Home Blog Page 3130

ಪ್ರತ್ಯೇಕ ಅಪಘಾತ; ಇಬ್ಬರ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತದ ಘಟನೆಯಲ್ಲಿ ವಾಹನಗಳು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪಿದ್ದಾರೆ.

ಗದಗ ತಾಲೂಕಿನ ಹಿರೇಹಂದಿಗೋಳ ಗ್ರಾಮದ ಬಳಿ ಟಂ ಟಂ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಹತ್ತು ವರ್ಷದ ಬಾಲಕ ಸ್ಥಳದಲ್ಲಿಯೇ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ನಡೆದಿದೆ.

ಶಿರುಂಜ ಗ್ರಾಮದ ಶರಣಪ್ಪ ಪಾಟೀಲ (10) ಮೃತ ಬಾಲಕ. ಗದಗ ತಾಲೂಕಿನ ಶಿರುಂಜ ಗ್ರಾಮದವರಾದ ಸವಿತಾ ಹುಲಕಟ್ಟಿ, ಹಾಲಪ್ಪ ತಳವಾರ, ಭೀಮವ್ವ ಲಂಕೆನ್ನವರ, ಚನ್ನವ್ವ ತಳವಾರ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಘಟನೆಯಲ್ಲಿ ಕಾರು ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಗಾಯಗೊಂಡ ಘಟನೆ ಮಾಳವಾಡ ಗ್ರಾಮದ ಹತ್ತಿರ ನಡೆದಿದೆ. ಶಿವಬಸಪ್ಪ ಬಸವಂತಪ್ಪ ಬೂದಿಹಾಳ (54) ಮೃತರು.

ಮಾಳವಾಡದಿಂದ ಅಸೂಟಿ ಗ್ರಾಮದ ಕಡೆಗೆ ಹೊರಟಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಶಿವಬಸಪ್ಪ ಸ್ಥಳದಲ್ಲೇ ಮೃತಪಟ್ಟರೆ, ಯಲ್ಲಪ್ಪ ಚಕ್ರದ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಳ್ಳೆಗಾಲ ಶಾಸಕ ಎನ್. ಮಹೇಶ್ ಶೀಘ್ರ ಬಿಜೆಪಿಗೆ

ವಿಜಯಸಾಕ್ಷಿ ಸುದ್ದಿ, ಚಾಮರಾಜನಗರ

ಶೀಘ್ರವೇ ಬಿಜೆಪಿ ಸೇರುವುದಾಗಿ ಕೊಳ್ಳೇಗಾಲ ಶಾಸಕ‌ ಎನ್.ಮಹೇಶ್ ಹೇಳಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಮಾಜಿ ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ.

ಬಿಜೆಪಿ ಬರುವಂತೆ ಬಿಎಸ್ ವೈ ಆಹ್ವಾನಿಸಿದ್ದು, ಪಕ್ಷದ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿ ಮಾತುಕತೆ ನಡೆಸುವಂತೆ ತಿಳಿಸಿದ್ದಾರೆ ಎಂದು ಹೇಳಿದರು.
ಯಾವುದೇ ಷರತ್ತುಗಳಿಲ್ಲದೆ ಪಕ್ಷ ಸೇರಲು ತೀರ್ಮಾನಿಸಿದ್ದೇನೆ. ಶೀಘ್ರದಲ್ಲೇ ಬಿಜೆಪಿ ಸೇರುವ ದಿನಾಂಕ ನಿಗದಿಯಾಗಲಿದೆ ಎಂದು ಎನ್. ಮಹೇಶ್ ತಿಳಿಸಿದರು.

