Home Blog Page 3094

ಲಂಕೆಯಲ್ಲಿ ಘರ್ಜಿಸಿ ಬರುವುದೇ ಭಾರತೀಯ ಯುವ ಪಡೆ!

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಕ್ರಿಕೆಟ್ ಅಂಗಳದಲ್ಲಿ ಬೆವರು ಸುರಿಸುವ ಪ್ರತಿಯೊಬ್ಬ ಆಟಗಾರನಿಗೂ ಒಮ್ಮೆಯಾದರೂ ಭಾರತ ತಂಡದ ಪರ ಆಡಬೇಕೆಂಬ ಕನಸು ಕಂಡಿರುತ್ತಾನೆ. ಹೀಗೆ ಕನಸು ಕಂಡ ಐವರು ಯುವ ಆಟಗಾರರ ಕನಸು ನನಸಾಗಿದೆ. ಸದ್ಯ ಹೊಸ ಕನಸಿನೊಂದಿಗೆ ಮೈದಾನಕ್ಕೆ ಕಾಲಿಡುತ್ತಿದ್ದಾರೆ.
ಮುಂಬರುವ ಜುಲೈ ತಿಂಗಳಲ್ಲಿ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ನಾಯಕ ವಿರಾಟ್ ಕೊಹ್ಲಿ ಮತ್ತು ಇತರೆ ಹಿರಿಯ ಆಟಾಗರರ ಅನುಪಸ್ಥಿತಿಯಲ್ಲಿ ಇವರು ಭಾರತ ತಂಡ ಪ್ರತಿನಿಧಿಸಲಿದ್ದಾರೆ.

ಶಿಖರ್ ಧವನ್‍ ನೇತೃತ್ವದ ತಂಡದಲ್ಲಿ ಈಗ ಈ ಹೊಸ ಆಟಗಾರರು ತಮ್ಮ ಶಕ್ತಿ ಪ್ರದರ್ಶನ ಮಾಡಲು ಉತ್ಸುಕರಾಗಿದ್ದಾರೆ. ಐಪಿಎಲ್‍ ನಲ್ಲಿ ಅಬ್ಬರಿಸಿದ್ದ ಯುವ ಬ್ಯಾಟ್ಸಮನ್ ಗಳಾದ ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್, ನಿತೀಶ್ ರಾಣಾ ಮತ್ತು ವೇಗಿ ಚೇತನ್ ಸಕಾರಿಯಾ, ಆಲ್ರೌಂತಡರ್ ಕೃಷ್ಣಪ್ಪ ಗೌತಮ್ ಚೊಚ್ಚಲ ಬಾರಿಗೆ ಭಾರತ ತಂಡ ಸೇರಿದ್ದಾರೆ.

ಆರ್ ಸಿಬಿ ಬೆಂಗಳೂರು ತಂಡದ ಪರ ಆಡುವ ದೇವದತ್ ಪಡಿಕ್ಕಲ್ ಐಪಿಎಲ್‍ ನಲ್ಲಿ ಒಟ್ಟು 21 ಪಂದ್ಯವಾಡಿ 1 ಶತಕ ಮತ್ತು 5 ಅರ್ಧಶತಕ ಸಹಿತ 668 ರನ್ ಬಾರಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಋತುರಾಜ್ ಗಾಯಕ್ವಾಡ್ 13 ಪಂದ್ಯಗಳನ್ನು ಆಡಿದ್ದು, 5 ಅರ್ಧ ಶತಕ ಸಹಿತ 400 ರನ್ ಸಿಡಿಸಿ ಮಿಂಚಿದ್ದಾರೆ.
ನಿತೀಶ್ ರಾಣಾ ಕೋಲ್ಕತ್ತಾ ತಂಡದ ಪರ ಒಟ್ಟು 67 ಪಂದ್ಯವಾಡಿದ್ದು, 13 ಅರ್ಧ ಶತಕ ಸಹಿತ ಒಟ್ಟು 1,638 ರನ್ ಚಚ್ಚಿದ್ದಾರೆ.

ರಾಜಸ್ಥಾನ ರಾಯಲ್ಸ್ ತಂಡದ ಯುವ ವೇಗದ ಬೌಲರ್ ಚೇತನ್ ಸಕಾರಿಯಾ ಒಟ್ಟು 7 ಪಂದ್ಯವಾಡಿ 7 ವಿಕೆಟ್ ಕಬಳಿಸಿದ್ದಾರೆ. ಇನ್ನೋರ್ವ ಕನ್ನಡಿಗ ಆಲ್‍ ರೌಂಡರ್ ಕೃಷ್ಣಪ್ಪ ಗೌತಮ್ ದೇಶಿಯ ಟೂರ್ನಿಯಲ್ಲಿ ಕರ್ನಾಟಕದ ಪರ 42 ಪಂದ್ಯಗಳನ್ನು ಆಡಿದ್ದು, 1,045 ರನ್ ಗಳಿಸಿ , 166 ವಿಕೆಟ್ ಪಡೆದಿದ್ದಾರೆ.

