Home Blog Page 3109

ಯತ್ನಾಳ ನೀಡಿದ್ದು ಅಶಿಸ್ತಿನ ಹೇಳಿಕೆ: ಪಾಟೀಲ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಶಾಸಕ ಬಸನಗೌಡ ಯತ್ನಾಳ ನೀಡಿದ್ದು ಅಶಿಸ್ತಿನ ಹೇಳಿಕೆ. ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಕೊಪ್ಪಳ ಜಿಲ್ಲೆಯ ಕೊಳೂರಿನಲ್ಲಿ ಬುಧವಾರ ಕುಸಿದ ಬ್ರಿಡ್ಜ್ ಕಮ್ ಬ್ಯಾರೇಜ್ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಇನ್ನೂ ಮೂರು ವರ್ಷ ಯಡಿಯೂರಪ್ಪ ಅವರೇ ರಾಜ್ಯದ ಮುಖ್ಯಮಂತ್ರಿ. ಪಕ್ಷದಲ್ಲಿ ಇದ್ದುಕೊಂಡು ವರಿಷ್ಠರ ವಿರುದ್ಧ ಹೀಗೆ ಮಾತನಾಡುವುದು ಸರಿಯಲ್ಲ ಎಂದು ಯತ್ನಾಳ ಹೇಳಿಕೆ ವಿರುದ್ಧ ಕಿಡಿ ಕಾರಿದರು.

ಕೃಷಿ ಇಲಾಖೆ ಹಲವು ವರ್ಷಗಳಿಂದ ತುಕ್ಕು ಹಿಡಿದಿತ್ತು. ಅದನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇನೆ. ಈ ಸಂದರ್ಭದಲ್ಲಿ ಕೆಲವರಿಗೆ ನೋವಾಗುವುದು ಸಹಜ.

ಅನಾಮಧೇಯ ಪತ್ರಗಳಿಗೆ ಬೆಲೆ ಕೊಡುವ ಅಗತ್ಯವಿಲ್ಲ. ಇಂಥ ವಿಷಯಗಳಿಗೆ ಸಂಬಂಧಿಸಿದಂತೆ ಸುದ್ದಿ ಪ್ರಸಾರ, ಪ್ರಕಟ ಮಾಡಿದರೆ ಅಂಥವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಕೊಳೂರು ಬ್ರಿಡ್ಜ್ ಕಮ್ ಬ್ಯಾರೇಜ್ ಕಾಮಗಾರಿ ಕಳಪೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರೇ ಕುಸಿದ ಬ್ರಿಡ್ಜ್ ಕಮ್ ಬ್ಯಾರೇಜ್ ದುರಸ್ತಿ ಕೆಲಸ ಮಾಡ್ತಾರೆ ಎಂದು ಅವರು ಹೇಳಿದರು.

ಈ ವೇಳೆ ಸಂಸದ ಸಂಗಣ್ಣ ಕರಡಿ, ಶಾಸಕರಾದ ಹಾಲಪ್ಪ ಆಚಾರ್, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಮತ್ತಿತರರು ಇದ್ದರು.

ಯೋಗ, ಯೋಗ್ಯತೆ ಇದ್ದವರು ಸಮಗ್ರ ಕರ್ನಾಟಕಕ್ಕೆ ಸಿಎಂ ಆಗಲಿ; ಯತ್ನಾಳಗೆ ಸಿ.ಟಿ.ರವಿ ಟಾಂಗ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಸಮಗ್ರ ಕರ್ನಾಟಕದ ಆಶಯಕ್ಕೆ ಮಣ್ಣು ಹಾಕುವ ಕೆಲಸ ಯಾರೂ ಮಾಡಬಾರದು. ಯೋಗ, ಯೋಗ್ಯತೆ ಇರುವ ಯಾರಾದರೂ ಸಮಗ್ರ ಕರ್ನಾಟಕದ ಸಿಎಂ ಆಗಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.


ಕೊಪ್ಪಳ ಗವಿಮಠದ‌ ಗವಿಸಿದ್ದೇಶ್ವರ ಸ್ವಾಮೀಜಿ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದರು.

ಉತ್ತರ ಕರ್ನಾಟಕ ಭಾಗದವರು ಕರ್ನಾಟಕದ ‌ಸಿಎಂ ಆಗಬೇಕು ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳರ ಹೇಳಿಕೆಗೆ ಪ್ರತಿಕ್ರಿಯೆ‌ ನೀಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ನಂತರದ ಕೆಲ ವರ್ಷ ಕರ್ನಾಟಕ ನಾಲ್ಕು ಭಾಗವಾಗಿ ಹಂಚಿ ಹೋಗಿತ್ತು.

ನಾಡಿನ ಭಾಷೆ, ಸಂಸ್ಕೃತಿ ಆಧರಿಸಿ, ಇಡೀ ಕರ್ನಾಟಕ ಏಕೀಕರಣವಾಗಿದೆ.‌ ಈ ಹಿನ್ನೆಲೆಯಲ್ಲಿ ಸಮಗ್ರ ಕರ್ನಾಟಕದ ಆಶಯಕ್ಕೆ ಯಾರೂ ಮಣ್ಣು ಹಾಕಬಾರದು ಎಂದು ಪುರುಚ್ಚರಿಸಿದರು.

ಹಾಗಾದ್ರೆ ಯತ್ನಾಳರು ಮಣ್ಣು ಹಾಕಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಹಾಗೆ ಹೇಳಲಾರೆ ಬಸನಗೌಡ ಪಾಟೀಲ್ ಯತ್ನಾಳ ಅವರಷ್ಟು ನಾನು ದೊಡ್ಡವ ಮತ್ತು‌ ಪ್ರೌಡಿಮೆ ಇರುವನಲ್ಲ.‌ ಪಕ್ಷದ ಹಿರಿಯರು ಇದೆಲ್ಲವನ್ನೂ ಸರಿ ಮಾಡುತ್ತಾರೆ ಎಂದರು.

