Home Blog Page 3122

ಎಲ್ಲಾ ಜನಾಂಗೀಯ ನಾಯಕ ಡಾ.ಬಿ.ಆರ್.ಅಂಬೇಡ್ಕರ್..!

ವಿಜಯಸಾಕ್ಷಿ ವಿಶೇಷ

ಏಪ್ರಿಲ್ 14 ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ. ಆ ನಿಮಿತ್ತವಾಗಿ ಈ ಪುಟ್ಟ ಲೇಖನ.

ಅಂದು ಆ ಬಾಲಕ ಅಸ್ಪೃಶ್ಯತೆ, ಬಡತನವನ್ನು ಮೆಟ್ಟಿ ನಿಂತು ವಿದ್ಯಾಭ್ಯಾಸ ಮಾಡದೆ ಹೋಗಿದ್ದರೆ ಇವತ್ತು ಈ ಅಖಂಡ ಭಾರತದಲ್ಲಿ ಮರೆಯಲಾರದ ಚೇತನವೊಂದು ಸೃಷ್ಟಿಯಾಗುತ್ತಿರಲಿಲ್ಲವೇನೋ? ಆ ಬಾಲಕ ಯಾರೆಂದು ಕ್ಷಣಮಾತ್ರದಲ್ಲಿ ಊಹಿಸಬಹುದು. ಅದೇ ಡಾ. ಬಿ.ಆರ್. ಅಂಬೇಡ್ಕರ್. ಈ ಹೆಸರು ಹೇಳುತ್ತಿದ್ದಂತೆಯೇ ಮೈ ರೋಮಾಂಚನಗೊಳ್ಳುತ್ತದೆ.

ಭೀಮರಾವ್ ರಾಮ್‍ಜಿ ಅಂಬೇಡ್ಕರ್ ಅವರು ಬಾಲ್ಯದಲ್ಲಿ ಅನುಭವಿಸಿದ ನೋವುಗಳು ಒಂದೇ-ಎರಡೇ? ಅದನ್ನು ಹೇಳುತ್ತಾ ಹೋದರೆ ನಿಜಕ್ಕೂ ಮನಸ್ಸಿಗೆ ನೋವಾಗುತ್ತದೆ.

ಆಗಿನ್ನೂ ಅಂಬೇಡ್ಕರ್ ಅವರಿಗೆ ಏಳೆಂಟು ವರ್ಷ. ಒಂದು ದಿನ ಆ ಪುಟ್ಟ ಬಾಲಕ ತನ್ನ ತಂದೆಯನ್ನು ನೋಡಲು ಎತ್ತಿನಗಾಡಿಯಲ್ಲಿ ಕುಳಿತು ಸಾಗುತ್ತಿದ್ದ. ಗಾಡಿ ಸ್ವಲ್ಪ ದೂರ ಹೋಗಿತ್ತು. ಎತ್ತಿನ ಗಾಡಿಯವನಿಗೆ ಆ ಹುಡುಗ ದಲಿತ ಎಂಬುದು ತಿಳಿದು ಕೂಡಲೇ ಗಾಡಿಯನ್ನು ನಿಲ್ಲಿಸಿ ಆ ಪುಟ್ಟ ಬಾಲಕನನ್ನು ಕೆಳಕ್ಕೆ ತಳ್ಳಿ ಮುಂದೆ ಸಾಗಿಬಿಟ್ಟ. ಆ ಕ್ಷಣ ಆ ಪುಟ್ಟ ಹುಡುಗನ ಮನಸ್ಸಿಗೆ ಅತ್ಯಂತ ಆಘಾತವಾಯಿತು.

ಇನ್ನೊಮ್ಮೆ ಕೆರೆಯಲ್ಲಿ ನೀರು ಕುಡಿದ ಎಂಬ ಕಾರಣಕ್ಕೆ ಗ್ರಾಮಸ್ಥರೆಲ್ಲ ಸೇರಿ ಬಾಲಕನಿಗೆ ಥಳಿಸಿದರು. ಆಕಸ್ಮಿಕವಾಗಿ ಮಳೆ ಬಂದಿದ್ದರಿಂದ ರಸ್ತೆ ಬದಿಯಲ್ಲಿದ್ದ ಮನೆಯೊಂದರ ಜಗಲಿಯ ಮೇಲೆ ನಿಂತಿದ್ದಕ್ಕೆ ಮನೆಯ ಯಜಮಾನಿ ಕೋಪದಿಂದ ಜಗಲಿಯಿಂದ ತಳ್ಳಿದ್ದಳಂತೆ.

