Home Blog Page 3094

ಅಧಿಕಾರಿ ಮೇಲೆ ಪುರಸಭೆ ಸದಸ್ಯನ ಗೂಂಡಾಗಿರಿ: ಸದಸ್ಯನ ಪುಂಡಾಟಿಕೆ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್!

0

ವಿಜಯಸಾಕ್ಷಿ ಸುದ್ದಿ, ಕಲಬುರಗಿ: ಅಧಿಕಾರಿ ಮೇಲೆ ಹಲ್ಲೆ ಮಾಡುವ ಮೂಲಕ ಪುರಸಭೆ ಸದಸ್ಯನೊಬ್ಬ ಗೂಂಡಾಗಿರಿ ಪ್ರದರ್ಶನ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಚಿಂಚೋಳಿ ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಅಭಯ್ ಮೇಲೆ ಹಲ್ಲೆ ಮಾಡಲಾಗಿದೆ.

ಪುರಸಭೆ ಕಚೇರಿಯಲ್ಲಿಯೇ ಸದಸ್ಯ ಆನಂದ್ ಟೈಗರ್ ತನ್ನ ಬೆಂಬಲಿಗ ಶಶಿಕುಮಾರ್ ಜೊತೆ ಆಗಮಿಸಿ ಅಭಯ್ ಅವರ ಮೇಲೆ ಹಲ್ಲೆ ಮಾಡಿದ್ದು, ಸದಸ್ಯನ ಈ ಗೂಂಡಾಗಿರಿ ಪುರಸಭೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪುರಸಭೆ ಮುಖ್ಯಾಧಿಕಾರಿ ಅಭಯ್

ಪುರಸಭೆ ಕಚೇರಿಯಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಸದಸ್ಯ ಆನಂದ್ ನಕಲಿ ಬಿಲ್ ಗಳಿಗೆ ಸಹಿ ಮಾಡಿ, ಚೆಕ್ ನೀಡುವಂತೆ ಡಿಮ್ಯಾಂಡ್ ಮಾಡುವ ಮೂಲಕ, ಮುಖ್ಯಾಧಿಕಾರಿ ಅಭಯ್ ಅವರ ಮೇಲೆ ಒತ್ತಡ ಹಾಕುತ್ತಿದ್ದ ಎನ್ನಲಾಗಿದೆ. ಅಧಿಕಾರಿ ಅಭಯ್ ಸಹಿ ಮಾಡದೇ ಇರೋದಕ್ಕೆ ಆನಂದ್ ಟೈಗರ್ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿರುವ ಸದಸ್ಯ ಆನಂದ್ ಹಾಗೂ ಆತನ‌ ಸಹಚರ ಶಶಿಕುಮಾರ್ ಅವರ ವಿರುದ್ಧ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಾಯಿ ಸಿಗದಿದ್ದಕ್ಕೆ ಕೋಳಿ ಹೊತ್ತೊಯ್ದ ಚಿರತೆ!

ವಿಜಯಸಾಕ್ಷಿ ಸುದ್ದಿ, ಕಾರವಾರ: ಚಿರತೆಯೊಂದು ಜನವಸತಿ ಪ್ರದೇಶದ ಬಳಿ ಓಡಾಟ ನಡೆಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದಿದೆ.

ತಾಲೂಕಿನ ಕೊಂಡಳ್ಳಿ ಗ್ರಾಮದ ನಿವಾಸಿ ರಮಾನಂದ ಎನ್ನುವವರ ಮನೆಯ ಬಳಿ ಚಿರತೆ ಪ್ರತ್ಯಕ್ಷವಾಗಿದ್ದು ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ. ಬೆಳಗಿನ ಜಾವದಲ್ಲಿ ನಾಯಿಗಳನ್ನು ಹಿಡಿಯಲು ಚಿರತೆ ಆಗಮಿಸಿದ್ದು ಈ ವೇಳೆ ನಾಯಿ ಸಿಗದೇ ಸಮೀಪದ ಗೂಡಿನಲ್ಲಿದ್ದ ಕೋಳಿಯನ್ನ ಕಚ್ಚಿಕೊಂಡು ಕಾಡಿನತ್ತ ಪರಾರಿಯಾಗಿದೆ‌.‌

ಮನೆಯವರು ಬೆಳಿಗ್ಗೆ ಕೋಳಿ ಇಲ್ಲದಿರುವುದನ್ನು ಗಮನಿಸಿದ ಬಳಿಕ ಸಿಸಿಟಿವಿ ಪರಿಶೀಲಿಸಿದ್ದು ಈ ವೇಳೆ ಚಿರತೆ ಓಡಾಟ ಕಂಡುಬಂದಿದೆ. ಜನವಸತಿ ಪ್ರದೇಶದ ಬಳಿ ಚಿರತೆ ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ರಾಜಾಹುಲಿ ವಿರುದ್ಧ ಘರ್ಜಿಸಿದ ಹಿಂದೂ ಹುಲಿ!

