ಪರನಾರಿ ಜೊತೆ ನನ್ನ ಪತಿ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ಸಣ್ಣನೀರಾವರಿ ಇಲಾಖೆಯ ಅಧಿಕಾರಿಯ ಪತ್ನಿ ರಂಪಾಟ ನಡೆಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ನಗರದ ಕುಷ್ಟಗಿ ಸರ್ಕಲ್ ಬಳಿಯ ಸಣ್ಣನೀರಾವರಿ ಇಲಾಖೆಯ ಅಧಿಕಾರಿ ವಿನೋದ್ ಕುಮಾರ್ ಗುಪ್ತಾ ಪರ ಸ್ತ್ರೀಯೊಂದಿಗೆ ಮನೆಯಲ್ಲಿದ್ದಾಗ ಗುಪ್ತಾಳ ಪತ್ನಿ ಹಾಗೂ ಮಕ್ಕಳು ದಾಳಿ ಮಾಡಿದ್ದಾರೆ. ಇದೇ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಬಿದ್ದ ವಿನೋದ್ ಕುಮಾರ್ ಗುಪ್ತಾ ಹಾಗೂ ಪರನಾರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಗುಪ್ತಾಳ ಪತ್ನಿ ಹಾಗೂ ಅನೈತಿಕ ಸಂಬಂಧ ಹೊಂದಿದ ಮಹಿಳೆ ಮನೆಯೊಳಗೆ ಕೈ ಕೈ ಮಿಲಾಯಿಸಿದ್ದು, ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆ ವಿಷಯ ತಿಳಿದ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸದ್ಯ ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರಕರಣ ಇದೀಗ ಕೊಪ್ಪಳ ನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಗದಗ-ಬೆಟಗೇರಿ ನಗರದಲ್ಲಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಮೂರು ಅಂತಸ್ಥಿನ ವಾಣಿಜ್ಯ ಕಟ್ಟಡ ನಿರ್ಮಿಸಲಾಗುತ್ತಿದ್ದು, ಬಹುತೇಕ ಕಟ್ಟಡ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ನಗರದ ಪಾಲಾ ಬದಾಮಿ ರಸ್ತೆಯ ಪಕ್ಕದ ರಿಜಿಸ್ಟರ್ ಸರ್ವೆ ನಂಬರ್ 6706/75ಎ ದಿಂದ 22/2ಎ1 ನೇದ್ದರಲ್ಲಿ ಮೂರು ಅಂತಸ್ಥಿನ ವಾಣಿಜ್ಯ ಕಟ್ಟಡ ಕಟ್ಟಲಾಗುತ್ತಿದೆ. ದಲಿಚಂದ ಮೇಘರಾಜ ಕೋಠಾರಿ ಸೇರಿ 31 ಮಾಲೀಕರ ಸಹಭಾಗಿತ್ವದಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ. ಕಟ್ಟಡ ನಿರ್ಮಾಣಕ್ಕೆ ನಗರಸಭೆ ಪೌರಾಯಕ್ತರು ಅಕ್ಟೋಬರ್ 2015ರಲ್ಲಿಯೇ ಅನುಮತಿ ನೀಡಿದ್ದಾರೆ.
ತೆರವಿಗೆ ಮನವಿ
ಸದ್ಯ ನಿರ್ಮಾಣವಾಗುತ್ತಿರುವ ವಾಣಿಜ್ಯ ಕಟ್ಟಡದ ಮೂಲ ಜಾಗೆಯಲ್ಲಿ ಬಾವಿಯೊಂದಿತ್ತು. ಆದರೆ, ಆ ಬಾವಿಯನ್ನು ಮುಚ್ಚಿ ಅದರ ಮೇಲೆ ಕಟ್ಟಡ ಕಟ್ಟಿದ್ದಾರೆ. ನಿಯಮ ಬಾಹಿರವಾಗಿ ಕಟ್ಟಿರುವ ಈ ಕಟ್ಟಡವನ್ನು ತೆರುವುಗೊಳಿಸುವಂತೆ ಹೋರಾಟಗಾರ ವೆಂಕನಗೌಡ ಗೋವಿಂದಗೌಡರ ನಗರಸಭೆ ಪೌರಾಯುಕ್ತರಿಗೆ ಮನವಿ ಮಾಡಿದ್ದಾರೆ.