ಕ್ಷೌರಿಕ ಕ್ಷೌರ ಮಾಡದೆ ಹಿಂದಕ್ಕೆ ಕಳುಹಿಸಿದ್ದನಂತೆ. ಹೀಗೆ ಒಂದೇ ಎರಡೇ? ನೂರಾರು ಅವಮಾನ, ಹಿಂಸೆ ಆ ಬಾಲಕನನ್ನು ಇನ್ನಿಲ್ಲದಂತೆ ಕಾಡಿದವು. ನಾವೂ ಮನುಷ್ಯರೇ, ಹಿಂದುಳಿದ ಜನಾಂಗದಲ್ಲಿ ಹುಟ್ಟಿದ್ದೇ ತಪ್ಪಾಯಿತಾ? ಎಂಬ ಭಾವನೆ ಆಗ ಆ ಬಾಲಕನನ್ನು ಕಾಡಿತ್ತು. ಅದಕ್ಕೆಲ್ಲಾ ಹೆದರಿ ಆ ಬಾಲಕ ಮುದುರಿ ಕೂತಿದ್ದರೆ ಇವತ್ತು ಜಗತ್ತೇ ಹೆಮ್ಮೆಯಿಂದ ಕೊಂಡಾಡುವ ಚೇತನವೊಂದು ಇರುತ್ತಿರಲಿಲ್ಲ.

ಆದರೆ, ಎಲ್ಲವನ್ನೂ ಗೆದ್ದು ನಿಂತಿದ್ದರಿಂದಲೇ ಇವತ್ತು ದೇಶ ಮರೆಯಲಾರದ ಚೇತನವಾಗಿ, ಸಂವಿಧಾನಶಿಲ್ಪಿಯಾಗಿ ಡಾ.ಬಿ.ಆರ್. ಅಂಬೇಡ್ಕರ್ ನಿಲ್ಲುವಂತಾಯಿತು.

ಡಾ.ಬಿ.ಆರ್.ಅಂಬೇಡ್ಕರ್ ಜನಿಸಿದ್ದು 1891ರ ಏಪ್ರಿಲ್ 14ರಂದು ಮಹರ್ ಎಂಬ ದಲಿತ ಜನಾಂಗದಲ್ಲಿ. ಮಹಾರಾಷ್ಟ್ರದ ರತ್ನಗಿರಿ ಜಿ¯್ಲÉಯ ಅಂಬವಾಡೆ ಗ್ರಾಮದಲ್ಲಿ ಸುಭೇದಾರ್ ರಾಮ್ಜೀ ಸಕ್ಬಾಲ್, ತಾಯಿ ಭೀಮಾಬಾಯಿ ಅವರ ಪುತ್ರರಾಗಿ ಜನಿಸಿದರು.

ಅಂದಿನ ದಿನದಲ್ಲಿ ಕೆಳಜಾತಿಯ ಹುಡುಗನೊಬ್ಬ ಶಾಲೆಗೆ ಹೋಗಿ ಅಕ್ಷರ ಕಲಿಯುವುದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಆದರೆ, ಅಂಬೇಡ್ಕರ್‍ರಿಗೆ ಚಿಕ್ಕಂದಿನಿಂದಲೇ ಓದಬೇಕು, ಏನನ್ನಾದರೂ ಸಾಧಿಸಬೇಕು ಎಂಬ ಛಲ ಇತ್ತು. ಇದಕ್ಕೆ ಹೆತ್ತವರು ನೀರೆರೆದು ಪೋಷಿಸಿದರು. ಇದರ ಜತೆಗೆ ಸಂಸ್ಕøತ ಕಲಿಯಬೇಕೆಂಬ ಮಹದಾಸೆಯಿತ್ತು. ಇದಕ್ಕೆ ಮೇಲ್ಜಾತಿಯವರು ಅಡ್ಡಿಪಡಿಸಿದರು. ಆದರೆ, ಇವರು ಬಗ್ಗಲಿಲ್ಲ.

ಬದಲಿಗೆ ಹಠತೊಟ್ಟವರಂತೆ ಸಂಸ್ಕøತ ಕಲಿತು, ಅದರಲ್ಲಿ ಸಂಪೂರ್ಣ ಪಾಂಡಿತ್ಯಗಳಿಸಿ, ತಾವೇ ಹಲವಾರು ವಿಚಾರ ಕ್ರಾಂತಿ ಕೃತಿಗಳನ್ನು ರಚಿಸುವುದರ ಮೂಲಕ ಆಧುನಿಕ ಮನು ಎಂಬ ಕೀರ್ತಿಗೆ ಪಾತ್ರರಾದರು. ಇದನ್ನು ಮಾತ್ರ ಯಾರಿಂದಲೂ ತಡೆಯಲು ಸಾಧ್ಯವಾಗಲೇ ಇಲ್ಲ. ಏಕೆಂದರೆ ಹಠವಾದಿ ಅಂಬೇಡ್ಕರ್‍ರ ಭೀಮಶಕ್ತಿ ಅಂಥದ್ದು.

1907ರಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಅಂಬೇಡ್ಕರ್ ತೇರ್ಗಡೆಯಾದರು. ಅವರಿಗೆ ಆ ವರ್ಷವೇ ರಮಾಬಾಯಿಯೊಂದಿಗೆ ವಿವಾಹವಾಯಿತು. ಆ ನಂತರ ಅವರು ಮುಂಬೈನ ಎಲ್ಫಿನ್‍ಸ್ಟನ್ ಕಾಲೇಜಿನಲ್ಲಿ ಇಂಟರ್‍ಮೀಡಿಯಟ್ ಮುಗಿಸಿ 1921ರಲ್ಲಿ ಬಿಎ ಪದವೀಧರರಾದರು. ನಂತರ ಬರೋಡಾ ಮಹಾರಾಜರ ಸೈನ್ಯದಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡರು.

