Home Blog Page 3099

ಜಾರಕಿಹೊಳಿ ದೆಹಲಿಯಿಂದ ವಾಪಾಸ್; ಸಿಎಂ ಜೊತೆ ಚರ್ಚೆ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಬಿಜೆಪಿ ವರಿಷ್ಠರ ಭೇಟಿಗಾಗಿ ದೆಹಲಿಗೆ ಪ್ರಯಾಣ ಬೆಳೆಸಿದ್ದ ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಸಿಎಂ ಕಾವೇರಿ ನಿವಾಸಕ್ಕೆ ಭೇಟಿ ನೀಡಿ ಯಡಿಯೂರಪ್ಪ ಅವರೊಂದಿಗೆ ದೆಹಲಿ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾರೆ.

ಸ್ನೇಹಿತ ಸಿಪಿ ಯೋಗೇಶ್ವರ್ ಅವರಿಗೆ ಸ್ಥಾನ ಕೊಡಿಸಲು ಸಾಹುಕಾರ್ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ.

ನಿನ್ನೆಯಷ್ಟೇ ಸಭೆ ನಡೆಸಿದ್ದ ಮಿತ್ರ ಮಂಡಳಿ ‘ನಮ್ಮ‌ಜೊತೆ ಪಕ್ಷ ಬಿಟ್ಟು ಬಂದವರಿಗೂ ನಿಗಮ-ಮಂಡಳಿ ಕೊಡಿ. ಕ್ಷೇತ್ರ ಭೇಟಿ ಹೋದಾಗ ಕಾರ್ಯಕರ್ತರಿಗೆ ಉತ್ತರಿಸೋಕೆ ಆಗುತ್ತಿಲ್ಲ ಎಂದು ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರೊಂದಿಗೆ ಚರ್ಚಿಸಿ ಬೇಡಿಕೆ ಇಡೇರಿಸುವಂತೆ ಪಟ್ಟು ಹಿಡಿದಿದ್ದಾರೆ’ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಮೇಶ್ ಜಾರಕಿಹೊಳಿ ‘ಇಂತಹ ಸಭೆಗಳನ್ನು ಸಿಎಂ ಕಚೇರಿ, ಪಕ್ಷದ ಕಚೇರಿ ಮಾತ್ರ ನಡೆಸಬೇಕು. ನಾನು ನಾಯಕ ಅಂತಾ ಎಲ್ಲೂ ಹೇಳಿಲ್ಲ. ನಮ್ಮದು ಸಾಮೂಹಿಕ ನಾಯಕತ್ವ’ ಎಂದು ಮಿತ್ರ ಮಂಡಳಿಗೆ ಟಾಂಗ್ ಕೊಟ್ಟಿದ್ದಾರೆ.

ದೆಹಲಿಯಿಂದ ಬೆಂಗಳೂರಿಗೆ ರಮೇಶ ಜಾರಕಿಹೊಳಿ
ವಾಪಾಸ್ ಆಗುತ್ತಿದ್ದಂತೆ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಸೇರಿದಂತೆ ಹಲವು ನಾಯಕರು ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ಸರ್ಕಾರಿ ಕಟ್ಟಡಕ್ಕೆ ಜನಪ್ರತಿನಿಧಿ ಹೆಸರು: ಗ್ರಾಮಸ್ಥರ ವಿರೋಧ

ವಿಜಯಸಾಕ್ಷಿ ಸುದ್ದಿ, ಮುಳಗುಂದ

ಸಮೀಪದ ನೀಲಗುಂದ ಗ್ರಾಮದಲ್ಲಿ ನಿರ್ಮಿತಿ ಕೇಂದ್ರ ನೂತನಾವಾಗಿ ನಿರ್ಮಿಸಿರುವ ಸಾಂಸ್ಕೃತಿಕ ಭವನಕ್ಕೆ ರಾತ್ರೋರಾತ್ರಿ
ಜನಪ್ರತಿನಿಧಿಯೊಬ್ಬರ ಹೆಸರು ನಾಮಕರಣ ಮಾಡಿದ್ದಕ್ಕಾಗಿ ಗ್ರಾಮಸ್ಥರು ಸೇರಿದಂತೆ ಬಿಜೆಪಿ ಗದಗ ಗ್ರಾಮೀಣ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ರವಿ ವಗ್ಗನವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಮೊದಲು ಬರೀ ಸಾಂಸ್ಕೃತಿಕ ಭವನ ಎಂದು ಹೆಸರಿಡಲಾಗಿತ್ತು. ಆದರೆ ರಾತ್ರೋರಾತ್ರಿ ಬದಲಾಗಿ ಗದಗ ತಾಲ್ಲೂಕು ಪಂಚಾಯತ ಅಧ್ಯಕ್ಷರಾಗಿದ್ದ ದಿ.ರವಿಕುಮಾರ ಇನಾಮತಿ ಅವರ ಹೆಸರಿಟ್ಟಿದ್ದಾರೆ. ಇವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದವರಾಗಿದ್ದು, ಅಧಿಕಾರಿಗಳು ಕಾಂಗ್ರೆಸ್ ಶಾಸಕರ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳನ್ನು ಪ್ರಶ್ನಿಸಿದರೆ ನಮಗೆ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ ಎಂದು ರವಿ ದೂರಿದ್ದಾರೆ.

