ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಹೆಣ್ಣು ಮಕ್ಕಳ ಸಂಖ್ಯೆ ದಿನದಿನಕ್ಕೆ ಇಳಿಮುಖವಾಗತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲರಲ್ಲೂ ಹೆಣ್ಣು ಮಗುವಿನ ಕುರಿತು ಜಾಗೃತಿ ಮೂಡಿಸುವುದು ಮುಖ್ಯವಾಗಿದೆ. ಲಿಂಗ ಸಮಾನತೆ, ಭ್ರೂಣಹತ್ಯ, ಬಾಲ್ಯವಿವಾಹ ಸಮಸ್ಯೆಗಳನ್ನು ಪರಿಹರಿಸಲು ಜಾಗೃತಿ ಮೂಡಿಸಬೇಕಿದೆ ಎಂದು ಆರ್.ಪಿ.ಡಿ. ಟಾಸ್ಕ್ ಫೋರ್ಸ್ ರಾಜ್ಯಾಧ್ಯಕ್ಷ ಮಂಜುನಾಥ ಎಂ. ಹೊಸಕೇರಾ ಹೇಳಿದರು.
ಕರ್ನಾಟಕ ರಾಜ್ಯ ವಿಕಲಚೇತನರ ಆರ್.ಪಿ.ಡಿ. ಟಾಸ್ಕ್ ಫೋರ್ಸ್ ಜಿಲ್ಲಾ ಘಟಕ ಕೊಪ್ಪಳ, ಶ್ರೀ ಕಾರ್ಗಿಲ್ ಮಲ್ಲಯ್ಯ ವಿಕಲಚೇತನರ ಸಂಘ ಅಳವಂಡಿ, ಕರ್ನಾಟಕ ಆರೋಗ್ಯ ಸಂವರ್ಧನಾ ಪ್ರತಿದಿನ ಕೊಪ್ಪಳ, ಸ್ಫೂರ್ತಿ ಹದಿಹರಿಯರ ಮಾದರಿ ಹೆಣ್ಣು ಮಕ್ಕಳ ಯೋಜನೆ ಅಡಿಯಲ್ಲಿ ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಅಂಗವಾಗಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪಾಸಾದ ಹೆಣ್ಣು ಮಕ್ಕಳಿಗೆ ಪ್ರಶಂಸನಾ ಪ್ರಮಾಣ ಪತ್ರಗಳನ್ನು ಅಳವಂಡಿ ಶ್ರೀ ಸಿದ್ದೇಶ್ವರ ಸಮುದಾಯ ಭವನದಲ್ಲಿ ವಿತರಿಸಿ ಅವರು ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಮರುಳಾದ್ಯ ಶಿವಾಚಾರ್ಯ ಸ್ವಾಮೀಜಿ, ಹೆಣ್ಣು ಮಕ್ಕಳು ಚಿಕ್ಕಂದಿನಲ್ಲಿ ತಂದೆ ತಾಯಿ, ಮದುವೆ ಬಳಿಕ ಗಂಡನ, ಮುಪ್ಪಿನ ಕಾಲದಲ್ಲಿ ಮಕ್ಕಳ ಆಶ್ರಯದಲ್ಲಿ ಬದುಕುವುದು ಸಾಮಾಜಿಕ ಧರ್ಮ. ಬಾಲ್ಯವಿವಾಹ ನಿಷೇಧ ಕಾಯ್ದೆ ಜಾರಿ ಬಗ್ಗೆ ಜನಜಾಗೃತಿ ಅಭಿಯಾನ ಆಗಬೇಕಿದೆ ಎಂದು ಆಶೀರ್ವದಿಸಿದರು.
ಗ್ರಾ.ಪಂ. ಕಾರ್ಯದರ್ಶಿ ಬಸವರಾಜ, ಜಿಲ್ಲಾ ಯುವ ಪ್ರಶಸ್ತಿ ವಿಜೇತ ವೀರೇಶ ಹಾಲಗುಂಡಿ, ಶ್ರೀ ಕಾರ್ಗಿಲ್ ಮಲ್ಲಯ್ಯ ವಿಕಲಚೇತನರ ಸಂಘದ ಅಧ್ಯಕ್ಷ ಸಿದ್ದಲಿಂಗಯ್ಯ ಅಳವಂಡಿ, ಯೋಗೇಶ್ವರ್ ವಾಲಿಕಾರ, ತಾಜುದ್ದೀನ್, ಅಂಗನವಾಡಿ ಕಾರ್ಯಕರ್ತೆಯರಾದ ಪುಷ್ಪಾವತಿ ಮುನಿಯಮ್ಮನವರ, ಲಲಿತಾ ಆರೇರ, ಅನ್ನಪೂರ್ಣಾ, ಮರಿಬಸಮ್ಮ, ಲಲಿತಾ, ಹನುಮವ್ವ, ಕರ್ನಾಟಕ ಆರೋಗ್ಯ ಸಂವರ್ಧನಾ ಪ್ರತಿಷ್ಠಾನದ ಸಿಬ್ಬಂದಿ ಮಲ್ಲಪ್ಪ, ಲತಾ ಉಪಸ್ಥಿತರಿದ್ದರು.
