Home Blog Page 3099

ಉದಾಸಿ ಅಂತ್ಯಕ್ರಿಯೆಗೆ ಆಗಮಿಸದಿರಲು ಮನವಿ

ವಿಜಯಸಾಕ್ಷಿ ಸುದ್ದಿ, ಗದಗ

ಬಿಜೆಪಿ ಹಿರಿಯ ನಾಯಕ, ಹಾನಗಲ್ ಕ್ಷೇತ್ರದ ಶಾಸಕ ಹಾಗೂ ಲೋಕೋಪಯೋಗಿ ಇಲಾಖೆ ಮಾಜಿ ಸಚಿವ ಸಿ.ಎಂ. ಉದಾಸಿ ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ. ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕುಟುಂಬಸ್ಥರು ಮತ್ತು ಅತ್ಯಾಪ್ತರಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಅಂತ್ಯಕ್ರಿಯೆಗೆ ಆಗಮಿಸದೇ, ತಾವು ಇರುವ ಸ್ಥಳದಲ್ಲೇ ಶ್ರದ್ಧಾಂಜಲಿ ಸಲ್ಲಿಸಬೇಕು ಎಂದು ಸಂಸದ ಶಿವಕುಮಾರ ಉದಾಸಿ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ತಂದೆಯವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಹಾನಗಲ್‌ನಲ್ಲಿ ಬುಧವಾರ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಅವರ ಅಂತಿಮ ದರ್ಶನ ಮತ್ತು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೋವಿಡ್ ಅಡ್ಡಿಯಾಗಿದೆ ಎಂದು ತಿಳಿಸಿದ್ದಾರೆ.

ನಾಡಿನುದ್ದಕ್ಕೂ ಸಿ.ಎಂ. ಉದಾಸಿ ಅವರು ಪಕ್ಷಾತೀತವಾಗಿ ಲಕ್ಷಾಂತರ ಅಭಿಮಾನಿಗಳು, ಬೆಂಬಲಿಗರನ್ನು ಹೊಂದಿದ್ದಾರೆ. ಅವರ ಅಗಲಿಕೆಯಿಂದ ಎಲ್ಲರಿಗೂ ದುಃಖವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಗದಗ ಮತ್ತು ಹಾವೇರಿಯಲ್ಲಿ ಪ್ರತ್ಯೇಕವಾಗಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗುತ್ತಿದ್ದು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಕೊರೊನಾ; ಎರಡಂಕಿಗಿಳಿದ ಪಾಸಿಟಿವ್ ಸಂಖ್ಯೆ; ಜಿಲ್ಲೆಯ ಜನರಿಗೆ ಸಂತಸದ ಸುದ್ದಿ, ನರಗುಂದ ಸೋಂಕು ಮುಕ್ತ!

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯ ಜನರಿಗೆ ಮಂಗಳವಾರ ನೆಮ್ಮದಿ ತಂದಿದೆ. ಸತತ ನಾಲ್ಕನೇ ದಿನಗಳ ನಂತರ ಇದೇ‌ ಮೊದಲ ಬಾರಿಗೆ ಸೋಂಕಿತರ ಸಂಖ್ಯೆ ನೂರರ ಒಳಗೆ ಬಂದಿದೆ.
ಇವತ್ತಿನ ವರದಿಯಲ್ಲಿ ನರಗುಂದ ತಾಲೂಕು ಸೋಂಕು ‌ಮುಕ್ತವಾಗಿದೆ.

ಕಳೆದ ಶುಕ್ರವಾರದಿಂದ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖದತ್ತ ಸಾಗಿದ್ದು, ಮಂಗಳವಾರ ಕೇವಲ 78 ಜನರಿಗೆ ಮಾತ್ರ ಸೋಂಕು ತಗುಲಿದ ಬಗ್ಗೆ ಜಿಲ್ಲಾಡಳಿತ ಹಾಗೂ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇದರಿಂದಾಗಿ ಜಿಲ್ಲೆಯ ಜನ ನಿರಾಳರಾದಂತಾಗಿದೆ.

ಇಂದು 78 ಜನರಿಗೆ ಸೋಂಕು ತಗುಲಿದೆ. ಇಂದು ಜಿಲ್ಲಾಡಳಿತದ ಮಾಹಿತಿ ಪ್ರಕಾರ ಇಬ್ಬರು ಮೃತಪಟ್ಟಿದ್ದಾರೆ.

