸಾರಿಗೆ ಸಂಸ್ಥೆ ಬಸ್ ಸಂಚಾರ ಸ್ಥಗಿತವಾಗಿದ್ದಕ್ಕೆ ಊರಿಗೆ ಹೋಗಲು ಆಗದ ಮಹಿಳಾ ಪ್ರಯಾಣಿಕರೊಬ್ಬರು ಕಣ್ಣೀರು ಹಾಕಿದ್ದಾರೆ.

ನಗರದ ರೈಲು ನಿಲ್ದಾಣದಲ್ಲಿ ಕಣ್ಣೀರು ಹಾಕಿದ ಮಹಿಳೆ, ಗದಗನಿಂದ ಕೊಪ್ಪಳಕ್ಕೆ ಕುಟುಂಬ ಸಮೇತರಾಗಿ ಹೊರಟಿದ್ದರು. ನಿನ್ನೆ ಗದಗನ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾದು ಕಾದು ಸುಸ್ತಾಗಿ ಸಂಬಂಧಿಕರ ಮನೆಗೆ ತೆರಳಿದ್ದರು.

ಶನಿವಾರ ಬಸ್ ಮೂಲಕ ಕೊಪ್ಪಳಕ್ಕೆ ಹೋಗಲು ರೆಡಿಯಾಗಿದ್ದ ಕುಟುಂಬ ಬಸ್ ಸಂಚಾರ ಇವತ್ತೂ ಇಲ್ಲ ಎಂಬುದು ಗೊತ್ತಾಗಿದೆ‌. ಹಾಗಾಗಿ ಕೊಪ್ಪಳಕ್ಕೆ ಹೋಗಲು ರೈಲು ನಿಲ್ದಾಣಕ್ಕೆ ಆಗಮಿಸಿದ್ದಾರೆ.

ದಿಢೀರ್ ಪ್ರತಿಭಟನೆ ಮಾಡಿದರೆ ಸಣ್ಣ ಮಕ್ಕಳನ್ನು ಕಟ್ಟಿಕೊಂಡು ಹೇಗೆ ಹೋಗೋದು. ನಮ್ಮ ಸಂಬಂಧಿಕರು ಇದ್ದರು ಒಳ್ಳೆಯದಾಯಿತು. ಇಲ್ಲದಿದ್ದರೆ ನಮ್ಮ ಗತಿ ಏನಾಗಬೇಕು. ಪ್ರತಿಭಟನೆ ಮಾಡಿ. ಆದರೆ, ಯಾರಿಗೂ ತೊಂದರೆಯಾಗದಂತೆ ಮುಷ್ಕರ ಮಾಡಿ ಎಂದು ಮಹಿಳೆ ಕ್ಯಾಮೆರಾ ಮುಂದೆ ಕಣ್ಣೀರು ಹಾಕಿದ್ದಾರೆ.

ಸಾರಿಗೆ ಸಂಸ್ಥೆಯ ಬಸ್ ಸಂಚಾರ ಇಲ್ಲದಿರುವುದರಿಂದ ಪ್ರಯಾಣಿಕರು ರೈಲು ಪ್ರಯಾಣಕ್ಕೆ ಮುಂದಾಗಿದ್ದು, ಗದಗ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿ ದೃಶ್ಯ ಕಂಡು ಬರುತ್ತಿದೆ.

ಪ್ರತಿಷ್ಠೆಗೆ ಬಿದ್ದ ಸರ್ಕಾರ ಮುಂದುವರೆದ ಮುಷ್ಕರ; ಬಸ್ ನಿಲ್ದಾಣ ಖಾಲಿ ಖಾಲಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ ಶನಿವಾರವೂ ಮುಂದುವರೆದಿದೆ.

ಸಾರಿಗೆ ನೌಕರರ ಮುಷ್ಕರದ ಪರಿಣಾಮವಾಗಿ ಗದಗ ಜಿಲ್ಲೆಯಲ್ಲಿ ಬಸ್ ಬಂದ್ ಬಿಸಿ ಎರಡನೇ ದಿನವೂ ತಟ್ಟಿದೆ. ನಗರದ ಕೇಂದ್ರಿಯ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೇ ಬಣಗುಡುತ್ತಿದೆ‌. ಬಸ್ ಸಂಚಾರವಿಲ್ಲದ್ದರಿಂದ ಡಿಪೋದಲ್ಲಿ ಬಸ್ ತುಂಬಿ ತುಳುಕುತ್ತಿವೆ.