ಹೆಣ್ಣು ಮಗುವಿನ ಕುರಿತು ಜಾಗೃತಿ ಮೂಡಿಸಿ: ಹೋಸಕೇರಾ
ಬೀದಿ ದನಗಳ ಮಾಲೀಕರಿಗೆ ಚಳಿ ಬಿಡಿಸಿದ ಅಧಿಕಾರಿಗಳು
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಗಂಗಾವತಿ ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಓಡಾಟ ದಟ್ಟವಾಗುತ್ತಿದೆ. ಇದರೊಂದಿಗೆ ರಸ್ತೆ ಅಪಘಾತಗಳೂ ಹೆಚ್ಚುತ್ತಿದ್ದು, ಬೀದಿ ದನಗಳು ರಸ್ತೆಯ ಮೇಲೆ ನಿಲ್ಲುವುದು, ಓಡಾಡುವುದು ಹಾಗೂ ಮಲಗುವುದೂ ಪ್ರಮುಖ ಕಾರಣ ಎಂದರಿತ ಪೊಲೀಸ್ ಇಲಾಖೆ ಮತ್ತು ನಗರಸಭೆ ಅಧಿಕಾರಿಗಳು, ಸೋಮವಾರ ರಾತ್ರಿ ತಂಡಗಳನ್ನು ರಚಿಸಿ, ರಸ್ತೆ ಮೇಲೆ ಮಲಗಿದ್ದ ಜಾನುವಾರುಗಳನ್ನು ಗಂಗಾವತಿ ಪ್ರವಾಸಿ ಮಂದಿರದ ಆವರಣಕ್ಕೆ ಸಾಗಿಸಿದರು.
ಆ ಬಳಿಕ ಅಧಿಕಾರಿಗಳು ಈ ಜಾನುವಾರುಗಳನ್ನು ಕೊಪ್ಪಳದ ಗೋಶಾಲೆಗೆ ಕಳುಹಿಸಲು ಸಿದ್ಧತೆ ಮಾಡಿಕೊಂಡರು. ಈ ಸಂದರ್ಭದಲ್ಲಿ ಜಾನುವಾರುಗಳ ಮಾಲೀಕರು ಆಗಮಿಸಿ, ಅವುಗಳನ್ನು ಬಿಟ್ಟುಕೊಡುವಂತೆ ಮನವಿ ಮಾಡಿದರು.

ಪೊಲೀಸ್ ಮತ್ತು ನಗರಸಭೆ ಅಧಿಕಾರಿಗಳು ಜಾನುವಾರು ಮಾಲೀಕರನ್ನು ನಗರದ ಪೊಲೀಸ್ ಠಾಣೆಗೆ ಕರೆಸಿ, ಅವರಿಗೆ ಸೂಕ್ತವಾದ ಮಾಹಿತಿ ನೀಡಿ ತಪ್ಪೊಪ್ಪಿಗೆ ಪತ್ರವನ್ನು ಬರೆಸಿಕೊಂಡರು.
ಡಿವೈಎಸ್ಪಿ ಉಜ್ಜನಕೊಪ್ಪ ಮಾತನಾಡಿ, ಜಾನುವಾರುಗಳಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ, ರಸ್ತೆ ಅಪಘಾತಗಳೂ ಸಂಭವಿಸುತ್ತಿವೆ. ಈ ಹಿಂದೆ ಹಲವು ಬಾರಿ ಎಚ್ಚರಿಕೆ ನೀಡಿದರೂ ದನಗಳನ್ನು ಬೀದಿಗೆ ಬಿಡುವುದನ್ನು ನಿಲ್ಲಿಸಿಲ್ಲ. ಇದು ಕೊನೆಯ ಅವಕಾಶ. ಇದೇ ವರ್ತನೆ ಮುಂದುವರಿದರೆ ಜಾನುವಾರುಗಳ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಗಂಗಾವತಿ ನಗರ ಠಾಣೆಯ ಪಿಎಸ್‌ಐ ವೆಂಕಟಸ್ವಾಮಿ, ನಗರಸಭೆ ಪೌರಾಯುಕ್ತ ಅರವಿಂದ್ ಜಮಖಂಡಿ, ನಗರಸಭೆ ಸಿಬ್ಬಂದಿ ದತ್ತಾತ್ರೇಯ ಹೆಗಡೆ, ನಾಗರಾಜ್, ನೇತ್ರಾವತಿ, ಸಾಮಾಜಿಕ ಹೋರಾಟಗಾರ ಹುಸೇನಪ್ಪ ಅಂಚಿನಾಳ, ಡಿ.ಎಸ್.ಎಸ್. ಜಿಲ್ಲಾ ಸಂಚಾಲಕ ಹುಲಿಗೇಶ ಕುಜ್ಜಿ ಉಪಸ್ಥಿತರಿದ್ದರು.