ವಾಣಿಜ್ಯ ಕಟ್ಟಡವನ್ನು ಎರಡು ವರ್ಷಗಳಿಂದ ನಿರ್ಮಾಣ ಮಾಡಲಾಗುತ್ತಿದೆ. ಕಟ್ಟಡ ಕಟ್ಟುತ್ತಿರುವ ಸ್ಥಳದಲ್ಲಿ ಎರಡು ಬಾವಿಗಳಿದ್ದು, ಅವೆರಡೂ ಬಾವಿಗಳಲ್ಲಿ ನೀರು ತುಂಬಿತ್ತು. ಅದರಲ್ಲಿ ಸ್ಥಳೀಯರು ಈಜಾಡುತ್ತಿದ್ದರಲ್ಲದೆ, ಅದೇ ನೀರನ್ನು ಕುಡಿಯಲು ಬಳಸುತ್ತಿದ್ದರು. ಕಟ್ಟಡ ನಿರ್ಮಾಣ ಮಾಡಬೇಕೆಂದು ತೀರ್ಮಾನಿಸಿದ ಮೇಲೆ ಎರಡು ಬಾವಿಗಳನ್ನು ನೆಲಸಮಗೊಳಿಸಿ, ಮಣ್ಣು ತುಂಬಿ ಅವುಗಳ ಮೇಲೆಯೇ ಕಟ್ಟಡದ ಪಿಲ್ಲರ್‌ಗಳನ್ನು ನಿರ್ಮಿಸಿದ್ದಾರೆ. ಒಂದು ವೇಳೆ ಕಟ್ಟಡ ಕುಸಿದು ಅವಘಡ ಸಂಭವಿಸಿದರೆ ಯಾರು ಹೊಣೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಾರ್ಕಿಂಗ್ ಜಾಗದಲ್ಲೂ ಕಟ್ಟಡ
ಕಟ್ಟಡದ ಆವರಣದಲ್ಲಿ ವಾಹನಗಳಿಗಾಗಿ ನಿಲುಗಡೆ ವ್ಯವಸ್ಥೆ ಮಾಡದೆ ಪಾರ್ಕಿಂಗ್ ಜಾಗದಲ್ಲಿ ಕಟ್ಟಡ ಕಟ್ಟಿದ್ದಾರೆ. ಪಾಲಾ-ಬಾದಾಮಿ ಮುಖ್ಯ ರಸ್ತೆಯನ್ನೂ ಅತಿಕ್ರಮಣ ಮಾಡಿದ್ದಾರೆ ಎನ್ನಲಾಗುತ್ತಿದೆ. ಕಣ್ಣು ಮುಂದೆ ಇಷ್ಟೆಲ್ಲ ನಡೆಯುತ್ತಿದ್ದರೂ ಅಧಿಕಾರಿಗಳು ನೆಪಮಾತ್ರಕ್ಕೆ ನೋಟಿಸ್ ನೀಡಿ ಕೈ ಕಟ್ಟಿ ಕುಳಿತಿರುವುದು ವಿಪರ್ಯಾಸ. ಕಳೆದ ಸೆಪ್ಟಂಬರ್‌ನಲ್ಲಿಯೇ ನೀಡಿರುವ ಅಧಿಕಾರಿಗಳ ನೋಟಿಸ್‌ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದಾಗಿದೆ. ಮುಂದೊಂದು ದಿನ ಅಮಾಯಕ ಜನರ ಬಲಿ ತೆಗೆದುಕೊಳ್ಳಲು ಅಧಿಕಾರಿಗಳು ರಣ ಹದ್ದಿನಂತೆ ಕಾದು ಕುಳಿತಂತೆ ಕಾಣಿಸುತ್ತಿದೆ.
ಪ್ರಭಾವಿಗಳ ಕೈವಾಡ
ಕಟ್ಟಡ ನಿರ್ಮಾಣ ಮತ್ತು ಅನುಮತಿಯಲ್ಲಿ ಅಧಿಕಾರಿಗಳು, ಕೆಲ ಪ್ರಭಾವಿ ರಾಜಕಾರಣಿಗಳೂ ಮಾಲೀಕರ ಜೊತೆ ಸೇರಿ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂಬ ಆರೋಪಗಳಿವೆ.
ದುರಂತ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಿ
ಭ್ರಷ್ಟ ಅಧಿಕಾರಗಳಿಂದಾಗಿ ಕಳೆದ ವರ್ಷ ಧಾರವಾಡದಲ್ಲೂ ಇದೇ ರೀತಿ ಅಕ್ರಮವಾಗಿ ಕಟ್ಟಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಸಂಬಂಧಿಯೊಬ್ಬರಿಗೆ ಸೇರಿದ್ದ ನಿರ್ಮಾಣ ಹಂತದ ಬಹುಮಹಡಿ ಕಟ್ಟಡ ಕುಸಿದು ಬಿದ್ದಿತ್ತು. ಈ ಕಟ್ಟಡ ದುರಂತದಲ್ಲಿ ಸಾಕಷ್ಟು ಸಾವುನೋವು ಸಂಭವಿಸಿದ್ದವು. ಸುಮಾರು 19 ಜನ ಅಮಾಯಕರು ಪ್ರಾಣ ತೆತ್ತಿದ್ದರು. ಅದೆಷ್ಟೋ ಜನರು ಗಂಭೀರ ಗಾಯಗೊಂಡು ಶಾಶ್ವತವಾಗಿ ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ.