ಇನ್ನು ಯಾವೊಬ್ಬ ಸಾರಿಗೆ ನೌಕರರು ನಿಲ್ದಾಣದಲ್ಲಿ ಕಾಣಿಸುತ್ತಿಲ್ಲ. ನಿನ್ನೆ ಬಸ್ ನಿಲ್ಲಿಸಿ ಬಸ್ ಸ್ಟ್ಯಾಂಡ್ ಆವರಣದಲ್ಲಿ ಹರಟೆ ಹೊಡೆಯುತ್ತಿದ್ದ ಚಾಲಕ ಮತ್ತು ನಿರ್ವಾಹಕರು ಬಸ್ ನಿಲ್ದಾಣದ ಕಡೆಗೆ ಸುಳಿದಿಲ್ಲ. ಮತ್ತೊಂಡೆ ಮುಷ್ಕರ ಮುಂದುವರೆದಿರುವ ಬಗ್ಗೆ ಗೊತ್ತಿಲ್ಲದೇ ಬಸ್ ನಿಲ್ದಾಣಕ್ಕೆ ಬೇರೆ ಊರಿಗೆ ಹೋಗಲು ಬಂದ ಪ್ರಯಾಣಿಕರು ಇವತ್ತೂ ಬಸ್ ಪ್ರಾರಂಭವಿಲ್ವಾ ಎಂದು ನಿಲ್ದಾಣಾಧಿಕಾರಿಗಳನ್ನು ಕೇಳಿ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮರಳಿ ಮನೆ ಕಡೆ ತೆರಳುತ್ತಿದ್ದಾರೆ.

ಶುಕ್ರವಾರ ಬಸ್ ಸಂಚಾರವಿಲ್ಲದೇ ಊರಿಗೆ ಹೋಗಲು ಪರದಾಡಿದ್ದ ಪ್ರಯಾಣಿಕರು ಶನಿವಾರ ಬಸ್ ನಿಲ್ದಾಣದ ಕಡೆ ಮುಖವೂ ಮಾಡಿಲ್ಲ. ಸದಾ ಜನಜಂಗುಳಿಯಿಂದ ಗಿಜಗುಡುತ್ತಿದ್ದ ಬಸ್ ನಿಲ್ದಾಣ ಖಾಲಿ ಖಾಲಿ ಹೊಡೆಯುತ್ತಿದೆ‌.

ಇನ್ನೂ ನಿನ್ನೆ ಬಸ್ ಬಂದ್ ಆಗಿದ್ದರಿಂದ ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಿದ್ದ ಖಾಸಗಿ ವಾಹನಗಳ ಚಾಲಕರು ಪ್ರಯಾಣಿಕರಿಲ್ಲದೇ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಬಸ್ ಬಂದ್ ಹೀಗೆ ಮುಂದುವರೆದರೆ ಊರಿಗೆ ಹೋಗುವುದಾದರೂ ಹೇಗೆ ಚಿಂತೆ ಜನರನ್ನು ಕಾಡುತ್ತಿದೆ.

ಕೊವಿಡ್-19: ಗದಗ ಜಿಲ್ಲೆಯ ಶುಕ್ರವಾರದ ಅಪ್ಡೇಟ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಡಿಸೆಂಬರ್‌ 11 ರವರೆಗಿನ ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣ ಪ್ರಕರಣಗಳ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಬಿಡುಗಡೆ ಮಾಡಿದ್ದಾರೆ.

ಇದುವರೆಗೆ ಜಿಲ್ಲೆಯಲ್ಲಿ 143033 ಜನ ನಿಗಾಕ್ಕೆ ಒಳಗಾಗಿದ್ದಾರೆ. ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು 148104 ಮಾದರಿಗಳಲ್ಲಿ 136128 ಮಾದರಿಗಳು (ನೆಗೆಟಿವ್) ನಕಾರಾತ್ಮಕವಾಗಿವೆ. 1156 ಮಾದರಿಗಳ ವರದಿ ಬರಲು ಬಾಕಿ ಇದೆ.