ಗದಗ ರೈಲ್ವೆ ನಿಲ್ದಾಣಕ್ಕೆ ಪುಟ್ಟರಾಜರ ಹೆಸರಿಡಲು ಮನವಿ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಅಂಧ, ಅನಾಥರ ಬಾಳಿಗೆ ಬೆಳಕಾಗಿದ್ದ ಸಂಗೀತ ಸಾಮ್ರಾಟ ಲಿಂ. ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರು ಸಂಗೀತ ಲೋಕದಲ್ಲಿ ಮಾಡಿದ ಸಾಧನೆ ಅಪ್ರತಿಮವಾಗಿದ್ದು, ಅವರ ಹೆಸರನ್ನು ಚಿರಸ್ಥಾಯಿಯಾಗಿಸಲು ಗದಗ-ಬೆಟಗೇರಿ ರೈಲ್ವೇ ನಿಲ್ದಾಣಕ್ಕೆ ಡಾ. ಪುಟ್ಟರಾಜ ಗವಾಯಿಗಳ ಹೆಸರನ್ನು ಇರಿಸುವಂತೆ ರೈಲ್ವೇ ಇಲಾಖೆಗೆ ಶಿಫಾರಸ್ಸು ಮಾಡಲು ಒತ್ತಾಯಿಸಿ ವಿವಿಧ ಸಂಘಟನೆಗಳ ಮುಖಂಡರು ಸಂಸದ ಶಿವಕುಮಾರ ಉದಾಸಿ ಅವರಿಗೆ ಮನವಿ ನೀಡಿದರು.
ಕೇಂದ್ರ ರೈಲ್ವೆ ಸಚಿವರಾಗಿದ್ದ ದಿ. ಸುರೇಶ ಅಂಗಡಿ ಅವರು ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಸದ್ಗುರು ಸಿದ್ದಾರೂಢ ಸ್ವಾಮೀಜಿ ಅವರ ನಾಮಕರಣ ಮಾಡಿದ್ದು, ಅದೇ ಮಾದರಿಯಲ್ಲಿ ಗದಗ ವೀರೇಶ್ವರ ಪುಣ್ಯಾಶ್ರಮದ ಲಿಂ. ಡಾ. ಪಂಡಿತ ಪುಟ್ಟರಾಜ ಕವಿಗವಾಯಿಗಳವರ ಹೆಸರನ್ನು ಇರಿಸಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರಾದ ಬಸವಣ್ಣೆಯ್ಯ ಹಿರೆಮಠ, ಮಹೇಶ ದಾಸರ, ವೆಂಕಟೇಶ ಬೇಲೂರ, ಸಹದೇವ ಬಂಡಿ, ಯಲ್ಲಪ್ಪಣ್ಣ ತೇರದಾಳ, ಪರಶುರಾಮ ಬಂಕದ, ತಿಮ್ಮಣ್ಣ ಡೊಣಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಶಿವಬಸವ ಜನಕಲ್ಯಾಣ ಸಂಸ್ಥೆ, ಸೋಮೇಶ್ವರಯ್ಯ ಹಿರೇಮಠ ಜನಕಲ್ಯಾಣ ಪ್ರತಿಷ್ಠಾನ, ನಾಗಾವಿ, ವೆಂಕಟೇಶ ದಾಸರ ಅಭಿಮಾನಿಗಳ ಬಳಗ, ಕರ್ನಾಟಕ ರಾಜ್ಯ ರೈಲ್ವೇ ಹೋರಾಟ ಸಮಿತಿ, ಗದಗ ಬೋವಿ ಸಮಾಜದ ಮುಖಂಡರು ಮನವಿ ನೀಡಿದ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸನ್ಮಾನ: ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಪ್ರಥಮ ಬಾರಿಗೆ ಗದಗ ನಗರಕ್ಕೆ ಆಗಮಿಸಿದ ಬಿ. ಶ್ರೀರಾಮುಲು, ಸಂಸದರಾದ ಶಿವಕುಮಾರ ಉದಾಸಿ ಹಾಗೂ ಬಿಜೆಪಿ ಮುಖಂಡರಾದ ಅನಿಲ ಮೆಣಸಿನಕಾಯಿ ಅವರನ್ನು ಸನ್ಮಾನಿಸಿ, ಸಾಧನೆಯ ಹರಿಕಾರ ನರೇಂದ್ರ ಮೋದಿ ಅವರನ್ನು ಕುರಿತ ಗ್ರಂಥವನ್ನು ನೀಡಿ ಗೌರವಿಸಿದರು.
ಮಂಜುನಾಥ ಶಾಂತಗಿರಿ, ಕೃಷ್ಣಾ ಜಾಧವ, ಅಡಿವೆಪ್ಪ ಬಾಗಲಕೋಟಿ, ಜಗದೀಶ ಕಟ್ಟಿಮನಿ, ದೇವು ಕಟಗಿ, ಸುನೀಲ ನಿಡಗುಂದಿ, ದ್ಯಾಮಣ್ಣ ಹುನಗುಂದ, ಹನಮಂತ ಗೊಜನೂರ, ಪರಶುರಾಮ ಬಂಕದಮನಿ, ಶ್ರೀನಿವಾಸ ಖಟವಟೆ, ಶಂಕರ ಸಿದ್ಲಿಂಗ್, ಚಂದ್ರಶೇಖರ ಬ್ಯಾಹಟ್ಟಿ, ಕುಮಾರಗೌಡ ಪಾಟೀಲ ಉಪಸ್ಥಿತರಿದ್ದರು.