ತೇಜೋವಧೆ ಮಾಡಲು ನನ್ನ ವಿರುದ್ಧ ಷಡ್ಯಂತ್ರ: ಶಾಸಕ ರೇಣುಕಾಚಾರ್ಯ ಆರೋಪ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಯಾರೋ ಬ್ಲಾಕ್ ಮೇಲ್ ಮಾಡಿ ರೇಣುಕಾಚಾರ್ಯ ವಿಡಿಯೋ ಎಂದು ಹೆದರಿಸುತ್ತಿದ್ದಾರೆ ನಾನು ಯಾವುದೇ ಬ್ಲಾಕ್ ಮೇಲ್ ಖೆಡ್ಡಾಗೆ ಬೀಳಲ್ಲ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ತಮ್ಮ ವಿರುದ್ಧದ ವಿಡಿಯೋ ಪ್ರಸಾರ ಮಾಡದಂತೆ ಮಧ್ಯಂತರ ತಡೆ ಕೋರಿ ಸಿಟಿ ಸಿವಿಲ್ ಕೋರ್ಟ್ ಮೊರೆ ಹೋದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಎಡಿಟ್ ಮಾಡಿ ಒಬ್ಬರ ಮುಖಕ್ಕೆ ಮತ್ತೊಬ್ಬರ ಮುಖ ಅಂಟಿಸಬಹುದು. ಯಾರೋ ಪುಣ್ಯಾತ್ಮ ನನ್ನ ವಿಡಿಯೋ ಎಂದು ಬ್ಲಾಕ್ ಮೇಲ್ ಮಾಡುತ್ತಿದ್ದಾನೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾರೆ.

ನಾನು ಅಂದು ಒಮ್ಮೆ ತಪ್ಪು ಮಾಡಿದ್ದೆ. ಆ ತಪ್ಪಿನಿಂದ ಪಾಠ ಕಲಿತಿದ್ದೇನೆ. ನಡೆಯುವ ಮನುಷ್ಯ ಎಡವುದು ಸಹಜ. ಮತ್ತೆ ಎಂದೂ ಆ ತಪ್ಪು ಮಾಡಿಲ್ಲ. ಕೀಳುಮಟ್ಟದ ರಾಜಕಾರಣವನ್ನು ಸಹಿಸಲ್ಲ ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ಪೊಲೀಸ್ ಠಾಣೆಗಳು ಬಿಜೆಪಿ ಕಾರ್ಯಾಲಯಗಳಾಗಿವೆ: ತಂಗಡಗಿ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:

ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಪೊಲೀಸ್ ಅಧಿಕಾರಿಗಳು ಬಿಜೆಪಿ ಕೈಗೊಂಬೆಯಂತಾಗಿದ್ದಾರೆ. ಜಿಲ್ಲೆಯಲ್ಲಿರುವ ಪೊಲೀಸ್ ಠಾಣೆಗಳು ಬಿಜೆಪಿ ಕಾರ್ಯಾಲಯಗಳಾಗಿವೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ದೂರಿದರು.

ಕೊಪ್ಪಳದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಕಾಂಗ್ರೆಸ್ ಮಾಡ್ತಿದೆ ಅಂತ ಬಿಜೆಪಿಯವರು ಮಾತನಾಡುತ್ತಿದ್ದರು. ಸಲಹೆ ಕೊಡುತ್ತಿದ್ದ ಬಿಜೆಪಿ ಮುಖಂಡರು ಈಗ ಎಲ್ಲಿ ಕಾಣೆಯಾಗಿದ್ದಾರೋ ಗೊತ್ತಿಲ್ಲ. ಮೊಟ್ಟೆಯಲ್ಲೂ ದುಡ್ಡು ಮಾಡಲು ಹೊರಟಿರುವುದು‌ ಖೇದಕರ ಸಂಗತಿ. ಇದರ ಬಗ್ಗೆ ಏನು ಹೇಳುತ್ತಾರೆ ಬಿಜೆಪಿ ಮುಖಂಡರು ಎಂದು ಪ್ರಶ್ನಿಸಿದರು.

ಭ್ರಷ್ಟಾಚಾರ ಯಾವ ಮಟ್ಟಿಗೆ ಮಾಡ್ತಾರೆ ಎನ್ನಲು ಇದು ಎರಡನೇ ಉದಾಹರಣೆ. ಕನಕಗಿರಿಯಲ್ಲಿ ಶೂ, ಸಾಕ್ಸ್ ಭ್ರಷ್ಟಾಚಾರ ಮೊದಲನೆಯದ್ದು. ಜೊಲ್ಲೆಯವರ ಬಗ್ಗೆ ಯಾರೂ ಮಾತನಾಡ್ತಿಲ್ಲ. ಕ್ರಮದ ಬಗ್ಗೆ ಬಿಜೆಪಿ‌ ನಾಯಕರು ಮಾತನಾಡ್ತಿಲ್ಲ. ನೂತನ ಸಿಎಂ ಬೊಮ್ಮಾಯಿಯವರು ಜೊಲ್ಲೆಯವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಾರದು ಎಂದು ತಂಗಡಗಿ ಆಗ್ರಹಿಸಿದರು.