ಜಿಲ್ಲೆಯಲ್ಲಿ ಇಂದಿನ 02 ಪ್ರಕರಣಗಳು ಸೇರಿದಂತೆ ಒಟ್ಟು 10820 ಕೊವಿಡ್-19 ಪಾಸಿಟಿವ್ ಪ್ರಕರಣಗಳು ಧೃಡಪಟ್ಟಿವೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ
ಕೊವಿಡ್ ಸೋಂಕಿಗೆ 141 ಜನ ಮೃತಪಟ್ಟಿದ್ದು, ಇಂದಿನ 9 ಜನ ಸೇರಿದಂತೆ ಒಟ್ಟು 10622 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.
ಸದ್ಯ 57 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಬಸ್ ಸಂಚಾರ ಬಂದ್: ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ

0

ವಿಜಯಸಾಕ್ಷಿ ಸುದ್ದಿ, ಗದಗ

ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಚಾಲಕರು ಮತ್ತು ನಿರ್ವಾಹಕರು ಕೇಂದ್ರ ಬಸ್ ನಿಲ್ದಾಣದಲ್ಲೇ ಬಸ್‌ಗಳನ್ನು ಬಿಟ್ಟು ಹೊರ ಹೋಗಿದ್ದಾರೆ. ಮುಷ್ಕರದ ಲಾಭ ಪಡೆದ ಖಾಸಗಿ ವಾಹನ, ಆಟೋ ಚಾಲಕರು ದುಪ್ಪಟ್ಟು ಹಣ ವಸೂಲಿಗಿಳಿದಿದ್ದಾರೆ.

ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ಪ್ರಯಾಣಿಕರಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿದ್ದು, ಆಟೋ ಚಾಲಕರು 10 ಕಿಲೋಮೀಟರ್ ಹೋಗಲು 200 ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಇನ್ನು ಕ್ರೂಸರ್ ವಾಹನಗಳ ಚಾಲಕರು ಎರಡು ಪಟ್ಟು ಹಣ ಪಡೆದುಕೊಳ್ಳುತ್ತಿದ್ದಾರೆ‌. ಇದರಿಂದ ಹೆಚ್ಚಿನ ಹಣವಿಲ್ಲದ ಬಡ ಪ್ರಯಾಣಿಕರು ಪರದಾಡುತ್ತಿದ್ದು, ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಖಾಸಗಿ ವಾಹನಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುವಂತೆ ಪ್ರಯಾಣಿಕರು ಒತ್ತಾಯಿಸುತ್ತಿದ್ದು,
ಬಸ್ ಸಂಚಾರ ಇಲ್ಲದೇ ಪ್ರಯಾಣಿಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇತ್ತ ಆಕ್ರೋಶಗೊಂಡಿರುವ ಪ್ರಯಾಣಿಕರನ್ನು ಸಮಾಧಾನಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಬಸ್ ಬಂದ್ ಬಗ್ಗೆ ಮೊದಲೇ ಯಾಕೆ ಮಾಹಿತಿ ನೀಡಿಲ್ಲ ಎಂದು ಕಿಡಿ ಕಾರಿರುವ ಪ್ರಯಾಣಿಕರು ಸಾರಿಗೆ ನಿಯಂತ್ರಣಾಧಿಕಾರಿ ಕಚೇರಿ ಬಳಿ ಜಮಾಯಿಸಿದ್ದಾರೆ.

ಬಸ್ ನಿಲ್ದಾಣ ಸಂಪೂರ್ಣ ಸ್ಥಬ್ದ; ರೋಗಿ, ಪ್ರಯಾಣಿಕರ ಪರದಾಟ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಸಾರಿಗೆ ನೌಕರರ ಮುಷ್ಕರದ ಬಿಸಿ ಗದಗಗೂ ತಟ್ಟಿದೆ. ಇದರಿಂದ ಗದಗನಲ್ಲಿ ಸಾರಿಗೆ ಬಸ್ ಸಂಚಾರ ಸಂಪೂರ್ಣ ಸ್ತಬ್ಧವಾಗಿದ್ದು ಪ್ರಯಾಣಿಕರು ಪರದಾಡುತ್ತಿದ್ದಾರೆ.

ಗದಗ ನಗರದ ಕೇಂದ್ರ ಬಸ್ ನಿಲ್ದಾಣದಿಂದ ಎಲ್ಲ ಬಸ್ ಸಂಚಾರ ಸ್ಥಗಿತವಾಗಿದ್ದು, ಬಸ್ ನಿಲ್ದಾಣ, ಡಿಪೋದಲ್ಲಿ ಬಸ್ ಸಾಲುಗಟ್ಟಿ ನಿಂತಿವೆ. ಅಲ್ಲದೇ, ಬಸ್ ನಿಲ್ದಾಣದ ಫ್ಲಾಟ್ ಫರ್ಮ್ ಗೆ ಬಂದ್ ಬಸ್ ಗಳನ್ನು ಸಾರಿಗೆ ನೌಕರರು ವಾಪಸ್ ಕಳಿಸುತ್ತಿದ್ದಾರೆ. ಯಾವುದೇ ಬಸ್ ಸಂಚಾರ ಮಾಡದಂತೆ ಸಿಬ್ಬಂದಿ ತಾಕೀತು ಮಾಡುತ್ತಿದ್ದಾರೆ.