ಸಿಡಿಲು ಬಡಿದು ಬಾಲಕಿ ಸಾವು
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಯಲಬುರ್ಗಾ: ತಾಲೂಕಿನ ಗೆದಗೇರಿ ತಾಂಡಾದಲ್ಲಿ ಮಂಗಳವಾರ ಮಧ್ಯಾಹ್ನ ಸಿಡಿಲು ಬಡಿದು ಬಾಲಕಿ ಮೃತಪಟ್ಟಿದ್ದಾಳೆ.
ರೂಪಾ ಚೌಹಾಣ (14) ಮೃತಪಟ್ಟ ಬಾಲಕಿಯಾಗಿದ್ದಾಳೆ. ಜಮೀನಿನಲ್ಲಿ ನಿಂತಾಗ ಸಿಡಿಲು ಬಡಿದು ಅಸ್ವಸ್ಥಗೊಂಡು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಸ್ಪಂದಿಸದೇ ಮೃತಪಟ್ಟಿದ್ದಾಳೆ.
ಮೃತ ಬಾಲಕಿ 6ನೇ ತರಗತಿ ಶಾಲೆ ಅಭ್ಯಾಸ ಮಾಡುತ್ತಿದ್ದಳು. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಹಾರ ಚುನಾವಣೆ ಬಂದೋಬಸ್ತ್‌ಗೆ ವಿಶೇಷ ರೈಲು
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಬಿಹಾರ ರಾಜ್ಯದ ವಿಧಾನಸಭಾ ಚುನಾವಣೆಯ ಬಂದೋಬಸ್ತ್ ಕರ್ತವ್ಯಕ್ಕೆ ಕೊಪ್ಪಳ ಜಿಲ್ಲೆಯ ಮುನಿರಾಬಾದ್-ಹೊಸಳ್ಳಿಯ ಇಂಡಿಯನ್ ರಿಜರ್ವ್ ಬಟಾಲಿಯನ್ (ಐಆರ್‌ಬಿ)ನ ಸುಮಾರು 200 ಸಿಬ್ಬಂದಿ ವಿಶೇಷ ರೈಲಿನಲ್ಲಿ ರವಿವಾರ ರಾತ್ರಿ ತೆರಳಿದರು.
ಹುಬ್ಬಳ್ಳಿಯಿಂದ ಕೊಪ್ಪಳಕ್ಕೆ ಬಂದ ವಿಶೇಷ ರೈಲನ್ನು ಸುಮಾರು ಒಂದೂವರೆ ಗಂಟೆಗಳ ಕಾಲ ಸ್ಯಾನಿಟೈಜರ್ ಮಾಡಲಾಯಿತು. ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಐಆರ್‌ಬಿ ಕಮಾಂಡೆಂಟ್ ಮಹಾದೇವಪ್ರಸಾದ್ ಅವರು ಸಹಾಯಕ ಕಮಾಂಡೆಂಟ್ ಸತೀಶ್. ಇ. ನೇತೃತ್ವದಲ್ಲಿ ಬಿಹಾರ ರಾಜ್ಯಕ್ಕೆ ತೆರಳುತ್ತಿರುವ ಸಿಬ್ಬಂದಿಗೆ ಮಾರ್ಗದರ್ಶನ ನೀಡಿದರು.
ಚುನಾವಣಾ ಕರ್ತವ್ಯದ ವೇಳೆ ಶಿಸ್ತಿನಿಂದ ಕೆಲಸ ಮಾಡಿ, ಇಡೀ ದೇಶಕ್ಕೆ ನಿಮ್ಮ ಕೆಲಸ ಮಾದರಿಯಾಗಲಿ ಎಂದು ಶುಭ ಹಾರೈಸಿ ಬೀಳ್ಕೊಟ್ಟರು.
ಬಿಹಾರ ಚುನಾವಣೆ ಬಂದೋಬಸ್ತ್‌ಗೆ ವಿಶೇಷ ರೈಲು
ವಿಕ ಸುದ್ದಿಲೋಕ ಕೊಪ್ಪಳ
ಬಿಹಾರ ರಾಜ್ಯದ ವಿಧಾನಸಭಾ ಚುನಾವಣೆಯ ಬಂದೋಬಸ್ತ್ ಕರ್ತವ್ಯಕ್ಕೆ ಕೊಪ್ಪಳ ಜಿಲ್ಲೆಯ ಮುನಿರಾಬಾದ್-ಹೊಸಳ್ಳಿಯ ಇಂಡಿಯನ್ ರಿಜರ್ವ್ ಬಟಾಲಿಯನ್ (ಐಆರ್‌ಬಿ)ನ ಸುಮಾರು 200 ಸಿಬ್ಬಂದಿ ವಿಶೇಷ ರೈಲಿನಲ್ಲಿ ರವಿವಾರ ರಾತ್ರಿ ತೆರಳಿದರು.