0
  • ಮೌನವೇಕೆ? ಕೇವಲ ಗುಲಾಮಗಿರಿಯೇ?
  • ಉಚ್ಚಾಟಿತ ಬಿಜೆಪಿ ನಾಯಕನಿಂದ ಕಾರ್ಯಕರ್ತರಿಗೆ ಪ್ರಶ್ನೆ
  • ಜಿಲ್ಲಾ ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಸಿದ ವಾಟ್ಸಾಪ್ ಸ್ಟೇಟಸ್

ವಿಜಯಸಾಕ್ಷಿ ಸುದ್ದಿ, ಗದಗ: ‘ನೋಡ್ರಪ್ಪ ಗದುಗಿನ ಬಿಜೆಪಿ ಕಾರ್ಯಕರ್ತರೇ, ನಿಮ್ಮ ಬಿಜೆಪಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿಯೇ ಪೋಸ್ಟ್ ಹಾಕುತ್ತಿರುವ ಸುರೇಶ್ ಮಗದುಮ್ ಅವರನ್ನು ಯಾಕೆ ಉಚ್ಚಾಟನೆ ಮಾಡುತ್ತಿಲ್ಲ? ಬಿಜೆಪಿ ಕಾರ್ಯಕರ್ತರು ಮೌನವೇಕೆ? ಕೇವಲ ಗುಲಾಮರಾಗಿ ಇರುತ್ತೀರಾ? ನಿಮ್ಮ ಪಕ್ಷದ ಅಧ್ಯಕ್ಷರು ಯಾಕೆ ಸುಮ್ಮನೆ ಕೂಡುತ್ತಿದ್ದಾರೆ? ಎಂದು ಇತ್ತೀಚೆಗಷ್ಟೆ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಮಂಜುನಾಥ ಎಚ್. ಮುಳಗುಂದ ತಮ್ಮ ಪೇಸ್ಬುಕ್ ಪೇಜ್ ನಲ್ಲಿ ಸ್ಟೇಟಸ್ ಹಾಕಿಕೊಳ್ಳುವ ಮೂಲಕ ಜಿಲ್ಲಾ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಬಿಜೆಪಿ ಮುಖಂಡ ಸುರೇಶ್ ಮುಗದುಮ್ ಎಂಬುವರು ಹಾಕಿದ್ದ ವಾಟ್ಸಾಪ್ ಸ್ಟೇಟಸ್ ಸ್ಕ್ರೀನ್ ಶಾಟ್ ತೆಗೆದು ತಮ್ಮ ಫೇಸ್ಬುಕ್ ಪೇಜ್ ಗೆ ಹಾಕಿಕೊಂಡು, ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ ಅವರನ್ನು ಪ್ರಶ್ನಿಸಿದ್ದಾರೆ.

ನುಂಗಲಾರದ ತುತ್ತು: ಇದಕ್ಕೆ ಕಾರಣ ಹೀಗಿದೆ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಳಿಕ ಸಚಿವಾಕಾಂಕ್ಷಿಗಳು ಅಸಮಾಧಾನಗೊಂಡಿದ್ದಾರೆ. ಸಿಎಂ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ಹೊರ ಹಾಕುತ್ತಿರುವುದು ಜಗಜ್ಜಾಹೀರು ಆಗಿದೆ. ಇದು ಯಡಿಯೂರಪ್ಪ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಸಚಿವಾಕಾಂಕ್ಷಿಗಳಲ್ಲಿ ಓರ್ವರಾಗಿದ್ದ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅಂತೂ ಯಡಿಯೂರಪ್ಪ ವಿರುದ್ಧ ಮಾತಿನ ’ಸಿಡಿ’ಗುಂಡುಗಳನ್ನು ಸಿಡಿಸುತ್ತಿದ್ದಾರೆ. ಇದು ಪಕ್ಷಕ್ಕೆ ಇರುಸು ಮುರುಸುಂಟು ಮಾಡಿದೆ. ಸ್ವ ಪಕ್ಷದ ಕೆಲವರು ಆಂತರಿಕ ಬೆಂಬಲ ನೀಡುತ್ತಿರುವುದು ಗೊತ್ತಿರುವ ಸಂಗತಿ.

ಯತ್ನಾಳ್ ಬೆಂಬಲಿಸಿ ಸ್ಟೇಟಸ್: ಈ ಬೆನ್ನಲ್ಲೇ ಜಿಲ್ಲಾ ಬಿಜೆಪಿಯ ಮುಖಂಡ ಸುರೇಶ್ ಮುಗದುಮ್ ಎಂಬುವರು ಯತ್ನಾಳ್ ಅವರನ್ನು ಬೆಂಬಲಿಸಿ ವಾಟ್ಸಾಪ್ ಸ್ಟೇಟಸ್ ಒಂದನ್ನು ಹಾಕಿಕೊಂಡಿದ್ದು, ಜಿಲ್ಲಾ ಬಿಜೆಪಿಯಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿವೆ.

