ಆಕ್ಸಿಜನ್ ಕೊರತೆಯಿಂದಾಗಿ ಕೇವಲ ನಾಲ್ಕು ದಿನಗಳಲ್ಲಿ ಗೋವಾದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಬರೋಬ್ಬರಿ 74 ಜನ ಸಾವನ್ನಪ್ಪಿರುವ ಘಟನೆ ನಡದಿದೆ. 13 ಜನ ಶುಕ್ರವಾರ(ಮೇ.14)ರಂದು ಸಾವನ್ನಪ್ಪಿದ್ದಾರೆ ಎಂದು ಮಾಜಿ ಡಿಸಿಎಂ ವಿಜಯ್ ಸರ್ದೇಸಾಯಿ ಬಹಿರಂಗ ಪಡಿಸಿದ್ದಾರೆ.
ಆಕ್ಸಿಜನ್ ಕೊರತೆಯಿಂದಾಗಿ ಗುರುವಾರವೇ ಬೆಳಿಗ್ಗೆ 15 ಜನ ಸಾವನ್ನಪ್ಪಿದ್ದಾರೆ. ಅಲ್ಲದೇ, ಬುಧವಾರ 20 ಜನ ಹಾಗೂ ಮಂಗಳವಾರ 26 ಜನ ಬಲಿಯಾಗಿದ್ದಾರೆ ಎಂದು ವರದಿ ತಿಳಿಸಿದೆ. ಆಸ್ಪತ್ರೆಗೆ ಭೇಟಿ ನೀಡಿರುವ ಗೋವಾ ಸಿಎಂ ಪ್ರಮೋದ್ ಸಾವಂತ್, ಮೆಡಿಕಲ್ ಆಕ್ಸಿಜನ್ ಲಭ್ಯತೆಯ ಕೊರತೆಯಿಂದ ಈ ದುರ್ಘಟನೆ ನಡೆದಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಆಕ್ಸಿಜನ್ ಸರಬರಾಜು ಕೊರತೆ ಇಲ್ಲ. ಮೇ 1ರಿಂದ 10ರ ವರೆಗೆ ರಾಜ್ಯವು ಮಹಾರಾಷ್ಟ್ರದ ಕೊಲ್ಹಾಪುರದಿಂದ ನಿಗದಿಪಡಿಸಿದ್ದ 110 ಮೆಟ್ರಿಕ್ ಟನ್ ಗಳಲ್ಲಿ ಕೇವಲ 66.74 ಮೆಟ್ರಿಕ್ ಟನ್ ಮೆಡಿಕಲ್ ಆಕ್ಸಿಜನ್ ಪಡೆದಿರುವುದಾಗಿ ಕೂಡ ಗೋವಾ ಸರ್ಕಾರ ಹೇಳಿದೆ.
ಪಟ್ಟಣದಲ್ಲಿ ಬಸವ ಜಯಂತಿ ಪ್ರಯುಕ್ತ ಪಿಎಸ್ಐ ನವೀನ್ ಜಕ್ಕಲಿ, ಬಸ್ ನಿಲ್ದಾಣದ ಪಕ್ಕದಲ್ಲಿ ಇರುವ ಬುಡಕಟ್ಟು ಜನಾಂಗದ ಕುಟುಂಬಗಳಿಗೆ ಊಟ ಕಲ್ಪಿಸುವುದರ ಮೂಲಕ ಬಡವರ ಹಸಿವನ್ನು ನೀಗಿಸುವ ಕೆಲಸವನ್ನು ಮಾಡಿದ್ದಾರೆ.
ಕೋವಿಡ್ ನಿಯಂತ್ರಣಕ್ಕಾಗಿ ಕಠಿಣ ಕರ್ಫ್ಯೂ ಕರ್ತವ್ಯದಲ್ಲೂ ಸಹ ಬಿಡುವು ಮಾಡಿಕೊಂಡು ಇಂತಹ ಮಾನವೀಯತೆಯನ್ನು ಮೆರೆಯುವಂತಹ ಹಲವಾರು ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರ ಮೂಲಕ ಸಾರ್ವಜನಿಕ ವಲಯದಲ್ಲಿ ಪಿಎಸ್ಐ ನವೀನ ಜಕ್ಕಲಿ ಪ್ರಸಂಸೆಗೆ ಪಾತ್ರರಾಗಿದ್ದಾರೆ.
ಇಲ್ಲಿಯ ಕೆ.ಆರ್. ಆಸ್ಪತ್ರೆಯ ವೈದ್ಯರ ಮೇಲೆ ನಡೆದ ಹಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ತೀವ್ರವಾಗಿ ಖಂಡಿಸಿದ್ದಾರೆ. ಯಾವುದೇ ಕಾರಣಕ್ಕೂ ವೈದ್ಯರ ಮೇಲೆ ಹಲ್ಲೆ ನಡೆಯಬಾರದು. ವೈದ್ಯರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಅಲ್ಲದೇ, ಈಗಾಗಲೇ ಕೆ.ಆರ್. ಆಸ್ಪತ್ರೆಯಲ್ಲಿ ಬಂದೋಬಸ್ತ್ ಮಾಡುವಂತೆ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.
