Home Blog Page 3096

ಗುರುವಾರ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ; ನಾಲ್ವರ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ನಿನ್ನೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡಿತ್ತು. ಆದರೆ ಮತ್ತೆ ಇವತ್ತು ಇಳಿಕೆ ಕಂಡಿದೆ. ಆದರೆ ಸಾವಿನ ಸರಣಿ ಮುಂದುವರೆದಿದೆ. ಇಂದು 250 ಜನರಿಗೆ ಸೋಂಕು ತಗುಲಿದೆ. ಬುಧವಾರ ಜಿಲ್ಲಾಡಳಿತದ ಮಾಹಿತಿ ಪ್ರಕಾರ ನಾಲ್ವರು ಮೃತಪಟ್ಟಿದ್ದಾರೆ.

ಇಂದಿನ 250 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 24315 ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -105, ಮುಂಡರಗಿ-51, ನರಗುಂದ-23, ರೋಣ-21, ಶಿರಹಟ್ಟಿ-41, ಹೊರಜಿಲ್ಲೆಯ-09 ಸೇರಿದಂತೆ 250 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ನಾಲ್ವರು ಮೃತಪಟ್ಟಿದ್ದು, ಮೃತರ ಸಂಖ್ಯೆ 262 ಕ್ಕೇರಿದೆ.

ಗದಗನ ಪಂಚಾಕ್ಷರಿ ನಗರದ ನಿವಾಸಿ 62 ವರ್ಷದ ವ್ಯಕ್ತಿ ಮೇ-25 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಜೂನ -02 ರಂದು ಮೃತಪಟ್ಟಿದ್ದಾರೆ.

ಗದಗ ಶಹರದ ನಿವಾಸಿ 62 ವರ್ಷದ ವ್ಯಕ್ತಿ ಮೆ,27 ರಂದು ಜಿಮ್ಸ್ ‌ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ದೃಢಪಟ್ಟಿತ್ತು, ಮೇ 31 ರಂದೇ ಮೃತಪಟ್ಟಿದ್ದಾರೆ.

ಜಿಲ್ಲೆಯ ಗಜೇಂದ್ರಗಡ ನಿವಾಸಿ 59 ವರ್ಷದ ಮಹಿಳೆ ಮೇ,28 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಮೇ, 29 ರಂದು ಮೃತಪಟ್ಟಿದ್ದಾರೆ.

ಗದಗ ಶಹರ ನಿವಾಸಿ 45 ವರ್ಷದ ಮಹಿಳೆ ಮೇ 21 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್- 01 ರಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 351 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 21835 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 2218 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 185 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಗರಿಷ್ಠ ಸಂಖ್ಯೆಯ ಐಸಿಯು, ವೆಂಟಿಲೇಟರ್ ಬೆಡ್: ಜಿಮ್ಸ್ ದಾಖಲೆ

ವಿಜಯಸಾಕ್ಷಿ ಸುದ್ದಿ, ಗದಗ

ರಾಜ್ಯದಲ್ಲಿ ಗರಿಷ್ಠ ಪ್ರಮಾಣದ ವೆಂಟಿಲೇಟರ್ ಹೊಂದಿರುವ ಬೆಡ್‌ಗಳಿರುವ ಆಸ್ಪತ್ರೆ ಎಂಬ ಖ್ಯಾತಿಗೆ ಗದಗ ಜಿಮ್ಸ್ ಪಾತ್ರವಾಗಿದೆ. ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ 110 ಐಸಿಯು ಬೆಡ್‌ಗಳನ್ನು ಹೊಂದಿದೆ. ಒಟ್ಟು 440 ಬೆಡ್ ಸಾಮರ್ಥ್ಯದ ಆಸ್ಪತ್ರೆಯಲ್ಲಿ ಈಗ 110 ಬೆಡ್‌ಗಳಿಗೆ ವೆಂಟಿಲರ್ ಅಳವಡಿಸಿದ್ದು, ಇದರ ಪ್ರಮಾಣ ಶೇ. 25ಕ್ಕೇರಿದೆ ಎಂದು ಜಿಮ್ಸ್ ನಿರ್ದೇಶಕ ಡಾ| ಪಿ.ಎಸ್. ಭೂಸರಡ್ಡಿ ತಿಳಿಸಿದ್ದಾರೆ.