ಇಂದಿನ 78 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 25013 ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -32, ಮುಂಡರಗಿ-13, ನರಗುಂದ-00, ರೋಣ-10, ಶಿರಹಟ್ಟಿ-21, ಹೊರಜಿಲ್ಲೆಯ-02 ಸೇರಿದಂತೆ 78 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ಇಬ್ಬರು ಮೃತಪಟ್ಟಿದ್ದು, ಮೃತರ ಸಂಖ್ಯೆ 277 ಕ್ಕೇರಿದೆ.

ಗದಗ ತಾಲೂಕಿನ ದುಂದೂರು ನಿವಾಸಿ 86 ವರ್ಷದ ವ್ಯಕ್ತಿ ಮೇ-31 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಜೂನ -06 ರಂದು ಮೃತಪಟ್ಟಿದ್ದಾರೆ.

ರೋಣ ತಾಲೂಕಿನ ಅಸೂಟಿ ಗ್ರಾಮದ ನಿವಾಸಿ 70 ವರ್ಷದ ವ್ಯಕ್ತಿ ಜೂನ್- 03 ರಂದು ಜಿಮ್ಸ್ ‌ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ದೃಢಪಟ್ಟಿತ್ತು, ಜೂನ್ 07 ರಂದೇ ಮೃತಪಟ್ಟಿದ್ದಾರೆ.

ಇವರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 285 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 23391 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 1345 ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 120 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಸಿಎಂ ಉದಾಸಿ ನಿಧನ; ಸಿಎಂ ಯಡಿಯೂರಪ್ಪ ಸಂತಾಪ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕ ಚನ್ನಬಸಪ್ಪ ಮಹಾಲಿಂಗಪ್ಪ ಉದಾಸಿ ಇಂದು ನಿಧನರಾಗಿದ್ದು, ಅವರಿಗೆ ಸಿಎಂ ಯಡಿಯೂರಪ್ಪ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ 81 ವರ್ಷದ ಸಿ.ಎಂ. ಉದಾಸಿ ಅವರು, ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ರಕ್ತ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಕಳೆದ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಉದಾಸಿ ಚಿಕಿತ್ಸೆ ಪಡೆಯುತ್ತಿದ್ದರು. ಆರು ಬಾರಿ ಶಾಸಕರಾಗಿ ಗೆದ್ದಿದ್ದ ಉದಾಸಿ 2013 ಮತ್ತು 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಶಾಸಕರ ಅಂತ್ಯಕ್ರಿಯೆ ಹಾನಗಲ್ ನಲ್ಲಿ ಬುಧವಾರ ನಡೆಯಲಿದೆ ಎಂದು ಉದಾಸಿ ಪುತ್ರ ಶಿವಕುಮಾರ್ ಉದಾಸಿ ತಿಳಿಸಿದ್ದಾರೆ.

ಹಿರಿಯ ಶಾಸಕ ಸಿ.ಎಂ.ಉದಾಸಿ ಅವರ ನಿಧನಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಿ.ಎಂ ಉದಾಸಿಯವರು ಸಜ್ಜನ ಹಾಗೂ ಕ್ರಿಯಾಶೀಲ ರಾಜಕಾರಣಿ. ಲೋಕೋಪಯೋಗಿ ಸಚಿವರಾಗಿಯೂ ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಅಭಿವೃದ್ಧಿ ಪರ ಚಿಂತಕರಾಗಿದ್ದ ಅವರು ಹಾನಗಲ್ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿ, ಆ ಭಾಗದಲ್ಲಿ ಮಾತ್ರವಲ್ಲದೆ ರಾಜ್ಯದ ಅತ್ಯಂತ ಜನಪ್ರಿಯ ನಾಯಕರಾಗಿದ್ದರು. ಅವರ ನಿಧನದಿಂದ ಅಪರೂಪದ ನೇತಾರರೊಬ್ಬರನ್ನು ನಾಡು ಕಳೆದುಕೊಂಡಂತಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.

ಬೆಲೆ ಕಳೆದುಕೊಂಡ ಹೂವು; ಹೊಲವೆಲ್ಲ ಹರಗಿದ ರೈತ!