ಅಲದೇ, ಕೆ.ಆರ್.ಆಸ್ಪತ್ರೆಗೆ ಅಡಿಷನಲ್ ಡೀನ್ ನೇಮಕ ಮಾಡುತ್ತೇವೆ. ಒಬ್ಬರೇ ಅಧಿಕಾರಿಗಳಿಗೆ ಕಾರ್ಯದ ಒತ್ತಡ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಸಿಎಂ ಅವರ ಜೊತೆ ಮಾತನಾಡಿದ್ದೇನೆ. ವೈದ್ಯರಿಗೆ ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಪ್ರತಿಯೊಂದು ಆಸ್ಪತ್ರೆಯಲ್ಲಿ ವೈದ್ಯರಿಗೆ ಇನ್ನು ಮುಂದೆ ಈ ರೀತಿ ಆಗದಂತೆ ಆಸ್ಪತ್ರೆಯಲ್ಲಿ ಬಂದೋಬಸ್ತ್ ಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಆನೆಗಳ ಸಾಲು ಸಾಲು ಸಾವು ಕಂಡು ಬಂದಿದೆ. ಒಂದೇ ಪ್ರದೇಶದಲ್ಲಿ 18 ಆನೆಗಳು ಸಾವನ್ನಪ್ಪಿರುವ ಘಟನೆ ನಡೆದಿವೆ. ಈ ಆನೆಗಳು ಸಿಡಿಲು ಬಡಿದು ಸಾವನ್ನಪ್ಪಿವೆ ಎಂದು ಶಂಕಿಸಲಾಗಿದೆ. ಈ ಕುರಿತು ವನ್ಯಜೀವಿ ವಿಭಾಗದಮುಖ್ಯ ಸಂರಕ್ಷಣಾಧಿಕಾರಿ ಅಮಿತ್ ಶಾಯ್ ಮಾಹಿತಿ ನೀಡಿದ್ದಾರೆ. ಘಟನೆ ನಡೆದ ಪ್ರದೇಶ ತೀರಾ ದುರ್ಗಮವಾಗಿದೆ.
ಗುರುವಾರ ಮಧ್ಯಾಹ್ನದವೆಗೂ ನಮ್ಮ ತಂಡಕ್ಕೆ ಅಲ್ಲಿಯವರೆಗೆ ತೆರಳಲು ಆಗಲಿಲ್ಲ. ಅಷ್ಟೊಂದು ದುರ್ಗಮ ಮಾರ್ಗ ಇದಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ಬೆಟ್ಟದ ಮೇಲೆ 14 ಹಾಗೂ ಬೆಟ್ಟದ ಕೆಳಗೆ 4 ಆನೆಗಳ ಶವಗಳು ಪತ್ತೆಯಾಗಿವೆ. ಆನೆಗಳು ಸಿಡಿಲು ಬಡಿದು ಮೃತಪಟ್ಟಿವೆ ಎಂದು ಶಂಕಿಸಲಾಗಿದೆ. ಮೃತಪಟ್ಟ ಆನೆಗಳ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಬಳಿಕ ಖಚಿತ ಮಾಹಿತಿ ತಿಳಿಯಲಿದೆ ಎಂದು ಹೇಳಿದ್ದಾರೆ.
ಆನೆಗಳು ಸಾಲಾಗಿ ಸತ್ತು ಬಿದ್ದಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಜನ ಬೇಸರ ವ್ಯಕ್ತಪಡಿಸಿ ಸಂತಾಪ ಸೂಚಿಸುತ್ತಿದ್ದಾರೆ.
ತಲ್ವಾರ್ ನಿಂದ ಕೊಚ್ಚಿ ಯುವಕನೊಬ್ಬನನ್ನು ಬರ್ಭರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಚಿತ್ತಾಪೂರ ತಾಲೂಕಿನ ಅಲ್ಲೂರ್ (ಬಿ) ಗ್ರಾಮದಲ್ಲಿ ಈ ಘಟನೆ ನಡೆದಿದೆ. ಭೀಮರಾಯ (22) ಕೊಲೆಯಾದ ದುರ್ದೈವಿ ಯುವಕ. ಅದೇ ಗ್ರಾಮದ 20 ವರ್ಷದ ಸಿದ್ದಪ್ಪ ಎಂಬ ಯುವಕನಿಂದ ಈ ಕೊಲೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಇಂದು ಬೆಳಿಗ್ಗೆ 3 ಗಂಟೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂನ್ನಲಾಗಿದೆ.