ಬಹುತೇಕ ಹೊಸಮುಖಗಳೊಂದಿಗೆ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್ ಆಗಿರಲಿದ್ದಾರೆ. ಈ ಹೊಸ ಪ್ರತಿಭೆಯನ್ನೇ ಹೊಂದಿರುವ ಭಾರತೀಯ ತಂಡ, ಶ್ರೀಲಂಕಾ ವಿರುದ್ಧ ಭಾರತ ತಂಡ 3 ಏಕದಿನ ಮತ್ತು 3 ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ; ಎಸ್ ಐಟಿ ಎದುರು ಹಾಜರಾದ ಆರೋಪಿಗಳು

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಆರೋಪಿಗಳಾಗಿರುವ ನರೇಶ್ ಗೌಡ ಹಾಗೂ ಶ್ರವಣ್ ವಿಚಾರಣೆಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.
ತಮ್ಮ ವಕೀಲರೊಂದಿಗೆ ಆಗಮಿಸಿರುವ ಆರೋಪಿಗಳು, ಆಡುಗೋಡಿ ಟೆಕ್ನಿಕಲ್ ಸೆಲ್ ನಲ್ಲಿ ಎಸ್ ಐಟಿ ಎದುರು ಹಾಜರಾಗಿದ್ದಾರೆ. ಈ ಹಿಂದೆಯೇ ನರೇಶ್ ಮತ್ತು ಶ್ರವಣ್ ಇಬ್ಬರಿಗೂ ವಿಚಾರಣೆಗೆ ಹಾಜರಾಗುವಂತೆ ಎಸ್ ಐಟಿ ಅಧಿಕಾರಿಗಳು ನೊಟೀಸ್ ನೀಡಿದ್ದರು.

ಸದಾಶಿವನಗರ ಠಾಣೆಯಲ್ಲಿ ದಾಖಲಾಗಿದ್ದ ಬ್ಲ್ಯಾಕ್ ಮೇಲ್ ಪ್ರಕರಣದಲ್ಲಿ ತನಿಖೆಗೆ ಅವರು ಹಾಜರಾಗಿದ್ದಾರೆ. ಐದು ದಿನಗಳ ಒಳಗೆ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಇಬ್ಬರಿಗೂ ಸೂಚನೆ ನೀಡಿತ್ತು, ಸಿಡಿ ಕಿಂಗ್‌ ಪಿನ್‌ಗಳಾದ ನರೇಶ್ ಮತ್ತು ಶ್ರವಣ್‌ ಅವರನ್ನು ಬಂಧನದ ಅವಶ್ಯವಿದ್ದರೆ ಬಂಧಿಸುವ ಸಾಧ್ಯತೆಯೂ ಇದೆ.

ಸರಿಯಾಗಿ ಸ್ಪಂದಿಸದಿದ್ದರೆ ಬಂಧಿಸಲು ಎಸ್ ಐಟಿ ತನಿಖಾಧಿಕಾರಿಗಳಿಗೆ ಸ್ವತಂತ್ರವಿದೆ ಎಂದು ಕೋರ್ಟ್ ಹೇಳಿತ್ತು. ಹೀಗಾಗಿ ಇಂದು ವಿಚಾರಣೆಗೆ ಹಾಜರಾಗಿರುವ ಆರೋಪಿಗಳಿಬ್ಬರನ್ನು ಎಸ್ ಐಟಿ ಪೊಲೀಸರು ತಮ್ಮ ವಶಕ್ಕೆ ಪಡೆಯಬಹುದು ಎನ್ನಲಾಗುತ್ತಿದೆ.

ನಮ್ಮ ಕಿಚ್ಚ ಎಲ್ಲದಕ್ಕೂ ಸೈ ರೀ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕಿಚ್ಚ ಸುದೀಪ್ ಬಹುಮುಖ ಪ್ರತಿಭೆಯೇ ಸರಿ. ನಟನೆ, ನಿರ್ದೇಶನ, ಸಿನಿಮಾ ನಿರ್ಮಾಣ, ರಿಯಾಲಿಟಿ ಶೋ ನಿರೂಪಣೆ, ಅಡುಗೆ, ಕ್ರಿಕೆಟ್ ಸೇರಿದಂತೆ ಎಲ್ಲ ರಂಗಗಳಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ಹೀಗಾಗಿಯೇ ಸಕಲ ಕಲಾ ವಲ್ಲಭ ಎಂದೇ ಇವರನ್ನು ಹಲವರು ಕರೆಯುತ್ತಾರೆ. ಸದ್ಯ ಇನ್ನೊಂದು ರಂಗದಲ್ಲಿ ತಮ್ಮ ಪ್ರತಿಭೆ ತೋರಿಸಲು ಮುಂದಾಗಿದ್ದಾರೆ.

ಸುದೀಪ್ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಕೂಡ ಮಿಂಚಿದ್ದಾರೆ. ಈಗ ಚೆಸ್ ನಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸಲು ಮುಂದಾಗಿದ್ದಾರೆ. ಭಾರತೀಯರಿಗೆ ಚೆಸ್ ಎಂದ ಕೂಡಲೇ ನೆನಪಿಗೆ ಬರುವುದೇ ವಿಶ್ವನಾಥನ್ ಆನಂದ್. 5 ಸಲ ವರ್ಲ್ಡ್ ಚಾಂಪಿಯನ್ ಆದ ವಿಶ್ವನಾಥನ್ ಆನಂದ್, ಇಡೀ ವಿಶ್ವಕ್ಕೆ ಚಾಣಾಕ್ಷ ಚೆಸ್ ಪಟು.
ಚೆಸ್ ನಲ್ಲಿ ಅವರು ಎದುರು ಗೆಲ್ಲಬೇಕಾದರೆ, ಎದುರಾಳಿ ಸಾಕಷ್ಟು ಬೆವರು ಹರಿಸಬೇಕು. ಈಗ ಅವರ ಜೊತೆ ಕಿಚ್ಚ ಸುದೀಪ್ ಸ್ಪರ್ಧೆ ನಡೆಸಲಿದ್ದಾರೆ! ಅದಕ್ಕಾಗಿ ಅಖಾಡ ಸಜ್ಜಾಗಿದೆ.