ಸಂಬಂಧಿಸಿದ ಮಾಲೀಕರಿಗೆ ಎರಡು ನೋಟಿಸ್ ನೀಡಲಾಗಿದೆ. ಕಟ್ಟಡದ ಕುರಿತು ವ್ಯಾಪಕ ಪ್ರಚಾರವೂ ಆಗಿದ್ದು, ಜನರಲ್ಲೂ ಅಧಿಕಾರಿಗಳು ಏನು ಮಾಡ್ತಾರೆ ಎಂಬ ಕುತೂಹಲವೂ ಹೆಚ್ಚಿದೆ. ಹಾಗಾಗಿ ಹೇಳುವುದಕ್ಕಿಂತ ಕೆಲಸ ಮಾಡಿ ತೋರಿಸುವುದೇ ಲೇಸು. ಖಂಡಿತ ಕ್ರಮ ಕೈಗೊಳ್ಳುತ್ತೇನೆ.
ವಿಜಯಸಾಕ್ಷಿ ಸುದ್ದಿ, ಬೀದರ್: ಜಿಲ್ಲೆಯ ಬಸವಕಲ್ಯಾಣದಲ್ಲಿ ಇಂದು ಅನುಭವ ಮಂಟಪ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದರು.
ಬಸವಕಲ್ಯಾಣದಲ್ಲಿ ನಡೆದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಬಸವಣ್ಣನ ಭಾವಚಿತ್ರಕ್ಕೆ ಯಡಿಯೂರಪ್ಪ ಪುಷ್ಪಾರ್ಚನೆ ಮಾಡಿದ ಬಳಿಕ ಗುದ್ದಲಿ ಪೂಜೆ ನೆರವೇರಿಸಿದರು.
ಸಿಎಂ ಯಡಿಯೂರಪ್ಪ ಅವರ ಜೊತೆ ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಕೆ.ಸುಧಾಕರ, ಪ್ರಭು ಚೌಹಾಣ್, ಎಂಪಿ ಭಗವಂತ ಖೂಬಾ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಪೂಜ್ಯ ಬಸವಲಿಂಗ ಪಟ್ಟದ್ದೇವರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಮನೆ ಮುಂದೆ ಕಟ್ಟಿದ್ದ ಟಗರು ಮರಿಯನ್ನು ಬಿಚ್ಚಿಕೊಂಡು ಹೋಗುತ್ತಿರುವುದನ್ನು ಕೇಳಿದ್ದಕ್ಕೆ, ಚಾಕುವಿನಿಂದ ಚುಚ್ಚುವುದಾಗಿ ಹೆದರಿಸಿ ಟಗರು ಮರಿ ಕದ್ದೊಯ್ಯಲು ಯತ್ನಿಸಿ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದ ಘಟನೆ ಮುಂಡರಗಿ ತಾಲ್ಲೂಕಿನ ಹೊಸ ಡಂಬಳದಲ್ಲಿ ನಡೆದಿದೆ.
ಹುಬ್ಬಳ್ಳಿಯ ಸೆಟ್ಲ್ ಮೆಂಟ್ ನಿವಾಸಿಗಳಾದ ಶಿವಾಜಿ ರಾಮು ಮುಳಗುಂದ, ಶ್ರೀನಿವಾಸ್ ಮಲ್ಲಪ್ಪ ರಾಮಗಿರಿ, ಚಂದ್ರಶೇಖರ್ ದುರಗಪ್ಪ ಬಳ್ಳಾರಿ ಹಾಗೂ ನೂಲ್ವಿ ಗ್ರಾಮದ ವೀರೇಶ್ ಸಿದ್ದಪ್ಪ ಎಂಬುವವರೇ ಸದ್ಯ ಪೊಲೀಸರ ಅತಿಥಿಗಳಾಗಿದ್ದಾರೆ.
