Home Blog Page 3118

ಕುಮಾರಸ್ವಾಮಿ ಸಿಎಂ ಆದ ಮೇಲೆ ತಾಜ್ ವೆಸ್ಟೆಂಡ್ ಗೆ ಹೋಗಿಲ್ಲ, ಮುಂಚೆಯೇ ಅಲ್ಲಿ ರೂಮ್ ಮಾಡಿಕೊಂಡಿದ್ದರು; ಸಾರಾಗೆ ಸಿದ್ದರಾಮಯ್ಯ ಮರುತ್ತರ

ವಿಜಯಸಾಕ್ಷಿ ಸುದ್ದಿ, ಮೈಸೂರು

ಸಿದ್ದರಾಮಯ್ಯ ಒಳ ಒಪ್ಪಂದಗಳ ಜನಕ ಎಂಬ ಮಾಜಿ‌‌ ಸಿಎಂ ಕುಮಾರಸ್ವಾಮಿ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಲು ವಿಪಕ್ಷ ನಾಯಕ ಸಿದ್ದರಾಮಯ್ಯ ನಿರಾಕರಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತಿರಿಸಿರುವ ಅವರು, ಅವನು ಹೇಳಿದ್ದಕ್ಕೆಲ್ಲಾ ನಾನು ಪ್ರತಿಕ್ರಿಯೆ ಕೊಡಲ್ಲ. ಚಾಮುಂಡೇಶ್ವರಿಯಲ್ಲಿ ಬಿಜೆಪಿ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದು ನಿಜ. ನಾನು ಅದನ್ನೇ ಹೇಳಿದ್ದೇನೆ.
ಬಾದಾಮಿಯಲ್ಲಿ ಬಿಜೆಪಿ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿರಲಿಲ್ಲ. ಆಯ್ಕೆ ಮಾಡಿಕೊಂಡ ಕೆಲವೇ ಕ್ಷೇತ್ರಗಳಲ್ಲಿ ಒಪ್ಪಂದ ಮಾಡಿಕೊಂಡಿದ್ದವು ಎಂದು ಆರೋಪಿಸಿದರು.

ಗೋಪಾಲ್ ಗೆ ಟಿಕೆಟ್ ಕೊಟ್ಟು ನಿಲ್ಲಿಸಿದ್ದು ಯಾರು? ಯಾರು ಒಳ ಒಪ್ಪಂದ ಮಾಡಿಕೊಂಡಿದ್ದರು ಎಂದು ಎಲ್ಲರಿಗೂ ಗೊತ್ತಿದೆ.
ಅವರು ಹೇಳಿದ್ದಕ್ಕೆಲ್ಲಾ ನಾನು ಉತ್ತರ ಕೊಡಲ್ಲ ಎಂದರು.

ತಾಜ್ ವೆಸ್ಟೆಂಡ್ ನಲ್ಲಿ ಇರಲು ಸಿದ್ದರಾಮಯ್ಯ ಕಾರಣವೆಂಬ ಸಾರಾ ಮಹೇಶ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ,
ಕುಮಾರಸ್ವಾಮಿ ಸಿಎಂ ಆದ ಮೇಲೆ ತಾಜ್ ವೆಸ್ಟೆಂಡ್ ಗೆ ಹೋಗಿದ್ದಲ್ಲ. ಅದಕ್ಕಿಂತ ಮುಂಚೆಯೇ ಅಲ್ಲಿ ರೂಮ್ ಮಾಡಿಕೊಂಡಿದ್ದರು ಎಂದು ಮರುತ್ತರ ನೀಡಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಗೆ ಪಕ್ಷದ ಮುಖಂಡರು ಕಾರಣವೆಂದು ಹೇಳಿದ್ದೇನೆ. ಇದು ಚಾಮುಂಡೇಶ್ವರಿ ಕ್ಷೇತ್ರದ ವಿಚಾರ. ಅಲ್ಲಿಯವರ ಬಗ್ಗೆ ನಾನು ಹೇಳಿರುವುದು. ಪಕ್ಷದವರೇ ನನ್ನನ್ನು ಸೋಲಿಸಿದರು ಎಂದು ಮಾಜಿ‌ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಜನವರಿ 1ರಿಂದ ಶಾಲಾ ಕಾಲೇಜು ಆರಂಭ; ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೋನಾದಿಂದಾಗಿ ಕಳೆದ ಒಂಬತ್ತು ತಿಂಗಳಿನಿಂದ ಬಾಗಿಲು ಮುಚ್ಚಿದ್ದ ಶಾಲಾ ಕಾಲೇಜು ತೆರೆಯಲು ಕೊವಿಡ್ ತಾಂತ್ರಿಕ ಸಲಹಾ ಸಮಿತಿ ಹಸಿರು ನಿಶಾನೆ ತೋರಿಸಿದೆ.

ಬೋರ್ಡ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜನವರಿ 1 ರಿಂದ 10 ಮತ್ತು 12ನೇ ತರಗತಿಗಳು ಪುನಾರಂಭವಾಗಲಿವೆ. ಹೊಸ ವರ್ಷದಂದು ಶಾಲಾ-ಕಾಲೇಜುಗಳು ಆರಂಭವಾಗಲಿದ್ದು, ವಾರಕ್ಕೆ ಮೂರು ದಿನ ಮಾತ್ರ ತರಗತಿಗಳು ನಡೆಯಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶ್‌ಕುಮಾರ್ ತಿಳಿಸಿದ್ದಾರೆ.