ಗ್ರಾಮ ಪಂಚಾಯತಿ ಠರಾವು ಇಲ್ಲದೇ , ಗ್ರಾಮಸ್ಥರ ಅಭಿಪ್ರಾಯಗಳನ್ನೂ ಸಂಗ್ರಹಿಸದೆ ಸಾಂಸ್ಕೃತಿಕ ಭವನಕ್ಕೆ ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಯೊಬ್ಬರ ಹೆಸರಿಟ್ಟಿರುವುದು ಖಂಡನೀಯ ಎಂದಿರುವ ಅವರು, ಗ್ರಾಮಕ್ಕೆ ಅವರ ಕೊಡುಗೆ ಏನು? ನಾಮಕರಣ ಮಾಡುವ ಮೊದಲು ಗ್ರಾಮಸ್ಥರ ಸಭೆ ಕರೆದು ಕೇಳಿದರೆ ಒಪ್ಪಿಕೊಳ್ಳುತ್ತಿದ್ದೆವೇನೋ? ಆದರೆ, ಇದ್ಯಾವುದು ಮಾಡದೆ ತರಾತುರಿಯಲ್ಲಿ ಸಾಂಸ್ಕೃತಿಕ ಕಟ್ಟಡಕ್ಕೆ ಹೆಸರಿಟ್ಟಿರುವುದು ಯಾಕೆ? ಎಂದು ಪ್ರಶ್ನಿಸಿದ್ದಾರೆ.

ಸಾಂಸ್ಕೃತಿಕ ಕಟ್ಟಡಕ್ಕೆ ಶರಣರ ಹೆಸರಿಡಿ

2017-18 ಸಾಲಿನ ವಿಶೇಷ ಘಟಕ ಯೋಜನೆಯಡಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಸಾಂಸ್ಕೃತಿಕ ಭವನಕ್ಕೆ ಗ್ರಾಮದ ಗುದ್ನೇಶ್ವರ ಮಠದ ಪ್ರಭುಲಿಂಗ ದೇವರ ಹೆಸರಿಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ಕೇಳಲು ತಾಲ್ಲೂಕು ಪಂಚಾಯತ ಇಒ ಜಿನಗಾ ಅವರಿಗೆ ಕರೆ ಮಾಡಿದರೆ, ಅವರ ಫೋನ್ ನಂಬರ್ ವ್ಯಾಪ್ತಿಯ ಪ್ರದೇಶದ ಹೊರಗಿತ್ತು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪಂಚಾಯತ ಸಿಇಒ ಡಾ. ಕೆ ಆನಂದ,
‘ನನಗೂ ಈ ವಿಷಯದ ಬಗ್ಗೆ ಗೊತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳನ್ನು ವಿಚಾರಿಸುತ್ತೇನೆ’ ಎಂದರು.

‘ಕಟ್ಟಡದ ಉದ್ಘಾಟನೆ ಇವತ್ತೈತ್ರಿ, ಅದಕ್ಕ ನಾವು ಅಲ್ಲಿಗೆ ಹೊರಟೀವಿ. ಆದರೆ, ಕಟ್ಟಡಕ್ಕೆ ಜನಪ್ರತಿನಿಧಿಯೊಬ್ಬರ ಹೆಸರು ಇಟ್ಟಿರುವುದು ನಮಗೆ ಗೊತ್ತಿಲ್ಲ ರೀ, ನಮ್ಮ ಗಮನಕ್ಕೂ ತಂದಿಲ್ಲ ರೀ, ತಾಲ್ಲೂಕು ಪಂಚಾಯತ ಇಒ ಅವರ ಗಮನಕ್ಕೆ ತಂದು ಕ್ರಮ ಕೈಗೊಳ್ಳುತ್ತೇನೆ’.