ಕೊಲೆಯಾಗಿರುವ ಭೀಮರಾಯ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ತಲ್ವಾರ್ ನಿಂದ ದುಷ್ಕರ್ಮಿ ಕೊಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಕರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಕುರಿತು ತನಿಖೆ ಕೈಗೊಂಡಿದ್ದಾರೆ.
ನನ್ನ ದೇಶದ ಮುಸ್ಲಿಂ ಭಾಂಧವರೇ, ಇದು ಭಾರತ, ನಿಮ್ಮದೇ ನೆಲ. ಅಭಿವ್ಯಕ್ತಿ ಸ್ವಾತಂತ್ರ್ಯ ನಿಮ್ಮ ಹಕ್ಕು. ಅದನ್ನು ಉಪಯೋಗಿಸಿಕೊಳ್ಳಿ…….
ವಿಶ್ವದ ಎಲ್ಲಾ ಚಟುವಟಿಕೆಗಳನ್ನು ನೀವು ಗಮನಿಸುತ್ತಿದ್ದೀರಿ, ಎಲ್ಲಾ ಮಾಹಿತಿಗಳು ನಿಮ್ಮ ಬೆರಳ ತುದಿಯಲ್ಲಿ ಲಭ್ಯವಿದೆ ……….
ಇದು ಗ್ರೀಕ್, ರೋಮನ್, ನೈಲ್, ಸಿಂಧೂ ನಾಗರಿಕತೆಯ ಕಾಲವಲ್ಲ,
ಇದು ವೇದಗಳ, ಬುದ್ದನ, ಪೈಗಂಬರನ, ಯೇಸುವಿನ ಕಾಲವಲ್ಲ……..
ಇದು ಜೋ ಬಿಡೆನ್, ನರೇಂದ್ರ ಮೋದಿ, ರೌಹಾನಿ, ಷೀ ಜಿನ್ ಪಿಂಗ್, ಪುಟಿನ್, ನೆತನ್ಯಾವು, ಇಮ್ರಾನ್ ಖಾನ್ ಗಳ ಕಾಲ…………
ಇದು ಕಲ್ಲು ಮಣ್ಣು ಕುದುರೆ ಒಂಟೆ ಕತ್ತೆಗಳ ಕಾಲವಲ್ಲ,
ಬಾಂಬು ಬಂದೂಕು ಮಿಸೈಲ್ ಸ್ಯಾಟಲೈಟ್ ಮಾನವ ಆತ್ಮಹತ್ಯೆ ಬಾಂಬುಗಳ ಕಾಲ……..
ನಿಮಗೆ ಅರ್ಥವಾಗಬೇಕು……
ವಿಶ್ವದ ಈ ಸಂದರ್ಭದಲ್ಲಿ ಯಾವ ದೇಶ ಮುಂದುವರಿದಿದೆ,ಯಾವ ದೇಶ ಹಿಂದುಳಿದಿದೆ, ಯಾವ ದೇಶ ಹಾಳಾಗಿದೆ,ಯಾವ ದೇಶ ಶಾಂತಿಯಿಂದಿದೆ, ಯಾವ ದೇಶ ರಕ್ತಪಾತದಲ್ಲಿ ಮುಳುಗಿದೆ, ಯಾವ ದೇಶ ಧರ್ಮಾಂಧವಾಗಿದೆ, ಯಾವ ದೇಶ ಜಾತ್ಯಾತೀತವಾಗಿದೆ, ಯಾವ ದೇಶದಲ್ಲಿ ನೇರ ಭಯೋತ್ಪಾದಕರಿದ್ದಾರೆ, ಯಾವ ದೇಶದಲ್ಲಿ ಪರೋಕ್ಷ ಭಯೋತ್ಪಾದಕರಿದ್ದಾರೆ, ಯಾವ ಧರ್ಮ ಶಾಂತಿಯನ್ನು ಬೋಧಿಸುತ್ತದೆ, ಯಾವ ಧರ್ಮ ಹಿಂಸೆಯನ್ನು ಪ್ರಚೋದಿಸುತ್ತದೆ ಎಲ್ಲವೂ ನಿಮಗೆ ತಿಳಿದಿದೆ.
ಈ ಹಬ್ಬದ ಸಮಯದಲ್ಲಿ ನಿಮ್ಮ ಆತ್ಮವಿಮರ್ಶೆ ಮಾಡಿಕೊಳ್ಳಿ. ನಿಮ್ಮ ಶಕ್ತಿ ಸಾಮರ್ಥ್ಯ ಅರಿತುಕೊಳ್ಳಿ ಹಾಗೆಯೇ ನಿಮ್ಮ ಮೇಲಿನ ಆರೋಪ ಮತ್ತು ದೌರ್ಬಲ್ಯಗಳನ್ನು ಸಹ ಅವಲೋಕಿಸಿ. ವಿಶ್ವವನ್ನು ಭಾರತವನ್ನು ಶಾಂತಿಯ ಕಡೆಗೆ ಮುನ್ನಡೆಸುವ ನಾಯಕತ್ವ ವಹಿಸಿ. ಆರೋಪ ಪ್ರತ್ಯಾರೋಪಗಳಿಗಿಂತ ಸಕಾರಾತ್ಮಕ ಚಟುವಟಿಕೆಗಳಿಗೆ ಮಹತ್ವ ನೀಡಿ.