ಗದಗ-ಮುಂಬಯಿ ಬಸ್ ಪ್ರಶ್ನೆ ಮಾಡಿದ ನಿರ್ವಾಹಕನಿಗೆ ಕೆಲ ನೌಕರರಿಂದ ತರಾಟೆ ತೆಗೆದುಕೊಂಡ ಘಟನೆಯೂ‌ ನಡೆಯಿತು.

ಮುಂಬಯಿ, ಬಾಗಲಕೋಟ ಸೇರಿದಂತೆ ವಿವಿಧೆಡೆ ಸಂಚಾರ ಮಾಡುವ ಬಸ್ ತಡೆದು ಪ್ಲಾಟ್ ಫಾರ್ಮ್ ನಿಂದ ಬಸ್ ಗಳನ್ನು ತೆಗೆದು ಡಿಪೋ ಒಳಗೆ ನಿಲ್ಲಿಸಿದ್ದಾರೆ.‌ ಇದರಿಂದ ಬಸ್ ಇಲ್ಲದೇ ಪ್ರಯಾಣಿಕರು ಪರದಾಡುತ್ತಿದ್ದಾರೆ.

ಕೊಪ್ಪಳದ ಖಾಸಗಿ ಕಣ್ಣಿನ ಆಸ್ಪತ್ರೆಗೆ ಹೊರಟಿದ್ದ ಮಹಿಳೆಗೂ ಸಾರಿಗೆ ನೌಕರರ ಬಂದ್ ಬಿಸಿ ತಟ್ಟಿದೆ. ಗದಗ ತಾಲ್ಲೂಕಿನ ಲಲಿತಾ ರೆವಣಸಿದ್ದಪ್ಪ ಗೊಡಚಪ್ಪನವರ್ ಎಂಬ ಮಹಿಳೆ ಬಸ್ ಇಲ್ಲದೆ ಮಹಿಳೆ ಪರದಾಡಿದರು.

ಬಸ್ ಪ್ರಯಾಣವಿಲ್ಲದೇ ನಗರದ ಕೇಂದ್ರಿಯ ಬಸ್ ನಿಲ್ದಾಣ ಮತ್ತು ನಿಲ್ದಾಣ ಹೊರಗೆ ಸೇರಿದಂತೆ ನಗರದ ಮುಳಗುಂದ ನಾಕಾ, ಹಳೆ ಡಿಸಿ ಆಫೀಸ್ ಸರ್ಕಲ್, ಅಂಬೇಡ್ಕರ ವೃತ್ತದಲ್ಲಿ ಪ್ರಯಾಣಿಕರು ಬಸ್ ಗಾಗಿ ಕಾದು ನಿಂತಿದ್ದಾರೆ. ಕೆಲವರು ಖಾಸಗಿ ವಾಹನ ಹತ್ತಿ ಹೊರಟರೇ, ಇನ್ನೂ ಕೆಲವರು ಬಾಡಿಗೆ ವಾಹನ ಮಾಡಿಕೊಂಡು ಹೊರಟಿದ್ದಾರೆ.

ಡೆಡ್ಲಿ ಮುತ್ತಪ್ಪ ರೈ ಕಮ್ ಬ್ಯಾಕ್!

ವಿಜಯಸಾಕ್ಷಿ ಸಿನಿಮಾ ಸುದ್ದಿ, ಬೆಂಗಳೂರು:
ಭೂಗತಲೋಕದ ದೊರೆ ಡಾನ್ ಮುತ್ತಪ್ಪ ರೈ, 1960-80 ದಶಕದ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ರೈ ಆಳಿದ ಅಂಡರ್‌ವರ್ಲ್ಡ್‌ನ್ನು ತೆರೆಗೆ‌ ತರುತ್ತಿದ್ದಾರೆ ಡೆಡ್ಲಿ ಡೈರೆಕ್ಟರ್.

ಎಂಆರ್ ಹೆಸರಿನ ಚಿತ್ರಕ್ಕೆ ಶುಕ್ರವಾರ ಬೆಂಗಳೂರಿನ ರಾಜರಾಜೇಶ್ವರಿನಗರದ ಶೃಂಗಗಿರಿ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಮುಹೂರ್ತ ಜರುಗಿತು. ನಿರ್ದೇಶಕ ರವಿಶ್ರೀವತ್ಸ ನಿರ್ದೇಶನದಲ್ಲಿ ಮೂಡಿ ಬರುತ್ತಿರೊ ಈ ಚಿತ್ರದಲ್ಲಿ ಹೊಸ ಹುಡುಗ ದೀಕ್ಷಿತ್ ಎಂಆರ್ ಆಗಿ ಕಾಣಿಸಿಕೊಳ್ಳಲಿಸದ್ದಾರೆ.