ಹುಬ್ಬಳ್ಳಿಯಿಂದ ಕೊಪ್ಪಳಕ್ಕೆ ಬಂದ ವಿಶೇಷ ರೈಲನ್ನು ಸುಮಾರು ಒಂದೂವರೆ ಗಂಟೆಗಳ ಕಾಲ ಸ್ಯಾನಿಟೈಜರ್ ಮಾಡಲಾಯಿತು. ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಐಆರ್‌ಬಿ ಕಮಾಂಡೆಂಟ್ ಮಹಾದೇವಪ್ರಸಾದ್ ಅವರು ಸಹಾಯಕ ಕಮಾಂಡೆಂಟ್ ಸತೀಶ್. ಇ. ನೇತೃತ್ವದಲ್ಲಿ ಬಿಹಾರ ರಾಜ್ಯಕ್ಕೆ ತೆರಳುತ್ತಿರುವ ಸಿಬ್ಬಂದಿಗೆ ಮಾರ್ಗದರ್ಶನ ನೀಡಿದರು.
ಚುನಾವಣಾ ಕರ್ತವ್ಯದ ವೇಳೆ ಶಿಸ್ತಿನಿಂದ ಕೆಲಸ ಮಾಡಿ. ಇಡೀ ದೇಶಕ್ಕೆ ನಿಮ್ಮ ಕೆಲಸ ಮಾದರಿಯಾಗಲಿ ಎಂದು ಶುಭ ಹಾರೈಸಿ ಬಿಳ್ಕೊಟ್ಟರು.
ಕೂಡಲೇ ಗಂಗಾವತಿ-ಹುಲಿಗಿ ರಸ್ತೆ ಡಾಂಬಾರಿಕರಣ ಕಾಮಗಾರಿ ಕೈಗೊಳ್ಳಿ; ಶರಣಪ್ಪ ಸಜ್ಜಿಹೊಲ
ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಕಳಪೆ ಕಾಮಗಾರಿ. ಅಧಿಕ ಮಳೆ ಮತ್ತು ರಸ್ತೆಯಲ್ಲಿ ಕೈಗೊಂಡಿರುವ ಪೈಪ್‌ಲೈನ್ ಕಾಮಗಾರಿ ಕಾರಣದಿಂದಾಗಿ ಮತ್ತು ಟೂಲ್ ಟ್ಯಾಕ್ಸ್ ಉಳಿಸಲು ಭಾರಿ ಗಾತ್ರದ ವಾಹನಗಳು ಸಂಚಾರ ಮಾಡುತ್ತಿರುವ ಕಾರಣದಿಂದ ಗಂಗಾವತಿ-ಹುಲಿಗಿ ರಸ್ತೆಯು ಸಂಪೂರ್ಣ ಹಾಳಾಗಿ ಹೋಗಿದೆ. ತಕ್ಷಣ ಇದನ್ನು ಸರಿಪಡಿಸಿ ಎಂದು ಆಮ್ ಆದ್ಮಿ ಪಕ್ಷದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕ ಅಧ್ಯಕ್ಷರಾದ ಶರಣಪ್ಪ ಸಜ್ಜಿಹೊಲ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿರುವ ಅವರು ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಹೊಂಡಗಳು ಬಿದ್ದು ಈ ರಸ್ತೆಯಲ್ಲಿ ಜನರು ಜೀವವನ್ನು ಕೈಯಲ್ಲಿಡಿದುಕೊಂಡು ಪ್ರಯಾಣಿಸುತ್ತಿದ್ದಾರೆ. ಮಳೆಯಿಂದಾಗಿ ರಸ್ತೆಯ ಮೇಲೆ ಬಿದ್ದಿರುವ ದೊಡ್ಡ ದೊಡ್ಡ ಗುಂಡಿಗಳಲ್ಲಿ ನೀರು ತುಂಬಿ ಸಂಚರಿಸಲಿಕ್ಕೆ ಅಸಾಧ್ಯವಾದ ಪರಿಸ್ಥಿತಿ ಉಂಟಾಗಿರುತ್ತದೆ.