ಕೋವಿಡ್ ನಿರ್ವಹಣೆಯಲ್ಲಿ ಈ ಸೌಲಭ್ಯ ತುಂಬ ಅನುಕೂಲ ಕಲ್ಪಿಸಿದೆ. ಇದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ, ಆರೋಗ್ಯ ಸಚಿವ ಡಾ| ಕೆ. ಸುಧಾಕರ್, ಶಾಸಕರಾದ ಎಚ್.ಕೆ. ಪಾಟೀಲ, ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ಸಂಸದರಾದ ಶಿವಕುಮಾರ್ ಉದಾಸಿ, ಪಿ.ಸಿ. ಗದ್ದಿಗೌಡರ್, ವಿಧಾನ ಪರಿಷತ್ ಸದಸ್ಯರಾದ ಶ್ರೀನಿವಾಸ ಮಾನೆ, ಪ್ರದೀಪ ಶೆಟ್ಟರ್, ದ್ರಾಕ್ಷಿರಸ ಮಂಡಳಿ ಅಧ್ಯಕ್ಷ ಕಾಂತಿಲಾಲ ಬನ್ಸಾಲಿ, ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ..ಕೆ. ಅನಿಲ್ ಕುಮಾರ್, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಡಾ| ಪಿ.ಜಿ. ಗಿರೀಶ್, ಗದಗ ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು, ಜಿ.ಪಂ. ಸಿಇಒ ಭರತ್ ಎಸ್., ಎಸ್ಪಿ ಯತೀಶ್ ಎನ್. ಮತ್ತಿತರರಿಗೆ ಡಾ| ಪಿ.ಎಸ್. ಭೂಸರಡ್ಡಿ ಕೃತಜ್ಞತೆ ಸಲ್ಲಿಸಿದ್ದಾರೆ.

ಕೈ ಮುಗಿತೀವಿ, ದಯವಿಟ್ಟು ಕಾಳಜಿ ಕೇಂದ್ರಕ್ಕೆ ಬನ್ನಿ! ಅಧಿಕಾರಿಗಳಿಂದ ಸೋಂಕಿತರ ಮನವೊಲಿಕೆ

ಎರಡು ವರ್ಷದ ಮಗುವಿದೆ, ಕೊರೊನಾಗೆ ಮನೇಲೇ ಚಿಕಿತ್ಸೆ ಪಡೀತೀವಿ ಎಂದ ಕುಟುಂಬದ ಮನವೊಲಿಕೆ

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ಸೋಂಕು ತಗುಲಿದ್ದ ಕುಟುಂಬವೊಂದರ ಮನವೊಲಿಸಿದ ಅಧಿಕಾರಿಗಳು ಕಾಳಜಿ ಕೇಂದ್ರಕ್ಕೆ ಕರೆ ತಂದ ಘಟನೆ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಹಾರೋಗೇರಿ ‌ಗ್ರಾಮದ ಮಗು ಸಮೇತ ಕುಟುಂಬದ ನಾಲ್ವರಿಗೆ ಎರಡು ದಿನಗಳ ಹಿಂದೆ ಪಾಸಿಟಿವ್ ಬಂದಿತ್ತು. ಆದರೆ ಅವರು ಆಸ್ಪತ್ರೆಗೆ ಬಾರದೆ‌ ಮನೆಯಲ್ಲಿಯೇ ಇದ್ದರು. ಇದನ್ನು ಗಮನಿಸಿದ ಅಧಿಕಾರಿಗಳು ತಲಾಠಿ, ಪಿಡಿಒ ಮೂಲಕ ಕಾಳಜಿ ಕೇಂದ್ರಕ್ಕೆ ಕಳಿಸಿ ಕೊಡಲು ಮನವಿ ಮಾಡಿದ್ದರು. ಆದರೆ ಇದಕ್ಕೆ ಕುಟುಂಬದವರು ಸುತಾರಾಂ ಒಪ್ಪಲಿಲ್ಲ.