ಈಗಾಗಲೇ ಎಂಆರ್ ಚಿತ್ರದ ಪೊಸ್ಟರ್ ಲಾಂಚ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನತ್ತ ಸಾಗಿವೆ.

ಡೆಡ್ಲಿ ಸೋಮ, ಮಾದೇಶ ಚಿತ್ರದ ಮೂಲಕ ಭೂಗತ ಲೋಕದ ಕಥೆ ಹೇಳಿದ್ದ ರವಿ ಶ್ರೀ ವತ್ಸ ಬಹಳ ವರ್ಷಗಳ ನಂತರ ಮತ್ತೊಮ್ಮೆ ಅಂಡರ್‌‌ವರ್ಲ್ಡ್ ಕಥೆ ಹೇಳಲು ಬರುತ್ತಿದ್ದಾರೆ.

ಈಗಾಗಲೇ ಚಿತ್ರದ ಶೂಟಿಂಗ್ ಷೆಡ್ಯೂಲ್ ರೆಡಿಯಾಗಿದ್ದು ಸದ್ಯದ ಮಾಹಿತಿ ಪ್ರಕಾರ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದೆ. ಬೆಂಗಳೂರು ಸುತ್ತಮುತ್ತ ಬಹುತೇಕ ಶೂಟಿಂಗ್ ನಡೆಯಲಿದೆ. ಕೆಲ ದೃಶ್ಯಗಳಿಗೆ ವಿದೇಶದ ಲೋಕೇಷನ್ ಅಗತ್ಯ ಇದರ. ಆದರೆ ಈಗ ಪರವಾನಗಿ ಸಿಗೋದು ಅನುಮಾನ ಇರೋದ್ರಿಂದ ಕೊನೆ ಷೆಡ್ಯೂಲ್‌ತನಕ ಕಾದು ನೋಡಬೇಕು ಅನ್ನುತ್ತೆ ಚಿತ್ರತಂಡ.

ಶಾಸಕ ಮುನಿರತ್ನ, ಡಿಸಿಪಿ ಅಶೋಕ್‌ಕುಮಾರ್, ನಿರ್ಮಾಪಕ ರಾಮು ಹಾಗೂ ನಿರ್ದೇಶಕ ಕೆ.ವಿ.ರಾಜು ಚಿತ್ರದ ಮುಹೂರ್ತದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮುತ್ತಪ್ಪ ರೈ ಕುರಿತ ಸಿನಿಮಾ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ್ದಾರೆ.

ಕೊವಿಡ್-19: ಗದಗ ಜಿಲ್ಲೆಯ ಗುರುವಾರದ ಅಪ್ಡೇಟ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಡಿಸೆಂಬರ್‌ 10 ರವರೆಗಿನ ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣ ಪ್ರಕರಣಗಳ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಬಿಡುಗಡೆ ಮಾಡಿದ್ದಾರೆ.

ಇದುವರೆಗೆ ಜಿಲ್ಲೆಯಲ್ಲಿ 141715 ಜನ ನಿಗಾಕ್ಕೆ ಒಳಗಾಗಿದ್ದಾರೆ. ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು 146758 ಮಾದರಿಗಳಲ್ಲಿ 134564 ಮಾದರಿಗಳು (ನೆಗೆಟಿವ್) ನಕಾರಾತ್ಮಕವಾಗಿವೆ. 1376 ಮಾದರಿಗಳ ವರದಿ ಬರಲು ಬಾಕಿ ಇದೆ.

ಜಿಲ್ಲೆಯಲ್ಲಿ ಇಂದಿನ 03 ಪ್ರಕರಣಗಳು ಸೇರಿದಂತೆ ಒಟ್ಟು 10818 ಕೊವಿಡ್-19 ಪಾಸಿಟಿವ್ ಪ್ರಕರಣಗಳು ಧೃಡಪಟ್ಟಿವೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ
ಕೊವಿಡ್ ಸೋಂಕಿಗೆ 141 ಜನ ಮೃತಪಟ್ಟಿದ್ದು, ಇಂದಿನ 6 ಜನ ಸೇರಿದಂತೆ ಒಟ್ಟು 10613 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.
ಸದ್ಯ 64 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

error: Content is protected !!