‘ವರ್ಗಾವಣೆ ದಂಧೆ ಮಾಡಲಿಲ್ಲ. ಯೋಜನೆಗಳಲ್ಲಿ ಇಂದಿಗೂ ಕಮಿಷನ್ ಪಡೆಯಲಿಲ್ಲ. ಅಪ್ಪಟ ಹಿಂದುತ್ವದ ಕಟ್ಟಾಳು. ಜನಸಂಘದಿಂದ ಪಕ್ಷ ಕಟ್ಟಿ ಬೆಳೆಸಿದವರು. ವಾಜಪೇಯಿ ಅವರ ಸಂಪುಟದಲ್ಲಿ ರೈಲ್ವೇ ಖಾತೆ ರಾಜ್ಯ ಸಚಿವರಾಗಿದ್ದರು. ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಿದಾಗ ಅವರ ಜೊತೆ ಹೋಗಲಿಲ್ಲ ಎಂಬ ಕಾರಣಕ್ಕೆ ಇವತ್ತು ಬಿಜೆಪಿಯಲ್ಲಿ ಸೈಡ್ ಲೈನ್’ ಎಂಬ ಅಡಿಬರಹವಿರುವ ಮತ್ತು ಯತ್ನಾಳ್ ಅವರ ಭಾವಚಿತ್ರವಿರುವ ಪೋಸ್ಟ್ ಹಾಕಿದ್ದಾರೆ. ಕಾಡಿಗೆ ಯಾವತ್ತೂ ಸಿಂಹನೇ ರಾಜ ಎಂದು ಯಡಿಯೂರಪ್ಪ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ಯಡಿಯೂರಪ್ಪ ನಾಯಕರಲ್ಲ?: ನಾಯಕ ಬದಲಾವಣೆ ಕುರಿತು ಚರ್ಚೆಗಳು ಶುರುವಾಗಿರುವ ಹೊತ್ತಲ್ಲೇ ’ನಮ್ಮ ಹಿಂದೂ ಹೃದಯ ಸಾಮ್ರಾಟ್ ಬಸವನಗೌಡ ಪಾಟೀಲ್ ಯತ್ನಾಳ್ ನಮ್ಮ ನಾಯಕರು’ ಎನ್ನುವ ಮೂಲಕ ಯಡಿಯೂರಪ್ಪ ನಮ್ಮ ನಾಯಕರಲ್ಲ ಎಂಬುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಆಪ್ತರೆಂದು ಸುಮ್ಮನಿದ್ದಾರೆಯೇ?: ಇನ್ನು, ಬಿಜೆಪಿ ಕಾರ್ಯಕರ್ತ ಸುರೇಶ್ ಮುಗದುಮ್ ಬಿಜೆಪಿ ಜಿಲ್ಲಾಧ್ಯಕ್ಷ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಸದಾ ಯತ್ನಾಳ್ ಅವರನ್ನು ಬೆಂಬಲಿಸಿಯೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರಂತೆ. ಈ ಹಿಂದೆಯೂ ಅನೇಕ ಬಾರಿ ಇಂತಹ ಪೋಸ್ಟ್ ಗಳನ್ನು ಹಾಕಿಕೊಂಡಿರುವ ಉದಾಹರಣೆಗಳಿವೆ. ಮೋಹನ್ ಮಾಳಶೆಟ್ಟಿ ಅವರ ಆಪ್ತ ಎಂಬ ಕಾರಣಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.

ಮಂಜುನಾಥ ಅವರ ಪೋಸ್ಟ್ ಬೆಂಬಲಿಸಿ ಕೆಲವರು, ’ ಧಮ್ ಇಲ್ಲರೀ ಮೆಂಬರ್’ ಎಂದು ಕಮೆಂಟ್ ಮಾಡಿದ್ದು, ಸುರೇಶ್ ಮುಗದುಮ್ ಜಿಲ್ಲಾ ಬಿಜೆಪಿ ಅಧ್ಯಕ್ಷರ ಬೆಂಬಲಿಗ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಂಜುನಾಥ ಅವರು, ’ಬಿಜೆಪಿ ಅಧ್ಯಕ್ಷರ ಚೇಲಾ ಆಗಿರುವುದರಿಂದ ಉಚ್ಚಾಟನೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಲು ಯತ್ನಿಸಿದ್ದಾರೆ.

ಇದು ರಾಜ್ಯದಂತೆ ಜಿಲ್ಲಾ ಬಿಜೆಪಿಯಲ್ಲೂ ಎಲ್ಲವೂ ಸರಿಯಿಲ್ಲ ಎಂಬುವುದನ್ನು ಸಾರಿ ಹೇಳಿದಂತಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ ಅವರು ಸುರೇಶ್ ಮುಗದುಮ್ ಅವರ ಮೇಲೆ ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.

ಮುಳುಗುಂದ ತಲೆದಂಡ
ಕೆಲವು ತಿಂಗಳ ಹಿಂದೆ ನಗರಸಭೆ ಮಾಜಿ ಸದಸ್ಯ ಮಂಜುನಾಥ ಮುಳಗುಂದ ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಬಿಜೆಪಿ ನಾಯಕರ ವಿರುದ್ಧ ಹಣ ವಸೂಲಿಯಂತಹ ಗಂಭೀರ ಆರೋಪ ಮಾಡಿದ್ದರು. ಇಬ್ಬರು ನಾಯಕರು ಜಿಲ್ಲೆಯ ೩೫ ಇಲಾಖೆಗಳ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದ್ದರು. ಇದರಲ್ಲಿ ಜಿಲ್ಲಾಧ್ಯಕ್ಷರ ಹೆಸರೂ ಇತ್ತೆಂದು ಹೇಳಲಾಗುತ್ತಿತ್ತು. ಜಿಲ್ಲಾ ಬಿಜೆಪಿಯಲ್ಲಿ ಜಾತಿ ರಾಜಕಾರಣ ನಡೆಯುತ್ತಿದ್ದು, ಇಲ್ಲಿ ಕೆಳ ಜಾತಿಯವರಿಗೆ ಮೂರು ಕಾಸಿನ ಕಿಮ್ಮತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಸ್ವಪಕ್ಷದ ಮುಖಂಡನ ಸರಣಿ ಪೋಸ್ಟ್ ನಿಂದ ರೋಸಿ ಹೋಗಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ ಮಂಜುನಾಥ ಮುಳಗುಂದ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದರು.