ವಿಶ್ವನಾಥನ್ ಆನಂದ್ ಜೊತೆ ಸುದೀಪ್ ಚೆಸ್ ಆಡಲಿರುವುದು ಒಂದು ಒಳ್ಳೆಯ ಉದ್ದೇಶಕ್ಕಾಗಿ. ಕೊವಿಡ್ನಿಂದಾಗಿ ಇಡೀ ದೇಶವೇ ಕಷ್ಟದ ಪರಿಸ್ಥಿತಿಯಲ್ಲಿದೆ. ಕೊರೊನಾ ವಿರುದ್ಧ ಹೋರಾಡಲು ಹಣ ಸಂಗ್ರಹ ಮಾಡುವ ಸಲುವಾಗಿ ಈ ಆಟ ಆಯೋಜಿಸಲಾಗಿದೆ.

ಜೂ. 13ರಂದು ಸಂಜೆ 5ಕ್ಕೆ ‘ಚೆಕ್ಮೇಟ್ ಕೊವಿಡ್- ಸೆಲೆಬ್ರಿಟಿ ಎಡಿಷನ್’ ಆರಂಭ ಆಗಲಿದೆ. ಇದರಲ್ಲಿ ವಿಶ್ವನಾಥನ್ ಆನಂದ್ ವಿರುದ್ಧ ಕಿಚ್ಚ ಆಡಲಿದ್ದಾರೆ. ಅವರೊಂದಿಗೆ ಹಲವು ಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಬಾಲಿವುಡ್ ನಟ ಆಮೀರ್ ಖಾನ್ ಕೂಡ ವಿಶ್ವನಾಥನ್ ಆನಂದ್ಗೆ ಪೈಪೋಟಿ ನೀಡಲಿದ್ದಾರೆ.

ಅಕ್ಷಯ ಪಾತ್ರಾ ಫೌಂಡೇಶನ್ ಹಾಗೂ ಚೆಸ್ ಡಾಟ್ ಕಾಮ್ ಜೊತೆಯಾಗಿ ಈ ಆಟವನ್ನು ಆಯೋಜಿಸಿವೆ. Chess.com – India ಯೂಟ್ಯೂಬ್ ಚಾನೆಲ್ ನಲ್ಲಿ ಆಟ ಪ್ರಸಾರವಾಗಲಿದೆ.

ರಂಗಭೂಮಿ ಕಲಾವಿದ ಮೈದೂರು ಅಜ್ಜಪ್ಪ ಬಾಗಳಿ ನಿಧನ

0

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ

ತಾಲೂಕಿನ ಬಾಗಳಿ ಗ್ರಾಮದ ನಿವಾಸಿ ಎಂ.ಅಜ್ಜಪ್ಪರವರು (61)ಅನಾರೋಗ್ಯದಿಂದ ಶನಿವಾರ ನಿವಾಸದಲ್ಲಿ ನಿಧನರಾಗಿದ್ದಾರೆ.
ಮೃತರಿಗೆ ಪತ್ನಿ ಕಾಳಮ್ಮ ಇಬ್ಬರು ಪುತ್ರರು, ಪುತ್ರಿ ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯ ಕ್ರಿಯೆ ಗ್ರಾಮದ ರುದ್ರಭೂಮಿಯಲ್ಲಿ ಶನಿವಾರ ಮಧ್ಯಾಹ್ನ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಅಜ್ಜಪ್ಪ ಬಾಗಳಿ ಅವರು ವಿದ್ಯವಂತರಲ್ಲದಿದ್ದರೂ ಸಹ ಬಾಲ್ಯದಿಂದಲೇ ರಂಗ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಗುರುಗಳಾದ ಚಿಗಟೇರಿ ಕೊಟ್ರಪ್ಪಯ್ಯ ಗವಾಯಿಗಳ ಆತ್ಮೀಯ ಶಿಷ್ಯರಾಗಿ ತಬಲವಾದಕರು, ಹಾಡುಗಾರಿಕೆ ಉತ್ತಮ ಅಭಿನಯ ಹೊಂದಿದ್ದರು.

ಗೋಣಿಬಸವೇಶ್ವರ ನಾಟಕದಲ್ಲಿ ಶಿವನಯ್ಯನ , ಸಂಗ್ಯಬಾಳ್ಯ, ಗೀಗಿಪದ, ಸೇರಿದಂತೆ ನಾಟಕ, ಯಕ್ಷಗಾನದಲ್ಲಿ ಅಭಿನಯಿಸಿದ್ದು. ಹಲವಾರು ಕಡೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟಿದ್ದಾರೆ. ಇವರಿಗೆ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಪ್ರಶಸ್ತಿಗಳು ಲಭಿಸಿವೆ.

ಸಂತಾಪ

ಶ್ರೀ ವಿಶ್ವಕಲಾ ರೈತ ನಾಟ್ಯಸಂಘ, ಕನಕೇಶ್ವರ ಯುವಕ ಕಲಾ ಸಂಘದ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

ನಲವಡಿ ಬಳಿ ಟ್ರಾಕ್ಟರ್, ಲಾರಿ ಮಧ್ಯೆ ಭೀಕರ ಅಫಘಾತ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಟ್ರ್ಯಾಕ್ಟರ್ ಗೆ ಲಾರಿಯೊಂದು ಡಿಕ್ಕಿ ಹೊಡೆದಿದ್ದರಿಂದ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಅಣ್ಣಿಗೇರಿ ತಾಲೂಕಿನ ನಲವಡಿ ಟೋಲ್ ನಾಕಾ ಬಳಿ ನಡೆದಿದೆ.