ಲಾಕ್‌ಡೌನ್ ಹಿನ್ನೆಲೆ ಶುಭಕಾರ್ಯಗಳಿಲ್ಲದೆ ಹೂವುಗಳಿಗೆ ಬೇಡಿಕೆಯಿಲ್ಲ!

ವಿಜಯಸಾಕ್ಷಿ ಸುದ್ದಿ, ಗದಗ

ಹೂವಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇಲ್ಲದ ಕಾರಣಕ್ಕೆ ರೈತರೊಬ್ಬರು ಟ್ರ್ಯಾಕ್ಟರ್ ಮೂಲಕ ಹೂವಿನ ಬೆಳೆಯನ್ನೇ ಹರಗಿರುವ ಘಟನೆ ನಡೆದಿದೆ. ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೂವು ಕೇಳುವವರೇ ಇಲ್ಲದಂತಾಗಿದೆ. ಹೀಗಾಗಿ ಹೂವು ಬೆಳೆದ ರೈತರು ಸಂಕಷ್ಟಕ್ಕೆ ಮುಳುಗಿದ್ದಾರೆ. ತಾಲೂಕಿನ ಸಂಭಾಪುರ ಗ್ರಾಮದ ರೈತ ಕಿರಣಗೌಡ ಬಂಡಿ ಎಂಬುವರು ತಮ್ಮ ಮೂರು ಎಕರೆ ಭೂಮಿಯಲ್ಲಿ ಬೆಳೆದಿದ್ದ ಸೇವಂತಿ ಹೂವಿನ ಬೆಳೆಯನ್ನು ಹರಗಿದ್ದಾರೆ.

ಕಳೆದ ಬಾರಿಯೂ ಹೂವಿಗೆ ಭರ್ಜರಿ ಬೆಲೆ ಸಿಗುತ್ತದೆ ಎಂಬ ಸಮಯದಲ್ಲಿಯೇ ಲಾಕ್‌ಡೌನ್ ಜಾರಿಯಾಗಿತ್ತು. ಆದರೆ, ಈ ಬಾರಿ ಹಾಗಾಗುವುದಿಲ್ಲ. ಕಳೆದ ಬಾರಿ ಲಾಕ್ ಡೌನ್ ಇದ್ದಿದ್ದರಿಂದಾಗಿ ಈ ಬಾರಿ ಹೆಚ್ಚಿನ ಶುಭ ಕಾರ್ಯಗಳು ನಡೆಯಲಿದ್ದು, ಭರ್ಜರಿ ಲಾಭ ಸಿಗಬಹುದು ಎಂದು ರೈತರು ಹೆಚ್ಚು ಖರ್ಚು ಮಾಡಿ ಹೂವು ಬೆಳೆದಿದ್ದರು. ಆದರೆ, ಈ ಸಮಯದಲ್ಲಿಯೂ ಲಾಕ್‌ಡೌನ್ ಜಾರಿಯಾಗಿದ್ದು ರೈತರು ಕಂಗಾಲಾಗಿದ್ದಾರೆ.

ಪರಿಹಾರ ಆಳಿನ ಖರ್ಚಿಗೂ ಸಾಲದು

ಈ ರೈತ 3 ಲಕ್ಷ ರೂ. ಖರ್ಚು ಮಾಡಿ ಹೂವು ಬೆಳೆ ಬೆಳೆದಿದ್ದರು. ಆದರೆ, ಅವರ ಹೂವು ಕೇಳುವವರೇ ಇಲ್ಲದಾಗಿದೆ. ಹೀಗಾಗಿ ಬೇಸರಗೊಂಡು ಹೂವಿನ ಬೆಳೆಯನ್ನೇ ಹರಗಿದ್ದಾರೆ. ಸರ್ಕಾರ ಹೂವು ಬೆಳೆಗಾರರ ನಷ್ಟ ತುಂಬಲು ಪರಿಹಾರ ಘೋಷಿಸಿದೆಯಾದರೂ ಅದು ನೀಡುವ 10 ಸಾವಿರ ರೂ. ಪರಿಹಾರ ಆಳಿನ ಖರ್ಚಿಗೂ ಆಗುವುದಿಲ್ಲ. ಸಾಲ ಮಾಡಿ ಬೆಳೆ ಬೆಳೆದಿದ್ದೇವೆ. ಲಕ್ಷಾಂತರ ರೂ. ಸಾಲ ಮಾಡಿದ್ದೇವೆ. ಹೀಗಾಗಿ ಸರ್ಕಾರೂ ಎಕರೆಗೆ ಸುಮಾರು 70 ಸಾವಿರ ರೂ.ಗಳಷ್ಟಾದರೂ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.