ಪಂಚಮಸಾಲಿ 2ಎ ಹೋರಾಟ, ಗುಡುಗು ಸಿಡಿಲಿಗೆ ಹೆಸರಾದ ಯತ್ನಾಳ ಶೀಘ್ರದಲ್ಲೇ ಎಂಟ್ರಿ: ಜಯಮೃತ್ಯುಂಜಯಶ್ರೀ

0

ಮೀಸಲಾತಿ ಕಲ್ಪಿಸುವ ಪರಮಾವಧಿಕಾರ ಸಿಎಂಗಿದೆ.

ಕೊಪ್ಪಳ ಜಿಲ್ಲೆ ಗಡಿ ದಾಟೋದರೊಳಗೆ ಸರಕಾರ ಸಿಹಿ ಸುದ್ದಿ ನೀಡಲಿ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಶಾಸಕ‌ ಬಸನಗೌಡ ಯತ್ನಾಳ ಗುಡುಗು ಸಿಡಿಲು ಹಾಕೋದರಲ್ಲಿ ನಿಸ್ಸೀಮರು. ಈಗಾಗಲೇ ಅವರು ಗುಡುಗು ಆರಂಭಿಸಿದ್ದಾರೆ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಸಂಸದ ಕರಡಿ ಸಂಗಣ್ಣ, ಸಚಿವ ಸಿ.ಸಿ.ಪಾಟೀಲ ಸರಕಾರದ ಜೊತೆ ಮಾತನಾಡಲಿ, ಸರಕಾರ ಸ್ಪಂದಿಸದಿದ್ದರೆ ನಂತರ ತಾವು ಎಂಟ್ರಿಯಾಗುವುದಾಗಿ ಶಾಸಕ ಬಸನಗೌಡ ಯತ್ನಾಳ ತಿಳಿಸಿದ್ದಾರೆಂದು ಪಂಚಮಸಾಲಿ ಪೀಠದ ಬಸವ ಶ್ರೀ ಜಯಮೃತ್ಯುಂಜಯ ಮಹಾಸ್ವಾಮೀಜಿ ತಿಳಿಸಿದರು.

ಕೊಪ್ಪಳ ಜಿಲ್ಲೆಯ ಕಿನ್ನಾಳದಲ್ಲಿ ಪಂಚಮಸಾಲಿ ಸಮಾಜದ ಪಂಚಲಕ್ಷ ಹೆಜ್ಜೆ, 2ಎ ಮೀಸಲಾತಿಗಾಗಿ ನಡೆಸುತ್ತಿರುವ ಪಾದಯಾತ್ರೆಯ ಬಹಿರಂಗ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಈಗಾಗಲೇ ಲಿಂಗಾಯತದಡಿ ಇದ್ದ ಹಲವು ಸಮಾಜಗಳು ಮೀಸಲಾತಿ ಪಡೆದುಕೊಂಡಿವೆ. ಮೂರ್ನಾಲ್ಕು ಸಮಾಜಗಳು ಮಾತ್ರ ಮೀಸಲಾತಿಗಾಗಿ ಹೋರಾಟ ನಡೆಸುತ್ತಿವೆ. ಸದ್ಯ ಇದು ಶಾಂತಿಯುತ ಹೋರಾಟ. ಸರಕಾರ ನಮ್ಮ ಹೋರಾಟ ಉದಾಸೀನ ಮಾಡಿದರೆ ಯತ್ನಾಳ ಜೊತೆಗೂಡುತ್ತಾರೆ. ಹೋರಾಟ ತೀವ್ರವಾಗುತ್ತದೆ ಎಂದರು.

ಈಗಾಗಲೇ ಹಾಲುಮತ ಸಮಾಜ ಬಾಂಧವರು ಎಸ್ಟಿ ಮೀಸಲಾತಿಗಾಗಿ, ವಾಲ್ಮೀಕಿ ಸಮಾಜದವರು 3.5 ಮೀಸಲಾತಿಯನ್ನು 7.5ಗೆ ಹೆಚ್ಚಿಸುವ ಹೋರಾಟ ತೀವ್ರಗೊಳಿಸಿದ್ದಾರೆ. ಈ ಎರಡು ಸಹೋದರ ಸಮಾಜಗಳಿಗೆ ಮೀಸಲಾತಿ ಸಿಕ್ಕೇ ಸಿಗುತ್ತೆ. ಅಲ್ಲಿ ಖಾಲಿಯಾಗುವ ಸ್ಥಾನವನ್ನು ಪಂಚಮಸಾಲಿ ಸಮಾಜಕ್ಕೆ ಮೀಸಲಿಡಬೇಕು ಎಂದು ಶ್ರೀಗಳು ಆಗ್ರಹಿಸಿದರು.