ಶಿವಾನಂದ ತೊಂಡಿಹಾಳ, ಪಿಡಿಒ, ಗ್ರಾಮ ಪಂಚಾಯತಿ ಚಿಂಚಲಿ

ರಾಜಕೀಯ ಒತ್ತಡದಿಂದ ಸಿಎಂ ಕಾರ್ಯದರ್ಶಿ ಆತ್ನಹತ್ಯೆಗೆ ಯತ್ನಿಸಿದ್ರಾ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಅಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ ಶುಕ್ರವಾರ ಸಂಜೆ ಆತ್ಮಹತ್ಯೆಗೆ ಯತ್ನಿಸಿದ್ದರು.ಅವರನ್ನು ಬೆಂಗಳೂರಿನ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇತ್ತೀಚಿಗಷ್ಟೇ ಸಿಎಂ ಯಡಿಯೂರಪ್ಪ ರಾಜಕೀಯ ಸಲಹೆಗಾರರು ಮತ್ತು ಮಾಧ್ಯಮ ಸಲಹೆಗಾರರಾಗಿದ್ದ ಮಹದೇವ ಪ್ರಕಾಶ ಅವರು ರಾಜೀನಾಮೆ ನೀಡಿದ್ದರು. ಅದರಂತೆ ಯಡಿಯೂರಪ್ಪ ಪರಮಾಪ್ತ ಪರಮಾಪ್ತ ಎಂ.ಬಿ.ಮರಮಕ್ಕಲ್ ರಾಜಕೀಯ ಹುದ್ದೆಯಿಂದ ವಜಾ ಮಾಡಲಾಗಿತ್ತು. ಇದರ ಬೆನ್ನಲ್ಲೇ ಸಂತೋಷ ಆತ್ಮಹತ್ಯೆಗೆ ಯತ್ನಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸಂತೋಷ ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಒತ್ತಡಕ್ಕೆ ಒಳಗಾಗಿದ್ದರು. ಇದರಿಂದ ಜೀವನ ಸಾಕೆನಿಸಿದೆ ಎಂದ್ದು ನನ್ನೆದುರು ಹೇಳಿದ್ದರು. ಇದರಿಂದ ನಿದ್ದೆ ಬರಲಿಲ್ಲವೆಂದರೆ, ನಿದ್ದೆ ಮಾತ್ರೆ ತೆಗೆದುಕೊಳ್ಳುತ್ತಿದ್ದರು ಎಂದು ಸಂತೋಷ ಪತ್ನಿ ಜಾಹ್ನವಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ‌.

ಆದರೆ, ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ರಾಜ್ಯ ರಾಜಕೀಯದ ಬೆಳವಣಿಗೆಗಳಾ? ಅಥವಾ ಸಿಎಂ ಕಚೇರಿಯಲ್ಲಾಗುತ್ತಿರುವ ಬೆಳವಣಿಗೆಗಳಿಂದಾ? ಎಂಬುದರ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ. ತುಮಕೂರು ಜಿಲ್ಲೆ ತಿಪಟೂರು ಹೊಣವಿನಕೆರೆ ಎನ್.ಆರ್.ಸಂತೊಷ ಅವರನ್ನು ರಾಜ್ಯ ಸಚಿವ ದರ್ಜೆಯ ಸ್ಥಾನಮಾನ ದೊಂದಿಗೆ ಸಿಎಂ ಕಾರ್ಯದರ್ಶಿಯಾಗಿ ನೇಮಿಸಿದ್ದು, ಕೆಲವರ ಅಸಮಾಧಾನಕ್ಕೆ ಕಾರಣವಾಗಿತ್ತು.

ಇನ್ನೂ ವಿಧಾ‌ನಸೌಧದ ಪಡಸಾಲೆಯಲ್ಲಿ ಸಂತೋಷ ಅವರಿಗೆ ರಾಜೀನಾಮೆ ಕೊಡಿ ಎಂದು ಸೂಚಿಸಿದ್ದೆ ಆತ್ಮಹತ್ಯೆ ಯತ್ನಕ್ಕೆ ಕಾರಣವಿರಬಹುದು? ಎಂಬ ಗುಸುಗುಸು ಮಾತುಗಳು ಕೇಳಿ ಬರುತ್ತಿವೆ. ಆದರೆ, ಇದು ಎಷ್ಟರಮಟ್ಟಿಗೆ ಸತ್ಯ ಎಂಬುದು ತಿಳಿಯಬೇಕಿದೆ.

ಸದ್ಯ ಸದಾಶಿವನಗರ ಪೊಲೀಸರು ಸಂತೋಷ ಅವರ ವಿರುದ್ಧ ಆತ್ಮಹತ್ಯೆಗೆ ಯತ್ನ ಐಪಿಸಿ ಸೆಕ್ಷನ್ 309 ರ ಅಡಿ ಪ್ರಕರಣ ದಾಖಲಿಸಿಕೊಂಡು, ಜಾಹ್ನವಿ ಅವರ ಹೇಳಿಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಕೊರೊನಾ ಲಸಿಕೆ ತಯಾರಿಕಾ ಘಟಕಗಳಿಗಿಂದು ಮೋದಿ ಭೇಟಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ

ಕೊರೊನಾ ಲಸಿಕೆ ತಯಾರಿಕೆ ಘಟಕಗಳಿಗಿಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಲಿದ್ದಾರೆ.

ಅವರು ಪುಣೆಯ ಫಾರ್ಮಾ ದೈತ್ಯ ಸಿರಮ್ ಇನ್ಸ್ಟಿಟ್ಯೂಟ್, ಅಲಹಾಬಾದ್ ನ ಜೈಡಸ್ ಕ್ಯಾಡಿಲಾ ಹಾಗೂ ಹೈದರಾಬಾದ್ ನ ಭಾರತ್ ಬಯೋಟೆಕ್ ಫಾರ್ಮಾ ಲಸಿಕೆ ತಯಾರಿಸುವ ಘಟಕಗಳಿಗೆ ಭೇಟಿ ಕೊಟ್ಟು , ವ್ಯಾಕ್ಸಿನ್ ಅಭಿವೃದ್ಧಿ ಮತ್ತು ತಯಾರಿಕೆ ಬಗ್ಗೆ ಪರಿಶೀಲಿಸಲಿದ್ದಾರೆ.