ಜೂನ್ 10 ರಂದು ಗದುಗಿಗೆ ಸಚಿವೆ ಶಶಿಕಲಾ ಜೊಲ್ಲೆ ಭೇಟಿ

ವಿಜಯಸಾಕ್ಷಿ ಸುದ್ದಿ, ಗದಗ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ಜೂನ್ ೯ರ ಬುಧವಾರ ರಾತ್ರಿ 8:30 ಗಂಟೆಗೆ ಗದುಗಿಗೆ ಆಗಮಿಸಿ, ವಾಸ್ತವ್ಯ ಮಾಡುವರು.

ಮರುದಿನ ಜೂನ್ 10ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗದಗ ಜಿಲ್ಲೆಯಲ್ಲಿ ಕೊರೊನಾ ಸಂಭಾವ್ಯ 3ನೇ ಅಲೆಯಿಂದ ಮಕ್ಕಳ ರಕ್ಷಣೆ ಹಾಗೂ ಆರೈಕೆಗೆ ಕೈಗೊಳ್ಳಬೇಕಾದ ಮುಂಜಾರೂಕತೆ ಕ್ರಮಗಳ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ಮಧ್ಯಾಹ್ನ 12 ಗಂಟೆಗೆ ಪತ್ರಿಕಾಗೋಷ್ಠಿ ಜರುಗಿಸುವರು. ಅನಂತರ ಕೊಪ್ಪಳಕ್ಕೆ ಪ್ರಯಾಣ ಮಾಡುವರು.

ಸಿಇಟಿ ಪರೀಕ್ಷೆಗೆ ದಿನಾಂಕ ನಿಗದಿ! ಸಿಇಟಿ ಅಂಕಗಳೇ ಭವಿಷ್ಯ ನಿರ್ಧರಿಸಲಿವೆ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ವೃತ್ತಿಪರ ಕೋರ್ಸ್‌ ಗಳಿಗೆ ಪ್ರವೇಶ ಪಡೆಯಲು ಈ ಬಾರಿ ಕೇವಲ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ಡಿಸಿಎಂ ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಕೊರೊನಾ ಲಾಕ್ ಡೌನ್ ನಿಂದಾಗಿ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಸರ್ಕಾರ ರದ್ದುಗೊಳಿಸಿದೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ವೃತ್ತಿಪರ ಕೋರ್ಸ್‌ ಗಳಿಗೆ ಪ್ರವೇಶ ಪಡೆಯಲು ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಲು ಸಲಹೆ ನೀಡಿದ್ದು, ಈ ಸಲಹೆ ಪರಗಿಣಿಸಲಾಗಿದೆ ಎಂದು ಹೇಳಿದ್ದಾರೆ.

ಪಿಯುಸಿ ಅಂಕಗಳ ನೀತಿಯಲ್ಲಿ ಅಗತ್ಯ ತಿದ್ದುಪಡಿ ತರಲಾಗುವುದು. ಪದವಿ ಕಾಲೇಜು ಸೇರಿದಂತೆ ಇನ್ನಿತರ ಕೋರ್ಸ್‌ ಗಳಿಗೆ ಪ್ರವೇಶ ನೀಡುವುದಕ್ಕಾಗಿ ಅಗತ್ಯವಿರುವ ಪೂರ್ವ ಸಿದ್ಧತಾ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ವಿಜ್ಞಾನ ವಿಭಾಗದ ಡಿಗ್ರಿ ವಿದ್ಯಾರ್ಥಿಗಳ ಪ್ರವೇಶವನ್ನು ಸಿಇಟಿ ಮುಖಾಂತರವೇ ನಿರ್ಧರಿಸುವ ಚಿಂತನೆ ಇದೆ ಎಂದು ಅವರು ಹೇಳಿದ್ದಾರೆ.