ಆದರೆ, ಆಗ ಬರೋಡ ಮಹಾರಾಜರೇ ಇವರ ಬುದ್ಧಿಶಕ್ತಿಗೆ ಮಾರುಹೋಗಿ ವಿದೇಶದಲ್ಲಿ ವ್ಯಾಸಂಗ ಮಾಡಿ ಬಂದ ನಂತರ ತಮ್ಮ ಹತ್ತು ವರ್ಷಗಳ ಕಾಲ ಕೆಲಸ ಮಾಡಬೇಕೆಂಬ ಕರಾರಿನೊಂದಿಗೆ ಉನ್ನತ ವ್ಯಾಸಂಗಕ್ಕೆ ಅಂಬೇಡ್ಕರ್ ಅವರನ್ನು ಅಮೇರಿಕಾಕ್ಕೆ ಕಳುಹಿಸಿದರು.

ಅಲ್ಲಿ ಎಂಎ ಪದವಿಯೊಡನೆ ಪಿಎಚ್‍ಡಿಯನ್ನು ಗಳಿಸಿ 1917ರ ಆಗ 21ರಂದು ಮತ್ತೆ ಭಾರತಕ್ಕೆ ಮರಳಿದರು. ಇಷ್ಟಾದರೂ ಅವರ ಶಿಕ್ಷಣ ದಾಹ ಇಂಗಿರಲಿಲ್ಲ. ಹಾಗಾಗಿ ಪುನಃ 1920ರಲ್ಲಿ ಮತ್ತಷ್ಟು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನ್‍ಗೆ ಹೋದ ಇವರು 1922ರಲ್ಲಿ ಬ್ಯಾರಿಸ್ಟರ್ ಎಂಬ ಪದವಿಯೊಡನೆ ಭಾರತಕ್ಕೆ ವಾಪಸಾದರು.

ವಿದೇಶದಲ್ಲಿ ಕಲಿತು, ಒಂದು ಸಾಲದು ಅಂತ ಹಲವಾರು ಡಾಕ್ಟರೇಟ್ ಪದವಿಗಳನ್ನು ಗಳಿಸಿ ಅಂಬೇಡ್ಕರ್ ಅವರು ಸ್ವದೇಶಕ್ಕೆ ಬಂದಿದ್ದರೂ, ಇಲ್ಲಿ ಮಾತ್ರ ಅದೇ ಅಸ್ಪೃಶ್ಯತೆ ಅವರನ್ನು ಅಪಮಾನಿಸುತ್ತಿತ್ತು. ಆಗ ಅಂಬೇಡ್ಕರ್ ಮೂಕನಾಯಕ ಎಂಬ ಪತ್ರಿಕೆ ಆರಂಭಿಸಿ ಅದರ ಮುಖೇನ ಅಸ್ಪೃಶ್ಯತೆಯ ವಿರುದ್ಧ ಜನ ಜಾಗೃತಿಗೆ ನಿಂತರು.

ಬಹಿಷ್ಕೃತ ಹಿತಕಾರಿಣಿ ಎಂಬ ಸಭಾದಂತಹ ಸಂಘಟನೆಗಳನ್ನು ಕಟ್ಟಿ ಅಸ್ಪೃಶ್ಯತೆ ವಿರುದ್ಧ ಸಮಾನತೆಗಾಗಿ ಬೀದಿಗಿಳಿದು ಹಲವು ಹೋರಾಟ ಮಾಡುವ ಮೂಲಕ ದಲಿತರ ಪಾಲಿಗೆ ಅಕ್ಷರಶಃ ತೋರುಬೆರಳಾಗಿದ್ದರು. ಇವರ ಚೌದರ್ ಕೆರೆ ಚಳವಳಿಯಂತೂ ಭಾರತದ ಇತಿಹಾಸದಲ್ಲಿ ದಾಖಲಿಸುವಂಥದ್ದು.

ಹೀಗೆ ದಲಿತರ ಪರ ಕ್ರಾಂತಿ ಕಹಳೆ ಪ್ರಾರಂಭವಾಗಿ ನಿಧಾನವಾಗಿ ದೇಶದೆಲ್ಲಾಡೆ ಮೊಳಗತೊಡಗಿತು. ಈ ಸಂದರ್ಭದಲ್ಲಿ ಎರಡನೆ ಮಹಾಯುದ್ಧ ಪ್ರಾರಂಭವಾಗಿತ್ತು. ಆ ಸಂದರ್ಭದಲ್ಲಿ ಬ್ರಿಟಿಷರು ಕೆಲವು ಭಾರತೀಯರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಂಡಾಗ ಪ್ರಥಮ ಪ್ರಾಶಸ್ತ್ಯದಲ್ಲಿ ಅಂಬೇಡ್ಕರ್ ಅವರಿಗೆ ಸ್ಥಾನ ದೊರಕಿತ್ತು.