ಗುಜರಾತ್ ಗೆ ಇಂದು ಭೇಟಿ ನೀಡಲಿರುವ ಮೋದಿ, ಬೆಳಗ್ಗೆ 9.30 ಕ್ಕೆ ಅಲಹಾಬಾದ್ ನ ಜೈಡಸ್ ಕ್ಯಾಡಿಲಾ ಘಟಕಕ್ಕೆ ಭೇಟಿ ನೀಡಲಿದ್ದಾರೆ. ಈ ಘಟಕವು ಅಲಹಾಬಾದ್ ನ ಚಾಂಗೋದಾರ್ ಇಂಡಸ್ಟ್ರಿಯಲ್ ಪ್ರದೇಶದಲ್ಲಿದೆ. ತನ್ನ ಕೊರೊನಾ ZyCoV-D ನ ಮೊದಲ ಹಂತದ ಪರೀಕ್ಷೆ ಮುಗಿಸಿದ್ದಾಗಿ ತಿಳಿಸಿತ್ತು. ಅಲ್ಲದೇ, ಸಂಸ್ಥೆ ಅಗಸ್ಟ್ ನಿಂದ ಎರಡನೇ ಹಂತದ ಕ್ಲಿನಿಕಲ್ ಟ್ರಯಲ್ ಪ್ರಾರಂಭಿಸಿರುವುದಾಗಿ ಹೇಳಿತ್ತು. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಲಸಿಕೆ ಅಭಿವೃದ್ಧಿಯಲ್ಲಿ ಎಷ್ಟು ಪ್ರಗತಿ ಕಂಡಿದೆ ಎಂಬುದರ ಬಗ್ಗೆ ಪ್ರಧಾನಿ ಮಾಹಿತಿ ಪಡೆಯಲಿದ್ದಾರೆ.

ಅದರಂತೆ, ಮಧ್ಯಾಹ್ನ 1.30 ಕ್ಕೆ ಪುಣೆಯಲ್ಲಿರುವ ಸೀರಮ್ ಇನ್ಸ್ಟಿಟ್ಯೂಟ್ ಗೆ ಭೇಟಿ ಕೊಟ್ಟು ಕೋವಿಶೀಲ್ಡ್ ವ್ಯಾಕ್ಸಿನ್ ಬಗ್ಗೆ ತಜ್ಞರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ. ನಂತರ ತೆಲಂಗಾಣದ ಭಾರತ್ ಬಯೋಟೆಕ್ ಸಂಸ್ಥೆಗೆ ತೆರಳಲಿದ್ದಾರೆ. ಈ ವೇಳೆ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಲ್ಲಿರುವ ಕೋವ್ಯಾಕ್ಸಿನ್ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಅಲ್ಲದೇ, ಲಸಿಕೆ ತಯಾರಿಕೆ, ಸವಾಲುಗಳು ಮತ್ತು ದೇಶದ 130 ಕೋಟಿ ಜನರಿಗೆ ಲಸಿಕೆ ವಿತರಣೆ ಮಾಡಲು ರೋಡ್ ಮ್ಯಾಪ್ ಬಗ್ಗೆ ವಿಜ್ಞಾನಿಗಳು ಪ್ರಧಾನಿ ನರೇಂದ್ರ ಮೋದಿಗೆ ವಿವರಣೆ ನೀಡಲಿದ್ದಾರೆ.

ರಾಜ್ಯದಲ್ಲಿ ಕನ್ನಡ ಕಡ್ಡಾಯ; ರಾಜ್ಯ ಸರ್ಕಾರ ಆದೇಶ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿರುವ ಜಿಲ್ಲೆಯ ಪ್ರಮುಖ ರಸ್ತೆ, ವೃತ್ತಗಳಿಗೆ ನಾಡಿಗೆ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ, ಸಾಹಿತಿಗಳ ಹೆಸರಿಡುವುದು ಸೇರಿದಂತೆ ಸರ್ಕಾರಿ ಇಲಾಖೆಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಕನ್ನಡ ಕಾಯಕ ಹೆಸರಿನಲ್ಲಿ ರಾಜ್ಯ ಸರ್ಕಾರ 2020-21 ನೇ ವರ್ಷಾಚರಣೆ ಆಚರಿಸಿಲಿರುವ ಹಿನ್ನೆಲೆಯಲ್ಲಿ ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿಯೇ ವ್ಯವಹರಿಸಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಸುತ್ತೋಲೆ ಹೊರಡಿಸಿದ್ದಾರೆ.