ಆಗಷ್ಟ್ 28, 29ಕ್ಕೆ ಸಿಇಟಿ ಪರೀಕ್ಷೆಗಳು ನಡೆಯಲಿವೆ. ರಾಜ್ಯಾದ್ಯಂತ ಸುಮಾರು 500ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಈ ಅವಧಿಯಲ್ಲಿಯೇ ಪರೀಕ್ಷೆ ನಡೆಯಲಿದೆ. ಆಗಷ್ಟ್ 28ಕ್ಕೆ ಜೀವಶಾಸ್ತ್ರ, ಗಣಿತ, ಆಗಷ್ಟ್ 29ಕ್ಕೆ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಆಗಷ್ಟ್ 30ಕ್ಕೆ ಗಡಿನಾಡು, ಹೊರನಾಡು ಕನ್ನಡಿಗರಿಗೆ ಕನ್ನಡ ಪರೀಕ್ಷೆ ನಡೆಯಲಿವೆ ಎಂದು ಅವರು ಹೇಳಿದ್ದಾರೆ.

ಈ ಬಾರಿ ಪರೀಕ್ಷೆ ಮಾನದಂಡಗಳು ಕೂಡ ಬದಲಾಗಿವೆ. ವಿಜ್ಞಾನ ವಿಭಾಗದ ಎಲ್ಲಾ ವಿದ್ಯಾರ್ಥಿಗಳಿಗೆ ಸಿಇಟಿ ಬರೆಯಲು ಅವಕಾಶ ಕಲ್ಪಿಸಲಾಗುವುದು. ಪಿಯುಸಿನಲ್ಲಿ ತೇರ್ಗಡೆಯಾಗಿದ್ದವರು ಕನಿಷ್ಠ ಶೇ. 40-45 ಅಂಕ ಪಡೆದವರಿಗೆ ಮಾತ್ರ ಸಿಇಟಿ ಬರೆಯಲು ಅವಕಾಶವಿತ್ತು. ಸದ್ಯ ಈ ನಿಯಮ ಬದಲಾಯಿಸಲಾಗಿದೆ.

ಮಹಾತ್ಮಾ ಗಾಂಧಿ ಮರಿ ಮೊಮ್ಮಗಳಿಗೆ ಜೈಲು ಶಿಕ್ಷೆ!

ವಿಜಯಸಾಕ್ಷಿ ಸುದ್ದಿ, ಡರ್ಬನ್

ವಂಚನೆ ಹಾಗೂ ಖೋಟಾ ಪ್ರಕರಣದಲ್ಲಿ ಮಹಾತ್ಮಾ ಗಾಂಧಿ ಅವರ ಮರಿ ಮೊಮ್ಮಗಳಿಗೆ ಜೈಲು ಶಿಕ್ಷೆಯಾಗಿದೆ.
ಆರು ದಶಲಕ್ಷ ರ್ಯಾಂಡ್ ವಂಚನೆ ಹಾಗೂ ಖೋಟಾ ಪ್ರಕರಣದಲ್ಲಿ ಗಾಂಧಿ ಮರಿ ಮೊಮ್ಮಗಳಿಗೆ ಡರ್ಬನ್ ನ್ಯಾಯಾಲಯ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಆಶಿಶ್ ಲತಾ ರಾಮ್‌ ಗೋಬಿನ್ (56) ಶಿಕ್ಷೆಗೊಳಗಾದವರು.

ಲತಾ ರಾಮ್ ಗೋಬಿನ್ ಅವರು 2015ರಲ್ಲಿ ನ್ಯೂ ಆಫ್ರಿಕಾ ಅಲಯನ್ಸ್ ಕಂಪನಿ ನಿರ್ದೇಶಕ ಎಸ್‌.ಆರ್‌. ಮಹಾರಾಜ್ ಅವರನ್ನು ಭೇಟಿ ಮಾಡಿದ್ದರು. ಈ ಕಂಪನಿಯು ಲೆನಿನ್ ಬಟ್ಟೆ ಮತ್ತು ಪಾದರಕ್ಷೆಗಳನ್ನು ಆಮದು ಮಾಡಿಕೊಂಡು ಮಾರಾಟ ಮಾಡುತ್ತಿದೆ. ದಕ್ಷಿಣ ಆಫ್ರಿಕಾದ ನೆಟ್‌ ಕೇರ್ ಆಸ್ಪತ್ರೆ ಸಮೂಹಗಳಿಗೆ ವಿತರಿಸಲು ಭಾರತದಿಂದ ಮೂರು ಕಂಟೇನರ್ ಲೆನಿನ್ ಬಟ್ಟೆಗಳನ್ನು ಆಮದು ಮಾಡಿಕೊಳ್ಳುತ್ತಿರುವುದಾಗಿ ಲತಾ ರಾಮ್ ಗೋಬಿನ್ ಮಹಾರಾಜ್ ಅವರಿಗೆ ಹೇಳಿದ್ದರು.