ಭಾರತ ಸ್ವಾತಂತ್ರ್ಯ ಗಳಿಸಿದ ನಂತರ ನೆಹರೂ ಸರ್ಕಾರದಲ್ಲಿ ಪ್ರಥಮ ಕಾನೂನು ಸಚಿವರಾಗಿದ್ದ ಹೆಗ್ಗಳಿಕೆ ಹೊಂದಿದ್ದ ಅಂಬೇಡ್ಕರ್, ಭಾರತ ದೇಶಕ್ಕೆ ಸಶಕ್ತ ಸಂವಿಧಾನ ನೀಡಿದ ಶಿಲ್ಪಿಯಾದರು. ಇದು ಇಡೀ ವಿಶ್ವಕ್ಕೇ ಮಾದರಿ ಸಂವಿಧಾನವಾಗಿರುವುದು ಇವರಿಗೆ ಸಂದ ಮಹಾಗೌರವವೇ ಸರಿ.

ಅಧಿಕಾರ ಇರಲಿ, ಇಲ್ಲದಿರಲಿ ಅಂಬೇಡ್ಕರ್ ಅವರು ಹೆಜ್ಜೆ ಇಟ್ಟಲ್ಲೆಲ್ಲಾ ಅಸ್ಪೃಶ್ಯತೆ ನಿವಾರಣೆಗಾಗಿಯೇ ಅವರ ಹೃದಯ ತುಡಿಯುತ್ತಿತ್ತು. ಅಂತೆಯೇ ದಲಿತರ ಪುರೋಭಿವೃದ್ಧಿಗಾಗಿಯೇ ಅವರ ಜೀವ ಸದಾ ಮಿಡಿಯುತ್ತಿತ್ತು. ಭಾರತ ದೇಶದಲ್ಲಿ ಅಂಬೇಡ್ಕರ್ ಎಂಬ ಕ್ರಾಂತಿ ಪುರುಷ ಜನಿಸಿದ್ದರಿಂದಲೇ ದೇಶದ ಅರ್ಧ ಭಾಗದಂತಿರುವ ಉತ್ತರ ಪ್ರದೇಶ ಕಾನ್ಷಿರಾಂರಂಥ ದಲಿತ ನಾಯಕನ ಹಿಡಿತಕ್ಕೆ ಸಿಕ್ಕಿದ್ದು. ಮಾಯಾವತಿಯಂತಹ ದಲಿತ ಮಹಿಳೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲು (ಈಗ ಮಾಜಿ) ಸಾಧ್ಯವಾದದ್ದು.

ಅಂಬೇಡ್ಕರ್ ಅವರ ಇಡೀ ಜೀವನ ಅಸ್ಪೃಶ್ಯರೆನಿಸಿಕೊಂಡವರಿಗೆ ನ್ಯಾಯವನ್ನೂ, ಸಮಾನತೆಯನ್ನೂ ದೊರಕಿಸಿಕೊಡುವುದಕ್ಕೆ ಮುಡಿಪಾಗಿತ್ತು. ಇದರಲ್ಲಿ ಅವರು ಸಾಕಷ್ಟು ಯಶಸ್ಸನ್ನೂ ಸಾಧಿಸಿದ್ದರು. ಆದರೂ ಹಿಂದೂ ಧರ್ಮದ ಅಸಮಾನತೆಯಿಂದ ರೋಸಿಹೋಗಿದ್ದ ಅವರು ಬುದ್ಧನ ಕಾರುಣ್ಯದಲ್ಲಿ ಆಕರ್ಷಿತರಾಗಿ 1956ರ ಅಕ್ಟೋಬರ್ 14ರಂದು ನಾಗಪುರದಲ್ಲಿ ನಡೆದ ಬೃಹತ್ ಸಮಾರಂಭವೊಂದರಲ್ಲಿ ತಮ್ಮ ಪತ್ನಿ ಡಾ.ಶಾರದಾ ಸೇರಿದಂತೆ ತಮ್ಮ ಅಪಾರ ಅಭಿಮಾನಿಗಳೊಡನೆ ಬೌದ್ಧಧರ್ಮಕ್ಕೆ ಸೇರಿದರು.

1956ರ ಡಿಸೆಂಬರ್ 6ರಂದು ಇಡೀ ದೇಶವನ್ನು ಅನಾಥವಾಗಿಸಿ ಕಾಣದ ಊರಿನತ್ತ ಪಯಣಿಸಿದ ಅಂಬೇಡ್ಕರ್ ಅವರಿಗೆ ಮರಣೋತ್ತರವಾಗಿ ಭಾರತ ಸರ್ಕಾರ 1991ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಅಂಬೇಡ್ಕರ್ ಇಂದು ನಮ್ಮ ಮುಂದೆ ಇಲ್ಲದಿರಬಹುದು. ಆದರೆ, ಅವರು ಮಾಡಿದ ಮಹತ್ ಸಾಧನೆಯಿಂದ ನೆನಪಾಗುತ್ತಲೇ ಇರುತ್ತಾರೆ.