ವಿಶ್ವದ ಜನ ಆಶ್ಚರ್ಯ ಪಡುವಂತೆ ಆಧುನಿಕ ಮತ್ತು ವೈಚಾರಿಕ ಚಿಂತನೆಗಳಿಂದ, ಮೂಲ ಧರ್ಮದ ನಿಷ್ಠೆಗಿಂತ ಮಾನವ ಧರ್ಮದ ನಿಷ್ಠೆ ನಿಮ್ಮದಾಗಲಿ……
ನೀವು ಒಪ್ಪಿ – ಬಿಡಿ ಅಥವಾ ಇದು ಸುಳ್ಳೋ – ನಿಜವೋ ಒಟ್ಟಿನಲ್ಲಿ ಜಾಗತಿಕವಾಗಿ ಇಸ್ಲಾಂ ಮತ್ತು ಭಯೋತ್ಪಾದನೆ ಒಂದಕ್ಕೊಂದು ತಳುಕು ಹಾಕಿಕೊಂಡಿದೆ.
ಅದಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷ ಕಾರಣಗಳು ಏನೇ ಇರಬಹುದು. ಎಲ್ಲಾ ಧರ್ಮಗಳಲ್ಲೂ ಭಯೋತ್ಪಾದನೆ ಇರಬಹುದು. ಆದರೆ ಭಯೋತ್ಪಾದನೆ ಇರಾಕ್, ಸಿರಿಯಾ, ಆಪ್ಘನಿಸ್ತಾನ, ಪಾಕಿಸ್ತಾನ ಮುಂತಾದ ದೇಶಗಳಲ್ಲಿ ಅತಿಹೆಚ್ಚು ಇರುವುದರಿಂದ ಅದು ಇಸ್ಲಾಂ ಭಯೋತ್ಪಾದನೆಯಾಗಿ ಬಿಂಬಿತವಾಗಿದೆ.
ಉಗ್ರರ ಕ್ರೌರ್ಯ ಮತ್ತು ಮುಗ್ಧರ ಅಸಹಾಯಕ ಮಾರಣ ಹೋಮ ಮಾಧ್ಯಮಗಳಲ್ಲಿ ಪ್ರಸಾರವಾಗವುದನ್ನು ನೋಡಿದರೆ ಕೋಪ ಮತ್ತು ದುಃಖ ಒಟ್ಟಿಗೇ ಉಂಟಾಗುತ್ತದೆ. ಅದಕ್ಕೆ ಕಾರಣರಾದವರ ಬಗ್ಗೆ ಯಾರಿಗೇ ಆಗಲಿ ಆಕ್ರೋಶ ಉಕ್ಕುತ್ತದೆ.
ಇಂತಹ ಸೂಕ್ಷ್ಮ ಮತ್ತು ಸಂದಿಗ್ಧ ಪರಿಸ್ಥಿತಿಯಲ್ಲಿ ಇಸ್ಲಾಂ ಶಾಂತಿ ಸೌಹಾರ್ದತೆಯ ಸಂಕೇತ ಎಂದು ವಿಶ್ವಕ್ಕೇ ನಿರೂಪಿಸುವ ಬಹುದೊಡ್ಡ ಜವಾಬ್ದಾರಿ ಇರುವುದು ಮತ್ತು ಹೊರಬೇಕಾಗಿರುವುದು ಬಹುಶಃ ಜನಸಂಖ್ಯೆಯ ದೃಷ್ಟಿಯಿಂದ ಅತಿಹೆಚ್ಚು ಜನರನ್ನು ಒಟ್ಟಿಗೆ ಹೊಂದಿರುವ ಭಾರತೀಯ ಮುಸ್ಲಿಮರದು.ಅದಕ್ಕೆ ಕಾರಣವೂ ಇದೆ.