ಅದರಲ್ಲಿ ತಂತ್ರಾಂಶದಲ್ಲಿ ಕನ್ನಡವನ್ನು ಯಶಸ್ವಿಯಾಗಿ ಬಳಸುವಂತೆ ಕಾರ್ಯಕ್ರಮ ರೂಪಿಸುವುದು

ಇಲಾಖೆಗಳು ರೂಪಿಸುವ ನೀತಿ, ಕರಡು ಪ್ರತಿಗಳನ್ನು ಕನ್ನಡದಲ್ಲಿಯೇ ತಯಾರಿಸಬೇಕು. ಅಲ್ಲದೇ, ಅನುಮೋದಿತ ಪ್ರತಿಯನ್ನು ಕನ್ನಡದಲ್ಲಿ ಸಿದ್ದಪಡಿಸಬೇಕು.

ತಂತ್ರಾಂಶ ವ್ಯವಸ್ಥೆಯ ಮೂಲಕ ಅರ್ಜಿದಾರರಿಗೆ ಕನ್ನಡದಲ್ಲಿ ಸಂದೇಶ (ಎಸ್ಎಂಎಸ್) ಹಾಗೂ ಇಮೇಲ್ ಕಳುಹಿಸುವುದು.

ರಾಜ್ಯದ ನಗರ ಪಟ್ಟಣಗಳ ಹೆಸರುಗಳನ್ನು ಕನ್ನಡದಲ್ಲಿಯೇ ಬರೆಯುವುದು. ಮೈಲುಗಲ್ಲುಗಳ ಮೇಲೆ ಕನ್ನಡ ಅಂಕಿ ಬಳಸುವುದು. ಎಲ್ಲ ಇಲಾಖೆಗಳ ಜಾಲತಾಣಗಳ ಪ್ರಧಾನ ಮತ್ತು ಒಳ ಪುಟಗಳು, ಸಾಮಾಜಿಕ ಜಾಲತಾಣದಲ್ಲೂ ಕನ್ನಡ ಕಡ್ಡಾಯ ಬಳಕೆ ಮಾಡುವುದು.

ಇಲಾಖೆ, ಸಚಿವ ಸಂಪುಟದ ಟಿಪ್ಪಣಿಗಳು, ಕಾಯ್ದೆ ಕಾನೂನುಗಳ ಆದೇಶಗಳನ್ನು ಕನ್ನಡದಲ್ಲಿ ಬಳಕೆ ಮಾಡುವುದು. ಕರ್ನಾಟಕದಲ್ಲಿ ಮಾರಾಟವಾಗುವ ಉತ್ಪನ್ನಗಳ ಮೇಲೆ ಕನ್ನಡ ಬಳಸಲು ಒತ್ತಾಯಿಸಿಸುವುದು.

ನಿಗಮ ಮಂಡಳಿಗಳು, ಸರ್ಕಾರದಿಂದ ಅನುದಾನ ಪಡೆಯುವ ಸಂಘ ಸಂಸ್ಥೆಗಳು ವಾರ್ಷಿಕ ವರದಿ, ದಾಖಲೆಗಳನ್ನು ಕನ್ನಡದಲ್ಲಿ ಸಲ್ಲಿಸುವುದು.

ರಾಜ್ಯ ಸರ್ಕಾರ ‌ನೇಮಕ ಮಾಡಿಕೊಳ್ಳುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲಿ ಕಡ್ಡಾಯವಾಗಿ ಕನ್ನಡಿಗರನ್ನೇ ಒದಗಿಸುವಂತೆ ಮಾನ ಸಂಪನ್ಮೂಲ ಸೇವೆ ಒದಗಿಸುವ ಸಂಸ್ಥೆಗಳಿಗೆ ಷರತ್ತು ವಿಧಿಸುವುದು.

ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನರ್ಸಿಂಗ್ ಹೋಂಗಳು ನಾಗರಿಕರಿಗೆ ಕನ್ನಡದಲ್ಲಿಯೇ ಮಾಹಿತಿ ನೀಡಬೇಕು ಎಂದು ಸುತ್ತೋಲೆಯಲ್ಲಿ ಟಿ.ಎಂ.ಭಾಸ್ಕರ್ ತಿಳಿಸಿದ್ದಾರೆ.

ಖದೀಮರ ಕೈಚಳಕ: ಕೀಲಿ ಮುರಿದು ನಗದು, ಚಿನ್ನಾಭರಣ ಕಳ್ಳತನ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಶಹರದ ಹುಬ್ಬಳ್ಳಿ ರಸ್ತೆ ಗಣೇಶ ಕಾಲೋನಿಯ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಎಂಬುವವರ ಮನೆಯ ಬಾಗಿಲದ ಕೀಲಿ ಮುರಿದ ಕಳ್ಳರು, ಮನೆಯಲ್ಲಿದ್ದ ಬಂಗಾರ ಮತ್ತು ಬೆಳ್ಳಿ ಆಭರಣ, ನಗದು ದೋಚಿಕೊಂಡು ಹೋಗಿದ್ದಾರೆ.