ಎರಡು ವರ್ಷದ ಮಗುವಿದೆ‌, ನಾವು ಮನೆಯಲ್ಲೇ ಇದ್ದು ಚಿಕಿತ್ಸೆ ತಗೋತೀವಿ ಅಂದರು. ಹಾಗೇ ಮಾಡೋಕೆ ಬರಲ್ಲ‌, ದಯವಿಟ್ಟು ಮುಂಡರಗಿಯ ಕಾಳಜಿ ಕೇಂದ್ರಕ್ಕೆ ಬನ್ನಿ ಎಂದು ಅಧಿಕಾರಿಗಳು ಮನವೊಲಿಸಲು ಯತ್ನಿಸಿದರು. ಅದಕ್ಕೂ ಕೇರ್ ಮಾಡದ ಕುಟುಂಬವನ್ನು ಕಾಳಜಿ ಕೇಂದ್ರಕ್ಕೆ ಕರೆತರಲು ಖುದ್ದು ತಾಲೂಕು ಆಡಳಿತವೇ ಅವರ ಮನೆಗೆ ಬಂದಿತ್ತು. ಅವರ ಮನವಿಗೆ ಒಪ್ಪದ ಕುಟುಂಬ ಆಗಲ್ಲ ಆಗಲ್ಲ ಅಂದಿತು. ಕೊನೆಗೆ ಅಧಿಕಾರಿಗಳು ಅವರ ಮನೆ ಮುಂದೆ ಕೈ ಮುಗಿದು ಕುಳಿತು, ದಯವಿಟ್ಟು ಕೋವಿಡ್ ಕೇರ್ ಸೆಂಟರ್ ಗೆ ಬನ್ನಿ ಎಂದು ಮನವಿ ಮಾಡಿದರು.

ಕರಗಿದ ಮನಸ್ಸು

ಅಧಿಕಾರಿಗಳೆಲ್ಲರೂ ಸೇರಿ, ಹೀಗೆ ಕೈ ಮುಗಿದು ಕುಳಿತಿದ್ದನ್ನು ಕಂಡ‌ ಆ ಕುಟುಂಬದವರ ಮನಸ್ಸು ಕರಗಿತು. ಅಧಿಕಾರಿಗಳು ತಂದಿದ್ದ ವಾಹನದಲ್ಲಿ ಕುಳಿತು ಕೋವಿಡ್ ಕೇರ್ ಸೆಂಟರ್ ಗೆ ಬಂದರು.

ಮುಂಡರಗಿ ತಹಸೀಲ್ದಾರ್ ಆಶಪ್ಪ ಪೂಜಾರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್. ಕಲ್ಮನಿ, ಹಾರೋಗೇರಿ ಗ್ರಾ.ಪಂ. ಅಧ್ಯಕ್ಷ ರವಿ, ಡಂಬಳ ಹೋಬಳಿಯ ಕಂದಾಯ ನಿರೀಕ್ಷಕ ಎಂ.ಎ. ನದಾಫ್, ಪಿಡಿಒ ಮಹೇಶ್ ಅಲ್ಲಿಪುರ ಸೇರಿದಂತೆ ನೋಡಲ್ ಅಧಿಕಾರಿಗಳು, ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಕಿಡಿಗೇಡಿಗಳ ದುಷ್ಕೃತ್ಯಕ್ಕೆ ಎರಡು ಚಿರತೆ ಬಲಿ!

ವಿಜಯಸಾಕ್ಷಿ ಸುದ್ದಿ, ಮೈಸೂರು

ಕಿಡಿಗೇಡಿಗಳ ಅಟ್ಟಹಾಸಕ್ಕೆ ಎರಡು ಚಿರತೆ ಬಲಿಯಾಗಿರುವ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಶುಂಠಿ ಬೆಳೆ ಬೆಳೆದಿರುವ ಜಮೀನಿನಲ್ಲಿ ಎರಡು ಚಿರತೆಗಳ ಶವ ಕಂಡು ಬಂದಿದ್ದರಿಂದಾಗಿ ಈ ವಿಷಯ ಬೆಳಕಿಗೆ ಬಂದಿದೆ. 5 ವರ್ಷದ ಹೆಣ್ಣು ಚಿರತೆ ಮತ್ತು 1 ವರ್ಷದ ಮರಿ ಚಿರತೆ ವಿಷ ತಿಂದು ಸ್ಥಳದಲ್ಲಿಯೇ ಸಾವನ್ನಪ್ಪಿವೆ.

ನಂಜನಗೂಡು ತಾಲೂಕಿನ ಕಡಬೂರು ಗ್ರಾಮದಲ್ಲಿ ಈ ದಾರುಣ ಘಟನೆ ನಡೆದಿದೆ ಎನ್ನಲಾಗಿದೆ. ಕಡಬೂರು ಗ್ರಾಮದ ರಾಮನಾಯಕ ಎಂಬುವರ ಶುಂಠಿ ಬೆಳೆ ಜಮೀನು ಮತ್ತು ಬಾಳೆ ತೋಟದಲ್ಲಿ 2 ಚಿರತೆಗಳ ಶವ ಸಿಕ್ಕಿವೆ.