ಕೆಲ ಮಂತ್ರಿಗಳೂ ಕೋವಿಡ್19ನಿಂದ ಬಳಲಿದ್ದರಿಂದ ನೆರೆ ಪರಿಹಾರದಲ್ಲಿ ಒಂದಷ್ಟು ವಿಳಂಭವಾಗ್ತಿದೆ. ಆದರೆ,‌‌‌ ಕಾಂಗ್ರೆಸ್ ‌ನವರು ನೆರೆ ಪರಿಹಾರದ ವಿಷಯದಲ್ಲಿ ಗ್ರಾಮೋ ಫೋನ್ ಕ್ಯಾಸೆಟ್ ರೀತಿಯಲ್ಲಿ ಹಳೆಯ ಕ್ಯಾಸೆಟ್ ‌ಹಾಕ್ತಿದ್ದಾರೆ ಎಂದು ವ್ಯಂಗ್ಯವಾಡಿದರು.‌

ಈ ವೇಳೆ ಸಂಸದ ಸಂಗಣ್ಣ ಕರಡಿ, ಶಾಸಕ ಹಾಲಪ್ಪ ಆಚಾರ, ಡಿಸಿ ಎಸ್.ವಿಕಾಸ ಕಿಶೋರ,‌ ಎಸ್ಪಿ‌ ಟಿ.ಶ್ರೀಧರ ಇದ್ದರು.

ಜಿಲ್ಲೆಯ ವಿವಿಧೆಡೆ ಭಾರಿ ಮಳೆ; ಕೆರೆಯಂತಾದ ರಸ್ತೆಗಳು, ಧರಗುರುಳಿದ ಮಣ್ಣಿನ ಮನೆಗಳು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲಾದ್ಯಂತ ನಿನ್ನೆ ತಡರಾತ್ರಿಯಿಂದ ಸುರಿದ ಭಾರಿ ಮಳೆ ಜನಜೀವನವನ್ನು ಅಸ್ತವ್ಯಸ್ತ ಮಾಡಿದೆ.

ಮುಂಡರಗಿ ಭಾಗದಲ್ಲಿ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲೆಲ್ಲಾ ನೀರು ತುಂಬಿ ಹರಿದು ಕೆರೆಯಾಗಿ ಪರಿವರ್ತನೆಯಾಗಿದೆ. ಹೀಗಾಗಿ ರಸ್ತೆ ದಾಟಲು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಭಾರಿ ಮಳೆಗೆ ಹಳೆಯ ಮಣ್ಣಿನ ಗೋಡೆ ಕುಸಿದಿರುವುದು

ಇನ್ನು ಮಳೆಯಿಂದಾಗಿ ಅನೇಕ‌ ಮಣ್ಣಿನ ಮನೆಗಳು, ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ.

ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಆದ್ರಹಳ್ಳಿಯಲ್ಲಿ ತಗ್ಗು ಪ್ರದೇಶದ ಸುಮಾರು 25 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ ಪರಿಣಾಮ, ರಾತ್ರಿಯಿಡೀ ನೀರು ಹೊರಹಾಕಲು ಗ್ರಾಮಸ್ಥರು ಪರದಾಡಿದರು.

ಮನೆಗೆ ನುಗ್ಗಿದ ನೀರನ್ನು ಹೊರಹಾಕುತ್ತಿರುವುದು

ಇನ್ನು ಮನೆಯಲ್ಲಿನ ವಸ್ತುಗಳು ಸೇರಿದಂತೆ ದವಸ ಧಾನ್ಯಗಳು ನೀರು ಪಾಲಾಗಿವೆ.

ರೋಣ ತಾಲೂಕಿನ ಮೆಣಸಗಿಯಲ್ಲಿ ಮಳೆಯಿಂದಾಗಿ ಕೆಎಸ್ಆರ್ಟಿಸಿ ಬಸ್ ಮಣ್ಣಿನಲ್ಲಿ ಸಿಲುಕಿಕೊಂಡಿತು. ಇದರಿಂದ ಪ್ರಯಾಣಿಕರು ಪರದಾಡಿದ ಘಟನೆಯೂ ನಡೆಯಿತು.

ಮಳೆಯಿಂದ ಹಾಳಾದ ರಸ್ತೆಯನ್ನು ತಾತ್ಕಾಲಿಕವಾಗಿಯಾದರೂ ರಿಪೇರಿ ಮಾಡದ ಜಿಲ್ಲಾಡಳಿತದ ವಿರುದ್ಧ ಜನ್ರು ಹಿಡಿಶಾಪ ಹಾಕಿದರು. ಒಟ್ಟಾರೆ ತಡರಾತ್ರಿಯಿಂದ ಆರಂಭವಾದ ವರುಣನ ಅಟ್ಟಹಾಸಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಮಳೆಯ ಮಧ್ಯೆಯೂ ಪೊಲೀಸ್ ಹುತಾತ್ಮ ದಿನಾಚರಣೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಜಿಲ್ಲಾ ಪೊಲೀಸ್ ಕಾರ್ಯಾಲಯದ ಆವರಣದಲ್ಲಿ ಬುಧವಾರ ಪೊಲೀಸ್ ಹುತಾತ್ಮ ದಿನ ಆಚರಿಸಲಾಯಿತು.
ಸುರಿವ ಮಳೆಯ ನಡುವೆಯೂ ಹುತಾತ್ಮ ದಿನ ಆಚರಿಸುವ ಮೂಲಕ ಹುತಾತ್ಮರಾದ ಪೊಲೀಸರಿಗೆ ನಮನ ಸಲ್ಲಿಸಲಾಯಿತು. ನಗರದ ಗಣ್ಯರು, ಪತ್ರಕರ್ತರು, ವಿವಿಧ ಇಲಾಖೆಗಳ ಅಧಿಕಾರಿಗಳು, ವರ್ತಕರು ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್ ಸುರಳ್ಕರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಎಸ್ಪಿ ಟಿ.ಶ್ರೀಧರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹುತಾತ್ಮ ದಿನಾಚರಣೆ ಅಂಗವಾಗಿ ಮಳೆಯ ಮಧ್ಯೆಯೂ ಪೊಲೀಸ್ ಕವಾಯತ್ತು ನಡೆಯಿತು.