ಶನಿವಾರ ಬೆಂಗಳೂರಿನ ಸಿಎಂ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಕೊವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ರಾಜ್ಯದಲ್ಲಿ ಜನವರಿ 1 ರಿಂದ 10 ಮತ್ತು 12ನೇ ತರಗತಿಗಳ ಜೊತೆಗೆ 6 ರಿಂದ 9ನೇ ತರಗತಿವರೆಗಿನ ವಿದ್ಯಾರ್ಥಿಗಳಿಗಾಗಿ ವಿದ್ಯಾಗಮ ತರಗತಿಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಈ ತರಗತಿಗಳ ಪಾಸ್ ಫೇಲ್ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ರಾಜ್ಯದಲ್ಲಿನ ಕೊವಿಡ್ ಪರಿಸ್ಥಿತಿ ನೋಡಿಕೊಂಡು ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ಅದರಂತೆ, ತರಗತಿ ನಡೆಯಬೇಕಾಗಿರುವ ವೇಳಾಪಟ್ಟಿ ಸಿದ್ದಪಡಿಸಲಾಗಿದೆ ಎಂದು ಅವರು ತಿಳಿಸಿದರು.

ಕಳೆದ ವಾರ ವಿದ್ಯಾಗಮ ಬಗ್ಗೆ ರಾಜ್ಯ ಹೈಕೋರ್ಟ್ ಮಾಹಿತಿ ನೀಡುವಂತೆ ಆದೇಶಿಸಿತ್ತು. ಶಿಕ್ಷಣ ಇಲಾಖೆ ಸಂಪೂರ್ಣ ಮಾಹಿತಿ ನೀಡಿತ್ತು. ವಿದ್ಯಾಗಮ ತರಗತಿಗಳನ್ನು ಪುನಾರಂಭಿಸುವಂತೆ ಹೈಕೋರ್ಟ್ ಅಪೇಕ್ಷಿಸಿತ್ತು. ಹಾಗಾಗಿ ಜನವರಿ 1 ರಿಂದ ವಿದ್ಯಾಗಮ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಈ ಬಾರಿ ವಿದ್ಯಾಗಮ ತರಗತಿಗಳು ಶಾಲಾ ಆವರಣದಲ್ಲೇ ನಡೆಯಲಿದ್ದು, ಖಾಸಗಿ ಶಾಲೆಯವರು 6 ರಿಂದ 9 ನೇ ವಿದ್ಯಾರ್ಥಿಗಳಿಗೆ ವಿದ್ಯಾಗಮ ತರಗತಿಗಳನ್ನು ಪ್ರಾರಂಭಿಸಬೇಕು ಎಂದು ಸಚಿವರು ತಿಳಿಸಿದರು.

ವಿದ್ಯಾಗಮ ತರಗತಿಗೆ ಆಗಮಿಸುವ ಮಕ್ಕಳು ಕಡ್ಡಾಯವಾಗಿ ಪೋಷಕರಿಂದ ಒಪ್ಪಿಗೆ ಪತ್ರ ತರಬೇಕು. ಪೋಷಕರು ತಮ್ಮ ಮಕ್ಕಳನ್ನು ತರಗತಿಗೆ ಕಳುಹಿಸುವಂತೆ ಒತ್ತಾಯವಿಲ್ಲ. ಮಕ್ಕಳ ಹಾಜರಾತಿಯೂ ಕಡ್ಡಾಯವಿಲ್ಲ. ಮಕ್ಕಳಿಗೆ ಆನ್‌ಲೈನ್‌ನಲ್ಲೂ ಕಲಿಯುವುದಕ್ಕೆ ಅವಕಾಶವಿದ್ದು, ಆಸಕ್ತಿ ಇದ್ದವರೂ ಮಾತ್ರ ವಿದ್ಯಾಗಮ ತರಗತಿಗಳಿಗೆ ಬರಬಹುದು ಎಂದು ಶಿಕ್ಷಣ ಸಚಿವ ಸುರೇಶ್‌ಕುಮಾರ್ ತಿಳಿಸಿದರು.

ಸಿದ್ಧರಾಮಯ್ಯ ಅವರದು ಕಪಟ ನೀತಿ: ಹೆಚ್ ಡಿಕೆ ಟೀಕೆ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡುವ ಮೂಲಕ ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಶುಕ್ರವಾರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದಿದ್ದ ಗ್ರಾ.ಪಂ. ಜನಾಧಿಕಾರ ಸಭೆಯಲ್ಲಿ ಚಾಮುಂಡೇಶ್ವರಿ ಸೋಲಿನ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದ ಸಿದ್ಧರಾಮಯ್ಯ ರಾಜ್ಯ ರಾಜಕಾರಣದಲ್ಲಿ ಬೀರುಗಾಳಿ ಎಬ್ಬಿಸುವ ಮೂಲಕ ಹೊಸ ಚರ್ಚೆಗೆ ಮುನ್ನುಡಿ ಬರೆದಿದ್ದರು. ಅಲ್ಲದೇ, ಹಿಂದಿನ ಮೈತ್ರಿ ಸರ್ಕಾರದ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರ‌ನ್ನೇ ಅನುಮಾನದಿಂದ ನೋಡುವಂತೆ ಮಾಡಿತ್ತು.