ಘಟನೆಯಲ್ಲಿ ನಲವಡಿ ಗ್ರಾಮದ ಪ್ರಕಾಶ ಅಡವಿ (40) ಕಾರ್ತಿಕ (೧೪) ಮಹಾಂತೇಶ ನಲವಡಿ ಗಂಭೀರವಾಗಿ ಗಾಯಗೊಂಡಿದ್ದು, ಇನ್ಬೊಬ್ಬನ ಹೆಸರು ಗೊತ್ತಾಗಿಲ್ಲ.

ಬಿತ್ತನೆ ಮುಗಿಸಿ‌ ಮನೆಯತ್ತ ಹೊರಟಿದ್ದ ರೈತ, ತನ್ನ ಟ್ರಾಕ್ಟರ್ ಹೆದ್ದಾರಿಗೆ ಹತ್ತಿಸಿದ್ದೇ ತಡ ಹುಬ್ಬಳ್ಳಿಯಿಂದ ಗದಗನತ್ತ ಹೊರಟಿದ್ದ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಟ್ರಾಕ್ಟರ್ ಎರಡು ತುಂಡಾಗಿದೆ. ಅದರಲ್ಲಿದ್ದ ರೈತರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೃಶ್ಯ ನೆರದವರ ಕರುಳು ಹಿಂಡುವಂತೆ ಮಾಡಿತು. ಅಪಘಾತದ ಸುದ್ದಿ ತಿಳಿದ ಅಣ್ಣಿಗೇರಿ ಠಾಣೆಯ ಪಿಎಸ್ಐ ಲಾಲ್ ಸಾಬ್ ಜೂಲಕಟ್ಟಿ ಸ್ಥಳಕ್ಕೆ ಭೇಟಿ ನೀಡಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಿದರು. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಅಕ್ಕಿ ದಂಧೆ ಮಾಹಿತಿ ನೀಡಿದ್ದಕ್ಕೆ ಜೀವ ಬೆದರಿಕೆ ಹಾಕಿದ ಕಾಂಗ್ರೆಸ್ ಮುಖಂಡ

ವಿಜಯಸಾಕ್ಷಿ ಸುದ್ದಿ, ಗದಗ

ಇಲ್ಲಿನ ಶಿದ್ದರಾಮೇಶ್ವರ ನಗರದ ನಿವಾಸಿ ಮಂಜುನಾಥ್ ಈರನಗೌಡ ಬಾಣದ ಎಂಬಾತನಿಗೆ ಶ್ರೀಧರ ವಜ್ರಬಂಡಿ ಜೀವ ಬೆದರಿಕೆ ಹಾಕಿದ್ದಾನೆ.

ಎಪಿಎಂಸಿ ಯಾರ್ಡ್‌ನಿಂದ ವಾಪಸ್ ಮನೆಗೆ ಬರುವಾಗ ಬೈಕ್ ಅಡ್ಡಗಟ್ಟಿದ ಶ್ರೀಧರ ವಜ್ರಬಂಡಿ, ಮಂಜುನಾಥ್ ಬಾಣದ ಮೇಲೆ ಏಕಾಏಕಿ, ‘ನನ್ನ ಅಕ್ಕಿ ವ್ಯವಹಾರದ ಬಗ್ಗೆ ಯಾರಿಗೆ ಮಾಹಿತಿ ಹೇಳಿ ಹಿಡಸ್ತೀಯೆನ, ಕೇಸ್ ಮಾಡಸ್ತೀಯೇನ ಮಗನಾ….’ ಅನ್ನುತ್ತಾ ಅವಾಚ್ಯ ಶಬ್ದಗಳಿಂದ ಬೈದಾಡುತ್ತಿದ್ದಾಗ, ‘ನಾ ಯಾಕ ಯಾಕೋ ಅಣ್ಣ ಹಿಂಗ್ ಮಾತಾಡಕತ್ತಿಯಲ್ಲ, ಯಾವ ನಿಮ್ಮ ವ್ಯವಹಾರದ ಬಗ್ಗೆ ಯಾರ ಮಾತಾಡ್ಯಾರ? ಯಾಕ ನಿಮ್ಮ ವಿಷಯಕ್ಕ ಬರ್ಲಿ ಪಾ? ನಿಮ್ಮ ಅಕ್ಕಿ ವ್ಯವಹಾರಕ ನನಗ ಏನೂ ಸಂಬಂಧ ಇಲ್ಲ. ಯಾರ ನನ್ನ ಬಗ್ಗೆ ನಿನ್ನ ಮುಂದ ಸುಳ್ಳು ಹೇಳ್ಯಾರ. ನಾನ ಯಾಕ ಅಂತ ಕೆಲಸ ಮಾಡ್ಲಿ ಪಾ? ನಾನು ಅಂತಾದು ಏನೂ ಮಾಡಿಲ್ಲ’ ಅಂತ ಮಂಜು ಹೇಳಿದ.