ಇದೇ ರಸ್ತೆಯಲ್ಲಿ ಪ್ರಸಿದ್ದ ಯಾತ್ರಾ ಸ್ಥಳಗಳಾದ ಅಂದನಾದ್ರಿ ಬೆಟ್ಟ, ಪಂಪಾಸರೋವರ, ಆನೆಗುಂದಿ, ನವ ವೃಂದಾವನ, ೬೪ ಕಂಬಗಳ ಕಲ್ಲಿನ ಮಂಟಪ ಮತ್ತು ದುರ್ಗಾ ದೇವಸ್ಥಾನ, ಪ್ರಸಿದ್ದ ಹುಲಿಗೆಮ್ಮ ದೇವಿ ದೇವಸ್ಥಾನ ಮತ್ತು ಪ್ರವಾಸಿ ತಾಣವಾದ ಸಣಾಪೂರ ಕೆರೆ, ಕಲ್ಲಿನ ಸೇತುವೆ, ರಾಂಪೂರದ ಗುಹಾ ಚಿತ್ರಗಳಿರುವ ತಾಣ, ಮಲ್ಲಾಪೂರ ಮತ್ತು ಬೋರಕಾ ಜಲ ವಿದ್ಯುತ್ ಉತ್ಪಾದನಾ ಕೇಂದ್ರ ಮುಂತಾದ ಸ್ಥಳಗಳಿಗೆ ತಲುಪಲು ಗಂಗಾವತಿ-ಹುಲಿಗಿ ರಸ್ತೆಯನ್ನೆ ಅವಲಂಬಿಸಿದ್ದು, ಒಟ್ಟು ೩೨ ಕಿ.ಮೀ. ಉದ್ದದ ಈ ರಸ್ತೆ ಈಗ ಸಂಪೂರ್ಣ ಹಾಳಾಗಿ ಹೋಗಿದ್ದು, ಇಲ್ಲಿಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಪ್ರವಾಸಿಗರಿಗೆ ಮತ್ತು ಈ ರಸ್ತೆಯ ಮೂಲಕ ಪ್ರಯಾಣಿಸುವ ಪ್ರಯಾಣಿಕರಿಗೆ ಪ್ರತಿ ದಿನವೂ ನರಕ ದರ್ಶನವಾಗುತ್ತಿದೆ ಎಂದರು.
ಇನ್ನು ಈ ವರ್ಷ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ಮಳೆ ಮತ್ತು ಕಳಪೆ ರಸ್ತೆ ಕಾಮಗಾರಿ ನಿರ್ವಹಿಸಿದ ಕಾರಣದಿಂದ ರಸ್ತೆ ಈಗ ಸಂಪೂರ್ಣ ಹಾಳಾಗಿದ್ದು, ರಸ್ತೆ ಅಪಘಾತಗಳಿಗೆ ಆಹ್ವಾನ ನೀಡುವಂತಾಗಿದೆ. ರಸ್ತೆಯ ತುಂಬಾ ತುಂಬಿರುವ ಗುಂಡಿಗಳಿಂದಾಗಿ ಅಪಘಾತದಂತಹ ಅಹಿತಕರ ಘಟನೆಗಳು ಘಟಿಸುವ ಮೊದಲೇ ಶಾಸಕರಾದ ಪರಣ್ಣ ಮುನವಳ್ಳಿ, ರಾಘವೇಂದ್ರ ಹಿಟ್ನಾಳ ಅವರು ಎಚ್ಚತ್ತುಕೊಂಡು ಕೂಡಲೇ ಈ ರಸ್ತೆಯ ಡಾಂಬರೀಕರಣ ಮಾಡಬೇಕು. ಶಾಸಕರುಗಳು ಒಮ್ಮೆ ಈ ರಸ್ತೆ ಮಾರ್ಗದ ಮೂಲಕ ಸಂಚಾರ ಮಾಡಿ ಪರಿಸ್ಥಿತಿಯನ್ನು ಅವಲೋಕಿಸಬೇಕು ಎಂದು ತಿಳಿಸಿದರು.
ಅಂಜನಾದ್ರಿ, ದುರ್ಗಾ ಪರಮೇಶ್ವರಿ ಬೆಟ್ಟಕ್ಕೆ ಟಾಲಿವುಡ್ ಸ್ಟಾರ್ ಶ್ರೀಕಾಂತ್ ಭೇಟಿ
ವಿಜಯಸಾಕ್ಷಿ ಸುದ್ದಿ ಕೊಪ್ಪಳ
ತೆಲುಗು ಚಿತ್ರರಂಗದ ನಟ, ನಿರ್ಮಾಪಕ ಶ್ರೀಕಾಂತ್, ಜಿಲ್ಲೆಯ ತಾಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟ ಹಾಗೂ ಹೇಮಗುಡ್ಡದ ಬಳಿಯಿರುವ ದುರ್ಗಾ ಪರಮೇಶ್ವರಿ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ ಅಭಿನಯಿಸುತ್ತಿರುವ ಜೇಮ್ಸ್ ಚಿತ್ರ ಸಿನಿಮಾದ ಚಿತ್ರೀಕರಣ ತಾಲೂಕಿನ ಮಲ್ಲಾಪುರದಲ್ಲಿ ನಡೆಯುತ್ತಿದ್ದು, ಈ ಚಿತ್ರದಲ್ಲಿ ಶ್ರೀಕಾಂತ್ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶೂಟಿಂಗ್ನಲ್ಲಿ ಪಾಲ್ಗೊಳ್ಳಲು ಶ್ರೀಕಾಂತ್ ಹೈದರಾಬಾದ್ನಿಂದ ಆಗಮಿಸಿದ್ದಾರೆ.