ಈ ಬಗ್ಗೆ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಕುಮಾರಸ್ವಾಮಿ ಅವರು,
2018 ರಲ್ಲಿ ಮೈತ್ರಿಯಾಗಿದ್ದು, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿದ್ದು, ಹೈಕಮಾಂಡ್ ನ ನಿರ್ಧಾರವಾಗಿತ್ತು ಎಂದು ಹಲವು ಬಾರಿ ಸಿದ್ಧ ರಾಮಯ್ಯ ಹೇಳಿದ್ದಾರೆ. ಆದರೆ, ಚಾಮುಂಡೇಶ್ವರಿ ಭಾಷಣದ ವೇಳೆ, ನಾನು ಒಪ್ಪದೇ ಹೋಗಿದಿದ್ದರೆ ಕುಮಾರಸ್ವಾಮಿ ಅವರನ್ನು ಸಿಎಂ ಅಗಲು ಬಿಡುತ್ತಿರಲಿಲ್ಲ ಎಂದಿದ್ದಾರೆ. ಇಲ್ಲಿ ದ್ವಂದ್ವ ಇಲ್ಲವೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಮೈತ್ರಿ ಸರ್ಕಾರ ರಚನೆಯಾಗಿ ಕೆಲವೇ ತಿಂಗಳಲ್ಲಿ ಸಿದ್ಧವನದಲ್ಲಿ ಸರ್ಕಾರ ಬೀಳಿಸುವ ಸಭೆ ನಡೆಸಿದವರು ಸಿದ್ಧರಾಮಯ್ಯ ಅಲ್ಲವೇ? ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರಿದ ಶಾಸಕರಲ್ಲಿ ಬಹುತೇಕರು ಅವರ ಬೆಂಬಲಿಗರಾಗಿರಲಿಲ್ಲವೇ? ಆದರೂ, ಸರ್ಕಾರ ಬೀಳಿಸಿದ್ದರ ಅಪವಾದದಿಂದ ಪಾರಾಗಲು ಸಿದ್ಧರಾಮಯ್ಯ ಯತ್ನಸುತ್ತಿದ್ದಾರೆ. ಇದು ಅವರ ಕಪಟ ನೀತಿ ಎಂದು ಹೆಚ್ ಡಿಕೆ ಕಟುವಾಗಿ ಟೀಕಿಸಿದ್ದಾರೆ.

ಸಿಎಂ ಸ್ಥಾನದಿಂದ ಇಳಿದ ನಂತರ ಸಿದ್ಧರಾಮಯ್ಯ ಸರ್ಕಾರಿ ನಿವಾಸ ತೊರಯಲಿಲ್ಲ. ಆ ವಿಚಾರದಲ್ಲಿ ಕಿಂಚಿತ್ತೂ ನಾಚಿಕೆ ಪ್ರದರ್ಶಿಸಲಿಲ್ಲ. ತಾವು ಸಿಎಂ ಆಗಿದ್ದಾಗ 6 ಗಂಟೆಗೆ ಹೇಳದೇ ಕೇಳದೇ ಕಚೇರಿ ತೊರೆದು ಅಜ್ಞಾತರಾಗುತ್ತಿದ್ದ ಸಿದ್ಧರಾಮಯ್ಯ, ರಾತ್ರಿ 12 ಗಂಟೆಯವರೆಗೆ ದುಡಿಯುತ್ತಿದ್ದ ನನ್ನ ಬಗ್ಗೆ ಮಾತನಾಡುವ ನೈತಿಕತೆ ಉಳ್ಳವರೇ?

37 ಸ್ಥಾನ ಗೆದ್ದಿದ್ದ ಜೆಡಿಎಸ್ ಗೆ ನಾವು ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಟ್ಟೆವು ಎಂದು ಸಿದ್ದರಾಮಯ್ಯ ಪದೇ ಪದೇ ಹೇಳುತ್ತಾರೆ. ಅದು 37 ಸ್ಥಾನವಾಗಲಿ ಅಥವಾ 100 ಸ್ಥಾನಗಳಾದರೂ ಆಗಿರಲಿ. ಅದು ಜನಾದೇಶ. ಆ ವಿಚಾರದಲ್ಲಿ ಮೂದಲಿಕೆ ಮಾಡುವ ಸಿದ್ದರಾಮಯ್ಯ ಅವರಿಗೆ ಜನರ ಆಶಯ, ಅಭಿಪ್ರಾಯಗಳನ್ನು ಒಪ್ಪುವಂಥ ಮನಸ್ಥಿತಿಯೇ ಇಲ್ಲ ಎಂದು ಸಿದ್ದರಾಮಯ್ಯ ಅವರನ್ನು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಕುಮಾರಸ್ವಾಮಿ ಸಿಎಂ ಆಗಿ ಕಚೇರಿಗೆ ಬರುತ್ತಿರಲಿಲ್ಲವಂತೆ, ತಾಜ್ ವೆಸ್ಟೆಂಡ್ ‌ನಲ್ಲಿ ಇರುತ್ತಿದ್ದರಂತೆ. ಅಹೋರಾತ್ರಿ‌ ಜನತಾ ದರ್ಶನ ತಾಜ್ ವೆಸ್ಟೆಂಡ್ ನಲ್ಲಿ ನಡೆಯುತ್ತಿತ್ತೋ? ಸಿಎಂ ಕಚೇರಿಯಲ್ಲಿ ನಡೆಯುತ್ತಿತ್ತೋ ಸಿದ್ದರಾಮಯ್ಯನವರೇ? ಬಾದಾಮಿಯಲ್ಲಿ ಈಗ ನಡೆಯುತ್ತಿರುವ 1200 ಕೋಟಿ ಕಾಮಗಾರಿಗಳು ತಾಜ್ ವೆಸ್ಟೆಂಡ್ ನದ್ದ?

ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಬೆಳಗಾವಿ ಲೋಕಸಭೆ ಬೈಎಲೆಕ್ಷನ್; ಬಿಜೆಪಿ ಟಿಕೆಟ್ ನೀಡುವಂತೆ ಪ್ರಮೋದ್ ಮುತಾಲಿಕ್ ಮನವಿ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಸುರೇಶ್ ಅಂಗಡಿಯವರ ನಿಧನದ ಹಿನ್ನೆಲೆಯಲ್ಲಿ ತೆರುವಾಗಿರುವ
ಬೆಳಗಾವಿ ಲೋಕಸಭೆ ಸ್ಥಾನಕ್ಕೆ
ಬಿಜೆಪಿಯಿಂದ ಕಣಕ್ಕಿಳಿಯಲು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ ಉತ್ಸುಕತೆ ತೋರಿದ್ದಾರೆ.

ಈಗಾಗಲೇ ಬಿಜೆಪಿ ಟಿಕೆಟ್ ನೀಡುವಂತೆ ಮನವಿ ಮಾಡಿಕೊಂಡಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ , ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ಅನೇಕ ಬಿಜೆಪಿ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಬೆಳಗಾವಿ ಲೋಕಸಭೆ ಬಿಜೆಪಿ ಟಿಕೆಟ್ ಪಡೆಯಲು ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ಪ್ರಭಾಕರ್ ಕೋರೆ ಕೂಡಾ ಬಿಜೆಪಿಯಿಂದ ಸ್ಪರ್ಧಿಸಲು ಬಯಸಿದ್ದಾರೆ ಎನ್ನಲಾಗುತ್ತಿದೆ.

ಬೆಳಗಾವಿ ಲೋಕಸಭೆ ಉಪ ಚುನಾವಣೆ ಸಮೀಪಿಸುತ್ತಿದ್ದಂತೆ ಸ್ಪರ್ಧಿಸುವ ಆಕಾಂಕ್ಷಿಗಳು ಟಿಕೆಟ್ ಗಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

ಸಂಚು ಮಾಡಿ ಅಂಬೇಡ್ಕರ್ ಅವರನ್ನೇ ಸೋಲಿಸಲಿಲ್ಲವೇ?; ಕಾಂಗ್ರೆಸ್ ವಿರುದ್ಧ ಸಾರಾ ಮಹೇಶ್ ವಾಗ್ದಾಳಿ

ವಿಜಯಸಾಕ್ಷಿ ಸುದ್ದಿ, ಮೈಸೂರು

ರಾಜಕೀಯವೇ ಒಂದು ಸಂಚು.
ಸಂಚನ್ನು ಒಬ್ಬರೇ ಮಾಡಲ್ಲ.
ಸಂವಿಧಾನ ರಚಿಸಿದ ಅಂಬೇಡ್ಕರ್‌ರನ್ನೇ ಸೋಲಿಸಲಿಲ್ಲವೇ ? ಎಂದು ಕಾಂಗ್ರೆಸ್ ವಿರುದ್ಧ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಚಾಮುಂಡೇಶ್ವರಿ ಸೋಲಿಗೆ ಬಿಜೆಪಿ- ಜೆಡಿಎಸ್ ಸಂಚು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,
ಪ್ರಧಾನಿಯಾಗಿದ್ದ ದೇವೇಗೌಡರನ್ನು ತುಮಕೂರಿನಲ್ಲಿ ಸಂಚು ಮಾಡಿ ಸೋಲಿಸಲಿಲ್ಲವೇ?
ಮಂಡ್ಯದಲ್ಲಿ ನಿಖಿಲ್ ವಿರುದ್ಧ ಸಂಚು ಆಗಲಿಲ್ಲವೇ? ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

ರಾಜಕಾರಣದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಅಂತಹ ಮನಸ್ಥಿತಿ ಸಿದ್ದರಾಮಯ್ಯಗೆ ಇದೆ. ಆದರೆ, ಅದನ್ನು ಅವರು ಅರ್ಥ ಮಾಡಿಕೊಂಡು ಸ್ವೀಕರಿಸಲಿ ಎಂದು ಸಾ.ರಾ.ಮಹೇಶ್ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಿವಿಮಾತು ಹೇಳಿದರು.

ಆಪ್ತ ಗೆಳೆಯನಿಗೆ ಮಾಜಿ ಸಿದ್ದರಾಮಯ್ಯ ಟಾಂಗ್; ವೇದಿಕೆ ಹಂಚಿಕೊಳ್ಳದ ಎಚ್.ಸಿ.ಮಹದೇವಪ್ಪ

ವಿಜಯಸಾಕ್ಷಿ ಸುದ್ದಿ, ಮೈಸೂರು

ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಬಳಿಕ ಅಂತರ ಕಾಯ್ದುಕೊಂಡಿರುವ ಬಹುಕಾಲದ ಆಪ್ತ ಗೆಳೆಯ ಮಾಜಿ‌ ಸಚಿವ ಎಚ್.ಸಿ.ಮಹದೇವಪ್ಪಗೆ ಮಾಜಿ ಸಿಎಂ ಸಿದ್ದರಾಮಯ್ಯ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಶುಕ್ರವಾರ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದಿದ್ದ ಗ್ರಾ.ಪಂ. ಜನಾಧಿಕಾರ ಸಭೆಗೆ ಸಿದ್ದರಾಮಯ್ಯ ಜೊತೆ ಮಹದೇವಪ್ಪ ವೇದಿಕೆ ಹಂಚಿಕೊಂಡಿರಲಿಲ್ಲ. ಅಲ್ಲದೇ, ಇತ್ತೀಚಿನ ದಿನಗಳಲ್ಲಿ ಮಹದೇವಪ್ಪ ಕಾಂಗ್ರೆಸ್ ಪಕ್ಷದಲ್ಲಿ ಅಷ್ಟೊಂದು ಸಕ್ರಿಯವಾಗಿ ಕಾಣಿಸುತ್ತಿಲ್ಲ.