ಈ ಚಿರತೆಗಳು ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದು ವಿಷ ತಿಂದು ಸಾವನ್ನಪ್ಪಿವೆ ಎಂಬುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆ ನಂಜನಗೂಡಿನ ಅರಣ್ಯ ಇಲಾಖಾಧಿಕಾರಿ ರಕ್ಷಿತ್ ಮತ್ತು ಜನಾರ್ದನ್ ಸೇರಿದಂತೆ ಇನ್ನಿತರ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳಕ್ಕೆ ಶ್ವಾನ ದಳದ ಸಿಬ್ಬಂದಿ ಆಗಮಿಸಿ ಕಿಡಿಗೇಡಿಗಳ ಹೆಜ್ಜೆ ಗುರುತಿನ ಪರಿಶೀಲನೆ ನಡೆಸಲಾಗುತ್ತಿದೆ. ಕಳೆದ ವರ್ಷಗಳ ಹಿಂದೆ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ 3 ಚಿರತೆಗಳು ಕೂಡ ಸಾವನ್ನಪ್ಪಿದ್ದವು. ಆದರೆ, ಚಿರತೆಗಳು ಸಾವನ್ನಪ್ಪಿ ವರ್ಷ ಕಳೆದರೂ ಸಾವಿಗೆ ಕಾರಣರಾಗಿರುವ ಕಿಡಿಗೇಡಿಗಳ ಬಂಧನಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿಲ್ಲ. ಈಗ ಸದ್ಯ ಮತ್ತೆ ನಂಜನಗೂಡು ತಾಲೂಕಿನ ಕಡೂಬೂರು ಗ್ರಾಮದಲ್ಲಿ 2 ಚಿರತೆಗಳು ವಿಷ ತಿಂದು ಸಾವನ್ನಪ್ಪಿವೆ. ಇನ್ನಾದರೂ ಅರಣ್ಯ ಅಧಿಕಾರಿಗಳು ಇಂತಹ ಕಿಡಿಗೇಡಿಗಳ ಹೆಡೆಮೂರಿ ಕಟ್ಟುವರೇ? ಕಾಯ್ದು ನೋಡಬೇಕಿದೆ.

ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ; ಆಸ್ಪತ್ರೆ ಬಂದ್!

ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು

ಮಕ್ಕಳ ತಜ್ಞ ವೈದ್ಯ ಡಾ. ದೀಪಕ್ ಅವರ ಮೇಲಿನ ಮಾರಣಾಂತಿಕ ಹಲ್ಲೆ ಖಂಡಿಸಿ ತರೀಕೆರೆಯಲ್ಲಿ ಇಂದಿನಿಂದ ಜೂನ್ 6 ರ ವರೆಗೆ ಖಾಸಗಿ ಆಸ್ಪತ್ರೆ – ಕ್ಲಿನಿಕ್ ಬಂದ್ ಮಾಡಲು ವೈದ್ಯರು ನಿರ್ಧರಿಸಿದ್ದಾರೆ.
ವೈದ್ಯರ ಮೇಲಿನ ಮಾರಣಾಂತಿಕ ಹಲ್ಲೆಗೆ ಇಡೀ ವೈದ್ಯ ಲೋಕವೇ ಖಂಡಿಸಿದೆ. ಹೀಗಾಗಿ ನಗರದಲ್ಲಿನ ಖಾಸಗಿ ಆಸ್ಪತ್ರೆಗಳು ನಾಲ್ಕು ದಿನ ಸೇವೆಯಿಂದ ಹಿಂದೆ ಸರಿಯಲಿವೆ.
ಈ ಮೂಲಕ ವೈದ್ಯರ ಸಾಮೂಹಿಕ ರಕ್ಷಣೆಗೆ ಅಭಿಯಾನ ಪ್ರಾರಂಭಿಸಲಾಗಿದೆ.