ಭಾರತೀಯ ನೆಲದ , ಜಾತ್ಯಾತೀತ ಸಂವಿಧಾನದ , ಸರ್ವ ಧರ್ಮಗಳ ಸಮನ್ವಯದ, ಶಾಂತಿಯ ನಾಡಾದ ಇಲ್ಲಿನ ಗುಣಗಳನ್ನು ತಮ್ಮ ರಕ್ತದಲ್ಲಿಯೇ ಹೊಂದಿದ್ದಾರೆ ಬಹಳಷ್ಟು ಮುಸ್ಲಿಂಮರು . ತಮ್ಮ ಎಲ್ಲಾ ತೃಪ್ತಿ ಅತೃಪ್ತಿಗಳ ನಡುವೆಯೂ ಅನೇಕ ಶತಮಾನಗಳಿಂದ ವಿಭಿನ್ನ ಆಚರಣೆಗಳ ಹಿಂದೂಗಳ ಜೊತೆ ಸೌಹಾರ್ದತೆ ಮತ್ತು ಸಮನ್ವಯತೆಯಿಂದ ಜೀವಿಸುತ್ತಿರುವ ಅನುಭವ ಮತ್ತು ಇತಿಹಾಸ ಅವರಿಗಿದೆ.
ಬುದ್ಧ ಮಹಾವೀರ ಗುರುನಾನಕ್ ರಂತ ಶಾಂತಿ ಸಹಿಷ್ಣುಗಳ ನಾಡಿನಲ್ಲಿ, ಬಸವ ವಿವೇಕಾನಂದ ಗಾಂಧಿ ಅಂಬೇಡ್ಕರ್ ರವರ ಸಾಮಾಜಿಕ ಸಮಾನತೆ ಮತ್ತು ಮಾನವೀಯ ಚಳವಳಿಯ ಈ ಮಣ್ಣಿನಲ್ಲೇ ಹುಟ್ಟಿದ ಮುಸ್ಲೀಮರು ಅವುಗಳ ಪ್ರಭಾವದಿಂದ ಪ್ರೇರಿತರಾಗಿ ತಮ್ಮ ನಡವಳಿಕೆಗಳಲ್ಲಿ ಅವರ ಅಂಶಗಳನ್ನು ಅಳವಡಿಸಿಕೊಂಡಿದ್ದಾರೆ.
ಭಾರತೀಯರ ಜೀವನ ಶೈಲಿ, ಸರ್ವ ಧರ್ಮಸಹಿಷ್ಣತೆ, ಶಾಂತಿ ಸಹಬಾಳ್ವೆ ಅವರಿಗೆ ಮನವರಿಕೆಯಾಗಿದೆ. ಹಾಗೆಯೇ ಇಲ್ಲಿನ ಮೌಡ್ಯ ಅಜ್ಞಾನ ರಾಜಕೀಯದಲ್ಲೂ ಕೂಡ ಅವರ ಪಾಲಿದೆ.
ಪರ್ಷಿಯನ್ ಮತ್ತು ಅರಬ್ ದೇಶಗಳಷ್ಟು ಗಾಢ ಧಾರ್ಮಿಕ ಮೂಲಭೂತವಾದಿತನವನ್ನು ಹೊಂದದೆ, ಹಿಂಸೆ ಮತ್ತು ಅಮಾಯಕರ ಮಾರಣಹೋಮ ಖುರಾನ್ ನ ತತ್ವಗಳಿಗೆ ವಿರುದ್ಧವಾಗಿದೆ ಎಂದು ನಂಬಿ ಆಚರಿಸುವ ಮನೋಭಾವ ಅನೇಕ ಭಾರತೀಯ ಮುಸ್ಲೀಮರಲ್ಲಿ ಅಡಕವಾಗಿದೆ.
ಇತ್ತೀಚಿನ ದಿನಗಳಲ್ಲಿ ಇಲ್ಲಿನ ಹಿಂದೂ ಪ್ರಗತಿಪರರ ನಿಲುವುಗಳನ್ನು ಬಹುತೇಕ ಬೆಂಬಲಿಸುವ ಇವರು ಇನ್ನೂ ಹೆಚ್ಚು ಹೆಚ್ಚು ಧಾರ್ಮಿಕ ಅಂಧಶ್ರಧ್ಧೆಯನ್ನು ಕಡಿಮೆಗೊಳಿಸಿಕೊಳ್ಳುವ ಮೂಲಕ ಮತ್ತು ಭಯೋತ್ಪಾದಕ ಹಿಂಸೆಯನ್ನು ಖಂಡಿಸುವ ಮತ್ತು ತಡೆಯುವ ಮುಖಾಂತರ ಆಧುನಿಕತೆಗೆ ಮತ್ತು ವೈಚಾರಿಕತೆಗೆ ತಮ್ಮನ್ನು ಮುಕ್ತಗೊಳಿಸಿಕೊಂಡು ಇಡೀ ವಿಶ್ವಕ್ಕೇ ಶಾಂತಿ ಧೂತರಾಗುವ ಬಹುದೊಡ್ಡ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕೆಂದು ರಂಜಾನ್ ನ ಈ ಶುಭ ಸಂದರ್ಭದಲ್ಲಿ ಆಶಿಸುತ್ತಾ…..