ಶ್ರೀಕಾಂತ್ ಮೂಲತಃ ಗಂಗಾವತಿ ತಾಲೂಕಿನ ಬಸವಪಟ್ಟಣ ನಿವಾಸಿಯಾದ ಇವರು, ಕಳೆದ ಎರಡು ದಶಕಗಳ ಹಿಂದೆಯೇ ಹೈದರಾಬಾದ್ಗೆ ವಲಸೆ ಹೋಗಿ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ಕೊಪ್ಪಳ ಜಿ.ಪಂ.ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ; ಮತ್ತೆ ಅಧ್ಯಕ್ಷರಾಗಿ ಕೆ.ರಾಜಶೇಖರ ಹಿಟ್ನಾಳ ಆಯ್ಕೆ
ಬಿಎಸ್ಕೆ
ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಜಿ.ಪಂ.ಅಧ್ಯಕ್ಷರಾಗಿದ್ದ ವಿಶ್ವನಾಥರಡ್ಡಿ ಅವಿಶ್ವಾಸದಿಂದ ಖಾಲಿ ಉಳಿದಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ.ರಾಜಶೇಖರ ಹಿಟ್ನಾಳ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ರಾಜಶೇಖರ ಹಿಟ್ನಾಳ, ಹಾಗೂ ಬಿಜೆಪಿಯಿಂದ ಗಂಗಮ್ಮ ಈಶಪ್ಪ ಗುಳಗಣ್ಣವರ ನಾಮಪತ್ರ ಸಲ್ಲಿಸಿದ್ದರು. ಆದರೆ ಬಿಜೆಪಿಯ ಗಂಗಮ್ಮ ಈಶಪ್ಪ ಗುಳಗಣ್ಣವರು ೫ ಮತಗಳು ಪಡೆದರೆ, ಕಾಂಗ್ರೆಸ್‌ನ ರಾಜಶೇಖರ ಹಿಟ್ನಾಳ ೨೩ ಮತಗಳನ್ನು ಪಡೆಯುವುದರ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಪ್ರಾದೇಶಿಕ ಆಯುಕ್ತ ಡಾ.ಎಂ.ವಿ.ಪ್ರಸಾದ್ ಘೋಷಣೆ ಮಾಡಿದ್ದಾರೆ.
೨೯ ಸ್ಥಾನ ಹೊಂದಿದ್ದ ಕೊಪ್ಪಳ ಜಿಲ್ಲಾ ಪಂಚಾಯತಿಯಲ್ಲಿ ಕಾಂಗ್ರೆಸ್ ೧೭, ಬಿಜೆಪಿ ೧೧, ಹಾಗೂ ಓರ್ವ ಪಕ್ಷೇತರ ಹೊಂದಿದ್ದರು. ಆದರೆ ಕಾಂಗ್ರೆಸ್ ಬಹುಮತವಿದ್ದ ಜಿ.ಪಂ.ಯಲ್ಲಿ ವಿಶ್ವನಾಥರಡ್ಡಿ ಹೊಸಮನಿಯವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ವಿಶ್ವನಾಥರಡ್ಡಿ ಅವರ ಅಧಿಕಾರದ ಅವಧಿ ಮುಗಿದರೂ ಕೂಡ ಅಧಿಕಾರ ಬಿಟ್ಟು ಕೊಡದೇ ಇದ್ದುದರಿಂದ ಬಿಜೆಪಿಯ ೮ ಜನ ಸದಸ್ಯರ ಬೆಂಬಲದೊಂದಿಗೆ ಕಾಂಗ್ರೆಸ್‌ನವರು ವಿಶ್ವನಾಥರಡ್ಡಿಯನ್ನು ಅವಿಶ್ವಾಸ ಮಾಡಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು.
ಆದರೆ ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಹುಮತ ವಿದ್ದರೂ ಕೂಡ ರಾಜಶೇಖರ ಹಿಟ್ನಾಳ ಅವರು ಕಾಂಗ್ರೆಸ್‌ನ ೧೭ ಸದಸ್ಯರಲ್ಲಿ ೧೬ ಜನ ಸದಸ್ಯರು ಹಾಗೂ ಬಿಜೆಪಿಯ ೬ಜನ ಹಾಗೂ ಓರ್ವ ಪಕ್ಷೇತರ ಬೆಂಬಲದೊಂದಿಗೆ ೨೩ ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೆ, ವಿಶ್ವನಾಥರಡ್ಡಿ ಹೊಸಮನಿ ಗೈರು ಆಗಿದ್ದರು.
ಆದರೆ ಬಿಜೆಪಿ ೧೧ ಜನ ಸದಸ್ಯರಿದ್ದರೂ ಕೂಡ ೬ ಜ£ ಸದಸ್ಯರು ಕಾಂಗ್ರೆಸ್‌ನ ರಾಜಶೇಖರ ಪರ ಮತ ಹಾಕಿದ್ದರಿಂದ ಬಿಜೆಪಿಯ ಗಂಗಮ್ಮ ಈಶಣ್ಣ ಗುಳಗಣ್ಣವರ ೫ ಮತಗಳನ್ನು ಪಡೆದುಕೊಂಡು ಪರಾಭವಗೊಂಡರು.
ವಿಜಯೋತ್ಸವ:
ಜಿ.ಪಂ.ಅಧ್ಯಕ್ಷರಾಗಿ ಕೆ. ರಾಜಶೇಖರ ಹಿಟ್ನಾಳ ಅವರು ಆಯ್ಕೆಯಾಗುತ್ತಿದ್ದಂತೆ ಕಾರ್ಯಕರ್ತರಿಂದ ಬಾರಿ ವಿಜಯೋತ್ಸವ ಆಚರಿಸಿದರು.