ಯಾವುದೋ ವಸ್ತುವಿನಿಂದ ಕೀಲಿ ಮೀಟಿ ತೆಗೆದು ಮನೆಯೊಳಗೆ ನುಗ್ಗಿದ್ದಾರೆ. ಅಲ್ಲದೇ, ಮನೆಯ ಬೆಡ್ ರೂಮ್ ನ ಟ್ರೇಜುರಿಯಲ್ಲಿದ್ದ 1,77,000 ರೂ. ಮೌಲ್ಯದ 38 ಗ್ರಾಂ ಚಿನ್ನ ಮತ್ತು 600 ಗ್ರಾಂ ಬೆಳ್ಳಿ ಸಾಮಾನುಗಳು, 60 ಸಾವಿರ ನಗದು‌ ಸೇರಿ ಒಟ್ಟು 2,37,000 ರೂ.ದಷ್ಟು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.

ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಗಿರಿಜಾ ಜಕ್ಕಲಿ ತನಿಖೆ ಕೈಗೊಂಡಿದ್ದಾರೆ.

ನಾಳೆಯಿಂದ ಏಕತಾ ಕಪ್ ಕ್ರಿಕೆಟ್ ಟೂರ್ನಮೆಂಟ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ

ಕೋವಿಡ್-19 ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಏಕತಾ ಕಪ್ ಕ್ರಿಕೆಟ್ ಟೂರ್ನಮೆಂಟ್ ನಾಳೆಯಿಂದ ಎರಡು ದಿನಗಳ ಕಾಲ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪ್ರತಿ ವರ್ಷದಂತೆ ಈ ಸಲವೂ ಸಹ ನಗರದ ಕರ್ನಾಟಕ ವಾರಿಯರ್ಸ್‌ ಸ್ಪೋರ್ಟ್ಸ್ ಕ್ಲಬ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿದ್ದು, ಕ್ಲಬ್‌ನ ಸದಸ್ಯರ ಆರು ತಂಡಗಳು ಇದರಲ್ಲಿ ಭಾಗವಹಿಸಲಿವೆ. ಎರಡು ದಿನಗಳ ಕಾಲ ಏಳು ಪಂದ್ಯಗಳು ನಡೆಯಲಿದ್ದು ನವೆಂಬರ್ 28ರ ಬೆಳಗ್ಗೆ 7-30ಕ್ಕೆ ಟೂರ್ನಮೆಂಟ್‌ನ ಮೊದಲ ಪಂದ್ಯ ನಡೆಯಲಿದೆ.

ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಉದ್ಘಾಟಿಸುವರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಟೂರ್ನಮೆಂಟ್‌ಗೆ ಚಾಲನೆ‌ ನೀಡುವರು. ಕೊಪ್ಪಳ ಗ್ರಾಮೀಣ ಸಿಪಿಐ ವಿಶ್ವನಾಥ್ ಹಿರೇಗೌಡರ್, ನಗರ ಸಿಪಿಐ ಮಾರುತಿ, ಡಿಸಿಐಬಿಯ ಪಿಐ ರವಿ ವಕ್ಕುಂದ, ಸಂಚಾರ ಠಾಣೆಯ ಪಿಎಸ್ಐ ಅಮರೇಶ್ ಹುಬ್ಬಳ್ಳಿ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸುವರು. ಹಿರಿಯ ಪತ್ರಕರ್ತ ಬಸವರಾಜ ಕರುಗಲ್ ಸಮಾರಂಭದ ಅಧ್ಯಕ್ಷತೆ ವಹಿಸುವರು ಎಂದು ಕ್ಲಬ್‌ನ ಅಧ್ಯಕ್ಷ ವಿನೋದ್ ಚಿನ್ನಿನಾಯ್ಕರ್ ಮತ್ತು ಹಿರಿಯ ಮುಖಂಡ ಗಿರೀಶ್ ಮುಂಡದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶುಗರ್ ಫ್ಯಾಕ್ಟರಿಯ ಸೆಕ್ಯೂರಿಟಿ ಗಾರ್ಡ್ ಕೊಲೆ ಪ್ರಕರಣ ಬೇದಿಸಿದ ಮುಂಡರಗಿ ಪೊಲೀಸರು

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ತನ್ನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆಂದು ಶಂಕಿಸಿ ವ್ಯಕ್ತಿಯೋರ್ವನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಆರೋಪಿಯನ್ನು ಮುಂಡರಗಿ ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ತಿಳಿಸಿದ್ದಾರೆ.

ಈ ಕುರಿತು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪಿ ರಂಗಪ್ಪ ಅಲಿಯಾಸ ರಂಗಸ್ವಾಮಿ ಮುಂಡರಗಿ ತಾಲ್ಲೂಕಿನ ಶಿರನಹಳ್ಳಿ ಗ್ರಾಮದವನಾಗಿದ್ದು, ಗೌಂಡಿ ಕೆಲಸ ಮಾಡುತ್ತಾನೆ. ಆರೋಪಿ ರಂಗಪ್ಪನನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ತನ್ನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವುದಾಗಿ ಶಂಕಿಸಿ, ಫಕ್ಕೀರಪ್ಪನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೇ, ಕೊಲೆಯಾದ ವ್ಯಕ್ತಿ ಫಕ್ಕೀರಪ್ಪ ಆರೋಪಿ ರಂಗಸ್ವಾಮಿಗೆ ದೂರದ ಸಂಬಂಧಿಯಾಗಿದ್ದು, ಚಿಕ್ಕಪ್ಪನಾಗಬೇಕು ಎಂದು ತಿಳಿಸಿದರು.