ಚಾಮುಂಡೇಶ್ವರಿಯಲ್ಲಿ ನಾನು ಸೋಲಲು ಜೆಡಿಎಸ್ ಬಿಜೆಪಿ ಜೊತೆ ನಮ್ಮ ಪಕ್ಷದವರೂ ಕಾರಣ. ಪಕ್ಷ ವಿರೋಧಿಗಳು ಆತ್ಮಾವಲೋಕನ ಮಾಡಿಕೊಂಡು ಅವರಾಗಿ ಅವರೇ ಪಕ್ಷ ಬಿಟ್ಟು ಹೋಗಬೇಕು. ಯಾರು ಪಕ್ಷಕ್ಕೆ ವಿರುದ್ಧ ಕೆಲಸ ಮಾಡುತ್ತಾರೋ ಅವರಂತ ಖಳನಾಯಕರು ಯಾರು ಇಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದ್ದರು.

ಪಕ್ಷ ತಾಯಿ ಸಮಾನ. ಅಂತಹ ತಾಯಿಗೆ ದ್ರೋಹ ಮಾಡಬಾರದು. ಅಂತಹವರು ಪಕ್ಷ ಬಿಟ್ಟು ಹೋಗಬೇಕು.ಯಾರು ಪಕ್ಷಗಳಿಗೆ ಅನಿವಾರ್ಯವಲ್ಲ, ವ್ಯಕ್ತಿಗಳಿಗೆ ಪಕ್ಷ ಅನಿವಾರ್ಯ ಎಂದು ಮಾಜಿ ಸಚಿವ ಎಚ್.ಸಿ. ಮಹದೇವಪ್ಪ‌ ಅವರ ಹೆಸರು ಹೇಳದೆ ಸಿದ್ದರಾಮಯ್ಯ ಕುಟುಕಿದ್ದರು.

ಮೈತ್ರಿಯಲ್ಲಿ ಹೊಂದಾಣಿಕೆ ಇರಲಿಲ್ಲ: ಸಚಿವ ಬಿ.ಸಿ.ಪಾಟೀಲ್

ವಿಜಯಸಾಕ್ಷಿ ಸುದ್ದಿ, ಹಾವೇರಿ

‘ಮೀರ್ ಸಾಧಿಕ್‌ರು ಎಲ್ಲಿಲ್ಲ, ಎಲ್ಲ ಕಡೆಗಳಲ್ಲೂ ಇದ್ದಾರೆ. ಇವರಿಂದಲೇ ಎಲ್ಲರ ಸೋಲು. ನಿಂದಕರು ಇರಬೇಕು ಹಂದಿಯಂತೆ, ದುಷ್ಮನ್ ಕಿದರ್ ಹೈ ಅಂದರೆ ಬಗಲ್ ಮೇ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕಟುವಾಗಿ ಹೇಳಿದರು.

ಹಾವೇರಿಯಲ್ಲಿ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು,
ಸಿದ್ದರಾಮಯ್ಯನವರು ತಮ್ಮ ಅನುಭವ ಹೇಳಿಕೊಂಡಿದ್ದಾರೆ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯರ ನಡುವೆ ಪರಸ್ಪರ ಹೊಂದಾಣಿಕೆ ಇರಲಿಲ್ಲ. ಇದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಅಂದಿನ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿ ಇರಲಿಲ್ಲವೆಂಬುವುದನ್ನು ಮತ್ತೊಮ್ಮೆ ಮೆಲುಕು ಹಾಕಿದರು.

ಮೈತ್ರಿ ಸರ್ಕಾರವಿದ್ದಾಗ ಒಬ್ಬರನ್ನೊಬ್ಬರು ನೋಡಿ ಒಂದೊಂದು ಹೇಳಿಕೆ ನೀಡಿದರು. ಇದರಿಂದ ದಾರಿ ತಪ್ಪಿಸುವ ಕೆಲಸವಾಯಿತು. ಯಾರಿಗೆ ಕೆಲಸವಾಗಿಲ್ಲ ಅವರೆಲ್ಲ ತಿರುಗಿ ಬೀಳುತ್ತಾರೆ ಎಂದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಚಾಮುಂಡೇಶ್ವರಿ ಕ್ಷೇತ್ರದ ಜನಸಂಪರ್ಕ ಕಡಿಮೆ ಆಗಿತ್ತು. ಅಧಿಕಾರವಿದ್ದಾಗ ಎಲ್ಲರೂ ಹಿಂದೆ ಬಂದು ಕೆಲಸ ಮಾಡಿಸಿಕೊಂಡಿರುತ್ತಾರೆ. ಅದರಲ್ಲಿ ತೊಂಬತ್ತೊಂಬತ್ತು ಕೆಲಸವಾಗಿ ಒಂದು ಕೆಲಸವಾಗದಿದ್ದರೂ ಜನ ತಿರುಗಿ ಬೀಳುತ್ತಾರೆ. ಸಿದ್ದರಾಮಯ್ಯನವರ ಪರಿಸ್ಥಿತಿಯೂ ಹಾಗೆ ಆಗಿರಬಹುದು ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ರೈತರ ಅಭ್ಯುದಯವೇ ನಮ್ಮ ಕರ್ತವ್ಯ; ಪ್ರಧಾನಿ ಮೋದಿ