ಜಿಲ್ಲಾಡಳಿತ ಎದುರಿಗೆ ರಸ್ತೆಯಲ್ಲಿ ಕೊರೋನಾ ಸೊಂಕು ಭಯವಿಲ್ಲದೆ ವಿವಿಧ ಗ್ರಾಮಗಳಿಂದ ಆಗಮಿಸಿ ಜಮಾಯಿಸಿದ್ದ ಸಾವಿರಾರು ಕಾರ್ಯಕರ್ತರು ವಿವಿಧ ವಾಧ್ಯಮೇಳಗಳ ಸದ್ದುನೊಂದಿಗೆ ಪಟಾಕಿ ಸಿಡಿಸಿ ಪಕ್ಷದ ಧ್ವಜವನ್ನು ಹಿಡಿದುಕೊಂಡು ವಿಜಯೋತ್ಸವ ಆಚರಿಸಿದರು.
ದುಷ್ಕರ್ಮಿಗಳಿಂದ ದಂಪತಿ ಮೇಲೆ ಹಲ್ಲೆ; ಪತ್ನಿ ಸ್ಥಳದಲ್ಲೇ ಸಾವು ಪತಿ ಸ್ಥತಿ ಗಂಭೀರ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ದಂಪತಿ ಮೇಲೆ ದುಷ್ಕರ್ಮಿಗಳು ರಾಡ್ ನಿಂದ ಹಲ್ಲೆ ಮಾಡಿದ್ದು, ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಪತಿ ಗಂಭೀರ ಗಾಯವಾಗಿ ಸ್ಥಿತಿ ಚಿಂತಾಜನಕವಾಗಿದ್ದು, ಗಂಗಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮೂಲತಃ ಜಮಖಂಡಿಯ ಖಾಸಗಿ ಬ್ಯಾಂಕ್ ಉದ್ಯೋಗಿ ತ್ರಿವೇಣಿ(28) ಮೃತ ಮಹಿಳೆ. ಐಡಿಎಫ್ ಸಿ ಬ್ಯಾಂಕ್ ಕಾರಟಗಿ ಶಾಖೆಯ ಉದ್ಯೋಗಿ ಯಲಬುರ್ಗಾ ತಾಲೂಕು ಮುಧೋಳ ಗ್ರಾಮದ ವಿನೋದ(35) ಗಂಭೀರವಾಗಿ ಗಾಯಗೊಂಡಿದ್ದಾನೆ.
ಈ ಮೊದಲು ಯಲಬುರ್ಗಾ ತಾಲೂಕು ಮುಧೋಳ ಗ್ರಾಮದಲ್ಲಿನ ಸಹಕಾರಿ ಬ್ಯಾಂಕ್ ವೊಂದರ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ತ್ರಿವೇಣಿ ಮತ್ತು ವಿನೋದ ಪ್ರೀತಿಸಿ ಮದುವೆಯಾಗಿದ್ದರು. ಮದುವೆ ನಂತರ ಮೃತ ತ್ರಿವೇಣಿ ಬಳ್ಳಾರಿ ಜಿಲ್ಲೆ ಸಿರುಗುಪ್ಪ ಶಾಖೆಗೆ ವರ್ಗಾವಣೆ ತೆಗೆದುಕೊಂಡಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಮರ್ಯಾದೆ ಹತ್ಯೆ: ದುಷ್ಕರ್ಮಿಗಳು ಇವರ ಮನೆ ಹತ್ತಿರವೇ ಬಂದು ಹಲ್ಲೆ ಮಾಡಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಪೊಲೀಸರಿಗೆ ದೊರೆತ ಫುಟೇಜ್ ನಲ್ಲಿ ಆರೋಪಿಗಳ ಚಹರೆ ಸ್ಪಷ್ಟವಾಗಿ ಕಾಣುತ್ತಿಲ್ಲ ಎನ್ನಲಾಗಿದೆ. ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದು, ಮಹಿಳೆಯ ಕುಟುಂಬದವರಿಗೆ ಈ ಮದುವೆಗೆ ವಿರೋಧವಿತ್ತು. ಈ ಹಿನ್ನೆಲೆಯಲ್ಲಿ ಇದು ಮರ್ಯಾದೆ ಹತ್ಯೆ ಇರಬಹುದು ಎನ್ನಲಾಗಿದೆ.
ಸ್ಥಳಕ್ಕೆ ಎಸ್ಪಿ ಟಿ.ಶ್ರೀಧರ, ಗಂಗಾವತಿ ಡಿವೈಎಸ್ಪಿ ಆರ್.ಎಸ್. ಉಜ್ಜಿನಕೊಪ್ಪ, ಗಂಗಾವತಿ ಗ್ರಾಮೀಣ ಸಿಪಿಐ ಉದಯರವಿ ಭೇಟಿ ನೀಡಿ, ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.