ಆಮದು ಮಾಡಿಕೊಳ್ಳುತ್ತಿದ್ದ ವಸ್ತುಗಳ ಕಸ್ಟಂ ಸುಂಕಕ್ಕಾಗಿ 6.2 ದಶಲಕ್ಷ ರಾಂಡ್ ಪಡೆದಿದ್ದು, ಆದಾಯದಲ್ಲಿ ಪಾಲು ನೀಡುವುದಾಗಿ ಹೇಳಿ ವಂಚಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ಭಾರತದಿಂದ ಮೂರು ಕಂಟೇನರ್ ಲೆನಿನ್ ಬಟ್ಟೆಗಳನ್ನು ತರುತ್ತಿರುವುದಾಗಿ ಉದ್ಯಮಿ ನಂಬಿಸಲು ಲತಾ ಅವರು ನಕಲಿ ದಾಖಲೆ ಒದಗಿಸಿದ್ದರು ಎಂದು ತಿಳಿಸಿದ್ದರು. ಈ ಕುರಿತು ರಾಷ್ಟ್ರೀಯ ಪ್ರಾಸಿಕ್ಯೂಟಿಂಗ್ ಪ್ರಾಧಿಕಾರದ ಬ್ರಿಗೇಡಿಯರ್ ಹಂಗ್ವಾನಿ ಮುಲಾಡ್ಜಿ ಹೇಳಿದ್ದರು.

ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೆಂಕಿ – 18 ಜನ ದಹನ

ವಿಜಯಸಾಕ್ಷಿ ಸುದ್ದಿ, ಪುಣೆ

ಖಾಸಗಿ ಕೆಮಿಕಲ್ ಫ್ಯಾಕ್ಟರಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು 18 ಜನ ಸಜೀವವಾಗಿ ದಹನವಾಗಿರುವ ದುರ್ಘಟನೆ ನಗರದ ಘೋಟವಾಡ ಫಾಟಾ ಎಂಬಲ್ಲಿ ನಡೆದಿದೆ.

ಕಾರ್ಖಾನೆಯ ಒಳಗೆ ಇರುವವರನ್ನು ಹುಡುಕುವ ಮತ್ತು ರಕ್ಷಿಸುವ ಕಾರ್ಯ ನಡೆಯುತ್ತಿದೆ. ಸದ್ಯ ಫ್ಯಾಕ್ಟರಿಯ ಒಳಗೆ 40ಕ್ಕೂ ಅಧಿಕ ಜನ ಕಾರ್ಮಿಕರು ಇದ್ದರು ಎಂದು ತಿಳಿದು ಬಂದಿದೆ.

ಕಾರ್ಖಾನೆಯಲ್ಲಿ ಬೆಂಕಿ ತಗುಲಿದ ಸುದ್ದಿ ತಿಳಿಯುತ್ತಿದ್ದಂತೆ ಕೂಡಲೇ 8 ಅಗ್ನಿಶಾಮಕ ದಳದ ತಂಡಗಳು ಬೆಂಕಿ ನಂದಿಸುವ ಕೆಲಸದಲ್ಲಿ ತೊಡಗಿವೆ. ಸದ್ಯ ಅಗ್ನಿ ಶಾಮಕ ದಳದ ಸಿಬ್ಬಂದಿ 20 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಘಟನೆಯಲ್ಲಿ 18 ಜನ ಬಲಿಯಾಗಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ ಐವರು ಇನ್ನೂ ಸಿಕ್ಕಿಲ್ಲ. ಇಲ್ಲಿಯವರೆಗೆ ಪತ್ತೆಯಾಗದಿರುವ ಕಾರ್ಮಿಕರಿಗಾಗಿ ಹುಡುಕಾಟ ಮತ್ತು ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ್ದ ಆಟಗಾರ ಈ ರೀತಿ ಜನರ ಮನಸ್ಸು ಗೆದ್ದ