ಕಡ್ಡಾಯ ರಜೆ ಮೇಲೆ ಇದ್ದ ಪೊಲೀಸ್ ಅಧಿಕಾರಿಗಳನ್ನು ಮತ್ತೇ ಅದೇ ಹುದ್ದೆಗೆ ನಿಯೋಜಿಸಿರುವುದನ್ನು ನೋಡಿದರೆ ಭ್ರಷ್ಟಾಚಾರ ಎಷ್ಟರಮಟ್ಟಿಗೆ ಇದೆ ಎಂದು ಗೊತ್ತಾಗುತ್ತದೆ. ಇದು ನಾಚಿಕೆಗೇಡಿತನ. ಈ ಕುರಿತು ಸಿಎಂಗೆ ಪತ್ರ ಬರೀತಿನಿ. ಮರಳು ಅಕ್ರಮ ದಂಧೆ ಮೇಲೆ ದಾಳಿಯಾಗಿದ್ದು ಪೊಲೀಸ್ ಅಧಿಕಾರಿಗಳು ಕಡ್ಡಾಯ ರಜೆ ಹೋದ ತಕ್ಷಣ. ಜಿಲ್ಲೆಯಲ್ಲಿ ಕಾನೂನೇ ಇಲ್ಲ. ಅಂಧೇರಿ ದರ್ಬಾರ್ ನಡೆದಿದೆ ಎನ್ನುವುದಕ್ಕೆ ಇದು ಸಾಕ್ಷಿ ಎಂದರು.

2022ರಲ್ಲಿ ಚುನಾವಣೆ ಸಾಧ್ಯತೆ: ತನಿಖೆ ಅನ್ನೋದು ಬರೀ ಬಾಯಿ ಮೂಲಕ ನಡೀತಾ ಇದೆ. ಶಿವರಾಜ ತಂಗಡಗಿಗೆ ಭಯ ಅನ್ನೋದೇ ಗೊತ್ತಿಲ್ಲ. ಯಾರ ಬೇಕಾದರೂ ಎಲೆಕ್ಷನ್‌ಗೆ ನಿಲ್ಲಲಿ. ಮತ ಹಾಕುವವರು ಜನ. ಜನ ತೀರ್ಮಾನ ಮಾಡ್ತಾರೆ. ನಮ್ಮ ಪಕ್ಷದ ಹಿರಿಯರು ಹೇಳಿದಾರೆ. ಈ ಸರಕಾರ ಬಹಳ ದಿನ ನಿಲ್ಲಲ್ಲ. 2022ರಲ್ಲಿ ಚುನಾವಣೆ ಸನ್ನೀಹಿತವಾಗುವ ಸಾಧ್ಯತೆ ಇದೆ. ಬೊಮ್ಮಾಯಿಯವರು ಉತ್ತಮ ಆಡಳಿತಗಾರರು. ಆಡಳಿತ ನಡೆಸಲು ಬಿಜೆಪಿಯವರೇ ಬಿಡಲ್ಲ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ರಸಗೊಬ್ಬರಗಳ ಕೊರತೆ ಬಹಳಷ್ಟು ಇದೆ. ವಾರ-ಹತ್ತು ದಿನಗಳವರೆಗೆ ಗಡುವು ಕೊಟ್ಟು ಕಾದು ನೋಡ್ತಿವಿ. ಕೊರತೆ ನಿವಾರಿಸದಿದ್ದರೆ ಖಂಡಿತವಾಗಿ ಬೀದಿಗಿಳಿದು ಹೋರಾಟ ನಿಶ್ಚಿತ ಎಂದು ಅವರು ಎಚ್ಚರಿಸಿದರು.

ಪತ್ನಿಯ ಅಕ್ರಮ ಸಂಬಂಧ ಶಂಕೆ; ಪತಿ ವಿಷ ಸೇವಿಸಿ ಆತ್ಮಹತ್ಯೆ!