ಶ್ರೀಧರ ವಜ್ರಬಂಡಿ ಮತ್ತೆ ಏರು ಧ್ವನಿಯಲ್ಲಿ, ‘ನನ್ನ ತಂಟೆಗೆ ಬಂದ್ರೆ ನಿನ್ನ ಜೀವ ಸಮೇತ ಬಿಡುವುದಿಲ್ಲ’ ಅಂತ ಧಮಕಿ ಹಾಕಿದ. ತಪ್ಪಿಸಿಕೊಳ್ಳಲು ಸಮೀಪವೇ ಇದ್ದ ಎಸ್ಪಿ ಕಚೇರಿ ಒಳಗೆ ಹೋದಾಗ, ‘ಇವತ್ತು ಉಳಕೊಂಡ ಮಗನಾ. ನಿನ್ನ ಜೀವ ಸಮೇತ ಬಿಡುವುದಿಲ್ಲ’ ಅಂತ ಧಮ್ಕಿ ಹಾಕಿರುವ ಶ್ರೀಧರ ವಜ್ರಬಂಡಿ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಮಂಜು ಬಾಣದ ದೂರು ನೀಡಿದ್ದಾರೆ. ಬೆಟಗೇರಿ ಬಡಾವಣೆ ಠಾಣೆಯಲ್ಲಿ ಐಪಿಸಿ 1860 (u/s-506,341, 504) ಕಲಂನಡಿ ಪ್ರಕರಣ ದಾಖಲಾಗಿದೆ.

ಕೊರೊನಾ; ಮತ್ತೆ ಶುಭ ಸುದ್ದಿ ನೀಡಿದ ಶುಕ್ರವಾರ, ಕುಸಿತ ಕಂಡ ಪಾಸಿಟಿವ್

0

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯ ಜನರಿಗೆ ಶುಕ್ರವಾರ ಶುಭದಿನವಾಗಿ ಪರಿಣಮಿಸಿದೆ. ಹೌದು ಕಳೆದ ಶುಕ್ರವಾರ ಶುಭ ಸುದ್ದಿ ನೀಡಿದ್ದ ಜಿಲ್ಲಾಡಳಿತ ಈ ಶುಕ್ರವಾರವೂ ಜಿಲ್ಲೆಯ ಜನರಿಗೆ ನೆಮ್ಮದಿ ‌ಮೂಡಿಸುವ ಮಾಹಿತಿ ನೀಡಿದೆ.

ಇಂದು 66 ಜನರಿಗೆ ಸೋಂಕು ತಗುಲಿದೆ. ಇಂದು ಜಿಲ್ಲಾಡಳಿತ ನೀಡಿದ ಮಾಹಿತಿ ಪ್ರಕಾರ ಮೂವರು ಮೃತಪಟ್ಟಿದ್ದಾರೆ.

ಇಂದು 66 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 25264 ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -46, ಮುಂಡರಗಿ-02, ನರಗುಂದ-03, ರೋಣ-07, ಶಿರಹಟ್ಟಿ-06, ಹೊರಜಿಲ್ಲೆಯ-02 ಸೇರಿದಂತೆ 66 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ಮೂವರು ಮೃತಪಟ್ಟಿದ್ದು, ಮೃತರ ಸಂಖ್ಯೆ 285 ಕ್ಕೇರಿದೆ.

ಜಿಲ್ಲೆಯ ಲಕ್ಷ್ಮೇಶ್ವರ ನಿವಾಸಿ 66 ವರ್ಷದ ಮಹಿಳೆ ಮೇ 30 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಜೂನ -09 ರಂದು ಮೃತಪಟ್ಟಿದ್ದಾರೆ.

ಜಿಲ್ಲೆಯ ಮುಂಡರಗಿಯ ಅಂಬೇಡ್ಕರ್ ನಗರ ನಿವಾಸಿ 65 ವರ್ಷದ ವ್ಯಕ್ತಿ ಜೂನ್- 09 ರಂದು ಜಿಮ್ಸ್ ‌ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ದೃಢಪಟ್ಟಿತ್ತು, ಜೂನ್ 09 ರಂದೇ ಮೃತಪಟ್ಟಿದ್ದಾರೆ.

ರೋಣ ತಾಲೂಕಿನ ಗೋಗೇರಿ ನಿವಾಸಿ 65 ವರ್ಷದ ವ್ಯಕ್ತಿ ಮೇ-24 ರಂದು ಜಿಮ್ಸ್ ಗೆ ದಾಖಲಾಗಿದ್ದರು. ಜೂನ್ -09 ರಂದು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇವರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ.

ಇಂದು 174 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 24034 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 945 ಸೋಂಕಿತರು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 98 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಪಿಎಸ್‌ಐ ವಿರುದ್ಧ ಆರೋಪ ಮಾಡಿದವರಿಗೆ ಎಚ್ಚರಿಕೆ ನೀಡಿದ ಜಿ.ಪಂ ಸದಸ್ಯ ಪಡಿಯಪ್ಪ