ಈ ನಾಲ್ವರು ಹೊಸ ಡಂಬಳದ ರಾಮಪ್ಪ ಮಲ್ಲಪ್ಪ ಹೊಸಳ್ಳಿಯವರ ಮನೆ ಮುಂದೆ ಕಟ್ಟಿದ್ದ ಟಗರು ಬಿಚ್ಚಿಕೊಂಡು ಹೋಗುತ್ತಿದ್ದರು. ಈ ವೇಳೆ ರಾಮಪ್ಪ ಬಿಚ್ಚಿಕೊಂಡು ಹೋಗದಂತೆ ತಡೆಯೊಡ್ಡಿದ್ದು, ಆರೋಪಿಗಳು ಬಿಡದಿದ್ದರೆ ಚಾಕುವಿನಿಂದ ಚುಚ್ಚಿ ಟಗರು ಮರಿ ಕೊಂಡೊಯ್ಯುವುದಾಗಿ ಹೆದರಿಸಿ ಕಾರಿನಲ್ಲಿ ಹೊತ್ತೊಯ್ಯುತ್ತಿರುವಾಗ ಅಲ್ಲೇ ಇದ್ದ ಸ್ಥಳೀಯರು ಆರೋಪಿಗಳನ್ನು ಪೊಲೀಸರಿಗೆ ಹಿಡಿದು ಒಪ್ಪಿಸಿದ್ದಾರೆ.
ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಬ್ಯಾಗಿನಲ್ಲಿದ್ದ ಹಣ, ಎರಡು ಬ್ಯಾಂಕ್ ಪಾಸ್ ಬುಕ್, ಐಡಿ ಕಾರ್ಡ್ ದೋಚಿಕೊಂಡು ಹೋಗಿರುವ ಘಟನೆ ಜಿಲ್ಲೆಯ ನರಗುಂದ ಬಸ್ ನಿಲ್ದಾಣದಲ್ಲಿ ನಡೆದಿದೆ.
ರಾಮದುರ್ಗ ತಾಲ್ಲೂಕಿನ ತೋರಣಗಟ್ಟಿ ಗ್ರಾಮದ ನಿವೃತ್ತ ಪೊಲೀಸ್ ಅಧಿಕಾರಿ ಸಿದ್ದಲಿಂಗಪ್ಪ ದೊಡ್ಡಸಿದ್ದಪ್ಪ ಇಮಡಿ ಎಂಬುವವರು ಬ್ಯಾಗ್ ನಲ್ಲಿದ್ದ ನಗದು ಕಳೆದುಕೊಂಡಿದ್ದಾರೆ.
ಸಿದ್ದಲಿಂಗಪ್ಪ ತಮ್ಮೂರು ತೋರಣಗಟ್ಟಿಗೆ ಹೋಗಲು ನರಗುಂದ ಬಸ್ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ನರಗುಂದ-ಮುನವಳ್ಳಿ ಬಸ್ ಹತ್ತುತ್ತಿದ್ದಾಗ ಎಡಗಡೆ ಹೆಗಲಿಗೆ ಹಾಕಿದ್ದ ಬ್ಯಾಗಿನಲ್ಲಿದ್ದ ಹಣವನ್ನು ಕಳ್ಳತನ ಮಾಡಿದ್ದಾರೆ.
ಬ್ಯಾಗಿನಲ್ಲಿದ್ದ 21 ಸಾವಿರ ರೂ. ನಗದು, ವಿಜಯಾ ಹಾಗೂ ಕೆವ್ಹಿಜಿ ಬ್ಯಾಂಕ್ ಪಾಸ್ ಬುಕ್, ಓಟರ್ ಐಡಿ, ಪಾನ್ ಕಾರ್ಡ್ ಕಳ್ಳತನವಾಗಿವೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಕೋವಿಡ್-19 ಮಾರಕ ವೈರಸ್ ಇನ್ನೂ ಅಂತ್ಯ ಕಂಡಿಲ್ಲ. ಹಾಗಾಗಿ ಈ ನಾಡಿನ ಭಕ್ತಿ ಸಾಗರ ಒಂದೆಡೆ ಸೇರುವುದು ಸರಿಯಲ್ಲ. ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆ ನಡೆಯುವುದು ಬೇಡ. ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಸಂಕ್ಷಿಪ್ತವಾಗಿ ನಡೆಯಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಕುಷ್ಟಗಿ ಶಾಸಕ ಅಮರೇಗೌಡ ಭಯ್ಯಾಪುರ ಹೇಳಿದರು.