ವೈದ್ಯ ಡಾ. ದೀಪಕ್ ಅವರ ಮೇಲಿನ ಹಲ್ಲೆ ಇಡೀ ವೈದ್ಯ ಸಮೂಹದ ಮೇಲೆ ನಡೆದ ದೌರ್ಜನ್ಯ ಎಂದು ವೈದ್ಯರು ಖಂಡಿಸಿದ್ದಾರೆ.
ಕೊರೊನಾ ಸಂದರ್ಭದಲ್ಲಿ ಪ್ರಾಣ ಒತ್ತೆ ಇಟ್ಟು ವೈದ್ಯ ಡಾ ದೀಪಕ್ ಅವರು ಹಗಲು – ರಾತ್ರಿ ಜನರ ಸೇವೆ ಮಾಡಿದ್ದಾರೆ. ಆದರೆ, ಇಂತಹ ವೈದ್ಯರ ಜೀವ ಬಲಿಪಡೆಯುವಂತಹ ಕ್ರೌರ್ಯಕ್ಕೆ ಮುಂದಾದರೆ ಹೇಗೆ? ಇಂದು ದೀಪಕ್..ನಾಳೆ ಇನ್ನ್ಯಾರೋ? ಎಂದು ವೈದ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಾಣದ ಹಂಗು ತೊರೆದು ಜನ ಸೇವೆ ಮಾಡುತ್ತಿದ್ದರೂ ವೈದ್ಯರ ರಕ್ಷಣೆ ಆಗುತ್ತಿಲ್ಲ. ಹೀಗಾಗಿ ಸರ್ಕಾರ ಕೂಡಲೇ ವೈದ್ಯರ ಬೆನ್ನಿಗೆ ನಿಲ್ಲಬೇಕು ಎಂದು ವೈದ್ಯರ ಸಂಘಟನೆಗಳು ಒತ್ತಾಯಿಸಿವೆ. ಅಲ್ಲದೇ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲು ಅಭಿಯಾನ ಶುರು ಮಾಡಿದ್ದಾರೆ. ಒಂದು ವೇಳೆ ಡಾ. ದೀಪಕ್ ಅವರ ಮೇಲಿನ ಹಲ್ಲೆಗೆ ನ್ಯಾಯಾ ಸಿಗದಿದ್ದರೆ, ಬೆಂಗಳೂರಿನಲ್ಲಿಯೂ ವೈದ್ಯಕೀಯ ಸೇವೆ ಸ್ಥಗಿತ ಮಾಡಲು ವೈದ್ಯರ ಸಂಘಟನೆಗಳು ಚಿಂತನೆ ನಡೆಸಿವೆ.

ಕೊರೊನಾಗೆ ಬಲಿಯಾದ ದಂಪತಿ!

ವಿಜಯಸಾಕ್ಷಿ ಸುದ್ದಿ, ಬಾಗಲಕೋಟ

ದೇಶಕ್ಕೆ ವಕ್ಕರಿಸಿರುವ ಹೆಮ್ಮಾರಿಯಿಂದಾಗಿ ಎಷ್ಟೋ ಕುಟುಂಬಗಳಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಎಷ್ಟೋ ಮಕ್ಕಳು ತಬ್ಬಲಿಯಾಗಿದ್ದಾರೆ. ಒಂದೇ ವಾರದ ಅಂತರದಲ್ಲಿ ಈ ಹೆಮ್ಮಾರಿಯಿಂದಾಗಿ ತಂದೆ – ತಾಯಿ ಸಾವನ್ನಪ್ಪಿದ್ದು, ಬರೋಬ್ಬರಿ 8 ಮಕ್ಕಳನ್ನು ಬಿಟ್ಟು ಹೋಗಿದ್ದಾರೆ.

ಈ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ನಡೆದಿದೆ. ಇಲ್ಲಿಯ ರಾಮಪ್ಪ ಹೂಗಾರ, ದುಂಡವ್ವ ಹೂಗಾರ ಅವರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಮೇ. 29ರಂದು ದುಂಡವ್ವ ಹೂಗಾರ ಸೋಂಕಿಗೆ ಬಲಿಯಾಗಿದ್ದರೆ, ಆ ನಂತರ ದುಂಡಪ್ಪ ಬಲಿಯಾಗಿದ್ದಾರೆ.

ಈ ದಂಪತಿಗೆ 7 ಜನ ಹೆಣ್ಣು ಮಕ್ಕಳು ಹಾಗೂ ಓರ್ವ ಗಂಡು ಮಗು ಇದ್ದಾನೆ. ಸದ್ಯ 6 ಜನ ಹೆಣ್ಣು ಮಕ್ಕಳ ಮದುವೆ ಮಾಡಿದ್ದಾರೆ. ಸದ್ಯ 16 ವರ್ಷದ ಪುತ್ರಿ, 17 ವರ್ಷದ ಮಗ ಇದ್ದಾರೆ. ಆರಂಭದಲ್ಲಿ ರಾಮಪ್ಪ ಅವರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಆ ನಂತರ ಆರೈಕೆ ಮಾಡುತ್ತಿದ್ದ ಪತ್ನಿಗೂ ತಗುಲಿದೆ. ಇಬ್ಬರಿಗಾಗಿ ಕುಟುಂಬಸ್ಥರು ಬರೋಬ್ಬರಿ ರೂ. 8 ಲಕ್ಷ ಖರ್ಚು ಮಾಡಿದ್ದರು. ಆದರೆ, ಚಿಕಿತ್ಸ ಫಲಕಾರಿಯಾಗದೆ ಇಬ್ಬರೂ ಸಾವನ್ನಪ್ಪಿದ್ದಾರೆ.