ವಿಜಯಸಾಕ್ಷಿ ಸುದ್ದಿ, ದೆಹಲಿ/ಮಧ್ಯಪ್ರದೇಶ

‘ರೈತರ ಕಲ್ಯಾಣವೇ ನಮ್ಮ ಸರ್ಕಾರದ ಆದ್ಯತೆ. ನೂತನ ಕೃಷಿ ಕಾಯ್ದೆಗಳ ಸುತ್ತಲಿನ ಸುಳ್ಳುಗಳನ್ನು ನಂಬಬೇಡಿ. ರೈತರ ಅಭ್ಯುದಯವೇ ನಮ್ಮ ಪ್ರದಾನ ಕರ್ತವ್ಯವಾಗಿದೆ. ನಾವು ಮಾಡುವ ಸುಧಾರಣೆ ರೈತರಿಗೆ ನೆರವಾದರೆ ಸಾಕು’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟರು.

ಮಧ್ಯಪ್ರದೇಶದಲ್ಲಿ ನಡೆದ ಕಿಸಾನ್ ಸಮಾವೇಶದಲ್ಲಿ ರೈತರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಅವರು, ‘ಕೃಷಿ ಕಾಯ್ದೆ ರಾತ್ರೋರಾತ್ರಿ ಜಾರಿಗೆ ಬಂದಿಲ್ಲ. ಈ ಕಾಯ್ದೆಗಳನ್ನು ತರಾತುರಿಯಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಿಲ್ಲ, ಬದಲಿಗೆ ದಶಕಗಳ ಕಾಲ ಚರ್ಚೆ ನಡೆಸಿದ್ದೇವೆ. ಎಲ್ಲಾ ಆಯಾಮಗಳಲ್ಲೂ ಚಿಂತನೆ ನಡೆಸಿ ಕ್ರಮಕೈಗೊಂಡಿದ್ದೇವೆ. ರೈತರೊಡನೆ ಎಲ್ಲಾ ವಿಷಯಗಳನ್ನು ಚರ್ಚಿಸಲು ಸಿದ್ದನಿದ್ದೇನೆ’ ಎಂದು ತಿಳಿಸಿದರು.

‘ಈ ಕೃಷಿ ಕಾಯ್ದೆಗಳಿಂದ ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಕಳೆದು ಹೋಗುತ್ತದೆ ಎಂದು ಸುಳ್ಳು ಹೇಳಲಾಗುತ್ತಿದೆ. ಕೆಲವರು ರೈತರ ಹೆಗಲ ಮೇಲೆ ಬಂದೂಕಿಟ್ಟು ಯುದ್ಧ ಮಾಡುತ್ತಿದ್ದಾರೆ. ತಮ್ಮ ಬೇಳೆ ಬೇಯಿಸಿಕೊಳ್ಳು ರೈತರನ್ನು ಬಳಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಕೆಲವು ಪಕ್ಷಗಳು ರಾಜಕೀಯ ಮಾಡುತ್ತಿವೆ. ರೈತರ ಭೂಮಿ ಕಸಿದುಕೊಳ್ಳುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ ಎಂದು ಪ್ರತಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು.

‘ಕಳೆದ ೨೨ ವರ್ಷಗಳಿಂದ ಎಲ್ಲಾ ರಾಜ್ಯ ಸರ್ಕಾರಗಳು ಈ ಕುರಿತು ಚರ್ಚಿಸಿವೆ. ರೈತ ಸಂಘಟನೆಗಳು, ಕೃಷಿ ತಜ್ಞರು, ಆರ್ಥಶಾಸ್ತ್ರಜ್ಞರು, ವಿಜ್ಞಾನಿಗಳು ಸೇರಿ ಚರ್ಚೆ ನಡೆಸಿದ್ದಾರೆ. ಈ ಕಾಯ್ದೆಗಳುಬೇಕೆಂದು ರೈತರು ಆಗ್ರಹಿಸಿದ್ದಾರೆ. ಈ ಕಾಯ್ದೆಗಳನ್ನು ವಿರೋಧಿಸುತ್ತಿರುವ ವಿರೋಧ ಪಕ್ಷಗಳ ಚುನಾವಣಾ ಪ್ರಣಾಳಿಕೆಯಲ್ಲಿಯೂ ಇದೇ ಅಂಶಗಳಿವೆ. ಆದರೆ, ಅವರು ಚುನಾವಣಾ ಪ್ರಣಾಳಿಕೆ ಈಡೇರಿಸಿಲ್ಲ. ಆ ಪಕ್ಷಗಳಿಗೆ ಇಂದು ನೋವಾಗಿದೆ. ನಾವು ತರಲಾಗದ್ದನ್ನು ಮೋದಿ ಹೇಗೆ ತರುತ್ತಾರೆ ಎಂದು ಅವರು ಕೇಳಿಕೊಳ್ಳುತ್ತಿದ್ದಾರೆ. ಮೋದಿ ಏಕೆ ಇದರ ಲಾಭ ಪಡೆಯಬೇಕೆಂಬುದು ಅವರ ಹುನ್ನಾರ. ನಾನು ಇದರ ಲಾಭ ಪಡೆಯುವುದಿಲ್ಲ. ಲಾಭವನ್ನು ನಿಮಗೆ ಮತ್ತು ನಿಮ್ಮ ಪ್ರಣಾಳಿಕೆಗಳಿಗೆ ನೀಡುತ್ತೇನೆ. ನನಗೆ ರೈತರ ಅಭ್ಯುದಯ ಮುಖ್ಯ. ಸುಳ್ಳು ಹರಡುವುದನ್ನು ನಿಲ್ಲಿಸಿ’ ಎಂದು ಕಿವಿಮಾತು ಹೇಳಿದರು.