ರಾಯಣ್ಣ ಮೂರ್ತಿ ಸ್ಥಾಪನೆ ಹೋರಾಟಕ್ಕೆ ವಿರಾಮ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಮುಗಿದ ಬಳಿಕ ಬಳಗಾನೂರಿನಲ್ಲಿ ಸಚಿವ ಕೆ.ಎಸ್. ಈಶ್ವರಪ್ಪನವರು ಹಾಗೂ ಎಲ್ಲ ಸಮಾಜದ ಹಿರಿಯರೊಂದಿಗೆ ಸೌಹಾರ್ದ ಸಭೆ ಕರೆದು ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು. ಪ್ರತಿಮೆ ಮತ್ತು ಕಾರ್ಯಕ್ರಮದ ಎಲ್ಲ ಖರ್ಚನ್ನು ತಾವೇ ವಹಿಸಿಕೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲರು ಭರವಸೆ ನೀಡಿದ ಮೇರೆಗೆ ಹೋರಾಟಕ್ಕೆ ತಾತ್ಕಾಲಿಕ ವಿರಾಮ ನೀಡಲಾಗಿದೆ ಎಂದು ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನಮಗೆ ರಾಯಣ್ಣ ಬೇರೆಯಲ್ಲ, ರಾಣಿ ಚನ್ನಮ್ಮ ಬೇರೆಯಲ್ಲ. ತಾಯಿ-ಮಗನ ಅವಿನಾಭಾವ ಸಂಬಂಧ ಎಂತಹದು ಎಂದು ಇತಿಹಾಸವೇ ಹೇಳುತ್ತದೆ. ಹಾಲುಮತ ಮಹಾಸಭಾದಿಂದ 2015ರಿಂದ ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾಣಿ ಚನ್ನಮ್ಮನ ಹೆಸರು ಹಾಗೂ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು ಇಡುವಂತೆ ಒತ್ತಾಯಿಸುತ್ತಿದ್ದೇವೆಯ ಬಳಗಾನೂರಿನಲ್ಲಿ ಸೂಕ್ತ ಸ್ಥಳದಲ್ಲಿ ರಾಣಿ ಚನ್ನಮ್ಮನ ಮೂರ್ತಿ ಸ್ಥಾಪನೆಗೆ ನಮ್ಮೆಲ್ಲರ ಬೆಂಬಲವಿದೆ ಎಂದು ಹೇಳಿದರು.
ಸೌಹಾರ್ದ ಕಾಪಾಡಲು ಕಾಗಿನೆಲೆ ಶ್ರೀ ಸಂದೇಶ: ರಾಯಣ್ಣ ಮೂರ್ತಿ ಸ್ಥಾಪನೆ ಮಾಡಲು 2017ರಲ್ಲಿ ಬಳಗಾನೂರ ಗ್ರಾ.ಪಂ. ಠರಾವು ಪಾಸ್ ಮಾಡಿದೆ. 2019ರಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಪ್ರತಿಮೆ ಸ್ಥಾಪಿಸಲು ಪರವಾನಿಗೆ ನೀಡಿದ್ದಾರೆ. 2019 ರ ಆಗಸ್ಟ್ 28ರಂದು ದುಷ್ಕರ್ಮಿಗಳು ದಾಳಿ ನಡೆಸಿ, ವೃತ್ತವನ್ನು ತೆರವುಗೊಳಿಸಿದ್ದರು. ಅದೇ ಜಾಗದಲ್ಲಿ ರಾಯಣ್ಣ ಪ್ರತಿಮೆ ಸ್ಥಾಪಿಸುವಂತೆ ಉಸ್ತುವಾರಿ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿತ್ತು. ಆದರೆ, ಅವರು ವಿಳಂಬ ಧೋರಣೆ ಅನುಸರಿಸಿದ್ದರಿಂದ ಅ. 17 ರಂದು ಯುವಕರು ಉದ್ವೇಗದಲ್ಲಿ ರಾಯಣ್ಣ ಮೂರ್ತಿಯನ್ನು ಸ್ಥಾಪನೆ ಮಾಡಿದ್ದಾರೆ. ಈ ಬಗ್ಗೆ ಕಾಗಿನೆಲೆ ಶ್ರೀಗಳೂ ಸಂದೇಶ ನೀಡಿ, ಎಲ್ಲರೂ ತಮ್ಮ ನೋವುಗಳನ್ನು ಮರೆತು ಸೌಹಾರ್ದಯುತವಾಗಿ ಬದುಕು ಕಟ್ಟಿಕೊಳ್ಳಲು ಕ್ಷಮಾಗುಣ ಅಗತ್ಯವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲರೂ ಎಚ್ಚರಿವಹಿಸಬೇಕು ಎಂದು ಸಂದೇಶ ನೀಡಿದ್ದಾರೆ ಎಂದು ರುದ್ರಣ್ಣ ಗುಳಿಗುಳಿ ಹೇಳಿದರು.
ಯುವ ಮುಖಂಡ ರವಿ ದಂಡಿನ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲರು ಭರವಸೆ ನೀಡಿದ್ದು, ಮುಂದಿನ ದಿನಗಳಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಸಹಕಾರ ಪಡೆದು, ಸರಕಾರದಿಂದ ಅಧಿಕೃತವಾಗಿ ರಾಯಣ್ಣ ಮೂರ್ತಿಯನ್ನು ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.
ಬಳಗಾನೂರ ಗ್ರಾ.ಪಂ. ಮಾಜಿ ಅಧ್ಯಕ್ಷ ಶೇಖಣ್ಣ ಅಗಸಿಮನಿ ಮಾತನಾಡಿ, ಸೋಮವಾರ ಗ್ರಾಮದಲ್ಲಿ ರಾಯಣ್ಣ ಮೂರ್ತಿ ಪ್ರತಿ?ಪನೆ ಕುರಿತು ಶಾಂತಿ ಸಭೆ ಜರುಗಿದ್ದು, ಎಲ್ಲರೂ ಸಮ್ಮಿತಿ ಸೂಚಿಸಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹಾಲುಮತ ಮಹಾಸಭಾದ ಗೌರವಾಧ್ಯಕ್ಷ ನಾಗರಾಜ ಮೆಣಸಗಿ, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಲ್ಹಾದ ಹೊಸಳ್ಳಿ, ನಿರ್ದೇಶಕಿ ಚೆನ್ನಮ್ಮ ಹುಳಕಣ್ಣವರ, ತಾ.ಪಂ. ಮಾಜಿ ಸದಸ್ಯ ಶೇಖಣ್ಣ ಅಗಸಿಮನಿ, ರಾಘವೇಂದ್ರ ವಗ್ಗನವರ, ಸೋಮನಗೌಡ್ರ ಪಾಟೀಲ, ನಾಗಪ್ಪ ಅಣ್ಣಿಗೇರಿ, ಸುರೇಶ ಗುಲಗಂಜಿ, ಮಹೇಶ ಕೆರಕಲಮಟ್ಟಿ, ಮುತ್ತು ಜಡಿ, ಕುಮಾರ ಮಾರನಬಸರಿ ಉಪಸ್ಥಿತರಿದ್ದರು.