ದೇವೇಗೌಡರು ತಮ್ಮ ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಸೇರಿದಂತೆ ಅನೇಕ ಸೌಕರ್ಯ ಒದಗಿಸಿದ್ದರಿಂದ ಒಕ್ಕಲಿಗ ಸಮುದಾಯದಲ್ಲಿ ಅವರೊಬ್ಬ ಪ್ರಶ್ನಾತೀತ ನಾಯಕ ಎನಿಸಿದ್ದಾರೆ. ದೇವರಾಜ ಅರಸ್ ಅವರು ಹಿಂದುಳಿದ ಸಮಾಜಗಳಿಗೆ 3ಬಿ ಮೀಸಲಾತಿ ನೀಡಿದ್ದರಿಂದ ಜನಮಾನಸದಲ್ಲಿ ಉಳಿದಿದ್ದಾರೆ. ಅವರ ನಂತರ ಬಂದ ಮುಖ್ಯಮಂತ್ರಿಗಳಿಗೆ ಮೀಸಲಾತಿ ಕಲ್ಪಿಸುವ ಭಾಗ್ಯ ಬಂದಿರಲಿಲ್ಲ.

ಈಗ ಸಿಎಂ ಆಗಿರುವ ಯಡಿಯೂರಪ್ಪ ಅವರಿಗೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕಲ್ಪಿಸುವ ಅವಕಾಶ ಒದಗಿ‌ ಬಂದಿದೆ. ಯಡಿಯೂರಪ್ಪ ಅವರು ಹಾಲುಮತ, ವಾಲ್ಮೀಕಿ ಹಾಗೂ ಪಂಚಮಸಾಲಿ ಸಮಾಜಗಳಿಗೆ ಮೀಸಲಾತಿ ನೀಡಿದರೆ ಎಲ್ಲ ಸಮಾಜಬಾಂಧವರು ಅವರಿಗೆ ಋಣಿಯಾಗಿ ಇರುತ್ತಾರೆ. ಪಂಚಮಸಾಲಿ ಸಮಾಜ ಬಸವಣ್ಣ, ಕಿತ್ತೂರು ಚನ್ನಮ್ಮ ಅವರಿಗೆ ನೀಡಿದ ಸ್ಥಾನವನ್ನು ಯಡಿಯೂರಪ್ಪ ಅವರಿಗೆ ನೀಡುತ್ತೆ ಎಂದು ನುಡಿದರು.

ಈ ಹೋರಾಟದ ಹೆಜ್ಜೆ ಇಂದು-ನಿನ್ನೆಯದಲ್ಲ. ಸುಮಾರು 20 ವರ್ಷಗಳಿಂದಲೂ ಕೂಗಿತ್ತು. ಕೊರೊನಾ ಬಂದಿದ್ದರಿಂದ ಅದು ಕಿಚ್ಚಾಗಿ ಪಾದಯಾತ್ರೆ ಹೋರಾಟದ ರೂಪ ಪಡೆದಿದೆ. ಕೊರೊನಾ ಕಾಲದಲ್ಲಿ ಮನೆಯಲ್ಲಿ ಖಾಲಿ ಕೂತ ಸಮಾಜದ ಯುವಕರು ಹೋರಾಟದ ರೂಪು-ರೇಷೆ ಹಾಕಿದರು. ಅದೀಗ ಕಾರ್ಯರೂಪಕ್ಕೆ ಬಂದಿದೆ. ಸಿಎಂ ಅವರು ಸಹ ವಾರದವರೆಗೆ ಪಾದಯಾತ್ರೆ ಮುಂದೂಡಲು ಮನವಿ ಮಾಡಿದರು. ಬಹುಶಃ ಇನ್ನೊಂದೆರಡು ದಿನಗಳಲ್ಲಿ ಅವರು ನಮ್ಮ ಸಮಾಜಕ್ಕೆ ಮೀಸಲಾತಿ ಕಲ್ಪಿಸುವ ಭರವಸೆ ಇದೆ. ಸಮಾಜ ಬಾಂಧವರಲ್ಲಿ ಜಾಗೃತಿ ಮೂಡಿಸಲು ಈ ಪಾದಯಾತ್ರೆ ಸಹಕಾರಿ ಎಂದು ಶ್ರೀಗಳು ತಿಳಿಸಿದರು.

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ನ್ಯಾಯ ಕೇಳಿ ಕೇಳಿ ಸಾಕಾಗಿದೆ. ಈಗೇನಿದ್ದರೂ ವಿಧಾನಸೌಧದ ಒಳಗೆ ಪ್ರವೇಶಿಸಿ ಮೀಸಲಾತಿ ಪಡೆಯಬೇಕಿದೆ. ಪಂಚಮಸಾಲಿ ಸಮಾಜದ ಕೈ ಸದಾ ಮೇಲಿರುತ್ತೆ. ಕೊಡುಗೈ ಅವರದ್ದು. ಜೇಬಿನಲ್ಲಿ‌ ನೂರು ರೂಪಾಯಿ ಇದ್ದರೂ ಸಾಲ ಮಾಡಿ ಸಾವಿರ ರೂಪಾಯಿ ದಾನ ಮಾಡುವ ದೌಲತ್ತು ಪಂಚಮಸಾಲಿಗಳದ್ದು. ಅದಕ್ಕೆ ಇವತ್ತು ಮೀಸಲಾತಿಗೆ ಹೋರಾಡುವ ಅನಿವಾರ್ಯತೆ ಬಂದಿದೆ. ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲಲ್ಲ ಎಂದರು.