ಏಕೆಂದರೆ ವಿಶ್ವದಲ್ಲಿ ಅನೇಕ ಧರ್ಮಗಳ ಹುಟ್ಟಿನ ಮತ್ತು ಸಮನ್ವಯದ ಹಾಗೂ ಭಿನ್ನತೆಯಲ್ಲೂ ಐಕ್ಯತೆಯನ್ನು ಹೊಂದಿದ ಏಕೈಕ ರಾಷ್ಟ್ರ ನಮ್ಮ ತಾಯ್ನಾಡು ಭಾರತ.
ನೀವೂ ಭಾರತದ ಪ್ರಜೆಗಳು. ನಿಮ್ಮಲ್ಲಿಯೂ ನಮ್ಮಂತೆ ಮೌಡ್ಯವಿದೆ, ಹಿಂಸೆಯಿದೆ, ಅತಿರೇಕವಿದೆ, ಧಾರ್ಮಿಕ ಅಂಧಶ್ರದ್ದೆ ಇದೆ. ಬಹಳಷ್ಟು ಮೂಲಭೂತವಾದಿಗಳು ಧರ್ಮ ಮತ್ತು ದೇಶದ ಆಯ್ಕೆಯಲ್ಲಿ ಧರ್ಮವನ್ನು ಒಪ್ಪಿಕೊಳ್ಳುವ ಮೂರ್ಖತನವಿದೆ. ಹಿಂದೂ ಮೂಲಭೂತವಾದಿಗಳ ಪ್ರಚೋದನೆಗೆ ಸುಲಭವಾಗಿ ಬಲಿಯಾಗುವ ಹುಂಬುತನವಿದೆ.
ಅದಕ್ಕಾಗಿಯೇ ಈ ನೆಲದ ನಮ್ಮದೇ ಸಂಸ್ಕೃತಿಯ ಕೇವಲ ಕೆಲವು ಭಿನ್ನ ಆಚರಣೆಗಳ ನಮ್ಮದೇ ಜನರ ಆತ್ಮಾವಲೋಕನಕ್ಕಾಗಿ ಈ ಮನವಿ. ಈ ದೇಶ, ನಮ್ಮದು ಮತ್ತು ನಿಮ್ಮದು. ಯಾವುದೇ ಅಭದ್ರತೆ ಬೇಡ. ಎರಡು ಧರ್ಮಗಳು ವಿರುದ್ಧವಾಗುವ ಕ್ರಿಯೆಗಿಂತ ಅವುಗಳ ಐಕ್ಯವಾಗುವ, ಸಮನ್ವಯವಾಗುವ ದಿನಗಳು ಮುಂದೆ ಬರಲಿ ಎಂಬ ಆಶಯದೊಂದಿಗೆ……
ಬನ್ನಿ ನನ್ನ ಸಹಧರ್ಮೀಯ ಭಾಂಧವರೆ, ಒಗ್ಗಟ್ಟಾಗೋಣ ನಾವು ನೀವು,
ಬನ್ನಿ ನನ್ನ ಮುಸ್ಲಿಂ ಸಹೋದರ ಸಹೋದರಿಯರೆ, ಬದಲಾಗೋಣ, ಅಭಿವೃದ್ಧಿಯತ್ತ ಮುನ್ನಡೆಯೋಣ,
ಬನ್ನಿ ನನ್ನ ಇಸ್ಲಾಂ ಗೆಳೆಯ ಗೆಳತಿಯರೆ, ಕಟ್ಟೋಣ ಬಲಿಷ್ಠ ಭಾರತವನ್ನು,
ನೀವೂ ನಮ್ಮಂತೆ, ನಾವೂ ನಿಮ್ಮಂತೆ, ಅದೇ ರಕ್ತ ಮೂಳೆ ಮಾಂಸ ಚರ್ಮಗಳ ಹೊದಿಕೆ,
ಅದೇ ಭಯ ಭಕ್ತಿ,ನೋವು ನಲಿವು, ಸುಖ ದು:ಖ,ಪ್ರೀತಿ ದ್ವೇಷ, ಅದೇ ಗಾಳಿ ಬೆಳಕು, ಅನ್ನ ನೀರು, ನೆಲ,
ಕೊರೊನಾ ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ಸದ್ಯ ರಾಜ್ಯದ ಎಲ್ಲೆಡೆ ವಾಹನ ಸಂಚಾರ ಬಂದ್ ಆಗಿದೆ. ಆದರೆ, ಸಂಬಂಧಿಕರ ಮದುವೆ ಇದ್ದ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕನೊಬ್ಬ ನೂರಾರು ಕಿ.ಮೀ ನಡೆದುಕೊಂಡೇ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ. ಈ ವ್ಯಕ್ತಿ ಕಂಡ ಪೊಲೀಸರು, ಅನ್ನ, ನೀರು ನೀಡಿ ಮಾನವೀಯತೆ ಮೆರೆದಿರುವ ಘಟನೆ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದಿದೆ.
ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ನಿವಾಸಿಯಾಗಿದ್ದ ಮರಿಯಪ್ಪ ಎಂಬ ವ್ಯಕ್ತಿ, ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಘೋಷಣೆಯಾಯಿತು. ಹೀಗಾಗಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಯಿತು. ಆದರೆ, ಲಾಕ್ ಡೌನ್ ಸಮಯದಲ್ಲಿಯೇ ಬಾಗಲಕೋಟೆ ಜಿಲ್ಲೆಯ ಇಳಕಲ್ ನಲ್ಲಿ ಸಂಬಂಧಿಕರ ಮದುವೆ ನಿಶ್ಚಯವಾಗಿತ್ತು. ಹೀಗಾಗಿ ಮದುವೆಗೆ ಹೋಗಲೇಬೇಕು ಎಂದು ಮಂಗಳೂರಿನಿಂದ ಬಾಗಲಕೋಟೆ ಜಿಲ್ಲೆಯವರಿಗೆ ನಡೆದುಕೊಂಡೇ ಮರಿಯಪ್ಪ ತೆರಳುತ್ತಿದ್ದಾನೆ.
ಮಾರ್ಗ ಮಧ್ಯೆ ಈ ವ್ಯಕ್ತಿಯನ್ನು ಕಂಡ ಜಿಲ್ಲೆಯ ರೋಣ ಪೊಲೀಸರು, ವಿಚಾರಣೆ ಮಾಡಿದಾಗ ಮರಿಯಪ್ಪ ಹಸಿವಿನಿಂದ ಬಳಲುತ್ತಿರುವುದು ಕಂಡು ಬಂದಿದೆ. ಹೀಗಾಗಿ ಕೂಡಲೇ ಆತನಿಗೆ ಅನ್ನ, ನೀರು ನೀಡಿ ಕಳುಹಿಸಿ ಕೊಟ್ಟಿದ್ದಾರೆ. ಪೊಲೀಸರ ಕಾರ್ಯಕ್ಕೆ ಮರಿಯಪ್ಪ ಕೃತಜ್ಞತೆ ಸಲ್ಲಿಸಿ ನಡೆದುಕೊಂಡೆ ಇಲಕಲ್ ಕಡೆಗೆ ಪ್ರಯಾಣ ಮುಂದುವರೆಸಿದ್ದಾನೆ.
15 ದಿನಗಳ ಹಿಂದೆಯಷ್ಟೇ ರೋಣ ಪೊಲೀಸ್ ಠಾಣೆಯ ಪಿಎಸ್ ಐ ವಿನೋದ್ ಪೂಜಾರಿ ಹಾಗೂ ಅವರ ಜೀಪ್ ಚಾಲಕ ಸೇರಿ ಗ್ರಾಮ ಲೆಕ್ಕಾಧಿಕಾರಿಗಳನ್ನು ಥಳಿಸಿರುವ ಸುದ್ದಿ ವೈರಲ್ ಆಗಿತ್ತು. ಈ ಕುರಿತು ರಾಜ್ಯದಾದ್ಯಂತ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಅವರನ್ನು ಅಮಾನತುಗೊಳಿಸಬೇಕೆಂದು ಒತ್ತಡ ಕೂಡ ಕೇಳಿ ಬಂದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಗದಗ ಜಿಲ್ಲಾ ವರಿಷ್ಠಾಧಿಕಾರಿ ಅವರು ಪಿಎಸ್ ಐಗೆ ಮೆಮೋ ನೀಡಿದ್ದರು. ಇದರ ಮದ್ಯೆ ಸದ್ಯ ಇದೇ ಪಿಎಸ್ ಐ ಮಾನವೀಯತೆ ಮೆರೆದಿದ್ದಾರೆ.
ಇತ್ತೀಚೆಗಷ್ಟೇ ಕೊರೊನಾ ಸೋಂಕು ಹೆಚ್ಚಾಗಿದ್ದ ಕಾರಣ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿತ್ತು. ಆದರೆ, ಇಂದು ಸೀಲ್ ಡೌನ್ ತೆರವುಗೊಳಿಸಲಾಗಿದೆ. ಇದನ್ನು ತೆರುವುಗೊಳಿಸುತ್ತಿದ್ದಂತೆ, ಇಲ್ಲಿಯ ಜನ ಕೊರೊನಾವನ್ನೇ ಮರೆತಂತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮಾಸ್ಕ್ ಧರಿಸದೆ ಓಡಾಡುತ್ತಿದ್ದಾರೆ. ಅಲ್ಲದೇ, ಅಂಗಡಿ- ಮುಂಗಟ್ಟು ತೆರೆದು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ.