ವಿಜಯಸಾಕ್ಷಿ ಸುದ್ದಿ, ಗದಗ

ಪತ್ನಿಯ ಅನೈತಿಕ ಸಂಬಂಧ ಕುರಿತು ಪ್ರಶ್ನಿಸಿದ್ದಕ್ಕೆ ಪತ್ನಿ, ಆಕೆಯ ತಾಯಿ, ಪ್ರಿಯಕರ ಸೇರಿ ಹಲ್ಲೆ ನಡೆಸಿದ್ದರಿಂದ ಮನನೊಂದು ಮಗ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ರೇಣವ್ವ ಪೂಜಾರ ಎಂಬುವವರು ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಗದಗ ತಾಲೂಕಿನ ಹೊಂಬಳ ಗ್ರಾಮದ
ಸಂಜೀವ ಜಾಂಬವಂತ ಪೂಜಾರ ಎಂಬುವವರು ಹತ್ತು ವರ್ಷಗಳ ಹಿಂದೆ ಅದೇ ಗ್ರಾಮದ ಕಲ್ಪನಾ ಎಂಬುವಳನ್ನು ಮದುವೆ ಆಗಿ ಬೇರೆ ಮನೆ ಮಾಡಿಕೊಂಡು ವಾಸವಾಗಿದ್ದರು.

ಸಂಜೀವ ಜು.11ರಂದು ರಾತ್ರಿಗೆ ಮನೆಗೆ ಬಂದಾಗ ಹೆಂಡತಿ ಕಲ್ಪನಾ ರಾಜು ಬಣಕಾರ ಎಂಬಾತನೊಂದಿಗೆ ಸಲುಗೆಯಿಂದ ಇರುವುದನ್ನು ಕಂಡು ಇದನ್ನು ಕಲ್ಪನಾಳ ತಾಯಿ ನಿಂಗವ್ವಳಿಗೆ ತಿಳಿಸಿದ್ದಾನೆ. ಆದರೆ, ನಿಂಗವ್ವ, ಕಲ್ಪನಾ, ರಾಜು ಬಣಕಾರ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ.
ಇದರಿಂದ ಹೆದರಿದ ಸಂಜೀವ ರಾತ್ರಿ ಗ್ರಾಮದ ಈಶ್ವರ ದೇವಸ್ಥಾನದಲ್ಲಿ ಮಲಗಿ ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಗನ ಸಾವಿಗೆ ಕಲ್ಪನಾ ಸಂಜೀವ ಪೂಜಾರ, ರಾಜು ಬಣಕಾರ, ನಿಂಗವ್ವ ಪೂಜಾರ ಅವರೇ ಕಾರಣ ಎಂದು ಮೃತನ ತಾಯಿ ರೇಣವ್ವ ಪೂಜಾರ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮುಖ್ಯಮಂತ್ರಿ ಅಂತೂ ಮಾಡಲಿಲ್ಲ, ಉಪಮುಖ್ಯಮಂತ್ರಿಯನ್ನಾದರೂ ಮಾಡಲಿ

ಹಿರಿತನ ಪರಿಗಣಿಸಿ ಡಿಸಿಎಂ ಮಾಡುವ ನಿರೀಕ್ಷೆಯಿದೆ! ಮೈಸೂರಿನಲ್ಲಿ ಕೆ.ಎಸ್. ಈಶ್ವರಪ್ಪ ಹೇಳಿಕೆ

ವಿಜಯಸಾಕ್ಷಿ ಸುದ್ದಿ, ಮೈಸೂರು

ಮುಖ್ಯಮಂತ್ರಿ ಅಂತೂ ಮಾಡಲಿಲ್ಲ. ಹಿರಿತನ ಆಧರಿಸಿ ಉಪ ಮುಖ್ಯಮಂತ್ರಿಯನ್ನಾದರೂ ಮಾಡುವ ನಿರೀಕ್ಷೆ ಇದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕಾಗಿ ಹಲವು ವರ್ಷಗಳ ಕಾಲ ದುಡಿದಿದ್ದೇನೆ. ಹೀಗಾಗಿ ನನ್ನನ್ನು ಮುಖ್ಯಮಂತ್ರಿ ಮಾಡಬಹುದು ಎಂದು ಬೆಂಬಲಿಗರು ನಿರೀಕ್ಷೆ ಮಾಡಿದ್ದರು. ಪಕ್ಷದ ಹೈಕಮಾಂಡ್ ಬೊಮ್ಮಾಯಿ ಅವರುನ್ನ ಸಿಎಂ ಮಾಡಿದೆ. ಈಗ ಈಶ್ವರಪ್ಪ ಉಪಮುಖ್ಯಮಂತ್ರಿ ಆಗಲಿ ಎಂದು ಸ್ವಾಮೀಜಿಗಳು, ಬೆಂಬಲಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಯಡಿಯೂರಪ್ಪ ನವರು 4 ಬಾರಿ ಮುಖ್ಯಮಂತ್ರಿ ಆದರು. ಜನ ನಮಗೆ ಸ್ಪಷ್ಟ ಬಹುಮತ ಕೊಟ್ಟಿಲ್ಲ. ಆದರೆ, ಅಧಿಕಾರ ನಡೆಸಲು ಅವಕಾಶ ಕೊಟ್ಟಿದ್ದಾರೆ. ಹೀಗಾಗಿ ಕೆಲವು ಗೊಂದಲಗಳು ಇದ್ದದ್ದು ನಿಜ. ಈ ಎಲ್ಲ ಗೊಂದಲಗಳನ್ನು ಹೈಕಮಾಂಡ್ ಬಗೆಹರಿಸಿದೆ ಎಂದು ಹೇಳಿದರು.