ಸೋಂಕಿನಿಂದ ಸಾವನ್ನಪ್ಪಿದ್ದ ತಂದೆಯ ಅಂತ್ಯ ಸಂಸ್ಕಾರ ಕಂಡ ಮಗನಿಗೆ ಹೃದಯಾಘಾತ!

ವಿಜಯಸಾಕ್ಷಿ ಸುದ್ದಿ, ಮಂಗಳೂರು

ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದ ತಂದೆಯ ಅಂತ್ಯಕ್ರಿಯೆ ನೋಡಿದ ಮಗನಿಗೆ ಹೃದಯಘಾತವಾಗಿ ಮೃತಪಟ್ಟ ಘಟನೆ ಸಮೀಪದ ಬಂಟ್ವಾಳದಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಪುಣಚ ಗ್ರಾಮದ ಬೈಲಗುತ್ತು ಗ್ರಾಮದ ನಿವಾಸಿ ಭುಜಂಗ ಶೆಟ್ಟಿ (85) ಕೊರೊನಾಗೆ ಬಲಿಯಾಗಿದ್ದರು. ಹೀಗಾಗಿ ಇಂದು ಅವರ ಅಂತ್ಯ ಸಂಸ್ಕಾರ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ತಂದೆಯ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದ ಮಗ ಶೈಲೇಶ್ ಶೆಟ್ಟಿ(44 ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ದಾರಿ ಮಧ್ಯೆ ಅಸುನೀಗಿದ್ದಾರೆ.

ಶೈಲೇಶ್ ಅವರು ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಎರಡು ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದರು. ಇವರ ಮನೆಯಲ್ಲಿ ಭುಜಂಗ ಶೆಟ್ಟಿ ಅವರ ಪತ್ನಿ ಹೊರತು ಪಡಿಸಿದರೆ ಎಲ್ಲರಿಗೂ ಸೋಂಕು ತಗುಲಿತ್ತು. ಆದರೆ, ಶೈಲೇಶ್ ಶೆಟ್ಟಿ ಬೇರೆ ಮನೆಯಲ್ಲಿ ವಾಸಿಸುತ್ತಿದ್ದರು. ಹೀಗಾಗಿ ಅವರಲ್ಲಿ ಸೋಂಕು ಕಾಣಿಸಿಕೊಂಡಿರಲಿಲ್ಲ. ಆದರೆ, ತಂದೆಯ ಅಂತ್ಯಕ್ರಿಯೆ ನೋಡಿ, ಹೃದಯಾಘಾತವಾಗಿದೆ. ಹೀಗಾಗಿ ಅವರು ಕೂಡ ತಂದೆಯೊಂದಿಗೆ ಇಹಲೋಕ ತ್ಯಜಿಸಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾದರೂ ಸಾವು ಮಾತ್ರ ನಿಲ್ಲುತ್ತಿಲ್ಲ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಮರಣ ಕೇಕೆ ಮಾತ್ರ ಮುಂದುವರೆದಿದೆ. ಇಂದು ರಾಜ್ಯದಲ್ಲಿ 16,387 ಜನರಲ್ಲಿ ಸೋಂಕು ಕಾಣಿಸಿಕೊಡಿದ್ದು, 463 ಜನ ಸಾವನ್ನಪ್ಪಿದ್ದಾರೆ. ಅಲ್ಲದೇ, ಇಂದು ರಾಜ್ಯದ 21,199 ಜನರು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇಲ್ಲಿಯವರೆಗೂ 26,35,122 ಜನರಲ್ಲಿ ಸೋಂಕು ಕಂಡಿದೆ.

ಅಲ್ಲದೇ, ಸದ್ಯ 2,93,024 ಜನ ಸೋಂಕಿತರು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ 30,017 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.