ಕೊಪ್ಪಳದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗವಿಮಠದದ ಜಾತ್ರೆ ಅತೀ ದೊಡ್ಡ ಜಾತ್ರೆ. ಲಕ್ಷಾಂತರ ಜನ ಸೇರುತ್ತಾರೆ. ಆದರೆ ಈಗ ಸಂದರ್ಭ ಸರಿಯಿಲ್ಲ. ಜಿಲ್ಲಾಧಿಕಾರಿಗಳ ನಿಲುವನ್ನು ನಾನು ಬೆಂಬಲಿಸುತ್ತೇನೆ. ಜಾತ್ರೆ ವಿಜೃಂಭಣೆಯಿಂದ ಮಾಡುವ ಬದಲು ಸಾಂಕೇತಿಕವಾಗಿ ಮಾಡುವಂತಾಗಲಿ ಈ ಕುರಿತು ನಾನು ಶ್ರೀಗಳಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು.
ಹಣವಿದ್ದವನು ಬಿಜೆಪಿಯಲ್ಲಿ ಸೋತರೂ ಮಂತ್ರಿಯಾಗ್ತಾನೆ. ಎಂಟಿಬಿ ಸೋತಿದ್ದರೂ ಅವರನ್ನು ಮಂತ್ರಿಯನ್ನಾಗಿಸಲು ಬಿಜೆಪಿ ಮುಖಂಡರು ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಶ್ರಮಿಸುತ್ತಿದ್ದಾರೆ. ಹಣವಿದ್ದವರು ಬಿಜೆಪಿಯಲ್ಲಿ ಆನೆ ಇದ್ದಂತೆ. ಆನೆಗೆ ಸತ್ತರೂ ಬೆಲೆಯೇ ಎಂದು ಅವರು ವ್ಯಂಗ್ಯವಾಡಿದರು.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜಿಲ್ಲಾ ದಲಿತ ಹಿಂದುಳಿದ ಹಾಗೂ ಅಲ್ಪಸಂಖ್ಯಾಥ ಹಿತರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಹಾಗೂ ಶ್ರೀ ಗವಿಸಿದ್ಧೇಶ್ವರ ಕ್ರೀಡಾ ಮತ್ತು ಕಲಾ ಸಾಂಸ್ಕೃತಿಕ ಸಂಸ್ಥೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಭಾಗಿತ್ವದಲ್ಲಿ ರಾಜ್ಯಮಟ್ಟದ ಹಾರ್ಡ್ ಟೆನ್ನಿಸ್ ಕ್ರಿಕೆಟ್ ಟೂರ್ನಾಮೆಂಟ್ ಗವಿಶ್ರೀ ಟ್ರೋಫಿ-2021-22 ಆಯೋಜಿಸಲಾಗಿದ್ದು. ಜನೇವರಿ 5ರಂದು ಬೆಳಗ್ಗೆ 10-30ಕ್ಕೆ ನಗರದ ತಾಲೂಕು ಕ್ರೀಡಾಂಗಣದಲ್ಲಿ ಚಾಲನೆಗೊಳ್ಳಲಿದೆ ಎಂದು ಸಂಘಟಕ ಸೈಯದ್ ಮಹಿಮೂದ್ ಹುಸೇನಿ ಹೇಳಿದರು.
ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈ ಟೂರ್ನಿಯಲ್ಲಿ ವಿಜೇತ ತಂಡಕ್ಕೆ ಲಕ್ಷ ರೂ. ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ರನ್ನರ್ ಅಪ್ ತಂಡಕ್ಕೆ 50 ಸಾವಿರ ನಗದು ಹಾಗೂ ಟ್ರೋಫಿ, ಮೂರನೇ ವಿಜೇತ ತಂಡಕ್ಕೆ 15 ಸಾವಿರ ನಗದು ಹಾಗೂ ಟ್ರೋಫಿ ಮತ್ತು ನಾಲ್ಕನೇ ವಿಜೇತ ತಂಡಕ್ಕೆ 10 ಸಾವಿರ ರೂ. ನಗದು ಮತ್ತು ಟ್ರೋಫಿ ನೀಡಲಾಗುವುದು ಎಂದರು.