ಯಾರನ್ನ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಬಿಡಬೇಕು ಎಂಬುದು ಹೈಕಮಾಂಡ್ ಗೆ ಗೊತ್ತಿದೆ. ನಮಲ್ಲಿನ ಗೊಂದಲ ಬಗೆಹರಿದಿದೆ, ಈಗ ಕಾಂಗ್ರೆಸ್ ನಲ್ಲಿ ಗೊಂದಲ ಶುರು ಆಗಿದೆ.
ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ತನ್ವೀರ್ ಸೇಠ್, ಎಂ.ಬಿ. ಪಾಟೀಲ್ ನಾನೇ ಸಿಎಂ ಎಂದು ಹೇಳಿಕೊಳ್ಳುತ್ತಿದ್ದಾರೆ. ಇವರಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ಅವರ ಹೈಕಮಾಂಡ್ ಘೋಷಿಸಲಿ ಎಂದು ಸವಾಲು ಹಾಕಿದರು.

ಲೆಕ್ಕ ಕೊಡದವರ ಮನೆಗೆ ನುಗ್ಗಿ ಚಾಕು ಇರಿತ; ಗ್ರಾ. ಪಂ ಸದಸ್ಯನ ಮಕ್ಕಳ ಪುಂಡಾಟ?

ವಿಜಯಸಾಕ್ಷಿ ಸುದ್ದಿ, ಗದಗ

ಕಳೆದ ಮೂವತ್ತು ವರ್ಷಗಳ ಆಡಳಿತದ ಅಂಜುಮನ್ ಇಸ್ಲಾಂ ಕಮಿಟಿಯ ಲೆಕ್ಕ ಕೇಳಲು ಹೋದ ಗ್ರಾಮ ಪಂಚಾಯತಿ ಸದಸ್ಯನ ಮಕ್ಕಳು ಹಾಗೂ ಬೆಂಬಲಿಗರು ಇಬ್ಬರ ಮೇಲೆ ಹಲ್ಲೆ ಮಾಡಿ ಓರ್ವನಿಗೆ‌ ಚಾಕು ಇರಿದ ಘಟನೆ ಜರುಗಿದೆ.

ಗದಗ ತಾಲೂಕಿನ ಕಳಸಾಪೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗಾಯಾಳು ಮಹಬೂಬಸಾಬ ಮಕ್ತುಮಸಾಬ ದೊಡ್ಡಮನಿ ಹಾಗೂ ಫಕ್ರುದ್ದೀನ ಪೆಂಡಾರಿ ಚಿಕಿತ್ಸೆಗೆ ಜಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಳಸಾಪೂರ ಗ್ರಾಮ ಪಂಚಾಯತಿ ಸದಸ್ಯ ನಜೀರಸಾಬ ಅಂಗಡಿ, ಮಕ್ಕಳಾದ ಸದ್ದಾಂ, ಸಾಧಿಕ್ ಹಾಗೂ ಸಂಬಂಧಿಗಳು, ಗಾಯಾಳು ಮಹಿಬೂಬಸಾಬ್ ಅವರ ತಂದೆ ಮಕ್ತುಮಸಾಬನನ್ನು ಲೆಕ್ಕ ಕೇಳಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಮಹಬೂಬಸಾಬನಿಗೆ ಸಾಧಿಕ್ ಅಂಗಡಿ ಚಾಕುವಿನಿಂದ ತಲೆಗೆ ಇರಿದಿದ್ದಾನೆ. ಅಲ್ಲೆಯೇ ಇದ್ದ ಫಕ್ರುಸಾಬನ ಮೇಲೂ ಹಲ್ಲೆ ಮಾಡಲಾಗಿದ್ದು, ಗಾಯಗೊಂಡ ಇಬ್ಬರೂ ಜಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯ ನಜೀರಸಾಬ ಅಂಗಡಿ ಸೇರಿದಂತೆ ಒಂಬತ್ತು ಜನರ ಮೇಲೆ ಪ್ರಕರಣ ದಾಖಲಾಗಿದೆ.