ಹಳೆಯ ಪಿಂಚಣಿ ಯೋಜನೆಯೇ ಇರಲಿ: ಮನವಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗಜೇಂದ್ರಗಡ
ಸರ್ಕಾರ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿ ಮಂಗಳವಾರ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ರೋಣ ತಾಲೂಕು ಸಂಘದಿಂದ ಸ್ಥಳೀಯ ಶಾಸಕರ ಜನಸಂಪರ್ಕ ಕಾರ್ಯಾಲಯಲ್ಲಿ ಶಾಸಕ ಕಳಕಪ್ಪ ಬಂಡಿ ಅವರಿಗೆ ಮನವಿ ನೀಡಲಾಯಿತು.
ಸಂಘದ ತಾಲೂಕಾಧ್ಯಕ್ಷ ಶರಣು ಪೂಜಾರ ಮಾತನಾಡಿ, ಪಿಂಚಣಿ ನೌಕರರ ಜೀವನದ ಸಂಧ್ಯಾಕಾಲದ ಹಕ್ಕು. ಆದರೆ ಸರ್ಕಾರ ಇತ್ತೀಚೆಗೆ ಹಿಂದಿನ ಪಿಂಚಣಿ ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ, ಹೊಸ ಪಿಂಚಣಿ ಯೋಜನೆ ಜಾರಿ ಮಾಡಿದೆ. ಹೀಗಾಗಿ ನಿವೃತ್ತಿ ಅನಂತರ ನೌಕರರ ಸಂಕಷ್ಟದ ದಿನಗಳನ್ನು ಎದುರಿಸುವ ಸಾಧ್ಯತೆಗಳು ದಟ್ಟವಾಗಿವೆ. ಹೀಗಾಗಿ ರಾಜ್ಯ ಸರ್ಕಾರ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ತಕ್ಷಣವೇ ಹಳೆ ಪಿಂಚಣಿ ಯೋಜನೆ ಜಾರಿಗೆ ಮಾಡಲು ಮುಂದಾಗಬೇಕು. ಸೇವಾ ಅವಧಿಯಲ್ಲಿ ಕೂಡಿಟ್ಟ ಹಣದಿಂದ ಭವಿಷ್ಯದಲ್ಲಿ ಜೀವನ ನಡೆಸುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ಶಾಸಕರು ನೌಕರರ ಹಳೆಯ ಪಿಂಚಣಿ ಯೋಜನೆಯ ಮರು ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮನವಿ ಮಾಡಿದರು.
ಮುಖ್ಯಮಂತ್ರಿಗೆ ಪತ್ರ: ನೌಕರರ ಮನವಿ ಸ್ವೀಕರಿಸಿದ ಶಾಸಕ ಕಳಕಪ್ಪ ಬಂಡಿ, ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಮನವಿಗೆ ಸ್ಪಂದಿಸುವಂತೆ ತಕ್ಷಣವೇ ಸರ್ಕಾರಕ್ಕೆ ಪತ್ರ ಬರೆದು ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತೇನೆ ಎಂದು ಭರವಸೆ ನೀಡಿದರು.
ಗಜೇಂದ್ರಗಡ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವೀರೇಶ್ ರಾಜೂರ, ಡಿ.ಆರ್. ಮ್ಯಾಗೇರಿ, ಜಯಪ್ರಕಾಶ್ ಭಜಂತ್ರಿ, ಆರ್.ಬಿ. ಮಾಂಡ್ರೆ, ಶಬ್ಬೀರ್ ನಿಶಾನ್ದಾರ, ಸಿದ್ದು ಪಾಡಾ, ಹೀನಾ ಕೌಜಲಗಿ, ಫಮೀದ ಬಡೇಖಾನ್, ಅನ್ನಪೂರ್ಣಾ ಇಟಗಿ, ರಾಮಜಿ ರಡ್ಡೇರ, ಸಂಗಮೇಶ ಕಡಗದ, ಪ್ರಭು ಹಾದಿಮನಿ, ಬಸವರಾಜ ದೇಸಾಯಿಗೌಡ್ರು, ಲೋಹಿತ್ ಮಸೂದೆ ಇದ್ದರು.
 

ಕುಬೇರಪ್ಪ ಪರ ಸುಜಾತ ದೊಡ್ಡಮನಿ ಪ್ರಚಾರ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಲಕ್ಷ್ಮೇಶ್ವರ:

ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಬೇರಪ್ಪ ಪರವಾಗಿ ಮಹಿಳಾ ಮಣಿಗಳು ಮನೆ ಮನೆ ಪ್ರಚಾರ ಕೈಗೊಂಡಿದ್ದಾರೆ.

ಲಕ್ಷ್ಮೇಶ್ವರ ಪಟ್ಟಣದ ವಿವಿಧ ಕಡೆ ಮನೆ ಮನೆ ಭೇಟಿ ನೀಡಿ ಮತಯಾಚಿಸಿದರು. ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಸಂಚಾಲಕರಾದ ಸುಜಾತ ದೊಡ್ಡಮನಿ ಹಾಗೂ ಕಾಂಗ್ರೆಸ್ ನ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ನೀಲಮ್ಮ ಬೋಳನವರ, ನೇತೃತ್ವದಲ್ಲಿ ವಿನಾಯಕ ನಗರ, ಬಸ್ತಿಬಣ, 6 ನೇ‌ ವಾರ್ಡ್ ನಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ಮನೆ ಮನೆ ಪ್ರಚಾರ ಕೈಗೊಂಡು ಕುಬೇರಪ್ಪ ಅವರಿಗೆ ಪ್ರಥಮ ಪ್ರಾಶ್ಯಸ್ತದ ಮತ ನೀಡುವಂತೆ‌ ಮನವಿ ಮಾಡಿದರು.