ಇದ ಜೊತೆಗೆ ಸರಣಿ ಪುರುಷೋತ್ತಮ, ಪ್ರತಿ ಪಂದ್ಯಕ್ಕೂ ಪಂದ್ಯ ಪುರುಷೋತ್ತಮ, ಬೆಸ್ಟ್ ಬ್ಯಾಟ್ಸ ಮನ್, ಬೆಸ್ಟ್ ಬೌಲರ್, ಬೆಸ್ಟ್ ಕೀಪರ್, ಬೆಸ್ಟ್ ಕ್ಯಾಚರ್, ಬೆಸ್ಟ್ ಫೀಲ್ಡರ್ ಘೋಷಣೆ ಜೊತೆಗೆ ಆಕರ್ಷಕ ಟ್ರೋಫಿ ನೀಡಲಾಗುವುದು. ಟೂರ್ನಮೆಂಟ್ ನ ನಗದು ಬಹುಮಾನ ಮತ್ತು ಟ್ರೋಫಿಗಳನ್ನು ಸಮಾಜದ ಹಲವು ಗಣ್ಯರು ಕೊಡುಗೆಯಾಗಿ ನೀಡಿದ್ದಾರೆ. ಮುಂಬಯಿನಿಂದಲೂ ತಂಡವೊಂದು ನೋಂದಣಿಯಾಗಿದೆ. ಒಟ್ಟಾರೆ ಇದುವರೆಗೂ 36 ತಂಡಗಳು ನೋಂದಣಿ ಮಾಡಿಕೊಂಡಿವೆ. ನೋಂದಣಿ ಮಾಡುವ ಪ್ರತಿ ತಂಡಕ್ಕೂ 5 ಸಾವಿರ ರೂಪಾಯಿ ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ ಎಂದು ವಿವರಿಸಿದರು.
ಜನೇವರಿ 5ರಂದು ಬೆಳಗ್ಗೆ 10-30ಕ್ಕೆ ಟೂರ್ನಿಯ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕೊಪ್ಪಳದ ಶ್ರೀ ಸಂಸ್ಥಾನ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಸಮಾರಂಭದ ಸಾನ್ನಿಧ್ಯ ವಹಿಸುವರು. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಅಮೃತ್ ಅಧ್ಯಕ್ಷತೆ ವಹಿಸುವರು. ಸಂಸದ ಕರಡಿ ಸಂಗಣ್ಣ ಸಮಾರಂಭ ಉದ್ಘಾಟಿಸುವರು. ಶಾಸಕ ರಾಘವೇಂದ್ರ ಹಿಟ್ನಾಳ, ಬಿಜೆಪಿ ಮುಖಂಡ ಸಿ.ವಿ.ಚಂದ್ರಶೇಖರ್, ಎಸ್ಪಿ ಟಿ.ಶ್ರೀಧರ್, ಡಿವೈಎಸ್್ಪಿ ವೆಂಕಟಪ್ಪ ನಾಯಕ್, ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುರೇಶ್ ಭೂಮರಡ್ಡಿ ಮತ್ತಿತರರು ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರವಣಕುಮಾರ್ ಈರಣ್ಣ, ಖಲೀಲ್ ಮಾನ್ವಿ ಇದ್ದರು.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಇಷ್ಟು ವರ್ಷ ಅಧಿಕಾರ ನಡೆಸಿದ ಬಿಜೆಪಿ ಸಾಧಿಸಿದ್ದೇನೆಂದರೆ ಬಿಎಸ್‌ಎನ್‌ಎಲ್, ರೈಲ್ವೆ ವ್ಯವಸ್ಥೆಯನ್ನು ಖಾಸಗಿಯವರಿಗೆ ಮಾರಾಟ ಮಾಡಿದ್ದು. ಹೀಗೇ ಬಿಟ್ಟರೆ ವಿಮಾನ ವ್ಯವಸ್ಥೆಯನ್ನು ಮಾರಾಟ ಮಾಡುತ್ತಾರೆ, ಮುಂದೆ ದೇಶವನ್ನೇ ಮಾರಾಟ ಮಾಡುತ್ತಾರೆ ಎಂದು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.
ಕೊಪ್ಪಳದ ಶ್ರೀ ಶಿವಶಾಂತ ಮಂಗಲ ಭವನದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಬೆಂಬಲಿತ ಗ್ರಾಪಂ ನೂತನ ಸದಸ್ಯರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮದು ಬಡವರ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಯ ಶಾಸಕರ ಆಸ್ತಿ ಕನಿಷ್ಠ ಸಾವಿರಾರು ಕೋಟಿ ಇರುತ್ತೆ. ಸಚಿವ ಸ್ಥಾನ ನೀಡಬೇಕಾದರೆ ಪಕ್ಷಕ್ಕೆ ದುಡಿದ ಬಗೆ, ಜನಪರ ಕೆಲಸ ಮಾಡಿದ ರೀತಿ, ಜಾತಿ ನೋಡಿ ಸಚಿವ ಸ್ಥಾನ ನೀಡುವ ಪರಿಪಾಠ ಕಾಂಗ್ರೆಸ್‌ನಲ್ಲಿದ್ದರೆ, ಬಿಜೆಪಿಯಲ್ಲಿ ಯಾವ ಶಾಸಕ ಎಷ್ಟು ಕೋಟಿ ಹಣ ಪಕ್ಷಕ್ಕೆ ಕೊಡುತ್ತಾರೆ ಎಂಬುದರ ಮೇಲೆ ಮಂತ್ರಿ ಸ್ಥಾನ ನಿರ್ಧಾರ ಆಗುತ್ತೆ ಎಂದರು.
ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶ ಹೊರಬಂದಿದ್ದು, ಮುಖ್ಯಮಂತ್ರಿಗಳು ಶೇಕಡಾ 60 ರಷ್ಟು ಸ್ಥಾನಗಳು ಬಿಜೆಪಿ ಬೆಂಬಲಿತರು ಗೆದ್ದಿದ್ದಾರೆ ಎಂದರೆ, ಬಿಜೆಪಿ ರಾಜ್ಯಾಧ್ಯಕ್ಷರು ಶೇಕಡಾ 55 ರಷ್ಟು ಎಂದು ತಿಳಿಸಿದರು. ಮಂತ್ರಿಗಳು ಶೇಕಡಾ 50 ರಷ್ಟು ಬಿಜೆಪಿ ಬೆಂಬಲಿತರು ಗೆದ್ದಿದ್ದಾರೆ ಎಂದು ಹೇಳಿರುವುದನ್ನ ನೋಡಿದರೆ ಬಿಜೆಪಿ ನಾಯಕರೆಲ್ಲ ಹೇಳುವುದು ಸುಳ್ಳು ಎಂಬುದು ಸ್ಪಷ್ಟ. ರಾಜ್ಯಾದ್ಯಂತ ಕಾಂಗ್ರೆಸ್ ಬೆಂಬಲಿತರೇ ಹೆಚ್ಚು ಗೆದ್ದಿದ್ದಾರೆ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ ಮಾತನಾಡಿ, ಅಧಿಕಾರ ವಿಕೇಂದ್ರೀಕರಣದ ಪರಿಕಲ್ಪನೆ ಹುಟ್ಟಿಕೊಂಡದ್ದೇ ಕಾಂಗ್ರೆಸ್ ಕಾಲಾವಧಿಯಲ್ಲಿ. ಬಿಜೆಪಿ ರಾಜ್ಯವನ್ನು, ದೇಶವನ್ನು ಅಧಃಪತನದ ಹಾದಿಯತ್ತ ಒಯ್ಯುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಜಿಲ್ಲೆಯಲ್ಲಿ, ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್ ಮಾಡಿದ ಎಲ್ಲ ಅಭಿವೃದ್ಧಿ ಕೆಲಸಗಳನ್ನು ನಾವು ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಬಿಜೆಪಿಗೆ ತಕ್ಕ ಪಾಠ ಕಲಿಸುವ ಕಾಲ ದೂರವಿಲ್ಲ ಎಂದು ದೂರಿದರು.
ಕೋವಿಡ್-19 ಹೆಸರಿನಲ್ಲಿ ಬಿಜೆಪಿ ಸರಕಾರ ಲೂಟಿ ಹೊಡೆಯುವ ಕೆಲಸಕ್ಕೆ ಇಳಿದಿದೆಯೇ ಹೊರತು ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಯಡಿಯೂರಪ್ಪ ಸಿಎಂ ಆದನಂತರ ಹೈದ್ರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದರೆ ಹೊರತು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಬಿಡಿಗಾಸು ನೀಡಿಲ್ಲ ಎಂದು ಅವರು ಹರಿ ಹಾಯ್ದರು.
ದೊಡ್ಡ ದೊಡ್ಡ ಶ್ರೀಮಂತರಿಗೆ ಮಕ್ಕಳು, ಮೊಮ್ಮಕ್ಕಳು ಹುಟ್ಟಿದರೆ ಅಲ್ಲಿ ಭೇಟಿ ಕೊಡುವ ಪ್ರಧಾನಿ ಮೋದಿಯವರು, ರೈತರು ಸಂಕಷ್ಟ ಅನುಭವಿಸುತ್ತಲೇ ದೆಹಲಿಯಲ್ಲಿ ಹೋರಾಟ ನಡೆಸುತ್ತಿದ್ದು, ಅಲ್ಲಿಗೆ ಭೇಟಿ ಕೊಡಲು, ಅವರ ಸಮಸ್ಯೆ ಆಲಿಸಲು ಪ್ರಧಾನಿ ಬಳಿ ಸಮಯ ಇಲ್ಲ. ಬದಲಾಗಿ ರೈತರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಬಿಜೆಪಿ ಸರಕಾರ ಎಂದು ಗುಡುಗಿದರು.