ಪ್ರತಿದೂರು ದಾಖಲು

ಅಂಜುಮನ್ ಎ ಇಸ್ಲಾಂ ಕಮಿಟಿಯ ಹಿರಿಯರಾದ
ಮಕ್ತುಮಸಾಬ ಮಾಬುಸಾಬ ದೊಡ್ಡಮನಿ ಎಂಬುವರು ಮನೆ ಮುಂದೆ ಫಿರ್ಯಾದಿ ಮಕಬೂಲಸಾಬ ಚತ್ತುಸಾಬ ಪೆಂಡಾರಿ ಹಾಗೂ ಹಿರಿಯರು ಹೋಗಿ ಲೆಕ್ಕದ ಮಾಹಿತಿ ಕೇಳಿದಾಗ ಮಕಬೂಲಸಾಬ ಮಾಬುಸಾಬ ದೊಡ್ಡಮನಿ, ತೌಶೀಪ್ ಮಕ್ತುಮಸಾಬ ದೊಡ್ಡಮನಿ ಹಾಗೂ ಆಶೀಫ್ ಮಾಬುಸಾಬ ದೊಡ್ಡಮನಿ ಸೇರಿದಂತೆ ಹತ್ತು ಜನರ ತಂಡ ಅವಾಚ್ಯ ಶಬ್ದಗಳಿಂದ ಬೈದು, ನಾಶಿರ ಹೊನ್ನೂರಸಾಬ ಪೆಂಡಾರಿ, ಫಕ್ರುಸಾಬ ರಾಜೇಸಾಬ ಪೆಂಡಾರಿ ಹಾಗೂ ಸಾಧಿಕ್ ನಜೀರಸಾಬ ಅಂಗಡಿ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲ ಗ್ರಾಮ ಪಂಚಾಯತಿ ಸದಸ್ಯ ನಜೀರಸಾಬ ಹುಚ್ಚುಸಾಬ ಅಂಗಡಿ ಎಂಬಾತನಿಗೆ ಅಡ್ಡಗಟ್ಟಿ ನಿಲ್ಲಿಸಿ, ಗಟ್ಟಿಯಾಗಿ ಹಿಡಿದು, ಅಕ್ರಮ ತಡೆಯೊಡ್ಡಿ, ಇನ್ನೊಮ್ಮೆ ಮನೆ ಹತ್ರ ಜೀವ ತಗೆತೀವಿ ಅಂತ ಬೆದರಿಕೆವೊಡ್ಡಿದ್ದಾರೆ ಎಂದು ಪ್ರತಿದೂರು ನೀಡಲಾಗಿದೆ.

ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈ ಗೊಂಡಿದ್ದಾರೆ.

ಆಟೋ ಚಾಲಕನ ಮೇಲೆ ಟ್ರಾಫಿಕ್ ಪೊಲೀಸ್ ದರ್ಪ

ವಿಜಯಸಾಕ್ಷಿ ಸುದ್ದಿ, ಗದಗ

ಯಾರನ್ನೋ‌ ಮೆಚ್ಚಿಸಲು ಹೋಗಿ ಸಂಚಾರಿ ಪೊಲೀಸರೊಬ್ಬರು ಬಡಪಾಯಿ ಆಟೋ ಡ್ರೈವರ್ ಮೇಲೆ ದರ್ಪ ಮೆರೆದ ಘಟನೆ ಗದಗನ ನಗರದಲ್ಲಿ ನಡೆದಿದೆ.

ಇಲ್ಲಿನ ಹತ್ತಿಕಾಳ ಕೂಟ (ಬಸವೇಶ್ವರ ಸರ್ಕಲ್) ಬಳಿ ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಟ್ರಾಫಿಕ್ ಹೆಡ್ ಕಾನಸ್ಟೇಬಲ್ ಸತ್ಯರಡ್ಡಿ ಎಂಬುವರೇ ಆಟೋ ಡ್ರೈವರ್ ನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಪ್ರಶ್ನೆಸಿದರೆ ಆಟೋ ಸಮೇತ ಒಳಗೆ ಹಾಕಿಸುವ ಬೆದರಿಕೆ ಹಾಕಿದ್ದಾರೆ.