ಇಂದು ಬೆಂಗಳೂರಿನಲ್ಲಿ 4,095 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, ಇಂದು ನಗರದಲ್ಲಿ 307 ಜನ ಬಲಿಯಾಗಿದ್ದಾರೆ. ಇನ್ನುಳಿದಂತೆ ಬಾಗಲಕೋಟೆ 262, ಬಳ್ಳಾರಿ 525, ಬೆಳಗಾವಿ 1,006, ಬೆಂಗಳೂರು ಗ್ರಾಮಾಂತರ 164, ಬೆಂಗಳೂರು ನಗರ 4,095, ಬೀದರ್ 23,

ಚಾಮರಾಜನಗರ 258, ಚಿಕ್ಕಬಳ್ಳಾಪುರ 360, ಚಿಕ್ಕಮಗಳೂರು 214, ಚಿತ್ರದುರ್ಗ 483, ದಕ್ಷಿಣ ಕನ್ನಡ 618, ದಾವಣಗೆರೆ 535, ಧಾರವಾಡ 245, ಗದಗ 285, ಹಾಸನ 520, ಹಾವೇರಿ 79, ಕಲಬುರಗಿ 117, ಕೊಡಗು 298, ಕೋಲಾರ 389, ಕೊಪ್ಪಳ 295, ಮಂಡ್ಯ 711, ಮೈಸೂರು 1,687, ರಾಯಚೂರು 249,

ರಾಮನಗರ 165, ಶಿವಮೊಗ್ಗ 548, ತುಮಕೂರು 882, ಉಡುಪಿ 636, ಉತ್ತರ ಕನ್ನಡ 456, ವಿಜಯಪುರ 166 ಮತ್ತು ಯಾದಗಿರಿಯಲ್ಲಿ 116 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

ಬುಧವಾರ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ; ನಾಲ್ವರ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ ಕಂಡಿತ್ತು.

ಆದ್ರೆ ಇಂದು ಮತ್ತೆ ಸೋಂಕು ಚೇತರಿಸಿಕೊಂಡಿದೆ. ಇಂದು 285 ಜನರಿಗೆ ಸೋಂಕು ತಗುಲಿದೆ. ಬುಧವಾರ ಜಿಲ್ಲಾಡಳಿತದ ಮಾಹಿತಿ ಪ್ರಕಾರ ನಾಲ್ವರು ಮೃತಪಟ್ಟಿದ್ದಾರೆ.

ಇಂದಿನ 285 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 23065 ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -115, ಮುಂಡರಗಿ-24, ನರಗುಂದ-19, ರೋಣ-45, ಶಿರಹಟ್ಟಿ-73, ಹೊರಜಿಲ್ಲೆಯ-09 ಸೇರಿದಂತೆ 285 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ನಾಲ್ವರು ಮೃತಪಟ್ಟಿದ್ದು, ಮೃತರ ಸಂಖ್ಯೆ 258 ಕ್ಕೇರಿದೆ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ನಿವಾಸಿ 60 ವರ್ಷದ ಮಹಿಳೆ ಮೇ-17 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಮೇ ಮೇ-31 ರಂದು ಮೃತಪಟ್ಟಿದ್ದಾರೆ.

ಗದಗ ಶಹರದ ನಿವಾಸಿ 57 ವರ್ಷದ ಮಹಿಳೆ ಮೆ,30 ರಂದು ಜಿಮ್ಸ್ ‌ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ದೃಢಪಟ್ಟಿತ್ತು, ಮೇ 30 ರಂದೇ ಮೃತಪಟ್ಟಿದ್ದಾರೆ.

ಗದಗ ತಾಲೂಕಿನ ಹಿರೇಕೊಪ್ಪ ನಿವಾಸಿ 65 ವರ್ಷದ ವ್ಯಕ್ತಿ ಮೇ, 15 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಮೇ, 30 ರಂದು ಮೃತಪಟ್ಟಿದ್ದಾರೆ.

ಶಿರಹಟ್ಟಿ ತಾಲೂಕಿನ ಗೊಜನೂರ ನಿವಾಸಿ 45 ವರ್ಷದ ವ್ಯಕ್ತಿ ಮೇ 28 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 31 ರಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 347 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 21484 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 2323 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 193 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಕಾಂಗ್ರೆಸ್ ‌ಮುಖಂಡ ಅಲ್ತಾಫ್ ಕಿತ್ತೂರು ವಿರುದ್ಧ ಕೇಸ್

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಕೋವಿಡ್ ನಿಯಮಾವಳಿ ಉಲ್ಲಂಘಿಸಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಮುಖಂಡ, ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಮಾಜಿ ಸದಸ್ಯ ಅಲ್ತಾಫ್ ನವಾಜ್ ಕಿತ್ತೂರು ವಿರುದ್ಧ ಪ್ರಕರಣ ದಾಖಲಾಗಿದೆ.