ಲಕ್ಷ್ಮೇಶ್ವರ ಪುರಸಭೆ ಮಾಜಿ ಅಧ್ಯಕ್ಷರಾದ ರಾಜಣ್ಣ ಕುಂಬಿ, ಜಯಕ್ಕ ಕಳ್ಳಿ, ವಿಜಯ ಕರಡಿ, ನಾಮನಿರ್ದೇಶನ ಸದಸ್ಯರಾದ ಅಂಬರೀಶ್ ತೆಂಬದಮನಿ, ಮುಖಂಡರಾದ ಸೋಮಣ್ಣ ಯತ್ನಳ್ಳಿ, ಗದಗ ಬೆಟಗೇರಿ ನಗರಸಭೆಯ ಮಾಜಿ ಅಧ್ಯಕ್ಷೆ ರುದ್ರಮ್ಮ ಕೆರಕಲಮಟ್ಟಿ, ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷೆ ಕುಸುಮಾ ಬೆಳಗಟ್ಟಿ, ಡಾ.ಎಸ್ ಎಮ್ ವಾಲಿ ಸೇರಿದಂತೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಇದ್ದರು.

ಸಂಕನೂರ ಸೈನ್ಯದೆದುರು ಕುಬೇರಪ್ಪ ಏಕಾಂಗಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ತೀವ್ರ ಕುತೂಹಲ ಕೆರಳಿಸಿರುವ ವಿಧಾನ ಪರಿ?ತ್ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದರೂ ಕೈ ಪಾಳಯದಲ್ಲಿ ಈಗಲೂ ಒಗ್ಗಟ್ಟು ಪ್ರದರ್ಶನವಾಗುತ್ತಿಲ್ಲ. ಹೀಗಾಗಿ ಡಾ| ಆರ್.ಎಂ. ಕುಬೇರಪ್ಪ ಏಕಾಂಗಿಯಾಗಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ.
ವರ್ಷದ ಹಿಂದೆಯೇ ಕೆಪಿಸಿಸಿ ರಾಜ್ಯ ಪದವೀಧರ ಮತ್ತು ಶಿಕ್ಷಕರ ಘಟಕದ ಅಧ್ಯಕ್ಷರಾಗಿ ನೇಮಕವಾಗುತ್ತಿದ್ದಂತೆಯೇ ಕುಬೇರಪ್ಪ ಅವರು ಚುನಾವಣೆ ತಯಾರಿ ಆರಂಭಿಸಿದ್ದರು. ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಸಂಚರಿಸಿ, ಪದವೀಧರ ಮತದಾರರನ್ನು ಸಂಪರ್ಕಿಸುವ ಕೆಲಸ ಮಾಡಿದ್ದರು. ನೋಂದಣಿ ಪ್ರಕ್ರಿಯೆ ಚುರುಕುಗೊಳ್ಳಲೂ ಕಾರಣರಾಗಿದ್ದರು.
ಕೈಕೊಟ್ಟ ನಾಯಕರು: ಆದರೆ ಕುಬೇರಪ್ಪ ಅವರಿಗೆ ಕಾಂಗ್ರೆಸ್ ನಾಯಕರು ಮಾತ್ರ ಸಾಥ್ ನೀಡಲಿಲ್ಲ. ಗದಗ ಮಾತ್ರವಲ್ಲದೆ ಧಾರವಾಡ, ಹಾವೇರಿ ಮತ್ತು ಉತ್ತರಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕರೂ ಅವರಿಗೆ ಕೈ ಕೊಟ್ಟಿದ್ದಾರೆ. ಪಕ್ಷ ಅಧಿಕೃತವಾಗಿ ಟಿಕೆಟ್ ಘೋಷಣೆ ಮಾಡಿದ ಮೇಲೂ ಕೈ ನಾಯಕರು ಕುಬೇರಪ್ಪ ಪರ ಒಗ್ಗಟ್ಟು ಪ್ರದರ್ಶಿಸದಿರುವುದು ಈಗ ಗುಟ್ಟಾಗಿ ಉಳಿದಿಲ್ಲ.

ಒಂದು ಸುತ್ತಿನ ಪ್ರಚಾರ ಪೂರ್ಣ
ಮತದಾರ ಕಾರ್ಯಕರ್ತರ ಸಮಿತಿ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಕುಬೇರಪ್ಪ ಪರ ಒಂದು ಸುತ್ತಿನ ಪ್ರಚಾರ ಕಾರ್ಯಪೂರ್ಣಗೊಂಡಿದೆ. ವಿಶೇ?ವಾಗಿ ರೋಣ ಮತಕ್ಷೇತ್ರದಲ್ಲಿ ಕುಬೇರಪ್ಪ ಅವರ ಪರವಾಗಿ ಸಾಕ? ಪ್ರಚಾರ ಮಾಡಲಾಗಿದೆ. ಮನೆ ಮನೆಗೆ ತೆರಳಿ ಮತದಾರರನ್ನು ಸಂಪರ್ಕಿಸುವ ಕೆಲಸ ಮಾಡಲಾಗುತ್ತಿದೆ.
– ಜಿ.ಎಸ್. ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ

ಯುವ ಘಟಕವೂ ಜತೆಗಿಲ್ಲ: ಜಿಲ್ಲಾ ಯೂತ್ ಕಾಂಗ್ರೆಸ್ ಘಟಕ ಪದವೀಧರ ಕ್ಷೇತ್ರದ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು. ಪದವೀಧರರನ್ನು ಸಂಪರ್ಕಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಶ್ರಮಿಸಬೇಕಿತ್ತು. ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಿತ್ತು. ಆದರೆ ಯೂತ್ ಕಾಂಗ್ರೆಸ್ ಘಟಕ ಇದ್ಯಾವುದನ್ನೂ ಮಾಡಲೇ ಇಲ್ಲ. ಕೊನೆ ಪಕ್ಷ ನೋಂದಣಿ ಪ್ರಕ್ರಿಯೆ ಮುಗಿದ ಮೇಲಾದರೂ ಪ್ರಚಾರ ಕಾರ್ಯದಲ್ಲಿತೊಡಗಿಕೊಳ್ಳುವ ನಿರೀಕ್ಷೆಯೂ ಹುಸಿಯಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರೇ ಹೇಳುತ್ತಿದ್ದಾರೆ.