ವಿಜಯಸಾಕ್ಷಿ ಸುದ್ದಿ, ರೋಣ

ಪಿಎಸ್‌ಐ ವಿನೋದ ಪೂಜಾರ್ ಅವರು ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿದ್ದು, ಅಂಥವರ ವಿರುದ್ಧ ಬಿಜೆಪಿ ಕಾರ್ಯಕರ್ತನೆಂದು ಆರೋಪ ಮಾಡಿದ್ದು ಸರಿಯಲ್ಲ ಎಂದು ಬಿಜೆಪಿ ಘಟಕದ ಎಸ್ಸಿ ಮೋರ್ಚಾ ಅಧ್ಯಕ್ಷ, ಜಿ.ಪಂ. ಸದಸ್ಯ ಪಡಿಯಪ್ಪ ಪೂಜಾರ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಪಿಎಸ್‌ಐ ವಿನೋದ ಪೂಜಾರ ಅವರ ದಕ್ಷತೆ ಪ್ರಶ್ನಾತೀತ. ಅವರು ಬಿಜೆಪಿ ಮುಖಂಡರ ಬೈಕ್‌ಗಳನ್ನು ಹಿಡಿದು ದಂಡ ಹಾಕಿದ ಉದಾಹರಣೆಗಳು ಸಾಕಷ್ಟಿವೆ. ಇದನ್ನು ಆರೋಪ ಮಾಡುವವರು ಅರ್ಥ ಮಾಡಿಕೊಳ್ಳಬೇಕು. ಹನುಮಂತ ಚಲವಾದಿ ಹಾಗೂ ಮುತ್ತು ನಂದಿ ಎಲ್ಲ ವಿಷಯಗಳಿಗೆ ಬಿಜೆಪಿಯನ್ನು ಎಳೆದು ತರುವುದನ್ನು ನಿಲ್ಲಿಸಬೇಕು. ಇದು ಅವರಿಗೆ ನೀಡುವ ಕೊನೆಯ ಎಚ್ಚರಿಕೆಯಾಗಿದೆ ಎಂದರು.

ಲಾಕ್‌ಡೌನ್ ಸಂದರ್ಭದಲ್ಲಿ ನಾಗರಿಕರ ಜೀವ ರಕ್ಷಿಸಲು ದಿನದ 24 ಘಂಟೆಗಳ ಕಾಲ ಸೇವೆಯನ್ನು ಸಲ್ಲಿಸಿರುವ ಪಿಎಸ್‌ಐ ವಿರುದ್ಧ ನಿರಾಧಾರ ಆರೋಪ ಮಾಡಿರುವುದು ಸಮಂಜಸವಲ್ಲ. ಓರ್ವ ಅಧಿಕಾರಿಯ ವಿರುದ್ಧ ಪಕ್ಷವನ್ನು ಎಳೆದು ತಂದಿರುವುದು ಉಚಿತವಲ್ಲ. ಪಿಎಸ್‌ಐ ವಿನೋದ ಪೂಜಾರ ಅವರು ಬಡವರಿಗೆ ಹಾಗೂ ನಿರ್ಗತಿಕರಿಗೆ ಸಹಾಯಹಸ್ತ ಚಾಚಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಮುಂದಾದರೂ ಹನುಮಂತ ಚಲವಾದಿ ಹಾಗೂ ಮುತ್ತು ನಂದಿ ಇಂತಹ ಹೇಳಿಕೆಯಿಂದ ದೂರ ಸರಿಯಬೇಕು. ಇಲ್ಲದಿದ್ದರೆ ಕ್ರಮ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಇದನ್ನೂ ಓದಿ ಬಿಜೆಪಿ ಕಾರ್ಯಕರ್ತರಂತೆ ವರ್ತಿಸುವ ಪಿಎಸ್ಐ; ಬಡವರಿಂದ ಹಫ್ತಾ ವಸೂಲಿ ಆರೋಪ

ಮಲ್ಲು ಮಾದರ ಮಾತನಾಡಿ, ವಿನೋದ ಪೂಜಾರ ಅವರಂತಹ ನಿಷ್ಠಾವಂತ ಅಧಿಕಾರಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದು ಖಂಡನೀಯ. ಮುಖ್ಯವಾಗಿ ಪಿಎಸ್‌ಐ ಅವರು ತಮ್ಮ ಕರ್ತವ್ಯವನ್ನು ಯಾರ ಭಯವಿಲ್ಲದೆ ನಿಭಾಯಿಸುತ್ತಿದ್ದಾರೆ. ಯಾವತ್ತಿಗೂ ಅವರು ಯಾರನ್ನೂ ರಾಜಕೀಯ ಕ್ಷೇತ್ರದಿಂದ ಗುರುತು ಮಾಡಿಲ್ಲ. ಲಾಕ್‌ಡೌನ್ ಸಂದರ್ಭದಲ್ಲಿ ನಾಗರಿಕ ಸಮುದಾಯದ ಆರೋಗ್ಯದ ದೃಷ್ಟಿಯಿಂದ ಅವರು ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಾರೆ ಎಂದರು.

ಪರಸಪ್ಪ ಪೂಜಾರ, ಶರಣು ಚಲವಾದಿ, ಶೇಖಪ್ಪ ಮಾದರ, ಮುದಿಯಪ್ಪ ದಾನಿ, ಮುತ್ತಪ್ಪ ಪೂಜಾರ, ಮುತ್ತಪ್ಪ ಜೋಗಣ್ಣವರ, ನಿಂಗಪ್ಪ ಮಾದರ, ಮಂಜು ಚಲವಾದಿ, ಯಲ್ಲಪ್ಪ ಚಲವಾದಿ, ಮೈಲಾರಪ್ಪ ಮಾದರ ಉಪಸ್ಥಿತರಿದ್ದರು.

ಆಹಾರ ಇಲಾಖೆ ಅಧಿಕಾರಿಗಳ ದಾಳಿ; 600 ಕ್ವಿಂಟಲ್ ಅನ್ನಭಾಗ್ಯ ಅಕ್ಕಿ ವಶ

ವಿಜಯಸಾಕ್ಷಿ ಸುದ್ದಿ, ಗದಗ

ಸರಕಾರ ಬಡವರಿಗೆ ಹಂಚಿಕೆ ಮಾಡಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಶೆಡ್ ಒಂದರ ಮೇಲೆ ಅಹಾರ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ರವಿಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ‌ ಮಾಡಿದ್ದು, ಅಪಾರ ಪ್ರಮಾಣದ ಅಕ್ಕಿ ವಶಪಡಿಸಿಕೊಂಡಿದೆ.