ಸಭೆಯಲ್ಲಿ ಸಂಸದ ಕರಡಿ ಸಂಗಣ್ಣ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಕಳಕನಗೌಡ, ಜಿಪಂ ಸದಸ್ಯ‌ ಗವಿಸಿದ್ದಪ್ಪ ಕರಡಿ ಮತ್ತಿತರರು ಇದ್ದರು.

ಅದ್ಧೂರಿ ಸ್ವಾಗತ
ಕುಕನೂರು‌ ತಾಲೂಕಿನ ಮಂಗಳೂರಿನಿಂದ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮಕ್ಕೆ ಪಾದಯಾತ್ರೆ ಮಂಗಳವಾರ ಪ್ರವೇಶಿಸಿದ್ದು, ಗ್ರಾಮದಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು. ಸಮಾಜದ ಹಲವರ ಮನೆಗಳಿಗೆ ಭೇಟಿ ನೀಡಿದ ಶ್ರೀಗಳ ಪಾದಪೂಜೆ ಮಾಡಲಾಯಿತು.

ಸಿಎಂ ಸ್ಥಾನ ಹೋದ ಮೇಲೆ ಸಿದ್ಧರಾಮಯ್ಯ ಹುಚ್ಚರಾಗಿದ್ದಾರೆ: ಈಶ್ವರಪ್ಪ

ವಿಜಯಸಾಕ್ಷಿ ಸುದ್ದಿ, ದಾವಣಗೆರೆ: ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಮೇಲೆ ಹುಚ್ಚನಂತಾಗಿದ್ದಾರೆ. ಹೀಗಾಗಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಸಿಎಂ ಆಗಲು ಕುರುಬರ ಎಸ್ ಟಿ ಹೋರಾಟ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಿಎಂ ಆಗಿದ್ದವರು ಹೀಗೆ ನೀಚತನಕ್ಕೆ ಇಳಿದು ಮಾತನಾಡಬಾರದು. ನಾನು ಮುಖ್ಯಮಂತ್ರಿ ಆಗುವುದು ಬಿಜೆಪಿ ಪಕ್ಷ ನಿರ್ಧಾರ ಮಾಡುತ್ತದೆ. ನಮ್ಮ ಪಕ್ಷದಲ್ಲಿ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುವ ಸಿಸ್ಟಂ ಇಲ್ಲ.

ಧಮ್ ಇದ್ರೆ ಮುಂದಿನ ಸಿಎಂ ಈಶ್ವರಪ್ಪ ಎಂದು ಘೋಷಿಸಿಕೊಳ್ಳಲಿ ಎಂದಿದ್ದಾರೆ. ತಾವೇ ನಾನು ಮುಂದಿನ ಸಿಎಂ ಎಂದು ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಮೇಲೆ ಕಂಟ್ರೋಲ್ ಇಲ್ಲ. ಸಿದ್ದರಾಮಯ್ಯರನ್ನು ಯಾರು ಕಂಟ್ರೋಲ್ ಮಾಡುತ್ತಿಲ್ಲ. ಇದನ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸ್ಪಷ್ಟ ಪಡಿಸಿ, ತಾಕತ್ತಿದ್ದರೆ ಸಿದ್ದರಾಮಯ್ಯಗೆ ನೋಟಿಸ್ ಕೊಡಲಿ ಎಂದು ಸವಾಲೆಸೆದರು.

ಪಾದಯಾತ್ರೆ ಮಾಡುತ್ತಿರುವುದು ಕನಕ ಗುರುಪೀಠದ ಸ್ವಾಮೀಜಿ. ನಾನಲ್ಲ. ಕನಿಷ್ಟ ಅರ್ಧ ಕಿಲೋಮೀಟರ್ ಆದ್ರೂ ಸಿದ್ದರಾಮಯ್ಯ ಪಾದಯಾತ್ರೆ ಮಾಡಲಿ ಎಂದು ಈಶ್ವರಪ್ಪ ಸಿದ್ದರಾಮಯ್ಯ ಅವರನ್ನು ಕುಟುಕಿದರು.

ಬಸ್, ಕಾರ್ ಡಿಕ್ಕಿಗೆ ಓರ್ವ ಬಲಿ

0

ವಿಜಯಸಾಕ್ಷಿ ಸುದ್ದಿ, ಕಲಬುರಗಿ: ಬಸ್ ಮತ್ತು ಕಾರ್ ನಡುವೆ ಡಿಕ್ಕಿ ಸಂಭವಿಸಿದ ಪರಣಾಮ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.

ಜಿಲ್ಲೆಯ ಸೇಡಂ ತಾಲೂಕಿನ ಅಡಕಿ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಮೃತನನ್ನು ಕಾರ್ ನಲ್ಲಿದ್ದ ದೇವರಾಜ್(35) ಎಂದು ಗುರುತಿಸಲಾಗಿದೆ. ಮೃತ ದೇವರಾಜ್ ಸೇಡಂ ತಾಲೂಕಿನ ಹುಡಾ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮುಧೋಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಟಿಎಂ ಮಷೀನನ್ನೇ ಹೊತ್ತೊಯ್ದ ಖತರ್ನಾಕ್ ಕಳ್ಳರು

ವಿಜಯಸಾಕ್ಷಿ ಸುದ್ದಿ, ತುಮಕೂರು: ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನ ಎಟಿಎಂ ಮಷೀನನ್ನೇ ಕಳ್ಳರು ಹೊತ್ತೊಯ್ದಿರೋ ಘಟನೆ ತಾಲೂಕಿನ ಹೆಗ್ಗೆರೆಯಲ್ಲಿ ನಡೆದಿದೆ.