ಕೆ ಶಿವು ಲಕ್ಕಣ್ಣವರ್

ಕೊರೋನಾ ಎರಡನೇ ಅಲೆ; ಮಂಗಳವಾರವೂ 30 ಜನರಿಗೆ ಸೋಂಕು

0

ವಿಜಯಸಾಕ್ಷಿ ಸುದ್ದಿ, ಗದಗ

ಎಪ್ರಿಲ್ 13 ಮಂಗಳವಾರವೂ ಕೊರೋನಾ ಸೋಂಕಿನ ತೀವ್ರತೆ ಮುಂದುವರೆದಿದ್ದು, 30 ಜನರಿಗೆ ಸೋಂಕು ಪತ್ತೆಯಾಗಿದೆ. ಗದಗ ನಗರ ಹಾಗೂ ತಾಲೂಕಿನ 18 ಜನರಿಗೆ, ಮುಂಡರಗಿಯ 01, ನರಗುಂದದ 03, ರೋಣ ತಾಲೂಕಿನಲ್ಲಿ 02 ಹಾಗೂ ಶಿರಹಟ್ಟಿ ತಾಲೂಕಿನ 06 ಜನರಿಗೆ ಸೋಂಕು ತಗುಲಿದೆ.

ಮಂಗಳವಾರ 30 ಜನರಿಗೆ ಸೋಂಕು ತಗುಲುವ ಮೂಲಕ ಗದಗ ಜಿಲ್ಲೆಯಲ್ಲಿ ಇದುವರೆಗೂ 11411 ಪಾಸಿಟಿವ್ ಪ್ರಕರಣಗಳು ದೃಢಪಟ್ಟಂತಾಗಿದೆ.

ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ ನಿಂದ 141 ಜನರು ಮೃತಪಟ್ಟಿದ್ದಾರೆ. ಇಂದು 16 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 11133 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ 137 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 220 ಜನರ ವರದಿ ಬರಲು ಬಾಕಿ ಇದ್ದು, ಇದುವರೆಗೂ ಸೋಂಕಿನಿ ಪರೀಕ್ಷೆಗಾಗಿ ಸಂಗ್ರಹಿಸಿದ 311934 ಮಾದರಿಗಳಲ್ಲಿ 300303 ಮಾದರಿಗಳು ನಕಾರಾತ್ಮಕವಾಗಿವೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೆಟಗೇರಿಯಲ್ಲಿ ಅಂದರ್-ಬಾಹರ್ ಜೂಜಾಟ; ಖಾಸಗಿ ನೌಕರರು ಸೇರಿದಂತೆ ಐವರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಎಲೆಕ್ರ್ಟೇಶಿಯನ್, ಅಟೋ ಡ್ರೈವರ್, ಖಾಸಗಿ ಕಂಪನಿಯ ಇಬ್ಬರು ನೌಕರರು ಸೇರಿದಂತೆ ಐದು ಜನರು ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದಾಗ ಬೆಟಗೇರಿ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

ಬೆಟಗೇರಿಯ ಕುರಹಟ್ಟಿಪೇಟಿಯ ರೈಲ್ವೆ ಹಳಿಯ ಹತ್ತಿರ ಜೂಜಾಟದಲ್ಲಿ ತೊಡಗಿದ್ದ ಶ್ರೀಧರ್ ಅಲಿಯಾಸ್ ಮಂಜುನಾಥ್ ನಾಗಪ್ಪ ಮೆಣಸಗಿ, ವಿರೇಶ್ ಮರಿಯಪ್ಪ ಸೊಲಗಿ, ಕೃಷ್ಣಪ್ಪ ರಾಮಪ್ಪ ಚಲವಾದಿ, ಕಿರಣಕುಮಾರ್ ಈರಣ್ಣ ಗಂಜಿ, ಮನೋಹರ ಯಲ್ಲಪ್ಪ ಪಾಂಚಾಳ ಎಂಬುವವರನ್ನು ಬೆಟಗೇರಿ ಠಾಣೆಯ ಪಿಎಸ್ಐ ರಾಜೇಶ್ ಬಟಗುರ್ಕಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದಾರೆ.