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಕ್ರಿಕೆಟ್ ಸೇರಿದಂತೆ ಯಾವುದೇ ಆಟವಿರಲಿ. ಆಡುವ ವ್ಯಕ್ತಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುತ್ತಾರೆ. ಅವರಿಗೆ ಆ ಆಟಗಾರ ಯಾವಾಗಲೂ ರೋಲ್ ಮಾಡೆಲ್ ಆಗಿರುತ್ತಾರೆ. ಆದರೆ, ಇತ್ತೀಚೆಗೆ ಇಂತಹ ರೋಲ್ ಮಾಡೆಲ್ ಗಳಲ್ಲಿನ ಕೆಲವರು ಕೆಟ್ಟ ಚಟಕ್ಕೆ ಸಿಲುಕುತ್ತಿದ್ದಾರೆ. ಅವು ಬಹಿರಂಗವಾಗುತ್ತಿವೆ ಕೂಡ. ಆದರೆ, ಇಂತ ಕೆಟ್ಟ ಪರಿಸ್ಥಿತಿಯಲ್ಲಿದ್ದರೂ ತನ್ನ ಸಾಮರ್ಥ್ಯದ ಬಲದಿಂದ ಅವೆಲ್ಲವನ್ನು ಜಯಿಸಬಹುದು ಎಂಬುವುದಕ್ಕೆ ಇಲ್ಲೊಂದು ಉದಾಹರಣೆ ಸಿಕ್ಕಿದೆ.

ಬಾಂಗ್ಲಾದೇಶದ ರುಬೆಲ್ ಹೊಸೈನ್ ಇದಕ್ಕೆ ದೊಡ್ಡ ಉದಾಹರಣೆ. ಅವರು ಡಾಕಾ ಟಿ20 ಲೀಗ್‌ ನಲ್ಲಿ ಕೇವಲ 24 ಎಸೆತಗಳಲ್ಲಿ ಅಗ್ರ ಕ್ರಮಾಂಕದಿಂದ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಗಳನ್ನು ಬಲಿ ಪಡೆದು ಮಿಂಚಿದ್ದಾರೆ.

ಪಾರ್ಟೆಕ್ಸ್ ಸ್ಪೋರ್ಟಿಂಗ್ ಕ್ಲಬ್ ವಿರುದ್ಧ ಆಡಿದ ಬಲಗೈ ವೇಗದ ಬೌಲರ್ ರುಬೆಲ್ ಹೊಸೈನ್, ಇಂತಹ ಸಾಧನೆಗೆ ಸಾಕ್ಷಿಯಾಗಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ರುಬೆಲ್ ತಂಡ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕಂಡು 167 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಪಾರ್ಟೆಕ್ಸ್ ಸ್ಪೋರ್ಟಿಂಗ್ ಕ್ಲಬ್‌ ತಂಡ, ರುಬೆಲ್ ಹೊಸೈನ್‌ ದಾಳಿಯ ಮುಂದೆ ಎದುರು ನಿಲ್ಲಲಿಲ್ಲ. ಅಲ್ಲದೇ, ಕೇವಲ 95 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋತಿದೆ.

ರುಬೆಲ್ ಹೊಸೈನ್ 4 ಓವರ್ ಗಳಲ್ಲಿ 30 ರನ್ ನೀಡಿ ಪ್ರಮುಖ 4 ವಿಕೆಟ್ ಗಳನ್ನು ಕಿತ್ತುಕೊಂಡಿದ್ದಾರೆ. ಇಬ್ಬರು ಉತ್ತಮ ಬ್ಯಾಟ್ಸಮನ್ ಗಳನ್ನು ಶೂನ್ಯಕ್ಕೆ ಫವಲಿಯನ್ ಗೆ ಅಟ್ಟುವಲ್ಲಿ ಹೊಸೈನ್ ಯಶಸ್ವಿಯಾಗಿದ್ದಾರೆ. ಓರ್ವ ಬ್ಯಾಟ್ಸಮನ್ 10 ರನ್ ಗೆ ಔಟ್ ಆದರೆ, ಮತ್ತೊಬ್ಬ ಆಟಗಾರ 10ಕ್ಕೂ ಕಡಿಮೆ ರನ್ ಹೊಡೆಯಲು ವಿಫಲರಾಗುವಂತೆ ಹೊಸೈನ್ ಮಾರಕ ದಾಳಿ ನಡೆಸಿದ್ದಾರೆ.