ಕಮಲ ಪ್ರಚಾರ ಜೋರು
ಬಿಜೆಪಿ ಅಭ್ಯರ್ಥಿ ಸಂಕನೂರ ಪರ ದೊಡ್ಡ ದೊಡ್ಡ ನಾಯಕರು ಮತಯಾಚನೆಯಲ್ಲಿ ತೊಡಗಿದ್ದಾರೆ. ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಗಣಿ, ಭೂವಿಜ್ಞಾನ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸಿ.ಸಿ. ಪಾಟೀಲ, ಸಂಸದರಾದ ಶಿವಕುಮಾರ ಉದಾಸಿ ಮತ್ತು ಯುವ ಮುಖಂಡ ಅನಿಲ ಮೆಣಸಿನಕಾಯಿ ಕ್ಷೇತ್ರದಲ್ಲಿದ್ದು, ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ,ಟಿ, ರವಿ ಅವರೂ ಧಾರವಾಡ ಭಾಗದಲ್ಲಿ ಸಂಕನೂರ ಪರ ಮತ ಯಾಚಿಸಿದ್ದಾರೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಕುಬೇರಪ್ಪ ಏಕಾಂಗಿಯಾಗಿ ಕ್ಷೇತ್ರದ ತುಂಬ ಓಡಾಡಿ, ಪದವೀಧರರ ಬೆಂಬಲವನ್ನು ಪಡೆಯಲು ತೀವ್ರ ಪ್ರಯತ್ನ ನಡೆಸುತ್ತಿದ್ದರೆ. ಕಾಂಗ್ರೆಸ್ಸಿನ ಯಾವುದೇ ನಾಯಕರು ಪ್ರಚಾರ ಕಾರ್ಯದಲ್ಲಿ ನಿರತರಾಗದಿರುವುದು ಕುಬೇರಪ್ಪ ಏಕಾಂಗಿಯಾಗಿರುವುದಕ್ಕೆ ಸಾಕ್ಷಿಯಾಗಿದೆ.

ನಾಯಕರು ಎಲ್ಲಿ?: ಉತ್ತರ ಕರ್ನಾಟಕದ ಪ್ರಭಾವಿ ನಾಯಕ, ಹಿರಿಯ ಕಾಂಗ್ರೆಸಿಗ ಎಚ್.ಕೆ. ಪಾಟೀಲ ಅವರು ಈ ಹಿಂದೆ ಪಶ್ಚಿಮ ಪದವೀಧರ ಕ್ಷೇತ್ರವನ್ನು ಸತತವಾಗಿ ಪ್ರತಿನಿಧಿಸುತ್ತಿದ್ದರು. ಆಗೆಲ್ಲ ಜಿಲ್ಲೆಯ ಕೈ ನಾಯಕರು ಆಸಕ್ತಿಯಿಂದ ಚುನಾವಣೆಯಲ್ಲಿ ಭಾಗವಹಿಸಿ, ಎಚ್.ಕೆ. ಪಾಟೀಲ ಗೆಲುವಿಗೆ ಉತ್ಸಾಹದಿಂದ ಕೆಲಸ ಮಾಡುತ್ತಿದ್ದರು. ಆದರೆ ಆ ಉತ್ಸಾಹ ಕುಬೇರಪ್ಪ ಅವರ ಸ್ಪರ್ಧೆಯ ವಿಷಯದಲ್ಲಿ ಕಾಣುತ್ತಿಲ್ಲ. ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಜಿ.ಎಸ್. ಪಾಟೀಲ ಹಾಗೂ ಕುಬೇರಪ್ಪ ಅವರ ಆಪ್ತ ಪ್ರೊ| ಹನುಮಂತಗೌಡ ಕಲ್ಮನಿ ಇವರನ್ನು ಹೊರತುಪಡಿಸಿ ಜಿಲ್ಲೆಯ ಕಾಂಗ್ರೆಸ್ ಮಾಜಿ ಶಾಸಕರು, ಮುಖಂಡರು ಕುಬೇರಪ್ಪ ಪರವಾಗಿ ಗಂಭೀರವಾಗಿ ಚುನಾವಣೆ ಎದುರಿಸುವ ಎದೆಗಾರಿಕೆ ಪ್ರದರ್ಶಿಸುತ್ತಿಲ್ಲ. ಪ್ರಚಾರಕ್ಕೂ ಬರುತ್ತಿಲ್ಲ.

ಉತ್ಸಾಹ ಇದೆ
ಯೂತ್ ಕಾಂಗ್ರೆಸ್ ಮನೆಮನೆಗೆ ತೆರಳಿ ಪ್ರಚಾರ ಮಾಡುತ್ತಿದೆ. ಎಚ್.ಕೆ. ಪಾಟೀಲ ಅವರು ಸ್ಪರ್ಧಿಸುತ್ತಿದ್ದ ಸಂದರ್ಭದಲ್ಲಿ ಇದ್ದ ಉತ್ಸಾಹ ಈಗಲೂ ಇದೆ.
-ಅಶೋಕ ಮಂದಾಲಿ, ಯೂತ್ ಕಾಂಗ್ರೆಸ್ ಅಧ್ಯಕ್ಷ