ಕೊಲೆಯಾದ ಫಕ್ಕೀರಪ್ಪ ತಳವಾರ ಶಿಂಗಟಾಲೂರು ಗ್ರಾಮದವನಾಗಿದ್ದು, ಗಂಗಾಪೂರ ಶುಗರ್ ಪ್ಯಾಕ್ಟರಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ನ.೧೨ ರಂದು ರಾತ್ರಿ ಪ್ಯಾಕ್ಟರಿಯ ಗೊಬ್ಬರ ತಯಾರಿಸುವ ಬ್ಯಾಕರ್‌ನಲ್ಲಿ ಮಲಗಿಕೊಂಡಿದ್ದಾಗ ಆರೋಪಿ ರಂಗಪ್ಪ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ. ಈ ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕೊಲೆ ಆರೋಪಿ ರಂಗಪ್ಪ ಪೂಜಾರ

ಗಂಗಾಪೂರ ಶುಗರ್ ಫ್ಯಾಕ್ಟರಿಯ ಸೆಕ್ಯೂರಿಟಿ ಗಾರ್ಡ್‌ನ ಕೊಲೆ ಪ್ರಕರಣ ಬೇಧಿಸಲು ಎಸ್ಪಿ ಯತೀಶ್ ಎನ್., ಡಿಎಸ್‌ಪಿ ಶಿವಾನಂದ ಕಟಗಿ ಮಾರ್ಗದರ್ಶನದಲ್ಲಿ ಮುಂಡರಗಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುಧೀರಕುಮಾರ ಬೆಂಕಿ, ಸಿಬ್ಬಂದಿಗಳಾದ ಜೆ.ಐ.ಬಚ್ಚೇರಿ, ನೀಲಕಂಠ ಭಂಗಿ, ಕೊಟೇಶ ಒಡೆಯರ, ಜಿ.ಎನ್.ಮಜ್ಜಗಿ, ಮಂಜು ಮಾದರ, ಶರಣಪ್ಪ ನಾಗೇಂದ್ರಗಡ, ಗದಗ ಡಿಪಿಒದಲ್ಲಿರುವ ಗುರುರಾಜ ಬೂದಿಹಾಳ, ಆನಂದಸಿಂಗ್ ದೊಡ್ಡಮನಿ ಅವರನ್ನೊಳಗೊಂಡ ತಂಡವು ಶ್ರಮಿಸಿತ್ತು. ಈ ತಂಡಕ್ಕೆ ಎಸ್‌ಪಿ ಯತೀಶ್ ಎನ್. ಅವರು ಅಭಿನಂದಿಸಿ ಪ್ರಶಂಸನಾ ಪತ್ರ ನೀಡಿದರು.

ರಾಜ್ಯದಲ್ಲಿ ನಿವಾರ್ ಅಬ್ಬರ ; ಯೆಲ್ಲೋ ಅಲರ್ಟ್ ಘೋಷಣೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನ ಕರಾವಳಿ ಪ್ರದೇಶಗಳಲ್ಲಿ ನಿನ್ನೆ ತಡರಾತ್ರಿ ನಿವಾರ್ ಚಂಡಮಾರುತ ಅಪ್ಪಳಿಸಿದೆ. ಇದರ ಪರಿಣಾಮವಾಗಿ ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾದ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹಾಗಾಗಿ ರಾಜ್ಯ ಸರ್ಕಾರ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಬೆಂಗಳೂರು ಮತ್ತು ಸುತ್ತಲಿನ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಿವಾರ್ ಚಂಡಮಾರುತದ ಎಫೆಕ್ಟ್ ನಿಂದಾಗಿ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿರುವುದರಿಂದ ಹವಾಮಾನ ಇಲಾಖೆ ರಾಜ್ಯದ ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ತುಮಕೂರು ಹಾಗೂ ರಾಮನಗರ ಸೇರಿದಂತೆ 7 ಜಿಲ್ಲೆಗಳಲ್ಲಿಂದು ಹಳದಿ ಅಲರ್ಟ್ ಘೋಷಿಸಿದೆ.