31 ವರ್ಷದ ಬಾಂಗ್ಲಾದೇಶದ ವೇಗದ ಬೌಲರ್ ಹೊಸೈನ್, ವಿವಾದಗಳೊಂದಿಗೆ ಆಳವಾಗಿ ಸಂಬಂಧ ಹೊಂದಿದ್ದಾರೆ. ಅವರ ಮೇಲೆ ಅತ್ಯಾಚಾರದ ಗಂಭೀರ ಆರೋಪ ಇದೆ. ಅತ್ಯಾಚಾರದ ಆರೋಪದಡಿಯಲ್ಲಿ ಅವರು 3 ದಿನಗಳ ಕಾಲ ಜೈಲು ಸೇರಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ, ಅವರನ್ನು ಬಾಂಗ್ಲಾದೇಶದ 2015ರ ವಿಶ್ವಕಪ್ ತಂಡದಲ್ಲಿ ಆಯ್ಕೆ ಮಾಡಲಾಯಿತು. ಅಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯ ಗೆದ್ದ ನಂತರ ಅವರ ವಿರುದ್ಧದ ಎಲ್ಲ ಆರೋಪಗಳನ್ನು ಕೈಬಿಡಲಾಯಿತು. ಸದ್ಯ ಅಂಗಳದಲ್ಲಿ ಮಿಂಚುವುದನ್ನು ಮಾತ್ರ ಅವರು ಬಿಡುತ್ತಿಲ್ಲ.

ಒಲಂಪಿಕ್ಸ್ ನಲ್ಲಿ ಆಡುತ್ತಿಲ್ಲ ಸೈನಾ!

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಭಾರತೀಯ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರರಾದ ಸೈನಾ ನೆಹ್ವಾಲ್ ಮತ್ತು ಕಿದಂಬಿ ಶ್ರೀಕಾಂತ್ ಒಲಂಪಿಕ್ಸ್ ನಿಂದ ಹೊರಗೆ ಬಿದ್ದಿದ್ದು, ಭಾರತೀಯರಿಗೆ ನಿರಾಸೆ ಮೂಡಿಸಿದೆ. ಜೂನ್ 15ಕ್ಕೆ ಟೋಕಿಯೋ‌ ಒಲಿಂಪಿಕ್ಸ್ 2021ರ ಅರ್ಹತೆಗೆ ಕೊನೆಯ ದಿನಾಂಕ ಮುಗಿಯಲಿದೆ. ಆದರೆ, ಇದರ ಮಧ್ಯೆ ಯಾವುದೇ ಅರ್ಹತಾ ಪಂದ್ಯಗಳು ನಡೆಯುತ್ತಿಲ್ಲ. ಹೀಗಾಗಿ ಸೈನಾ ನೆಹ್ವಾಲ್ ಮತ್ತು ಕಿದಂಬಿ ಶ್ರೀಕಾಂತ್ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಬ್ಯಾಡ್ಮಿಂಟನ್ ಫೆಡರೇಶನ್ ಆಫ್ ಇಂಡಿಯಾ ತಿಳಿಸಿದೆ.

ಟೋಕಿಯೋ ಒಲಿಂಪಿಕ್ಸ್ ಗೆ ಸಂಬಂಧಿಸಿದಂತೆ ಯಾವುದೇ ಅರ್ಹತಾ ಪಂದ್ಯಗಳು ನಡೆಯುತ್ತಿಲ್ಲ. ಜೂ.15ಕ್ಕೆ ಅರ್ಹತೆಗೆ ಕೊನೆಯ ಕೊನೆಯ ದಿನ ಮುಗಿಯಲಿದೆ. ಲಂಡನ್ ಒಲಿಂಪಿಕ್ಸ್ ನಲ್ಲಿ‌ ಕಂಚಿನ ಪದಕ ವಿಜೇತ ಸೈನಾ ನೆಹ್ವಾಲ್ ಗೆ ಇದರಿಂದಾಗಿ ತುಂಬಾ ನಿರಾಸೆಯಾಗಿದೆ. ಭಾರತೀಯರು ಕೂಡ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಭಾರತಕ್ಕೆ ಪದಕದ ಭರವಸೆ ಮೂಡಿಸುವ ಆಟಗಾರರೆ ಇಲ್ಲವಾಯಿತಲ್ಲ ಎಂಬುವುದು ನೂರು ಕೋಟಿ ಜನರ ಸದ್ಯದ ಬೇಸರವಾಗಿದೆ.

error: Content is protected !!