ಇದರಿಂದಾಗಿ ಮತ್ತೆ ಕೊಪ್ಪದಲ್ಲಿ ಕೊರೊನಾ ಸೋಂಕು ಹರಡುವ ಆತಂಕ ಮನೆ ಮಾಡಿದೆ. ಕೊಪ್ಪದಲ್ಲಿಯೇ ಪೊಲೀಸ್ ಠಾಣೆ ಇದ್ದರೂ ಪೊಲೀಸರು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಪರಿಸ್ಥಿತಿ ಎದುರಿಸಿದರೂ ಜನ ಮಾತ್ರ ಕೊರೊನಾ ಮರೆತು ಮೈಮರೆತು ಓಡಾಡುತ್ತಿರುವುದು ಹಲವು ಆತಂಕಕ್ಕೆ ಕಾರಣವಾಗುತ್ತಿದೆ.
ಇಲ್ಲಿಯ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಯಲ್ಲಪ್ಪ ಲಮಾಣಿ(70) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ.
ಈ ವ್ಯಕ್ತಿ ಜಿಲ್ಲೆಯ ರಾಣೆ ಬೆನ್ನೂರು ತಾಲೂಕಿನ ಗಂಗಾಜಲ ತಾಂಡದ ನಿವಾಸಿ. ಕೊರೊನಾ ಹಿನ್ನೆಲೆಯಲ್ಲಿ ಮೃತ ವ್ಯಕ್ತಿ ಮೇ. 3ರಂದು ರಾಣೆಬೆನ್ನೂರಿನ ಅಮೃತಂ ಆಸ್ಪತ್ರೆಗೆ ದಾಖಲಾಗಿದ್ದರು. ಆ ನಂತರ ಅವರನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯಲ್ಲಪ್ಪ ಲಮಾಣಿ ಇಂದು ಬೆಳಗಿನ ಜಾವ ಕೊಠಡಿಯ ಬಾಗಿಲ ಬಳಿ ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಹಾವೇರಿ ಶಹರ ಸಿಪಿಐ ಪ್ರಹ್ಲಾದ್ ಚನ್ನಗಿರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಗರದಲ್ಲಿ ಗುರುವಾರ ಸಂಜೆ ಪಿಂಜಾರ್ ಸಮಾಜದ ಅಧ್ಯಕ್ಷ ಬಶೀರ್ ಅಹಮ್ಮದ್ ರಂಜಾನ್ ಕಿಟ್ ವಿತರಣೆ ಮಾಡಿದರು.
ಉಮರ್ ಫಾರೂಕ್ ಅಧ್ಯಕ್ಷರು ಹೋಮ್ ವೆಲ್ ಫೌಂಡೇಶನ್ ತುಮಕೂರ್ ಇವರು ಕೊಡಮಾಡಿದ ಕಿಟ್‌ನ್ನು ಆರ್ಥಿಕವಾಗಿ ಹಿಂದುಳಿದ ಪಿಂಜಾರ್ ಸಮುದಾಯದ ಕುಟುಂಬಕ್ಕೆ ವಿತರಿಸಿದರು.
ಪಿಂಜಾರ್ ಸಮುದಾಯದ ಅಧ್ಯಕ್ಷ ಬಶೀರ್ ಅಹಮ್ಮದ್ ಮಾತನಾಡಿ, ಪವಿತ್ರ ರಂಜಾನ್ ಹಬ್ಬವನ್ನು ಕೊರೋನಾ ಸಮಯದಲ್ಲಿಯೂ ಎಲ್ಲರು ಸಮಾನ ಭಾವದಿಂದ ಆಚರಿಸಬೇಕೆಂಬ ಉದ್ದೇಶದಿಂದ ಕಿಟ್ ವಿತರಿಸಲಾಯಿತು ಎಂದರು.
ಕಿಟ್‌ನಲ್ಲಿ ಅಕ್ಕಿ, ಎಣ್ಣೆ ಮತ್ತಿತರ ದಿನನಿತ್ಯ ಉಪಯೋಗಿಸಬಹುದಾದ ವಸ್ತುವಿದೆ. ಇದನ್ನು ದಾನವಾಗಿ ನೀಡುವ ಮೂಲಕ ಅಧ್ಯಕ್ಷರು ಹೋಮ್ ವೆಲ್ ಫೌಂಡೇಶನ್ ತುಮಕೂರ ಇವರು ಮಾನವೀಯತೆ ಮೆರೆದಿದ್ದಾರೆ ಎಂದು ಪಿಂಜಾರ್ ಸಮುದಾಯದ ಅಧ್ಯಕ್ಷ ಬಶೀರ್ ಅಹಮ್ಮದ್ ಹೇಳಿದರು.
ಈ ಸಮಯದಲ್ಲಿ ಅಹಮ್ಮದ್ ಭಾಷ್, ಮಲ್ಲಿಕ್ ಸಾಬ್, ಶಬ್ಬೀರ್ ಪಾಷಾ ಮತ್ತಿತರರು ಉಪಸ್ಥಿತರಿದ್ದರು.