ನಿನ್ನೆಯಿಂದ ತಮಿಳುನಾಡು, ಪುದುಚೇರಿಯಲ್ಲಿ ನಿವಾರ್ ಚಂಡಮಾರುತ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಹಾಗಾಗಿ ನೆರೆಯ ಕರ್ನಾಟಕ, ಆಂಧ್ರ ಪ್ರದೇಶ, ಕೇರಳ ರಾಜ್ಯಗಳ ಮೇಲೂ ನಿವಾರ್ ಪ್ರಭಾವ ಬೀರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೇ, ರಣಭೀಕರ ನಿವಾರ್ ಚಂಡಮಾರುತದಿಂದಾಗಿ ಚೆನ್ನೈಗೆ ತೆರಳುವ ಹಲವು ಬಸ್ , ವಿಮಾನಗಳ ಸಂಚಾರ ನಿಲ್ಲಿಸಲಾಗಿದೆ. ಸರ್ಕಾರಿ ರಜೆ ಘೋಷಿಸಲಾಗಿದ್ದು, ತಮಿಳುನಾಡು ಮತ್ತು ಪುದಿಚೇರಿಯಲ್ಲಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ಇಬ್ಬರು ಸರಗಳ್ಳರ ಬಂಧನ: ಸಂಜಯ್, ಮಹ್ಮದ್ ರಫೀಕ್ ಬಂಧಿತರು

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಮಹಿಳೆಯೋರ್ವರ ಕತ್ತಿನಲ್ಲಿದ್ದ 98,000 ರೂ. ಬೆಲೆ ಬಾಳುವ ನಾಲ್ಕು ತೊಲಿ ಬಂಗಾರದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ಖದೀಮರನ್ನು ಕೊನೆಗೂ ಗದಗ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಗದಗನ ಗಂಗಾಪೂರಪೇಟೆಯ ಸಂಜಯ್ ಕೊಪ್ಪದ, ನವಲಗುಂದದ ಮಹ್ಮದರಫೀಕ್ ಹುನಗುಂದ ಬಂಧಿತರಾಗಿದ್ದಾರೆ. ಬಂಧಿತ ಆರೋಪಿಗಳು ಬುಧವಾರ(ನ.25) ಗದಗ-ಕಳಸಾಪುರ ರಿಂಗ್ ರೋಡ್ ಹತ್ತಿರ ರಿಜಿಸ್ಟ್ರೇಶನ್ ನಂಬರ್ ಇಲ್ಲದ ಮೋಟಾರ್ ಸೈಕಲ್ ಮೇಲೆ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ವೇಳೆ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬಾಯಿ ಬಿಟ್ಟಿದ್ದಾರೆ. ಇಬ್ಬರು ಜೊತೆಗೂಡಿ ಸರ ಕಿತ್ತುಕೊಂಡು ಹೋಗಿರುವುದಾಗಿ ಒಪ್ಪಿಕೊಂಡಿದ್ದಾರೆ.

ಎರಡು ತಿಂಗಳ ಹಿಂದೆ ನವಲಗುಂದದಲ್ಲಿ ಬೈಕ್ ಕಳ್ಳತನ ಮಾಡಿರುವುದಾಗಿ ಮಹ್ಮದರಫೀಕ ಒಪ್ಪಿಕೊಂಡಿದ್ದಾನೆ. ಆರೋಪಿತರಿಂದ 98,000 ಮೌಲ್ಯದ 40 ಗ್ರಾಂ. ತೂಕದ ಮಾಂಗಲ್ಯ ಸರ ಹಾಗೂ 20,000 ರೂ. ಕಿಮ್ಮತ್ತಿನ ಬೈಕ್ ಜಪ್ತಿ ಮಾಡಿದ್ದಾರೆ.

ಘಟನೆ ವಿವರ

ನಗರದ ಸರ್ವೋದಯ ಕಾಲೋನಿಯಲ್ಲಿ 2020 ಫೆಬ್ರುವರಿ 2 ರಂದು ಸಂಜೆ ಉಮಾದೇವಿ ನಲವಡಿ ಎಂಬ ಮಹಿಳೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಪಲ್ಸರ್ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಸರಗಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ಬೇಧಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಹಾಗೂ ಪೊಲೀಸ್ ಉಪಾಧೀಕ್ಷಕ ಪ್ರಲ್ಹಾದ ಎಸ್.ಕೆ. ಅವರ ಮಾರ್ಗದರ್ಶನದಲ್ಲಿ ಸಿಪಿಐ ಪಿ.ವ್ಹಿ.ಸಾಲಿಮಠ, ಪಿಎಸ್ಐ ಜಿ.ಟಿ.ಜಕ್ಕಲಿ, ಸಿಬ್ಬಂದಿಗಳಾದ ಬಿ.ಜಿ.ಹೊರಕೇರಿ, ವ್ಹಿ.ಎಸ್.ಶಟ್ಟೆಣ್ಣವರ, ಎಸ್.ಎ.ಗುಡ್ಡಿಮಠ, ಎಚ್.ಐ.ಯಡಿಯಾಪುರ ಹಾಗೂ ಪಿ.ಎಸ್.ಕಲ್ಲೂರ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.

ಆರೋಪಿತರನ್ನು ಪತ್ತೆ ಕಾರ್ಯದಲ್ಲಿ ತೊಡಗಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಎಸ್ಪಿ ಯತೀಶ್ ಎನ್. ಶ್ಲಾಘಿಸಿದ್ದಾರೆ.

error: Content is protected !!