ಆರೋಗ್ಯಕರ ಆಹಾರದಿಂದ ಆರೋಗ್ಯಕರ ಸಮಾಜ: ಕವಿತಾ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಮಹಿಳಾ ಶಕ್ತಿ ಮಹಾನ್ ಶಕ್ತಿಯಾಗಿದ್ದು, ಮಹಿಳೆಯ ಛಲ, ಹೋರಾಟ ಆಕೆಯ ಬದುಕನ್ನು ಉನ್ನತಕ್ಕೇರಿಸಿವೆ ಎಂದು ಗದಗ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಕವಿತಾ ದಂಡಿನ ಅಭಿಪ್ರಾಯಪಟ್ಟರು.
ಸೋಮವಾರ ಬೆಟಗೇರಿ ಅಂಬೇಡ್ಕರ್ ನಗರದ ಬಾಲಾಜಿ ಉದ್ಯಾನವನದಲ್ಲಿ ಗದುಗಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಏರ್ಪಡಿಸಿದ್ದ ಮಹಿಳಾ ಜಾಗೃತಿ ಯೋಜನೆಯಡಿ ಕುಟುಂಬದ ಆರೋಗ್ಯದಲ್ಲಿ ಪೌಷ್ಟಿಕ ಆಹಾರದ ಪಾತ್ರ ಮಹಿಳಾ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕುಟುಂಬವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುವ ಮಹಿಳೆ, ಸಮಾಜವನ್ನೂ ಪ್ರಗತಿಪಥದೆಡೆಗೆ ಸಾಗಿಸುವಲ್ಲಿ ಮುಂಚೂಣಿಯಲ್ಲಿದ್ದಾಳೆ ಎಂಬುದು ಇತಿಹಾಸ ಹಾಗೂ ರಾಜಕೀಯ ವಿದ್ಯಮಾನಗಳಿಂದ ನಿರೂಪಿತವಾಗಿದೆ. ಮಹಿಳೆಯನ್ನು ಭೂದೇವಿಗೆ ಹೊಲಿಕೆ ಮಾಡಲಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯನ್ನು ಭೂಮಿ ತೂಕಕ್ಕೆ ಹೋಲಿಕೆ ಮಾಡಲಾಗಿದೆ. ಆರೋಗ್ಯಕರ ಕುಟುಂಬ, ಸಮಾಜ ನಿರ್ಮಾಣದಲ್ಲಿ ಆರೋಗ್ಯಕರ ಆಹಾರವೂ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದರು.
ಕೊರೊನಾ ಸೋಂಕಿನಿಂದಾಗಿ ಮಾನವ ಸಂಕುಲಕ್ಕೆ ತೀವ್ರ ಪೆಟ್ಟು ಬಿದ್ದಿದೆ, ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಪ್ರಜ್ಞಾವಂತರಾದ ನಾವೆಲ್ಲರೂ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕುಟುಂಬ, ಪರಿವಾರದ ಕಾಳಜಿಯಿಂದ ಮಾಸ್ಕ್, ಸ್ಯಾನಿಟೈಜರ್ ಬಳಕೆಗೆ ಜ್ಞಾಪಿಸುವದಲ್ಲದೆ, ಬಿಸಿ-ಪೌಷ್ಟಿಕ ಆಹಾರ, ಪೇಯಗಳನ್ನು ಸಿದ್ಧಪಡಿಸಿ ಕುಟುಂಬದ ಆರೋಗ್ಯವನ್ನು ಮಹಿಳೆಯರೇ ಕಾಪಾಡುತ್ತಿದ್ದಾರೆ ಎಂದರು.
ಸಂಸ್ಥೆಯ ಯೋಜನಾ ನಿರ್ದೇಶಕ ಶಿವಾನಂದ ಆಚಾರ್ಯ ಮಾತನಾಡಿ, ಮಹಿಳೆಯರದು ಲೆಕ್ಕಾಚಾರದ ಬದುಕು. ಎಲ್ಲ ರೀತಿಯ ಸಮತೋಲನ ಕಾಯ್ದುಕೊಂಡು ಕುಟುಂಬ ಹಾಗೂ ಸಮಾಜವನ್ನು ಸನ್ಮಾರ್ಗದೆಡೆಗೆ ಮುನ್ನಡೆಸುವಲ್ಲಿ ಮಹಿಳೆಯರ ಪಾತ್ರ ಹಿರಿದಾದುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ಒಕ್ಕೂಟದ ಅಧ್ಯಕ್ಷೆ ವೀನಾ ಕಬ್ಬಿಣದ, ಮಹಿಳೆಯರು ಸಂಘಟಿತರಾಗುವ ಮೂಲಕ ಸ್ವಯಂ ಉದ್ಯೋಗ ಕೈಗೊಂಡು ಕುಟುಂಬಕ್ಕೆ ನೆರವಾಗಬೇಕು. ಅಂದಾಗ ಕುಟುಂಬ ಆರ್ಥಿಕವಾಗಿ ಇನ್ನಷ್ಟು ಸದೃಢತೆ ಪಡೆಯುವುದು ಎಂದರು.
ಸವಿತಾ ಕುಲಕರ್ಣಿ ಪ್ರಾರ್ಥಿಸಿದರು. ವಲಯ ಮೇಲ್ವಿಚಾರಕ ಈಶ್ವರ ಸ್ವಾಗತಿಸಿ ನಿರೂಪಿಸಿದರು. ದೀಪಾ ಅಂಗಡಿ ವಂದಿಸಿದರು. ಅನಸೂಯಾ ಶೀಲವಂತ, ಪಾರ್ವತಿ ಪಿರಂಗಿ, ಜಯಶ್ರೀ ಕಬ್ಬಿಣದ, ಖೈರೂನಾ ಬೇಲೇರಿ, ಶ್ರವಂತಿ ಗಾರ್ಗಿ, ಸವಿತಾ ನಾಗಾವಿ, ಕವಿತಾ ಶಿರಹಟ್ಟಿ, ರೇಶ್ಮಾ ಕಲಾಲ, ಸಹನಾ ಅಣ್ಣಿಗೇರಿ, ಅಂಬಿಕಾ ಮಿಟ್ಟಿ, ರುಕ್ಮಿಣಿ ಗಂಧದ ಕಾರ್ಯಕ್ರಮದಲ್ಲಿದ್ದರು.

ಕಾಡದಿರಲಿ ಕ್ಷಯ, ಬೇಡ ಭಯ: ಡಾ.ಸವಡಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಕ್ಷಯ ರೋಗದ ಬಗ್ಗೆ ಯಾರೂ ಭಯ ಪಡುವ ಅಗತ್ಯವಿಲ್ಲ‌‌. ಸೂಕ್ತ ಕಾಲಕ್ಕೆ ಸೂಕ್ತ ಚಿಕಿತ್ಸೆ ಪಡೆದರೆ ಕ್ಷಯರೋಗ ಕಾಡುವುದಿಲ್ಲ. ಆದರೆ ಎಲ್ಲರಿಗೂ ತಮ್ಮ ಆರೋಗ್ಯ ಕಾಳಜಿ ಮುಖ್ಯ ಎಂದು ಗಂಗಾವತಿ ಉಪವಿಭಾಗ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಈಶ್ವರ ಸವಡಿ ಕರೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕ್ಷಯರೋಗ ನಿರ್ಮೂಲನಾ ಘಟಕ ಕೊಪ್ಪಳ. ಉಪ ವಿಭಾಗ ಆಸ್ಪತ್ರೆ, ತಾಲೂಕ ಆರೋಗ್ಯಾಧಿಕಾರಿಗಳ ಕಚೇರಿ ಗಂಗಾವತಿ, ಕರ್ನಾಟಕ ಆರೋಗ್ಯ ಸಂವರ್ಧನ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಗಂಗಾವತಿ ಉಪವಿಭಾಗ ಆಸ್ಪತ್ರೆಯಲ್ಲಿ ಮಂಗಳವಾರ ನಡೆದ ಕ್ಷಯ ರೋಗಿಗಳ ಮನೋಚೈತನ್ಯ ಹಾಗೂ ಪೌಷ್ಟಿಕ ಆಹಾರ ವಿತರಣಾ ಶಿಬಿರವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕ್ಷಯ ರೋಗಿಗಳಿಗೆ ಆತ್ಮಸ್ಥೈರ್ಯ ಹಾಗೂ ಆರೋಗ್ಯದ ಕಳಕಳಿ ನೀಡುವ ಮಹದುದ್ದೇಶದಿಂದ ಉಪವಿಭಾಗ ಆಸ್ಪತ್ರೆಯ ಮಾನಸಿಕ ತಜ್ಞರಾದ ಡಾ.ವಾದಿರಾಜ ಅವರಿಂದ ಶಿಬಿರದಲ್ಲಿ ಪಾಲ್ಗೊಂಡ ಎಲ್ಲ ಕ್ಷಯರೋಗಿಗಳಿಗೆ ಮನೋ ಚೈತನ್ಯ ಹಾಗೂ ಮಾನಸಿಕ ಆರೋಗ್ಯದ ಕೌಶಲ್ಯಗಳ ಬಗ್ಗೆ ಮಾಹಿತಿ ನೀಡುತ್ತಾರೆ ಎಂದರು.