ಪಕ್ಷದ ಮುಖಂಡರಾದ ಜನಾರ್ದನ ಹುಲಗಿ, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಬಾಲಚಂದರ್, ಕಾಟನ್ ಪಾಷಾ, ಅಕ್ಬರ್ ಪಾಷಾ ಪಲ್ಟಾನ್, ಸುರೇಶ್ ಭೂಮರಡ್ಡಿ, ಕೆ.ಬಸವರಾಜ ಹಿಟ್ನಾಳ, ಎಸ್.ಬಿ.ನಾಗರಳ್ಳಿ, ಜುಲ್ಲು ಖಾದ್ರಿ, ಇಂದಿರಾ ಭಾವಿಕಟ್ಟಿ, ಕಿಶೋರಿ, ಮಾಲತಿ ನಾಯಕ್, ರವಿ ಕುರಗೋಡ್ ಇತರರು ಇದ್ದರು. ಕೃಷ್ಣ ಇಟ್ಟಂಗಿ ಕಾರ್ಯಕ್ರಮ ನಿರ್ವಹಿಸಿದರು.
ಮಾಜಿ ಸಚಿವ ಶಿವರಾಜ ತಂಗಡಗಿಯವರ ಮಾವ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ವಿದ್ಯಾವತಿ ಶಿವರಾಜ ತಂಗಡಗಿಯವರ ತಂದೆ ಹಿರೇ ಹನುಮಂತಪ್ಪ ಗುತ್ತೆದಾರ (80) ಭಾನುವಾರ ರಾತ್ರಿ ನಿಧನರಾದರು. ಮೃತರಿಗೆ ನಾಲ್ಕು ಜನ ಪುತ್ರರು, ಐದು ಜನ ಪುತ್ತಿಯರು ಇದ್ದಾರೆ. ಮೃತರ ಅಂತ್ಯಕ್ರಿಯೆ ಮಸ್ಕಿ ತಾಲ್ಲೂಕಿನ ಬಳಗಾನೂರು ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ:
ಗ್ರಾ.ಪಂ. ನೂತನ ಸದಸ್ಯರ ಕಾಂಗ್ರೆಸ್ ಅಭಿನಂದನಾ ಸಮಾರಂಭದಲ್ಲಿ ರಸಮಂಜರಿ ಕಾರ್ಯಕ್ರಮ ಗಮನ ಸೆಳೆಯಿತು. ನಿಗದಿಗೊಳಿಸಿದಂತೆ ೧೧ ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ ೧೧:೩೦ ಆದರೂ ಆರಂಭವಾಗದಿದ್ದಾಗ ಕಾಂಗ್ರೆಸ್ ಮುಖಂಡ ಪರಶುರಾಮ ಕೆರಳ್ಳಿ ವೇದಿಕೆಯ ಮೇಲೆ ಕರೋಕೆ ಹಾಡುಗಳ ಗಾಯನ ಆರಂಭಿಸಿದರು.
ಗ್ರಾ. ಪಂ. ಸದಸ್ಯರ ಅಭಿನಂದನಾ ಸಮಾರಂಭ ಕೊಪ್ಪಳದ ಶಿವಶಾಂತ ಮಂಗಲ ಭವನದಲದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಬೆಂಬಲಿತ ಸದಸ್ಯರ ಸನ್ಮಾನ ಸಮಾರಂಭ ಶಾಸಕ ರಾಘವೇಂದ್ರ ಹಿಟ್ನಾಳ, ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಬರುವಿಕೆವರೆಗೂ ಬೇಸರ ಕಳೆಯಲು ಚಿತ್ರಗೀತೆ ಗಳನ್ನು ಹಾಡಿ ಚಿತ್ರಗೀತೆ ಹಾಡಿ ಬಂದವರನ್ನು ಕಾಂಗ್ರೆಸ್ ಎಸ್‌ಟಿ ಘಟಕದ ಮುಖಂಡ ಪರಶುರಾಮ ಕೆರೆಹಳ್ಳಿ ರಂಜಿಸಿದರು.
ಹಳೇ ಕನ್ನಡ ಚಿತ್ರಗೀತೆಗಳ ಟ್ರ್ಯಾಕ್‌ಗೆ ದನಿ ನೀಡಿದ ಕಾಂಗ್ರೆಸ್ ಮುಖಂಡನ ಹಾಡುಗಾರಿಕೆಯನ್ನು ಗ್ರಾಪಂ ಸದಸ್ಯರು ಎಂಜಾಯ್ ಮಾಡಿದರು.