ಬಂಧಿತರಿಂದ ನಗದು 12 ಸಾವಿರ ಹಣ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಬೆಟಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಸ್ಎಸ್ ಪಾಟೀಲ್ ನಗರದ ಬಳಿ ಇಸ್ಪೀಟು ಜೂಜಾಟ; 7 ಜನರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಏಳು ಜನರ ತಂಡವೊಂದು ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದಾಗ ಇನ್ಸ್‌ಪೆಕ್ಟರ್ ಸುಧೀರ್ ಕುಮಾರ್ ಬೆಂಕಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಏಳು ಜನರನ್ನು ಬಂಧಿಸಿ, ಅವರಿಂದ ನಗದು ಹಣ ವಶಪಡಿಸಿಕೊಂಡ ಘಟನೆ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಎಸ್ ಎಸ್ ಪಾಟೀಲ್ ನಗರದ ಬಳಿ ಅಶೋಕ ಫಕ್ಕೀರಪ್ಪ ಹಳ್ಳಿ, ಈರಣ್ಣ ಶಂಕ್ರಪ್ಪ ಇನಾಮಾದಾರ್, ನಾಗಾರಾಜ್ ಹೆಗ್ಗಪ್ಪ ಕೌಜಗೇರಿ, ಕನಕರಾಜ್ ವೆಂಕಪ್ಪ ಕಟ್ಟಿಮನಿ, ನಿಂಗಪ್ಪ ಬಸನಗೌಡ್ ಕದ್ರಳ್ಳಿ, ವೆಂಕಟೇಶ್ ಹನಮಂತಪ್ಪ ಶಿಂದೋಗಿ ಹಾಗೂ ಈರಪ್ಪ ಕಾಳಪ್ಪ ಹಮ್ಮಗಿ ಎಂಬುವವರು ಇಸ್ಪೀಟು ಜೂಜಾಟದಲ್ಲಿ ತೊಡಗಿದ ಖಚಿತ ಮಾಹಿತಿ ಮೇರೆಗೆ ಮುಂಡರಗಿ ಠಾಣೆಯ ಇನ್ಸ್‌ಪೆಕ್ಟರ್ ಸುಧೀರ್ ಕುಮಾರ್ ಬೆಂಕಿ ಅವರು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಬಂಧಿಸಿ, ಅವರಿಂದ‌ ನಗದು 1520 ರೂ, ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತಂತೆ ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಡೀ ಭಾರತದಿಂದ ಕೊರೋನಾ ತೊಲಗಲಿ; ಯುಗಾದಿ ಶುಭಾಶಯ ತಿಳಿಸಿದ ಮಹಾಮಂಡಳ ರಾಜ್ಯಾಧ್ಯಕ್ಷ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಇಡೀ ಭಾರತದಿಂದ ಕೊರೋನಾ ಮುಕ್ತಿ ಪಡೆದು ಎಲ್ಲರೂ ಕ್ಷೇಮ ಹಾಗೂ ಆರೋಗ್ಯವಾಗಿರಲಿ ಎಂದು ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷ ಡಾ. ಅಬ್ದುಲ್ ರಜಾಕ್ ನದಾಫ್ ಅವರು ಯುಗಾದಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಈ ಬಗ್ಗೆ ಶುಭಕೋರಿದ ಅವರು, ತಂದೆ ತಾಯಿ ರಾಯರ ಕೃಪೆಯಿಂದ ಈ ಸಂವತ್ಸರ ಸಮಸ್ತ ಮನುಕುಲದಮನೋವಾಂಛ ಫಲಗಳನ್ನು ಈಡೇರಿಸಿ ನಮ್ಮನ್ನು ಕಾಡುತ್ತಿರುವ ಕೊರೋನಾ ಭಾರತದಿಂದ ತೊಲಗಿ, ಹೊಸ ಕಾಲದ ಆದಿಯೇ,
ಲೋಕದ ಜನರ ಕಷ್ಟಗಳ ನೀಗುತ್ತಾ ಬಾ…
ಆರೋಗ್ಯದ ಭಾಗ್ಯವನ್ನು ಕರುಣಿಸು ಬಾ…
ಎಲ್ಲರ ಬಾಳಲ್ಲಿ ಹೊಸ ವರ್ಷದ ಉತ್ಸಾಹ ತುಂಬುತ್ತಾ ಬಾ.

ಈ ಹೊಸತನ, ನಿರೀಕ್ಷೆ, ಭರವಸೆಗಳನ್ನು ಹೊತ್ತು ಕಳೆದ ವರ್ಷದ ತೊಡಕುಗಳು ಈ ಹೊಸ ವರ್ಷ ನೀಗಲಿ. ಬೇವು-ಬೆಲ್ಲದ ಅನುಭವಗಳು ಈ ವರ್ಷ ಸಮನಾಗಿರಲಿ ಎಂದರು.

ಈ ಶುಭ ವರ್ಷ ಎಲ್ಲರಿಗೂ ಒಳಿತು ತರಲೆಂದು ಭಗವಂತನಲ್ಲಿ ನಾನು ಕೋರುತ್ತೇನೆ ಎಂದು ನಾಡಿನ ಸಮಸ್ತರಿಗೂ ಯುಗಾದಿ-ಹೊಸ ವರ್ಷದ ಶುಭಾಶಯಗಳನ್ನು ರಾಜ್ಯಾಧ್ಯಕ್ಷ ಡಾ. ಅಬ್ದುಲ್ ರಜಾಕ್ ತಿಳಿಸಿದ್ದಾರೆ

ಕೊರೋನಾ ಎರಡನೇ ಅಲೆ ಹೊಡೆತ; ಸೋಮವಾರ ಒಂದೇ ದಿನ 29 ಜನರಿಗೆ ಸೋಂಕು

0

ವಿಜಯಸಾಕ್ಷಿ ಸುದ್ದಿ, ಗದಗ

ಕೊರೋನಾ ಎರಡನೆ ಅಲೆ ವೇಗವಾಗಿ ಹರಡುತ್ತಿದ್ದು, ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ 29 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ.