ಕ್ಷಯರೋಗಕ್ಕೆ ಯಾರು ಭಯಪಡುವ ಅಗತ್ಯವಿಲ್ಲ ನಿಮ್ಮೆಲ್ಲರಿಗೂ ನಮ್ಮ ಉಪ ವಿಭಾಗ ಆಸ್ಪತ್ರೆಯ ಎಲ್ಲಾ ವಿಭಾಗಗಳು ಸದಾ ತೆರೆದಿರುತ್ತದೆ. ಸರಿಯಾದ ಸಮಯದಲ್ಲಿ ಊಟ ಮತ್ತು ನಿಯಮಿತ ವ್ಯಾಯಾಮ ಮಾತ್ರೆಗಳನ್ನು ತೆಗೆದುಕೊಳ್ಳುವ ಮೂಲಕ ಸರ್ಕಾರಿ ವ್ಯವಸ್ಥೆಯಲ್ಲಿ ತಜ್ಞರಿಂದ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಅವರು ಕೋರಿದರು.

ಕಾರ್ಯಕ್ರಮದ ಕುರಿತು ಕ್ಷಯರೋಗ ಪರಿವೀಕ್ಷಕ ಮಲ್ಲಿಕಾರ್ಜುನ್ ಅವರು ಮಾತನಾಡಿ, ಕ್ಷಯರೋಗವು ಯಾವುದೇ ಪಾಪ ಕರ್ಮಗಳಿಂದ ಬರುವಂಥದ್ದಲ್ಲ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕ್ಷಯ ಇರುವವರು ಕೆಮ್ಮುವಾಗ, ಸೀನುವಾಗ ಅವರ ಬಾಯಿಂದ ಬರುವ ತುಂತುರು ಹನಿಗಳ ಮುಖಾಂತರ ಆರೋಗ್ಯವಂತ ವ್ಯಕ್ತಿಗೆ ಕ್ಷಯ ಹರಡುತ್ತದೆ.

ಚಿಕಿತ್ಸೆ ಕೊಡದಿರುವ ರೋಗಿಯು ಒಂದು ವರ್ಷಕ್ಕೆ 16 ರಿಂದ 18 ಜನರಿಗೆ ಸೋಂಕನ್ನು ಹರಡುತ್ತಾನೆ‌. ಆದ್ದರಿಂದ ಶಿಬಿರಾರ್ಥಿಗಳು ನಿಮ್ಮ ಮನೆಯ ಸುತ್ತಮುತ್ತಲಿನಲ್ಲಿರುವ ಕ್ಷಯ ಲಕ್ಷಣವಿರುವ ಅವರನ್ನು ಗುರುತಿಸಿ ಪರೀಕ್ಷೆ ಮತ್ತು ಚಿಕಿತ್ಸೆಗೆ ಕಳುಹಿಸಿಕೊಡಿ ಎಂದು ತಿಳಿಸಿದರು.

ನಕಲಿ ವೈದ್ಯರನ್ನು ಸಂಪರ್ಕಿಸದೆ ಸರ್ಕಾರಿ ವ್ಯವಸ್ಥೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡದಲ್ಲಿ ನೀಡುವ ಚಿಕಿತ್ಸೆ ಪಡೆದುಕೊಳ್ಳಲು ಅವರು ಮನವಿ ಮಾಡಿದರು.

ಚಿಕಿತ್ಸಾ ಮೇಲ್ವಿಚಾರಕ ನಾಗರಾಜ್ ಮಾತನಾಡಿ, ಕ್ಷಯ ರೋಗದ ಪರೀಕ್ಷೆ ಮತ್ತು ಚಿಕಿತ್ಸೆ ಉಚಿತವಾಗಿ ನೀಡಲಾಗುವುದು. ಜೊತೆಗೆ ಕ್ಷಯ ದೃಢ ಪಟ್ಟವರಿಗೆ ಸರ್ಕಾರದಿಂದ ಪ್ರತಿ ತಿಂಗಳು ಐನೂರು ರೂ.ಗಳ ಸಹಾಯಧನ ನೀಡಲಾಗುವುದು. ಹಾಗೂ ಚಿಕಿತ್ಸೆಯ ಸಮಯದಲ್ಲಿ ಸಹ ವ್ಯಾಧಿ ಸೋಂಕುಗಳ ಪರೀಕ್ಷೆ ಹಾಗೂ ಚಿಕಿತ್ಸೆ ಕೂಡ ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮ ಸಂಯೋಜಕಿ ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ಕುಮಾರಿಕಾ ಸಿಂಬಿ ಮಾತನಾಡಿ, ಪವರ್ ವಿಟಾ ಪ್ರೋಟೀನ್ ಪೌಡರ್ ಹೇಗೆ ಉಪಯೋಗಿಸಿಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ತಿಳಿಸಿಕೊಟ್ಟರು. ಕಾರ್ಯಕ್ರಮ ಸಂಯೋಜಕ ಹನುಮಂತ ಅವರು ಶಿಬಿರಾರ್ಥಿಗಳಿಗೆ ತೂಕ, ಅವರ ಆಕ್ಸಿಜನ್ ಮಟ್ಟ, ಟೆಂಪರೇಚರ್ ಪರೀಕ್ಷೆ ಮಾಡಿದರು.

ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಿಬ್ಬಂದಿ ಶಿವಾನಂದ್, ಸಮುವೆಲ್, ಯಮನೂರಪ್ಪ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

error: Content is protected !!