ಜಿಲ್ಲೆಯ ಗಜೇಂದ್ರಗಡದ ಗುಡ್ಡದ ಹಿಂಭಾಗದಲ್ಲಿ ಇರುವ ಜಮೀನೊಂದರ ಶೆಡ್‌ನಲ್ಲಿ ಅಕ್ರಮವಾಗಿ ಅಕ್ಕಿ ಸಂಗ್ರಹಿಸಿದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.ರಾಜೂರ ಗ್ರಾ.ಪಂ. ವ್ಯಾಪ್ತಿಗೆ ಬರುವ ಈ ಜಮೀನಿನಲ್ಲಿ ಇರುವ ಶೆಡ್ ಬಾಡಿಗೆ ರೂಪದಲ್ಲಿ ಪಡೆಯಲಾಗಿತ್ತು.

ಶುಕ್ರವಾರ ಬೆಳಗ್ಗೆ ಆಹಾರ ಇಲಾಖೆಯ ಉಪ ನಿರ್ದೇಶಕ ರವಿಕುಮಾರ್, ಗಜೇಂದ್ರಗಡ ತಹಸೀಲ್ದಾರ ಅಶೋಕ ಕಲಘಟಗಿ, ಆಹಾರ‌ ನಿರೀಕ್ಷಕ ಮಂಜುನಾಥ್ ತಳ್ಳಿಹಾಳ, ಪಿಎಸ್ಐ ಗುರುಶಾಂತ ದಾಸ್ಯಾಳ ಕಾರ್ಯಚರಣೆಯಲ್ಲಿದ್ದರು. ದಾಳಿಯ ಕಾಲಕ್ಕೆ 600 ಕ್ವಿಂಟಲ್ ಅಕ್ಕಿ ಜಪ್ತಿಯಾಗಿದ್ದು, ಇದರ ರೂವಾರಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಶಾಸಕರ ಬಲಗೈ ಬಂಟ ಶಾಮೀಲು?

ಗಜೇಂದ್ರಗಡದಲ್ಲಿ ಈ ಹಿಂದೆಯೂ ಅನ್ನಭಾಗ್ಯದ ಅಕ್ಕಿ ಸಿಕ್ಕಿತ್ತು. ಆಗ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದ್ದರು. ಅನ್ನಭಾಗ್ಯ ಅಕ್ಕಿ ದಂಧೆಯಲ್ಲಿ ಶಾಸಕರ ಹಿಂಬಾಲಕರೇ ಇದ್ದಾರೆ. ನಿಷ್ಪಕ್ಷಪಾತ ತನಿಖೆ ನಡೆಸಿ ಎಂದು ಒತ್ತಾಯಿಸಿದ್ದರು. ಆದರೆ, ಸರಕಾರ, ಅಧಿಕಾರಿಗಳು ಪ್ರಕರಣವನ್ನು ಯಾವ ರೀತಿ ತನಿಖೆ ನಡೆಸಿದರು ಅಂತ ಬಹಿರಂಗವಾಗಲೇ ಇಲ್ಲ.

ಗಜೇಂದ್ರಗಡದಲ್ಲಿ ಕಾಳು-ಕಡಿ ತುಂಬುವ ಅಳಿಯ- ಮಾವನೇ ಅಕ್ಕಿಯ ಅಕ್ರಮ ಸಂಗ್ರಹ ಮಾಡುವ ಕಸುಬುದಾರರು. ಮೂಲಗಳ ಪ್ರಕಾರ ಶಾಸಕರ ಬಲಗೈ ಬಂಟನೇ ಈ ದಂಧೆಯೆ ರೂವಾರಿ ಎಂದು ಹೇಳಲಾಗುತ್ತಿದ್ದು, ಈ ಹಿಂದೆ ಕಾಂಗ್ರೆಸ್ ಮುಖಂಡರು ದಂಧೆ ಬಯಲಿಗೆ ತಂದ ಮೇಲೆ ಮೂರು ತಿಂಗಳು ಬಂದ್ ಆಗಿತ್ತು. ಆನಂತರ ಈ ಹೊಸ ಜಾಗೆ ಪಡೆದು ಮತ್ತೆ ದಂಧೆ ಆರಂಭಿಸಿದ್ದರು. ದಂಧೆ ನಡೆಸುವ ಮೊದಲೇ ಅಧಿಕಾರಿಗಳನ್ನು ಬುಕ್ ಮಾಡಿಕೊಳ್ಳುತ್ತಾರೆ ಎಂಬ ಆರೋಪ ಸಾರ್ವಜನಿಕರದು. ಈ ಆರೋಪಕ್ಕೆ ಪುಷ್ಟಿ ಶುಕ್ರವಾರದ ಕಾರ್ಯಚರಣೆ.