‘ಪ್ರಪಂಚದ ರೈತರು ಅತ್ಯಾಧುನಿಕ ತಂತ್ರಜ್ಞಾನದಿಂದ ಮುಂದುವರೆಯುತ್ತಿರುವಾಗ ನಮ್ಮ ದೇಶದ ರೈತರನ್ನು ಹಿಂದುಳಿಯಲು ನಾವು ಬಿಡುವುದಿಲ್ಲ. ಅವರು ಸ್ವಾಮಿನಾಥನ್ ವರದಿ ಜಾರಿಗೊಳಿಸಲಿಲ್ಲ. ನಮ್ಮ ಸರ್ಕಾರ ಸ್ವಾಮಿನಾಥನ್ ವರದಿಯ ಶಿಫಾರಸ್ಸುಗಳನ್ನು ಜಾರಿ ಮಾಡಿದೆ. ಮಧ್ಯಪ್ರದೇಶದ ಜನರಿಗೆ ಅವರ ಬಗ್ಗೆ ತಿಳಿದಿದೆ. ಅವರು ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದರು. ಅದರ ಪ್ರಯೋಜನ ನಿಮಗೆ ಸಿಕ್ಕಿದೆಯೇ? ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸುವ ಮೂಲಕ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಎರಡು ವರ್ಷಗಳ ಬಳಿಕ ಸೋಲಿನ ಸತ್ಯ ಬಾಯ್ಬಿಟ್ಟ ಸಿದ್ದರಾಮಯ್ಯ: ಕಾಂಗ್ರೆಸ್‌ನವರೇ ನನ್ನನ್ನು ಸೋಲಿಸಿದರು!

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಮೈಸೂರು

ವಿಧಾನಸಭಾ ಸಾರ್ವತ್ರಿಕ ಚುನಾವಣೆ ಗತಿಸಿ ಎರಡು ವರ್ಷಗಳ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಕುರಿತು ಬಹಿರಂಗವಾಗಿಯೇ ಸತ್ಯ ಬಾಯ್ಬಿಟ್ಟಿದ್ದಾರೆ.

ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ಗ್ರಾಮ ಜನಾಧಿಕಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರದ ಜನ ಪ್ರೀತಿ, ವಿಶ್ವಾಸ ತೋರಿಸಿದರು. ಆದರೆ, ಮತ ಹಾಕಲಿಲ್ಲ. ಹಾಗಾಗಿ ಬಿಜೆಪಿ ಜೆಡಿಎಸ್ ಜೊತೆ ನಮ್ಮ ಪಕ್ಷದವರೂ ಸೇರಿ ನನ್ನನ್ನು ಸೋಲಿಸಿದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಪಕ್ಷಕ್ಕೆ ವಿರುದ್ಧವಾಗಿ ಕೆಲಸ ಮಾಡಿದವರು ಆತ್ಮಾವಲೋಕನ ಮಾಡಿಕೊಂಡು ಅವರಿಂದವರೇ ಪಕ್ಷ ಬಿಟ್ಟು ಹೊರ ಹೋಗಬೇಕು. ಪಕ್ಷದ್ರೋಹ ಕೆಲಸ ಮಾಡುವವರಂತಹ ಖಳನಾಯಕರು ಯಾರೂ ಇಲ್ಲ. ನಾಯಕತ್ವದಲ್ಲಿ ನಂಬಿಕೆ ಇಲ್ಲವೆಂದರೆ, ಬಿಟ್ಟು ಹೋಗಬೇಕು. ಪಕ್ಷಕ್ಕೆ ಯಾರು ಅನಿವಾರ್ಯವಲ್ಲ. ವ್ಯಕ್ತಿಗಳಿಗೆ ಪಕ್ಷ ಅನಿವಾರ್ಯವಾಗಿದೆ ಎಂದು ಅಸಮಾಧಾನ ಹೊರ ಹಾಕಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಲು ಜೆಡಿಎಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿತ್ತು. ಪಕ್ಷದಲ್ಲಿ ಕೆಲವರಿಗೆ ನನ್ನನ್ನು ಕಂಡರೆ ಹೊಟ್ಟೆಕಿಚ್ಚು. ಹಾಗಾಗಿ ನಮ್ಮ ಪಕ್ಷದವರೇ ನನ್ನನ್ನು ಸೋಲಿಸಿದರು. ನಾನು ಬಾದಾಮಿಗೆ ಹೋಗದಿದ್ದರೂ ಅಲ್ಲಿನ ಜನ ನನ್ನನ್ನು ಗೆಲ್ಲಿಸಿದರು. ನಾನು ಮತ್ತೆ ಚುನಾವಣೆಗೆ ನಿಲ್ಲುತೇನೋ ಇಲ್ವೋ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ಚಾಮುಂಡೇಶ್ವರಿ ಕ್ಷೇತ್ರದ ಸೋಲಿಗೆ ನಮ್ಮ ಪಕ್ಷದವರೇ ಕಾರಣ. ಎರಡನೇ ಬಾರಿಗೆ ಸಿಎಂ ಆಗುವುದು ಕೆಲವರಿಗೆ ಇಷ್ಟವಿರಲಿಲ್ಲ. ನಾನು ಕಳೆದ ಚುನಾವಣೆಯಲ್ಲಿ ಇಷ್ಟೊಂದು ಕೆಟ್ಟದಾಗಿ ಸೋಲುತ್ತೇನೆ ಅಂದುಕೊಂಡಿರಲಿಲ್ಲ. ನನ್ನ ಸೋಲಿಗೆ ಅನೇಕ ಕಾರಣಗಳಿವೆ.
ಅದನ್ನು ಈಗ ಹೇಳೋದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಿದ್ದರಾಮಯ್ಯ ಎರಡು ವರ್ಷಗಳ ಹಿಂದಿನ ಸೋಲಿನ ರಹಸ್ಯ ಬಿಚ್ಚಿದ್ದಾರೆ.