ಕಸಬಾ ಪೇಟೆ ಪೊಲೀಸರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಕೇಸ್ ಬುಕ್ ಮಾಡಿದ್ದಾರೆ ಎನ್ನಲಾಗಿದೆ.

ನಿನ್ನೆ ಹಳೆ ಹುಬ್ಬಳ್ಳಿಯ ಮಸೀದಿ ಪಕ್ಕದ ಶೆಡ್ ನಲ್ಲಿ ಕಾರ್ಯಕರ್ತರ ಹಾಗೂ ಅಭಿಮಾನಿಗಳನ್ನು ಸೇರಿಸಿಕೊಂಡು ಅಲ್ತಾಫ್ ಕಿತ್ತೂರು ಅದ್ದೂರಿ ಬರ್ತಡೆ ಪಾರ್ಟಿ ಮಾಡಿದ್ದರು.

ಮುಂಜಾನೆಯಿಂದಲೇ ವಿವಿಧ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿತ್ತು. ಅಷ್ಟೇ ಅಲ್ಲ ಸೋಶಿಯಲ್ ಮೀಡಿಯಾದಲ್ಲೂ ಬರ್ತಡೆ ಪಾರ್ಟಿಯ ವಿಡಿಯೋ ವೈರಲ್ ಆಗಿತ್ತು. ವಿಜಯಸಾಕ್ಷಿ ವೆಬ್ ನಲ್ಲೂ ವಿಸ್ತೃತ ವರದಿ ಪ್ರಕಟವಾಗಿತ್ತು.

ಬರ್ತಡೆ ಪಾರ್ಟಿ ಸುದ್ದಿ ಬಂದಿದ್ದನ್ನು ಅರಗಿಸಿಕೊಳ್ಳದ ಅಲ್ತಾಫ್ ಸಾಹೇಬರು, ಒಂದು ವಿಡಿಯೋ ಮಾಡಿ ಅದರಲ್ಲಿ ಸುದ್ದಿ ಪ್ರಕಟಿಸಿದ ಮಾಧ್ಯಮಗಳ ವಿರುದ್ಧ ಹರಿ ಹಾಯ್ದಿದ್ದರು. ಅಷ್ಟೇ ಅಲ್ಲದೇ, ಮಾನನಷ್ಟ ಮೂಕದ್ದೆಮೆ ದಾಖಲು ಮಾಡುವ ಬೆದರಿಕೆ ಕೂಡ ಹಾಕಿದ್ದರು. ಆ ವಿಡಿಯೋ ವಿವಿಧ ಗ್ರೂಪ್ ಗಳಲ್ಲಿ ಶೇರ್ ಮಾಡಲಾಗಿತ್ತು. ಆದರೆ ಗ್ರೂಪ್‌ ನಲ್ಲಿದ್ದ ಜನರು ಸುಳ್ಳು ಅಂತ ಪ್ರತಿಕ್ರಿಯೆ ನೀಡಿದ್ದರು.

ಕಸಬಾ ಪೇಟೆ ಠಾಣೆಯ ಇನ್ಸ್‌ಪೆಕ್ಟರ್ ರತನ್ ಕುಮಾರ್ ಜಿರಗ್ಯಾಳ ಈ ಕುರಿತು ಮಾಹಿತಿ ‌ನೀಡಿದ್ದು, ಮೊದಲಿಗೆ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಬಗ್ಗೆ ಪ್ರಕರಣ ದಾಖಲಾಗಿದ್ದು, ಇನ್ನೂ ಪರಿಶೀಲನೆ ನಡೆಸಲಾಗುತ್ತದೆ. ನಾವು ಬರ್ತಡೆ ಪಾರ್ಟಿ ನಡೆದಾಗ ಸ್ಥಳದಲ್ಲಿ ಇರಲಿಲ್ಲ. ಹಾಗಾಗಿ ಪರಿಶೀಲನೆ ನಡೆಸಿ ಉಳಿದವರ ಮೇಲೂ ಪ್ರಕರಣ ದಾಖಲು ಮಾಡಿಕೊಳ್ಳುವ ಬಗ್ಗೆ ಆಲೋಚನೆ ಮಾಡಲಾಗುವುದು ಎಂದರು.

error: Content is protected !!