ಗದಗ ನಗರ ಹಾಗೂ ತಾಲೂಕಿನ ಒಟ್ಟು 21 ಜನರಿಗೆ ಸೋಂಕು ವ್ಯಾಪಿಸಿದೆ. ಅದೇ ರೀತಿ ಮುಂಡರಗಿಯ 03, ನರಗುಂದದ 01, ರೋಣ ತಾಲೂಕಿನಲ್ಲಿ 04 ಜನರಿಗೆ ಕೊರೊನಾ ವ್ಯಾಪಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಸೋಮವಾರ ಒಂದೇ ದಿನ 29 ಜನರಿಗೆ ಸೋಂಕು ವ್ಯಾಪಿಸುವ ಮೂಲಕ ಈವರೆಗೆ ಒಟ್ಟುಸೋಂಕಿತರ ಸಂಖ್ಯೆ 11381ಕ್ಕೆ ಏರಿಕೆಯಾಗಿದೆ.

ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ ನಿಂದ 141 ಜನರು ಮೃತಪಟ್ಟಿದ್ದಾರೆ. ಇದುವರೆಗೂ 11117 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ 123 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ 96 ಜನರ ವರದಿ ಬರಲು ಬಾಕಿ ಇದೆ. ಇದುವರೆಗೂ ಸೋಂಕಿನಿ ಪರೀಕ್ಷೆಗಾಗಿ ಸಂಗ್ರಹಿಸಿದ 310123 ಮಾದರಿಗಳಲ್ಲಿ 298646 ಮಾದರಿಗಳು ನಕಾರಾತ್ಮಕವಾಗಿವೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಗದಗನಿಂದ 20 ಬಸ್ ಗಳ ಸಂಚಾರ ಆರಂಭ; ಗ್ರಾಮೀಣ ಭಾಗಕ್ಕಿನ್ನೂ ಇಲ್ಲ ಸರ್ಕಾರಿ ಬಸ್

0

ವಿಜಯಸಾಕ್ಷಿ ಸುದ್ದಿ, ಗದಗ: ಸಾರಿಗೆ ನೌಕರರ ಸತತ 6 ದಿನದ ಮುಷ್ಕರದ ನಡುವೆ ಇಂದು ಗದಗನಿಂದ ಕೆಲ ಬಸ್ ಗಳ ಸಂಚಾರ ಆರಂಭವಾಗಿದೆ. ಗದಗನ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಬಸ್ ನಿಲ್ದಾಣದಿಂದ 20 ಬಸ್ ಗಳ ಸಂಚಾರ ಆರಂಭಗೊಂಡಿದೆ.

ಗದಗ- ಹುಬ್ಬಳ್ಳಿ ಹಾಗೂ ಗದಗ- ಮುಂಡರಗಿ ಮಾರ್ಗವಾಗಿ ಮಾತ್ರ ಈ ಬಸ್ ಗಳು ಸಂಚಾರ ಆರಂಭಿಸಿದ್ದು, ಗ್ರಾಮೀಣ ಭಾಗಕ್ಕಿನ್ನೂ ಬಸ್ ವ್ಯವಸ್ಥೆ ಆಗಿಲ್ಲ. ಹೀಗಾಗಿ ಗದಗ ಜಿಲ್ಲಾ ಕೇಂದ್ರದಿಂದ ಗ್ರಾಮೀಣ ಭಾಗಕ್ಕೆ ಹೋಗಲು ಪ್ರಯಾಣಿಕರು ಪರದಾಡುತ್ತಿದ್ದಾರೆ.

ಅನಿವಾರ್ಯವಾಗಿ ಖಾಸಗಿ ವಾಹನಗಳ ಮೂಲಕವೇ ಪ್ರಯಾಣ ಮಾಡುತ್ತಿದ್ದು, ಗ್ರಾಮೀಣ ಭಾಗಕ್ಕೂ ಸಹ ಬಸ್ ಸಂಚಾರ ಆರಂಭವಾಗಲಿ ಎಂದು ಒತ್ತಾಯಿಸುತ್ತಿದ್ದಾರೆ.

ಕೊರೊನಾ ಇದ್ದರೂ ಜನರಿಂದ ಡೋಂಟ್ ಕೇರ್; ಮಾಸ್ಕ್, ಸಾಮಾಜಿಕ ಅಂತರ ಮರೆತು ವಸ್ತುಗಳ ಖರೀದಿ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ತನ್ನ ಅಬ್ಬರ ಮುಂದುವರೆಸಿರುವ ಈ ಸಂದರ್ಭದಲ್ಲಿ ಜನ ಮೈಮರೆತು ಹಬ್ಬದ ಶಾಪಿಂಗ್ ಮೂಡ್ ನಲ್ಲಿರುವ ದೃಶ್ಯಗಳು ಕಂಡುಬಂದಿದೆ.

ಯುಗಾದಿ ಹಬ್ಬದ ಸಂಭ್ರಮದಲ್ಲಿ ಜನ ಕೊರೊನಾ ಇರುವುದನ್ನೂ ಮರೆತು, ನಗರದ ಗ್ರೇನ್ ಮಾರುಕಟ್ಟೆಯಲ್ಲಿ ಗುಂಪು ಗುಂಪಾಗಿ ಸೇರಿ ತರಕಾರಿ, ಹಣ್ಣು, ಹೂವು ಖರೀದಿ ಮಾಡಿದ್ದಾರೆ. ಹೀಗಾಗಿ ಗ್ರೇನ್ ಮಾರುಕಟ್ಟೆಯಲ್ಲಿ ಜನಜಂಗುಳಿ ಉಂಟಾಗಿದ್ದು, ಸಾಮಾಜಿಕ ಅಂತರ, ಮಾಸ್ಕ್ ಧಾರಣೆಯನ್ನೂ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ.