ನಸುಕಿನಜಾವ 3 ಗಂಟೆಗೆ ಈ ಘಟನೆ ನಡೆದಿದ್ದು, ಖತರ್ನಾಕ್ ಕಳ್ಳರ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಬ್ಬರು ಖತರ್ನಾಕ್ ಕಳ್ಳರಿಂದ ಎಟಿಎಂ‌ ಮೆಷಿನ್ ಕಳವು ಮಾಡಲಾಗಿದೆ. ಎಟಿಎಂ ಮಷೀನ್ ಗೂ ಆಚೆಯ ವಾಹನಕ್ಕೂ ಹಗ್ಗ ಕಟ್ಟಿ ಎಳೆದಿದ್ದಾರೆ. ವಾಹನ ಎಳೆದ ರಭಸಕ್ಕೆ ಇಡೀ ಎಟಿಎಂ ಕಳ್ಳರ ಪಾಲಾಗಿದೆ.

ಎಟಿಎಂನಲ್ಲಿದ್ದ ಹಣ ಕದ್ದು ಮಲ್ಲಸಂದ್ರದಲ್ಲಿ ಮಷೀನ್ ಬಿಸಾಡಿ ಕಳ್ಳರು ನಾಪತ್ತೆಯಾಗಿದ್ದಾರೆ. ತುಮಕೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖತರ್ನಾಕ್ ಕಳ್ಳರಿಗೆ ಗ್ರಾಮೀಣ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.

ವೀಕ್ನೆಸ್ ಆಫ್ ಮೈಂಡ್ ನಿಂದ ರೈತರ ಆತ್ಮಹತ್ಯೆ : ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿಕೆ

0

ವಿಜಯಸಾಕ್ಷಿ ಸುದ್ದಿ, ಮೈಸೂರು: ರೈತರ ಆತ್ಮಹತ್ಯೆ ವೀಕ್ನೆಸ್ ಆಫ್ ಮೈಂಡ್ ನಿಂದ ಆಗುತ್ತೆ. ಮೈಂಡ್ ವೀಕ್ನೆಸ್ ಇರುವ ರೈತರಷ್ಟೇ ಆತ್ಮಹತ್ಯೆ ಮಾಡಿಕೊಳ್ತಾರೆ ಅಂತ ಕೃಷೊ ಸಚಿವ ಬಿ ಸಿ ಪಾಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮೈಸೂರು ಜಿಲ್ಲೆ ಪ್ರವಾಸದಲ್ಲಿರುವ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಯಾವುದೋ ಕಾರಣಕ್ಕೋ ಯಾವುದೋ ಟೈಂನಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.
ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು ಅಂತಾನೆ ಕಾರ್ಯಕ್ರಮ ರೂಪಿಸಲಾಗ್ತಿದೆ. ರೈತರ ಮನೆಗೆ ಹೋಗಿ ಹಾರ ಹಾಕಿ ಸಾಂತ್ವನ ಹೇಳಿದ್ರೆ ಸಮಸ್ಯೆ ಬಗೆಹರಿಯಲ್ಲ ಎಂದರು.

ರೈತರ ಆತ್ಮಹತ್ಯೆಗೆ ಸರ್ಕಾರದ ನೀತಿಗಳು ಕಾರಣವಲ್ಲ. ವೀಕ್ನೆಸ್ ಆಫ್ ಮೈಂಡ್ ನಿಂದ ಕೆಲ ರೈತರು ಆತ್ಮಹತ್ಯೆ ಮಾಡಿಕೊಳ್ತಾರೆ. ಎಲ್ಲ ರೈತರು ಏನ್ ಆತ್ಮಹತ್ಯೆ ಮಾಡಿಕೊಂಡಿದ್ದಾರಾ?
ಇಲ್ಲ ತಾನೆ ಎಂದು ಪ್ರಶ್ನಿಸಿದರು.

ರೈತರಷ್ಟೇ ಅಲ್ಲ ಬೇರೆ ಬೇರೆಯವರು ಆತ್ಮಹತ್ಯೆ ಮಾಡಿಕೊಳ್ತಾರೆ. ಉದ್ಯಮಿಗಳು, ಅಧಿಕಾರಿಗಳು, ಹಾಗೂ ಇತರೇ ಕ್ಷೇತ್ರದ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಸರ್ಕಾರದ ನೀತಿಗಳು ಕಾರಣವಲ್ಲ.

ಸರ್ಕಾರಗಳು ತನ್ನ ಕೆಲಸ ಮಾಡುತ್ತಿವೆ. ಹಳ್ಳಿಯಲ್ಲಿರುವವರು ಬಹುತೇಕರು ರೈತರೇ ಆಗಿರುತ್ತಾರೆ. ಹಾಗಂತ ಹಳ್ಳಿಗಳಲ್ಲಿ ಆಗುವ ಎಲ್ಲ ಸಾವುಗಳು ರೈತರ ಆತ್ಮಹತ್ಯೆ ಅಂದುಕೊಳ್ಳೋಕೆ ಆಗುತ್ತಾ. ಸಮಸ್ಯೆಗೆ ಕಾರಣ ಹುಡುಕೋದೆ ತಜ್ಞರ ಸಮಿತಿಗಳ ಕೆಲಸ. ಅವರು ನೀಡುವ ವರದಿಯಂತೆ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ ಎಂದರು.

ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ತಂಡಕ್ಕೆ ಐತಿಹಾಸಿಕ ಗೆಲುವು: ಸತತ ಮೂರನೇ ಟ್ರೋಫಿ ಗೆದ್ದ ಇಂಡಿಯಾ

ವಿಜಯಸಾಕ್ಷಿ ಸುದ್ದಿ, ಬ್ರಿಸ್ಬೇನ್: ಆಸ್ಟ್ರೇಲಿಯಾದ ಬ್ರಿಸ್ಬೇನ್ ನ ಗಾಬಾ ಕ್ರೀಡಾಂಗಾಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ರೋಮಾಂಚಕ ಮತ್ತು ಐತಿಹಾಸಿಕ ಜಯ ಸಾಧಿಸಿದೆ.

ಒಟ್ಟು 4 ಟೆಸ್ಟ್ ಪಂದ್ಯಗಳಲ್ಲಿ ಎರಡರಲ್ಲಿ ಜಯ ಗೆಲುವು ಸಾಧಿಸುವ ಮೂಲಕ ಭಾರತ ತಂಡವು ಈ ಐತಿಹಾಸಿಕ ಸಾಧನೆಗೈದಿದೆ.

ಆರಂಭಿಕ ಬ್ಯಾಟ್ಸ್ ಮನ್ ಆಗಿ ಆಗಮಿಸಿದ್ದ ರೋಹಿತ್ ಶರ್ಮಾ 7 ರನ್ ಗಳಿಸಿ ಪೆವಿಲಿಯನ್ ಸೇರಿದರೂ, ಶುಭ್ ಮನ್ ಗಿಲ್ ಮತ್ತು ಚೇತೇಶ್ವರ ಪೂಜಾರ ಅವರ 114 ರನ್ ಗಳ ಜೊತೆಯಾಟವಾಡಿದರು.

ಗೋಡೆಯಂತೆ ಕ್ರೀಸ್ ನಲ್ಲಿ ನಿಂತು ಆಸೀಸ್ ಬೌಲರ್ ಗಳ ಬೆವರಿಳಿಸಿದ ಚೇತೇಶ್ವರ ಪೂಜಾರ 211 ಎಸೆತಗಳಲ್ಲಿ 56 ರನ್ ಗಳಿಸಿದರು. ಶುಭ್ ಮನ್ ಗಿಲ್ 146 ಎಸೆತಗಳಲ್ಲಿ 91 ರನ್ ಗಳಿಸಿದರು. ವಾಷಿಂಗ್ಟನ್ ಸುಂದರ್ 29 ಎಸೆತಗಳಲ್ಲಿ 22 ರನ್ ಗಳಿಸಿ ನಥನ್ ಲಿಯೋನ್ ಗೆ ವಿಕೆಟ್ ಒಪ್ಪಿಸಿದರು.

ಕೊನೆಯ ಕ್ಷಣದಲ್ಲಿ ಅದ್ಭುತ ಪ್ರದರ್ಶನ ತೋರಿದ ರಿಶಬ್ ಪಂತ್ 138 ಎಸೆತಗಳಲ್ಲಿ 89 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಈ ಮೂಲಕ ಸತತ ಮೂರನೇ ಬಾರಿಗೆ ಬಾರ್ಡರ್ ಗವಾಸ್ಕರ್ ಪ್ರಶಸ್ತಿ ಎತ್ತಿ ಹಿಡಿದಿದ್ದು, ಪ್ರಶಸ್ತಿ ಪಡೆದ ಭಾರತ ತಂಡಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವರು ಅಭಿನಂದಿಸಿದ್ದಾರೆ.

ಲಾರಿ, ಟಂಟಂ ಮುಖಾಮುಖಿ: ಸ್ಥಳದಲ್ಲೇ ಓರ್ವ ಸಾವು

0

ವಿಜಯಸಾಕ್ಷಿ ಸುದ್ದಿ, ನರಗುಂದ: ಲಾರಿ‌ ಹಾಗೂ ಟಂಟಂ ನಡುವೆ ಮುಖಾಮುಖಿ ಡಿಕ್ಕಿಯಾಗಿ, ಸ್ಥಳದಲ್ಲಿಯೇ ಓರ್ವ ಸಾವನ್ನಪ್ಪಿರುವ ಘಟನೆ‌ ಪಟ್ಟಣದ ಹೊರವಲಯದ ಹುಬ್ಬಳ್ಳಿ- ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಶರಣಪ್ಪ ಭಜಂತ್ರಿ (45) ಎಂದು ಗುರುತಿಸಲಾಗಿದೆ. ಮೃತನು ಗದಗ ತಾಲೂಕಿನ ಹುಯಿಲಗೋಳ ಗ್ರಾಮದವನೆಂದು ತಿಳಿದುಬಂದಿದೆ.

ಘಟನೆಯಲ್ಲಿ ನಾಲ್ಕು ಜನರಿಗೆ ಗಾಯಗಳಾಗಿದ್ದು, ನರಗುಂದ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!