2018 ರಲ್ಲಿ ನಡೆದ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದ ಜೊತೆಗೆ ಬಾದಾಮಿ ಕ್ಷೇತ್ರದಲ್ಲೂ ಸ್ಪರ್ಧಿಸಿದ್ದರು. ಚಾಮುಂಡೇಶ್ವರಿಯಲ್ಲಿ ಸೋತಿದ್ದ ಅವರು ಬಾದಾಮಿ ಕ್ಷೇತ್ರದಲ್ಲಿ ಗೆದ್ದಿದ್ದರು.

ಸದ್ಯ ಸಿದ್ದರಾಮಯ್ಯ ಅವರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಮುನ್ನುಡಿ ಬರೆದಿದ್ದಂತು ಸುಳ್ಳಲ್ಲ.

ಎರಡನೇ ಹಂತದ ಗ್ರಾ.ಪಂ. ಚುನಾವಣೆ: 119 ನಾಮಪತ್ರ ತಿರಸ್ಕೃತ, 3072 ಉಮೇದುವಾರಿಕೆ ಅಂತಿಮ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ಎರಡನೇ ಹಂತದ ಚುನಾವಣೆಯ ನಾಲ್ಕು ತಾಲ್ಲೂಕುಗಳ 64 ಗ್ರಾ.ಪಂ.ಗಳ 895 ಕ್ಷೇತ್ರಗಳಿಗೆ ಒಟ್ಟು 3203 ನಾಮಪತ್ರಗಳು ಸ್ವೀಕೃತವಾಗಿದ್ದು, ಗುರುವಾರ ನಾಮಮತ್ರ ಪರಿಶೀಲನೆ ನಡೆಯಿತು. ಇದರಲ್ಲಿ 119 ನಾಮಪತ್ರಗಳು ತಿರಸ್ಕೃತವಾಗಿದ್ದು, 3072 ಉಮೇದುವಾರಿಕೆಗಳ ಕ್ರಮಬದ್ಧವಾಗಿವೆ ಎಂದು ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಶಾಖೆ ತಿಳಿಸಿದೆ.

ಮುಂಡರಗಿ ತಾಲ್ಲೂಕಿನ 18 ಗ್ರಾಮ ಪಂಚಾಯತಿಗಳ 264 ಸ್ಥಾನಗಳಿಗೆ ಒಟ್ಟು 925 ನಾಮಪತ್ರಗಳು ಸ್ವೀಕೃತವಾಗಿದ್ದವು. ಅದರಲ್ಲಿ 38 ನಾಮಪತ್ರಗಳು ತಿರಸ್ಕೃತವಾಗಿ ಒಟ್ಟು 887 ಕ್ರಮಬದ್ಧವಾಗಿವೆ.

ಅದರಂತೆ, ನರಗುಂದ ತಾಲ್ಲೂಕಿನ 13 ಗ್ರಾ.ಪಂ. 166 ಸ್ಥಾನಗಳಿಗೆ ಒಟ್ಟು 545 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇವುಗಳಲ್ಲಿ 3 ನಾಮಪತ್ರಗಳು ತಿರಸ್ಕೃತವಾಗಿ ಒಟ್ಟು 530, ರೋಣ ತಾಲ್ಲೂಕಿನ 24 ಗ್ರಾ.ಪಂ. 331 ಸ್ಥಾನಗಳಿಗೆ ಒಟ್ಟು 1244 ನಾಮಪತ್ರಗಳು ಸ್ವೀಕೃತವಾಗಿದ್ದವು.

ಪರಿಶೀಲನೆ ವೇಳೆ 72 ನಾಮಪತ್ರಗಳು ತಿರಸ್ಕೃತವಾಗಿದ್ದು, 1172 ಕ್ರಮಬದ್ಧವಾಗಿವೆ.

ಗಜೇಂದ್ರಗಡ ತಾಲ್ಲೂಕಿನ 9 ಗ್ರಾಮ ಪಂಚಾಯತಿಗಳ 134 ಸ್ಥಾನಗಳಲ್ಲಿ ಒಂದನ್ನು ಹೊರತುಪಡಿಸಿ 133 ಸ್ಥಾನಗಳಿಗೆ 489 ನಾಮಪತ್ರಗಳು ಸ್ವೀಕೃತವಾಗಿದ್ದು, 6 ನಾಮಪತ್ರಗಳು ತಿರಸ್ಕೃತವಾಗಿವೆ. ಹಾಗಾಗಿ 483 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣೆ ಶಾಖೆ ತಿಳಿಸಿದೆ.

error: Content is protected !!