ಕೆಲವರು ಮಾಸ್ಕ್ ಹಾಕಿದ್ರೆ ಇನ್ನು ಕೆಲವರು ಮಾಸ್ಕ್ ಹಾಕಬೇಕೆನ್ನುವ ಗೋಜಿಗೆ ಹೋಗದ ದೃಶ್ಯಗಳು ಕಂಡುಬಂತು. ಜಿಲ್ಲಾಡಳಿತ ಕೊರೊನಾ ಕುರಿತು ಜಾಗೃತರಾಗಿರುವಂತೆ ಮನವಿ ಮಾಡಿದ್ರೂ, ಜಿಲ್ಲಾಡಳಿತದ ಮನವಿಗೂ ಜನ್ರು ಡೋಂಟ್ ಕೇರ್ ಎಂದಿದ್ದಾರೆ.

ಅನೈತಿಕ ಸಂಬಂಧ ; ಮಾರಾಕಾಸ್ತ್ರದಿಂದ ಯುವಕನ ಕೊಲೆ‌

ವಿಜಯಸಾಕ್ಷಿ ಸುದ್ದಿ, ಗದಗ

ಮಾರಾಕಾಸ್ತ್ರದಿಂದ ಯುವಕನೊಬ್ಬನನ್ನು ಕೊಲೆ ಮಾಡಿ ಜಮೀನಿನಲ್ಲಿ ಎಸೆದಿರುವ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದೆ. ಮರಿಯಪ್ಪ ತಳಗೇರಿ (೩೦) ಎಂಬಾತನೇ ಕೊಲೆಯಾದ ಯುವಕನಾಗಿದ್ದು, ಮದ್ಯರಾತ್ರಿ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಎಸ್.ಪಿ ಯತೀಶ್ ಎನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೀಡಾದ ಯುವಕನಿಗೆ ಪತ್ನಿ, ಮೂವರು ಮಕ್ಕಳಿದ್ದಾರೆ. ಕುಟುಂಬ ಕಲಹದಿಂದಾಗಿ ಈ ಕೊಲೆ‌ ಮಾಡಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಕೊಲೆ ಪ್ರಕರಣದಿಂದ ಸೂರಣಗಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಶಯಾಸ್ಪದ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಂಗಭದ್ರಾ ಎಡದಂಡೆ ನಾಲೆಯ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಜಿಲ್ಲೆಯಲ್ಲಿನ ತುಂಗಭದ್ರಾ ಎಡದಂಡೆ ನಾಲೆಯ 100 ಮೀಟರ್ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ತುಂಗಭದ್ರಾ ಎಡದಂಡೆ ನಾಲೆಯ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಆದೇಶ ಪ್ರತಿತುಂಗಭದ್ರಾ ಎಡದಂಡೆ ನಾಲೆಗೆ ಏಪ್ರಿಲ್ 11 ರಿಂದ ಏಪ್ರಿಲ್ 20 ರವರೆಗೆ ಜನ ಜಾನುವಾರುಗಳಿಗೆ ಕುಡಿಯುವ ಸುಮಾರು 2 ಟಿಎಂಸಿ ನೀರನ್ನು ಹರಿಸಬೇಕಾಗಿರುವ ಹಿನ್ನೆಲೆಯಲ್ಲಿ ನೀರು ನಿರ್ವಹಣೆಯ ಉದ್ದೇಶದಿಂದ ನಾಲೆಯ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವಂತೆ ಕಲುಬುರಗಿ ವಿಭಾಗದ ಪ್ರದೇಶಿಕ ಆಯುಕ್ತರ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ನಿಷೇಧಾಜ್ಞೆ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿನ ತುಂಗಭದ್ರಾ ಎಡದಂಡೆ ನಾಲೆ 0 ಮೈಲ್‍ನಿಂದ 47 ನೇ ಮೈಲ್ ವರೆಗೆ ಎಡ ಮತ್ತು ಬಲ ದಡಗಳ ಸುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ. ನಿಷೇಧಾಜ್ಞೆಯನ್ವಯ ತುಂಗಭದ್ರಾ ಎಡದಂಡೆ ನಾಲೆಯ ಮೇಲ್ಕಾಣಿಸಿದ ಪ್ರದೇಶದ 100 ಮೀಟರ್ ಅಂತರದಲ್ಲಿ ಇಬ್ಬರಿಗಿಂತ ಹೆಚ್ಚು ಜನರು ಓಡಾಡುವಂತಿಲ್ಲ, ಹಾಗೂ ಮಾರಕಾಸ್ತ್ರ ಹಿಡಿದು ಓಡಾಡುವಂತಿಲ್ಲ.

ಈ ಆದೇಶವು ಮದುವೆ ಮತ್ತು ಶವ ಸಂಸ್ಕಾರ ಹಾಗೂ ಇನ್ನಿತರೆ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

error: Content is protected !!