ನಿನ್ನೆ ಸಂಜೆ 7-30 ರ ಸುಮಾರಿಗೆ ಬಸವೇಶ್ವರ ಸರ್ಕಲ್ ಬಳಿ ದೊಡ್ಡ ಪ್ರಮಾಣದ ಗೂಡ್ಸ ಲಾರಿಯೊಂದು ರಸ್ತೆಗೆ ಅಡ್ಡವಾಗಿ ನಿಂತಿತ್ತು. ಅದರಲ್ಲಿದ್ದ ಕಿರಾಣಿ ಸಾಮಾನುಗಳನ್ನು ಅರಿಹಂತ ಟ್ರೇಡರ್ಸ್ ಅನ್ನೂ ಅಂಗಡಿಗೆ ಇಳಿಸಲಾಗುತ್ತಿತ್ತು. ಈ ವೇಳೆ ಟ್ರಾಫಿಕ್ ಜಾಮ್ ಆಗಿದೆ. ನಿತ್ಯವೂ ಸರ್ಕಲ್ ಬಳಿ ಗ್ರಾಮೀಣ ಭಾಗಕ್ಕೆ ಹೋಗುವ ಪ್ರಯಾಣಿಕರಿಗಾಗಿ ಆಟೋ, ಟಂ ಟಂ ನಿಲ್ಲಿಸಲಾಗುತ್ತೆ.

ಅದರಂತೆ ನಿನ್ನೆ ಸಂಜೆಯೂ ಕಳಸಾಪೂರ ಗ್ರಾಮದ ಸುಲೆಮಾನ್ ಎಂಬಾತ ತನ್ನ ಆಟೋ ನಿಲ್ಲಿಸಿಕೊಂಡು ಪ್ರಯಾಣಿಕರಿಗಾಗಿ ಕಾಯುತ್ತಿದ್ದ. ಈ ಸಂದರ್ಭದಲ್ಲಿ ಒಂದಿಷ್ಟು ಟ್ರಾಫಿಕ್ ಜಾಮ್ ಆಗಿದೆ. ಮೊದಲೇ ದೊಡ್ಡ ಲಾರಿ ರಸ್ತೆಗೆ ಅಡ್ಡಲಾಗಿ ನಿಲ್ಲಿಸಲಾಗಿತ್ತು. ಇದರಿಂದ ಮತ್ತಷ್ಟು ಸಮಸ್ಯೆ ಆಗಿದೆ. ಆದರೆ ಲಾರಿ ಚಾಲಕನ ತಪ್ಪೋ ಅಥವಾ ಅಂಗಡಿ ಮಾಲೀಕನ ತಪ್ಪೋ ಅದನ್ನು ಗಮನಿಸದೆ ಸತ್ಯರಡ್ಡಿ ಸಾಹೇಬರು ಸೀದಾ ಬಂದವರೇ ಆಟೋ ಚಾಲಕ ಸುಲೇಮಾನ್ ಗೆ ಪಟಾರ್ ಅಂತ ಕಪಾಳಕ್ಕೆ ಹೊಡೆದಿದ್ದು ಅಲ್ಲದೇ, ನಾಲ್ಕೈದು ಏಟು ಬಾರಿಸಿದ್ದಾರೆ. ಇದು ಅಲ್ಲಿದ್ದ ಇತರ ಆಟೋ ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ.

ಟ್ರಾಫಿಕ್ ಜಾಮ್ ಇದೇ ಮೊದಲಲ್ಲ

ಬಸವೇಶ್ವರ ಸರ್ಕಲ್ ಬಳಿ ಟ್ರಾಫಿಕ್ ಜಾಮ್ ಆಗೋದು ಇದೇ ಮೊದಲಲ್ಲ. ಪ್ರತಿ ಸೋಮವಾರ, ಬುಧವಾರ ಹಾಗೂ ಶನಿವಾರ ಈ ಸಮಸ್ಯೆ ಉಂಟಾಗುತ್ತೆ. ಆದ್ರೂ ಪೊಲೀಸರು ಮಾತ್ರ, ದ್ವಿಚಕ್ರ ವಾಹನ ಸವಾರರ, ಆಟೋ ಚಾಲಕರ ಮೇಲೆ ಸವಾರಿ ಮಾಡಿ, ಗದರಿಸಿ ಅಂಗಡಿ ಮಾಲೀಕರ ಮೇಲೆ ಕರುಣೆ ತೋರಿಸುತ್ತಾರೆ. ಗೂಡ್ಸ ವಾಹನ, ಟಂ ಟಂ ವಾಹನಗಳ, ದೊಡ್ಡ ದೊಡ್ಡ ಲಾರಿಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವವರಿಗೆ ಪಾಠ ಕಲಿಸಬೇಕು. ಆದರೆ ಏಕಾಏಕಿ ಹಲ್ಲೆ ಮಾಡುವ, ಬಡವರ ಮೇಲೆ ದರ್ಪ ಮೆರೆಯುವು ಇಂತಹ ಪೊಲೀಸರ ಮೇಲೆ ಹಿರಿಯ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂಬುದು ಪ್ರಜ್ಞಾವಂತರ ಒತ್ತಾಯವಾಗಿದೆ.