ಗದಗನ ಅಧಿಕಾರಿಗಳು ಬಂದು ದಾಳಿ ಮಾಡುವುದಾದರೆ ಸ್ಥಳೀಯ ಆಹಾರ ಇಲಾಖೆಯ ಅಧಿಕಾರಿಗಳಿಗೆ ಈ ವಿಷಯ ಗೊತ್ತಿರಲಿಲ್ಲವೇ ಎಂಬ ಪ್ರಶ್ನೆ ಎದುರಾಗಿದೆ.
ಆಹಾರ ಇಲಾಖೆ ಅಧಿಕಾರಿಗಳಿಗೆ ಖಚಿತ ಮಾಹಿತಿಯನ್ನು ಕೊಟ್ಟವರು ಯಾರು ಎನ್ನುವ ಪ್ರಶ್ನೆ ಮೂಡಿದೆ. ಗದಗನ ಕಾಂಗ್ರೆಸ್ ‌ಮುಖಂಡ, ಅಕ್ಕಿ ದಂಧೆಕೋರನೇ ರೇಡ್ ಮಾಡಿಸಿರಬಹುದು ಎಂಬ ಸುದ್ದಿಯೂ ಹರಡಿದೆ. ಸಿಕ್ಕ ಅಕ್ಕಿ, ಇದರಲ್ಲಿ ಪಾಲ್ಗೊಂಡ ದಂಧೆಕೋರರ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಜನರ ಮುಂದೆ ಸತ್ಯಾಂಶ ಬಿಚ್ಚಿಡುವ ಹೊಣೆಗಾರಿಕೆ ಜಿಲ್ಲಾಡಳಿತಕ್ಕಿದೆ.

ಗದಗ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಪಾಸಿಟಿವಿಟಿ ದರ ಕಡಿಮೆ ಇದ್ದರೂ ಪಕ್ಕದಲ್ಲಿದೆ ಅಪಾಯ ಹುಷಾರ್!

ವಿಜಯಸಾಕ್ಷಿ ಸುದ್ದಿ, ಗದಗ

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೊರೊನಾ ಹತೋಟಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ, ಅನ್ ಲಾಕ್ ಮಾಡಿ ಆದೇಶ ಹೊರಡಿಸಿದೆ. ಈ ಸಾಲಿಗೆ ಗದಗ ಜಿಲ್ಲೆ ಕೂಡ ಇದ್ದು ಜೂ. 14ರಿಂದ ಅನ್ ಲಾಕ್ ಆಗಲಿದೆ.

ಸರ್ಕಾರ ಇಲ್ಲಿಯವರೆಗೆ ಶೇ. 5ರಷ್ಟು ಪಾಸಿಟಿವಿಟಿ ಬಂದರೆ ಮಾತ್ರ ಲಾಕ್ ಡೌನ್ ತೆರವುಗೊಳಿಸಲಾಗುವುದು ಎಂದು ಹೇಳಿತ್ತು. ಆದರೆ, ತಾಲೂಕುವಾರು ಗಮನಿಸದೆ, ಜಿಲ್ಲಾವಾರು ಸೋಂಕಿತರ ಸಂಖ್ಯೆ ಕಡಿಮೆ ಇರುವ 19 ಜಿಲ್ಲೆಗಳಲ್ಲಿ ಅನ್ ಲಾಕ್ ಮಾಡಿದೆ. ಅಲ್ಲದೇ, ಸೋಂಕು ಹೆಚ್ಚಿರುವ 11 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಸಿದೆ.

ಗದಗ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಕಡಿಮೆ ಇರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳನ್ನು ನೋಡುವುದಾದರೆ ಗದಗ ತಾಲೂಕಿನಲ್ಲಿ ಶೇ. 4.41, ರೋಣ ಶೇ. 5.75, ಮುಂಡರಗಿ ಶೇ. 2.81, ಶಿರಹಟ್ಟಿಯಲ್ಲಿ ಶೇ. 4.47ರಷ್ಟು ಪಾಸಿಟಿವಿಟಿ ದರವಿದೆ. ಆದರೆ, ನರಗುಂದ ತಾಲೂಕಿನಲ್ಲಿ ಮಾತ್ರ ಪಾಸಿಟಿವಿಟಿ ದರ ಶೇ. 5ಕ್ಕಿಂತ ಹೆಚ್ಚಾಗಿದೆ. ಅಲ್ಲಿ ಶೇ. 5.75ರಷ್ಟು ಪಾಸಿವಿಟಿ ದರ ಹೆಚ್ಚಾಗಿದೆ.

ಜಿಲ್ಲೆಯ ಸುತ್ತಮುತ್ತಲಿನ ತಾಲೂಕುಗಳನ್ನು ಗಮನಿಸುವಾದರೆ, ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ಶೇ. 2.46 ರಷ್ಟು ಪಾಸಿಟಿವಿಟಿ ದರ ಇದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ಶೇ. 5.76ರಷ್ಟು, ಕುಷ್ಟಗಿಯಲ್ಲಿ ಶೇ. 10.34ರಷ್ಟು, ಯಲಬುರ್ಗಾದಲ್ಲಿ ಶೇ. 5.1ರಷ್ಟು, ಕೊಪ್ಪಳ ತಾಲೂಕಿನಲ್ಲಿ ಶೇ. 4.8ರಷ್ಟು, ಹಡಗಲಿಯಲ್ಲಿ ಶೇ. 6.77ರಷ್ಟು, ಹಾವೇರಿ ತಾಲೂಕಿನಲ್ಲಿ ಶೇ. 2.6ರಷ್ಟು, ಸವಣೂರ ತಾಲೂಕಿನಲ್ಲಿ ಶೇ. 2.5ರಷ್ಟು ಪಾಸಿಟಿವಿಟಿ ದರವಿದೆ.

ಸರ್ಕಾರ ಅನ್ ಲಾಕ್ ಮಾಡಿದೆ ಎಂದು ಜಿಲ್ಲೆಯ ಜನ ಮೈಮರತೆರೆ ಸುತ್ತಮುತ್ತಲಿನ ತಾಲೂಕಿನಿಂದ ಕೊರೊನಾ ಹರಡುವ ಸಾಧ್ಯತೆ ಇದೆ. ಹೀಗಾಗಿ ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.

error: Content is protected !!