ಕುತೂಹಲ ಕೆರಳಿಸಿದ ಬಿಎಸ್ ವೈ ಕುಮಾರಕೃಪಾ ಭೇಟಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಇದೇ ಮೊದಲ ಬಾರಿಗೆ ಮಾಜಿ ಸಿಎಮ್ ಯಡಿಯೂರಪ್ಪ ಬೆಂಗಳೂರಿನ ಕೇಶವ ಕೃಪಾಗೆ ಭೇಟಿ ನೀಡಿ ಆರ್ ಎಸ್ ಎಸ್ ಮುಖಂಡರೊಂದಿಗೆ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ರಾಜ್ಯಪಾಲರ ಹುದ್ದೆ ಬೇಡವೆಂದಿರುವ ಯಡಿಯೂರಪ್ಪನವರನ್ನು ಮನವೊಲಿಕೆ ಮಾಡುವ ನಿಟ್ಟಿನಲ್ಲಿ ಮುಖಂಡರು ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗೂ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿಯೂ ಯಡಿಯೂರಪ್ಪ ಆರ್ ಎಸ್ ಎಸ್ ಮುಖಂಡರ ಜೊತೆ ಚರ್ಚಿಸಬಹುದಾದ ಸಾಧ್ಯತೆಯಿದೆ ಎನ್ನಲಾಗುತ್ತದೆ.

ಸಂಪುಟ ವಿಸ್ತರಣೆ: ಮುಖ್ಯಮಂತ್ರಿ ನಿರ್ಧಾರಕ್ಕೆ ಬದ್ಧ


ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಸಚಿವ ಸಂಪುಟ ವಿಸ್ತರಣೆ ಸಿಎಂ ವಿವೇಚನೆಗೆ ಬಿಟ್ಟದ್ದು. ಸಿಎಂ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾನು ಬದ್ಧ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.
ಬೆಂಗಳೂರಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಬಳಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು,
ಸಂಪುಟ ವಿಸ್ತರಣೆ ವಿಷಯದಲ್ಲಿ ಸಿಎಂ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು ಎಂದರು.

ಶೆಟ್ಟರ್ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾರು ಯಾವ ನಿರ್ಧಾರ ಕೈಗೊಳ್ಳುತ್ತಾರೊ ನನಗೆ ಗೊತ್ತಿಲ್ಲ. ಶೆಟ್ಟರ್ ಅವರದು ವೈಯಕ್ತಿಕ ವಿಚಾರ. ಈ ಬಗ್ಗೆ ಹೇಳಿಕೆ ನೀಡಿ ಗೊಂದಲ ಸೃಷ್ಟಿಲಾರೆ ಎಂದು ಹೇಳಿದರು.

ಮೊದಲ ಸಚಿವ ಸಂಪುಟ ಸಭೆಯಲ್ಲೇ ಅತ್ಯುತ್ತಮವಾದ ನಿರ್ಧಾರಗಳನ್ನು ಸಿಎಂ ಬೊಮ್ಮಾಯಿ ತೆಗೆದುಕೊಂಡಿದ್ದಾರೆ. ರೈತರು, ಹಿರಿಯರು, ವಿಧವೆಯರು, ಅಂಗವಿಕಲರಿಗೆ ಆದ್ಯತೆ ನೀಡುವ ನಿರ್ಣಯಗಳನ್ನು ಕೈಗೊಂಡಿರುವುದು ಉತ್ತಮ ನಿರ್ಧಾರ ಎಂದು ಪ್ರಶಂಸಿಸಿದರು.

error: Content is protected !!